Saturday, September 6, 2025

ನಾನು ಶಾಲಿಗಾಗಿ ಬಂದವನು, ಗುರುಗಳೇ!


ಗುರು-ಶಿಷ್ಯರ ಸಂಬಂಧದ ಬಗ್ಗೆ "ಗುರು ಪೂರ್ಣಿಮಾ" ಸಮಯದಲ್ಲಿ ಒಂದು ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡಿದ್ದೆವು. ಯೋಗ್ಯನಾದ ಶಿಷ್ಯನು ಸಿಗಲಿ ಎಂದು ಗುರುವು ಕಾಯುತ್ತಿರುವುದು ಮತ್ತು ಸರಿಯಾದ ಗುರು ದೊರೆಯಲಿ ಎಂದು ಜಿಜ್ಞಾಸು ಶಿಷ್ಯನು ಅರಸುವುದು, ಇವುಗಳ ಬಗ್ಗೆ ಕೆಲವು ವಿಷಯಗಳನ್ನು ನೋಡಿದ್ದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

ಈ ವಿಷಯದ ಕುರಿತಂತೆ ಬಹಳ ಹಿಂದೆ ತಿಳಿದವರೊಬ್ಬರು ಸಾಂದರ್ಭಿಕವಾಗಿ ಹೇಳಿದ್ದ ಸಂಗತಿಯೊಂದನ್ನು ನೆನಪಿಸಿಕೊಳ್ಳಬಹುದು. ಇದರ ಬಗ್ಗೆ ಹೆಚ್ಚಿನ ವಿಚಾರಗಳು ತಿಳಿದಿಲ್ಲ. ತಿಳಿಯುವ ಪ್ರಯತ್ನ ಮಾಡಿದರೂ ಅವು ಸಫಲವಾಗಲಿಲ್ಲ. ಆದರೆ ಅದನ್ನು ಹೇಳಿದವರು ಸ್ವತಃ ಘನ ವಿದ್ವಾಂಸರು. ಅನೇಕ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡಬಲ್ಲವರು. ಅದಕ್ಕಿಂತ ಹೆಚ್ಚಾಗಿ ಈ ಪ್ರಸಂಗ ಜ್ಞಾನದಾಹ ಮತ್ತು ಗುರುಗಳ ಶಿಷ್ಯ ವಾತ್ಸಲ್ಯವನ್ನು ತೋರಿಸುವ ಒಂದು ಉತ್ತಮ ಉದಾಹರಣೆ. ಆದ್ದರಿಂದ ಅದನ್ನು ಅದರ ಇತಿ-ಮಿತಿಗಳಲ್ಲೇ ನೋಡೋಣ. 

ತುಂಗಭದ್ರಾ ನದಿಯ ಆಣೆಕಟ್ಟು ಈಗ ತುಂಬಿ ತುಳುಕುತ್ತಿದೆ. ಜಲಾಶಯದ ಎಲ್ಲ ಗೇಟುಗಳನ್ನೂ ತೆಗೆದು ನದಿಯ ಪಾತ್ರಕ್ಕೆ ನೀರು ಬಿಡುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಗೇಟುಗಳಲ್ಲಿ ತೊಂದರೆ ಉಂಟಾಗಿ ನೀರು ಸೋರಿಹೋಗುತ್ತಿದ್ದುದು, ಮತ್ತು ಬಲು ಕಠಿಣ ಪರಿಸ್ಥಿತಿಯಲ್ಲೂ ಕೆಲವು ಎಂಜಿನಿಯರುಗಳು ಕಷ್ಟಪಟ್ಟು ಅದನ್ನು ಸರಿಪಡಿಸಿ ನೀರು ಪೋಲಾಗುವುದನ್ನು ನಿಲ್ಲಿಸಿದುದನ್ನೂ ಕೇಳಿದ್ದೆವು. ಈ ಜಲಾಶಯವು ನೀರು ತುಂಬಿದ್ದಾಗ ನೋಡಲು ಬಹಳ ಸುಂದರ. ಅದಕ್ಕೆ ಸೇರಿದಂತೆ "ಪಂಪಾವನ" ಎನ್ನುವ ಉದ್ಯಾನವಿದೆ. ರಾಮಾಯಣದ ಪ್ರಸಿದ್ಧ "ಋಷ್ಯಮೂಕ" ಬೆಟ್ಟವೂ ಅದರ ಒಂದು ಬದಿಯಲ್ಲಿದೆ. 

ತುಂಗಭದ್ರಾ ಜಲಾಶಯವು ಹೊಸಪೇಟೆಯಿಂದ ಸುಮಾರು ಐದು ಮೈಲು ದೂರದ, ಈಗಿನ ಕೊಪ್ಪಳ ಜಿಲ್ಲೆಗೆ ಸೇರಿದ ಮುನಿರಾಬಾದ್ ಪಟ್ಟಣಕ್ಕೆ ಹೊಂದಿಕೊಂಡಿದೆ. ಹುಲಿಗಿ ಎನ್ನುವ ಸಣ್ಣ ಊರು ಈಗ ಹೆಚ್ಚು-ಕಡಿಮೆ ಈ ಪಟ್ಟಣದಲ್ಲಿ ಸೇರಿಹೋಗಿದೆ. "ಹುಲಿಗೆಮ್ಮ" ಎನ್ನುವ ಇತಿಹಾಸ ಪ್ರಸಿದ್ಧ ದೇವಸ್ಥಾನ ಇಲ್ಲಿನ ಹೆಗ್ಗುರುತು. 

*****

ಹುಲಿಗಿ ಶ್ರೀಪತ್ಯಾಚಾರ್ಯರು ಒಂದು ಕಾಲಘಟ್ಟದಲ್ಲಿ ಅದ್ವಿತೀಯ ತರ್ಕ ಶಾಸ್ತ್ರ ವಿದ್ವಾಂಸರು. ಅವರನ್ನು ಅರಸಿಕೊಂಡು ನಾಡಿನ ಮೂಲೆ ಮೂಲೆಗಳಿಂದ ತರ್ಕ ಶಾಸ್ತ್ರ ಕಲಿಯಬೇಕೆಂದು ಆಸೆಪಡುವ ವಿದ್ಯಾರ್ಥಿಗಳು ಬರುತ್ತಿದ್ದರಂತೆ. ಅವರ ಮನೆಯೇ ಒಂದು ಗುರುಕುಲ. ಆಗ ತಮ್ಮ ಬಳಿ ವಿದ್ಯಾರ್ಜನೆಗೆ ಬರುವವರಿಗೆ ಊಟ-ವಸತಿ ಕೊಟ್ಟು ಪಾಠ ಹೇಳುವ ಕಾಯಕ ಅವರದು. ಹತ್ತು-ಹನ್ನೆರಡು ವಿದ್ಯಾರ್ಥಿಗಳವರೆಗೆ ಒಪ್ಪಿಕೊಳ್ಳುತ್ತಿದ್ದರು. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸಂಭಾಳಿಸುವುದು ಆಗದ ಕೆಲಸ. 

ಶ್ರೀಪತಿ ಆಚಾರ್ಯರು ತರ್ಕ ಶಾಸ್ತ್ರದ ಜೊತೆಯಲ್ಲಿ ಬೇರೆ ಇತರ ಶಾಖೆಗಳಲ್ಲೂ ಪಂಡಿತರೇ. ಅವರಿಗೆ ಅನೇಕ ಕಡೆಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಗಳು ಬರುತ್ತಿದ್ದವು. ವಿದ್ವತ್ ಗೋಷ್ಠಿಗಳನ್ನು ನಿರ್ವಹಿಸುವುದು, ಉಪನ್ಯಾಸಗಳನ್ನು ನೀಡುವುದು, ಮತ್ತು ಪರೀಕ್ಷೆಗಳಲ್ಲಿ ನಿರ್ಣಾಯಕರಾಗಲು ಅಲ್ಲಲ್ಲಿ ಅವರಿಗೆ ಕರೆಗಳು ಬರುತ್ತಿದ್ದವು. ಹೀಗೆ ಹೋದ ಸಂದರ್ಭಗಳಲ್ಲಿ ಅವರಿಗೆ ಸನ್ಮಾನ ಮಾಡುವುದು ಸರ್ವೇಸಾಮಾನ್ಯವಾಗಿತ್ತು. ಈ ಮನ್ನಣೆಗಳ ಅಂಗವಾಗಿ ಶಾಲುಗಳನ್ನು ಹೊದ್ದಿಸಿ, ಫಲ-ತಾಂಬೂಲಗಳನ್ನು ನೀಡುವುದು ನಡೆಯುತ್ತಿತ್ತು. ಈ ಕಾರಣಗಳಿಂದ ಅವರ ಬಳಿ ಶಾಲುಗಳ ಒಂದು ಸಂಗ್ರಹವೇ ಇರುತ್ತಿತ್ತು. 

ಹೀಗೆ ತಮಗೆ ಕೊಟ್ಟಿರುವ ಶಾಲುಗಳನ್ನು ವಿದ್ಯಾರ್ಥಿಗಳಿಗೆ ಹಂಚುವುದು ಆಚಾರ್ಯರ ಹವ್ಯಾಸ. ಯಾವುದೇ ಪದಾರ್ಥವನ್ನು ಸುಮ್ಮನೆ ಕೊಟ್ಟರೆ ಅದಕ್ಕೆ ಅಷ್ಟು ಬೆಲೆ ಇರುವುದಿಲ್ಲ. ಈ ಕಾರಣದಿಂದ ಆಚಾರ್ಯರು ಆಗಿಂದಾಗ್ಗೆ ವಿದ್ಯಾರ್ಥಿಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಈ ಸ್ಪರ್ಧೆಗಳು ಬೇರೆ ಬೇರೆ ಶಾಖೆಯ ವಿಷಯಗಳ ಮೇಲೆ ಇರುತ್ತಿದ್ದವು. ತಮ್ಮ ಶಿಷ್ಯರ ಜೊತೆಯಲ್ಲಿ ಬೇರೆ ಯಾವುದೇ ವಿದ್ಯಾರ್ಥಿ ಭಾಗವಹಿಸಲು ಅವಕಾಶ ಇರುತ್ತಿತ್ತು. ಒಂದು ವಿಷಯವನ್ನು ಆರಿಸಿ ನಿಗದಿತ ದಿನಾಂಕದಂದು ಸ್ಪರ್ಧೆ. ಅಂದು ಬಂದು ಭಾಗವಹಿಸಿದ ವಿದ್ಯಾರ್ಥಿಗಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಶಾಲುಗಳ ಬಹುಮಾನ. ಈ ರೀತಿಯಿಂದ ವಿದ್ಯಾರ್ಥಿಗಲ್ಲಿ ಸ್ಪರ್ಧಾಮನೋಭಾವದಿಂದ ಕಲಿಕೆಯೂ ನಡೆದು ಶಾಲುಗಳ ವಿತರಣೆಯೂ ಆಗುತ್ತಿತ್ತು. 

***** 

ಹೀಗೆ ಒಂದು ದಿನ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಮೀಮಾಂಸಾ ಶಾಸ್ತ್ರದ "ಮಂಗಳವಾದ" ಎನ್ನುವ ವಿಷಯ. ವೈದಿಕ ಕಾರ್ಯಗಳಲ್ಲಿ ಪ್ರಾರಂಭದಲ್ಲಿ "ಮಂಗಳ" ಎಂಬ ಒಂದು ಪ್ರಾರಂಭಿಕ ಕ್ರಿಯೆ ಬೇಕೇ ಅಥವಾ ಬೇಡವೇ ಎನ್ನುವ ವಿಷಯದಮೇಲೆ ಚರ್ಚೆ. ಅನೇಕ ವಿದ್ಯಾರ್ಥಿಗಳು ಬಂದು ಭಾಗವಹಿಸಿದರು. ತಮಗೆ ಪರಿಚಯವಿಲ್ಲದ ಒಬ್ಬ ವಿದ್ಯಾರ್ಥಿಯ ಪ್ರಖರವಾದ ವಿಷಯ ಮಂಡನೆಯ ರೀತಿ ಶ್ರೀಪತಿ ಆಚಾರ್ಯರಿಗೆ ಬಹಳ ಹಿಡಿಸಿತು. ತೀರ್ಪುಗಾರರ ಮನ್ನಣೆ ಗಳಿಸಿ ಆ ವಿದ್ಯಾರ್ಥಿ ಬಹುಮಾನವಾಗಿ ಶಾಲನ್ನೂ ಗೆದ್ದುಕೊಂಡ. ಶ್ರೀಪತ್ಯಾಚಾರ್ಯರು ಶಾಲನ್ನು ಹೊದಿಸಿ ಅವನನ್ನು ಸ್ವಲ್ಪ ಕಾಲ ಇರುವಂತೆ ಹೇಳಿದರು. 

ಕಾರ್ಯಕ್ರಮ ಎಲ್ಲ ಮುಗಿದ ನಂತರ ಆಚಾರ್ಯರು ಆ ವಿದ್ಯಾರ್ಥಿಯನ್ನು ಕರೆದರು. 

"ನೀನು ಬಹಳ ಚೆನ್ನಾಗಿ ವಿಷಯ ಮಂಡನೆ ಮಾಡಿದಿ"
"ತಮ್ಮ ಅನುಗ್ರಹವಾಯಿತು. ನನ್ನ ಪುಣ್ಯ"
"ಮೀಮಾಂಸಾ ಶಾಸ್ತ್ರವನ್ನು ಎಲ್ಲಿ ಅಧ್ಯಯನ ಮಾಡಿದೆ?"
"ನಾನು ಮೀಮಾಂಸಾ ಶಾಸ್ತ್ರದ ವಿದ್ಯಾರ್ಥಿಯಲ್ಲ. ತರ್ಕದ ವಿದ್ಯಾರ್ಥಿ"
"ಮತ್ತೆ ಈ ವಿಷಯದ ಸ್ಪರ್ಧೆಗೆ ಬಂದಿದ್ದು ಹೇಗೆ?"
"ನಾನು ಬಡವ. ಚಳಿಗಾಲದಲ್ಲಿ ಹೊದೆಯಲು ನನ್ನ ಬಳಿ ಶಾಲಿಲ್ಲ. ತಾವು ಆಗಾಗ ಸ್ಪರ್ಧೆ ಏರ್ಪಡಿಸಿ ಗೆದ್ದವರಿಗೆ ಶಾಲು ಕೊಡುವುದು ತಿಳಿಯಿತು. ಅದಕ್ಕೇ ಈ ವಿಷಯಕ್ಕೆ ತಯಾರಿ ಮಾಡಿಕೊಂಡು ಸ್ಪರ್ಧೆಗೆ ಬಂದೆ. ಕ್ಷಮಿಸಬೇಕು. ನಾನು ಶಾಲಿಗಾಗಿ ಬಂದವನು, ಗುರುಗಳೇ"
"ಸ್ಪರ್ಧೆಗೆ ವಿಷಯ ಸಂಗ್ರಹಣೆಗೆ ಗ್ರಂಥ ಹೇಗೆ ಸಂಪಾದಿಸಿದೆ?"
"ಮೀಮಾಂಸಾ ಶಾಸ್ತ್ರದ ವಿದ್ಯಾರ್ಥಿಯೊಬ್ಬನಿಂದ ಒಂದು ವಾರದ ಮಟ್ಟಿಗೆ ಪಡೆದುಕೊಂಡು, ಅಭ್ಯಸಿಸಿ ಸ್ಪರ್ಧೆಗೆ ಬಂದೆ"
"ಈಗ ಎಲ್ಲಿ ವಾಸವಾಗಿದ್ದೀ"
"ಒಬ್ಬರು ದೂರದ ಬಂಧುಗಳು ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ಉಳಿದುಕೊಂಡಿದ್ದೇನೆ"
"ತರ್ಕ ಶಾಸ್ತ್ರದಲ್ಲಿ ಆಸಕ್ತಿಯಿದ್ದರೆ ನಮ್ಮ ಬಳಿಯೇ ಕಲಿಯಲು ಬರಬಹುದಿತ್ತಲ್ಲ"

ವಿದ್ಯಾರ್ಥಿಗೆ ಮಾತನಾಡಲಾಗಲಿಲ್ಲ. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು.

"ಏಕೆ? ಏನಾಯಿತು?" 
"ಕೆಲವು ತಿಂಗಳ ಹಿಂದೆ ತಮ್ಮ ಬಳಿ ಬಂದು ಪ್ರಾರ್ಥಿಸಿದೆ. ಈಗ ನನ್ನ ಬಳಿ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವಕಾಶ ಇಲ್ಲ. ಬೇರೆಯವರ ಬಳಿ ಪ್ರಯತ್ನಿಸು ಎಂದಿರಿ. ನಾನು ನತದೃಷ್ಟ"
"ಈಗ ಅವಕಾಶವಾದರೆ ನಮ್ಮಲ್ಲಿ ಕಲಿಯಲು ಬರುವಿಯಾ?"
"ಅದಕ್ಕಿಂತ ಬೇರೆ ಭಾಗ್ಯವಿಲ್ಲ ನನಗೆ"

ಮಾರನೆಯ ದಿನದಿಂದ ಅವನು ಆಚಾರ್ಯರ ಗುರುಕುಲದ ವಿದ್ಯಾರ್ಥಿಯಾದ. ಆಚಾರ್ಯರಿಗೆ ಬಹಳ ಕಾಲದಿಂದ ಹುಡುಕುತ್ತಿದ್ದ ಯೋಗ್ಯ ಶಿಷ್ಯ ಸಿಕ್ಕ. ಅವನಿಗೆ ತನ್ನ ಕನಸಿನ ನಿಧಿ ಸಿಕ್ಕಂತೆ ಆಗಿ ಹಾತೊರೆಯುತ್ತಿದ್ದ ಗುರುಗಳು ದೊರಕಿದರು!

*****

ದೇವರ್ಷಿ ನಾರದರಿಗೆ ಪ್ರಹ್ಲಾದನಂತಹ ಶಿಷ್ಯ ಸಿಕ್ಕ ಸಂದರ್ಭದಲ್ಲಿ ಈ ಮೇಲೆ ಹೇಳಿದ ಸಂಗತಿ ಕೇಳಿದಂತೆ ನೆನಪು. 

ಯೋಗ್ಯರಾದ ಶಿಷ್ಯರು ಸಿಗುವುದು ಗುರುಗಳಿಗೆ ಆನಂದ. ಮನಬಿಚ್ಚಿ ಜ್ಞಾನ ಧಾರೆ ಎರೆಯುವ ಗುರುಗಳು ದೊರಕುವುದು ಶಿಷ್ಯರ ಸುಯೋಗ. 

5 comments:

  1. Your observation is Hundred percent correct.

    ReplyDelete
  2. While reading your beautiful narration, my mind went back to several years ago, when there was something similar to recall .
    My great grand mother, lived in tumkur. My great grand father was a school teacher. They had nine children. But still, they gave shelter and accommodation to many financially poor students and gave them extra attention to come up in life. Some of them became managers in banks and some highly placed govt. Officials in Delhi . This went on even when my great grandma was in her late 80's.

    ReplyDelete
  3. ಘನ ವಿದ್ವಾಂಸರೂ,ಶಿಷ್ಯವತ್ಸಲರೂ ಆದಂತಹವರ ಬಗ್ಗೆ ತಿಳಿಯುವುದು ನಮ್ಮ ಭಾಗ್ಯ ವಿಶೇಷ.ಧನ್ಯವಾದಗಳು

    ReplyDelete
  4. ಉಸ್ಸತ ಸ್ಧಾನದಲ್ಲಿರುವ ಆಚಾರ್ಯರು ಕ್ಷಮತ ಹೊಂದಿರುವ ಶಿಷ್ಯನ್ನನ್ನು ಹುಢುಕುತ್ತಿರುತ್ತಾರೆ

    ReplyDelete