ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ವಿವರಗಳನ್ನು ನೋಡುತ್ತಾ ಕಳೆದ ಸಂಚಿಕೆಯಲ್ಲಿ "ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಎನ್ನುವ ಶೀರ್ಷಿಕೆಯಡಿ ಪರಮಾತ್ಮನು ತನ್ನ ನಂಬಿದವರ ರಕ್ಷಣೆಗಾಗಿ ಹೇಗೆ ಅವರ ತೊಂಡನಾಗಿ, ಅವರ ಸೇವಕನಂತೆ ಚಾಕರಿಯನ್ನೂ ಮಾಡುತ್ತಾನೆ ಎಂಬುದನ್ನು ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಈಗ ಇಲ್ಲಿಯವರೆಗೆ ನಡೆದ, ನಡೆಸಿದ ಚರ್ಚೆಯ ಅವಶ್ಯಕತೆ ಮತ್ತು ಅವುಗಳ ಉಪಯುಕ್ತತೆ ಬಗ್ಗೆ ಸ್ವಲ್ಪ ನೋಡೋಣ.
ಎಲ್ಲಾ ದೇವರನಾಮಗಳಂತೆ ಇದೂ ಒಂದು ದೇವರನಾಮ. ಎಲ್ಲ ಪದ್ಯ ಅಥವಾ ಕವನಗಳಂತೆ ಇದೂ ಒಂದು. ಇದರ ಬಗ್ಗೆ ಇಷ್ಟು ಚರ್ಚೆ ಅವಶ್ಯಕವೇ? ಇದರಿಂದ ಏನು ಉಪಯೋಗ? ಸಮಯ ವ್ಯರ್ಥವಲ್ಲವೇ? ಈ ಪ್ರಶ್ನೆಗಳು ಏಳಬಹುದು. ಇವು ಸಾಧುವಾದ ಪ್ರಶ್ನೆಗಳೇ.
ನಮ್ಮ ಭಾರತೀಯ ದರ್ಶನಗಳಲ್ಲಿ ಅನೇಕ ರೀತಿಯ ದೃಷ್ಟಿಕೋಣಗಳಿಗೆ ಸ್ಥಾನವಿದೆ. ಸಮಾನಾಂತರವಾಗಿ ದರ್ಶನಗಳ ಜೊತೆ ಜೊತೆಯಲ್ಲಿ ಸಾಹಿತ್ಯವೂ ಬೆಳೆದಿದೆ. ಕನ್ನಡ ಸಾಹಿತ್ಯದಲ್ಲಿಯೇ ವಿಪುಲವಾದ ಜೈನ ಸಾಹಿತ್ಯ, ಬೌದ್ಧ (ಬೋಧಿಸತ್ವ ಮುಂತಾದದ್ದು) ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಜನಪದ ಸಾಹಿತ್ಯ, ಮುಂತಾದವು ದರ್ಶನಗಳ ಬೆಳವಣಿಗೆಯಂತೆಯೇ ಸಾಹಿತ್ಯದ ಬೆಳವಣಿಗೆಗೂ ದಾರಿ ಮಾಡಿವೆ. ನಿರೀಶ್ವರವಾದದಿಂದ ಹಿಡಿದು, ಏಕವಾದ, ಜೀವ-ಬ್ರಹ್ಮ ಐಕ್ಯ, ಜೀವ-ಬ್ರಹ್ಮ ಭೇದ, ಸ್ವಲ್ಪ ಅದು-ಸ್ವಲ್ಪ ಇದು, ಇತ್ಯಾದಿ ಅನೇಕ ರೀತಿಯ ತಾರ್ಕಿಕ ನಿಲುವುಗಳು ಉಂಟು. ಹಾಗೆಯೇ ಹಳಗನ್ನಡ, ನಡುಗನ್ನಡ, ಹೊಸಗನ್ನಡ, ನವೋದಯ, ನವ್ಯ, ಬಂಡಾಯ, ನವನವೀನ, ಮತ್ತನೇಕ ಬೇರೆ ಬೇರೆ ಕಾಲಮಾನದ ಸಾಹಿತ್ಯದ ಬೆಳವಣಿಗೆಯನ್ನು ನೋಡಬಹುದು. ವಿದ್ವಾಂಸರು ಈ ವಿಷಯಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲರು. ಕ್ರಮವಾಗಿ ಅಭ್ಯಾಸ ಮಾಡದ ನಮ್ಮಂತಹ ಜನಸಾಮಾನ್ಯರಿಗೆ ಈ ವಿಷಯಗಳ ಬಗ್ಗೆ ಹೆಚ್ಚು ಹೇಳುವುದು ಕಷ್ಟ. ಆದರೂ ದರ್ಶನಗಳು ಮತ್ತು ಸಾಹಿತ್ಯ ಎಲ್ಲರಿಗೂ ಸೇರಿದುದರಿಂದ ನಾವುಗಳೂ ನಮ್ಮ ನಮ್ಮ ಅಭಿಪ್ರಾಯಗಳನ್ನು ಹೊಂದಿರಲು ಸಾಧ್ಯ. ಅಭಿಪ್ರಾಯ ಭೇದ ಅವಶ್ಯಕವಾಗಿ ಇದ್ದೇ ಇರುತ್ತದೆ.
ನಮ್ಮ ಭಾಷೆಯಂತೆಯೇ ಇತರ ಭಾರತೀಯ ಭಾಷೆಗಳಲ್ಲಿಯೂ ಇಂತಹ ವಿಶಾಲವಾದ ಸಾಹಿತ್ಯ ಅನೇಕ ಶತಮಾನಗಳಿಂದ ಸೃಷ್ಟಿ ಆಗಿದೆ. ಇದರ ಜೊತೆಗೆ ನಮಗೆ ಅನೇಕ ಪಾಶ್ಚಿಮಾತ್ಯ ಭಾಷೆಗಳ ಸಾಹಿತ್ಯವೂ ಅವುಗಳ ಮೂಲದಿಂದ ಮತ್ತು ಅದಕ್ಕೂ ಹೆಚ್ಚಾಗಿ ತರ್ಜುಮೆಗಳಿಂದ ಒದಗಿಬಂದಿದೆ. ಹೀಗಾಗಿ ಅನೇಕ ಚಿಂತನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸಾಹಿತ್ಯ ಈಗ ನಮ್ಮ ಮುಂದಿದೆ.
ಯಾವುದಾದರೂ ಗೇಯಗುಣವುಳ್ಳ (ಹಾಡಬಹುದಾದ) ಕೃತಿಯನ್ನು ಓದಿದಾಗ, ಹಾಡಿದಾಗ, ಅಥವಾ ಯಾರಾದರೂ ಹಾಡಿದ್ದನ್ನು ನಾವು ಕೇಳಿದಾಗ ಒಂದು ರೀತಿಯ ವಿಶೇಷ ಅನುಭವ ಆಗುತ್ತದೆ. ಇಂತಹ ಕೃತಿಗಳು ಓದು, ಬರಹ ಬಾರದ ಜನರಿಗೂ ಮನ ಮುಟ್ಟುತ್ತವೆ. ಓದು ಬರಹ ಬಂದರೂ ಆ ಕೃತಿ ರಚನೆಯಾದ ಭಾಷೆ ಬರದಿದ್ದರೆ ಅದರ ಅನುಭವ ಅದನ್ನು ಕೇಳಿ ತಾನೇ ಆಗುವುದು. ಇದು ಪಠಣ ಕ್ರಿಯೆ. ನೇರವಾಗಿ ಓದಿರಬಹುದು ಅಥವಾ ಯಾರೋ ಓದಿದಾಗ ಅಥವಾ ಹಾಡಿದಾಗ ಕೇಳಿರಬಹುದು. ಅನೇಕ ಸಿನಿಮಾ ಗೀತೆಗಳು ಎಲ್ಲರಿಗೂ ಗೊತ್ತು. ಆದರೆ ಅವುಗಳ ಭಾಷೆ ಅನೇಕರಿಗೆ ಗೊತ್ತಿಲ್ಲ. ಆ ದೃಶ್ಯವನ್ನು ಪರದೆಯ ಮೇಲೆ ನೋಡಿದಾಗ ಆ ಭಾಷೆ ಬರದಿದ್ದರೂ ನೋಡುಗನಿಗೆ ತನಗೆ ತಾನೇ ಅಷ್ಟಿಷ್ಟಾದರೂ ಅರ್ಥ ಆಗುತ್ತದೆ. ಇದು ಸಾಹಿತ್ಯದ ಮತ್ತು ಸಂಗೀತದ ಅಗಾಧ ಶಕ್ತಿಗೆ ಒಂದು ಕುರುಹು.
ನಮಗೆ ರುಚಿಯಿಲ್ಲದ ವಿಷಯ ಯಾವ ಭಾಷೆಯಲ್ಲಿ ಹೇಳಿದರೂ ಗೊತ್ತಾಗುವುದಿಲ್ಲ. ಯಾರು ಹೇಳಿದರೂ ಅರ್ಥವಾಗುವುದಿಲ್ಲ. ನಮ್ಮ ಭಾಷೆಯಲ್ಲಿ ಹೇಳಿದರೂ ತಿಳಿಯುವುದಿಲ್ಲ. ನಮ್ಮ ಮನಸ್ಸು ಮಿಡಿಸುವ ವಿಷಯ ಯಾವ ಭಾಷೆಯಲ್ಲಿಯೇ ಇದ್ದರೂ ಒಂದು ಹಂತ ಕೆಳ ಮಟ್ಟದವರೆಗಾದರೂ ಗೊತ್ತಾಗುತ್ತದೆ. ಮನಸ್ಸಿನ ಬೇಕು-ಬೇಡಗಳ ಸೆಳೆತ ಆ ರೀತಿ.
ಹೀಗೆ ಓದಿದ, ಕೇಳಿದ ಅಥವಾ ಹಾಡಿದ ಕೃತಿ ಮನಸ್ಸಿನಲ್ಲಿ ಬಹಳ ಕಾಲ ನಿಂತರೆ, ಮತ್ತು ಮತ್ತೆ ಮತ್ತೆ ಕೇಳಿದರೆ, ಅದನ್ನು ಮನನ ಮಾಡಿದಂತೆ ಆಗುತ್ತದೆ. ಅದೇ ಗುಂಗಿನಲ್ಲಿ ಮುಂದಕ್ಕೆ ಯೋಚನೆ ಮಾಡಿದಾಗ ಮನಸ್ಸಿನಲ್ಲೇ ಕಡೆದು, ಕಡೆದು ಹೆಚ್ಚಿನ ತಿಳುವಳಿಕೆಗೆ ಮನಸ್ಸು ಹಾತೊರೆಯುತ್ತದೆ. ಆ ಸಮಯಾಕ್ಕೆ ಸರಿಯಾಗಿ ತಿಳಿದವರೊಡನೆ ಒಡನಾಟ ಸಿಕ್ಕರೆ ಅದು ಮಂಥನ ಕ್ರಿಯೆಗೆ ದಾರಿ ಮಾಡಿಕೊಡುತ್ತದೆ.
ಹೊರಗಿನಿಂದ ತಿಳಿಯುವುದು ಅನುಭವ. ಒಳಗಿನಿಂದ ತಿಳಿಯುವುದು ಅನುಭಾವ. ನಿಧಾನವಾಗಿ ಹೊರಗಿನ ಅನುಭವ ಒಳಗೆ ಇಳಿದು ಮಂಥನವಾದಾಗ ಅನುಭಾವ ಆಗುತ್ತದೆ. ಈ ರೀತಿ ಅನುಭವ-ಅನುಭಾವಗಳ ದ್ವಂದ್ವ ಕ್ರಿಯೆ ನಮ್ಮ ಮನಸ್ಸಿಗೆ ಬೇಕಾದ ವಿಷಯದಲ್ಲಿ ಹೆಚ್ಚಿನ ಮಟ್ಟದ ತಿಳುವಳಿಕೆ ಕೇಳುತ್ತದೆ. ಆಗಲೇ ಇಂತಹ ಚರ್ಚೆ ನಡೆಯುವುದು. ಯಾರಿಗೆ ಅಂತಹ ಹೆಚ್ಚಿನ ವಿಷಯಗಳು ಬೇಡ, ಅವರಿಗೆ ಅದು ಸಮಯ ವ್ಯರ್ಥ ಮಾಡಿಸುವ ಕೆಲಸ. ಆ ವಿಷಯದಲ್ಲಿ ಮುಂದೆ ತಿಳಿಯುವ ಕಾತರ ಇರುವವರಿಗೆ ಅದು ಸಮಯದ ಬಹಳ ಹೆಚ್ಚಿನ ಸದುಪಯೋಗ. ಇಂತಹ ಚರ್ಚೆಯ ಉಪಯುಕ್ತತೆ ವಾಸ್ತವವಾಗಿ ಓದುಗನ ಮನಸ್ಥಿತಿಯ ಮೇಲೆ ಅವಲಂಬಿಸುತ್ತದೆ.
ವಾಚಕನ ಮನಸ್ಸು ಸಂಸ್ಕಾರಹೊಂದಿ, ಅವನಿಗೆ ಧರ್ಮಾಧರ್ಮಗಳ ಪರಿಜ್ಞಾನ ಒದಗಿ, ಸನ್ಮಾರ್ಗದಲ್ಲಿ ನಡೆಯಬೇಕೆಂಬ ಪ್ರವೃತ್ತಿ ಉಂಟಾಗುವುದೇ ಸಾಹಿತ್ಯದ ಪರಮ ಪ್ರಯೋಜನ. ಇದನ್ನೇ ಪ್ರಾತಃ ಸ್ಮರಣೀಯರಾಯಾದ ಪ್ರಾಚಾರ್ಯ ತಿ. ನಂ. ಶ್ರೀಕಂಠಯ್ಯ ಅವರು "ಸತ್ಪ್ರೇರಣೆ" ಎಂದು ಕರೆದಿದ್ದಾರೆ. ಓದುವಾಗ ರಸಾಸ್ವಾದವೇ ಮುಖ್ಯವಾದರೂ, ಅದರಿಂದ ಒದಗುವ ಆನಂದವೇ ಪ್ರಿಯವಾದರೂ, ಅಂತ್ಯ ಪ್ರಯೋಜನ ಅದರಿಂದ ಒದಗುವ ಸಂಸ್ಕಾರ. ಇಂತಹ ಸಂಸ್ಕಾರ ಬೆಳೆಯಲು ಭಾರತೀಯ ದರ್ಶನಗಳ ವಿವಿಧ ಶಾಖೆಗಳ ಸ್ವಲ್ಪಮಟ್ಟಿನ ಪರಿಚಯವಾದರೂ ಇದ್ದರೆ ಹೆಚ್ಚಿನ ಲಾಭ ಸಿಗುವುದು. ಇದರಿಂದ, ನಮ್ಮ ವೈಯುಕ್ತಿಕ ಒಲವು ಏನೇ ಇದ್ದರೂ, ಕೃತಿ ರಚನಾಕಾರನ ಓಟ ಎತ್ತ ವಾಲಿದೆ ಎಂದು ತಿಳಿಯಬೇಕಾಗುತ್ತದೆ. ಅದಕ್ಕೆ ಈ ರೀತಿ ಚರ್ಚೆ ಸಹಕಾರಿ. ಆದ್ದರಿಂದ ಅದು ಸಮಯದ ಸದುಪಯೋಗವೇ ಸರಿ.
*****
ಸೃಷ್ಟಿಯಲ್ಲಿ ಅನೇಕ ತರಕಾರಿಗಳಿವೆ. ಹಣ್ಣುಗಳಿವೆ. ನಮ್ಮ ಸುತ್ತ-ಮುತ್ತ ಬೆಳೆದಿರುವ ಹಣ್ಣು, ತರಕಾರಿಗಳನ್ನು ನಾವು ನೋಡುತ್ತೇವೆ; ಉಪಯೋಗಿಸುತ್ತೇವೆ. ಕಾಣದ ನಾಡುಗಳಿಗೆ ಹೋದಾಗ ಅಲ್ಲಿ ನಾವು ಹಿಂದೆಂದೂ ಕಾಣದ ಹಣ್ಣು, ತರಕಾರಿಗಳನ್ನು ಕಾಣುತ್ತೇವೆ. ನಮ್ಮ ಪರಿಸರದಲ್ಲಿ ಇರುವ ಅನೇಕ ಹಣ್ಣು, ತರಕಾರಿಗಳಲ್ಲಿ ನಾವು ಕೆಲವನ್ನು ಉಪಯೋಗಿಸುವುದೇ ಇಲ್ಲ. ಕೆಲವನ್ನು ಹೆಚ್ಚು ಉಪಯೋಗಿಸುತ್ತೇವೆ. ಕೆಲವನ್ನು "ಇದೇನು ತರಕಾರಿ ಅಂತ ಉಪಯೋಗಿಸುತ್ತಾರಪ್ಪ!" ಎಂದು ಬೇಸರಿಸುತ್ತೇವೆ. ನಾವು ಶಾಲೆಗಳಲ್ಲಿ ಓದುತ್ತಿದ್ದಾಗ ತೊಂಡೆಕಾಯಿಯ ಬಳ್ಳಿಗಳು ಹೊಲಗಳ ಬೇಲಿಯಲ್ಲಿ ತಾನೇತಾನಾಗಿ ಬೆಳೆಯುತ್ತಿದ್ದವು. ಅದನ್ನು ಯಾರೂ ಬೆಳೆಸುತ್ತಿರಲಿಲ್ಲ. ನಾವುಗಳು ಉಪಯೋಗಿಸುತ್ತಿದ್ದ ಸ್ಲೇಟುಗಳಿಗೆ ಬಳಪದಲ್ಲಿ ಬರೆದರೆ ಚೆನ್ನಾಗಿ ಕಾಣಲೆಂದು ಅದರ ಎಲೆಗಳ ರಸ ಹಚ್ಚುತ್ತಿದ್ದೆವು. ನಮ್ಮ ಸುತ್ತಲಿನ ಪ್ರದೇಶದಲ್ಲಿ ಅದು ತರಕಾರಿ ಎಂದು ಬಳಕೆ ಇರಲಿಲ್ಲ. (ಅದನ್ನು ಹೆಚ್ಚಿ ಬೇಯಿಸಿದಾಗ ಜಿರಲೆಯಂತೆ ಕಾಣುತ್ತದೆ ಎನ್ನುವುದು ಕಾರಣ). ಬೇಲಿಯಲ್ಲಿ ಬೆಳೆದು ಹಣ್ಣಾಗಿದ್ದನ್ನು ಯಾರಾದರೂ ಹುಡುಗರು ತಿನ್ನುವುದು ಕಂಡರೆ ದೊಡ್ಡವರು ಬೈಯುತ್ತಿದ್ದರು!. ಈಗ ದುಬಾರಿ ಬೆಲೆ ಕೊಟ್ಟು ಅದನ್ನು ತಂದು, ಪಲ್ಯ ಮಾಡಿ ತಿನ್ನುತ್ತಾರೆ. ನಮಗೆ ಬೇಡ ಎಂದಮಾತ್ರಕ್ಕೆ ಬೇರೆಯವರು ಅದನ್ನು ಉಪಯೋಗಿಸಬಾರದೇ? ದರ್ಶನಗಳೂ ಅಂತೆಯೇ. ನಮಗೆ ಅದು ಪ್ರಿಯವಲ್ಲದಿರಬಹುದು. ಅದು ವೈಯುಕ್ತಿಕ ಬೇಕು-ಬೇಡ ಅನ್ನುವ ವಿಚಾರ. ಆದರೆ ಎಲ್ಲ ದರ್ಶನಗಳ ಸ್ವಲ್ಪ ಪರಿಚಯ ಇಲ್ಲದೆ ನಮ್ಮ ಜ್ನ್ಯಾನ ಪೂರ್ಣವಾಗುವುದಿಲ್ಲ.
ದೇವರು ಇದ್ದನೋ ಇಲ್ಲವೋ, ಅವನನ್ನು ನಂಬಬೇಕೋ, ಬೇಡವೋ, ಇದು ಅವರವರಿಗೆ ಸೇರಿದ ವಿಚಾರ. ಆದರೆ ಸಾಹಿತ್ಯ ರಸಾಸ್ವಾದನೆಯ ದೃಷ್ಟಿಯಿಂದಲಾದರೂ ಇಂತಹ ಚರ್ಚೆ ಅತ್ಯಂತ ಅವಶ್ಯಕ ಎನಿಸುತ್ತದೆ.
ಶ್ರೀಪುರಂದರದಾಸರಂತಹ ವರಕವಿಗಳು ಸೃಷ್ಟಿ ಮಾಡಿರುವ ಸಾಹಿತ್ಯದ ಗಾತ್ರ ಮತ್ತು ಸತ್ವ ನೋಡಿದರೆ ವಿಸ್ಮಯವಾಗುತ್ತದೆ. ಅನೇಕ ಶತಮಾನಗಳು ಕಳೆದರೂ ಅವು ಇನ್ನೂ ಜನಪ್ರಿಯವಾಗಿವೆ. ಆದಕಾರಣ ಅವುಗಳ ಆಳ ತಿಳಿಯುವ ಪ್ರಯತ್ನ ಬೇಕು. ದೈಹಿಕವಾಗಿ ಚೆನ್ನಾಗಿ ಕಾಣಬೇಕು ಎಂದು ನಾವು ಎಷ್ಟು ಕಸರತ್ತು ಮಾಡುತ್ತೇವೆ! ಬೌದ್ಧಿಕವಾಗಿ ಬೆಳೆಯಲೂ, ಚೆನ್ನಾಗಿ ತೋರಲೂ ಸ್ವಲ್ಪ ಪ್ರಯತ್ನ ಪಡಲೇಬೇಕಲ್ಲವೇ?
ಬುದ್ಧಿವಂತರಿಗೆ ಕಾವ್ಯ, ಶಾಸ್ತ್ರ ವಿಷಯಗಳ ಚರ್ಚೆ, ವಿನೋದಗಳಿಂದ ಕಾಲ ಕಳೆಯುತ್ತದೆ. ಮೂರ್ಖರಿಗೆ ಜೂಜು-ಕುಡಿತ ಮೊದಲಾದ ವ್ಯಸನಗಳಿಂದ, ನಿದ್ರೆಯಿಂದ, ಇಲ್ಲವೇ ಜಗಳದಿಂದ ಕಾಲ ಹರಣವಾಗುತ್ತದೆ. ಹೀಗೆಂದು ಒಂದು ಜನಪ್ರಿಯ ಸುಭಾಷಿತ ಹೇಳುತ್ತದೆ.
ಕಡೆಗೆ ಪ್ರತಿಯೊಬ್ಬನೂ ತನಗೆ ವಿಹಿತವಾದುದನ್ನೇ ಆಯ್ದುಕೊಳ್ಳುತ್ತಾನೆ. ಆ ಸ್ವಾತಂತ್ರ್ಯ ಎಲ್ಲರಿಗೂ ಉಂಟು. ಅಂತಹ ಸ್ವಾತಂತ್ರ್ಯ ಸಮಾಜಘಾತಕವಾಗದಿದ್ದರೆ ಸರಿ.
*****
ಅನೇಕ ಜ್ಞಾನ ಪ್ರಕಾರಗಲ್ಲಿ ಆಳವಾದ ಪಾಂಡಿತ್ಯ ಪಡೆದು, ಸಾವಿರಾರು ಶಿಷ್ಯರನ್ನು ತಯಾರು ಮಾಡಿ, ಅವರುಗಳು ಗುರುಗಳಾಗುವುದನ್ನೂ ಕಂಡು, ಇನ್ನೂ ಜ್ಞಾನಪ್ರಸಾರ ಮಾಡುತ್ತಾ ಸಮಾಜದ ಹೆಚ್ಚಿನ ಮನ್ನಣೆಗೆ ಪಾತ್ರರಾದ ಹಿರಿಯ ಸ್ನೇಹಿತರೊಬ್ಬರು "ಹೂವೀಳ್ಯ" ಬಗ್ಗೆ ಕೇಳಿದ ಪ್ರಶ್ನೆಯೊಂದು "ಎಣ್ಣೆ-ಅರಿಶಿನದಿಂದ ಹೂವೀಳ್ಯದವರೆಗೆ" ಎಂದು ಪ್ರಾರಂಭವಾದ ಈ ಸಂಚಿಕೆಗಳು ಇಲ್ಲಿಯವರೆಗೆ ಬರಲು ಪ್ರೇರಣೆ ನೀಡಿತು. ಅವರಿಗೆ ಅನಂತ ಕೃತಜ್ಞತೆಗಳು.
Nice explanation bawa lot of meaning is there great knowledge it is gods gift to you to narrate for all stories 🙏
ReplyDeleteಸುಂದರ ವಿಶ್ಲೇಷಣೆ. ಅಭಿನಂದನೆಗಳು ಮೂರ್ತಿ
ReplyDeleteನೀವು ಹೇಳಿರುವುದು ಸರಿ ಯಾರಿಗೆ ಯಾವ ವಿಷಯ ರುಚಿಯೋ ಅದನ್ನೇ ಬಯಸುತ್ತಾರೆ .ಆದರೆ ಯಾವುದನ್ನು ಪಠಿಸಬೇಕು, ಮನನ ಮಾಡಿಕೊಳ್ಳಬೇಕು ಎನ್ನುವ ವಿವೇಚನೆಯನ್ನು ಹಿರಿಯರು ಮಕ್ಕಳಿಗೆ ಚಿಕ್ಕಂದಿನಲ್ಲೇ ಕಲಿಸುವ ಜವಾಬ್ದಾರಿಯನ್ನು ಹೊಂದಿರಬೇಕು. ನಿಮ್ಮ ಲೇಖನ ಮಾಲೆ ವಿಚಾರ ಪೂರ್ಣವಾಗಿದೆ .ಧನ್ಯವಾದಗಳು
ReplyDeleteಎಣ್ಣೆ-ಅರಿಶಿನದಿಂದ ಹೂವೀಳ್ಯದವರೆಗೆ to ಪಠಣ - ಮನನ - ಮಂಥನ …. the literary journey in a short span of time gave an excellent opportunity for me to have a glimpse of immortal contribution by great saints like Sri Purandara and other scholars you have quoted. Ultimately it is the “SAMSKARA’ that matters most, which you have reminded.
ReplyDeleteYour analysis is scholarly.
Wish to read many more such writings. Thanks Murthygale