ಶ್ರೀ ಪುರಂದರದಾಸರ
"ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ಹಿಂದೆ ಬಿದ್ದು ಕಳೆದ ಸಂಚಿಕೆಯಲ್ಲಿ
"ಪರಿಪರಿಯ ಪುಷ್ಪಗಳು" ಎನ್ನುವವರೆಗೆ ಬಂದಿದ್ದೆವು.
(ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ ಎರಡು ಪದಗುಚ್ಛಗಳಾದ
"ಇಂದಿರಾರಮಣಗೆ" ಮತ್ತು "ಮಂದಿರದ ಒಳಗೆ" ಎನ್ನುವ ಬಗ್ಗೆ ನೋಡೋಣ.
ದಾಸರ ಪದದ ಉದ್ದೇಶ್ಯ ಹೂವು ತರುವರ ಮನೆಗೆ ಹುಲ್ಲ ತರುವವನ ಬಗ್ಗೆ ಹೇಳುವುದು. ಇಲ್ಲಿ "ಇಂದಿರಾರಮಣ" ಎಂದು ಸಂಬೋಧಿಸುವ ಅಗತ್ಯವೇನು? ಶ್ರೀಹರಿಯ ಅನಂತ ಹೆಸರುಗಳಲ್ಲಿ ಬೇರೆ ಯಾವುದಾದರೂ ಉಪಯೋಗಿಸಬಹುದಿತ್ತಲ್ಲ? ಒಂದು ಸರ್ಕಾರೀ ಕೆಲಸಕ್ಕೆ ಅರ್ಜಿ ಹಾಕಿದರೆ ಅರ್ಜಿ ಪತ್ರದಲ್ಲಿ
"ಎರಡು ಗುರುತಿನ ಚಿಹ್ನೆಗಳು" ಎಂದು ಒಂದು ಕಾಲಂ ಇರುತ್ತದೆ. ಅಲ್ಲಿ "ಎಡಗೆನ್ನೆಯ ಮೇಲೆ ಒಂದು ಕಪ್ಪು ಚುಕ್ಕೆ" ಮತ್ತು "ಬಲಗಾಲಿನ ಮೇಲೆ ಒಂದು ಗಾಯದ ಮಚ್ಚೆ", ಅಥವಾ ಈ ರೀತಿಯ ಗುರುತುಗಳನ್ನು ಬರೆಯಬಹುದು. ಇದು ಒಂದು ಉದಾಹರಣೆ. ಹಾಗೆ ಶ್ರೀಹರಿ ಏನಾದರೂ ಕೆಲಸಕ್ಕೆ ಅರ್ಜಿ ಹಾಕಿದರೆ ಏನು ಬರೆಯಬಹುದು ಎಂದು ಯೋಚಿಸಿದರೆ ಅವನ ಅನೇಕ ಪರಿಚಯದ ನಡುವೆ ಅತ್ಯಂತ ಸುಲಭದ ಗುರುತುಗಳು
ಅವನ ಹೆಂಡತಿ ಮತ್ತು ಅವನ ಭಂಟ. ಇವರಿಲ್ಲದೆ ಅವನಿಲ್ಲ. ಅಥವಾ
ಅವನಿರುವೆಡೆಯೆಲ್ಲಾ ಇವರಿಬ್ಬರಿದ್ದಾರೆ! ಅದಕ್ಕೆ ಅವನನ್ನು ನೆನಸುವವಕ್ಕೆ ಇವರಿಬ್ಬರ ಮೊರೆ ಹೋಗುತ್ತಾರೆ. ಯಾವುದಾದರೂ ಗುಂಪಿನಲ್ಲಿ (ತಿರುಪತಿ ಬೆಟ್ಟದ ಮೇಲೆ ಮಾತ್ರವಲ್ಲ) "ಇಂದಿರಾರಮಣ" ಅಥವಾ "ಆಂಜನೇಯವರದ" ಎನ್ನಿ. ಹಲವಾರು ಮಂದಿ ಎಲ್ಲೆಲ್ಲಿಂದಲೋ "ಗೋವಿಂದಾ " ಎನ್ನುತ್ತಾರೆ.
(ಇದರ ಬಗ್ಗೆ ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ). ಪರಮಾತ್ಮನ ಅತಿ ಸುಲಭ ಗುರುತುಗಳಲ್ಲಿ ಇವು ಅತಿ ಮುಖ್ಯ. ಅದರಲ್ಲೂ ಈ "ಇಂದಿರಾರಮಣ" ಎನ್ನುವುದು. ಇದರ ವಿಶೇಷವೇನು?
ಶ್ರೀಪುರಂದರದಾಸರು ಮಾಧ್ವ ಸಂಪ್ರದಾಯದ ಪರಂಪರೆಗೆ ಸೇರಿದವರು. ಈ ಪರಂಪರೆಯಲ್ಲಿ ಶ್ರೀಮನ್ನಾರಾಯಣನ ನಂತರದ ಸ್ಥಾನ ಮಹಾಲಕ್ಷ್ಮಿ ದೇವಿಗೆ. ಮತ್ತೆಲ್ಲ ಜೀವರು ಮಹಾಪ್ರಳಯ ಕಾಲದಲ್ಲಿ ಪರಮಾತ್ಮನ ಉದರದಲ್ಲಿ ಗಾಢ ನಿದ್ರೆಯಲ್ಲಿದ್ದರೂ ಮಹಾಲಕ್ಷ್ಮಿ ಮಾತ್ರ ಜೊತೆಗೆ ಇರುತ್ತಾಳೆ. "ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ಎನ್ನುವ ಕೃತಿಯಲ್ಲಿ "ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದಾಗ ಹಲವು ಆಭರಣಗಳು ಜಲವು ಆಗಿ ಜಾಣತನದಿ, ಇರಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿರ್ಪ೦ತೆ" ಎಂದು ಸೂಚಿಸಿದ್ದಾರೆ. (ಶ್ರೀಹರಿಯ ಪ್ರತಿ ರೂಪಕ್ಕೂ ಅದಕ್ಕೆ ಹೊಂದುವ ಮಹಾಲಕ್ಷ್ಮೀದೇವಿಯ ಸ್ತ್ರೀ ರೂಪ ಉಂಟು. ವಾಸುದೇವ ರೂಪದಲ್ಲಿ ಪರಮಾತ್ಮನಿದ್ದರೆ ಆಗ ಮಾಯಾದೇವಿಯ ರೂಪದಲ್ಲಿ ಲಕ್ಷ್ಮಿ ಇದ್ದಾಳೆ. ಅದಕ್ಕೆ ಮಾಯಾದೇವಿ ಎಂದಿದ್ದಾರೆ). "ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ" ಎಂಬ ಕೃತಿಯಲ್ಲಿ "ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರ ರೂಪದಲ್ಲಿ ಹರಿಯ ನಿತ್ಯ ಸೇವೆ ಮಾಡುವಂಥ" ಎಂದು ಬಣ್ಣಿಸಿದ್ದಾರೆ. ಪ್ರತಿಯೊಂದು ಪಾತ್ರೆ, ಉಪಕರಣ, ಮತ್ತು ಪ್ರಳಯದ ನೀರಿನ ರೂಪದಲ್ಲಿ ಕೂಡ ತಾನೇ ನಿಂತು ಅವನ ಸೇವೆ ಮಾಡುತ್ತಾಳೆ.
"ಶ್ರೀ ಸೂಕ್ತ" ಈ ತಾಯಿಯ ಆರಾಧನೆಗೇ ಮೀಸಲಾದ ಸ್ತುತಿ. ಪೂಜಾದಿಗಳಲ್ಲಿ ಪ್ರತಿನಿತ್ಯ ಇದರ ಪಾರಾಯಣ ನಡೆಯುತ್ತದೆ. ಋಗ್ವೇದದ ಹತ್ತನೆಯ ಮಂಡಲದ ೧೨೫ನೆಯ ಸೂಕ್ತ "ಅಂಭ್ರಣೀ ಸೂಕ್ತ" ಎಂದು ಹೆಸರುವಾಸಿಯಾಗಿದೆ. ಇದರಲ್ಲಿ ಮಹಾಲಕ್ಷ್ಮಿ ದೇವಿಯ ಅಗಾಧವಾದ ಶಕ್ತಿಗಳ ಬಗ್ಗೆ ವಿವರಿಸಿದ್ದಾರೆ. ಅವಳು ಅನೇಕ ತತ್ವಗಳು, ಸಮಸ್ತ ವೇದ ವೇದಾಂಗಗಳು, ಮೂರು ಗುಣಗಳು (ಸತ್ವ, ರಾಜಸ ಹಾಗೂ ತಮೋಗುಣಗಳು) ಮುಂತಾದವುಗಳಿಗೆ ಅಭಿಮಾನಿ ದೇವತೆ. ಬ್ರಹ್ಮಾದಿ ಸಕಲ ದೇವತೆಗಳಿಗೂ ಅವಳು ನಿಯಾಮಕಳು. ಕೇವಲ ಕುಡಿಗಣ್ಣ ನೋಟದಿಂದ ಸೃಷ್ಟಿ, ಸ್ಥಿತಿ, ಲಯಾದಿ ಕೆಲಸಗಳನ್ನು ಮಾಡುವವಳು ಮತ್ತು ಮಾಡಿಸುವವಳು (ದ್ವಾದಶ ಸ್ತ್ರೋತ್ರದಲ್ಲಿ ಯಸ್ಯ ಅಪಾಂಗಲವಮಾತ್ರಸ ಊರ್ಜಿತಾ ಸಾ ಮುಂತಾದ ವಿವರಣೆಗಳಿವೆ), ಶ್ರೀಹರಿಯು ವಾಮಾನನಾದಾಗ ಬ್ರಹ್ಮಚಾರಿ. ಬೌದ್ಧಾವತಾರದಲ್ಲಿ ಸನ್ಯಾಸಿ. ಆಗಲೂ ಮಹಾಲಕ್ಷ್ಮಿ ಅವನ ಜೊತೆಯಲ್ಲಿಯೇ ಇದ್ದಳು. (ಅದಕ್ಕೇ ಯಾರನ್ನಾದರೂ "ಹೆಂಡತಿಯನ್ನು ತಲೆಯಮೇಲೆ ಕೂಡಿಸಿಕೊಂಡಿದ್ದಾನೆ'" ಎಂದು ಹಾಸ್ಯ ಮಾಡಬಾರದು. ಅಂತಹವರು ಶ್ರೀಹರಿಯ ಮಾದರಿ ಅನುಸರಿಸಿದ್ದಾರೆ ಎಂದು ಗೌರವಿಸಬೇಕು!) ಈ ಅಂಭ್ರಣೀ ಸೂಕ್ತದಲ್ಲಿ ಮಹಾಲಕ್ಷ್ಮಿಯು "ನಾನು ಯಾರನ್ನು ಬೇಕೋ ಅವರನ್ನು ರುದ್ರನನ್ನಾಗಿ, ಬ್ರಹ್ಮನನ್ನಾಗಿಸುವೆ. ಋಷಿಯನ್ನಾಗಿಸುವೆ. ಬುದ್ಧಿಶಾಲಿಯನ್ನಾಗಿಸುವೆ." ಎನ್ನುತ್ತಾಳೆ. ಅಂದರೆ ಹಾಗೆ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಅರ್ಥ. "ವರಮಹಾಲಕ್ಷ್ಮಿ ವ್ರತ" ಮಾಡುವಾಗ ಇಷ್ಟೆಲ್ಲಾ ಅನುಸಂಧಾನವಿರಬೇಕು. ಬಹಳ ಚೆನ್ನಾಗಿ ಅಲಂಕಾರ ಮಾಡಿ ಮೊಬೈಲ್ನಲ್ಲಿ ಚಿತ್ರ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದರೆ ಕೇವಲ ಪಾಸ್ ಮಾರ್ಕ್ಸ್ ಸಿಗಬಹುದಷ್ಟೇ.
ಶ್ರೀಪುರಂದರದಾಸರ ಪರಂಪರೆಯಲ್ಲಿ ಮುಂದೆ ಬಂದ ಶ್ರೀ ಜಗನ್ನಾಥ ದಾಸರು ತಮ್ಮ "ಹರಿಕಥಾಮೃತಸಾರ" ಎಂಬ ಮೇರು ಕೃತಿಯಲ್ಲಿ ಮಹಾಲಕ್ಷ್ಮಿ ದೇವಿಯ ಬಗ್ಗೆ ಹೀಗೆ ಹೇಳುತ್ತಾರೆ:
ಜಗದುದರನತಿ ವಿಮಲ ಗುಣ
ರೂಪಗಳನಾಲೋಚನದಿ ಭಾರತ
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ
ಬಗೆಬಗೆಯ ನೂತನವ ಕಾಣುತ
ಮಿಗೆ ಹರುಷದಿಂ ಪೊಗಳಿ ಹಿಗ್ಗುವ
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು
ಮಹಾಲಕ್ಷ್ಮೀದೇವಿಯು ನಮಗೆ ಬಹಳ ಹತ್ತಿರದವಳು. ನಮ್ಮ ಕೈಗಳ ಮುಂದೆಯೇ ಇದ್ದಾಳೆ. ಅದಕ್ಕೆ ಬೆಳಿಗ್ಗೆ ಎದ್ದ ತಕ್ಷಣ ಕೈಗಳನ್ನು ನೋಡಿಕೊಂಡು "ಕರಾಗ್ರೇ ವಸತೇ ಲಕ್ಷ್ಮೀ" ಎನ್ನುತ್ತೇವೆ. ನಾವು ಮಾಡುವ ಪೂಜೆ ಪುನಸ್ಕಾರಗಳೆಲ್ಲ ಅವಳ ಮೂಲಕವೇ ಮುಂದೆ ಹೋಗಬೇಕು. ಏನನ್ನು ಕೊಡಬೇಕಾದರೂ ಕೈಮೂಲಕವೇ ಕೊಡಬೇಕು ತಾನೇ?
ಮಹಾಲಕ್ಷ್ಮಿ ದೇವಿಯಿಲ್ಲದೆ ಶ್ರೀಹರಿಯಿಲ್ಲ. ಶ್ರೀಹರಿಯಿಲ್ಲದೇ ಮಹಾಲಕ್ಷ್ಮಿಯಿಲ್ಲ. ಎಲ್ಲರಿಗೂ ಎಲ್ಲ ಸಂಪತ್ತುಗಳನ್ನೂ ಕೊಡುವವಳು ಅವಳು. ಅವಳು ಕೊಟ್ಟರೆ ಉಂಟು. ಇಲ್ಲದಿದ್ದರೆ ಇಲ್ಲ. ಕಟ್ಟ ಕಡೆಗೆ ಜೀವನಿಗೆ ವಿರಿಜಾ ನದಿಯಲ್ಲಿ ಮುಳುಗಿಸಿ ಮುಕ್ತಿಗೆ ಕೊಂಡೊಯ್ಯುವವಳೂ ಅವಳೇ. ಆದ್ದರಿಂದ "ಇಂದಿರಾರಾಮಣ" ಎಂದು ಸೂಚಿಸಿದ್ದಾರೆ. ಸದ್ಯಕ್ಕೆ ಇಷ್ಟು ಸಾಕು.
*****
"ಎಂದೆಂದೂ ವಾಸಿಪನು ಮಂದಿರದ ಒಳಗೆ" ಎನ್ನುವುದು ಮುಂದಿನದು. ಮಂದಿರ ಅಂದರೆ ದೇವಸ್ಥಾನ ಎಂದು ಎಲ್ಲರಿಗೂ ಗೊತ್ತು. ಈಚೆಗೆ "ರಾಮಮಂದಿರ" ಅಯೋಧ್ಯೆಯಲ್ಲಿ ನಿರ್ಮಾಣ ಆಯಿತು. ದರ್ಶನಕ್ಕೆ ಅನೇಕ ಮಂದಿರಗಳಿಗೆ ಹೋಗುತ್ತೇವೆ. ಮಂದಿರ ಅಂದರೆ ಮನೆ ಎನ್ನುವುದು ಸಾಮಾನ್ಯ ಅರ್ಥ. ಅದನ್ನೇ ಗೌರವಯುತವಾಗಿ ಹೇಳಿದಾಗ ಮಂದಿರ ಆಗುತ್ತದೆ. "ಹೂವ ತರುವರ ಮನೆಗೆ ಹುಲ್ಲ ತರುವ ಶ್ರೀಕೃಷ್ಣನು ಮಂದರದ ಒಳಗೆ ಎಂದೆಂದೂ ವಾಸಿಸುತ್ತಾನೆ" ಎಂದು ಹೇಳುವುದರಲ್ಲಿ ಏನು ವಿಶೇಷ? ಒಮ್ಮೆ ಪ್ರಾಣ ಪ್ರತಿಷ್ಠಾಪನೆ ಆದಮೇಲೆ ಆ ಮಂದಿರಗಳ ಒಳಗೆ ಎಂದೆಂದೂ ಇರಲೇಬೇಕಲ್ಲ! ಇಷ್ಟು ಮಾಡಲು ಹಿಂದಿನ ಸಂಚಿಕೆಯಲ್ಲಿ ಹೇಳಿದಂತೆ ಪರೀಕ್ಷೆಯಲ್ಲಿ ರಾಂಕ್ ಪಡೆಯಬೇಕೆ? ಇದು ಒಂದು ಮುಖ್ಯವಾದ ಪ್ರಶ್ನೆ.
ಸರಿಯಾದ ರೀತಿಯಲ್ಲಿ ಗುಡಿ ಕಟ್ಟಿ, ಮೂರ್ತಿ ಸ್ಥಾಪಿಸಿ ಪ್ರಾಣಪ್ರತಿಷ್ಠೆ ಮಾಡಿದರೆ ಅಲ್ಲಿ ಆ ದೇವತೆ ಅಥವಾ ದೇವರು ವಾಸಿಸುವದರಲ್ಲಿ ಹೆಚ್ಚಿನದೇನೂ ಇಲ್ಲ. ವೈಯುಕ್ತಿಕವಾಗಿ ನಾವು ಯಾರಾದರೂ ಹೋದರೂ, ಹೋಗದಿದ್ದರೂ ಆ ಕೆಲಸ ಆಗಿಯೇಹೋಗುತ್ತದೆ. ಇಲ್ಲಿ ಮಂದಿರದ ಒಳಗೆ ಎಂದರೆ "ನಮ್ಮ ಹೃದಯ ಮಂದಿರ" ಎಂದು ತಿಳಿಯಬೇಕು. ಸಾರ್ವಜನಿಕವಾದ ಮಂದಿರದಲ್ಲಿ ಅವನು ವಾಸಿಸುವ ಕೆಲಸವನ್ನು ಯಾರೋ ಅಥವಾ ಎಲ್ಲರೂ ಸೇರಿ ಮಾಡುತ್ತಾರೆ. ಆದರೆ ನಮ್ಮ ಹೃದಯ ಮಂದಿರದಲ್ಲಿ ಅವನು ವಾಸಿಸಬೇಕಾದರೆ ಮತ್ಯಾರೋ ಏನು ಮಾಡಿದರೂ ಆಗುವುದಿಲ್ಲ. ನಮ್ಮ ಹೊಟ್ಟೆ ತುಂಬಬೇಕಾದರೆ ನಾವೇ ಊಟ ಮಾಡಬೇಕು. "ಪವರ್ ಆಫ್ ಅಟಾರ್ನಿ" ಕೊಟ್ಟು ಮಾಡಿಸುವಂತಿಲ್ಲ. ಶ್ರೀಕೃಷ್ಹ್ನನು ನಮ್ಮ ಹೃದಯ ಮಂದಿರದಲ್ಲಿ ವಾಸಿಸಬೇಕಾದರೆ ಹಿಂದಿನ ಸಂಚಿಕೆಯಲ್ಲಿ ಹೇಳಿದ ಎಲ್ಲ ಕೆಲಸ ನಾವೇ ಮಾಡಬೇಕು. ಕೆಲವು ಕಡೆಗಳಲ್ಲಿ ಪರಿಕ್ಷೆಗಳಲ್ಲಿ ವಿದ್ಯಾರ್ಥಿಯ ಬದಲು ಮತ್ಯಾರೋ ಪರೀಕ್ಷೆ ಬರೆದರು ಎಂದು ಕೇಳುತ್ತೇವೆ. ಇಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ. ಇದನ್ನೇ "ವಾಸಿಪನು ಮಂದಿರದ ಒಳಗೆ" ಎಂದರೆ ನಮ್ಮ ಹೃದಯ ಮಂದಿರದಲ್ಲಿ ಬಂದು, ನಿಂತು, ವಾಸಿಸುತ್ತಾನೆ" ಎಂದು ಸೂಚಿಸಿದ್ದಾರೆ.
ಆಯಿತು. ಒಪ್ಪಿಕೊಳ್ಳೋಣ. "ವಾಸಿಪನು ಮಂದಿರದ ಒಳಗೆ" ಎನ್ನುವುದರ ಒಳಗೆ "ಎಂದೆಂದೂ" ಎಂದೇಕೆ ಹೇಳಿದ್ದಾರೆ? ಅನೇಕ ಡಿಗ್ರಿ ಪರೀಕ್ಷೆಗಳಲ್ಲಿ ಪಾಸ್ ಮಾಡಿದ ನಂತರ ಯಾವುದೂ ಒಂದು ಸಂಸ್ಥೆಯ ಸದಸ್ಯತ್ವ ಪಡೆದ ಮೇಲೆ ಅವಧಿಯಂತೆ, ಸಾಮಾನ್ಯವಾಗಿ ಪ್ರತಿ ವರುಷ, ಆ ಸದಸ್ಯತ್ವವನ್ನು ನವೀಕರಿಸಬೇಕು. "ಡ್ರೈವಿಂಗ್ ಲೈಸನ್ಸ್" ಉದಾಹರಣೆ ತೆಗೆದುಕೊಳ್ಳಬಹುದು. ಡ್ರೈವಿಂಗ್ ಪರೀಕ್ಷೆ ಪಾಸ್ ಮಾಡಿ ಲೈಸನ್ಸ್ ಪಡೆದಿದ್ದಾಯಿತು. ಅದರ ಅವಧಿ ಮುಗಿಯುವ ಒಳಗೆ ಮತ್ತೆ ನವೀಕರಿಸಬೇಕು. ಇಲ್ಲದಿದ್ದರೆ ಅದು "ಲ್ಯಾಪ್ಸ್"" ಆಯಿತು ಅನ್ನುತ್ತೇವೆ. ಹೃದಯ ಮಂದಿರದ ಒಳಗೆ ಬಂದು ನೆಲಿಸಿದ ಪರಮಾತ್ಮನು ಮತ್ತೆ ಹೊರಟುಹೋಗಬಾರದು. ಅದಕ್ಕೆ ಎಂದೆಂದೂ ನೆಲೆಸುವನು ಎನ್ನುವುದು.
ಇಷ್ಟೆಲ್ಲಾ ಕಸರತ್ತು ಮಾಡಿದರೆ ಮಾತ್ರ ಅವನು ನಮ್ಮ ಹೃದಯ ಮಂದಿರದಲ್ಲಿ ನೆಲೆಸುವನೇ? ಇಲ್ಲದಿದ್ದರೆ ಇಲ್ಲವೇ? ಈ ಪ್ರಶ್ನೆ ಸಹಜ. ಪ್ರತಿ ಜೀವಿಯು ಹುಟ್ಟುವಾಗಲೇ ಆ ಜೀವಿಯಜೊತೆಗೆ ಅವನೂ ಹುಟ್ಟುತ್ತಾನೆ. ಮೊದಲೆನೆಯ ಶ್ವಾಸದೊಂದಿಗೆ ಪ್ರಾಣವಾಯುವೂ ಮತ್ತು ಪರಮಾತ್ಮನೂ ಜೀವಿಯ ದೇಹವನ್ನು ಪ್ರವೇಶಿಸುತ್ತಾರೆ. ಅವರಿರುವವರೆಗೆ ಜೀವಿಯ ಜೀವನ. ಅವರು ಹೊರೆಟ ಒಡನೆ ಆ ದೇಹ ನಿರ್ಜೀವ. "ನೆಂಟನಗಲಿದ ಬಳಿಕ ಒಣಹೆಂಟೆಯಲಿ ಮುಚ್ಚುವರು" ಎಂದು ಇದನ್ನೇ ಶ್ರೀಕನಕದಾಸರು "ಶ್ರೀ ಹರಿಭಕ್ತಿಸಾರ"ದಲ್ಲಿ ಹೇಳಿರುವುದು. ಶ್ರೀ ಪುರಂದರದಾಸರೇ "ಆರು ಹಿತವರು ನಿನಗೆ ಈ ಮೂವರೊಳಗೆ" ಕೃತಿಯಲ್ಲಿ ಹೇಳುತ್ತಾರೆ:
ಮುನ್ನ ಶತಕೋಟಿ ರಾಯರುಗಳಾಳಿದಾ ನೆಲವ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆ ಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನ ಅಸುವಳಿಯೆ ಹೊರಗೆ ಹಾಕುವರು
ಹಾಗಿದ್ದರೆ ಅವನು ಹೇಗೂ ಹೃದಯಮಂದಿರದ ಒಳಗಿದ್ದೇಯಿದ್ದಾನೆ! ಮತ್ತೇಕೆ ಚಿಂತೆ? ಹಾಗಲ್ಲ. ನಮ್ಮ ಬಳಿ ಒಂದು ಅಮೂಲ್ಯ ರತ್ನಾಭರಣವಿದೆ. ಅದು ನಮ್ಮದೇ ಪೆಟ್ಟಿಗೆಯಲ್ಲಿದೆ. ಪೆಟ್ಟಿಗೆ ಯಾವಾಗಲೂ ನಮ್ಮ ಬಳಿಯೇ ಇದೆ. ಆದರೆ ಅದಕ್ಕೆ ಬೀಗ ಹಾಕಿದೆ. ಸುತ್ತ ಕತ್ತಲು ಕವಿದಿದೆ. ಅದನ್ನು ನೋಡಲು, ಸಂತೋಷಪಡಲು, ಉಪಯೋಗಿಸಲು ಬೀಗದಕೈ ಬೇಕು. ಬೆಳಕು ಬೇಕು. ಅದಕ್ಕೇ ಈ ಎಲ್ಲ ಕಸರತ್ತು. ಇಲ್ಲದಿದ್ದರೆ ಆ ಬಹು ಬೆಲೆಬಾಳುವ ಆದರೆ ಅತಿ ಭಾರದ ಪೆಟ್ಟಿಗೆ ಹೊತ್ತುಕೊಂಡು ತಿರುಗುತ್ತ, ಅಂತಹ ಶ್ರೀಮಂತಿಕೆ ಇದ್ದರೂ ಅದರ ಇರುವಿಕೆ ಗೊತ್ತಿಲ್ಲದೇ ಭಿಕ್ಷೆ ಬೇಡಿದಂತೆ ನಮ್ಮ ಪಾಡು. ಹಾಗಾಗಬಾರದು. ಎಂದೆಂದೂ ಹೃದಯ ಮಂದಿರದಲ್ಲಿ ಇರುವ ಅವನು ನಮಗೆ ಪ್ರತಿಕ್ಷಣವೂ ಕಾಣುತ್ತಿರಬೇಕು. ಇದನ್ನೇ "ಎಂದೆಂದೂ ವಾಸಿಪನು ಹೃದಯ ಮಂದಿರದ ಒಳಗೆ" ಎನ್ನುವುದು ಸೂಚಿಸುತ್ತದೆ.
*****
ದ್ರಾಕ್ಷಿಯ ಗೊಂಚಲಿನ ಪ್ರತಿ ದ್ರಾಕ್ಷಿಯಲ್ಲಿ ಸಿಹಿ ರಸ ತುಂಬಿದೆ. ರಸ ಸಿಗಬೇಕಾದರೆ ಪ್ರತಿ ದ್ರಾಕ್ಷಿಯನ್ನೂ ಜಗಿದು ನುಂಗಬೇಕು. ಆಗ ರಸದ ಪರಮಾವಧಿ ನಮಗೆ ಸಿಗುತ್ತದೆ. "ಅಯ್ಯೋ, ಎಷ್ಟು ಜಗಿಯುವುದು? ಬೇಜಾರು." ಎಂದು ನುಂಗುತ್ತಾ ಹೋದರೆ ನಷ್ಟ ನಮಗೇ. ದ್ರಾಕ್ಷಿ ಬೆಳೆದ ರೈತನಿಗಲ್ಲ. ನಮ್ಮವರೆಗೂ ತಂದುಕೊಟ್ಟವರಿಗೂ ಅಲ್ಲ.
ಸರಣಿ ದೀರ್ಘವಾಯಿತು. ಇನ್ನೂ "ಪರಿಪೂರ್ಣ", "ಸಕಲ ಸ್ವಾತಂತ್ರ್ಯ", "ಅರಮನೆಯಒಳಗೆ ಸರೀಭಾಗ" ಮತ್ತು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಉಳಿದಿದೆ. ಇವನ್ನು ಮುಂದೆ ನೋಡೋಣ.
ಅಂದಚೆಂದದ, ಸುಗಂಧಭರಿತ ಹೂವಿನ ಮಾಲೆಯಂತೆ ಬರುವ ನಿಮ್ಮ ಲೇಖನಗಳ ಸರಣಿಯನ್ನು ಓದಲವಕಾಶ ಪಡೆದ ನಾವೇ ಧನ್ಯರು. ಭಗವಂತನ ಅತಿಮುಖ್ಯ ಗುರುತಿನ ಚಿಹ್ನೆಗಳನ್ನು ಎಷ್ಟು ಸುಂದರವಾಗಿ ವರ್ಣಿಸಿದ್ದೀರಿ!!! ಎಡೆಬಿಡದೆ ಸದಾಕಾಲ ದೇವರದೇವನಾದ ತನ್ನ ಪತಿಯ ಸೇವೆಯನ್ನು ಯಾವ ಕಾಲಕ್ಕೂ ಬಿಡೆನೆನ್ನುವ ಸತಿಯನ್ನು ಒಲಿಸಿಕೊಂಡರೆ, ಅವಳ ಪತಿಯ ಕೃಪೆ ಸಿಗುವುದದೆಷ್ಟರ ಹೊತ್ತು!!😁🙏 ಆ ಇಂದಿರೆಯೂ, ಅವಳ ರಮಣನೂ ಎಂದೆಂದೂ ನಮ್ಮನ್ನೆಲ್ಲ ಪೊರೆಯುತ್ತಿರಲಿ🙏
ReplyDeleteಹಾಗೆಯೇ ನಾವು ಬೇರೆ ಬೇರೆ ಅನೇಕ ಭವ್ಯ ದೇವಾಲಯಗಳಲ್ಲಿ ದೇವರ ದರ್ಶನ ಮಾಡಿಕೊಂಡು ಬಂದಿದ್ದರೂ, ನಮ್ಮ ಹೃದಯದೇಗುಲದಲ್ಲಿ ಅವನನ್ನು ಪ್ರತಿಷ್ಟಾಪಿಸಿಕೊಂಡು ಅನವರತವೂ ಅವನ ಸ್ಮರಣೆ ಮಾಡುತ್ತಿದ್ದರೆ ಮಾತ್ರ ಅವನು ಸಂಪ್ರೀತನಾಗುವನೆಂಬುದನ್ನು ಚೆನ್ನಾಗಿ ತಿಳಿಹೇಳಿದ್ದೀರಿ.
ಬಹಳ ಸುಂದರ ನಿರೂಪಣೆ. ತೊಂಡರಿಗೆ ಬಗ್ಗೆ ತಿಳಿಯುವಆಸೆ
ReplyDeleteVery good explanation about various aspects which are covered by our great Dasavarenyas.
ReplyDeleteVery educative and informative
ReplyDeleteಚೆನ್ನಿಗನ ಅಸುವಳಿಯೆ ................till then let us pray for a blissful life
ಒಳ್ಳೆಯ ಲೇಖನ. ಶ್ರೀಹರಿ ಒಬ್ಬನೇ ಅಲ್ಲ ನಮ್ಮ ಶಿವನು ಅಕ್ಷರಶಃ ಹೆಂಡತಿಯನ್ನು ತಲೆಯ ಮೇಲೆ ಕೂಡಿಸಿಕೊಂಡಿದ್ದಾನೆ!
ReplyDeleteಉದಾಹರಣೆ ಸಹಿತವಾದ ನಿಮ್ಮ ನಿರೂಪಣೆ ತುಂಬಾ ಸುಂದರವಾಗಿ ಮೂಡಿ ಬಂದಿದೆ, ಧನ್ಯವಾದಗಳು
ReplyDelete