Tuesday, September 2, 2025

ಕೊಟ್ಟಿದೀನಿ, ಕೊಟ್ಟಿದೀನಿ!


"ಗೋದಾನ" ಅನ್ನುವ ಪದವನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಬಹಳ ಮಂದಿ ತಿಳಿದಿರುವಂತೆ ಅದು ಸತ್ತವರ ಅಪರ ಕ್ರಿಯಾದಿಗಳನ್ನು ಮಾಡುವ ಕಾಲದಲ್ಲಿ ಕೊಡುವ ಒಂದು ದಾನ. ಬದುಕಿರುವಾಗ ಒಬ್ಬರು ಗೋದಾನ ಕೊಡಲಿಲ್ಲ. ಇನ್ನೊಬ್ಬರು ಕೊಡಬೇಕು ಎಂದುಕೊಂಡರು. ಕೊಡುವ ಮೊದಲೇ ಸತ್ತರು. ಈಗ ಅವರ ಬದಲು ಅವರ ಮನೆಯವರು ಕೊಡುತ್ತಾರೆ. ಸತ್ತವರ ಕ್ರಿಯಾಕರ್ಮಗಳನ್ನು ಮಾಡುವವರು ಸತ್ತ ದಿನದಿಂದ ಒಂದು ವರುಷದೊಳಗೆ ಕೊಟ್ಟರೆ ಈಗಲೂ ಕಾಲವಾದವರೇ ದಾನಕೂಟ್ಟತೆರನಾಗಿ ಅವರಿಗೆ ತಲಪುತ್ತದೆ ಎಂದು ಭಾವನೆ.  ಬಹಳ ಕಡೆ, ಅದರಲ್ಲಿಯೂ ಸಾಮಾನ್ಯವಾಗಿ ಆರನೇ ತಿಂಗಳಿನ ಆಸು-ಪಾಸಿನಲ್ಲಿ ಕೊಡುವುದುಂಟು. 

ಸತ್ತ ವರುಷದಲ್ಲಿ ಸತ್ತವರ ಮಗಳ ಮದುವೆ ಮಾಡಿದರೆ ("ಕನ್ಯೆ" ಒಂದು ವಸ್ತುವಲ್ಲ. ಅವಳನ್ನು ದಾನ ಮಾಡುವಂತಿಲ್ಲ ಎನ್ನುವ ನಿಜವಾದ ವೈದಿಕ ಪದ್ಧತಿ ಮರೆಯಾದ ಮೇಲೆ, ಕನ್ಯಾದಾನ ಎನ್ನುವ ಆಚರಣೆ ಬಂದ ಮೇಲೆ) ಅವರಿಗೆ ಕನ್ಯಾದಾನ ಫಲ ಸಿಗುತ್ತದೆ ಎಂದು ನಂಬಿದಂತೆ. ಸತ್ತವರ ಗಂಡು ಮಕ್ಕಳಿಗೆ ಆ ವ್ಯಕ್ತಿ ಸತ್ತು ವರುಷ ತುಂಬುವ ಮುಂಚೆ ಮದುವೆ ಮಾಡುತ್ತಿರಲಿಲ್ಲ. ವಿವಾಹಯೋಗ್ಯ ಹೆಣ್ಣು ಮಕ್ಕಳಿದ್ದರೆ ಮಾಡದೆ ಬಿಡುತ್ತಿರಲಿಲ್ಲ. ಹೀಗೆ ನಡೆಯುತ್ತಿತ್ತು. ಮುಂದೆ ಬರಬರುತ್ತ ಸ್ವಲ್ಪ ನಿಯಮ ಸಡಿಲವಾಯಿತು. ಯಾರೋ ಬುದ್ಧಿವಂತರು "ಯುಗಾದಿ ಬಂದರೆ ಹೊಸ ವರ್ಷ ಬಂತು. ವರ್ಷವಾಯಿತು. ಮಾಡಬಹುದು", ಅಂದರು. ಹೀಗೆ. ಹಾಗಿದ್ದರೆ ಫಾಲ್ಗುಣ ಶುಕ್ಲ ಪಕ್ಷದಲ್ಲಿ ಸತ್ತವರ ಮಗನಿಗೆ ಚೈತ್ರದಲ್ಲಿ, ಅದು ಕೇವಲ ಒಂದು ತಿಂಗಳ ನಂತರವಾದರೂ, ಮದುವೆಯಾಗಬಹುದು ಎಂದಾಯಿತು. 

ಹಿಂದೆಲ್ಲಾ ಒಂದು ಸುಲಕ್ಷಣವಾದ (ಕಪಿಲೆ ಎನ್ನುವ ಕಂಡು ಬಣ್ಣದ ಹಸು ಸಿಕ್ಕಿದರೆ ಉತ್ತಮ), ಚಿಕ್ಕ ಕರುವಿರುವ, ಹೆಚ್ಚಾದ ಹಾಲನ್ನು ಕೊಡುವ ಗೋವನ್ನು ತಂದು, ಅದಕ್ಕೆ ಚೆನ್ನಾಗಿ ಅಲಂಕರಿಸಿ, ಕೊಂಬುಗಳಿಗೆ ತಮ್ಮ ಶಕ್ತಿಯ ಪ್ರಕಾರ ಚಿನ್ನದ ಇಲ್ಲವೇ ಬೆಳ್ಳಿಯ ಕೋಡನ್ನು ಸೇರಿಸಿ, ಮೈಮೇಲೆ ಸೊಗಸಾದ ಮೇಲು ಹೊದ್ದಿಕೆ ಹೊದಿಸಿ, ಮುತ್ತಿನ ಮತ್ತು ಹೂವಿನ ಹಾರಗಳನ್ನು ಹಾಕಿ, ಪೂಜಿಸಿ, ಗೋದಾನದ ಸಂಕಲ್ಪ ಮಾಡಿ, ನಂತರ ಕ್ರಮವಾಗಿ ಯೋಗ್ಯರಿಗೆ ದಾನ ಮಾಡುತ್ತಿದ್ದರು. ನಮ್ಮ ಚಿಕ್ಕಂದಿನಲ್ಲಿ ಹೀಗೆ ಹಳ್ಳಿಗಳಲ್ಲಿ ಅನೇಕ ದಾನ ಮಾಡಿರುವುದನ್ನು ಕಂಡಿದ್ದೇವೆ. ಹೀಗೆ ಮಾಡಿದ ಮೇಲೆ ಆ ಹಿರಿಯರ ಮುಖದಲ್ಲಿ ಕಂಡು ಬಂದ ಧನ್ಯತಾಭಾವ ನೋಡಿದ್ದು ಇಂದಿಗೂ ಮಾಸದು. ಒಂದು ಸಂದರ್ಭದಲ್ಲಿ, ಸುಮಾರು ನಲವತ್ತು ವರುಷಗಳ ಹಿಂದೆ, ಒಂದು ಕುಟುಂಬದವರು ಡೈರಿ ಅಂಗಡಿಯವರಿಂದ ಹಾಲಿನ ಚೀಟಿಗಳನ್ನು ಕೊಂಡುತಂದು 365 ಚೀಟಿಗಳನ್ನು ಒಂದು ಲಕೋಟೆಯಲ್ಲಿ ಹಾಕಿ ದಾನ ಕೊಟ್ಟಿದ್ದರು. ಹಸು ಸಾಕುವ ಚಿಂತೆಯಿಲ್ಲ. ಒಂದು ವರುಷ ಪ್ರತಿದಿನ ಒಂದು ಲೀಟರು ಹಾಲು ಸಿಕ್ಕುತ್ತದೆ ಎಂದು. ಈಗ ಒಂದು ಕವರಿನಲ್ಲಿ ನೂರೋ, ಇನ್ನೂರೋ ರೂಪಾಯಿಗಳನ್ನು ಹಾಕಿ "ಗೋದಾನ" ಎಂದು ಬಾಯಲ್ಲಿ ಹೇಳಿ, "ಕವರ್ ದಾನ" ಮಾಡುತ್ತಾರೆ. 

ಮನುಷ್ಯ ಸತ್ತ ಮೇಲೆ ಜೀವನು ಮುಂದೆ ಹೋಗುವ ದಾರಿಯಲ್ಲಿ "ವೈತರಣೀ" ಎನ್ನುವ ಹೆಸರಿನ ನದಿ ಇದೆಯಂತೆ. ಅದು ನಾವು ಕೇಳಿದ, ನೋಡಿದ ಎಲ್ಲ ನೀರು ಹರಿಯುವ ನದಿಗಳಂತಲ್ಲ. ಕೀವು, ರಕ್ತ, ಹೇಳಬಾರದ, ಹೇಳಲಾಗದ ಕೊಳಕು ತುಂಬಿ ಹರಿಯುವ ನದಿ. ಜೀವಿಯು ಅದನ್ನು ದಾಟಬೇಕು. ದಾಟಿಯೇ ಮುಂದೆ ಹೋಗಬೇಕು. ತನ್ನ ಜೀವಿತ ಕಾಲದಲ್ಲಿ ಗೋದಾನ ಮಾಡಿದ್ದರೆ ಆ ನದಿಯ ದಂಡೆಗೆ ಹೋದಾಗ ಅಲ್ಲಿ ಗೋವೊಂದು ಕಾಣಿಸಿಕೊಳ್ಳುತ್ತದಂತೆ. ಅದರ ಬಾಲವನ್ನು ಹಿಡಿದುಕೊಂಡರೆ ಅದು ಮೇಲೆ ಹಾರಿ ಜೀವಿಯನ್ನು ಈ ನದಿಯ ಇನ್ನೊಂದು ದಡ ಸೇರಿಸುತ್ತದಂತೆ. ಅವರು ಗೋದಾನ ಮಾಡಲಿಲ್ಲ. ಈಗ ಅವರ ಮನೆಯವರು ಮಾಡಿದರೆ ಅವರು ಮಾಡಿದಂತೆಯೇ ಆಗಿ ಬದಲಿ ಗೋವು ವೈತರಣಿಯ ದಡದಲ್ಲಿ ನಿಂತಿರುವ ಆ ಜೀವಿಗೆ ಸಿಗುತ್ತದೆ. ಶ್ರಮವಿಲ್ಲದೆ, ಸುಖವಾಗಿ ವೈತರಣೀ ದಾಟಿಸುತ್ತದೆ. ಜೀವಿಗೆ ಸದ್ಗತಿ ಸಿಗುತ್ತದೆ. ಹೀಗೆ ನಂಬಿಕೆಗಳು. 

ನಮ್ಮ ಪದ್ಧತಿಗಳಲ್ಲಿ ಐದು ವಿಧದ ಗೋದಾನಗಳಿವೆ. "ವೈತರಣೀ ಗೋದಾನ" ಐದು ವಿಧದ ಗೋದಾನಗಳಲ್ಲಿ ಒಂದು. ಅದೊಂದೇ ಅಲ್ಲ.  ಋಣ ಗೋದಾನ, ಅಂತರ್ಧೇನು ಗೋದಾನ, ಉತ್ಕ್ರಾಂತಿ ಗೋದಾನ, ವೈತರಣೀ ಗೋದಾನ ಮತ್ತು ಮೋಕ್ಷಧೇನು ಗೋದಾನ ಎಂದು ಐದು ವಿಧಗಳು. ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ ಇಂಗ್ಲಿಷಿನಲ್ಲಿ ಓದಬಹುದು. 

*****

ಕನ್ನಡ ಸಿನಿಮಾ ಪ್ರಿಯರು 1962-63 ಇಸವಿಯಲ್ಲಿ ಬಿಡುಗಡೆಯಾದ "ಮನ ಮೆಚ್ಚಿದ ಮಡದಿ" ಎನ್ನುವ ಚಲನಚಿತ್ರವನ್ನು ನೋಡಿರುತ್ತಾರೆ. ಚಿತ್ರ ಈಗಲೂ ಯೂಟ್ಯೂಬಿನಲ್ಲಿ ಲಭ್ಯವಿದೆ. ಆಸಕ್ತರು ನೋಡಬಹುದು. ಕಡಿಮೆ ಖರ್ಚಿನಲ್ಲಿ ಕನ್ನಡ ಸಿನಿಮಾ ನಿರ್ಮಿಸುತ್ತಿದ್ದ ಕಾಲ. ಪ್ರಾಯಶಃ ಒಂದೇ ಕ್ಯಾಮರಾ, ಎರಡು ಸೆಟ್ಟುಗಳು (ಪಟ್ಟಣದ ಒಂದು ಮನೆ ಮತ್ತು ಹಳ್ಳಿಯ ಒಂದು ಮನೆ), ಸ್ವಲ್ಪವೇ ಹೊರಾಂಗಣ ಚಿತ್ರೀಕರಣ, ಕಪ್ಪು-ಬಿಳುಪು ಚಿತ್ರವಾದದ್ದರಿಂದ ಹೆಚ್ಚಿನ ಬಟ್ಟೆ-ಬರೆ  ಬೇಕಿಲ್ಲ, ಹೀಗೆ ಚಿತ್ರೀಕರಣ. ಒಂದು ರೀತಿ ಹಳೆಯ ಕಂಪನಿ ನಾಟಕ ಚಿತ್ರೀಕರಣ ಮಾಡಿದಂತಿರುತ್ತಿತ್ತು. 

ಶ್ರೀನಾಥ ಎನ್ನುವ ಹಳ್ಳಿಯ ಹುಡುಗನೊಬ್ಬ (ರಾಜಕುಮಾರ್) ಪಟ್ಟಣದ ಶ್ರೀಮಂತ ದೇವರಾಜಯ್ಯನ (ಉದಯ ಕುಮಾರ್) ಮನೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ "ಪೇಯಿಂಗ್ ಗೆಸ್ಟ್'" ಆಗಿ ಬರುತ್ತಾನೆ. ಶ್ರೀನಾಥ ಮತ್ತು ದೇವರಾಜಯ್ಯನ ಹಿರಿಯ ಮಗಳು ಸುಮನ  (ಲೀಲಾವತಿ) ಅನುರಕ್ತರಾಗಿ ಹಿರಿಯರ ಇಚ್ಛೆಯ ವಿರುದ್ಧ ಮದುವೆಯಾಗುತ್ತಾರೆ. ಬಡತನದ ಜೀವನ. ಒಮ್ಮೆ ಶ್ರೀನಾಥ ತನ್ನ ಸ್ನೇಹಿತನ್ನು (ನರಸಿಂಹರಾಜು) ಹಠಾತ್ತಾಗಿ ಮನೆಗೆ ಊಟಕ್ಕೆ ಕರೆತರುತ್ತಾನೆ. ಮನೆಯಲ್ಲಿ ಅಡಿಗೆಗೆ ಪದಾರ್ಥಗಳಿಲ್ಲ. ಸುಮನಾ ಮನೆಯ ಹಿತ್ತಿಲಿನಿಂದ ಪಕ್ಕದ ಮನೆಯಾಕೆಯನ್ನು ಕರೆದು ಒಂದು ಬಟ್ಟಲು ಸಾಸಿವೆ ಮತ್ತು ಒಂದು ಸ್ವಲ್ಪ ಎಣ್ಣೆಯನ್ನು ಎರವಲು ಕೇಳುತ್ತಾಳೆ. ಆಕೆ ತನ್ನ ಮಗಳನ್ನು ಕರೆದು ತೋಟದಿಂದ ತರಕಾರಿ ಮತ್ತು ಇತರ ಸಾಮಾನುಗಳನ್ನು ತರಿಸಿ ಹಿತ್ತಿಲಿನಿಂದಲೇ ಕೊಡುತ್ತಾಳೆ. ಅಡಿಗೆ ಮುಗಿದು, ಎಲ್ಲರ ಊಟ ನಡೆದು ಸಂಸಾರದ ಮರ್ಯಾದೆ ಕಾಪಾಡಿಕೊಳ್ಳುತ್ತಾರೆ. 

ಇಂದಿನ ಪೀಳಿಗೆಗೆ ಇಂಥದೊಂದು ರೀತಿಯ ಜೀವನವಿತ್ತು ಎನ್ನುವ ಕಲ್ಪನೆಯೂ ಇರುವುದಿಲ್ಲ. ಈ ರೀತಿ ಅಕ್ಕ-ಪಕ್ಕದ ಮನೆಯ ಗೃಹಿಣಿಯರ ಪರಸ್ಪರ ಸಹಕಾರದಿಂದ ಗೃಹಕೃತ್ಯ ನಡೆಯುತ್ತಿತ್ತು. ಈಗ ಕ್ರೆಡಿಟ್ ಕಾರ್ಡ್, ಡೋರ್ ಡೆಲಿವರಿ ಮುಂತಾದುವುಗಳು ಇರುವುದರಿಂದ ಹಳೆಯ ಸಹಕಾರಿ ಮನೋಭಾವ ಮರೆತೇಹೋಗಿದೆ. ಪದಾರ್ಥಗಳೇನು, ತಯಾರಾದ ತಿಂಡಿ-ತಿನಿಸುಗಳೇ  ನಿಮಿಷಗಳಲ್ಲಿ ಹಾಜರಾಗುವಾಗ ಹೀಗೆ ಸಣ್ಣ-ಪುಟ್ಟ ಪದಾರ್ಥಗಳ ಕಡ ಪಡೆಯುವಿಕೆ ಅವಶ್ಯಕತೆಯೂ ಇಲ್ಲ. 

ಹೀಗೆ ತೆಗೆದುಕೊಂಡ ಪದಾರ್ಥಗಳನ್ನು ಮತ್ತೆ ಎಂದಾದರೂ ಹಿಂದಿರುಗಿಸುತ್ತಿದ್ದರು. ಕುರ್ಚಿಗಳು, ಪಾತ್ರೆಗಳು, ಮುಂತಾದವನ್ನೂ ಸಮಯ ಬಂದಾಗ ಪಡೆಯುವ ಅಭ್ಯಾಸವೂ ಇತ್ತು. ಹೆಣ್ಣು ನೋಡಲು ಬಂದಾಗ ಚಿನ್ನದ ಸರ, ಬಳೆಗಳನ್ನು ಈ ರೀತಿ ಕೆಲವರು ತರುತ್ತಿದ್ದುದೂ ಇತ್ತು. ಹಾಗೆ ಹಿಂದಿರುಗಿ ಕೊಡುವಾಗ "ಕೊಟ್ಟಿದ್ದೇನೆ. ಕೊಟ್ಟಿದ್ದೇನೆ!" ಎಂದು ಎರಡೆರಡು ಸಲ ಹೇಳುತ್ತಿದ್ದರು. ಪದಾರ್ಥಗಳಲ್ಲಿ ಹಿಂದಿರುಗಿಸುವಾಗ ಸ್ವಲ್ಪ ಹೆಚ್ಚು-ಕಡಿಮೆ ಇದ್ದರೂ ಎರಡು ಮನೆಯವರೂ ಚಿಂತಿಸುತ್ತಿರಲಿಲ್ಲ. "ತೆಗೆದುಕೊಂಡಾಗ ಲೋಟದ ತುಂಬಾ. ಹಿಂದಿರುಗಿಸಿದಾಗ ತಲೆ ಒಡೆದು" (ಅಳತೆ ಕಡಿಮೆ) ಎಂದು ಮನೆಯ ಕೆಲವು ಸದಸ್ಯರು ಹಾಸ್ಯ ಮಾಡಿದರೆ ಹಿರಿಯರು ಸುಮ್ಮನಿರುವಂತೆ ಹೇಳುತ್ತಿದ್ದರು. ಆದರೆ ಬೆಲೆಬಾಳುವ ವಸ್ತು, ಆಭರಣಗಳಾದರೆ "ಕೊಟ್ಟಿದ್ದೇನೆ. ಕೊಟ್ಟಿದ್ದೇನೆ! ಜೋಪಾನ. ಭದ್ರ!" ಎಂದು ಹೇಳುತ್ತಿದ್ದರು. "ಜೋಪಾನ ಅಥವಾ ಜೋಕೆ" ಎಂದು ಗಮನ ಸೆಳೆಯುವುದು  ಮುಖ್ಯವಾಗಿರುತ್ತಿತ್ತು. 

*****

ಇನ್ನೊಬ್ಬರ ವಸ್ತುವನ್ನು ಅವರು ತಾವಾಗಿ ಕೊಟ್ಟರೆ ಅದು ಅವರು ಕೊಟ್ಟಂತೆ. "ದಾನವಾಗಿ ಕೊಡುತ್ತಿದ್ದೇನೆ" ಎಂದು ಸಂಕಲ್ಪ ಮಾಡಿ ಕೊಟ್ಟರೆ ಆಗ ಅದು "ದಾನ". ಅವರಿಗೆ ಗೊತ್ತಿಲ್ಲದಂತೆ ನಾವು ತೆಗೆದುಕೊಂಡರೆ ಅದು "ಚೌರ್ಯ". ಕಳ್ಳತನ ಎಂದರೆ ಅಮಾವಾಸ್ಯೆಯ ರಾತ್ರಿಯಲ್ಲಿ ಕನ್ನ ಹಾಕಿಯೋ, ಬಸ್ಸಿನಲ್ಲಿ ಜೇಬು ಕತ್ತರಿಸಿಯೋ, ಮತ್ತಿದೇತರಹ  ತೆಗೆದುಕೊಂಡರೆ ಮಾತ್ರವಲ್ಲ. 

ನಮ್ಮ ಜೀವನದಲ್ಲಿ ನಾವು ಅನೇಕ ಬಾರಿ ಬೇರೆಯವರಿಂದ ಸಣ್ಣ-ಪುಟ್ಟ ಪ್ರಮಾಣದಲ್ಲಿ ಪದಾರ್ಥಗಳನ್ನೋ, ಹಣವನ್ನೋ ಪಡೆಯುತ್ತೇವೆ. ಅದನ್ನು ಕೊಡುವವರೂ "ಸಾಲ" ಎಂದು ಪರಿಗಣಿಸುವುದಿಲ್ಲ. ತೆಗೆದುಕೊಂಡವರು ಹಿಂದಿರುಗಿಸಲು ಮರೆತರೂ ಲೆಕ್ಕವಿಲ್ಲ. ಉದಾಹರಣೆಗೆ ದೇವಸ್ಥಾನದಲ್ಲಿ ಮಂಗಳಾರತಿ ಬಂತು. ತಟ್ಟೆಗೆ ಕಾಸು ಹಾಕದೆ ಮಂಗಳಾರತಿ ತೆಗೆದುಕೊಳ್ಳಬಾರದು ಎಂದು ಒಂದು ಅಭ್ಯಾಸ. ಜೇಬಿನಲ್ಲಿ ಬರಿ ದೊಡ್ಡ ಮೊತ್ತದ ನೋಟುಗಳೇ ತುಂಬಿವೆ. ಒಂದು ರೂಪಾಯಿ ನಾಣ್ಯವಿಲ್ಲ. ದೇವರಿಗೇನೂ ನಮ್ಮ ಕಾಸು ಬೇಕಿಲ್ಲ. ಆದರೆ ಅರ್ಚಕರಿಗೆ ಬೇಕು. ಪಕ್ಕದ ಮನೆಯವರು ಜೊತೆಯಲ್ಲಿದ್ದಾರೆ. ನಾವು ಪರದಾಡುವುದನ್ನು ಕಂಡು ಅವರು ಒಂದು ರೂಪಾಯಿ ನಾಣ್ಯ ಕೊಟ್ಟರು. "ಆಮೇಲೆ ಕೊಡುತ್ತೇನೆ" ಎಂದು ತೆಗೆದುಕೊಂಡವರು ಹೇಳಿದರು. "ಅಯ್ಯೋ, ಪರವಾಗಿಲ್ಲ" ಎಂದು ಅವರು ಹೇಳಿದರು. ಆಮೇಲೆ ಮರೆತು ಹೋಯಿತು. ಬಸ್ಸಿನಲ್ಲಿ ಟಿಕೇಟು ತೆಗೆದುಕೊಳ್ಳಲು ಸಣ್ಣ ಚಿಲ್ಲರೆ ಬೇಕು. ಜೊತೆಯಲ್ಲಿದ್ದ ಸ್ನೇಹಿತರು ಕೊಟ್ಟರು. ಅದನ್ನು ಹಿಂದಿರುಗಿಸಲಿಲ್ಲ. ಹಣ್ಣಿನಂಗಡಿಯಲ್ಲಿ ಕೊಂಡದ್ದು ನೂರಾಐದು ರೂಪಾಯಿ ಹಣ್ಣುಗಳು. ಐದು ರೂಪಾಯಿ ಚಿಲ್ಲರೆ ಇಲ್ಲ. "ನಾಳೆ ಕೊಡಿ. ಪರವಾಗಿಲ್ಲ" ಅಂದಳು ಹಣ್ಣು ಮಾರುವ ಮುದುಕಿ. ನಂತರ ಅವಳ ಅಂಗಡಿಗೆ ಹೋಗಲೇ ಇಲ್ಲ. ಹೀಗೆ ನೂರಾರು. 

ನಮ್ಮ ಜೀವನದಲ್ಲಿ ಹೀಗೆ ಅನೇಕ ಸಾರಿ ಆಗುತ್ತದೆ. ಅವರೆಲ್ಲರ "ಋಣಭಾರ" ಈಗ ನಮ್ಮ ತಲೆಯ ಮೇಲೆ ಕುಳಿತಿದೆ. ನಮ್ಮ ಜೀವನ ಯಾತ್ರೆ ಮುಗಿಯುವ ಕಾಲ. ಅವರೆಲ್ಲರನ್ನು ಹುಡುಕಿಕೊಂಡು ಹೋಗಿ ಈಗ ಕೊಡಲು ಬರುವುದಿಲ್ಲ. ಋಣಭಾರದಿಂದ ಜೀವನ ಮುಗಿಸಲು ಇಷ್ಟವಿಲ್ಲ. ಆದದ್ದರಿಂದ ಇಂತಹ ಎಲ್ಲ ಭಾರಗಳನ್ನು ಒಂದೇ ಬಾರಿ ಮುಗಿಸಲು ಕೊಡುವುದು "ಋಣ ಗೋದಾನ" ಎನಿಸುತ್ತದೆ. ಇಂತಹ ಒಂದು ಗೋದಾನದಿಂದ ಎಲ್ಲ ಚಿಲ್ಲರೆ ಸಾಲಗಳು ತೀರಿಸಿದಂತೆ. 

*****

ದಾನಗಳನ್ನು ಕೊಡುವಾಗ "ದತ್ತಂ, ನಮಮ, ನಮಮ" ಎಂದೋ, "ತುಭ್ಯಮಹಂ ಸ೦ಪ್ರತತೇ, ನಮಮ, ನಮಮ" ಎಂದು ಹೇಳುತ್ತಾರೆ. ಅದು ನಮ್ಮಮ್ಮನೂ ಅಲ್ಲ. ಅವರಮ್ಮನೂ ಅಲ್ಲ. "ಮಮ" ಎಂದರೆ ನನ್ನದು. ನಮಮ ಎಂದರೆ ನನ್ನದಲ್ಲ. "ಈ ಪದಾರ್ಥ ಇಲ್ಲಿಯವರೆಗೆ ನನ್ನದಾಗಿತ್ತು. ಈಗ ನಿಮಗೆ ಕೊಟ್ಟಿದ್ದೇನೆ. ಇನ್ನು ಮುಂದೆ ಇದು ನನ್ನದಲ್ಲ. ನಿಮ್ಮದು. ನಿಮಗೆ ಬೇಕಿದ್ದಂತೆ ವಿನಿಯೋಗಿಸಬಹುದು" ಎಂದು ಹೇಳುವುದು ಅದು. "ಕೊಟ್ಟಿದ್ದೇನೆ. ಕೊಟ್ಟಿದ್ದೇನೆ", "ನನ್ನದಲ್ಲ, ನನ್ನದಲ್ಲ" ಎಂದು ಹೇಳುವುದು. ಒಂದಲ್ಲ. ಎರಡು ಸಾರಿ!

ಈ ರೀತಿ ಅನೇಕ ಕೆಲಸಗಳಿಗೆ ದಾನ ಕೊಡುವಾಗ "ಗೋದಾನ" ಎಂದೇಕೆ? ಬೇರೆ ಏನಾದರೂಎಕೆ ಆಗಬಾರದು? ಒಂದು ಕುರಿ ಅಥವಾ ಮೇಕೆ ಕೊಟ್ಟರೆ? ಬೇಡಪ್ಪ, ಒಂದು ಆನೆಯನ್ನೇ ಕೊಟ್ಟರೆ ಹೇಗೆ? ಅಥವಾ ಒಂದು ಚಿನ್ನದ ಸಣ್ಣದೋ ಅಥವಾ ಹಣವಿದ್ದರೆ ದೊಡ್ಡದೋ ಬಿಸ್ಕತ್ತು. ಆಗಬಾರದೇ?

ದೇವುಡು ನರಸಿಂಹ ಶಾಸ್ತ್ರಿಗಳು ತಮ್ಮ ಕಾದಂಬರಿಯೊಂದರಲ್ಲಿ ಇದಕ್ಕೆ ಉತ್ತರ ಸೂಚಿಸಿದ್ದಾರೆ. ಚ್ಯವನ ಋಷಿಗಳು ಜಲಾಶಯದ ಬುಡದಲ್ಲಿ ಶ್ವಾಸ ಬಂಧಿಸಿ ಅನೇಕ ವರುಷ ತಪಸ್ಸು ಮಾಡಿದ್ದಾರೆ. ಕೂದಲು, ಉಗುರುಗಳು ಅಡ್ಡಾದಿಡ್ಡಿ ಬೆಳೆದು, ದೇಹ ಕೃಶವಾಗಿದೆ. ಬೆಸ್ತರು ಮೀನು ಹಿಡಿಯಲು ಹಾಕಿದ ಬಲೆಯಲ್ಲಿ ಸಿಕ್ಕಿಬಿದ್ದರು. ಹೊರಗೆ ತಂದಾಗ ತಪಸ್ವಿ ಮನುಷ್ಯ ಎಂದು ಬೆಸ್ತರ ನಾಯಕನಿಗೆ ಗೊತ್ತಾಯಿತು. ಏನೂ ಮಾಡಲು ತೋಚದೆ ರಾಜನ ಬಳಿಗೆ ಅವರನ್ನು ಕರೆತರುತ್ತಾರೆ. ಚ್ಯವನರು ರಾಜನಿಗೆ "ನಾನು ಈಗ ಅವರ ಸ್ವತ್ತು. ಅವರಿಗೆ ನನ್ನ ಮೌಲ್ಯ (ಸಮನಾದ ಬೆಲೆ) ಕೊಟ್ಟು ನನ್ನನ್ನು ಬಿಡಿಸಿಕೊ" ಎನ್ನುತ್ತಾರೆ. ಬೆಸ್ತರ ನಾಯಕ "ನಮಗೆ ಏನೂ ಬೇಡ ಬುದ್ಧಿ. ದೊಡ್ಡವರು ನಮಗೆ ಶಾಪ ಕೊಡದಿದ್ದರೆ ಸಾಕು. ಅಪಚಾರವಾಯಿತು" ಅನ್ನುತ್ತಾನೆ. ರಾಜನಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. ರಾಜಪುರೋಹಿತರನ್ನು ಕೇಳುತ್ತಾನೆ. ರಾಜಪುರೋಹಿತರು ಹೇಳುತ್ತಾರೆ. "ಬ್ರಹ್ಮಜ್ಞಾನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗೆಯೇ ಗೋವಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ" ಎಂದು. ರಾಜನು ಚಿನ್ನದ ಕೊಂಬಿನಿಂದ ಅಲಂಕರಿಸಿದ ಒಂದು ಸಾವಿರ ಹಸುಗಳನ್ನು ಕೊಡುತ್ತಾನೆ. ಚ್ಯವನರು ಸಂತುಷ್ಟರಾಗುತ್ತಾರೆ.  

ಮನುಷ್ಯನಿಗೆ, ಗಂಡಾಗಲಿ ಅಥವಾ ಹೆಣ್ಣಾಗಲಿ, ತಾಯಿಯು ಕೆಲವು ತಿಂಗಳು ಹಾಲು ಉಣಿಸುತ್ತಾಳೆ. ಆದರೆ, ಜೀವನ ಪೂರ್ತಿ ಹಸುವಿನ ಹಾಲು ಬೇಕಾಗುತ್ತದೆ. ಅದಕ್ಕೆ ಅದು ಬರೀ ಗೋವಲ್ಲ. "ಗೋಮಾತೆ" ಆಗುತ್ತಾಳೆ. ಹಸುವಿನ ಹಾಲಿನಿಂದಲೇ ಮುಂದೆ ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ತುಪ್ಪ. ಇವೆಲ್ಲಾ ಜೀವನ ನಿರ್ವಹಣೆಗೆ, ಹವನ-ಹೋಮಗಳಿಗೆ, ಎಲ್ಲಕ್ಕೂ ಬೇಕು. ಅದರ ಗೋಮೂತ್ರ-ಗೋಮಯಗಳಿಗೂ ಬೆಲೆ ಉಂಟು. ಗೋವಿಗೆ ಬೆಲೆ ಕಟ್ಟಲಾಗುವುದಿಲ್ಲ. ಒಂದು ಗೋದಾನದಿಂದ, ಬೆಲೆ ಕಟ್ಟಲಾಗದ ಆ ಹಸುವಿನಿಂದ, ಎಲ್ಲ ಸಾಲಗಗಳೂ ತೀರಿದಂತೆಯೇ ಅಲ್ಲವೇ? 

*****

ತೆಂಗಿನ ಸಸಿಗೆ ಅದು ಚಿಕ್ಕದಿದ್ದಾಗ ಯಾರೋ ಕೆಲವು ಗಡಿಗೆ ನೀರು ಉಣಿಸುತ್ತಾರೆ. ನಂತರ ಅನೇಕ ದಶಕಗಳ ಕಾಲ ಆ ತೆಂಗಿನ ಮರ ಕೃತಜ್ಞತೆಯಿಂದ ಭೂಮಿಯ ಮೇಲೆ ಸಿಗಬಹುದಾದ ಅತ್ಯಂತ ಸಿಹಿಯಾದ, ಶುದ್ಧವಾದ ನೀರನ್ನು ತನ್ನ ತಲೆಯ ಮೇಲೆ ಹೊತ್ತು ಬೇರೆಯವರಿಗೆ ಕೊಡಲು ನಿಂತಿರುತ್ತದೆ. ಕವಿಗಳು ಕೃತಜ್ಞತೆಗೆ ಇದನ್ನು ಅತ್ಯುತ್ತಮ ಉದಾಹರಣೆ ಅನ್ನುತ್ತಾರೆ. ಉಪ್ಪುನೀರು ಕುಡಿದು ಸಿಹಿ ನೀರು ಕೊಡುವ ತೆಂಗು ಮತ್ತು ಹುಲ್ಲು ತಿಂದು ಹಾಲು ಕೊಡುವ ಹಸುಗಳು ಈ ರೀತಿ ಬೆಲೆ ಕಟ್ಟಲಾಗದ ವಸ್ತುಗಳಿಗೆ ಉದಾಹರಣೆಗಳು. 

ಕೃತಜ್ಞತೆ ಅನ್ನುವುದು ಮನುಷ್ಯನಲ್ಲಿ ಇರಲೇಬೇಕಾದ ಗುಣಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.

ಬಾಲ್ಯದಲ್ಲಿ ಓದಿದ "ಬೇಡ ಮತ್ತು ಆನೆ" ಎಂಬ ಬೋಧಿಸತ್ವನ ಕಥೆಯ ಕೊನೆಯ ಸಾಲುಗಳು:

ಆಸೆಯೆಂಬ ಭೂತ ಹಿಡಿದು ಬೇಡ ನೆಲದೊಳಿಳಿದನು 
ಆಸೆಬಿಟ್ಟು ದಾನ ಕೊಟ್ಟು ಸಲಗ ಸ್ವರ್ಗಕೇರಿತು! 
ಉಪಕಾರ ಸ್ಮರಣೆಯಲಿ, ಪ್ರ್ರೇತಿ-ದಯೆ-ಕರುಣೆಯಲಿ 
ಪ್ರಾಣಿಗಳೇ ಬಲು ಮೇಲು; ಕೆಲಜನರು ಬಲು ಕೀಳು!

3 comments:

  1. ದಯೆಯೇ ಪರಮ ಧರ್ಮ ಎನ್ನುವತಡೆ ದಾನವೇ ಎನ್ನ ಬೇಕಲ್ಲವೇ

    ReplyDelete
  2. ರಾಘವೇಂದ್ರSeptember 2, 2025 at 9:27 PM

    ಈ ಲೇಖನದಿಂದ, ಬಹಳ ಉತ್ತಮವಾದ ಮಾಹಿತಿ ನೀಡಿರುತ್ತಿರಿ.

    ವರ್ಷದೂಳಗೆ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಪದ್ಧತಿ ಈಗಲೂ ಜಾರಿಯಲ್ಲಿದೆ. ಹಾಗೆ, ಕೆಲವು ಸಮಯದಲ್ಲಿ ಮದುವೆಗೆ ಎಲ್ಲ ಅಣಿಮಾಡಿಕೂಂಡಿರುವ ಸಮಯದಲ್ಲಿ, ಹುಡುಗನ ಮನೆಯಲ್ಲಿ ಸಾವು ಸಂಭವಿಸಿ, ಮದುವೆಯನ್ನು, ತಾತ್ಕಾಲಿಕವಾಗಿ ಮುಂದೂಡಿ, ನಂತರ ಸೂಕ್ತ ಪರಿಹಾರ ಮಾಡಿ, ಮುಗಿಸಿದ ಸಂದರ್ಭದಗಳು ಇವೆ. ಎಲ್ಲವೂ ಅವರವರ ನಂಬಿಕೆ ಮೇಲೆ ನಡೆಯುತ್ತದೆ.

    ಐದು ರೀತಿಯ ಗೋದಾನದ ವಿವರಣೆ ಸೂಗಸಾಗಿದೆ.
    ಸಣ್ಣ ಪುಟ್ಟ ಪ್ರಮಾಣದ ಸಾಲ ಕೂಟ್ಟು ಮರೆತು ಬಿಟ್ಟುರುವುದು ಅನೇಕ ಸಾರಿ. ಆದರೂ ಅಂತಹವರಿಗೆ ಮತ್ತೆ ಕೂಟ್ಟು ಮರೆಯುತ್ತೇವೆ.

    ಹಸುವನ್ನು ಕಾಮಧೇನು ಎಂದು, ಹಾಗೂ ತೆಂಗಿನ ಮರವನ್ನು, ಕಲ್ಪವೃಕ್ಷ ಎಂದು ಹೇಳುತ್ತಾರೆ. (ನೀ ಯ್ಯರಿಗಾದೆಯೂ ಎಲೆ ಮಾನವ)

    ಈಗಿನ ಪಿಳಿಗೆಯವರಿಗೆ, ಅಕ್ಕ ಪಕ್ಕ ದವರ ಸಂಪರ್ಕವೆ ಇರುವುದಿಲ್ಲ. ಗೃಹಕೃತ್ಯ ಎಲ್ಲಿಂದ ಬರಬೇಕು.

    ReplyDelete