Wednesday, March 25, 2026

ಅನಘ ನಿನ್ನ ನೋಡಿ ಮೋಹಿಸಿ


"ಪರಮಾತ್ಮನನ್ನು ನೆನೆಯಬೇಕು" ಎಂದು ಅನೇಕರು ಹೇಳುವುದನ್ನು ಆಗಾಗ ಕೇಳುತ್ತಿರುತ್ತೇವೆ. ನಾವೂ ಒಮ್ಮೊಮ್ಮೆ ತಪ್ಪಿನಿಂದ ಹಾಗೆ ಹೇಳಬಹುದು. ಹಾಗೆಂದರೇನು? ತಿಳಿದವರು ಹೇಳುವಂತೆ ಅವನನ್ನು ಸರಿಯಾಗಿ ನೆನೆಯುವುದು ಅಂದರೆ ಅವನ ಲೆಕ್ಕವಿಲ್ಲದ, ಅನಂತ ಗುಣಗಳಲ್ಲಿ ನಮಗೆ ಸಾಧ್ಯವಾದುವುಗಳನ್ನು ಮತ್ತು ತಿಳಿದಿರುವುದನ್ನು ಸದಾಕಾಲ ನೆನೆಯುತ್ತಿರುವುದು. ಅವನಲ್ಲಿ "ಯಾವುದೇ ದೋಷ ಇಲ್ಲ" ಅನ್ನುವುದು ಅವನ ಅನಂತ ಗುಣಗಳಲ್ಲಿ ಹಿರಿದಾದ ಒಂದು ದೊಡ್ಡ ಗುಣ!

"ಅಘ" ಅಂದರೆ ಪಾಪ. ಅವನಲ್ಲಿ ಪಾಪಗಳಿಲ್ಲ. ನಮ್ಮಲ್ಲೂ ಪಾಪಗಳಿಲ್ಲ. ಇದೇನು? ಹೀಗೆಂದು ಆಶ್ಚರ್ಯ ಪಡಬೇಕಿಲ್ಲ. ಬಹಳ ಶ್ರೀಮಂತನು ತನ್ನಲ್ಲಿ ಯಾರಾದರೂ ಹಣ ಕೇಳಿದಾಗ "ನನ್ನಲ್ಲಿ ಒಂದು ರೂಪಾಯಿಯೂ ಇಲ್ಲ" ಅನ್ನುವಂತೆ ಇದು. ಒಂದು ರೂಪಾಯಿ ಇಲ್ಲ. ರೂಪಾಯಿಗಳ ಮೂಟೆಗಳೇ ಇವೆ. ಅಂತೆಯೇ ನಮ್ಮಲ್ಲಿ ಒಂದೋ, ಎರಡೋ ಪಾಪಗಳಿಲ್ಲ. ಪಾಪಗಳ ಗಂಟುಗಳೇ ತುಂಬಿ ತುಳುಕುತ್ತಿವೆ. 

ಸತ್ಯ-ಅಸತ್ಯ, ನ್ಯಾಯ-ಅನ್ಯಾಯ ಅನ್ನುವಂತೆ ಅಘ-ಅನಘ. ಅಘ ಇಲ್ಲದವನು ಅನಘ. ಪಾಪಲೇಶವೂ ಇಲ್ಲದುದರಿಂದ ಅವನು ಅನಘ. ಗೋಕುಲದ ಗೋಪಿಕೆಯರು ಅನಘನಾದ ಶ್ರೀಕೃಷ್ಣನನ್ನು ನೋಡಿ ಮೋಹಿಸಿದರು. ಈ ಗೋಪಿಯರು ಶ್ರೀಕೃಷ್ಣನನ್ನು ಮೋಹಿಸಿದ್ದು, ಅವನ ಜೊತೆ ರಾಸಕ್ರೀಡೆ, ಜಲಕ್ರೀಡೆ ಮೊದಲಾದ ಚಕ್ಕಂದ ಆಡಿದ್ದು, ಮೊದಲಾದುವಗಳ ಬಗ್ಗೆ ವಿಚಿತ್ರವಾದ ಅಭಿಪ್ರಾಯಗಳಿವೆ. ಪ್ರಾಪಂಚಿಕ ದೃಷ್ಟಿಯಿಂದ ನೋಡಿದಾಗ ಇವೆಲ್ಲಾ ಅಸಹಜ ಮತ್ತು ವಿಲಕ್ಷಣ ಅನಿಸುತ್ತವೆ. ಈ ಗೋಪಿಯರೆಲ್ಲಾ ಅಗ್ನಿಯ ಮಕ್ಕಳಂತೆ. ಋಷಿಗಳಂತೆ. ಪರಮಾತ್ಮನ ಅಂಗಸಂಗ ಬಯಸಿ, ಸಾವಿರಾರು ವರುಷ ತಪಸ್ಸು ಮಾಡಿ, ಹಾಗೆಂದು ವರಪಡೆದು, ಶ್ರೀಕೃಷ್ಣನ ಅವತಾರ ಕಾಲದಲ್ಲಿ ಗೋಪಿಯರಾಗಿ ಜನಿಸಿದರಂತೆ. ಅದನ್ನು ನಂಬಿದರೆ ಈ ಸಂಗತಿಗಳಿಗೆ ಸಿಗುವ ಅರ್ಥವೇ ಬೇರೆ. 
*****

ಶ್ರೀ ವಿಜಯದಾಸರು (1682-1755) ದಾಸ ಪರಂಪರೆಯಲ್ಲಿ ಒಂದು ದೊಡ್ಡ ಹೆಸರು. ರಾಯಚೂರು ಜಿಲ್ಲೆಯಲ್ಲಿ ಹುಟ್ಟಿ ಜೀವಿತದ ಬಹುಕಾಲ ಅಲ್ಲಿಯೇ ಜೀವಿಸಿದವರು. ಪುರಂದರ-ಕನಕರ ನಂತರ ಅತಿ ಹೆಚ್ಚು ಕೇಳಿಬರುವ ಹೆಸರು ಅವರದು. ಮುಂದೆ ಅವರ ಶಿಷ್ಯ ಸಂತತಿಯ ಶ್ರೀ ಗೋಪಾಲದಾಸರು ಮತ್ತು ಶ್ರೀ ಜಗನ್ನಾಥದಾಸರು ಮುಂತಾದವರು. ಈಗಲೂ ಮನೆ-ಮನೆಗಳಲ್ಲಿ ಅವರು ರಚಿಸಿದ ದೇವರನಾಮ-ಸುಳಾದಿಗಳನ್ನು ಕೇಳಬಹುದು. 

ವಿಜಯದಾಸರ ಪದಗಳ ಭಾಷೆ ಸೊಗಸಾದ, ಸುಲಲಿತವಾದ ಕನ್ನಡ. ಅವರ ಪದ-ಸುಳಾದಿಗಳ ಅಧ್ಯಯನ ಮಾಡಿದರೆ ಅನೇಕ ವಿಶೇಷಗಳನ್ನು ಕಾಣಬಹುದು. ಪ್ರತಿ ನುಡಿಯ ಮೊದಲ ಎರಡು ಸಾಲುಗಳ ನಿಧಾನ ಗತಿ ಮತ್ತು ಮುಂದಿನ ಎರಡು ಸಾಲುಗಳ ಶೀಘ್ರ ಗತಿ ಇಂತಹ ವಿಶೇಷಗಳಲ್ಲೊಂದು. ಈಗ ಅವಲೋಕಿಸುತ್ತಿರುವ "ನಿನ್ನನಗಲಿ ಪೊಗಲಾರೆವೋ" ಎನ್ನುವ ಪದದಲ್ಲಿ ಇದನ್ನು ಕಾಣಬಹುದು. ಇದೇ ರೀತಿ ಅವರ ಅನೇಕ ಹಾಡುಗಳು೦ಟು.

ವಿಜಯದಾಸರ ಪದಗಳು ಮೂಲ ಗ್ರಂಥಗಳ ವಿವರಗಳನ್ನು ಪೂರ್ಣವಾಗಿ ಅರಗಿಸಿಕೊಂಡು, ಅದನ್ನು ಸರಳವಾದ ಕನ್ನಡದಲ್ಲಿ ಮತ್ತೆ ಸೃಷ್ಟಿ ಮಾಡಿದಂತಿವೆ. ನೇರವಾಗಿ ಅವುಗಳನ್ನು ಕೇಳಿದರೆ ಅರ್ಥವೇನೋ ಆಗುತ್ತವೆ. ಆದರೆ, ಮೂಲ ಗ್ರಂಥಗಳನ್ನು ಓದಿ ಅವುಗಳ ಹಿನ್ನೆಲೆಯಲ್ಲಿ ಅವೇ ಪದಗಳನ್ನು ಕೇಳಿದಾಗ ಆಗುವ ಅನುಭವವೇ ಬೇರೆ. 
***** 

ಯಮುನಾ ನದಿ ತೀರದಲ್ಲಿ ರಾತ್ರಿ ವೇಳೆ ಶ್ರೀಕೃಷ್ಣನು ಕೊಳಲನ್ನು ನುಡಿಸುತ್ತಿದ್ದಾನೆ. (ಕೊಳಲು, ವೀಣೆ ಮುಂತಾದ ವಾದ್ಯಗಳನ್ನು "ನುಡಿಸುತ್ತಾರೆ" ಅನ್ನಬೇಕು. ಅವುಗಳನ್ನು "ಬಾರಿಸುತ್ತಾರೆ" ಅನ್ನುವುದಲ್ಲ. ತಮಟೆ, ನಗಾರಿ ಮುಂತಾದುವನ್ನು ನುಡಿಸುವುದಿಲ್ಲ. ಅವುಗಳನ್ನು ಬಾರಿಸುತ್ತಾರೆ). ಗೋಪಿಯರಿಗೆ ಅದರ ಮಧುರ ನಾದ ತೀರದ ಸೆಳೆತ ಉಂಟುಮಾಡುತ್ತದೆ. ಎಲ್ಲವನ್ನೂ ಬಿಟ್ಟು ಯಮುನೆಯ ದಡಕ್ಕೆ ಓಡುತ್ತಾರೆ. ಅವನ ಸುತ್ತ ಸೇರುತ್ತಾರೆ. 

ಶ್ರೀಕೃಷ್ಣನು ಅವರ ಜೊತೆ ನೇರವಾಗಿ ಆಡತೊಡಗುವುದಿಲ್ಲ. ಅವರಿಗೆ ಬುದ್ಧಿವಾದ ಹೇಳುತ್ತಾನೆ. "ನೀವು ಹೀಗೆ ಬರಬಾರದು. ನಿಮ್ಮ ನಿಮ್ಮ ಮನೆಗಳಿಗೆ ಹಿಂತಿರುಗಿ" ಅನ್ನುತ್ತಾನೆ. ಅವರೋ ಎಲ್ಲ ಐಹಿಕ ಮೋಹಗಳನ್ನು ಹಿಂದೆ ಬಿಟ್ಟು ಬಂದವರು. ರಾತ್ರಿ ಸಮಯದಲ್ಲಿ ಮನೆಯವರಿಗೆ ಹೇಳದೆ-ಕೇಳದೇ ಬಂದುಬಿಟ್ಟವರು. ಅವನ ಕೊಳಲ ಮೋಡಿಗೆ ಬಂದು ನಿಂತವರನ್ನು ಅವನೇ ಹೊರಟುಹೋಗಿ ಅಂದರೆ ಅವರೇನು ಮಾಡಬೇಕು? ಆಗ ಅವರು ಹೇಳಿದ್ದೇನು?

ಹದಿನೆಂಟು ಶ್ಲೋಕಗಳ ಶ್ರೀಮದ್ ಭಾಗವತದ "ಗೋಪಿ ಗೀತೆ" ಅಧ್ಯಾಯದ ಹದಿನಾರನೆಯ ಶ್ಲೋಕದ ಕನ್ನಡ ಭಾವಾರ್ಥ ಹೀಗಿದೆ:

ಪತಿ-ಸುತರುಗಳ ಕೃಷ್ಣ ಬಂಧು-ಬಳಗವ ಅತಿ ಅಲಕ್ಷಿಸಿ ಓಡಿ ಬಂದೆವೋ 
ಗತಿಯು ಯಾರೆಲೋ ಕೊಳಲಮೋಹದಿ ರಾತ್ರಿವೇಳೆಲಿ ಬಂದು ನಿಂತೆವೋ 

ಅಲ್ಲಿನದೆಲ್ಲ ಹಿಂದೆ ಬಿಟ್ಟು ಬಂದಿದ್ದಾಯಿತು.  ಇಲ್ಲಿ ಇವನು ಹೊರಳಿ ಕಲಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಅವರು ಶ್ರೀಕೃಷ್ಣನಿಗೆ ಹೇಳಿದ ಮಾತುಗಳನ್ನು ಶ್ರೀ ವಿಜಯದಾಸರು ತಮ್ಮ "ನಿನ್ನನಗಲಿ ಪೊಗಲಾರೆವೋ, ನೀರಜಾಕ್ಷ, ನಿನ್ನ ಸೇರಿ ಸುಖಿಸಬಂದೆವೋ" ಎನ್ನುವ ಹಾಡಿನಲ್ಲಿ ಹೇಳಿದ್ದಾರೆ. ಶ್ರೀ ವಿದ್ಯಾಭೂಷಣರು ಹಾಡಿರುವ ಯೂಟ್ಯೂಬ್ ಲಿಂಕ್ ಕೆಳಗೆ ಕೊಟ್ಟಿದೆ. ಈ ಸಂಚಿಕೆಯನ್ನು ಓದಿದನಂತರ ಅದನ್ನು ಕೇಳಬಹುದು.

*****

"ಭಿನ್ನ ನುಡಿಗಳು" ಅಂದರೇನು? ಕಾಣಲು ಬಂದವರ ಅಭಿಪ್ರಾಯದ ವಿರುದ್ಧವಾದ ಮಾತುಗಳು. ಕೊಳಲ ಮೋಡಿ ಕರೆದದ್ದು ಜೊತೆ ಸೇರಲು. ಮಗುವಿಗೆ ಹಣ್ಣು ತೋರಿಸಿ, ಆಸೆ ಬರಿಸಿ ಕರೆದಂತೆ. ಕೊಟ್ಟದ್ದು ಏನು? ಹಣ್ಣಲ್ಲ. ವಿಷ. ಎಂತಹ ವಿಷ? ಅಂತಿಂಥ ವಿಷ ಅಲ್ಲ. ಕಾಲಕೂಟ ವಿಷ. ಅದನ್ನು ಸೇವಿಸುವ ಅವಶ್ಯಕತೆಯೇ ಇಲ್ಲ. ಅದರ ಗಾಳಿ ಕುಡಿದರೆ ಸಾಕು. ಪ್ರಾಣ ಹೋಗುವುದು. ಶ್ರೀಕೃಷ್ಣನು ಹೇಳುತ್ತಿರುವುದೂ ಅದೇ ರೀತಿ. ಅವನನ್ನು ಬಿಟ್ಟು ಹೋಗುವುದು ಅತ್ತ ಇರಲಿ. ಹಾಗೆ ಹೋಗಬೇಕೆನ್ನುವ ಮಾತೇ ಪ್ರಾಣ ಹರಣ ಆಗುವಂತಹದು. ಇದನ್ನೇ ಅನುಪಲ್ಲವಿಯಲ್ಲಿ ಹೇಳಿದ್ದಾರೆ. 

ಕನ್ನಡ ಆಡುಭಾಷೆಯಲ್ಲಿ "ಐದುವುದು" ಅನ್ನುವ ಪದವನ್ನು ತನಿಯಾಗಿ ಬಳಸುವ ಸಂದರ್ಭಗಳಿಲ್ಲ. ಐದುವುದು ಅಂದರೆ ಯಾವುದೋ ಬಲು ಕಠಿಣವಾದುದ್ದನ್ನು ಬಹಳ ಪರಿಶ್ರಮದಿಂದ ಸಂಪಾದಿಸಿದ್ದು. ಇಂಗ್ಲಿಷಿನಲ್ಲಿ "attain" ಅಥವಾ "ಸಾಧಿಸುವುದು" ಅನ್ನಬಹುದು. ಪರಂಧಾಮವನ್ನೈದಿದರು ಎನ್ನುವ ಪದ ಆಗಾಗ ಕೇಳಿಬರುತ್ತದೆ. ಪರಮಾತ್ಮನು ಸುಲಭವಾಗಿ ಸಿಗುವುದಿಲ್ಲ. ಅದಕ್ಕೇ ಅವನು "ಐದುವುದಕೆ ಶಕ್ಯವಲ್ಲದವನು". ಈಗ ಹೇಗೋ ಕೈಗೆ ಸಿಕ್ಕಿದ್ದಾನೆ. ಅವನನ್ನು ಬಿಟ್ಟು ಹೋಗುವುದು ಹೇಗೆ?

ಹಿಂದೆ ಇವರು ಅವನಿಗೆ "ಪರರು" ಆಗಿರಬಹುದು. ಆದರೆ ಈಗ ಅವನ ಶರಣು ಬಂದಿದ್ದಾರೆ. ಅಲ್ಲಿಗೆ ಇಬ್ಬರಲ್ಲಿದ್ದ ದೂರ ಹೊರಟು ಹೋಯಿತು. ಆದ್ದರಿಂದ ಜೀವಾತ್ಮ-ಪರಮಾತ್ಮ ಅಭೇದದ ಅದ್ವೈತವಾದರೂ, ಜೀವಾತ್ಮ-ಪರಮಾತ್ಮ ಭೇದದ ದ್ವೈತವಾದರೂ, ಬೇರೆ ಹೋಗುವಂತಿಲ್ಲ. ಒಂದರಲ್ಲಿ ಸೇರಿಹೋಗಿ ಒಂದಾಗಬೇಕು. ಇನ್ನೊಂದರಲ್ಲಿ ಮುಕ್ತರಾಗಿ ಎಂದಿಗೂ ಜೊತೆಯಲ್ಲಿಯೇ ಇರಬೇಕು. (ಹೊಟ್ಟೆಯಲ್ಲಿ ಸೇರಿಹೋಗಬೇಕು. ಇಲ್ಲವೇ, ಪಕ್ಕದಲ್ಲಿ ಕುಳಿತಿರಬೇಕು!) ದೂರ ಹೋಗುವ ಮಾತೇ ಇಲ್ಲವಲ್ಲ! ದೂರ ಹೋದರೆ ಮತ್ತೆ ಜೀವನ-ಮರಣದ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುವುದು. ಅದು ಬೇಡವಾದದ್ದು. 

"ಬಂಧುವರ್ಗವನ್ನು ಬಿಡುವುದು" ಸ್ತ್ರೀಯರಿಗೆ ಏಕೆ ನಿಂದ್ಯ? ಇದರಲ್ಲಿ ಏನು ವಿಶೇಷ? ಸಮಾಜದಲ್ಲಿ ಕುಟುಂಬಗಳನ್ನು ಮತ್ತು ಸಮೂಹಗಳನ್ನು ಒಟ್ಟಿಗೆ ಹಿಡಿದಿಡುವುದರಲ್ಲಿ ಸ್ತ್ರೀಯರ ವಿಶೇಷ ಪರಿಶ್ರಮವಿದೆ. ಬಂಧು-ಭಾಂದವರು ಬೆಲ್ಲಕ್ಕೆ ಇರುವೆಗಳು ಸುತ್ತಿಕೊಳ್ಳುವಂತೆ ಎಲ್ಲರನ್ನೂ ಒಟ್ಟುಗೂಡಿಸುವ ಕಲೆ ಸ್ತ್ರೀಯರಿಗೆ ಉಂಟು. ಇದರಲ್ಲಿ ಇನ್ನೊಂದು ಗುಹ್ಯಾರ್ಥವಿದೆ. ಪರಮಾತ್ಮನೊಬ್ಬನೇ ಪುರುಷ; ಬೇರೆಯವರೆಲ್ಲ ಸ್ತ್ರೀರೂಪ ಅನ್ನುವುದು ಒಂದು ಪ್ರಮೇಯ. 

ಗಂಡ-ಮಕ್ಕಳು-ನೆಂಟರುಗಳನ್ನು ಬಿಡಬಾರದು. ನಿಜ. ಆದರೆ ಅವರೆಲ್ಲಾ ಈ ಜನ್ಮದ ಗಂಟುಗಳು. ಈ ಜನ್ಮ ಮುಗಿದ ನಂತರ ಅವರ್ಯಾರೋ, ಅವರಿಗೆ ನಾವ್ಯಾರೋ. ಆದರೆ ಪರಮಪುರುಷನು ನಮಗೆ ಅನಾದಿ ಕಾಲದಿಂದ ಅನಂತ ಕಾಲದವರೆಗೆ ನೆಂಟನು. ಶಾಶ್ವತ ನೆಂಟನ ಹಿಡಿಯಲು ತಾತ್ಕಾಲಿಕ ನೆಂಟರನ್ನು ಬಿಡುವುದು ತಪ್ಪಲ್ಲ ಎಂದು ಗೋಪಿಯರ ವಾದ. ಅದರ ಜೊತೆಗೆ ಗಂಡ-ಮಕ್ಕಳು-ನೆಂಟರು ಎಷ್ಟೇ ಸುಖ ಕೊಟ್ಟರೂ ಅದು ಮಿತವಾದದ್ದೇ. ಅದಕ್ಕೆ ಕೊನೆಯುಂಟು. ಆದರೆ ಪರಮಾತ್ಮನ ಜೊತೆಯ ಸುಖ ಕೊನೆಯಿಲ್ಲದ್ದು. ಅದು ಮಿತವಲ್ಲ. ಅಮಿತ. 

ಮಕ್ಕಳು ದೊಡ್ಡವರನ್ನು ಏನಾದರೂ ಕೇಳುವಾಗ "ಅವನಿಗೆ ಕೊಟ್ಟೆ. ನನಗ್ಯಾಕೆ ಕೊಡುವುದಿಲ್ಲ" ಅನ್ನುವುದುಂಟು. ಇನ್ನೊಬ್ಬರಿಗೆ ಕೊಟ್ಟಿದ್ದು ಏಕೆ? ಈ ಪ್ರಶ್ನೆ ಮಕ್ಕಳಿಗೆ ಪ್ರಸ್ತುತವಲ್ಲ. ಯೋಗ್ಯತೆ, ಅಧಿಕಾರ, ಅವಶ್ಯಕತೆ, ಇವೆಲ್ಲ ಅಂತಹ ಸಂದರ್ಭಗಳಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ನಮಗೆ ಬೇಕು. ಅದು ಮಾತ್ರ ಮುಖ್ಯ. ಇದೇ ರೀತಿ ಲಕ್ಷ್ಮೀದೇವಿ ಉದಾಹರಣೆ ಕೊಟ್ಟು ಜಗಳ ಕಾಯುತ್ತಾರೆ!

ಅವನು ಅನಘ. ಆದಕಾರಣ ಇವರು ಅವನನ್ನು ಕಂಡು ಮೋಹಿಸಿದರು. ದೇಹ, ಮನಸ್ಸುಗಳನ್ನು ಅರ್ಪಿಸಿದರು. ತನು-ಮನ-ಧನ ಎಂದು ಮೂರನ್ನು ಒಟ್ಟಾಗಿ ಹೇಳುವುದು ವಾಡಿಕೆ. ಆದರೆ ಇಲ್ಲಿ ಧನಕ್ಕೆ ಏನೂ ಕೆಲಸವಿಲ್ಲ. ಇವರಲ್ಲಿರುವ ಧನವೆಲ್ಲ ಅವನು ಕೊಟ್ಟದ್ದೇ. ಮಿಗಿಲಾಗಿ ಧನ ಕೊಡುವ ಮಹಾಲಕ್ಷ್ಮಿಗೇ ಅವನು ನಿಯಾಮಕ. ಧನದಿಂದ ಅವನಿಗೆ ಆಗಬೇಕಾದದ್ದು ಏನೂ ಇಲ್ಲ. ಆದ್ದರಿಂದ ತನು-ಮನ ಎರಡು ಕೊಟ್ಟಿದ್ದಾಯಿತು. ಇನ್ನು ನಮ್ಮ ಮನಸ್ಸಿನ ಬೇಡಿಕೆ ಈಡೇರಿಸು. ಇದು ಅವರ ಅಳಲು. 

ಈ ಹಿನ್ನೆಲೆಯಲ್ಲಿ ಈ ಹಾಡನ್ನು ಕೇಳಿದರೆ ಹೆಚ್ಚಿನ ಮಟ್ಟದ ಅನುಭವ ಆಗುವುದು. 

*****

ಕನ್ನಡ ನವೋದಯ ಕಾಲದ ಹರಿಕಾರರಲ್ಲಿ ಒಬ್ಬರಾದ ಶ್ರೀ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರ "ಗೋಕುಲ ನಿರ್ಗಮನ" ಇದೇ ಹಿನ್ನೆಲೆಯಲ್ಲಿ ರಚಿತವಾದದ್ದು. ಅದೊಂದು ಅತ್ಯಂತ ಯಶಸ್ವಿ ರಂಗನಾಟಕವೂ ಆಗಿದೆ. ಪು. ತಿ. ನ. ಅವರಿಗೆ ಶ್ರೀಕೃಷ್ಣ ಮತ್ತು ಭಾಗವತ ಪರಮ ಪ್ರಿಯ. "ಕೃಷ್ಣನ ಕೊಳಲಿನ ಕರೆ, ಆಲಿಸಿಗೋ ಕೃಷ್ಣನ ಕೊಳಲಿನಾ ಕರೆ" ಒಂದು ಅಧ್ಭತ ಗೀತೆ. "ತೊಟ್ಟಿಲಿನ ಹಸುಗೂಸ ಮರೆ, ಮರೆ; ಪಕ್ಕದ ಗಂಡನ ತೊರೆ, ತೊರೆ" ಅನ್ನುವ ಗೀತೆಯನ್ನು ಖ್ಯಾತ ಸಂಗೀತ ವಿದುಷಿ ಶ್ರೀಮತಿ ಶ್ರೀರಂಗಂ ಗೋಪಾಲರತ್ನಂ ಹಾಡಿದ್ದುದು ಐವತ್ತು ವರುಷಗಳ ಹಿಂದೆ ಅತ್ಯಂತ ಜನಪ್ರಿಯವಾಗಿತ್ತು. (ಆಗ ಅವರ ಇನ್ನೆರಡು ಜನಪ್ರಿಯ ಹಾಡುಗಳು - ಗಂಡ-ಹೆಂಡತಿ ಪಗಡೆ ಆಡುವಾಗಿನ ಸನ್ನಿವೇಶದ "ಆರು-ಮೂರು ಒಂಭತ್ತು, ಹೋಗಲಿದು ಮನೆಗೆ; ಗೆಲುವೆನ್ನದೀ ಹೊತ್ತು, ಸೋಲೇ ಸರಿ ನಿಮಗೆ"  ಮತ್ತು "ಕುಂತ್ರೆ ನಿಂತ್ರೆ ಅವನ ಧ್ಯಾನ, ಜೀವಕ್ಕಿಲ್ಲ ಸಮಾಧಾನ" ಅನ್ನುವ ಜಾನಪದ ಗೀತೆ.)

ಇದೇ ಹಾಡನ್ನು "ಸುಬ್ಬಾಶಾಸ್ತ್ರಿ" ಚಲನಚಿತ್ರದಲ್ಲೂ ಅಳವಡಿಸಿಕೊಳ್ಳಲಾಗಿತ್ತು. ವೀಣಾ ವಿದ್ವಾನ್ ಶ್ರೀ ದೊರೈಸ್ವಾಮಿ ಅಯ್ಯಂಗಾರ್ ಅವರ ಸಂಗೀತ. ಈಗಲೂ ಅಲ್ಲಲ್ಲಿ ಕೇಳಿ ಬರುವ ಹಾಡು. 

*****

ತಮಾಷೆಯ ವಿಷಯವೆಂದರೆ, ಗೋಪಿಯರು ಶ್ರೀಕೃಷ್ಣನ ಸಂಗ ಯಮುನೆಯಲ್ಲಿ ವಿಹಾರಕ್ಕೆ ಹೋದರೆಂದು ಅವರ ಮನೆಯ ಜನ, ಬಂಧು-ಭಾಂದವರು ದೂರು ಕೊಟ್ಟಿದ್ದರ ಅಥವಾ ಜಗಳ ಆಡಿದ್ದರ ಉಲ್ಲೇಖ ಎಲ್ಲಿಯೂ ಇಲ್ಲ! ಅವರು ವಿಹಾರಕ್ಕೆ ಹೋದಾಗಲೂ ಅವರ ಒಂದು ರೂಪ ಅವರವರ ಮನೆಗಳಲ್ಲೇ ಇರುತ್ತಿದ್ದವಂತೆ. ತಮ್ಮ ತಮ್ಮ ಕೆಲಸ-ಕಾರ್ಯ, ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿರುತ್ತಿದ್ದವಂತೆ. ನಂಬುವವರು ನಂಬಬಹುದು. ಬಿಡುವವರು ಬಿಡಬಹುದು. 

*****

ಇದೇ ಹಾಡಿಗೆ ಹೊಂದಿಕೊಂಡಂತೆ, ಅದರ ಮುಂದಿನ ಭಾಗದಂತೆ ಇರುವ ಶ್ರೀ ವಿಜಯದಾಸರ ನೇರ ಶಿಷ್ಯ ಶ್ರೀ ಗೋಪಾಲದಾಸರ "ನಾಳೆ ಬರುತೇನೆಂದು ಹೇಳಿ ಮಧುರೆಗೆ ಪೋಗಿ ಬಹಳ ದಿನ ಆಯಿತಲ್ಲೋ, ಉದ್ಧವಾ" ಎನ್ನುವ ಕೃತಿಯ ಬಗ್ಗೆ ಇನ್ನೆಂದಾದರೂ ನೋಡೋಣ. 

ಶ್ರೀ ವಿದ್ಯಾಭೂಷಣರು ಹಾಡಿರುವ "ನಿನ್ನನಗಲಿ ಪೊಗಲಾರೆವೋ" ಗೀತೆಯನ್ನು ಇಲ್ಲಿ ಕ್ಲಿಕ್ ಮಾಡಿ ಕೇಳಬಹುದು:


"ಸುಬ್ಬಾಶಾಸ್ತ್ತಿ" ಚಿತ್ರದ "ಕೃಷ್ಣನ ಕೊಳಲಿನಾ ಕರೆ" ಗೀತೆಯನ್ನು ಇಲ್ಲಿ ಕ್ಲಿಕ್ ಮಾಡಿ ಕೇಳಬಹುದು:


No comments:

Post a Comment