Friday, August 28, 2026

ಹನುಮನ ಭಕ್ತಿ ಮತ್ತು ಕಾವ್ಯದಲ್ಲಿ "ಧ್ವನಿ"


ಹನುಮನ ಶಕ್ತಿ ಅಸಾಮಾನ್ಯವಾದದ್ದು. ಅದರ ಸರಿಯಾದ ಅನುಭವವನ್ನು ರಾವಣನಂತಹ ಮಹಾಬಲಶಾಲಿಯನ್ನು ತನ್ನ ಬಾಲದಲ್ಲಿ ಕಟ್ಟಿಕೊಂಡು ನಾಲ್ಕು ದಿಕ್ಕುಗಳ ಸಮುದ್ರಗಳಲ್ಲಿ ಮುಳುಗಿಸಿದ್ದ ಧೀರ ವಾಲಿ ಪಡೆದ್ದಿದ್ದ. ಹನುಮನ ಭಕ್ತಿ ಕೂಡ ಅಂತೆಯೇ. ಅತಿಹೆಚ್ಚು ಶಕ್ತಿವಂತನಿಗೂ, ಅತ್ಯಂತ ಭಕ್ತಿವಂತನಿಗೂ ಒಂದು ಉದಾಹರಣೆ ಕೊಡಲು ಹನುಮನೇ ಆಗಬೇಕು. ಅಂತೆಯೇ, ಒಂದು ಅಗಾಧವಾದ ಕೆಲಸ ಮಾಡಲು ಬೇಕಾದ ಶಕ್ತಿ, ಯುಕ್ತಿ ಮತ್ತು ಸಮಯ ಪ್ರಜ್ಞೆ, ಇವೆಲ್ಲಕ್ಕೂ ಹನುಮನೇ ಕೊನೆಯ ಮಾತು. ಅನೇಕ ಅತಿ ಬಲವಂತರ ಅಹಂಕಾರ ಮುರಿಯಲು ಅವರನ್ನು ಹನುಮನ ಬಳಿ ಕಳಿಸಿದ ಕಥೆಗಳು ಬಹಳವಿವೆ.

ಭಾರತದ ಈಗಿನ ವಿದೇಶಾಂಗ ಮಂತ್ರಿಗಳಾದ ಶ್ರೀ ಎಸ್. ಜೈಶಂಕರ್ ಅವರ ಅನೇಕ ವಿಡಿಯೋಗಳಲ್ಲಿ ಒಂದು ಬಹಳ ಪ್ರಚಲಿತವಿದೆ. "ಒಬ್ಬ ಒಳ್ಳೆಯ ರಾಜದೂತ ಮತ್ತು ರಾಯಭಾರಿ ಯಾರು? ಅವರಲ್ಲಿ ಇರಬೇಕಾದ ಗುಣಗಳು ಯಾವುವು?" ಎಂದು ಅವರನ್ನು ಒಮ್ಮೆ ಪ್ರಶ್ನೆ ಮಾಡಲಾಯಿತು. "ನನ್ನ ಪ್ರಕಾರ ಒಬ್ಬ ಒಳ್ಳೆಯ ರಾಜದೂತನಿಗೆ ಉದಾಹರಣೆ ಹನುಮಂತ. ಒಬ್ಬ ಒಳ್ಳೆಯ ರಾಯಭಾರಿಗೆ ಉದಾಹರಣೆ ಶ್ರೀಕೃಷ್ಣ" ಎಂದು ಉತ್ತರಿಸಿ, ಅವರಿಗೆ ಇರಬೇಕಾದ ಗುಣಗಳ ಪಟ್ಟಿ ಮಾಡಿರುವ ಜೈಶಂಕರ್ ಅವರ ವಿಡಿಯೋ ಒಂದನ್ನು ಪ್ರಾಯಶಃ ಎಲ್ಲರೂ ನೋಡಿದ್ದಾರೆ.

ಹನುಮನು ಲಂಕೆಗೆ ಹಾರಿ ಹೋಗಿ, ಬೇಕೆಂದೇ ಸೆರೆ ಸಿಕ್ಕಿ, ರಾವಣನ ಮುಂದೆ ಕುಳಿತು ಮಾತನಾಡಿದ ಭಾಗ ಶ್ರೀಮದ್ ರಾಮಾಯಣದಲ್ಲಿ ಬಹಳ ರಸವತ್ತಾದ ಭಾಗ. "ಏಳೇಳು ಶರಧಿಯು ಏಕವಾಗಿದೆ ಕಂಡ್ಯ, ಹೇಗೆ ಬಂದೆಯೋ ಹೇಳೋ ಕೋತಿ" ಎನ್ನುವ ರಾವಣನ ಪ್ರಶ್ನೆಗೆ "ಏಳೇಳು ಶರಧಿಯು ಎನಗೇಳು ಕಾಲುವೆಯು, ಹಾರಿ ಲಂಘಿಸಿ ಬಂದೆ ಭೂತ" ಎಂದು ಹೇಳುವ ಶ್ರೀ ಪುರಂದರದಾಸರ ದೇವರನಾಮ ಬಹಳ ಪ್ರಸಿದ್ಧ. ಇದನ್ನು ಯಕ್ಷಗಾನ ಪ್ರಸಂಗಗಳಲ್ಲಿ ಬಹಳ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. "ಭಲೇ ಭಾಸ್ಕರ್" ಹೆಸರಿನ ಕನ್ನಡ ಚಲನಚಿತ್ರದಲ್ಲಿ (1971) ಇದರ ಭಾಗವೊಂದನ್ನು ಸೊಗಸಾಗಿ ಸೇರಿಸಿದ್ದಾರೆ. ಯುಟ್ಯೂಬ್ನಲ್ಲಿ ಲಭ್ಯವಿದೆ. ಶ್ರೀ ಬಾಲಮುರಳಿಕೃಷ್ಣ ಅವರು ಹಾಡಿರುವ ಪೂರ್ಣ ಹಾಡೂ ಅಲ್ಲಿ ಸಿಗುತ್ತದೆ. ಆಸಕ್ತರು ಕೇಳಬಹುದು. 

ಶ್ರೀ ವಾದಿರಾಜರ "ಎಷ್ಟು ಸಾಹಸವಂತ, ನೀನೇ ಬಲವಂತ! ದಿಟ್ಟ ಮೂರುತಿ, ಭಳಿರೆ ಭಳಿರೇ ಹನುಮಂತ" ಅನ್ನುವ ಕೃತಿಯಲ್ಲಿ, ಇನ್ನೊಂದು ಸಂದರ್ಭದಲ್ಲಿ, ಹನುಮ ರಾವನಿಗೆ ಬುದ್ಧಿವಾದ ನೀಡುವಾಗ ಹೇಳಿದ ಈ ಭಾಗವುಂಟು:

ದುರುಳ ರಾವಣನೆ ನಿನ್ನ ಬಡಿದು ಹಾಕುವೆನು 
ರಾಮರಪ್ಪಣೆ ಇಲ್ಲ ಎಂದು ತಾಳಿಹೆನು 

ಹನುಮ ಮನಸ್ಸು ಮಾಡಿದ್ದರೆ, ಸಂಯಮ ತೋರದಿದ್ದರೆ, ರಾವಣನ ಕಥೆ ಅಂದೇ ಮುಗಿದು ರಾಮಾಯಣ "ಹನುಮಾಯಣ" ಆಗುತ್ತಿತ್ತು.

*****

ರಾಮ-ರಾವಣರ ಯುದ್ಧದಲ್ಲಿ ಕಡೆಯ ಭಾಗ ನಡೆಯುತ್ತಿತ್ತು. ಮಗ ಮೇಘನಾದ ಮತ್ತು ತಮ್ಮ ಕುಂಭಕರ್ಣನನ್ನು ಯುದ್ಧದಲ್ಲಿ ಕಳೆದುಕೊಂಡಿದ್ದ ರಾವಣ ಬಹಳ ಕುಪಿತನಾಗಿದ್ದ. ಯುದ್ಧ ಭೂಮಿಯಲ್ಲಿ ವಿಭೀಷಣನನ್ನು ನೋಡಿದ ಕೂಡಲೇ ಅವನಿಗೆ ತಡೆಯಲಾರದ ಕೋಪ ಬಂದಿತು. ಇವನಿಂದಲೇ ತನ್ನ ಎಲ್ಲ ನಷ್ಟಗಳು ಎಂದು ತನ್ನ ಅತ್ಯಂತ ಶಕ್ತಿಯುತ ಆಯುಧವನ್ನು ವಿಭೀಷಣನ ಕಡೆ ಎಸೆದ. ಅವನನ್ನು ಉಳಿಸುವ ಸಲುವಾಗಿ ಲಕ್ಷ್ಮಣ ಅಡ್ಡ ಬಂದ. ಶಕ್ತಿಯ ಹೊಡೆತಕ್ಕೆ ಮೂರ್ಛೆ ಹೋದ. ವೈದ್ಯ ಸುಷೇಣನನ್ನು ಕರೆದು ತಂದರು. ಅವನು ಅಮೂಲ್ಯ ಮೂಲಿಕೆಗಳನ್ನು ತಕ್ಷಣ ತರಿಸಿ ಅಂದ. ಅವು ಇದ್ದದ್ದು ಹಿಮಾಲಯದಲ್ಲಿ. ಬೆಳಗಾಗುವುದರಲ್ಲಿ ಅವನ್ನು ತಂದು ಕೊಡಬೇಕು. ಯಾರು ಮಾಡಬೇಕು? ಹನುಮ ಆ ಕೆಲಸ ಮಾಡಿದ.

ಇಂದ್ರಜಿತ್ ಎಸೆದ ಶಕ್ತಿಯಿಂದ ಲಕ್ಷ್ಮಣ ಮೂರ್ಛೆ ಹೋದ ಎಂದು ಅನೇಕರು ತಿಳಿದಿರುವುದು ತಪ್ಪು ಕಲ್ಪನೆ. ಶ್ರೀಮದ್ ರಾಮಾಯಣದ ಯುದ್ಧಕಾಂಡದ 101ನೆಯ ಸರ್ಗ ಇದನ್ನು ವಿವರಿಸಿದೆ. ಆಸಕ್ತರು ಇಲ್ಲಿ ಕ್ಲಿಕ್ ಮಾಡಿ ಇಂಗ್ಲಿಷಿನಲ್ಲಿ ಇರುವ ಸಂಬಂಧಿಸಿದ ಬ್ಲಾಗ್ ಪೋಸ್ಟ್ ಓದಬಹುದು. 

ಹನುಮ ಹೀಗೆ ತಂದ ಪರ್ವತದ ಸುತ್ತಳತೆ ಒಂದು ನೂರು ಯೋಜನ! ಅದು ಇದ್ದದ್ದು ಯುದ್ಧಭೂಮಿಯಿಂದ ಒಂದು ಸಾವಿರ ಯೋಜನ ದೂರ! ಅಂತಹ ಪರ್ವತವನ್ನು ಆಕಾಶ ಮಾರ್ಗವಾಗಿ ಹನುಮ ತರುವಾಗ ಹಿಡಿದುಕೊಂಡಿದ್ದದ್ದು ಒಂದೇ ಕೈಯ್ಯಲ್ಲಿ. ಅದಕ್ಕೆ ಎರಡೂ ಕೈಗಳು ಬೇಕಾಗಲಿಲ್ಲ. ಹಿಡಿದದ್ದು ಅಂತಹ ದೊಡ್ಡ ಪರ್ವತ. ಹಾರುತ್ತಿದ್ದುದು ಆಕಾಶ ಮಾರ್ಗದಲ್ಲಿ. ವೇಗವೋ ಕೆಲವೇ ಗಂಟೆಗಳಲ್ಲಿ ಎರಡು ಸಾವಿರ ಯೋಜನ ದೂರ ಕ್ರಮಿಸಿದುದು. ಹೋಗಲು ಒಂದು ಸಾವಿರ ಯೋಜನ. ಹಿಂದಿರುಗಲು ಇನ್ನೊಂದು ಸಾವಿರ ಯೋಜನ. 

ಹೀಗೆ ಪರ್ವತ ಹಿಡಿದು ತಂದ ಹನುಮನಿಗೆ ಸುಸ್ತಾಗಿತ್ತೇ? ಬಂದ ತಕ್ಷಣ ಕುಡಿಯಲು ನೀರು ಕೇಳಿದನೇ? ಯಾರಾದರೂ ಗಾಳಿ ಹಾಕಿದರೇ? (ಅವನೇ ವಾಯುಪುತ್ರ. ಗಾಳಿ ಹಾಕುವವರು ಯಾರು?). ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಂಡನೇ? ಒಂದೂ ಇಲ್ಲ. ಸುಷೇಣನ ಕೆಲಸ ಆಯಿತು. ಈಗ ಬೆಟ್ಟವನ್ನು ಯುದ್ಧ ಭೂಮಿಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಏನು ಮಾಡುವುದು? ಹನುಮನನ್ನು ಇನ್ನೊಂದು ಬಾರಿ ಕಳಿಸಿ ಬೆಟ್ಟ ಅಲ್ಲಿ ಇಟ್ಟು ಬರುವಂತೆ ಹೇಳುವುದೇ?

ಹನುಮ ಮತ್ತೊಮ್ಮೆ ಒಂದು ಕೈಯ್ಯಲ್ಲಿ ಪರ್ವತ ಹಿಡಿದ. ಹಿಡಿದವನು ನಿಂತಲ್ಲಿಂದಲೇ ಅದನ್ನು ಎಸೆದ. ಎಸೆದ ಬೆಟ್ಟ ಒಂದು ಸಾವಿರ ಯೋಜನ ಹೋಗಿ ಮೊದಲಿದ್ದ ಜಾಗದಲ್ಲಿ ಕುಳಿತಿತು. ಹೇಗೆ ಕುಳಿತಿತು? ನಾವು ಯಾವುದಾದರೂ ಪದಾರ್ಥ ಎತ್ತಿಕೊಂಡು ಮತ್ತೆ ಅದು ಇದ್ದಲ್ಲಿ ಇಟ್ಟರೆ ಸ್ಥಳ ಪಲ್ಲಟ ಆಗಿದ್ದು ಕೂಡಲೇ ಗೊತ್ತಾಗುತ್ತದೆ. ಹನುಮ ಎಸೆದ ಪರ್ವತ ಅದನ್ನು ಕಿತ್ತು ಕೊಂಡುಹೋಗಿದ್ದ ಗುರುತೂ ಇಲ್ಲದಂತೆ ಮೊದಲಿನ ಜಾಗದಲ್ಲಿ ಕುಳಿತುಕೊಂಡಿತು. ಆಯಾಸವೇ? ಹಾಗೆಂದರೇನು? ಹನುಮನಿಗೆ ಗೊತ್ತಿಲ್ಲ.

*****

ಎಲ್ಲಾ ಪದಾರ್ಥಗಳಿಗಿಂತ ಹೂವು ಬಹಳ ಸೂಕ್ಷ್ಮ. ಅದೊಂದು ತೂಕವಿಲ್ಲದ ವಸ್ತು. ಕಷ್ಟದ ಕೆಲಸ ಸುಲಭವಾಗಿ ಆದಾಗ "ನಮ್ಮ ಕೆಲಸ ಹೂವು ಎತ್ತಿದಂತೆ ಸುಲಭವಾಗಿ ಆಯಿತು" ಎಂದು ಹೇಳುವುದುಂಟು. ಬೆಳಗಿನ ಪೂಜೆಗೆ ಹೂವು ತಂದಾಗ ಅದೊಂದು ಆಯಾಸದ ಕೆಲಸ ಎಂದು ಯಾರೂ ಹೇಳುವುದಿಲ್ಲ.

ಹನುಮನ "ರಾಮಭಕ್ತಿ" ಮಾತಿನಲ್ಲಿ ಹೇಳುವಂಥದಲ್ಲ. ಅದಕ್ಕೆ ಸಾಟಿಯಾದದ್ದು ಇನ್ನೊಂದಿಲ್ಲ. ದೇವರ ಪೂಜೆಗೆ ಹೂವು ಬೇಕು. ಹೂವನ್ನು ತರಬೇಕು. ಒಮ್ಮೆ ಉಪಯೋಗಿಸಿದ ಹೂವನ್ನು ಮತ್ತೆ ಉಪಯೋಗಿಸುವಂತಿಲ್ಲ. ಆದ್ದರಿಂದ ಹನುಮ ಹೂವು ತರುವಾಗ ಅದರ ಸುವಾಸನೆ ಸೇವಿಸಬಾರದು. (ಈ ರೀತಿ ನೋಡಿದರೆ ನಾವು ಅರ್ಪಿಸುವ ಎಲ್ಲ ಹೂವುಗಳೂ ನಿರ್ಮಾಲ್ಯವೇ!) ಶ್ರೀರಾಮರ ಪೂಜೆಗೆ ಹೂವು ತರುವಾಗ ಹನುಮನಿಗೆ ಎರಡೂ ಕೈ ಸೇರಿಸಿ ಬೊಗಸೆ ಆಗಬೇಕು. ತರುವ ಹೂವು ಬೇರೆ ಕೆಲಸಕ್ಕೆ ಉಪಯೋಗಿಸುವ ಆಲೋಚನೆ ಕೂಡ ಬರಬಾರದು. ವಾಸನೆ ಸ್ವಲ್ಪ ಕೂಡ ಅಘ್ರಾಣಿಸಬಾರದು. ಹಾಗೆ ಜೋಪಾನವಾಗಿ ತರಬೇಕು.

ಈ ಕಾರಣದಿಂದ ಅತಿ ಗಮನವಿಟ್ಟು, ಎರಡೂ ಕೈಗಳಿಂದ ಮಾಡಿದ ಬೊಗಸೆಯಲ್ಲಿ, ನಡು ಬಗ್ಗಿಸಿ, ಬಹಳ ಭಕ್ತಿಯಿಂದ ಹನುಮ ಹೂವುಗಳನ್ನು ತರುತ್ತಾನೆ.

ಬೆಟ್ಟ ಎತ್ತಲು, ಎತ್ತಿಕೊಂಡು ಹಾರಲು, ಹಿಂದಿರುಗಿ ಎಸೆಯಲು ಒಂದೇ ಕೈ ಸಾಕು. ಮೈ ಬಗ್ಗಿಸುವ ಅಗತ್ಯವಿಲ್ಲ. ಆದರೆ ಶ್ರೀರಾಮರ ಪೂಜೆಗೆ ಹೂವು ತರುವಾಗ ಎರಡೂ ಕೈಗಳ ಬೊಗಸೆ ಬೇಕು. ಮೈ ಬಗ್ಗಿಸಬೇಕು. ಹೀಗೆ ಭಯ-ಭಕ್ತಿಯಿಂದ ತರಬೇಕು!

*****  

ಯುದ್ಧಕಾಲದಲ್ಲಿ ಪರ್ವತ ತಂದಿದ್ದು, ಮತ್ತು ಪೂಜಾಕಾಲದಲ್ಲಿ ಹೂವುಗಳನ್ನು ತರುವುದು, ಈ ಎರಡೂ ಕೆಲಸಗಳನ್ನು ಹನುಮ ಮಾಡಿದ ರೀತಿಯನ್ನು ಶ್ರೀ ನಾರಾಯಣ ಪಂಡಿತಾಚಾರ್ಯರು ತಮ್ಮ "ಶ್ರೀಮಧ್ವ ವಿಜಯ" ಕಾವ್ಯದಲ್ಲಿ ("ಸುಮಧ್ವ ವಿಜಯ" ಎಂದು ಹೇಳುವು ಹೆಚ್ಚು ಬಳಕೆ), ಮೊದಲ ಸರ್ಗದ 19ನೆಯ ಶ್ಲೋಕದಲ್ಲಿ, ಹೀಗೆ ವರ್ಣಿಸುತ್ತಾರೆ: 

ರಾಮರ್ಚನೇ ಯೋ ನಯತಃ ಪ್ರಸೂನಂ 
ದ್ವಾಭ್ಯಾ೦ ಕರಾಭ್ಯಾ೦ ಅಭವತ್ ಪ್ರಯತ್ನ: 
ಏಕೇನ ದೋಷ್ಣಾ ನಯತೋ ಗಿರೀ೦ದ್ರಂ 
ಸಂಜೀವನಾದ್ಯಾಶ್ರಯಮಸ್ಯ ನಾಭೂತ್ 

ಶ್ರೀರಾಮರ ಅರ್ಚನೆಗೆ ಹೂವುಗಳನ್ನು ತರುವಾಗ (ಹನುಮನಿಗೆ) ಬೇಕಾದ ಎರಡೂ ಕೈಗಳ ಅವಶ್ಯಕತೆ ಅನೇಕ ಗಿಡ, ಮೂಲಿಕೆ, ಕಲ್ಲು, ಮಣ್ಣು, ಪಶು-ಪಕ್ಷಿ ಮುಂತಾವುದುವುಗಳಿಂದ ತುಂಬಿದ  ಪರ್ವತವನ್ನು ತರುವಾಗ ಬೇಕಾಗಲಿಲ್ಲ.

ಹನುಮನಿಗೆ ಬೇರೆ ಎಲ್ಲಾ ಕೆಲಸಗಳೂ ಹೂವು ಎತ್ತುವುದಕ್ಕಿಂತ ಸುಲಭ. ರಾಮರ ಪೂಜೆಗೆ ಹೂವುಗಳನ್ನು ತರುವುದು ಅವೆಲ್ಲಕ್ಕಿಂತ ಹೆಚ್ಚು ಮುಖ್ಯ. (ಅದರಿಂದ ಪ್ರಯಾಸವೆಂದಲ್ಲ. ಹೆಚ್ಚಿನ ಗಮನ ಮತ್ತು ಭಯ-ಭಕ್ತಿ ಕಾರಣದಿಂದ ಎರಡೂ ಕೈಗಳ ಉಪಯೋಗ ಆಯಿತು ಎಂದು ತಿಳಿಯಬೇಕು). 

*****
 
ಕಾವ್ಯಮೀಮಾಂಸೆಯ ಸಂದರ್ಭದಲ್ಲಿ "ರಸ" ಮತ್ತು "ಧ್ವನಿ" ಎನ್ನುವ ಎರಡು ಪದಗಳಿಗೆ ವಿಶೇಷ ಮಹತ್ವವಿದೆ. ರಸ ಅನ್ನುವುದು ಸಾಮಾನ್ಯವಾಗಿ ತಿಳಿದಿರುವ ವಿಷಯ. ಈ "ಧ್ವನಿ" ಎಂದರೇನು? 

ಮೇಲಿನ ಶ್ಲೋಕದಲ್ಲಿ ಭಕ್ತಿ ಮತ್ತು ಶಕ್ತಿ ಎನ್ನುವ ಪದಗಳ ಬಳಕೆಯೇ ಇಲ್ಲ. ಬೆಟ್ಟ ಒಂದು ಕೈಯಲ್ಲಿ ಮತ್ತು ಹೂವು ಎರಡೂ ಕೈಯ್ಯಲ್ಲಿ ಎಂದು ಮಾತ್ರ ಹೇಳಿದೆ. ಆದರೆ ಬೆಟ್ಟ ತರುವಾಗ ಶಕ್ತಿ ಬೇಕು. ಹೂವು ತರುವಾಗ ಭಕ್ತಿ ಬೇಕು. ಈ ಎರಡು ವಿಷಯಗಳು ಎಲ್ಲರಿಗೂ ಗೊತ್ತು. ಹೇಳದೆ ಇದ್ದರೂ ಶಕ್ತಿಗಿಂತ ಭಕ್ತಿಗೆ ಹನುಮನ ಪ್ರಾಮುಖ್ಯತೆ ಹೆಚ್ಚು ಎನ್ನುವುದು ಓದಿದ ಅಥವಾ ಕೇಳಿದ ತಕ್ಷಣ ಎಲ್ಲರಿಗೂ ಗೊತ್ತಾಗುತ್ತದೆ. ಇಂತಹ ವಿಷಯವನ್ನು ಮನಸ್ಸಿನಲ್ಲಿ ಚಿಂತಿಸುವಾಗಲೇ ಒಂದು ವಿಶಿಷ್ಟ ರೀತಿಯ ಆನಂದದ ಅನುಭವ ಆಗುವುದು. 

ಒಂದು ದೇಹಕ್ಕೆ ಒಳ್ಳೆಯ ವಸ್ತ್ರ ತೊಡಿಸಿ, ಒಡವೆಗಳನ್ನು ಹಾಕಿ, ಅಲಂಕಾರ ಮಾಡಿ, ಕೂಡಿಸಿದರೆ ಚಂದವಾಗಿ ಏನೋ ಕಾಣಬಹುದು. ಆದರೆ ಆ ದೇಹ ಉಸಿರಾಡದೇ ಇದ್ದರೆ ಏನು ಪ್ರಯೋಜನ? ಅದೇ ರೀತಿ, ಕಾವ್ಯದಲ್ಲಿ ಎಲ್ಲಾ ಕಸರತ್ತುಗಳನ್ನೂ ಸೇರಿಸಿ, ಧ್ವನಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಕಾವ್ಯದ ಆತ್ಮವೇ ಧ್ವನಿ ಎನ್ನುವ ವಸ್ತು. ಮಾತಿನಲ್ಲಿ ಹೇಳದಿದ್ದರೂ ಅದರ ಹೂರಣದ ಅರ್ಥ ಓದುಗರಿಗೆ ಅಥವಾ ಕೇಳುಗರಿಗೆ ಆಗಬೇಕು. ಇದೇ ಕಾವ್ಯದಲ್ಲಿ "ಧ್ವನಿ" ಅನ್ನಿಸಿಕೊಳ್ಳುತ್ತದೆ. ಹೀಗೆ ಪದಗಳಲ್ಲಿ ಹೇಳದೆ ಇದ್ದರೂ ಅದರ ಅಂತರಾರ್ಥವನ್ನು ತಿಳಿಯುವಂತೆ ಮಾಡುವುದೇ ಧ್ವನಿಯ ವಿಶೇಷತೆ. 

*****

ಇಂದಿನಿಂದ ಮೂರು ದಿನ ಶ್ರೀ ರಾಘವೇಂದ್ರ ಗುರು ರಾಯರ ಆರಾಧನೆ. ರಾಯರಿಗೆ ಹನುಮನೇ ಆದಿ ಗುರು. ಅವನೇ ಆದರ್ಶ. ಅದಕ್ಕೇ ಮೊದಲು ಹನುಮನನ್ನು ಪ್ರತಿಷ್ಠಾಪಿಸಿ, ಅವನ ಎದುರಿಗೆ ವೃಂದಾವನದಲ್ಲಿ ನೆಲೆಸಿದ್ದಾರೆ. ಮಂತ್ರಾಲಯ ಕ್ಷೇತ್ರಕ್ಕೆ ಹೋದವರು ಶ್ರೀರಾಯರ ಜೊತೆ ಜೊತೆಯಲ್ಲಿ ಹನುಮನನ್ನೂ ನೋಡುತ್ತಾರೆ. 

10 comments:

  1. Very nice. Always pleasure to listen anything concerned with Shree Hanuman

    ReplyDelete
  2. ರಾಘವೇಂದ್ರ ಆರಾಧನೆಯ ಶುಭಾಶಯಗಳು
    ರಾಯರ ಎದುರಿನಲ್ಲಿರುವ ಹನುಮ ಕಣ್ಣ ಮುಂದೆ ಬಂದ 🙏🙏🙏

    ReplyDelete
  3. ಅದ್ಭುತ!!! ನೂರು ಯೋಜನೆ ವಿಸ್ತಾರವಾದ ಮಹಾ ಬೆಟ್ಟವನ್ನು ಒಂದು ಕೈಯಲ್ಲಿ ಸುಲಲಿತವಾಗಿ ಎತ್ತಿದ ಹನುಮನಿಗೆ ಹೂವನ್ನು ತರಲು ಎರಡು ಕೈಗಳು ಬೇಕಾಯಿತು.
    ಶಕ್ತಿ ಮತ್ತು ಭಕ್ತಿ ನಡುವಿನ ಅಂತರ ಇದಕ್ಕಿಂತ ಸೂಗಸಾಗಿ ವರ್ಣಿಸಲು ಸಾಧ್ಯವಿಲ್ಲ.
    ಈ ಅಂಶ ನನಗೆ ತುಂಬ ಹಿಡಿಸಿತು.
    ಅರ್ಥವಾಗುದಕ್ಕೆ ನೀವು ಅತಿ ಉತ್ತಮ ರೀತಿಯಲ್ಲಿ ಉದಾಹರಣೆಗಳನ್ನು ಆರಿಸುತ್ತೀರಿ..
    Thanks for giving us such a wonderful article.
    CR Ramesh babu

    ReplyDelete
  4. Thanks for the nice writing on Hanuman . Great !!

    ReplyDelete
  5. ಹಳೆಯ ನೆನಪುಗಳು ಸುಂದರವಾಗಿರುತ್ತದೆ

    ReplyDelete
  6. I have now understood the meaning of ‘Dhvani’ as related to Kavya. Many times we read the verses in Kavya without actually understanding it completely. Tying this with Hanuman’s devotion in performing his duties is remarkable. 👏👏 UR…

    ReplyDelete
  7. Explained very interestingly about the mighty Hanuman.

    ReplyDelete
  8. ಹನುಮನ ಶಕ್ತಿ ಮತ್ತು ಭಕ್ತಿ ya ಸೊಗಸಾದ ಚಿತ್ರ na
    👏👏👏👏🙏🙏🙏🙏

    ReplyDelete