Monday, February 9, 2026

ಅವರೇ ಆಗಬೇಕೆಂದಿಲ್ಲ!


ಎರಡು ತಿಂಗಳ ಹಿಂದೆ (ಡಿಸೆಂಬರ್ 2025) "ಅಂಥ ಇಂಥವರಲ್ಲ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಅನಂತಾದ್ರೀಶ ಅಂಕಿತದ ಗೋಕಾವಿ ಅನಂತಾದ್ರೀಶ ದಾಸರ (ಗೋಕಾಕ್  ಅನಂತಾಚಾರ್ಯರು) ಕೃತಿಯೊಂದರಲ್ಲಿ ವಿವರಿಸಿರುವ ಶ್ರೀ ರಾಘವೇಂದ್ರ ರಾಯರ ಗ್ರಂಥಗಳ ಮತ್ತು ಅವರ ವ್ಯಕ್ತಿತ್ವದ ಒಂದು ಸಣ್ಣ ನೋಟ ಕಾಣುವ ಪ್ರಯತ್ನ ಮಾಡಿದ್ದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು).

ಒಬ್ಬರ ಗುಣ ವಿಶೇಷಗಳನ್ನು ತಿಳಿದು ಅವುಗಳನ್ನು ಹೇಳುವುದು ಸ್ತೋತ್ರ ಎನಿಸಿಕೊಳ್ಳುತ್ತದೆ. ನಾವು ಅನೇಕರು ಪ್ರತಿದಿನ ನಮಗೆ ಅನುಕೂಲವಿರುವ ಸಮಯಗಳಲ್ಲಿ ನಮ್ಮ ನಮ್ಮ ಪದ್ದತಿಗಳಂತೆ ಸ್ತೋತ್ರಗಳನ್ನು ಹೇಳಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದೇವೆ. ಈ ರೀತಿಯ ಅನೇಕ ಸ್ತೋತ್ರಗಳು ಒಳ್ಳೆಯ ಕಾವ್ಯಗುಣಗಳನ್ನು ಹೊಂದಿವೆ. ಈ ಬಗೆಯ ಸ್ತೋತ್ರಗಳನ್ನು ಹೇಳಿಕೊಳ್ಳುವುದರಿಂದ ಪದಗಳ ಉಚ್ಚಾರಣೆ ಚೆನ್ನಾಗಿ ಆಗಿ ವಾಕ್ಶುದ್ಧಿಯೂ ಆಗುವುದು. ಸಾಮಾನ್ಯವಾಗಿ ಇಂತಹ ಸ್ತೋತ್ರಗಳು ಕಿವಿಗಳಿಗೆ ಇಂಪಾಗಿ, ಮನಸ್ಸಿಗೂ ಹಿತವಾಗಿ ಇರುತ್ತವೆ. ನೆನಪಿನ ಶಕ್ತಿ ವೃದ್ಧಿಯೂ ಆಗುವುದುಂಟು. ಒಟ್ಟಾರೆ ದಿನಚರಿ ಮತ್ತು ನಡವಳಿಕೆಯಲ್ಲಿ ಒಂದು ರೀತಿಯ ಶಿಸ್ತು ಸಹ ಬರುತ್ತದೆ.  

ಅನೇಕ ವೇಳೆ ಈ ಸ್ತೋತ್ರಗಳಲ್ಲಿ ಹೇಳಿರುವ ವಿಷಯಗಳು ನಮಗೆ ತಿಳಿದಿರುವುದಿಲ್ಲ. ಮನೆಯಲ್ಲಿ ಹಿರಿಯರು ಹೇಳಿಕೊಳ್ಳುತ್ತಿದ್ದಂತೆ, ಅಥವಾ ನಮ್ಮ ನಮ್ಮ ಗುರುಗಳು ಹೇಳಿಕೊಟ್ಟಿದ್ದಂತೆ ಈ ಸ್ತೋತ್ರಗಳನ್ನು ಹೇಳಿಕೊಳ್ಳುತ್ತೇವೆ. ಅಂದಿನ ಸಂದರ್ಭಗಳಿಂದಲೋ, ಅಥವಾ ಸಮಯದ ಅಭಾವದಿಂದಲೋ, ಅವುಗಳ ಪೂರ್ತಿ ಅರ್ಥ ವಿಶೇಷಗಳನ್ನು ಅವರು ಹೇಳಿರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಅದನ್ನು ಕೇಳಬೇಕೆಂದು ನಮಗೂ ತೋಚಿರುವುದಿಲ್ಲ. ಮುಂದೆಯೂ ನಾವು ತಿಳಿಯುವ ಪ್ರಯತ್ನ ಮಾಡಿರುವುದಿಲ್ಲ. ಕಾಲಕ್ರಮದಲ್ಲಿ ಅವುಗಳ ಅರ್ಥ ಹೇಗೋ ತಿಳಿದುಬಂದಾಗ "ಒಹೋ, ಇದರ ಅರ್ಥ ಹೀಗಿದೆಯೇ?" ಎಂದು ನಾವು ಆಶ್ಚರ್ಯಪಡುವಂತೆ ಆಗುತ್ತದೆ. 

*****

ನಮಗೆ ಯಾವುದೋ ಒಂದು ಸಂಸ್ಥೆಯಲ್ಲಿ ಒಂದು ಕೆಲಸ ಆಗಬೇಕು. ಅದನ್ನು ಮಾಡಿಸಿಕೊಳ್ಳುವುದಕ್ಕೆ ನಮಗೆ ಶಕ್ತಿಯಿಲ್ಲ. ಅಲ್ಲಿ ಯಾರನ್ನು ಕಾಣಬೇಕು ಎಂದು ತಿಳಿದಿಲ್ಲ. ಹೇಗೆ ಕೇಳಬೇಕು ಎಂದು ಗೊತ್ತಿಲ್ಲ. ಏನೇನು ದಸ್ತಾವೇಜು (ಡಾಕ್ಯುಮೆಂಟ್) ತೆಗೆದುಕೊಂಡು ಹೋಗಬೇಕು ಎಂದು ಅರಿವಿಲ್ಲ. ಆದರೂ ಆ ಕೆಲಸವಂತೂ ಆಗಬೇಕು. ಏನು ಮಾಡುವುದು? ಲೋಕಾರೂಢಿಯಲ್ಲಿ ಇಂತಹ ವಿಷಯ ತಿಳಿದ, ನಮಗೆ ಗೊತ್ತಿರುವ ಯಾರೋ ಒಬ್ಬರನ್ನು ಕೇಳುತ್ತೇವೆ. ಅವರು ಕೆಲವು ಸೂಚನೆಗಳನ್ನು ಕೊಡುತ್ತಾರೆ. ಅದರ ಪ್ರಕಾರ ದಸ್ತಾವೇಜು ಹೊಂದಿಸಿಕೊಳ್ಳುತ್ತೇವೆ. ಸಂಸ್ಥೆಯಲ್ಲಿ ಯಾರನ್ನು, ಯಾವಾಗ, ಹೇಗೆ ಕಾಣಬೇಕು ಎಂದು ಅವರು ಹೇಳಿಕೊಟ್ಟಂತೆ ಮಾಡುತ್ತೇವೆ. ಯಾವ ರೀತಿ ಕೇಳಬೇಕು ಎಂದು ಅವರು ಮಾರ್ಗದರ್ಶನ ಕೊಟ್ಟಂತೆ ನಡೆದುಕೊಳ್ಳುತ್ತೇವೆ. ಅನೇಕವೇಳೆ ಹೀಗೆ ಮಾಡುವುದರಿಂದ ನಮ್ಮ ಕೆಲಸ ಆಗುತ್ತದೆ. ಹೀಗಿದ್ದೂ, ಕೆಲವೊಮ್ಮೆ ಕೆಲಸ ಆಗದಿರುವುದೂ ಉಂಟು.  

ಕೆಲವು ಕೆಲಸಗಳು ಅವುಗಳ ಸೂಕ್ಷ್ಮತೆ ಗೊತ್ತಿರುವ ದೊಡ್ಡವರೊಬ್ಬರು ನಮ್ಮ ಜೊತೆ ಬಂದಾಗ ಬಹಳ ಸುಲಭವಾಗಿ ಆಗುತ್ತವೆ. ತುಂಬಾ ದೊಡ್ಡವರ ಬಳಿ ಹೀಗೆ ಸಹಾಯ ಕೇಳಿಕೊಂಡು ಹೋಗುವ ಜನರ ಸಂಖ್ಯೆಯೂ ದೊಡ್ಡದು. ಅವರು ಎಲ್ಲರ ಜೊತೆ ಹೋಗಿ ಕೆಲಸ ಮಾಡಿಸಿಕೊಡಲು ಆಗುವುದಿಲ್ಲ. ಆಗ ಅವರು ಒಂದು ಪತ್ರ (ಲೆಟರ್) ಬರೆದುಕೊಡುತ್ತಾರೆ. ಸಂಸ್ಥೆಯಲ್ಲಿ ಸರಿಯಾದವರ ಬಳಿ ಆ ಪತ್ರ ಕೊಟ್ಟರೆ ನಮ್ಮ ಕೆಲಸ ಸುಲಭವಾಗಿ ಆಗುತ್ತದೆ. ಆ ದೊಡ್ಡವರು ಕೊಟ್ಟ ಕಾಗದಕ್ಕೇ ಅಷ್ಟು ಶಕ್ತಿ ಉಂಟು! ಕೆಲವು ಕೆಲಸಗಳು ನಮಗೆ ಬಹಳ ಮುಖ್ಯ. ದೊಡ್ಡವರ ಬಳಿ ಹೋದಾಗ ಅವರು ನಮ್ಮ ಜೊತೆ ಬರುವುದಿಲ್ಲ. ಪತ್ರವನ್ನೂ ಕೊಡುವುದಿಲ್ಲ. ಯಾರೋ ಒಬ್ಬರ ಹೆಸರನ್ನು ಹೇಳಿ "ಅವರ ಬಳಿ ನಾನು ಕಳುಹಿಸಿದೆ ಎಂದು ಹೇಳು" ಅನ್ನುತ್ತಾರೆ. ಅಷ್ಟು ಮಾಡಿದರೆ ನಮ್ಮ ಕೆಲಸ ಆಗುತ್ತದೆ! 

ದೊಡ್ಡವರ ಶಕ್ತಿ ಅಂತಹುದು. ಕೆಲವೊಮ್ಮೆ, ಬಹಳ ಗಹನವಾದ ಕೆಲಸವಾದರೆ, ಅವರೇ ಬರಬೇಕಾಗುತ್ತದೆ. ಮತ್ತೆ ಕೆಲವು ಸಂದರ್ಭದಲ್ಲಿ ಅವರು ಕೊಟ್ಟ ಕಾಗದವೇ ಸಾಕಾಗುತ್ತದೆ. ಇನ್ನೂ ಅನೇಕ ಸಲ ಅವರ ಹೆಸರಿನಿಂದಲೇ ನಮ್ಮ ಕೆಲಸಗಳು ಸುಸೂತ್ರವಾಗಿ ಆಗುವುದುಂಟು. "ಇವರು ಅವರ ಕಡೆಯವರಂತೆ. ಮಾಡಿ ಕೊಟ್ಟುಬಿಡು" ಎಂದು ಮೇಲಧಿಕಾರಿಗಳು ಕೈಕೆಳಗಿನವರಿಗೆ ಹೇಳುತ್ತಾರೆ. ಒಟ್ಟಿನಲ್ಲಿ ನಮ್ಮ ಗುರಿ ಸಾಧಿಸಿತು. ನಮಗೆ ಬೇಕಾದುದು ಆಯಿತು. ನಮಗೆ ಅದು ಮುಖ್ಯ. 
*****

ಮಂತ್ರಾಲಯ ಪ್ರಭುಗಳ ವಿಷಯದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ? "ಕರೆದಲ್ಲಿ ಬರುವ ರಾಯರು" ಎಂದೇ ಅವರಿಗೆ ವಿಶೇಷಣ. ದೊಡ್ಡವರ ಬಳಿ ನಾವು ಹೋಗುವುದು ಲೋಕಾರೂಢಿ. ಇವರು ಅತ್ಯಂತ ಕರುಣಾಶಾಲಿಗಳು. ಅದಕ್ಕೇ ಅವರಿಗೆ "ನಮೋ ಅತ್ಯಂತ ದಯಾಳವೇ" ಅನ್ನುವುದು. ಅವರು ಬರೀ ದಯಾಳುಗಳಲ್ಲ. ಅವರು ಅತಿ ದಯಾಳುಗಳೂ ಅಲ್ಲ. ಅವರು ಅತ್ಯಂತ ದಯಾಳುಗಳು! ಅವರಿಗಿಂತ ದಯಾಳುಗಳಾಗಿರುವವರು ಕಾಣಸಿಗರು! ಅವರೇ ನಮ್ಮ ಬಳಿ ಬರುತ್ತಾರೆ. ಸರಿಯಾಗಿ ಕರೆಯಬೇಕು. ಅಷ್ಟೇ. 

ಶ್ರೀ ರಾಘವೇಂದ್ರ ಸ್ತೋತ್ರದಲ್ಲಿ ಒಂದು ಶ್ಲೋಕ ಹೀಗಿದೆ:

ಯತ್ಪಾದ ಕಂಜ ರಜಸಾ ಪರಿಭೂಷಿತಾಂಗಾ 
ಯತ್ಪಾದಪದ್ಮ ಮಧುಪಾಯಿತ ಮಾನಸಾ ಯೇ
ಯತ್ಪಾದಪದ್ಮ ಪರಿಕೀರ್ತನ ಜೀರ್ಣವಾಚ:
ತದ್ದರ್ಶನಮ್ ದುರಿತಕಾನನ ದಾವಭೂತಮ್  

ಏನಿದರ ವಿಶೇಷ?  

ರಾಯರೇ ಬರಬೇಕೆಂದಿಲ್ಲ. ಅವರೇ ಆಗಬೇಕೆಂದಿಲ್ಲ. ಅವರನ್ನು ನೋಡಿ ಬಂದವರು (ಅವರ ಪಾದಧೂಳಿ ಸೋಕಿರುವವರು), ಅವರ ಸ್ತೋತ್ರಾದಿಗಳನ್ನು, ಗುಣಗಳನ್ನು, ಮಹಿಮೆಗಳನ್ನು  ಮನಸ್ಸಿನಲ್ಲಿ ನೆನೆಯುತ್ತಿರುವವರು, ಅವರ ಮಹಿಮೆ ಹೊಗಳುತ್ತಾ ಇರುವವರು (ಜೀರ್ಣವಾಚ: ಅಂದರೆ ಸ್ತೋತ್ರಾದಿಗಳನ್ನು ಹೇಳಿ ಹೇಳಿ, ಸುಸ್ತಾ,ಗಿ ಮಾತನಾಡಲು ಶಕ್ತಿ ಇಲ್ಲದವರು ಎಂದು),  ಇಂತಹವರನ್ನು ನೋಡಿದರೂ ಸಾಕು. ದಟ್ಟವಾದ ಕಾಡಿನಂತೆ ಬೆಳೆದು ನಿಂತಿರುವ ನಮ್ಮ ಪಾಪ ರಾಶಿಗಳು ಬೆಂಕಿಯಿಂದ ಸುಟ್ಟು ಬೂದಿ ಆಗುವಂತೆ ನಾಶವಾಗುತ್ತವೆ ಎಂದು ಇದರ ಭಾವ. 

ತಿರುಪತಿಗೆ ಹೋಗಿ ತಿಮ್ಮಪ್ಪನನ್ನು ನೋಡಿಬಂದವರನ್ನು ಕಂಡರೆ ನಮಗೂ ಸ್ವಲ್ಪ ಪುಣ್ಯ ಬರುತ್ತದೆ ಎಂದು ಹೇಳುವುದು ಇದೇ ಭಾವದಲ್ಲಿ. ಇತರೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿ ಬಂದವರ ಬಗ್ಗೆಯೂ ಹೀಗೆ ಹೇಳುವುದು ಉಂಟು.

*****

ಈ ಶ್ಲೋಕದ ಹಿಂದಿನ ಶ್ಲೋಕದಲ್ಲಿ "ಮಹಾ ವಂಧ್ಯಾ ಸುಪುತ್ರಪ್ರದಃ" ಎಂದು ಒಂದುಂಟು. ಏನಿದರ ಅರ್ಥ? ಕೆಲವು ಸ್ತ್ರೀಯರಿಗೆ ಸಂತಾನವಾಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ವೈದ್ಯಕೀಯ ವಿಜ್ಞಾನ ಕಾರಣಗಳನ್ನು ಹೇಳುತ್ತದೆ. ಕೆಲವರ ತಡೆಗಳನ್ನು ನಿವಾರಿಸಿದರೆ ಸಂತಾನ ಆಗುತ್ತದೆ. ಕೆಲವು ರೀತಿಯ ಕಾರಣಗಳಿಗೆ ನಿವಾರಣೆಯೇ ಇಲ್ಲ. "ವಂಧ್ಯಾ" ಅಂದರೆ ನಿವಾರಿಸಬಹುದಾದ ತೊಂದರೆ ಇರುವವರು. "ಮಹಾವಂಧ್ಯಾ" ಅಂದರೆ ನಿವಾರಿಸಲಾಗದ, ಶಾಶ್ವತ ತಡೆ ಇರುವವರು. 

ರಾಯರ ಮೊರೆ ಹೋದ ಇಂತಹವರಿಗೆ ಮಕ್ಕಳಾಗಿರುವುದು ಉಂಟು. ವೈದ್ಯರು ಸಾಧ್ಯವೇ ಇಲ್ಲ ಎಂದು ಹೇಳಿದ ಸಂದರ್ಭಗಳಲ್ಲೂ ಸಂತಾನ ಆಗಿರುವುದು ಉಂಟು. "ಮಹಾವಂಧ್ಯಾ ಸುಪುತ್ರಪ್ರದಃ". ಏನೋ ಒಂದು ಮಗು ಆಯಿತು ಎಂದಲ್ಲ. ಒಳ್ಳೆಯ, ಯೋಗ್ಯ ಮಗು. ಅನೇಕ ತಡೆಗಳೇ ಇಲ್ಲದ ಸ್ತ್ರೀಯರಿಗೂ ಒಳ್ಳೆಯ ಸಂತಾನ ಆಗುವುದಿಲ್ಲ. ಅಂತಹದರಲ್ಲಿ ರಾಯರ ಮೊರೆ ಹೋದ ನಿವಾರಿಸಲಾಗದ ತಡೆ ಇರುವವರಿಗೂ ಒಳ್ಳೆಯ ಸಂತಾನ ಆಗುತ್ತದೆ ಎಂದು ಇದರ ಅರ್ಥ. 

*****

ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ಅನೇಕರ ನಂಬಿಕೆ. ನಾವು ಕಾಶಿಗೆ ಹೋದೆವು. ಎಲ್ಲರೂ ಗಂಗಾಸ್ನಾನ ಮಾಡುತ್ತಿದ್ದಾರೆ. ಆದ್ದರಿಂದ ನಾವೂ ಮಾಡಿದೆವು. ಇದು ಒಂದು ಪಕ್ಷ. 

ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ನಾವು ನಂಬಿದ್ದೇವೆ. ಗಂಗೆಯ ಬಗ್ಗೆ ನಮಗೆ ಜ್ಞಾನ, ಗೌರವ ಇದೆ. ಗಂಗಾಸ್ನಾನ ಮಾಡಬೇಕೆಂಬ ಉತ್ಕಟ ಇಚ್ಛೆ ಇದೆ. ಪ್ರಯತ್ನ ಪಟ್ಟು ಹೋಗಿ ಮಾಡಿದೆವು. ಇದು ಇನ್ನೊಂದು ಪಕ್ಷ. 

ಎಲ್ಲರೂ ಸ್ತೋತ್ರ ಹೇಳುತ್ತಾರೆ. ನಾವೂ ಹೇಳಿದೆವು. ಹಾಗಲ್ಲ, ನಾವು ಆ ಸ್ತೋತ್ರದ ಅರ್ಥ ತಿಳಿದು ಹೇಳಿದೆವು. ಇವೆರಡರ ನಡುವಿನ ವ್ಯತ್ಯಾಸ ಮೇಲಿನ ಗಂಗಾಸ್ನಾನದ ವ್ಯತ್ಯಾಸದಂತೆ. ಅರ್ಥ ತಿಳಿಯುತ್ತಾ ಹೋದಂತೆ ಭಕ್ತಿ, ಗೌರವಗಳು ಹೆಚ್ಚಾಗಿ ಫಲವೂ ಹೆಚ್ಚು. ಜಾಮೂನನ್ನು ಸುಮ್ಮನೆ ನುಂಗಬಹುದು. ಜಗಿದೂ, ಜಗಿದೂ ನುಂಗಬಹುದು!

Monday, February 2, 2026

ದೇಶದ್ರೋಹಿ


ಈಚಿನ ದಿನಗಳಲ್ಲಿ ದೇಶದ ಗಡಿಗಳ ರಕ್ಷಣೆ ಬಗ್ಗೆ ಇರುವ ಕಾಳಜಿ ಆಂತರಿಕ ಭದ್ರತೆ ಬಗ್ಗೆಯೂ ಹೆಚ್ಚಿನ ಪ್ರಮಾಣದಲ್ಲಿ ವ್ಯಕ್ತವಾಗುತ್ತಿದೆ. ಅನಧಿಕೃತ ನುಸುಳುಕೋರರ ಹಾವಳಿ ಹಿಂದೆಂದಿಗಿಂತ ಅಧಿಕ ರೀತಿಯಲ್ಲಿ ಕಂಡುಬರುತ್ತಿದೆ. ದೇಶದಲ್ಲಿ ಇಂತಹ ಅನಧಿಕೃತ ಪ್ರವೇಶ ಪಡೆದವರ ಸಹಾಯಕ್ಕಾಗಿ ಒಂದು ಅತ್ಯಂತ ವ್ಯವಸ್ಥಿತ ಜಾಲ ಹರಡಿಕೊಂಡು ಶಾಂತಿ-ಸುವ್ಯವಸ್ಥೆಗೆ ಭಂಗ ತರುವ ಅನೇಕ ಪ್ರಯತ್ನಗಳು ನಿರಂತರ ನಡೆದಿವೆ. ಇದು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಲ್ಲ. ಪ್ರಪಂಚದ ಅನೇಕ ಕಡೆ ಇಂತಹ ಪ್ರಕರಣಗಳು ನಡೆಯುತ್ತಾ ಇರುವುದು ಆಗಾಗ್ಗೆ ವರದಿ ಆಗುತ್ತಿವೆ. 

ನಾವು ಕಷ್ಟಪಟ್ಟು ನಮ್ಮ ಮನೆಯ ಅಂಗಳದಲ್ಲಿ ಏನನ್ನೂ ಬೆಳೆದಿಲ್ಲ. ನಮ್ಮ ಪಕ್ಕದ ಮನೆಯವರು ಶ್ರಮಿಸಿ ಹಣ್ಣು-ತರಕಾರಿ ಬೆಳೆದುಕೊಂಡಿದ್ದಾರೆ. ಸಾಧ್ಯವಾದರೆ ಅವರು ಅತ್ತ ಕಡೆ ನೋಡುತ್ತಿರುವಾಗ ಸ್ವಲ್ಪ ಕಿತ್ತುಕೊಳ್ಳುವುದು. ಅದಕ್ಕಿಂತ ಹೆಚ್ಚಾಗಿ ನಾವೇ ಅವರ ಮನೆಯವರಂತೆ ಸೇರಿಕೊಂಡು ಆ ಅಂಗಳದಲ್ಲಿ ಬೆಳೆದ ಪದಾರ್ಥಗಳ ಸುಖವನ್ನು ಅನುಭವಿಸುವುದು. ಇದರಿಂದ ಅವರ ಕುಟುಂಬದ ಸದಸ್ಯರ ಪಾಲು ಕಡಿಮೆ ಆದರೆ ನಮಗೇನು? ಇದು ಈ ನುಸುಳುಕೋರರ ತಾತ್ವಿಕ ನಿಲುವು. ಈ ರೀತಿಯ ಕೆಲಸಕ್ಕೆ ಅವರ ಮನೆಯವರಲ್ಲಿ ಯಾರಾದರೂ ಸಹಾಯ ಮಾಡಿದರೆ ಬಹಳ ಒಳ್ಳೆಯದು. ಇದೇ ಈಗ ನಡೆಯುತ್ತಿರುವ ವಿದ್ಯಮಾನಗಳು. 

ಎಲ್ಲಿಯಾದರೂ ಒಂದು ದುರ್ಘಟನೆ ನಡೆದ ತಕ್ಷಣ ಭದ್ರತಾ ಪಡೆಗಳು ಮತ್ತು ವ್ಯವಸ್ಥೆಯ ಮೇಲೆ ಮುಗಿಬೀಳಲು ಅನೇಕರು ಕಾತರರಾಗಿರುವುದು ಕಂಡುಬರುತ್ತದೆ. "ಇವರೆಲ್ಲಾ ಏನು ಮಾಡುತ್ತಿದ್ದರು? ಇವರ ಕಣ್ಣು ತಪ್ಪಿಸಿ ಈ ರೀತಿ ಹೇಗೆ ಆಯಿತು? ಇದು ಅಸಮರ್ಥತೆಯ ಪರಮಾವಧಿ" ಎಂದು ಚೀರಾಡುವವರನ್ನು ಅಲ್ಲಲ್ಲಿ ಕಾಣಬಹುದು. ದುರದೃಷ್ಟವಶಾತ್ ಭದ್ರತಾ ಪಡೆಗಳು ಅನೇಕ ಸಂದರ್ಭಗಳಲ್ಲಿ ಕೈ-ಕಾಲು ಕಟ್ಟಿಹಾಕಿಕೊಂಡು ಓಡಬೇಕಾದ ಇಕ್ಕಟ್ಟಿನಲ್ಲಿ ಸಿಲುಕುತ್ತವೆ. ಕಾನೂನಿನ ಚೌಕಟ್ಟಿನಲ್ಲಿಯೇ ಅವು ಕಾರ್ಯ ನಿರ್ವಹಿಸಬೇಕು. ಆದರೆ ನುಸುಳುಕೋರರಿಗೂ ಮತ್ತು ಅವರ ಸಮರ್ಥಕರಿಗೂ ಇಂತಹ ಯಾವುದೇ ಕಟ್ಟುಪಾಡುಗಳಿಲ್ಲ.

ಭದ್ರತಾ ಪಡೆಗಳ ಸಾಹಸದಿಂದ ನೂರರಲ್ಲಿ ತೊಂಬತ್ತೊಂಬತ್ತು ದುರ್ಘಟನೆಗಳು ಮೊಳಕೆಯಲ್ಲಿಯೇ ಚಿವುಟಿ ನಿಲ್ಲುತ್ತವೆ. ಇವುಗಳ ವಿವರಗಳು ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟರ ಮೇಲೂ ಆಗಾಗ ಶಾಂತಿಭಂಗ ಆಗುವ ಸಂದರ್ಭಗಳು ಉಂಟು. ಇಂತಹ ಪ್ರಕರಣಗಳು ಅತಿ ಹೆಚ್ಚು ಸುದ್ದಿ ಮಾಡುತ್ತವೆ. ಯಾವುದೋ ಸಣ್ಣ-ಪುಟ್ಟ ಆಸೆ-ಆಮಿಷಗಳಿಗೆ ಒಳಗಾಗಿ ದೇಶದ ಭದ್ರತೆಗೆ ಸಂಬಂಧಿಸಿದ ಗುಟ್ಟಿನ  ವಿಷಯಗಳನ್ನು ಶತ್ರುರಾಷ್ಟ್ರಗಳ ದಲ್ಲಾಳಿಗಳಿಗೆ ಮಾರಿಕೊಳ್ಳುವ ದೇಶದ್ರೋಹಿ ವ್ಯಕ್ತಿಗಳು ಅತ್ಯಂತ ಅಪಾಯಕಾರಿಗಳು. ನುಸುಳುಕೋರರ ಸಹಾಯಕ್ಕೆ ಧಾವಿಸುವ ಆಂತರಿಕ ಶತ್ರುಗಳು ಸಹ ಇಷ್ಟೇ ಅಪಾಯಕಾರಿಗಳು. ಈಗಿನ ಪರಿಸ್ಥಿತಿಯಲ್ಲಿ ಇಂತಹವರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮಗಳ ಅಕ್ಕ-ಪಕ್ಕದಲ್ಲೇ ಸೇರಿಕೊಂಡಿರುವುದು ಬಹಳ ಭಯಾನಕ ವಾತಾವರಣ ಉಂಟುಮಾಡಿದೆ. 

*****

ಇದರ ಹಿಂದಿನ ಸಂಚಿಕೆಯಲ್ಲಿ "ತಾಯಿಯ ತೊಳಲಾಟ" (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಎನ್ನುವ ಒಂದು ಶೀರ್ಷಿಕೆಯ ಅಡಿಯಲ್ಲಿ ಅದಕ್ಕೆ ಸೇರಿದ ಅನೇಕ ವಿಷಯಗಳನ್ನು ಚರ್ಚಿಸುತ್ತಾ ಸಾಂದರ್ಭಿಕವಾಗಿ "ಪ್ರತಿಜ್ನಾಯೌಗಂಧರಾಯಣಮ್" ನಾಟಕದ "ಹೆತ್ತ ಒಡಲಿನ ಒಳತೋಟಿ" ಬಗ್ಗೆ ಒಂದು ಹೇಳಿಕೆಯನ್ನು ನೋಡಿದ್ದೆವು. ಅದನ್ನು ಚರ್ಚಿಸುವಾಗ, ಅದೇ ನಾಟಕದ ಇನ್ನೊಂದು ಹೇಳಿಕೆ ಬಗ್ಗೆ ಗಮನ ಹೋಯಿತು. ದೇಶದ್ರೋಹಿಗಳ ಬಗ್ಗೆ ಹೇಳುವ ಈ ಮಾತು ಮೈನವಿರೇಳುವಂತೆ ಇದೆ. 

ಒಂದಲ್ಲಾ ಒಂದು ದಿನ ಸಾವು ಎಲ್ಲರಿಗೂ ಬರುವುದೇ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಅನೇಕ ವರುಷಗಳು ಬಾಳಿ, ಬದುಕಿ, ಈಗ ನಶಿಸಿಹೋದ ದೇಹಕ್ಕೆ ಒಂದು ಯೋಗ್ಯ ರೀತಿಯ ಅಂತಿಮ ಸಂಸ್ಕಾರ ನಡೆಯಬೇಕಿರುವುದು ಸಮಾಜದ ಒಂದು ಪದ್ದತಿ. ದೇಶಕ್ಕಾಗಿ ಪ್ರಾಣ ಕೊಟ್ಟ ಒಬ್ಬ ಸೈನಿಕನಿಗೆ ನೀಡುವ ಅಂತಿಮ ಯಾತ್ರೆ, ಸಂಸ್ಕಾರ ಮತ್ತು ಶ್ರದ್ದಾಂಜಲಿ, ಇವುಗಳಿಗೆ ಅದರದೇ ಆದ ವಿಶೇಷ ಗೌರವ, ಆದರಗಳು ಉಂಟು. ಸೇನೆಯ ಮತ್ತು ಸರ್ಕಾರದ ಅತ್ಯಂತ ಹಿರಿಯ ಅಧಿಕಾರಿಗಳಿಂದ ಆ ಗ್ರಾಮ ಅಥವಾ ಪಟ್ಟಣದ ಸಾಮಾನ್ಯ ಜನರೂ ಕಣ್ಣೀರಿಡುತ್ತಾ ಭಾಗವಹಿಸುತ್ತಾರೆ. ಒಬ್ಬ ಸೈನಿಕ ಅಥವಾ ದೇಶಭಕ್ತನ ಸಾವು ಅವನ ಕುಟುಂಬಕ್ಕೋ ಅಥವಾ ಅವನು ವಾಸಿಸುತ್ತಿದ್ದ ಕೇರಿಗೋ ಸೀಮಿತವಾಗುವುದಿಲ್ಲ. ಅವನ ಸಾವು ಎಲ್ಲರ ಮನೆಯ ಸಾವು. ಹೀಗೆ ಭಾವನೆಗಳು ತೋರಿಬರುತ್ತವೆ. 
*****

"ಪ್ರತಿಜ್ನಾಯೌಗಂಧರಾಯಣಮ್" ನಾಟಕದ ದೇಶದ್ರೋಹಿಯ ಬಗ್ಗೆ ಬರುವ ಶ್ಲೋಕ ಹೀಗಿದೆ:

ನವಂ ಶರಾವಂ ಸಲಿಲೈ: ಸುಪೂರ್ಣ೦ ಸುಸಂಸ್ಕೃತಂ ದರ್ಭಕೃತೋತ್ತರೀಯಮ್ 
ತತ್ತಸ್ಯ ಮಾಭೂನ್ನರಕಂ ಸ ಗಚ್ಚೇತ್ ಯೋ ಭರ್ತೃಪಿಂಡಸ್ಯ ಕೃತೇ ನ ಯುಧ್ಯೇತ್  

"ಯಾವನು ತನ್ನ ಯಜಮಾನನ ಅಥವಾ ದೇಶದ ಪರವಾಗಿ ಹೋರಾಡುವುದಿಲ್ಲವೋ ಅಂತಹ ಮನುಷ್ಯನಿಗೆ ಕ್ರಮವಾಗಿ ಉತ್ತರಕ್ರಿಯಾದಿಗಳನ್ನು ಮಾಡಿ ನೀಡುವ ವಸ್ತುಗಳು (ತರ್ಪಣದ ನೀರು, ಅನ್ನ-ಪಾನಾದಿಗಳು) ಸಿಗದಿರಲಿ. ಅಂತಹವನು ಉತ್ತಮ ಗತಿಗೆ ಯೋಗ್ಯನಲ್ಲ. ಅವನು ನರಕದಲ್ಲಿ ಬಿದ್ದು ಕೊಳೆಯಲಿ!"

ಪ್ರತಿಯೊಬ್ಬ ಮನುಷ್ಯನಿಗೂ ಅವನು ಹುಟ್ಟಿ-ಬೆಳೆದ ಅಥವಾ ಅವನು ಸ್ವೀಕರಿಸಿದ ಪದ್ಧತಿಯ ಪ್ರಕಾರ ಅಂತಿಮ ಗೌರವಗಳು ಸಿಗುತ್ತವೆ. ಕೆಲವರಿಗೆ ಅದು ತರ್ಪಣ, ಪಿಂಡಪ್ರದಾನ ಇತ್ಯಾದಿ ರೀತಿಯಲ್ಲಿ ಇರಬಹುದು. ಮತ್ತೆ ಕೆಲವರಿಗೆ ಹಾಲು-ತುಪ್ಪ ಇರಬಹುದು. ಮತ್ತೆ ಕೆಲವರಿಗೆ "ಮೆಮೋರಿಯಲ್ ಸರ್ವಿಸ್" ಇರಬಹುದು. ಅದು ಯಾವುದು ಎನ್ನುವುದು ಮುಖ್ಯವಲ್ಲ. ಅದು ಒಂದು ಅತ್ಯಂತ ಗೌರವಯುತವಾದ ಸಂಸ್ಕಾರ ಆಗಿರಬೇಕು. ಅಷ್ಟೇ. ಯೌಗಂಧರಾಯಣನ ಸಮಯದ ವಿವರಣೆ ಇಲ್ಲುಂಟು. ಕಾಲಕಾಲಕ್ಕೆ ಅದು ಬದಲಾಗಬಹುದು. ಗೌರವದ ರೀತಿ ಹೇಗೆ ಎನ್ನುವುದರ ವಿವರ ಬೇರೆ ಆಗಬಹುದು. ಆದರೆ ತೋರಿಸುವ ಗೌರವ-ಆದರಗಳು ಎಂದಿಗೂ ಒಂದೇ. 

*****

ಎರಡು ಸಾವಿರ ವರುಷಗಳ ಹಿಂದೆ ಹಾಗೆ. ಇಂದಿನ ಭಾವನೆ ಏನು?

ನಾವು ಶಾಲೆಗಳಲ್ಲಿ ಓದುತ್ತಿದ್ದಾಗ ಕನ್ನಡ ಪಠ್ಯ ಪುಸ್ತಕದಲ್ಲಿ ದೇಶದ್ರೋಹಿಯ ಬಗ್ಗೆ ಒಂದು ಪದ್ಯವಿತ್ತು. ಅದರ ಕಡೆಯ ಸಾಲುಗಳು ಹೀಗಿದ್ದವು: 

ದೇಶದ್ರೋಹಿಯು ಸಾಯುವನೆಲ್ಲಿ?
ಸತ್ತರೆ ಅವನಿಗೆ ಸುಡುಗಾಡೆಲ್ಲಿ?
ಸೂಡು ಮಾಡಲು ಕಟ್ಟಿಗೆಯಿಲ್ಲ 
ಬೆಂಕಿ ಹೆಣವನು ಮುಟ್ಟುವುದಿಲ್ಲ 
ನಾಯಿ ನರಿಯೂ ತಿನ್ನುವುದಿಲ್ಲ 
ತಬ್ಬಲಿಗೇನಿಲ್ಲ!

ತಿಳಿಗನ್ನಡದ ಈ ಕವಿತೆಯ ಸಾಲುಗಳಿಗೆ ಯಾವ ವಿವರಣೆಯೂ ಬೇಕಿಲ್ಲ.  ದೇಶದ್ರೋಹಿಯು ಸತ್ತು ಬೀಳುವ ಕಡೆ ಇರುವ ನೆಲ "ಇಲ್ಲಿ ಬೀಳಬೇಡ!" ಅನ್ನುತ್ತದಂತೆ. ಸ್ಮಶಾನ "ಇಲ್ಲಿ ಬರಬೇಡ!" ಎಂದು ಕಿರಿಚುತ್ತದಂತೆ. ಚಿತೆ ಒಟ್ಟುಗೂಡಿಸಲು ತರುವ ಸೌದೆತುಂಡುಗಳು ದೂರ ಓಡಿಹೋಗುತ್ತವಂತೆ. ಬೆಂಕಿ ಅವನ ದೇಹವನ್ನು ಸುಡಲು ಒಲ್ಲದಂತೆ. "ಹಸಿವಿನಿಂದ ಸತ್ತರೂ ಪರವಾಗಿಲ್ಲ. ನಮಗೆ ಇವನ ದೇಹ ತಿನ್ನುವ ದೌರ್ಭಾಗ್ಯ ಬೇಡ!" ಎಂದು ನಾಯಿ-ನರಿಗಳು ದೂರ ಓಡುತ್ತವಂತೆ. ಅವನು ಈಗ ನಿಜವಾಗಿಯೂ ತಬ್ಬಲಿ. ಹೇಳುವವರು, ಕೇಳುವವರು, ಅವನಿಗಾಗಿ ದುಃಖಿಸುವವರು ಯಾರೂ ಇಲ್ಲ. ಅವನು ಎಲ್ಲವನ್ನೂ ಕಳೆದುಕೊಂಡ ಪಾತಕಿ.

*****

ನಮ್ಮ ಬಾಲ್ಯದಲ್ಲಿ ಏನಾದರೂ ಪ್ರಮಾದ ಮಾಡಿದ ಸಮಾಜಘಾತುಕರನ್ನು ನಿರ್ದೇಶಿಸಿ "ಅವನನ್ನು ನೀರು-ನೆರಳು ಇಲ್ಲದ ಕಡೆ ಕಡಿಯಬೇಕು" ಅನ್ನುತ್ತಿದ್ದರು. ಈಗ ಅಂತಹ ಹೇಳಿಕೆ ಅಷ್ಟಾಗಿ ಕೇಳಿಬರುವುದಿಲ್ಲ. ಕಡಿದ ಮೇಲೆ ಮನುಷ್ಯನೇ ಹೋಗುವಾಗ ಅಲ್ಲಿ "ನೀರು-ನೆರಳು" ಏನು ಮಾಡುತ್ತವೆ? ಎಂದು ನಾವು ಹುಡುಗರು ಯೋಚಿಸುತ್ತಿದ್ದೆವು. ಅದರ ಅರ್ಥ ಅದಲ್ಲ. ಒಬ್ಬ ಮನುಷ್ಯನಿಗೆ ಸಿಗಬೇಕಾದ ಕನಿಷ್ಠ ಪದಾರ್ಥಗಳೂ ಸಿಗಬಾರದು. ಅವನು ಅದಕ್ಕೆ ಯೋಗ್ಯನಲ್ಲ ಎಂದು ಹೇಳುವುದು ಅದರ ಉದ್ದೇಶ್ಯ. 

ದೇಶದ್ರೋಹಿಗೆ ಕಾನೂನಿನಲ್ಲಿ ಅನೇಕ ರೀತಿಯ ಶಿಕ್ಷೆಗಳಿವೆ. ಕೆಲವು ದೇಶದ್ರೋಹಿಗಳಿಗೆ ಈ ರೀತಿಯ ಶಿಕ್ಷೆ ಆಗಬಹುದು. ಕೆಲವರು ಕಾರಣಾಂತರಗಳಿಂದ ಶಿಕ್ಷೆ ತಪ್ಪಿಸಿಕೊಳ್ಳಲೂಬಹುದು. ಆದರೆ ದೇಶವಾಸಿಗಳಿಂದ ಸಿಗುವ ಗೌರವ ದೇಶಭಕ್ತನಿಗೆ ಕಿರೀಟ. ಅದೇ ದೇಶವಾಸಿಗಳಿಂದ ಸಿಗುವ ತಿರಸ್ಕಾರವೇ ದೇಶದ್ರೋಹಿಗೆ ಅತಿ ದೊಡ್ಡ ಶಿಕ್ಷೆ.

Wednesday, January 21, 2026

ತಾಯಿಯ ತೊಳಲಾಟ

 
ಮದುವೆಯ ಮನೆಯಲ್ಲಿ ಬಲು ಸಂಭ್ರಮ. ಸಭಾಂಗಣ ತುಂಬಿದೆ. ಪ್ರತಿಯೊಬ್ಬರಿಗೂ ಅವರದೇ ಆದ ಕೆಲಸ. ಮುಖ್ಯ ಕೆಲಸ ಮಾಡುವವರಿಗೆ ಅವುಗಳ ಚಿಂತೆ. ಅವರ ಸಹಾಯಕರಿಗೆ ಅವರ ಪಾಲಿಗೆ ಹಂಚಿಕೊಟ್ಟ ಕೆಲಸಗಳು. ಅಡಿಗೆಯ ಮನೆಯಂತೂ ತುಂಬು ಚಟುವಟಿಕೆಯಿಂದ ಓಡುತ್ತಿದೆ. ಪುರೋಹಿತರ ತಂಡಕ್ಕೆ ಬಂದ ಕೆಲಸ ಸುಗಮವಾಗಿ ಮುಗಿಸಿ ಮತ್ತೊಂದೆಡೆ ಇರುವ ಸಂಜೆಯ ಕಾರ್ಯಕ್ರಮಕ್ಕೆ ಹೋಗುವ ತವಕ. ವಾದ್ಯದವರಿಗೆ ಹೀಗೆಯೇ ಚಿಂತೆ. ಬಂದ ಅತಿಥಿ-ಅಭ್ಯಾಗತರನ್ನು ಗಮನಿಸುವವರಿಗೆ ಬಾಗಿಲ ಕಡೆಯೇ ಗಮನ. ಉಡುಗೊರೆ ಪೆಟ್ಟಿಗೆಗಳ ಕೀಲಿಕೈ ಹಿಡಿದವರಿಗೆ ಅದರ ಮೇಲೆ ಒಂದು ಕಣ್ಣಾದರೆ ಮತ್ತೊಂದು ಅವನ್ನು ಪಡೆಯಲು ಅರ್ಹರಾದವರ ಮೇಲೆ. ಹೀಗೆ ನಡೆಯುತ್ತಿದೆ. 

ಅಂದ ಮಾತ್ರಕ್ಕೆ ಬೇರೆ ಯಾವುದೇ ಕೆಲಸ ಇಲ್ಲದವರು ಇಲ್ಲವೆಂದಲ್ಲ. ಅವರೂ ಬಂದು ಕುಳಿತಿದ್ದಾರೆ. ಬೆಳಗ್ಗೆ ಗಡತ್ತಾಗಿ ತಿಂಡಿಯ ಸೇವನೆ ಆಗಿದೆ. ಇನ್ನು ಸಮಾರಂಭದ ಮಧ್ಯೆ ಸ್ವಲ್ಪ ಪಾನಕ ಬರಬಹುದು. ಅದೇನೂ ಅಷ್ಟು ದೊಡ್ಡದಲ್ಲ. ಲಗ್ನದ ಸಮಯದ ನಂತರ, ಮಾಂಗಲ್ಯಧಾರಣೆ ಕಳೆದ ಮೇಲೆ ಭೂರಿ ಭೋಜನ ಬರುವವರೆಗೂ ಏನು ಮಾಡುವುದು? ನಾಲಿಗೆ ಸುಮ್ಮನಿರುವುದಿಲ್ಲ. ಅದು ಏನಾದರೂ ತಿನ್ನುತ್ತಿರಬೇಕು. ಇಲ್ಲವೇ ಇನ್ನೇನಾದರೂ ಅನ್ನುತ್ತಿರಬೇಕು. ವಿಮಲಮ್ಮ ಅಂತಹ ನಾಲಗೆಯುಳ್ಳ ಒಬ್ಬ ವ್ಯಕ್ತಿ. 

ವಿಮಲಮ್ಮನ ಕಣ್ಣಿಗೆ ಕಮಲಮ್ಮ ಬಿದ್ದರು. ಸುಮ್ಮನಿರುವುದು ಸಾಧ್ಯವೇ? ಸಾಧ್ಯವಿದ್ದರೂ ಅದು ಸಾಧುವೇ? ಬಾಯಿತುಂಬಾ ಮಾತಿಗೆ ಅವಕಾಶ ಇರುವಾಗ ಸುಮ್ಮನೆ ಇದ್ದರೆ ಅದೊಂದು ಅನ್ಯಾಯವೇ ಅಲ್ಲವೇ? ಸರಸರನೆ ನಡೆದು ಕಮಲಮ್ಮ ಕುಳಿತಿರುವ ಕಡೆ ನುಗ್ಗಿದರು. ಉಭಯ ಕುಶಲೋಪರಿ ಪ್ರಾರಂಭವಾಯಿತು. 

"ಏನು ಕಮಲಮ್ಮ? ಚೆನ್ನಾಗಿದ್ದೀರಾ? ಮೂರು ವರುಷ ಆಯಿತು ನಿಮ್ಮನ್ನು ನೋಡಿ"
"ಹೌದು ವಿಮಲಮ್ಮ. ತುಂಬಾ ದಿನ ಆಯಿತು. ಚೆನ್ನಾಗಿದ್ದೇವೆ. ನೀವು ಹೇಗೆ?"
"ಏನೋ, ನೋಡಿ. ಹೀಗಿದ್ದೇನೆ. ನಿಮ್ಮನ್ನು ಕಂಡು ಬಹಳ ಸಂತೋಷ ಆಯಿತು"
"ನನಗೂ ಅಷ್ಟೇ. ಈ ರೀತಿ ಸಮಾರಂಭಗಳಿಗೆ ಬಂದರೆ ಒಬ್ಬರನ್ನೊಬ್ಬರು ನೋಡಲು ಅವಕಾಶ"
"ಹೌದು, ನೋಡಿ. ಅಂದಹಾಗೆ ನಿಮ್ಮ ಮಗಳು ಸರಸು ಎಲ್ಲಿ? ಅವಳ ಮದುವೆ ಆಯಿತೇ?"
"ಇಲ್ಲ ವಿಮಲಮ್ಮ. ಒಂದೇ ಸಮ ವರ ಹುಡುಕುತ್ತಿದ್ದೇವೆ. ಆದರೆ ಯಾವುದೂ ಕೂಡಿಬರುತ್ತಿಲ್ಲ"
"ಅಯ್ಯೋ, ಹೌದೇ? ಅಲ್ಲಿ ನೋಡಿ. ನಿಮ್ಮ ಮಗಳ ಜೊತೆಗಾತಿ ಸರಳ"
"ಆಗಲೇ ನೋಡಿ ಮಾತನಾಡಿಸಿದೆ"
"ಅವಳಿಗೆ ಕಂಕಳಲ್ಲೊಂದು, ಕೈಯಲ್ಲೊಂದು. ನೋಡಿದರೆ ಇನ್ನೊಂದೂ ಬರುವಂತಿದೆ"
"ಹೌದು. ಕಳೆ  ಕಳೆಯಾಗಿದ್ದಾಳೆ"
"ನೀವು ನೋಡಿದರೆ ಸರಸುಗೆ ಮದುವೆಯೇ ಆಗಲಿಲ್ಲ ಅನ್ನುತ್ತೀರಿ"
"ಏನು ಮಾಡುವುದು? ನಮಗೆ ಅದೇ ಚಿಂತೆಯಾಗಿದೆ"
"ಹೋಗಲಿ ಬಿಡಿ. ಅವಳಿಗೂ ಆಗುತ್ತೆ. ಯಾವುದಕ್ಕೂ ಋಣಾನುಬಂಧ ಕೂಡಿಬರಬೇಕು"
"ನಿಮ್ಮ ಹಾರೈಕೆಯಿಂದ ಬೇಗ ಹಾಗಾಗಲಿ ಅನ್ನುತ್ತೇನೆ"
"ಚಿಂತಿಸಬೇಡಿ. ಬ್ರಹ್ಮನು ಗಂಟು ಹಾಕಿಯೇ ಕಳಿಸಿರುತ್ತಾನೆ. ಕಂಕಣಬಲ ಕೂಡಿದರೆ ಎಷ್ಟು ಹೊತ್ತು?"

ಅಷ್ಟರಲ್ಲಿ ವಿಮಲಮ್ಮನಿಗೆ ಕನಕಮ್ಮ ಕಣ್ಣಿಗೆ ಬಿದ್ದರು. ಇನ್ನೊಂದು ಸುವರ್ಣ ಅವಕಾಶ. ಆ ಕಡೆ ನುಗ್ಗಿದರು. ಕಮಲಮ್ಮನಿಗೆ ಬಿಡುಗಡೆ ಆಯಿತು. ಈ ಪ್ರಶ್ನೆ ಬರುತ್ತದೆ ಎಂದು ಗೊತ್ತಿತ್ತು. ಅದಕ್ಕೇ ಈ ಮದುವೆಗೆ ಬರುವುದಕ್ಕೆ ಅನುಮಾನಿಸಿ, ಯೋಚಿಸಿ, ತಪ್ಪಿಸಬಾರದ ಮದುವೆ ಅಂತ ಬಂದಿದ್ದರು. ಈ ಪ್ರಶ್ನೆ ಯಾರಾದರೂ ಕೇಳಿದರೆ "ಇನ್ನೂ ಆಗಿಲ್ಲ" ಎಂದು ಹೇಳಲು ಸಂಕೋಚ. ಅದೊಂದು ಲಜ್ಜೆಗೆ ಕಾರಣವಾದ ಪರಿಸ್ಥಿತಿ. 

ಹೆಣ್ಣು ಹೆತ್ತವರಿಗೆ ಈ ರೀತಿ ಸಂದರ್ಭಗಳು ಎದುರಾಗುತ್ತಿದ್ದ ಕಾಲವೊಂದಿತ್ತು. ಐವತ್ತು-ಅರವತ್ತು ವರುಷಗಳ ಹಿಂದೆ ಅದು ಸರ್ವೇಸಾಮಾನ್ಯವಾಗಿತ್ತು. ಈಗಲೂ ಈ ಪ್ರಶ್ನೆ ಬರುವುದೇ ಆದರೂ ಅದರ ತೀವ್ರತೆ ಆಷ್ಟಿರುವುದಿಲ್ಲ. ಹೆಣ್ಣು-ಗಂಡುಗಳು ಪರಸ್ಪರ ಜೊತೆ ಹಾಕಿಕೊಳ್ಳುವುದು ಹೆಚ್ಚಾದ ಕಾಲ ಇದಾದುದರಿಂದ ಪರಿಸ್ಥಿತಿಯೂ ಬದಲಾಗಿದೆ. 

ಏನೇ ಆದರೂ ಹೆಣ್ಣು ಮಕ್ಕಳ ತಾಯಂದಿರಿಗೆ ಈ ರೀತಿಯ ತೊಳಲಾಟ ಎಲ್ಲ ಕಾಲಕ್ಕೂ ಇರುತ್ತದೆ. ಒಂದು ಸರಿಯಾದ ವರ ಸಿಕ್ಕಿ ಮಗಳು ವಿವಾಹಿತಳಾಗಲಿ ಎನ್ನುವ ಆಸೆ ಹೆತ್ತ ಕರುಳಿಗೆ ಎಂದೂ ಇರುವುದೇ. ಇದು ಮಗಳ ಮದುವೆ ಆಗುವ ಮುಂಚಿನ ಕಥೆ. 

***** 

ಧಾರೆ, ನಾಗೋಲಿ ಮುಂತಾದುವೆಲ್ಲಾ ಸಾಂಗವಾಗಿ ನಡೆದವು. ಈಗ ಸಂಜೆಯ ಸಮಯ. ಕೆಲವರಿಗೆ ಮುಂದಿನ ಆರತಕ್ಷತೆಯ ಗಡಿಬಿಡಿ. ಆಗಿನ ಅಲಂಕಾರಕ್ಕೆ ಹೂವಿನ ರಾಶಿಯೇ ಬಂದು ಬಿದ್ದಿದೆ. ಸಂಬಂಧಿಸಿದ ಕೆಲಸಗಾರರು ಬೇಗ ಬೇಗ ತಯಾರಿ ನಡೆಸುತ್ತಿದ್ದಾರೆ. ಹೆಣ್ಣು ಮತ್ತು ಗಂಡು, ಈಗ ಗಂಡ-ಹೆಂಡತಿ, ಅವರ ಮನೆಯವರಿಗೆ ಮುಂದಿನ ನಡವಳಿಕೆ ಒಂದು ದೊಡ್ಡ ಹಂತ. ಗಂಡಿನವರು ಹೆಣ್ಣನ್ನು ಮನೆ ತುಂಬಿಸಿಕೊಳ್ಳಲು ಉತ್ಸುಕರು. ಹೆಣ್ಣಿನ ಕಡೆಯವರು ಒಪ್ಪಿಸಿಕೊಡಬೇಕು. ಈ ಕೋಣೆಯಲ್ಲಿ ಒಂದು ರೀತಿಯ ಸಂಭ್ರಮ. ಆ ಕೋಣೆಯಲ್ಲಿ ಒಂದು ವಿಧದ ದುಗುಡ. 

ಎಲ್ಲರಿಗಿಂತ ಹೆಚ್ಚು ಕಳವಳ ಪಡುತ್ತಿರುವವಳು ಹುಡುಗಿಯ ಹೆತ್ತತಾಯಿ. ತನ್ನ ಕಣ್ಣ ಮುಂದಿನ ಕೂಸು ಇಂದು ಮನೆ ಬಿಟ್ಟು ಹೋಗುತ್ತಿದ್ದಾಳೆ. ಮುಂದೆ ಅವಳ ಜೀವನ ಹೇಗೋ, ಏನೋ? ಅಳೆದು-ಸುರಿದು ಸಂಬಂಧ ಗೊತ್ತು ಮಾಡಿದ್ದಾಯಿತು. ಗಂಡಿನ ಕಡೆಯವರು ಒಳ್ಳೆಯವರೆಂದೇ ನಂಬಿಕೆ. ಹತ್ತು ಜನ ಹಾಗೆ ಹೇಳಿದ್ದು ಕೇಳಿದಮೇಲೆ ತಾನೇ ಮದುವೆ ಗೊತ್ತು ಮಾಡಿದ್ದು. ಮದುವೆ ಮಾಡುವುದರಲ್ಲಿ ಏನೂ ಕೊರತೆಯಿಲ್ಲ. ಕೊಡುವುದೆಲ್ಲ ಕೊಟ್ಟಾಯಿತು. ಸಾಲ-ಸೋಲ ಮಾಡಿದ್ದು ಹೇಗಾದರೂ ಮಾಡಿ ತೀರಿಸಬಹುದು. ಆದರೆ ಮುಂದಿನ ದಿನಗಳಲ್ಲಿ ಮಗಳು ಅತ್ತೆಯ ಮನೆಯಲ್ಲಿ ಹೇಗಿರುತ್ತಾಳೋ, ಏನೋ? ಅತ್ತೆ-ಅತ್ತಿಗೆ-ನಾದಿನಿಯರು ಹೇಗೆ ನಡೆದುಕೊಂಡಾರೋ? ಮಾವ ಒಳ್ಳೆಯವರಂತೆ ಕಾಣುತ್ತಾರೆ. ಆದರೂ ಏನೂ ಹೇಳುವಂತಿಲ್ಲ. 

"ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ಬಂದಿರುವೆವು....." ಎಂದು ಯಾರೋ ಹಾಡಲು ಶುರು ಮಾಡಿದ್ದಾರೆ. ವಿ. ಸೀತಾರಾಮಯ್ಯನವರ ಈ ಹಾಡಿಲ್ಲದೆ ಹೆಣ್ಣು ಒಪ್ಪಿಸಿಕೊಡುವುದು ಮುಗಿಯುವಂತಿರಲಿಲ್ಲ. ಬೇರೆ ಹಂತಗಳಲ್ಲಿ ಕೆಲಸ ತೂಗಿಸಲು ಮಂತ್ರಗಳು ಉಂಟು. ಈ ಹಂತದಲ್ಲಿ ಅವರ ಹಾಡೇ ಆಗಬೇಕು. ಹಾಡುತ್ತಿರುವವರಿಗೆ ಅವರ ಹಾಡುವಿಕೆಯ ಮೇಲೆ ಅಭಿಮಾನ. ತಾಯಿಗಾದಾರೋ ಆ ಹಾಡಿನ ಒಂದೊಂದು ಪದವೂ ಮೊದಲೇ ಬೆದರಿರುವ ಹೃದಯದ ಮೇಲೆ ಒಂದೊಂದು ಏಟು ಹಾಕುತ್ತಿದೆ. ಎಷ್ಟು ಸಮಾಧಾನ ಪಟ್ಟುಕೊಂಡರೂ ದುಃಖ ನುಗ್ಗುತ್ತಾ ಬರುತ್ತಿದೆ. ಕಣ್ಣುಗಳಲ್ಲಿ ನೀರು ತುಂಬಿಕೊಂಡು ದೃಷ್ಟಿ ಮಂಜಾಗಿದೆ. ಮುಂದೆ ಮಗಳ ಜೀವನ ಹೇಗೋ ಎಂದು ಆತಂಕ ಆವರಿಸಿದೆ. 

ಈಗ ಕಾಲ ಬದಲಾಗಿದೆ. "ಅಷ್ಟ ವರ್ಷಾ ಭವೇತ್ ಕನ್ಯಾ" ಅನ್ನುವುದಿಲ್ಲ. "ಆದಷ್ಟು ವರ್ಷ ಭವೇತ್ ಕನ್ಯಾ" ಎಂದಾಗಿದೆ. ಮಗಳೂ ತಿಳಿದವಳು. ವಿದ್ಯಾವಂತೆ. ಸಮಾಜವೂ ಎಷ್ಟೋ ಬದಲಾಗಿದೆ. ಆದರೂ ಮಾತೃ ಹೃದಯ ಚೀರುತ್ತಲೇ ಇದೆ. ಇದು ಮಗಳ ಮದುವೆಯ ನಂತರದ ಕಥೆ. 

*****

ಮೇಲಿನ ಸಂಗತಿಗಳು ಕೇವಲ ಐವತ್ತು-ಅರವತ್ತು ವರುಷಗಳ ಸಂಗತಿಯಲ್ಲ. ಎರಡು ಸಾವಿರ ವರುಷಗಳ ಹಿಂದೆಯೂ ಇದೇ ಪರಿಸ್ಥಿತಿ ಇತ್ತು. "ಸ್ವಪ್ನ ವಾಸವದತ್ತಮ್" ನಾಟಕ ಚಿರಪರಿಚಿತ. ಭಾಸ ಮಹಾಕವಿಯ ಈ ನಾಟಕ ಎರಡು ಸಾವಿರ ವರುಷಗಳ ಹಿಂದಿನದು ಎನ್ನುವ ಅಭಿಪ್ರಾಯವಿದೆ. ಮಹಾಕವಿ ಕಾಳಿದಾಸ ತನ್ನ "ಮಾಳವಿಕಾಗ್ನಿಮಿತ್ರ" ನಾಟಕದ ಪ್ರಾರಂಭದಲ್ಲಿ ಭಾಸ, ಸೌಮಿಲ್ಲ, ಕವಿಪುತ್ರ ಮೊದಲಾದ ತನಗಿಂತ ಹಿಂದಿನ ಪ್ರಸಿದ್ಧ ಕವಿಗಳ ನಾಟಕಗಳನ್ನು ನೆನೆಸಿಕೊಳ್ಳುತ್ತಾನೆ. ಆರು ಅಂಕಗಳ ಈ ನಾಟಕದ ಹಿಂದಿನ ಭಾಗ ನಾಲ್ಕು ಅಂಕಗಳ ಇನ್ನೊಂದು ನಾಟಕ "ಪ್ರತಿಜ್ನಾಯೌಗಂಧರಾಯಣಮ್". ಯೌಗಂಧರಾಯಣ ವತ್ಸರಾಜನಾದ ಉದಯನನ ಪ್ರಧಾನ ಮಂತ್ರಿ. 

ಈ ಪ್ರತಿಜ್ನಾಯೌಗಂಧರಾಯಣಮ್ ನಾಟಕದ ಎರಡನೇ ಅಂಕದಲ್ಲಿ ವಾಸವದತ್ತೆಯ ತಂದೆಯಾದ ಪ್ರದ್ಯೋತ ಮಹಾರಾಜನ ಪಾತ್ರ ರಂಗದ ಮೇಲೆ ಹೇಳುವ ಒಂದು ಶ್ಲೋಕವು ಹೀಗಿದೆ:

ಅದತ್ತೇತಿ ಆಗತಾ ಲಜ್ಜಾ ದತ್ತೇತಿ ವ್ಯಥಿತಂ ಮನಃ 
ಧರ್ಮಸ್ನೇಹಾಂತರೇ ನ್ಯಸ್ತಾ ದುಃಖಿತಾಃ ಖಲು ಮಾತರಃ 

(ವಿವಾಹಯೋಗ್ಯ ವಯಸ್ಸು ತಲುಪಿದ ತನ್ನ ಒಬ್ಬ ಮಗಳು ಮನೆಯಲ್ಲಿದ್ದಾಗ) ಮೊದಲು ಮದುವೆ ಮಾಡಿಕೊಡಲಿಲ್ಲವಲ್ಲಾ ಎಂದು ನಾಚಿಕೆಯಿಂದ ಕೊರಗು. ವಿವಾಹದ ನಂತರ ಮಗಳು ಮನೆ ಬಿಟ್ಟು ಹೋಗುವಳಲ್ಲಾ ಎಂದು ಕೊರಗು. ಹೀಗೆ, ತಾಯಿಯರು ಅತ್ತ ಕಡೆ ತಾಯಿಯಾಗಿ ಮಾಡಬೇಕಾದ ಕರ್ತವ್ಯ  ಮತ್ತು ಇತ್ತ ಕಡೆ ಮಗಳ ಮೇಲಿನ ಅತಿಶಯವಾದ ಪ್ರೀತಿ, ಇವೆರಡರ ನಡುವೆ ತೊಳಲಿ ಬಳಲುವರು. 

ಎರಡು ಸಾವಿರ ವರುಷ ಹಿಂದೆ ವಾಸವದತ್ತೆಯ ಕಾಲದಲ್ಲಿದ್ದಂತೆ, ಕೆಲವು ದಶಕಗಳ ಹಿಂದೆಯೂ ಇತ್ತು. ಈಗ ಅದರ ತೀವ್ರತೆ ಇಳಿದಿದ್ದರೂ ಅದರ ಒಟ್ಟಾರೆ ಪರಿಣಾಮ ತಾಯಿಯರ ಮೇಲೆ ಅದೇ ರೀತಿ ಇರುವುದು. ಇದು ಮಾತೆಯರಿಗೆ ಚೆನ್ನಾಗಿ ಗೊತ್ತು. ಇತರರಿಗೆ ಅಷ್ಟು ವಿಶದವಾಗಿ ಗೊತ್ತಾಗದಿರಬಹುದು.

*****

ಮನುಷ್ಯನ ಜೀವನದಲ್ಲಿ ಅನೇಕ ಮುಖ್ಯ ಘಟ್ಟಗಳಿರುತ್ತವೆ. ಆಯುಪ್ರಮಾಣದ ದೃಷ್ಟಿಯಿಂದ ನಮ್ಮ ಸಂಪ್ರದಾಯಗಳಲ್ಲಿ ಐದು ಪ್ರಮುಖ ಘಟ್ಟಗಳನ್ನು ಗುರುತಿಸಿದ್ದಾರೆ. ಹುಟ್ಟಿನಿಂದ ಅರವತ್ತು ವರುಷಗಳ ಉಗ್ರರಥ ಶಾಂತಿ, ಎಪ್ಪತ್ತು ವರುಷಗಳ ಭೀಮರಥ ಶಾಂತಿ, ಸಹಸ್ರ (ಒಂದು ಸಾವಿರ) ಪೂರ್ಣ ಚಂದ್ರ (ಹುಣ್ಣಿಮೆ ಚಂದ್ರ) ದರ್ಶನ ಶಾಂತಿ, ಪ್ರಪೌತ್ರ ದರ್ಶನ ಶಾಂತಿ (ಮೊಮ್ಮಗನ ಮಗನ ಜನನ), ಮತ್ತು ಶತಮಾನ (ಒಂದು ನೂರು ವರುಷಗಳ ಜೀವನ) ಶಾಂತಿ.  ಇವುಗಳ ಬಗ್ಗೆ ಈ ಹಿಂದೆ (2012 ಫೆಬ್ರವರಿಯಲ್ಲಿ) ಈ ಬ್ಲಾಗಿನಲ್ಲಿ ನೋಡಿದ್ದೇವೆ. ಸಹಸ್ರ ಪೂರ್ಣಚಂದ್ರ ದರ್ಶನ ಶಾಂತಿಯ ಬಗ್ಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಸುಮಾರು 81 ವರ್ಷ 2 ತಿಂಗಳುಗಳಿಗೆ ಈ ಘಟ್ಟ ಬರುತ್ತದೆ. 

ಎಂಭತ್ತು ವರುಷಗಳ ಹುಟ್ಟು ಹಬ್ಬ ಆಚರಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅಂದಾಜುಗಳ ಪ್ರಕಾರ ನೂರಕ್ಕೆ ಐದಾರು ಮಂದಿ ಮಾತ್ರ ಈ ಘಟ್ಟ ತಲಪುತ್ತಾರೆ. ಎಂಭತ್ತರ ಹುಟ್ಟು ಹಬ್ಬ ಈ ಕಾರಣದಿಂದ ಒಂದು ವಿಶೇಷವೇ. ಇದೇ ರೀತಿ ಒಂದು ಪುಸ್ತಕವನ್ನು ಬರೆಯಲು ಪ್ರಾರಂಭಿಸಿ, ಮುಗಿಸಿ, ಮುದ್ರಿಸಿ, ಪ್ರಕಟಿಸುವ ಯಶಸ್ಸು ನೂರಕ್ಕೆ ಒಬ್ಬರಿಗಿಂತಲೂ (ಶೇಕಡಾ ೦.4 ಎಂದು ಒಂದು ಅಂದಾಜು) ಕಡಿಮೆ ಜನರಿಗೆ ಸಿಕ್ಕುವುದು. ಪುಸ್ತಕ ಬಿಡುಗಡೆ ಒಂದು ಸಾಧನೆ. ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿ ಮನುಷ್ಯನೂ ಒಬ್ಬ ಕವಿಯೇ. ಹೆಚ್ಚಿನವರಿಗೆ ಅದು ಒಂದು ಮಿಂಚಿನಂತೆ ಬಂದು ಮಾಯವಾಗುವುದು. ಅದು ಬೌದ್ಧಿಕವಿರಬಹುದು ಅಥವಾ ಭಾವನಾತ್ಮಕ ಇರಬಹುದು. ಬುದ್ಧಿಯಲ್ಲಿ ಅಥವಾ ಮನಸ್ಸಿನಲ್ಲಿ ಬಂದ ಹೊಳಹುಗಳನ್ನು ಕಾಗದದ ಮೇಲೆ ಇಳಿಸುವುದು ಅಪರೂಪ. ಅವೆಲ್ಲವನ್ನೂ ಒಂದೆಡೆ ಸೇರಿಸಿ, ಪರಿಷ್ಕರಿಸಿ, ಪ್ರಕಟಿಸುವುದು ಅನೇಕರಿಗೆ ಸಾಧ್ಯ ಆಗುವುದಿಲ್ಲ. ಇದಕ್ಕೆ ಮತ್ತೆ ಕೆಲವರ ಒತ್ತಾಸೆಯೂ ಬೇಕಾಗುತ್ತದೆ. ಇದು ಇನ್ನೊಂದು ರೀತಿಯ ಭಾಗ್ಯ. 

ಈ ಎರಡೂ ರೀತಿಯ ಭಾಗ್ಯಗಳು ಒಟ್ಟಾಗಿ ಸಿಗುವುದು ಎಷ್ಟು ಅಪರೂಪ ಎಂದು ಇನ್ನೊಮ್ಮೆ ಹೇಳಬೇಕಾಗಿಲ್ಲ. ಕಳೆದ ಭಾನುವಾರ (18 ಜನವರಿ 2026) ಇಂತಹ ಸುಂದರ ಸಮಾರಂಭವೊಂದು ಬೆಂಗಳೂರಿನಲ್ಲಿ ನಡೆಯಿತು. "ಸಮನ್ವಯ" ಅನ್ನುವ ಕವನ ಸಂಕಲನ ಬಿಡುಗಡೆ ಆಯಿತು. 

ಶೈಲಾ ಬಿ. ಅಗಡಿ ಅವರು ಕನ್ನಡ ಮತ್ತು ಹಿಂದಿಯಲ್ಲಿ ಆಗಾಗ ಬರೆದು ಜೋಪಾನವಾಗಿಟ್ಟಿದ್ದ ಕವನಗಳನ್ನು ಅವರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಒಟ್ಟುಗೂಡಿಸಿ, ಮುದ್ರಿಸಿ ಅಂದು ಬಿಡುಗಡೆ ಮಾಡಿದರು. ಪುಸ್ತಕದ ಚಿತ್ರವನ್ನು ಮೇಲುಗಡೆ ನೋಡಬಹುದು. 

*****

"ಸಮನ್ವಯ" ಕವನ ಸಂಕಲದಲ್ಲಿ ಇರುವ ಕವನಗಳಲ್ಲಿ "ಮಡಿಲ ಅಳಲು" ಮತ್ತು "ಸ್ವ-ಸಾಂತ್ವನ" ಎನ್ನುವ ಎರಡು ಕವನಗಳು ಮೇಲೆ ಚರ್ಚಿಸಿದ ಒಬ್ಬ "ತಾಯಿಯ ತೊಳಲಾಟ" ಕುರಿತಾದ ವಸ್ತುವನ್ನು ಬಿಂಬಿಸುವುವು. 

"ಮಡಿಲ ಅಳಲು" ಕವನದ ಕೆಲವು ಸಾಲುಗಳು:

ತುತ್ತು ಉಣುವ ಪುಟ್ಟ ಹಕ್ಕಿಗೆ 
ಹೊಂಬಣ್ಣದ ರೆಕ್ಕೆ ಮೂಡಿರಲು 
ಹೆತ್ತೊಡಲು ಬರಿದು ಮಾಡುವ 
ಸಂಚು ಹೂಡಿರಲು, ಪಣ ತೊಟ್ಟಿರಲು 
ಕಂದಾ, ನೀ ಮಡಿಲ ತೊರೆದು ಪೊದೆಯಾ? 

ಹೀಗೆ ದುಃಖಿಸುವ ಮಾತೃಹೃದಯ ತನಗೆ ತಾನೇ ಕೊಡುವ ಉತ್ತರ "ಸ್ವ-ಸಾಂತ್ವನ" ಕವನ. ಅದರ ಕೆಲವು ಸಾಲುಗಳು:

ಮರಳಿ ಪಡೆಯುವ ಅತಿಯಾಸೆ ಬೇಡ ನಿನಗೆ 
ಕುಸುಮಕೆ ಪ್ರೀತಿಯ  ಧಾರೆಯೆರೆಯನೆರೆವವರು 
ಮತ್ತೂ ಇಹರೆಂಬುದ ನೀ ಮರೆಯದಿರು 
ನೀ ನಡೆದು ಬಂದ ಪಥವ ಮರೆತೆಯಾ? 

ಹೀಗೆ  ತೊಳಲಾಡುವ ಪ್ರತಿ ತಾಯಿಯೂ ಹಿಂದೆ ಒಂದು ದಿನ ಇದೇ ರೀತಿ ತನ್ನ ಹುಟ್ಟಿನ ಗೂಡನ್ನು ತೊರೆದು ಬಂದವಳೇ ಅಲ್ಲವೇ? ಈಗ ಗೂಡು ಬಿಟ್ಟು ಹಾರುತ್ತಿರುವ ಹಕ್ಕಿಯೂ ಮುಂದೆ ಒಂದು ದಿನ ಇದೇ ಹಂತ ತಲುಪುವವಳಲ್ಲವೇ? ಇದೇ ತಾನೇ ಸೃಷ್ಟಿಯ ಮತ್ತು ಸಮಾಜದಲ್ಲಿ ಜೀವನ ನಡೆಸುವ ಸೊಬಗು?

*****

ಎರಡು ಹಿರಿಮೆಯ ಘಟ್ಟಗಳನ್ನು ದಾಟಿ, ಎಂಭತ್ತರ ವಿಶೇಷ ಹುಟ್ಟುಹಬ್ಬದ ಆಚರಣೆ ಮತ್ತು ಕವನ ಸಂಕಲನದ ಬಿಡುಗಡೆ ಸುಸಂದರ್ಭದಲ್ಲಿ ಶ್ರೀಮತಿ ಶೈಲಾ ಅವರಿಗೆ ಅನೇಕ ಸಾದರ ಶುಭಾಶಯಗಳು.

Friday, January 9, 2026

ಮನಸ್ಸು ನಿಲ್ಲಿಸುವ ಪ್ರಯತ್ನ


ಹಿಂದಿನ ಸಂಚಿಕೆಯಲ್ಲಿ "ಹದಿನಾರು ಮತ್ತು ಇಪ್ಪಂತ್ತೊಂದು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಹುಟ್ಟಿ ಬೆಳೆದ ರೀತಿಯ ಮತ್ತು ಅದರ ಜನ್ಮದಾತ ಎಂದು ಹೇಳುವ ಕಪಿಲ ಮುನಿ ಬಗ್ಗೆ ಸ್ವಲ್ಪ ವಿಚಾರ ಮಾಡಿದೆವು. ಕರ್ದಮ ಪ್ರಜಾಪತಿ ಮತ್ತು ದೇವಹೂತಿ ದೇವಿಯರ ಮಗನಾದ ಕಪಿಲನಾಗಿ ಶ್ರೀ ಮಹಾವಿಷ್ಣುವು ಅವತರಿಸಿದ ಸಮಾಚಾರವನ್ನು ನೋಡಿದೆವು. ಪ್ರಜಾಪತಿ ಕರ್ದಮ-ದೇವಹೂತಿ-ಕಪಿಲ ಮುನಿಗಳ ಕಾರ್ಯಕ್ಷೇತ್ರವಾದ ಗುಜರಾತು ರಾಜ್ಯದ ಪಾಟನ್ ಜಿಲ್ಲೆಯಲ್ಲಿರುವ ಸಿದ್ಧಿಪುರ, ಅಲ್ಲಿನ ಪ್ರಸಿದ್ಧ ಬಿಂದು ಸರೋವರ ಮತ್ತು "ಮಾತೃಗಯಾ" ಕ್ಷೇತ್ರದ ಬಗ್ಗೆ ನೋಡಿದ್ದೆವು. 

"I Salute You, Dear Mother" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಹೆತ್ತ ತಾಯಿ ನೆನಪಿನಲ್ಲಿ ತಾಯಿಯನ್ನು ಉದ್ದೇಶಿಸಿ ಮಾಡುವ ಹದಿನಾರು ಸಂಖ್ಯೆಯ ಪಿಂಡಪ್ರದಾನ ಮತ್ತು ಪ್ರತಿ ಪಿಂಡ ಕೊಡುವ ಸಂದರ್ಭದಲ್ಲಿ ಹೇಳುವ ಶ್ಲೋಕಗಳು, ಅವುಗಳಲ್ಲಿರುವ ಭಾವ ತುಂಬಿದ ಅರ್ಥಗಳನ್ನೂ ನೋಡಿದೆವು. 

ಇದೇ ವಿಷಯಕ್ಕೆ ಸಂಬಂಧಿಸಿದ ಈ ಹಿಂದಿನ ಎರಡು ಸಂಚಿಕೆಗಳನ್ನು (ಒಂದು ಇಂಗ್ಲೀಷಿನಲ್ಲಿದೆ) ಇಲ್ಲಿ ಕ್ಲಿಕ್ ಮಾಡಿ ಓದಬಹುದು. 
*****

ಬಿಹಾರ ರಾಜ್ಯದಲ್ಲಿರುವ "ಗಯಾ" ಕ್ಷೇತ್ರದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶ್ರದ್ದಾಳು ಜನಗಳು ಈ ಗಯಾ ಕ್ಷೇತ್ರ ಯಾತ್ರೆ ಮಾಡಿ ಅಲ್ಲಿರುವ "ಗದಾಧರ" ದೇವಾಲಯದಲ್ಲಿ ಪಿತೃಶ್ರಾದ್ಧ ಮಾಡಿ, ಗದಾಧರನ ವಿಗ್ರಹದ ಮುಂದುಗಡೆ ಇರುವ ಕಲ್ಲಿನ "ವಿಷ್ಣುಪಾದ" ಸ್ಥಳದಲ್ಲಿ ಪಿಂಡಗಳನ್ನು ವಿಸರ್ಜನೆ ಮಾಡಿದರೆ ಪಿತೃಗಳಿಗೆ ಉತ್ತಮ ಗತಿ ಸಿಗುವುದೆಂದು ನಂಬಿಕೆ. ಸಾಮಾನ್ಯವಾಗಿ ಕಾಶಿಯಾತ್ರೆ ಮಾಡುವ ಯಾತ್ರಿಕರು ಮೊದಲು ಪ್ರಯಾಗ ತಲುಪಿ, ಅಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ (ಕೆಲವರು "ವೇಣೀದಾನ" ಸಹ ಮಾಡುತ್ತಾರೆ), ನಂತರ ಕಾಶಿಯ ವಿಶ್ವೇಶ್ವರ ಮತ್ತು ಬಿಂದುಮಾಧವ ದರ್ಶನ ಮಾಡಿ, ಆಮೇಲೆ ಗಯಾ ತಲುಪಿ ಅಲ್ಲಿ "ಸರ್ವ ಪಿತೃ ಶ್ರಾದ್ಧ" ಮಾಡುತ್ತಾರೆ. ಅಲ್ಲಿಗೆ "ಕಾಶಿಯಾತ್ರೆ" ಎಂದು ಹೇಳುವ ಸಂಪ್ರದಾಯ ಪದ್ಧತಿ ಪೂರ್ತಿ ಆಯಿತು ಎಂದು ನಂಬುತ್ತಾರೆ. 

ಗದಾಧರ ಅಂದರೆ ಯಾರು? ಗದಾಧರ ಅನ್ನುವ ಶ್ರೀ ಮಹಾವಿಷ್ಣುವನ್ನು ಹೀಗೆ ವರ್ಣಿಸಿ ಹೇಳುತ್ತಾರೆ:

ಬ್ರಹ್ಮಾಂಡ ಭುವನಾರಂಭ ಮೂಲಸ್ತoಭೋ ಗದಾಧರಃ 
ಕೌಮೋದಕೀ ಕರೇ ಯಸ್ಯ ತಂ ನಮಾಮಿ ಗದಾಧರಮ್ 

ಕೈಯಲ್ಲಿ "ಕೌಮೋದಕೀ" ಹೆಸರಿನ ಗದೆ ಹಿಡಿದು ಈ ಬ್ರಹ್ಮಾಂಡಕ್ಕೆ ಆಧಾರವಾದ ಕಂಭದಂತೆ ನಿಂತಿರುವ ಶ್ರೀ ಮಹಾವಿಷ್ಣುವೇ ಗದಾಧರ.

ಪಕ್ಕದಲ್ಲಿ ಕೊಟ್ಟಿರುವ ಗಯಾ ದೇವಾಲಯದ ಮೂಲ ಮೂರ್ತಿ ಚಿತ್ರವನ್ನು ನೋಡಿದರೆ ಕೌಮೋದಕಿ ಗದೆಯನ್ನು ಕಾಣಬಹುದು

ಭೂಮಿಯ ಯಾವ ಪ್ರದೇಶದಲ್ಲಿ ಶ್ರಾದ್ಧ ಮಾಡಿ "ಪಿಂಡಪ್ರದಾನ" ಮಾಡಿದರೂ ಅದು ಭೂಲೋಕದಲ್ಲಿ ಮಾಡಿದಂತೆ ಆಗುತ್ತದೆ. ಆದರೆ ಗಯಾದಲ್ಲಿರುವ ಗದಾಧರನ ಪಾದದ ಮೇಲೆ ಅದನ್ನು ಅರ್ಪಿಸಿದಾಗ ಅದು ಅನಂತ ವಿಶ್ವದ ಮೂಲ ಕಂಭದಂತೆ ನಿಂತಿರುವ ಶ್ರೀಹರಿಯ ಪದತಲದಲ್ಲಿ ಅರ್ಪಿಸಿದಂತೆ. ಈ ಕಾರಣಕ್ಕಾಗಿ ಗಯಾ ಪಿಂಡಪ್ರದಾನಕ್ಕೆ ವಿಶೇಷ ಮಹತ್ವ. 

ಗಯಾ ದೇವಾಲಯದ ಈ ಗದಾಧರ ಮೂರ್ತಿಯ ಮುಂಭಾಗದಲ್ಲಿ ಇರುವ ಅವನ ಪಾದವನ್ನು ಸ್ವಲ್ಪ ಕೆಳಗಡೆ ಕೊಟ್ಟಿರುವ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಮಹಾವಿಷ್ಣುವಿನ ಪಾದದಲ್ಲಿರುವ ಧ್ವಜ, ವಜ್ರ, ಅಂಕುಶ ಮುಂತಾದ ರೇಖಾ ಲಕ್ಷಣಗಳನ್ನು ಕಾಣಬಹುದು. ಇವುಗಳ ವಿಶೇಷವನ್ನು ಮುಂದೆ ಸ್ವಲ್ಪ ಮಟ್ಟಿಗೆ ನೋಡೋಣ. 

ಪ್ರತಿದಿನ ಸಾವಿರಾರು ಯಾತ್ರಿಕರು ಈ "ವಿಷ್ಣುಪಾದ" ಇರುವ ಕಲ್ಲಿನ ಮೇಲೆ ಪಿಂಡಪ್ರದಾನ ಮಾಡುತ್ತಾರೆ. ಈ ಕಾರಣದಿಂದ ಅಲ್ಲಿ ರಾಶಿ ರಾಶಿ ಪಿಂಡಗಳು ಬಿದ್ದಿರುತ್ತವೆ. ಕೆಲವು ನಿಮಿಷಗಳಿಗೊಮ್ಮೆ ದೇವಾಲಯದ ಕಾರ್ಯಕರ್ತರು ಈ ಪ್ರದೇಶವನ್ನು ಸ್ವಚ್ಛ ಮಾಡುತ್ತಾರೆ. ಕೆಲವರು ಈ ಸಮಯಕ್ಕಾಗಿ ಕಾದುಕೊಂಡಿದ್ದು ಆ ಚಿನ್ಹೆಯಮೇಲೆ ಪಿಂಡಗಳನ್ನು ಹಾಕಿ ಧನ್ಯತಾ ಭಾವ ಹೊಂದುತ್ತಾರೆ. 

ಕೆಲವು ಕುಟುಂಬಗಳಲ್ಲಿ, ವಿಶೇಷವಾಗಿ ವೈಷ್ಣವರಲ್ಲಿ, ಮನೆ-ಮಠಗಳಲ್ಲಿ ಮಾಡುವ ಶ್ರಾದ್ಧ ಸಮಯದಲ್ಲಿ ಹೀಗೆ ಗಯಾಯಾತ್ರೆಯ ಸಮಯದಲ್ಲಿ ಅಲ್ಲಿಂದ ತಂದಿರುವ ತಾಮ್ರದ ವಿಷ್ಣು ಪಾದ ಇಟ್ಟು ಪೂಜಿಸಿ, ಅದರ ಮೇಲೆ ಪಿಂಡಪ್ರದಾನ ಮಾಡುವ ಪದ್ಧತಿ ಈಗಲೂ ನಡೆದುಬಂದಿದೆ. 

******

ಹಿಂದಿನ ಸಂಚಿಕೆಯಲ್ಲಿ ತಾಯಿ ದೇವಹೂತಿ ಮತ್ತು ಮಗ ಕಪಿಲ ಮುನಿಯ ಸಂವಾದವನ್ನು ಸ್ವಲ್ಪ ನೋಡಿದೆವು. ಜೀವನ-ಮರಣ ಚಕ್ರದಿಂದ ಬಿಡುಗಡೆ ಹೊಂದಲು ಯಾವ ದಾರಿ ಹಿಡಿಯಬೇಕೆಂಬ ಬಗ್ಗೆ ದೇವಹೂತಿ ಕೇಳಿದ ಪ್ರಶ್ನೆಗಳಿಗೆ ಮಗನಾದ ಕಪಿಲ ಮುನಿ ನೀಡಿದ ಉತ್ತರರೂಪದ ಉಪದೇಶ ಶ್ರೀಮದ್ ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. ಮಹಾಭಾರತದ ಮಧ್ಯದಲ್ಲಿ ಕುರುಕ್ಷೇತ್ರದ ಯುದ್ಧ ಪ್ರಾರಂಭವಾಗುವ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತಿಳಿಸಿದ "ಶ್ರೀಮದ್ ಭಗವದ್ಗೀತೆ" ಗೀತೆ ಎಂಬ ಹೆಸರಿಂದ ಪ್ರಸಿದ್ಧವಾಗಿದೆ. ಭಾಗವತದ ಮೂರನೆಯ ಸ್ಕಂಧದ ಈ "ಕಪಿಲ ಗೀತೆ" ಮತ್ತು ಹನ್ನೊಂದನೆಯ ಸ್ಕಂಧದ ಶ್ರೀಕೃಷ್ಣ ಉದ್ಧವನಿಗೆ ಮಾಡಿದ ಉಪದೇಶದ "ಉದ್ಧವ ಗೀತೆ" ಇವುಗಳು ಕೂಡ ಭಗವದ್ಗೀತೆಯಂತೆಯೇ ಅನೇಕ ಸಾರಯುತ ವಿಷಯಗಳನ್ನು ಒಳಗೊಂಡಿವೆ. 

ಜೀವನ-ಮರಣ ಚಕ್ರದಿಂದ ಬಿಡುಗಡೆಗಾಗಿ ಮಾಡುವ ಸಾಧನೆಯ ಮೊದಲ ಮೆಟ್ಟಿಲು ನಮ್ಮ ಮನಸ್ಸನ್ನು ನಿಯಂತ್ರಿಸಿ ಗಟ್ಟಿ ಮಾಡುವ ಕೆಲಸ. ನಮ್ಮ ಮನಸ್ಸು ಇಡೀ ಪ್ರಪಂಚದಲ್ಲಿ ಅತಿ ವೇಗವಾಗಿ ಓಡುವ ವಸ್ತು. ಅದಕ್ಕೇ ವೇಗದ ಸುದ್ದಿ ಬಂದಾಗಲೆಲ್ಲಾ ವಾಯುವೇಗ, ಮನೋವೇಗ ಅನ್ನುವುದು. ವಾಯುವೇಗಕ್ಕೂ ಮೀರಿದುದು ಮನೋವೇಗ. ಒಂದೇ ಕ್ಷಣದಲ್ಲಿ ವಿಶ್ವವನ್ನೆಲ್ಲಾ ಸುತ್ತಿ ಬರುವುದು ಅದು. ಯಾವುದೇ ಸಾಧನೆಯ ಕೆಲಸ ಮಾಡಲು ತೊಡಗಿದಾಗ ಈ ಮನಸ್ಸನ್ನು ನಿಯಂತ್ರಿಸುವುದೇ ದೊಡ್ಡ ಕಷ್ಟದ ಕಾರ್ಯ. 

ಕಪಿಲ ಮುನಿಯ ಉಪದೇಶದಲ್ಲಿ ಇದಕ್ಕೆ ಪರಿಹಾರ ಸಿಕ್ಕುತ್ತದೆ. ಪ್ರಾರಂಭದಲ್ಲಿ ಎಲ್ಲ ಕೆಲಸಗಳೂ ಕಷ್ಟವೇ. ಹುಟ್ಟಿದ ಮಗು ವರುಷ ತುಂಬುವ ವೇಳೆಗೆ ನಡೆಯಲು ಪ್ರಾರಂಭಿಸುತ್ತದೆ. ಅನೇಕ ಸಲ ಬೀಳುತ್ತದೆ. ಮೊದಲು ಗೋಡೆ ಹಿಡಿದು ನಡೆಯುತ್ತದೆ. ನಂತರ ತಾಯಿಯ ಕೈಬೆಟ್ಟು ಹಿಡಿದು ನಡೆಯುತ್ತದೆ. ಕ್ರಮೇಣ ತಾನೇ ಮೆಲ್ಲಮೆಲ್ಲನೆ ನಡೆಯುತ್ತದೆ. ಬಿದ್ದಾಗ ಮತ್ತೆ ಮೇಲೇಳುತ್ತದೆ. ಹೀಗೆ ಮಾಡುತ್ತ ಮಾಡುತ್ತಾ ಕಲಿಯುತ್ತದೆ. ಮನಸ್ಸಿನ ಹತೋಟಿಯೂ ಹೀಗೆಯೇ. 

ಕಪಿಲ ಮುನಿಯು ಇದಕ್ಕೆ ಉಪಾಯವಾಗಿ "ಸಜ್ಜನರ ಸಹವಾಸ" ಎನ್ನುವ ಪರಿಹಾರ ಹೇಳುತ್ತಾನೆ. ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರು "Tell me who is your friend; I will tell you who you are" ಎಂದು ಒಂದು ಗಾದೆ ಹೇಳುತ್ತಿದ್ದರು. ಜೊತೆಯವರು ಸೋಮಾರಿಗಳಾದರೆ ನಾವೂ ಸೋಮಾರಿಗಳಾಗುತ್ತೇವೆ. ಅವರು ದುರಭ್ಯಾಸಗಳ ದಾಸರಾಗಿದ್ದಾರೆ ನಾವೂ ಹಾಗಾಗುತ್ತೇವೆ. ಅವರು ನಡೆಯುವ ರೀತಿಯೇ ನಮಗೆ ಮಾದರಿ ಆಗುತ್ತದೆ. ಸಾಧನೆಯಲ್ಲಿಯೂ ಹೀಗೆಯೇ. ಆದ್ದರಿಂದ ಮೊದಲು ಸಜ್ಜನರನ್ನು ಹುಡುಕಿ ಅವರ ಸಂಗದಲ್ಲಿ ಆದಷ್ಟೂ ಹೆಚ್ಚು ಕಾಲ ಕಳೆಯಬೇಕು. ಶ್ರೀ ಮೋಹನದಾಸರ ಕೋಲೆ ಪದದಲ್ಲಿ "ಸಜ್ಜನರ ಸಹವಾಸ ಮಲ್ಲಿಗೆ ಮುಡಿದಂತೆ, ದುರ್ಜನರ ಸಂಗ ಮುಲ್ಲಂಗಿ ತಿಂದು ತೇಗಿದಂತೆ ಕೋಲೆ" ಎಂದು ಹೇಳುತ್ತಾರೆ. ಮಲ್ಲಿಗೆ ಹೂವು ಮುಡಿದು ಮಾರನೆಯ ದಿನ ಅದನ್ನು ಬಿಸಾಡಿದರೂ ತಲೆಯಲ್ಲಿ ಮಲ್ಲಿಗೆ ಸುವಾಸನೆ ಇರುವುದು. ಮೂಲಂಗಿಯೂ ಹಾಗೆ. ತಿಂದು ಎಷ್ಟೋ ಹೊತ್ತಿನಮೇಲೆ ತೇಗಿದರೂ ಅದೇ ಕಮಟು ವಾಸನೆಯೇ!

ಆಯಿತು. ಒಪ್ಪೋಣ. ಸಜ್ಜನರ ಸಂಗ ಪ್ರಾರಂಭಿಸಿದೆವು. ಅವರು ದಿನಕ್ಕೆ ಇಪ್ಪತ್ತುನಾಲ್ಕು ಗಂಟೆಯೂ ಹತ್ತಿರವಿರುವುದಿಲ್ಲ. ಮೇಲಾಗಿ, ನಾವು ಒಂಟಿಯಾಗಿದ್ದಾಗ ಮನಸ್ಸು ಹಿಡಿದಿಡುವುದು ಇನ್ನೂ ಕಷ್ಟ. ಅದಕ್ಕೆ ಏನು ಉಪಾಯ?
 
ಈ ಕಠಿಣ ಮತ್ತು ಜಟಿಲ ಸಮಸ್ಯೆಗೆ ಕಪಿಲ ಮುನಿ ಹೇಳಿ ಕೊಡುವ ಉಪಾಯವೆಂದರೆ ಒಂಟಿಯಾಗಿದ್ದಾಗಲೆಲ್ಲಾ ಪರಮಾತ್ಮನ ಪಾದದ ಬಗ್ಗೆ ಚಿಂತನೆ ಮಾಡುವುದು:

ಸಂಚಿಂತಯೇತ್ ಭಗವತಃ ಚರಣಾರವಿಂದಮo  
ವಜ್ರಾoಕುಶ ಧ್ವಜ ಸರೋರುಹ ಲಾಂಛನಾಡ್ಯo
ಉತ್ತುಂಗರಕ್ತವಿಲಸನ್  ನಖಚಕ್ರವಾಳ 
ಜ್ಯೋತ್ಸ್ನಾಭಿರಾಹತಾಮಹದ್ ಹೃದಯಾಂಧಕಾರಂ 

ಇದು ಭಾಗವತದ ಅತ್ಯಂತ ಪ್ರಸಿದ್ಧವಾದ ಶ್ಲೋಕಗಳಲ್ಲಿ ಒಂದು.

ಪರಮಾತ್ಮನ ಕಮಲಗಳಂತಿರುವ ಪಾದಗಳನ್ನು ಯಾವಾಗಲೂ ನೆನೆಯುತ್ತಿರಬೇಕು. ಅದರಲ್ಲಿ ಮಿಂಚು, ಅಂಕುಶ, ಧ್ವಜ, ಕಮಲ ಮುಂತಾದ ರೇಖೆಗಳಿವೆ. ಆ ಪಾದದ ಬೆರಳುಗಳ ಉಗುರುಗಳಿಂದ ಸದಾಕಾಲವೂ ಚಂದ್ರನ ಬೆಳದಿಂಗಳಿಗಿಂತಲೂ ಅಧಿಕವಾದ (ಬೆಳಕು ಬೆಳದಿಂಗಳಿಗಿಂತ ಕೋಟಿ ಕೋಟಿ ಬಹುಪಾಲು ಹೆಚ್ಚು. ಆದರೆ ಸೂರ್ಯನ ಬೆಳಕಿನಂತೆ ಕಣ್ಣು ಕುಕ್ಕುವುದಲ್ಲ. ಹೀಗೆ) ಆದರೆ ಹಿತವಾದ ಪ್ರಕಾಶ ಹೊರಹೊಮ್ಮುತ್ತಿರುತ್ತದೆ. ಈ ಬೆಳದಿಂಗಳ ಬೆಳಕು ನಮ್ಮ ಹೃದಯ, ಮನಸ್ಸುಗಳಲ್ಲಿರುವ ಕತ್ತಲನ್ನು ಹೊರದೋಡಿಸುತ್ತದೆ. (ಒಮ್ಮೆ ಆ ಕತ್ತಲೆ ಹೋದರೆ ಮುಂದೆ ಎಲ್ಲವೂ ಸುಗಮವಾಗುವುದು ಎಂದು ಭಾವ). 


ಕೊಟ್ಟಿರುವ ಚಿತ್ರವನ್ನು ಹಿಗ್ಗಿಸಿ ನೋಡಿದರೆ ಅಥವಾ ಪಕ್ಕದಲ್ಲಿ ಕೊಟ್ಟ್ಟಿರುವ ತಾಮ್ರದ ವಿಷ್ಣುಪಾದವನ್ನು ನೋಡಿದರೆ ಈ ರೇಖೆಗಳನ್ನು ಚೆನ್ನಾಗಿ ಕಾಣಬಹುದು. 
*****

ನಮ್ಮ ಮನಸ್ಸುಗಳೂ ಮದವೇರಿದ ಆನೆಗಳಂತೆ. ದಿಕ್ಕಾಪಾಲಾಗಿ ಓಡುತ್ತಿರುತ್ತವೆ. ಎಂತಹ ಮದಿಸಿದ ಆನೆಯಾದರೂ ಮಾವುತನ ಅಂಕುಶ ಅದನ್ನು ಒಂದು ನಿಮಿಷದಲ್ಲಿ ಹಿಡಿತಕ್ಕೆ ತರಬಲ್ಲದು. ಪರಮಾತ್ಮನ ಪಾದಗಳ ಚಿಂತನೆಯಿಂದ ಅದರಲ್ಲಿರುವ ಅಂಕುಶ ನಮ್ಮ ಮನಸ್ಸೆಂಬ ಆನೆಗಳನ್ನು ಹಿಡಿತಕ್ಕೆ ತರುತ್ತದೆ ಎಂದು ಪರ್ಯಾಯವಾದ ಅರ್ಥ. 

ಇದೇ ವಿಷಯವನ್ನು ಶ್ರೀ ಕನಕದಾಸರು ತಮ್ಮ "ಕೇಶವನಾಮ" ಕೃತಿಯಲ್ಲಿ (ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನೋ) ಹೀಗೆ ಹೇಳುತ್ತಾರೆ:

ಹಿಂದನೇಕ ಯೋನಿಗಳಲಿ ಬಂದುಬಂದು ನೊಂದೆನಯ್ಯ 
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದಾ 

ಭಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ 
ಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸೋ ವಿಷ್ಣುವೇ  

ಈ ಸಜ್ಜನರ ಸಂಗವನ್ನೇ "ಸತ್ಸಂಗ" ಎಂದು ಪ್ರೀತಿಯಿಂದ ಕರೆಯುವುದು. ಮನಸ್ಸು ನಿಲ್ಲಿಸುವುದು ಬಲು ಕಷ್ಟ. ಆದರೂ ಸತತ ಪ್ರಯತ್ನದಿಂದ ಮತ್ತು ಸಜ್ಜನರ ಸಹವಾಸದಿಂದ ಅದನ್ನು ಸಾಧಿಸಬೇಕು. 

Thursday, January 1, 2026

ಹದಿನಾರು ಮತ್ತು ಇಪ್ಪತ್ತೊಂದು


ಅದೊಂದು ಬಲು ಸುಂದರವಾದ ಮಗು. ಆಗ ತಾನೇ ಹುಟ್ಟಿದ ಕೂಸು. ಅರಳಿದ ಕಮಲದಲ್ಲಿ ಮಲಗಿದ್ದ ಶಿಶು. ಸ್ವಲ್ಪ ವಿಚಿತ್ರವಾದ ಹಸುಳೆ. ಎಲ್ಲಾ ಸರಿ ಇದ್ದರೂ ತಲೆಗಳು ಮಾತ್ರ ನಾಲ್ಕು! ಅದಕ್ಕೆ ಸರಿಯಾಗಿ ನಾಲ್ಕು ಕೈಗಳು. ಅತಿ ಮೋಹಕವಾದ ಶರೀರ. ಎದ್ದ ಮಗು ತಕ್ಷಣ ಕಣ್ಣು ಬಿಟ್ಟಿತು. ತನ್ನ ಸುತ್ತ-ಮುತ್ತ ನೋಡಿತು. 

ಎಲ್ಲ ಕಡೆ ಆವರಿಸಿರುವ ಕತ್ತಲು. ಯಾರೂ ಬೇರೆಯವರು ಕಾಣರು. ತಾನು ಯಾರು? ತನಗೆ ಜನ್ಮ ಕೊಟ್ಟವರು ಯಾರು? ಎಲ್ಲಿಂದ ಬಂದೆ? ಯಾವುದೂ ತಿಳಿಯದು. ಇದೇನು ವಿಚಿತ್ರ?

ಸುಮ್ಮನೆ ಇರುವಂತಹ ಮಗುವಲ್ಲ ಅದು. ತನಗೆ ಆಸರೆಯಾಗಿ, ಹಾಸಿಗೆಯಾಗಿ ಹರಡಿದ್ದ ಕಮಲವನ್ನು ಗಮನಿಸಿತು. ಅದರ ಕೆಳಗಿದ್ದ ದೊಡ್ಡ ಕಾಂಡವನ್ನು ಕಂಡಿತು. ಕಮಲದ ದೇಟಿನೊಳಗೆ ಇಳಿಯಿತು. ಇಳಿದು ಎಲ್ಲೆಡೆ ಹುಡುಕಿತು. ಅಲ್ಲಿ ಎಷ್ಟು ಹುಡುಕಿದರೂ ಯಾರೂ ಕಾಣಲಿಲ್ಲ. 

ಕಾಂಡದ ಆಳದಿಂದ ಹೊರಗೆ ಬಂದು ಅದೇ ಕಮಲದಲ್ಲಿ ಪದ್ಮಾಸನ ಹಾಕಿ ಕೂತಿತು. ಅದಕ್ಕೇನು ಭಯವಿರಲಿಲ್ಲ. ಆದರೂ ಮುಂದೆ ಏನು ಮಾಡಬೇಕೆಂಬ ಸಮಸ್ಯೆ ಎದುರಿಗೆ ಇತ್ತು. ತನಗೆ ಜನ್ಮದಾತರು ಯಾರು? ಮುಂದೆ ತನ್ನ ಕೆಲಸವೇನು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ತೊಡಗಿತು. 

*****

ಹೀಗೆ ಕುಳಿತ ಮಗುವಿಗೆ ವಿಶಾಲ ಆಕಾಶದಲ್ಲಿ ಶಬ್ದದ ಅನುಭವ ಆಯಿತು. ಮಗು ಆ ಶಬ್ದವನ್ನು ಗಮನವಿಟ್ಟು ಕೇಳಿತು. ಅದು ವಿಶ್ವದ ಮೊದಲ "ಆಕಾಶವಾಣಿ". ಶರೀರವಿಲ್ಲದ, ಆದರೆ ಚೆನ್ನಾಗಿ ಕೇಳಿಸಿದ ಧ್ವನಿ. ಅದೊಂದು "ಅಶರೀರವಾಣಿ". ಎರಡೇ ಎರಡು ಶಬ್ದಗಳು. ನಂತರ ಮತ್ತೇನಿಲ್ಲ. ಅಷ್ಟೇ.

"ಹದಿನಾರು. ಇಪ್ಪತ್ತೊಂದು."

ಹದಿನಾರು ಅನ್ನುವ ಒಂದು ಶಬ್ದ. ಇಪ್ಪತ್ತೊಂದು ಅನ್ನುವ ಇನ್ನೊಂದು ಶಬ್ದ. ಈ ಶಬ್ದಗಳ ಹಿಂದೆ ಮೌನ. ಈ ಎರಡು ಶಬ್ದಗಳ ನಂತರ ಮತ್ತೆ ಅದೇ ಮೌನದ ತಾಂಡವ. 

ಮಗು ಈ ಎರಡು ಶಬ್ದಗಳಿಗೆ ಅರ್ಥ ಹುಡುಕಿತು. ಆಗ ಅದಕ್ಕೆ ಹೊಳೆಯಿತು. ಈ ಎರಡು ಶಬ್ದಗಳು ಎರಡು ಸಂಖ್ಯೆಯನ್ನು ಹೇಳುತ್ತಿವೆ. ಈ ಸಂಖ್ಯೆಗಳ ಅರ್ಥವೇನು?  

ಒಹೋ! ಇವು ವರ್ಣಮಾಲೆಯ ಅಕ್ಷರಗಳು!

ಯಾವ ಅಕ್ಷರಗಳು? ಮೊದಲನೆಯದು ಹದಿನಾರು ಎಂದು. ಎರಡನೆಯದು ಇಪ್ಪತ್ತೊಂದು ಎಂದು. ಅಷ್ಟು ಸಂಖ್ಯೆಯ ಸ್ವರ ಅಕ್ಷರಗಳಿಲ್ಲ. ಆದ್ದರಿಂದ ಅವು ವ್ಯಂಜನಾಕ್ಷರಗಳು. 

*****

ಹದಿನಾರು. ಕ-ವರ್ಗದ ಐದು ಅಕ್ಷರಗಳು. ಚ-ವರ್ಗದ ಐದು ಅಕ್ಷರಗಳು ಟ-ವರ್ಗದ ಐದು ಅಕ್ಷರಗಳು. ಅಲ್ಲಿಗೆ ಹದಿನೈದಾಯಿತು. ತ-ವರ್ಗದ "ತ" ಅನ್ನುವುದು ಹದಿನಾರನೆಯ ಅಕ್ಷರ. 

ಮುಂದೆ ಪ-ವರ್ಗದ ಮೊದಲನೆಯ ಅಕ್ಷರ "ಪ" ಅನ್ನುವುದು ಇಪ್ಪತ್ತೊಂದನೆಯ ಅಕ್ಷರ!

ಎರಡನ್ನೂ ಕೂಡಿಸಿದರೆ "ತಪ' ಎಂದಾಯಿತು. "ತಪ" ಅಂದರೆ ಏನು? "ತಪ್ ತಪನೇ" ಎಂದು. ತಪ ಅನ್ನುವುದರ ಅರ್ಥ "ಆಲೋಚಿಸು" ಎಂದು. ಯಾವುದನ್ನಾದರೂ ಕುರಿತು ಒಂದೇ ಮನಸ್ಸಿನಿಂದ ಯೋಚಿಸುವುದನ್ನೇ ತಪಸ್ಸು ಎನ್ನುವುದು. 

ಹೀಗೆ ಯೋಚಿಸಿದಾಗ ಮಗುವಿಗೆ ಆಕಾಶವಾಣಿಯ ಎರಡು ಶಬ್ದಗಳ ಸೂಚನೆಯ ಅರ್ಥವಾಯಿತು. ಜನನಕ್ಕೆ ಕಾರಣವಾಗಿ ಹುಟ್ಟಿಸಿ ತಂದವನು "ತಂದೆ". ತನ್ನ ಜನನಕ್ಕೆ ಕಾರಣನಾದ ತಂದೆಯನ್ನು ಕುರಿತು ತಪಸ್ಸು ಮಾಡಲು ಪ್ರಾರಂಭಿಸಿತು. 
******

ಅದೇನು ಸಾಧಾರಣವಾದ ತಪಸ್ಸಲ್ಲ. ಒಂದೆರಡು ದಿನ, ವಾರ, ತಿಂಗಳುಗಳ ತಪಸ್ಸಲ್ಲ. ಒಂದೆರಡು ವರುಷಗಳ ತಪಸ್ಸೂ ಅಲ್ಲ. ಒಂದು ನೂರು ವರುಷಗಳ ತಪಸ್ಸು. ನಮ್ಮ ವರುಷದಂತೆ ಮನುಷ್ಯಮಾನದ ವರುಷವಲ್ಲ. ಬ್ರಹ್ಮದೇವರ ವಯೋಮಾನದ ಲೆಕ್ಕದ ಒಂದು ನೂರು ವರ್ಷ!

ಒಂದು ನೂರು ವರುಷದ ತಪಸ್ಸಿನ ನಂತರ ಕೂಸಿನ ತಂದೆ ಕಾಣಿಸಿಕೊಂಡ. ಅವನು ನೀರಿನ ಮೇಲೆ ಮಲಗಿದವನು."ನಾರಾ" ಅಂದರೆ ನೀರು. ಆದ್ದರಿಂದ ಅವನು "ನಾರಾಯಣ".  

ಅವನು ಮಲಗಿರುವುದು ಹಾಲಿನ ಕಡಲ ಮೇಲಲ್ಲವೇ? ಹೌದು. ಆದರೆ ಹಾಲೂ ನೀರಿನಂತೆ. ದ್ರವ ರೂಪ. ಮೇಲಾಗಿ ಇದು ನಡೆದಾಗ ಅವನು "ಪ್ರಳಯಜಲ" ಅಂದರೆ ಎಲ್ಲೆಲ್ಲೂ ಆವರಿಸಿದ್ದ ನೀರಿನ ಮೇಲೆ ಮಲಗಿದ್ದವನು. ಯಾರಾದರೂ ಒಂದು ದ್ರವದ ಮೇಲೆ ಮಲಗಲು ಸಾಧ್ಯವೇ? ಅವನಿಗೆ ಸಾಧ್ಯ. 

ಹೀಗೆ ಕಾಣಿಸಿಕೊಂಡ ತಂದೆ ನಾರಾಯಣ ಮಗ ಬ್ರಹ್ಮನಿಗೆ ನಾಲ್ಕು ಶ್ಲೋಕಗಳ ಸಂಕ್ಷಿಪ್ತವಾದ ಉಪದೇಶ ಮಾಡಿದ. ಇದೇ ಪ್ರಪಂಚದ ಮೊದಲ ಪಾಠ. ಮೊಟ್ಟ ಮೊದಲ ಶಿಕ್ಷಣ. ಅದನ್ನೇ "ಚತುಶ್ಲೋಕೀ ಭಾಗವತ" ಅನ್ನುತ್ತಾರೆ. ಈ ನಾಲ್ಕು ಶ್ಲೋಕಗಳಲ್ಲಿ ಇಡೀ ಸೃಷ್ಟಿಯ ರಹಸ್ಯವನ್ನು ಕಮಲನಾಭ ನಾರಾಯಣನು ಕಮಲಸಂಭವ ಬ್ರಹ್ಮನಿಗೆ ತಿಳಿಸಿ ಹೇಳಿದ. 

***** 

"ಪ್ರಜ್ಞೆ" ಮತ್ತು "ಪ್ರತಿಭೆ" ಅನ್ನುವ ಪದಗಳಿಗೆ ಈಗಿನ ವಾಡಿಕೆಯಲ್ಲಿ ಅನೇಕ ರೀತಿಯ ಅರ್ಥಗಳನ್ನು ಆರೋಪಿಸುತ್ತಾರೆ (ಕೊಡುತ್ತಾರೆ). 

ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಎಲ್ಲ ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ತಿಳಿಯುವ ಶಕ್ತಿಗೆ "ಪ್ರಜ್ಞೆ" ಎಂದು ಹೆಸರು. ("ನಿನಗೆ ಮೈಮೇಲೆ ಪ್ರಜ್ಞೆ ಇಲ್ಲವೇ?" ಎಂದು ಕೆಲವೊಮ್ಮೆ ಹೇಳುವುದುಂಟು. ಹೀಗೆ ಹೇಳಿದರೆ "ನಿನಗೆ ಸಮಯ-ಸಂದರ್ಭಗಳ ಹಿನ್ನೆಲೆಯಲ್ಲಿ ತಿಳಿಯುವ ಶಕ್ತಿ ಇಲ್ಲವೇ?" ಎಂದು ತಾನೇ ಕೇಳುವುದು? "ಮೈಮೇಲೆ ಎಚ್ಚರ ಇಲ್ಲವೇ?" ಅನ್ನುವುದು ಅದರ ಅರ್ಥವಲ್ಲ).

ಇದೇ ರೀತಿ ಸ್ವಲ್ಪ ವಿಷಯವನ್ನು ಹೇಳಿದರೆ ಊಹಾಪೋಹ ಮಾಡಿ ಅದನ್ನು ವಿಸ್ತರಿಸಿ ವಿಶಾಲವಾಗಿ ತಿಳಿದುಕೊಳ್ಳುವುದಕ್ಕೆ "ಪ್ರತಿಭೆ" ಎಂದು ಹೆಸರು. 

ಪ್ರಜ್ಞಾ ಮತ್ತು ಪ್ರತಿಭೆ ಇರುವವರಿಗೆ ಸ್ವಲ್ಪ ಸುಳಿವು ಕೊಟ್ಟರೆ ಸಾಕು. ಒಂದು ಸಣ್ಣ ಬೀಜ ಮುಂದೆ ಅರಳಿ ಒಂದು ದೊಡ್ಡ ಮರ ಆಗುವಂತೆ ಸೂಕ್ಶ್ಮವಾಗಿ ಹೇಳಿದ ವಿಷಯ ಅವರ ತಲೆಯಲ್ಲಿ ಅರಳಿ ಪೂರ್ತಿ ಅರಿವು ತುಂಬಿಕೊಳ್ಳುತ್ತದೆ. ಇದನ್ನೇ "ಉಗುರು ತೋರಿಸಿದರೆ ಹಸ್ತ ನುಂಗುವುದು" ಎಂದು ಹೇಳುವುದು.

ಬ್ರಹ್ಮದೇವರಿಗಿಂತ ಹೆಚ್ಚಿನ ಪ್ರಜ್ಞೆ ಮತ್ತು ಪ್ರತಿಭೆ ಈ ಜಗತ್ತಿನಲ್ಲಿ ಯಾರಿಗುಂಟು? 

***** 

ತಂದೆ ನಾರಾಯಣ ಹೇಳಿದ ಪಾಠದಿಂದ ಮುಂದಿನ ದಾರಿ ತಿಳಿದ ಚತುರ್ಮುಖ ಬ್ರಹ್ಮದೇವರು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದರು. ತನ್ನ ಮಾನಸ ಪುತ್ರರಾದ ನಾರದರಿಗೆ ಮುಂದೊಮ್ಮೆ ತಾವು ತಂದೆಯಿಂದ ಕೇಳಿದ ಭಾಗವತವನ್ನು ಉಪದೇಶಿಸಿದರು. ಕಾಲಾನಂತರ ಪರಾಶರ-ಸತ್ಯವತಿಯರ ಮಗನಾದ, ಶ್ರೀಹರಿಯ ಇನ್ನೊಂದು ರೂಪನಾದ ವೇದವ್ಯಾಸ ಮಹರ್ಷಿಯು ನಾರದರಿಂದ ಇದನ್ನು ಪಡೆದರು. ಅದನ್ನು ವಿಶಾಲವಾದ, ಹದಿನೆಂಟನೆಯ ಪುರಾಣವಾದ, ಹದಿನೆಂಟು ಸಾವಿರ ಶ್ಲೋಕದ "ಭಾಗವತ ಪುರಾಣ" ಮಾಡಿ ವಿವರಿಸಿದರು. 

ವೇದವ್ಯಾಸರು ಈ ಭಾಗವತ ಮಹಾಪುರಾಣವನ್ನು ತಮ್ಮ ಮಗನಾದ ಶುಕ ಮಹರ್ಷಿಗೆ ಕೊಟ್ಟರು. ಪರೀಕ್ಷಿತ್ ಮಹಾರಾಜನು ಶುಕಮುಖವಾಗಿ ಇದನ್ನು ಕೇಳಿದನು. ನಂತರ ಅದು ಎಲ್ಲೆಡೆ ಹರಡಿತು. 

*****

ಚತುರ್ಮುಖ ಬ್ರಹ್ಮರ ಮತ್ತೊಬ್ಬ ಮಗನಾದ ಕರ್ದಮ ಪ್ರಜಾಪತಿ ತನಗೆ ಬಂದ ಸೂಚನೆಯಂತೆ ಸ್ವಾಯಂಭುವ ಮನು ಮತ್ತು ಶತರೂಪಾ ದೇವಿಯರ ಮಗಳಾದ ದೇವಹೂತಿ ದೇವಿಯನ್ನು ವಿವಾಹವಾದರು. ಕರ್ದಮರ ತಪಸ್ಸಿಗೆ ಮೆಚ್ಚಿ ಅವರ ಮಗನಾಗಿ ಹುಟ್ಟುತ್ತೇನೆ ಎಂದು ಮಾತು ಕೊಟ್ಟಿದ್ದ ಮಹಾವಿಷ್ಣುವು ಕರ್ದಮ-ದೇವಹೂತಿಯರ ಮಗನಾಗಿ "ಕಪಿಲ ಋಷಿ" ಎಂದು ಅವತರಿಸಿದನು. ಕರ್ದಮರು ವಾನಪ್ರಸ್ಥರಾದ ಸಮಯದಲ್ಲಿ ದೇವಹೂತಿಯ ಮುಂದಿನ ರಕ್ಷಣೆಯ ಹೊಣೆ ಕಪಿಲರಿಗೆ ಒಪ್ಪಿಸಿದರು. 

ಸ್ವಲ್ಪ ಕಾಲಾನಂತರ ದೇವಹೂತಿಯು ಮಗನಾದ ಕಪಿಲನ ಬಳಿಗೆ ಬಂದು ತನಗೆ ಉಪದೇಶ ಮಾಡುವಂತೆ ಕೇಳಿದಳು. 

"ಕಪಿಲ, ನನಗೆ ಇನ್ನು ಬದುಕಿದ್ದು ಸಾಕಾಯಿತು. ನನಗೆ ಉಪದೇಶ ಮಾಡಿ ಮೋಕ್ಷ ಮಾರ್ಗವನ್ನು ಸೂಚಿಸು"

"ಅಮ್ಮಾ, ನೀನು ನನ್ನ ಹೆತ್ತ ತಾಯಿ. ತಾಯಿತನ ಬಹಳ ದೊಡ್ಡದು. ನಾನು ನಿನಗೆ ನಮಸ್ಕರಿಸಬೇಕೇ ಹೊರತು ನೀನು ನನಗೆ ನಮಸ್ಕಾರ ಮಾಡುವಂತಿಲ್ಲ. ಸನ್ಯಾಸಿಗಳಾದವರೂ ಸಹ ತಾಯಿಗೆ ನಮಸ್ಕರಿಸುತ್ತಾರೆ. ಗುರುವಿಗೆ ನಮಸ್ಕರಿಸದಿರುವವರಿಗೆ ಉಪದೇಶ ಮಾಡುವಂತಿಲ್ಲ. ಆದ್ದರಿಂದ ನಾನು ನಿನಗೆ ಉಪದೇಶ ಮಾಡಲಾಗದು"

"ಕಪಿಲ, ನೀನು ನಿಮಿತ್ತಕ್ಕೆ ನನ್ನ ಮಗನಾದರೂ ನೀನು ಶ್ರೀಹರಿ ಎಂದು ನಾನು ಬಲ್ಲೆ. ಆ ಕಾರಣದಿಂದ ನಾನು ನಮಸ್ಕರಿಸಬಹುದು. ನೀನು ಉಪದೇಶ ಮಾಡಬಹುದು"

"ನಾನು ಶ್ರೀಹರಿ ಎನ್ನುವ ಜ್ಞಾನ ನಿನಗೆ ಬಂದಿದೆ ಅಂದರೆ ಮತ್ತೆ ಯಾವ ಉಪದೇಶವೂ ಬೇಕಾಗಿಲ್ಲವಲ್ಲ!"

"ಅದೇನೇ ಇರಲಿ. ನಿನ್ನಿಂದ ವಿವರವಾಗಿ ಉಪದೇಶ ಪಡೆಯಬೇಕೆಂದು ನನಗೆ ಆಸೆ. ಈ ಆಸೆಯನ್ನು ಪೂರ್ಣ ಮಾಡು" 

ಮುಂದೆ ಮಾತಿಲ್ಲ. ತಾಯಿಯ ಆಸೆ ಪೂರ್ತಿ ಮಾಡಲು ಕಪಿಲ ಮುನಿಯು ದೇವಹೂತಿ ದೇವಿಗೆ ವಿವರವಾಗಿ ಮುಕ್ತಿ ಮಾರ್ಗವನ್ನು ಉಪದೇಶಿಸಿದನು. ಇದು ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. 

ಕರ್ದಮ-ದೇವಹೂತಿ-ಕಪಿಲ ಮುನಿ ಇವರ ಬಗ್ಗೆ ಹೆಚ್ಚಿನ ವಿವರ ಇರುವ ಇಂಗ್ಲಿಷ್ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು.  
*****

ಭಾರತೀಯ ತತ್ವ್ವಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಬಹಳ ಮಹತ್ವ ಇದೆ. ಅನೇಕ ಗಹನ ವಿಷಯಗಳನ್ನು ಅರಿಯಲು ಅಂಕಿ-ಸಂಖ್ಯೆಗಳ ತಿಳುವಳಿಕೆ ಬಹಳ ಅವಶ್ಯಕ. ಇದೇ ಕಪಿಲ ಮಹರ್ಷಿ ಮುಂದೆ ಮೊದಲು ಸೂಚಿಸಿದ "ಹದಿನಾರು-ಇಪ್ಪತ್ತೊಂದು" ಸೂತ್ರವನ್ನು ಹಿಗ್ಗಿಸಿ "ಸಂಖ್ಯಾಶಾಸ್ತ್ರ" ರಚಿಸಿದ ಮೂಲ ಪುರುಷರು ಎಂದು ನಂಬಿಕೆ. ವೈದಿಕ ವಾಂಗ್ಮಯ ತಿಳಿಯುವ ಪ್ರಯತ್ನ ಮಾಡುವವರಿಗೆ ಇದರ ಅಭ್ಯಾಸ ಬೇಕು. 

ಹದಿನಾರು-ಇಪ್ಪತ್ತೊಂದು ಎಂದು ಆಕಾಶವಾಣಿಯಲ್ಲಿ ಕೇಳಿಬಂದ ಎರಡು ಶಬ್ದಗಳು ಕಡೆಗೆ ಹೀಗೆ "ಸಂಖ್ಯಾಶಾಸ್ತ್ರ" ಆಗಿ ರೂಪುಗೊಂಡಿತು!