Friday, May 31, 2024

ಬೇಕಿದ್ದು ಕೇಳಿ; ಬೇಡದ್ದು ಬಿಟ್ಟುಬಿಡಿ


ಅದೊಂದು ಸಣ್ಣ ಊರು. ಸುಮಾರು ಐವತ್ತು ಸಾವಿರದ ಜನಸಂಖ್ಯೆ. ಅಚ್ಯುತ ರಾಯರಿಗೆ ಪರರಿಗೆ ಕೈಲಾದ ಸಹಾಯ ಮಾಡುವ ಹವ್ಯಾಸ. ಅವರ ಶ್ರೀಮತಿ ಅಂಬುಜಮ್ಮನಿಗೆ ಅತಿಥಿ-ಅಭ್ಯಾಗತರಿಗೆ ಊಟ-ಉಪಚಾರಗಳಲ್ಲಿ ಹೆಚ್ಚಿನ ಆಸಕ್ತಿ. ಒಟ್ಟಿನಲ್ಲಿ ಹೇಳಿ ಮಾಡಿಸಿದ ದಾಂಪತ್ಯ. ಪಕ್ಕದ ಹಳ್ಳಿಯಲ್ಲಿ ಸ್ವಲ್ಪ ಹೊಲ-ಗದ್ದೆ-ತೋಟ. ಮನೆಯ ಹಿತ್ತಿಲಿನಲ್ಲಿ ಬೆಳೆಸುವ ಸೊಪ್ಪು-ತರಕಾರಿ. ಮೊದಲಿನಿಂದ ಬಂದ ಪದ್ದತಿಯಂತೆ ಬದಲಾದ ಕಾಲದಲ್ಲೂ ರೈತಾಪಿ ಜನ ದಿನಂಪ್ರತಿ ತಂದುಕೊಡುವ ಹಾಲು-ಮೊಸರು-ತುಪ್ಪ. ಅಚ್ಯುತ ರಾಯರಿಗೆ ಕಚೇರಿಯ ಉದ್ಯೋಗದಿಂದ ಸುಮಾರಾಗಿ ಒಳ್ಳೆಯ ಸಂಬಳವೇ ಉಂಟು. ಗಂಡ ಬೇಕೆನಿಸಿದವರನ್ನು ಮನೆಗೆ ಕರೆಯುವುದರಲ್ಲಿ ಧಾರಾಳಿ. ಹೆಂಡತಿ ನಿಭಾಯಿಸುವುದರಲ್ಲಿ ಚತುರೆ. ಈ ಎಲ್ಲ ಕಾರಣದಿಂದ ಮನೆಯಲ್ಲಿ ಯಾವಾಗಲೂ ನೆಂಟರು-ಇಷ್ಟರು. ಈ ನೆಪಗಳಿಂದ ಪ್ರತಿ ದಿನ ಹಬ್ಬದೂಟವೇ. 

ಆನಂದ ಮೂರ್ತಿ ಹೊಸದಾಗಿ ಅಚ್ಯುತ ರಾಯರ ಕಚೇರಿಗೆ ನೇಮಕವಾದ ಹುಡುಗ. ಇನ್ನೂ ಇಪ್ಪತ್ತಾರು ವಯಸ್ಸು. ನೋಡುವುದಕ್ಕೆ ಕಟ್ಟುಮಸ್ತು ಯುವಕ. ಸ್ಫುರದ್ರೂಪಿ. ರಾಯರ ಮಾತಿನಮೇಲೆ ಒಂದು ಕಡೆ ವಸತಿ ಆಯಿತು. ಸಣ್ಣ ಊರಾದ್ದರಿಂದ ಸರಿಯಾದ ಊಟದ ಹೋಟೆಲುಗಳೂ ಇಲ್ಲ. ಹೊಸದಾಗಿ ಅಡಿಗೆ ಮಾಡುವುದನ್ನು ಕಲಿಯುತ್ತಿದ್ದ.  ಒಂದು ದಿನ ಸಂಜೆ ರಾಯರು ಕಚೇರಿ ಮುಗಿದ ಮೇಲೆ ಆನಂದನನ್ನು ಮನೆಗೆ ಕರೆತಂದರು. ಚಕ್ಕುಲಿ-ಕೋಡುಬಳೆ, ಕಾಫಿಯ ನಂತರ ಅಂಬುಜಮ್ಮ "ನಾಡಿದ್ದು ಯುಗಾದಿ. ನಮ್ಮ ಮನೆಗೆ ಹಬ್ಬದೂಟಕ್ಕೆ ಬರುವುದು ಇದ್ದೇ ಇದೆ. ನಾಳೆ ಮಧ್ಯಾನ್ಹವೂ ಇವರ ಜೊತೆ ನೀವು ಬಂದುಬಿಡಿ. ಇಲ್ಲೇ ಊಟ ಆಗಲಿ. ನಮ್ಮ ಮನೆಯ ಅಡುಗೆ ನಿಮಗೆ ಹಿಡಿಸೀತೋ ಎಂದು ನೋಡೋಣ" ಅಂದರು. ಮಗಳು ಶ್ರೀಮತಿಗೆ ಹುಡುಗ ಸರಿಹೋಗಬಹುದು ಎಂದು ಪರೀಕ್ಷಿಸುವ ಆಸೆ ಸಹ ಆಹ್ವಾನದ ಹಿಂದಿತ್ತು. "ಹೌದು ಆನಂದ ಮೂರ್ತಿ. ಹೇಗಿದ್ದರೂ ನಾನು ದಿನ ಮಧ್ಯಾಹ್ನ ಮನೆಗೇ ಊಟಕ್ಕೆ ಬರುವುದು. ನೀವೂ ಜೊತೆ ಬನ್ನಿ" ಅಂದರು. 

ಮಧ್ಯಾನ್ಹ ಊಟದ ಬಿಡುವಿನಲ್ಲಿ ಇಬ್ಬರೂ ಬಂದರು. ಏನೂ ವಿಶೇಷವಿಲ್ಲದ ದಿನ ಸಾಮಾನ್ಯದ ಅಡಿಗೆ. ಸಣ್ಣಕ್ಕಿ ಅನ್ನ. ಹಿತ್ತಿಲಲ್ಲಿ ಬೆಳೆದ ಸೊಗಸಾದ ಬೆಂಡೆಕಾಯಿ ಹುಳಿ. ಶಾವಿಗೆ ಭಾತ್. ಬೇಲಿಯಲ್ಲಿ ಬಿಟ್ಟ ತೊಂಡೆಕಾಯಿ ಪಲ್ಯ. ಉಪ್ಪಿನಕಾಯಿ. ಜೊತೆಗೆ ಹಪ್ಪಳ ಮತ್ತು ಸಂಡಿಗೆ. ಕೆನೆ ಮೊಸರು. ಇಷ್ಟಿದ್ದೂ ಆನಂದ ಮೂರ್ತಿ ಉಪ್ಪಿನಕಾಯಿಯ ಅನ್ನ ಮತ್ತು ಮೊಸರನ್ನದಲ್ಲೇ ಊಟ ಮುಗಿಸಿದ. ಗಂಡ ಹೆಂಡತಿ ಮುಖ ಮುಖ ನೋಡಿಕೊಂಡರು. ಸಂಕೋಚವಿರಬಹುದು ಅಂದುಕೊಂಡರು. ಸಾಯಂಕಾಲ ಆನಂದ ಮೂರ್ತಿ ಇನ್ನೊಬ್ಬ ಸಹೋದ್ಯೋಗಿಯ ಜೊತೆ ಮಾತಾಡುವಾಗ ಅಚ್ಯುತ ರಾಯರು ಕೇಳಿ ತಿಳಿದದ್ದು ಇಷ್ಟು. "ಬೆಂಡೆಕಾಯಿ ನಾನು ತಿನ್ನುವುದಿಲ್ಲ. ತೊಂಡೆಕಾಯಿ ಒಂದು ತರಕಾರಿಯೇ? ಇನ್ನು ಶಾವಿಗೆ ಭಾತ್.  ಅದನ್ನು ಏಕಾದರೂ ಮಾಡುತ್ತಾರೋ!" 

ಅಚ್ಯುತ ರಾಯರು ಚುರುಕಾದರು. ಅಂಬುಜಮ್ಮನಿಗೆ ಸೂಕ್ಷ್ಮವಾಗಿ ಸೂಚನೆ ಹೋಯಿತು. ಹುಡುಗನ ಇಷ್ಟದ ಪದಾರ್ಥಗಳನ್ನು ತಿಳಿದುಕೊಂಡರು. ಯುಗಾದಿ ಹಬ್ಬದ ಪುಷ್ಕಳ ಭೋಜನ ಆನಂದ ಮೂರ್ತಿಗೆ ತುಂಬು ಆನಂದ ತಂದಿತು. 

ಈಗಿನ ಸಮಾಜದಲ್ಲಿ ಬಹಳ ಬದಲಾವಣೆ ಆಗಿದೆ. ಯಾರನ್ನಾದರೂ ಆಹ್ವಾನಿಸಿದರೆ ಅವರಿಗೆ ಯಾವುದಾದರೂ ಪದಾರ್ಥದ ಅಲರ್ಜಿ ಇದೆಯೇ ಎಂದು ಕೇಳುವ ಪರಿಪಾಠ ಬಂದಿದೆ. ಇಷ್ಟವಿಲ್ಲದ ಪದಾರ್ಥವನ್ನು ಅಲರ್ಜಿಯ ತಲೆಯ ಮೇಲೆ ಹೇರಬಹುದು.

ಅನೇಕರಿಗೆ ಮಾಡಿದ ಪದಾರ್ಥಗಳ ಮೇಲೆಲ್ಲಾ ಹಸಿ ಕೊತ್ತಂಬರಿ ಸೊಪ್ಪು ಉದುರಿಸುವ ದುರಭ್ಯಾಸ. ಕೆಲವರಿಗೆ ಹಸಿ ಕೊತ್ತಂಬರಿ ಸೊಪ್ಪು ಕಂಡರೆ ಆಗದು. ಕೋಸಂಬರಿಯೇನೋ ಬಹಳ ಚೆನ್ನಾಗಿದೆ. ಆದರೆ ಈ ಹಾಳು ಕೊತ್ತಂಬಸಿ ಸೊಪ್ಪಿನಮಯ! ಕೆಲವರಿಗೆ ಈ ಸೂಕ್ಷ್ಮ ಅರ್ಥವಾಗುತ್ತದೆ. ಬಂದವರನ್ನು ಕೇಳಿ ನಂತರ ಆ ಸೊಪ್ಪನ್ನು ಉದುರುಸುವ ಪದ್ಧತಿ ಇಟ್ಟುಕೊಂಡಿದ್ದಾರೆ! 
*****

ಮಹಾಯುದ್ಧ, ರೇಷನ್ ಅಂಗಡಿಯ ಪಡಿತರದ ಕಾಲದಲ್ಲಿ ಬೆಳೆದ ಮಕ್ಕಳಿಗೆ ಅವರ ಅಪ್ಪ-ಅಮ್ಮ ಹೇಳಿಕೊಟ್ಟ ಪಾಠ ಎಲೆಯಲ್ಲಿ ಅಥವಾ ತಟ್ಟೆಯಲ್ಲಿ ಬಡಿಸಿದ ಪದಾರ್ಥ ಚೆಲ್ಲಬಾರದು. ಸೇರದಿದ್ದರೆ ಔಷಧದಂತೆ ನುಂಗಿಬಿಡಬೇಕೇ ಹೊರತು ಬಿಸಾಡಬಾರದು. ಅದೂ, ನೆಂಟರಿಷ್ಟರ ಮನೆಗೆ ಹೋದಾಗಲಂತೂ ಈ ನಿಯಮ ತಪ್ಪದೆ ಪಾಲಿಸಬೇಕು. ಪದಾರ್ಥಗಳನ್ನು ಹೊಂದಿಸಿ ಮಾಡಿ ಬಡಿಸುವುದೇ ಕಷ್ಟ. ಅಂತಹದರಲ್ಲಿ ಚೆಲ್ಲುವುದು ಅಂದರೇನು? ಅದೊಂದು ಅಕ್ಷಮ್ಯ ಅಪರಾಧ!

ಸೋಮಶೇಖರ ಈ ರೀತಿ ವಾತಾವರಣದಲ್ಲಿ ಬೆಳೆದವನು. ಒಮ್ಮೆ ದೂರದ ನೆಂಟರ ಮನೆಗೆ ಹೋಗಬೇಕಾಯಿತು. ಊಟದಲ್ಲಿ ಪಡವಲಕಾಯಿ ಪಲ್ಯ. ಇವನಿಗೆ ಅದು ಸೇರದು. ಅದು ಎಲೆಯ ಮೇಲೆ ಇದ್ದರೆ ಒಂದು ರೀತಿಯ ಮುಜುಗರ. ಹಾಕಿದ ತಕ್ಷಣ ಕಹಿ ಔಷಧದಂತೆ ನುಂಗಿಬಿಟ್ಟ. ಬಡಿಸುವಾಕೆಗೆ ಇವನಿಗೆ ಅದು ತುಂಬಾ ಇಷ್ಟ ಅನ್ನಿಸಿತು. ಇನ್ನಷ್ಟು ಹಾಕಿದಳು. ಮತ್ತೆ ತಕ್ಷಣ ನುಂಗಿದ. ಮತ್ತಷ್ಟು ಹಾಕಿದಳು. ಇವನಿಗೆ ಈಗ ಅರ್ಥವಾಯಿತು. ಅದನ್ನು ಕೊನೆಯವರೆಗೆ ಹಾಗೆಯೇ ಬಿಟ್ಟ. ಕಟ್ಟ ಕಡೆಯಲ್ಲಿ ನುಂಗಿ ತಕ್ಷಣ ಮೇಲೆದ್ದ!

ಮಹಾದೇವ ಬಹಳ ಹಾಸ್ಯ ಸ್ವಭಾವದವನು. ಸ್ನೇಹಿತನ ಮದುವೆಯಾಗಿ ಅವನು ಹೊಸ ಸಂಸಾರ ಹೂಡಿದ. ಒಂದು ದಿನ ಮಹಾದೇವನನ್ನು ಮನೆಗೆ ಊಟಕ್ಕೆ ಕರೆದುಕೊಂಡು ಹೋದ. ಸ್ನೇಹಿತನ ಹೆಂಡತಿ ಐದಾರು ಪದಾರ್ಥ ಮಾಡಿ ಚೆನ್ನಾಗಿ ಬಡಿಸಿದಳು. ಉಪಚಾರಕ್ಕಾಗಿ "ಸಂಕೋಚ ಪಡಬೇಡಿ. ಏನು ಬೇಕೋ ಕೇಳಿ. ಬಡಿಸುತ್ತೇನೆ" ಎಂದಳು. "ಎಲ್ಲ ಸಾಕು. ಎರಡು ಆಂಬೊಡೆ ಹಾಕಿದರೆ ಊಟ ಮುಗಿದಂತೆ" ಅಂದ ಮಹಾದೇವ. ಅಂದು ಆಂಬೊಡೆ ಮಾಡಿಲ್ಲ. ಸ್ನೇಹಿತನ ಹೆಂಡತಿಗೆ ಕಸಿವಿಸಿ ಆಯಿತು. ಮಹಾದೇವನ ಹಾಸ್ಯ ಸ್ವಭಾವ ಅವಳಿಗೇನು ಗೊತ್ತು? ಗೊತ್ತಿದ್ದರೆ "ಹಾಗೆಯೇ ಕೂತಿರಿ. ಸಂಜೆ ಹೊತ್ತಿಗೆ ಮಾಡಿ ಬಡಿಸುತ್ತೇನೆ" ಎನ್ನಬಹುದಿತ್ತು!

ಈಗ ಕಾಲ ಬದಲಾಯಿಸಿದೆ. ಬಡಿಸಿದ ಸ್ವಲ್ಪ ಪದಾರ್ಥ ಬಿಟ್ಟುಬಿಟ್ಟರೆ ಯಾರೂ ಬೇಜಾರು ಮಾಡಿಕೊಳ್ಳುವುದಿಲ್ಲ. ಮಹಾದೇವನಂತೆ ಹೇಳುವುದನ್ನು ತಪ್ಪಿಸಲಿಕ್ಕಾಗಿಯೇ ಊಟದ ಮೊದಲು ಮಾಡಿರುವ ಎಲ್ಲ ಪದಾರ್ಥದ ಸ್ವಲ್ಪ ಸ್ವಲ್ಪ ಎಲೆಯ ಅಥವಾ ತಟ್ಟೆಯ ಸುತ್ತ ಬಡಿಸುವುದು. ಏನು ಬೇಕೋ ಕೇಳಿ ಎಂದಾಗ ಅದರ ಅರ್ಥ ಇಲ್ಲಿ ಬಡಿಸಿರುವ ಪದಾರ್ಥಗಳಲ್ಲಿ ಏನು ಬೇಕೋ ಅದನ್ನು ಕೇಳಿ ಎಂದೇ. ಅಲ್ಲಿ ಕಾಣಿಸದ ಯಾವ ಪದಾರ್ಥವನ್ನೂ ಕೇಳಬಾರದು. ಅದು ಶಿಷ್ಟಾಚಾರ. ಮೊಸರನ್ನವನ್ನು ಮೊದಲಿಗೆ ಬಡಿಸುವ ರೀತಿ ಇಲ್ಲ. ಅದಕ್ಕಾಗಿಯೇ ಎರಡನೆಯ ಸಾರಿ ಅನ್ನ ಬಡಿಸುವಾಗ "ಮೊಸರನ್ನ ಬೇರೆ ಇದೆ" ಎಂದು ಹೇಳುವ ಸಂಪ್ರದಾಯ. (ಈಗಲೂ ಬೆಂಗಳೂರಿನ ಎಂ.ಟಿ.ಆರ್ ಅಥವಾ ಉಡುಪಿ ಕೃಷ್ಣ ಭವನದಲ್ಲಿ ಈ ಸೂಚನೆಯನ್ನು ಕಾಣಬಹುದು)

*****

ಕುಮಾರಸ್ವಾಮಿ ಮತ್ತು ಕೃಷ್ಣಮೂರ್ತಿ ಬಹಳ ವರ್ಷಗಳ ಸ್ನೇಹಿತರು. ಇಬ್ಬರ ಮನೆಗಳ ರೀತಿ-ನೀತಿಗಳೂ ಒಂದೇ ತರಹ. ಕುಮಾರಸ್ವಾಮಿ ಕಾರಣಾಂತರಗಳಿಂದ ತಿಂಗಳು ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು. ಗುಣಹೊಂದಿ ಮನಗೆ ಬಂದ ನಂತರ ಒಂದು ದಿನ ಕೃಷ್ಣಮೂರ್ತಿ ಅವನನ್ನು ತನ್ನ ಮನೆಗೆ ಕರೆದ. ಮಧ್ಯಾಹ್ನ ಊಟದ ವೇಳೆಗೆ ಬಾ ಎಂದ. ಕುಮಾರಸ್ವಾಮಿ ತಪ್ಪಿಸಲು ಯತ್ನಿಸಿದ. ಈಗ ಅವನಿಗೆ ಮೊದಲಿನಂತೆ ನೆಲದ ಮೇಲೆ ಕುಳಿತು ಊಟ ಮಾಡಲಾಗುವುದಿಲ್ಲ. ಕೃಷ್ಣಮೂರ್ತಿಯ ಮನೆಯಲ್ಲಿ ಹಾಗೆ ಮಾಡುವ ಅಭ್ಯಾಸ. ಕಡೆಗೆ ಕುಮಾರಸ್ವಾಮಿ ಒಪ್ಪಿಕೊಳ್ಳಲೇಬೇಕಾಯಿತು. ಗೊತ್ತಾದ ದಿನ ಕೃಷ್ಣಮೂರ್ತಿಯ ಮನೆಗೆ ಹೋದ. 

ಊಟ ಬಡಿಸುವ ಸಮಯದಲ್ಲಿ ಕೃಷ್ಣಮೂರ್ತಿ "ನಿನಗೆ ಹೇಗೆ ಬೇಕೋ ಹಾಗೆ. ಮೊದಲಿನಂತೆ ಕೆಳಗೆ ಕೂಡುವುದಾದರೆ ನನ್ನ ಜೊತೆ ಕೂಡು. ನಮ್ಮ ಮನೆಯಲ್ಲಿ ಡೈನಿಂಗ್ ಟೇಬಲ್ ಇಲ್ಲ. ಬೇಕಿದ್ದರೆ ಕುರ್ಚಿಯ ಮುಂದೆ ಮರದ ಪೀಠವನ್ನಿಟ್ಟು ಬಡಿಸುತ್ತಾರೆ. ಸಂಕೋಚ ಬೇಡ. ಅನುಕೂಲವಾಗಿ ಕುಳಿತು ಊಟ ಮಾಡುವುದು ಮುಖ್ಯ" ಎಂದ. ಕುಮಾರಸ್ವಾಮಿಯ ಸಂದೇಹ ನಿವಾರಣೆ ಆಯಿತು. ಸುಖವಾಗಿ ಊಟವಾಯಿತು. 

ಊಟದ ಸಮಯದಲ್ಲಿ ಮಾಡಿರುವ ಪದಾರ್ಥಗಳು ಮುಖ್ಯವೇ. ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಸುತ್ತಲಿನ ವಾತಾವರಣ. ಸೊಗಸಾದ ಪದಾರ್ಥ ಮಾಡಿ ಸಿಡಿಸಿಡಿಗುಟ್ಟುತ್ತಾ ಬಡಿಸಿದರೆ ಉಣ್ಣುವವನ ಗಂಟಲಿನಲ್ಲಿ ಪದಾರ್ಥ ಇಳಿಯುವುದಿಲ್ಲ.  ಮನೆಗಳಲ್ಲಿಯೂ ಆಹಾರ ಸೇವನೆಯ ಸಮಯದಲ್ಲಿ ಯಾವುದೇ ಉದ್ವೇಗ ಉಂಟುಮಾಡುವ ಅಥವಾ ಜಗಳಕ್ಕೆ ದಾರಿ ಮಾಡುವ ಸಂಗತಿಗಳನ್ನು ತೆಗೆಯಬಾರದು. 

*****

ಶ್ರದ್ದೆಯಿಂದ ಮಾಡುವುದೇ ಶ್ರಾದ್ಧ. ಶ್ರಾದ್ಧಕಾಲದಲ್ಲಿ ಅತಿಥಿಗಳನ್ನು ಊಟಕ್ಕೆ ಕೂಡಿಸಿ ಅವರು ಊಟ ಮಾಡುತ್ತಿರುವಾಗ, ಅವರ ಊಟ ಕೊನೆಯ ಹಂತ ತಲುಪಿದಾಗ, ಪಿಂಡಗಳನ್ನು ಕಟ್ಟಿ ಪಿಂಡಪ್ರದಾನ ಮಾಡುವುದು ಪದ್ಧತಿ. ಅಥಿತಿಗಳು ಊಟ ಪ್ರಾರಂಭಿಸಿದ ನಂತರ ಪುರೋಹಿತರು ಒಂದು ಸುಂದರ ಸ್ಲೋಕ ಹೇಳುತ್ತಾರೆ. ಅದು ಹೀಗಿದೆ:

ಅಪೇಕ್ಷಿತಂ ಯಾಚಿತವ್ಯಮ್  ತ್ಯಾಜ್ಯoಚೈವ ಅನಪೇಕ್ಷಿತಮ್ |
ಉಪವಿಶ್ಯ ಸುಖೇನೈವ ಭೋಕ್ತವ್ಯಮ್ ಸ್ವಸ್ಥ ಮಾನಸೈಹಿ ।।

ಇದನ್ನೇ ಕನ್ನಡದಲ್ಲಿ ಹೇಳಿದರೆ:

ಬೇಕಿದ್ದು ಕೇಳಿ; ಬೇಡದ್ದು ಬಿಟ್ಟುಬಿಡಿ. 
ಸುಖವಾಗಿ ಕುಳಿತು ಸ್ವಸ್ಥ ಮನಸ್ಸಿನಿಂದ ಭೋಜನ ಮಾಡಿ

ವಾಸ್ತವವಾಗಿ ಇದು ಮಂತ್ರವಲ್ಲ; ಊಟಕ್ಕೆ ಕುಳಿತವರಿಗೆ ಹೇಳುವ ಉಪಚಾರದ ಮಾತು. ಇದು ಪುರೋಹಿತರು ಹೇಳುವ ಮಾತಲ್ಲ. ಶ್ರಾದ್ಧ ಮಾಡುವ ಕರ್ತೃವೇ ಅಥಿತಿಗಳಿಗೆ ಹೇಳಬೇಕು. ಯಾಂತ್ರಿಕವಾಗಿ ಪುರೋಹಿತರು ಹೇಳುತ್ತಾರೆ. ಅದರ ಅರ್ಥ ಮತ್ತು ಔಚಿತ್ಯ ಗೊತ್ತಿಲ್ಲದ ಇತರರು ಅದೂ ಒಂದು ಮಂತ್ರ ಎಂದು ಸುಮ್ಮನಿರುತ್ತಾರೆ. ಈಚಿನ ಕಾಲದಲ್ಲಿ ಎಲ್ಲವೂ ಬೇಗ ಬೇಗ ಆಗಬೇಕು. ಪುರೋಹಿತರೂ ಇದನ್ನು ಹೇಳುವುದನ್ನೇ ಬಿಟ್ಟು ಬಿಡುತ್ತಿದ್ದಾರೆ. 

*****

ಮೇಲೆ ಹೇಳಿದ ಎಲ್ಲ ಸಂದರ್ಭಗಳೂ, ಅವುಗಳ ವಿವೇಚನೆಯೂ, ಅವುಗಳಿಂದ ಆಗುವ ಪೀಕಲಾಟವನ್ನು ತಪ್ಪಿಸುವುದೂ ಮತ್ತು ಎಲ್ಲರ ಹಿತವನ್ನು ಸಾಧಿಸುವ ತಾತ್ಪರ್ಯ ಕೇವಲ ಎರಡು ಸಾಲಿನ ಶ್ಲೋಕದಲ್ಲಿದೆ ಅದರ ಅರ್ಥ ತಿಳಿದರೆ "ಎಷ್ಟು ಸುಂದರ!" ಅನಿಸುವುದಿಲ್ಲವೇ?