Showing posts with label Prasada. Show all posts
Showing posts with label Prasada. Show all posts

Friday, June 27, 2025

ದೇವರಲ್ಲಿ ಬೇಡುವುದು ಸರಿಯೇ?


ಹಿಂದಿನ ಸಂಚಿಕೆಗಳಲ್ಲಿ "ಅಷ್ಟ ಭೋಗ", "ಅಷ್ಟ ಭಾಗ್ಯ" ಮತ್ತು "ಅಷ್ಟ ಐಶ್ವರ್ಯ" ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆ ಮಾಡಿದೆವು. (ಈ ಹಿಂದಿನ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಇವುಗಳು ತಾವಾಗಿಯೇ ಸಿಗುವುದಿಲ್ಲ. ಕೆಲವನ್ನು ಸ್ವಲ್ಪ ಮಟ್ಟಿಗೆ ನಾವೇ ಸ್ವಂತ ಪರಿಶ್ರಮದಿಂದ ಗಳಿಸಬಹುದಾದರೂ ಅವುಗಳ ಪ್ರಮಾಣ ಹೆಚ್ಚಿರುವುದಿಲ್ಲ. ಅಷ್ಟೇ ಅಲ್ಲ, ಮನುಷ್ಯ ಸಹಜ ಬುದ್ಧಿಯ ಕಾರಣವಾಗಿ ಎಷ್ಟು ಸಂಪಾದನೆ ಮಾಡಿದರೂ ತೃಪ್ತಿ ಎನ್ನುವುದು ಬರುವುದಿಲ್ಲ. "ಇಷ್ಟು ದೊರಕಿದರೆ ಇನ್ನಷ್ಟು ಬೇಕೆಂಬಾಸೆ. ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ. ಕಷ್ಟ ಬೇಡ ಎಂಬಾಸೆ. ಕಡು ಸುಖವ ಕಾಂಬಾಸೆ." ಎಂದು ದಾಸರು ಹೇಳುವಂತೆ ಮನುಷ್ಯನಿಗೆ ಕಷ್ಟ ಬೇಡವೇ ಬೇಡ. ಸುಖ ಬೇಕೇ ಬೇಕು. ಅಷ್ಟೇ ಅಲ್ಲ. ಸುಖ ಇದ್ದಷ್ಟೂ ಇನ್ನೂ ಹೆಚ್ಚು ಬೇಕೆಂಬ ತವಕ. 

ತಾವಾಗಿಯೇ ಸಿಗದ, ನಾವು ಕಷ್ಟ ಪಟ್ಟರೂ ಪೂರ್ಣವಾಗಿ ಎಟುಕದ, ಆದರೆ ಬೇಕೆಂಬ ತುಡಿತವುಳ್ಳ ಈ ವಿಷಯಗಳನ್ನು ಪಡೆಯುವುದು ಹೇಗೆ? ನಮ್ಮ ಅನುಭವ ಹೇಳಿಕೊಟ್ಟಂತೆ ನಮ್ಮಲ್ಲಿ ಇಲ್ಲದಿದ್ದುದನ್ನು ಬೇರೆಯವರಿಂದ ಕೇಳಿ ಪಡೆಯಬಹುದು. ಹಾಗಿದ್ದರೆ ಯಾರನ್ನು ಕೇಳಬೇಕು? ಯಾರಾದರೂ ತಮ್ಮ ಬಳಿ ಇರುವುದನ್ನು ಮಾತ್ರ ಕೊಡಬಲ್ಲರು. ಅವರ ಬಳಿಯೇ ಇಲ್ಲದಿದ್ದುದನ್ನು ಯಾರಾದರೂ ಕೊಡುವುದು ಹೇಗೆ? ಆದಕಾರಣ ನಾವು ನಂಬಿದ ದೇವರನ್ನೋ, ದೇವತೆಯನ್ನೋ ಕೇಳಬಹುದು. ಅದರಲ್ಲಿಯೂ ಯಾರು ಸುಲಭವಾಗಿ ನಮಗೆ ಒಲಿಯುವವರೋ ಅವರನ್ನು ಕೇಳುವುದು. ಅವರಲ್ಲಿ ಕೊಡುವ ಶಕ್ತಿ ಇದ್ದರೂ ಕೇಳಿದರೆ ಕೊಡದವರನ್ನು ಬೇಡಿ ಏನು ಪ್ರಯೋಜನ? 

ಸಾಧನೆಯ ದಾರಿಯಲ್ಲಿ ನಡೆಯುತ್ತಿರುವ ಜಿಜ್ಞಾಸುವಿಗೆ "ಹೀಗೆ ಕೇಳುವುದು ಸರಿಯೇ?" ಎಂಬ ಅನುಮಾನ ಬರುವುದು ಸಹಜ. ವಾಸ್ತವವಾಗಿ ಈ ರೀತಿಯ ಅನುಮಾನ ಬರುವುದೇ ಒಂದು ಒಳ್ಳೆಯ ಸೂಚನೆ. ಎಷ್ಟು ಸಿಕ್ಕಿದರೂ ತೃಪ್ತಿ ಇಲ್ಲದ ಜೀವಕ್ಕೆ ಕೇಳುವುದರ ಎಲ್ಲೆ ಎಲ್ಲಿ? "ಕಿಂಗ್ ಮೈದಾಸ" ಕೇಳಿದಂತೆ ಮುಟ್ಟಿದ್ದೆಲ್ಲವೂ ಚಿನ್ನವಾಗಬೇಕು. ಅದು ನಿಜವಾಗಿ ಮುಟ್ಟಿದ್ದೆಲ್ಲಾ ಚಿನ್ನವಾದಾಗ, ತನ್ನ ಮುದ್ದಿನ ಮಗಳೂ ಒಂದು ಚಿನ್ನದ ಬೊಂಬೆಯಾಗಿ ಕುಳಿತಾಗ, ಅವನ ಕಣ್ಣು ತೆರೆಯಿತು. ಅಂತಹ ಅತಿರೇಕಕ್ಕೆ ಹೋಗದಿದ್ದರೆ ಆ ರೀತಿಯ ಪಾಠ ಕಲಿಯುವುದೂ ಸುಲಭ ಸಾಧ್ಯವಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಒಮ್ಮೆ ಕೇಳುವುದು ಅಭ್ಯಾಸವಾದರೆ ಆ ದುರಭ್ಯಾಸ ನಿಲ್ಲಿಸುವುದು ಕಷ್ಟವೇ. ಇದರಿಂದ ಹೊರಬರುವುದು ಹೇಗೆ?
*****

ಒಬ್ಬ ದೊಡ್ಡ ಧನಿಕ ಇದ್ದಾನೆ. ಅವನ ಬಳಿ ಬೇಕಾದಷ್ಟು ಐಶ್ವರ್ಯ ಇದೆ. ಕೊಡುವ ಶಕ್ತಿಯ ಜೊತೆ ಕೊಡುವ ಮನಸ್ಸೂ ಇದೆ. ಅನೇಕರು ಅವನ ಬಳಿ ಬಂದು, ಬೇಡಿ, ಬೇಕಾದುದನ್ನು ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ತೆಗೆದುಕೊಂಡು ಹೋಗುವವರ ಸರತಿಯ ಸಾಲೇ ಇದೆ. 

ಒಂದು ದಿನ ಮೊದಲನೆಯವನು ಬಂದ. ಅವನಿಗೆ ಸ್ವಂತ ಖರ್ಚಿಗೆ ಹಣ ಬೇಕು. ಅದನ್ನು ಕೇಳುವುದಕ್ಕಾಗಿ ಬಂದಿದ್ದಾನೆ. ಕೇಳಲು ನಾಚಿಕೆ. ಬಹಳ ಸಂಕೋಚದಿಂದ ತಲೆ ಕೆಳಗೆ ಮಾಡಿ ಬೇಡುತ್ತಾನೆ. ಕೊಡುವ ಧನಿಕನ ಕೈ ಯಾವಾಗಲೂ ಮೇಲೆ. ಕೇಳುವವನಿಗೆ ಅನುಮಾನ. "ಕೊಡುತ್ತಾನೋ ಇಲ್ಲವೋ ಗೊತ್ತಿಲ್ಲ. ಹೇಗೆ ಕೇಳುವುದು? ಯಾವ ರೀತಿ ಕೇಳಿದರೆ ಕೊಡಬಹುದು? ಇಲ್ಲ ಅಂದುಬಿಟ್ಟರೆ ಏನು ಮಾಡುವುದು? ಕೊಟ್ಟರೂ ಏನು ಹೇಳಿ ಕೊಡುತ್ತಾನೋ? ಸಾಲ ಎಂದು ಕೊಡಬಹುದು. ಇಷ್ಟು ಬಡ್ಡಿ ಎಂದು ಹೇಳಬಹುದು. ಈಗ ಇಲ್ಲ, ನಾಳೆ ಬಾ ಎನ್ನಬಹುದು. ಹತ್ತು ಬಾರಿ ಓಡಾಡಿಸಿ ಕೊಡಬಹುದು. ಇನ್ನೊಬ್ಬರ ಮುಂದೆ ಅವಮಾನ ಮಾಡಬಹುದು. ಏನಾದರೂ ಕೇಳಲೇಬೇಕು. ವಿಧಿಯಿಲ್ಲ" ಹೀಗೆಲ್ಲಾ ಮನಸ್ಸಿನಲ್ಲಿ ಗೊಂದಲ. ಕಡೆಗೆ ಧೈರ್ಯ ಮಾಡಿ ಕೇಳಿದ. ಸಾಹುಕಾರ ಕೊಟ್ಟೇಬಿಟ್ಟ. ಅವನ ಕೆಲಸವಾಯಿತು. ಹೊರಟುಹೋದ. 

ಈಗ ಎರಡನೆಯವನು ಬಂದ. ಇವನು ತನಗೋಸ್ಕರ ಹಣ ಕೇಳಲು ಬಂದವನಲ್ಲ. ಇವನು ಯಾವುದೋ ಸಂಸ್ಥೆಯ ಒಬ್ಬ ವಿಶ್ವಸ್ತ ಮಂಡಳಿಯವನು (ಟ್ರಸ್ಟೀ). ಕೇಳುತ್ತಿರುವುದು ತನಗಾಗಿ ಅಲ್ಲ. ಟ್ರಸ್ಟಿಗಾಗಿ. ಪಡೆವ ಹಣದಿಂದ ಸ್ವಂತಕ್ಕೆ ಪ್ರಯೋಜನ ಪಡೆಯುವ ಅಭಿಲಾಷೆ ಇಲ್ಲ. ಹಣ ತೆಗೆದುಕೊಂಡಮೇಲೆ ತನ್ನದು ಅನ್ನುವ ಭಾವನೆ ಇಲ್ಲ. ದುರುಪಯೋಗ ಮಾಡಬೇಕೆಂಬ ಇರಾದೆ ಇಲ್ಲ. ತನಗಾಗಿ ಎಂದು ಕೇಳದುದರಿಂದ ಸಂಕೋಚವೂ ಇಲ್ಲ. ಕೊಡುವವನು ಇದನ್ನು ಸಾಲ ಎಂದು ಕೊಡುವುದಿಲ್ಲ. ಹಣ ಕೇಳಲು ಬಂದಿದ್ದರೂ ಸಾಹುಕಾರ ಗೌರವದಿಂದ ಕಾಣುತ್ತಾನೆ. ಕೂಡಿಸಿ ಮಾತನಾಡಿಸುತ್ತಾನೆ. ಸಾಹುಕಾರ ಕೊಡುತ್ತಾನೆ. ಇವನು ತೆಗೆದುಕೊಂಡು ಹೋಗುತ್ತಾನೆ. ತೆಗೆದುಕೊಂಡುದನ್ನು ಸರಿಯಾಗಿ, ಕೇಳಿದ ಉದ್ದೇಶ ಸಾಧನೆಗೆ ಉಪಯೋಗಿಸುತ್ತಾನೆ. 

ಇಬ್ಬರಾದಮೇಲೆ ಮೂರನೆಯವನು ಬಂದ . ಅವನು ಏನನ್ನೂ ಕೇಳಲು ಬಂದವನಲ್ಲ. ಅವನಿಗೆ ಏನೂ ಬೇಕಾಗಿಲ್ಲ. ಇರುವುದರಲ್ಲೇ ತೃಪ್ತನಾಗಿದ್ದಾನೆ. ಅವನಿಗೆ ಯಾವ ಪದಾರ್ಥವನ್ನೂ ಕೇಳಬೇಕೆಂಬ ಅಭಿಲಾಷೆ ಇಲ್ಲ. ಬದಲಾಗಿ ಅವನೇ ಸಾಹುಕಾರನಿಗೆ ಕೊಡಲು ಹಣ್ಣನ್ನು ತಂದಿದ್ದಾನೆ. ಹಣ್ಣು ಕೊಡುತ್ತಾನೆ. ಅಷ್ಟೇ. ಆದರೆ ಸಾಹುಕಾರ "ನಿನಗೆ ಏನು ಬೇಕು? ಕೇಳು. ಸಂತೋಷದಿಂದ ಕೊಡುತ್ತೇನೆ" ಅನ್ನುತ್ತಾನೆ. "ನನಗೆ ಏನೂ ಬೇಡ. ನಿನ್ನನ್ನು ಕಾಣಲು ಬಂದೆ. ನೋಡಿದ್ದಾಯಿತು. ಅಷ್ಟು ಸಾಕು" ಅನ್ನುತ್ತಾನೆ ಬಂದವನು. ಸಾಹುಕಾರ ಬಲವಂತ ಮಾಡಿ ಏನನ್ನೋ ಕೊಡುತ್ತಾನೆ.  ಬಂದವನು ಅದನ್ನು ತೆಗೆದುಕೊಂಡು ಹೋಗುತ್ತಾನೆ. ಕೊಡು ಎಂದು ಕೇಳಲಿಲ್ಲ. ಕೊಡದಿದ್ದರೆ ದುಃಖವಿಲ್ಲ. ಸಾಹುಕಾರ ತಾನಾಗಿಯೇ ಕೊಟ್ಟಿದ್ದನ್ನು ತೆಗೆದುಕೊಂಡಾಗ ಸಂತೋಷವಿಲ್ಲ. ಸಂತೋಷವಿಲ್ಲ ಎಂದರೆ ವಿಷಾದವೂ ಇಲ್ಲ. ಒಂದು ರೀತಿಯ ನಿರ್ಲಿಪ್ತ ಭಾವನೆ. "ನೀನು ಕೊಟ್ಟೆ. ಅದನ್ನು ಗೌರವಪೂರ್ವಕ ಸ್ವೀಕರಿಸುತ್ತೇನೆ. ಅದರ ಮೌಲ್ಯ ನೋಡಿ ಅಲ್ಲ. ಕೊಟ್ಟವನಾದ ನಿನ್ನ ದೊಡ್ಡತನ ನೋಡಿ ತೆಗೆದುಕೊಂಡೆ" ಎನ್ನುವ ಭಾವ. 
*****

ಭಗವಂತನೆಂಬ ದೊಡ್ಡ ಸಾಹುಕಾರ. ಬಂದವರು ಮೂರು ರೀತಿಯ ಭಕ್ತರು. ಮೊದಲನೆಯವನು ತನಗೆ ಬೇಕು ಎಂದು ಕೇಳುವ "ಸಕಾಮಿ ಭಕ್ತ". ಕೇಳಿ ಪಡೆದದ್ದರಿಂದ ಸುಖ ಪಡುವ ಅಭಿಲಾಷೆ. ಸಾಹುಕಾರನ ಬಳಿ ಹೋಗುವಾಗಲೇ ಏನು ಬೇಕು ಎಂದು ತೀರ್ಮಾನ ಮಾಡಿ ಅದನ್ನು ಕೇಳಿದವ. ಕೇಳಿದ ಉದ್ದೇಶದಲ್ಲಿ ಅನುಮಾನವಿಲ್ಲ. ಅದು ಸ್ವಾರ್ಥಕ್ಕೇ. ಆದರೂ ಭಗವಂತ ಕೊಟ್ಟ. ಭಕ್ತನಿಗೆ ಸಂತೋಷ. ಮತ್ತೆ ಇನ್ನೊಂದು ದಿನ ಮತ್ತೊಂದು ಬೇಕಾದಾಗ ಹೀಗೆ ಅವನ ಬಳಿ ಹೋಗುತ್ತಾನೆ. ಎಂದೋ ಒಂದು ದಿನ ಮುಂದಿನ ಹಂತಕ್ಕೆ ತೇರ್ಗಡೆ ಆಗಬಹುದು. ಪರಮಾತ್ಮ ಕರುಣಾಳು. ಅವನನ್ನು ತಳ್ಳಿ ಓಡಿಸುವುದಿಲ್ಲ. ಹೆಚ್ಚಿನ ಭಕ್ತರು, ಅವರ ಅನುಷ್ಠಾನಗಳು ಈ ರೀತಿಯವೇ. 

ಎರಡನೆಯವನೂ ಬೇಡಲೆಂದೇ ಬಂದವನು. ಆದರೆ ಪಡೆದುದರಿಂದ ಸುಖ ಪಡುವ ಅಭಿಲಾಷೆ ಇಲ್ಲ. ಆ ಪರಿಕರಗಳಿಂದ ಮತ್ತಷ್ಟು ಸಾಧನೆ ಮಾಡಲು ಅನುಕೂಲ ಎಂದು ಬೇಡುತ್ತಿದ್ದಾನೆ. ಇವನಿಗೆ ಕೊಡುವುದರಿಂದ ಸರಿದಾರಿಯಲ್ಲಿ ಮುಂದುವರೆಯುತ್ತಾನೆ ಎನ್ನುವುದು ಅವನಿಗೂ ಗೊತ್ತು. (ಅವನಿಗೆ ಎಲ್ಲವೂ ಗೊತ್ತು). ಮೊದಲಿನವನಂತೆ ಇವನೂ ಬೇಡುವವನೇ ಆದರೂ ಇವನಿಗೆ ಗೌರವವೂ ಸಿಗುತ್ತದೆ. ಕೇಳಿದ್ದೂ ಸಿಗುತ್ತದೆ. ಈ ರೀತಿ ಭಕ್ತರು ಮೊದಲಿನವರಿಗಿಂತ ಸಂಖ್ಯೆಯಲ್ಲಿ ಕಡಿಮೆ. 

ಮೂರನೆಯವರದು ಬೇರೆಯೇ ರೀತಿ. ಅವರಿಗೆ ಭಗವಂತನ ಪ್ರೀತಿ ಬಿಟ್ಟು ಬೇರೆ ಏನೂ ಬೇಕಾಗಿಲ್ಲ. ಮಾಡಿದ ಪ್ರತಿ ಕೆಲಸವೂ ಅವನ ಪ್ರೀತಿಗಾಗಿ. ಸಂಕಲ್ಪ ಮಾಡುವಾಗ "ಅಸ್ಮಾಕಂ ಸಹಕುಟುಂಬಾನಾಂ" ಇಲ್ಲ. "ಲೋಕ ಕಲ್ಯಾಣಾರ್ಥಂ" ಮಾತ್ರವೇ ಉಂಟು. "ಪರಮೇಶ್ವರ ಪ್ರೇರಣಯಾ, ಪರಮೇಶ್ವರ ಪ್ರೀತ್ಯರ್ಥಂ" ಎನ್ನುವುದೇ ಧ್ಯೇಯ. "ಕರ್ಮ ಫಲ" ಎಂಬ ಹಣ್ಣನ್ನೂ ಭಗವಂತನಿಗೇ ಕೊಡುತ್ತಾರೆ. ಅದರ ಮೇಲೂ ಪ್ರೀತಿಯಾಗಲೀ, ಅಧಿಕಾರವಾಗಲೀ ಇಲ್ಲವೇ ಇಲ್ಲ. ಪರಮಾತ್ಮನೇ ತಾನಾಗಿ ಕೊಟ್ಟದ್ದನ್ನು "ಪ್ರಸಾದ" ಎಂದು ಸ್ವೀಕರಿಸುತ್ತಾರೆ. ತಿರಸ್ಕರಿಸುವ ಅಹಂಕಾರವಿಲ್ಲ. ಸಿಕ್ಕಿತು ಎಂಬ ಬೀಗುವಿಕೆಯಂತೂ ಮೊದಲೇ ಇಲ್ಲ. 

*****

ಸ್ವಾತಂತ್ರ್ಯಾನಂತರದ ಎರಡು-ಮೂರು ದಶಕಗಳಲ್ಲಿ ಹುಟ್ಟಿದ ತಲೆಮಾರಿನ ಜನರಿಗೆ ಮೂರು ರೀತಿಯಲ್ಲಿ ತೊಂದರೆಗಳು. ಹೆಚ್ಚಿನವರು ನಮ್ಮ ಅನುಷ್ಠಾನಗಳನ್ನು ಕ್ರಮವಾಗಿ ಕಲಿತವರಲ್ಲ. ಅಪ್ಪ, ಅಜ್ಜಂದಿರು ಮಾಡುತ್ತಿದ್ದರು. ಆದ್ದರಿಂದ ನಾವೂ ಮಾಡುತ್ತೇವೆ. (ನಮ್ಮ ಹಿಂದಿನ ತಲೆಮಾರಿನ ಜನ ಸಾಮಾನ್ಯವಾಗಿ ಇವನ್ನು ಕ್ರಮವಾಗಿ ಕಲಿತಿದ್ದರು. ಮುಂದಿನ ತಲೆಮಾರಿನವರು ಹೆಚ್ಚು-ಕಡಿಮೆ ಬಿಟ್ಟೀ ಬಿಟ್ಟರು.) ಮಂತ್ರ-ಸ್ತೋತ್ರಗಳ ಸರಿಯಾದ ಅರ್ಥಗಳು ತಿಳಿದಿಲ್ಲ. ಆದ್ದರಿಂದ ಹಿಂದಿನವರಂತೆ ಮಾಡುತ್ತಾ ಹೋಗುವುದು. ಇದು ಮೊದಲನೆಯ ತೊಂದರೆ. ಕ್ರಮೇಣ ವ್ಯವಹಾರ ಜ್ಞಾನದ ಜೊತೆಗೆ ಅನುಭವದ ಜ್ಞಾನ ಸೇರಿದಾಗ "ಇದೇನು ಹೀಗಿದೆ? ಕೆಲವು ಸರಿ ಕಾಣುವುದಿಲ್ಲ?" ಎನ್ನುವ ಅನುಮಾನ ಬರುತ್ತದೆ.

ಎರಡನೆಯ ಸಿಕ್ಕು  ಅಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ನಾವು ಹುಟ್ಟಿದ ಮನೆಯ ಆಚರಣೆಯೇ ಸರ್ವಶ್ರೇಷ್ಠ.. ಹೀಗೆಂದು ಪ್ರತಿ ಮತವೂ, ಪಂಗಡವೂ ಹೇಳುತ್ತವೆ. ಬೇರೆಯದರಲ್ಲೂ ಸ್ವಲ್ಪ ಒಳ್ಳೆಯದಿರಬಹುದು ಎಂದು ಒಪ್ಪುವ ಉದಾರ ಮನೋಭಾವ ಕಡಿಮೆ. ಜೊತೆಗೆ ಯಾವುದಾದರೂ ಸರಿ ಇಲ್ಲ ಅಂದರೆ ಅದನ್ನು ಬಿಟ್ಟುಬಿಡುವ ದಾರ್ಢ್ಯ ಇರುವುದಿಲ್ಲ. ಏಕೆಂದರೆ ಅದು ಸರಿಯಾಗಿಲ್ಲ ಎಂದು ಖಚಿತವಾದ ಅಭಿಪ್ರಾಯಕ್ಕೆ ಬರುವ ತಳಹದಿ ಭದ್ರವಿಲ್ಲ. 

ಮೂರನೆಯ ಸಮಸ್ಯೆ ಅಂದರೆ ನಾವು ತತ್ವಕ್ಕೂ ಮತ-ಪಂಗಡಗಳಿಗೂ ಇರುವ ವ್ಯತ್ಯಾಸವನ್ನು ಮಸಕು-ಮಸಕಾಗಿ ಕಾಣುತ್ತೇವೆ. ನಮ್ಮ ವೈದಿಕ ವಾಂಗ್ಮಯದಲ್ಲಿ, ವಿಶೇಷವಾಗಿ ಉಪನಿಷತ್ತುಗಳಲ್ಲಿ, ಹೇಳುವಂತೆ "ಎಲ್ಲವನ್ನೂ ತಿಳಿ; ನಿನಗೆ ಸರಿ ಅನ್ನಿಸಿದ್ದನ್ನು ಮಾಡು" ಎನ್ನುವುದರಲ್ಲಿ ನಮಗೆ ಹೆಚ್ಚಿನ ಪರಿಶ್ರಮವಿಲ್ಲ. ಆದ್ದರಿಂದ ಮೊದಲಿನಿಂದ ಮಾಡಿಕೊಂಡು ಬಂದ ಯಾವುದನ್ನೂ ಅದು ಈಗ ನಮಗೆ ಸರಿಕಾಣುತ್ತಿಲ್ಲ ಎಂದು ಬಿಡುವುದಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ಅನುಮಾನಗಳಿಗೆ ಮುಕ್ತ ಮನಸ್ಸಿನಿಂದ ಸಮಾಧಾನ ಹೇಳುವ ಹಿರಿಯರೂ ತಿಳಿದವರೂ ಸಿಗುವುದು ಬಹಳ ಅಪರೂಪ. 

*****

ನಮ್ಮ ಅನೇಕ ಮಂತ್ರ-ಸ್ತೋತ್ರಗಳಲ್ಲಿ ದೇವರಲ್ಲಿ ಅನೇಕ ವಸ್ತುಗಳನ್ನು ಬೇಡುವ ಪ್ರಕರಣಗಳಿವೆ. ಕೆಲವುಗಳಲ್ಲಿ ಬೇಡಿದ್ದನ್ನೇ ಮತ್ತೆ ಮತ್ತೆ ಕೇಳುವ ಅಂಶಗಳಿವೆ. ನಮ್ಮ ಅರಿವು ಆಳವಾದಂತೆ ಈ ರೀತಿ ಬೇಡುವುದು, ಮತ್ತೆ ಮತ್ತೆ ಅದನ್ನೇ ಕೇಳುವುದು, ಅನವಶ್ಯಕವಾದ ಪದಾರ್ಥಗಳ ಕೋರಿಕೆ, ಮುಂತಾದುವುಗಳ ಸಮಸ್ಯೆ ಕಾಡುತ್ತವೆ. ಇದಕ್ಕೆ ಪರಿಹಾರವೇನು?

ಅಂತಹವುಗಳ ಆಚರಣೆ ಬಿಡುವುದು ಒಂದು ಪರಿಹಾರ. ಆದರೆ ಅನೇಕ ಇಂತಹ ಸಂದರ್ಭಗಳಲ್ಲಿ ಅವುಗಳಲ್ಲಿ ನಮಗೆ ಹಿಡಿಸುವ, ಹಿತವಾದ ಅನೇಕ ವಿಷಯಗಳೂ ಸೇರಿರುತ್ತವೆ. ಕೆಲವಂತೂ ಮನಸ್ಸಿಗೆ ಹೆಚ್ಚಿನ ಮುದವನ್ನೂ, ಶಾಂತಿಯನ್ನೂ ಕೊಡುತ್ತವೆ. ಅನೇಕ ಕಡೆ ನಿಜವಾದ ಭಕ್ತಿ ಹೊರಹೊಮ್ಮುವ ಅವಕಾಶಗಳಿವೆ. ಹೀಗಾಗಿ ಅವನ್ನು ಬಿಡುವುದೂ ಪೂರ್ತಿಯಾಗಿ ಸರಿ ಕಾಣುವುದಿಲ್ಲ. 

ಮೇಲೆ ಚರ್ಚಿಸಿದ ಮೂವರು ಭಕ್ತರ ಗುಂಪುಗಳಲ್ಲಿ ಮೂರನೆಯ ಗುಂಪಿಗೆ ಹೋಗಲು ನಾವು ಬಹಳ ಬಹಳ ದೂರ ಹೋಗಬೇಕಾಗಿದೆ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಿವೆ ಅಂದರೆ ಮೊದಲನೆಯ ರೀತಿಯಲ್ಲಿ ಇರುವುದನ್ನು ದಾಟಿದ್ದೇವೆ ಅನ್ನಬಹುದು. ಆದ್ದರಿಂದ ಇಂತಹ ಬೇಡುವ ಸಂದರ್ಭಗಳಲ್ಲಿ ಮನಸ್ಸನ್ನು ಹದ ಮಾಡಿಕೊಂಡು ಕೇಳುವಾಗ "ಇದು ನಮ್ಮ ಭೋಗಕ್ಕಲ್ಲ. ಹೆಚ್ಚಿನ ಸಾಧನೆಗಾಗಿ ಬೇಡುತ್ತೇವೆ. ದುರುಪಯೋಗ ಮಾಡುವುದಿಲ್ಲ" ಅನ್ನುವ ಅನುಸಂಧಾನ ಇದ್ದು ಎರಡನೇ ವರ್ಗಕ್ಕೆ ಸೇರುವ ಪ್ರಯತ್ನ ಮಾಡಬಹುದು. 
***** 

ಮೂರನೆಯ ಗುಂಪಿನ ಭಕ್ತರ ಗುಣ-ಸ್ವರೂಪಗಳು ಮತ್ತು ಎರಡು-ಮೂರು ಉದಾಹರಣೆಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ ಪ್ರಯತ್ನ ಮಾಡೋಣ. 

Friday, April 18, 2025

ಎಂಜಲು ಮತ್ತು ಪ್ರಸಾದ


ಹಿಂದಿನ ಸಂಚಿಕೆಯಲ್ಲಿ "ಚರ್ವಿತ ಚರ್ವಣ" ಅನ್ನುವ ಶೀರ್ಷಿಕೆಯಡಿ "ಈ ಪ್ರಪಂಚದಲ್ಲಿರುವ ಸಾಹಿತ್ಯವೆಲ್ಲ  ವ್ಯಾಸರು ಹೇಳಿ ಬಿಟ್ಟದ್ದು" ಎನ್ನುವ ನಾಣ್ಣುಡಿ ನೆನಪಿಸಿಕೊಂಡೆವು. "ವ್ಯಾಸೋಚ್ಛಿಷ್ಟಮ್ ಜಗತ್ ಸರ್ವಂ" ಎನ್ನುವ ಈ ಹೇಳಿಕೆಯ ಹಿನ್ನೆಲೆಯಲ್ಲಿ, ಉಚ್ಚಿಷ್ಟ ಪದಕ್ಕೆ ಸಾಮಾನ್ಯವಾಗಿ "ತಿಂದು ಬಿಟ್ಟದ್ದು" ಅಥವಾ "ಎಂಜಲು" ಎಂದು ಅರ್ಥವಿದ್ದರೂ ಅದರಲ್ಲಿ ಏನಾದರೂ ವಿಶೇಷ ಅರ್ಥ ಇದೆಯೇ ಎಂಬ ಬಗ್ಗೆ ಪ್ರಶ್ನೆ ಹಾಕಿಕೊಂಡಿದ್ದೆವು. ಅದರ ಬಗ್ಗೆ ಈಗ ಸ್ವಲ್ಪ ಯೋಚಿಸೋಣ. ಇದರ ಹಿನ್ನೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. 

ಪರಮಾತ್ಮನ ಸೃಷ್ಟಿ ಕಾರ್ಯದಲ್ಲಿ, ಮೊದಲು ಅನ್ನವನ್ನು ಸೃಷ್ಟಿ ಮಾಡಿ ನಂತರ ಜೀವಿಗಳನ್ನು ಸೃಷ್ಟಿ ಮಾಡಲಾಯಿತು ಎನ್ನುವುದನ್ನು "ಬೃಹದಾರಣ್ಯಕೋಪನಿಷತ್" ಕೃತಿಯ "ಸಪ್ತಾನ್ನ ಪ್ರಕರಣ" ವಿಭಾಗದಲ್ಲಿ ಅತ್ಯಂತ ವಿವರವಾಗಿ ಚರ್ಚಿಸಲಾಗಿದೆ. ಸಾವಿರಾರು ವರುಷಗಳ ಹಿಂದೆ ಇಂಥದೊಂದು ವಿಸ್ತಾರವಾದ ಚರ್ಚೆ ನಮ್ಮಲ್ಲಿ ನಡೆದಿದೆ ಎನ್ನುವುದೇ ಒಂದು ವಿಸ್ಮಯದ ವಿಷಯ. ಇಲ್ಲಿ ಅನ್ನ ಅಂದರೆ ಭತ್ತದಿಂದ ತೆಗೆದ ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ಆಹಾರ ರೂಪದಲ್ಲಿ ಸಮಸ್ತ ಪ್ರಾಣಿಗಳೂ ಸೇವಿಸುವ ಪದಾರ್ಥಗಳನ್ನು ಒಟ್ಟಾಗಿ "ಅನ್ನ" ಎಂದು ಹೇಳಲಾಗಿದೆ. ಏಳು ರೀತಿಯ ಅನ್ನಗಳು, ಅವನ್ನು ಸೇವಿಸುವ ಗುಂಪುಗಳು ಮತ್ತು ಅವನ್ನು ನೀಡುವ ಪಾಲಕ (ಕಸ್ಟೋಡಿಯನ್) ಇವುಗಳನ್ನು ಒಂದು ಕೋಷ್ಠಕದ ರೀತಿ ವಿವರಿಸಲಾಗಿದೆ. ಇದರ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ. 

ಈ ಚರ್ಚೆಯ ಸಂದರ್ಭದಲ್ಲಿ ಎಂಜಲು, ಶೇಷಾನ್ನ, ಪಿತೃಶೇಷ, ಮಾತೃ ಭೋಜನ ಮತ್ತು ಪ್ರಸಾದ ಎನ್ನುವ ಬೇರೆ ಬೇರೆ ರೀತಿಯ ವರ್ಗೀಕರಣ ಮತ್ತು ಸಮಾಜದಲ್ಲಿ ನಡೆಯುವ ಪದ್ದತಿ ಹಾಗೂ ಸಂಪ್ರದಾಯಗಳನ್ನು ಕೂಡ ನೋಡಬಹುದು. 

*****

ಕೆಲವು ಪದಾರ್ಥಗಳನ್ನು ಒಬ್ಬ ವ್ಯಕ್ತಿಯೇ ತಿಂದು ಮುಗಿಸಬಹುದು. ಕೆಲವು ಪದಾರ್ಥಗಳು ಒಬ್ಬನೇ ವ್ಯಕ್ತಿಗೆ ಅನೇಕ ಸಂಖ್ಯೆಯಲ್ಲಿ ಬೇಕಾಗಬಹುದು. ಮತ್ತೆ ಕೆಲವು ಪದಾರ್ಥಗಳು ಒಬ್ಬರು ತಿಂದು ಮುಗಿಸುವುದಕ್ಕೆ ಅಸಾಧ್ಯವೇ. ಒಂದು ಬಾಳೆಯಹಣ್ಣು ಅಥವಾ ಒಂದು ಕಿತ್ತಳೆಯನ್ನು ಒಬ್ಬನೇ ತಿನ್ನಬಹುದು. ದ್ರಾಕ್ಷಿಯಾದರೆ ಒಬ್ಬನೇ ಹತ್ತಿಪ್ಪತ್ತು ತಿನ್ನಬಹುದು. ಒಂದು ದೊಡ್ಡ ಹಲಸಿನ ಹಣ್ಣಾದರೆ ಒಬ್ಬನೇ ತಿನ್ನಲು ಅಸಾಧ್ಯ. ಹಣ್ಣುಗಳದ್ದು ಒಂದು ಸರಳ ಉದಾಹರಣೆ. ಇದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ಮಾಡಿಟ್ಟ ಅನೇಕ ತಿನಿಸುಗಳಿಂದ ಕೂಡಿದ ಅಡಿಗೆ. ಇದನ್ನು ಅನೇಕರು ಒಟ್ಟಿಗೆ ಅಥವಾ ಬೇರೆ ಬೇರೆಯಾಗಿ ಸೇವಿಸಬಹುದು. 

ಇಂತಹ ಒಂದು ಅನೇಕ ವ್ಯಂಜನಗಳಿಂದ (ಪಲ್ಯ, ಗೊಜ್ಜು, ಕೂಟು, ಚಟ್ನಿ ಮುಂತಾದುವುಗಳಿಗೆ ವ್ಯಂಹಜನಗಳು ಎನ್ನುತ್ತಾರೆ) ಕೂಡಿದ ಹತ್ತಾರು ಜನ ಸೇವಿಸಬಹುದಾದ ಪ್ರಮಾಣದ ಅಡಿಗೆಯನ್ನು ತೆಗೆದುಕೊಳ್ಳೋಣ. ಇಪ್ಪತ್ತು ಜನರಿಗೆ ಎಂದು ಮಾಡಿದ ತಯಾರಿ ಅನ್ನೋಣ. ಹತ್ತು ಜನರು ಮೊದಲು ಊಟಕ್ಕೆ ಕುಳಿತರು. ಅಡಿಗೆ ಸೊಗಸಾಗಿತ್ತು. ಊಟದ ಮನೆಯ ವಾತಾವರಣ ಚೆನ್ನವಿತ್ತು. ಬಡಿಸುವವರು ನುರಿತವರು. ಊಟಕ್ಕೆ ಕುಳಿತವರೋ ಭೋಕ್ತಾಪುರುಷರು. (ಒಳ್ಳೆಯ ಪ್ರಮಾಣದಲ್ಲಿ ಪದಾರ್ಥಗಳನ್ನು ಚೆನ್ನಾಗಿ ಊಟ ಹೊಡೆಯುವವರನ್ನು ಭೋಕ್ತಾಪುರುಷರು ಎಂದು ಹೇಳುತ್ತಿದ್ದರು). ಬಹಳ ವಿನೋದ ಮತ್ತು ಸ್ವಲ್ಪ ಸಂಗೀತ ಇತ್ಯಾದಿಗಳ ನಡುವೆ ಊಟ ಚೆನ್ನಾಗಿ ಸಾಗಿತು. ಹತ್ತು ಜನರೂ ಊಟಮಾಡಿ ಎದ್ದಿದ್ದಾರೆ. 

ಮಾಡಿದ ಅಡಿಗೆಯಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚಾಗಿ ಖರ್ಚಾಗಿದೆ. ಅಂಕಿ-ಅಂಶಗಳ ಲೆಕ್ಕದಲ್ಲಿ ಹೇಳುವುದಾದರೆ ಶೇಕಡಾ ಅರವತ್ತರಷ್ಟು ಸೇವಿಸಿಯಾಗಿದೆ. ಮಿಕ್ಕ ನಲವತ್ತು ಭಾಗ ತಯಾರಿಸಿದ ಮತ್ತು ಬಡಿಸಿದ ಪಾತ್ರೆಗಳಲ್ಲಿ ಉಳಿದಿದೆ. ಹತ್ತು ಜನ ಊಟ ಮಾಡಿದವರ ಎಲೆಗಳಲ್ಲೂ ಸ್ವಲ್ಪ ಸ್ವಲ್ಪ ಪದಾರ್ಥಗಳು ಉಳಿದಿವೆ. ಈ ರೀತಿ ಊಟ ಮಾಡಿ ಬಿಟ್ಟ ಎಲೆಗಳಲ್ಲಿ ಅಥವಾ ತಟ್ಟೆಗಳಲ್ಲಿ ಬಿಟ್ಟಿರುವ ಪದಾರ್ಥಗಳನ್ನು "ಎಂಜಲು" ಎನ್ನುವುದು ವಾಡಿಕೆ. ಇದನ್ನು ಯಾರೂ ತಿನ್ನುವುದಿಲ್ಲ. ಅವೆಲ್ಲವನ್ನೂ ಒಟ್ಟುಗೂಡಿಸಿ ಹೊರಗಡೆ ಬಿಸಾಡುತ್ತಾರೆ. ಅಲ್ಲಿ ಪ್ರಾಣಿಗಳು ತಿನ್ನಬಹುದು ಇಲ್ಲವೇ ಕಡೆಗೆ ಗೊಬ್ಬರ ಆಗಬಹುದು. ಆದರೆ ತಯಾರಿಸಿದ ಮತ್ತು ಬಡಿಸುವ ಪಾತ್ರೆಗಳಲ್ಲಿ ಉಳಿದಿರುವ ಪದಾರ್ಥಗಳು ಎಂಜಲಲ್ಲ. ಅದನ್ನು ನಿರ್ದೇಶಿಸಲು ಬಳಸುವ ಪದ "ಮಿಕ್ಕಿದ್ದು" ಎಂದು. "ಶೇಷಾನ್ನ" ಎಂದು ಹಿಂದೆ ಹೇಳುತ್ತಿದ್ದರು. ಇದು ಎಂಜಲಲ್ಲ. ಬೇರೆಯವರು ಸೇವಿಸಲು ಯೋಗ್ಯವಾದದ್ದು. 

*****

ಶ್ರಾದ್ಧಾದಿ ಕರ್ಮಗಳನ್ನು (ತಿಥಿ ಎಂದು ಹೇಳುವುದು ವಾಡಿಕೆ) ಮಾಡುವ ದಿನ ಆ ಕೆಲಸಕ್ಕಾಗಿಯೇ ವಿಶೇಷ ಅಡಿಗೆ ಮಾಡಿರುತ್ತಾರೆ. ಆ ಕಾರ್ಯಕ್ರಮಕ್ಕೆ ಪಿತೃಗಳ ಪ್ರತಿನಿಧಿಗಳಾಗಿ ಕೆಲವರನ್ನು ಆಮಂತ್ರಿಸಿರುತ್ತಾರೆ. ಅವರನ್ನು ಊಟಕ್ಕೆ ಕೂಡಿಸಿ, ಅವರಲ್ಲಿ ಪಿತೃದೇವತೆಗಳನ್ನು ಆವಾಹಿಸಿ ಭೋಜನ ಮಾಡಿಸುತ್ತಾರೆ. ಅವರ ಊಟ ಮುಗಿದು, ಕೈ ತೊಳೆಯಲು ಏಳುವ ಮುಂಚೆ ಅಲ್ಲಿ ಮಾಡಿರುವ ಅನ್ನದಲ್ಲಿ "ಪಿಂಡದಾನ" ಮಾಡುತ್ತಾರೆ. (ಈ ಪಿಂಡಪ್ರದಾನ ಸಮಯದಲ್ಲೂ ಅಸ್ವಾಭಿಕ ಮರಣಹೊಂದಿದ ಪಿತೃಗಳಿಗೆ "ಉಚ್ಚಿಷ್ಟ ಪಿಂಡ" ಎಂದು ಬೇರೊಂದು ಪಿಂಡಪ್ರದಾನ ಮಾಡುತ್ತಾರೆ).  ಶ್ರಾದ್ಧ ಕರ್ಮಕ್ಕೆ ಬಂದವರ ಊಟ ಆಯಿತು. ಮಾಡಿದ ಅಡಿಗೆ ಇನ್ನೂ ಮಿಕ್ಕಿದೆ. ಇದು ಶೇಷಾನ್ನ. ಪಿತೃಕಾರ್ಯ ಮಾಡಿ ಉಳಿದ ಶೇಷಾನ್ನ ಆದುದರಿಂದ ಇದು "ಪಿತೃ ಶೇಷ" ಎಂದಾಯಿತು. 

ಕಾರ್ಯ ನಡೆಯುವಾಗ ಊಟ ಮಾಡಿದ ಹಿರಿಯರನ್ನು ಕಾರ್ಯ ಮಾಡಿದ ಯಜಮಾನ "ಮಿಕ್ಕ ಅಡಿಗೆಯನ್ನು ಏನು ಮಾಡೋಣ?" (ಶೇಷಾನ್ನ೦ ಕಿಂ ಕರಿಷ್ಯೇ?) ಎಂದು ಕೇಳುತ್ತಾನೆ. "ನಿನ್ನ ಬಂಧುಗಳೊಡನೆ ಸೇವಿಸಬಹುದು" (ಇಷ್ಟೆ:ಸಹ ಭುಂಜತಾಮ್) ಎಂದು ಅವರು ಹೇಳುತ್ತಾರೆ. (ಇದು ಸಂಸ್ಕೃತದಲ್ಲಿ ನಡೆಯುವ ಸಂಭಾಷಣೆಯಾದದ್ದರಿಂದ ಇದೂ ಒಂದು ಮಂತ್ರವೆಂದು ತಿಳಿಯುವುದೂ ಉಂಟು!). ಇದೇ ಪಿತೃಶೇಷ ಸೇವನೆ. ಶ್ರದ್ದಾಳು ಬಂಧುಗಳು "ಪಿತೃಗಳ ಪ್ರಸಾದವಿದು" ಎನ್ನುವ ಪೂಜ್ಯ ಭಾವನೆಯಿಂದ ಈ ವಿಶೇಷಕ್ಕಾಗಿ ದೂರ ದೂರದಿಂದ ಬರುತ್ತಾರೆ. ಬಂಧು-ಭಾಂಧವರಲ್ಲದವರು ಈ ಪದಾರ್ಥಗಳನ್ನು ಸೇವಿಸುವುದಿಲ್ಲ. 

*****

ತಾಯಿಗೂ ಮಕ್ಕಳಿಗೂ ಇನ್ನೆಲ್ಲಿಲ್ಲದ ವಿಶೇಷ ಸಂಬಂಧ. ಗರ್ಭದಲ್ಲಿದ್ದಾಗ ತಾಯಿ ಸೇವಿಸಿದ ಆಹಾರವನ್ನು ಹೊಕ್ಕುಳ ಬಳ್ಳಿಯ ಮೂಲಕ ಸೇವಿಸಿ, ಬೆಳೆದು ಹುಟ್ಟಿದ್ದಾಯಿತು. ಮನುಷ್ಯರಲ್ಲಿ ಹುಟ್ಟಿದ ಶಿಶು ದೊಡ್ಡದಾಗಲು ಕೆಲವು ವರುಷಗಳೇ ಆಗುತ್ತವೆ. ಮಗುವಿಗೆ ಎಲ್ಲ ಬೇಕು-ಬೇಡಗಳಿಗೂ ಅಮ್ಮನೇ ಬೇಕು. ಕಂಠದವರೆಗೂ ತಿಂದಿದ್ದರೂ ಅಮ್ಮ ಊಟಕ್ಕೆ ಕುಳಿತಾಗ ಅವಳ ತಟ್ಟೆಯಲ್ಲಿ ಅಥವಾ ಎಲೆಯಲ್ಲಿ ಇರುವ ಪದಾರ್ಥವೇ ಬೇಕು. ಇದು ಯಾವುದೂ ತರ್ಕಕ್ಕೆ ನಿಲುಕುವ ವಿಷಯವಲ್ಲ. ಅದನ್ನು ಅನುಭವವೇ ಅರ್ಥ ಮಾಡಿಸಬೇಕು. ತಾಯಿಯಿರುವ ಎಲ್ಲರೂ ಈ ರೀತಿ ಬೆಳೆದವರೇ. ಒಂದು ವಯಸ್ಸಿನವರೆಗೆ ಹೀಗೆಯೇ ನಡೆಯುತ್ತದೆ. 

"ಉಪನಯನ" ಅಥವಾ "ಮುಂಜಿ" ಎನ್ನುವ ಸಂಸ್ಕಾರ ಮಾಡುವ ಕುಟುಂಬಗಳಲ್ಲಿ ಮಂತ್ರೋಪದೇಶಕ್ಕೆ ಮೊದಲು "ಮಾತೃಭೋಜನ" ಎನ್ನುವ ಒಂದು ಕಾರ್ಯಕ್ರಮ ನಡೆಯುತ್ತದೆ. ಇಂದಿನಿಂದ ಮುಂದೆ ಉಪನಯನ ಆದವನು ಮತ್ತೊಬ್ಬರ ಎಲೆಯಲ್ಲಿ ಇರುವ ಪದಾರ್ಥ ತಿನ್ನುವಂತಿಲ್ಲ. ಅವನು ಪ್ರತಿದಿನ ಮಾಡುವ ಭೋಜನವೂ ತನ್ನಲ್ಲಿರುವ ಪ್ರಾಣಾಗ್ನಿಗೆ ಕೊಡುವ ಆಹುತಿ. ಇದಕ್ಕಾಗಿಯೇ ತಾಯಿ-ಮಗನನ್ನು ಅಂದು ಮಂತ್ರೋಪದೇಶದ ಮುಂಚೆ ಒಟ್ಟಿಗೆ ಕೂಡಿಸಿ ಒಂದೇ ಎಲೆಯಲ್ಲಿ ಆಹಾರ ಬಡಿಸುತ್ತಾರೆ. ಇದೊಂದು ಭಾವನೆಗಳ ಕೇಂದ್ರಿತ ಕಾರ್ಯಕ್ರಮ. ಹಿಂದೆಲ್ಲ ಇದೊಂದು ಸಣ್ಣ ಖಾಸಗಿ ವಿಷಯವಾಗಿ ನಡೆಯುತ್ತಿತ್ತು. ಈಗ ಈವೆಂಟ್ ಮ್ಯಾನೇಜ್ಮೆಂಟ್ ನೇತೃತ್ವದಲ್ಲಿ ಬಹಳ ವೈಭವೋಪೇತವಾಗಿ ನಡೆಯುತ್ತದೆ. 

***** 

ಎಂಜಲು, ಶೇಷಾನ್ನ, ಪಿತೃಶೇಷ ಮತ್ತು ಮಾತೃಭೋಜನದ ಬಗ್ಗೆ ನೋಡಿದ್ದಾಯಿತು. ಇನ್ನು ಪ್ರಸಾದದ ಬಗ್ಗೆ ನೋಡೋಣ. 

ನಾವು ನಂಬಿದ ದೈವಕ್ಕೆ ಕೃತಜ್ಞತೆ ತೋರಿಸುವ ಸಲುವಾಗಿ ಪೂಜೆ-ಪುನಸ್ಕಾರಗಳನ್ನು ಮಾಡುವುದು ಬಹಳ ಹಿಂದಿನಿಂದ ಬಂದಿರುವ ಒಂದು ಸಂಪ್ರದಾಯ. ಈ ರೀತಿ ಮಾಡುವಾಗ ಭಯ-ಭಕ್ತಿಗಳಿಂದ ಇಷ್ಟದೈವಕ್ಕೆ ಕೊಡಲು ತಿಂಡಿ-ತಿನಿಸು, ಅಡಿಗೆ, ಪಾನೀಯ ಇತ್ಯಾದಿ ಮಾಡುವುದು. ಹಣ್ಣು-ಹಂಪಲುಗಳನ್ನು ಸೇರಿಸುವುದು. ತಯಾರು ಮಾಡಿದ ಮತ್ತು ಸಂಪಾದಿಸಿದ ಇಂತಹ ಪದಾರ್ಥಗನ್ನು ಆವಾಹಿಸಿದ ದೇವರು-ದೇವತೆಗಳ ಮುಂದೆ ಇಟ್ಟು "ಷೋಡಶೋಪಚಾರ" (ಹದಿನಾರು ಹಂತದ ಪೂಜೆ) ಅಂಗವಾಗಿ "ನೈವೇದ್ಯ" ಮಾಡುತ್ತಾರೆ. ಹೀಗೆ ಮಾಡುವಾಗ ಪರಮಾತ್ಮನು ಅಲ್ಲಿ ಇಟ್ಟ ಪದಾರ್ಥಗಳಲ್ಲಿ ತನಗೆ ಯೋಗ್ಯವಾದ ಅಂಶಗಳನ್ನು ರಸರೂಪವಾಗಿ ನೋಟದಿಂದ ಸೇವಿಸುತ್ತಾನೆ ಎಂದು ನಂಬಿಕೆ. ಹೀಗೆ ನೈವೇದ್ಯ ಮಾಡಿದ ಮೇಲೆ ಅಲ್ಲಿ ಉಳಿದ ಪದಾರ್ಥ "ಪ್ರಸಾದ" ಆಯಿತು. ಅನುಗ್ರಹ ರೂಪವಾಗಿ ನಮಗೆ ಹಿಂದೆ ಬಂದಿದ್ದು "ಪ್ರಸಾದ" ಎಂದು ನಿರ್ದೇಶಿತವಾಯಿತು. 

ದೇವರು ಸ್ವೀಕರಿಸಿ (ತಿಂದು) ಬಿಟ್ಟ ಇದನ್ನು ಯಾರೂ ದೇವರ ಎಂಜಲು ಎನ್ನುವುದಿಲ್ಲ. ಬಹಳ ಗೌರವಪೂರ್ವಕ "ಪ್ರಸಾದ" ಎನ್ನುತ್ತಾರೆ. ಯಾರಾದರೂ ಕೊಟ್ಟರೆ ಎರಡೂ ಕೈಗಳಿಂದ ಸ್ವೀಕರಿಸುತ್ತಾರೆ. ಮೊದಲು ನೋಡಿದ ಎಂಜಲು ಮತ್ತು ಈಗ ನೋಡಿದ ಪ್ರಸಾದಕ್ಕೆ ಎಷ್ಟು ವ್ಯತ್ಯಾಸ! ಅದರ ಬೆಲೆ ನಂಬಿಕೆ ಮತ್ತು ಶ್ರದ್ದೆಯಲ್ಲಿ ಇದೆ. ಭೌತಿಕವಾಗಿ ನೋಡಿದರೆ ವ್ಯತ್ಯಾಸವಿಲ್ಲ. ಭಾವನಾತ್ಮಕವಾಗಿ ನೋಡಿದರೆ ಎಲ್ಲಿಲ್ಲದ ವ್ಯತ್ಯಾಸ. 

ದೊಡ್ಡ ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಗೆ ಮಾಡಿದಾಗ ಪಾಕಶಾಲೆಯಲ್ಲಿಯೇ ನೈವೇದ್ಯ ಮಾಡುತ್ತಾರೆ. ಸಾಮೂಹಿಕ ಭೋಜನಶಾಲೆಗಳಿರುವ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಮನೆಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ತಯಾರಿಸಿದ ಎಲ್ಲಾ ಪದಾರ್ಥಗಳನ್ನೂ ಒಂದು ಹರಿವಾಣದಲ್ಲಿ ಸ್ವಲ್ಪ ಸ್ವಲ್ಪ ಬಡಿಸಿ ನೈವೇದ್ಯ ಮಾಡುತ್ತಾರೆ. ನಂತರ ಅದನ್ನು ಅದೇ ಕ್ರಮದಲ್ಲಿ ಮಾಡಿರುವ ಹೆಚ್ಚಿನ ಅಡಿಗೆ ಪದಾರ್ಥಗಳಲ್ಲಿ ಸೇರಿಸುತ್ತಾರೆ. ಈಗ ಮಾಡಿದ ಅಡಿಗೆ ಎಲ್ಲ ಪ್ರಸಾದವಾಯಿತು!

ಅನೇಕ ದಶಕಗಳ ಹಿಂದೆ ಕಾಶಿ-ರಾಮೇಶ್ವರ ಯಾತ್ರೆ ಬಹಳ ಕಠಿಣದ್ದಾಗಿತ್ತು. ಹೀಗೆ ಯಾತ್ರೆ ಹೋದವರು ದಾರಿಯಲ್ಲಿ ಸಿಗುವ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಂದ ಪ್ರಸಾದ ತರುತ್ತಿದ್ದರು. ಸಾಮಾನ್ಯವಾಗಿ ಕಲ್ಲುಸಕ್ಕರೆ, ಒಣದ್ರಾಕ್ಷಿ, ಉತ್ತತ್ತಿ (ಖರ್ಜೂರ), ಪಂಚಕಜ್ಜಾಯ, ಕಲ್ಯಾಣಸೇವೆ ಮುಂತಾದ, ಬಹಳ ದಿನ ಕೆಡದೆ ಇರುವ ಪದಾರ್ಥಗಳ ಪ್ರಸಾದಗಳು. ತಿರುಪತಿಯಂತಹ ಕ್ಷೇತ್ರವಾದರೆ ಲಾಡುವೂ ಆಗಬಹುದು. ಯಾತ್ರೆ ಮುಗಿದು ಊರಿಗೆ ಬಂದ ನಂತರ ಒಂದು ದಿನ ಬಂಧು-ಮಿತ್ರರನ್ನೆಲ್ಲ ಕರೆದು ಸಮಾರಾಧನೆ ನಡೆಸುತ್ತಿದ್ದರು. "ಕಾಶಿ ಸಮಾರಾಧನೆ" ಅಥವಾ "ಗಂಗಾ ಸಮಾರಾಧನೆ" ಎಂದು ಅದಕ್ಕೆ ಹೆಸರು. ಇಷ್ಟದೇವತೆಯ ಜೊತೆಗೆ ಈ ಎಲ್ಲ ಕ್ಷೇತ್ರಗಳ ಪ್ರಸಾದಗಳನ್ನೂ ಪೂಜಿಸಿ ಬಂದವರಿಗೆ ವಿತರಿಸುತ್ತಿದ್ದರು. ಈಗ ಈ ಪದ್ಧತಿ ನಿಂತೇ ಹೋಗಿದೆ. 

*****

ಭಗವಾನ್ ವೇದವ್ಯಾಸರ ಕುರಿತಾದ ನಾಣ್ನುಡಿ ವಿಷಯದಲ್ಲಿ ಉಚ್ಚಿಷ್ಟ ಅನ್ನುವ ಪದಕ್ಕೆ ಎಂಜಲು ಎಂದು ಅರ್ಥ ಮಾಡುವುದು ಅಷ್ಟು ಸಮಂಜಸವಲ್ಲ. ಅವರ ಅನೇಕ ಸೃಷ್ಟಿಗಳಲ್ಲಿ ಒಂದಾದ ಮಹಾಭಾರತದ ವಿಷಯದಲ್ಲಿಯೇ "ಇಲ್ಲಿರುವುದೇ ಬೇರೆಲ್ಲ ಕಡೆ ಇರುವುದು. ಇಲ್ಲಿರದುದು ಬೇರೆಲ್ಲಿಯೂ ಇಲ್ಲ" ಎಂದು ಹೇಳುತ್ತಾರೆ. ಈ ಕೃತಿಯ ಒಂದು ಎಳೆ ಹಿಡಿದು ಕೃತಿ ರಚಿಸಿ ಅನೇಕರು ಮಹಾಕವಿಗಳಾದರು; ಪೂಜ್ಯರೆನಿಸಿದರು. ಕೆಲವು ಕೃತಿಗಳನ್ನು ಒಮ್ಮೆ ಓದಿದರೆ ಮುಗಿಯಿತು. ಆದರೆ ವೇದವ್ಯಾಸರ ಕೃತಿಗಳು ಮತ್ತೆ ಮತ್ತೆ ಓದಿದರೆ ಹೊಸ ಹೊಸ ಅರ್ಥಗಳು ಇಂದಿಗೂ ಹೊಳೆಯುತ್ತವೆ. 

ಈ ದೃಷ್ಟಿಯಿಂದ "ವ್ಯಾಸೋಚ್ಛಿಷ್ಟಮ್ ಜಗತ್ಸರ್ವಂ" ಎನ್ನುವುದಕ್ಕೆ "ವ್ಯಾಸರು ನಮಗೆ ಕೊಟ್ಟಿರುವ ಪ್ರಸಾದ" ಎನ್ನುವುದೇ ಸರಿ ಎನ್ನಬಹುದು. 

ಈ ಸಂಚಿಕೆ ಈಗಾಗಲೇ ದೀರ್ಘವಾಗಿರುವುದರಿಂದ, ಎಂಜಲು ಎನ್ನುವ ವಿಷಯದಲ್ಲಿ ಶ್ರೀಕನಕದಾಸರು ಹೇಳಿರುವ ವಿಶೇಷ ವಿಷಯವನ್ನು ಮುಂದೊಮ್ಮೆ ನೋಡೋಣ.