Showing posts with label Vara. Show all posts
Showing posts with label Vara. Show all posts

Sunday, August 3, 2025

ವಿದುರ, ಯುಧಿಷ್ಠಿರ ಮತ್ತು ವೀರಬಾಹು


ಸೂರ್ಯ ವಂಶದ ಮಹಾರಾಜ ಸತ್ಯವ್ರತ ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಆಸೆಪಟ್ಟ. ಸ್ವರ್ಗಕ್ಕೆ ಹೋಗುವ ಯೋಗ್ಯತೆ ಪಡೆದ ಜೀವಿಗಳಿಗೆ ದೇವತೆಗಳು ಒಂದು ದಿವ್ಯ ಶರೀರವನ್ನು ಕೊಟ್ಟು ಅಲ್ಲಿಗೆ ಬರಮಾಡಿಕೊಳ್ಳುತ್ತಾರೆ. ಭೂಲೋಕದಲ್ಲಿ "ಪಾರ್ಥಿವ ಶರೀರ" ಹೊಂದಿರುವ ಮನುಷ್ಯರು ಅದೇ ಶರೀರದಲ್ಲಿ ಸ್ವರ್ಗಕ್ಕೆ ಹೋಗಲಾರರು. ಇದು ಒಂದು ನಿಯಮ. ಸತ್ಯವ್ರತನಿಗೆ ಅದೇನೋ ಪಾರ್ಥಿವ ಶರೀರದ ಮೇಲೆ ಮೋಹ. (ಪಾರ್ಥಿವ ಶರೀರದ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಈ ನಿಯಮವನ್ನು ಮೀರಿ ಅಲ್ಲಿಗೆ ಹೋಗಬೇಕೆಂಬ ಅಭಿಲಾಷೆ. ಕುಲಗುರುಗಳಾದ ವಸಿಷ್ಠರು ಈ ಮನವಿಗೆ ಒಪ್ಪಲಿಲ್ಲದ ಕಾರಣ ಅವರ ಎದುರಾಳಿ ಎಂದು ತಿಳಿದು ಮಹರ್ಷಿ ವಿಶ್ವಾಮಿತ್ರರನ್ನು ಈ ಕೆಲಸಕ್ಕೆ ಆಶ್ರಯಿಸಿದ. 

ಅವನಿಂದ ಒಂದು ಹೊಸ ರೀತಿಯ ಯಾಗ ಮಾಡಿಸಿ, ಅದರ ಫಲದ ಬಲದಿಂದ ಮಹರ್ಷಿ ವಿಶ್ವಾಮಿತ್ರರು ಅವನನ್ನು ಸ್ವರ್ಗಕ್ಕೆ ಕಳಿಸಿದರು. ದೇವೇಂದ್ರನು ಅದನ್ನು ಒಪ್ಪದೇ ಸತ್ಯವ್ರತನನ್ನು ಸ್ವರ್ಗದಿಂದ ಹೊರಕ್ಕೆ ತಳ್ಳಿಸಿದ. ಕೆಳಗೆ ಬೀಳುತ್ತಿರುವ ರಾಜನು ಮಹರ್ಷಿ ವಿಶ್ವಾಮಿತ್ರರನ್ನು ಕೂಗಿ ಕರೆದ. ಅವರು ತಮ್ಮ ತಪ:ಶಕ್ತಿಯಿಂದ ತಲೆ ಕೆಳಗಾಗಿ ಬೀಳುತ್ತಿದ್ದ ಅವನನ್ನು ಅಲ್ಲೇ ನಿಲ್ಲಿಸಿ ಅವನಿಗೆ ಹೊಸದೊಂದು ಸ್ವರ್ಗವನ್ನೇ ಸೃಷ್ಟಿಸಿದರು. ಹೀಗಾಗಿ ಅವನು ಸ್ವರ್ಗಕ್ಕೂ, ಭೂಲೋಕಕ್ಕೂ ಮಧ್ಯೆ ನಿಂತ. ಈ ಕಾರಣದಿಂದ ಅವನು "ತ್ರಿಶಂಕು" ಎಂದು ಹೆಸರು ಪಡೆದ. ಹೀಗೂ ಇಲ್ಲ, ಹಾಗೂ ಇಲ್ಲ ಎನ್ನುವಂತಾಗಿ ಮಧ್ಯದಲ್ಲಿ ಸಿಕ್ಕಿ ನೇತಾಡುವ ಸ್ಥಿತಿಗೆ ಅಂದಿನಿಂದ "ತ್ರಿಶಂಕು ಸ್ವರ್ಗ" ಅಥವಾ "ತ್ರಿಶಂಕು ಪರಿಸ್ಥಿತಿ" ಎಂದು ಹೇಳುವುದು ಬಂದಿತು. (ಇಂದಿನ ಕಾಲದ ಚುನಾವಣೆಗಳ ನಂತರ ಯಾವುದೇ ಒಂದು ಪಕ್ಷಕ್ಕೆ ಅಥವಾ ಗುಂಪಿಗೆ ಬಹುಮತ ಬರದೇ ಇದ್ದಾಗ ಈ ಪದ ಬಹಳ ಜನಪ್ರಿಯ).  

ಈ ತ್ರಿಶಂಕು ಮಹಾರಾಜನ ಮಗನೇ ರಾಜಾ ಹರಿಶ್ಚಂದ್ರ. ಸತ್ಯಕ್ಕೆ ಇನ್ನೊಂದು ಹೆಸರಾದ ಈ ಹರಿಶ್ಚಂದ್ರ ಕಾರಣಾಂತರಗಳಿಂದ ವಿಶ್ವಾಮಿತ್ರರ ಪರೀಕ್ಷೆಗೆ ಗುರಿಯಾಗಬೇಕಾಯಿತು. ತನ್ನ ಮಾತನ್ನು ಉಳಿಸಿಕೊಳ್ಳುವ ಕಾರಣ ರಾಜ್ಯ-ಕೋಶಗಳನ್ನು ಕಳೆದುಕೊಂಡು, ಹೆಂಡತಿ-ಮಗನನ್ನು ಮಾರಿಕೊಂಡ. (ಮೇಲೆ ಕೊಟ್ಟಿರುವ ಚಿತ್ರ ಹೀಗೆ ಅವನು ಹೆಂಡತಿ-ಮಗನನ್ನು ಮಾರಿಕೊಳ್ಳುತ್ತಿರುವ ಪ್ರಸಂಗವನ್ನು ರಾಜ ರವಿವರ್ಮ ಚಿತ್ರಿಸಿರುವುದು). ಕಡೆಗೆ ತನ್ನನ್ನೇ ಮಾರಿಕೊಂಡು ವಿಶ್ವಾಮಿತ್ರರಿಗೆ ಕೊಡಬೇಕಾದ ಹಣ ಸಂದಾಯಮಾಡಿ ಸತ್ಯನಿಷ್ಠ ಎನಿಸಿದ. ಹೀಗೆ ಅವನು ಮಾರಾಟಕ್ಕೆಂದು ಕಾಶಿ ಕ್ಷೇತ್ರದಲ್ಲಿ ನಿಂತಾಗ ಅವನನ್ನು ಹರಾಜಿನಲ್ಲಿ ಕೊಂಡುಕೊಂಡವನೇ ವೀರಬಾಹು ಎನ್ನುವ ಸ್ಮಶಾನದ ಒಡೆಯ. ಈಗಿನ ಕಾಲದ ಸ್ಮಶಾನದ ಉಸ್ತುವಾರಿ ಪಡೆದ ಕಂಟ್ರಾಕ್ಟರ್ ಇದ್ದಂತೆ ಎನ್ನಬಹುದು. 

ಈ ವೀರಬಾಹು ಯಾರು? ಅವನದೂ ಒಂದು ದೊಡ್ಡ ಕಥೆಯೇ! ಹಿಂದೆ ಕೆಲವು ಸಂಚಿಕೆಗಳಲ್ಲಿ ಸೋಮಶರ್ಮ ಮತ್ತು ಅವನ ಹೆಂಡತಿಯಾದ ಸುಮನಾ ಎಂಬ ಚ್ಯವನ ಋಷಿಗಳ ಮಗಳ ನಡುವೆ ನಡೆದ ಸಂವಾದದ ಸಂಚಿಕೆಗಳನ್ನು ನೋಡಿದ್ದೆವು. ಈ ವೀರಬಾಹುವಿನ ವೃತ್ತಾಂತ ಅದರಲ್ಲಿಯೇ ಒಂದು ಕಡೆ ಬರುತ್ತದೆ. ಸೋಮಶರ್ಮನು ಸುಮನಾ ಧರ್ಮಪುರುಷನ ಬಗ್ಗೆ ಕೊಡುವ ವಿವರಣೆ ಕೇಳಿ ಆಶ್ಚರ್ಯ ಪಟ್ಟು ಮುಂದೆ ಧರ್ಮಪುರುಷನ ಸ್ವರೂಪದ ಬಗ್ಗೆ ಕೇಳುತ್ತಾನೆ. ಆಗ ಸುಮನಾ ಕೊಡುವ ವಿಷಯಗಳ ನಿರೂಪಣೆಯಿಂದ ಈ ವೀರಬಾಹುವಿನ ಸುಳುಹು ಸಿಗುತ್ತದೆ. ಅದನ್ನಿಷ್ಟು ಈಗ ನೋಡೋಣ. 
*****

"ಸಪ್ತರ್ಷಿಗಳು" ಎಂದು ಹೆಸರಾದ ಏಳು ಜನ ಮಹಾತಪಸ್ವಿಗಳಲ್ಲಿ ಅತ್ರಿ ಮಹರ್ಷಿಗಳೂ ಒಬ್ಬರು. ಇವರು ಚತುರ್ಮುಖ ಬ್ರಹ್ಮನ ಮಾನಸ ಪುತ್ರರು. ಕರ್ದಮ ಮಹರ್ಷಿ ಮತ್ತು ದೇವಹೂತಿ ದಂಪತಿಗಳ ಮಗಳಾದ ಅನಸೂಯ ಇವರ ಪತ್ನಿ. ತ್ರಿಮೂರ್ತಿಗಳ ವರದಿಂದ ಇವರಿಗೆ ಮೂರು ಮಕ್ಕಳಾಗುತ್ತಾರೆ. ಬ್ರಹ್ಮನ ವರದಿಂದ ಚಂದ್ರನೂ, ವಿಷ್ಣುವಿನ ವರದಿಂದ ದತ್ತಾತ್ರೇಯನೂ ಮತ್ತು ಪರಶಿವನ ವರದಿಂದ ದೂರ್ವಾಸರೂ ಜನಿಸುತ್ತಾರೆ. (ಮೂವರ ವರದ ಕಾರಣ ಸಂಯುಕ್ತವಾಗಿ ಮೂರು ತಲೆಯ "ದತ್ತಾತ್ರೇಯ" ಜನಿಸಿದ್ದು ಎಂದು ಒಂದು ನಂಬಿಕೆ. ಇದು ಚಲನಚಿತ್ರಗಳ ಮೂಲಕ ಮತ್ತು ಹರಿಕಥಾ ಕಾಲಕ್ಷೇಪಗಳ ಮೂಲಕ ಹೆಚ್ಚು ಪ್ರಚಾರದಲ್ಲಿದೆ).  

ಧರ್ಮದೇವತೆಯನ್ನು ಪೂರ್ಣವಾಗಿ ಕಂಡವರು ಬಹಳ ಕಡಿಮೆ ಜನ. ಧರ್ಮದೇವತೆಗೆ ಎರಡು ರೂಪಗಳು. ಒಂದು ಯಮ ರೂಪ. ಪಾಪಿಗಳಿಗೆ ಕೇವಲ ಯಮದೂತರ ದರ್ಶನ ಆಗುತ್ತದೆ. ಕೆಲವರಿಗೆ ಯಮ ರೂಪದ ದರ್ಶನ ಆಗುತ್ತದೆ. ಆದರೆ ಪುಣ್ಯಾತ್ಮರಿಗೆ ಧರ್ಮದೇವತೆಯ ಎರಡನೆಯ ರೂಪವಾದ ಧರ್ಮನ ಸ್ವಲ್ಪ ದರ್ಶನ ಆಗುತ್ತದೆ. ಹೀಗೆ ಧರ್ಮದೇವತೆಯ ಪೂರ್ಣ ಸ್ವರೂಪವನ್ನು ನೋಡಬೇಕೆಂದು ತಪಸ್ಸು ಮಾಡಿ ಮುಖತಃ ಕಂಡವರು ಅತ್ರಿ-ಅನಸೂಯರ ಮಕ್ಕಳಾದ ದತ್ತಾತ್ರೇಯ ಮತ್ತು ದೂರ್ವಾಸರು ಎಂದು ಪದ್ಮ ಪುರಾಣ ಹೇಳುತ್ತದೆ. 

ದೂರ್ವಾಸರು ಒಂದು ಲಕ್ಷ ವರ್ಷ ಧರ್ಮದೇವತೆಯನ್ನು ನೋಡುವುದಕ್ಕೆ ಘನಘೋರ ತಪಸ್ಸು ಮಾಡಿದರು. ತಪಸ್ಸಿನ ಕಾಲ ಏರುತ್ತಿದ್ದಂತೆ ಅವರಿಗೆ ಕೋಪವೂ ಏರಿತು. ಅದು ಎಷ್ಟರ ಮಟ್ಟಿಗೆ  ಹಿಗ್ಗಿತು ಎಂದರೆ ಯಾವ ದೇವತೆಯನ್ನು ಕುರಿತು ತಪಸ್ಸು ಮಾಡಿದರೋ ಆ ದೇವತೆಯ ಮೇಲೆ ಕೋಪ ಬರಲು ಕಾರಣವಾಯಿತು. ಕಡೆಗೆ ಧರ್ಮದೇವತೆ ತನ್ನ ಪರಿವಾರದ ಸಮೇತ ಪ್ರತ್ಯಕ್ಷನಾದನು. ಧರ್ಮದೇವತೆಯ ಪಕ್ಕದಲ್ಲಿ ಐದು ಜನ ಮಹಾತೇಜಸ್ವಿಗಳಾದ ಪುರುಷರೂ ಮತ್ತು ಒಂಭತ್ತು ಮಂದಿ ಪರಮ ಸುಂದರಿಯರಾದ ಸ್ತ್ರೀಯರೂ, ಒಬ್ಬ ತೇಜೋಮಯಿಯಾದ ವೃದ್ಧ ತಪಸ್ವಿನಿಯೂ ನಿಂತಿದ್ದರು. 

"ಮಹರ್ಷಿ, ನೋಡು. ನಾನು ಬಂದಿದ್ದೇನೆ."
"ಯಾರು ನೀನು? ಈ ತೇಜಸ್ವಿ ಪುರುಷರು ಯಾರು? ಈ ದಿವ್ಯ ಸುಂದರಿಯರು ಯಾರು?"

"ಈ ತೇಜಸ್ವಿ ಪುರುಷರು ಕ್ರಮವಾಗಿ ಬ್ರಹ್ಮಚರ್ಯ, ತಪಸ್ಸು, ದಮ, ನಿಯಮ ಮತ್ತು ಶೌಚ ಎಂಬುವುವು. ಈ ಸುಂದರ ಸ್ತ್ರೀಯರು ಕ್ರಮವಾಗಿ ಕ್ಷಮೆ, ಶಾಂತಿ, ಅಹಿಂಸೆ, ಶುಶ್ರೂಷೆ,  ಕಲ್ಪನೆ, ಬುದ್ಧಿ, ಪ್ರಜ್ಞೆ, ಶ್ರದ್ದೆ ಮತ್ತು ಮೇಧೆ. ಹತ್ತನೆಯವಳಾದ ವೃದ್ಧ ತಪಸ್ವಿನಿ ನನ್ನ ತಾಯಿಯಾದ ದಯೆ. ನಾನು ನೀನು ನೋಡಲು ಅಪೇಕ್ಷಿಸಿದ ಧರ್ಮಪುರುಷ."

"ನೀನೇಕೆ ಇಷ್ಟು ತಡ ಮಾಡಿದೆ? ನೋಡು, ಒಂದು ಲಕ್ಷ ವರುಷ ತಪಸ್ಸು ಮಾಡಿ ಹೇಗೆ ಸೊರಗಿದ್ದೇನೆ. ನಿನ್ನ ವಿಳಂಬ ನೀತಿಯಿಂದ ನನಗೆ ಬಹಳ ಕೋಪ ಬಂದಿದೆ."
"ನೀನು ಮಹಾ ತಪಸ್ವಿ. ನಿನ್ನಂತಹವರಿಗೆ ಕೋಪವು ಒಳ್ಳೆಯದಲ್ಲ. ಶಾಂತನಾಗು."
"ಶಾಂತನಾಗುವುದು ಸುಲಭವಲ್ಲ. ನಿನಗೆ ಶಾಪ ಕೊಡುತ್ತೇನೆ."
"ಕೋಪವು ನಿನಗೆ ಶೋಭಿಸದು. ಶಾಪವನ್ನು ಕೊಟ್ಟಾದರೂ ಶಾಂತನಾಗು. ನನ್ನನು ದಾಸೀಪುತ್ರನನ್ನಾಗಿ ಮಾಡು. ರಾಜನನ್ನಾಗಿ ಮಾಡು. ಇಲ್ಲವೇ. ಚಂಡಾಲನನ್ನಾಗಿ ಮಾಡು. ಆದರೆ ನೀನು ಶಾಂತನಾಗು."

"ನೀನು ದಾಸೀಪುತ್ರನಾಗಿ ಜನ್ಮ ತಾಳು. ಭರತ ವಂಶದಲ್ಲಿ ರಾಜನಾಗಿ ಜನಿಸು. ಚಂಡಾಲನಾಗಿಯೂ ಹುಟ್ಟು"

ದೂರ್ವಾಸರ ಕೋಪ ಅಂತಹುದು. ಧರ್ಮದೇವತೆಯನ್ನು ನೋಡಲು ತಪಸ್ಸು ಮಾಡಿದರು. ಕಡೆಗೆ ದರ್ಶನ ಕೊಡಲು ಬಂದ ಧರ್ಮದೇವತೆಗೇ ಮೂರು ಶಾಪ ಕೊಟ್ಟು ಹೊರತು ಹೋದರು. 

ಹೀಗೆ ಮೂರು ಶಾಪ ಪಡೆದ ಧರ್ಮದೇವತೆ ದಾಸೀಪುತ್ರನಾಗಲು ವಿದುರ ಆಗಿ ಹುಟ್ಟಿದ. ಭರತ ವಂಶದ ಚಕ್ರವರ್ತಿ ಯುಧಿಷ್ಠಿರ ಆಗಿ ಜನಿಸಿದ. 

ಮೂರನೆಯ ಶಾಪವನ್ನು ಉಪಯೋಗಿಸಿಕೊಂಡು ತ್ರಿಶಂಕುವಿನ ಮಗ ಹರಿಶ್ಚಂದ್ರ ಕಾಶಿಯಲ್ಲಿ ಮಾರಾಟಕ್ಕೆ ಬರುವ ವೇಳೆಯಲ್ಲಿ "ವೀರಬಾಹು" ಎನ್ನುವ ಹೆಸರಿನಿಂದ ಹುಟ್ಟಿ, ಸ್ಮಶಾನದ ಮಾಲೀಕನಾಗಿ ಹರಿಶ್ಚಂದ್ರನನ್ನು ಕೊಂಡುಕೊಂಡು ಕೆಲಸಕ್ಕೆ ಇಟ್ಟುಕೊಂಡ. 

*****

"ಸತ್ಯ ಹರಿಶ್ಚಂದ್ರ" ಹೆಸರಿನ ಅನೇಕ ಚಲನಚಿತ್ರಗಳು ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಕನ್ನಡದ "ಸತ್ಯ ಹರಿಶ್ಚಂದ್ರ" ಚಲನಚಿತ್ರ ಜನಪ್ರಿಯ ನಾಯಕ ನಟ ರಾಜಕುಮಾರ್ ಅವರಿಗೆ ಅಪಾರ ಹೆಸರು ತಂದಿತು. ಇಂದಿಗೂ ಈ ಚಿತ್ರ ಪ್ರದರ್ಶನವಾದ ಕಡೆ ನೂಕುನುಗ್ಗಲು, ಜನಸಂದಣಿ ಇರುತ್ತದೆ. ಎಂ. ಪಿ. ಶಂಕರ್ ಅವರ ವೀರಬಾಹು ಪಾತ್ರ ಮತ್ತು ಅದರ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ" ಹಾಡು ಅತ್ಯಂತ ಜನಪ್ರಿಯ. ಈ ಹಾಡಿನಲ್ಲಿ ಅನೇಕ ತತ್ವಗಳೂ ಅಡಗಿವೆ. 

ಚಿತ್ರದ ಕಡೆಯಲ್ಲಿ ವಸಿಷ್ಠ-ವಿಶ್ವಾಮಿತ್ರರೂ, ದೇವೇಂದ್ರನೂ ಮೊದಲಾದವರು ಹರಿಶ್ಚಂದ್ರನಿಗೆ ಮತ್ತೆ ರಾಜ್ಯಭಾರವನ್ನು ವಹಿಸಿಕೊಳ್ಳಲು ಹೇಳುತ್ತಾರೆ. ಆಗ ಅವನು "ನಾನು ಸ್ಮಶಾನ ಕಾಯುವ ಕೆಲಸ ಮಾಡಿದವನು. ಈಗ ಅದಕ್ಕೆ ಯೋಗ್ಯನಲ್ಲ. ಕ್ಷಮಿಸಿ" ಅನ್ನುತ್ತಾನೆ. ಆಗ ಅವರು "ನೀನು ಕಾದದ್ದು ಸ್ಮಶಾನವಲ್ಲ. ಅಲ್ಲಿ ನೋಡು. ನಿನ್ನನ್ನು ಕೊಂಡುಕೊಂಡವನು ಧರ್ಮರಾಜನು. ನೀನು ಕಾಯುತ್ತಿದ್ದುದು ಅನೇಕ ಋಷಿಗಳ ಹೋಮಕುಂಡಗಳು" ಎಂದು ತೋರಿಸುತ್ತಾರೆ. ಚಿತ್ರದ ಕೊನೆಯ ಕೆಲವು ಸೆಕೆಂಡುಗಳ ಈ ಭಾಗವನ್ನು ಯಾರೂ ಹೆಚ್ಚಾಗಿ ಗಮನಿಸುವುದಿಲ್ಲ. ಮತ್ತೊಮ್ಮೆ ನೋಡಿದರೆ ಗೊತ್ತಾಗುವುದು. ಚಿತ್ರ ಯೂಟ್ಯೂಬಿನಲ್ಲಿ ಲಭ್ಯವಿದೆ. 

"ದಯೆಯೇ ಧರ್ಮದ ಮೂಲವಯ್ಯ" ಎನ್ನುವ ಶರಣಶ್ರೇಷ್ಠರ ವಚನಗಳಿಗೂ, ಧರ್ಮಪುರುಷನು "ದಯೆ ನನ್ನ ತಾಯಿ" ಎಂದು "ಪದ್ಮ ಪುರಾಣ"  ಸಂದರ್ಭದ ಸಂಭಾಷಣೆಯಲ್ಲಿ ಹೇಳುವುದಕ್ಕೂ ಸಾಮ್ಯವನ್ನು ಕಾಣಬಹುದು. 

*****

ದೂರ್ವಾಸರು ಧರ್ಮದೇವತೆಗೆ ಶಾಪ ಕೊಟ್ಟದ್ದು ಸರಿಯೇ? ಧರ್ಮದೇವತೆ ಅದನ್ನು ಯಾಕೆ ಒಪ್ಪಿಕೊಂಡನು? ಧರ್ಮದೇವತೆಗೆ ಅದನ್ನು ತಪ್ಪಿಸಿಕೊಳ್ಳಲು ಆಗಲಿಲ್ಲವೇ? ಇವೇ ಮುಂತಾದ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರ ಹುಡುಕೋಣ. 

Sunday, July 6, 2025

ಐದು ರೀತಿಯ ಮಕ್ಕಳು


ಹಿಂದಿನ ಸಂಚಿಕೆಗಳಲ್ಲಿ ಅಷ್ಟ ಭೋಗಗಳು, ಅಷ್ಟ ಭಾಗ್ಯಗಳು ಮತ್ತು ಅಷ್ಟ ಐಶ್ವರ್ಯಗಳು ಎಂಬ ವಿಷಯಗಳ ಬಗ್ಗೆ ಸ್ವಲ್ಪಮಟ್ಟಿಗೆ ನೋಡಿದ್ದೆವು. ಅಷ್ಟ ಐಶ್ವರ್ಯಗಳಲ್ಲಿ ಸಂತಾನವೂ ಒಂದು ಎಂದು ಚರ್ಚಿಸಿದ್ದೆವು. (ಈ ಕೊನೆಯ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ).  ಅನೇಕ ದಂಪತಿಗಳಿಗೆ ಎಲ್ಲ ಭೋಗ-ಭಾಗ್ಯ-ಐಶ್ವರ್ಯಗಳು ದೊರಕಿದ್ದರೂ ಸಂತಾನ ಇಲ್ಲ ಎನ್ನುವ ಒಂದು ಕೊರತೆ ಕಾಡುವುದು ಉಂಟು. ಅನೇಕ ಪುರಾಣದ ಕಥೆಗಳು ಪ್ರಾರಂಭವಾಗುವುದು ಈ ಕೊರತೆಯ ಕಾರಣದಿಂದಲೇ. ಮತ್ತೆ ಕೆಲವು ಕಥೆಗಳು ಪ್ರಾರಂಭವಾಗುವುದು ಈ ಸಂತಾನದ ಕಾರಣದಿಂದ ಉದ್ಭವವಾಗುವ ಸಮಸ್ಯೆಗಳಿಂದಲೂ ಹೌದು. ಹೀಗೆ, ಇದ್ದರೂ ಸಮಸ್ಯೆ, ಇಲ್ಲದಿದ್ದರೂ ಸಮಸ್ಯೆ ಸೃಷ್ಟಿಸುವುದು ಈ ಸಂತಾನವೆಂಬ ಒಂದು ಆಸ್ತಿಯ ವಿಶೇಷತೆ. ಕೆಲವೊಮ್ಮೆ ಈ ಆಸ್ತಿ ಭಾದ್ಯತೆ ಆಗುವುದೂ ಸಾಧ್ಯ. ಹೀಗೂ ಉಂಟು. ಹಾಗೂ ಉಂಟು! 

ನಮ್ಮ ಎರಡು ಮಹಾಕಾವ್ಯಗಳು ಮತ್ತು ವಾಂಗ್ಮಯದ ಎರಡು ಕಣ್ಣುಗಳಾದ ರಾಮಾಯಣ ಮತ್ತು ಮಹಾಭಾರತ ನಿಜವಾಗಿ ಪ್ರಾರಂಭವಾಗುವುದು ಈ ಸಮಸ್ಯೆಯಿಂದಲೇ. ರಾಮಾಯಣದ ತಿರುಳು ದಶರಥನ ಮಕ್ಕಳಿಲ್ಲವೆಂಬ ಕೊರಗು ಮತ್ತು ಪುತ್ರಕಾಮೇಷ್ಟಿಯಿಂದ ಹುಟ್ಟುತ್ತದೆ. ಮಹಾಭಾರತದ ಅಸಲಿ ಪ್ರಾರಂಭ ಧೃತರಾಷ್ಟ್ರನ ನೂರಾಒಂದು ಮಕ್ಕಳಿಂದ! 

***** 

ನಮ್ಮ ಬಾಲ್ಯದ ಕಾಲದಲ್ಲಿ ಹಿರಿಯರು ಸಂವಾದದಲ್ಲಿ ತೊಡಗಿದಾಗ ಮೊದಲನೇ ಪ್ರಶ್ನೆ "ಮಕ್ಕಳೆಷ್ಟು?" ಎನ್ನುವುದೇ ಆಗಿರುತ್ತಿತ್ತು. ಕೆಲವರಿಗೆ ಹೆಚ್ಚು ಮಕ್ಕಳು. ನಾಲ್ಕು, ಆರು, ಎಂಟು ಮಕ್ಕಳಿರುತ್ತಿದ್ದುದು ಸಾಮಾನ್ಯವಾಗಿರುತ್ತಿತ್ತು. ಹೆಚ್ಚು ಮಕ್ಕಳಿರುವವರಿಗೆ ಕಡಿಮೆಯಿರುವವರು ಸಮಾಧಾನ ಹೇಳುವಂತೆ "ಇರಲಿ ಬಿಡಿ. ಯಾರಾದರೂ ಕೇಳುವುದು 'ಎಷ್ಟು ಮಕ್ಕಳು?' ಎಂದಲ್ಲವೇ? 'ಎಷ್ಟು ಆಸ್ತಿ?' ಎಂದು ಯಾರೂ ಕೇಳುವುದಿಲ್ಲವಲ್ಲ?" ಎನ್ನುತ್ತಿದ್ದರು. ಯಾರಿಗಾದರೂ ಮಕ್ಕಳಿಲ್ಲದಿದ್ದರೆ ಇದ್ದವರು ಇದೇ ರೀತಿ "ಆಗುತ್ತವೆ ಬಿಡಿ. ದೇವರು ಕಣ್ಣು ಬಿಟ್ಟು ನೋಡಿದರೆ ಎಷ್ಟು ಹೊತ್ತು?" ಅನ್ನುತ್ತಿದ್ದರು. ಈಗ ಮಕ್ಕಳ ವಿಷಯ ಮಾತಾಡುವುದೇ ಒಂದು ಕಷ್ಟದ ಕೆಲಸ. ಅದರ ಪ್ರಸ್ತಾಪ ಮಾಡಬೇಕೋ ಮಾಡಬಾರದೋ ಗೊತ್ತಾಗುವುದಿಲ್ಲ. ರಾಜಕೀಯ ವಿಷಯಗಳು ಮತ್ತು ಹವಾಮಾನ ವಿವರದಿಂದ ಮಾತುಕತೆ ಪ್ರಾರಂಭಿಸುವುದು ಉಭಯತ್ರರಿಗೂ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು. 

ನಮ್ಮ ದೇಶ ಸ್ವಾತಂತ್ರ್ಯ ಪಡೆದಾಗಿನಿಂದ "ಅತಿಸಂತಾನ" ಒಂದು ದೊಡ್ಡ ಸಮಸ್ಯೆ ಎಂದು ಗುರುತಿಸಿದ ಸರ್ಕಾರ "ಮಿತಸಂತಾನ" ಎನ್ನುವ ಕಾರ್ಯಕ್ರಮ ರೂಪಿಸಿತು. ಅರವತ್ತರ ದಶಕದಲ್ಲಿ "ಒಂದು ಎರಡು ಬೇಕು; ಮೂರು ಸಾಕು" ಎನ್ನುವ ಘೋಷಣೆ ಚಾಲ್ತಿಯಲ್ಲಿತ್ತು. ಎಪ್ಪತ್ತರ ದಶಕದಲ್ಲಿ ಅದು "ಆರತಿಗೊಬ್ಬ ಮಗಳು; ಕೀರುತಿಗೊಬ್ಬ ಮಗ" ಎಂದು ಬದಲಾಯಿತು. ಎಲ್ಲಾ ಸರ್ಕಾರೀ ಕಟ್ಟಡಗಳ ಮೇಲೆ ಈ ಘೋಷವಾಕ್ಯಗಳು ರಾರಾಜಿಸಿದವು. "ಸ್ತ್ರೀ ಸ್ವಾತಂತ್ಯವಾದಿಗಳು" ಎರಡನೆಯ ಘೋಷಣೆಗೆ ನ್ಯಾಯವಾಗಿಯೇ ಆಕ್ಷೇಪಿಸಿದರು. "ಮಗಳಿಂದ ಕೀರ್ತಿ ಇಲ್ಲವೇ?" ಎಂದು ಪ್ರಬಲವಾಗಿ ಪ್ರತಿರೋಧ ಬಂತು. "ಆರೋಗ್ಯ ಮತ್ತು ಕುಟುಂಬ ಯೋಜನೆ" ಇಲಾಖೆ ತನ್ನ ಹೆಸರು ಬದಲಾಯಿಸಿಕೊಂಡು "ಆರೋಗ್ಯ ಮತ್ತು ಕುಟುಂಬ ಕಲ್ಯಾಣ" ಇಲಾಖೆ ಆಯಿತು. ಎಂಭತ್ತರ ದಶಕದಲ್ಲಿ ಸರ್ಕಾರ ಕಷ್ಟ ಪಡುವ ಕಾಲ ಕಳೆದು ಜನರೇ "ಒಂದು ಮಗು ಸಾಕು" ಎನ್ನತೊಡಗಿದರು. ತೊಂಬತ್ತರ ದಶಕದಲ್ಲಿ "ಇರುವುದಕ್ಕಿಂತ ಇಲ್ಲದಿರುವುದೇ ಒಳ್ಳೆಯದು" ಎಂದು ಬಾಯಲ್ಲಿ ಹೇಳದಿದ್ದರೂ ಆಚರಣೆಯಲ್ಲಿ ತಂದರು. 

ಹೊಸ ಶತಮಾನದಲ್ಲಿ ಇನ್ನೂ ಪ್ರಚಂಡ ಬದಲಾವಣೆಗಳಾದುವು. ಸಮಸ್ಯೆಯ ಮೂಲಕ್ಕೇ ಕೊಡಲಿ ಪೆಟ್ಟು ಬೀಳತೊಡಗಿತು. ಮದುವೆಯೆನ್ನುವುದು ಇದ್ದರೆ ತಾನೇ ಮಕ್ಕಳು ಎನ್ನುವ ಸಮಸ್ಯೆ? ಮದುವೆಯೇ ಬೇಡ. ಹಾಗೆಯೇ ಜೊತೆಯಲ್ಲಿ ಇರೋಣ. ಜೊತೆ ಬೇಡ ಎಂದಾಗ ಸುಮ್ಮನೆ ಬೇರೆ ಹೋದರಾಯಿತು. ಇದರಿಂದ ವಿವಾಹ ವಿಚ್ಚೇದನ ಮತ್ತು ಅದರಿಂದಾಗುವ ಸಮಸ್ಯೆಗಳೇ ರದ್ದು ಎಂದು ಯುವ ಜನಾಂಗ ತೀರ್ಮಾನಿಸಿತು. ಆದರೂ ಕೆಲವೆಡೆ ಅಪಘಾತಗಳಾಗಿ ಮದುವೆಯಿಲ್ಲದೇ ಮಕ್ಕಳಾಗತೊಡಗಿದವು. ಕಳೆದ ದಶಕದಲ್ಲಿ ಈ ಎಲ್ಲ ರೀತಿಯ ಮಕ್ಕಳ ಸಮಸ್ಯೆಗೆ ಅತಿ ದೊಡ್ಡ ಪರಿಹಾರ ಸಿಕ್ಕಿದೆ. ಗಂಡು-ಹೆಣ್ಣು ಮದುವೆಯಾದರೆ ಅಥವಾ ಜೊತೆಯಲ್ಲಿದ್ದರೆ ತಾನೇ ಮಕ್ಕಳ ಸಮಸ್ಯೆ? ಸಲಿಂಗ ವಿವಾಹದಿಂದ ಈ ತೊಂದರೆಯೇ ಇರುವುದಿಲ್ಲವಲ್ಲ. ಗಂಡು-ಗಂಡು ಮತ್ತು ಹೆಣ್ಣು-ಹೆಣ್ಣು ಮದುವೆಯಾದರೆ ಮಕ್ಕಳಾಗುವ ಸಂಭವವೇ ಇಲ್ಲವಲ್ಲ! ಈಗ ಇದರ ಕಾಲ ನಡೆಯುತ್ತಿದೆ. 

*****

ದಂಪತಿಗಳಿಗೆ ಮಕ್ಕಳು ಏಕೆ ಹುಟ್ಟುತ್ತಾರೆ? ಹುಟ್ಟುವ ಮಕ್ಕಳು ಯಾವ ರೀತಿಯವು? ಜನ್ಮ-ಜನ್ಮಗಳ ಸಂಬಂಧಗಳು ಉಂಟೋ? ಈ ರೀತಿಯ ಪ್ರಶ್ನೆಗಳಿಗೆ "ಪದ್ಮ ಪುರಾಣ" ತನ್ನ ಒಂದು ಪ್ರಸಂಗದಲ್ಲಿ ಉತ್ತರ ಕೊಡುತ್ತದೆ. 

ನರ್ಮದಾ ನದಿಯ ತೀರದ "ವಾಮನ ತೀರ್ಥ" ಎನ್ನುವ ಪ್ರದೇಶದಲ್ಲಿ ಸೋಮಶರ್ಮ ಎಂಬ ಒಬ್ಬ ಸಾತ್ವಿಕನು ವಾಸವಾಗಿರುತ್ತಾನೆ. ಅವನ ವಿವಾಹ ಚ್ಯವನ ಋಷಿಗಳ ಮಗಳಾದ ಸುಮನಾ ಎನ್ನುವ ಯುವತಿಯೊಡನೆ ಆಗುತ್ತದೆ. ("ಸತಿ ಸುಕನ್ಯ" ಚಲನಚಿತ್ರ ನೋಡಿದವರಿಗೆ ಸುಕನ್ಯಳ ಗಂಡ ಚ್ಯವನ ಋಷಿ ಎಂದು ನೆನಪಿಗೆ ಬರಬಹುದು. "ಚ್ಯವನಪ್ರಾಶ" ಅನ್ನುವುದನ್ನು ಅಶ್ವಿನಿ ದೇವತೆಗಳ ಕಡೆಯಿಂದ ಭೂಮಿಗೆ ತಂದ ತಪಸ್ವಿಗಳು ಅವರು. ಭೃಗು ಋಷಿಗಳ ವಂಶಜರು).  ತಂದೆಗೆ ತಕ್ಕ ಮಗಳಾದ ಸುಮನಾ ಬಹಳ ತಿಳುವಳಿಕೆಯುಳ್ಳ ಹೆಣ್ಣು ಮಗಳು. ಹೆಸರಿಗೆ ತಕ್ಕಂತೆ ಒಳ್ಳೆಯ ಮನಸ್ಸಿನವಳು. ಸೋಮಶರ್ಮನೂ ಜ್ಞಾನಿಯೇ. ಚೆನ್ನಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗಳಿಗೆ ಮಕ್ಕಳಿರುವುದಿಲ್ಲ. ಸೋಮಶರ್ಮನಿಗೆ ಎರಡು ಚಿಂತೆಗಳು. ಮೊದಲನೆಯದು ದಾರಿದ್ರ್ಯ. ಎರಡನೆಯದು ಮಕ್ಕಳಿಲ್ಲ ಎನ್ನುವುದು. ಹೀಗೆ ಚಿಂತಾಕ್ರಾಂತನಾಗಿರುವ ಸೋಮಶರ್ಮನನ್ನು ಗಮನಿಸಿದ ಸುಮನಾ ಒಂದು ದಿನ ಅವನಿಗೆ ಸಮಾಧಾನ ಹೇಳುತ್ತಾಳೆ. ದಾರಿದ್ರ್ಯದ ವಿಷಯದಲ್ಲಿ ಹೇಳಿದ ಸಮಾಧಾನದ ವಿಷಯ ಮುಂದೊಮ್ಮೆ ನೋಡೋಣ. ಈಗ ಮಕ್ಕಳ ಸಮಸ್ಯೆ ಪ್ರಸ್ತಾಪ ಬಂದಿರುವುದರಿಂದ ಅದನ್ನು ಗಮನಿಸೋಣ. 

ಸುಮನಾ ಹೇಳುವ ಸೂತ್ರರೂಪವಾದ ಮಕ್ಕಳ ನಾಲ್ಕು ವಿಧಗಳ ವಿವರಣೆ ಹೀಗಿದೆ:

ಋಣಸಂಬಂಧಿನಃ ಕೇಚಿತ್ ಕೇಚಿತ್ ನ್ಯಾಸಾಪಹಾರಕಾ:
ಲಾಭಪ್ರದಾ ಭವಂತೇ ಕೇ ಉದಾಸೀನಾ ತಥಾಪರೇ  

  1. ಮೊದಲನೆಯ ವರ್ಗದ ಮಕ್ಕಳು "ಸಾಲ ವಸೂಲಿಗೆ ಬಂದವರು".  ಹಿಂದಿನ ಜನ್ಮಗಳಲ್ಲಿ ನಾವು ಯಾರಿಂದಲಾದರೂ ಹಣ-ಕಾಸು, ವಸ್ತುಗಳನ್ನು ಸಾಲ ಪಡೆದು ಹಿಂದಿರುಗಿಸದಿದ್ದರೆ ಹಾಗೆ ಸಾಲಕೊಟ್ಟವರು ಈ ಜನ್ಮದಲ್ಲಿ ನಮ್ಮ ಮಕ್ಕಳಾಗಿ ಹುಟ್ಟಿ ನಮ್ಮಿಂದ ಅದನ್ನು ಬಡ್ಡಿ ಸಹಿತ ವಸೂಲಿ ಮಾಡಲು ಹುಟ್ಟಿದ ಮಕ್ಕಳು ಇವರು. ಇವರಿಂದ ತಂದೆ-ತಾಯಿಗಳಿಗೆ ಯಾವುದೇ ಪ್ರಯೋಜನ ಇರುವುದಿಲ್ಲ. ತಮ್ಮ ಸಾಲ ವಸೂಲಾಗುವವರೆಗೂ ಜೊತೆಯಲ್ಲಿದ್ದು, ಅದು ಮುಗಿದ ಕೂಡಲೇ ಹೊರಟು ಹೋಗುತ್ತಾರೆ. ಇವರು "ಋಣಸಂಬಂಧಿ ಮಕ್ಕಳು". 
  2. ಎರಡನೆಯ ವರ್ಗದ ಮಕ್ಕಳು "ತಿಂದದ್ದು ಕಕ್ಕಿಸುವವರು". ಯಾವುದೋ ಜನ್ಮದಲ್ಲಿ ಇನ್ನೊಬ್ಬರ ಹಣವನ್ನು ಅಥವಾ ವಸ್ತು-ಆಸ್ತಿಗಳನ್ನು ಅನ್ಯಾಯವಾಗಿ ತಿಂದುಹಾಕಿದ್ದರೆ ಆ ರೀತಿ ಕಳೆದುಕೊಂಡವರು ಈ ಜನ್ಮದಲ್ಲಿ ಮಕ್ಕಳಾಗಿ ಬಂದು ಅದನ್ನು ಹಿಂಪಡೆಯುವವರು. ಮೊದಲನೆಯ ವರ್ಗದವರಿಗೂ ಇವರಿಗೂ ಏನು ವ್ಯತ್ಯಾಸ? ಮೊದಲನೆಯದು ನಾವು ಸಾಲ ಕೇಳಿ ಅವರು ಒಪ್ಪಿ ಕೊಟ್ಟವರು. ಎರಡನೆಯವರು ಅವರಿಂದ ನಾವು ಅನ್ಯಾಯವಾಗಿ ಕಿತ್ತುಕೊಂಡುದರಿಂದ ನಷ್ಟ ಅನುಭವಿಸಿದವರು. ಆದುದರಿಂದ  ಇವರ ವ್ಯವಹಾರ ಮೊದಲನೆಯ ವರ್ಗಕ್ಕಿಂತ ಹೆಚ್ಚು ಕಠಿಣವಾಗಿರುತ್ತದೆ. 
  3. ಮೂರನೆಯ ವರ್ಗದ ಮಕ್ಕಳು "ಲಾಭಪ್ರದರು". ಕಳೆದ ಜನ್ಮಗಳಲ್ಲಿ ನಾವು ಮತ್ತೊಬ್ಬರಿಗೆ ಉಪಕಾರ ಮಾಡಿದ್ದರೆ ಅದರ ಸ್ಮರಣೆಯಿಂದ ಈ ಜನ್ಮದಲ್ಲಿ ನಮಗೆ ಉಪಕಾರ ಮಾಡಲು ಹುಟ್ಟಿದವರು. ಇವರು ತಂದೆ-ತಾಯಿಯರಿಗೆ ಬಹಳ ಅನುಕೂಲ ಮಾಡಿಕೊಡುವ ಮಕ್ಕಳಾಗುತ್ತಾರೆ. ಕೆಲವೊಮ್ಮೆ ಮಕ್ಕಳು ತಾಯಿ ಮತ್ತು ತಂದೆ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅನುಕೂಲರಾಗಿರಬಹುದು. ಇದು ಮಕ್ಕಳಾಗಿ ಹುಟ್ಟಿದವರು ಯಾರಿಂದ ಹಿಂದೆ ಉಪಕೃತರಾಗಿದ್ದರೋ ಅದರ ಮೇಲೆ ಅವಲಂಬಿಸುತ್ತದೆ. 
  4. ನಾಲ್ಕನೆಯ ವರ್ಗದ ಮಕ್ಕಳು "ಉದಾಸೀನ ಪುತ್ರರು". ಇವರು ಮೇಲಿನ ಮೂರೂ ಕಾರಣಗಳಿಲ್ಲದ ಮಕ್ಕಳು. ಇವರು ಅವರ ಹಿಂದಿನ ಜನ್ಮಗಳ ಫಲಗಳನ್ನು ಅನುಭವಿಸಲು ಹುಟ್ಟಿದವರು. ಜನ್ಮ ಪಡೆಯುವುದಕ್ಕಾಗಿ ಮಾತ್ರವೇ ತಾಯಿ-ತಂದೆಯರ ಆಶ್ರಯ ಪಡೆದವರು. ಇಂತಹವರು ತಮ್ಮ ಪಾಡು ತಾವು ನೋಡಿಕೊಂಡು ತಂದೆ-ತಾಯಿಯರ ವಿಷಯದಲ್ಲಿ ಉದಾಸೀನರಾಗಿರುತ್ತಾರೆ. 
ಹಾಗಿದ್ದರೆ ಐದನೆಯ ಗುಂಪಿನ ಮಕ್ಕಳು ಯಾರು? ಹಿಂದಿನ ಯಾವುದೂ ಸಂಬಂಧಗಳಿರದೆ ಈ ಜನ್ಮದಲ್ಲಿ ಮಾಡಿದ ಸತ್ಕರ್ಮಗಳಿಂದ ತಂದೆ-ತಾಯಿಯರ ಮಕ್ಕಳಾಗಿ ಹುಟ್ಟಿದವರು ಈ ಗುಂಪಿಗೆ ಸೇರಿದವರು. ಹಿಂದಿನ ಜನ್ಮಗಳ ಸತ್ಕರ್ಮಗಳ ಕಾರಣವಾಗಿ ವರರೂಪವಾಗಿ ಈಗ ಹುಟ್ಟಿದವರೂ ಆಗಬಹುದು. ವಿವಾಹ ಪೂರ್ವದಲ್ಲಿ ಮಾಡಿದ ಒಳ್ಳೆಯ ಕೆಲಸಗಳ ಕಾರಣ ವಿವಾಹದ ನಂತರ ಶೀಘ್ರದಲ್ಲಿ ಹುಟ್ಟಬಹುದು. ಇಲ್ಲವೇ, ಮಕ್ಕಳಿಲ್ಲವೆಂದು ಕೊರಗುವಾಗ ಮಾಡುವ ಒಳ್ಳೆಯ ಕಾರ್ಯಗಳ ಫಲಸ್ವರೂಪವಾಗಿ ತಡವಾಗಿ ಹುಟ್ಟಿದವರು ಇರಬಹುದು. ಇಂತಹ ಮಕ್ಕಳಿಂದ ಮಾತಾ-ಪಿತೃಗಳಿಗೆ ಅತ್ಯಂತ ಸುಖವೂ, ಕೀರ್ತಿಯೂ, ಸಮಾಜದಲ್ಲಿ ಮನ್ನಣೆಯೂ ದೊರೆಯುವುದು. 

*****

ನಾವು ನಮ್ಮ ತಂದೆ-ತಾಯಿಯರಿಗೆ ಎಂತಹ ಮಕ್ಕಳಾಗಿದ್ದೆವು? ನಮ್ಮ ಮಕ್ಕಳು ಮೇಲಿನ ಯಾವ ಗುಂಪಿಗೆ ಸೇರಿದವರು? ಈ ಪ್ರಶ್ನೆಗಳಿಗೆ ಉತ್ತರ ಅವರವರೇ ಕಂಡುಕೊಳ್ಳಬೇಕು. 

ಜನ್ಮ-ಜನ್ಮಾಂತರಗಳು, ಪುನರ್ಜನ್ಮ, ಪಾಪ-ಪುಣ್ಯಗಳು, ವರ ಪಡೆಯುವುದು ಮುಂತಾದುವನ್ನು ನಂಬುವವರೂ ಇದ್ದಾರೆ. ನಂಬದವರೂ ಇದ್ದಾರೆ. ನಂಬಿದವರು ಮೇಲಿನ ವರ್ಗೀಕರಣವನ್ನು ಒಪ್ಪಿಕೊಳ್ಳಬಹುದು. ನಂಬದವರು ಅಪಹಾಸ್ಯ ಮಾಡಬಹುದು. ಆದರೆ, ಮೇಲಿನ ವರ್ಗೀಕರಣ ಒಂದು ಬಲವಾದ ತರ್ಕದ ತಳಹದಿಯ ಮೇಲೆ ನಿಂತಿದೆ ಎನ್ನುವುದನ್ನು ಖಂಡಿತವಾಗಿ ಒಪ್ಪಬಹುದು. 

Friday, June 27, 2025

ದೇವರಲ್ಲಿ ಬೇಡುವುದು ಸರಿಯೇ?


ಹಿಂದಿನ ಸಂಚಿಕೆಗಳಲ್ಲಿ "ಅಷ್ಟ ಭೋಗ", "ಅಷ್ಟ ಭಾಗ್ಯ" ಮತ್ತು "ಅಷ್ಟ ಐಶ್ವರ್ಯ" ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆ ಮಾಡಿದೆವು. (ಈ ಹಿಂದಿನ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಇವುಗಳು ತಾವಾಗಿಯೇ ಸಿಗುವುದಿಲ್ಲ. ಕೆಲವನ್ನು ಸ್ವಲ್ಪ ಮಟ್ಟಿಗೆ ನಾವೇ ಸ್ವಂತ ಪರಿಶ್ರಮದಿಂದ ಗಳಿಸಬಹುದಾದರೂ ಅವುಗಳ ಪ್ರಮಾಣ ಹೆಚ್ಚಿರುವುದಿಲ್ಲ. ಅಷ್ಟೇ ಅಲ್ಲ, ಮನುಷ್ಯ ಸಹಜ ಬುದ್ಧಿಯ ಕಾರಣವಾಗಿ ಎಷ್ಟು ಸಂಪಾದನೆ ಮಾಡಿದರೂ ತೃಪ್ತಿ ಎನ್ನುವುದು ಬರುವುದಿಲ್ಲ. "ಇಷ್ಟು ದೊರಕಿದರೆ ಇನ್ನಷ್ಟು ಬೇಕೆಂಬಾಸೆ. ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ. ಕಷ್ಟ ಬೇಡ ಎಂಬಾಸೆ. ಕಡು ಸುಖವ ಕಾಂಬಾಸೆ." ಎಂದು ದಾಸರು ಹೇಳುವಂತೆ ಮನುಷ್ಯನಿಗೆ ಕಷ್ಟ ಬೇಡವೇ ಬೇಡ. ಸುಖ ಬೇಕೇ ಬೇಕು. ಅಷ್ಟೇ ಅಲ್ಲ. ಸುಖ ಇದ್ದಷ್ಟೂ ಇನ್ನೂ ಹೆಚ್ಚು ಬೇಕೆಂಬ ತವಕ. 

ತಾವಾಗಿಯೇ ಸಿಗದ, ನಾವು ಕಷ್ಟ ಪಟ್ಟರೂ ಪೂರ್ಣವಾಗಿ ಎಟುಕದ, ಆದರೆ ಬೇಕೆಂಬ ತುಡಿತವುಳ್ಳ ಈ ವಿಷಯಗಳನ್ನು ಪಡೆಯುವುದು ಹೇಗೆ? ನಮ್ಮ ಅನುಭವ ಹೇಳಿಕೊಟ್ಟಂತೆ ನಮ್ಮಲ್ಲಿ ಇಲ್ಲದಿದ್ದುದನ್ನು ಬೇರೆಯವರಿಂದ ಕೇಳಿ ಪಡೆಯಬಹುದು. ಹಾಗಿದ್ದರೆ ಯಾರನ್ನು ಕೇಳಬೇಕು? ಯಾರಾದರೂ ತಮ್ಮ ಬಳಿ ಇರುವುದನ್ನು ಮಾತ್ರ ಕೊಡಬಲ್ಲರು. ಅವರ ಬಳಿಯೇ ಇಲ್ಲದಿದ್ದುದನ್ನು ಯಾರಾದರೂ ಕೊಡುವುದು ಹೇಗೆ? ಆದಕಾರಣ ನಾವು ನಂಬಿದ ದೇವರನ್ನೋ, ದೇವತೆಯನ್ನೋ ಕೇಳಬಹುದು. ಅದರಲ್ಲಿಯೂ ಯಾರು ಸುಲಭವಾಗಿ ನಮಗೆ ಒಲಿಯುವವರೋ ಅವರನ್ನು ಕೇಳುವುದು. ಅವರಲ್ಲಿ ಕೊಡುವ ಶಕ್ತಿ ಇದ್ದರೂ ಕೇಳಿದರೆ ಕೊಡದವರನ್ನು ಬೇಡಿ ಏನು ಪ್ರಯೋಜನ? 

ಸಾಧನೆಯ ದಾರಿಯಲ್ಲಿ ನಡೆಯುತ್ತಿರುವ ಜಿಜ್ಞಾಸುವಿಗೆ "ಹೀಗೆ ಕೇಳುವುದು ಸರಿಯೇ?" ಎಂಬ ಅನುಮಾನ ಬರುವುದು ಸಹಜ. ವಾಸ್ತವವಾಗಿ ಈ ರೀತಿಯ ಅನುಮಾನ ಬರುವುದೇ ಒಂದು ಒಳ್ಳೆಯ ಸೂಚನೆ. ಎಷ್ಟು ಸಿಕ್ಕಿದರೂ ತೃಪ್ತಿ ಇಲ್ಲದ ಜೀವಕ್ಕೆ ಕೇಳುವುದರ ಎಲ್ಲೆ ಎಲ್ಲಿ? "ಕಿಂಗ್ ಮೈದಾಸ" ಕೇಳಿದಂತೆ ಮುಟ್ಟಿದ್ದೆಲ್ಲವೂ ಚಿನ್ನವಾಗಬೇಕು. ಅದು ನಿಜವಾಗಿ ಮುಟ್ಟಿದ್ದೆಲ್ಲಾ ಚಿನ್ನವಾದಾಗ, ತನ್ನ ಮುದ್ದಿನ ಮಗಳೂ ಒಂದು ಚಿನ್ನದ ಬೊಂಬೆಯಾಗಿ ಕುಳಿತಾಗ, ಅವನ ಕಣ್ಣು ತೆರೆಯಿತು. ಅಂತಹ ಅತಿರೇಕಕ್ಕೆ ಹೋಗದಿದ್ದರೆ ಆ ರೀತಿಯ ಪಾಠ ಕಲಿಯುವುದೂ ಸುಲಭ ಸಾಧ್ಯವಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಒಮ್ಮೆ ಕೇಳುವುದು ಅಭ್ಯಾಸವಾದರೆ ಆ ದುರಭ್ಯಾಸ ನಿಲ್ಲಿಸುವುದು ಕಷ್ಟವೇ. ಇದರಿಂದ ಹೊರಬರುವುದು ಹೇಗೆ?
*****

ಒಬ್ಬ ದೊಡ್ಡ ಧನಿಕ ಇದ್ದಾನೆ. ಅವನ ಬಳಿ ಬೇಕಾದಷ್ಟು ಐಶ್ವರ್ಯ ಇದೆ. ಕೊಡುವ ಶಕ್ತಿಯ ಜೊತೆ ಕೊಡುವ ಮನಸ್ಸೂ ಇದೆ. ಅನೇಕರು ಅವನ ಬಳಿ ಬಂದು, ಬೇಡಿ, ಬೇಕಾದುದನ್ನು ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ತೆಗೆದುಕೊಂಡು ಹೋಗುವವರ ಸರತಿಯ ಸಾಲೇ ಇದೆ. 

ಒಂದು ದಿನ ಮೊದಲನೆಯವನು ಬಂದ. ಅವನಿಗೆ ಸ್ವಂತ ಖರ್ಚಿಗೆ ಹಣ ಬೇಕು. ಅದನ್ನು ಕೇಳುವುದಕ್ಕಾಗಿ ಬಂದಿದ್ದಾನೆ. ಕೇಳಲು ನಾಚಿಕೆ. ಬಹಳ ಸಂಕೋಚದಿಂದ ತಲೆ ಕೆಳಗೆ ಮಾಡಿ ಬೇಡುತ್ತಾನೆ. ಕೊಡುವ ಧನಿಕನ ಕೈ ಯಾವಾಗಲೂ ಮೇಲೆ. ಕೇಳುವವನಿಗೆ ಅನುಮಾನ. "ಕೊಡುತ್ತಾನೋ ಇಲ್ಲವೋ ಗೊತ್ತಿಲ್ಲ. ಹೇಗೆ ಕೇಳುವುದು? ಯಾವ ರೀತಿ ಕೇಳಿದರೆ ಕೊಡಬಹುದು? ಇಲ್ಲ ಅಂದುಬಿಟ್ಟರೆ ಏನು ಮಾಡುವುದು? ಕೊಟ್ಟರೂ ಏನು ಹೇಳಿ ಕೊಡುತ್ತಾನೋ? ಸಾಲ ಎಂದು ಕೊಡಬಹುದು. ಇಷ್ಟು ಬಡ್ಡಿ ಎಂದು ಹೇಳಬಹುದು. ಈಗ ಇಲ್ಲ, ನಾಳೆ ಬಾ ಎನ್ನಬಹುದು. ಹತ್ತು ಬಾರಿ ಓಡಾಡಿಸಿ ಕೊಡಬಹುದು. ಇನ್ನೊಬ್ಬರ ಮುಂದೆ ಅವಮಾನ ಮಾಡಬಹುದು. ಏನಾದರೂ ಕೇಳಲೇಬೇಕು. ವಿಧಿಯಿಲ್ಲ" ಹೀಗೆಲ್ಲಾ ಮನಸ್ಸಿನಲ್ಲಿ ಗೊಂದಲ. ಕಡೆಗೆ ಧೈರ್ಯ ಮಾಡಿ ಕೇಳಿದ. ಸಾಹುಕಾರ ಕೊಟ್ಟೇಬಿಟ್ಟ. ಅವನ ಕೆಲಸವಾಯಿತು. ಹೊರಟುಹೋದ. 

ಈಗ ಎರಡನೆಯವನು ಬಂದ. ಇವನು ತನಗೋಸ್ಕರ ಹಣ ಕೇಳಲು ಬಂದವನಲ್ಲ. ಇವನು ಯಾವುದೋ ಸಂಸ್ಥೆಯ ಒಬ್ಬ ವಿಶ್ವಸ್ತ ಮಂಡಳಿಯವನು (ಟ್ರಸ್ಟೀ). ಕೇಳುತ್ತಿರುವುದು ತನಗಾಗಿ ಅಲ್ಲ. ಟ್ರಸ್ಟಿಗಾಗಿ. ಪಡೆವ ಹಣದಿಂದ ಸ್ವಂತಕ್ಕೆ ಪ್ರಯೋಜನ ಪಡೆಯುವ ಅಭಿಲಾಷೆ ಇಲ್ಲ. ಹಣ ತೆಗೆದುಕೊಂಡಮೇಲೆ ತನ್ನದು ಅನ್ನುವ ಭಾವನೆ ಇಲ್ಲ. ದುರುಪಯೋಗ ಮಾಡಬೇಕೆಂಬ ಇರಾದೆ ಇಲ್ಲ. ತನಗಾಗಿ ಎಂದು ಕೇಳದುದರಿಂದ ಸಂಕೋಚವೂ ಇಲ್ಲ. ಕೊಡುವವನು ಇದನ್ನು ಸಾಲ ಎಂದು ಕೊಡುವುದಿಲ್ಲ. ಹಣ ಕೇಳಲು ಬಂದಿದ್ದರೂ ಸಾಹುಕಾರ ಗೌರವದಿಂದ ಕಾಣುತ್ತಾನೆ. ಕೂಡಿಸಿ ಮಾತನಾಡಿಸುತ್ತಾನೆ. ಸಾಹುಕಾರ ಕೊಡುತ್ತಾನೆ. ಇವನು ತೆಗೆದುಕೊಂಡು ಹೋಗುತ್ತಾನೆ. ತೆಗೆದುಕೊಂಡುದನ್ನು ಸರಿಯಾಗಿ, ಕೇಳಿದ ಉದ್ದೇಶ ಸಾಧನೆಗೆ ಉಪಯೋಗಿಸುತ್ತಾನೆ. 

ಇಬ್ಬರಾದಮೇಲೆ ಮೂರನೆಯವನು ಬಂದ . ಅವನು ಏನನ್ನೂ ಕೇಳಲು ಬಂದವನಲ್ಲ. ಅವನಿಗೆ ಏನೂ ಬೇಕಾಗಿಲ್ಲ. ಇರುವುದರಲ್ಲೇ ತೃಪ್ತನಾಗಿದ್ದಾನೆ. ಅವನಿಗೆ ಯಾವ ಪದಾರ್ಥವನ್ನೂ ಕೇಳಬೇಕೆಂಬ ಅಭಿಲಾಷೆ ಇಲ್ಲ. ಬದಲಾಗಿ ಅವನೇ ಸಾಹುಕಾರನಿಗೆ ಕೊಡಲು ಹಣ್ಣನ್ನು ತಂದಿದ್ದಾನೆ. ಹಣ್ಣು ಕೊಡುತ್ತಾನೆ. ಅಷ್ಟೇ. ಆದರೆ ಸಾಹುಕಾರ "ನಿನಗೆ ಏನು ಬೇಕು? ಕೇಳು. ಸಂತೋಷದಿಂದ ಕೊಡುತ್ತೇನೆ" ಅನ್ನುತ್ತಾನೆ. "ನನಗೆ ಏನೂ ಬೇಡ. ನಿನ್ನನ್ನು ಕಾಣಲು ಬಂದೆ. ನೋಡಿದ್ದಾಯಿತು. ಅಷ್ಟು ಸಾಕು" ಅನ್ನುತ್ತಾನೆ ಬಂದವನು. ಸಾಹುಕಾರ ಬಲವಂತ ಮಾಡಿ ಏನನ್ನೋ ಕೊಡುತ್ತಾನೆ.  ಬಂದವನು ಅದನ್ನು ತೆಗೆದುಕೊಂಡು ಹೋಗುತ್ತಾನೆ. ಕೊಡು ಎಂದು ಕೇಳಲಿಲ್ಲ. ಕೊಡದಿದ್ದರೆ ದುಃಖವಿಲ್ಲ. ಸಾಹುಕಾರ ತಾನಾಗಿಯೇ ಕೊಟ್ಟಿದ್ದನ್ನು ತೆಗೆದುಕೊಂಡಾಗ ಸಂತೋಷವಿಲ್ಲ. ಸಂತೋಷವಿಲ್ಲ ಎಂದರೆ ವಿಷಾದವೂ ಇಲ್ಲ. ಒಂದು ರೀತಿಯ ನಿರ್ಲಿಪ್ತ ಭಾವನೆ. "ನೀನು ಕೊಟ್ಟೆ. ಅದನ್ನು ಗೌರವಪೂರ್ವಕ ಸ್ವೀಕರಿಸುತ್ತೇನೆ. ಅದರ ಮೌಲ್ಯ ನೋಡಿ ಅಲ್ಲ. ಕೊಟ್ಟವನಾದ ನಿನ್ನ ದೊಡ್ಡತನ ನೋಡಿ ತೆಗೆದುಕೊಂಡೆ" ಎನ್ನುವ ಭಾವ. 
*****

ಭಗವಂತನೆಂಬ ದೊಡ್ಡ ಸಾಹುಕಾರ. ಬಂದವರು ಮೂರು ರೀತಿಯ ಭಕ್ತರು. ಮೊದಲನೆಯವನು ತನಗೆ ಬೇಕು ಎಂದು ಕೇಳುವ "ಸಕಾಮಿ ಭಕ್ತ". ಕೇಳಿ ಪಡೆದದ್ದರಿಂದ ಸುಖ ಪಡುವ ಅಭಿಲಾಷೆ. ಸಾಹುಕಾರನ ಬಳಿ ಹೋಗುವಾಗಲೇ ಏನು ಬೇಕು ಎಂದು ತೀರ್ಮಾನ ಮಾಡಿ ಅದನ್ನು ಕೇಳಿದವ. ಕೇಳಿದ ಉದ್ದೇಶದಲ್ಲಿ ಅನುಮಾನವಿಲ್ಲ. ಅದು ಸ್ವಾರ್ಥಕ್ಕೇ. ಆದರೂ ಭಗವಂತ ಕೊಟ್ಟ. ಭಕ್ತನಿಗೆ ಸಂತೋಷ. ಮತ್ತೆ ಇನ್ನೊಂದು ದಿನ ಮತ್ತೊಂದು ಬೇಕಾದಾಗ ಹೀಗೆ ಅವನ ಬಳಿ ಹೋಗುತ್ತಾನೆ. ಎಂದೋ ಒಂದು ದಿನ ಮುಂದಿನ ಹಂತಕ್ಕೆ ತೇರ್ಗಡೆ ಆಗಬಹುದು. ಪರಮಾತ್ಮ ಕರುಣಾಳು. ಅವನನ್ನು ತಳ್ಳಿ ಓಡಿಸುವುದಿಲ್ಲ. ಹೆಚ್ಚಿನ ಭಕ್ತರು, ಅವರ ಅನುಷ್ಠಾನಗಳು ಈ ರೀತಿಯವೇ. 

ಎರಡನೆಯವನೂ ಬೇಡಲೆಂದೇ ಬಂದವನು. ಆದರೆ ಪಡೆದುದರಿಂದ ಸುಖ ಪಡುವ ಅಭಿಲಾಷೆ ಇಲ್ಲ. ಆ ಪರಿಕರಗಳಿಂದ ಮತ್ತಷ್ಟು ಸಾಧನೆ ಮಾಡಲು ಅನುಕೂಲ ಎಂದು ಬೇಡುತ್ತಿದ್ದಾನೆ. ಇವನಿಗೆ ಕೊಡುವುದರಿಂದ ಸರಿದಾರಿಯಲ್ಲಿ ಮುಂದುವರೆಯುತ್ತಾನೆ ಎನ್ನುವುದು ಅವನಿಗೂ ಗೊತ್ತು. (ಅವನಿಗೆ ಎಲ್ಲವೂ ಗೊತ್ತು). ಮೊದಲಿನವನಂತೆ ಇವನೂ ಬೇಡುವವನೇ ಆದರೂ ಇವನಿಗೆ ಗೌರವವೂ ಸಿಗುತ್ತದೆ. ಕೇಳಿದ್ದೂ ಸಿಗುತ್ತದೆ. ಈ ರೀತಿ ಭಕ್ತರು ಮೊದಲಿನವರಿಗಿಂತ ಸಂಖ್ಯೆಯಲ್ಲಿ ಕಡಿಮೆ. 

ಮೂರನೆಯವರದು ಬೇರೆಯೇ ರೀತಿ. ಅವರಿಗೆ ಭಗವಂತನ ಪ್ರೀತಿ ಬಿಟ್ಟು ಬೇರೆ ಏನೂ ಬೇಕಾಗಿಲ್ಲ. ಮಾಡಿದ ಪ್ರತಿ ಕೆಲಸವೂ ಅವನ ಪ್ರೀತಿಗಾಗಿ. ಸಂಕಲ್ಪ ಮಾಡುವಾಗ "ಅಸ್ಮಾಕಂ ಸಹಕುಟುಂಬಾನಾಂ" ಇಲ್ಲ. "ಲೋಕ ಕಲ್ಯಾಣಾರ್ಥಂ" ಮಾತ್ರವೇ ಉಂಟು. "ಪರಮೇಶ್ವರ ಪ್ರೇರಣಯಾ, ಪರಮೇಶ್ವರ ಪ್ರೀತ್ಯರ್ಥಂ" ಎನ್ನುವುದೇ ಧ್ಯೇಯ. "ಕರ್ಮ ಫಲ" ಎಂಬ ಹಣ್ಣನ್ನೂ ಭಗವಂತನಿಗೇ ಕೊಡುತ್ತಾರೆ. ಅದರ ಮೇಲೂ ಪ್ರೀತಿಯಾಗಲೀ, ಅಧಿಕಾರವಾಗಲೀ ಇಲ್ಲವೇ ಇಲ್ಲ. ಪರಮಾತ್ಮನೇ ತಾನಾಗಿ ಕೊಟ್ಟದ್ದನ್ನು "ಪ್ರಸಾದ" ಎಂದು ಸ್ವೀಕರಿಸುತ್ತಾರೆ. ತಿರಸ್ಕರಿಸುವ ಅಹಂಕಾರವಿಲ್ಲ. ಸಿಕ್ಕಿತು ಎಂಬ ಬೀಗುವಿಕೆಯಂತೂ ಮೊದಲೇ ಇಲ್ಲ. 

*****

ಸ್ವಾತಂತ್ರ್ಯಾನಂತರದ ಎರಡು-ಮೂರು ದಶಕಗಳಲ್ಲಿ ಹುಟ್ಟಿದ ತಲೆಮಾರಿನ ಜನರಿಗೆ ಮೂರು ರೀತಿಯಲ್ಲಿ ತೊಂದರೆಗಳು. ಹೆಚ್ಚಿನವರು ನಮ್ಮ ಅನುಷ್ಠಾನಗಳನ್ನು ಕ್ರಮವಾಗಿ ಕಲಿತವರಲ್ಲ. ಅಪ್ಪ, ಅಜ್ಜಂದಿರು ಮಾಡುತ್ತಿದ್ದರು. ಆದ್ದರಿಂದ ನಾವೂ ಮಾಡುತ್ತೇವೆ. (ನಮ್ಮ ಹಿಂದಿನ ತಲೆಮಾರಿನ ಜನ ಸಾಮಾನ್ಯವಾಗಿ ಇವನ್ನು ಕ್ರಮವಾಗಿ ಕಲಿತಿದ್ದರು. ಮುಂದಿನ ತಲೆಮಾರಿನವರು ಹೆಚ್ಚು-ಕಡಿಮೆ ಬಿಟ್ಟೀ ಬಿಟ್ಟರು.) ಮಂತ್ರ-ಸ್ತೋತ್ರಗಳ ಸರಿಯಾದ ಅರ್ಥಗಳು ತಿಳಿದಿಲ್ಲ. ಆದ್ದರಿಂದ ಹಿಂದಿನವರಂತೆ ಮಾಡುತ್ತಾ ಹೋಗುವುದು. ಇದು ಮೊದಲನೆಯ ತೊಂದರೆ. ಕ್ರಮೇಣ ವ್ಯವಹಾರ ಜ್ಞಾನದ ಜೊತೆಗೆ ಅನುಭವದ ಜ್ಞಾನ ಸೇರಿದಾಗ "ಇದೇನು ಹೀಗಿದೆ? ಕೆಲವು ಸರಿ ಕಾಣುವುದಿಲ್ಲ?" ಎನ್ನುವ ಅನುಮಾನ ಬರುತ್ತದೆ.

ಎರಡನೆಯ ಸಿಕ್ಕು  ಅಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ನಾವು ಹುಟ್ಟಿದ ಮನೆಯ ಆಚರಣೆಯೇ ಸರ್ವಶ್ರೇಷ್ಠ.. ಹೀಗೆಂದು ಪ್ರತಿ ಮತವೂ, ಪಂಗಡವೂ ಹೇಳುತ್ತವೆ. ಬೇರೆಯದರಲ್ಲೂ ಸ್ವಲ್ಪ ಒಳ್ಳೆಯದಿರಬಹುದು ಎಂದು ಒಪ್ಪುವ ಉದಾರ ಮನೋಭಾವ ಕಡಿಮೆ. ಜೊತೆಗೆ ಯಾವುದಾದರೂ ಸರಿ ಇಲ್ಲ ಅಂದರೆ ಅದನ್ನು ಬಿಟ್ಟುಬಿಡುವ ದಾರ್ಢ್ಯ ಇರುವುದಿಲ್ಲ. ಏಕೆಂದರೆ ಅದು ಸರಿಯಾಗಿಲ್ಲ ಎಂದು ಖಚಿತವಾದ ಅಭಿಪ್ರಾಯಕ್ಕೆ ಬರುವ ತಳಹದಿ ಭದ್ರವಿಲ್ಲ. 

ಮೂರನೆಯ ಸಮಸ್ಯೆ ಅಂದರೆ ನಾವು ತತ್ವಕ್ಕೂ ಮತ-ಪಂಗಡಗಳಿಗೂ ಇರುವ ವ್ಯತ್ಯಾಸವನ್ನು ಮಸಕು-ಮಸಕಾಗಿ ಕಾಣುತ್ತೇವೆ. ನಮ್ಮ ವೈದಿಕ ವಾಂಗ್ಮಯದಲ್ಲಿ, ವಿಶೇಷವಾಗಿ ಉಪನಿಷತ್ತುಗಳಲ್ಲಿ, ಹೇಳುವಂತೆ "ಎಲ್ಲವನ್ನೂ ತಿಳಿ; ನಿನಗೆ ಸರಿ ಅನ್ನಿಸಿದ್ದನ್ನು ಮಾಡು" ಎನ್ನುವುದರಲ್ಲಿ ನಮಗೆ ಹೆಚ್ಚಿನ ಪರಿಶ್ರಮವಿಲ್ಲ. ಆದ್ದರಿಂದ ಮೊದಲಿನಿಂದ ಮಾಡಿಕೊಂಡು ಬಂದ ಯಾವುದನ್ನೂ ಅದು ಈಗ ನಮಗೆ ಸರಿಕಾಣುತ್ತಿಲ್ಲ ಎಂದು ಬಿಡುವುದಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ಅನುಮಾನಗಳಿಗೆ ಮುಕ್ತ ಮನಸ್ಸಿನಿಂದ ಸಮಾಧಾನ ಹೇಳುವ ಹಿರಿಯರೂ ತಿಳಿದವರೂ ಸಿಗುವುದು ಬಹಳ ಅಪರೂಪ. 

*****

ನಮ್ಮ ಅನೇಕ ಮಂತ್ರ-ಸ್ತೋತ್ರಗಳಲ್ಲಿ ದೇವರಲ್ಲಿ ಅನೇಕ ವಸ್ತುಗಳನ್ನು ಬೇಡುವ ಪ್ರಕರಣಗಳಿವೆ. ಕೆಲವುಗಳಲ್ಲಿ ಬೇಡಿದ್ದನ್ನೇ ಮತ್ತೆ ಮತ್ತೆ ಕೇಳುವ ಅಂಶಗಳಿವೆ. ನಮ್ಮ ಅರಿವು ಆಳವಾದಂತೆ ಈ ರೀತಿ ಬೇಡುವುದು, ಮತ್ತೆ ಮತ್ತೆ ಅದನ್ನೇ ಕೇಳುವುದು, ಅನವಶ್ಯಕವಾದ ಪದಾರ್ಥಗಳ ಕೋರಿಕೆ, ಮುಂತಾದುವುಗಳ ಸಮಸ್ಯೆ ಕಾಡುತ್ತವೆ. ಇದಕ್ಕೆ ಪರಿಹಾರವೇನು?

ಅಂತಹವುಗಳ ಆಚರಣೆ ಬಿಡುವುದು ಒಂದು ಪರಿಹಾರ. ಆದರೆ ಅನೇಕ ಇಂತಹ ಸಂದರ್ಭಗಳಲ್ಲಿ ಅವುಗಳಲ್ಲಿ ನಮಗೆ ಹಿಡಿಸುವ, ಹಿತವಾದ ಅನೇಕ ವಿಷಯಗಳೂ ಸೇರಿರುತ್ತವೆ. ಕೆಲವಂತೂ ಮನಸ್ಸಿಗೆ ಹೆಚ್ಚಿನ ಮುದವನ್ನೂ, ಶಾಂತಿಯನ್ನೂ ಕೊಡುತ್ತವೆ. ಅನೇಕ ಕಡೆ ನಿಜವಾದ ಭಕ್ತಿ ಹೊರಹೊಮ್ಮುವ ಅವಕಾಶಗಳಿವೆ. ಹೀಗಾಗಿ ಅವನ್ನು ಬಿಡುವುದೂ ಪೂರ್ತಿಯಾಗಿ ಸರಿ ಕಾಣುವುದಿಲ್ಲ. 

ಮೇಲೆ ಚರ್ಚಿಸಿದ ಮೂವರು ಭಕ್ತರ ಗುಂಪುಗಳಲ್ಲಿ ಮೂರನೆಯ ಗುಂಪಿಗೆ ಹೋಗಲು ನಾವು ಬಹಳ ಬಹಳ ದೂರ ಹೋಗಬೇಕಾಗಿದೆ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಿವೆ ಅಂದರೆ ಮೊದಲನೆಯ ರೀತಿಯಲ್ಲಿ ಇರುವುದನ್ನು ದಾಟಿದ್ದೇವೆ ಅನ್ನಬಹುದು. ಆದ್ದರಿಂದ ಇಂತಹ ಬೇಡುವ ಸಂದರ್ಭಗಳಲ್ಲಿ ಮನಸ್ಸನ್ನು ಹದ ಮಾಡಿಕೊಂಡು ಕೇಳುವಾಗ "ಇದು ನಮ್ಮ ಭೋಗಕ್ಕಲ್ಲ. ಹೆಚ್ಚಿನ ಸಾಧನೆಗಾಗಿ ಬೇಡುತ್ತೇವೆ. ದುರುಪಯೋಗ ಮಾಡುವುದಿಲ್ಲ" ಅನ್ನುವ ಅನುಸಂಧಾನ ಇದ್ದು ಎರಡನೇ ವರ್ಗಕ್ಕೆ ಸೇರುವ ಪ್ರಯತ್ನ ಮಾಡಬಹುದು. 
***** 

ಮೂರನೆಯ ಗುಂಪಿನ ಭಕ್ತರ ಗುಣ-ಸ್ವರೂಪಗಳು ಮತ್ತು ಎರಡು-ಮೂರು ಉದಾಹರಣೆಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ ಪ್ರಯತ್ನ ಮಾಡೋಣ. 

Thursday, June 26, 2025

ದೇವರಲ್ಲಿ ಬೇಡುವ ಅಷ್ಟ ಐಶ್ವರ್ಯಗಳು


ಹಿಂದಿನ ಸಂಚಿಕೆಗಳಲ್ಲಿ "ಅಷ್ಟ ಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎನ್ನುವ ಶೀರ್ಷಿಕೆಗಳ ಅಡಿಯಲ್ಲಿ ಮನುಷ್ಯನಿಗೆ ಸಿಗಬಹುದಾದ ವಿವಿಧ ರೀತಿಯ ಭೋಗಗಳು ಮತ್ತು ಭಾಗ್ಯಗಳು ಯಾವುವು, ಅವುಗಳ ವಿಶೇಷತೆ ಏನು, ಎನ್ನುವುದನ್ನು ಕುರಿತು ಸ್ವಲ್ಪ ಚರ್ಚೆ ಮಾಡಿದೆವು. ಈ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

"ಸಂಕಟ ಬಂದಾಗ ವೆಂಕಟರಮಣ" ಎನ್ನುವುದು ಒಂದು ಬಹಳ ಪ್ರಸಿದ್ಧ ಗಾದೆ ಮಾತು. ಮನುಷ್ಯನಿಗೆ ಯಶಸ್ಸು ಸಿಕ್ಕಾಗ, ತಾನು ನೆನೆಸಿದ ಕೆಲಸ ಆದಾಗ, ತನ್ನ ಪ್ರಯತ್ನದ ಬಗ್ಗೆ ಅಪಾರ ಹೆಮ್ಮೆ. "ನನ್ನಿಂದಲೇ ಆಯಿತು. ನೋಡಿದೆಯಾ? ಹೇಗೆ ಮಾಡಿದೆ!" ಎಂದು ಬೀಗುತ್ತಾನೆ. ಆದರೆ ಅದು ಆಗದಿದ್ದಾಗ ಪರಮಾತ್ಮನ ನೆನಪು ಬರುತ್ತದೆ. ಕೆಲವರು "ದೇವರು ಕೈಕೊಟ್ಟ" ಎಂದು ಅವನನ್ನೇ ದೂಷಿಸಬಹುದು. ಮತ್ತೆ ಕೆಲವರು (ಇಂತಹವರ ಸಂಖ್ಯೆ ಬಹಳ ಕಡಿಮೆ) ಎಲ್ಲವನ್ನೂ ಅವನ ಮೇಲೆ ಬಿಟ್ಟು ತಮ್ಮ ಕರ್ತವ್ಯ ತಾವು ಮಾಡುತ್ತಾರೆ. 

ಮನುಷ್ಯ ಏನನ್ನಾದರೂ ಮಾಡುವುದು ಎರಡು ಕಾರಣಗಳಿಗಾಗಿ. ಒಂದು ಸುಖ ಪ್ರಾಪ್ತಿಗೆ. ಇನ್ನೊಂದು ದುಃಖ ನಿವೃತ್ತಿಗೆ. ಈ ವಿಷಯವನ್ನು ಹಿಂದಿನ ಸಂಚಿಕೆಗಳಲ್ಲಿ ಚರ್ಚಿಸಿರುವುದರಿಂದ ಅದನ್ನು ನೆನಪಿಸಿಕೊಂಡು, ಹೆಚ್ಚು ವಿಸ್ತರಿಸದೆ, ಮುಂದೆ ಹೋಗೋಣ. ದುಃಖ ನಿವೃತ್ತಿ ಆಗಬೇಕಾದಾಗ ಪರಮಾತ್ಮನ ನೆನಪು ತಾನೇತಾನಾಗಿ ವಿಜೃಂಭಿಸುತ್ತದೆ. ಆ ದುಃಖ ಕಳೆದ ತಕ್ಷಣ ಅವನ ನೆನಪೂ ಮಾಸುತ್ತದೆ. ಸುಖಪ್ರಾಪ್ತಿಗೆ ಮಾಡುವ ಅವನ ಸ್ಮರಣೆ ಮೇಲೆ-ಕೆಳಗೆ ಆಗುತ್ತಿದ್ದರೂ ಯಾವಾಗಲೂ ಸ್ವಲ್ಪವಾದರೂ ಇರುತ್ತದೆ!

ಹೀಗೆ ಸುಖಪ್ರಾಪ್ತಿಗೆ ಮನುಷ್ಯ ಮಾಡುವ ಪ್ರಾರ್ಥನೆಗಳಲ್ಲಿ ಯಾವ ಯಾವ ಬೇಡಿಕೆಗಳು ಸೇರಿವೆ, ಅವುಗಳಲ್ಲಿ ಮುಖ್ಯವಾದವು ಯಾವುವು ಮತ್ತು ಅವುಗಳ ಲಕ್ಷಣಗಳೇನು ಎನ್ನುವುದನ್ನು ಈಗ  ಸ್ವಲ್ಪ ನೋಡೋಣ. 
***** 

"ವರ" ಎನ್ನುವ ಪದವನ್ನು ಎರಡು ಮುಖ್ಯ ಹಿನ್ನೆಲೆಯಲ್ಲಿ ಬಳಸುತ್ತೇವೆ. ಮೊದಲನೆಯದು ವಿವಾಹಗಳ ವಿಷಯದಲ್ಲಿ. ಆಗ "ವಧು ಮತ್ತು ವರ" ಎನ್ನುವ ಪದಗಳು ಜೊತೆಯಾಗಿ ಬರುತ್ತವೆ. ಹೆಣ್ಣಿಗೆ "ವಧು" ಎಂದೂ ಗಂಡಿಗೆ "ವರ" ಎಂದೂ ಗುರುತಿಸುವುದು. ಎರಡನೆಯ ಸಂದರ್ಭ "ಶ್ರೇಷ್ಠ", "ಉತ್ತಮ", "ಒಳ್ಳೆಯದು", "ಅದಕ್ಕಿಂತ ಇದು ಚೆನ್ನ" ಮುಂತಾದ ಅರ್ಥದಲ್ಲಿ. ವಿವಾಹದ ಸಂದರ್ಭದಲ್ಲಿಯೂ ವಾಸ್ತವವಾಗಿ ಇದೇ ಅರ್ಥವೇ. "ಈ ಹುಡುಗಿಗೆ ಆ ಹುಡುಗ ಸರಿಯಾದ ಜೋಡಿ. ಈ ಜೋಡಿ ಚೆನ್ನಾಗಿರುತ್ತದೆ" ಎನ್ನುವ ರೀತಿಯಲ್ಲಿಯೇ ಅಲ್ಲಿಯೂ "ವರ" ಎನ್ನುವ ಪದ ಪ್ರಯೋಗ ಆಗುತ್ತದೆ. 

ಒಟ್ಟಿನಲ್ಲಿ, ಬೇಡುವ ಸಂದರ್ಭದಲ್ಲಿ "ವರ" ಅಂದರೆ "ನಮ್ಮಲ್ಲಿಲ್ಲದ್ದು, ಅದು ಇದ್ದರೆ ಚೆನ್ನ, ಅದು ನಮಗೆ ಬೇಕು, ಆದ್ದರಿಂದ ಅದನ್ನು ನಮಗೆ ಕೊಡಿ" ಎಂದು ಕೇಳುವುದು. ಕೊಡುವವರ ದೃಷ್ಟಿಯಲ್ಲಿಯೂ ಹಾಗೆಯೇ. ಅನೇಕ ವೇಳೆ "ನಿಮ್ಮಿಂದ ನಮಗೆ ಬಹಳ ಸಂತೋಷವಾಗಿದೆ. ಈ ವರವನ್ನು ಕೊಡುತ್ತೇವೆ" ಎಂದು ಕೊಡುವುದು. ಅಥವಾ "ನಾವು ಪ್ರೀತರಾಗಿದ್ದೇವೆ, ನಿಮಗೊಂದು ವರ ಕೊಡುತ್ತೇವೆ. ಏನು ಬೇಕು?' ಎಂದು ಕೇಳುವುದು. ಸಾಮಾನ್ಯವಾಗಿ "ಏನು ಬೇಕು?" ಎಂದು ಕೇಳಿ ಕೊಡಬಹುದು. ಒಮ್ಮೊಮ್ಮೆ ಅವರೇ ತೀರ್ಮಾನಮಾಡಿ "ನಿಮಗೆ ಇದನ್ನು ಕೊಡುತ್ತೇವೆ" ಎಂದು ಕೊಡಬಹುದು. ಮೊದಲನೆಯದು ಕೇಳಿದ್ದು ಕೊಡುವ ಕ್ರಿಯೆ. ಎರಡನೆಯದು ಕೊಟ್ಟಿದ್ದು ತೆಗೆದುಕೊಳ್ಳುವ ಕೆಲಸ. ಶಾಲೆಗೆ ಹೋಗುವ ವಿದ್ಯಾರ್ಥಿ "ನನಗೆ ಈ ಬ್ಯಾಗು ಕೊಡಿಸಿ" ಎನ್ನುವುದು ಮೊದಲಿನಂತೆ. ಕೊಡುವವರು ತಾವೇ ಒಂದು ಒಂದು ಬ್ಯಾಗು ತಂದು "ಇದನ್ನು ಉಪಯೋಗಿಸಿಕೋ" ಎನ್ನುವುದು ಎರಡನೆಯ ರೀತಿ. 

ಮೂರನೆಯದೂ ಒಂದು ಉಂಟು. ಒಂದಷ್ಟು ದುಡ್ಡು ಕೊಟ್ಟು "ನಿನಗೆ ಬೇಕಾದುದು ತೆಗೆದುಕೋ" ಎಂದು ಹೇಳುವಂತೆ. ದುಡ್ಡು ಸಿಕ್ಕವನು ತನಗೆ ಬೇಕಾದಾಗ, ಬೇಕಿದ್ದು ತೆಗೆದುಕೊಳ್ಳಬಹುದು. ಅಷ್ಟು ಮಟ್ಟಿಗೆ ಸ್ವಾತಂತ್ಯ ಸಿಕ್ಕಿತು. ದೇವೇಂದ್ರನು ಕರ್ಣನಿಗೆ ಶಕ್ತ್ಯಾಯುಧ ಕೊಟ್ಟಂತೆ. "ಒಂದು ಬಾರಿ ಪ್ರಯೋಗಿಸು. ಯಾರ ಮೇಲೆ ಪ್ರಯೋಗಿಸಿದರೂ ಅವರು ಸಾಯುತ್ತಾರೆ" ಎಂದು ಹೇಳಿದಂತೆ. ಎಂದು, ಯಾರ ಮೇಲೆ ಪ್ರಯೋಗಿಸಬೇಕು ಅನ್ನುವ ಸ್ವಾತಂತ್ರ್ಯ ಕರ್ಣನಿಗೆ ಸಿಕ್ಕಿತು. 

ವರರೂಪದಲ್ಲಿ ಬೇಕಿದ್ದು ಪಡೆಯಲು ಮಾಡುವ ಸಾಧನೆಗಳು "ಕಾಮ್ಯ ಕರ್ಮಗಳು". ಇಲ್ಲಿ ಇಡೀ ಶ್ರಮ ಯಾವುದೋ ಒಂದು ಉದ್ದೇಶಿತ ಲಾಭ ಪಡೆಯಲು ಮಾಡುವುದು. ಬಸ್ಸಿನಲ್ಲಿ ಹನ್ನೆರಡನೇ ನಂಬರಿನ ಸೀಟು ಕೊಡಿ ಎಂದಂತೆ. ಇನ್ನು ಕೆಲವು "ಯಾವುದೊ ಒಂದು ಸೀಟು ಕೊಟ್ಟರೆ ಸಾಕು" ಎನ್ನುವಂತಹುದು. "ಪುತ್ರಕಾಮೇಷ್ಠಿ" ಮಾಡಿದರೆ ಸಂತಾನವೇ ಬೇಕು. ಬೇರೆ ಯಾವುದೋ ಸಿಕ್ಕರೆ ಸಾಲದು. ಈ ರೀತಿ. 
***** 

ಎಲ್ಲಾ ಬೇಡಿಕೆಗಳಲ್ಲಿ ಮೊದಲನೆಯದು "ಆಯುಸ್ಸು". ದೀರ್ಘಾಯುಸ್ಸು ಬೇಕು. ತುಂಬಾ ದಿನ ಬದುಕಬೇಕು. ಚಿರಂಜೀವಿಯೇ ಆಗಬೇಕು. ಆದರೆ ಅದು ಕೇಳಿದರೂ ಕೊಡುವುದಿಲ್ಲ. ಹಿಂದೆ ಅನೇಕರು ಕೇಳಿದರು. ಆದರೆ ಒಬ್ಬರಿಗೂ ಸಿಗಲಿಲ್ಲ. ಕೈ ತೋರಿಸಿ ಅವಲಕ್ಷಣ ಎಂದು ಏಕೆ ಹೇಳಿಸಿಕೊಳ್ಳುವುದು? ಆದ್ದರಿಂದ ದೀರ್ಘಾಯುಸ್ಸು ಕೊಡಿ ಎಂದು ಕೇಳುವುದು. "ನಮ್ಮ ಮೊಮ್ಮಗನ ಮೊಮ್ಮಗನ ಮಗನ ಮದುವೆ ನೋಡಿದರೆ ಸಾಕು" ಎಂದು ಕೇಳಿ ಕೊಡುವವರಿಗೆ ಟೋಪಿ ಹಾಕುವ ಬುದ್ಧಿವಂತಿಕೆ. "ಮೊದಲು ಬದುಕಿರೋಣ. ಆಮೇಲೆ ಉಳಿದುದನ್ನು ಕೇಳಿದರಾಯಿತು" ಅನ್ನುವ ಜಾಣತನ. ಆಯುಸ್ಸೇ ಇಲ್ಲದಿದ್ದರೆ ಏನು ಪ್ರಯೋಜನ? 

ಎರಡನೆಯದು ಆರೋಗ್ಯ. ಕೇವಲ ಬದುಕಿದ್ದರೆ ಸಾಕೆ? ನೂರು ವರುಷ ಆಯುಸ್ಸು. ಕೈ-ಕಾಲು ಆಡುವಹಾಗಿಲ್ಲ. ಹಾಸಿಗೆ ಮೇಲೆ ಬಿದ್ದಿರಬೇಕು. ಆದರೆ ಉಸಿರಾಡುವುದರಿಂದ ಬದುಕಿದ್ದಾನೆ. ಇಂತಹ ಆಯುಸ್ಸಿನಿಂದ ಏನು ಪ್ರಯೋಜನ? ಆದ್ದರಿಂದ ಒಳ್ಳೆಯ ಅರೋಗ್ಯ ಬೇಕು. 

ಇವೆರಡೂ ಸಿಕ್ಕ ಮೇಲೆ ಮುಂದಿನದು ಐಶ್ವರ್ಯ. ಸುಮ್ಮನೆ ಬದುಕಿ ಗಟ್ಟಿಮುಟ್ಟಾಗಿದ್ದರೆ ಏನು ಸಂತಸ? ಬದುಕಿದ ಮೇಲೆ ಸುಖ ಪಡದೆ ಏನು ಪ್ರಯೋಜನ? ಸುಖ ಪಡಲು ಸಾಧನಗಳು ಬೇಕಲ್ಲ? ಅವುಗಳನ್ನು ಪಡೆಯಬೇಕು. ಈ ಕಾರಣಕ್ಕೆ ಮೂರನೆಯದಾದ ಐಶ್ವರ್ಯ ಬೇಕು.  ಒಮ್ಮೆ ಬೇಡಿದಾಗ ಮುಂದೆ ಬೇಡುವಂತೆ ಇಲ್ಲದಷ್ಟು ಸಿಗಬೇಕು. ಮತ್ತೆ ಮತ್ತೆ ಬೇಡುವಂತೆ ಜೀವನ ಇರಬಾರದು. ಇನ್ನೂ ಅದರ ಬದಲು ನಾವೇ ಇನ್ನೊಬ್ಬರಿಗೆ ಕೊಡುವ ಶಕ್ತಿ ಇರಬೇಕು. ಆದ್ದರಿಂದ ಹೇರಳವಾದ ಐಶ್ವರ್ಯ ಬೇಕು. 

ಈ ಮೂರು ಕಾರಣಗಳಿಂದ "ಆಯುರಾರೋಗ್ಯ ಐಶ್ವರ್ಯ" ಒಟ್ಟಿಗೆ ಕೂಡಿತು. ಎಲ್ಲಕ್ಕಿಂತ ಮೊದಲು ಇವನ್ನು ಕೇಳುವ ಪರಿಪಾಠ ಬಂತು. 
*****

ಐಶ್ವರ್ಯ ಅನ್ನುವ ಪದ ಒಂದು ರೀತಿ ಅಸ್ಪಷ್ಟ ಅಲ್ಲವೇ? ಕೇಳುವುದು ಖಚಿತವಾಗಿರಬೇಕು. ಆದ ಕಾರಣ ಇದರಲ್ಲಿ ಮತ್ತೆ ಕವಲುಗಳು ಬಂದವು. ಐಶ್ವರ್ಯದ ಬೇರೆ ಬೇರೆ ರೂಪಗಳಲ್ಲಿ ಕೇಳುವುದು ಪ್ರಾರಂಭವಾಯಿತು. ಅವುಗಳಲ್ಲಿ ಮತ್ತೆ ಎಂಟು ಮುಖ್ಯವಾಯಿತು. "ಅಷ್ಟ ಭೋಗ," "ಅಷ್ಟ ಭಾಗ್ಯ", ಇವುಗಳ ಜೊತೆ "ಅಷ್ಟ ಐಶ್ವರ್ಯ" ಸೇರಿದುವು. 

ಅಷ್ಟಐಶ್ವರ್ಯಗಳು ಯಾವುವು ಎನ್ನುವುದಕ್ಕೆ ಅನೇಕ ವ್ಯಾಖ್ಯಾನಗಳು ಉಂಟು. "ಅಷ್ಟ ಲಕ್ಷ್ಮಿ" ಚಿಂತಿಸುವ ಸಂದರ್ಭದಲ್ಲಿ ಕೆಲವನ್ನು ಹೇಳುವುದು ಉಂಟು. ಆದರೆ, ಜನಸಾಮಾನ್ಯರ ಬೇಡಿಕೆಯ ದೃಷ್ಟಿಯಲ್ಲಿ ಈ ಕೆಳಗಿನ ಎಂಟು ರೀತಿಯ ಐಶ್ವರ್ಯಗಳು ಹೆಚ್ಚಾಗಿ ಕಂಡುಬರುತ್ತವೆ:

  1. ಮೊದಲನೆಯದು "ಧನ". "ಕಾಂಚಾಣಂ ಕಾರ್ಯಸಿದ್ಧಿ:". ಕನ್ನಡದಲ್ಲಿ ಹೇಳುವಂತೆ ಎಲ್ಲಕ್ಕೂ "ದುಡ್ಡೇ  ದೊಡ್ಡಪ್ಪ". ಹಣವಿದ್ದರೆ ಬೇರೆ ಎಲ್ಲವನ್ನೂ ಪಡೆಯಬಹುದು ಎಂದು ನಂಬಿಕೆ. ಆದ್ದರಿಂದ ಆಯುರಾರೋಗ್ಯಗಳ ನಂತರ ಮೊದಲು ಕೇಳುವುದು ಧನವನ್ನು. ಕನ್ನಡದಲ್ಲಿ "ನಗದು" ಅಥವಾ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ "ಕ್ಯಾಶ್". ದುಡ್ಡಿನಿಂದ ಆಯುಸ್ಸು ಮತ್ತು ಆರೋಗ್ಯಗಳನ್ನು ಪಡೆಯಲಾಗುವುದಿಲ್ಲ. ಅನಾರೋಗ್ಯದ ನಿವಾರಣೆಗೆ ದುಡ್ಡು ಸಹಾಯಕಾರಿ ಆಗಬಹುದು. ಆದರೂ ನಮ್ಮ ಅನುಭವದಲ್ಲಿ ಅನೇಕವೇಳೆ ಜೇಬಲ್ಲಿ ದುಡ್ಡಿದ್ದರೂ  ಪದಾರ್ಥಗಳು ಸಿಗುವುದಿಲ್ಲ. ಎಲ್ಲ ಕಡೆ "ಬಂದ್" ಅಥವಾ "ಕರ್ಫ್ಯೂ" ಇದ್ದಾಗ ಎಷ್ಟು ಹಣವಿದ್ದರೂ ಅನ್ನ ಸಿಗುವುದಿಲ್ಲ.  ಕೆಲವು ಪದಾರ್ಥಗಳು ಕೆಲವು ಕಾಲಗಳಲ್ಲಿ ಮಾತ್ರ ಸಿಗುತ್ತವೆ. ಇನ್ನು ಕೆಲವು ಯಾವುದೋ ಕೆಲವು ಪ್ರದೇಶಗಳಲ್ಲಿ ಮಾತ್ರ ಸಿಗುತ್ತವೆ. ಆದರೂ ದುಡ್ಡಿದ್ದರೆ ಹೆಚ್ಚಿನವನ್ನು ಪಡೆಯಲು ಸಹಕಾರಿ  ಎನ್ನುವುದು ಬಹುತೇಕ ಸತ್ಯ.  
  2. ಎರಡನೆಯದು "ಕನಕ". ಕನಕ ಎಂದರೆ ಚಿನ್ನ ಎಂದು ಅರ್ಥವಾದರೂ ಇಲ್ಲಿ ಅದರ ವ್ಯಾಪಕ ಅರ್ಥವಾದ ಚಿನ್ನ, ಬೆಳ್ಳಿ, ನವರತ್ನಗಳು ಮುಂತಾದ ಬೆಲೆಬಾಳುವ ವಸ್ತುಗಳ ಆಭರಣಗಳು ಎಂದು ಗ್ರಹಿಸಬೇಕು. ಇವೂ ಸಹ ಧನವೇ ಅಲ್ಲವೇ ಎಂಬ ಸಂದೇಹ ಬರಬಹುದು. ಇವು ಬೆಲೆಬಾಳುವ ವಸ್ತುಗಳು ಮತ್ತು ಈಗಿನ ಸಮಯದಲ್ಲಿ ಕೆಲವೇ ಘಂಟೆಗಳಲ್ಲಿ ಹಣವಾಗಿ ಪರಿವರ್ತಿಸಬಹುದು ಎನ್ನುವುದು ಸರಿಯಾದರೂ, ಇವು ಧನದ ಒಂದು ಉಪಯೋಗ ಎಂದು ಗಣಿಸಬೇಕು. 
  3. ಮೂರನೆಯದು ವಸ್ತುಗಳು. ವಸ್ತುಗಳು ಅನೇಕ ರೀತಿಯಲ್ಲಿರಬಹುದು. ಸಾಮಾನ್ಯವಾಗಿ ನಿರ್ಜೀವ ಭೋಗೋಪಯೋಗಿ ಪದಾರ್ಥಗಳಿಗೆ ವಸ್ತುಗಳು ಎಂದು ನಿರ್ದೇಶಿಸುವುದು. ಪೀಠೋಡಕರಣಗಳು, ಪಾತ್ರೆ-ಪಡಗ, ಆಯುಧಗಳು, ಮುಂತಾದುವುಗಳು. 
  4. ನಾಲ್ಕನೆಯದು ವಾಹನಗಳು. ಹಿಂದಿನ ಕಾಲದಲ್ಲಿ ವಾಹನಗಳು ಅಂದರೆ ಕುದುರೆ, ಆನೆ, ಸಾರೋಟು, ರಥ ಮುಂತಾದುವು ಆಗಿದ್ದವು. ಇಂದಿಗೆ ಅವು ಸ್ಕೂಟರ್, ಕಾರು, ಖಾಸಗಿ ನೌಕೆ, ಖಾಸಗಿ ವಿಮಾನ ಮುಂತಾದುವವೇ ಆಗಬಹುದು. 
  5. ಐದನೆಯದು ಗೃಹ ಅಥವಾ ಮನೆ. ಏಕವಚನದಲ್ಲೂ ಇರಬಹುದು ಅಥವಾ ಅನೇಕವೂ ಇರಬಹುದು. ಮನೆ, ಕೊಟ್ಟಿಗೆ, ಗೋಶಾಲೆ, ಅಶ್ವ-ಗಜ ಶಾಲೆ, ಮುಂತಾದುವುಗಳು. ಮನೆ ಅಂದರೆ ಅದರ ಜೊತೆ ಭೂಮಿ-ಕಾಣಿಯೂ ಸೇರಿತು. ವಸ್ತುಗಳು ಚರಾಸ್ತಿ (ಇಂಗ್ಲೀಷಿನಲ್ಲಿ "movable") ಆದರೆ  ಗೃಹ ಸ್ಥಿರಾಸ್ತಿ (ಇಂಗ್ಲಿಷಿನಲ್ಲಿ "immovable").  
  6. ಆರನೆಯದು "ಸಂತಾನ". ತಾನೊಬ್ಬನೇ ಇಷ್ಟೆಲ್ಲಾ ಸುಖದ ಸಾಧನಗಳನ್ನು ಇಟ್ಟುಕೊಂಡು ಏನು ಮಾಡುವುದು? ಅದಕ್ಕೆ ಮಕ್ಕಳು, ಮೊಮ್ಮಕ್ಕಳು,  ಬಂಧು-ಬಾಂಧವರು, ನೆಂಟರು-ಇಷ್ಟರು ಇರಬೇಕು. ಎಲ್ಲರೂ ತನ್ನನ್ನು ಓಲೈಸಬೇಕು ಎಂದು ಆಸೆ. 
  7. ಏಳನೆಯದು ಅಧಿಕಾರ. ಇದು  ಕಣ್ಣಿಗೆ ಕಾಣದ್ದು. ಅಮೂರ್ತ. ಇಂಗ್ಲೀಷಿನಲ್ಲಿ intangible. ಆದರೆ ಅದರ ಪ್ರಭಾವ ಕಾಣುತ್ತದೆ. ಸುತ್ತಲಿರುವವರೆಲ್ಲ ತಾನು ಹೇಳಿದಂತೆ ಕೇಳಬೇಕೆಂಬ ಇಚ್ಛೆ. 
  8. ಎಂಟನೆಯದು "ಅಂತಸ್ತು" ಅಥವಾ ಸಮಾಜದಲ್ಲಿ "ಮನ್ನಣೆ". ಹತ್ತು ಜನರಲ್ಲಿ ಎದ್ದು ಕಾಣಬೇಕು. ತಾನು ಬಂದರೆ ಎಲ್ಲರೂ ಎದ್ದು ಗೌರವ ಸೂಚಿಸಬೇಕು. ಅವರ ಕೆಲಸಗಳಿಗೆ ತನ್ನ ಸಲಹೆ ಮತ್ತು ಒಪ್ಪಿಗೆ ಪಡೆಯಬೇಕು. ಈ ರೀತಿಯ ಆಸೆ. 
ಮೊದಲಿನ ನಾಲ್ಕು ಸಾಮಾನ್ಯವಾಗಿ ಒಟ್ಟಾಗಿ "ಧನ, ಕನಕ, ವಸ್ತು, ವಾಹನಾದಿ" ಎಂದು ಸಮೂಹವಾಚಕದಿಂದ ಹೇಳುತ್ತಾರೆ. ಬೇರೆ ಇನ್ನೇನೇ ಇದ್ದರೂ ಅವೆಲ್ಲಾ ಸಾಮಾನ್ಯವಾಗಿ ಮೇಲೆ ಹೇಳಿದ ಎಂಟು ರೀತಿಯ ಐಶ್ವರ್ಯಗಳಲ್ಲಿ ಮಿಳಿತವಾಗುತ್ತವೆ. ಇವಿಷ್ಟೂ ಇದ್ದರೆ ನಿಜವಾಗಿ ಅಷ್ಟಐಶ್ವರ್ಯವಂತನಾದಂತೆ. 

*****

"ಇಷ್ಟೆಲ್ಲಾ ಬೇಕು. ಇನ್ನೂ ಬೇರೇನಾದರೂ ಇದ್ದರೆ  ಸೇರಿಸಿ ಕೊಡು" ಎಂದು ದೇವರನ್ನು-ದೇವತೆಗಳನ್ನು ಬೇಡುವವರು ಅನೇಕರು. (ನಮ್ಮ ಆಟೋರಿಕ್ಷಾ ಚಾಲಕರು ಮೀಟರಿಗೆ ಸೇರಿಸಿ ಕೊಡಿ ಎನ್ನುವಂತೆ). ಪೂಜೆ-ಪುನಸ್ಕಾರಗಳನ್ನು ಅವರು ಮಾಡುವುದೇ ದುಃಖಗಳ ಶಮನವಾಗಿ ಈ ಐಶ್ವರ್ಯಗಳ ಪ್ರ್ರಾಪ್ತಿ ಆಗಲಿ ಎನ್ನುವ ಕಾರಣಕ್ಕಾಗಿ. ಯಾವುದೇ ಕೆಲಸ ಮಾಡುವ ಮೊದಲು ಸಂಕಲ್ಪದಲ್ಲಿ "ಅಸ್ಮಾಕಂ ಸಹ-ಕುಟುಂಬಾನಾ೦  ಕ್ಷೇಮ, ಸ್ಥೈರ್ಯ, ಆಯುರಾರೋಗ್ಯ ಐಶ್ವರ್ಯ ಅಭಿವ್ರುಧ್ಯರ್ಥಂ, ಇಷ್ಟ ಕಾಮ್ಯಾರ್ಥ ಸಿಧ್ಯರ್ಥಂ ........" ಎಂಬ ದೊಡ್ಡ ಪಟ್ಟಿ ಕೊಟ್ಟ ನಂತರವೇ.  

ಆದರೆ ಅನೇಕ ಜಿಜ್ಞಾಸುಗಳಿಗೆ "ಇದೇನು, ಈ ರೀತಿ? ನಮ್ಮ ಅನೇಕ ಸ್ತೋತ್ರಗಳಲ್ಲಿ, ಹವನ-ಹೋಮ, ಜಪ-ತಪಾದಿ ಅನುಷ್ಠಾನಗಳಲ್ಲಿ ಈ ರೀತಿ ಬೇಡುವ ಸಂಗತಿಗಳಿವೆಯಲ್ಲ? ಇದು ಸರಿಯೇ? ಮನುಷ್ಯ ಜೀವನದ ಧ್ಯೇಯವು ಸಾಧನೆ ಮಾಡಿ ಜೀವನ-ಮರಣ ಚಕ್ರದಿಂದ ಬಿಡುಗಡೆ ಪಡೆಯುವುದಲ್ಲವೇ? ಹೀಗೆ ಕೇಳಿಕೊಳ್ಳುವುದು ಮಾಡಿದ ಕೆಲಸಕ್ಕೆ ಕೂಲಿ ಕೇಳಿದಂತೆ ಆಗಲಿಲ್ಲವೇ?" ಎನ್ನುವ ಪ್ರಶ್ನೆ ಕಾಡುವುದು ಸಹಜ. 

ಈ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.  

Monday, May 19, 2025

ಕೊಡುವವರಿಬ್ಬರು; ತೆಗೆಯುವವನೊಬ್ಬ


ಮಕ್ಕಳಿಗೆ ತಾಯಿ-ತಂದೆಯರು ಎರಡು ಕಣ್ಣುಗಳಿದ್ದಂತೆ. ತಮ್ಮ ತಮ್ಮ ಜೀವನದಲ್ಲಿ ತಾಯಿ-ತಂದೆಯರ ಪಾತ್ರದ ಪ್ರಾಮುಖ್ಯತೆ ಅವರ ನೆರಳಿನಲ್ಲಿ ಬೆಳೆದವರನ್ನು ಕೇಳಿದರೆ ಸರಿಯಾಗಿ ಗೊತ್ತಾಗುವುದಿಲ್ಲ. ಇವರಿಬ್ಬರಲ್ಲಿ ಯಾರೋ ಒಬ್ಬರಿಲ್ಲದೆ ಕೇವಲ ಒಬ್ಬರ (ತಾಯಿ ಅಥವಾ ತಂದೆ) ಆಶ್ರಯದಲ್ಲಿ ಬೆಳೆದವರಿಗೆ ಅರ್ಧದಷ್ಟು ಗೊತ್ತಿದ್ದೀತು. ಇಬ್ಬರನ್ನೂ ಕಳೆದುಕೊಂಡು ಮತ್ಯಾರೋ ಬೇರೊಬ್ಬರ ಸಹಾಯದಿಂದ ಅಥವಾ ನಿರಾಶ್ರಿತರಾಗಿ ಬೆಳೆದವರಿಗೆ ಪ್ರಾಯಶಃ ಇದರ ಪೂರ್ತಿ ಸತ್ಯ ಗೊತ್ತಿರಬಹುದು. ಜೀವನದಲ್ಲಿ  ಮೊದಲಿನಿಂದಲೂ ಇರುವ ಪದಾರ್ಥಗಳಿಗೆ ಅಥವಾ ಸುಲಭವಾಗಿ ಸಿಕ್ಕಿದ ವಸ್ತುಗಳಿಗೆ ನಾವು ಹೆಚ್ಚು ಬೆಲೆ ಕೊಡುವುದಿಲ್ಲ. ಬಹಳ ಕಷ್ಟ ಪಟ್ಟು ಸಂಪಾದಿಸಿದ ಪದಾರ್ಥಗಳಿಗೆ ನೀಡುವ ಗಮನವನ್ನು ಅದಾಗಿಯೇ ಬಂದಿದ್ದ ಸಂಪತ್ತುಗಳಿಗೆ ಕೊಡದಿರುವುದು ಒಂದು ಮಾನವ ಸಹಜ ವಿಪರ್ಯಾಸ. 

ಮಕ್ಕಳ ಜೀವನದಲ್ಲಿ ತಾಯಿ ಹೆಚ್ಚೋ ಅಥವಾ ತಂದೆ ಹೆಚ್ಚೋ ಎಂದು ಚರ್ಚಿಸುವುದು ನ್ಯಾಯವೇ? ಸೃಷ್ಟಿಯಲ್ಲಿ ಇಬ್ಬರಿಗೂ ಅವರದೇ ಆದ ಪಾತ್ರಗಳಿವೆ. ಇದು ಹಿಂದಿದ್ದಂತೆ ಇಂದೂ ಇದೆ. ಸಮಾಜದ ದೃಷ್ಟಿಯಲ್ಲಿ ಅವರು ನಿರ್ವಹಿಸುತ್ತಿದ್ದ ಹೊಣೆಗಾರಿಕೆ ಕಾಲಕ್ರಮದಲ್ಲಿ ಬದಲಾಗಿದೆ. ಗಂಡಸು ಹೊರಗೆ ದುಡಿದು ಸಂಪಾದಿಸುವುದು, ಹೆಂಗಸು ಮನೆ-ಮಕ್ಕಳನ್ನು ಸಂಭಾಳಿಸುವುದು, ಹೀಗೆ ಇದ್ದ ವ್ಯವಸ್ಥೆ ಬಹಳ ಬದಲಾಗಿದೆ. ಈಗ ಹೆಣ್ಣುಮಕ್ಕಳು ಸಮ-ಸಮವಾಗಿ ಹೊರಗೆ ದುಡಿದು ಸಂಪಾಡಿಸುವುದು ಎಲ್ಲೆಲ್ಲೂ ಕಂಡುಬರುವ ವಿಷಯ. ಗಂಡಸರೂ ಮನೆವಾರ್ತೆಯಲ್ಲಿ ಭಾಗವಹಿಸುವುದೂ ಕಂಡು ಬರುತ್ತದೆ. ಒಟ್ಟಿನಲ್ಲಿ ಕುಟುಂಬದಲ್ಲಿ ಒಂದು ಸಮತೋಲನದ ಅವಶ್ಯಕತೆ ಉಂಟು. ಅದಿದ್ದರೆ ಎಲ್ಲವೂ ಸುಸೂತ್ರ. 

ಸಮಾಜ ಬದಲಾಗಿದ್ದರೂ, ತಂದೆ-ತಾಯಿಗಳು ನಿರ್ವಹಿಸುತ್ತಿದ್ದ ಪಾತ್ರಗಳ ಲಯದಲ್ಲಿ ಬದಲಾವಣೆ ಕಂಡುಬಂದರೂ, ಗಂಡಸರು ಮಕ್ಕಳನ್ನು ಹೆರುವ ಕಾಲ ಇನ್ನೂ ಬಂದಿಲ್ಲ. ವಿಜ್ಞಾನದಲ್ಲಿ ಎಷ್ಟು ಪ್ರಗತಿ ಸಾಧಿಸಿದರೂ, ಪ್ರನಾಳ ಶಿಶು ಎಂದು ಹೇಳಿದರೂ, ಕೇವಲ ಪ್ರನಾಳದಲ್ಲಿ ಪೂರ್ಣ ಪ್ರಮಾಣದ ಮಗು ಬೆಳೆದು ಹುಟ್ಟಿರುವುದು ಇನ್ನೂ ಕಾಣದು. ಮಹಾವಿಷ್ಣುವಿನ ನಾಭೀಕಮಲದ ಶಿಶು ಚತುರ್ಮುಖ ಬ್ರಹ್ಮನಂತೆ ಹುಟ್ಟಿದವರನ್ನು ನಾವು ಕಣ್ಣಾರೆ ಕಾಣೆವು. ಈ ಕಾರಣದಿಂದ ಮಕ್ಕಳಿಗೆ ಮತ್ತು ತಾಯಿಗೆ ಒಂದು ವಿಶೇಷ ಸಂಬಂಧವುಂಟು. ನಾಲ್ಕೈದು ವರುಷ ಆಗುವವರೆಗಾದರೂ ಮಕ್ಕಳು ತಾಯಿಗೆ ಅಂಟಿಕೊಂಡೇ ಇರುತ್ತಾರೆ. ಅಮ್ಮನ ಬಳಿ ಇರುವ ಸದರ-ಸಲುಗೆಗಳು ಅಪ್ಪನ ಬಳಿ ಇರುವುದಿಲ್ಲ. ಅದು ಕರುಳ ಸಂಬಂಧ. ಪದಗಳಲ್ಲಿ ವಿವರಿಸಲಾಗದು. 

*****

ತನ್ನ ಮಕ್ಕಳು ಯೋಗ್ಯರಾಗಿ ಬೆಳೆಯಲಿ, ಚೆನ್ನಾಗಿ ಬಾಳಲಿ ಎಂದು ತಾಯಿಯು ಅನೇಕ ವೇಳೆ ಮಕ್ಕಳ ವಿಷಯದಲ್ಲಿ ಗಡುಸಾಗಿ ವರ್ತಿಸುವುದೂ ಉಂಟು. ಆದರೆ ಸಾಮಾನ್ಯವಾಗಿ ಅದು ತೋರಿಕೆಯ ಗಡಸುತನ. ಮಕ್ಕಳ ವಿಷಯದಲ್ಲಿ ಹೀಗೆ ಗಟ್ಟಿಯಾಗಿ ಕಾಣಿಸುವಾಗ, ಕೆಲವೊಮ್ಮೆ ಶಿಕ್ಷಿಸುವಾಗ, ಅವಳು ನಿರ್ದಯಿ ಎನಿಸಿದರೂ ವಾಸ್ತವವಾಗಿ ಅವಳು ದಯಾಮಯಿಯೇ. ಈ ಕಾರಣಕ್ಕಾಗಿ "ತಾಯಿ  ಕರುಳು" ಎನ್ನುವ ಪದಪ್ರಯೋಗ ಅಲ್ಲಲ್ಲಿ ಕಾಣಿಸುವುದು. ತಂದೆಯು ತನ್ನ ಮಕ್ಕಳ ಬಳಿ ಗಡುಸಾಗಿ ವರ್ತಿಸುವುದು ನಿರೀಕ್ಷಿತವಾದರೂ, ತಾಯಿಯಂತೆಯೇ ಕರುಣಿಯಾಗಿರುವುದೂ ಅಪರೂಪವೇನಲ್ಲ. ಕೆಲವು ತಂದೆಯರಂತೂ ತಾಯಿಗಿಂತಲೂ ಮೆತುವಾಗಿ ಮಕ್ಕಳ ಬಳಿ ವ್ಯವಹರಿಸುವುದನ್ನೂ ಅಲ್ಲಲ್ಲಿ ಕಾಣಬಹುದು. ಈ ಕಾರಣಕ್ಕಾಗಿ "ಅವನದು ಹೆಂಗರುಳು" ಎನ್ನುವ ಪದಪ್ರಯೋಗ ಒಮ್ಮೊಮ್ಮೆ ಕಾಣಬರುವುದು. 

ಭಕ್ತ-ಭಗವಂತನ ವ್ಯವಹಾರವೂ ಹೀಗೆಯೇ. ಭಕ್ತನು ಎಷ್ಟು ಗಟ್ಟಿಯಾಗಿ ನಿಲ್ಲುತ್ತಾನೆ ಎನ್ನುವುದನ್ನು ಪರೀಕ್ಷಿಸಲು ಅನೇಕ ಕಷ್ಟ-ಕಾರ್ಪಣ್ಯಗಳನ್ನು ತಂದೊಡ್ಡಿದರೂ ಪರಮಾತ್ಮನು ವಾಸ್ತವವಾಗಿ ಅತ್ಯಂತ ಕರುಣಾಶಾಲಿಯೇ. ಇಲ್ಲದಿದ್ದರೆ ನಾವು ಪ್ರತಿನಿತ್ಯ ಮಾಡುವ ಅಸಂಖ್ಯ ತಪ್ಪುಗಳಿಗೆ ಅವನು ಶಿಕ್ಷಿಸುತ್ತಾ ಹೋದರೆ ಅದಕ್ಕೆ ಕೊನೆಯೆಲ್ಲಿ? ಅವನ ಅನೇಕ ರೂಪಗಳಲ್ಲಿ ಭಕ್ತನು ತನಗೆ ಬೇಕಾದುದನ್ನು ಆರಿಸಿಕೊಂಡು ಆರಾಧಿಸುತ್ತಾನೆ. ಎಲ್ಲಿ ಬೇಡಿದರೆ ತನಗೆ ಬೇಕಾದುದು ಸುಲಭವಾಗಿ ಸಿಗಬಹುದು ಎಂದು ಲೆಕ್ಕ ಹಾಕುತ್ತಾನೆ. "ನನಗೆ ಎಂದೂ ಏನೂ ಬೇಡ. ಅವನು ಪ್ರೀತನಾದರೆ ಸಾಕು" ಎನ್ನುವ ನಿಶ್ಚಲ, ನಿಷ್ಕಾಮರಾದ ಹನುಮಂತನಂತಹ ಭಕ್ತರು ಅಪರೂಪವೇ. 

ಹೀಗೆ ಆರಾಧಿಸಿ ವರಗಳನ್ನು ಬೇಡುವ ಭಕ್ತರು ಯಾರನ್ನು ಆಶ್ರಯಿಸುತ್ತಾರೆ? ಯಾರ ಬಳಿ ಬೇಡುತ್ತಾರೆ? ನಮ್ಮ ಪುರಾಣ-ಪುಣ್ಯಕಥೆಗಳನ್ನು ಗಮನಿಸಿದರೆ ಇದರ ಉತ್ತರ ಬಹು ಸುಲಭ. ವರ ಪಡೆದು ಶಕ್ತಿಶಾಲಿಗಳಾಗಬೇಕು, ಜಗತ್ತನ್ನೇ ತಮ್ಮ ಕಾಲಬುಡದಲ್ಲಿ ಬೀಳಿಸಿಕೊಂಡು ಮೆರೆಯಬೇಕು ಎಂದು ಆಶಿಸುವ ಮಂದಿ ಬಹು ಕಠಿಣ ತಪಸ್ಸುಗಳನ್ನು ಮಾಡುವುದು ಚತುರ್ಮುಖ ಬ್ರಹ್ಮನನ್ನೋ ಅಥವಾ ಶಿವನನ್ನೋ ಕುರಿತೇ. ಅನೇಕ ಉದಾಹರಣೆಗಳಲ್ಲಿ ನಾವು ಕಾಣುವುದು ಇದನ್ನೇ. ಪರಶಿವನದಂತೂ ಭಕ್ತರ ವಿಷಯದಲ್ಲಿ ಅತ್ಯಂತ ಹೆಂಗರುಳು. ಅವನನ್ನು ಆರಾಧಿಸಿ ಮೆಚ್ಚಿಸಿದರೆ ಕೇಳಿದ್ದು ಸಿಗುವುದು ಖಚಿತವೇ. ಬ್ರಹ್ಮನೂ ಹಾಗೆಯೇ. ಇವರಿಬ್ಬರು ಕೇಳಿದ ವರವನ್ನು ಕೊಡುವುದರಲ್ಲಿ ಎತ್ತಿದ ಕೈ. "ಕೊಡುವವರು ಇಬ್ಬರು" ಎಂದರೆ ಈ ಇಬ್ಬರು ಹಿಂದೆ-ಮುಂದೆ ನೋಡದೆ, ಅನುಮಾನಿಸದೇ "ತಥಾಸ್ತು" ಅನ್ನುವವರು. 

*****

ಈ ರೀತಿ ಕೇಳಿದ ವರಗಳನ್ನು ಕೊಡುವ ಹೆಂಗರುಳು ಇರುವುದು ಒಳ್ಳೆಯದೇ. ಆದರೆ ಮನಸ್ಸಿನಲ್ಲಿ ದುರಾಸೆ ಇಟ್ಟುಕೊಂಡು, ಕಠಿಣ ಸಾಧನೆಗಳನ್ನು ಮಾಡಿ, ಮೆಚ್ಚಿಸಿ, ವರಪಡೆದು, ನಂತರ ಆ ಭಕ್ತರು ಲೋಕಕಂಟಕರಾದರೆ ಹೇಗೆ? ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಭಸ್ಮಾಸುರ, ಹಿರಣ್ಯಾಕ್ಷ, ಹಿರಣ್ಯ ಕಷಿಪು, ರಾವಣ, ಮುಂತಾದವರ ದೊಡ್ಡ ಪಟ್ಟಿಯೇ ಉಂಟು. ತನ್ನ ಪರಮ ಭಕ್ತನಾದ ರಾವಣನು ತಪಸ್ಸು ಮಾಡಿ ಮೆಚ್ಚಿಸಿದಾಗ, ಪಾರ್ವತಿ-ಪರಮೇಶ್ವರರು ಎದುರು ಬಂದು ನಿಂತಾಗ, ಪಾರ್ವತಿಯನ್ನು ಕಂಡ ರಾವಣನು ತಪಸ್ಸು ಮಾಡಿದ ಮೂಲ ಕಾರಣವನ್ನೇ ಮರೆತು ಜಗದ೦ಬೆಯನ್ನೇ  ಬೇಡಿದಾಗ ಪರಶಿವನು  ಕೊಟ್ಟೇಬಿಟ್ಟಿದ್ದನ್ನು "ಭೂ ಕೈಲಾಸ" ಪ್ರಸಂಗದಲ್ಲಿ ನೋಡಿದ್ದೇವೆ. ಹಿರಣ್ಯನು ಬ್ರಹ್ಮನ ಮುಂದೆ ಏನೆಲ್ಲಾ ನಿಬಂಧನೆಗಳನ್ನು ಹಾಕಿದ! ಅದಾಗಬಾರದು, ಇದಾಗಬಾರದು ಎಂದು ನೂರೆಂಟು ಕೇಳುವುದರ ಜೊತೆಗೇ "ನಿನ್ನ ಸೃಷ್ಟಿಯಲ್ಲಿನ ಯಾರಿಂದಲೂ, ಯಾವುದರಿಂದಲೂ ಸಾವು ಬರಬಾರದು" ಎಂದು ಕೇಳಿದರೂ ಬ್ರಹ್ಮನು "ತಥಾಸ್ತು" ಅಂದೇ ಬಿಟ್ಟ! 

ಒಳ್ಳೆಯವರ ಕೈಯ್ಯಲ್ಲಿ ಇಂತಹ ವರಗಳು ಸಿಕ್ಕಿದರೆ ಲೋಕಕಲ್ಯಾಣ. ದುರುಳರ ಕೈಯ್ಯಲ್ಲಿ ಅದೇ ವರಗಳು ಲೋಕಕಂಟಕ. ಮೂರು ಲೋಕಗಳ ಸಮಸ್ತ ಜೀವರಾಶಿಯೂ "ತ್ರಾಹಿ, ತ್ರಾಹಿ!" ಎಂದು ಅಂಗಲಾಚುವ ಪರಿಸ್ಥಿತಿ. ಕಡೆಗೆ ಕೆಲವರು ವರ ಕೊಟ್ಟವರನ್ನೇ ಅಪಹಾಸ್ಯ ಮಾಡಿದ್ದೂ ಇದೆ. ವರದ ಯೋಗ್ಯತೆಯನ್ನು ಅವರ ಮೇಲೆಯೇ ಪರೀಕ್ಷಿಸಲು ಹೋದದ್ದೂ ಉಂಟು. ಆಗ ಎ೦ತಹ ಪೇಚಿನ ಪ್ರಸಂಗಗಳು ಬಂದವು! ಅಂತಹ ವಿಪರೀತ ಸಂದರ್ಭಗಳಲ್ಲಿ ಆರ್ತರು ಮಹಾವಿಷ್ಣುವಿನ ಮೊರೆಹೊಕ್ಕು ಅವನಿಂದ ಈ ದುರುರುಳರ ಕೊನೆಯಾಗಿ ಜಗತ್ತು ನಿಟ್ಟುಸಿರು ಬಿಡುವಂತೆ ನಡೆದಿರುವುದೂ ಉಂಟು. ಆದ್ದರಿಂದ ಅವನು "ತೆಗೆಯುವವನೊಬ್ಬ". 

*****

ಮಹಾತ್ಮರಾದ ಭಕ್ತಶ್ರೇಷ್ಠ ಕನಕದಾಸರು ಈ ಮೇಲಿನ ಚರ್ಚೆಯನ್ನೆಲ್ಲ ಭಟ್ಟಿ ಇಳಿಸಿ ತಮ್ಮ "ಹರಿಭಕ್ತಿಸಾರ" ಕೃತಿಯ 28ನೆಯ ಪದ್ಯದಲ್ಲಿ ಹೀಗೆ ಹೇಳಿದ್ದಾರೆ:  

ಹಗೆಯರಿಗೆ ವರವೀವರಿಬ್ಬರು 
ತೆಗೆಯಲರಿಯರು ಕೊಟ್ಟವರಗಳ 
ತೆಗೆದುಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ 
ಸುಗುಣರಿನ್ನಾರುಂಟು ಕದನವ 
ಬಗೆದು ನಿನ್ನೊಳು ಜಯಸುವವರೀ 
ಜಗದೊಳು೦ಟೀ ದೇವ ರಕ್ಷಿಸು ನಮ್ಮನನವರತ 

ವರವ ಪಡೆದಾಗ ಅವರು ಭಕ್ತರೇ. ಆದರೆ ಕೇಳಿದ್ದು ಸಿಕ್ಕ ತಕ್ಷಣ ಅವರ ಆಸುರೀಶಕ್ತಿ ಜಾಗೃತವಾಯಿತು. ಮೂಲ ಗುಣ ಹೊರಗೆ ಬಂತು. ಆದರೆ ಕಾಲ ಮಿಂಚಿತ್ತು. ಶ್ರೀಹರಿಯು ಮಧ್ಯೆ ಪ್ರವೇಶಿಸಿ ಇಂತಹ ಕಗ್ಗಂಟು ಪರಿಸ್ಥಿತಿಗಳಿಂದ ಬಿಡಿಸಿ ಪಾರುಮಾಡಿದನು ಎನ್ನುವುದನ್ನು ಶ್ರೀ ಕನಕದಾಸರು ಸೊಗಸಾಗಿ ವಿವರಿಸಿದ್ದಾರೆ.

***** 

ಶ್ರೀ ಕನಕದಾಸರ ಕೃತಿಗಳಲ್ಲಿ ಅನೇಕ ಕಾವ್ಯ ಗುಣಗಳೂ, ರಸಘಟ್ಟಗಳೂ ತುಂಬಿವೆ. ಅವರ ಕೃತಿಗಳ ಅಧ್ಯಯನದಿಂದ ನಮ್ಮ ಜ್ಞಾನದ ಹರವು ವಿಸ್ತಾರವಾಗುವ ಜೊತೆಗೆ ಕಾವ್ಯ ರಸಾಸ್ವಾದನೆಯೂ ಆಗುತ್ತದೆ.