Friday, August 29, 2025

ಸಾವು ಎದುರಲ್ಲಿ ಬಂದು ನಿಂದಾಗ


ಅರ್ಜುನನ ಮೊಮ್ಮಗ, ಅಭಿಮನ್ಯುವಿನ ಮಗ, ಪರೀಕ್ಷಿತ ಮಹಾರಾಜನಿಗೆ ಋಷಿಕುಮಾರ ಶೃಂಗಿಯ ಶಾಪದ ವಿಚಾರ ಗೊತ್ತಾಯಿತು. ಈಗ ಬದುಕಿನಲ್ಲಿ ಇನ್ನುಳಿದಿದ್ದು ಕೇವಲ ಏಳು ದಿನಗಳು. ಜೀವನದ ಕೊನೆಗಾಲ ಬಂದಿದೆ. ಸಾವು ಎದುರಲ್ಲಿ ಬಂದು ನಿಂತಿದೆ. ತಪ್ಪಿಸಿಕೊಳ್ಳುವಹಾಗಿಲ್ಲ. ಯೋಚನೆ ಮಾಡುತ್ತಿದ್ದಷ್ಟೂ ಸಮಯ ಸೋರಿಹೋಗುತ್ತಿದೆ. ಇರುವ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ಅವನ ಪುಣ್ಯಕ್ಕೆ ವೇದವ್ಯಾಸ ಪುತ್ರರಾದ ಶುಕಾಚಾರ್ಯ ಅದೇ ಸಮಯಕ್ಕೆ ಬಂದರು. ಪರೀಕ್ಷಿತನಿಗೆ ಜೀವನದಲ್ಲಿ ಉಳಿದ ಏಳು ದಿನಗಳಲ್ಲಿ ಹೇಗೆ ಮತ್ತೆ ಮತ್ತೆ ಕಾಡುವ ಜೇವನ-ಮರಣ ಚಕ್ರದಿಂದ ಮುಕ್ತಿ ಪಡೆಯುವುದು ಎಂಬ ಚಿಂತೆ. "ಇಷ್ಟು ಕಡಿಮೆ ಕಾಲದಲ್ಲಿ ಹೇಗೆ ಇಂತಹ ಸಾಧನೆ ಸಾಧ್ಯ?" ಎಂದು ಅವರನ್ನು ಕೇಳಿದ. 

"ನೀನು ಭಾಗ್ಯವಂತ. ನಿನಗೆ ಏಳು ದಿನಗಳ ಕಾಲ ಬಾಕಿ ಇದೆ. ಅದಕ್ಕಿಂತ ಹೆಚ್ಚಾಗಿ, ಇಷ್ಟು ಕಾಲ ಇದೆ ಎಂದೂ ಗೊತ್ತಿದೆ!"
"ತಮ್ಮ ಅಭಿಪ್ರಾಯ ದಯಮಾಡಿ ವಿವರಿಸಬೇಕು"
"ಅನೇಕರಿಗೆ ಎಷ್ಟು ಕಾಲ ಜೀವಿತ ಉಳಿದಿದೆ ಎಂದು ಗೊತ್ತಿರುವುದಿಲ್ಲ. ನಿನಗೆ ಅದು ಖಚಿತವಾಗಿ ಗೊತ್ತಾಯಿತು"
"ಇದು ಒಳ್ಳೆಯದೇ?"
"ಹೇಗೆ ಯೋಚಿಸಿದರೆ ಹಾಗೆ. 'ಅಯ್ಯೋ! ಏಳೇ ದಿನವೇ ಅನ್ನಬಹುದು.' ಅಥವಾ 'ಸದ್ಯ! ಏಳು ದಿನ ಇವೆಯಲ್ಲ' ಅನ್ನಬಹುದು"
"ಹಾಗಿದ್ದರೆ ಇಷ್ಟು ಕಡಿಮೆ ಅವಧಿಯಲ್ಲಿ ಮುಕ್ತಿ ಸಾಧಿಸಬಹುದೇ?"
"ಕೇವಲ ಒಂದು ಮುಹೂರ್ತ ಕಾಲದಲ್ಲಿ ಸಾಧಿಸಿದವರಿದ್ದಾರೆ"
"ಹೌದೇ? ಆ ಬಗ್ಗೆ ಕೃಪೆಮಾಡಿ ತಿಳಿಸಿಕೊಡಿ" 

ಶುಕಾಚಾರ್ಯರು ಪರೀಕ್ಷಿತ ಮಹರ್ರಾಜನಿಗೆ ಈ ವಿಷಯವನ್ನು ವಿವರಿಸಿದರು. ಹೇಳಿದ್ದು ಪರೀಕ್ಷಿತ ಮಹಾರಾಜನಿಗೆ. ಆದರೆ ಅದು ಎಲ್ಲರಿಗೂ ಸಂಬಂಧಿಸಿದ್ದು. ಅವನ ಮೂಲಕ ಸರ್ವರಿಗೂ ತಿಳುವಳಿಕೆ ಕೊಟ್ಟದ್ದು. 

*****

ದೇವತೆಗಳಿಗೂ ಅಸುರರಿಗೂ ತೀರದ ಹಗೆ. ಆಗಾಗ ಜಗಳಗಳು. ದೇವತೆಗಳಿಗೆ ಅಮೃತಪಾನದ ಬಲದಿಂದ ಸಾವಿಲ್ಲದಿದ್ದರೂ ಸೋಲಿಲ್ಲದಿಲ್ಲ. ಅಸುರ ಸಂತಾನದಲ್ಲಿ ಕಾಲಕಾಲಕ್ಕೆ ಪ್ರಬಲರು ಹುಟ್ಟುವರು. ಅವರು ಬಹಳ ಶ್ರಮಪಟ್ಟು ಬ್ರಹ್ಮನನ್ನೋ, ರುದ್ರನನ್ನೋ ಮೆಚ್ಚಿಸುವರು. ಆ ಮೂಲಕ ವರಗಳನ್ನು ಸಂಪಾದಿಸುವರು. ಕೆಲ ಕಾಲ ಅವುಗಳಿಂದ ಬಲಿಷ್ಠರಾಗುವರು. ಆ ಮದದಿಂದ ದೇವತೆಗಳ ಮೇಲೆ ದಂಡೆತ್ತಿ ಬರುವರು. ಯುದ್ಧಗಳಾಗುವುವು. ಹೀಗೆ ನಡೆಯುತ್ತಾ ಇರುವುದು. ಕೆಲವು ವೇಳೆ ಹೀಗೆ ಯುದ್ಧವಾಗುವಾಗ ದೇವತೆಗಳು ಭೂಲೋಕದಲ್ಲಿರುವ ಪ್ರಬಲರಾದ ರಾಜರ ಸಹಾಯ ಕೇಳುವರು. ಆ ರಾಜರು ಕರ್ತವ್ಯವೆಂದೂ, ಧರ್ಮದ ಪರ ಎಂದೂ ದೇವತೆಗಳಿಗೆ ಯುದ್ಧಗಳಲ್ಲಿ ಸಹಾಯ ಮಾಡುವರು. ಹೀಗೆ ಯುದ್ಧಗಳಲ್ಲಿ ಸಹಾಯ ಮಾಡಿದ ರಾಜರುಗಳಿಗೆ ದೇವತೆಗಳು ವರಗಳನ್ನೋ, ಸಂಪತ್ತನ್ನೊ, ಭೋಗ-ಭಾಗ್ಯಗಳನ್ನೋ ಸಂತೋಷದಿಂದ ಕೊಡುವರು. 

ಅನೇಕ ವೇಳೆ ಇಂತಹ ಸಹಾಯಗಳಿಂದ ದೇವತೆಗಳು ಅಸುರರನ್ನು ಕದನದಲ್ಲಿ ಸೋಲಿಸಿ ಓಡಿಸಿದುದು ನಡೆದಿದೆ. ಶ್ರೀರಾಮಚಂದ್ರನ ತಂದೆಯಾದ ದಶರಥನು ಸಹ ಹೀಗೆ ದೇವಾಸುರ ಯುದ್ಧದಲ್ಲಿ ದೇವತೆಗಳ ಸಹಾಯ ಮಾಡಲು ಹೋಗುತ್ತಿದ್ದನು. ಒಮ್ಮೆ ಹೀಗೆ ಹೋದಾಗ ತನ್ನ ಜೊತೆ ಚಿಕ್ಕ ರಾಣಿ ಕೈಕೆಯನ್ನು ಕರೆದೊಯ್ದ. ಯುದ್ಧದ ಮಧ್ಯೆ ರಥದ ಕಡಾಣಿ ಬಿದ್ದುಹೋದಾಗ ಕೈಕೆ ತನ್ನ ಬೆರಳನ್ನೇ ಕಡಾಣಿಯಾಗಿ ಮಾಡಿ, ನೋವು ಲೆಕ್ಕಿಸದೆ ರಥವನ್ನೂ, ದಶರಥನನ್ನೂ ಕಾಪಾಡಿದಳು. ಆಗ ಅವಳು  ಮಾಡಿದ ಉಪಕಾರಕ್ಕಾಗಿ ದಶರಥನು ತಾನೇ ಅವಳಿಗೆ ವರಗಳನ್ನು ಕೊಟ್ಟುದದರಿಂದ ಮುಂದೆ ರಾಮಾಯಣವೇ ನಡೆಯಿತು ಎನ್ನುವುದನ್ನು ನೆನಪಿಸಿಕೊಳ್ಳಬಹುದು. 

ಒಂದು ಸಮಯದಲ್ಲಿ ಭೂಲೋಕದಲ್ಲಿ ಖಟ್ವಾಂಗ ಎನ್ನುವ ರಾಜರ್ಷಿ ಆಳುತ್ತಿದ್ದ ಕಾಲ. ಬಹಳ ಪರಾಕ್ರಮಿಯೂ, ಧರ್ಮಿಷ್ಟನೂ ಆದ ಚಕ್ರವರ್ತಿ. ಅಸುರರೊಡನೆ ಯುದ್ಧದ ಪ್ರಸಂಗ ದೇವಗಳಿಗೆ ಬಂತು. ದೇವತೆಗಳು ಖಟ್ವಾಂಗನ ಸಹಾಯ ಕೇಳಿದರು. ಖಟ್ವಾಂಗ ಚಕ್ರವರ್ತಿಯು ಒಪ್ಪಿ ದೇವತೆಗಳ ಕಡೆಯಿಂದ ಹೋರಾಡಿದ. ದೇವತೆಗಳಿಗೆ ದೊಡ್ಡ ವಿಜಯವಾಯಿತು. ಖಟ್ವಾಂಗನ ಸಹಾಯಕ್ಕೆ ಅವರು ಕೃತಜ್ಞರಾದರು. 

"ರಾಜರ್ಷಿ ಖಟ್ವಾಂಗ, ನಿನ್ನ ಸಹಾಯದಿಂದ ನಮಗೆ ವಿಜಯವಾಯಿತು. ನಾವು ಬಹಳ ಸಂತುಷ್ಟರಾಗಿದ್ದೇವೆ. ನಿನಗೆ ಏನು ವರ ಬೇಕು? ಕೇಳು. ಧನ-ಕನಕಗಳೇ? ದೇವಲೋಕದ ಅಪೂರ್ವ ಭೋಗ-ಭಾಗ್ಯಗಳೇ? ಅಥವಾ ಮತ್ತೆ ಇನ್ನೇನಾದರೂ ಬೇಕೇ?"
"ನಿಮ್ಮ ಕೃಪೆಯಿಂದ ನನಗೆ ಎಲ್ಲವೂ ಪ್ರಾಪ್ತವಾಗಿವೆ. ನನಗೆ ಇವು ಯಾವುವೂ ಬೇಡ"
"ಹಾಗಿದ್ದರೆ ಇನ್ನೇನು ಕೊಡೋಣ?"
"ಕೊಡುವಹಾಗಿದ್ದಾರೆ ನನ್ನ ಶೇಷ ಆಯು ಪ್ರಮಾಣ ಎಷ್ಟು ಎನ್ನುವುದನ್ನು ತಿಳಿಸಿ"
"ಅದನ್ನು ತಿಳಿಯಬೇಕೇ? ಬೇರೇನೂ ಬೇಡವೇ?"
"ಅದನ್ನು ಹೇಳಿದರೆ ಸಾಕು. ಬೇರೇನೂ ಬೇಡ"
"ಈಗ ನಿನ್ನ ಅಆಯುಸ್ಸಿನಲ್ಲಿ ಒಂದು ಮುಹೂರ್ತ ಕಾಲ ಮಾತ್ರ ಉಳಿದಿದೆ"

ಖಟ್ವಾಂಗನಿಗೆ ಬಹಳ ಆಶ್ಚರ್ಯವಾಯಿತು. ಒಂದು ಮುಹೂರ್ತ ಅಂದರೆ ಎರಡು ಘಳಿಗೆಗಳ ಕಾಲ. ನಲವತ್ತೆಂಟು ನಿಮಿಷಗಳು ಮಾತ್ರ. ಇಂತಹ ಸಂದರ್ಭದಲ್ಲೂ ದೇವತೆಗಳು ಧನ-ಕನಕ, ಭೋಗ-ಭಾಗ್ಯಗಳ ಆಸೆ ತೋರಿಸುತ್ತಿದ್ದಾರೆ! 

ಖಟ್ವಾಂಗ ತಡಮಾಡದೆ ಹಿಂದಿರುಗಿದ. ಅರ್ಧ ಗಳಿಗೆಯಲ್ಲಿ ತನ್ನ ರಾಜ್ಯ-ಕೋಶಗಳಿಗೆ ಮುಂದಿನ ವ್ಯವಸ್ಥೆಗಳನ್ನು ಮಾಡಿ, ಧ್ಯಾನಮಗ್ನನಾಗಿ ದೇಹ ತ್ಯಜಿಸಿ ಮೋಕ್ಷ ಪಡೆದ!

*****

ಶ್ರೀಮದ್ಭಾಗವತದ (9.9.42) ಶ್ಲೋಕ ಖಟ್ವಾಂಗನ ವೃತ್ತಾಂತವನ್ನು ಹೀಗೆ ಹೇಳುತ್ತದೆ:

ಯೋ ದೇವೈರರ್ಥಿತೋ ಅವಧೀ: ಯುಧಿದುರ್ಜಯಃ 
ಮುಹೂರ್ತಮ್ ಆಯುರ್ಜ್ಞಾತ್ವೈತ್ಯ  ಸ್ವಪುರಂ ಸಂದಧೇ: ಪುನಃ  

ಖಟ್ವಾಂಗ ರಾಜರ್ಷಿಯು ಆಗ ಮಾಡಿದ ಒಂದು ಘಳಿಗೆಯ ಧ್ಯಾನದಿಂದಲೇ ಮೋಕ್ಷ ಸಿಕ್ಕಿತು ಎಂದು ತಪ್ಪು ತಿಳಿಯಬಾರದು.  ಅಡಿಗೆ ಮಾಡುವವರು ಅನೇಕ ಪದಾರ್ಥಗಳನ್ನು ಮಾಡಿ ಮಾಡಿ ಇಟ್ಟಿರುತ್ತಾರೆ. ಕಡೆಯಲ್ಲಿ ಸ್ವಲ್ಪ ಸಮಯದಲ್ಲಿ ಒಗ್ಗರಣೆ ತಯಾರು ಮಾಡಿ ಅವೆಲ್ಲದಕ್ಕೂ ಬೆರೆಸಿ ಅಡಿಗೆ ಮುಗಿಸುತ್ತಾರೆ. ಒಗ್ಗರಣೆಯಿಂದ ಅಡಿಗೆ ಆದದ್ದಲ್ಲ. ಒಗ್ಗರಣೆಯಿಂದ ಅದು ಮುಗಿಯಿತು. ಅದು ಕಡೆಯ ಹಂತ ಮಾತ್ರ. ಇದೂ ಹಾಗೆಯೇ. ಅನೇಕ ಕಾಲಗಳಲ್ಲಿ ಮಾಡಿದ್ದ ಸಾಧನೆಗೆ ಕೊನೆಯ ಕಳಸ ಈ ಒಂದು ಘಳಿಗೆಯಲ್ಲಿ ಮಾಡಿದ ಅಂತಿಮ ಧ್ಯಾನ. ಪರೀಕ್ಷಿತನಿಗೂ ಹೀಗೆಯೇ ಆಯಿತು. ಏಳು ದಿನಗಳ ಅಖಂಡ ಸಾಧನೆ ಶುಕ್ರಾಚಾರ್ಯರ ಮಾರ್ಗದರ್ಶನದಿಂದ ನಡೆಸಿ ಪರಮಪದವನ್ನು ಪಡೆದ.

ಅಜಾಮಿಳನ ಪ್ರಸಂಗದಲೂ ಹೀಗೆ ತಪ್ಪು ಕಲ್ಪನೆ ಇದೆ. ಮಾಡಬಾರದ್ದನ್ನೆಲ್ಲ ಮಾಡಿ, ಕಡೆಯ ಸಮಯದಲ್ಲಿ ಮಗನ ಮೋಹದಿಂದ ಅವನ ಹೆಸರಾದ "ನಾರಾಯಣ" ಎಂದು ಕೂಗಿ ಮೋಕ್ಷ ಪಡೆದ ಎಂದು ಕಥೆ. ನಾರಾಯಣ ಎಂದು ಕರೆದದ್ದರಿಂದ ಅವನಿಗೆ ಹಿಂದಿನ ಸಾಧನೆಗಳ ಸ್ಮರಣೆ ಬಂತು. ಮತ್ತೆ ಕೊನೆಯ ಹಂತದ ಸಾಧನೆ ಮುಗಿಸಿ ಪರಮಪದ ಪಡೆದ. ಇದರ ವಿವರಗಳೂ ಶ್ರೀಮದ್ ಭಾಗವತದಲ್ಲಿ ಇದೆ. (ಹೆಚ್ಚಿನ ವಿವರಗಳಿಗೆ "Ajamila's Cheque" ಎನ್ನುವ ಅಂಕಣವನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

*****

"ಜಾತಸ್ಯ ಹಿ ಧ್ರುವಂ ಮೃತ್ಯು:" ಎನ್ನುವುದು ಎಲ್ಲರೂ ತಿಳಿದಿರುವ, ಎಲ್ಲರೊ ಮತ್ತೆ ಮತ್ತೆ ಹೇಳುವ ಮಾತು. ಹುಟ್ಟಿನೊಡನೆ ಬರುವ ಒಂದೇ ಪರಮ ಸತ್ಯವೆಂದರೆ ಸಾವು. ಮುಂದು ಹಾಕಲಾಗದ ಪ್ರಯಾಣದ ಕೊನೆಯ ನಿಲ್ದಾಣ ಅದು. ಇದು ಎಲ್ಲರಿಗೂ ಗೊತ್ತು. ಸಾವು ಎಂದೋ ಒಂದು ದಿನ ನಮ್ಮ ಮುಂದೆ ಬಂದು ನಿಲ್ಲುವ ಅಪರಿಚಿತ ಅಲ್ಲ. ನಾವು ಹುಟ್ಟಿದಂದೇ ಹುಟ್ಟಿ, ಅಂದಿನಿಂದ ನಮ್ಮ ಎದುರು ನಿಂತಿರುವ ಸತ್ಯ ಅದು. ಹುಟ್ಟಿದಾಗ ದೂರದಲ್ಲಿರುತ್ತದೆ. ಅದು ಅಲ್ಲೇ ನಿಂತಿರುತ್ತದೆ. ನಾವು ಮಾತ್ರ ಪ್ರತಿ ಕ್ಷಣ ಅದರ ಹತ್ತಿರ ಹತ್ತಿರ ಹೋಗುತ್ತಿರುತ್ತೇವೆ. ದಿನ, ಕಾಲ ಗೊತ್ತಿಲ್ಲದ ರಿಸರ್ವೇಶನ್ ಅದಕ್ಕೆ ಉಂಟು. 

ನಮ್ಮ ಕಣ್ಣುಗಳು ನಮಗೆ ಏನು ಇಷ್ಟವೂ ಅದನ್ನೇ ತೋರಿಸುತ್ತವೆ. ಇಷ್ಟವಿಲ್ಲದ್ದನ್ನು ಮುಚ್ಚಿಡುತ್ತವೆ. ಆದ್ದರಿಂದ ಸಾವಿನ ವಿಷಯದಲ್ಲಿ ನಮಗೆ ಕಣ್ಣಿನ ಪೊರೆ ಬಂದಂತೆ. ಬಾಕಿಯ ಪ್ರಪಂಚವೆಲ್ಲಾ ನಿಚ್ಚಳವಾಗಿ ಕಂಡರೂ ಸಾವು ಕಾಣದು. ಮನುಷ್ಯನಿಗೆ ಅನೇಕ ಆಸೆಗಳು. "ಆಸೆಯೆಂಬ ತಳ ಒಡೆದ ದೋಣಿಯೊಳು ದೂರತೀರ ಯಾನ" ಎನ್ನುತ್ತದೆ ಅಡಿಗರ "ಅಳುವ ಕಡಲೊಳು ತೇಲಿಬರುತಲಿದೆ ನಗೆಯ ಹಾಯಿ ದೋಣಿ" ಎನ್ನುವ ಗೀತೆ. ಈ ಅನೇಕ ಆಸೆಗಳಲ್ಲಿ ಎರಡು ಬಲು ಮುಖ್ಯವಾದವು. "ಧನಾಶಾ, ಜೀವಿತಾಶಾ ಚ" ಎಂದು ಹೇಳುತ್ತಾರೆ. ಹಣದ ಆಸೆ ಮೊದಲನೆಯದು. ಅದಕ್ಕಿಂತ ಹೆಚ್ಚಿನದು ಇನ್ನಷ್ಟು ದಿನ ಬದುಕುವಾಸೆ. 

ಯಾರಾದರೂ ಇಷ್ಟ ಪಡಲಿ, ಇಲ್ಲದಿರಲಿ, ಭೌತಿಕ ದೇಹಕ್ಕೆ ಅದರದೇ ಆದ ಇತಿ-ಮಿತಿಗಳು ಉಂಟು. ದೇಹ ಕಾಲದಿಂದ ಕಾಲಕ್ಕೆ ಅಲ್ಲಲ್ಲಿ ಅಲಾರಾಂ ಕೊಡುತ್ತಲೇ ಇರುತ್ತದೆ. ಮಧ್ಯೆ ಮಧ್ಯೆ ಆಗುವ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆಗಳು ಹರಿದ ಬಟ್ಟೆಗೆ ತೇಪೆ ಹಾಕಿದಂತೆ. ಈಗಿನ ಜನಾಂಗಕ್ಕೆ ತೇಪೆ ಎನ್ನುವುದು ಗೊತ್ತಿಲ್ಲ. ಹಿಂದೆ ಡಾರ್ನಿಂಗ್ ಎಂದು ಮಾಡುತ್ತಿದ್ದರು. ಅದು ಒಂದು ರೀತಿ ತೇಪೆ ಹಾಕಿರುವುದು ಗೊತ್ತಾಗದಂತೆ ಮಾಡಿದ ತೇಪೆ. ತೇಪೆ ಹಾಕಿದ ಬಟ್ಟೆ ತೇಪೆ ಹಾಕಿರುವ ಪಕ್ಕದಲ್ಲೇ ಮತ್ತೆ ಪಿಂಜಿಕೊಳ್ಳುತ್ತದೆ. ನಮ್ಮ ದೇಹವೂ ಹಾಗೆಯೇ!

*****

ಕೆಲವು ಜನರಿಗೆ ಸಾವು ಧಿಡೀರ್ ಎಂದು ಬರಬಹುದು. "ಅದೊಂದು ಸುಖ ಮರಣ" ಎಂದು ಜನರಾಡಬಹುದು. ಮತ್ತೆ ಕೆಲವರಿಗೆ ವೈದ್ಯರು ಕೊಟ್ಟ ಗಡುವು ಎಚ್ಚರ ಕೊಡಬಹುದು. ಕೊನೆ ಬಂದಿರುವುದು ಎಂದು ದೇಹ  ಹೇಳುವುದು, ಯಾತನೆ ಹೆಚ್ಚುವುದು ಇವೆಲ್ಲವೂ ಅವರಿಗೆ ಆಗಬಹುದು. ಮತ್ತೆ ಕೆಲವರಿಗೆ ಅದು ಹತ್ತಿರದಲ್ಲಿಯೇ ಇದೆ ಎಂದು ಖಚಿತವಾಗಿ ಪ್ರತಿದಿನ ಅದನ್ನೇ ನೆನೆದು, ನೆನೆದು ಹಿಂಸೆ ಆಗಬಹುದು. 

ಅನತಿ ದೂರದಲ್ಲಿ ಅದು ನಿಂತಿದೆ ಎಂದು ಗೊತ್ತಾದವರು, ನಮ್ಮ ಸುತ್ತ-ಮುತ್ತಲಿನವರು ಅದನ್ನು ಹೇಗೆ ಎದುರಿಸಿದರು? ಕೂಗಾಡಿ-ಅರಚಾಡಿ ಹಿಂಸೆ ಪಟ್ಟು, ಸುತ್ತಲಿನವರಿಗೂ ಕಷ್ಟ ಕೊಟ್ಟವರು ಕಡಿಮೆಯಿಲ್ಲ. ಅದರಂತೆ, ಧೈರ್ಯವಾಗಿ ಅದನ್ನು ಎದುರಿಸಿದವರನ್ನೂ ನಾವು ನಮ್ಮ ಜೀವಿತ ಕಾಲದಲ್ಲೇ ಕಂಡಿದ್ದೇವೆ. ಅನೇಕ ವರ್ಷಗಳ ಕಾಲ ಕುಟುಂಬಗಳ ನಡುವೆ ನಡೆದುಬಂದಿದ್ದ ವೈರತ್ವ ಕೊನೆ ಮಾಡಿ ಶಾಂತಿ ತಂದವರಿದ್ದಾರೆ. ಚಿಕ್ಕ ವಯಸ್ಸಿನ ಹೆಂಡತಿಗೆ ಮರು ಮದುವೆ ವ್ಯವಸ್ಥೆ ಮಾಡಿ ನಂತರ ನಿರಾಳವಾಗಿ ಹೋದವರಿದ್ದಾರೆ. ತಮ್ಮ ಅಪಾರ ಆಸ್ತಿಯನ್ನು ಸದ್ವಿನಿಯೋಗ ಮಾಡಿ ಕಣ್ಮುಚ್ಚಿದವರಿದ್ದಾರೆ. ಅಂಗಾಂಗಗಳ, ಇಡೀ ದೇಹವನ್ನೇ ದಾನ ಮಾಡಿದವರೂ ಉಂಟು. 

"ಸಾಧನ ಶರೀರವಿದು, ನೀ ದಯದಿ ಕೊಟ್ಟದ್ದು; ಸಾಧಾರಣವಲ್ಲ, ಸಾಧುವಂದ್ಯ" ಎಂದು ದಾಸರು ಹೇಳುವಂತೆ ಆದಷ್ಟು ದಿನ ದೇಹವನ್ನು ಕಾಪಾಡಿಕೊಳ್ಳುವುದು ನ್ಯಾಯವೇ. ಆದರೆ ಕಾಲ ಬಂದಾಗ ಮರು ಮಾತಿಲ್ಲದೆ ಹೋಗಲು ತಯಾರಾಗಿರಬೇಕಾದ್ದು ಸಹ ಕರ್ತವ್ಯವೇ. 

*****

ಮರುಜನ್ಮ, ಪಾಪ-ಪುಣ್ಯಗಳು, ಇವೆಲ್ಲಾ ಇವೆಯೋ, ಇಲ್ಲವೋ ಗೊತ್ತಿಲ್ಲ. ಅಲ್ಲಿ ಹೋದವರು ಯಾರೂ ಮತ್ತೆ ಬಂದಿಲ್ಲ. ಆದ್ದರಿಂದ ಅದನ್ನು ಹೇಳುವವರಿಲ್ಲ. ನಮ್ಮ ವೈದಿಕ ವಾಂಗ್ಮಯದಲ್ಲಿ ನಂಬಿಕೆ ಇಟ್ಟವರಿಗೆ, ಶ್ರದ್ದೆ ಇರುವವರಿಗೆ ಈ ರೀತಿ ಸಾವು ಎದುರು ನಿಂತಾಗ ಧೈರ್ಯದಿನ ಎದುರಿಸುವ, ಸ್ವೀಕರಿಸುವ ಮನಸ್ಥಿತಿ ಬರುವುದಂತೂ ನಾವು ಕಂಡ ಸತ್ಯಗಳಲ್ಲಿ ಒಂದು ಎನ್ನಬಹುದು. 

5 comments:

  1. Very interesting write up. Beautifully written.

    ReplyDelete
  2. ರಾಘವೇಂದ್ರAugust 30, 2025 at 5:30 AM

    ಬಹಳ ಉತ್ತಮವಾದ ಲೇಖನ.
    ಲೇಖನದ ಕೂನೆಯ ಕಂಠಿಕೆ ಅಕ್ಷರ ಸಹ ನಿಜ.

    ಜಗನ್ನಾಥ ದಾಸರ ದೇವರ ನಾಮದ ಸಾಲಿನ ಉದಾಹರಣೆ ಸೂಗಸಾಗಿದೆ.

    ReplyDelete
  3. Very nice write up, a topic no body likes to talk about.

    ReplyDelete
  4. Man always seeks parama padaatany. Cost easiest way to die like parerkshit how many births HEHAS Donegreatdeeds efote he gets such great oppurtunity
    He was most blessed as he Lreadyhdfiez and living subject to Krishna Kripa so naturally by default he was most deserving go havr oppurtunity to know his date ofvdeath and Seem most auspicious way to dieseand time
    He became. First to have two birthsnd two deaths


    ReplyDelete