Saturday, September 20, 2025

ಮಾಧವಿಯ ಮಕ್ಕಳು


ಹಿಂದಿನ ಸಂಚಿಕೆಯಲ್ಲಿ "ಯಯಾತಿಯ ಮೊಮ್ಮಕ್ಕಳು" ಎನ್ನುವ ಶೀರ್ಷಿಕೆಯಡಿ ಯಯಾತಿ ಚಕ್ರವರ್ತಿ ಸ್ವರ್ಗದಿಂದ ದೂಡಲ್ಪಟ್ಟು ಭೂಮಿಯ ಮೇಲೆ ಬಿದ್ದದ್ದು, ಚತುರ್ಮುಖ ಬ್ರಹ್ಮದೇವರ ಕರುಣೆಯಿಂದ ನೈಮಿಷಾರಣ್ಯದಲ್ಲಿ ಯಜ್ಞ ನಡೆಸುತ್ತಿದ್ದ ತನ್ನ ನಾಲ್ಕು ದೌಹಿತ್ರರ ನಡುವೆ ಬಂದದ್ದು, ಮುಂತಾದ ಕೆಲವು ವಿಚಾರಗಳನ್ನು ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಆ ನಾಲ್ವರು ಯಯಾತಿಯ ಮಗಳಾದ ಮಾಧವಿಯ ಮಕ್ಕಳೆಂದೂ, ಪ್ರತಿಯೊಬ್ಬರೂ ಬಲು ಪ್ರಚಂಡರೆಂದೂ ತಿಳಿದೆವು. ಅವರ ಹುಟ್ಟಿನ ಸಂದರ್ಭಗಳನ್ನು ಮತ್ತು ಅವರ ವಿಶೇಷ ಸಾಧನೆಗಳ ಬಗ್ಗೆ ಸ್ವಲ್ಪವನ್ನು ತಿಳಿಯಲು ಈಗ ಪ್ರಯತ್ನ ಪಡೋಣ. 

*****

ವಿಶ್ವಾಮಿತ್ರ ಮಹರ್ಷಿಯ ಬಳಿ ಗಾಲವ ಎನ್ನುವ ಋಷಿಕುಮಾರ ಶಿಷ್ಯತ್ವ ವಹಿಸಿ ವಿದ್ಯಾರ್ಜನೆ ಮಾಡಿದರು. ಗುರುಗಳಿಗೆ ಅಚ್ಚುಮೆಚ್ಚಿನ ಶಿಷ್ಯ. ಶಿಷ್ಯನಿಗೆ ಅತ್ಯಂತ ಪ್ರಿಯರಾದ ಗುರುಗಳು. ಕಾಲಕ್ರಮದಲ್ಲಿ ವಿದ್ಯಾಭ್ಯಾಸ ಪೂರ್ಣವಾಯಿತು. ಈಗ ಗಾಲವ ಋಷಿಕುಮಾರ ಮಹರ್ಷಿ ಗಾಲವ ಆಗಿದ್ದಾರೆ. ಲೋಕದ ಕ್ರಮದಂತೆ ಶಿಷ್ಯನು ವಿದ್ಯಾಭ್ಯಾಸ ಮುಗಿದ ನಂತರ ಗುರುಕುಲ ತೊರೆದು ಹೋಗಲೇಬೇಕಲ್ಲ. ಆ ಸಮಯ ಬಂದಿತು. 

"ಗಾಲವ, ನಿನ್ನ ವಿದ್ಯಾಭ್ಯಾಸ ಪೂರ್ತಿಯಾಯಿತು. ನೀನಿನ್ನು ಗುರುಕುಲದಿಂದ ಹೊರಟು, ಸ್ವತಂತ್ರವಾಗಿ ಯೋಗ್ಯ ಜೀವನ ನಡೆಸು"
"ನಿಮ್ಮನ್ನು ಬಿಟ್ಟು ಹೋಗಲು ಮನಸ್ಸಿಲ್ಲ"
"ನನಗೂ ನಿನ್ನನ್ನು ಕಳಿಸಲು ಇಷ್ಟವಿಲ್ಲ. ಆದರೂ ಕಾಲಚಕ್ರಕ್ಕೆ ನಾವೇಲ್ಲರೂ ಬಾಗಬೇಕಲ್ಲವೇ?"
"ತಮ್ಮಾಜ್ಞೆ. ಗುರುದಕ್ಷಿಣೆ ನೀಡುವುದು ಉಳಿದಿದೆ. ನಿಮಗೆ ಏನಾದರೂ ಕೊಡುವ ಯೋಗ್ಯತೆ ನನಗಿಲ್ಲ. ಆದರೂ ಏನು ಕೊಟ್ಟರೆ ತಮಗೆ ಸಮ್ಮತ ಎಂದು ದಯಮಾಡಿ ತಿಳಿಸಬೇಕು"
"ಶಿಷ್ಯವೃತ್ತಿಯ ಪೂರ್ಣ ಕಾಲವೂ ಮನತುಂಬಿ ನನ್ನ ಮತ್ತು ಆಶ್ರಮದ ಸೇವೆ ಮಾಡಿದ್ದೀಯೆ. ಅದೇ ಸಾಕು. ಗುರುದಕ್ಷಿಣೆ ಏನೂ ಬೇಡ"
"ಹಾಗಲ್ಲ. ನನ್ನಿಂದ ಲೋಪ ಆಗಬಾರದು. ಕೃಪೆಮಾಡಿ ಏನಾದರೂ ಹೇಳಿ"
"ಹೇಳಿದಮೇಲೆ ಮುಗಿಯಿತು. ನೀನು ಹೋಗಲು ನನ್ನ ಅಪ್ಪಣೆಯಿದೆ"
"ಮತ್ತೊಮ್ಮೆ ಬೇಡುತ್ತೇನೆ. ದಯಮಾಡಿ ಹೇಳುವವರಾಗಿ"

ಗುರುಗಳಿಗೆ ಈಗ ಕೋಪ ಬಂತು. 

"ನಿನ್ನ ಹಟವೇ ಗೆಲ್ಲಬೇಕೆ? ಸರಿ. ಹಾಗಿದ್ದರೆ ಮೈ ಎಲ್ಲ ಚಂದ್ರಕಿರಣದಂತೆ ಬಿಳಿಯಿರುವ, ಒಂದು ಕಿವಿ ಮಾತ್ರ ಕಪ್ಪಗಿರುವ, ಶ್ರೇಷ್ಠ ತಳಿಯ ಎಂಟು ನೂರು "ಶ್ಯಾಮಲಕರ್ಣ" ಕುದುರೆಗಳನ್ನು ಕೊಡು"
"ಆಗಲಿ ಗುರುಗಳೇ. ಸ್ವಲ್ಪ ಸಮಯದಲ್ಲಿ ತಂದು ಕೊಡುತ್ತೇನೆ"

ಗುರುಗಳ ಅಪ್ಪಣೆ ಪಡೆದು ಗಾಲವರು ಹೊರಟರು. "ಶ್ಯಾಮಲಕರ್ಣ" ಕುದುರೆಗಳು ಬಹಳ ಅಪರೂಪ. ಇಂತಹವನ್ನು ಅಶ್ವಮೇಧ ಯಾಗಗಳಿಗೆ ಮೀಸಲಿಡುತ್ತಾರಂತೆ. ಈಗ ಗಾಲವರಿಗೆ ಅಂತಹ ಎಂಟು ನೂರು ಕುದುರೆಗಳು ಬೇಕು!
*****

ಗಾಲವರು ಯೋಚಿಸಿದರು. ಯಾರನ್ನು ಕೇಳುವುದು? ಆಗ ಯಯಾತಿ ಚಕ್ರವರ್ತಿಯ ಆಳ್ವಿಕೆಯ ಕಾಲ. ಅವನನ್ನೇ ಕೇಳುವುದು ಎಂದು ಪ್ರತಿಷ್ಠಾನ ನಗರಕ್ಕೆ ಬಂದರು. ಯಯಾತಿಯು ಅವರನ್ನು ಬರಗೊಂಡು, ಸತ್ಕರಿಸಿ, ಬಂದ ಕಾರಣವನ್ನು ಕೇಳಿದ. ಗಾಲವರು ಎಂಟು ನೂರು ಶ್ಯಾಮಲಕರ್ಣ ಕುದುರೆಗಳನ್ನು ಕೇಳಿದರು. ಯಯಾತಿಯ ಬಳಿ ಅಂತಹ ಕುದುರೆಗಳಿಲ್ಲ. 

"ಮಹರ್ಷಿಗಳೇ, ನನ್ನ ಬಳಿ ಅಂತಹ ಕುದುರೆಗಳಿಲ್ಲ. ಆದರೆ ನನ್ನ ಬಳಿ ಬಂದಿರುವ ನಿಮ್ಮಂತಹ ಮಾನ್ಯರನ್ನು ಹಾಗೆಯೇ ಕಳಿಸಲಾರೆ. ಒಂದು ಕೆಲಸ ಮಾಡಿ. ನನ್ನ ಮಗಳು "ಮಾಧವಿ" ವಿವಾಹಯೋಗ್ಯಳಿದ್ದಾಳೆ. ಇವಳನ್ನು ನಿಮ್ಮ ನೆರಳಲ್ಲಿ ಕಳಿಸಿಕೊಡುತ್ತೇನೆ. ಇವಳು ಸಾಮಾನ್ಯಳಲ್ಲ. ಅಪೂರ್ವ ಲಾವಣ್ಯವತಿ ಅಷ್ಟೇ ಅಲ್ಲ. ತನ್ನ ಸಾಧನೆಯಿಂದ ವಿಶೇಷ ವರವೊಂದನ್ನು ಪಡೆದುಕೊಂಡಿದ್ದಾಳೆ. ಇವಳು ಒಬ್ಬನನ್ನು ವಿವಾಹವಾಗಿ, ಗರ್ಭವತಿಯಾಗಿ, ಪ್ರಸವವಾದ ನಂತರ ಮತ್ತೆ ಕನ್ಯತ್ವ ಮರಳಿ ಪಡೆಯುತ್ತಾಳೆ. ಮತ್ತೆ ಕನ್ಯೆಯಾಗಿ ವಿವಾಹಯೋಗ್ಯಳಾಗುತ್ತಾಳೆ. ಶ್ಯಾಮಲಕರ್ಣ ಕುದುರೆಗಳಿರುವ ಯಾವುದಾದರೂ ರಾಜನಿಗೆ ಇವಳನ್ನು ಕೊಟ್ಟು ವಿವಾಹ ಮಾಡಿ ನೀವು ಕದುರೆಗಳನ್ನು ಪಡೆಯಿರಿ. ನಿಮ್ಮ ಗುರುಗಳಿಗೆ ದಕ್ಷಿಣೆಯಾಗಿ ಕೊಡಿ"

ಯಾಯಾತಿ ಮಹಾರಾಜನ ಈ ಮಾತಿಗೆ ಮಗಳು ಮಾಧವಿ ಸಮ್ಮತಿಸಿದಳು. ಗಾಲವ ಋಷಿಗಳ ಸಂಗಡ ಹೊರಟಳು. 
*****

ಗಾಲವ, ಮಾಧವಿಯರು ಅಯೋಧ್ಯೆಯ ಅರಸು ಹರ್ಯಶ್ವನ ಬಳಿಗೆ ಹೋದರು. ಅವನ ಬಳಿ ಎರಡು ನೂರು ಶ್ಯಾಮಲಕರ್ಣ ಕುದುರೆಗಳಿದ್ದವು. ಗಾಲವರಿಗೆ ಬೇಕಾದದ್ದು ಎಂಟು ನೂರು ಕುದುರೆಗಳು. ಮಾಧವಿಯು ಹರ್ಯಶ್ವ ಮಹಾರಾಜನಿಗೆ ಹೇಳಿದಳು: "ನನ್ನನ್ನು ಮದುವೆಯಾಗಿ ಎರಡು ನೂರು ಕುದುರೆಗಳನ್ನು ಗಾಲವರಿಗೆ ಕೊಡಿ. ಒಂದು ಮಗು ಜನಿಸಿದ ನಂತರ ನಾನು ಮತ್ತೆ ಕನ್ಯೆಯಾಗಿ ಗಾಲವರೊಂದಿಗೆ ಬೇರೆ ಕುದುರೆಗಳನ್ನು ಆರಸಿಕೊಂಡು ಹೋಗುತ್ತೇನೆ". ಹರ್ಯಶ್ವ ಇದಕ್ಕೆ ಒಪ್ಪಿದ. ಗಾಲವರೂ ಸರಿ ಎಂದರು. 

ವಿವಾಹವಾಯಿತು. ಸ್ವಲ್ಪ ಸಮಯದ ನಂತರ ತೇಜೋವಂತ ಗಂಡು ಮಗುವೊಂದು ಜನಿಸಿತು. ಹರ್ಯಶ್ವನು ಆ ಮಗುವಿಗೆ "ವಸುಮನ" ಎಂದು ಹೆಸರಿಟ್ಟನು. ಆಗಿದ್ದ ಒಪ್ಪಂದದಂತೆ ಮಾಧವಿ ಮತ್ತು ಗಾಲವರು ಎರಡು ನೂರು ಕುದುರೆಗಳೊಂದಿಗೆ ಇನ್ನೂ ಬೇಕಾದ ಆರು ನೂರು ಕುದುರುಗಳನ್ನು ಅರಸುತ್ತಾ ಹೊರಟರು. 

ಮುಂದೆ ವಸುಮನ ತಂದೆಯ ನಂತರ ಅಯೋಧ್ಯೆಯ ಮಹಾರಾಜನಾದನು. ಬಹಳ ಪುಣ್ಯ ಸಂಪಾದನೆ ಮಾಡಿ ಜನಾನುರಾಗಿಯಾದ ಆಡಳಿತ ನೀಡಿದನು. ದೇವತೆಗಳು ಅವನ ಧರ್ಮ ಶ್ರದ್ಧೆಗೆ ಮೆಚ್ಚಿ ದಿವ್ಯವಾದ ಮುತ್ತಿನ ರಥ ಉಡುಗೊರೆಯಾಗಿ ಕೊಟ್ಟರು. ರಥ ಬಂದ ಸಮಯದಲ್ಲಿ ಅದನ್ನು ಕಂಡ ನಾರದ ಮಹರ್ಷಿಗಳು ವಸುಮನನಿಗೆ "ರಥ ಬಹಳ ಚೆನ್ನಾಗಿದೆ" ಎಂದರು. ಮರುಮಾತಿಲ್ಲದೇ ವಸುಮನ ಅದನ್ನು ಅವರಿಗೆ ಕೊಟ್ಟುಬಿಟ್ಟನು. 

ದೇವತೆಗಳು ಅವನಿಗೆ ಕೆಲ ಕಾಲಾನಂತರ ಎರಡನೇ ದಿವ್ಯವಾದ ರಥವನ್ನು ಕೊಟ್ಟರು. ಆಗಲೂ ಅದನ್ನು ಕಂಡ ದೊಡ್ಡವರೊಬ್ಬರು ರಥ ಸೊಗಸಾಗಿದೆ ಎಂದರು. ಮರುಮಾತಿಲ್ಲದೇ ಅದನ್ನೂ ಅವರಿಗೇ ಕೊಟ್ಟುಬಿಟ್ಟನು. 

ಮತ್ತೆ ಸ್ವಲ್ಪ ಕಾಲದ ನಂತರ ದೇವತೆಗಳು ಅವನಿಗೆ ಮೂರನೆಯ ವಿಶೇಷವಾದ ರಥವನ್ನು ಕೊಟ್ಟರು. ಅದನ್ನು ತನ್ನ ಉಪಯೋಗಕ್ಕೆ ಎಂದು ಇಟ್ಟುಕೊಂಡನು. 

***** 

ಹರ್ಯಶ್ವನಿಂದ ಬೀಳ್ಕೊಂಡು ಹೊರಟ ಗಾಲವ, ಮಾಧವಿಯರು ನಂತರ ಕಾಶೀರಾಜನಾದ ದಿವೋದಾಸನ ಬಳಿಗೆ ಬಂದರು. ದಿವೋದಾಸನ ಬಳಿಯೂ ಎರಡು ನೂರು ಶ್ಯಾಮಲಕರ್ಣ ಕುದುರೆಗಳಿದ್ದವು. ಮತ್ತೆ ಕುದುರೆಗಳ ಸಂಖ್ಯೆ ಸಾಲದಾಯಿತು. ಹರ್ಯಶ್ವನ ಬಳಿ ಮಾಡಿದ ಒಪ್ಪಂದದ ರೀತಿ ಇಲ್ಲಿಯೂ ನಡೆಯಿತು. ದಿವೋದಾಸ, ಗಾಲವ, ಮಾಧವಿಯರು ಒಪ್ಪಿದರು. 

ವಿವಾಹವಾಯಿತು. ಕೆಲ ಕಾಲಾನಂತರ ಹೊಳೆಯುವಂತಿದ್ದ ಗಂಡು ಮಗು ಹುಟ್ಟಿತು. ದಿವೋದಾಸನು ಆ ಮಗುವಿಗೆ "ಪ್ರದರ್ತನ" ಎಂದು ಹೆಸರಿಟ್ಟನು. ನಾಲ್ಕು ನೂರು ಶ್ಯಾಮಲಕರ್ಣ ಕುದುರೆಗಳೊಂದಿಗೆ ಗಾಲವ, ಮಾಧವಿಯರು ಮತ್ತೆ ನಾಲ್ಕು ನೂರು ಕುದುರೆಗಳಿಗಾಗಿ ಹುಡುಕುತ್ತ ಹೊರಟರು. 

ಪ್ರದರ್ತನನು ತಂದೆಯ ನಂತರ ಕಾಶೀರಾಜನಾಗಿ ಬಹಳ ಪ್ರಭಾವಶಾಲಿ ಅರಸಾದನು. ಅನೇಕ ದಾನ-ಧರ್ಮಗಳನ್ನು ಮಾಡಿ ಪುಣ್ಯ ಸಂಪಾದನೆ ಮಾಡಿದನು. ಒಮ್ಮೆ ಅವನು ಅತಿಥಿಗಳನ್ನು ದೂರದ ಪ್ರದೇಶದಲ್ಲಿ ಎದುರುಗೊಂಡು ತನ್ನ ಅರಮನೆಗೆ ಸತ್ಕಾರಕ್ಕಾಗಿ ಕರೆತಂದನು. ಅವರನ್ನು ಕೂರಿಸಿದ್ದ ರಥಕ್ಕೆ ನಾಲ್ಕು ಕುದುರೆಗಳಿದ್ದವು. ಮಾರ್ಗದಲ್ಲಿ ಒಂದು ಕುದುರೆ ಸತ್ತಿತು. ಮೂರು ಕುದುರೆಗಳಿಂದ ಎಳೆಯುತ್ತ ರಥ ಮುಂದೆ ಸಾಗಿತು. ಹೀಗೆ ಒಂದೊಂದಾಗಿ ಕುದುರೆಗಳು ಸತ್ತು ಕುದುರೆಗಳೇ ಇಲ್ಲವಾದುವು. ಆಗ ಪ್ರದರ್ತನನು ರಥದಿಂದ ಇಳಿದು ತಾನೇ ರಥವನ್ನು ಎಳೆದುಕೊಂಡು ಅರಮನೆ ತಲುಪಿ ಅತಿಥಿಗಳ ಸತ್ಕಾರ ನಡೆಸಿದ. 

ಪ್ರದರ್ತನನ ಯೋಗ್ಯತೆ ಅಂತಹುದು. 
*****

ಇತ್ತ ಕಡೆ ಕಾಶಿಯಿಂದ ಹೊರಟ ಗಾಲವ, ಮಾಧವಿಯರು ಧಾರಾನಗರದ ಭೋಜವಂಶದ ಅರಸು ಔಶೀನರನ ಬಳಿಗೆ ಬಂದರು. ಅವನ ಬಳಿಯೂ ಎರಡು ನೂರು ಶ್ಯಾಮಲಕರ್ಣ ಕುದುರೆಗಳು ಮಾತ್ರ ಇದ್ದವು. ಹಿಂದಿನಂತೆಯೇ ಔಶೀನರ, ಮಾಧವಿ ಮತ್ತು ಗಾಲವರ ನಡುವೆ ಒಪ್ಪಂದ ಆಯಿತು. 

ಔಶೀನರ ಮತ್ತು ಮಾಧವಿಯರ ಮದುವೆ ಆಯಿತು. ಕೆಲ ಸಮಯದ ನಂತರ ತೇಜೋವಂತ ಗಂಡು ಮಗುವೊಂದು ಹುಟ್ಟಿತು. ಔಶೀನರನು ಆ ಮಗುವಿಗೆ "ಶಿಬಿ" ಎಂದು ಹೆಸರಿಟ್ಟನು. ಒಪ್ಪಂದದಂತೆ ಗಾಲವ, ಮಾಧವಿಯರು ಈಗ ಆರು ನೂರು ಶ್ಯಾಮಲಕರ್ಣ ಕುದುರೆಗಳೊಂದಿಗೆ ಹೊರಟರು. 

ಕಾಲಾನಂತರ ಶಿಬಿಯು ಚಕ್ರವರ್ತಿಯಾದನು. ದತ್ತಿ-ದಾನಗಳಲ್ಲಿ ಅವನ ಸಮ ಇನ್ನೊಬ್ಬರಿಲ್ಲ ಎನ್ನುವಂತೆ ರಾಜ್ಯವಾಳಿದನು. ಒಂದು ದಿನ ಅವನು ಆಸ್ಥಾನದಲ್ಲಿ ಕುಳಿತಿದ್ದಾಗ ಒಂದು ಪಾರಿವಾಳ ಹೆದರಿಕೊಂಡು ಹಾರಿ ಬಂದು ಅವನ ಮಡಿಲಿನಲ್ಲಿ ಅವಿತುಕೊಂಡಿತು. ಅದರ ಹಿಂದೆಯೇ ಹಾರಿ ಬಂದ ಗಿಡುಗವೊಂದು ಶಿಬಿಯನ್ನು ಕುರಿತು "ಅದು ನನ್ನ ಆಹಾರ. ಅದನ್ನು ಬಿಡು" ಎಂದು ಕೇಳಿತು. ಶಿಬಿಯು "ಅದು ನನ್ನ ಶರಣು ಬಂದಿದೆ. ಅದನ್ನು ಬಿಡುವುದಿಲ್ಲ. ನಿನಗೆ ಅದರ ಬದಲಾಗಿ ಬೇರೆ ಅಷ್ಟೇ ತೂಕದ ಮಾಂಸವನ್ನು ಕೊಡುತ್ತೇನೆ" ಎಂದನು. ಗಿಡುಗವು "ಯಾವುದೋ ಮಾಂಸವು ನನಗೆ ಆಗುವುದಿಲ್ಲ. ನಿನ್ನ ದೇಹದ ಮಾಂಸ ಆದರೆ ಆಗಬಹುದು" ಎಂದಿತು. 

ತಕ್ಕಡಿಯನ್ನು ತರಿಸಿ, ಒಂದು ಕಡೆ ಪಾರಿವಾಳವನ್ನು ಕೂಡಿಸಿ, ಶಿಬಿಯು ತನ್ನ ತೊಡೆಯ ಮಾಂಸವನ್ನೇ ಕೊಯ್ದು ಇನ್ನೊಂದು ಕಡೆ ಹಾಕುತ್ತಾ ತೂಗಿ ನೋಡಿದನು. ಆಶ್ಚರ್ಯವೆಂದರೆ ಎಷ್ಟು ಮಾಂಸ ಹಾಕಿದರೂ ಪಾರಿವಾಳದ ತೂಕಕ್ಕೆ ಸಮ ಆಗಲಿಲ್ಲ. ಕಡೆಗೆ ತಾನೇ ತಕ್ಕಡಿಯಲ್ಲಿ ಕುಳಿತನು. ಆಗ ತೂಕ ಸಮವಾಯಿತು. 

ಅಗ್ನಿದೇವ ಮತ್ತು ದೇವೇಂದ್ರ ಪ್ರತ್ಯಕ್ಷರಾದರು. ಶಿಬಿಯ ಗುಣಗಳನ್ನು ಪರೀಕ್ಷಿಸಲು ಅಗ್ನಿಯು ಪಾರಿವಾಳವಾಗಿ, ಇಂದ್ರನು ಗಿಡುಗನಾಗಿ ಬಂದಿದ್ದರು. ಶಿಬಿಗೆ ಬಹಳ ಕೀರ್ತಿ ಬಂದಿತು. ಶಿಬಿಯ ಗುಣ ಅಂತಹದ್ದು. 

*****

ಇತ್ತ ಆರು ನೂರು ಶ್ಯಾಮಲಕರ್ಣ ಕುದುರೆಗಳು ಮತ್ತು ಮಾಧವಿಯೊಂದಿಗೆ ಧಾರಾನಗರದಿಂದ ಹೊರಟ ಗಾಲವರು ಗುರು ವಿಶ್ವಾಮಿತ್ರರ ಆಶ್ರಮಕ್ಕೆ ಬಂದರು. ಅವರಿಗೆ ಆರು ನೂರು ಕುದುರೆಗಳನ್ನು ಮತ್ತು ಮಾಧವಿಯನ್ನು ಒಪ್ಪಿಸಿದರು. ಎರಡು ನೂರು ಕುದುರೆಗಳ ಬದಲಾಗಿ ಮಾಧವಿಯನ್ನು ವಿವಾಹವಾಗಿ ಗುರುದಕ್ಷಿಣೆ ಪೂರ್ಣವಾದಂತೆ ಹರಸುವಂತೆ ಕೇಳಿಕೊಂಡರು. 

ವಿಶ್ವಾಮಿತ್ರರು ಒಪ್ಪಿದರು. ಅವರ ಮತ್ತು ಮಾಧವಿಯ ಮದುವೆಯಾಯಿತು. ಗಾಲವರ ಕೆಲಸ ಪೂರ್ತಿಯಾಗಿ ಅವರು ಮಾಧವಿಗೆ ಕೃತಜ್ಞತೆ ಸಲ್ಲಿಸಿ ಹೊರಟು ಹೋದರು. 

ಮುಂದೆ ಕೆಲಕಾಲದಲ್ಲಿ ಈ ದಂಪತಿಗಳಿಗೆ ತೇಜಸ್ವಿ ಗಂಡು ಮಗು ಹುಟ್ಟಿತು. ಅವನಿಗೆ "ಅಷ್ಟಕ" ಎಂದು ಹೆಸರಿಟ್ಟರು. ಅವನು ದೊಡ್ಡವನಾಗಿ ಮಹಾ ತಪಸ್ವಿಯಾಗಿ ಅನೇಕ ಪುಣ್ಯ ಸಂಪಾದನೆ ಮಾಡಿದನು. 

*****

ಅಷ್ಟಕ ಹುಟ್ಟಿದ ಮೇಲೆ ಮಾಧವಿಯು ತಂದೆಯಾದ ಯಯಾತಿಯ ಬಳಿಗೆ ಬಂದಳು. ಆಗ ಯಯಾತಿಯು ಅವಳಿಗೆ ವಿವಾಹಕ್ಕಾಗಿ ಸ್ವಯಂವರವೊಂದನ್ನು ಏರ್ಪಡಿಸಿದ. ಮೊದಲು ಅವಳನ್ನು ಮದುವೆಯಾಗಿದ್ದ ಮಹಾರಾಜರುಗಳನ್ನು ಸೇರಿ ಅನೇಕ ಪ್ರಭಾವಿಗಳು ಅವಳನ್ನು ಕೈಹಿಡಿಯಲು ಕಾತುರರಾಗಿದ್ದರು. ಆದರೆ ಈಗ ಮಾಧವಿಗೆ ವಿವಾಹ ಬೇಡವಾಗಿತ್ತು. ಎಲ್ಲರನ್ನೂ ನಿರಾಕರಿಸಿ, ತಂದೆಯ ಒಪ್ಪಿಗೆ ಪಡೆದು ತಪಸ್ವಿನಿಯಾದಳು. ಕಾಡಿನಲ್ಲಿ ಜಿಂಕೆಗಳಂತೆ ಜೀವನ ನಡೆಸುತ್ತ, ಹುಲ್ಲನ್ನೇ ಆಹಾರವಾಗಿ ಸೇವಿಸುತ್ತಾ ಬಹಳ ಕಾಲ ತಪಸ್ಸು ಮಾಡಿದಳು. ಹೇರಳವಾದ ಪುಣ್ಯಾರಾಶಿಯನ್ನೇ ಸಂಪಾದಿಸಿದಳು. 

ತನ್ನ ನಾಲ್ವರು ಮಕ್ಕಳು ನೈಮಿಷಾರಣ್ಯದಲ್ಲಿ ಯಜ್ಞ ನಡೆಸುತ್ತಿದ್ದ ಸ್ಥಳಕ್ಕೆ, ತಂದೆಯಾದ ಯಯಾತಿಯು ಸ್ವರ್ಗದಿಂದ ಹೊರಬಂದು ಸೇರಿದ ಸಮಯಕ್ಕೆ, ಮಾಧವಿಯೂ ಬಂದಳು. ಅವಳೂ ತನ್ನ ಪುಣ್ಯದಲ್ಲಿ ತಂದೆಗೆ ಪಾಲನ್ನು ನೀಡಿದಳು. ಯಯಾತಿಯು ಮಗಳು ಮಾಧವಿ ಮತ್ತು ದೌಹಿತ್ರರ ಪ್ರೀತಿಗೆ ಕಟ್ಟುಬಿದ್ದು ಇಷ್ಟವಿಲ್ಲದಿದ್ದರೂ ಆ ಪುಣ್ಯಾರಾಶಿಯನ್ನು ಪಡೆದು ಮತ್ತೆ ಸ್ವರ್ಗದಲ್ಲಿ ತನ್ನ ಯೋಗ್ಯ ಸ್ಥಳವನ್ನು ಪಡೆದುಕೊಂಡ. 

*****

ಯಯಾತಿ, ಮಾಧವಿ ಮತ್ತು ಅವಳ ನಾಲ್ಕು ಜನ ಮಕ್ಕಳ ಪ್ರಸಂಗ ಅಧ್ಭುತವಾಗಿದೆ. ಮಾಧವಿಯ ತಾಯಿ ಯಾರು ಎನ್ನುವುದರ ಮಾಹಿತಿ ಸರಿಯಾಗಿ ಸಿಗುವುದಿಲ್ಲ. ಆದರೆ ಮಾಧವಿಯು ತನ್ನ ಬಾಳಿನುದ್ದಕ್ಕೂ ನಡೆದುಕೊಂಡ ರೀತಿ ಅಚ್ಚರಿ ಮೂಡಿಸುತ್ತದೆ. ಯಯಾತಿಯ ದಾನಪರತ್ವ, ಮಾಧವಿಯ ತ್ಯಾಗ ಮತ್ತು ಅವಳ ಮಕ್ಕಳಾದ ನಾಲ್ವರು ಸಹೋದರರ ಯೋಗ್ಯತೆ ಬಹಳ ದೊಡ್ಡದು. ಇದು ಸತ್ಯವಿರಬಹುದು ಅಥವಾ ಕಥೆಯೇ ಆಗಿರಬಹುದು. ನಂಬುವುದೂ ಬಿಡುವುದೂ ಅವರವರಿಗೆ ಸೇರಿದ ವಿಚಾರ. ಕೇವಲ ಕಥೆ ಎಂದುಕೊಂಡರೂ ಅದೆಂಥ ಹರವು; ಎಂತಹ ವಿಸ್ತಾರ! ಕಡೆಗೆ ನೋಡಿದರೆ ಇದು ಮಹಾಭಾರತ ಮತ್ತು ಭಾಗವತಗಳ ಒಂದು ತುಣುಕು ಮಾತ್ರ! ಅವುಗಳಲ್ಲಿ ಇಂತಹ ಅನೇಕ ಪ್ರಸಂಗಗಳು ಸೇರಿಹೋಗಿವೆ. 

ನಾವು ಅಣ್ಣ-ತಮ್ಮಂದಿರಿಗೆ "ಸಹೋದರರು" ಎಂದು ಸುಲಭವಾಗಿ ಹೇಳುತ್ತೇವೆ. ಒಂದೇ ಉದರದಲ್ಲಿ (ಗರ್ಭದಲ್ಲಿ) ಹುಟ್ಟಿದವರು ಸಹೋದರರು. ಅಂದರೆ ಒಂದು ತಾಯಿಯ ಮಕ್ಕಳು. ಆದ್ದರಿಂದ ವಸುಮನ-ಪ್ರದರ್ತನ-ಶಿಬಿ-ಅಷ್ಟಕ ನಾಲ್ಕು ಬೇರೆ ಬೇರೆ ತಂದೆಯರ ಮಕ್ಕಳಾದರೂ ಸಹೋದರರು. ಒಬ್ಬನೇ ತಂದೆಯ, ಆದರೆ ಬೇರೆ ಬೇರೆ ತಾಯಿಯರ ಮಕ್ಕಳು ಅಣ್ಣ-ತಮ್ಮಂದಿರು. ಧರ್ಮರಾಯ-ಭೀಮ-ಅರ್ಜುನ ಸಹೋದರರು. ಹಾಗೆಯೇ, ನಕುಲ-ಸಹದೇವರು ಸಹೋದರರು. ಧರ್ಮರಾಯ-ಭೀಮ-ಅರ್ಜುನ-ನಕುಲ-ಸಹದೇವರು ಅಣ್ಣ-ತಮ್ಮಂದಿರು. ಹೀಗೆ. 

ಸಿಂಧೂನದಿಯ ದಡದಲ್ಲಿ, ಇಂದಿನ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ Sehvan ಎನ್ನುವ ಹೆಸರಿನ ನಗರ ಒಂದಿದೆ. ಪಾಕಿಸ್ತಾನದ ಹೈದರಾಬಾದ್ ನಗರದಿಂದ ಸುಮಾರು 80 ಮೈಲಿಗಳ ದೂರದಲ್ಲಿ. (ಈಗಿನ ತೆಲಂಗಾಣದಲ್ಲಿರುವ ನಮ್ಮ ಹೈದರಾಬಾದ್ ನಗರಕ್ಕೆ ಹಿಂದೆ Hyderabad (Deccan) ಎಂದು ಬರೆಯುತ್ತಿದ್ದು, ಹೇಳುತ್ತಿದ್ದುದು ಇದೇ ಕಾರಣಕ್ಕೆ, ಸ್ವತಂತ್ರಪೂರ್ವದಲ್ಲಿ ಒಂದು ಹೈದರಾಬಾದ್ (ಸಿಂಧ್), ಮತ್ತೊಂದು ಹೈದರಾಬಾದ್ (ದಖನ್) ಎಂದು ಗುರುತಿಸಲು). ಈ Sehvan  ನಗರದ ಹಿಂದಿನ ಹೆಸರು "ಶಿಬಿಸ್ಥಾನ" ಎಂದು. ಶಿಬಿ ಚಕ್ರವರ್ತಿಯ ಹೆಸರಿನಿಂದ ಕಟ್ಟಿದ ಪಟ್ಟಣ ಅದು. ಟರ್ಕಿ ದೇಶದಿಂದ ಬಂದವರ ಧಾಳಿಗೆ ತುತ್ತಾಗಿ ನಂತರ ಷೆವಾನ್ ಎಂದಾಗಿದೆ. 

ತಮಿಳುನಾಡಿನ ತಿರುಚಿನಾಪಳ್ಳಿ ನಗರದಿಂದ ಸುಮಾರು 20 ಮೈಲಿ ದೂರದಲ್ಲಿ ತಿರುವೆಲ್ಲರೈ ಎನ್ನುವ ಸ್ಥಳವೊಂದಿದೆ. ಅಲ್ಲಿ ಪ್ರಸಿದ್ಧವಾದ "ಪುಂಡರೀಕಾಕ್ಷಸ್ವಾಮಿ" ದೇವಾಲಯವೊಂದಿದೆ. ಇದೂ ಶಿಬಿ ಚಕ್ರವರ್ತಿ ಸ್ಥಾಪಿಸಿದ್ದು ಎಂದು ಪ್ರತೀತಿ. 

*****

ಯಯಾತಿ ಚಕ್ರವರ್ತಿಯ ಬಗ್ಗೆ ಅನೇಕ ಅತಿರೇಕದ ಅಭಿಪ್ರಾಯಗಳಿವೆ. ವಾಸ್ತವವಾಗಿ ನಮ್ಮಲ್ಲಿ ಮೂಲ ಗ್ರಂಥಗಳನ್ನು ಸಂಪೂರ್ಣವಾಗಿ ಓದುವ ಅಭ್ಯಾಸವಿಲ್ಲ. ಅಲ್ಲಷ್ಟು-ಇಲ್ಲಷ್ಟು ಓದಿ, ಅವರು ಹೇಳಿದ್ದು- ಇವರು ಹೇಳಿದ್ದು ಕೇಳಿ ನಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವ ಹವ್ಯಾಸವಿದೆ. ಈಗಲೂ ಹಿಂದಿನ ಚಕ್ರವರ್ತಿಗಳ ಹೆಸರುಗಳನ್ನೂ ನೆನೆಸಿಕೊಳ್ಳುವಾಗ ಮಾಂಧಾತ, ನಹುಷ, ಅಂಬರೀಷ, ಯಯಾತಿ, ಯದು ಮುಂತಾದವರು ಎಂದು ಹೇಳುವ ಪರಿಪಾಠ ಉಂಟು. ಸ್ವಲ್ಪವಾದರೂ ದೋಷ ಇಲ್ಲದ ಮನುಷ್ಯ ಎಲ್ಲಿದ್ದಾನೆ? ಅಂದಮಾತ್ರಕ್ಕೆ ಎಲ್ಲೋ ಕಂಡ ಒಂದು ದೋಷವನ್ನೇ ಹಿಗ್ಗಿಸಿ ತೋರಿಸುವುದು ಎಷ್ಟು ಸರಿ? ಜೀವನದಲ್ಲಿ ಹಾದರ ಇದೆ. ಆದರೆ ಹಾದರವೇ ಜೀವನವಲ್ಲ. 

ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆಯನ್ನು ಮುಂದೆ ಎಂದಾದರೂ ಮಾಡೋಣ. 

No comments:

Post a Comment