Wednesday, September 17, 2025

ಒಂದು ದೇಹದಲ್ಲಿ ಅನೇಕ ದೇಹಗಳು!

ಶ್ರೀಮದ್ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ವಿವರಿಸಿರುವ ಬಹಳ ವಿಷಯಗಳು ಅನೇಕ ಸಾಂದರ್ಭಿಕ  ಕಾರಣಗಳಿಂದ ಮತ್ತೆ ಮತ್ತೆ ನಮ್ಮ ಗಮನಕ್ಕೆ ಬರುತ್ತಿರುತ್ತವೆ. ಹುಟ್ಟು ಮತ್ತು ಸಾವು, ಅವುಗಳ ತಪ್ಪಿಸಲಾಗದ ಚಕ್ರ, ಅವುಗಳ ವಿಷಯದಲ್ಲಿ ಅತಿಯಾಗಿ ದುಃಖಿಸಬಾರದೆಂಬುದು, ಇವುಗಳ ಚರ್ಚೆ ಬೇರೆ ಬೇರೆ ಸಂವಾದಗಳಲ್ಲಿ ಆಗಾಗ ನಡೆಯುತ್ತಿರುತ್ತದೆ. ಇದೇ ಭಗವದ್ಗೀತೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೇಳಿರುವ ಇನ್ನೊಂದು ವಿಷಯವು ಹೆಚ್ಚಾಗಿ ಚರ್ಚಿತವಾಗುವುದಿಲ್ಲ.

ಕಳೆದ ತಿಂಗಳು ಹಿಂದಿನ ಒಂದು ಸಂಚಿಕೆಯಲ್ಲಿ, "ಸಾವು ಎದುರಲ್ಲಿ ಬಂದು ನಿಂತಾಗ" ಎನ್ನುವ ಶೀರ್ಷಿಕೆಯಡಿಯಲ್ಲಿ, ಈ ಸಂಬಂಧದ ಕೆಲವು ಪದರಗಳನ್ನು ಚರ್ಚಿಸಿದ್ದೆವು. (ಇಲ್ಲಿ ಕ್ಲಿಕ್ ಮಾಡಿ ಈ ಸಂಚಿಕೆಯನ್ನು ಓದಬಹುದು).  

ಸಾವಿನ ಕಾಲದಲ್ಲಿ ಜೀವನು ಈಗ ಪಡೆದಿರುವ ದೇಹವು ಕೊನೆಗೊಂಡು ಮತ್ತೆ ಮುಂದೆ ಬೇರೊಂದು ದೇಹ ಪಡೆಯುವ ಜನನ-ಮರಣ ಚಕ್ರದ ಜೊತೆಯಲ್ಲಿಯೇ, ಈಗಿನ ಒಂದು ಜೀವಿತಕಾಲದಲ್ಲಿಯೇ ಜೀವಿಯು ಪಡೆದ ದೇಹವೊಂದರಲ್ಲಿ ಅನೇಕ ದೇಹಗಳು ಅಡಗಿರುವ ಗುಟ್ಟನ್ನು ಶ್ರೀಕೃಷ್ಣನು ಹೇಳಿದ್ದಾನೆ. ಇದೇನೂ ಅಂತಹ ಗುಟ್ಟಿನ ವಿಷಯವಲ್ಲ. ಅದು ಎಲ್ಲರಿಗೂ ಚೆನ್ನಾಗಿ ತಿಳಿದಿದ್ದರೂ, ಅದರ ಸುಪ್ತವಾಗಿ ಉಳಿಯುವ ಗುಣದಿಂದ,  ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. 

*****

ಯಾವುದೇ ಪ್ರಾಣಿಯಿರಲಿ, ಅದರಲ್ಲಿ ವಿಶೇಷವಾಗಿ ಮನುಷ್ಯ, ಹುಟ್ಟುವಾಗ ಇದ್ದ ದೇಹಕ್ಕೂ ಜೀವನದ ಕೊನೆಯ ಕಾಲದಲ್ಲಿ ಇರುವ ದೇಹಕ್ಕೂ ಅಜ-ಗಜಾಂತರ (ಆಡು-ಆನೆ) ವ್ಯತ್ಯಾಸ. ತಾಯಿಯ ಗರ್ಭದಿಂದ ಮಗು ಅಥವಾ ಪ್ರಾಣಿಯ ಮರಿ ಹೊರಬಂದಾಗ, ಅಥವಾ ಮೊಟ್ಟೆಯೊಡೆದು ಮರಿ ಹೊರಗೆ ಬಂದಾಗ ಅದರ ಗಾತ್ರ ಬಹಳ ಸಣ್ಣದಿರುತ್ತದೆ. ನಂತರ ಕಾಲಕ್ರಮದಲ್ಲಿ ಅದರ ಗಾತ್ರ ದೊಡ್ಡದಾಗುತ್ತ ಹೋಗುತ್ತದೆ. ಇನ್ನೂ ಮುಂದೆ ಅದು ಮೊದಲಿನಂತೆ ಪೂರ್ತಿ ಚಿಕ್ಕದಾಗದೇ ಇದ್ದರೂ ಸಾಮಾನ್ಯವಾಗಿ ಕುಗ್ಗಿ ಅಥವಾ ಕೃಶವಾಗಿ ಹೋಗುತ್ತದೆ. ಇದು ಎಲ್ಲರಿಗೂ ದಿನಂಪ್ರತಿ ಕಣ್ಣಿಗೆ ಕಾಣುವ ವಾಸ್ತವ ಸಂಗತಿ. 

ಏಕೆ ಹೀಗೆ? ಇದು ಪ್ರಸವ ಅಥವಾ ಮೊಟ್ಟೆಯೊಡೆದು ಮರಿ ಸುಖವಾಗಿ ಹೊರಬರಲು ಪ್ರಕೃತಿ ಮಾಡಿರುವ ಒಂದು ಉಪಾಯ. ಇದರಿಂದ ಮರಿ ಮತ್ತು ತಾಯಿ ಇಬ್ಬರಿಗೂ ಕ್ಷೇಮ. ಒಂದು ಆನೆಯ ಮರಿ ಆನೆಯ ಗಾತ್ರದ್ದೇ ಆಗಿ ಹುಟ್ಟುವ ಪರಿಯನ್ನು ನೆನೆಸಿಕೊಂಡರೆ ಮೊದಲು ನಗು ಬರುತ್ತದೆ. ಇದೇನು, ಇಂತಹ ಹಾಸ್ಯಾಸ್ಪದ ವಿಷಯ ಎನಿಸುತ್ತದೆ. ಕೆಲವೊಮ್ಮೆ ನಾಕೂವರೆ ಅಡಿ ಎತ್ತರವಿರುವ ತಾಯಿ ಮತ್ತು ಆರೂವರೆ ಅಡಿ ಎತ್ತರ ಇರುವ ಮಗನನ್ನು ಜೊತೆಯಾಗಿ ನೋಡಿದಾಗ ಇದರ ವಾಸ್ತವತೆ ಅರಿವಾಗುತ್ತದೆ. 

ಶಿಶುಪಾಲನೆ ಅನೇಕ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಒಂದು ದೊಡ್ಡ ಕೆಲಸವೇ. ಕೆಲವು ಪ್ರಾಣಿಗಳಲ್ಲಿ ಜನನವಾದ ನಂತರ ತಾಯಿ ಮತ್ತು ಮಗುವಿಗೆ ಯಾವುದೇ ಸಂಬಂಧವಿರುವುದಿಲ್ಲ. ಇನ್ನು ಕೆಲವು ಪ್ರಾಣಿಗಳಲ್ಲಿ ಸ್ವಲ್ಪ ಕಾಲ ಮರಿ ತಾಯಿಗೆ ಅಂಟಿಕೊಂಡಂತೆ ಇರುತ್ತದೆ. ಮನುಷ್ಯರಲ್ಲಿ ಪ್ರಾಯಶಃ ಇದರ ಅವಧಿ ಅತ್ಯಂತ ಹೆಚ್ಚು. ಮಗು ಎಷ್ಟು ದೊಡ್ಡದಾದರೂ ತಾಯಿ-ಮಗ ಅಥವಾ ತಾಯಿ-ಮಗಳ ಸಂಬಂಧ ಕೊಂಚವೂ ಮಾಸುವುದಿಲ್ಲ. 

ಸುಮಾರು ಇಪ್ಪತ್ತು ವರುಷಗಳ ಹಿಂದಿನ ಮಾತು. ನಮ್ಮ ಹಿರಿಯ ಸ್ನೇಹಿತರೊಬ್ಬರಿಗೆ ಎಂಭತ್ತರ ವಯಸ್ಸು. ಅವರ ನಿವೃತ್ತಿಯ ನಂತರ ಪರಸ್ಪರ ಈಮೈಲ್ ಮುಖಾಂತರ ಸಂಪರ್ಕ ಇದ್ದರೂ ಮುಖಾಮುಖಿ ಆಗಿರಲಿಲ್ಲ. ಅಪರೂಪಕ್ಕೆ ಅಮೆರಿಕೆಯ ಸಿಯಾಟಲ್ ನಗರದಲ್ಲಿ ಸಿಕ್ಕರು. ಅದು ಒಂದು ಅವಸರದ ಭೇಟಿ ಆಗಿತ್ತು. ಸಿಕ್ಕಾಗ ಬಹಳ ಉಲ್ಲಸಿತರಾಗಿದ್ದರು. "ಏನು, ಇಷ್ಟು ಸಂತೋಷದಲ್ಲಿದ್ದೀರಿ?" ಎಂದೆ. "ಹೌದಪ್ಪ, ಬಹಳ ಆನಂದದ ದಿನ. ನಾಳೆ ಬೆಂಗಳೂರು ಮಾರ್ಗವಾಗಿ ನನ್ನ ದಕ್ಷಿಣ ಕನ್ನಡದ ಹಳ್ಳಿಗೆ ಹೋಗುತ್ತಿದ್ದೇನೆ. ಅಲ್ಲಿ ನನ್ನ ತಾಯಿಯಿದ್ದಾಳೆ. ಅವಳನ್ನು ನೋಡಿ ಹತ್ತು ವರುಷವಾಗಿದೆ. ಕೆಲವು ತಿಂಗಳಲ್ಲಿ ಅವಳಿಗೆ ಶತಮಾನೋತ್ಸವ. ಕುಟುಂಬದ ಎಲ್ಲರೂ ಅಲ್ಲಿ ಸೇರುತ್ತಾರೆ. ಅವಳನ್ನು ನೋಡುವುದೇ ಒಂದು ಪುಳಕ. ಅದರಿಂದ ಈ ಸಂತೋಷ" ಅಂದರು. ಇವರಿಗೆ ಸ್ವಲ್ಪದರಲ್ಲಿ ಸಹಸ್ರ ಪೂರ್ಣ ಚಂದ್ರ ದರ್ಶನ! ಆಕೆಗೆ ಅದರ ಜೊತೆಯಲ್ಲಿ ಶತಮಾನೋತ್ಸವ! ತಾಯಿ-ಮಕ್ಕಳ ಸಂಬಂಧ ಅಂತಹುದು. 

*****

ಮಗು ಪುಟ್ಟದಿರುವಾಗ ಬಲು ಚೆಂದ. ಸ್ವಲ್ಪ ದೊಡ್ಡದಾಗಿ ಓಡಾಡಲು ಪ್ರಾರಂಭಿಸಿದರೆ ಎಲ್ಲರಿಗೂ ಸಂತಸ. ಹುಟ್ಟಿದ ದೇಹ ಈಗ ಹೋಗಿದೆ. ಬೇರೆ ದೇಹ ಬಂದಿದೆ. ಒಂದು ಕಡೆ ಬಿದ್ದುಕೊಂಡಿರುವ ಕೂಸೆಲ್ಲಿ? ಈಗ ಹಿಡಿಯಲು ಕಷ್ಟಪಡುವ ಈ ಮಗುವೆಲ್ಲಿ? ಆದರೆ ನಮ್ಮ ಮಗುವಿನ ಹಳೆಯ ದೇಹ ಹೋಯಿತಲ್ಲಾ ಎಂದು ಯಾರೂ ಗೋಳಾಡುವುದಿಲ್ಲ. ಒಮ್ಮೆಮ್ಮೆ "ಮಗು ಬೆಳೆಯಿತು. ಮೊದಲಿನಂತೆ ಕೈಗೆ ಸಿಗುವುದಿಲ್ಲ" ಎಂದು ಸ್ವಲ್ಪ ಬೇಜಾರಾಗಬಹುದು. ಆದರೆ ಅದರಿಂದ ದುಃಖವಿಲ್ಲ. ಮುಂದೆ ಯುವಕನಾದಾಗ ಅಥವಾ ಯುವತಿಯಾದಾಗ ಬಾಲಕ ಅಥವಾ ಬಾಲಕಿಯ ದೇಹ ಹೋಗಿದೆ. ಬೇರೆ ದೇಹ ಬಂದಿದೆ. ಹಳೆಯ ದೇಹ ಹೋಯಿತು ಎಂದು ದುಃಖವಿಲ್ಲ. ಹೊಸತು ಬಂದಿತು ಎಂದು ಉತ್ಸಾಹ. ವಿವಾಹ ಮಾಡುವ ಚಿಂತೆ. ನಂತರ ಮುಪ್ಪಿನಲ್ಲಂತೂ ಸರಿಯೇ ಸರಿ. ಬೇರೆ ದೇಹವಾಗಿರುವುದು ಕಣ್ಣು ಮುಚ್ಚಿಕೊಂಡವರಿಗೂ ಕಾಣುವುದು. 

ಹೀಗೆ ಪ್ರತಿ ಹಂತದಲ್ಲೂ ಹೊಸ ದೇಹವೇ ಬಂದಿರುತ್ತದೆ. ಹಿಂದೆ ಕನ್ನಡದಲ್ಲಿ "ಕೊರವಂಜಿ' ಎಂದೊಂದು ಹಾಸ್ಯಪತ್ರಿಕೆ ಬರುತ್ತಿತ್ತು. ಅದರಲ್ಲಿ ಒಂದು ನಗೆಹನಿ. ತಾಯಿಯು ನಾಲ್ಕೈದು ವರುಷದ ಮಗನ ಜೊತೆ ತನ್ನ ಹದಿನೈದು ವಷಗಳ ಹಿಂದಿನ ಮದುವೆಯ ಫೋಟೋ ಆಲ್ಬಮ್ ನೋಡುತ್ತಿದ್ದಾಳೆ. ಆರತಕ್ಷತೆಯ ಸುಂದರ ಫೋಟೋ. ಮಗುವಿಗೆ ತಾಯಿಯ ಗುರುತು ಥಟ್ಟೆ೦ದು ಸಿಕ್ಕಿತು. ಅವಳ ಪಕ್ಕದಲ್ಲಿದ್ದ ಗುಂಗುರು ಕೂದಲಿನ ಸುಂದರ ವ್ಯಕ್ತಿಯ ಗುರುತು ಸಿಗಲಿಲ್ಲ. "ಅಮ್ಮ, ಇವನು ಯಾರು?" ಅಂದಿತು ಮಗು. "ಅಯ್ಯೋ ಮರೀ, ಗೊತ್ತಾಗಲಿಲ್ಲವೇ? ಇದು ನಿಮ್ಮಪ್ಪ ಕಾಣೋ" ಅಂದಳು. ತಕ್ಷಣ ಮಗು, "ಹಾಗಿದ್ದರೆ ನಮ್ಮ ಜೊತೆಯಲ್ಲಿದ್ದಾನಲ್ಲ ಬೋಡಮುಂಡ, ಅವನು ಯಾರು?" ಅಂದಿತು. (ಭಾಷೆಗೆ ಕ್ಷಮೆ ಇರಲಿ. ಕೊರವಂಜಿಯಲ್ಲಿ ಇದ್ದಂತೆ ಹೇಳದಿದ್ದರೆ ಅದರ ನಿಜವಾದ ಮೋಜು ಸಿಗದು).   

ಹೀಗೆ ಬೆಳೆಯುವ ಕಾಲದಲ್ಲಿ ಆಗಾಗ ಹಳೆಯ ದೇಹ ಹೋಗಿ ಹೊಸದು ಬರುತ್ತಿದ್ದರೂ ಅದು ಅಷ್ಟಾಗಿ ನಮಗೆ ಭಾಸವಾಗುವುದಿಲ್ಲ. ಮುಂದೆ ಕಾಲಕ್ರಮದಲ್ಲಿ ಯೌವನ ಮತ್ತು ಮಧ್ಯ ಕಾಲಗಳು ಕಳೆದು ವೃದ್ಧಾಪ್ಯ ಬಂದಾಗ ಅದು ಮಾತ್ರ ಚೆನ್ನಾಗಿ ಕಂಡುಬರುತ್ತದೆ. "ಏನಿದು? ಇಷ್ಟು ಮುದುಕನೇ? ಹಲ್ಲೆಲ್ಲಾ ಬಿದ್ದು ಹೋಗಿವೆ. ಕೂದಲು ನರೆತು ಹೋಗಿದೆ" ಎನ್ನಬಹುದು. "ಎಲಬು ಸೊಟ್ಟಗಾಗಿದೆ. ಬೊಕ್ಕತಲೆ ಆಗಿದೆ" ಎಂದು ಆಶ್ಚರ್ಯಪಡಬಹುದು. ನೆಟ್ಟಗೆ ನಡೆಯುತ್ತಿದ್ದವರಿಗೆ ಈಗ ಕೋಲು ಹಿಡಿಯುವಂತಾಗಿದೆ. ಜೀವನದಲ್ಲಿ ಮುಖ್ಯ ಕಾರ್ಯಕ್ರಮವೆಂದರೆ ಮುಂದಿನ ವೈದ್ಯರ ಸಂದರ್ಶನದ ಸಮಯ ನಿಗದಿಮಾಡುವುದು. ಬೇಜಾರಾದಾಗಲೆಲ್ಲಾ ಒಂದು ಗುಳಿಗೆ ನುಂಗುವುದು. ಜೊತೆಗಾರರ ಸಕ್ಕರೆಯ ಅಂಶ ಎಷ್ಟಿದೆ ಎಂದು ಕೇಳಿ, ಅದು ನಮಗಿಂತ ಕಡಿಮೆ ಇದ್ದಾಗ ಸಮಾಧಾನ ಪಟ್ಟುಕೊಳ್ಳುವುದು.  ಹೀಗೆ. 

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ 'ಒಂದು ದೇಹದಲ್ಲಿ ಅನೇಕ ದೇಹಗಳು" ಎನ್ನುವುದು. 

*****

ಹಾಗಿದ್ದರೆ ಭಗವದ್ಗೀತೆಯಡ್ನಲ್ಲಿ ಶ್ರೀಕೃಷ್ಣನು ಇದರ ಬಗ್ಗೆ ಹೇಳಿರುವುದು ಏನು? ಎರಡನೆಯ ಅಧ್ಯಾಯದ ಹದಿಮೂರನೆಯ ಶ್ಲೋಕ ಹೀಗಿದೆ:

देहिनोऽस्मिन्यथा देहे कौमारं यौवनं जरा |
तथा देहान्तरप्राप्तिर्धीरस्तत्र न मुह्यति ||  

ದೇಹಿನೋಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ
ತಥಾ ದೇಹಾಂತರಪ್ರಾಪ್ತಿ: ಧೀರಸ್ತತ್ರ ನ ಮುಹ್ಯತಿ 


ಹೇಗೆ ಆತ್ಮನು ತನ್ನ ದೇಹದಲ್ಲಿಯೇ ಬಾಲ್ಯ, ಯೌವನ ಮತ್ತು ಮುಪ್ಪಿನಲ್ಲಿ ದೇಹ ಬಲಾವಣೆಗಳನ್ನು ಕಾಣುತ್ತಾನೋ, ಹಾಗೆ  ಸಾವಿನ ನಂತರ ಮತ್ತೊಂದು ದೇಹವನ್ನು ಪಡೆಯುತ್ತಾನೆ. ಆದ್ದರಿಂದ ತಿಳಿದವರು ಇದರ ಬಗ್ಗೆ ಚಿಂತಿಸುವುದಿಲ್ಲ. 


"ಬದುಕಿರುವಾಗ ಹಂತ ಹಂತಗಳಲ್ಲಿ ಹೇಗೆ ಇದೇ ದೇಹದಲ್ಲಿ ಬದಲಾವಣೆಗಳಾಗುವುದೋ, ಹಾಗೆಯೇ ಸಾವಿನ ನಂತರ ಬರುವ ಬೇರೆ ದೇಹವೂ ಒಂದು ಬಲಾವಣೆಯೇ ಆಗಿರುತ್ತದೆ. ಆದ್ದರಿಂದ ಜ್ಞಾನಿಗಳು ಸಾವಿನ ವಿಷಯದಲ್ಲಿ ಯಾವ ದುಃಖವನ್ನೂ ಹೊಂದುವುದಿಲ್ಲ" ಎನ್ನುವುದು ಇದರ ಭಾವ. 

*****

"ಹೆರಾಕ್ಲಿಟಸ್" ಎನ್ನುವ ಗ್ರೀಕ್ ತತ್ವಜ್ಞಾನಿಯೊಬ್ಬ ಸುಮಾರು ಎರಡು ಸಾವಿರದ ಐದು ನೂರು ವರುಷಗಳ ಹಿಂದೆ "No man ever steps into a river twice" ಎಂದು ಹೇಳಿರುವುದೂ ಹೀಗೆ ಸಮಯದಿಂದ ಆಗುವ ಬದಲಾವಣೆಗಳ ಬಗ್ಗೆಯೇ. ಆಸಕ್ತರು ಇಂಗ್ಲೀಷಿನಲ್ಲಿರುವ ಬ್ಲಾಗ್ ಪೋಸ್ಟನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

No comments:

Post a Comment