Showing posts with label Devaru. Show all posts
Showing posts with label Devaru. Show all posts

Friday, June 27, 2025

ದೇವರಲ್ಲಿ ಬೇಡುವುದು ಸರಿಯೇ?


ಹಿಂದಿನ ಸಂಚಿಕೆಗಳಲ್ಲಿ "ಅಷ್ಟ ಭೋಗ", "ಅಷ್ಟ ಭಾಗ್ಯ" ಮತ್ತು "ಅಷ್ಟ ಐಶ್ವರ್ಯ" ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆ ಮಾಡಿದೆವು. (ಈ ಹಿಂದಿನ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಇವುಗಳು ತಾವಾಗಿಯೇ ಸಿಗುವುದಿಲ್ಲ. ಕೆಲವನ್ನು ಸ್ವಲ್ಪ ಮಟ್ಟಿಗೆ ನಾವೇ ಸ್ವಂತ ಪರಿಶ್ರಮದಿಂದ ಗಳಿಸಬಹುದಾದರೂ ಅವುಗಳ ಪ್ರಮಾಣ ಹೆಚ್ಚಿರುವುದಿಲ್ಲ. ಅಷ್ಟೇ ಅಲ್ಲ, ಮನುಷ್ಯ ಸಹಜ ಬುದ್ಧಿಯ ಕಾರಣವಾಗಿ ಎಷ್ಟು ಸಂಪಾದನೆ ಮಾಡಿದರೂ ತೃಪ್ತಿ ಎನ್ನುವುದು ಬರುವುದಿಲ್ಲ. "ಇಷ್ಟು ದೊರಕಿದರೆ ಇನ್ನಷ್ಟು ಬೇಕೆಂಬಾಸೆ. ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ. ಕಷ್ಟ ಬೇಡ ಎಂಬಾಸೆ. ಕಡು ಸುಖವ ಕಾಂಬಾಸೆ." ಎಂದು ದಾಸರು ಹೇಳುವಂತೆ ಮನುಷ್ಯನಿಗೆ ಕಷ್ಟ ಬೇಡವೇ ಬೇಡ. ಸುಖ ಬೇಕೇ ಬೇಕು. ಅಷ್ಟೇ ಅಲ್ಲ. ಸುಖ ಇದ್ದಷ್ಟೂ ಇನ್ನೂ ಹೆಚ್ಚು ಬೇಕೆಂಬ ತವಕ. 

ತಾವಾಗಿಯೇ ಸಿಗದ, ನಾವು ಕಷ್ಟ ಪಟ್ಟರೂ ಪೂರ್ಣವಾಗಿ ಎಟುಕದ, ಆದರೆ ಬೇಕೆಂಬ ತುಡಿತವುಳ್ಳ ಈ ವಿಷಯಗಳನ್ನು ಪಡೆಯುವುದು ಹೇಗೆ? ನಮ್ಮ ಅನುಭವ ಹೇಳಿಕೊಟ್ಟಂತೆ ನಮ್ಮಲ್ಲಿ ಇಲ್ಲದಿದ್ದುದನ್ನು ಬೇರೆಯವರಿಂದ ಕೇಳಿ ಪಡೆಯಬಹುದು. ಹಾಗಿದ್ದರೆ ಯಾರನ್ನು ಕೇಳಬೇಕು? ಯಾರಾದರೂ ತಮ್ಮ ಬಳಿ ಇರುವುದನ್ನು ಮಾತ್ರ ಕೊಡಬಲ್ಲರು. ಅವರ ಬಳಿಯೇ ಇಲ್ಲದಿದ್ದುದನ್ನು ಯಾರಾದರೂ ಕೊಡುವುದು ಹೇಗೆ? ಆದಕಾರಣ ನಾವು ನಂಬಿದ ದೇವರನ್ನೋ, ದೇವತೆಯನ್ನೋ ಕೇಳಬಹುದು. ಅದರಲ್ಲಿಯೂ ಯಾರು ಸುಲಭವಾಗಿ ನಮಗೆ ಒಲಿಯುವವರೋ ಅವರನ್ನು ಕೇಳುವುದು. ಅವರಲ್ಲಿ ಕೊಡುವ ಶಕ್ತಿ ಇದ್ದರೂ ಕೇಳಿದರೆ ಕೊಡದವರನ್ನು ಬೇಡಿ ಏನು ಪ್ರಯೋಜನ? 

ಸಾಧನೆಯ ದಾರಿಯಲ್ಲಿ ನಡೆಯುತ್ತಿರುವ ಜಿಜ್ಞಾಸುವಿಗೆ "ಹೀಗೆ ಕೇಳುವುದು ಸರಿಯೇ?" ಎಂಬ ಅನುಮಾನ ಬರುವುದು ಸಹಜ. ವಾಸ್ತವವಾಗಿ ಈ ರೀತಿಯ ಅನುಮಾನ ಬರುವುದೇ ಒಂದು ಒಳ್ಳೆಯ ಸೂಚನೆ. ಎಷ್ಟು ಸಿಕ್ಕಿದರೂ ತೃಪ್ತಿ ಇಲ್ಲದ ಜೀವಕ್ಕೆ ಕೇಳುವುದರ ಎಲ್ಲೆ ಎಲ್ಲಿ? "ಕಿಂಗ್ ಮೈದಾಸ" ಕೇಳಿದಂತೆ ಮುಟ್ಟಿದ್ದೆಲ್ಲವೂ ಚಿನ್ನವಾಗಬೇಕು. ಅದು ನಿಜವಾಗಿ ಮುಟ್ಟಿದ್ದೆಲ್ಲಾ ಚಿನ್ನವಾದಾಗ, ತನ್ನ ಮುದ್ದಿನ ಮಗಳೂ ಒಂದು ಚಿನ್ನದ ಬೊಂಬೆಯಾಗಿ ಕುಳಿತಾಗ, ಅವನ ಕಣ್ಣು ತೆರೆಯಿತು. ಅಂತಹ ಅತಿರೇಕಕ್ಕೆ ಹೋಗದಿದ್ದರೆ ಆ ರೀತಿಯ ಪಾಠ ಕಲಿಯುವುದೂ ಸುಲಭ ಸಾಧ್ಯವಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಒಮ್ಮೆ ಕೇಳುವುದು ಅಭ್ಯಾಸವಾದರೆ ಆ ದುರಭ್ಯಾಸ ನಿಲ್ಲಿಸುವುದು ಕಷ್ಟವೇ. ಇದರಿಂದ ಹೊರಬರುವುದು ಹೇಗೆ?
*****

ಒಬ್ಬ ದೊಡ್ಡ ಧನಿಕ ಇದ್ದಾನೆ. ಅವನ ಬಳಿ ಬೇಕಾದಷ್ಟು ಐಶ್ವರ್ಯ ಇದೆ. ಕೊಡುವ ಶಕ್ತಿಯ ಜೊತೆ ಕೊಡುವ ಮನಸ್ಸೂ ಇದೆ. ಅನೇಕರು ಅವನ ಬಳಿ ಬಂದು, ಬೇಡಿ, ಬೇಕಾದುದನ್ನು ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ತೆಗೆದುಕೊಂಡು ಹೋಗುವವರ ಸರತಿಯ ಸಾಲೇ ಇದೆ. 

ಒಂದು ದಿನ ಮೊದಲನೆಯವನು ಬಂದ. ಅವನಿಗೆ ಸ್ವಂತ ಖರ್ಚಿಗೆ ಹಣ ಬೇಕು. ಅದನ್ನು ಕೇಳುವುದಕ್ಕಾಗಿ ಬಂದಿದ್ದಾನೆ. ಕೇಳಲು ನಾಚಿಕೆ. ಬಹಳ ಸಂಕೋಚದಿಂದ ತಲೆ ಕೆಳಗೆ ಮಾಡಿ ಬೇಡುತ್ತಾನೆ. ಕೊಡುವ ಧನಿಕನ ಕೈ ಯಾವಾಗಲೂ ಮೇಲೆ. ಕೇಳುವವನಿಗೆ ಅನುಮಾನ. "ಕೊಡುತ್ತಾನೋ ಇಲ್ಲವೋ ಗೊತ್ತಿಲ್ಲ. ಹೇಗೆ ಕೇಳುವುದು? ಯಾವ ರೀತಿ ಕೇಳಿದರೆ ಕೊಡಬಹುದು? ಇಲ್ಲ ಅಂದುಬಿಟ್ಟರೆ ಏನು ಮಾಡುವುದು? ಕೊಟ್ಟರೂ ಏನು ಹೇಳಿ ಕೊಡುತ್ತಾನೋ? ಸಾಲ ಎಂದು ಕೊಡಬಹುದು. ಇಷ್ಟು ಬಡ್ಡಿ ಎಂದು ಹೇಳಬಹುದು. ಈಗ ಇಲ್ಲ, ನಾಳೆ ಬಾ ಎನ್ನಬಹುದು. ಹತ್ತು ಬಾರಿ ಓಡಾಡಿಸಿ ಕೊಡಬಹುದು. ಇನ್ನೊಬ್ಬರ ಮುಂದೆ ಅವಮಾನ ಮಾಡಬಹುದು. ಏನಾದರೂ ಕೇಳಲೇಬೇಕು. ವಿಧಿಯಿಲ್ಲ" ಹೀಗೆಲ್ಲಾ ಮನಸ್ಸಿನಲ್ಲಿ ಗೊಂದಲ. ಕಡೆಗೆ ಧೈರ್ಯ ಮಾಡಿ ಕೇಳಿದ. ಸಾಹುಕಾರ ಕೊಟ್ಟೇಬಿಟ್ಟ. ಅವನ ಕೆಲಸವಾಯಿತು. ಹೊರಟುಹೋದ. 

ಈಗ ಎರಡನೆಯವನು ಬಂದ. ಇವನು ತನಗೋಸ್ಕರ ಹಣ ಕೇಳಲು ಬಂದವನಲ್ಲ. ಇವನು ಯಾವುದೋ ಸಂಸ್ಥೆಯ ಒಬ್ಬ ವಿಶ್ವಸ್ತ ಮಂಡಳಿಯವನು (ಟ್ರಸ್ಟೀ). ಕೇಳುತ್ತಿರುವುದು ತನಗಾಗಿ ಅಲ್ಲ. ಟ್ರಸ್ಟಿಗಾಗಿ. ಪಡೆವ ಹಣದಿಂದ ಸ್ವಂತಕ್ಕೆ ಪ್ರಯೋಜನ ಪಡೆಯುವ ಅಭಿಲಾಷೆ ಇಲ್ಲ. ಹಣ ತೆಗೆದುಕೊಂಡಮೇಲೆ ತನ್ನದು ಅನ್ನುವ ಭಾವನೆ ಇಲ್ಲ. ದುರುಪಯೋಗ ಮಾಡಬೇಕೆಂಬ ಇರಾದೆ ಇಲ್ಲ. ತನಗಾಗಿ ಎಂದು ಕೇಳದುದರಿಂದ ಸಂಕೋಚವೂ ಇಲ್ಲ. ಕೊಡುವವನು ಇದನ್ನು ಸಾಲ ಎಂದು ಕೊಡುವುದಿಲ್ಲ. ಹಣ ಕೇಳಲು ಬಂದಿದ್ದರೂ ಸಾಹುಕಾರ ಗೌರವದಿಂದ ಕಾಣುತ್ತಾನೆ. ಕೂಡಿಸಿ ಮಾತನಾಡಿಸುತ್ತಾನೆ. ಸಾಹುಕಾರ ಕೊಡುತ್ತಾನೆ. ಇವನು ತೆಗೆದುಕೊಂಡು ಹೋಗುತ್ತಾನೆ. ತೆಗೆದುಕೊಂಡುದನ್ನು ಸರಿಯಾಗಿ, ಕೇಳಿದ ಉದ್ದೇಶ ಸಾಧನೆಗೆ ಉಪಯೋಗಿಸುತ್ತಾನೆ. 

ಇಬ್ಬರಾದಮೇಲೆ ಮೂರನೆಯವನು ಬಂದ . ಅವನು ಏನನ್ನೂ ಕೇಳಲು ಬಂದವನಲ್ಲ. ಅವನಿಗೆ ಏನೂ ಬೇಕಾಗಿಲ್ಲ. ಇರುವುದರಲ್ಲೇ ತೃಪ್ತನಾಗಿದ್ದಾನೆ. ಅವನಿಗೆ ಯಾವ ಪದಾರ್ಥವನ್ನೂ ಕೇಳಬೇಕೆಂಬ ಅಭಿಲಾಷೆ ಇಲ್ಲ. ಬದಲಾಗಿ ಅವನೇ ಸಾಹುಕಾರನಿಗೆ ಕೊಡಲು ಹಣ್ಣನ್ನು ತಂದಿದ್ದಾನೆ. ಹಣ್ಣು ಕೊಡುತ್ತಾನೆ. ಅಷ್ಟೇ. ಆದರೆ ಸಾಹುಕಾರ "ನಿನಗೆ ಏನು ಬೇಕು? ಕೇಳು. ಸಂತೋಷದಿಂದ ಕೊಡುತ್ತೇನೆ" ಅನ್ನುತ್ತಾನೆ. "ನನಗೆ ಏನೂ ಬೇಡ. ನಿನ್ನನ್ನು ಕಾಣಲು ಬಂದೆ. ನೋಡಿದ್ದಾಯಿತು. ಅಷ್ಟು ಸಾಕು" ಅನ್ನುತ್ತಾನೆ ಬಂದವನು. ಸಾಹುಕಾರ ಬಲವಂತ ಮಾಡಿ ಏನನ್ನೋ ಕೊಡುತ್ತಾನೆ.  ಬಂದವನು ಅದನ್ನು ತೆಗೆದುಕೊಂಡು ಹೋಗುತ್ತಾನೆ. ಕೊಡು ಎಂದು ಕೇಳಲಿಲ್ಲ. ಕೊಡದಿದ್ದರೆ ದುಃಖವಿಲ್ಲ. ಸಾಹುಕಾರ ತಾನಾಗಿಯೇ ಕೊಟ್ಟಿದ್ದನ್ನು ತೆಗೆದುಕೊಂಡಾಗ ಸಂತೋಷವಿಲ್ಲ. ಸಂತೋಷವಿಲ್ಲ ಎಂದರೆ ವಿಷಾದವೂ ಇಲ್ಲ. ಒಂದು ರೀತಿಯ ನಿರ್ಲಿಪ್ತ ಭಾವನೆ. "ನೀನು ಕೊಟ್ಟೆ. ಅದನ್ನು ಗೌರವಪೂರ್ವಕ ಸ್ವೀಕರಿಸುತ್ತೇನೆ. ಅದರ ಮೌಲ್ಯ ನೋಡಿ ಅಲ್ಲ. ಕೊಟ್ಟವನಾದ ನಿನ್ನ ದೊಡ್ಡತನ ನೋಡಿ ತೆಗೆದುಕೊಂಡೆ" ಎನ್ನುವ ಭಾವ. 
*****

ಭಗವಂತನೆಂಬ ದೊಡ್ಡ ಸಾಹುಕಾರ. ಬಂದವರು ಮೂರು ರೀತಿಯ ಭಕ್ತರು. ಮೊದಲನೆಯವನು ತನಗೆ ಬೇಕು ಎಂದು ಕೇಳುವ "ಸಕಾಮಿ ಭಕ್ತ". ಕೇಳಿ ಪಡೆದದ್ದರಿಂದ ಸುಖ ಪಡುವ ಅಭಿಲಾಷೆ. ಸಾಹುಕಾರನ ಬಳಿ ಹೋಗುವಾಗಲೇ ಏನು ಬೇಕು ಎಂದು ತೀರ್ಮಾನ ಮಾಡಿ ಅದನ್ನು ಕೇಳಿದವ. ಕೇಳಿದ ಉದ್ದೇಶದಲ್ಲಿ ಅನುಮಾನವಿಲ್ಲ. ಅದು ಸ್ವಾರ್ಥಕ್ಕೇ. ಆದರೂ ಭಗವಂತ ಕೊಟ್ಟ. ಭಕ್ತನಿಗೆ ಸಂತೋಷ. ಮತ್ತೆ ಇನ್ನೊಂದು ದಿನ ಮತ್ತೊಂದು ಬೇಕಾದಾಗ ಹೀಗೆ ಅವನ ಬಳಿ ಹೋಗುತ್ತಾನೆ. ಎಂದೋ ಒಂದು ದಿನ ಮುಂದಿನ ಹಂತಕ್ಕೆ ತೇರ್ಗಡೆ ಆಗಬಹುದು. ಪರಮಾತ್ಮ ಕರುಣಾಳು. ಅವನನ್ನು ತಳ್ಳಿ ಓಡಿಸುವುದಿಲ್ಲ. ಹೆಚ್ಚಿನ ಭಕ್ತರು, ಅವರ ಅನುಷ್ಠಾನಗಳು ಈ ರೀತಿಯವೇ. 

ಎರಡನೆಯವನೂ ಬೇಡಲೆಂದೇ ಬಂದವನು. ಆದರೆ ಪಡೆದುದರಿಂದ ಸುಖ ಪಡುವ ಅಭಿಲಾಷೆ ಇಲ್ಲ. ಆ ಪರಿಕರಗಳಿಂದ ಮತ್ತಷ್ಟು ಸಾಧನೆ ಮಾಡಲು ಅನುಕೂಲ ಎಂದು ಬೇಡುತ್ತಿದ್ದಾನೆ. ಇವನಿಗೆ ಕೊಡುವುದರಿಂದ ಸರಿದಾರಿಯಲ್ಲಿ ಮುಂದುವರೆಯುತ್ತಾನೆ ಎನ್ನುವುದು ಅವನಿಗೂ ಗೊತ್ತು. (ಅವನಿಗೆ ಎಲ್ಲವೂ ಗೊತ್ತು). ಮೊದಲಿನವನಂತೆ ಇವನೂ ಬೇಡುವವನೇ ಆದರೂ ಇವನಿಗೆ ಗೌರವವೂ ಸಿಗುತ್ತದೆ. ಕೇಳಿದ್ದೂ ಸಿಗುತ್ತದೆ. ಈ ರೀತಿ ಭಕ್ತರು ಮೊದಲಿನವರಿಗಿಂತ ಸಂಖ್ಯೆಯಲ್ಲಿ ಕಡಿಮೆ. 

ಮೂರನೆಯವರದು ಬೇರೆಯೇ ರೀತಿ. ಅವರಿಗೆ ಭಗವಂತನ ಪ್ರೀತಿ ಬಿಟ್ಟು ಬೇರೆ ಏನೂ ಬೇಕಾಗಿಲ್ಲ. ಮಾಡಿದ ಪ್ರತಿ ಕೆಲಸವೂ ಅವನ ಪ್ರೀತಿಗಾಗಿ. ಸಂಕಲ್ಪ ಮಾಡುವಾಗ "ಅಸ್ಮಾಕಂ ಸಹಕುಟುಂಬಾನಾಂ" ಇಲ್ಲ. "ಲೋಕ ಕಲ್ಯಾಣಾರ್ಥಂ" ಮಾತ್ರವೇ ಉಂಟು. "ಪರಮೇಶ್ವರ ಪ್ರೇರಣಯಾ, ಪರಮೇಶ್ವರ ಪ್ರೀತ್ಯರ್ಥಂ" ಎನ್ನುವುದೇ ಧ್ಯೇಯ. "ಕರ್ಮ ಫಲ" ಎಂಬ ಹಣ್ಣನ್ನೂ ಭಗವಂತನಿಗೇ ಕೊಡುತ್ತಾರೆ. ಅದರ ಮೇಲೂ ಪ್ರೀತಿಯಾಗಲೀ, ಅಧಿಕಾರವಾಗಲೀ ಇಲ್ಲವೇ ಇಲ್ಲ. ಪರಮಾತ್ಮನೇ ತಾನಾಗಿ ಕೊಟ್ಟದ್ದನ್ನು "ಪ್ರಸಾದ" ಎಂದು ಸ್ವೀಕರಿಸುತ್ತಾರೆ. ತಿರಸ್ಕರಿಸುವ ಅಹಂಕಾರವಿಲ್ಲ. ಸಿಕ್ಕಿತು ಎಂಬ ಬೀಗುವಿಕೆಯಂತೂ ಮೊದಲೇ ಇಲ್ಲ. 

*****

ಸ್ವಾತಂತ್ರ್ಯಾನಂತರದ ಎರಡು-ಮೂರು ದಶಕಗಳಲ್ಲಿ ಹುಟ್ಟಿದ ತಲೆಮಾರಿನ ಜನರಿಗೆ ಮೂರು ರೀತಿಯಲ್ಲಿ ತೊಂದರೆಗಳು. ಹೆಚ್ಚಿನವರು ನಮ್ಮ ಅನುಷ್ಠಾನಗಳನ್ನು ಕ್ರಮವಾಗಿ ಕಲಿತವರಲ್ಲ. ಅಪ್ಪ, ಅಜ್ಜಂದಿರು ಮಾಡುತ್ತಿದ್ದರು. ಆದ್ದರಿಂದ ನಾವೂ ಮಾಡುತ್ತೇವೆ. (ನಮ್ಮ ಹಿಂದಿನ ತಲೆಮಾರಿನ ಜನ ಸಾಮಾನ್ಯವಾಗಿ ಇವನ್ನು ಕ್ರಮವಾಗಿ ಕಲಿತಿದ್ದರು. ಮುಂದಿನ ತಲೆಮಾರಿನವರು ಹೆಚ್ಚು-ಕಡಿಮೆ ಬಿಟ್ಟೀ ಬಿಟ್ಟರು.) ಮಂತ್ರ-ಸ್ತೋತ್ರಗಳ ಸರಿಯಾದ ಅರ್ಥಗಳು ತಿಳಿದಿಲ್ಲ. ಆದ್ದರಿಂದ ಹಿಂದಿನವರಂತೆ ಮಾಡುತ್ತಾ ಹೋಗುವುದು. ಇದು ಮೊದಲನೆಯ ತೊಂದರೆ. ಕ್ರಮೇಣ ವ್ಯವಹಾರ ಜ್ಞಾನದ ಜೊತೆಗೆ ಅನುಭವದ ಜ್ಞಾನ ಸೇರಿದಾಗ "ಇದೇನು ಹೀಗಿದೆ? ಕೆಲವು ಸರಿ ಕಾಣುವುದಿಲ್ಲ?" ಎನ್ನುವ ಅನುಮಾನ ಬರುತ್ತದೆ.

ಎರಡನೆಯ ಸಿಕ್ಕು  ಅಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ನಾವು ಹುಟ್ಟಿದ ಮನೆಯ ಆಚರಣೆಯೇ ಸರ್ವಶ್ರೇಷ್ಠ.. ಹೀಗೆಂದು ಪ್ರತಿ ಮತವೂ, ಪಂಗಡವೂ ಹೇಳುತ್ತವೆ. ಬೇರೆಯದರಲ್ಲೂ ಸ್ವಲ್ಪ ಒಳ್ಳೆಯದಿರಬಹುದು ಎಂದು ಒಪ್ಪುವ ಉದಾರ ಮನೋಭಾವ ಕಡಿಮೆ. ಜೊತೆಗೆ ಯಾವುದಾದರೂ ಸರಿ ಇಲ್ಲ ಅಂದರೆ ಅದನ್ನು ಬಿಟ್ಟುಬಿಡುವ ದಾರ್ಢ್ಯ ಇರುವುದಿಲ್ಲ. ಏಕೆಂದರೆ ಅದು ಸರಿಯಾಗಿಲ್ಲ ಎಂದು ಖಚಿತವಾದ ಅಭಿಪ್ರಾಯಕ್ಕೆ ಬರುವ ತಳಹದಿ ಭದ್ರವಿಲ್ಲ. 

ಮೂರನೆಯ ಸಮಸ್ಯೆ ಅಂದರೆ ನಾವು ತತ್ವಕ್ಕೂ ಮತ-ಪಂಗಡಗಳಿಗೂ ಇರುವ ವ್ಯತ್ಯಾಸವನ್ನು ಮಸಕು-ಮಸಕಾಗಿ ಕಾಣುತ್ತೇವೆ. ನಮ್ಮ ವೈದಿಕ ವಾಂಗ್ಮಯದಲ್ಲಿ, ವಿಶೇಷವಾಗಿ ಉಪನಿಷತ್ತುಗಳಲ್ಲಿ, ಹೇಳುವಂತೆ "ಎಲ್ಲವನ್ನೂ ತಿಳಿ; ನಿನಗೆ ಸರಿ ಅನ್ನಿಸಿದ್ದನ್ನು ಮಾಡು" ಎನ್ನುವುದರಲ್ಲಿ ನಮಗೆ ಹೆಚ್ಚಿನ ಪರಿಶ್ರಮವಿಲ್ಲ. ಆದ್ದರಿಂದ ಮೊದಲಿನಿಂದ ಮಾಡಿಕೊಂಡು ಬಂದ ಯಾವುದನ್ನೂ ಅದು ಈಗ ನಮಗೆ ಸರಿಕಾಣುತ್ತಿಲ್ಲ ಎಂದು ಬಿಡುವುದಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ಅನುಮಾನಗಳಿಗೆ ಮುಕ್ತ ಮನಸ್ಸಿನಿಂದ ಸಮಾಧಾನ ಹೇಳುವ ಹಿರಿಯರೂ ತಿಳಿದವರೂ ಸಿಗುವುದು ಬಹಳ ಅಪರೂಪ. 

*****

ನಮ್ಮ ಅನೇಕ ಮಂತ್ರ-ಸ್ತೋತ್ರಗಳಲ್ಲಿ ದೇವರಲ್ಲಿ ಅನೇಕ ವಸ್ತುಗಳನ್ನು ಬೇಡುವ ಪ್ರಕರಣಗಳಿವೆ. ಕೆಲವುಗಳಲ್ಲಿ ಬೇಡಿದ್ದನ್ನೇ ಮತ್ತೆ ಮತ್ತೆ ಕೇಳುವ ಅಂಶಗಳಿವೆ. ನಮ್ಮ ಅರಿವು ಆಳವಾದಂತೆ ಈ ರೀತಿ ಬೇಡುವುದು, ಮತ್ತೆ ಮತ್ತೆ ಅದನ್ನೇ ಕೇಳುವುದು, ಅನವಶ್ಯಕವಾದ ಪದಾರ್ಥಗಳ ಕೋರಿಕೆ, ಮುಂತಾದುವುಗಳ ಸಮಸ್ಯೆ ಕಾಡುತ್ತವೆ. ಇದಕ್ಕೆ ಪರಿಹಾರವೇನು?

ಅಂತಹವುಗಳ ಆಚರಣೆ ಬಿಡುವುದು ಒಂದು ಪರಿಹಾರ. ಆದರೆ ಅನೇಕ ಇಂತಹ ಸಂದರ್ಭಗಳಲ್ಲಿ ಅವುಗಳಲ್ಲಿ ನಮಗೆ ಹಿಡಿಸುವ, ಹಿತವಾದ ಅನೇಕ ವಿಷಯಗಳೂ ಸೇರಿರುತ್ತವೆ. ಕೆಲವಂತೂ ಮನಸ್ಸಿಗೆ ಹೆಚ್ಚಿನ ಮುದವನ್ನೂ, ಶಾಂತಿಯನ್ನೂ ಕೊಡುತ್ತವೆ. ಅನೇಕ ಕಡೆ ನಿಜವಾದ ಭಕ್ತಿ ಹೊರಹೊಮ್ಮುವ ಅವಕಾಶಗಳಿವೆ. ಹೀಗಾಗಿ ಅವನ್ನು ಬಿಡುವುದೂ ಪೂರ್ತಿಯಾಗಿ ಸರಿ ಕಾಣುವುದಿಲ್ಲ. 

ಮೇಲೆ ಚರ್ಚಿಸಿದ ಮೂವರು ಭಕ್ತರ ಗುಂಪುಗಳಲ್ಲಿ ಮೂರನೆಯ ಗುಂಪಿಗೆ ಹೋಗಲು ನಾವು ಬಹಳ ಬಹಳ ದೂರ ಹೋಗಬೇಕಾಗಿದೆ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಿವೆ ಅಂದರೆ ಮೊದಲನೆಯ ರೀತಿಯಲ್ಲಿ ಇರುವುದನ್ನು ದಾಟಿದ್ದೇವೆ ಅನ್ನಬಹುದು. ಆದ್ದರಿಂದ ಇಂತಹ ಬೇಡುವ ಸಂದರ್ಭಗಳಲ್ಲಿ ಮನಸ್ಸನ್ನು ಹದ ಮಾಡಿಕೊಂಡು ಕೇಳುವಾಗ "ಇದು ನಮ್ಮ ಭೋಗಕ್ಕಲ್ಲ. ಹೆಚ್ಚಿನ ಸಾಧನೆಗಾಗಿ ಬೇಡುತ್ತೇವೆ. ದುರುಪಯೋಗ ಮಾಡುವುದಿಲ್ಲ" ಅನ್ನುವ ಅನುಸಂಧಾನ ಇದ್ದು ಎರಡನೇ ವರ್ಗಕ್ಕೆ ಸೇರುವ ಪ್ರಯತ್ನ ಮಾಡಬಹುದು. 
***** 

ಮೂರನೆಯ ಗುಂಪಿನ ಭಕ್ತರ ಗುಣ-ಸ್ವರೂಪಗಳು ಮತ್ತು ಎರಡು-ಮೂರು ಉದಾಹರಣೆಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ ಪ್ರಯತ್ನ ಮಾಡೋಣ. 

Thursday, June 26, 2025

ದೇವರಲ್ಲಿ ಬೇಡುವ ಅಷ್ಟ ಐಶ್ವರ್ಯಗಳು


ಹಿಂದಿನ ಸಂಚಿಕೆಗಳಲ್ಲಿ "ಅಷ್ಟ ಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎನ್ನುವ ಶೀರ್ಷಿಕೆಗಳ ಅಡಿಯಲ್ಲಿ ಮನುಷ್ಯನಿಗೆ ಸಿಗಬಹುದಾದ ವಿವಿಧ ರೀತಿಯ ಭೋಗಗಳು ಮತ್ತು ಭಾಗ್ಯಗಳು ಯಾವುವು, ಅವುಗಳ ವಿಶೇಷತೆ ಏನು, ಎನ್ನುವುದನ್ನು ಕುರಿತು ಸ್ವಲ್ಪ ಚರ್ಚೆ ಮಾಡಿದೆವು. ಈ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

"ಸಂಕಟ ಬಂದಾಗ ವೆಂಕಟರಮಣ" ಎನ್ನುವುದು ಒಂದು ಬಹಳ ಪ್ರಸಿದ್ಧ ಗಾದೆ ಮಾತು. ಮನುಷ್ಯನಿಗೆ ಯಶಸ್ಸು ಸಿಕ್ಕಾಗ, ತಾನು ನೆನೆಸಿದ ಕೆಲಸ ಆದಾಗ, ತನ್ನ ಪ್ರಯತ್ನದ ಬಗ್ಗೆ ಅಪಾರ ಹೆಮ್ಮೆ. "ನನ್ನಿಂದಲೇ ಆಯಿತು. ನೋಡಿದೆಯಾ? ಹೇಗೆ ಮಾಡಿದೆ!" ಎಂದು ಬೀಗುತ್ತಾನೆ. ಆದರೆ ಅದು ಆಗದಿದ್ದಾಗ ಪರಮಾತ್ಮನ ನೆನಪು ಬರುತ್ತದೆ. ಕೆಲವರು "ದೇವರು ಕೈಕೊಟ್ಟ" ಎಂದು ಅವನನ್ನೇ ದೂಷಿಸಬಹುದು. ಮತ್ತೆ ಕೆಲವರು (ಇಂತಹವರ ಸಂಖ್ಯೆ ಬಹಳ ಕಡಿಮೆ) ಎಲ್ಲವನ್ನೂ ಅವನ ಮೇಲೆ ಬಿಟ್ಟು ತಮ್ಮ ಕರ್ತವ್ಯ ತಾವು ಮಾಡುತ್ತಾರೆ. 

ಮನುಷ್ಯ ಏನನ್ನಾದರೂ ಮಾಡುವುದು ಎರಡು ಕಾರಣಗಳಿಗಾಗಿ. ಒಂದು ಸುಖ ಪ್ರಾಪ್ತಿಗೆ. ಇನ್ನೊಂದು ದುಃಖ ನಿವೃತ್ತಿಗೆ. ಈ ವಿಷಯವನ್ನು ಹಿಂದಿನ ಸಂಚಿಕೆಗಳಲ್ಲಿ ಚರ್ಚಿಸಿರುವುದರಿಂದ ಅದನ್ನು ನೆನಪಿಸಿಕೊಂಡು, ಹೆಚ್ಚು ವಿಸ್ತರಿಸದೆ, ಮುಂದೆ ಹೋಗೋಣ. ದುಃಖ ನಿವೃತ್ತಿ ಆಗಬೇಕಾದಾಗ ಪರಮಾತ್ಮನ ನೆನಪು ತಾನೇತಾನಾಗಿ ವಿಜೃಂಭಿಸುತ್ತದೆ. ಆ ದುಃಖ ಕಳೆದ ತಕ್ಷಣ ಅವನ ನೆನಪೂ ಮಾಸುತ್ತದೆ. ಸುಖಪ್ರಾಪ್ತಿಗೆ ಮಾಡುವ ಅವನ ಸ್ಮರಣೆ ಮೇಲೆ-ಕೆಳಗೆ ಆಗುತ್ತಿದ್ದರೂ ಯಾವಾಗಲೂ ಸ್ವಲ್ಪವಾದರೂ ಇರುತ್ತದೆ!

ಹೀಗೆ ಸುಖಪ್ರಾಪ್ತಿಗೆ ಮನುಷ್ಯ ಮಾಡುವ ಪ್ರಾರ್ಥನೆಗಳಲ್ಲಿ ಯಾವ ಯಾವ ಬೇಡಿಕೆಗಳು ಸೇರಿವೆ, ಅವುಗಳಲ್ಲಿ ಮುಖ್ಯವಾದವು ಯಾವುವು ಮತ್ತು ಅವುಗಳ ಲಕ್ಷಣಗಳೇನು ಎನ್ನುವುದನ್ನು ಈಗ  ಸ್ವಲ್ಪ ನೋಡೋಣ. 
***** 

"ವರ" ಎನ್ನುವ ಪದವನ್ನು ಎರಡು ಮುಖ್ಯ ಹಿನ್ನೆಲೆಯಲ್ಲಿ ಬಳಸುತ್ತೇವೆ. ಮೊದಲನೆಯದು ವಿವಾಹಗಳ ವಿಷಯದಲ್ಲಿ. ಆಗ "ವಧು ಮತ್ತು ವರ" ಎನ್ನುವ ಪದಗಳು ಜೊತೆಯಾಗಿ ಬರುತ್ತವೆ. ಹೆಣ್ಣಿಗೆ "ವಧು" ಎಂದೂ ಗಂಡಿಗೆ "ವರ" ಎಂದೂ ಗುರುತಿಸುವುದು. ಎರಡನೆಯ ಸಂದರ್ಭ "ಶ್ರೇಷ್ಠ", "ಉತ್ತಮ", "ಒಳ್ಳೆಯದು", "ಅದಕ್ಕಿಂತ ಇದು ಚೆನ್ನ" ಮುಂತಾದ ಅರ್ಥದಲ್ಲಿ. ವಿವಾಹದ ಸಂದರ್ಭದಲ್ಲಿಯೂ ವಾಸ್ತವವಾಗಿ ಇದೇ ಅರ್ಥವೇ. "ಈ ಹುಡುಗಿಗೆ ಆ ಹುಡುಗ ಸರಿಯಾದ ಜೋಡಿ. ಈ ಜೋಡಿ ಚೆನ್ನಾಗಿರುತ್ತದೆ" ಎನ್ನುವ ರೀತಿಯಲ್ಲಿಯೇ ಅಲ್ಲಿಯೂ "ವರ" ಎನ್ನುವ ಪದ ಪ್ರಯೋಗ ಆಗುತ್ತದೆ. 

ಒಟ್ಟಿನಲ್ಲಿ, ಬೇಡುವ ಸಂದರ್ಭದಲ್ಲಿ "ವರ" ಅಂದರೆ "ನಮ್ಮಲ್ಲಿಲ್ಲದ್ದು, ಅದು ಇದ್ದರೆ ಚೆನ್ನ, ಅದು ನಮಗೆ ಬೇಕು, ಆದ್ದರಿಂದ ಅದನ್ನು ನಮಗೆ ಕೊಡಿ" ಎಂದು ಕೇಳುವುದು. ಕೊಡುವವರ ದೃಷ್ಟಿಯಲ್ಲಿಯೂ ಹಾಗೆಯೇ. ಅನೇಕ ವೇಳೆ "ನಿಮ್ಮಿಂದ ನಮಗೆ ಬಹಳ ಸಂತೋಷವಾಗಿದೆ. ಈ ವರವನ್ನು ಕೊಡುತ್ತೇವೆ" ಎಂದು ಕೊಡುವುದು. ಅಥವಾ "ನಾವು ಪ್ರೀತರಾಗಿದ್ದೇವೆ, ನಿಮಗೊಂದು ವರ ಕೊಡುತ್ತೇವೆ. ಏನು ಬೇಕು?' ಎಂದು ಕೇಳುವುದು. ಸಾಮಾನ್ಯವಾಗಿ "ಏನು ಬೇಕು?" ಎಂದು ಕೇಳಿ ಕೊಡಬಹುದು. ಒಮ್ಮೊಮ್ಮೆ ಅವರೇ ತೀರ್ಮಾನಮಾಡಿ "ನಿಮಗೆ ಇದನ್ನು ಕೊಡುತ್ತೇವೆ" ಎಂದು ಕೊಡಬಹುದು. ಮೊದಲನೆಯದು ಕೇಳಿದ್ದು ಕೊಡುವ ಕ್ರಿಯೆ. ಎರಡನೆಯದು ಕೊಟ್ಟಿದ್ದು ತೆಗೆದುಕೊಳ್ಳುವ ಕೆಲಸ. ಶಾಲೆಗೆ ಹೋಗುವ ವಿದ್ಯಾರ್ಥಿ "ನನಗೆ ಈ ಬ್ಯಾಗು ಕೊಡಿಸಿ" ಎನ್ನುವುದು ಮೊದಲಿನಂತೆ. ಕೊಡುವವರು ತಾವೇ ಒಂದು ಒಂದು ಬ್ಯಾಗು ತಂದು "ಇದನ್ನು ಉಪಯೋಗಿಸಿಕೋ" ಎನ್ನುವುದು ಎರಡನೆಯ ರೀತಿ. 

ಮೂರನೆಯದೂ ಒಂದು ಉಂಟು. ಒಂದಷ್ಟು ದುಡ್ಡು ಕೊಟ್ಟು "ನಿನಗೆ ಬೇಕಾದುದು ತೆಗೆದುಕೋ" ಎಂದು ಹೇಳುವಂತೆ. ದುಡ್ಡು ಸಿಕ್ಕವನು ತನಗೆ ಬೇಕಾದಾಗ, ಬೇಕಿದ್ದು ತೆಗೆದುಕೊಳ್ಳಬಹುದು. ಅಷ್ಟು ಮಟ್ಟಿಗೆ ಸ್ವಾತಂತ್ಯ ಸಿಕ್ಕಿತು. ದೇವೇಂದ್ರನು ಕರ್ಣನಿಗೆ ಶಕ್ತ್ಯಾಯುಧ ಕೊಟ್ಟಂತೆ. "ಒಂದು ಬಾರಿ ಪ್ರಯೋಗಿಸು. ಯಾರ ಮೇಲೆ ಪ್ರಯೋಗಿಸಿದರೂ ಅವರು ಸಾಯುತ್ತಾರೆ" ಎಂದು ಹೇಳಿದಂತೆ. ಎಂದು, ಯಾರ ಮೇಲೆ ಪ್ರಯೋಗಿಸಬೇಕು ಅನ್ನುವ ಸ್ವಾತಂತ್ರ್ಯ ಕರ್ಣನಿಗೆ ಸಿಕ್ಕಿತು. 

ವರರೂಪದಲ್ಲಿ ಬೇಕಿದ್ದು ಪಡೆಯಲು ಮಾಡುವ ಸಾಧನೆಗಳು "ಕಾಮ್ಯ ಕರ್ಮಗಳು". ಇಲ್ಲಿ ಇಡೀ ಶ್ರಮ ಯಾವುದೋ ಒಂದು ಉದ್ದೇಶಿತ ಲಾಭ ಪಡೆಯಲು ಮಾಡುವುದು. ಬಸ್ಸಿನಲ್ಲಿ ಹನ್ನೆರಡನೇ ನಂಬರಿನ ಸೀಟು ಕೊಡಿ ಎಂದಂತೆ. ಇನ್ನು ಕೆಲವು "ಯಾವುದೊ ಒಂದು ಸೀಟು ಕೊಟ್ಟರೆ ಸಾಕು" ಎನ್ನುವಂತಹುದು. "ಪುತ್ರಕಾಮೇಷ್ಠಿ" ಮಾಡಿದರೆ ಸಂತಾನವೇ ಬೇಕು. ಬೇರೆ ಯಾವುದೋ ಸಿಕ್ಕರೆ ಸಾಲದು. ಈ ರೀತಿ. 
***** 

ಎಲ್ಲಾ ಬೇಡಿಕೆಗಳಲ್ಲಿ ಮೊದಲನೆಯದು "ಆಯುಸ್ಸು". ದೀರ್ಘಾಯುಸ್ಸು ಬೇಕು. ತುಂಬಾ ದಿನ ಬದುಕಬೇಕು. ಚಿರಂಜೀವಿಯೇ ಆಗಬೇಕು. ಆದರೆ ಅದು ಕೇಳಿದರೂ ಕೊಡುವುದಿಲ್ಲ. ಹಿಂದೆ ಅನೇಕರು ಕೇಳಿದರು. ಆದರೆ ಒಬ್ಬರಿಗೂ ಸಿಗಲಿಲ್ಲ. ಕೈ ತೋರಿಸಿ ಅವಲಕ್ಷಣ ಎಂದು ಏಕೆ ಹೇಳಿಸಿಕೊಳ್ಳುವುದು? ಆದ್ದರಿಂದ ದೀರ್ಘಾಯುಸ್ಸು ಕೊಡಿ ಎಂದು ಕೇಳುವುದು. "ನಮ್ಮ ಮೊಮ್ಮಗನ ಮೊಮ್ಮಗನ ಮಗನ ಮದುವೆ ನೋಡಿದರೆ ಸಾಕು" ಎಂದು ಕೇಳಿ ಕೊಡುವವರಿಗೆ ಟೋಪಿ ಹಾಕುವ ಬುದ್ಧಿವಂತಿಕೆ. "ಮೊದಲು ಬದುಕಿರೋಣ. ಆಮೇಲೆ ಉಳಿದುದನ್ನು ಕೇಳಿದರಾಯಿತು" ಅನ್ನುವ ಜಾಣತನ. ಆಯುಸ್ಸೇ ಇಲ್ಲದಿದ್ದರೆ ಏನು ಪ್ರಯೋಜನ? 

ಎರಡನೆಯದು ಆರೋಗ್ಯ. ಕೇವಲ ಬದುಕಿದ್ದರೆ ಸಾಕೆ? ನೂರು ವರುಷ ಆಯುಸ್ಸು. ಕೈ-ಕಾಲು ಆಡುವಹಾಗಿಲ್ಲ. ಹಾಸಿಗೆ ಮೇಲೆ ಬಿದ್ದಿರಬೇಕು. ಆದರೆ ಉಸಿರಾಡುವುದರಿಂದ ಬದುಕಿದ್ದಾನೆ. ಇಂತಹ ಆಯುಸ್ಸಿನಿಂದ ಏನು ಪ್ರಯೋಜನ? ಆದ್ದರಿಂದ ಒಳ್ಳೆಯ ಅರೋಗ್ಯ ಬೇಕು. 

ಇವೆರಡೂ ಸಿಕ್ಕ ಮೇಲೆ ಮುಂದಿನದು ಐಶ್ವರ್ಯ. ಸುಮ್ಮನೆ ಬದುಕಿ ಗಟ್ಟಿಮುಟ್ಟಾಗಿದ್ದರೆ ಏನು ಸಂತಸ? ಬದುಕಿದ ಮೇಲೆ ಸುಖ ಪಡದೆ ಏನು ಪ್ರಯೋಜನ? ಸುಖ ಪಡಲು ಸಾಧನಗಳು ಬೇಕಲ್ಲ? ಅವುಗಳನ್ನು ಪಡೆಯಬೇಕು. ಈ ಕಾರಣಕ್ಕೆ ಮೂರನೆಯದಾದ ಐಶ್ವರ್ಯ ಬೇಕು.  ಒಮ್ಮೆ ಬೇಡಿದಾಗ ಮುಂದೆ ಬೇಡುವಂತೆ ಇಲ್ಲದಷ್ಟು ಸಿಗಬೇಕು. ಮತ್ತೆ ಮತ್ತೆ ಬೇಡುವಂತೆ ಜೀವನ ಇರಬಾರದು. ಇನ್ನೂ ಅದರ ಬದಲು ನಾವೇ ಇನ್ನೊಬ್ಬರಿಗೆ ಕೊಡುವ ಶಕ್ತಿ ಇರಬೇಕು. ಆದ್ದರಿಂದ ಹೇರಳವಾದ ಐಶ್ವರ್ಯ ಬೇಕು. 

ಈ ಮೂರು ಕಾರಣಗಳಿಂದ "ಆಯುರಾರೋಗ್ಯ ಐಶ್ವರ್ಯ" ಒಟ್ಟಿಗೆ ಕೂಡಿತು. ಎಲ್ಲಕ್ಕಿಂತ ಮೊದಲು ಇವನ್ನು ಕೇಳುವ ಪರಿಪಾಠ ಬಂತು. 
*****

ಐಶ್ವರ್ಯ ಅನ್ನುವ ಪದ ಒಂದು ರೀತಿ ಅಸ್ಪಷ್ಟ ಅಲ್ಲವೇ? ಕೇಳುವುದು ಖಚಿತವಾಗಿರಬೇಕು. ಆದ ಕಾರಣ ಇದರಲ್ಲಿ ಮತ್ತೆ ಕವಲುಗಳು ಬಂದವು. ಐಶ್ವರ್ಯದ ಬೇರೆ ಬೇರೆ ರೂಪಗಳಲ್ಲಿ ಕೇಳುವುದು ಪ್ರಾರಂಭವಾಯಿತು. ಅವುಗಳಲ್ಲಿ ಮತ್ತೆ ಎಂಟು ಮುಖ್ಯವಾಯಿತು. "ಅಷ್ಟ ಭೋಗ," "ಅಷ್ಟ ಭಾಗ್ಯ", ಇವುಗಳ ಜೊತೆ "ಅಷ್ಟ ಐಶ್ವರ್ಯ" ಸೇರಿದುವು. 

ಅಷ್ಟಐಶ್ವರ್ಯಗಳು ಯಾವುವು ಎನ್ನುವುದಕ್ಕೆ ಅನೇಕ ವ್ಯಾಖ್ಯಾನಗಳು ಉಂಟು. "ಅಷ್ಟ ಲಕ್ಷ್ಮಿ" ಚಿಂತಿಸುವ ಸಂದರ್ಭದಲ್ಲಿ ಕೆಲವನ್ನು ಹೇಳುವುದು ಉಂಟು. ಆದರೆ, ಜನಸಾಮಾನ್ಯರ ಬೇಡಿಕೆಯ ದೃಷ್ಟಿಯಲ್ಲಿ ಈ ಕೆಳಗಿನ ಎಂಟು ರೀತಿಯ ಐಶ್ವರ್ಯಗಳು ಹೆಚ್ಚಾಗಿ ಕಂಡುಬರುತ್ತವೆ:

  1. ಮೊದಲನೆಯದು "ಧನ". "ಕಾಂಚಾಣಂ ಕಾರ್ಯಸಿದ್ಧಿ:". ಕನ್ನಡದಲ್ಲಿ ಹೇಳುವಂತೆ ಎಲ್ಲಕ್ಕೂ "ದುಡ್ಡೇ  ದೊಡ್ಡಪ್ಪ". ಹಣವಿದ್ದರೆ ಬೇರೆ ಎಲ್ಲವನ್ನೂ ಪಡೆಯಬಹುದು ಎಂದು ನಂಬಿಕೆ. ಆದ್ದರಿಂದ ಆಯುರಾರೋಗ್ಯಗಳ ನಂತರ ಮೊದಲು ಕೇಳುವುದು ಧನವನ್ನು. ಕನ್ನಡದಲ್ಲಿ "ನಗದು" ಅಥವಾ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ "ಕ್ಯಾಶ್". ದುಡ್ಡಿನಿಂದ ಆಯುಸ್ಸು ಮತ್ತು ಆರೋಗ್ಯಗಳನ್ನು ಪಡೆಯಲಾಗುವುದಿಲ್ಲ. ಅನಾರೋಗ್ಯದ ನಿವಾರಣೆಗೆ ದುಡ್ಡು ಸಹಾಯಕಾರಿ ಆಗಬಹುದು. ಆದರೂ ನಮ್ಮ ಅನುಭವದಲ್ಲಿ ಅನೇಕವೇಳೆ ಜೇಬಲ್ಲಿ ದುಡ್ಡಿದ್ದರೂ  ಪದಾರ್ಥಗಳು ಸಿಗುವುದಿಲ್ಲ. ಎಲ್ಲ ಕಡೆ "ಬಂದ್" ಅಥವಾ "ಕರ್ಫ್ಯೂ" ಇದ್ದಾಗ ಎಷ್ಟು ಹಣವಿದ್ದರೂ ಅನ್ನ ಸಿಗುವುದಿಲ್ಲ.  ಕೆಲವು ಪದಾರ್ಥಗಳು ಕೆಲವು ಕಾಲಗಳಲ್ಲಿ ಮಾತ್ರ ಸಿಗುತ್ತವೆ. ಇನ್ನು ಕೆಲವು ಯಾವುದೋ ಕೆಲವು ಪ್ರದೇಶಗಳಲ್ಲಿ ಮಾತ್ರ ಸಿಗುತ್ತವೆ. ಆದರೂ ದುಡ್ಡಿದ್ದರೆ ಹೆಚ್ಚಿನವನ್ನು ಪಡೆಯಲು ಸಹಕಾರಿ  ಎನ್ನುವುದು ಬಹುತೇಕ ಸತ್ಯ.  
  2. ಎರಡನೆಯದು "ಕನಕ". ಕನಕ ಎಂದರೆ ಚಿನ್ನ ಎಂದು ಅರ್ಥವಾದರೂ ಇಲ್ಲಿ ಅದರ ವ್ಯಾಪಕ ಅರ್ಥವಾದ ಚಿನ್ನ, ಬೆಳ್ಳಿ, ನವರತ್ನಗಳು ಮುಂತಾದ ಬೆಲೆಬಾಳುವ ವಸ್ತುಗಳ ಆಭರಣಗಳು ಎಂದು ಗ್ರಹಿಸಬೇಕು. ಇವೂ ಸಹ ಧನವೇ ಅಲ್ಲವೇ ಎಂಬ ಸಂದೇಹ ಬರಬಹುದು. ಇವು ಬೆಲೆಬಾಳುವ ವಸ್ತುಗಳು ಮತ್ತು ಈಗಿನ ಸಮಯದಲ್ಲಿ ಕೆಲವೇ ಘಂಟೆಗಳಲ್ಲಿ ಹಣವಾಗಿ ಪರಿವರ್ತಿಸಬಹುದು ಎನ್ನುವುದು ಸರಿಯಾದರೂ, ಇವು ಧನದ ಒಂದು ಉಪಯೋಗ ಎಂದು ಗಣಿಸಬೇಕು. 
  3. ಮೂರನೆಯದು ವಸ್ತುಗಳು. ವಸ್ತುಗಳು ಅನೇಕ ರೀತಿಯಲ್ಲಿರಬಹುದು. ಸಾಮಾನ್ಯವಾಗಿ ನಿರ್ಜೀವ ಭೋಗೋಪಯೋಗಿ ಪದಾರ್ಥಗಳಿಗೆ ವಸ್ತುಗಳು ಎಂದು ನಿರ್ದೇಶಿಸುವುದು. ಪೀಠೋಡಕರಣಗಳು, ಪಾತ್ರೆ-ಪಡಗ, ಆಯುಧಗಳು, ಮುಂತಾದುವುಗಳು. 
  4. ನಾಲ್ಕನೆಯದು ವಾಹನಗಳು. ಹಿಂದಿನ ಕಾಲದಲ್ಲಿ ವಾಹನಗಳು ಅಂದರೆ ಕುದುರೆ, ಆನೆ, ಸಾರೋಟು, ರಥ ಮುಂತಾದುವು ಆಗಿದ್ದವು. ಇಂದಿಗೆ ಅವು ಸ್ಕೂಟರ್, ಕಾರು, ಖಾಸಗಿ ನೌಕೆ, ಖಾಸಗಿ ವಿಮಾನ ಮುಂತಾದುವವೇ ಆಗಬಹುದು. 
  5. ಐದನೆಯದು ಗೃಹ ಅಥವಾ ಮನೆ. ಏಕವಚನದಲ್ಲೂ ಇರಬಹುದು ಅಥವಾ ಅನೇಕವೂ ಇರಬಹುದು. ಮನೆ, ಕೊಟ್ಟಿಗೆ, ಗೋಶಾಲೆ, ಅಶ್ವ-ಗಜ ಶಾಲೆ, ಮುಂತಾದುವುಗಳು. ಮನೆ ಅಂದರೆ ಅದರ ಜೊತೆ ಭೂಮಿ-ಕಾಣಿಯೂ ಸೇರಿತು. ವಸ್ತುಗಳು ಚರಾಸ್ತಿ (ಇಂಗ್ಲೀಷಿನಲ್ಲಿ "movable") ಆದರೆ  ಗೃಹ ಸ್ಥಿರಾಸ್ತಿ (ಇಂಗ್ಲಿಷಿನಲ್ಲಿ "immovable").  
  6. ಆರನೆಯದು "ಸಂತಾನ". ತಾನೊಬ್ಬನೇ ಇಷ್ಟೆಲ್ಲಾ ಸುಖದ ಸಾಧನಗಳನ್ನು ಇಟ್ಟುಕೊಂಡು ಏನು ಮಾಡುವುದು? ಅದಕ್ಕೆ ಮಕ್ಕಳು, ಮೊಮ್ಮಕ್ಕಳು,  ಬಂಧು-ಬಾಂಧವರು, ನೆಂಟರು-ಇಷ್ಟರು ಇರಬೇಕು. ಎಲ್ಲರೂ ತನ್ನನ್ನು ಓಲೈಸಬೇಕು ಎಂದು ಆಸೆ. 
  7. ಏಳನೆಯದು ಅಧಿಕಾರ. ಇದು  ಕಣ್ಣಿಗೆ ಕಾಣದ್ದು. ಅಮೂರ್ತ. ಇಂಗ್ಲೀಷಿನಲ್ಲಿ intangible. ಆದರೆ ಅದರ ಪ್ರಭಾವ ಕಾಣುತ್ತದೆ. ಸುತ್ತಲಿರುವವರೆಲ್ಲ ತಾನು ಹೇಳಿದಂತೆ ಕೇಳಬೇಕೆಂಬ ಇಚ್ಛೆ. 
  8. ಎಂಟನೆಯದು "ಅಂತಸ್ತು" ಅಥವಾ ಸಮಾಜದಲ್ಲಿ "ಮನ್ನಣೆ". ಹತ್ತು ಜನರಲ್ಲಿ ಎದ್ದು ಕಾಣಬೇಕು. ತಾನು ಬಂದರೆ ಎಲ್ಲರೂ ಎದ್ದು ಗೌರವ ಸೂಚಿಸಬೇಕು. ಅವರ ಕೆಲಸಗಳಿಗೆ ತನ್ನ ಸಲಹೆ ಮತ್ತು ಒಪ್ಪಿಗೆ ಪಡೆಯಬೇಕು. ಈ ರೀತಿಯ ಆಸೆ. 
ಮೊದಲಿನ ನಾಲ್ಕು ಸಾಮಾನ್ಯವಾಗಿ ಒಟ್ಟಾಗಿ "ಧನ, ಕನಕ, ವಸ್ತು, ವಾಹನಾದಿ" ಎಂದು ಸಮೂಹವಾಚಕದಿಂದ ಹೇಳುತ್ತಾರೆ. ಬೇರೆ ಇನ್ನೇನೇ ಇದ್ದರೂ ಅವೆಲ್ಲಾ ಸಾಮಾನ್ಯವಾಗಿ ಮೇಲೆ ಹೇಳಿದ ಎಂಟು ರೀತಿಯ ಐಶ್ವರ್ಯಗಳಲ್ಲಿ ಮಿಳಿತವಾಗುತ್ತವೆ. ಇವಿಷ್ಟೂ ಇದ್ದರೆ ನಿಜವಾಗಿ ಅಷ್ಟಐಶ್ವರ್ಯವಂತನಾದಂತೆ. 

*****

"ಇಷ್ಟೆಲ್ಲಾ ಬೇಕು. ಇನ್ನೂ ಬೇರೇನಾದರೂ ಇದ್ದರೆ  ಸೇರಿಸಿ ಕೊಡು" ಎಂದು ದೇವರನ್ನು-ದೇವತೆಗಳನ್ನು ಬೇಡುವವರು ಅನೇಕರು. (ನಮ್ಮ ಆಟೋರಿಕ್ಷಾ ಚಾಲಕರು ಮೀಟರಿಗೆ ಸೇರಿಸಿ ಕೊಡಿ ಎನ್ನುವಂತೆ). ಪೂಜೆ-ಪುನಸ್ಕಾರಗಳನ್ನು ಅವರು ಮಾಡುವುದೇ ದುಃಖಗಳ ಶಮನವಾಗಿ ಈ ಐಶ್ವರ್ಯಗಳ ಪ್ರ್ರಾಪ್ತಿ ಆಗಲಿ ಎನ್ನುವ ಕಾರಣಕ್ಕಾಗಿ. ಯಾವುದೇ ಕೆಲಸ ಮಾಡುವ ಮೊದಲು ಸಂಕಲ್ಪದಲ್ಲಿ "ಅಸ್ಮಾಕಂ ಸಹ-ಕುಟುಂಬಾನಾ೦  ಕ್ಷೇಮ, ಸ್ಥೈರ್ಯ, ಆಯುರಾರೋಗ್ಯ ಐಶ್ವರ್ಯ ಅಭಿವ್ರುಧ್ಯರ್ಥಂ, ಇಷ್ಟ ಕಾಮ್ಯಾರ್ಥ ಸಿಧ್ಯರ್ಥಂ ........" ಎಂಬ ದೊಡ್ಡ ಪಟ್ಟಿ ಕೊಟ್ಟ ನಂತರವೇ.  

ಆದರೆ ಅನೇಕ ಜಿಜ್ಞಾಸುಗಳಿಗೆ "ಇದೇನು, ಈ ರೀತಿ? ನಮ್ಮ ಅನೇಕ ಸ್ತೋತ್ರಗಳಲ್ಲಿ, ಹವನ-ಹೋಮ, ಜಪ-ತಪಾದಿ ಅನುಷ್ಠಾನಗಳಲ್ಲಿ ಈ ರೀತಿ ಬೇಡುವ ಸಂಗತಿಗಳಿವೆಯಲ್ಲ? ಇದು ಸರಿಯೇ? ಮನುಷ್ಯ ಜೀವನದ ಧ್ಯೇಯವು ಸಾಧನೆ ಮಾಡಿ ಜೀವನ-ಮರಣ ಚಕ್ರದಿಂದ ಬಿಡುಗಡೆ ಪಡೆಯುವುದಲ್ಲವೇ? ಹೀಗೆ ಕೇಳಿಕೊಳ್ಳುವುದು ಮಾಡಿದ ಕೆಲಸಕ್ಕೆ ಕೂಲಿ ಕೇಳಿದಂತೆ ಆಗಲಿಲ್ಲವೇ?" ಎನ್ನುವ ಪ್ರಶ್ನೆ ಕಾಡುವುದು ಸಹಜ. 

ಈ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.