Thursday, January 1, 2026
ಹದಿನಾರು ಮತ್ತು ಇಪ್ಪತ್ತೊಂದು
Friday, November 28, 2025
ಸಹೋದರಿ, ತಳೋದರಿ ಮತ್ತು ಮಂಡೋದರಿ
ಉದರಂ ಚಿಂತ್ಯಮೀಶಸ್ಯ ತನುತ್ವೇಪ್ಯಖಿಲಂಭರಂವಲಿತ್ರಯಾಂಕಿತ೦ ನಿತ್ಯಂ ಉಪಗೂಢ೦ ಶ್ರೀಯೈಕಯಾ
ತನ್ನ ಹೊಟ್ಟೆಯಲ್ಲಿ ಹದಿನಾಲ್ಕು ಲೋಕಗಳನ್ನು ತುಂಬಿಕೊಂಡಿದ್ದರೂ ಅವನ ಹೊಟ್ಟೆಯು ಬಾಳೆ ಎಲೆಯಂತೆ ತೆಳುವಾಗಿಯೇ ಇದೆ. ಅಷ್ಟು ಮಾತ್ರವಲ್ಲ. ಅವನ ಹೊಟ್ಟೆಯಮೇಲೆ ಮೂರು ಗೆರೆಗಳು ಬೀಳುತ್ತವಂತೆ. ಹೊಟ್ಟೆ ಒಣಗಿಕೊಂಡವರಿಗೆ ಮಾತ್ರ ಈ ರೀತಿ ಗೆರೆಗಳು ಬೀಳುತ್ತವೆ ಎಂದು ನಾವು ನೋಡಿ ತಿಳಿದಿದ್ದೇವೆ. ಆದರೆ ಶ್ರೀಹರಿಯ ಹೊಟ್ಟೆಯ ಮೇಲಿನ ಗೆರೆಗಳು ಸುಲಭವಾಗಿ ಕಾಣುವುದಿಲ್ಲ. ಏಕೆಂದರೆ ಆ ತಾಯಿ ಮಹಾಲಕ್ಷ್ಮಿಯು ಅವನನ್ನು ಯಾವಾಗಲೂ ತಬ್ಬಿಕೊಂಡೇ ಕುಳಿತಿರುತ್ತಾಳೆ. ಅವಳ ಕರುಣೆಯಾದರೆ ಮಾತ್ರ ಸ್ವಲ್ಪ ಪಕ್ಕಕ್ಕೆ ತಿರುಗಿ ನಮಗೆ ಅದರ ದರ್ಶನ ಮಾಡಿಸುತ್ತಾಳೆ!
ಶ್ರೀಹರಿ ಹೀಗಿದ್ದರೆ ಅವನ ಹೆಂಡತಿ ಕಥೆಯೇನು? ಮಹಾಲಕ್ಸ್ಮಿ ದೇವಿಯೂ ತಳೋದರಿಯೇ. ಶ್ರೀಹರಿ ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ. ಮಹಾಲಕ್ಷ್ಮಿಯು ಆಲದೆಲೆಯಾಗಿ ಜೊತೆಗಿದ್ದಳು. (ಛತ್ರ, ಚಾಮರ, ಮಂಚ, ಬೇರೆ ಪದಾರ್ಥಗಳು (ವ್ಯಜನ), ಪಾತ್ರೆ-ಪಡಗ, ಕಡೆಗೆ ಪ್ರಳಯದ ನೀರೂ ಅವಳೇ ಆಗಿ ಅವನನ್ನು ಸುತ್ತುವರೆದಿದ್ದಳು). ಮುಂದೆ ಸೃಷ್ಟಿ ಕಾರ್ಯ ಸಾಗಬೇಕು. ಮಹಾಲಕ್ಷ್ಮಿಯ ಮೂಲಕ ಮಕ್ಕಳು ಪಡೆಯಬೇಕಾದರೆ ತಳೋದರಿಯಾಗಿರುವ ಅವಳು ಬಾಣಂತಿತನದಲ್ಲಿ ಸರಿಯಾಗಿ ಹೊಟ್ಟೆ ಕಟ್ಟದಿದ್ದರೆ ಮುಂದೆ "ಗುಂಡೋದರಿ" ಆಗಬಹುದು. ಹೊಟ್ಟೆ ಕಟ್ಟಲು ಬೇರೆ ಯಾರೂ ಇಲ್ಲ. ಇರುವುದು ಅವರಿಬ್ಬರೇ. ಪಕ್ಕದ ಮನೆಯವರ ಸಹಾಯ ಕೇಳೋಣವೆಂದರೆ ಅಕ್ಕ-ಪಕ್ಕ ಮನೆಗಳೇ ಇಲ್ಲ. ಎಲ್ಲಾ ನೀರಿನಮಯ. ಏನು ಮಾಡುವುದು?
ಯೋಚಿಸಿ ಯೋಚಿಸಿ ಕಡೆಗೆ ಅವಳ ಸೌಂದರ್ಯ ಮಾಸಬಾರದೆಂದು ತನ್ನ ಕರುಳಿನಿಂದಲೇ ಬ್ರಹ್ಮನನ್ನು ಹೆತ್ತ. ಆಮೇಲೆ ಅವನಿಗೆ ಅದೇ ಅಭ್ಯಾಸವಾಗಿಹೋಯಿತು. ಪ್ರಾಣದಿಂದ ವಾಯುವನ್ನು ಹಡೆದ. ಮನಸ್ಸಿನಿಂದ ಚಂದ್ರನನ್ನೂ, ಕಣ್ಣಿನಿಂದ ಸೂರ್ಯನನ್ನೂ ಪಡೆದ. ಮುಖದಿಂದ ಇಂದ್ರನನ್ನೂ ಅಗ್ನಿಯನ್ನೂ ಮಕ್ಕಳಾಗಿ ಪಡೆದ.
ಸೂಕ್ತಗಳ ರಾಜನಾದ "ಪುರುಷ ಸೂಕ್ತ" ಇದನ್ನೇ ಹೇಳುತ್ತದೆ:
ಚಂದ್ರಮಾ ಮನಸೋ ಜಾತಃ ಚಕ್ಷೋ: ಸೂರ್ಯೋ ಅಜಾಯತ
ಮುಖಾತ್ ಇಂದ್ರಶ್ಚ ಅಗ್ನಿಶ್ಚ ಪ್ರಾಣಾತ್ ವಾಯುರಾಜಾಯತ
ಮಕ್ಕಳು ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು
ಪೊಕ್ಕುಲೊಳು ಮಕ್ಕಳ ಪಡೆದು ಕಕ್ಕುಲಾತಿ ಮೆರೆವಂತೆ
ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ!
ಇದರ ಬಗ್ಗೆ ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
*****
ಈ "ತಳೋದರಿ" ಅನ್ನುವ ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು. ಅದು ಹೇಗೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ.
Thursday, May 15, 2025
ಸುಗುಣೆಯರು ಹದಿನಾರುಸಾವಿರ
ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತಣ ಸಂಬಂಧವಯ್ಯ?
ಬೆಟ್ಟದ ನೆಲ್ಲಿಕಾಯಿ ಸಮುಂದ್ರದೊಳಗಣ ಉಪ್ಪು ಎತ್ತಣಿಂದೆತ್ತಣ ಸಂಬಂಧವಯ್ಯ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತಣ ಸಂಬಂಧವಯ್ಯ?
ಅನೇಕ ಸಂದರ್ಭಗಳಲ್ಲಿ ಯಾರೋ ಇಬ್ಬರ ನಡುವೆ ಇರುವ ಅನ್ಯೋನ್ಯತೆ, ಆತ್ಮೀಯತೆಗಳು ಬೇರೆಯರಿಗೆ ಅರ್ಥವಾಗುವುದು ಒತ್ತಟ್ಟಿಗಿರಲಿ; ಅದು ಅತ್ಯಂತ ಅಪಾರ್ಥವೂ ಆಗುವುದು ಕಂಡುಬರುವುದು. ಸಾಮಾನ್ಯ ಜನರ ನಡುವಣ ಸಂಬಂಧವೇ ಹೀಗಿರಬೇಕಾದರೆ ಭಕ್ತ-ಭಗವಂತ ಸಂಬಂಧಗಳು ಪ್ರಾಪಂಚಿಕ ದೃಷ್ಟಿಯಿಂದ ಬಲು ವಿಚಿತ್ರವಾಗಿರುವುದು ಏನು ವಿಶೇಷ?
ಅನೇಕ ಭಕ್ತರು ಪರಮಾತ್ಮನನ್ನು ಉದ್ದೇಶಿಸಿ ತಪಸ್ಸು, ಸಾಧನೆಗಳನ್ನು ಮಾಡುತ್ತಾರೆ. ಅವನ ಸಾಕ್ಷಾತ್ಕಾರ ಆದಾಗ ತಮಗೆ ಏನು ಬೇಕು ಎಂದು ಈ ತಪಸ್ಸುಗಳನ್ನು ಮಾಡಿದರೋ ಅವನ್ನು ಬೇಡುತ್ತಾರೆ. "ನಿನ್ನೊಡನೆ ಯುದ್ಧದಲ್ಲಿ ಹೋರಾಡಿ ಸಾಯಬೇಕು" ಎಂದು ವೃಷಭಾಸುರನು ಕೇಳಿದ್ದನ್ನೂ, ಆ ಹೋರಾಟ ನಡೆದ ನೆನಪಿನಲ್ಲಿ ತಿರುಪತಿಯ ಬೆಟ್ಟಕ್ಕೆ "ವೃಷಭಾಚಲ" ಎಂದು ಹೆಸರು ಬಂದಿರುವುದನ್ನೂ "ಪದ್ಮ ಪುರಾಣ" ಹೇಳುತ್ತದೆ. "ಶ್ರೀನಿವಾಸ ಕಲ್ಯಾಣ" ಕಥೆ ಕೇಳಿದವರು ಇದನ್ನು ಬಲ್ಲರು. ಮುಚುಕುಂದ ಚಕ್ರವರ್ತಿಯು ತಡೆಯಿಲ್ಲದ ಬಹುಕಾಲದ ನಿದ್ರೆ ಕೇಳಿದನಂತೆ. ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುವ ಸಲುವಾಗಿ ತಪಸ್ಸು ಮಾಡಿದ ಧ್ರುವನು ವಾಸುದೇವನನ್ನು ಕಂಡ ತಕ್ಷಣ "ನನಗೆ ಏನೂ ಬೇಡ. ನಿನ್ನ ಜೊತೆ ಕರೆದುಕೊಂಡು ಹೋಗು" ಎಂದನಂತೆ. ನಿನ್ನಂತಹ ಮಗ ಬೇಕು ಎಂದು ಕೇಳಿದವರು ಅನೇಕರು. ಹೀಗುಂಟು.
ಅಗ್ನಿಗೆ ಒಮ್ಮೆ ಹದಿನಾರು ಸಾವಿರ ಮಕ್ಕಳು ಒಟ್ಟಾಗಿ ಜನಿಸಿದರಂತೆ. ಅವರೆಲ್ಲರೂ ಶ್ರೀಹರಿಯನ್ನು ಉದ್ದೇಶಿಸಿ ಬಹಳ ದೀರ್ಘವಾದ, ಘೋರವಾದ ತಪಸ್ಸನ್ನು ಮಾಡಿದರು. ಶ್ರೀಹರಿಯು ಪ್ರತ್ಯಕ್ಷನಾದಾಗ ಅವನನ್ನು ಕಂಡು ಮೈಮರೆತರು. ಏನು ಬೇಕೆಂದು ಕೇಳಿದಾಗ "ನೀನು ನಮ್ಮನ್ನು ಮದುವೆ ಆಗು" ಎಂದು ಬೇಡಿದರು. ಅಗ್ನಿ ಪುತ್ರರಾದ ಈ ಋಷಿಗಳ ಕೋರಿಕೆ ಮನ್ನಿಸಲೇಬೇಕಾಯಿತು. ಶ್ರೀಹರಿಯು ನಸುನಗುತ್ತಾ "ಆಯಿತು. ನಿಮ್ಮ ಇಷ್ಟದಂತೆಯೇ ಆಗಲಿ. ಆದರೆ ಅದಕ್ಕೆ ತಕ್ಕ ಕಾಲ ಬರಬೇಕು. ಮುಂದೆ ಶ್ರೀಕೃಷ್ಣಾವತಾರ ಆದಾಗ ನೀವೆಲ್ಲರೂ ರಾಜಕುಮಾರಿಯರಾಗಿ ಹುಟ್ಟುವಿರಿ. ಆಗ ನಿಮ್ಮನ್ನು ಮದುವೆ ಆಗುತ್ತೇನೆ" ಎಂದು ವರ ಕೊಟ್ಟನು. ಈ ಋಷಿಗಳೇ ದ್ವಾಪರದಲ್ಲಿ ರಾಜಕುಮಾರಿಯರಾಗಿ ಹುಟ್ಟಿ ನರಕಾಸುರನ ಸೆರೆಮನೆ ಸೇರಿದರು. ನರಕಾಸುರನ ವಧೆ ಆದ ನಂತರ ಶ್ರೀಕೃಷ್ಣನು ಅವರನ್ನು ವಿವಾಹವಾಗಿ ದ್ವಾರಕೆಗೆ ಕರೆತಂದನು.
ಭಕ್ತರ ಕೋರಿಕೆಗಳನ್ನು ಪರಮಾತ್ಮನು ಒಮ್ಮೊಮ್ಮೆ ತನಿ-ತನಿಯಾಗಿ (ತನಿ ಅನ್ನುವುದು ಕನ್ನಡ ಪದ. ನಾವು ಮರ್ತೆ ಬಿಟ್ಟಿದ್ದೇವೆ. ಬಿಡಿ ಬಿಡಿಯಾಗಿ ಎಂದು ಅದರ ಅರ್ಥ) ನೆರವೇರಿಸುತ್ತಾನೆ. ಕೆಲವೊಮ್ಮೆ ಅನೇಕ ಜನರ ಕೋರಿಕೆಗಳನ್ನು ಒಟ್ಟಾಗಿ ತೀರಿಸುತ್ತಾನೆ. ನಮ್ಮ ಸುಪ್ರೀಂ ಕೋರ್ಟ್ "ಅನೇಕ ರಿಟ್ ಅರ್ಜಿಗಳನ್ನು ಒಟ್ಟಾಗಿ ವಿಲೇವಾರಿ ಮಾಡಿತು" ಎನ್ನುವಂತೆ. ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ. ಇಷ್ಟು ಜನ ಋಷಿಗಳ ಕೋರಿಕೆಯನ್ನು ಒಟ್ಟಾಗಿ ತೀರಿಸಿದುದು, ಮತ್ತು ಇನ್ನೂ ಅನೇಕರ ಕೋರಿಕೆಗಳ ಕಾರಣ ಮದುವೆಗಳು ಆದದ್ದು ಸೇರಿ ಶ್ರೀಕೃಷ್ಣನಿಗೆ ಒಟ್ಟು ಹದಿನಾರು ಸಾವಿರದ ನೂರಾ ಎಂಟು ಹೆಂಡಿರಾದರು.
*****
ಶ್ರೀಪುರಂದರದಾಸರು ಈ ಸಂದರ್ಭವನ್ನು ತಿಳಿಸಲು "ಜಾಣೆಯರರಸ" ಎಂದು ಪ್ರಯೋಗಿಸಿದರು. ಶ್ರೀ ಕನಕದಾಸರು ಇದನ್ನೇ "ಸುಗುಣೆಯರು" ಎಂದರು. ಶ್ರೀಕೃಷ್ಣನು "ಸುಗುಣಿಯರರಸ" ಎಂದು ಪಾಠಾ೦ತರವಾಯಿತು.
ಮಗನಕೊಂದವನಾಳುವಂತಾಸುಗುಣೆಯರು ಹದಿನಾರುಸಾವಿರಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿಬಗೆಬಗೆಯ ರತಿಕಲೆಗಳಲಿಕೂರುಗವ ನಾಟಿಸಿ ಮೆರೆದು ನೀ ನೀಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ
ಕುಬ್ಜೆ ಎಂಬುವವಳು ನೋಡಲು ವಿಕಾರವಾಗಿದ್ದಳು. ಅವಳು ಶಾಪದ ಫಲವಾಗಿ ಈ ರೀತಿ ಹುಟ್ಟಿದ ಅಪ್ಸರೆ. ಕಂಸನಿಗೆ ಪ್ರತಿದಿನ ಗಂಧ ತೇಯ್ದು ಅಲಂಕಾರಕ್ಕಾಗಿ ಒಪ್ಪಿಸುವುದು ಅವಳ ಕೆಲಸ. ಎಂಟು ವರ್ಷದ ಕೃಷ್ಣ ಸೋದರಮಾವ ಕಂಸನ ಆಹ್ವಾನದ ಮೇರೆಗೆ "ಬಿಲ್ಲುಹಬ್ಬ" ನೆಪದಲ್ಲಿ ಮಥುರೆಗೆ ಹೋದ. ಅಲ್ಲಿ ಅವಳನ್ನು ಕಂಡು ಅವಳ ಡೊಂಕನ್ನು ಸರಿಮಾಡಿ ನೆಟ್ಟಗೆ ಮಾಡಿದ. ಅವಳು ಭಕ್ತಿಯಿಂದ ಶ್ರೀಕೃಷ್ಣನಿಗೆ ಗಂಧವನ್ನು ಅರ್ಪಿಸಿದಳು. ಮುಂದೆ ಕೃಷ್ಣನು ಅವಳನ್ನು ವಿವಾಹವಾದ. ಅವರಿಗೆ "ವಿಶೋಕ" ಎನ್ನುವ ಮಗ ಹುಟ್ಟಿದ. ಮಹಾಭಾರತ ಯುದ್ಧ ಆದಾಗ ಈ ವಿಶೋಕ ಭೀಮಸೇನನ ರಥದ ಸಾರಥಿಯಾಗಿ ಕೆಲಸ ಮಾಡಿದ ಎಂದು ಮಹಾಭಾರತದಿಂದ ತಿಳಿದು ಬರುತ್ತದೆ.
*****
ಭಾಗವತದಲ್ಲಿ ಈ ಪ್ರಸಂಗಗಳೆಲ್ಲ ವಿವರವಾಗಿ ವರ್ಣಿತವಾಗಿವೆ.
Wednesday, December 11, 2024
ಇಂದಿರಾರಮಣನ ಮಂದಿರದ ಒಳಗೆ
ಜಗದುದರನತಿ ವಿಮಲ ಗುಣರೂಪಗಳನಾಲೋಚನದಿ ಭಾರತನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳಬಗೆಬಗೆಯ ನೂತನವ ಕಾಣುತಮಿಗೆ ಹರುಷದಿಂ ಪೊಗಳಿ ಹಿಗ್ಗುವತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು
ಮುನ್ನ ಶತಕೋಟಿ ರಾಯರುಗಳಾಳಿದಾ ನೆಲವತನ್ನದೆಂದೆನುತ ಶಾಸನವ ಬರೆಸಿಬಿನ್ನಣದ ಮನೆ ಕಟ್ಟಿ ಕೋಟೆ ಕೊತ್ತಳವಿಕ್ಕಿಚೆನ್ನಿಗನ ಅಸುವಳಿಯೆ ಹೊರಗೆ ಹಾಕುವರು
ಹಾಗಿದ್ದರೆ ಅವನು ಹೇಗೂ ಹೃದಯಮಂದಿರದ ಒಳಗಿದ್ದೇಯಿದ್ದಾನೆ! ಮತ್ತೇಕೆ ಚಿಂತೆ? ಹಾಗಲ್ಲ. ನಮ್ಮ ಬಳಿ ಒಂದು ಅಮೂಲ್ಯ ರತ್ನಾಭರಣವಿದೆ. ಅದು ನಮ್ಮದೇ ಪೆಟ್ಟಿಗೆಯಲ್ಲಿದೆ. ಪೆಟ್ಟಿಗೆ ಯಾವಾಗಲೂ ನಮ್ಮ ಬಳಿಯೇ ಇದೆ. ಆದರೆ ಅದಕ್ಕೆ ಬೀಗ ಹಾಕಿದೆ. ಸುತ್ತ ಕತ್ತಲು ಕವಿದಿದೆ. ಅದನ್ನು ನೋಡಲು, ಸಂತೋಷಪಡಲು, ಉಪಯೋಗಿಸಲು ಬೀಗದಕೈ ಬೇಕು. ಬೆಳಕು ಬೇಕು. ಅದಕ್ಕೇ ಈ ಎಲ್ಲ ಕಸರತ್ತು. ಇಲ್ಲದಿದ್ದರೆ ಆ ಬಹು ಬೆಲೆಬಾಳುವ ಆದರೆ ಅತಿ ಭಾರದ ಪೆಟ್ಟಿಗೆ ಹೊತ್ತುಕೊಂಡು ತಿರುಗುತ್ತ, ಅಂತಹ ಶ್ರೀಮಂತಿಕೆ ಇದ್ದರೂ ಅದರ ಇರುವಿಕೆ ಗೊತ್ತಿಲ್ಲದೇ ಭಿಕ್ಷೆ ಬೇಡಿದಂತೆ ನಮ್ಮ ಪಾಡು. ಹಾಗಾಗಬಾರದು. ಎಂದೆಂದೂ ಹೃದಯ ಮಂದಿರದಲ್ಲಿ ಇರುವ ಅವನು ನಮಗೆ ಪ್ರತಿಕ್ಷಣವೂ ಕಾಣುತ್ತಿರಬೇಕು. ಇದನ್ನೇ "ಎಂದೆಂದೂ ವಾಸಿಪನು ಹೃದಯ ಮಂದಿರದ ಒಳಗೆ" ಎನ್ನುವುದು ಸೂಚಿಸುತ್ತದೆ.
*****
ದ್ರಾಕ್ಷಿಯ ಗೊಂಚಲಿನ ಪ್ರತಿ ದ್ರಾಕ್ಷಿಯಲ್ಲಿ ಸಿಹಿ ರಸ ತುಂಬಿದೆ. ರಸ ಸಿಗಬೇಕಾದರೆ ಪ್ರತಿ ದ್ರಾಕ್ಷಿಯನ್ನೂ ಜಗಿದು ನುಂಗಬೇಕು. ಆಗ ರಸದ ಪರಮಾವಧಿ ನಮಗೆ ಸಿಗುತ್ತದೆ. "ಅಯ್ಯೋ, ಎಷ್ಟು ಜಗಿಯುವುದು? ಬೇಜಾರು." ಎಂದು ನುಂಗುತ್ತಾ ಹೋದರೆ ನಷ್ಟ ನಮಗೇ. ದ್ರಾಕ್ಷಿ ಬೆಳೆದ ರೈತನಿಗಲ್ಲ. ನಮ್ಮವರೆಗೂ ತಂದುಕೊಟ್ಟವರಿಗೂ ಅಲ್ಲ.
ಸರಣಿ ದೀರ್ಘವಾಯಿತು. ಇನ್ನೂ "ಪರಿಪೂರ್ಣ", "ಸಕಲ ಸ್ವಾತಂತ್ರ್ಯ", "ಅರಮನೆಯಒಳಗೆ ಸರೀಭಾಗ" ಮತ್ತು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಉಳಿದಿದೆ. ಇವನ್ನು ಮುಂದೆ ನೋಡೋಣ.