ಈಗ ಬೆಂಗಳೂರಿನ ಚಿತ್ರಣವೇ ಬದಲಾಗಿದೆ. ನಾವುಗಳು ನಮ್ಮ ಬಾಲ್ಯದಲ್ಲಿ ಕಂಡ ಬೆಂಗಳೂರು ನಗರಕ್ಕೂ ಈಗಿನ ನಗರಕ್ಕೂ ಅಜ-ಗಜಾಂತರ ವ್ಯತ್ಯಾಸ. "ಸಿಟಿ ಮಾರ್ಕೆಟ್" ಎಂದು ಹೆಸರಾದ "ಕೃಷ್ಣರಾಜೇಂದ್ರ ಮಾರುಕಟ್ಟೆ" ಪೊರೆ ಬಿಟ್ಟ ಹಾವಿನಂತೆ ಹೊಸ ರೂಪ ಪಡೆದುಕೊಂಡರೂ ಈಗಲೂ ಉಳಿದಿದೆ. ಅದಕ್ಕೆ ಹೊಂದಿಕೊಂಡಂತೆ ದಕ್ಷಿಣಕ್ಕೆ ನರಸಿಂಹರಾಜ ರಸ್ತೆ. ಅದಕ್ಕೆ ಸೇರಿದಂತೆ ಉದ್ಯಾನವನದ ಎದುರುಗಡೆ "ಸಿಲ್ವರ್ ಜುಬಿಲಿ ಪಾರ್ಕ್ ರಸ್ತೆ" ಕೂಡ ಉಂಟು. ಆದರೆ ಆ ಪಾರ್ಕ್ ಕಳೆಗುಂದಿ ಧೂಳುತುಂಬಿ ಅರ್ಧಕ್ಕಿಂತಲೂ ಹೆಚ್ಚು ಮಾಯವಾಗಿದೆ. ನರಸಿಂಹರಾಜ ರಸ್ತೆ ಪಶ್ಚಿಮಕ್ಕೆ ಮುಂದುವರೆದರೆ ಮೈಸೂರು ರಸ್ತೆ.
ಈ ಕಡೆ ಪೂರ್ವದಲ್ಲಿ ಜಯಚಾಮರಾಜೇಂದ್ರ ರಸ್ತೆ. ಹಾಗೆಂದು ಹೇಳಿದರೆ ಹೆಚ್ಚಿನ ಜನಕ್ಕೆ ಅರ್ಥ ಆಗುವುದಿಲ್ಲ. ಜೆಸಿ ರಸ್ತೆ ಅಂದರೆ ಗೊತ್ತಾಗುವುದು. (ಮಹಾತ್ಮಗಾಂಧಿ ರಸ್ತೆ ಅಂದರೆ ಗೊತ್ತಾಗುವುದಿಲ್ಲ. ಎಂ.ಜಿ ರಸ್ತೆ ಅಂದರೆ ಗೊತ್ತಾಗುತ್ತದೆ. ಈ ರೀತಿ!). ಉತ್ತರದಲ್ಲಿ ಜಿಲ್ಲಾ ಕಚೇರಿ (ಡಿಸ್ಟ್ರಿಕ್ಟ್ ಆಫೀಸು) ರಸ್ತೆ ಮತ್ತು ಕೆಂಪೇಗೌಡ ರಸ್ತೆ. ಅಲ್ಲಿಂದ ಮುಂದೆ ತುಳಸಿ ತೋಟ ಎಂದಿತ್ತು. ಅಲ್ಲಿದ್ದ ಧರ್ಮಾ೦ಬುಧಿ ಕೆರೆ ಮಾಯವಾಗಿ ಕೆಂಪೇಗೌಡ ಬಸ್ ನಿಲ್ದಾಣವಾಗಿ ಕೂತಿದೆ. ರೈಲ್ವೆ ನಿಲ್ದಾಣದಿಂದ ಕೆಳಗೆ ಬಂದರೆ ಅರಳೇಪೇಟೆ ಅಥವಾ ಕಾಟನ್ ಪೇಟೆ. ಹೀಗೆ ಇರುವ ರಸ್ತೆಗಳ ಮಧ್ಯೆ ಪೇಟೆ ಪ್ರದೇಶ.
ಅನೇಕ ಪೇಟೆಗಳು. ಸಣ್ಣ ಸಣ್ಣ ಗಲ್ಲಿಗಳು. ಅಲ್ಲಿ ಅಕ್ಕಿಪೇಟೆ, ರಾಗಿಪೇಟೆ, ಅರಳೇಪೇಟೆ, ಚಿಕ್ಕಪೇಟೆ, ಸುಣ್ಣಕಲ್ಲು ಪೇಟೆ ಮುಂತಾದ ಪೇಟೆಗಳು. ಪೇಟೆಗಳಲ್ಲಿ ಅನೇಕ ಅಂಗಡಿಗಳು. ಅಲ್ಲಿ ಸಿಕ್ಕದಿದ್ದ ಪದಾರ್ಥಗಳೇ ಇರಲಿಲ್ಲ. ಪದಾರ್ಥಗಳು ಅಂದರೆ ಆಗಿನ ಜೀವನಕ್ಕೆ ಬೇಕಿದ್ದ ಪದಾರ್ಥಗಳು. ಪುಸ್ತಕಗಳಿಗೆ ಅವೆನ್ಯೂ ರಸ್ತೆ, ಚಿನ್ನ-ಬೆಳ್ಳಿ ಒಡವೆಗಳು ಬೇಕಿದ್ದರೆ ನಗರ್ತಪೇಟೆ. ಮತ್ತೆ ಕೆಲವಕ್ಕೆ ಕಿಲಾರಿ ರಸ್ತೆ. ಬಟ್ಟೆ-ಬರೆಗೆ ಚಿಕ್ಕಪೇಟೆ ಅಂಗಡಿಗಳು. ಹೂವು-ಹಾರಗಳಿಗೆ ತಿಗಳರ ಪೇಟೆ. ಬಳೆ-ಬಿಚ್ಚೂಲೆಗಳಿಗೆ ಬಳೆಪೇಟೆ. ಹೀಗೆ. ಸೂಪರ್ ಮಾರ್ಕೆಟ್, ಮಾಲುಗಳು ಬಂದ ಮೇಲೆ ಇವೆಲ್ಲಾ ಹೆಚ್ಚು-ಕಡಿಮೆ ಮರೆತೇ ಹೋಗಿವೆ.
*****
ಸುಮಾರು ಒಂದು ನೂರು ವರ್ಷಗಳ ಹಿಂದಿನ ಒಂದು ದಿನ. ಬೆಳಗ್ಗೆ ಒಂಭತ್ತು ಗಂಟೆಯ ಸಮಯ. ಅಂಗಡಿಗಳ ಬಾಗಿಲುಗಳು ಆಗ ತಾನೇ ಒಂದೊಂದಾಗಿ ತೆರೆಯುತ್ತಿದ್ದವು. ಚಿತ್ರಾಪೂರ್ಣಿಮೆಯಂದು ನಡೆಯುವ "ಬೆಂಗಳೂರು ಕರಗ" ಉತ್ಸವದ ಕೇಂದ್ರವಾದ "ಧರ್ಮರಾಯಸ್ವಾಮಿ" ದೇವಸ್ಥಾನದ ಪಕ್ಕದ ರಾಗಿಪೇಟೆ. ಬೆಂಕಿನವಾಬ ರಸ್ತೆ. ಅಂಗಡಿ ಬಾಗಿಲು ತೆಗೆಯುತ್ತಿದ್ದಂತೆಯೇ ಒಬ್ಬರು ಸಾಮಾನು ಕೊಳ್ಳಲು ಬಂದರು. ಅಂಗಡಿಯ ಮಾಲೀಕ ಮತ್ತು ಕೊಳ್ಳಲು ಬಂದವರು ಚೆನ್ನಾಗಿ ಪರಸ್ಪರ ತಿಳಿದಿದ್ದ ಸ್ನೇಹಿತರು. ಕುಶಲೋಪರಿ ನಡೆಯಿತು.
"ಏನು? ಬೆಳಗ್ಗೆಯೇ ಬಂದೆ?"
"ಬಂದರೇನು? ನೀನು ಅಂಗಡಿ ಇಟ್ಟಿರುವುದು ಅದಕ್ಕೇ ತಾನೇ?"
"ಇಷ್ಟರಲ್ಲಿಯೇ ಮುಗಿದುಹೋಯಿತು"
"ಏನು ಹಾಗಂದರೆ? ಮತ್ತೇನು ಆಗಬೇಕು?"
"ನೀನು ಬಹಳ ಸೊಗಸಾಗಿ ಹಾಡುತ್ತೀಯೆ ಎಂದು ಎಲ್ಲರೂ ಹೇಳುತ್ತಾರೆ"
"ಹೌದೇನು?"
"ನನಗೆ ಮಾತ್ರ ಕೇಳುವ ಅವಕಾಶ ಸಿಗಲಿಲ್ಲ"
"ಏನು ತೊಂದರೆ? ಬಂದು ಕೂತು ಕೇಳು"
"ನಿನ್ನ ಹಾಡುಗಾರಿಕೆ ಸಂಜೆಯ ವೇಳೆಯೇ. ನನಗೆ ಆಗ ಅಂಗಡಿ ಬಿಟ್ಟು ಬರಲಾಗದು"
"ಈಗ ನಾನೇ ಬಂದಿದ್ದೇನಲ್ಲ. ಹಾಡುತ್ತೇನೆ. ಕೇಳು"
ಬಂದವರು ಅಲ್ಲಿಯೇ ಇದ್ದ ಒಂದು ರಾಗಿ ಮೂಟೆಯ ಮೇಲೆ ಕುಳಿತರು. ಶ್ರುತಿ ಪೆಟ್ಟಿಗೆ ಇಲ್ಲ. ಪಕ್ಕವಾದ್ಯಗಳಿಲ್ಲ. ಸಾವೇರಿ ರಾಗ ಆರಿಸಿಕೊಂಡರು. ರಾಗಿ ಮೂಟೆಯ ಮೇಲೆ ಸಾವೇರಿ ರಾಗ. ತನ್ಮಯರಾಗಿ ಹಾಡಿದರು. ಇಬ್ಬರೂ ಸುತ್ತಲಿನ ಪ್ರಪಂಚ ಮರೆತರು.
ಇವರು ಪ್ರಪಂಚ ಮರೆತರೂ ಮಿಕ್ಕವರಿಗೆ ಈ ಹಾಡುಗಾರಿಕೆ ಕೇಳಿಸಿತು. ಸುತ್ತ-ಮುತ್ತ ಓಡಾಡುತ್ತಿದ್ದ ಜನರೆಲ್ಲಾ ಸೇರಿದರು. ಬೆಂಕಿನವಾಬನ ರಸ್ತೆಯ ಈ ಕೊನೆಯಿಂದ ಆ ಕೊನೆಯವರೆಗೆ. ಹೀಗೆ ನಡೆಯುತ್ತಿದೆ ಎಂದು ಕೇಳಿದ ಬೇರೆಯವರೂ ಓಡಿ ಬಂದರು. ಕಡೆಗೆ ಬಂದವರಿಗೆ ನಿರಾಸೆಯೂ ಆಯಿತು. ಅದು ಬರಿ ಹಾಡುಗಾರಿಕೆಯಲ್ಲ. ಗಂಧರ್ವಗಾನ. ಗಂಧರ್ವಗಾನ ನಾವು ಕೇಳಿಲ್ಲ. ಹೀಗೆ ಹಾಡುವುದೇ ಗಂಧರ್ವಗಾನ ಇರಬಹುದು.
*****
"ಹಂಸಗೀತೆ" ಕನ್ನಡ ಚಲನಚಿತ್ರ ಪದ್ಮಭೂಷಣ ಅನಂತನಾಗ್ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದಲ್ಲದೇ ಅವರ ಕಲಾಸಾಧನೆಯಲ್ಲಿ ಒಂದು ಮೈಲಿಗಲ್ಲಾಗಿ ನಿಂತಿದೆ. ಚಿತ್ರದುರ್ಗದ ಅರಸ ಮದಕರಿನಾಯಕನ ಆಸ್ಥಾನ ವಿದ್ವಾನ್ "ಭೈರವಿ ವೆಂಕಟಸುಬ್ಬಯ್ಯ" ಎಂಬ ಸಂಗೀತಗಾರನ ಪಾತ್ರ ಅವರಿಗೆ ಹೇಳಿ ಮಾಡಿಸಿದಂತಿತ್ತು.
ಅಂದು "ಭೈರವಿ ವೆಂಕಟಸುಬ್ಬಯ್ಯ" ಎಂದು ಆತ ಹೆಸರು ಪಡೆದಂತೆ ಕಳೆದ ಶತಮಾನದಲ್ಲಿ ಅದೇ ರಾಗದ ಮೂಲಕ ಹೆಸರುಮಾಡಿ ಗುರುತಿಸಿಕೊಂಡವರು ಗಾನಗಂಧರ್ವ "ಭೈರವಿ ಕೆಂಪೇಗೌಡ" (1857-1937) ಅವರು. ರಾಗಿಮೂಟೆಯ ಮೇಲೆ ಸಾವೇರಿ ರಾಗ ಹಾಡಿದವರು.
ಕೆಂಪೇಗೌಡರ ಪೂರ್ವಜರು ಶ್ರೀರಂಗಪಟ್ಟಣದ ಬಳಿಯ ಗ್ರಾಮದವರಂತೆ. ಅವರ ತಂದೆ ವ್ಯಾಪಾರ-ವ್ಯವಹಾರದಲ್ಲಿ ಇದ್ದವರು. ಅದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕೊಯಮತ್ತೂರು ಪಟ್ಟಣಕ್ಕೆ ಹೋಗಿ ನೆಲೆಸಿದರಂತೆ. ಅಲ್ಲಿ ಚೆನ್ನಾಗಿ ವ್ಯಾಪಾರ ಬೆಳೆದು ಯಶಸ್ಸು ಕಂಡರು. ಕೆಂಪೇಗೌಡರು ಕೊಯಮತ್ತೂರಿನಲ್ಲಿ ಜನಿಸಿದರಂತೆ. ತಂದೆಗೆ ಮಗನೂ ತಮ್ಮಂತೆ ವ್ಯಾಪಾರದಲ್ಲಿ ಮುಂದೆ ಬರಲಿ ಎಂದು ಆಸೆ. ಆದರೆ ಮಗನಿಗೆ ಸಂಗೀತದಲ್ಲಿ ಆಸಕ್ತಿ.
ಗೌಡರು ಶ್ರೀ ತ್ಯಾಗರಾಜರ ಹುಟ್ಟೂರು ತಿರುವಾರೂರಿಗೆ ಹೋದರು. ಆಗ ಅಲ್ಲಿನ ಶ್ರೇಷ್ಠ ಸಂಗೀತ ವಿದ್ವಾಂಸರಾದ ಶ್ರೀ ಪಟ್ನ೦ ಸುಬ್ರಹ್ಮಣ್ಯ ಅಯ್ಯರ್ (1845-1902) ಅವರ ಗರಡಿಯಲ್ಲಿ ಮೈಸೂರು ವಾಸುದೇವಾಚಾರ್ಯರು, ಟೈಗರ್ ವರದಾಚಾರ್ಯರು ಮುಂತಾದವರು ಶಿಷ್ಯವೃತ್ತಿ ನಡೆಸುತ್ತಿದ್ದ ಸಮಯ. ಕೆಂಪೇಗೌಡರು ಮನೆಯ ಕೆಲಸಕ್ಕೆ ಎಂದು ಸೇರಿಕೊಂಡರಂತೆ. ಸುತ್ತಲಿನ ಕೆಲಸ ಮಾಡುತ್ತಿದ್ದರೂ ಗೌಡರ ಗಮನವೆಲ್ಲ ಅಯ್ಯರ್ ಅವರು ಹೇಳುತ್ತಿದ್ದ ಸಂಗೀತ ಪಾಠದ ಕಡೆಗೇ. ಗೌಡರ ತನ್ಮಯತೆಗೆ ಮಾರುಹೋದ ಅಯ್ಯರ್ ಅವರನ್ನು ಶಿಷ್ಯನನ್ನಾಗಿ ತೆಗೆದುಕೊಂಡರು.
*****
ಕೆಂಪೇಗೌಡರು ಗುರುಕುಲದಲ್ಲಿ ಇದ್ದಾಗ ನಡೆದ ಒಂದು ರೋಚಕ ಘಟನೆಯ ಉಲ್ಲೇಖಗಳಿವೆ. ಒಮ್ಮೆ ಮನೆಗೆ ಬಂದಿದ್ದ ಕೆಲವು ಸಂಗೀತಪ್ರೇಮಿಗಳ ಮುಂದೆ ಅಯ್ಯರ್ ಅವರು ಹಾಡುತ್ತಿದ್ದರು. ಊಟದ ಸಮಯವಾಯಿತು. ಅಯ್ಯರ್ ಅವರ ಹೆಂಡತಿ ಗೌಡರನ್ನು ಕರೆದು ಹಾಡುಗಾರಿಕೆ ಮಧ್ಯದಲ್ಲಿ ಅಯ್ಯರ್ ಅವರಿಗೆ ಊಟಕ್ಕೆ ಬರುವಂತೆ ಸೂಚಿಸಲು ಹೇಳಿದರು. ಸಂದರ್ಭ ನೋಡಿ ಗೌಡರು ಗುರುಗಳಿಗೆ ಹೇಳುವಾಗ, ನೀವು ಬರುವವರೆಗೆ ನಾನು ಇವರನ್ನು ಗಮನಿಸುತ್ತೇನೆ ಎಂದರಂತೆ. ಗುರುಗಳಿಗೆ ಕೋಪಬಂದಿತು. "ಹಾಗಿದ್ದರೆ ಈಗಲೇ ಹಾಡು" ಅಂದರಂತೆ. ಕೆಂಪೇಗೌಡರು ಗುರುಗಳು ನಿಲ್ಲಿಸಿದ್ದಕಡೆಯಿಂದ ಮುಂದುವರೆಸಿ ಅಧ್ಭತವಾಗಿ ಹಾಡಿದರಂತೆ. ಹಾಡುವಿಕೆ ಮುಗಿದಮೇಲೆ ಮೆಚ್ಚಿದ ಗುರುಗಳು ತಾವು ಹೊದೆದಿದ್ದ, ತಿರುವಾಂಕೂರು ಮಹಾರಾಜರು ಸನ್ಮಾನಿಸಿ ಕೊಟ್ಟಿದ್ದ ಶಾಲನ್ನೇ ಹೊದಿಸಿ ಹರಸಿದರಂತೆ!
ಗುರುಕುಲದಿಂದ ಬಂದ ಗೌಡರಿಗೆ ವಿವಾಹವಾಯಿತು. ಮಡದಿ ಸ್ವಲ್ಪ ಕಾಲದಲ್ಲೇ ತೀರಿಕೊಂಡರು. ಗೌಡರು ಒಂದು ರೀತಿಯ ವಿರಕ್ತರಾದರು. ಅಲೆಮಾರಿ ಜೀವನ ನಡೆಸಿದರೂ ಸಂಗೀತ ಮಾತ್ರ ಬಿಡಲಿಲ್ಲ. ಅವರು ಸಂಗೀತ ಬಿಡಲಿಲ್ಲ. ಅವರ ಹಾಡುಗಾರಿಕೆ ಕೇಳಿದವರು ಅದನ್ನು ಮರೆಯಲಿಲ್ಲ. ದುರದೃಷ್ಟವಶಾತ್ ಕುಡಿತದ ಚಟ ಅಂಟಿಕೊಂಡಿತು. ಕೆಂಪೇಗೌಡರಿಗೆ ಹೆಸರು, ಹಣ, ಬಿರುದು-ಬಾವಲಿಗಳ ಆಸೆ ಇರಲಿಲ್ಲ. ಒಮ್ಮೆ ಎಲ್ಲಿಗೋ ಹೋಗುತ್ತಿದ್ದಾಗ ಆಗಿನ ಮಹಾರಾಜ ಶ್ರೀ ಚಾಮರಾಜ ಒಡೆಯರ್ ಅಕಸ್ಮಾತ್ ಕೆಂಪೇಗೌಡರ ಗಾಯನ ಕೇಳಿದರಂತೆ. ವಾಸುದೇವಾಚಾರ್ಯರ ಮೂಲಕ ಗೌಡರನ್ನು ಕರೆಸಿ ಮಹಾರಾಜರು ಅರಮನೆಯಲ್ಲಿ ಹಾಡಿಸಿದರಂತೆ.
ಮಹಾರಾಜರ ಮೂಲಕ ಬಂದ ಆಸ್ಥಾನ ವಿದ್ವಾನ್ ಪದವಿಯನ್ನು ಗೌಡರು ಬೇಡವೆಂದರೂ, ಆಗಾಗ ಅರಮನೆಗೆ ಹೋಗಿ ಹಾಡುತ್ತಿದ್ದರಂತೆ. ಬೆಂಗಳೂರಿನ ಬಸವನಗುಡಿ ಸುತ್ತ-ಮುತ್ತ ಆಗಾಗ ಬಂದು ಹಾಡುತ್ತಿದ್ದರಂತೆ.
*****
ಚಿಕಾಗೋ ನಗರದಲ್ಲಿ ನಡೆದ "ವಿಶ್ವ ಧರ್ಮ ಸಮ್ಮೇಳನ" ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಂಚೆ 1892 ಇಸವಿಯಲ್ಲಿ ಬೆಂಗಳೂರಿಗೆ ಬಂದಿದ್ದಾಗ ಸ್ವಾಮಿ ವಿವೇಕಾನಂದ ಅವರು ಭೈರವಿ ಕೆಂಪೇಗೌಡರ ಗಾಯನ ಕೇಳಿದ್ದರಂತೆ. ಸ್ವತಃ ಒಳ್ಳೆಯ ಗಾಯಕರಾಗಿದ್ದ ವಿವೇಕಾನಂದರು ಬಹಳ ಸಂತೋಷಪಟ್ಟು ಗೌಡರನ್ನು ಅಭಿನಂದಿಸಿದರು.
ಚಿಕಾಗೊ ಸಮ್ಮೇಳನದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿ ವಿವೇಕಾನಂದರು ಭಾರತಕ್ಕೆ ಮರಳಿದರು. ಅವರ ಜಯಭೇರಿಯನ್ನು ಕೇಳಿ ತಿಳಿದ ಕೆಂಪೇಗೌಡರು ಕಲ್ಕತ್ತ ನಗರಕ್ಕೆ ಪ್ರಯಾಣ ಮಾಡಿ ಅವರನ್ನು ಕಂಡರು. ವಿವೇಕಾನಂದರು ಮತ್ತೊಮ್ಮೆ ಅವರಿಗೆ ಹಾಡುವಂತೆ ಕೇಳಿದರು. ಕೆಂಪೇಗೌಡರು ಮತ್ತೊಮ್ಮೆ ಮೈಮರೆತು ಹಾಡಿದರು. ತಲೆದೂಗಿದ ಸ್ವಾಮಿ ವಿವೇಕಾನಂದರು ತಮ್ಮ ಮೇಲು ಹೊದಿಕೆಯನ್ನೇ ಬಹುಮಾನವಾಗಿ ಗೌಡರಿಗೆ ಹೊದಿಸಿ ಸಂತೋಷ ಸೂಚಿಸಿದರಂತೆ.
ಕರ್ನಾಟಕದ ಖ್ಯಾತ ಸಂಗೀತ ವಿದುಷಿ "ಗಾನ ಕಲಾ ಭೂಷಣ" ಶ್ರೀಮತಿ ಟಿ. ಎಸ್. ವಸಂತ ಮಾಧವಿ ಅವರು ಭೈರವಿ ಕೆಂಪೇಗೌಡರ ಬಗ್ಗೆ ಒಂದು ಕೃತಿ ರಚಿಸಿದ್ದಾರೆ. ಡಾ. ಎನ್. ಜಗದೀಶ್ ಕೊಪ್ಪ ಅವರು "ಗಾನಗಂಧರ್ವ ಭೈರವಿ ಕೆಂಪೇಗೌಡ" ಎನ್ನುವ ಒಂದು ಕೃತಿ ರಚಿಸಿದ್ದಾರೆ. ಆಸಕ್ತರು ಓದಬಹುದು.
*****
ಕರ್ನಾಟಕದ ಸಂಗೀತದ ಇತಿಹಾಸದಲ್ಲಿ ಭೈರವಿ ಕೆಂಪೇಗೌಡರದ್ದು ಒಂದು ಸುವರ್ಣ ಅಧ್ಯಾಯ. ಹೆಸರು, ಹಣ, ಬಿರುದು, ಮುಂತಾದುವುಗಳಿಗೆ ಓಗೊಡದೆ ಸಂಗೀತಸೇವೆಯನ್ನೇ ಉಸಿರಾಗಿ ಬಾಳಿದ ಮಹಾನುಭಾವರು. ತನ್ನ ಸ್ನೇಹಿತನಿಗಾಗಿ ಪಕ್ಕವಾದ್ಯವಿಲ್ಲದೇ ಬೆಳ್ಳಂಬೆಳಿಗ್ಗೆ ರಾಗಿ ಮೂಟೆಯ ಮೇಲೆ ಕುಳಿತು ಹಾಡಿದ ಅವರ ವ್ಯಕ್ತಿತ್ವ ಇದಕ್ಕೊಂದು ಸಣ್ಣ ನಿದರ್ಶನ.
ಅನೇಕಮಹಾನುಭಾವರುಗಳ ಕೀರ್ತಿ ಕಂದವಿಚಾರಗಳು ತಿಳಿದಂತಾಯಿತು ಎಲ್ಲಾ ಹರಿಚಿತ್ತ ಚಿಕ್ಕ ಪೇಟೆ ಮತ್ತು ಅವೆನ್ಯೂರಸ್ತಗಳಲ್ಲಿ ಸಂಗೀಕವೂ ಪ್ರಾಪ್ತವಾದವಿಷಯಗಳೂ ತಿಳಿದಂತಾಯಿತು ಧನ್ಯೋಸ್ಮಿ
ReplyDeleteಇಂತಹ ಪ್ರಾತಃ ಸ್ಮರಣೀಯರ ಬಗ್ಗೆ ಎಷ್ಟು ಸಲ ಓದಿದರು ಧನ್ಯತಾಭಾವವೇ ಮೂಡುತ್ತದೆ
ReplyDeleteVery nice to know the life history of Bhyravi Kempegowda. What a divine connection he had in his life. One of the gems of Karnataka, I think. UR….
ReplyDeleteNo words to express. Just by listening to all the "pethe " names the nostalgic memories came back afresh, taking back to the time when we walked with our grandmother, holding her hands,
ReplyDeletethrough those lanes, maybe sometime to meet one of her old friends or relatives, or at times visit "Kaiser e Hind", specially for buying some authentic silk sarees to be gifted for a wedding . What ever may be the reason or occasion, it felt special to go into the old city of Bangalore. The hustle and bustle , the people hurrying for their work , the busy bylanes filled with buyers and sellers , are etched in our memories for ever .
The entire narrative is a piece of artwork in itself. Thank you so much for all the kindness you make this happen to the readers through your incredible writings
Meerabapat
Good to know about Bhairavi Kempegowda, while narrating about him, you also took us to a trip of all pethes of Bengaluru, wonderful blog, thank you.
ReplyDeleteIt is a very touching article. I hope, all your writings will come in form of a book. A friendship of hope, love and encouragement is very touching!
ReplyDeleteA good recollection of the which many may not be knowing. Hats of to Keshava Murthy sir.
ReplyDeleteThe style & content of this writing is superb. I just love this.
ReplyDelete