ಇನ್ನು ಕೆಲವೇ ದಿನಗಳಲ್ಲಿ "ಅಕ್ಷಯ ತೃತೀಯಾ" ಬರುವುದಿದೆ. ಪ್ರತಿ ವರ್ಷ ವೈಶಾಖ ಮಾಸದ ಮೂರನೆಯ ದಿನ (ವೈಶಾಖ ಶುಕ್ಲ ತೃತೀಯ) ಒಂದು ವಿಶೇಷವಾದ ದಿನ. ಆ ದಿನವನ್ನು ಒಂದು "ಸ್ವಯಂ ಸಿದ್ಧ ಮುಹೂರ್ತ" ಎಂದು ತಿಳಿದು ಅದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಆ ದಿನ ಮಂತ್ರಾಲಯದಲ್ಲಿರುವ ಶ್ರೀ ಗುರು ರಾಘವೇಂದ್ರ ರಾಯರ ಮೂಲ ಬೃಂದಾವನ ಮತ್ತು ದೇಶದ ವಿವಿಧ ಕಡೆಗಳಲ್ಲಿ ಇರುವ "ಮೃತ್ತಿಕಾ ಬೃಂದಾವನ" (ಈಗ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿಯೂ ಉಂಟು. ಅಮೇರಿಕ ಸಂಯುಕ್ತ ಸಂಸ್ಥಾನ (USA) ಒಂದರಲ್ಲಿಯೇ ಹನ್ನೆರಡು ಇಂತಹ ಬೃಂದಾವನಗಳಿವೆಯಂತೆ) ಇವುಗಳನ್ನು ಶ್ರೀಗಂಧ ಲೇಪನದಿಂದ ಅಲಂಕರಿಸಲಾಗುತ್ತದೆ. ಇದೊಂದು ವಿಶೇಷ ಸೇವೆ. ಅಂದು ಭಕ್ತಾದಿಗಳು ಸರತಿಯಲ್ಲಿ ಕಾದಿದ್ದು ದರ್ಶನ ಪಡೆಯುತ್ತಾರೆ.
ಅಕ್ಷಯ ತೃತೀಯಾ ದಿನದಂದು ಹೀಗೆ ವೃಂದಾವನಕ್ಕೆ ಗಂಧ ಲೇಪನ ಏಕೆ ಮಾಡುತ್ತಾರೆ? ಹೀಗೆ ಪ್ರಶ್ನೆ ಮಾಡಿದರೆ ಅನೇಕ ವೇಳೆ ಸರಿಯಾದ ಉತ್ತರ ಬರುವುದಿಲ್ಲ. "ಬೇಸಿಗೆ ಕಾಲ. ಆದ್ದರಿಂದ ತಂಪಾಗಿರಲಿ ಎಂದು ಹೀಗೆ ಮಾಡುತ್ತಾರೆ" ಅನ್ನುವುದು ಸಾಮಾನ್ಯ ಉತ್ತರ. ಹಾಗಿದ್ದರೆ, ಎರಡು-ಮೂರು ತಿಂಗಳ ಕಾಲ ಕಡು ಬೇಸಿಗೆ ಇರುತ್ತದೆ. ಅದರಲ್ಲಿ ಈ ದಿನವನ್ನೇ ಏಕೆ ಆರಿಸಿಕೊಂಡರು? ಬಾಕಿ ದಿನ ಬೇಸಗೆಯ ಬೇಗೆ ಇಲ್ಲವೇ? ಆಗಾಗ ಏಕೆ ಮಾಡುವುದಿಲ್ಲ? ಇವೆಲ್ಲಾ ಸಾಧುವಾದ ಪ್ರಶ್ನೆಗಳೇ. ಅಕ್ಷಯ ತೃತೀಯ ಹನ್ನೆರಡು ತಿಂಗಳ ಮಧ್ಯದಲ್ಲಿ ಬರುವ ಒಂದು ದಿನ. ಅದು ಹೇಗೆ "ಸ್ವಯಂ ಸಿದ್ಧ ಮುಹೂರ್ತ" ಆಯಿತು? ಅದಕ್ಕೆ ಅಂತಹ ವಿಶೇಷವೇನು? ಇದೂ ಸಹ ಯೋಚಿಸಬೇಕಾದ ವಿಷಯವೇ.
*****
ಪ್ರತಿ ಸಂವತ್ಸರದ ಪ್ರಾರಂಭದ ದಿನ ಯುಗಾದಿ. ಅದು ಕಾಲಮಾನದ ಲೆಕ್ಕದ ಪ್ರಾರಂಭ. ಹೀಗಾಗಿ ಅದೊಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ವಿಜಯದಶಮಿ ವಿಶೇಷ ಎಲ್ಲರಿಗೂ ಗೊತ್ತಿರುವುದೇ. ಅದೂ ಸರಿ. ಬಲಿಪಾಡ್ಯಮಿ ಅರ್ಧ ದಿನವೂ ಒಂದು ವಿಶೇಷವೇ. ಅಂದು ಬಲಿಯಿಂದ ವಾಮನನು ಮೂರು ಲೋಕಗಳ ಅಧಿಪತ್ಯವನ್ನು ಕಸಿದುಕೊಂಡು ದೇವೇಂದ್ರನಿಗೆ ಹಿಂದಿರುಗಿಸಿದನು. ಇದರ ವಿವರಗಳಿಗೆ ಸಂಬಂಧಿಸಿದ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಆದರೆ ಈ ಅಕ್ಷಯ ತೃತೀಯ ಹೇಗೆ ವಿಶೇಷ?
ಚತುರ್ಮುಖ ಬ್ರಹ್ಮ ದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭ ಮಾಡಿದ ದಿನ ಅಕ್ಷಯ ತೃತೀಯಾ. ಯುಗಾದಿ ಕಾಲಮಾನದ ಲೆಕ್ಕದ ಕಾರಣ ಮುಖ್ಯವಾದರೆ ಅಕ್ಷಯ ತೃತೀಯಾ ಸೃಷ್ಟಿಯ ಪ್ರಾರಂಭವಾದದ್ದರಿಂದ ವಿಶೇಷವಾಯಿತು. ಅದೂ ಒಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ಯಾವುದೇ ಕೆಲಸ ಪ್ರಾರಂಭ ಮಾಡಲು, ಮತ್ತು ಮುಖ್ಯವಾದ ಕಾರ್ಯಗಳನ್ನು ಮಾಡಲು ದಿನ ಶುದ್ದಿ ನೋಡಿ ಒಳ್ಳೆಯ ಸಮಯ ನಿರ್ಧರಿಸುವ ಪರಿಪಾಠ ಇದೆ. ಆದರೆ ಈ ನಾಲ್ಕು ದಿನಗಳಲ್ಲಿ ಅವುಗಳ ಅವಶ್ಯಕತೆ ಇಲ್ಲ ಎಂದು ನಂಬುತ್ತಾರೆ.
ಅಕ್ಷಯ ತೃತೀಯಾ ದಿನದಂದು ಮಾಡಿದ ಒಳ್ಳೆಯ ಕೆಲಸಗಳಿಗೆ (ದಾನ, ಜಪ, ತಪ ಮುಂತಾದುವು) ಹೆಚ್ಚಿನ ಫಲ ಎಂದು ನಂಬಿಕೆ. ಆದರೆ ಈಗ ಅದೊಂದು "ಮಾರಾಟ ಮಾಡುವ ಮೋಡಿ" ಆಗಿದೆ. ಇದರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು.
*****
ಶ್ರೀ ವೈಕುಂಠದ ದ್ವಾರ ಪಾಲಕರಾದ ಜಯ-ವಿಜಯರು ಸನಕ-ಸನಂದನಾದಿಗಳಿಗೆ ಶ್ರೀಮನ್ನಾರಾಯಣನ ದರ್ಶನಕ್ಕೆ ಅಡ್ಡಿ ಮಾಡಿದ ಕಾರಣದಿಂದ ಶಾಪಕ್ಕೊಳಗಾದ ಕಥೆ ಎಲ್ಲರಿಗೂ ಗೊತ್ತು. ಆ ಕಾರಣದಿಂದ ಅವರು ಮೂರು ಅಸುರ ಜನ್ಮ ಪಡೆದರು. ಶ್ರೀಹರಿಯ ಹೇಳಿಕೆಯ ಅನುಸಾರ ಅವನೇ ಮೂರು ಅವತಾರ ತೆಗೆದು ಅವರ ವಧೆ ಮಾಡಿ ಅವರ ಶಾಪ ವಿಮೋಚನೆ ಮಾಡಿದನು.
ಮೊದಲಿಗೆ ಅವರು ಹಿರಣ್ಯಾಕ್ಷ-ಹಿರಣ್ಯಕಶಿಪು ಆಗಿ ಒಂದೇ ತಾಯಿ ದಿತಿಯ ಅವಳಿ ಮಕ್ಕಳಾಗಿ ಹುಟ್ಟಿದರು. ಎರಡನೆಯ ಬಾರಿ ಒಂದೇ ತಾಯಿ ಕೈಕಸೆಯ ಬೇರೆ ಬೇರೆ ಇಬ್ಬರು ಮಕ್ಕಳು ರಾವಣ-ಕುಂಭಕರ್ಣ ಆಗಿ ಹುಟ್ಟಿದರು. ಮೂರನೆಯ ಸಾರಿ ಅಕ್ಕ-ತಂಗಿಯರ ಮಕ್ಕಳು (ಶ್ರುತದೇವೆ ಮತ್ತು ಶ್ರುತಶ್ರವೆ - ವಸುದೇವನ ತಂಗಿಯರು) ಶಿಶುಪಾಲ-ದಂತವಕ್ತ್ರ ಆಗಿ ಹುಟ್ಟಿದರು. ಕ್ರಮವಾಗಿ ಮೊದಲಿಗೆ ವರಾಹ-ನರಸಿಂಹ ಎಂಬ ಎರಡು ರೂಪ, ಎರಡನೆಯದಾಗಿ ಶ್ರೀರಾಮ ರೂಪ ಮತ್ತು ಕಡೆಯದಾಗಿ ಶ್ರೀಕೃಷ್ಣ ರೂಪದಿಂದ ಅವರ ನಿಗ್ರಹವನ್ನು ಶ್ರೀಹರಿಯು ಮಾಡಿದನು.
ಅವಳಿ ಮಕ್ಕಳಲ್ಲಿ ಲೋಕಾರೂಢಿಯಂತೆ ಮೊದಲು ತಾಯಿಯ ಗರ್ಭದಿಂದ ಬಂದವನು ಅಣ್ಣ ಎಂದೂ, ನಂತರ ಜನಿಸಿದವನು ತಮ್ಮ ಎಂದೂ ವ್ಯವಹರಿಸುತ್ತಾರೆ. ಆದರೆ ನಂತರ ಹುಟ್ಟಿದವನ ಗರ್ಭಧಾರಣೆ ಮೊದಲು ಆಗಿರುತ್ತದೆ. ಮೊದಲು ಜನಿಸಿದವನ ಗರ್ಭಧಾರಣೆ ಆಮೇಲೆ ಆಗಿರುತ್ತದೆ. ಈ ಕಾರಣದಿಂದ ವಾಸ್ತವವಾಗಿ ಹಿರಣ್ಯ ಕಷಿಪು ನಂತರ ಹುಟ್ಟಿದರೂ ಅಣ್ಣನು. ಹಿರಣ್ಯಾಕ್ಷನು ಮೊದಲು ಜನಿಸಿದರೂ ತಮ್ಮ. ಇದು ಸೂಕ್ಷ್ಮವಾದ ವಾಸ್ತವ. ಶ್ರೀಹರಿಯು ಮೊದಲು ವರಾಹರೂಪದಿಂದ ಹಿರಣ್ಯಾಕ್ಷನನ್ನೂ, ನಂತರ ನರಸಿಂಹ ರೂಪದಿಂದ ಹಿರಣ್ಯಕಶಿಪುವನ್ನೂ ಸಂಹರಿಸಿದನು.
*****
ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನನ್ನು ತಂದೆಯು ಬಹಳವಾಗಿ ಹಿಂಸಿಸಿದನು. ಪ್ರಹ್ಲಾದನು ಶ್ರೀಹರಿಯನ್ನು ಬಲವಾಗಿ ನಂಬಿ ಎಲ್ಲ ತೊಂದರೆಗಳನ್ನೂ ಧೈರ್ಯವಾಗಿ ಎದುರಿಸಿದನು. ಕಡೆಗೆ ನರಸಿಂಹರೂಪದಿಂದ ಹಿರಣ್ಯನ ಸಂಹಾರವಾಯಿತು. ನರಸಿಂಹನ ಸ್ತುತಿ ಮಾಡಿದ ಬಾಲಕ ಪ್ರಹ್ಲಾದನು ವರಾಹ ಮತ್ತು ನರಸಿಂಹ ರೂಪ ಎರಡನ್ನೂ ಒಟ್ಟಿಗೆ ನೋಡಬೇಕೆಂದು ಶ್ರೀಹರಿಯನ್ನು ಪ್ರಾರ್ಥಿಸಿದನು. ಆಗ ಶ್ರೀಹರಿಯು ಎರಡು ರೂಪಗಳನ್ನೂ ಒಟ್ಟಿಗೆ ತೋರಿಸಿದನಂತೆ. ಸಾಮಾನ್ಯವಾಗಿ ಕೆಲವೇ ಕೆಲವು ವರಾಹ ರೂಪಿ ಶ್ರೀಹರಿಯ ದೇವಾಲಯಗಳು ಉಂಟು. ನರಸಿಂಹ ರೂಪಿ ಶ್ರೀಹರಿಯ ದೇವಾಲಯಗಳು ಅನೇಕ. ಆದರೆ, ಶ್ರೀವರಾಹ-ನರಸಿಂಹ ರೂಪಿ ಶ್ರೀಹರಿಯ ದೇವಾಲಯ ಒಂದಾಗಿ ಇರುವುದು ಒಂದೇ ಕಡೆ. ಅದು ಆಂಧ್ರ ಪ್ರದೇಶದ ಸಿಂಹಾಚಲದಲ್ಲಿ.
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರದ ಉತ್ತರಭಾಗದಲ್ಲಿ "ಸಿಂಹಾಚಲ ಪರ್ವತ ಶ್ರೇಣಿ" ಇದೆ. ಈ ಬೆಟ್ಟ ಪ್ರದೇಶದಲ್ಲಿ ಸಿಂಹಾಚಲ ವರಾಹ-ಲಕ್ಷ್ಮಿನರಸಿಂಹ ದೇವಾಲಯವಿದೆ. ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಿಂದ ಸುಮಾರು ಇಪ್ಪತ್ತು ಕಿಲೋಮೀಟರು ದೂರ. ಈಗ ಈ ಭಾಗ ನಗರದಲ್ಲಿಯೇ ಸೇರಿಹೋದಂತಿದೆ. ಮೇಲಿನ ಚಿತ್ರದಲ್ಲಿ ಕಾಡಿನ ಮಧ್ಯೆ ಇರುವ ದೇವಾಲಯವನ್ನು ನೋಡಬಹುದು.
ಈ ದೇವಾಲಯದಲ್ಲಿ ಒಂದು ವಿಶೇಷ. ಇಬ್ಬರು ರಕ್ಕಸರನ್ನು ಸಂಹರಿಸಿದ ಶ್ರೀಹರಿಯು ಆ ಸಮಯದಲ್ಲಿ ಅತಿ ಉಗ್ರ ರೂಪವನ್ನು ಧಾರಣೆ ಮಾಡಿದ್ದನಂತೆ. ಆ ರೂಪಗಳನ್ನು ನೋಡಲು ದೇವತೆಗಳಿಗೂ ಅಸಾಧ್ಯವಾಗಿತ್ತಂತೆ. ನೇರವಾಗಿ ನೋಡಲು ಕಷ್ಟವಾದ ತೇಜೋಮೂರ್ತಿಗಳ ಸಂಗಮ. ಅತಿ ಉಗ್ರ ರೂಪ. ಬಾಲಕ ಪ್ರಹ್ಲಾದನು ಭಯವಿಲ್ಲದೆ ನೋಡಿದ ಮಹಾನುಭಾವ. ಅವನಿಗೆ ಈ ಉಗ್ರರೂಪಗಳ ಶ್ರೀಹರಿಯೂ, ಸೌಮ್ಯ ರೂಪಿ ಶ್ರೀಹರಿಯೂ ಒಂದೇ!
*****
ಪುರಾತನವಾದ ಈ ದೇವಸ್ಥಾನ ಕಾಡಿನಲ್ಲಿ ಮುಚ್ಚಿಹೋಗಿತ್ತಂತೆ. ಅದನ್ನು ಚಂದ್ರನ ಮೊಮ್ಮಗ, ಬುಧ-ಇಳಾ ದಂಪತಿಯರ ಮಗನಾದ ಪುರೂರವ ಮತ್ತು ಊರ್ವಶಿಯರು (ನಹುಷನ ತಂದೆ ಮತ್ತು ಯಯಾತಿಯ ತಾತ) ಪುನಃ ಜನರಿಗೆ ದರ್ಶನ ಸಿಗುವಂತೆ ಮಾಡಿದರು ಎಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಳದಲ್ಲಿ ಹದಿನಾರು ಕಂಭಗಳ ನಾಟ್ಯಮಂಟಪ ಮತ್ತು ತೊಂಬತ್ತಾರು ಕಂಭಗಳ ಕಲ್ಯಾಣ ಮಂಟಪ ಉಂಟು.
ಈ ಉಗ್ರ ವರಾಹ-ಲಕ್ಷ್ಮೀನರಸಿಂಹ ವಿಗ್ರಹವನ್ನು ವರುಷದ ಒಂದು ದಿನ ಬಿಟ್ಟು, ಬಾಕಿ ಎಲ್ಲಾ ದಿನಗಳಲ್ಲೂ ಶ್ರೀಗಂಧ ಲೇಪನದಿಂದ ಮುಚ್ಚಿರುತ್ತಾರೆ. ಈ ಕಾರಣದಿಂದ ಅದು ಒಂದು ದೊಡ್ಡ ಶಿವಲಿಂಗ ಇರುವಂತೆ ಕಾಣುತ್ತದೆ. ಆ ಗಂಧದಿಂದ ತುಂಬಿದ ಮೂರ್ತಿಯ ಮೇಲೆ ನಾಮ, ಕಣ್ಣು, ಮೂಗು, ಮುಂತಾದುವನ್ನು ಅಂಟಿಸಿ ಅರ್ಚಿಸುತ್ತಾರೆ. ದರ್ಶನಕ್ಕೆ ಬಂದ ಭಕ್ತರಿಗೆ ಕಾಣುವ ಮೂರ್ತಿಯು ಮೇಲಿನ ಚಿತ್ರದಂತೆ ಇರುತ್ತದೆ.
ವರುಷದ ಒಂದು ದಿನ ಮಾತ್ರ, ಅಕ್ಷಯ ತೃತೀಯಾ ದಿನದಂದು, ಈ ಗಂಧ ಲೇಪನ ಎಲ್ಲವನ್ನೂ ತೆಗೆದು ಮೂಲ ವಿಗ್ರಹವನ್ನು ನೋಡಲು ಅವಕಾಶ ಮಾಡಿಕೊಡುತ್ತಾರೆ. ಆ ದಿನವೂ ವಿಗ್ರಹವನ್ನು ನೇರವಾಗಿ ನೋಡಿದರೆ ಕಣ್ಣುಗಳು ಉರಿಯುತ್ತವೆ ಮತ್ತು ರಕ್ತ ಬರುತ್ತದೆ ಎಂದು ನಂಬಿಕೆ. ಆದ ಕಾರಣ ಅಕ್ಷಯ ತೃತೀಯಾ ದಿನದಂದು ಮೂಲ ವಿಗ್ರಹದ ಮುಂದೆ ಒಂದು ಅತಿ ತೆಳುವಾದ ಪರದೆ ಇರುತ್ತದೆ. ಈ ಪರದೆಯ ಮೂಲಕ ವಿಗ್ರಹ ಚೆನ್ನಾಗಿ ಕಾಣುತ್ತದಂತೆ. ಅಂದು ದರ್ಶನ ಪಡೆಯಲು ಜನಜಂಗುಳಿ. ತಿರುಪತಿಯ ಶ್ರೀನಿವಾಸನ ದರ್ಶನದಂತೆ ದರ್ಶನ ಬಲು ಕಠಿಣವಂತೆ. ದರ್ಶನ ಸಿಕ್ಕರೆ ಸಿಗಬಹುದು. ಇಲ್ಲದಿದ್ದರೆ ಇಲ್ಲ. ಹೀಗೆಂದು ನೋಡಿ ಬಂದ ಮಹಾನುಭಾವರು ಹೇಳುತ್ತಾರೆ.
*****
ಪರಮಾತ್ಮನಿಗೆ ಅರ್ಪಿಸಿದ ಪ್ರತಿಯೊಂದು ಪದಾರ್ಥವೂ ಪೂಜ್ಯವೇ. ಪೂಜೆಯ ನಂತರ ಅವು ಪ್ರಸಾದವೇ. ಹೀಗಾಗಿ ಅವಕ್ಕೆ ಹೆಚ್ಚಿನ ಮಹತ್ವವುಂಟು. ನಾವು ಸಾಮಾನ್ಯವಾಗಿ ತಿಳಿದಂತೆ ಹಣ್ಣು-ಹಂಪಲು, ತಿಂಡಿ-ಆಹಾರ ಪದಾರ್ಥಗಳು ಮಾತ್ರ ಪ್ರಸಾದ ಅಲ್ಲ. ಹೂವು-ತುಲಸಿಗಳೂ ಪ್ರಸಾದವೇ. ಪೂಜೆಯ ವೇಳೆ ಕೊಟ್ಟ ವಸ್ತ್ರವೂ ಪ್ರಸಾದವಾಗಿ "ಶೇಷ ವಸ್ತ್ರ" ಎಂದು ಉಪಯೋಗ ಆಯಿತು. ಧೂಪಕ್ಕೆ ಉಪಯೋಗಿಸಿದ ಕೆಂಡವು ಆರಿದ ಬಳಿಕ ಇಜ್ಜಲಾಯಿತು. ಅದೂ ಪ್ರಸಾದ ಆದುದರಿಂದ ಹಣೆಯಲ್ಲಿ ಅಂಗಾರ ಆಗಿ ಸ್ವೀಕಾರ ಆಯಿತು. ತಿಂಡಿ-ತಿನಿಸುಗಳು, ಹಣ್ಣು-ಹಂಪಲುಗಳು ಸೇವನೆಗೆ ಯೋಗ್ಯ ಪರಮ ಪ್ರಸಾದ ಆಯಿತು. ಹೀಗೆ ಅವುಗಳ ಪೂಜ್ಯತೆ.
ಪೂಜೆಗೆ ಗಂಧ ತೆಗೆದು ಅರ್ಪಿಸಿದ್ದಾಯಿತು. ಅದರಲ್ಲಿ ಮಿಕ್ಕಿದ್ದು ಹೀಗೆಯೇ ಪ್ರಸಾದ ಆಯಿತು. ನಮ್ಮ ದೇಹದ ಮೇಲೆ ಹಚ್ಚಿಕೊಳ್ಳುವುದಾಯಿತು. ಅದೇ ಪ್ರಸಾದ ಆದಮೇಲೆ ಅವನ ವಿಗ್ರಹದ ಮೇಲೆ ಏರಿಸಿದ ಗಂಧ ದೊಡ್ಡ ಪ್ರಸಾದ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರಹ್ಲಾದರಾಜರು ಅವನ್ನು ಪ್ರಸಾದರೂಪದಲ್ಲಿ ಧರಿಸಿದರಂತೆ.
ಇದೇ ಪ್ರಹ್ಲಾದರಾಜರು ಈಗ ಶ್ರೀ ರಾಘವೇಂದ್ರ ರಾಯರಾಗಿ ಮಂತ್ರಾಲಯದಲ್ಲಿ ವೃಂದಾವನದಲ್ಲಿ ಕುಳಿತಿದ್ದಾರೆ ಎಂದು ನಂಬಿಕೆ. ಅದೇ ಭಾವ ಮೃತ್ತಿಕಾ ವೃಂದಾವನಗಳಲ್ಲಿಯೂ ಉಂಟು. "ಅಂಥ ಇಂಥವರಲ್ಲ" ಅನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಇದನ್ನು ನೋಡಿದ್ದೇವೆ. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು). ಈ ಕಾರಣ ಅಕ್ಷಯ ತೃತೀಯಾ ದಿನದಂದು ಸಿಂಹಾಚಲ ಶ್ರೀ ವರಾಹ-ಲಕ್ಷ್ಮಿ ನರಸಿಂಹನ ದೇವಾಲಯದಲ್ಲಿ ಮೂಲ ಮೂರ್ತಿಗೆ ಗಂಧವಿಲ್ಲದ ದಿನ ಇಲ್ಲಿ ಶ್ರೀ ರಾಯರ ವೃಂದಾವನಕ್ಕೆ ಅವನ ಪ್ರಸಾದ ರೂಪದ ಗಂಧ ಲೇಪನ. ವರುಷದ ಎಲ್ಲ ದಿನ ಅಲ್ಲಿ ಅವನಿಗೆ ಗಂಧ ಲೇಪನ ಮತ್ತು ಭಕ್ತರಿಗೆ ಹಾಗೆ ದರ್ಶನ. ಅವನಿಗೆ ಹೀಗೆ ಗಂಧವಿಲ್ಲದ ಒಂದು ದಿನ ಇಲ್ಲಿ ಶ್ರೀ ರಾಯರಿಗೆ ಅವನ ಪ್ರಸಾದರೂಪದ ಗಂಧ ಲೇಪನ ಮತ್ತು ಭಕ್ತರಿಗೆ ಹೀಗೆ ದರ್ಶನ. ಮಾರನೆಯ ದಿನ ವೃಂದಾವನದ ಮೇಲಿರುವ ಗಂಧ ಶ್ರೀ ರಾಯರ ಪ್ರಸಾದ. ಅದಕ್ಕೆ ಬಹಳ ಗೌರವ ಮತ್ತು ಬೆಲೆ. ಹೀಗೆ ನಡೆಯುತ್ತಿದೆ!
ಅಕ್ಷಯ ತೃತೀಯ ದ ಸವಿವರ ಚೆನ್ನಾಗಿದೆ.
ReplyDeleteವಿವರಣೆ ಗಂಧ ತೀಡಿದಂತಾಯ್ತು
ReplyDelete