Showing posts with label maruti. Show all posts
Showing posts with label maruti. Show all posts

Monday, August 11, 2025

ದೊಡ್ಡವರ ಶಾಪಗಳೆಂಬ ವರಗಳು


ಹಿಂದಿನ ಸಂಚಿಕೆಯಲ್ಲಿ "ಸೋರಿಹೋಗುವ ನೀರಿನಂತೆ" ಎನ್ನುವ ಶೀರ್ಷಿಕೆಯಡಿ ಶಾಪಗಳ ಕಾರಣಗಳನ್ನೂ ಮತ್ತು ಅವುಗಳ ಪರಿಣಾಮಗಳನ್ನೂ ಸ್ವಲ್ಪ ನೋಡಿದೆವು. (ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು). ಅನೇಕ ವೇಳೆ ಶಾಪಗಳು ದೊಡ್ಡ ರೀತಿಯ ವರಗಳೇ ಆಗಿ ರೂಪಾಂತರವಾಗುವ ಕಥೆಗಳನ್ನು ಕೇಳಿದ್ದೇವೆ. ಶ್ರೀ ರಾಘವೇಂದ್ರ ಸ್ವಾಮಿಗಳ 354 ವರ್ಷದ ಆರಾಧನೆಯ ಸಂದರ್ಭದಲ್ಲಿ ಅವರ ಅವತಾರದ ಬಗ್ಗೆ ಇರುವ ಶಾಪದ ಸಂಗತಿ ನೆನೆಸಿಕೊಳ್ಳುವುದು ಯೋಗ್ಯವೇ. ಆ ಶಾಪವು ಹೇಗೆ ಅನೇಕರಿಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಸ್ವಲ್ಪ ಮಟ್ಟಿಗೆ ನೋಡೋಣ. 

"ಕ್ರೋಧೋಪಿ ದೇವಸ್ಯ ವರೇಣ ತುಲ್ಯ:" ಎಂದು ಒಂದು ಸಂಸ್ಕೃತದ ಹೇಳಿಕೆಯಿದೆ. ಕನ್ನಡದ ಗಾದೆಯಂತೆ. ಮಹಾಭಾರತದ ಶಾಂತಿ ಪರ್ವದ ಸಂದರ್ಭದಲ್ಲಿ ಇದರ ವಿಸ್ತಾರ ಸಿಗುತ್ತದೆ. ಇದರ ಸಂಕ್ಷಿಪ್ತ ಅರ್ಥ "ದೊಡ್ಡವರ ಕೋಪವೂ ವರಕ್ಕೆ ಸಮವು. ಅವರ ಕೋಪವೂ ಮಾನ್ಯವೇ!" ಎಂದು. ಒಬ್ಬರು ಇನ್ನೊಬ್ಬರನ್ನು  ಕಂಡಾಗ ಮೂರು ರೀತಿಗಳಲ್ಲಿ ಪ್ರತಿಕ್ರಯಿಸಬಹುದು. ಮೊದಲನೆಯದು ಉದಾಸೀನತೆ. ನೋಡಿಯೂ ನೋಡದಂತೆ ವ್ಯವಹರಿಸುವುದು. ಇದರಿಂದ ಏನೂ ಪ್ರಯೋಜನವಿಲ್ಲ. ಅದು ನೋವಿನ ಸಂಗತಿಯೇ. ಎರಡನೆಯದು ಸಂತೋಷದಿಂದ ನೋಡುವುದು. ಇದು ಬೇಕಾದದ್ದು. ಮೂರನೆಯದು ಕೋಪದಿಂದ ಗದರಿಸುವುದು ಇತ್ಯಾದಿ. ಇದರಲ್ಲಿ ಪ್ರೀತಿಯಿಲ್ಲದಿದ್ದರೂ ಉದಾಸೀನತೆ ಇಲ್ಲ. ನೋಡಿಯೂ ನೋಡದಿರುವಂತೆ ಇರುವುದಕ್ಕಿಂತ ಇದು ವಾಸಿ! ದೊಡ್ಡವರು ಹುಸಿ ಕೋಪದಿಂದ ಗದರಿಸಿದಂತೆ ಮಾಡಿದರೂ ಅವರು ನಮ್ಮನ್ನು ಗಮನಿದರಲ್ಲಾ, ಅಷ್ಟು ಸಾಕು ಎನ್ನುವ ಸಮಾಧಾನ. ಅದೇ ನಮ್ಮ ಭಾಗ್ಯೋದಯಕ್ಕೆ ದಾರಿ ಮಾಡುತ್ತದೆ ಎನ್ನುವ ಬಲವಾದ ನಂಬಿಕೆ. 

ಗುರುರಾಯ ಶ್ರೀ ರಾಘವೇಂದ್ರ ಸ್ವಾಮಿಗಳ ಅವತಾರವೂ ಈ ರೀತಿಯ ದೊಡ್ಡವರ ಒಂದು ಕೋಪದಿಂದಾದ ಶಾಪರೂಪಿ ವರದ ಪ್ರಭಾವ ಎಂದು ಅವರನ್ನು ನಂಬಿದ ಜನ ತಿಳಿಯುತ್ತಾರೆ.  

*****

ಚತುರ್ಮುಖ ಬ್ರಹ್ಮದೇವರೂ ಪ್ರತಿದಿನ ದೇವತಾರ್ಚನೆ ಮಾಡುತ್ತಾರಂತೆ. ಅದು ಮಾಡುವುದು ಒಂದು ತಪ್ಪಿಸಬಾರದ ಕರ್ತವ್ಯವೆಂದು ಎಲ್ಲರಿಗೆ ತೋರಿಸುವ ಸಲುವಾಗಿ. ಅವರು ಪ್ರತಿಕ್ಷಣ ಮಾಡುವುದೂ ಅದನ್ನೇ ಎನ್ನುವುದು ಬೇರೆ ಮಾತು. ಆದರೆ ದಿನಚರಿಯಲ್ಲಿ ಅದೂ ಒಂದು ಕಟ್ಟಲೆ. ಅವರ ಅಪ್ಪ-ಅಮ್ಮನಾದ ಲಕ್ಷ್ಮೀ-ನಾರಾಯಣರ ಅತಿ ದಿವ್ಯವಾದ ಪೂಜೆ-ಪುನಸ್ಕಾರಗಳು. ಅವರ ದೇವರಪೂಜೆ ಅಂದರೆ ಸಾಮಾನ್ಯವಲ್ಲ. ನಮ್ಮಂತೆ ಮನಸ್ಸು ಒಂದು ಕಡೆ, ಮಾತು ಇನ್ನೊಂದರ ಕುರಿತು, ದೇಹ ಮಾತ್ರ ಪೂಜೆಯಲ್ಲಿ. ಹೀಗಲ್ಲ. ಆದ್ದರಿಂದ ಅವರ ಪೂಜೆಯಲ್ಲಿ ಇನ್ನಿಲ್ಲದ ಸೊಗಸು. ಅವರು "ಕೇಶವಾಯ ನಮಃ" ಎಂದರೆ ಕೇಶವರೂಪಿ ಪರಮಾತ್ಮನು ಎದುರು ನಿಂತು ನಗೆಮೊಗದಿಂದ ಸ್ವೀಕರಿಸುತ್ತಾನಂತೆ. ಮತ್ತೆ "ನಾರಾಯಣಾಯ ನಮಃ" ಎಂದರೆ ನಾರಾಯಣ ರೂಪದಲ್ಲಿ ಬಂದು ನಿಲ್ಲುವನು. "ಮತ್ಸ್ಯಾಯ ನಮಃ" ಅಂದರೆ ಮತ್ಸ್ಯರೂಪಿ ಪರಮಾತ್ಮ ಹಾಜರು. "ಕೂರ್ಮಾಯ ನಮಃ" ಎಂದರೆ ಕೂರ್ಮರೂಪದಲ್ಲಿ.  ಹೀಗೆ ಉದ್ದಕ್ಕೂ.  ಅದನ್ನು ನೆನೆಸಿಕೊಂಡರೇ ಅದೊಂದು ದಿವ್ಯವಾದ ಅನುಭವ. 

ಶ್ರೀಮಠಗಳ ಆಸ್ಥಾನ ಪೂಜೆ ವ್ಯವಸ್ಥೆ ಅವನ್ನು ನೋಡಿದವರಿಗೆ ಗೊತ್ತು. ಮಠದ ಶ್ರೀಗಳು ಪೂಜಾದಿಗಳನ್ನು ಮಾಡುವಾಗ ಅವರ ಸಹಾಯಕರಾಗಿ ಶಿಷ್ಯರಿರುತ್ತಾರೆ. ಕಾಲಕಾಲಕ್ಕೆ ತಕ್ಕಂತೆ ಪೂಜಾಸಾಮಗ್ರಿಗಳನ್ನು ಒದಗಿಸಿ ಕೊಡುವುದು ಅವರ ಕೆಲಸ. ಹೂವುಗಳು, ಹಣ್ಣುಗಳು, ಧೂಪ, ದೀಪ ಇತ್ಯಾದಿಗಳು ಅವರು ಕೈ ನೀಡಿದಾಗ ಸಮಯಕ್ಕೆ ಅನುಗುಣವಾಗಿ ಸಿಗಬೇಕು. ಮಂಗಳಾರತಿಯೇ ಒಂದು ಹದಿನೈದು-ಇಪ್ಪತ್ತು ರೀತಿಯವು. ಸಣ್ಣ ತಟ್ಟೆಯಲ್ಲಿ, ದೊಡ್ಡ ತಟ್ಟೆಯಲ್ಲಿ, ಹಲಗಾರತಿ, ಕುಂಭಾರತಿ, ಏಕಾರತಿ, ಅನೇಕಾರತಿ, ಹೀಗೆ ವೈವಿಧ್ಯಪೂರ್ಣ ಮಾದರಿಗಳು. ಎಲ್ಲವೂ ಸರಿಯಾಗಿ ತಯಾರಿರಬೇಕು. ಪೂಜೆ ಎಲ್ಲೂ ಮಧ್ಯೆ ತಡವರಿಸದಂತೆ ಸಾಂಗವಾಗಿ ನಡೆಯಬೇಕು. ಇದು ಒಂದು ಕಟ್ಟುನಿಟ್ಟಾದ ಕ್ರಮ. 

ಚತುರ್ಮುಖ ಬಹ್ಮದೇವರಿಗೆ ಹೀಗೆ ಪೂಜಾಸಮಯದಲ್ಲಿ ಸಹಾಯಕನಾಗಿರುವುದು "ಶಂಖುಕರ್ಣ" ಎಂಬ ಒಬ್ಬ ಕರ್ಮಜದೇವತೆಯ ಕೆಲಸ. ಕಾಲಕಾಲಕ್ಕೆ ಹೂವು ತುಂಬಿದ ತಟ್ಟೆಗಳನ್ನು ಕೈಗೆ ಕೊಡುವುದು ಅದರಲ್ಲಿ ಒಂದು. ಒಂದು ಹರಿವಾಣ ಅರ್ಪಿಸಿ ಬರಿದಾದಂತೆ ಅದನ್ನು ಹಿಂತೆಗೆದುಕೊಂಡು ಹೂವು ತುಂಬಿದ ಮತ್ತೊಂದನ್ನು ತಕ್ಷಣ ಕೊಡಬೇಕು. ಗಮನವೆಲ್ಲ ಇದರ ಮೇಲೆಯೇ ಇರಬೇಕು. ಒಂದು ಕ್ಷಣವೂ ತಪ್ಪಬಾರದು. ಹೀಗೆಯೇ ನಡೆಯಬೇಕು. 

ಒಂದು ದಿನ ಹೀಗೆ ಪೂಜಾಸಮಯದಲ್ಲಿ ಮತ್ಸ್ಯ, ಕೂರ್ಮರ ನಂತರ ವರಾಹರೂಪಿ ಪರಮಾತ್ಮನ ಸ್ಮರಣೆ ಬಂತು. ಅಚ್ಚ ಬಿಳಿಯ ಬಣ್ಣದ "ಶ್ವೇತ ವರಾಹಮೂರ್ತಿ" ಮೈದೋರಿದ. ಆ ಮೂರ್ತಿಯ ದಿವ್ಯ ಸುಂದರ ರೂಪ ನೋಡುತ್ತಾ ಶಂಖುಕರ್ಣ ಮೈಮರೆತ. ಬ್ರಹ್ಮದೇವರು ಕೈ ನೀಡಿದಾಗ ಹೂವು ತುಂಬಿದ ತಟ್ಟೆಯ ಬದಲು ಪಕ್ಕದಲ್ಲಿದ್ದ ಖಾಲಿ ತಟ್ಟೆ ಸಿಕ್ಕಿತು. ಬ್ರಹ್ಮದೇವರು ನೋಡಿದರೆ ಕೈಯಲ್ಲಿ ಖಾಲಿ ತಟ್ಟೆ! ದೊಡ್ಡ ಅಪಚಾರ. ಥಟ್ಟೆ೦ದು ಶಂಖುಕರ್ಣನನ್ನು ನೋಡಿ "ನೀನು ಭೂಲೋಕದಲ್ಲಿ ಅನೇಕ ಜನ್ಮಗಳನ್ನು ತಾಳು" ಎಂದು ಶಪಿಸಿಬಿಟ್ಟರು. 
*****

ಶಪಿಸುವ ಕ್ರಿಯೆಯೆನೋ ನಡೆದುಹೋಯಿತು. ಪಕ್ಕದಲ್ಲಿ ಸಂಗೀತ, ನೃತ್ಯಸೇವೆಗಳಿಗೆ ತಯಾರಾಗಿ ನಿಂತಿದ್ದ ತಾಯಿ ಶಾರದೆ ಇದನ್ನು ಕಂಡಳು. 

"ಇದೇನು! ಹೀಗೆ ಶಪಿಸಿಬಿಟ್ಟಿರಿ?"
"ಅಪಚಾರ ಆಗಲಿಲ್ಲವೇ? ಪರಿಣಾಮ ಅನುಭವಿಸಲೇಬೇಕಲ್ಲ"
"ಪರಮಾತ್ಮನ ದಿವ್ಯ ಮಂಗಳ ಮೂರ್ತಿಯನ್ನು ಕಣ್ಣಾರೆ ಕಂಡು ಮೈ ಮರೆಯದವರು ಯಾರುಂಟು? ಅದಕ್ಕೆ ಹೀಗೆ ಶಾಪ ಕೊಡುವುದೇ?"
"ಕೊಟ್ಟವನು ನಾನಲ್ಲ. ಕೊಡಿಸಿದವನು ಅವನೇ. ಎಲ್ಲರಿಗೂ ಅಪ್ಪನಾದ ನಮ್ಮಪ್ಪ"
"ಶಂಕುಕರ್ಣನ ಮುಂದಿನ ಹಾದಿ?"
"ಅವನಿಗೆ ಈ ಶಾಪವೇ ವರವಾಗುತ್ತದೆ. ಮುಂದೆ ಹಾಗೆ ಜನ್ಮ ತಾಳಿದಾಗ ನರಸಿಂಹ-ರಾಮ-ಕೃಷ್ಣರ ಅಖಂಡ ದರ್ಶನ ಆಗುತ್ತದೆ. ಇನ್ನಿಲ್ಲದಷ್ಟು ಪುಣ್ಯ ಸಂಪಾದನೆಗೆ ಇದೊಂದು ದಾರಿಯಾಗುತ್ತದೆ"
"ಆಮೇಲೆ?"
"ಅಷ್ಟೇ ಅಲ್ಲ. ಅವನ ಅನುಯಾಯಿಗಳಿಗೂ ಬಹುಪರಿಯ ಅನುಗ್ರಹಗಳಾಗುತ್ತವೆ. ನಿನ್ನ ಅನುಗ್ರಹವಂತೂ ಈಗಲೇ ಆಗಿದೆಯಲ್ಲ!"

ಈ ಶಾಪದ ಪರಿಣಾಮವಾಗಿ ಮುಂದೆ ಶಂಖುಕರ್ಣನು ಹಿರಣ್ಯಕಶಿಪು-ಕಯಾದು ದಂಪತಿಗಳ ಮಗನಾದ ಪ್ರಹ್ಲಾದನಾಗಿ ಹುಟ್ಟುತ್ತಾನೆ. ನಂತರ ಕನ್ನಡ ರಾಜ್ಯರಮಾರಮಣ ಶ್ರೀ ಕೃಷ್ಣದೇವರಾಯನ ರಾಜುಗುರು "ವ್ಯಾಸತೀರ್ಥ", ನಂತರ ಗುರು "ರಾಘವೇಂದ್ರ ತೀರ್ಥ" ಆಗಿ ಬರುತ್ತಾರೆ. ಹೀಗೆ ಅವರನ್ನು ನಂಬಿದವರು ಆರಾಧಿಸುತ್ತಾರೆ. ಕ್ರಮವಾಗಿ ನರಸಿಂಹ-ಶ್ರೀಕೃಷ್ಣ-ಮೂಲರಾಮರ ಆರಾಧಕರಾಗಿ, ನಂಬಿದವರ ನೆರವಿಗೆ ನಿಲ್ಲುತ್ತಾರೆ. 
*****

ವೀಣಾ ವೆಂಕಟನಾಥ ಭಟ್ಟರು ಗುರುಗಳಾದ ಶ್ರೀ ಸುದೀಂಧ್ರ ತೀರ್ಥರಿಂದ ಸನ್ಯಾಸ ತೆಗೆದುಕೊಂಡು "ಶ್ರೀ ರಾಘವೇಂದ್ರ ತೀರ್ಥ" ಹೆಸರಿನಿಂದ ಪ್ರಖ್ಯಾತರಾದರು. ಒಂದು ಸಂದರ್ಭದಲ್ಲಿ ವಿದ್ಯೆಯ ಅವಕಾಶವೇ ಇಲ್ಲದ ವೆಂಕಣ್ಣನೆಂಬ ಯುವಕನೊಬ್ಬನಿಗೆ ಅವರ ಅನುಗ್ರಹವಾಗಿ, ಆದವಾನಿ ನವಾಬ ಸಿದ್ದಿ ಮಸೂದ್ ಖಾನ್ ಆಪ್ತನಾಗಿ ಸಂಸ್ಥಾನದ ದಿವಾನನಾದನು. ನವಾಬನು ಒಮ್ಮೆ ಗುರುಗಳನ್ನು ಪರೀಕ್ಷಿಸಲು ಹೋಗಿ ಪಶ್ಚಾತಾಪ ಪಟ್ಟನು. ಅವರಿಗೆ ಏನಾದರೂ ಕೊಡಬೇಕು, ಆ ಮೂಲಕ ತಪ್ಪು ಸರಿಮಾಡಿಕೊಳ್ಳಬೇಕೆಂದು ಆಸೆಪಟ್ಟನು. ರಾಯರು ತಮಗೆ ಏನೂ ಬೇಡವೆಂದರು. ಕಡೆಗೆ ನವಾಬನ ಅನೇಕ ಮನವಿಗಳ ನಂತರ "ಮಂಚಾಲೆ" ಎನ್ನುವ ಗ್ರಾಮವನ್ನು ಕೊಡಲು ಹೇಳಿದರು. ನವಾಬನು "ಅದೊಂದು ಕುಗ್ರಾಮ. ಅದರ ಬದಲು ಬೇರೆ ಕೇಳಿ" ಎಂದನು. ಗುರುಗಳು "ಕೊಡುವುದಿದ್ದರೆ ಅದು ಕೊಡಿ. ಇಲ್ಲದಿದ್ದರೆ ಬೇರೆ ಏನೂ ಬೇಡ" ಎಂದುಬಿಟ್ಟರು. 

ಕಡೆಗೆ ಮಂಚಾಲೆ ಗ್ರಾಮ ಸಿಕ್ಕಿತು. ರಾಯರು ವೆಂಕಣ್ಣನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತುಂಗಾನದಿ ತೀರದ ಸ್ಥಳವೊಂದನ್ನು ತೋರಿಸಿ ಅಲ್ಲಿ ಅಗೆಸಲು ಹೇಳಿದರು. ಹಾಗೆ ಅಗೆದಾಗ ಅಲ್ಲಿನ ಭೂಮಿಯಲ್ಲಿ ಬಹಳ ಹಿಂದಿನ ಹೋಮಕುಂಡಗಳ ಅವಶೇಷಗಳು ಸಿಕ್ಕಿದವು. "ಇವು ಹಿಂದೆ ಪ್ರಹ್ಲಾದರಾಜರು ಯಾಗಗಳನ್ನು ಮಾಡಿದ ಸ್ಥಳ. ನಾವು ಇಲ್ಲಿಯೇ ವೃಂದಾವನ ಪ್ರವೇಶ ಮಾಡುತ್ತೇವೆ" ಎಂದರು. 

ಒಲ್ಲದ ಮನಸ್ಸಿನಿಂದ ವೆಂಕಣ್ಣನು ಒಂದು ಸುಂದರವಾದ ವೃಂದಾವನವನ್ನು ಮಾಡಿಸಿ ಗುರುಗಳಿಗೆ ತೋರಿಸಿದನು. ರಾಯರು ನಕ್ಕು, ವೆಂಕಣ್ಣನನ್ನು ಮಾದಾವರ ಎಂಬ ಗ್ರಾಮಕ್ಕೆ ಕರೆದುಕೊಂಡು ಹೋದರು. (ಈಗಲೂ ಮಂತ್ರಾಲಯಂ ರೋಡ್ ರೈಲು ನಿಲ್ದಾಣದಿಂದ ಮಂತ್ರಾಲಯಕ್ಕೆ ಹೋಗುವ ದಾರಿಯಲ್ಲಿ ಈ ಗ್ರಾಮವಿದೆ). ಅಲ್ಲಿ ಕೆರೆಯ ದಂಡೆಯ ಶಿಲೆಯೊಂದನ್ನು ತೋರಿಸಿದರು. "ಶ್ರೀರಾಮಚಂದ್ರ ದೇವರು ಕಿಷ್ಕಿಂಧೆಯ ಕಡೆ ಬಂದಿದ್ದಾಗ ಇಲ್ಲಿ ಬಂದು ಈ ಶಿಲೆಯ ಮೇಲೆ ಸ್ವಲ್ಪ ಕಾಲ ಕುಳಿತಿದ್ದರು. ಈ ಶಿಲೆಯಲ್ಲಿ ಒಂದು ಮಾರುತಿಯ ವಿಗ್ರಹ ಮಾಡಿಸಿ. ಮಿಕ್ಕಿದ ಶಿಲೆಯಲ್ಲಿಯೇ ನಮ್ಮ ವೃಂದಾವನ ಆಗಬೇಕು" ಎಂದು ಆದೇಶಿಸಿದರು. (ಮಾರುತಿಯ ವಿಗ್ರಹವನ್ನು ಶ್ರೀ ರಾಯರ ಬೃಂದಾವನದ ಮುಂದೆ ಈಗಲೂ ಕಾಣಬಹುದು). 

ವೆಂಕಣ್ಣನಿಗೆ ಸಂಕೋಚವಾಯಿತು. ಈಗ ಮಾಡಿಸಿರುವ ವೃಂದಾವನ ಏನು ಮಾಡುವುದು ಎಂಬ ಯೋಚನೆ. "ಚಿಂತಿಸಬೇಡಿ. ಮುಂದೆ ನಮ್ಮ ಪೀಠದಲ್ಲಿ ಬರುವವರೊಬ್ಬರು ಅದನ್ನು ಉಪಯೋಗಿಸುತ್ತಾರೆ" ಎಂದರು. (ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನದ ಪಕ್ಕದಲ್ಲೇ, ಅದೇ ರೀತಿ ಇರುವ ಭವ್ಯ ಶ್ರೀ ವಾದೀಂದ್ರ ತೀರ್ಥರ ವೃನ್ದಾವನವೇ ಅದು). ತಮ್ಮ ತೀರ್ಮಾನದಂತೆ ಶ್ರಾವಣ ಬಹುಳ ಬಿದಿಗೆಯಂದು ಶ್ರೀ ರಾಯರು ಸಶರೀರವಾಗಿ ವೃಂದಾವನ ಪ್ರವೇಶ ಮಾಡಿದರು. ಅದಾಗಿದ್ದು ಇಂದಿಗೆ 354 ವರುಷಗಳ ಹಿಂದೆ. ಬದುಕಿರುವಾಗಲೇ ವೃಂದಾವನ ಪ್ರವೇಶ ಮಾಡಿದ ಕೆಲವೇ ಮಹನೀಯರಲ್ಲಿ ಶ್ರೀ ರಾಘವೇಂದ್ರ ತೀರ್ಥರೂ ಒಬ್ಬರು. 

ಅವರ ಬೃಂದಾವನದಲ್ಲಿ 732 ಸಾಲಿಗ್ರಾಮಗಳೂ, ಅನೇಕ ದೇವತಾ ಮೂರ್ತಿಗಳೂ ಇವೆ. ಆ ಬೃಂದಾವನಕ್ಕೆ ಒಂದು ಪ್ರದಕ್ಷಿಣೆ ಬಂದರೆ ಒಂದು ಸಾವಿರ ಪ್ರದಕ್ಷಿಣೆಯ ಫಲ ಉಂಟು ಎನ್ನುವುದು ಸುಮ್ಮನೆ  ಹೇಳುವ ಮಾತಲ್ಲ. 

*****

ಸನ್ಯಾಸ ಪಡೆಯುವುದಕ್ಕೆ ಮೊದಲು, ಗೃಹಸ್ಥರಾಗಿದ್ದಾಗ ವೆಂಕಟನಾಥರು ಅತ್ಯಂತ ಬಡತನದಿಂದ ಬಳಲಿದರು. ವಾರಕ್ಕೆ ಮೂರು-ನಾಲ್ಕು ಏಕಾದಶಿ ಮಾಡುತ್ತಿದ್ದಾರೆಂದು ಹೇಳುತ್ತಾರೆ. ಆದರೂ ಒಬ್ಬರಲ್ಲಿ ಒಂದು ಹಿಡಿ ಧಾನ್ಯವನ್ನೂ ಬೇಡಲಿಲ್ಲ. ತಾವಾಗಿ ಕೊಡಲು ಬಂದ ದಾನಿಗಳನ್ನೂ, ದತ್ತಿಗಳನ್ನೂ ನಿರಾಕರಿಸಿದರು. ಅವರು ಅದ್ವಿತೀಯ ವೀಣಾವಾದಕರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಆಸ್ಥಾನ ವಿದ್ವಾಂಸರಾಗಿದ್ದ ಕನಕಾಚಲ ಭಟ್ಟರ ಮೊಮ್ಮಗ. ಸಾಮ್ರಾಟರಿಗೆ ವೀಣಾ ಗುರುಗಳಾಗಿದ್ದ ತಿಮ್ಮಣ್ಣ ಭಟ್ಟರ ಮಗ. ಅದೊಂದು ವಿದ್ಯೆಯಿಂದಲೇ ಸಿರಿವಂತರಾಗಿ ಮೆರೆಯಬಹುದಿತ್ತು. ವೈರಾಗ್ಯ ಮೂರ್ತಿಗಳಾಗಿ ಸಾಧನೆ, ವಿದ್ಯೆ, ಪಾಠ-ಪ್ರವಚನಗಳಿಗೆ ಜೀವನ ಮೀಸಲಿಟ್ಟರು. ಅನೇಕ ಅಮೂಲ್ಯ ಗ್ರಂಥಗಳನ್ನು ರಚಿಸಿದರು. 

ಈಗ ಪ್ರತಿದಿನ ಅವರ ವೃಂದಾವನಗಳಿರುವ ಸ್ಥಳಗಳಲ್ಲಿ ಲಕ್ಷ ಲಕ್ಷ ಮಂದಿ ಪ್ರಸಾದ ಪಡೆಯುತ್ತಾರೆ. ಅವರ ಆರಾಧನೆಯ ದಿನಗಳಲ್ಲಿ ಲಕ್ಷೋಪಲಕ್ಷ ಮಂದಿ ಮೃಷ್ಟಾನ್ನ ಸೇವಿಸುತ್ತಾರೆ. ವಿದೇಶಗಳಲ್ಲೂ ಆರಾಧನೆ ಉತ್ಸವಗಳು ವೈಭವದಿಂದ ನಡೆಯುತ್ತವೆ. ಸಾಲುಗಳಲ್ಲಿ ನಿಂತು ಜನರು ಸೇವೆಗೆ ಹಣನೀಡಲು ಹಾತೊರೆಯುತ್ತಾರೆ. ಅಮೆರಿಕಾದಂತಹ ದೇಶಗಳಲ್ಲಿ ಆರಾಧನೆಯ ದಿನದ ಊಟದ ಸರತಿಯ ಸಾಲು ನೋಡಿದರೆ ಇದು ಮನದಟ್ಟಾಗುತ್ತದೆ. 

ಅವರಿಗೆ ಆದ ತಾಯಿ ಶಾರದೆಯ ಅನುಗ್ರಹದ ವಿಚಾರವನ್ನು ಮತ್ತೊಂದು ದಿನ ನೋಡೋಣ.