Thursday, December 12, 2024

ಅಪೂರ್ಣ, ಪೂರ್ಣ ಮತ್ತು ಪರಿಪೂರ್ಣ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ಅವಲೋಕನದಲ್ಲಿ ಕಳೆದ ಸಂಚಿಕೆಯಲ್ಲಿ "ಇಂದಿರಾರಮಣನ ಮಂದಿರದ ಒಳಗೆ" ಎನ್ನುವ ಶೀರ್ಷಿಕೆಯಡಿ ಎರಡು ಪದಗುಚ್ಛಗಳಾದ "ಇಂದಿರಾರಮಣಗೆ" ಮತ್ತು "ಮಂದಿರದ ಒಳಗೆ" ಎನ್ನುವವರೆಗೆ ಬಂದಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ "ಪರಿಪೂರ್ಣನೆಂದು ಪೂಜೆಯನ್ನು ಮಾಡೆ" ಎನ್ನುವ ಬಗ್ಗೆ ಸ್ವಲ್ಪ ನೋಡೋಣ. 

"ಮನ ಏವ ಮನುಷ್ಯಾಣಾ೦ ಕಾರಣಂ ಬಂಧ ಮೋಕ್ಷಯೋ:" ಅನ್ನುವುದು ಅಮೃತ ಬಿಂದು ಉಪನಿಷತ್ತಿನ ಒಂದು ಬಹುಪರಿಚಿತವಾದ ಉಕ್ತಿ. ಒಂದು ಬೀಗ ಇದೆ. ಅದರ ಜೊತೆ ಒಂದು ಬೀಗದಕೈ ಕೂಡ ಇದೆ.  ಬೀಗ ಹಾಕಲು ಮತ್ತು ತೆಗೆಯಲು ಎರಡು ಕೀಲಿಕೈಗಳಿಲ್ಲ. ಇರುವುದು ಒಂದೇ ಕೀಲಿಕೈ. ಈ ಬೀಗದಕೈ ಎರಡೂ ಕೆಲಸ ಮಾಡುತ್ತದೆ. ಎಡಕ್ಕೆ ತಿರುಗಿಸಿದರೆ ಬೀಗ ಹಾಕುತ್ತದೆ. ಬಲಕ್ಕೆ ತಿರುಗಿಸಿದರೆ ಬೀಗ ತೆಗೆಯುತ್ತದೆ. ಅದೇ ರೀತಿ ಮನುಷ್ಯನಿಗೆ ಒಂದು ಮನಸ್ಸಿದೆ. ಅವನ ಚಿಂತನೆ ಮತ್ತು ಕಾರ್ಯಶೈಲಿ ಮುಚ್ಚಿಕೊಳ್ಳಲು ಮತ್ತು ತೆರೆದುಕೊಳ್ಳಲು ಈ ಮನಸ್ಸೆಂಬ ಕೀಲಿಕೈ ನೆರವಾಗುತ್ತದೆ. ಮನಸ್ಸಿನ ಮೇಲೆ ಹಿಡಿತ ಇರುವ ವ್ಯಕ್ರಿ ಬೇಕಾದ ವಿಷಯಗಳಿಗೆ ತೆರೆದುಕೊಳ್ಳಲು ಈ ಕೀಲಿಕೈ ಉಪಯೋಗಿಸುತ್ತಾನೆ. ಹಾಗೆಯೇ ಬೇಡದ ವಿಷಯಗಳಿಗೆ ಮುಚ್ಚಿಕೊಳ್ಳಲೂ ಅದೇ ಮನಸ್ಸೆಂಬ ಕೀಲಿಕೈ ಬಳಸುತ್ತಾನೆ. ಗೀತಾಚಾರ್ಯನು "ಯದಾ ಸಂಹರತೇಚಾಯಂ ಕೂರ್ಮೋ೦ಗಾನೀವ ಸರ್ವಶಃ" ಎಂದು ಸ್ಥಿತಪ್ರಜ್ಞನ ಆಕ್ಷಣಗಳನ್ನು ಹೇಳುವಾಗ ಸೂಚಿಸುವುದು ಈ ಮನಸ್ಸೆಂಬ ಕೀಲಿಕೈ ಬಗ್ಗೆಯೇ. ಆದ್ದರಿಂದ ಪೂಜಾದಿಗಳ ಸಮಯದಲ್ಲಿ ಪರಮಾತ್ಮನನ್ನು "ಪರಿಪೂರ್ಣ" ಎಂದು ಚಿಂತಿಸಿ ಪೂಜೆಮಾಡಬೇಕು ಎಂದು ಶ್ರೀಪುರಂದರದಾಸರು ಈ ಕೃತಿಯಲ್ಲಿ ಹೇಳಿದ್ದಾರೆ. ಹೀಗೆ ಚಿಂತಿಸಿ ಪೂಜೆ ಮಾಡಲು ಅವನು ತನ್ನ ಸಕಲ ಸ್ವಾತಂತ್ರ್ಯದಲಿ ಅವನ ಅರಮನೆಯಲ್ಲಿ ಸರಿಭಾಗ ಕೊಡುವನು ಎನ್ನುತ್ತಾರೆ. 

ನಮ್ಮಲ್ಲಿ ಅನೇಕ ದೇವಿ, ದೇವತೆಗಳನ್ನು ಪೂಜಿಸುವ ಸಂಪ್ರದಾಯವಿದೆ. ಇದನ್ನು ಅನೇಕ ಪರ ಧರ್ಮದ ಜನರು ನಮ್ಮನ್ನು ಅಪಹಾಸ್ಯ ಮಾಡಲು ಬಳಸಿಕೊಳ್ಳುತ್ತಾರೆ. ಸರಿಯಾದ ಜ್ಞಾನವಿಲ್ಲದ ನಾವು ಅವರ ಮುಂದೆ ತಲೆ ಕೆಳಗೆ ಹಾಕುತ್ತೇವೆ. ನಮ್ಮ ಇಡೀ ವೈದಿಕ ವಾಗ್ಮಯದಲ್ಲಿ ಒಬ್ಬನೇ ಪರಮಾತ್ಮನೆಂದು ಮತ್ತೆ ಮತ್ತೆ ಹೇಳಿದೆ. ಮಹಾನಾರಾಯಣೋಪನಿಷತ್ತು ಇದನ್ನೇ ಕೂಗಿ ಕೂಗಿ ಹೇಳುತ್ತದೆ. ಪರಮಪುರುಷ ಒಬ್ಬನೇ. ಆದರೆ ಅನೇಕ ದೇವತೆಗಳು ಬೇರೆ ಬೇರೆ ಖಾತೆಗಳನ್ನು ಅವನ ಆಣತಿಯಂತೆ ನಿರ್ವಹಿಸುತ್ತಾರೆ. ಅವರೆಲ್ಲರೂ ದೇವರಲ್ಲ. ಇದು ಸ್ವಲ್ಪ "ಗಾಡ್ ಮತ್ತು ಏಂಜಲ್" ಎನ್ನುವ ಪದ್ದತಿಯಂತೆ. ಹಾಗಿದ್ದರೆ ಅಷ್ಟು ದೇವತೆಗಳನ್ನು ಏಕೆ ಆರಾಧಿಸಬೇಕು? ಒಬ್ಬನೇ ಪರಮಾತ್ಮನನ್ನು ಆರಾಧಿಸಿದರೆ ಸಾಲದೇ? ಇದು ಬಹಳ ಸಾಧುವಾದ ಪ್ರಶ್ನೆ. ಒಂದು ಸೂಪರ್ ಮಾರ್ಕೆಟ್ನಲ್ಲಿ ಎಲ್ಲ ಪದಾರ್ಥಗಳೂ ಸಿಗುತ್ತವೆ. ಆದರೆ ಆ ಸೂಪರ್ ಮಾರ್ಕೆಟ್ಟಿನಲ್ಲಿ ಪ್ರತಿಯೊಂದು ರೀತಿಯ ಪದಾರ್ಥಗಳಿಗೆ ಬೇರೆ ಬೇರೆ ಮಹಡಿಗಳಲ್ಲಿ ಹೋಗಿ ಪಡೆಯುವಂತೆ ಈ ವ್ಯವಸ್ಥೆ. ಪರಮಾತ್ಮನ ವ್ಯವಸ್ಥೆಯಲ್ಲಿ "ನಿಯಮನ" ಎಂದೊಂದಿದೆ ಎಂದು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಸೃಷ್ಟಿಯ ಅನೇಕ ಕೆಲಸಗಳನ್ನು ಅವನು ತನ್ನ ಸಂವಿಧಾನದಂತೆ ದೇವತೆಗಳಿಗೆ ಹಂಚಿದ್ದಾನೆ. ಅವರೆಲ್ಲರ ಅಂತಃಶಕ್ತಿಯಾಗಿ, ಪ್ರೇರಕನಾಗಿ, ಕಾರಕನಾಗಿ ಅವನೇ ಎಲ್ಲವನ್ನೂ ನಡೆಸುತ್ತಾನೆ ಎನ್ನುವುದು ತಿಳಿದರೆ ಯಾವುದೂ ಗೋಜಲಿರುವುದಿಲ್ಲ. ಅನೇಕ ದೇವತೆಗಳ ಆರಾಧನೆಯೂ ಕೊನೆಗೆ "ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ" ಎಂದು ತಿಳುದು ಮಾಡುವುದು. ಇದೇ ಈ ವ್ಯವಸ್ಥೆಯ ತಿರುಳು. 

*****

ಆಯಿತು. ಈ ವ್ಯವಸ್ಥೆಯೇ ಸರಿ ಎಂದು ಒಪ್ಪೋಣ. ಪ್ರತಿ ದೇವಿ, ದೇವತೆಯರನ್ನು ಮತ್ತು ಪರಮಪುರುಷನನ್ನು ಆರಾಧಿಸುವಾಗ ನಮ್ಮ ಮನಸ್ಥಿತಿ ಹೇಗಿರಬೇಕು ಎನ್ನುವುದು ನಮ್ಮ ಪ್ರಶ್ನೆ. ಇದರ ಕೆಲವು ಭಾಗ "ಸಕಲ ಸ್ವಾತಂತ್ರ್ಯ" ಎನ್ನುವ ಮುಂದಿನ ಸಂಚಿಕೆಯಲ್ಲೂ ಬರುತ್ತ್ತದೆ. ನಮ್ಮ ಮನಸ್ಥಿತಿ ಹೇಗಿರಬೇಕು ಅನ್ನುವುದನ್ನು ತೀರ್ಮಾನಿಸಲು ಅಪೂರ್ಣ, ಪೂರ್ಣ ಮತ್ತು ಪರಿಪೂರ್ಣ ಎನ್ನುವ ಮೂರು ಶಬ್ದಗಳ ಖಚಿತವಾದ ಅರ್ಥ ಮತ್ತು ಅಭಿಪ್ರಾಯಗಳು ತಿಳಿಯಬೇಕು. ಅಪೂರ್ಣ ಅಂದರೇನು? ಪೂರ್ಣ ಅಂದರೇನು? ಪರಿಪೂರ್ಣ ಎಂದರೇನು? ಪರಿಪೂರ್ಣತ್ವದ ಕಲ್ಪನೆ ಪೂರ್ಣತ್ವಕ್ಕಿಂತ ಹೇಗೆ ಭಿನ್ನ? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿದರೆ ಪರಿಪೂರ್ಣತ್ವದ ಕಲ್ಪನೆ ಸರಿಯಾಗಿ ಆಗುತ್ತದೆ. 

ಪೂರ್ಣ ಅನ್ನುವುದರ ಬಗ್ಗೆ ನಮಗೆ ಸುಮಾರಾಗಿ ಖಚಿತವಾಗಿ ಗೊತ್ತು. ನಮ್ಮ ಎದುರಿಗೆ ಪ್ರತಿದಿನ ಈ ತತ್ವವನ್ನು ಸಾಕ್ಷಾತ್ತಾಗಿ ತೋರಿಸುವ ಚಂದ್ರನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅಮಾವಾಸ್ಯೆಯಂದು ಚಂದ್ರನೇ ಕಾಣಿಸನು. ಆಗ ಅದೊಂದು ಶೂನ್ಯ. ಶೇಕಡಾವಾರು ಸೊನ್ನೆ. ಇಲ್ಲಿ ಏನೂ ಇಲ್ಲ. ಪ್ರತಿಪದೆಯಂದು ಚಂದ್ರನು ಎಲ್ಲಿಯೋ ಇದ್ದಾನೆ. ಆದರೆ ನಮ್ಮ ಕಣ್ಣಿಗೆ ಕಾಣಿಸದಷ್ಟು ಸಣ್ಣಗೆ ಇದ್ದಾನೆ. ವಾಸ್ತವವಾಗಿ ನೋಡಿದರೆ ಶುಕ್ಲ ಪಕ್ಷದ ಮೊದಲನೆಯ ದಿನ (ಪಾಡ್ಯ) ಅವನು ಕಾಣುವುದೇ ಇಲ್ಲ. ಬಿದಿಗೆಯಂದು ಒಂದು ಚಿಕ್ಕ ಬಿಂಬವಾಗಿ ಕಾಣುತ್ತಾನೆ. ಪಂಚಾಂಗದಲ್ಲಿ "ಚಂದ್ರ ದರ್ಶನ" ಎಂದು ಹಾಕುತ್ತಾರೆ. ಅಲ್ಲಿನಿಂದ ಅವನು ಪೂರ್ಣತ್ವದ ಕಡೆಗೆ ದಿನೇ  ದಿನೇ ಬೆಳೆಯುತ್ತಾನೆ. ಬೆಳವಣಿಗೆ ನಮಗೆ ಚೆನ್ನಾಗಿ ಕಾಣುತ್ತದೆ. ಶೂನ್ಯವಿದ್ದದ್ದು ಪ್ರತಿದಿನ ಸ್ವಲ್ಪ ಪ್ರತಿಶತ ಹೆಚ್ಚುತ್ತದೆ. ಹುಣ್ಣಿಮೆಯ ದಿನ ಪೂರ್ಣ ಚಂದ್ರನ ದರ್ಶನ ಆಗುತ್ತದೆ. ಪೂರ್ತಿ ಗೋಳಾಕಾರದ ಚಂದ್ರನನ್ನು ನೋಡಿ ನಾವು ಸಂಭ್ರಮಿಸುತ್ತೇವೆ. ಇಂದಿಗೆ ಹದಿನೈದು ದಿನದ ಹಿಂದೆ ಶೂನ್ಯವಿದ್ದದ್ದು ಶೇಕಡಾ ನೂರು ಆಯಿತು. ಸೊನ್ನೆಯಿದ್ದದ್ದು ಪೂರ್ಣ ಆಯಿತು! ಹಿಂದಿನ ಹದಿನಾಲ್ಕು ದಿನ ಅಪೂರ್ಣವಾಗಿತ್ತು. ಇಂದು ಪೂರ್ಣವಾಯಿತು. 

ಮುಂದಿನ ಹದಿನೈದು ದಿನ ಈ ಕ್ರಿಯೆಯ ಹಿಮ್ಮುಖ ಬೆಳವಣಿಗೆ. ಮತ್ತೆ ಕಡಿಮೆಯಾಗುತ್ತದೆ. ಬಹುಳ ಪಾಡ್ಯದ ದಿನ ಪೂರ್ಣಚಂದ್ರನಿಗಿಂತ ಸ್ವಲ್ಪ ಕಡಿಮೆ. ಸುಮಾರು ೯೪ ಪ್ರತಿಶತ. ಈಗ ಚಂದ್ರ ಪೂರ್ಣನಲ್ಲ. ಬಿದಿಗೆ ಮತ್ತೊ ಕಡಿಮೆ. ಸುಮಾರು ಶೇಕಡಾ ೮೭. ಹೀಗೆ ಆಗುತ್ತಾ ಮತ್ತೆ ಮುಂದಿನ ಅಮಾವಾಸ್ಯೆಗೆ ಸೊನ್ನೆ ಪ್ರತಿಶತ ಆಗಿ ಕಾಣೆಯಾಗುತ್ತಾನೆ. ಚಂದ್ರನಿಗೆ ವೃದ್ಧಿ (ಹೆಚ್ಚಾಗುವುದು) ಮತ್ತು ಕ್ಷಯ (ಕಡಿಮೆಯಾಗುವುದು) ಉಂಟು. ಪೂರ್ಣನಾಗಿರುವುದು ತಿಂಗಳಿಗೆ ಒಂದೇ ದಿನ. ಮತ್ತೆಲ್ಲ ದಿನ ಅಪೂರ್ಣವೇ. 

*****

ಪೂರ್ತಿ ಇಲ್ಲದ, ಏನೋ ಕಡಿಮೆಯಾದದ್ದು ಅಪೂರ್ಣ. ಅದು ಸ್ವಲ್ಪ ಕಡಿಮೆ ಇರಬಹುದು. ಶುಕ್ಲ ಪಕ್ಷದ ಚತುರ್ದಶಿಯ ಚಂದ್ರನಿದ್ದಂತೆ. ಹೆಚ್ಚು ಕಡಿಮೆ ಪೂರ್ಣ ಅನ್ನಬಹುದು, ಆದರೆ ಅಲ್ಲ. ಅಥವಾ ತುಂಬಾ ಕಡಿಮೆ ಇರಬಹುದು. ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ. ಪೂರ್ಣ ಆಗಲು ಬಹಳ ಕೊರತೆ ಇದೆ. ಪೂರ್ಣವಾದರೂ ಬಹಳ ಕಾಲ ಉಳಿಯುವುದಿಲ್ಲ. ಎಲ್ಲೋ ಮಿಂಚಿ ಮಾಯವಾದ ಹಾಗೆ. ಇಪ್ಪತ್ತೆಂಟು ದಿನದಲ್ಲಿ ಒಂದು ದಿನ ಮಾತ್ರ ಪೂರ್ಣ. ಬಾಕಿ ಎಲ್ಲ ದಿನವೂ ಅಪೂರ್ಣ. 

ಒಬ್ಬರಿಗೆ ಒಂದು ತಂಬಿಗೆ ತುಂಬಾ ನೀರು ತನ್ನಿ ಎಂದು ಹೇಳುತ್ತೇವೆ ಅನ್ನೋಣ. ಅವರು ತಂಬಿಗೆಯ ತುಂಬಾ ನೀರು ತಂದರು. ತಂಬಿಗೆಯ ತುಂಬಾ ನೀರಿದೆ ಎಂದು ಎಲ್ಲರೂ ಅದನ್ನು ನೋಡಿ ಒಪ್ಪಬಹುದು. ಆದರೆ ನಿಜವಾಗಿ ಅದು ಪೂರ್ಣ ನೀರಿನಿಂದ ತುಂಬಿದೆಯೇ? ಇದು ಪ್ರಶ್ನೆ. 

ನಮ್ಮ ರಾಜಕಾರಣಿಗಳು ಬಡವರ ಉದ್ಧಾರ ಮಾಡುತ್ತೇವೆ ಅನ್ನುತ್ತಾರೆ. ಹಾಗಂದರೆ ಏನು? ಬಡವರು ಕೆಳಗೆ ಇದ್ದಾರೆ. ಯಾವುದರಲ್ಲಿ? ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ. ಅವರ ಉದ್ಧಾರ ಹೇಗೆ? ಕೆಳಗೆ ಇರುವವರನ್ನು ಮೇಲೆ ಎತ್ತುವುದು. "ಉದ್ಧರ" ಅನ್ನುವ ಪದಕ್ಕೆ ಮೇಲೆ ಎತ್ತುವುದು ಅಂದು ಅರ್ಥ. ಅದೇ ಕನ್ನಡಲ್ಲಿ "ಉದ್ಧಾರ" ಆಯಿತು. ಪಂಚಪಾತ್ರೆ-ಉದ್ಧರಣೆ ಅನ್ನುತ್ತೇವೆ. ಏಕೆ? ಪಂಚಪಾತ್ರೆಯಲ್ಲಿ ನೀರಿದೆ. ನಮ್ಮ ಕೆಲಸಕ್ಕೆ ಅದು ಪಾತ್ರೆಯಿಂದ ಮೇಲೆ ಬಂದು ನಮ್ಮ ಕೈಯಲ್ಲಿ ಬೀಳಬೇಕು. ಪಂಚಪಾತ್ರೆ ತೆಗೆದು ಸುರಿದುಕೊಂಡರೆ ಹೆಚ್ಚಾಗಿ ಬೀಳಬಹುದು. ಅದು ನಮಗೆ ಬೇಡವಾದದ್ದು. ಪಾತ್ರೆಯಿಂದ ಸುರಿದುಕೊಳ್ಳುವುದೂ ಕಷ್ಟ. ನೀರಿನಿಂದ ತುಂಬಿರುವುದರಿಂದ ಅದು ಬಹಳ ಭಾರ. ಸ್ವಲ್ಪವೇ ನೀರು ಬೇಕು. ಅದಕ್ಕೆ ಒಂದು ಉಪಕರಣ ಉಪಯೋಗಿಸುತ್ತೇವೆ. ಕೆಳಗಿರುವ ನೀರು ಮೇಲೆ ಎತ್ತುವ ಉಪಕರಣ ಆದದ್ದರಿಂದ ಅದು "ಉದ್ಧರಣೆ" ಆಯಿತು. ಕೆಲವು ಕಡೆ ಅದನ್ನು "ಸೌಟು" ಅನ್ನುತ್ತಾರೆ. ನಮಗೆ ಸಾರು. ಹುಳಿ, ಪಾಯಸ ಬಡಿಸುವ ದೊಡ್ಡ ಉದ್ಧರಣೆ ಸೌಟು ಎಂದರೆ ಚಂದ. ಈಗಿನವರು ಅಚ್ಚ ಕನ್ನಡದಲ್ಲಿ "ಸ್ಪೂನ್" ಅನ್ನಬಹುದು. ಇರಲಿ. 

ನಮ್ಮ ಮುಂದೆ ತಂದಿಟ್ಟಿರುವ ನೀರು ತುಂಬಿದ ತಂಬಿಗೆಯನ್ನು ನೋಡೋಣ. ಅದು ನೀರಿನಿಂದ ತುಂಬಿದೆ. ಅದು ನೀರಿನಿಂದ ಪೂರ್ಣವಾಗಿದೆ ಎನ್ನಬಹುದು. ಅದಕ್ಕೆ ಒಂದು ಉದ್ಧರಣೆ ನೀರು ಮತ್ತೆ ಹಾಕಬಹುದೋ? ಹಾಕಬಹುದು. ಇನ್ನೊಂದು ಉದ್ಧರಣೆ ನೀರು ಹಾಕಬಹುದೋ? ಪ್ರಾಯಶಃ ಹಾಕಬಹುದು. ಅದು ಹೇಗೆ? ಈಗ ಸ್ವಲ್ಪ ಮುಂಚೆ ತಂಬಿಗೆ ತುಂಬಾ ನೀರು ಇದೆ ಅಂದೆವು. ಈಗ ಮತ್ತೆ ಅದರಲ್ಲಿ ಸ್ವಲ್ಪ ಹಾಕಿದೆವು. ಅಂದರೆ ಆಗ ಅದು ಪೂರ್ಣವಾಗಿರಲಿಲ್ಲ. ಅಂದರೆ ನಾವೆಲ್ಲರೂ ಯಾವುದನ್ನು ಪೂರ್ಣ ಎಂದು ನಂಬಿದ್ದೆವೋ, ಅದು ವಾಸ್ತವವಾಗಿ ಪೂರ್ಣವಾಗಿರಲಿಲ್ಲ. ಲೋಕಾರೂಢಿಯಲ್ಲಿ "ಹೆಚ್ಚು ಕಡಿಮೆ ತುಂಬಿದೆ" ಎಂದು ನಾವು ಹೇಳುವುದನ್ನೂ ಪೂರ್ಣ ಎಂದು ವ್ಯವಹರಿಸುತ್ತೇವೆ. ಶೇಕಡಾ 99 ಅಂಕ ಬಂದರೆ ಆಲ್ಮೋಸ್ಟ್  ನೂರಕ್ಕೆ ನೂರು ಎಂದಂತೆ. ಶುಕ್ಲ ಪಕ್ಷದ ಚತುರ್ದಶಿಯ ಚಂದ್ರನನ್ನು ಪೂರ್ಣ ಚಂದ್ರ ಎಂದಂತೆ. ಅಂದರೆ ಒಟ್ಟಾರೆ ನಾವು "ಪೂರ್ಣ" ಎಂದು ತಿಳಿದಿರುವ ಅನೇಕ ವಿಷಯಗಳು ಅಪೂರ್ಣವೇ!

ತಂಬಿಗೆಯ ನೀರಿನ ಬಳಿ ಮತ್ತೆ ಹೋಗೋಣ. ನೀರಿನಿಂದ ತುಂಬಿದ ತಂಬಿಗೆಗೆ ಎರಡು ಉದ್ಧರಣೆ ನೀರು ಹಾಕಿಯಾಯಿತು. ಇನ್ನು ಹಾಕಲಾಗುವುದಿಲ್ಲ. ಇನ್ನೊಂದು ಉದ್ಧರಣೆ ಹಾಕಿದರೆ ಅದು ಚೆಲ್ಲುತ್ತದೆ. 

ಈಗ ಆ ತಂಬಿಗೆಯಿಂದ ಒಂದು ಉದ್ಧರಣೆ ನೀರು ಹೊರತೆಗೆಯೋಣ. ತಂಬಿಗೆಯ ನೀರು ಅಪೂರ್ಣವಾಯಿತು. 

*****

ಶ್ರೀಪುರಂದರದಾಸರು "ಪರಿಪೂರ್ಣನೆಂದು ಪೂಜೆಯನು ಮಾಡೆ" ಎನ್ನುವುದನ್ನು ನೋಡೋಣ. ಪರಮಾತ್ಮನ ಪರಿಪೂರ್ಣತ್ವ ಹೇಗೆ? ಅದು ಪೂರ್ಣತ್ವಕ್ಕಿಂತ ಹೇಗೆ ಭಿನ್ನ? ಪೂರ್ಣತ್ವದಲ್ಲಿ ಸ್ವಲ್ಪ ಕಡಿಮೆ ಮಾಡಿದರೆ ಅಥವಾ ಹೊರತೆಗೆದರೆ ಅದು ತಕ್ಷಣ ಅಪೂರ್ಣವಾಗುತ್ತದೆ. ಪರಮಾತ್ಮ ಹಾಗಲ್ಲ. ಅವನು ಜ್ಞಾನ-ಆನಂದಾದಿ ಸದ್ಗುಣಗಳಿಂದ ತುಂಬಿದ್ದಾನೆ. ಪರಿಪೂರ್ಣ ಆಗಿದ್ದಾನೆ. ಇನ್ನು ಒಂದು ಗುಣವನ್ನೂ ಸೇರಿಸುವಹಾಗಿಲ್ಲ. ಅಷ್ಟೇ ಅಲ್ಲ; ಸ್ವಲ್ಪ ಹೊರತೆಗೆದರೂ ಮೊದಲಿನಷ್ಟೇ ಇರುತ್ತಾನೆ. ಎಷ್ಟು ತೆಗೆದರೂ ಮೊದಲಿನಷ್ಟೇ ಪರಿಪೂರ್ಣನಾಗಿರುತ್ತಾನೆ. 

"ಓಂ ಪೂರ್ಣಮದಃ, ಪೂರ್ಣಮಿದಂ, ಪೂರ್ಣಾತ್ಪೂರ್ಣಮದಚ್ಯತೇ ಪೂರ್ಣಸ್ಯ ಪೂರ್ಣಮಾಡಯ ಪೂರ್ಣಮೇವಾವಶಿಷ್ಯತೇ" ಎನ್ನುವ ಉಪನಿಷದ್ ವಾಕ್ಯ ಇದನ್ನೇ ಹೇಳುತ್ತದೆ. ಪರಮಾತ್ಮ ಪರಿಪೂರ್ಣ. ಅವನು ಅನಂತ. ಅನಂತಕ್ಕೆ ಅನಂತವನ್ನು ಸೇರಿಸಿದರೂ ಅನಂತವೇ! ಅನಂತದಿಂದ ಅನಂತವನ್ನು ಕಳೆದರೂ ಉಳಿಯುವುದು ಅನಂತವೇ! 

ಇದೇ ಪರಮಾತ್ಮನ ಪರಿಪೂರ್ಣತ್ವ. ಅವನ ಆರಾಧನೆ, ಧ್ಯಾನ ಮಾಡುವಾಗ ಅವನು ಈ ರೀತಿ ಪರಿಪೂರ್ಣ ಎನ್ನುವ ಪ್ರಜ್ಞೆ ಇರಬೇಕು. ಹಿಂದಿನ ಸಂಚಿಕೆಗಳಲ್ಲಿ ಹೇಳಿದ ಅರ್ಪಣೆಗಳನ್ನು ಮಾಡಿ ಪೂಜೆಯನ್ನು ಮಾಡುವಾಗ ಆ ಪರಿಪೂರ್ಣನಾದ ಪರಮಾತ್ಮನಿಗೆ ಅರ್ಪಿಸುತ್ತಿದ್ದೇವೆ ಎನ್ನುವ ಅನುಸಂಧಾನ ಇರಬೇಕು. ಆಗ ಅವನು ತನ್ನ ಸಕಲ ಸ್ವಾತಂತ್ರದಲಿ ತನ್ನ ಅರಮನೆಯಲ್ಲಿ ಸರಿಭಾಗ ಕೊಡುತ್ತಾನೆ. ಇದು ಶ್ರೀಪುರಂದರದಾಸರು ಹೇಳುವ ರಹಸ್ಯ. 

ಗಂಗಾನದಿಯಲ್ಲಿ ಇರುವ ಮೀನು, ಕಪ್ಪೆಗಳು ಪ್ರತಿ ಕ್ಷಣ ಗಂಗಾಸ್ನಾನ ಮಾಡುತ್ತಿವೆ. ಆದರೆ ಅವುಗಳಿಗೆ ಗಂಗೆಯಲ್ಲಿ ಇದ್ದೇವೆ ಅನ್ನುವ ಜ್ಞಾನವೇ ಇಲ್ಲ. ಅವುಗಳಿಗೆ ಗಂಗಾಸ್ನಾನದ ಫಲವಿಲ್ಲ. ಅಂತೆಯೇ "ಪರಮಾತ್ಮನು ಪರಿಪೂರ್ಣ. ಅವನಿಗೆ ಈ ಪೂಜೆ ಅರ್ಪಿಸುತ್ತಿದ್ದೇವೆ" ಎನ್ನುವ ಅನುಸಂಧಾನ ಇಲ್ಲದಿದ್ದರೆ ಆ ಪೂಜೆಗೂ ಪೂರ್ಣ ಫಲವಿಲ್ಲ. 

*****

"ಸಕಲ ಸ್ವಾತಂತ್ರ್ಯ", "ಅರಮನೆಯ ಒಳಗೆ ಸರಿಭಾಗ" ಮತ್ತು "ತೊಂಡರಿಗೆ ತೊಂಡನಾಗಿ" ಎನ್ನುವುದನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ. 

3 comments:

  1. ಪೂರ್ಣ ಅಪೂರ್ಣ ಬಗೆಗಿನ ಲೇಖನ ನನಗೆ ತುಂಬಾ ಇಷ್ಟವಾಯಿತು ಮನಸ್ಸಿನ ಬೇಕು ಬೇಡ ಎನ್ನುವ ವ್ಯಾಪಾರವನ್ನು ಬೀಗದ ಕೈ ಮತ್ತು ಬೀಗಕ್ಕೆ ಹೋಲಿಸಿರುವುದು ಕೂಡ ಕುತೂಹಲಕಾರಿ ಆಗಿದೆ

    ReplyDelete
  2. ಭಾನುಮತಿDecember 15, 2024 at 3:14 AM

    ಭಗವಂತನು ಹೇಗೆ ನೋಡಿದರೂ ಪರಿಪೂರ್ಣನೆಂದು ಸರಳ ಉದಾಹರಣೆಗಳಿಂದ ಸುಂದರವಾಗಿ ವಿವರಿಸಿದ್ದೀರಿ ಸರ್. ಸತ್ , ಚಿತ್, ಆನಂದ ಸ್ವರೂಪನಾದ ಅವನನ್ನು ವಿಧವಿಧವಾದ ಪರಿಕರಗಳಿಂದ ಪೂಜಿಸುವಾಗ ಅವನ ಅನಂತತೆ, ಪರಿಪೂರ್ಣತ್ವ ಇತ್ಯಾದಿ ಗುಣಗಳ ಬಗ್ಗೆ ತಿಳಿದುಕೊಂಡು ಮಾಡಿದಾಗ ಮಾತ್ರ ಅವನ ಪರಿಪೂರ್ಣ ಅನುಗ್ರಹಕ್ಕೆ ಪಾತ್ರರಾಗ ಬಹುದು. ಒಂದು ಮರಾಠಿ ಭಜನೆಯಲ್ಲಿ ಅವನು ಸಗುಣನೂ ಹೌದು, ನಿರ್ಗುಣನೂ ಹೌದು. ದೃಷ್ಯನೂ ಹೌದು, ಅದೃಷ್ಯನೂ ಹೌದು. ಸ್ಥೂಲ ನೂ ಹೌದು ಸೂಕ್ಷ್ಮನೂ ಹೌದು ಇತ್ಯಾದಿ ಬಹು ಚೆನ್ನಾಗಿ ವರ್ಣಿಸಿದ್ದಾರೆ. ಚಂದ್ರಮನ ವೃದ್ಧಿ, ಕ್ಷಯಗಳ ವಿವರ ಕೂಡಾ ಪರಿಪೂರ್ಣ ಶಬ್ದದ ಬಗ್ಗೆ ಸರಳವಾಗಿ ಅರ್ಥ ಮಾಡಿಸಿತು. ಅಚ್ಚ ಕನ್ನಡದ "ಸ್ಪೂನು" ಓದಿ ನಗೆಯುಕ್ಕಿ ಬಂತು.😂 ಹೃತ್ಪೂರ್ವಕ ಧನ್ಯವಾದಗಳು 🙏

    ReplyDelete
  3. Classic article. The real meaning of “Paripoorna” has been explained in such a beautiful and simple style. Thank you 🙏🙏🙏🙏

    ReplyDelete