Showing posts with label Brahma. Show all posts
Showing posts with label Brahma. Show all posts

Thursday, January 1, 2026

ಹದಿನಾರು ಮತ್ತು ಇಪ್ಪತ್ತೊಂದು


ಅದೊಂದು ಬಲು ಸುಂದರವಾದ ಮಗು. ಆಗ ತಾನೇ ಹುಟ್ಟಿದ ಕೂಸು. ಅರಳಿದ ಕಮಲದಲ್ಲಿ ಮಲಗಿದ್ದ ಶಿಶು. ಸ್ವಲ್ಪ ವಿಚಿತ್ರವಾದ ಹಸುಳೆ. ಎಲ್ಲಾ ಸರಿ ಇದ್ದರೂ ತಲೆಗಳು ಮಾತ್ರ ನಾಲ್ಕು! ಅದಕ್ಕೆ ಸರಿಯಾಗಿ ನಾಲ್ಕು ಕೈಗಳು. ಅತಿ ಮೋಹಕವಾದ ಶರೀರ. ಎದ್ದ ಮಗು ತಕ್ಷಣ ಕಣ್ಣು ಬಿಟ್ಟಿತು. ತನ್ನ ಸುತ್ತ-ಮುತ್ತ ನೋಡಿತು. 

ಎಲ್ಲ ಕಡೆ ಆವರಿಸಿರುವ ಕತ್ತಲು. ಯಾರೂ ಬೇರೆಯವರು ಕಾಣರು. ತಾನು ಯಾರು? ತನಗೆ ಜನ್ಮ ಕೊಟ್ಟವರು ಯಾರು? ಎಲ್ಲಿಂದ ಬಂದೆ? ಯಾವುದೂ ತಿಳಿಯದು. ಇದೇನು ವಿಚಿತ್ರ?

ಸುಮ್ಮನೆ ಇರುವಂತಹ ಮಗುವಲ್ಲ ಅದು. ತನಗೆ ಆಸರೆಯಾಗಿ, ಹಾಸಿಗೆಯಾಗಿ ಹರಡಿದ್ದ ಕಮಲವನ್ನು ಗಮನಿಸಿತು. ಅದರ ಕೆಳಗಿದ್ದ ದೊಡ್ಡ ಕಾಂಡವನ್ನು ಕಂಡಿತು. ಕಮಲದ ದೇಟಿನೊಳಗೆ ಇಳಿಯಿತು. ಇಳಿದು ಎಲ್ಲೆಡೆ ಹುಡುಕಿತು. ಅಲ್ಲಿ ಎಷ್ಟು ಹುಡುಕಿದರೂ ಯಾರೂ ಕಾಣಲಿಲ್ಲ. 

ಕಾಂಡದ ಆಳದಿಂದ ಹೊರಗೆ ಬಂದು ಅದೇ ಕಮಲದಲ್ಲಿ ಪದ್ಮಾಸನ ಹಾಕಿ ಕೂತಿತು. ಅದಕ್ಕೇನು ಭಯವಿರಲಿಲ್ಲ. ಆದರೂ ಮುಂದೆ ಏನು ಮಾಡಬೇಕೆಂಬ ಸಮಸ್ಯೆ ಎದುರಿಗೆ ಇತ್ತು. ತನಗೆ ಜನ್ಮದಾತರು ಯಾರು? ಮುಂದೆ ತನ್ನ ಕೆಲಸವೇನು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ತೊಡಗಿತು. 

*****

ಹೀಗೆ ಕುಳಿತ ಮಗುವಿಗೆ ವಿಶಾಲ ಆಕಾಶದಲ್ಲಿ ಶಬ್ದದ ಅನುಭವ ಆಯಿತು. ಮಗು ಆ ಶಬ್ದವನ್ನು ಗಮನವಿಟ್ಟು ಕೇಳಿತು. ಅದು ವಿಶ್ವದ ಮೊದಲ "ಆಕಾಶವಾಣಿ". ಶರೀರವಿಲ್ಲದ, ಆದರೆ ಚೆನ್ನಾಗಿ ಕೇಳಿಸಿದ ಧ್ವನಿ. ಅದೊಂದು "ಅಶರೀರವಾಣಿ". ಎರಡೇ ಎರಡು ಶಬ್ದಗಳು. ನಂತರ ಮತ್ತೇನಿಲ್ಲ. ಅಷ್ಟೇ.

"ಹದಿನಾರು. ಇಪ್ಪತ್ತೊಂದು."

ಹದಿನಾರು ಅನ್ನುವ ಒಂದು ಶಬ್ದ. ಇಪ್ಪತ್ತೊಂದು ಅನ್ನುವ ಇನ್ನೊಂದು ಶಬ್ದ. ಈ ಶಬ್ದಗಳ ಹಿಂದೆ ಮೌನ. ಈ ಎರಡು ಶಬ್ದಗಳ ನಂತರ ಮತ್ತೆ ಅದೇ ಮೌನದ ತಾಂಡವ. 

ಮಗು ಈ ಎರಡು ಶಬ್ದಗಳಿಗೆ ಅರ್ಥ ಹುಡುಕಿತು. ಆಗ ಅದಕ್ಕೆ ಹೊಳೆಯಿತು. ಈ ಎರಡು ಶಬ್ದಗಳು ಎರಡು ಸಂಖ್ಯೆಯನ್ನು ಹೇಳುತ್ತಿವೆ. ಈ ಸಂಖ್ಯೆಗಳ ಅರ್ಥವೇನು?  

ಒಹೋ! ಇವು ವರ್ಣಮಾಲೆಯ ಅಕ್ಷರಗಳು!

ಯಾವ ಅಕ್ಷರಗಳು? ಮೊದಲನೆಯದು ಹದಿನಾರು ಎಂದು. ಎರಡನೆಯದು ಇಪ್ಪತ್ತೊಂದು ಎಂದು. ಅಷ್ಟು ಸಂಖ್ಯೆಯ ಸ್ವರ ಅಕ್ಷರಗಳಿಲ್ಲ. ಆದ್ದರಿಂದ ಅವು ವ್ಯಂಜನಾಕ್ಷರಗಳು. 

*****

ಹದಿನಾರು. ಕ-ವರ್ಗದ ಐದು ಅಕ್ಷರಗಳು. ಚ-ವರ್ಗದ ಐದು ಅಕ್ಷರಗಳು ಟ-ವರ್ಗದ ಐದು ಅಕ್ಷರಗಳು. ಅಲ್ಲಿಗೆ ಹದಿನೈದಾಯಿತು. ತ-ವರ್ಗದ "ತ" ಅನ್ನುವುದು ಹದಿನಾರನೆಯ ಅಕ್ಷರ. 

ಮುಂದೆ ಪ-ವರ್ಗದ ಮೊದಲನೆಯ ಅಕ್ಷರ "ಪ" ಅನ್ನುವುದು ಇಪ್ಪತ್ತೊಂದನೆಯ ಅಕ್ಷರ!

ಎರಡನ್ನೂ ಕೂಡಿಸಿದರೆ "ತಪ' ಎಂದಾಯಿತು. "ತಪ" ಅಂದರೆ ಏನು? "ತಪ್ ತಪನೇ" ಎಂದು. ತಪ ಅನ್ನುವುದರ ಅರ್ಥ "ಆಲೋಚಿಸು" ಎಂದು. ಯಾವುದನ್ನಾದರೂ ಕುರಿತು ಒಂದೇ ಮನಸ್ಸಿನಿಂದ ಯೋಚಿಸುವುದನ್ನೇ ತಪಸ್ಸು ಎನ್ನುವುದು. 

ಹೀಗೆ ಯೋಚಿಸಿದಾಗ ಮಗುವಿಗೆ ಆಕಾಶವಾಣಿಯ ಎರಡು ಶಬ್ದಗಳ ಸೂಚನೆಯ ಅರ್ಥವಾಯಿತು. ಜನನಕ್ಕೆ ಕಾರಣವಾಗಿ ಹುಟ್ಟಿಸಿ ತಂದವನು "ತಂದೆ". ತನ್ನ ಜನನಕ್ಕೆ ಕಾರಣನಾದ ತಂದೆಯನ್ನು ಕುರಿತು ತಪಸ್ಸು ಮಾಡಲು ಪ್ರಾರಂಭಿಸಿತು. 
******

ಅದೇನು ಸಾಧಾರಣವಾದ ತಪಸ್ಸಲ್ಲ. ಒಂದೆರಡು ದಿನ, ವಾರ, ತಿಂಗಳುಗಳ ತಪಸ್ಸಲ್ಲ. ಒಂದೆರಡು ವರುಷಗಳ ತಪಸ್ಸೂ ಅಲ್ಲ. ಒಂದು ನೂರು ವರುಷಗಳ ತಪಸ್ಸು. ನಮ್ಮ ವರುಷದಂತೆ ಮನುಷ್ಯಮಾನದ ವರುಷವಲ್ಲ. ಬ್ರಹ್ಮದೇವರ ವಯೋಮಾನದ ಲೆಕ್ಕದ ಒಂದು ನೂರು ವರ್ಷ!

ಒಂದು ನೂರು ವರುಷದ ತಪಸ್ಸಿನ ನಂತರ ಕೂಸಿನ ತಂದೆ ಕಾಣಿಸಿಕೊಂಡ. ಅವನು ನೀರಿನ ಮೇಲೆ ಮಲಗಿದವನು."ನಾರಾ" ಅಂದರೆ ನೀರು. ಆದ್ದರಿಂದ ಅವನು "ನಾರಾಯಣ".  

ಅವನು ಮಲಗಿರುವುದು ಹಾಲಿನ ಕಡಲ ಮೇಲಲ್ಲವೇ? ಹೌದು. ಆದರೆ ಹಾಲೂ ನೀರಿನಂತೆ. ದ್ರವ ರೂಪ. ಮೇಲಾಗಿ ಇದು ನಡೆದಾಗ ಅವನು "ಪ್ರಳಯಜಲ" ಅಂದರೆ ಎಲ್ಲೆಲ್ಲೂ ಆವರಿಸಿದ್ದ ನೀರಿನ ಮೇಲೆ ಮಲಗಿದ್ದವನು. ಯಾರಾದರೂ ಒಂದು ದ್ರವದ ಮೇಲೆ ಮಲಗಲು ಸಾಧ್ಯವೇ? ಅವನಿಗೆ ಸಾಧ್ಯ. 

ಹೀಗೆ ಕಾಣಿಸಿಕೊಂಡ ತಂದೆ ನಾರಾಯಣ ಮಗ ಬ್ರಹ್ಮನಿಗೆ ನಾಲ್ಕು ಶ್ಲೋಕಗಳ ಸಂಕ್ಷಿಪ್ತವಾದ ಉಪದೇಶ ಮಾಡಿದ. ಇದೇ ಪ್ರಪಂಚದ ಮೊದಲ ಪಾಠ. ಮೊಟ್ಟ ಮೊದಲ ಶಿಕ್ಷಣ. ಅದನ್ನೇ "ಚತುಶ್ಲೋಕೀ ಭಾಗವತ" ಅನ್ನುತ್ತಾರೆ. ಈ ನಾಲ್ಕು ಶ್ಲೋಕಗಳಲ್ಲಿ ಇಡೀ ಸೃಷ್ಟಿಯ ರಹಸ್ಯವನ್ನು ಕಮಲನಾಭ ನಾರಾಯಣನು ಕಮಲಸಂಭವ ಬ್ರಹ್ಮನಿಗೆ ತಿಳಿಸಿ ಹೇಳಿದ. 

***** 

"ಪ್ರಜ್ಞೆ" ಮತ್ತು "ಪ್ರತಿಭೆ" ಅನ್ನುವ ಪದಗಳಿಗೆ ಈಗಿನ ವಾಡಿಕೆಯಲ್ಲಿ ಅನೇಕ ರೀತಿಯ ಅರ್ಥಗಳನ್ನು ಆರೋಪಿಸುತ್ತಾರೆ (ಕೊಡುತ್ತಾರೆ). 

ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಎಲ್ಲ ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ತಿಳಿಯುವ ಶಕ್ತಿಗೆ "ಪ್ರಜ್ಞೆ" ಎಂದು ಹೆಸರು. ("ನಿನಗೆ ಮೈಮೇಲೆ ಪ್ರಜ್ಞೆ ಇಲ್ಲವೇ?" ಎಂದು ಕೆಲವೊಮ್ಮೆ ಹೇಳುವುದುಂಟು. ಹೀಗೆ ಹೇಳಿದರೆ "ನಿನಗೆ ಸಮಯ-ಸಂದರ್ಭಗಳ ಹಿನ್ನೆಲೆಯಲ್ಲಿ ತಿಳಿಯುವ ಶಕ್ತಿ ಇಲ್ಲವೇ?" ಎಂದು ತಾನೇ ಕೇಳುವುದು? "ಮೈಮೇಲೆ ಎಚ್ಚರ ಇಲ್ಲವೇ?" ಅನ್ನುವುದು ಅದರ ಅರ್ಥವಲ್ಲ).

ಇದೇ ರೀತಿ ಸ್ವಲ್ಪ ವಿಷಯವನ್ನು ಹೇಳಿದರೆ ಊಹಾಪೋಹ ಮಾಡಿ ಅದನ್ನು ವಿಸ್ತರಿಸಿ ವಿಶಾಲವಾಗಿ ತಿಳಿದುಕೊಳ್ಳುವುದಕ್ಕೆ "ಪ್ರತಿಭೆ" ಎಂದು ಹೆಸರು. 

ಪ್ರಜ್ಞಾ ಮತ್ತು ಪ್ರತಿಭೆ ಇರುವವರಿಗೆ ಸ್ವಲ್ಪ ಸುಳಿವು ಕೊಟ್ಟರೆ ಸಾಕು. ಒಂದು ಸಣ್ಣ ಬೀಜ ಮುಂದೆ ಅರಳಿ ಒಂದು ದೊಡ್ಡ ಮರ ಆಗುವಂತೆ ಸೂಕ್ಶ್ಮವಾಗಿ ಹೇಳಿದ ವಿಷಯ ಅವರ ತಲೆಯಲ್ಲಿ ಅರಳಿ ಪೂರ್ತಿ ಅರಿವು ತುಂಬಿಕೊಳ್ಳುತ್ತದೆ. ಇದನ್ನೇ "ಉಗುರು ತೋರಿಸಿದರೆ ಹಸ್ತ ನುಂಗುವುದು" ಎಂದು ಹೇಳುವುದು.

ಬ್ರಹ್ಮದೇವರಿಗಿಂತ ಹೆಚ್ಚಿನ ಪ್ರಜ್ಞೆ ಮತ್ತು ಪ್ರತಿಭೆ ಈ ಜಗತ್ತಿನಲ್ಲಿ ಯಾರಿಗುಂಟು? 

***** 

ತಂದೆ ನಾರಾಯಣ ಹೇಳಿದ ಪಾಠದಿಂದ ಮುಂದಿನ ದಾರಿ ತಿಳಿದ ಚತುರ್ಮುಖ ಬ್ರಹ್ಮದೇವರು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದರು. ತನ್ನ ಮಾನಸ ಪುತ್ರರಾದ ನಾರದರಿಗೆ ಮುಂದೊಮ್ಮೆ ತಾವು ತಂದೆಯಿಂದ ಕೇಳಿದ ಭಾಗವತವನ್ನು ಉಪದೇಶಿಸಿದರು. ಕಾಲಾನಂತರ ಪರಾಶರ-ಸತ್ಯವತಿಯರ ಮಗನಾದ, ಶ್ರೀಹರಿಯ ಇನ್ನೊಂದು ರೂಪನಾದ ವೇದವ್ಯಾಸ ಮಹರ್ಷಿಯು ನಾರದರಿಂದ ಇದನ್ನು ಪಡೆದರು. ಅದನ್ನು ವಿಶಾಲವಾದ, ಹದಿನೆಂಟನೆಯ ಪುರಾಣವಾದ, ಹದಿನೆಂಟು ಸಾವಿರ ಶ್ಲೋಕದ "ಭಾಗವತ ಪುರಾಣ" ಮಾಡಿ ವಿವರಿಸಿದರು. 

ವೇದವ್ಯಾಸರು ಈ ಭಾಗವತ ಮಹಾಪುರಾಣವನ್ನು ತಮ್ಮ ಮಗನಾದ ಶುಕ ಮಹರ್ಷಿಗೆ ಕೊಟ್ಟರು. ಪರೀಕ್ಷಿತ್ ಮಹಾರಾಜನು ಶುಕಮುಖವಾಗಿ ಇದನ್ನು ಕೇಳಿದನು. ನಂತರ ಅದು ಎಲ್ಲೆಡೆ ಹರಡಿತು. 

*****

ಚತುರ್ಮುಖ ಬ್ರಹ್ಮರ ಮತ್ತೊಬ್ಬ ಮಗನಾದ ಕರ್ದಮ ಪ್ರಜಾಪತಿ ತನಗೆ ಬಂದ ಸೂಚನೆಯಂತೆ ಸ್ವಾಯಂಭುವ ಮನು ಮತ್ತು ಶತರೂಪಾ ದೇವಿಯರ ಮಗಳಾದ ದೇವಹೂತಿ ದೇವಿಯನ್ನು ವಿವಾಹವಾದರು. ಕರ್ದಮರ ತಪಸ್ಸಿಗೆ ಮೆಚ್ಚಿ ಅವರ ಮಗನಾಗಿ ಹುಟ್ಟುತ್ತೇನೆ ಎಂದು ಮಾತು ಕೊಟ್ಟಿದ್ದ ಮಹಾವಿಷ್ಣುವು ಕರ್ದಮ-ದೇವಹೂತಿಯರ ಮಗನಾಗಿ "ಕಪಿಲ ಋಷಿ" ಎಂದು ಅವತರಿಸಿದನು. ಕರ್ದಮರು ವಾನಪ್ರಸ್ಥರಾದ ಸಮಯದಲ್ಲಿ ದೇವಹೂತಿಯ ಮುಂದಿನ ರಕ್ಷಣೆಯ ಹೊಣೆ ಕಪಿಲರಿಗೆ ಒಪ್ಪಿಸಿದರು. 

ಸ್ವಲ್ಪ ಕಾಲಾನಂತರ ದೇವಹೂತಿಯು ಮಗನಾದ ಕಪಿಲನ ಬಳಿಗೆ ಬಂದು ತನಗೆ ಉಪದೇಶ ಮಾಡುವಂತೆ ಕೇಳಿದಳು. 

"ಕಪಿಲ, ನನಗೆ ಇನ್ನು ಬದುಕಿದ್ದು ಸಾಕಾಯಿತು. ನನಗೆ ಉಪದೇಶ ಮಾಡಿ ಮೋಕ್ಷ ಮಾರ್ಗವನ್ನು ಸೂಚಿಸು"

"ಅಮ್ಮಾ, ನೀನು ನನ್ನ ಹೆತ್ತ ತಾಯಿ. ತಾಯಿತನ ಬಹಳ ದೊಡ್ಡದು. ನಾನು ನಿನಗೆ ನಮಸ್ಕರಿಸಬೇಕೇ ಹೊರತು ನೀನು ನನಗೆ ನಮಸ್ಕಾರ ಮಾಡುವಂತಿಲ್ಲ. ಸನ್ಯಾಸಿಗಳಾದವರೂ ಸಹ ತಾಯಿಗೆ ನಮಸ್ಕರಿಸುತ್ತಾರೆ. ಗುರುವಿಗೆ ನಮಸ್ಕರಿಸದಿರುವವರಿಗೆ ಉಪದೇಶ ಮಾಡುವಂತಿಲ್ಲ. ಆದ್ದರಿಂದ ನಾನು ನಿನಗೆ ಉಪದೇಶ ಮಾಡಲಾಗದು"

"ಕಪಿಲ, ನೀನು ನಿಮಿತ್ತಕ್ಕೆ ನನ್ನ ಮಗನಾದರೂ ನೀನು ಶ್ರೀಹರಿ ಎಂದು ನಾನು ಬಲ್ಲೆ. ಆ ಕಾರಣದಿಂದ ನಾನು ನಮಸ್ಕರಿಸಬಹುದು. ನೀನು ಉಪದೇಶ ಮಾಡಬಹುದು"

"ನಾನು ಶ್ರೀಹರಿ ಎನ್ನುವ ಜ್ಞಾನ ನಿನಗೆ ಬಂದಿದೆ ಅಂದರೆ ಮತ್ತೆ ಯಾವ ಉಪದೇಶವೂ ಬೇಕಾಗಿಲ್ಲವಲ್ಲ!"

"ಅದೇನೇ ಇರಲಿ. ನಿನ್ನಿಂದ ವಿವರವಾಗಿ ಉಪದೇಶ ಪಡೆಯಬೇಕೆಂದು ನನಗೆ ಆಸೆ. ಈ ಆಸೆಯನ್ನು ಪೂರ್ಣ ಮಾಡು" 

ಮುಂದೆ ಮಾತಿಲ್ಲ. ತಾಯಿಯ ಆಸೆ ಪೂರ್ತಿ ಮಾಡಲು ಕಪಿಲ ಮುನಿಯು ದೇವಹೂತಿ ದೇವಿಗೆ ವಿವರವಾಗಿ ಮುಕ್ತಿ ಮಾರ್ಗವನ್ನು ಉಪದೇಶಿಸಿದನು. ಇದು ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. 

ಕರ್ದಮ-ದೇವಹೂತಿ-ಕಪಿಲ ಮುನಿ ಇವರ ಬಗ್ಗೆ ಹೆಚ್ಚಿನ ವಿವರ ಇರುವ ಇಂಗ್ಲಿಷ್ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು.  
*****

ಭಾರತೀಯ ತತ್ವ್ವಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಬಹಳ ಮಹತ್ವ ಇದೆ. ಅನೇಕ ಗಹನ ವಿಷಯಗಳನ್ನು ಅರಿಯಲು ಅಂಕಿ-ಸಂಖ್ಯೆಗಳ ತಿಳುವಳಿಕೆ ಬಹಳ ಅವಶ್ಯಕ. ಇದೇ ಕಪಿಲ ಮಹರ್ಷಿ ಮುಂದೆ ಮೊದಲು ಸೂಚಿಸಿದ "ಹದಿನಾರು-ಇಪ್ಪತ್ತೊಂದು" ಸೂತ್ರವನ್ನು ಹಿಗ್ಗಿಸಿ "ಸಂಖ್ಯಾಶಾಸ್ತ್ರ" ರಚಿಸಿದ ಮೂಲ ಪುರುಷರು ಎಂದು ನಂಬಿಕೆ. ವೈದಿಕ ವಾಂಗ್ಮಯ ತಿಳಿಯುವ ಪ್ರಯತ್ನ ಮಾಡುವವರಿಗೆ ಇದರ ಅಭ್ಯಾಸ ಬೇಕು. 

ಹದಿನಾರು-ಇಪ್ಪತ್ತೊಂದು ಎಂದು ಆಕಾಶವಾಣಿಯಲ್ಲಿ ಕೇಳಿಬಂದ ಎರಡು ಶಬ್ದಗಳು ಕಡೆಗೆ ಹೀಗೆ "ಸಂಖ್ಯಾಶಾಸ್ತ್ರ" ಆಗಿ ರೂಪುಗೊಂಡಿತು!

Monday, August 11, 2025

ದೊಡ್ಡವರ ಶಾಪಗಳೆಂಬ ವರಗಳು


ಹಿಂದಿನ ಸಂಚಿಕೆಯಲ್ಲಿ "ಸೋರಿಹೋಗುವ ನೀರಿನಂತೆ" ಎನ್ನುವ ಶೀರ್ಷಿಕೆಯಡಿ ಶಾಪಗಳ ಕಾರಣಗಳನ್ನೂ ಮತ್ತು ಅವುಗಳ ಪರಿಣಾಮಗಳನ್ನೂ ಸ್ವಲ್ಪ ನೋಡಿದೆವು. (ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು). ಅನೇಕ ವೇಳೆ ಶಾಪಗಳು ದೊಡ್ಡ ರೀತಿಯ ವರಗಳೇ ಆಗಿ ರೂಪಾಂತರವಾಗುವ ಕಥೆಗಳನ್ನು ಕೇಳಿದ್ದೇವೆ. ಶ್ರೀ ರಾಘವೇಂದ್ರ ಸ್ವಾಮಿಗಳ 354 ವರ್ಷದ ಆರಾಧನೆಯ ಸಂದರ್ಭದಲ್ಲಿ ಅವರ ಅವತಾರದ ಬಗ್ಗೆ ಇರುವ ಶಾಪದ ಸಂಗತಿ ನೆನೆಸಿಕೊಳ್ಳುವುದು ಯೋಗ್ಯವೇ. ಆ ಶಾಪವು ಹೇಗೆ ಅನೇಕರಿಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಸ್ವಲ್ಪ ಮಟ್ಟಿಗೆ ನೋಡೋಣ. 

"ಕ್ರೋಧೋಪಿ ದೇವಸ್ಯ ವರೇಣ ತುಲ್ಯ:" ಎಂದು ಒಂದು ಸಂಸ್ಕೃತದ ಹೇಳಿಕೆಯಿದೆ. ಕನ್ನಡದ ಗಾದೆಯಂತೆ. ಮಹಾಭಾರತದ ಶಾಂತಿ ಪರ್ವದ ಸಂದರ್ಭದಲ್ಲಿ ಇದರ ವಿಸ್ತಾರ ಸಿಗುತ್ತದೆ. ಇದರ ಸಂಕ್ಷಿಪ್ತ ಅರ್ಥ "ದೊಡ್ಡವರ ಕೋಪವೂ ವರಕ್ಕೆ ಸಮವು. ಅವರ ಕೋಪವೂ ಮಾನ್ಯವೇ!" ಎಂದು. ಒಬ್ಬರು ಇನ್ನೊಬ್ಬರನ್ನು  ಕಂಡಾಗ ಮೂರು ರೀತಿಗಳಲ್ಲಿ ಪ್ರತಿಕ್ರಯಿಸಬಹುದು. ಮೊದಲನೆಯದು ಉದಾಸೀನತೆ. ನೋಡಿಯೂ ನೋಡದಂತೆ ವ್ಯವಹರಿಸುವುದು. ಇದರಿಂದ ಏನೂ ಪ್ರಯೋಜನವಿಲ್ಲ. ಅದು ನೋವಿನ ಸಂಗತಿಯೇ. ಎರಡನೆಯದು ಸಂತೋಷದಿಂದ ನೋಡುವುದು. ಇದು ಬೇಕಾದದ್ದು. ಮೂರನೆಯದು ಕೋಪದಿಂದ ಗದರಿಸುವುದು ಇತ್ಯಾದಿ. ಇದರಲ್ಲಿ ಪ್ರೀತಿಯಿಲ್ಲದಿದ್ದರೂ ಉದಾಸೀನತೆ ಇಲ್ಲ. ನೋಡಿಯೂ ನೋಡದಿರುವಂತೆ ಇರುವುದಕ್ಕಿಂತ ಇದು ವಾಸಿ! ದೊಡ್ಡವರು ಹುಸಿ ಕೋಪದಿಂದ ಗದರಿಸಿದಂತೆ ಮಾಡಿದರೂ ಅವರು ನಮ್ಮನ್ನು ಗಮನಿದರಲ್ಲಾ, ಅಷ್ಟು ಸಾಕು ಎನ್ನುವ ಸಮಾಧಾನ. ಅದೇ ನಮ್ಮ ಭಾಗ್ಯೋದಯಕ್ಕೆ ದಾರಿ ಮಾಡುತ್ತದೆ ಎನ್ನುವ ಬಲವಾದ ನಂಬಿಕೆ. 

ಗುರುರಾಯ ಶ್ರೀ ರಾಘವೇಂದ್ರ ಸ್ವಾಮಿಗಳ ಅವತಾರವೂ ಈ ರೀತಿಯ ದೊಡ್ಡವರ ಒಂದು ಕೋಪದಿಂದಾದ ಶಾಪರೂಪಿ ವರದ ಪ್ರಭಾವ ಎಂದು ಅವರನ್ನು ನಂಬಿದ ಜನ ತಿಳಿಯುತ್ತಾರೆ.  

*****

ಚತುರ್ಮುಖ ಬ್ರಹ್ಮದೇವರೂ ಪ್ರತಿದಿನ ದೇವತಾರ್ಚನೆ ಮಾಡುತ್ತಾರಂತೆ. ಅದು ಮಾಡುವುದು ಒಂದು ತಪ್ಪಿಸಬಾರದ ಕರ್ತವ್ಯವೆಂದು ಎಲ್ಲರಿಗೆ ತೋರಿಸುವ ಸಲುವಾಗಿ. ಅವರು ಪ್ರತಿಕ್ಷಣ ಮಾಡುವುದೂ ಅದನ್ನೇ ಎನ್ನುವುದು ಬೇರೆ ಮಾತು. ಆದರೆ ದಿನಚರಿಯಲ್ಲಿ ಅದೂ ಒಂದು ಕಟ್ಟಲೆ. ಅವರ ಅಪ್ಪ-ಅಮ್ಮನಾದ ಲಕ್ಷ್ಮೀ-ನಾರಾಯಣರ ಅತಿ ದಿವ್ಯವಾದ ಪೂಜೆ-ಪುನಸ್ಕಾರಗಳು. ಅವರ ದೇವರಪೂಜೆ ಅಂದರೆ ಸಾಮಾನ್ಯವಲ್ಲ. ನಮ್ಮಂತೆ ಮನಸ್ಸು ಒಂದು ಕಡೆ, ಮಾತು ಇನ್ನೊಂದರ ಕುರಿತು, ದೇಹ ಮಾತ್ರ ಪೂಜೆಯಲ್ಲಿ. ಹೀಗಲ್ಲ. ಆದ್ದರಿಂದ ಅವರ ಪೂಜೆಯಲ್ಲಿ ಇನ್ನಿಲ್ಲದ ಸೊಗಸು. ಅವರು "ಕೇಶವಾಯ ನಮಃ" ಎಂದರೆ ಕೇಶವರೂಪಿ ಪರಮಾತ್ಮನು ಎದುರು ನಿಂತು ನಗೆಮೊಗದಿಂದ ಸ್ವೀಕರಿಸುತ್ತಾನಂತೆ. ಮತ್ತೆ "ನಾರಾಯಣಾಯ ನಮಃ" ಎಂದರೆ ನಾರಾಯಣ ರೂಪದಲ್ಲಿ ಬಂದು ನಿಲ್ಲುವನು. "ಮತ್ಸ್ಯಾಯ ನಮಃ" ಅಂದರೆ ಮತ್ಸ್ಯರೂಪಿ ಪರಮಾತ್ಮ ಹಾಜರು. "ಕೂರ್ಮಾಯ ನಮಃ" ಎಂದರೆ ಕೂರ್ಮರೂಪದಲ್ಲಿ.  ಹೀಗೆ ಉದ್ದಕ್ಕೂ.  ಅದನ್ನು ನೆನೆಸಿಕೊಂಡರೇ ಅದೊಂದು ದಿವ್ಯವಾದ ಅನುಭವ. 

ಶ್ರೀಮಠಗಳ ಆಸ್ಥಾನ ಪೂಜೆ ವ್ಯವಸ್ಥೆ ಅವನ್ನು ನೋಡಿದವರಿಗೆ ಗೊತ್ತು. ಮಠದ ಶ್ರೀಗಳು ಪೂಜಾದಿಗಳನ್ನು ಮಾಡುವಾಗ ಅವರ ಸಹಾಯಕರಾಗಿ ಶಿಷ್ಯರಿರುತ್ತಾರೆ. ಕಾಲಕಾಲಕ್ಕೆ ತಕ್ಕಂತೆ ಪೂಜಾಸಾಮಗ್ರಿಗಳನ್ನು ಒದಗಿಸಿ ಕೊಡುವುದು ಅವರ ಕೆಲಸ. ಹೂವುಗಳು, ಹಣ್ಣುಗಳು, ಧೂಪ, ದೀಪ ಇತ್ಯಾದಿಗಳು ಅವರು ಕೈ ನೀಡಿದಾಗ ಸಮಯಕ್ಕೆ ಅನುಗುಣವಾಗಿ ಸಿಗಬೇಕು. ಮಂಗಳಾರತಿಯೇ ಒಂದು ಹದಿನೈದು-ಇಪ್ಪತ್ತು ರೀತಿಯವು. ಸಣ್ಣ ತಟ್ಟೆಯಲ್ಲಿ, ದೊಡ್ಡ ತಟ್ಟೆಯಲ್ಲಿ, ಹಲಗಾರತಿ, ಕುಂಭಾರತಿ, ಏಕಾರತಿ, ಅನೇಕಾರತಿ, ಹೀಗೆ ವೈವಿಧ್ಯಪೂರ್ಣ ಮಾದರಿಗಳು. ಎಲ್ಲವೂ ಸರಿಯಾಗಿ ತಯಾರಿರಬೇಕು. ಪೂಜೆ ಎಲ್ಲೂ ಮಧ್ಯೆ ತಡವರಿಸದಂತೆ ಸಾಂಗವಾಗಿ ನಡೆಯಬೇಕು. ಇದು ಒಂದು ಕಟ್ಟುನಿಟ್ಟಾದ ಕ್ರಮ. 

ಚತುರ್ಮುಖ ಬಹ್ಮದೇವರಿಗೆ ಹೀಗೆ ಪೂಜಾಸಮಯದಲ್ಲಿ ಸಹಾಯಕನಾಗಿರುವುದು "ಶಂಖುಕರ್ಣ" ಎಂಬ ಒಬ್ಬ ಕರ್ಮಜದೇವತೆಯ ಕೆಲಸ. ಕಾಲಕಾಲಕ್ಕೆ ಹೂವು ತುಂಬಿದ ತಟ್ಟೆಗಳನ್ನು ಕೈಗೆ ಕೊಡುವುದು ಅದರಲ್ಲಿ ಒಂದು. ಒಂದು ಹರಿವಾಣ ಅರ್ಪಿಸಿ ಬರಿದಾದಂತೆ ಅದನ್ನು ಹಿಂತೆಗೆದುಕೊಂಡು ಹೂವು ತುಂಬಿದ ಮತ್ತೊಂದನ್ನು ತಕ್ಷಣ ಕೊಡಬೇಕು. ಗಮನವೆಲ್ಲ ಇದರ ಮೇಲೆಯೇ ಇರಬೇಕು. ಒಂದು ಕ್ಷಣವೂ ತಪ್ಪಬಾರದು. ಹೀಗೆಯೇ ನಡೆಯಬೇಕು. 

ಒಂದು ದಿನ ಹೀಗೆ ಪೂಜಾಸಮಯದಲ್ಲಿ ಮತ್ಸ್ಯ, ಕೂರ್ಮರ ನಂತರ ವರಾಹರೂಪಿ ಪರಮಾತ್ಮನ ಸ್ಮರಣೆ ಬಂತು. ಅಚ್ಚ ಬಿಳಿಯ ಬಣ್ಣದ "ಶ್ವೇತ ವರಾಹಮೂರ್ತಿ" ಮೈದೋರಿದ. ಆ ಮೂರ್ತಿಯ ದಿವ್ಯ ಸುಂದರ ರೂಪ ನೋಡುತ್ತಾ ಶಂಖುಕರ್ಣ ಮೈಮರೆತ. ಬ್ರಹ್ಮದೇವರು ಕೈ ನೀಡಿದಾಗ ಹೂವು ತುಂಬಿದ ತಟ್ಟೆಯ ಬದಲು ಪಕ್ಕದಲ್ಲಿದ್ದ ಖಾಲಿ ತಟ್ಟೆ ಸಿಕ್ಕಿತು. ಬ್ರಹ್ಮದೇವರು ನೋಡಿದರೆ ಕೈಯಲ್ಲಿ ಖಾಲಿ ತಟ್ಟೆ! ದೊಡ್ಡ ಅಪಚಾರ. ಥಟ್ಟೆ೦ದು ಶಂಖುಕರ್ಣನನ್ನು ನೋಡಿ "ನೀನು ಭೂಲೋಕದಲ್ಲಿ ಅನೇಕ ಜನ್ಮಗಳನ್ನು ತಾಳು" ಎಂದು ಶಪಿಸಿಬಿಟ್ಟರು. 
*****

ಶಪಿಸುವ ಕ್ರಿಯೆಯೆನೋ ನಡೆದುಹೋಯಿತು. ಪಕ್ಕದಲ್ಲಿ ಸಂಗೀತ, ನೃತ್ಯಸೇವೆಗಳಿಗೆ ತಯಾರಾಗಿ ನಿಂತಿದ್ದ ತಾಯಿ ಶಾರದೆ ಇದನ್ನು ಕಂಡಳು. 

"ಇದೇನು! ಹೀಗೆ ಶಪಿಸಿಬಿಟ್ಟಿರಿ?"
"ಅಪಚಾರ ಆಗಲಿಲ್ಲವೇ? ಪರಿಣಾಮ ಅನುಭವಿಸಲೇಬೇಕಲ್ಲ"
"ಪರಮಾತ್ಮನ ದಿವ್ಯ ಮಂಗಳ ಮೂರ್ತಿಯನ್ನು ಕಣ್ಣಾರೆ ಕಂಡು ಮೈ ಮರೆಯದವರು ಯಾರುಂಟು? ಅದಕ್ಕೆ ಹೀಗೆ ಶಾಪ ಕೊಡುವುದೇ?"
"ಕೊಟ್ಟವನು ನಾನಲ್ಲ. ಕೊಡಿಸಿದವನು ಅವನೇ. ಎಲ್ಲರಿಗೂ ಅಪ್ಪನಾದ ನಮ್ಮಪ್ಪ"
"ಶಂಕುಕರ್ಣನ ಮುಂದಿನ ಹಾದಿ?"
"ಅವನಿಗೆ ಈ ಶಾಪವೇ ವರವಾಗುತ್ತದೆ. ಮುಂದೆ ಹಾಗೆ ಜನ್ಮ ತಾಳಿದಾಗ ನರಸಿಂಹ-ರಾಮ-ಕೃಷ್ಣರ ಅಖಂಡ ದರ್ಶನ ಆಗುತ್ತದೆ. ಇನ್ನಿಲ್ಲದಷ್ಟು ಪುಣ್ಯ ಸಂಪಾದನೆಗೆ ಇದೊಂದು ದಾರಿಯಾಗುತ್ತದೆ"
"ಆಮೇಲೆ?"
"ಅಷ್ಟೇ ಅಲ್ಲ. ಅವನ ಅನುಯಾಯಿಗಳಿಗೂ ಬಹುಪರಿಯ ಅನುಗ್ರಹಗಳಾಗುತ್ತವೆ. ನಿನ್ನ ಅನುಗ್ರಹವಂತೂ ಈಗಲೇ ಆಗಿದೆಯಲ್ಲ!"

ಈ ಶಾಪದ ಪರಿಣಾಮವಾಗಿ ಮುಂದೆ ಶಂಖುಕರ್ಣನು ಹಿರಣ್ಯಕಶಿಪು-ಕಯಾದು ದಂಪತಿಗಳ ಮಗನಾದ ಪ್ರಹ್ಲಾದನಾಗಿ ಹುಟ್ಟುತ್ತಾನೆ. ನಂತರ ಕನ್ನಡ ರಾಜ್ಯರಮಾರಮಣ ಶ್ರೀ ಕೃಷ್ಣದೇವರಾಯನ ರಾಜುಗುರು "ವ್ಯಾಸತೀರ್ಥ", ನಂತರ ಗುರು "ರಾಘವೇಂದ್ರ ತೀರ್ಥ" ಆಗಿ ಬರುತ್ತಾರೆ. ಹೀಗೆ ಅವರನ್ನು ನಂಬಿದವರು ಆರಾಧಿಸುತ್ತಾರೆ. ಕ್ರಮವಾಗಿ ನರಸಿಂಹ-ಶ್ರೀಕೃಷ್ಣ-ಮೂಲರಾಮರ ಆರಾಧಕರಾಗಿ, ನಂಬಿದವರ ನೆರವಿಗೆ ನಿಲ್ಲುತ್ತಾರೆ. 
*****

ವೀಣಾ ವೆಂಕಟನಾಥ ಭಟ್ಟರು ಗುರುಗಳಾದ ಶ್ರೀ ಸುದೀಂಧ್ರ ತೀರ್ಥರಿಂದ ಸನ್ಯಾಸ ತೆಗೆದುಕೊಂಡು "ಶ್ರೀ ರಾಘವೇಂದ್ರ ತೀರ್ಥ" ಹೆಸರಿನಿಂದ ಪ್ರಖ್ಯಾತರಾದರು. ಒಂದು ಸಂದರ್ಭದಲ್ಲಿ ವಿದ್ಯೆಯ ಅವಕಾಶವೇ ಇಲ್ಲದ ವೆಂಕಣ್ಣನೆಂಬ ಯುವಕನೊಬ್ಬನಿಗೆ ಅವರ ಅನುಗ್ರಹವಾಗಿ, ಆದವಾನಿ ನವಾಬ ಸಿದ್ದಿ ಮಸೂದ್ ಖಾನ್ ಆಪ್ತನಾಗಿ ಸಂಸ್ಥಾನದ ದಿವಾನನಾದನು. ನವಾಬನು ಒಮ್ಮೆ ಗುರುಗಳನ್ನು ಪರೀಕ್ಷಿಸಲು ಹೋಗಿ ಪಶ್ಚಾತಾಪ ಪಟ್ಟನು. ಅವರಿಗೆ ಏನಾದರೂ ಕೊಡಬೇಕು, ಆ ಮೂಲಕ ತಪ್ಪು ಸರಿಮಾಡಿಕೊಳ್ಳಬೇಕೆಂದು ಆಸೆಪಟ್ಟನು. ರಾಯರು ತಮಗೆ ಏನೂ ಬೇಡವೆಂದರು. ಕಡೆಗೆ ನವಾಬನ ಅನೇಕ ಮನವಿಗಳ ನಂತರ "ಮಂಚಾಲೆ" ಎನ್ನುವ ಗ್ರಾಮವನ್ನು ಕೊಡಲು ಹೇಳಿದರು. ನವಾಬನು "ಅದೊಂದು ಕುಗ್ರಾಮ. ಅದರ ಬದಲು ಬೇರೆ ಕೇಳಿ" ಎಂದನು. ಗುರುಗಳು "ಕೊಡುವುದಿದ್ದರೆ ಅದು ಕೊಡಿ. ಇಲ್ಲದಿದ್ದರೆ ಬೇರೆ ಏನೂ ಬೇಡ" ಎಂದುಬಿಟ್ಟರು. 

ಕಡೆಗೆ ಮಂಚಾಲೆ ಗ್ರಾಮ ಸಿಕ್ಕಿತು. ರಾಯರು ವೆಂಕಣ್ಣನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತುಂಗಾನದಿ ತೀರದ ಸ್ಥಳವೊಂದನ್ನು ತೋರಿಸಿ ಅಲ್ಲಿ ಅಗೆಸಲು ಹೇಳಿದರು. ಹಾಗೆ ಅಗೆದಾಗ ಅಲ್ಲಿನ ಭೂಮಿಯಲ್ಲಿ ಬಹಳ ಹಿಂದಿನ ಹೋಮಕುಂಡಗಳ ಅವಶೇಷಗಳು ಸಿಕ್ಕಿದವು. "ಇವು ಹಿಂದೆ ಪ್ರಹ್ಲಾದರಾಜರು ಯಾಗಗಳನ್ನು ಮಾಡಿದ ಸ್ಥಳ. ನಾವು ಇಲ್ಲಿಯೇ ವೃಂದಾವನ ಪ್ರವೇಶ ಮಾಡುತ್ತೇವೆ" ಎಂದರು. 

ಒಲ್ಲದ ಮನಸ್ಸಿನಿಂದ ವೆಂಕಣ್ಣನು ಒಂದು ಸುಂದರವಾದ ವೃಂದಾವನವನ್ನು ಮಾಡಿಸಿ ಗುರುಗಳಿಗೆ ತೋರಿಸಿದನು. ರಾಯರು ನಕ್ಕು, ವೆಂಕಣ್ಣನನ್ನು ಮಾದಾವರ ಎಂಬ ಗ್ರಾಮಕ್ಕೆ ಕರೆದುಕೊಂಡು ಹೋದರು. (ಈಗಲೂ ಮಂತ್ರಾಲಯಂ ರೋಡ್ ರೈಲು ನಿಲ್ದಾಣದಿಂದ ಮಂತ್ರಾಲಯಕ್ಕೆ ಹೋಗುವ ದಾರಿಯಲ್ಲಿ ಈ ಗ್ರಾಮವಿದೆ). ಅಲ್ಲಿ ಕೆರೆಯ ದಂಡೆಯ ಶಿಲೆಯೊಂದನ್ನು ತೋರಿಸಿದರು. "ಶ್ರೀರಾಮಚಂದ್ರ ದೇವರು ಕಿಷ್ಕಿಂಧೆಯ ಕಡೆ ಬಂದಿದ್ದಾಗ ಇಲ್ಲಿ ಬಂದು ಈ ಶಿಲೆಯ ಮೇಲೆ ಸ್ವಲ್ಪ ಕಾಲ ಕುಳಿತಿದ್ದರು. ಈ ಶಿಲೆಯಲ್ಲಿ ಒಂದು ಮಾರುತಿಯ ವಿಗ್ರಹ ಮಾಡಿಸಿ. ಮಿಕ್ಕಿದ ಶಿಲೆಯಲ್ಲಿಯೇ ನಮ್ಮ ವೃಂದಾವನ ಆಗಬೇಕು" ಎಂದು ಆದೇಶಿಸಿದರು. (ಮಾರುತಿಯ ವಿಗ್ರಹವನ್ನು ಶ್ರೀ ರಾಯರ ಬೃಂದಾವನದ ಮುಂದೆ ಈಗಲೂ ಕಾಣಬಹುದು). 

ವೆಂಕಣ್ಣನಿಗೆ ಸಂಕೋಚವಾಯಿತು. ಈಗ ಮಾಡಿಸಿರುವ ವೃಂದಾವನ ಏನು ಮಾಡುವುದು ಎಂಬ ಯೋಚನೆ. "ಚಿಂತಿಸಬೇಡಿ. ಮುಂದೆ ನಮ್ಮ ಪೀಠದಲ್ಲಿ ಬರುವವರೊಬ್ಬರು ಅದನ್ನು ಉಪಯೋಗಿಸುತ್ತಾರೆ" ಎಂದರು. (ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನದ ಪಕ್ಕದಲ್ಲೇ, ಅದೇ ರೀತಿ ಇರುವ ಭವ್ಯ ಶ್ರೀ ವಾದೀಂದ್ರ ತೀರ್ಥರ ವೃನ್ದಾವನವೇ ಅದು). ತಮ್ಮ ತೀರ್ಮಾನದಂತೆ ಶ್ರಾವಣ ಬಹುಳ ಬಿದಿಗೆಯಂದು ಶ್ರೀ ರಾಯರು ಸಶರೀರವಾಗಿ ವೃಂದಾವನ ಪ್ರವೇಶ ಮಾಡಿದರು. ಅದಾಗಿದ್ದು ಇಂದಿಗೆ 354 ವರುಷಗಳ ಹಿಂದೆ. ಬದುಕಿರುವಾಗಲೇ ವೃಂದಾವನ ಪ್ರವೇಶ ಮಾಡಿದ ಕೆಲವೇ ಮಹನೀಯರಲ್ಲಿ ಶ್ರೀ ರಾಘವೇಂದ್ರ ತೀರ್ಥರೂ ಒಬ್ಬರು. 

ಅವರ ಬೃಂದಾವನದಲ್ಲಿ 732 ಸಾಲಿಗ್ರಾಮಗಳೂ, ಅನೇಕ ದೇವತಾ ಮೂರ್ತಿಗಳೂ ಇವೆ. ಆ ಬೃಂದಾವನಕ್ಕೆ ಒಂದು ಪ್ರದಕ್ಷಿಣೆ ಬಂದರೆ ಒಂದು ಸಾವಿರ ಪ್ರದಕ್ಷಿಣೆಯ ಫಲ ಉಂಟು ಎನ್ನುವುದು ಸುಮ್ಮನೆ  ಹೇಳುವ ಮಾತಲ್ಲ. 

*****

ಸನ್ಯಾಸ ಪಡೆಯುವುದಕ್ಕೆ ಮೊದಲು, ಗೃಹಸ್ಥರಾಗಿದ್ದಾಗ ವೆಂಕಟನಾಥರು ಅತ್ಯಂತ ಬಡತನದಿಂದ ಬಳಲಿದರು. ವಾರಕ್ಕೆ ಮೂರು-ನಾಲ್ಕು ಏಕಾದಶಿ ಮಾಡುತ್ತಿದ್ದಾರೆಂದು ಹೇಳುತ್ತಾರೆ. ಆದರೂ ಒಬ್ಬರಲ್ಲಿ ಒಂದು ಹಿಡಿ ಧಾನ್ಯವನ್ನೂ ಬೇಡಲಿಲ್ಲ. ತಾವಾಗಿ ಕೊಡಲು ಬಂದ ದಾನಿಗಳನ್ನೂ, ದತ್ತಿಗಳನ್ನೂ ನಿರಾಕರಿಸಿದರು. ಅವರು ಅದ್ವಿತೀಯ ವೀಣಾವಾದಕರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಆಸ್ಥಾನ ವಿದ್ವಾಂಸರಾಗಿದ್ದ ಕನಕಾಚಲ ಭಟ್ಟರ ಮೊಮ್ಮಗ. ಸಾಮ್ರಾಟರಿಗೆ ವೀಣಾ ಗುರುಗಳಾಗಿದ್ದ ತಿಮ್ಮಣ್ಣ ಭಟ್ಟರ ಮಗ. ಅದೊಂದು ವಿದ್ಯೆಯಿಂದಲೇ ಸಿರಿವಂತರಾಗಿ ಮೆರೆಯಬಹುದಿತ್ತು. ವೈರಾಗ್ಯ ಮೂರ್ತಿಗಳಾಗಿ ಸಾಧನೆ, ವಿದ್ಯೆ, ಪಾಠ-ಪ್ರವಚನಗಳಿಗೆ ಜೀವನ ಮೀಸಲಿಟ್ಟರು. ಅನೇಕ ಅಮೂಲ್ಯ ಗ್ರಂಥಗಳನ್ನು ರಚಿಸಿದರು. 

ಈಗ ಪ್ರತಿದಿನ ಅವರ ವೃಂದಾವನಗಳಿರುವ ಸ್ಥಳಗಳಲ್ಲಿ ಲಕ್ಷ ಲಕ್ಷ ಮಂದಿ ಪ್ರಸಾದ ಪಡೆಯುತ್ತಾರೆ. ಅವರ ಆರಾಧನೆಯ ದಿನಗಳಲ್ಲಿ ಲಕ್ಷೋಪಲಕ್ಷ ಮಂದಿ ಮೃಷ್ಟಾನ್ನ ಸೇವಿಸುತ್ತಾರೆ. ವಿದೇಶಗಳಲ್ಲೂ ಆರಾಧನೆ ಉತ್ಸವಗಳು ವೈಭವದಿಂದ ನಡೆಯುತ್ತವೆ. ಸಾಲುಗಳಲ್ಲಿ ನಿಂತು ಜನರು ಸೇವೆಗೆ ಹಣನೀಡಲು ಹಾತೊರೆಯುತ್ತಾರೆ. ಅಮೆರಿಕಾದಂತಹ ದೇಶಗಳಲ್ಲಿ ಆರಾಧನೆಯ ದಿನದ ಊಟದ ಸರತಿಯ ಸಾಲು ನೋಡಿದರೆ ಇದು ಮನದಟ್ಟಾಗುತ್ತದೆ. 

ಅವರಿಗೆ ಆದ ತಾಯಿ ಶಾರದೆಯ ಅನುಗ್ರಹದ ವಿಚಾರವನ್ನು ಮತ್ತೊಂದು ದಿನ ನೋಡೋಣ. 

Tuesday, July 22, 2025

ಏಕಾದಶಿ ಮತ್ತು ರುಕ್ಮಾ೦ಗದ ಮಹಾರಾಜ


ಹಿಂದಿನ ಒಂದು ಸಂಚಿಕೆಯಲ್ಲಿ "ಶಯನೀ ಏಕಾದಶಿ" ಮತ್ತು ಚಾತುರ್ಮಾಸ ಕಾಲದ ಸಂಗತಿಗಳ ಪ್ರಸ್ತಾಪವಾಗಿತ್ತು. ಏಕಾದಶಿಯ ವ್ರತವೆಂದರೆ ಏನು? ಅದರ ಪೂರ್ಣ ಆಚರಣೆ ಹೇಗೆ ಮಾಡಬೇಕು ಮುಂತಾದುವನ್ನು ಸಂಕ್ಷಿಪ್ತವಾಗಿ ನೋಡಿದೆವು. "ಏಕಾದಶಿಯ ದಿನ ಹಾಲು ಹಣ್ಣು ಸೇವಿಸಿ" ಎಂದು ಪುರಾಣದಲ್ಲಿ ಹೇಳಿದುದರ ಕೊನೆಯ ಭಾಗ ಮಾತ್ರ ಕೇಳಿ, ಅದರಂತೆ ಆಚರಿಸಲು ಪ್ರಯತ್ನಿಸಿ, ಶ್ರೀ ಮುಕುಂದರಾಯರು ಪಟ್ಟ ಬವಣೆಯನ್ನು ಅದೇ ಹೆಸರಿನ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಮಾರನೆಯ ದಿನ ಹಿರಿಯರೊಬ್ಬರ ನೆರವಿನಿಂದ ಮುಕುಂದರಾಯರಿಗೆ ಸರಿಯಾದ ವಿಷಯಗಳು ತಿಳಿದು ಪುರಾಣೀಕರು ಹೇಳಿದ್ದ ಹಾಲು "ಭಗವದ್ಗೀತೆ" ಮತ್ತು ಹಣ್ಣು "ಶ್ರೀಮದ್ ಭಾಗವತ" ಎಂದು ಅಥವಾಯಿತು. ಇದಕ್ಕೆ ಕಾರಣಗಳನ್ನು ಕೂಡ "ಗೀತೆ ಎಂಬ ಹಾಲು; ಭಾಗವತವೆಂಬ ಹಣ್ಣು" ಎನ್ನುವ ಸಂಚಿಕೆಯಲ್ಲಿ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.   

ಏಕಾದಶಿಯ ಸಂದರ್ಭದಲ್ಲಿ ನೆನೆಯಲೇಬೇಕಾದ ಎರಡು ಹೆಸರುಗಳು "ರುಕ್ಮಾ೦ಗದ  ಮಹಾರಾಜ" ಮತ್ತು "ಅಂಬರೀಶ ಮಹಾರಾಜ". ಏಕಾದಶಿ ವ್ರತದ ಆಚರಣೆಗೆ ಹೆಸರಾಗಿ, ಅನೇಕ ಕಷ್ಟಗಳನ್ನು ಅನುಭವಿಸಿದರೂ ವ್ರತವನ್ನು ಬಿಡದೇ ಶಾಶ್ವತ ಕೀರ್ತಿಯನ್ನು ಸಂಪಾದಿಸಿದವರು ಇವರಿಬ್ಬರು. 

ಓದುಗರೊಬ್ಬರು ಇವರ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ರುಕ್ಮಾ೦ಗದ ಮಹಾರಾಜನ ವಿಷಯವನ್ನು ಸಂಕ್ಷಿಪ್ತವಾಗಿ ಈಗ ನೋಡೋಣ. 
*****

ಇಕ್ಷ್ವಾಕು ಮಹಾರಾಜನ ವಂಶದ ರಾಜಾ ಋತುಧ್ವಜನ ಮಗ ರುಕ್ಮಾ೦ಗದ ಮಹಾರಾಜ. ಈತನು ವಿದಿಶಾ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಶಾಲ ಸಾಮ್ರಾಜ್ಯವನ್ನು ಆಳುತ್ತಿದ್ದನು. ಬಹಳ ಧರ್ಮಾತ್ಮನಾದ ರಾಜನೆಂದು ಕೀರ್ತಿ ಸಂಪಾದಿಸಿದ್ದನು. ಅವನಿಗೆ ಸಂಧ್ಯಾವಳೀ ಎನ್ನುವ ಹೆಸರಿನ ಹೆಂಡತಿಯಿದ್ದಳು. ಅವಳೂ ಬಹಳ ಯೋಗ್ಯಳಾಗಿ ಪ್ರಜೆಗಳ ಪ್ರೀತಿ ಸಂಪಾದಿಸಿದ್ದಳು. ರುಕ್ಮಾ೦ಗದ ಮಹಾರಾಜನ ರಾಜ್ಯದಲ್ಲಿ ಶಾಂತಿ, ಸುಭಿಕ್ಷಗಳು ನೆಲೆಸಿ ಅದೊಂದು ಸ್ವರ್ಗದಂತೆ ಭಾಸವಾಗುತ್ತಿತ್ತು. 

ರುಕ್ಮಾ೦ಗದ ಮಹಾರಾಜನು ಪ್ರತಿ ದಶಮಿಯ ದಿನ ಆನೆಗಳ ಮೇಲೆ ನಗಾರಿ ಬಾರಿಸುವವರನ್ನು ಬೀದಿ  ಬೀದಿಗಳಿಗೆ ಕಳಿಸಿ ಏಕಾದಶಿ ವ್ರತದ ಬಗ್ಗೆ ಜನಗಳಿಗೆ ಎಚ್ಚರಿಸುತ್ತಿದ್ದನು. ಅವನ ರಾಜ್ಯದಲ್ಲಿ ಏಕಾದಶಿ ವ್ರತ ಮಾಡದಿದ್ದರೆ ಅದು ಒಂದು ಅಪರಾಧವಾಗಿತ್ತು. ಎಂಟು ವರ್ಷ ದಾಟಿದ ಮತ್ತು ಎಂಭತ್ತು ವರುಷ ಒಳಗಿನ ಎಲ್ಲ ಜನರೂ ಏಕಾದಶಿ ವ್ರತ ಮಾಡುವುದು ಕಡ್ಡಾಯವಾಗಿತ್ತು. ಹೀಗೆ ಪ್ರಾರಂಭವಾದ ಏಕಾದಶಿ ವ್ರತ ಕ್ರಮೇಣ ಜನಜೀವನದ ಒಂದು ಅಂಗವೇ ಆಯಿತು. ಕೆಲಕಾಲದ ನಂತರ ಜನರು ಸ್ವಯಂ ಪ್ರೇರಿತರಾಗಿ ಏಕಾದಶಿ ವ್ರತ ಮಾಡಲು ಪ್ರಾರಂಭಿಸಿದರು. 

ಈ ರೀತಿ ಪ್ರಜೆಗಳೆಲ್ಲರೂ ಏಕಾದಶಿ ವ್ರತ ಮಾಡುತ್ತಿದ್ದ ಕಾರಣ ಪಾಪ ಕರ್ಮಗಳು ಮಾಡುವರು ಇಲ್ಲವಾಗಿ ನರಕ ವಾಸ ಅನುಭವಿಸುವ ಜನರೇ  ಕಾಣದಾದರು. ನರಕದಲ್ಲಿ ಬಂದು ಬೀಳುವ ಜನರು ಕಡಿಮೆ ಆದ ಕಾರಣ ನರಕದಲ್ಲಿರುವ ಉದ್ಯೋಗಿಗಳಿಗೆ ಕೆಲಸವೇ ಇಲ್ಲವಾಯಿತು. ಯಮಧರ್ಮನಿಗೆ ನಿರುದ್ಯೋಗ ಸೃಷ್ಟಿಯಾದಂತೆ ಆಯಿತು. ಹೀಗೆ ಒಂದು ಸ್ಥಿತಿ ಬಂದುದರ ಕಾರಣ ಯಮಧರ್ಮನು ವಿಧಿಯಿಲ್ಲದೇ ಚತುರ್ಮುಖ ಬ್ರಹ್ಮನನ್ನು ಕಂಡು ಪರಿಹಾರ ಕೇಳಲು ಸತ್ಯಲೋಕಕ್ಕೆ ಹೋದನು. 

***** 

ಯಮನ ಪೇಚಾಟವನ್ನು ಕಂಡು ಚತುರ್ಮುಖನು "ಜನಗಳು ನ್ಯಾಯವಾದ ರೀತಿಯಲ್ಲಿ ಬಾಳಿ ಧರ್ಮಿಷ್ಠರಾಗುವಂತೆ ಮಾಡುವುದು ರಾಜನ ಕರ್ತವ್ಯ. ರುಕ್ಮಾ೦ಗದನು ನ್ಯಾಯವನ್ನೇ ಮಾಡುತ್ತಿರುವುದರಿಂದ ಅವನದು ಏನೂ ಅಪರಾಧವಿಲ್ಲ. ನಿನ್ನ ಪರಿಸ್ಥಿತಿಗೆ ಏನೂ ಪರಿಹಾರವಿಲ್ಲ" ಎಂದುಬಿಟ್ಟನು. ಅದಲ್ಲದೆ ಈ ರೀತಿ ಹೇಳಿದನು:

ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮೋ 
ದಶಾಶ್ವಮೇಧಾವಭೃತೇನ ತುಲ್ಯ:
ದಶಾಶ್ವಮೇಧೀ ಪುನರೇಪಿಜನ್ಮ 
ಕೃಷ್ಣಪ್ರಣಾಮೀ ನ ಪುನರ್ಭವಾಯ 

"ಒಮ್ಮೆ ಶ್ರೀಕೃಷ್ಣನಿಗೆ ಸರಿಯಾಗಿ ನಮಸ್ಕಾರ ಮಾಡಿದ ಮನುಷ್ಯನ ಪುಣ್ಯವು ಹತ್ತು ಅಶ್ವಮೇಧ ಯಾಗಗಳನ್ನು ಪೂರೈಸಿ ಯಜ್ಞದ ಅವಭೃತ ಸ್ನಾನ ಮಾಡಿದವನಿಗೆ (ಯಜ್ಞ-ಯಾಗಗಳ ಪೂರ್ಣವಾಯಿರುವ ಸಂದರ್ಭದಲ್ಲಿ ಮಾಡುವ ಮಂಗಳ ಸ್ನಾನ) ಬಂದ  ಪುಣ್ಯದಷ್ಟಾಗುತ್ತದೆ. ಇದಲ್ಲದೆ ಹತ್ತು ಅಶ್ವಮೇಧ ಯಾಗ ಮಾಡಿದವನು ಆ ಪುಣ್ಯ ಸಂಪತ್ತು ಅನುಭವಿಸಿ ಕಳೆದ ಮೇಲೆ ಮತ್ತೆ ಹುಟ್ಟಬೇಕು. ಆದರೆ ಶ್ರೀಕೃಷ್ಣನಿಗೆ ಒಂದು ಸಾರಿ ಸರಿಯಾಗಿ ನಮಸ್ಕರಿಸಿದವನು ಮತ್ತೆ ಹುಟ್ಟುವ ಪ್ರಮೇಯವೇ ಬರುವುದಿಲ್ಲ". 

ಯಮಧರ್ಮನು ಈ ಉತ್ತರ ಕೇಳಿ ಏನೂ ತೋಚದೆ ನಿಂತಿರಲು, ಚತುರ್ಮುಖನು ನಕ್ಕು ಒಂದು ಅಪೂರ್ವ ಲಾವಣ್ಯವತಿಯಾದ ಸ್ತ್ರೀರೂಪವನ್ನು ಸೃಷ್ಟಿಸಿದನು. ಆ ರೂಪಕ್ಕೆ ಜೀವ ಕೊಟ್ಟು ಎಲ್ಲರನ್ನೂ ತನ್ನನ್ನು ಕಂಡು ಮೋಹಗೊಳ್ಳುವಂತೆ ಮಾಡಬಲ್ಲವಳಾದುದರಿಂದ ಅವಳಿಗೆ "ಮೋಹಿನಿ" ಎಂದು ಹೆಸರಿಟ್ಟನು. ಆ ಮೋಹಿನಿಯನ್ನು ಕರೆದು ಅವಳಿಗೆ "ರುಕ್ಮಾ೦ಗದನು ನಿನ್ನನ್ನು ಮೋಹಿಸಿ ಮದುವೆಯಾಗುವಂತೆ ಒಪ್ಪಿಸು. ನಂತರ ಹೀಗೆ ಮದುವೆಯಾಗುವ ಸಂದರ್ಭದಲ್ಲಿ ನೀನು ಕೇಳಿದ ಕೋರಿಕೆಯನ್ನು ನಡೆಸಿಕೊಡುವ ವಚನವನ್ನು ಅವನಿಂದ ಪಡೆದುಕೋ. ವಿವಾಹದ ನಂತರ ಅವನಿಂದ ಏಕಾದಶಿ ವ್ರತವನ್ನು ನಿಲ್ಲಿಸುವಂತೆ ಮಾಡು" ಎಂದು ಆಜ್ಞಾಪಿಸಿದನು. 

***** 

ಇತ್ತ ಕಡೆ ರುಕ್ಮಾ೦ಗದ ಮತ್ತು ಸಂಧ್ಯಾವಳೀ ದಂಪತಿಗಳಿಗೆ 'ಧರ್ಮಾಂಗದ" ಎನ್ನುವ ಹೆಸರಿನ ಮಗನಿದ್ದನು. ಅವನು ಪ್ರಾಪ್ತ ವಯಸ್ಕನಾಗಿ ತನ್ನ ತಂದೆ-ತಾಯಿಯರಿಗೆ ಒಪ್ಪುವಂತೆ ಅತ್ಯಂತ ಯೋಗ್ಯನಾದ ಯುವರಾಜನಾದನು. ತಂದೆಗಿಂತಲೂ ಪರಾಕ್ರಮಿಯಾಗಿ ಸುತ್ತ-ಮುತ್ತಲ ಶತ್ರುಗಳನ್ನೆಲ್ಲ ನಿರ್ಮೂಲಮಾಡಿ ರಾಜ್ಯದ ಮೇರೆಗಳನ್ನು ಇನ್ನೂ ವಿಸ್ತಾರ ಮಾಡಿದನು. ಅನೇಕ ರೀತಿಯ ಧನ-ಸಂಪತ್ತುಗಳನ್ನು ಸಂಗ್ರಹಿಸಿ ತಂದೆಗೆ ತಂದು ಒಪ್ಪಿಸಿದನು. ಅತ್ಯಂತ ಜನಪ್ರಿಯನಾದ ಅವನಿಗೆ ರುಕ್ಮಾ೦ಗದನು  ರಾಜ್ಯಭಾರವನ್ನು ಒಪ್ಪಿಸಿ ತೀರ್ಥಯಾತ್ರೆಗೆಂದು ಹೊರಟನು. 

ಹೀಗೆ ಸಂಚರಿಸುತ್ತಿರುವಾಗ ಮೇರು ಪರ್ವತದ ಸನಿಹದಲ್ಲಿ ಇಂಪಾದ ಗಾನವನ್ನು ಕೇಳಿ ಅದರ ಗಾಯಕಿಯನ್ನು ಅರಸುತ್ತಾ ಬಂದು ಮೋಹಿನಿಯನ್ನು ಕಂಡನು. ಅವಳಲ್ಲಿ ಅನುರಾಗಗೊಂಡು ಮದುವೆಯಾಗಲು ಕೇಳಿಕೊಂಡನು. ಮೋಹಿನಿಯೂ ಒಪ್ಪಿ ತಾನು ಕೇಳಿದ ವರವನ್ನು ಕೊಡುವುದಾದರೆ ವಿವಾಹವಾಗಲು ಸಮ್ಮತಿಸಿದಳು. ಮುಂದೆ ಎಂದಾದರೂ ವರವನ್ನು ಕೇಳುವುದಾಗಿ ಹೇಳಿದ ಅವಳನ್ನು ಮದುವೆಯಾಗಿ, ಜೊತೆಯಲ್ಲಿ  ಕರೆದುಕೊಂಡು ರುಕ್ಮಾ೦ಗದನು ವಿದಿಶಾ ನಗರಕ್ಕೆ ಬಂದನು. 

ಮಹಾರಾಣಿ ಸಂಧ್ಯಾವಳೀ, ರಾಜಕುಮಾರ ಧರ್ಮಾಂಗದ ಮತ್ತು ಇತರರು ರುಕ್ಮಾ೦ಗದ ಮತ್ತು ಮೋಹಿನಿಯರನ್ನು ಆದರಪೂರ್ವಕವಾಗಿ ಬರಮಾಡಿಕೊಂಡು ಸತ್ಕರಿಸಿದರು. ಎಂಟು ವರ್ಷಗಳು ಹೀಗೆ ಕಳೆದ ನಂತರ ಮೋಹಿನಿಯು ಒಂದು ಏಕಾದಶಿಯ ಹಿಂದಿನ ದಿನ ತಾನು ಹಿಂದೆ ಕೇಳಿದ ವರವನ್ನು ಬೇಡಿದಳು. ರುಕ್ಮಾ೦ಗದನು ಏಕದಾಶಿಯ ವ್ರತದ ಮೂರು ದಿನಗಳ ಕಾಲ ಮೋಹಿನಿಯನ್ನು ಬಿಟ್ಟಿರುತ್ತಿದುದರಿಂದ, ಅವಳಿಗೆ ಅವನನ್ನು ಬಿಟ್ಟಿರಲು ಕಷ್ಟವಾಗುವುದರಿಂದ, ಏಕಾದಶಿ ವ್ರತವನ್ನು ನಿಲ್ಲಿಸಬೇಕೆಂದು ಕೇಳಿದಳು. ರುಕ್ಮಾ೦ಗದನು ಇದಕ್ಕೆ ಒಪ್ಪಲಿಲ್ಲ. 

ಕೊಟ್ಟ ಮಾತು ತಪ್ಪಿದನೆಂದು ಮೋಹಿನಿಯು ಪ್ರತಿಭಟಿಸಲು ಸಂಧ್ಯಾವಳಿಯು ಮಧ್ಯೆ ಪ್ರವೇಶಿಸಿ ಏಕಾದಶಿ ವ್ರತ ನಿಲ್ಲಿಸುವ ಬದಲು ಮತ್ತೆ ಯಾವುದಾದರೂ ಬದಲಿ ವರವನ್ನು ಕೇಳಿಕೊಳ್ಳುವಂತೆ ಮೋಹಿನಿಯನ್ನು ಪ್ರಾರ್ಥಿಸಿದಳು. ಮೋಹಿನಿಯು ಹಾಗಿದ್ದರೆ ಮಹಾರಾಜನು ತನ್ನ ಕೈಯಾರೆ ರಾಜಕುಮಾರನಾದ ಧರ್ಮಾಂಗದನ ತಲೆಯನ್ನು ಖಡ್ಗದಿಂದ ಕತ್ತರಿಸಿ ಅವನ ತಲೆಯನ್ನು ತಂದು ಕೊಡಲು ಕೇಳಿದಳು. 

ಬಹಳ ದುರ್ಭರವಾದ ಈ ವರವನ್ನು ಕೊಡುವಂತೆ, ತಾಯಿಯಾಗಿ ಸಂಕಟ ಪಡುತ್ತಿದ್ದರೂ, ಹಿಂದೆ-ಮುಂದೆ ನೋಡದೆ, ಸಂಧ್ಯಾವಳಿಯು ಮಹಾರಾಜನನ್ನು ಕೋರಿದಳು. ಧರ್ಮಾಂಗದನನ್ನು ಕರೆಸಿದರು. ಅವನು ಸ್ವಲ್ಪವೂ ವಿಚಲಿತನಾಗದೆ "ತಂದೆಯು ಕೊಟ್ಟ ಮಾತಿಗೆ ತಪ್ಪಬಾರದು. ಏಕಾದಶಿ ವ್ರತವೂ ಕೆಡಬಾರದು. ಈ ತುಚ್ಛ ಜೀವನ ಹೋಗಿ ಇವೆರಡೂ ಸಾಧ್ಯವಾಗುವುದಾದರೆ ಸಂತೋಷವಾಗಿ ಸಾವು ಸ್ವೀಕರಿಸುತ್ತೇನೆ" ಎಂದನು. 

ರುಕ್ಮಾ೦ಗದನು ಧರ್ಮಾಂಗದನ ಕತ್ತು ಕತ್ತರಿಸಲು ಖಡ್ಗವನ್ನು ತೆಗೆದುಕೊಂಡು ಬೀಸಿದನು. ಆಗ ಮಹಾವಿಷ್ಣುವು ಪ್ರತ್ಯಕ್ಷನಾಗಿ ರುಕ್ಮಾ೦ಗದ, ಸಂಧ್ಯಾವಳೀ ಮತ್ತು ಧರ್ಮಾಂಗದ, ಈ ಮೂವರಿಗೂ ಪರಮಪದವನ್ನು ಕರುಣಿಸಿ ಜೊತೆಯಲ್ಲಿ ಕರೆದೊಯ್ದನು. 

***** 

ರುಕ್ಮಾ೦ಗದ ಚರಿತ್ರೆಯು ನಮ್ಮ ವಿಶಾಲ ವೈದಿಕ ವಾಂಗ್ಮಯದಲ್ಲಿ ಅಲ್ಲಲ್ಲಿ ಬರುತ್ತದೆ. ನಾರದ ಪುರಾಣದಲ್ಲಿ (ನಾರದೀಯ ಪುರಾಣ) ಇದರ ವಿಸ್ತಾರವಾದ ವಿವರಗಳಿವೆ. ಮೇಲೆ ಕಾಣಿಸಿರುವ ಚಿತ್ರವೂ ಇದರ ಆಧಾರದ ಮೇಲೆ "ರಾಜಾ ರವಿವರ್ಮ" ರಚಿಸಿರುವ ಚಿತ್ರ. 

ಮೇಲೆ ಹೇಳಿದ ಕಥೆಯನ್ನು ತಿಳಿಯುವಾಗ ಯಮಧರ್ಮನಿಗೆ ಕಷ್ಟವಾಯಿತೆಂದೂ, ಅವನು ಬಂದಾಗ ಚತುರ್ಮುಖ ಬ್ರಹ್ಮದೇವರಿಗೆ ಏನೂ ಮಾಡಲು ತೋಚಲಿಲ್ಲವೆಂದೂ ತಿಳಿಯಬಾರದು. ಸಿನಿಮಾಗಳಲ್ಲಿ ಅವರನ್ನು ದುರುಳ ಖಳನಾಯಕರನ್ನು ತೋರಿಸುವಂತೆ ಮನರಂಜನೆಗಾಗಿ ಚಿತ್ರಿಸುತ್ತಾರೆ. ರುಕ್ಮಾ೦ಗದ, ಸಂಧ್ಯಾವಳೀ ಮತ್ತು ಧರ್ಮಾಂಗದರ ವ್ರತನಿಷ್ಠೆ ಮತ್ತು ಧರ್ಮಪರಾಯಣತೆ ಪರೀಕ್ಷಿಸಲು ಹೀಗೆ ಮಾಡಿದರು ಎಂದು ತಿಳಿಯಬೇಕು. 

ಮೇಲೆ ಹೇಳಿದ "ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮ: ......" ಎನ್ನುವ ಶ್ಲೋಕವನ್ನು ಅನೇಕರು ಷೋಡಶೋಪಚಾರ ಪೂಜೆಯ ಅಂಗವಾಗಿ ಕಡೆಯಲ್ಲಿ ನಮಸ್ಕಾರ ಮಾಡುವಾಗ ಮತ್ತು ಸ್ತೋತ್ರಾದಿಗಳ ಕೊನೆಯಲ್ಲಿ, ದೇವಾಲಯಗಳಲ್ಲಿ ನಮಸ್ಕರಿಸುವಾಗ ಮುಂತಾಗಿ ಹೇಳುವ ಶ್ಲೋಕಗಳ ಜೊತೆಯಲ್ಲಿ ಹೇಳುತ್ತಾರೆ. ಆದರೆ ಅನೇಕರಿಗೆ ಇದರ ಮೂಲ "ನಾರದೀಯ ಪುರಾಣ"ದ ಉತ್ತರ ಭಾಗದ ಆರನೆಯ ಅಧ್ಯಾಯದಲ್ಲಿದೆ ಎಂದು ಗೊತ್ತಿಲ್ಲ. ಇದು ಆರನೆಯ ಅಧ್ಯಾಯದ ಮೂರನೆಯ ಶ್ಲೋಕ. 

*****

ಮತ್ತೊಬ್ಬ ಏಕಾದಶಿ ವ್ರತ ದುರಂಧರನಾದ ಅಂಬರೀಷ ಮಹಾರಾಜನ ವೃತ್ತಾಂತವನ್ನು ಮುಂದೆ ಎಂದಾದರೂ ನೋಡೋಣ. 

Monday, May 19, 2025

ಕೊಡುವವರಿಬ್ಬರು; ತೆಗೆಯುವವನೊಬ್ಬ


ಮಕ್ಕಳಿಗೆ ತಾಯಿ-ತಂದೆಯರು ಎರಡು ಕಣ್ಣುಗಳಿದ್ದಂತೆ. ತಮ್ಮ ತಮ್ಮ ಜೀವನದಲ್ಲಿ ತಾಯಿ-ತಂದೆಯರ ಪಾತ್ರದ ಪ್ರಾಮುಖ್ಯತೆ ಅವರ ನೆರಳಿನಲ್ಲಿ ಬೆಳೆದವರನ್ನು ಕೇಳಿದರೆ ಸರಿಯಾಗಿ ಗೊತ್ತಾಗುವುದಿಲ್ಲ. ಇವರಿಬ್ಬರಲ್ಲಿ ಯಾರೋ ಒಬ್ಬರಿಲ್ಲದೆ ಕೇವಲ ಒಬ್ಬರ (ತಾಯಿ ಅಥವಾ ತಂದೆ) ಆಶ್ರಯದಲ್ಲಿ ಬೆಳೆದವರಿಗೆ ಅರ್ಧದಷ್ಟು ಗೊತ್ತಿದ್ದೀತು. ಇಬ್ಬರನ್ನೂ ಕಳೆದುಕೊಂಡು ಮತ್ಯಾರೋ ಬೇರೊಬ್ಬರ ಸಹಾಯದಿಂದ ಅಥವಾ ನಿರಾಶ್ರಿತರಾಗಿ ಬೆಳೆದವರಿಗೆ ಪ್ರಾಯಶಃ ಇದರ ಪೂರ್ತಿ ಸತ್ಯ ಗೊತ್ತಿರಬಹುದು. ಜೀವನದಲ್ಲಿ  ಮೊದಲಿನಿಂದಲೂ ಇರುವ ಪದಾರ್ಥಗಳಿಗೆ ಅಥವಾ ಸುಲಭವಾಗಿ ಸಿಕ್ಕಿದ ವಸ್ತುಗಳಿಗೆ ನಾವು ಹೆಚ್ಚು ಬೆಲೆ ಕೊಡುವುದಿಲ್ಲ. ಬಹಳ ಕಷ್ಟ ಪಟ್ಟು ಸಂಪಾದಿಸಿದ ಪದಾರ್ಥಗಳಿಗೆ ನೀಡುವ ಗಮನವನ್ನು ಅದಾಗಿಯೇ ಬಂದಿದ್ದ ಸಂಪತ್ತುಗಳಿಗೆ ಕೊಡದಿರುವುದು ಒಂದು ಮಾನವ ಸಹಜ ವಿಪರ್ಯಾಸ. 

ಮಕ್ಕಳ ಜೀವನದಲ್ಲಿ ತಾಯಿ ಹೆಚ್ಚೋ ಅಥವಾ ತಂದೆ ಹೆಚ್ಚೋ ಎಂದು ಚರ್ಚಿಸುವುದು ನ್ಯಾಯವೇ? ಸೃಷ್ಟಿಯಲ್ಲಿ ಇಬ್ಬರಿಗೂ ಅವರದೇ ಆದ ಪಾತ್ರಗಳಿವೆ. ಇದು ಹಿಂದಿದ್ದಂತೆ ಇಂದೂ ಇದೆ. ಸಮಾಜದ ದೃಷ್ಟಿಯಲ್ಲಿ ಅವರು ನಿರ್ವಹಿಸುತ್ತಿದ್ದ ಹೊಣೆಗಾರಿಕೆ ಕಾಲಕ್ರಮದಲ್ಲಿ ಬದಲಾಗಿದೆ. ಗಂಡಸು ಹೊರಗೆ ದುಡಿದು ಸಂಪಾದಿಸುವುದು, ಹೆಂಗಸು ಮನೆ-ಮಕ್ಕಳನ್ನು ಸಂಭಾಳಿಸುವುದು, ಹೀಗೆ ಇದ್ದ ವ್ಯವಸ್ಥೆ ಬಹಳ ಬದಲಾಗಿದೆ. ಈಗ ಹೆಣ್ಣುಮಕ್ಕಳು ಸಮ-ಸಮವಾಗಿ ಹೊರಗೆ ದುಡಿದು ಸಂಪಾಡಿಸುವುದು ಎಲ್ಲೆಲ್ಲೂ ಕಂಡುಬರುವ ವಿಷಯ. ಗಂಡಸರೂ ಮನೆವಾರ್ತೆಯಲ್ಲಿ ಭಾಗವಹಿಸುವುದೂ ಕಂಡು ಬರುತ್ತದೆ. ಒಟ್ಟಿನಲ್ಲಿ ಕುಟುಂಬದಲ್ಲಿ ಒಂದು ಸಮತೋಲನದ ಅವಶ್ಯಕತೆ ಉಂಟು. ಅದಿದ್ದರೆ ಎಲ್ಲವೂ ಸುಸೂತ್ರ. 

ಸಮಾಜ ಬದಲಾಗಿದ್ದರೂ, ತಂದೆ-ತಾಯಿಗಳು ನಿರ್ವಹಿಸುತ್ತಿದ್ದ ಪಾತ್ರಗಳ ಲಯದಲ್ಲಿ ಬದಲಾವಣೆ ಕಂಡುಬಂದರೂ, ಗಂಡಸರು ಮಕ್ಕಳನ್ನು ಹೆರುವ ಕಾಲ ಇನ್ನೂ ಬಂದಿಲ್ಲ. ವಿಜ್ಞಾನದಲ್ಲಿ ಎಷ್ಟು ಪ್ರಗತಿ ಸಾಧಿಸಿದರೂ, ಪ್ರನಾಳ ಶಿಶು ಎಂದು ಹೇಳಿದರೂ, ಕೇವಲ ಪ್ರನಾಳದಲ್ಲಿ ಪೂರ್ಣ ಪ್ರಮಾಣದ ಮಗು ಬೆಳೆದು ಹುಟ್ಟಿರುವುದು ಇನ್ನೂ ಕಾಣದು. ಮಹಾವಿಷ್ಣುವಿನ ನಾಭೀಕಮಲದ ಶಿಶು ಚತುರ್ಮುಖ ಬ್ರಹ್ಮನಂತೆ ಹುಟ್ಟಿದವರನ್ನು ನಾವು ಕಣ್ಣಾರೆ ಕಾಣೆವು. ಈ ಕಾರಣದಿಂದ ಮಕ್ಕಳಿಗೆ ಮತ್ತು ತಾಯಿಗೆ ಒಂದು ವಿಶೇಷ ಸಂಬಂಧವುಂಟು. ನಾಲ್ಕೈದು ವರುಷ ಆಗುವವರೆಗಾದರೂ ಮಕ್ಕಳು ತಾಯಿಗೆ ಅಂಟಿಕೊಂಡೇ ಇರುತ್ತಾರೆ. ಅಮ್ಮನ ಬಳಿ ಇರುವ ಸದರ-ಸಲುಗೆಗಳು ಅಪ್ಪನ ಬಳಿ ಇರುವುದಿಲ್ಲ. ಅದು ಕರುಳ ಸಂಬಂಧ. ಪದಗಳಲ್ಲಿ ವಿವರಿಸಲಾಗದು. 

*****

ತನ್ನ ಮಕ್ಕಳು ಯೋಗ್ಯರಾಗಿ ಬೆಳೆಯಲಿ, ಚೆನ್ನಾಗಿ ಬಾಳಲಿ ಎಂದು ತಾಯಿಯು ಅನೇಕ ವೇಳೆ ಮಕ್ಕಳ ವಿಷಯದಲ್ಲಿ ಗಡುಸಾಗಿ ವರ್ತಿಸುವುದೂ ಉಂಟು. ಆದರೆ ಸಾಮಾನ್ಯವಾಗಿ ಅದು ತೋರಿಕೆಯ ಗಡಸುತನ. ಮಕ್ಕಳ ವಿಷಯದಲ್ಲಿ ಹೀಗೆ ಗಟ್ಟಿಯಾಗಿ ಕಾಣಿಸುವಾಗ, ಕೆಲವೊಮ್ಮೆ ಶಿಕ್ಷಿಸುವಾಗ, ಅವಳು ನಿರ್ದಯಿ ಎನಿಸಿದರೂ ವಾಸ್ತವವಾಗಿ ಅವಳು ದಯಾಮಯಿಯೇ. ಈ ಕಾರಣಕ್ಕಾಗಿ "ತಾಯಿ  ಕರುಳು" ಎನ್ನುವ ಪದಪ್ರಯೋಗ ಅಲ್ಲಲ್ಲಿ ಕಾಣಿಸುವುದು. ತಂದೆಯು ತನ್ನ ಮಕ್ಕಳ ಬಳಿ ಗಡುಸಾಗಿ ವರ್ತಿಸುವುದು ನಿರೀಕ್ಷಿತವಾದರೂ, ತಾಯಿಯಂತೆಯೇ ಕರುಣಿಯಾಗಿರುವುದೂ ಅಪರೂಪವೇನಲ್ಲ. ಕೆಲವು ತಂದೆಯರಂತೂ ತಾಯಿಗಿಂತಲೂ ಮೆತುವಾಗಿ ಮಕ್ಕಳ ಬಳಿ ವ್ಯವಹರಿಸುವುದನ್ನೂ ಅಲ್ಲಲ್ಲಿ ಕಾಣಬಹುದು. ಈ ಕಾರಣಕ್ಕಾಗಿ "ಅವನದು ಹೆಂಗರುಳು" ಎನ್ನುವ ಪದಪ್ರಯೋಗ ಒಮ್ಮೊಮ್ಮೆ ಕಾಣಬರುವುದು. 

ಭಕ್ತ-ಭಗವಂತನ ವ್ಯವಹಾರವೂ ಹೀಗೆಯೇ. ಭಕ್ತನು ಎಷ್ಟು ಗಟ್ಟಿಯಾಗಿ ನಿಲ್ಲುತ್ತಾನೆ ಎನ್ನುವುದನ್ನು ಪರೀಕ್ಷಿಸಲು ಅನೇಕ ಕಷ್ಟ-ಕಾರ್ಪಣ್ಯಗಳನ್ನು ತಂದೊಡ್ಡಿದರೂ ಪರಮಾತ್ಮನು ವಾಸ್ತವವಾಗಿ ಅತ್ಯಂತ ಕರುಣಾಶಾಲಿಯೇ. ಇಲ್ಲದಿದ್ದರೆ ನಾವು ಪ್ರತಿನಿತ್ಯ ಮಾಡುವ ಅಸಂಖ್ಯ ತಪ್ಪುಗಳಿಗೆ ಅವನು ಶಿಕ್ಷಿಸುತ್ತಾ ಹೋದರೆ ಅದಕ್ಕೆ ಕೊನೆಯೆಲ್ಲಿ? ಅವನ ಅನೇಕ ರೂಪಗಳಲ್ಲಿ ಭಕ್ತನು ತನಗೆ ಬೇಕಾದುದನ್ನು ಆರಿಸಿಕೊಂಡು ಆರಾಧಿಸುತ್ತಾನೆ. ಎಲ್ಲಿ ಬೇಡಿದರೆ ತನಗೆ ಬೇಕಾದುದು ಸುಲಭವಾಗಿ ಸಿಗಬಹುದು ಎಂದು ಲೆಕ್ಕ ಹಾಕುತ್ತಾನೆ. "ನನಗೆ ಎಂದೂ ಏನೂ ಬೇಡ. ಅವನು ಪ್ರೀತನಾದರೆ ಸಾಕು" ಎನ್ನುವ ನಿಶ್ಚಲ, ನಿಷ್ಕಾಮರಾದ ಹನುಮಂತನಂತಹ ಭಕ್ತರು ಅಪರೂಪವೇ. 

ಹೀಗೆ ಆರಾಧಿಸಿ ವರಗಳನ್ನು ಬೇಡುವ ಭಕ್ತರು ಯಾರನ್ನು ಆಶ್ರಯಿಸುತ್ತಾರೆ? ಯಾರ ಬಳಿ ಬೇಡುತ್ತಾರೆ? ನಮ್ಮ ಪುರಾಣ-ಪುಣ್ಯಕಥೆಗಳನ್ನು ಗಮನಿಸಿದರೆ ಇದರ ಉತ್ತರ ಬಹು ಸುಲಭ. ವರ ಪಡೆದು ಶಕ್ತಿಶಾಲಿಗಳಾಗಬೇಕು, ಜಗತ್ತನ್ನೇ ತಮ್ಮ ಕಾಲಬುಡದಲ್ಲಿ ಬೀಳಿಸಿಕೊಂಡು ಮೆರೆಯಬೇಕು ಎಂದು ಆಶಿಸುವ ಮಂದಿ ಬಹು ಕಠಿಣ ತಪಸ್ಸುಗಳನ್ನು ಮಾಡುವುದು ಚತುರ್ಮುಖ ಬ್ರಹ್ಮನನ್ನೋ ಅಥವಾ ಶಿವನನ್ನೋ ಕುರಿತೇ. ಅನೇಕ ಉದಾಹರಣೆಗಳಲ್ಲಿ ನಾವು ಕಾಣುವುದು ಇದನ್ನೇ. ಪರಶಿವನದಂತೂ ಭಕ್ತರ ವಿಷಯದಲ್ಲಿ ಅತ್ಯಂತ ಹೆಂಗರುಳು. ಅವನನ್ನು ಆರಾಧಿಸಿ ಮೆಚ್ಚಿಸಿದರೆ ಕೇಳಿದ್ದು ಸಿಗುವುದು ಖಚಿತವೇ. ಬ್ರಹ್ಮನೂ ಹಾಗೆಯೇ. ಇವರಿಬ್ಬರು ಕೇಳಿದ ವರವನ್ನು ಕೊಡುವುದರಲ್ಲಿ ಎತ್ತಿದ ಕೈ. "ಕೊಡುವವರು ಇಬ್ಬರು" ಎಂದರೆ ಈ ಇಬ್ಬರು ಹಿಂದೆ-ಮುಂದೆ ನೋಡದೆ, ಅನುಮಾನಿಸದೇ "ತಥಾಸ್ತು" ಅನ್ನುವವರು. 

*****

ಈ ರೀತಿ ಕೇಳಿದ ವರಗಳನ್ನು ಕೊಡುವ ಹೆಂಗರುಳು ಇರುವುದು ಒಳ್ಳೆಯದೇ. ಆದರೆ ಮನಸ್ಸಿನಲ್ಲಿ ದುರಾಸೆ ಇಟ್ಟುಕೊಂಡು, ಕಠಿಣ ಸಾಧನೆಗಳನ್ನು ಮಾಡಿ, ಮೆಚ್ಚಿಸಿ, ವರಪಡೆದು, ನಂತರ ಆ ಭಕ್ತರು ಲೋಕಕಂಟಕರಾದರೆ ಹೇಗೆ? ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಭಸ್ಮಾಸುರ, ಹಿರಣ್ಯಾಕ್ಷ, ಹಿರಣ್ಯ ಕಷಿಪು, ರಾವಣ, ಮುಂತಾದವರ ದೊಡ್ಡ ಪಟ್ಟಿಯೇ ಉಂಟು. ತನ್ನ ಪರಮ ಭಕ್ತನಾದ ರಾವಣನು ತಪಸ್ಸು ಮಾಡಿ ಮೆಚ್ಚಿಸಿದಾಗ, ಪಾರ್ವತಿ-ಪರಮೇಶ್ವರರು ಎದುರು ಬಂದು ನಿಂತಾಗ, ಪಾರ್ವತಿಯನ್ನು ಕಂಡ ರಾವಣನು ತಪಸ್ಸು ಮಾಡಿದ ಮೂಲ ಕಾರಣವನ್ನೇ ಮರೆತು ಜಗದ೦ಬೆಯನ್ನೇ  ಬೇಡಿದಾಗ ಪರಶಿವನು  ಕೊಟ್ಟೇಬಿಟ್ಟಿದ್ದನ್ನು "ಭೂ ಕೈಲಾಸ" ಪ್ರಸಂಗದಲ್ಲಿ ನೋಡಿದ್ದೇವೆ. ಹಿರಣ್ಯನು ಬ್ರಹ್ಮನ ಮುಂದೆ ಏನೆಲ್ಲಾ ನಿಬಂಧನೆಗಳನ್ನು ಹಾಕಿದ! ಅದಾಗಬಾರದು, ಇದಾಗಬಾರದು ಎಂದು ನೂರೆಂಟು ಕೇಳುವುದರ ಜೊತೆಗೇ "ನಿನ್ನ ಸೃಷ್ಟಿಯಲ್ಲಿನ ಯಾರಿಂದಲೂ, ಯಾವುದರಿಂದಲೂ ಸಾವು ಬರಬಾರದು" ಎಂದು ಕೇಳಿದರೂ ಬ್ರಹ್ಮನು "ತಥಾಸ್ತು" ಅಂದೇ ಬಿಟ್ಟ! 

ಒಳ್ಳೆಯವರ ಕೈಯ್ಯಲ್ಲಿ ಇಂತಹ ವರಗಳು ಸಿಕ್ಕಿದರೆ ಲೋಕಕಲ್ಯಾಣ. ದುರುಳರ ಕೈಯ್ಯಲ್ಲಿ ಅದೇ ವರಗಳು ಲೋಕಕಂಟಕ. ಮೂರು ಲೋಕಗಳ ಸಮಸ್ತ ಜೀವರಾಶಿಯೂ "ತ್ರಾಹಿ, ತ್ರಾಹಿ!" ಎಂದು ಅಂಗಲಾಚುವ ಪರಿಸ್ಥಿತಿ. ಕಡೆಗೆ ಕೆಲವರು ವರ ಕೊಟ್ಟವರನ್ನೇ ಅಪಹಾಸ್ಯ ಮಾಡಿದ್ದೂ ಇದೆ. ವರದ ಯೋಗ್ಯತೆಯನ್ನು ಅವರ ಮೇಲೆಯೇ ಪರೀಕ್ಷಿಸಲು ಹೋದದ್ದೂ ಉಂಟು. ಆಗ ಎ೦ತಹ ಪೇಚಿನ ಪ್ರಸಂಗಗಳು ಬಂದವು! ಅಂತಹ ವಿಪರೀತ ಸಂದರ್ಭಗಳಲ್ಲಿ ಆರ್ತರು ಮಹಾವಿಷ್ಣುವಿನ ಮೊರೆಹೊಕ್ಕು ಅವನಿಂದ ಈ ದುರುರುಳರ ಕೊನೆಯಾಗಿ ಜಗತ್ತು ನಿಟ್ಟುಸಿರು ಬಿಡುವಂತೆ ನಡೆದಿರುವುದೂ ಉಂಟು. ಆದ್ದರಿಂದ ಅವನು "ತೆಗೆಯುವವನೊಬ್ಬ". 

*****

ಮಹಾತ್ಮರಾದ ಭಕ್ತಶ್ರೇಷ್ಠ ಕನಕದಾಸರು ಈ ಮೇಲಿನ ಚರ್ಚೆಯನ್ನೆಲ್ಲ ಭಟ್ಟಿ ಇಳಿಸಿ ತಮ್ಮ "ಹರಿಭಕ್ತಿಸಾರ" ಕೃತಿಯ 28ನೆಯ ಪದ್ಯದಲ್ಲಿ ಹೀಗೆ ಹೇಳಿದ್ದಾರೆ:  

ಹಗೆಯರಿಗೆ ವರವೀವರಿಬ್ಬರು 
ತೆಗೆಯಲರಿಯರು ಕೊಟ್ಟವರಗಳ 
ತೆಗೆದುಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ 
ಸುಗುಣರಿನ್ನಾರುಂಟು ಕದನವ 
ಬಗೆದು ನಿನ್ನೊಳು ಜಯಸುವವರೀ 
ಜಗದೊಳು೦ಟೀ ದೇವ ರಕ್ಷಿಸು ನಮ್ಮನನವರತ 

ವರವ ಪಡೆದಾಗ ಅವರು ಭಕ್ತರೇ. ಆದರೆ ಕೇಳಿದ್ದು ಸಿಕ್ಕ ತಕ್ಷಣ ಅವರ ಆಸುರೀಶಕ್ತಿ ಜಾಗೃತವಾಯಿತು. ಮೂಲ ಗುಣ ಹೊರಗೆ ಬಂತು. ಆದರೆ ಕಾಲ ಮಿಂಚಿತ್ತು. ಶ್ರೀಹರಿಯು ಮಧ್ಯೆ ಪ್ರವೇಶಿಸಿ ಇಂತಹ ಕಗ್ಗಂಟು ಪರಿಸ್ಥಿತಿಗಳಿಂದ ಬಿಡಿಸಿ ಪಾರುಮಾಡಿದನು ಎನ್ನುವುದನ್ನು ಶ್ರೀ ಕನಕದಾಸರು ಸೊಗಸಾಗಿ ವಿವರಿಸಿದ್ದಾರೆ.

***** 

ಶ್ರೀ ಕನಕದಾಸರ ಕೃತಿಗಳಲ್ಲಿ ಅನೇಕ ಕಾವ್ಯ ಗುಣಗಳೂ, ರಸಘಟ್ಟಗಳೂ ತುಂಬಿವೆ. ಅವರ ಕೃತಿಗಳ ಅಧ್ಯಯನದಿಂದ ನಮ್ಮ ಜ್ಞಾನದ ಹರವು ವಿಸ್ತಾರವಾಗುವ ಜೊತೆಗೆ ಕಾವ್ಯ ರಸಾಸ್ವಾದನೆಯೂ ಆಗುತ್ತದೆ.