ರಾಜಸೂಯ ಯಾಗದಲ್ಲಿ ತುಂಬಾ ಕೆಲಸಗಳಿದ್ದವು. ತುಂಬಾ ಕೆಲಸ ಎಂದ ಮೇಲೆ ಮಾಡಲು ಅನೇಕ ಜನ ಕೆಲಸ ಮಾಡುವವರೂ ಬೇಕಾಗಿದ್ದರು. ಕೆಲಸ ಮಾಡುವವರು ಯಾರು? ಹೊರಗಡೆಯಿಂದ ಬಂದ ಆಮಂತ್ರಿತರ ಕೈಲಿ ಕೆಲಸ ಮಾಡಿಸುವಹಾಗಿಲ್ಲ. ಎಲ್ಲ ಕೆಲಸ ಮಾಡುವವರೂ ಮನೆಯವರೇ ಆಗಬೇಕಿತ್ತು. ಹಾಗಾಗಿ ಶ್ರೀಕೃಷ್ಣನ ಸೂಚನೆಯಂತೆ ಧರ್ಮರಾಯನು ತನ್ನ ಮನೆಯ ಎಲ್ಲ ಮಂದಿಗೆ ಬೇರೆ ಬೇರೆ ಕೆಲಸಗಳನ್ನು ಹಂಚಿದ. ಅಲ್ಲಿ ಮನೆಯವರೆಂದರೆ ಯಾರು ಯಾರು? ಪಾಂಡವರು ಯಾಗ ಮಾಡುವವರು. ಅಂದರೆ ಆತಿಥೇಯರು. ಅವರು ಮಿಕ್ಕೆಲ್ಲರಿಗಿಂತ ಹೆಚ್ಚಾಗಿ ಕೆಲಸ ಮಾಡಲೇಬೇಕು. ಯಾದವರು ಕುಂತಿದೇವಿಯ ತವರು ಮನೆಯವರು. ಅವರಿಗೂ ಕೆಲಸ ಹೇಳಬಹುದು. ದ್ರುಪದನ ಮನೆಯವರೂ ಇಲ್ಲಿ ಮನೆಯವರೇ. ಬೀಗರೆಂದು ಸುಮ್ಮನೆ ಕೂಡುವಹಾಗಿಲ್ಲ. ಅವರಿಗೂ ಕೆಲಸ ಹಂಚಿದರು. ಇನ್ನು ಕೌರವರು. ಇಷ್ಟವಿದ್ದರೂ ಬಿಟ್ಟರೂ ಅವರೂ ಇಲ್ಲಿ ಪಾಂಚಾಲರು, ಯಾದವರಿಗಿಂತ ಹೆಚ್ಚಾಗಿ ಮನೆಯವರು. ದುರ್ಯೋಧನನಿಗೆ ಶ್ರೀಕೃಷ್ಣನ ಸಲಹೆಯಂತೆ ಹಣಕಾಸಿನ ವ್ಯವಹಾರ ನೋಡಲು ಬಿಟ್ಟರಂತೆ. ದೊಡ್ಡ ಖಾತೆ ತನಗೆ ಸಿಕ್ಕಿದ ಸಂತೋಷದಿಂದ ಅವನು ಬಹಳ ಹುಮ್ಮಸ್ಸಿನಿಂದ ಮನಸ್ಸಿಟ್ಟು, ಕಷ್ಟಪಟ್ಟು ಕೆಲಸ ಮಾಡಿದನಂತೆ. ಅವನ ಕೈಯಲ್ಲಿ ಧನವೃದ್ಧಿ ರೇಖೆ ಇತ್ತಂತೆ. ಅದಕ್ಕೇ ಶ್ರೀಕೃಷ್ಣ ಆ ಖಾತೆ ಕೊಡಲು ಸೂಚಿಸಿದನಂತೆ. ಕರ್ಣ ಕೌಂತೇಯ ಎಂದು ಗೊತ್ತಿಲ್ಲದಿದ್ದರೂ ದುರ್ಯೋಧನನ ಜೊತೆಯಲ್ಲಿ ಬಂದಿದ್ದರಿಂದ ಅವನೂ ಮನೆಯವನೇ ಆದ. ಕರ್ಣನಿಗೆ ದಾನಗಳನ್ನು ಕೊಡುವ ಕೆಲಸ ಕೊಟ್ಟರಂತೆ. ಅವನು ದಾನಶೂರ. ಆ ಕೆಲಸ ಮಾಡಲು ಬಹಳ ಸಂತೋಷ ಪಟ್ಟನಂತೆ. ಹೀಗೆ ಎಲ್ಲರಿಗೂ, ಅಂದರೆ ಕೆಲಸ ಹಂಚಬಹುದಾದ ಎಲ್ಲರಿಗೂ ಕೆಲಸ ಕೊಟ್ಟರು. ಜವಾಬ್ದಾರಿ ಕೊಟ್ಟವನು ಯುಧಿಷ್ಠಿರ. ಸೂಚಿಸಿದವನು ಶ್ರೀಕೃಷ್ಣ. ಶ್ರೀಕೃಷ್ಣನಿಗೆ ಕೇವಲ "ಹೀಗೆ ಹೀಗೆ ಮಾಡು" ಎಂದು ಹೇಳಿದ್ದಷ್ಟೇ ಕೆಲಸವೇ?
ಯಾರಿಗೂ ಹೇಳದೆ ಶ್ರೀಕೃಷ್ಣ ತನಗೆ ಕೆಲಸವೊಂದು ಕೊಟ್ಟುಕೊಂಡ. ಅವನು ಆ ಕೆಲಸ ಮಾಡುವವರೆಗೂ ಅದೊಂದು ಕೆಲಸ ಎಂದು ಯಾರಿಗೂ ಹೊಳದೇಇರಲಿಲ್ಲ. ಅದೇನು ಅಂತಹ ಘನಂದಾರಿ ಕೆಲಸ?
*****
ಐದು, ಆರು ದಶಕಗಳ ಹಿಂದೆ, ನಾವು ಶಾಲೆಯಲ್ಲಿ ಓದುತ್ತಿದ್ದಾಗ, ಸಮಾಜದ ವ್ಯವಸ್ಥೆ ಬೇರೆ ರೀತಿಯದೇ ಇತ್ತು. ಈಗಿನಂತೆ "ಇವೆಂಟ್ ಮ್ಯಾನೇಜಮೆಂಟ್"ತಂಡಗಳು ಇರಲಿಲ್ಲ. ಅವರಿಗೆ ಕೇಳಿದಷ್ಟು ಹಣ ಕೊಡಲು ಶಕ್ತಿಯಂತೂ ಮೊದಲೇ ಇರಲಿಲ್ಲ. ಮದುವೆ-ಮುಂಜಿ ಮುಂತಾದ ಸಮಾರಂಭಗಳಿಗೆ ಬಂದ ಜನರು ತಾವಾಗಿಯೇ ಎಲ್ಲ ಕೆಲಸಗಳಲ್ಲಿಯೂ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಿದ್ದರು. ಹೆಣ್ಣುಮಕ್ಕಳು ಸಮಾರಂಭದ ಸ್ಥಳವನ್ನು ಸಿಂಗರಿಸುವುದು, ತರಕಾರಿ ಹೆಚ್ಚುವುದು, ತೇಂಗಿನಕಾಯಿ ತುರಿಯುವುದು, ಹಾಡು-ಹಸೆ ಹೇಳುವುದು, ಇತ್ಯಾದಿ ಕೆಲಸ ಸ್ವತಃ ಹುಡುಕಿಕೊಂಡು ಮಾಡುತ್ತಿದ್ದರು. ಗಂಡು ಮಕ್ಕಳು ನೀರು ತುಂಬುವುದು, ಸಾಮಾನು-ಸರಂಜಾಮು ತರುವುದು-ಹೊರುವುದು, ಮಂಟಪ ಕಟ್ಟುವುದು ಇತ್ಯಾದಿ ಕೆಲಸ ಮಾಡುತ್ತಿದ್ದರು. ನಮ್ಮಂತಹ ಹುಡುಗರು ಮೊದಲ ಪಂಕ್ತಿ ಊಟಕ್ಕೆ ಕುಳಿತರೆ ಹಿರಿಯರು "ನಿಮಗೇನೋ ಆತುರ? ಒಂದೆರಡು ಪಂಕ್ತಿ ಬಡಿಸಿ ಆಮೇಲೆ ಕೂಡಿ" ಎನ್ನುತ್ತಿದ್ದರು. ಬಿಸಿ ಪದಾರ್ಥಗಳ ಪಾತ್ರೆ ಹಿಡಿಯುವ, ಬಡಿಸುವ ವಯಸ್ಸು ಇನ್ನೂ ಬಂದಿಲ್ಲದಿದ್ದ ಬಾಲಕರಿಗೆ ನೀರು ಬಡಿಸುವ ಕೆಲಸ ಇರುತ್ತಿತ್ತು. ಒಟ್ಟಿನಲ್ಲಿ "ದುಡಿದು ತಿನ್ನು" ಎನ್ನುವ ವಾಕ್ಯದಂತೆ ಏನಾದರೂ ಕೆಲಸ ಮಾಡಿಯೇ ಮುಂದಿನ ಮಾತು.
ಈಗಿನಂತೆ ಊಟದ ಮೇಜುಗಳ ಮೇಲೆ ಊಟ ಬಡಿಸುವಂತಿರಲಿಲ್ಲ. ಮೇಜು-ಕುರ್ಚಿ ಇದ್ದ ಮನೆಗಳೇ ಕಮ್ಮಿ. ಮನೆಗೆ ಯಾರಾದರೂ ಬಂದರೆ ಮೊದಲು ಮಾಡುತ್ತಿದ್ದ ಕೆಲಸ ಬಂದವರು ಕೂಡಲು ಚಾಪೆ ಹಾಸುವುದು. ಸ್ವಲ್ಪ ಅನುಕೂಲಸ್ಥರ ಮನೆಯಲ್ಲಿ ಚಾಪೆಯ ಬದಲು ಜಮಖಾನ ಇದ್ದವು. ಇನ್ನು ಊಟದ ಮೇಜುಗಳು ಎಲ್ಲಿಂದ ಬರಬೇಕು? ನೆಲ ಸಾರಿಸಿ, ಶುದ್ಧ ಮಾಡಿ, ಬಾಳೆಲೆ ಹರಡಿ ಊಟ ಬಡಿಸಬೇಕು. ತಂದಿದ್ದ ಬಾಳೆ ಎಲೆ ಮುಗಿದು ಇನ್ನೂ ಊಟಕ್ಕೆ ಜನ ಉಳಿದರೆ ಕಡೆಯ ಪಂಕ್ತಿಗಳಿಗೆ ಮುತ್ತುಗದ ಎಲೆ. ಸಂಜೆಯ ವೇಳೆ ಇನ್ನೂ ಸುಲಭವಾದ ಕೈತುತ್ತಿನ ಊಟ. ಕೈತುತ್ತಿನ ಊಟದಲ್ಲಿ ಎರಡು ಬಲವಾದ ಕಾರಣಗಳಿದ್ದವು. ಬೆಳಗ್ಗೆ ಮಾಡಿ ಮಿಕ್ಕಿದ್ದ ಅಡಿಗೆ ಖರ್ಚಾಗಲೇಬೇಕಿತ್ತು. ಏಕೆಂದರೆ ಆಗ ತಂಗಳು ಪೆಟ್ಟಿಗೆ ಅಥವಾ ರೆಫ್ರಿಜಿರೇಟರ್ ಇರಲಿಲ್ಲ. ಸಾಲ-ಸೋಲ ಮಾಡಿ ತಂದ ಪದಾರ್ಥಗಳ ಅಡಿಗೆ ಬಿಸಾಡುವಂತೆಯೂ ಇರಲಿಲ್ಲ. ಸ್ವಲ್ಪವೇ ಉಳಿದ ಪದಾರ್ಥಗಳು ಎಲೆ ಹಾಕಿ ಬಡಿಸಿದರೆ ಎಲ್ಲರಿಗೂ ಸಾಲುವುದಿಲ್ಲ. ಕೈತುತ್ತಿನಲ್ಲಾದರೆ ತುತ್ತು ಸಣ್ಣ ಮಾಡಿದರೆ ಎಲ್ಲರಿಗೂ ಒಂದು ತುತ್ತು ಬರುತ್ತದೆ! ಹೀಗೆ ಪದಾರ್ಥವೂ ಖರ್ಚಾಯಿತು ಮತ್ತು ಎಲ್ಲರಿಗೂ ಸಿಕ್ಕಿತು! ಇದು ಮೊದಲನೇ ಕಾರಣ. ಕೈತುತ್ತು ಮಾಡಿದ ಮೇಲೆ ಎಲೆ ಎತ್ತುವ ಕೆಲಸವಿಲ್ಲ. ಎಲ್ಲರೂ ಅವರ ಕೈ ತೊಳೆದುಕೊಂಡೇ ತೊಳೆದುಕೊಳ್ಳುತ್ತಾರೆ. ಕೈತುತ್ತು ಹಾಕಿದ ಜಾಗ ಸ್ವಲ್ಪ ಸ್ವಚ್ಛ ಮಾಡಿದರೆ ಆಯಿತು. ಬೆಳಗಿನಿಂದ ದುಡಿದವರಿಗೆ ಮತ್ತು ಮಾರನೆಯ ದಿನ ಬೇಗ ಏಳಬೇಕಾದವರಿಗೆ ಸುಸ್ತಾದ ಸಂಜೆಯಲ್ಲಿ ಒಂದು ಕೆಲಸ ಕಡಿಮೆಯಾಯಿತು. ಇದರ ಜೊತೆಗೆ ಉಳಿಸಿದ ಬಾಳೆ ಎಲೆ ಅಥವಾ ಮುತ್ತಗದ ಎಲೆ ಮಾರನೆಯ ದಿನಕ್ಕೆ ಉಪಯೋಗಕ್ಕೂ ಬಂತು!
"ಸಿಹಿ ತಿಂದ ಕೈಲಿ ಊಟ ಮಾಡಿದ ಎಲೆ ಎತ್ತಬಾರದು" ಎಂದು ಒಂದು ಶಾಸ್ತ್ರವಿತ್ತು. ಈ ಶಾಸ್ತ್ರವೇಕೆ? ಸಾಮಾನ್ಯವಾಗಿ ಮನೆಗೆ ಬಂದ ಅತಿಥಿಗಳು ಮೊದಲನೇ ಪಂಕ್ತಿಯಲ್ಲಿ ಊಟಕ್ಕೆ ಕೂಡುವರು. ಅವರ ಕೈಯಲ್ಲಿ ಎಲೆ ಎತ್ತಿಸುವುದು ಚೆನ್ನಲ್ಲ. ಈ ಶಾಸ್ತ್ರ ಹೇಳಿದರೆ ಅವರು ಎಲೆ ಎತ್ತದೆ ಎದ್ದು ಕೈ ತೊಳೆಯಲು ಹೋಗುವರು. ಅವರು ಕೈ ತೊಳೆದು ಬರುವುದರ ಒಳಗೆ ಅವರು ಊಟಮಾಡಿದ ಎಲೆಗಳೇ ಮಾಯ. ಮನೆಯ ಮಕ್ಕಳು ಕಾದಿದ್ದು ಅವರು ಎದ್ದ ತಕ್ಷಣ ಆ ಕೆಲಸ ಮುಗಿಸುತ್ತಿದ್ದರು.
"ಹಬ್ಬದ ದಿನ ರಾತ್ರಿ ಊಟ ಮಾಡದೆ ಮಲಗಬಾರದು" ಎಳ್ಳುವುದು ಇನ್ನೊಂದು ಶಾಸ್ತ್ರ. ಇದು ಯಾವ ಶಾಸ್ತ್ರದಲ್ಲೂ ಇಲ್ಲದ, ಯಾವ ಶಾಸ್ತ್ರಿಯೂ ಹೇಳದ ಶಾಸ್ತ್ರ. ಬೆಳಗ್ಗೆ ಮಾಡಿ ಮಿಕ್ಕಿದ ಅಡಿಗೆ ಏನು ಮಾಡಬೇಕು? ಈ ಶಾಸ್ತ್ರ ಪಾಲಿಸಿದರೆ ಎಲ್ಲರೂ ಕೆಲವು ತುತ್ತು ಉಂಡು ಮಿಕ್ಕಿದ ಅಡಿಗೆಯೆಲ್ಲ ಖರ್ಚಾಗುವುದು!
ಈಗಿನಂತೆ ಆಗಿನ ಸಮಯದಲ್ಲಿ ದೊಡ್ಡ ದೊಡ್ಡ ಸಮಾರಂಭ ಭವನಗಳು ಇರಲಿಲ್ಲ. ಹಳ್ಳಿಗಳಲ್ಲಿ ದೇವಸ್ಥಾನದ ಮುಂದೆ ಅಥವಾ ಅರಳಿ ಕಟ್ಟೆ ಮುಂದೆ ಚಪ್ಪರ ಹಾಕಿ ಊಟ ಬಡಿಸುತ್ತಿದ್ದರು. ಸ್ವಲ್ಪ ದೊಡ್ಡ ಊರುಗಳಲ್ಲಿ ದೊಡ್ಡ ಮನೆಗಳಲ್ಲಿ ನಡೆಸುತ್ತಿದ್ದರು. ಎಲ್ಲರಿಗೂ ಒಟ್ಟಿಗೆ ಊಟ ಬಡಿಸುವಹಾಗಿರಲಿಲ್ಲ. ಅದಕ್ಕೆ ಸರತಿಯ ಮೇಲೆ ಎರಡೂ, ಮೂರೋ, ನಾಲ್ಕೋ ಅಥವಾ ಇನ್ನೂ ಹೆಚ್ಚಿನ ಪಾಳಿಯಲ್ಲಿ ಊಟ ಬಡಿಸುತ್ತಿದ್ದರು. ಜಾಗದ ಜೊತೆಗೆ ಬಡಿಸುವ ಸಲಕರಣೆ (ಪಾತ್ರೆ, ಸೌಟು, ಲೋಟ ಇತ್ಯಾದಿ) ಮತ್ತು ಬಡಿಸುವವರು ಇವುಗಳ ಕೊರತೆ. (ಜಾತ್ರೆ, ಧಾತ್ರಿ ಹವನ, ನರಸಿಂಹ ಜಯಂತಿ ಇಂತಹ ಸಮಾರಂಭಗಳಲ್ಲಿ ನಾವು ಊಟಕ್ಕೆ ಹೋಗುವಾಗ ನಮ್ಮ ನಮ್ಮ ಮನೆಗಳಿಂದಲೇ ಲೋಟ ತೆಗೆದುಕೊಂಡು ಹೋಗಬೇಕಾಗಿತ್ತು). ಈ ಪಾಳಿಗಳಲ್ಲಿ ಊಟ ಬಡಿಸುವುದಕ್ಕೆ ಪಂಕ್ತಿ ಎಂದು ಕರೆಯುತ್ತಿದ್ದರು. ಈಗ ಈ ಪದ ಮರೆತೇ ಹೋಗಿ ಅಚ್ಚ ಕನ್ನಡ ಪದವಾದ "ಬ್ಯಾಚ್" ಎನ್ನುತ್ತಾರೆ. ಪಂಕ್ತಿಗಳಲ್ಲಿ ಬಡಿಸುವಾಗ ಮೊದಲ ಪಂಕ್ತಿಯವರು ಉಂಡ ಸ್ಥಳಗಳನ್ನು ಚೆನ್ನಾಗಿ ಸಾರಿಸಿ, ಗೋಮಯದಿಂದ ಶುದ್ಧ ಮಾಡಿ ಮತ್ತೆ ಎಲೆ ಹಾಕುತ್ತಿದ್ದರು. ಅಂದವಾಗಿ ಕಾಣಲಿ ಎಂದು ರಂಗೋಲಿ ಹಾಕುತ್ತಿದ್ದರು. ವಿದ್ಯುತ್ ಇಲ್ಲದ ಕಾರಣದಿಂದ ಪ್ರತಿ ಎಲೆಯ ಮುಂದೆ ದೀಪಗಳಿಡುತ್ತಿದ್ದರು. ಇಷ್ಟಾದ ಮೇಲೆ ಮುಂದಿನ ಪಂಕ್ತಿಯಲ್ಲಿ ಮತ್ತೆ ಊಟ. ಆದ ಕಾರಣ ಎಲೆ ಎತ್ತುವುದು ಮತ್ತು ಸ್ಥಳ ಶುದ್ದಿ ಮಾಡುವುದು ಬಹಳ ಮುಖ್ಯ ಕೆಲಸವಾಗಿತ್ತು. ಆದರೆ ಎಂಜಲೆಲೆ ಎತ್ತುವುದು ಮತ್ತು ಸಗಣಿ ಮುಟ್ಟುವುದು ಬಹಳ ಜನರಿಗೆ ಬೇಡವಾದ ಕೆಲಸ. ಅದೇನು ಗಂಧ ಹಂಚುವ ಕೆಲಸವಲ್ಲ. ಒಡವೆ, ವಸ್ತ್ರ ಹೊತ್ತು ಓಡಾಡುವ ಕೆಲಸವಲ್ಲ. ತಾವು ತೊಟ್ಟ ಒಳ್ಳೆಯ ಬಟ್ಟೆ ಕೊಳಕು ಮಾಡುವ ಕೆಲಸ. ಎಲೆ ತೆಗೆಯುವಾಗ ಹಾಕಿದ ಸರ ಒಡವೆಗಳು ಸಗಣಿಯಲ್ಲಿ ಹೊರಳಾಡುವ ಕೆಲಸ. ನಡು ಬಗ್ಗಿಸಿ, ಮತ್ತೆ ಎದ್ದು, ಮತ್ತೆ ಬಗ್ಗಿ, ಮತ್ತೆ ಎದ್ದು, ಹೀಗೆ ಮಾಡಿ ಮಾಡಿ ಬೆನ್ನು ನೋಯುವ ಕೆಲಸ. ಸಗಣಿ ಮತ್ತು ಪೊರಕೆಯ ಆಟದ ಕೆಲಸ. ಯಾರಿಗೂ ಬೇಡವಾದ, ಆದರೆ ಯಾರಾದರೂ ವಿಧಿಯಿಲ್ಲದೇ ಮಾಡಲೇಬೇಕಾದ ಕೆಲಸ!
*****
ಯಾವುದೇ ಸಮಾರಂಭವಾದರೂ "ಆಹಾ! ಬಹಳ ಚೆನ್ನಾಗಿ ಆಯಿತು" ಎಂದು ಹೇಳಬೇಕಾದರೆ ಊಟ ಚೆನ್ನಾಗಿರಬೇಕು. "ದೇರ್ ಈಸ್ ನೋ ಮೀಟಿಂಗ್ ವಿತೌಟ್ ಈಟಿಂಗ್" ಎಂದು ಈಗಲೂ ಎಲ್ಲರೂ ಹೇಳುತ್ತಾರೆ. "ರಥೋತ್ಸವ ಎಷ್ಟು ಚೆನ್ನಾಗಿ ಆಯಿತು ಅಂತೀರಿ, ಐದು ನೂರು ಜನರ ಊಟ!" ಅನ್ನುತ್ತಾರೆ. "ಫೇಸ್ ಐಸ್ ದಿ ಇಂಡೆಕ್ಸ್ ಆಫ್ ಮೈಂಡ್" ಅನ್ನುವಂತೆ "ಊಟ ಐಸ್ ದಿ ಇಂಡೆಕ್ಸ್ ಆಫ್ ಸಕ್ಸಸ್ ಆಫ್ ಎ ಸಮಾರಂಭ". ಊಟ ಇರುವ ವಿಷಯ ಹಾಗಿರಲಿ. ಸಾರಿಗೆ ಸ್ವಲ್ಪ ಉಪ್ಪು ಕಡಿಮೆಯಾದರೇ ಕಷ್ಟ. ಸಮಾರಂಭದ ನಂತರ ಆ ಕಡಿಮೆಯಾದ ಉಪ್ಪಿನ ಚರ್ಚೆಯಲ್ಲಿ ಸಮಾರಂಭದ ಇತರ ಶ್ರೇಯಸ್ಸೇ ಕೊಚ್ಚಿ ಹೋಗುವ ಭಯವುಂಟು.
ರಾಜಸೂಯ ಯಾಗದಲ್ಲಿ ಶ್ರೀಕೃಷ್ಣ ಎಲ್ಲರಿಗೂ ಕೆಲಸ ಹಂಚಲು ಸೂಚಿಸಿ ಈ ಎಂಜಲೆಲೆ ಎತ್ತುವುದು ಮತ್ತು ಊಟ ಮಾಡಿದ ಸ್ಥಳವನ್ನು ಶುದ್ದಿ ಮಾಡುವುದನ್ನು ಯಾರಿಗೂ ಹಂಚದೆ ತಾನೇ ಉಳಿಸಿಕೊಂಡ. ಮೊದಲ ಪಂಕ್ತಿ ಊಟ ಆದ ನಂತರ ತಾನೇ ಮುಂದೆ ನಿಂತು ಈ ಕೆಲಸ ಮಾಡಿದ. ಈ ಕೆಲಸ ಯಾರಿಗಾದರೂ ಕೊಟ್ಟಿದ್ದರೆ ಅವರು ಜಗಳಕ್ಕೆ ಬರಬಹುದಿತ್ತು. ಇಲ್ಲವೇ ಮುಖ ಮುದುರಿಕೊಳ್ಳಬಹುದಿತ್ತು. ತಾನೇ ಮಾಡಿದರೆ? ಈ ಸಮಸ್ಯೆಯೇ ಇಲ್ಲ! ಅದಕ್ಕಿಂತ ಹೆಚ್ಚಾಗಿ ಈ ನೆಪದಿಂದ ಇಡೀ ಬಂದವರ ಊಟದ ವ್ಯವಸ್ಥೆಯ ಮತ್ತು ಸರಿಯಾದ ರೀತಿಯ ವಿತರಣೆಯ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡ.
ಶ್ರೀಕೃಷ್ಣನು ಎಂಜಲೆಲೆ ಎತ್ತಿ, ಸ್ಥಳ ಶುದ್ದಿ ಮಾಡಿ ಮುಂದಿನ ಪಂಕ್ತಿಗಳಿಗೆ ತಯಾರು ಮಾಡಿದ ರೀತಿಯನ್ನು ಶ್ರೀ ಪುರಂದರ ದಾಸರು ಹೀಗೆ ವರ್ಣಿಸುತ್ತಾರೆ:
ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿಎಂಜಲವನೇ ಬಳಿದ, ಶ್ರೀಹರಿ ಎಂಜಲವನೆ ಬಳಿದ
ಉಟ್ಟ ಪೀತಾಂಬರ ಟೊಂಕಕೆ ಕಟ್ಟಿಕಟ್ಟಿದ ಸರಗಳ ಹಿಂದಕೆ ಸರಿಸಿಸರಸರ ಎಲೆಗಳ ತೆಗೆದು ಬಿಸಾಡಿಕಟ್ಟ ಕಡೆಗೆ ತಾ ಬಳಿದು ನಿಂತಪೊರಕೆಯ ಪಿಡಿದು ಕಸವನೆ ಗುಡಿಸಿಸಗಣಿಯ ನೀರೊಳು ಕಲೆಸಿ ಥಳಿಯ ಹಾಕಿಸಾಲು ಸಾಲಾಗಿ ಮಣೆಯಿಟ್ಟು ಎಲೆ ಹಾಕಿರಂಗೋಲಿ ಕೊಳವಿಯ ಎಳೆದು ತಾ ನಿಂತತನ್ನ ಕೆಲಸಾಯ್ತೆಂದ ಇನ್ನೇಕೆ ತಡವೆಂದಇನ್ನೊಂದು ಪಂಕ್ತಿಯ ಕೂಡ ಹೇಳೆಂದಘನ್ನ ಮಹಿಮ ಶ್ರೀ ಪುರಂದರ ವಿಠಲಪುಣ್ಯಾತ್ಮರುಂಡೆಲೆಗಳನು ತೆಗೆದು ನಿಂತ
ಶ್ರೀಕೃಷ್ಣ ಹೀಗೆ ಮಾಡಿದ್ದರಿಂದ ಇನ್ನೊಂದು ಕೆಲಸವಾಯ್ತು. ಅವನೇ ಈ ಕೆಲಸ ಮಾಡಿದ್ದರಿಂದ ಮಿಕ್ಕವರು ಹಿಂದೆ-ಮುಂದೆ ನೋಡದೆ ತಾವೂ ಕೈ ಜೋಡಿಸಿದರು. ಕ್ಷಣಾರ್ಧದಲ್ಲಿ ಸ್ಥಳ ಸ್ವಚ್ಛ ಆಯಿತು. ಯಾರಿಂಗೂ ಬೇಡದ ಕೆಲಸ, ಎಲ್ಲರೂ ಬೇಸರಿಸುವ ಕೆಲಸ, ಕಸದ ಕೆಲಸ ಸಾಮೂಹಿಕ ಕೆಲಸವಾಯಿತು. ಯಾರಿಗೂ ವಹಿಸದೆ ಇದ್ದ ಕೆಲಸ ಎಲ್ಲರದಾಯಿತು.
*****
"ಆಳಾಗಬಲ್ಲವ ಅರಸಾಗಬಲ್ಲ" ಎಂಬ ನುಡಿಗೆ ಇದು ಸಾಕ್ಷಿಯಾಯಿತು. ರಾಜಸೂಯದಲ್ಲಿ ಎಂಜಲೆಲೆ ಬಳಿದವನೇ ಕಡೆಯಲ್ಲಿ ಆಗ್ರ ಪೂಜೆಗೂ ಅರ್ಹನಾದ. "ಕಾಯಕವೇ ಕೈಲಾಸ" ಎನ್ನುವುದನ್ನು ಶ್ರೀಕೃಷ್ಣ ಅನೇಕ ರೀತಿಯಲ್ಲಿ ಮಾಡಿ ತೋರಿಸಿದ ಎನ್ನುವುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿ ನಿಂತಿತು.
ತಮ್ಮ ಸುತ್ತ ಮುತ್ತ ನಡೆಯುವುದನ್ನು ಸೂಕ್ಷ್ಮವಾಗಿ ಗಮನಿಸುವ ಕವಿ ಹೃದಯ ಮತ್ತು ಎಲ್ಲೆಲ್ಲೂ ಶ್ರೀಹರಿಯನ್ನು ಕಾಣುವ ಶ್ರೀ ಪುರಂದರ ದಾಸರ ರೀತಿಗೂ ಈ ಪದ ಗುರುತಾಗಿ ಉಳಿಯಿತು.
ಶ್ರೀಕೃಷ್ಣನ ನಡತೆ ಮತ್ತು ಶ್ರೀ ಪುರಂದರದಾಸರ ಕುಶಲತೆಯ ಮತ್ತೊಂದು ಉದಾಹರಣೆ ಮುಂದಿನ ಸಂಚಿಕೆಯಲ್ಲಿ ನೋಡೋಣ.
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ReplyDeleteಬಹಳ ಸ್ವಾರಸ್ಯಕರವಾಗಿ ಮೂಡಿಬಂದಿದೆ
ReplyDeleteಶ್ರೀ ಕೃಷ್ಣ ನ ಬುದ್ದಿವಂತಿಕೆ, ಎಲ್ಲರಿಗೂ. ಒಳ್ಳೆಯ ಪಾಠ ಕಲಿಸಿದಂತೆ ಆಯಿತು, for all times , ತುಂಬಾ ಚೆನ್ನಾಗಿ ಬರೆದಿದ್ದೀರಿ, ಈ ವಿಷಯ ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ
ReplyDeleteಕೆಲಸ ಹೇಳದಯೆ ಕೆಲಸ ಮಾಡಿಸುವುದು ತಾನೆ ಕೆಲಸ ಶುರುಮಾಡಿದಾಗ ಎಲ್ಲರೂ ಕೆಲಸದಲ್ಲಿ ಪಾಲ್ಗೊಳ್ಳುವರು. This is one of the leadership quality.
ReplyDeleteSuper explanation by Shri Keshava Murthy
Comparision is very good.
ReplyDeleteEverything is well connected and the sharing of responsibilities that we do on any occasion is a witness to Sri Krishna’s way. He took the least unpleasant job to clean the place and made it ready for next pankti. There is so many spiritual lessons to learn from this article. Thanks Keshav. ……..UR
ReplyDeleteAnother beautiful gem from the jewel box you possess Keshav sir. Beautiful narration which is incomparable. ಹಾಲು ಕರೆಯುವುದು, ದನದ ಹಟ್ಟಿ ಸ್ವಚ್ಛ ಮಾಡುವುದು, ಬೆರಣಿ ತಟ್ಟುವುದು, ಎಂಜಲು ತಟ್ಟೆ/ಎಲೆ ಎತ್ತಿ ಗೋಮಯದಿಂದ ಊಟದ ಜಾಗ ಶುದ್ಧ ಮಾಡುವುದು, ಜೊತೆ ಜೊತೆಗೆ, ನೀನು ಮಾಡು, ನೀನು ಮಾಡೆಂದು ಒಡಹುಟ್ಟಿದವರೊಡನೆ ಜಗಳ ಮಾಡುತ್ತಿದ್ದ ದಿನಗಳೆಲ್ಲ ಕಣ್ಣಮುಂದೆ ಹಾದು ಹೋದವು 😅. ಸಭೆ ಸಮಾರಂಭಗಳಲ್ಲಿ ಊರವರೆಲ್ಲ ಸೇರಿ ತಮ್ಮ ತಮ್ಮ ಶಕ್ತ್ಯಾನುಸಾರ ಶ್ರಮದಾನ ಮಾಡಿ ಸಮಾರಂಭದ ಕಳೆ ಹೆಚ್ಚಿಸುತ್ತಿದ್ದ ದಿನಗಳೇ ಚೆನ್ನ ಅಲ್ಲವೇ.
ReplyDeleteಬೇರೆಲ್ಲರಿಗೂ, ಕರ್ಣ ಸಹಿತ ದುರ್ಯೋಧನನಿಗೂ ಉತ್ತಮವೆನಿಸಿದ ಕೆಲಸಗಳನ್ನು ಹಂಚಿ ತಾನು ಮಾತ್ರ ಯಾರೂ ಇಷ್ಟ ಪಡದ ಎಂಜಲೆಲೆ ಎತ್ತಿ ಆದರ್ಶ ಮೆರೆದ ಕೃಷ್ಣ ಪರಮಾತ್ಮನ ಪರಿಯೇ ಅನನ್ಯ 👌🙏🙏🙏. ಇದನ್ನು ಬಹು ಚೆನ್ನಾಗಿ ವರ್ಣಿಸಿದ ಶ್ರೀ ಪುರಂದರ ದಾಸರು, ಅದನ್ನೆಲ್ಲ ನಮಗೆ ಉಣಬಡಿಸಿದ ನೀವೇ ಧನ್ಯರು 🙏
Excellent writing.!!
ReplyDeleteಕೃಷ್ಣನ ದಾರ್ಶನೀಕತೆಯನ್ನು ಬಹಳ ಸೊಗಸಾಗಿ ವರ್ಣಿಸಿದ್ದೀರಿ. ಧನ್ಯವಾದಗಳು.
ReplyDeleteಕೃಷ್ಣನ ದಾರ್ಶನೀಕತೆಯನ್ನು ತುಂಬ ಸೊಗಸಾಗಿ ವರ್ಣಿಸಿದ್ದೀರಿ. ಧನ್ಯವಾದಗಳು.
ReplyDelete