Sunday, September 14, 2025

ಸರಸ್ವತಿ ದೇವಿಯ ರಂಗಮಂದಿರ


ಒಂದು ತಿಂಗಳ ಹಿಂದೆ, ಶ್ರೀ ರಾಘವೇಂದ್ರ ಸ್ವಾಮಿಗಳ 354ನೆಯ ವರುಷದ ಆರಾಧನೆಯ ಸಂದರ್ಭದಲ್ಲಿ, "ದೊಡ್ಡವರ ಶಾಪಗಳೆಂಬ ವರಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ, ಶಂಕುಕರ್ಣ ಎಂಬ ಕರ್ಮಜದೇವತೆಗೆ ಚತುರ್ಮುಖ ಬ್ರಹ್ಮದೇವರು ಕೊಟ್ಟ ಶಾಪವು ಅನೇಕರಿಗೆ ಹೇಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಸಂಕ್ಷೇಪವಾಗಿ ನೋಡಿದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಇಂತಹ ವಿಷಯಗಳಲ್ಲಿ ಕೆಲವೊಂದು ಕಣ್ಣಿಗೆ ಕಾಣುವ, ಪಂಚೇಂದ್ರಿಯಗಳಿಂದ ತಿಳಿಯುವ ಸತ್ಯಗಳು. ಇನ್ನು ಅನೇಕವು ಅವರವರ ನಂಬಿಕೆಯಿಂದ ಒಪ್ಪುವ, ಸ್ವಾನುಭವ ಮತ್ತು ಪರಾನುಭವದಿಂದ ಅರಿಯುವ ಸಂಗತಿಗಳು.  

ಈ ಸಂಚಿಕೆಯ ಒಂದು ಭಾಗದಲ್ಲಿ ಶಂಕುಕರ್ಣನಿಗೆ ಸರಸ್ವತಿ ದೇವಿಯ ಅನುಗ್ರಹವಾಗಿ ಮುಂದೆ ಅದು ರೂಪತಾಳಿದ ಸೂಚನೆ ಇತ್ತು. ಅದರ ಸ್ವಲ್ಪ ವಿವರಗಳನ್ನು ಈಗ ನೋಡೋಣ. 

ಶ್ರೀ ರಾಘವೇಂದ್ರ ಸ್ವಾಮಿಗಳೆಂದರೆ "ಕಲಿಯುಗದ ಕಾಮಧೇನು", ಸೇವೆ ಮಾಡಿ ಬೇಡಿದರೆ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಕರುಣಿಸುವವರು ಎಂದು ಬಹಳ ಜನರಿಗೆ ಗೊತ್ತು. ಅವರನ್ನು "ಪರಿಮಳಾಚಾರ್ಯ" ಎಂದೂ ಕರೆಯುತ್ತರೆ ಎಂದು ಕೆಲವರಿಗೆ ಗೊತ್ತು. ಮಂತ್ರಾಲಯದ ಸಿಹಿ ಪ್ರಸಾದವನ್ನು "ಪರಿಮಳ ಪ್ರಸಾದ" ಎಂದು ಕರೆಯುತ್ತಾರೆ ಎನ್ನುವುದು ಅಲ್ಲಿಗೆ ಹೋದ ಅಥವಾ ಪ್ರಸಾದ ಪಡೆದ ಎಲ್ಲರಿಗೂ ಗೊತ್ತು. ಈ "ಪರಿಮಳ" ಅನ್ನುವ ಪದದ ವಿಶೇಷವೇನು?

*****



ಚೆನ್ನಾಗಿ ತಿಳಿದ ವಿದ್ಯಾವಂತರನ್ನು, ವಾಚಾಳಿಗಳನ್ನು "ಸರಸ್ವತಿ ಪುತ್ರ" ಎಂದು ಕರೆಯುವುದು ವಾಡಿಕೆ. "ಅವರ ನಾಲಿಗೆಯ ಮೇಲೆ ಸರಸ್ವತಿಯು ನಲಿಯುತ್ತಾಳೆ, ನಾಟ್ಯವಾಡುತ್ತಾಳೆ" ಎಂದು ಹೇಳುವುದು ಉಂಟು. ಚತುರ್ಮುಖ ಬ್ರಹ್ಮದೇವರ ದೇವತಾರ್ಚನೆಯ ಸಮಯದಲ್ಲಿ ಸರಸ್ವತಿ ದೇವಿಯು ನೃತ್ಯ ಸೇವೆ ಒಪ್ಪಿಸುತ್ತಾಳೆ.  ಹಾಗೆ ನೃತ್ಯ ಮಾಡಲು ಆಕೆಗೆ ಒಂದು ಸರಿಯಾದ "ರಂಗಸ್ಥಳ" ಬೇಕು ಅನ್ನಿಸಿತಂತೆ. ಯಾವುದು ಅಂತಹ ಸರಿಯಾದ ವೇದಿಕೆ ಎಂದು ಹುಡುಕಿದಳಂತೆ. ಮನುಷ್ಯನ ನಾಲಿಗೆ ಎಲ್ಲ ಅಂಗಗಳಲ್ಲಿಯೂ ಹೆಚ್ಚು ಕೆಟ್ಟದು! ಅದು ಸುಮ್ಮನಿರುವುದಿಲ್ಲ. ಯಾವಾಗಲೂ ಏನಾದರೂ ತಿನ್ನುತ್ತಿರಬೇಕು. ಇಲ್ಲದಿದ್ದರೆ ಏನಾದರೂ ಅನ್ನುತ್ತಿರಬೇಕು. ಆದರೆ, ಇಂತಹ ನಾಲಿಗೆಯನ್ನು ಇಟ್ಟುಕೊಂಡಿದ್ದೂ ತಿನ್ನಬಾರದ್ದನ್ನು ತಿನ್ನದೇ, ಅನ್ನಬಾರದ್ದನ್ನು ಅನ್ನದೆ ಇರುವವರು ಬಹಳ ಅಪರೂಪಕ್ಕೆ ಸಿಕ್ಕುತ್ತಾರೆ. ಸರಸ್ವತಿ ದೇವಿಯು ಹೀಗೆ ಒಂದು ಸರಿಯಾದ ನೃತ್ಯ ವೇದಿಕೆ ಹುಡುಕಿದಾಗ ಶ್ರೀ ರಾಘವೇಂದ್ರ ಸ್ವಾಮಿಗಳ ನಾಲಿಗೆ ಕಾಣಿಸಿತು. ಎಂದೂ ಯಾರನ್ನೂ ಕಟು ಮಾತಿನಿಂದ ನೋಯಿಸಿದವರಲ್ಲ. ಇನ್ನೊಬ್ಬರನ್ನು ಏನೂ ಬೇಡಿದವರಲ್ಲ. ಸದಾಚಾರ ಸಂಪನ್ನರು. ಸದಾಕಾಲ ಪಾಠ-ಪ್ರವಚನಗಳಲ್ಲೇ ತಮ್ಮ ಕಾಲ ಕಳೆಯುತ್ತಿರುವವರು. ಆದ್ದರಿಂದ ಇದೇ ಸರಿಯಾದ ರಂಗಸ್ಥಳ ಎಂದು ತೀರ್ಮಾನಿಸಿದಳಂತೆ. 

ನೃತ್ಯ ಪ್ರಾರಂಭವಾಯಿತು. ದೇವಲೋಕದ ಮಂದಾರ, ಪಾರಿಜಾತ ಮುಂತಾದ ದಿವ್ಯ ಪುಷ್ಪಗಳ ದಂಡೆಯನ್ನು ಸರಸ್ವತಿ ದೇವಿಯು ತನ್ನ ತುರುಬಿನಲ್ಲಿ ಮುಡಿದಿದ್ದಳು. ಆನಂದದಿಂದ ನರ್ತಿಸುವಾಗ ಆ ಹೂವಿನ ದಂಡೆಯಿಂದ ಅನೇಕ ಹೂವುಗಳು ಅದುರಿ ಉದುರಿದವಂತೆ. ನೃತ್ಯ ಮುಗಿದ ಮೇಲೆ ಆ ಹೂವುಗಳು ಶ್ರೀ ರಾಯರ ನಾಲಿಗೆಯ ಮೇಲೆ ಉಳಿದವು. ಅವರು ಅವನ್ನೆಲ್ಲ ಸೇರಿಸಿ, ಪೋಣಿಸಿ, ಅವುಗಳ ಸುಗಂಧದ ಕಾರಣ "ಪರಿಮಳ" ಎಂದು ಹೆಸರಿಟ್ಟು ಕೊಟ್ಟರಂತೆ. ಅದೇ "ಪರಿಮಳ" ಎಂಬ ಹೆಸರಿನ ಗ್ರಂಥವಾಯಿತಂತೆ!

ಮಂತ್ರಾಲಯಕ್ಕೆ ಹೋದವರು ಶ್ರೀ ರಾಯರ ವೃಂದಾವನದ ಪಕ್ಕದಲ್ಲಿಯೇ ಇರುವ ಇನ್ನೊಂದು ಭವ್ಯ ವೃಂದಾವನ ನೋಡಿರುತ್ತಾರೆ. ಇದು ಶ್ರೀ ರಾಘವೇಂದ್ರ ತೀರ್ಥರ ನಂತರ ಬಂದ ಐದನೆಯವರಾದ ಶ್ರೀ ವಾದೀಂದ್ರ ತೀರ್ಥರದ್ದು. ಈ ಶ್ರೀ ವಾದೀಂದ್ರ ತೀರ್ಥರು ಶ್ರೀ ರಾಘವೇಂದ್ರರ ಕುರಿತಾಗಿ "ಗುರುಗುಣಸ್ತವನ" ಎನ್ನುವ ಗ್ರಂಥವೊಂದನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಯರ "ಪರಿಮಳ" ಎನ್ನುವ ಗ್ರಂಥದ ರಚನೆಯ ಕುರಿತಾಗಿ "ಧೀರಶ್ರೀ ರಾಘವೇಂದ್ರ ತ್ವದತುಲರಸನಾ ರಂಗನೃತ್ಯ ಸ್ವಯಂಭೂ...." ಎನ್ನುವ ಶ್ಲೋಕದಲ್ಲಿ ಮೇಲಿನಂತೆ ಚಮತ್ಕಾರಿಕವಾಗಿ ವರ್ಣಿಸಿದ್ದಾರೆ. 

ಮಧ್ವ ಸಂಪ್ರದಾಯದಲ್ಲಿ ಆಚಾರ್ಯ ಮಧ್ವರ ಕೃತಿಗಳಿಗೆ ಟೀಕಾಗ್ರಂಥಗಳನ್ನು ಬರೆದವರಲ್ಲಿ ಶ್ರೀ ಜಯತೀರ್ಥರು ಅಗ್ರಗಣ್ಯರು. ಅವರಿಗೆ "ಟೀಕಾಚಾರ್ಯರು" ಎಂದು ಕರೆಯುವುದು ವಾಡಿಕೆ. ಅವರ "ಶ್ರೀಮನ್ ನ್ಯಾಯಸುಧಾ" ಗ್ರಂಥವು ಬಲು ವಿಖ್ಯಾತ. ಮೂಲ ಗ್ರಂಥಗಳಲ್ಲಿ, ವಿಶೇಷವಾಗಿ ಶ್ರೀಮನ್ಯಾಯಸುಧಾ ಗ್ರಂಥದಲ್ಲಿ,  ಸುಲಭವಾಗಿ ಅರ್ಥ ಆಗದ ವಿಷಯಗಳನ್ನು ಶ್ರೀ ರಾಘವೇಂದ್ರರು ತಮ್ಮ ಪರಿಮಳ ಗ್ರಂಥದಲ್ಲಿ ವಿವರಿಸಿದ್ದಾರೆ. ಈ ಕಾರಣಕ್ಕೆ ಅವರನ್ನು "ಪರಿಮಳಾಚಾರ್ಯರು" ಎಂದು ಕರೆಯುವುದು. ಮುಂದೆ ಇದೇ ನಡೆದು ಬಂದು ಮಂತ್ರಾಲಯದ ಪ್ರಸಾದವೂ "ಪರಿಮಳ ಪ್ರಸಾದ" ಆಗಿದೆ. 

******


ದೇವರಪೂಜೆಯಲ್ಲಿ ದೀಪ, ಹೂವು, ಹೂವಿನ ಹಾರ, ತುಳಸಿ, ಮಂಗಳಾರತಿ, ನೈವೇದ್ಯಗಳ ಉಪಯೋಗ ಉಂಟು. ಇವುಗಳು ಸ್ವಲ್ಪ ಕಾಲ ಇರುವಂತಹವು. ಹೂವು, ತುಳಸಿ ಮಾರನೆಯ ದಿನ ಬಾಡಿರುತ್ತದೆ. ದೀಪ, ಮಂಗಳಾರತಿ ಸ್ವಲ್ಪ ಸಮಯದ ನಂತರ ಆರಿಹೋಗುತ್ತವೆ.  ಸದಾಕಾಲ ಇರಬೇಕಾದರೆ ಏನು ಮಾಡಬೇಕು? ಶ್ರೀ ರಾಘವೇಂದ್ರ ಸ್ವಾಮಿಗಳು ಇದಕ್ಕೆ ಉಪಾಯ ಹುಡುಕಿದರಂತೆ. 

ಎಡಗಡೆ ಮತ್ತು ಬಲಗಡೆ ಇಡಲು ಎರಡು ದೀಪಗಳಾಗಿ "ಭಾವದೀಪ" ಮತ್ತು "ನ್ಯಾಯದೀಪ" ಎಂದು ಎರಡು ಗ್ರಂಥಗಳನ್ನು ರಚಿಸಿದರಂತೆ. ತುಳಸಿಯ ತೆನೆ ಇರುವ ಕುಡಿಯು ಪೂಜೆಗೆ ವಿಶೇಷವಂತೆ. ಅದಕ್ಕೆ "ಮಂಜರಿ" ಅನ್ನುತ್ತಾರೆ. (ಮೇಲಿನ ಚಿತ್ರದಲ್ಲಿ ನೋಡಬಹುದು). ಒಣಗುವ ತುಳಸಿಯ ಬದಲಾಗಿ "ತತ್ತ್ವ ಮಂಜರಿ" ಎನ್ನುವ ಗ್ರಂಥ. ಪೂಜೆಯ ವೇಳೆ ಹೆಚ್ಚಿನ ಬೆಳಕು ಬರಲು "ಚಂದ್ರಿಕಾ ಪ್ರಕಾಶ" ಎನ್ನುವ ಗ್ರಂಥ. (ಶ್ರೀ ವ್ಯಾಸರಾಯರ "ತಾತ್ಪರ್ಯ ಚಂದ್ರಿಕಾ" ಗ್ರಂಥದ ವಿವರಣೆ). ಮತ್ತೆ ಹೂವು-ಗಂಧಗಳಿಗೆ "ಪರಿಮಳ" ಕೃತಿ. ಹಾರದ ಸ್ಥಳದಲ್ಲಿ "ನ್ಯಾಯ ಮುಕ್ತಾವಳಿ" ಎನ್ನುವ ಮುತ್ತಿನ ಹಾರದಂತಹ ಗ್ರಂಥ. ಮಂಗಳಾರತಿಯ ಸಲುವಾಗಿ "ತಂತ್ರದೀಪಿಕಾ". ನೈವೇದ್ಯದ ಹರಿವಾಣದಲ್ಲಿ ಬಗೆಬಗೆಯ ಇತರ ಅನೇಕ ಗ್ರಂಥಗಳು. 

"ಪ್ರಾತಃ ಸಂಕಲ್ಪ ಗದ್ಯ"  ಎನ್ನುವುದು ಅವರು ಪ್ರತಿದಿನ ಬೆಳಿಗ್ಗೆ ಮಾಡುತ್ತಿದ್ದ "ಟು ಡು ಲಿಸ್ಟ್". "ಸರ್ವ ಸಮರ್ಪಣ" ಎನ್ನುವುದು ಅವರು ದಿನದ ಕೊನೆಯಲ್ಲಿ ಅಂದು ಮಾಡಿದುದನ್ನೆಲ್ಲ ಪರಮಾತ್ಮನಿಗೆ ಒಪ್ಪಿಸುತ್ತಿದ್ದ ರೀತಿ. ದಿನಕ್ಕೆ ಹದಿನೆಂಟು ಗಂಟೆಗಳ ಅಧ್ಯಯನ-ಅಧ್ಯಾಪನ; ಪೂಜೆ-ಅತಿಥಿಸೇವೆ. 

ಹೀಗೆ ಒಂದು ದಿನ ಇದ್ದು ಕೆಡುವ-ಬಾಡುವ ಪದಾರ್ಥಗಳ ಬದಲು ಚಿರಕಾಲ ಉಳಿಯುವ ಗ್ರಂಥಗಳನ್ನು ದೇವರಪೂಜೆಗೆ ಮಾಡಿಟ್ಟದ್ದು ಶ್ರೀ ರಾಘವೇಂದ್ರಸ್ವಾಮಿಗಳ ವಿಶೇಷತೆ ಎಂದು ತಿಳಿದವರು ಹೇಳುತ್ತಾರೆ. 


*****

ಶ್ರೀ ರಾಯರ ಅನೇಕ ಪವಾಡಗಳನ್ನು ಹೇಳುತ್ತಾರೆ. ಈ ಎಲ್ಲ ಪವಾಡಗಳಿಗಿಂತ ಹೆಚ್ಚಿನದು ಅವರ ನಲವತ್ತೈದು ಗ್ರಂಥಗಳ ಭಂಡಾರ. ಇವುಗಳಲ್ಲಿ ಅನೇಕವು ಅವರು "ಶ್ರೀ ರಾಘವೇಂದ್ರ ತೀರ್ಥ" ಎಂದು ಪೀಠ ಸ್ವೀಕರಿಸುವ ಮುಂಚೆ, ವೆಂಕಟನಾಥ ಎಂದು ಹೆಸರಿನ ವಟು ಮತ್ತು ಗೃಹಸ್ಥ ಆಗಿದ್ದಾಗ ರಚಿಸಿದ್ದು. 

ವಿಜಯನಗರದ ಅರಸರ ಆಸ್ಥಾನ ವಿದ್ವಾಂಸರಾಗಿ ಅವರಿಗೆ ವೀಣಾ ಗುರುಗಳಾಗಿದ್ದ ವಿದ್ವಾಂಸರ ವಂಶದಲ್ಲಿ ಜನಿಸಿದ್ದು. ಸಿರಿ-ಸಂಪತ್ತಿನಲ್ಲಿ ನಡೆದುಬಂದ ಕುಟುಂಬವಾದರೂ ಇವರ ಕಾಲಕ್ಕೆ ವಿಜಯನಗರ ಸಾಮ್ರಾಜ್ಯ ಹರಿದು-ಹಂಚಿಹೋಗಿ ಇವರಿಗೆ ಹೇಳತೀರದ ದಾರಿದ್ರ್ಯ. ಅಂತಹ ಸಂದರ್ಭಗಳಲ್ಲಿ ಈ ಗ್ರಂಥಗಳ ರಚನೆ. 

ಭಗವದ್ಗೀತೆಗೆ ಹೊಂದಿದ "ಗೀತಾ ವಿವೃತ್ತಿ", ಬ್ರಹ್ಮಸೂತ್ರ ಭಾಷ್ಯಗಳಿಗೆ ಸಂಬಂಧಿಸಿದಂತೆ "ತಂತ್ರದೀಪಿಕಾ", ಋಗ್ವೇದ ಮಂತ್ರಗಳಿಗೆ "ಮಂತ್ರಾರ್ಥ ಮಂಜರಿ", ಹತ್ತು ಪ್ರಮುಖ ಉಪನಿಷತ್ತುಗಳಿಗೆ ಭಾಷ್ಯಗಳು, ಮತ್ತನೇಕ ಗ್ರಂಥಗಳು. ಹಿಂದಿದ್ದ ಗ್ರಂಥಗಳಿಗೆ ಬಂದಿದ್ದ ಟೀಕಾಗ್ರಂಥಗಳಿಗೆ ಟಿಪ್ಪಣಿಗಳು. ಹಿಂದಿದ್ದ ಗ್ರಂಥಗಳಿಗೆ ಟೀಕೆಗಳು. ಜೊತೆಗೆ ಸ್ವತಂತ್ರ ಗ್ರಂಥಗಳು. ದೊಡ್ಡ ಗ್ರಂಥಗಳನ್ನು ಸಂಗ್ರಹ ಮಾಡಿ ಚಿಕ್ಕದಾಗಿಸಿ ಪ್ರತಿನಿತ್ಯ ಪಾರಾಯಣಕ್ಕೆ ಕೊಟ್ಟರು. ಚಿಕ್ಕದಾದ ಗ್ರಂಥಗಳನ್ನು ವಿವರಿಸಿ ದೊಡ್ಡದು ಮಾಡಿ ಕೊಟ್ಟರು. ಹೀಗೂ ಸರಿ. ಹಾಗೂ ಸರಿ.  ಎಲ್ಲದರಲ್ಲೂ ಪ್ರಚಂಡ ವಿದ್ವತ್ ದರ್ಶನ. 

ಕನ್ನಡದಲ್ಲಿ ರಚಿಸಿದ ರಚನೆಗಳು ಸಿಕ್ಕಿಲ್ಲ. ಸಿಕ್ಕಿರುವ ಒಂದೇ "ಇಂದು ಎನಗೆ ಗೋವಿಂದ" ದೇವರನಾಮ ಎಲ್ಲರ ಬಾಯಲ್ಲಿ. 

ಭಜಿಸಿ ಬೇಡಿದ ಭಕ್ತರಿಗೆ ಕೇಳಿದ್ದು ಕೊಟ್ಟಂತೆ, ವಾಂಗ್ಮಯ ವಿಸ್ತಾರದಲ್ಲೂ ಯಾರಿಗೆ ಏನು ಬೇಕೋ ಅದುಂಟು. 

*****

ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯರ ಅಗಲಿಕೆ. ಅಕ್ಕ-ಭಾವ ಮತ್ತು ಅಣ್ಣನ ನೆರಳಿನಲ್ಲಿ ಬಾಲ್ಯ. ಏಳು ವರುಷಕ್ಕೆ ಅಣ್ಣನಿಂದ ಉಪನಯನ. ಹದಿನೆಂಟು ವರುಷಕ್ಕೆ ವಿವಾಹ. ಇಪ್ಪತ್ತಾರು ವರುಷಕ್ಕೆ ಸನ್ಯಾಸ. ಚಿಕ್ಕ ವಯಸ್ಸಿನ ಹೆಂಡತಿ ಮತ್ತು ಏಳು ವರುಷದ ಮಗನನ್ನು ತೊರೆದು ಯತಿಯಾದದ್ದು. ಕಡು ಬಡತನದ ಜೀವನ. ಈ ಹಿನ್ನೆಲೆಯಲ್ಲಿ ಸಂಪಪಾದಿಸಿದ ಪ್ರಚಂಡ ಪಾಂಡಿತ್ಯ. ರಚಿಸಿದ ಗ್ರಂಥ ರಾಶಿ. ಪೀಠ ಸ್ವೀಕರಿಸಿದ ಮೇಲೆ ಐವತ್ತು ವರುಷ ಪೀಠಾಧಿಪತಿಯಾಗಿ ಸಮಾಜದ ಸೇವೆ. ನಂತರ ಜೀವಂತವಾಗಿದ್ದಾಗಲೇ ವೃಂದಾವನ ಪ್ರವೇಶ.  

ವೇದ-ಉಪನಿಷತ್ತುಗಳು, ತರ್ಕ, ವ್ಯಾಕರಣ, ಅಲಂಕಾರ ಶಾಸ್ತ, ಕಾವ್ಯ-ನಾಟಕ, ಮಹಾಭಾಷ್ಯ, ಪೂರ್ವ ಮೀಮಾಂಸಾ, ಜ್ಯೋತಿಷ್ಯ, ಸಂಗೀತ, ವೀಣಾವಾದನ ಮುಂತಾದ ಅನೇಕ ವಿಷಯಗಳಲ್ಲಿ ಪೂರ್ಣ ಪ್ರಭುತ್ವ. ಅನೇಕ ಕಲೆಗಳಲ್ಲಿ ಪರಿಣತಿ. ಒಂದೊಂದರಲ್ಲಿ ಸಾಧನೆ ಮಾಡಲು ಅನೇಕರಿಗೆ ಕಷ್ಟಸಾಧ್ಯ. ಇವರಿಗೆ ಎಲ್ಲವೂ ಸಲೀಸು. 

ರಾಯರ ಬೇರೆ ಪವಾಡಗಳು ಒತ್ತಟ್ಟಿಗಿರಲಿ. ಇವೆಲ್ಲದರ ಹಿನ್ನೆಲೆಯಲ್ಲಿ ಅವರನ್ನು ನೆನೆದಾಗ, ನೋಡಿದಾಗ ಅವರ ಬದುಕೇ ಒಂದು ದೊಡ್ಡ ಪವಾಡ.   

No comments:

Post a Comment