ಶ್ರೀ ಪುರಂದರದಾಸರ
"ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ನೋಟದಲ್ಲಿ ಕಳೆದ ಸಂಚಿಕೆಯಲ್ಲಿ "
ಅಪೂರ್ಣ, ಪೂರ್ಣ ಮತ್ತು ಪರಿಪೂರ್ಣ" ಎನ್ನುವ ಶೀರ್ಷಿಕೆಯಡಿ "ಪರಿಪೂರ್ಣನೆಂದು ಪೂಜೆಯನ್ನು ಮಾಡೆ" ಎನ್ನುವವರೆಗೆ ಬಂದಿದ್ದೆವು.
(ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ
"ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ" ಎನ್ನುವ ಬಗ್ಗೆ ವಿಚಾರ ಮಾಡೋಣ.
ನಮ್ಮ ಪಕ್ಕದ ಮನೆಯವರು ಡೈರಿ ಹಾಲನ್ನು ನಂಬುವುದಿಲ್ಲ. ಮನೆಯ ಮುಂದೆ ಹಸುವನ್ನು ತಂದು ಹಾಲು ಕರೆದು ಕೊಡಲು ಒಬ್ಬನನ್ನು ನೇಮಿಸಿದ್ದಾರೆ. ಅವನು ಹಸುವನ್ನು ಕರೆತಂದು ಅವರ ಮನೆಯ ಮುಂದೆ ಕಟ್ಟಿ, ಅದರ ಕೆಚ್ಚಲು ತೊಳೆದು, ಅವರೇ ಕೊಟ್ಟ ಪಾತ್ರೆಯಲ್ಲಿ ನೀರು ಸೇರಿಸದೆ ಹಾಲು ಕರೆದು ಕೊಡುತ್ತಾನೆ. ಅಳತೆಯಲ್ಲೂ ಮೋಸ ಆಗಬಾರದಲ್ಲ. ಸರಿಯಾಗಿ ಎರಡು ಲೀಟರಿನ ಹಾಲಿನ ಪಾತ್ರೆ ಅದಕ್ಕಾಗಿ ಕೊಂಡಿಟ್ಟಿದ್ದಾರೆ. ಹಾಲು ಕರೆಯುವಾಗ ಅವರ ಹದ್ದಿನ ಕಣ್ಣು ಆ ಕಾರ್ಯಕ್ರಮವನ್ನೇ ನೋಡುತ್ತಿರುತ್ತದೆ. ಈ ದಿನ ಅವರು ಬೆಳಿಗ್ಗೆ ಬೇಗ ಎಲ್ಲೋ ಹೋಬಬೇಕಾಗಿತ್ತು. ಪಾತ್ರೆ ನಮಗೆ ಕೊಟ್ಟು ಹಾಲು ಹಿಡಿದಿಡುವಂತೆ ಹೇಳಿ ಹೋಗಿದ್ದಾರೆ. ಎಂಟು ಗಂಟೆಗೆ ಬಂದು ತೆಗೆದುಕೊಂಡು ಹೋಗುತ್ತಾರೆ. "ಅಯ್ಯೋ, ಈ ಕೆಲಸ ನನಗೆ ಬೇಡ. ಡಿಶಂಬರ ಚಳಿಯಲ್ಲಿ ಯಾರು ಬೇಗ ಎದ್ದಾರು?" ಎಂದು ಹೇಳುವ ಹಾಗಿಲ್ಲ. ಏಕೆಂದರೆ ನಮ್ಮ ಮನೆಗೆ ಅವರು ಅನೇಕ ಸಹಾಯ ಮಾಡುತ್ತಾರೆ. ಹೀಗಾಗಿ ಆ ದಾಕ್ಷಿಣ್ಯದ ಕಾರಣ ಈ ಕೆಲಸ ಮಾಡುವುದಿಲ್ಲ ಎಂದು ಹೇಳುವ ಸ್ವಾತಂತ್ರ್ಯವೂ ನಮಗಿಲ್ಲ. ಅವರನ್ನು ನಮ್ಮ ಕೆಲಸಗಳಿಗೆ ಅವಲಂಬಿಸಿದರಿಂದ ಆಗುವುದಿಲ್ಲ ಎಂದು ಹೇಳುವ ಸ್ವಾತಂತ್ರ್ಯವನ್ನು ನಾವು ಕಳೆದುಕೊಂಡೆವು.
ಆಯಿತು. ಹಾಲಿನವನು ಬಂದ. ಚಳಿಯಲ್ಲಿ ಎದ್ದು ಹಾಲು ಪಡೆದಿದ್ದಾಯಿತು. ಅವರು ಬರುವವೆರೆಗೂ ಅದರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಬೆಕ್ಕು ಕುಡಿಯಬಾರದು. ಹಾಲು ನಮ್ಮ ಕಣ್ಣೆದುರು ಇದ್ದರೂ ನಾವು ಉಪಯೋಗಿಸಬಾರದು. ಆ ಸ್ವಾತಂತ್ರ್ಯ ನಮಗಿಲ್ಲ. ಅವರು ಒಂಭತ್ತು ಗಂಟೆಗೆ ಫೋನ್ ಮಾಡಿದರು. "ನಾವು ಇಂದು ಬರುವುದಿಲ್ಲ. ಹಾಲು ನೀವೇ ಉಪಯೋಗಿಸಿಕೊಳ್ಳಿ. ಪರವಾಗಿಲ್ಲ" ಎಂದರು. "ಸದ್ಯ, ಕಾಯುವುದು ತಪ್ಪಿತು. ಒಳ್ಳೆಯ ಹಾಲೂ ಸಿಕ್ಕಿತು" ಎಂದು ಸಂತೋಷವಾಯಿತು. ಈಗ ಹಾಲು ಕಾಯಿಸಬೇಕು. ಹಾಗೆಯೇ ಇಡುವ ಸ್ವಾತಂತ್ರ್ಯ ನಮಗಿಲ್ಲ. ಸರಿಯಾದ ಪಾತ್ರೆಯಲ್ಲಿ ಕಾಯಿಸಬೇಕು. ಇಲ್ಲದಿದ್ದರೆ ಹಾಲು ಒಡೆದು ಹೋಗುತ್ತದೆ. ಕಾಯಿಸುವಾಗ ಎದುರುಗಡೆ ನಿಂತಿರಬೇಕು. ಇಲ್ಲದಿದ್ದರೆ ಉಕ್ಕಿ ಹಾಳಾಗುತ್ತದೆ. ಆರಾಮವಾಗಿ ಪೇಪರ್ ಓದುವ ಸ್ವಾತಂತ್ರ್ಯಕ್ಕೂ ಸಂಚಕಾರ ಬಂತು. ಹಾಲು ಕಾಯಿಸಿದ್ದಾಯಿತು.
ನಮ್ಮ ಮನೆಯ ಡೇರಿ ಹಾಲೂ ತಂದಿದ್ದೇವಲ್ಲ. ಇದನ್ನೇನು ಮಾಡುವುದು? ಸರಿ. ಹೆಪ್ಪು ಹಾಕಿ ಮೊಸರು ಮಾಡಿದ್ದಾಯಿತು. ಮಾರನೆಯ ದಿನ ಹಾಲು ಸಾಲದು. ಈ ಮೊಸರನ್ನೇ ಹಾಲು ಮಾಡಿಕೊಳ್ಳೋಣ ಅಂದರೆ ನಮಗೆ ಅದನ್ನು ಮಾಡಲಾಗದು. ಹಾಲು ಮೊಸರು ಮಾಡಬಹುದೇ ಹೊರತು ಅದು ಮೊಸರಾದಮೇಲೆ ಮತ್ತೆ ಹಿಂದಿರುಗಿಸಿ ಹಾಲು ಮಾಡಲಾಗದು. ನಮಗೆ ಆ ಶಕ್ತಿ, ಸ್ವಾತಂತ್ರ್ಯ ಇಲ್ಲ. ಮೊಸರಿನಿಂದ ಕಷ್ಟಪಟ್ಟು ಬೆಣ್ಣೆ ತೆಗೆಯಬಹುದು. ಬೆಣ್ಣೆಯಿಂದ ಪಾಡುಪಟ್ಟು ತುಪ್ಪ ಮಾಡಬಹುದು. ಮುಂದಿನ ಆ ದಾರಿಗಳು ಮಾತ್ರ ಇವೆ. ಅವೂ ಪ್ರಯಾಸದ ದಾರಿಗಳು. ಮೊಸರಿನಿಂದ ನೇರವಾಗಿ ತುಪ್ಪ ಮಾಡಲಾರೆವು. ಹಿಂದೆ ಹೋಗುವಂತಿಲ್ಲ. ಮುಂದೆ ಹೋಗಬೇಕಾದರೂ ಒಂದು ನಿಶ್ಚಿತ ಕ್ರಮದಲ್ಲೇ ಹೋಗಬೇಕು. ನಮಗೆ ಈ ಕ್ರಮಗಳನ್ನು ಮೀರುವ ಸ್ವಾತಂತ್ರ್ಯವಿಲ್ಲ. ಈ ಕ್ರಮಗಳ ಮಧ್ಯೆ ಕೈ ತಪ್ಪಿದರೆ, ಎಚ್ಚರ ತಪ್ಪಿದರೆ, ಪದಾರ್ಥ ಚೆಲ್ಲಿಯೋ, ಸೀದೋ, ಮತ್ತೇನೋ ಆಗಿ ಹಾಳಾಗುತ್ತದೆ.
ಪರಮಾತ್ಮನ ವಿಷಯದಲ್ಲಿ ಹಾಗಿಲ್ಲ. ಅವನಿಗೆ "ಇದು ಕ್ರಮ. ಹೀಗೆ ಮಾಡು" ಎಂದು ಹೇಳುವವರಿಲ್ಲ. ಏನೂ ಇಲ್ಲದ ಜಾಗದಲ್ಲಿ ಹಾಲನ್ನು ಸೃಷ್ಟಿಸಬಲ್ಲ. ಹಾಲಿನಿಂದ ನೇರವಾಗಿ ತುಪ್ಪ ಮಾಡಬಲ್ಲ. ತುಪ್ಪದಿಂದ ಮತ್ತೆ ಹಾಲನ್ನೋ, ಮೊಸರನ್ನೋ ಮಾಡಬಲ್ಲ. ಅಷ್ಟೇ ಏಕೆ? ಹಾಲಿನಿಂದ, ಮೊಸರಿನಿಂದ, ಬೆಣ್ಣೆಯಿಂದ ಅಥವಾ ತುಪ್ಪದಿಂದ ಜೇನು ತುಪ್ಪವನ್ನೂ ಮಾಡಬಲ್ಲ. ಹೆಚ್ಚೇಕೆ? ಸುಣ್ಣದಿಂದ ಬೆಣ್ಣೆಯನ್ನೂ, ಮಣ್ಣಿನಿಂದ ಜೇನು ತುಪ್ಪವನ್ನೂ ಮಾಡಬಲ್ಲ!
ಪರಮಾತ್ಮನ ಶಕ್ತಿಯನ್ನು ವರ್ಣಿಸುವಾಗ "ಕರ್ತು೦, ಅಕರ್ತು೦, ಅನ್ಯಥಾ ಕರ್ತು೦ ಶಕ್ತ:" ಎಂದು ಹೇಳಿದ್ದಾರೆ. ಅವನು ಏನನ್ನನಾದರೂ ಮಾಡಬಲ್ಲ. ಮಾಡಿದ್ದನ್ನು ರದ್ದುಮಾಡಿ ಹಿಂದಿನಂತೆ ಇರಿಸಬಲ್ಲ. ಅಥವಾ ಇವೆರಡಕ್ಕೂ ಸಂಬಂಧವಿಲ್ಲದ ಮತ್ತೇನನ್ನೋ ಸಹ ಮಾಡಬಲ್ಲ! ಅವನಿಗೆ ಈ ಎಲ್ಲ ಸ್ವಾತಂತ್ರ್ಯ ಇದೆ. ಅದಕ್ಕೇ "ಸಕಲ ಸ್ವಾತಂತ್ರ್ಯ" ಎನ್ನುವುದು. ಅದು ಯಾವುದೇ ಕಟ್ಟುಪಾಡುಗಳಿಲ್ಲದ ಸ್ವಾತಂತ್ರ್ಯ. "ಹೀಗೆ ಮಾಡು, ಹಾಗೆ ಮಾಡಬೇಡ" ಎಂದು ಹೇಳುವವರಿಲ್ಲದ ಸ್ವಾತಂತ್ರ್ಯ. ಯಾವುದೇ ಕ್ರಮದಲ್ಲೇ ಮಾಡಬೇಕೆನ್ನುವ ನಿಬಂಧನೆಗಳಿಲ್ಲದ ಸ್ವಾತಂತ್ರ್ಯ. ಒಟ್ಟಿನಲ್ಲಿ "ಸಕಲ ಸ್ವಾತಂತ್ರ್ಯ".
*****
ಯಾವುದೋ ಕೆಲಸಕ್ಕಾಗಿ ಸ್ವಲ್ಪ ಹಣ ಸಾಲದೇ ಬಂದಿದೆ. ಬ್ಯಾಂಕಿನಲ್ಲಿ ಸಾಲ ಮಾಡಬೇಕಾಗಿದೆ. ಬ್ಯಾಂಕಿಗೆ ಹೋದೆವು. ಅಲ್ಲಿ ಶಾಖಾ ಪ್ರಬಂಧಕ ಅಥವಾ ಬ್ರಾಂಚ್ ಮ್ಯಾನೇಜರ್ ನೋಡಿದ್ದಾಯಿತು. ಅವರು ಹೇಳಿದ ಸಕಲ ಕಾಗದ-ಪತ್ರಗಳನ್ನೂ ಕೊಟ್ಟಿದ್ದಾಯಿತು. ಅವರಿಗೆ ಇಪ್ಪತ್ತು ಲಕ್ಷ ರೂಪಾಯಿವರೆಗೆ ಸಾಲ ಕೊಡುವ ಅಧಿಕಾರ ಅಥವಾ ಸ್ವಾತಂತ್ರ್ಯ ಇದೆ. ನಮಗೆ ಹೆಚ್ಚು ಬೇಕು. "ನೋಡಿ, ಅಲ್ಲಿ ದೊಡ್ಡ ಬ್ರಾಂಚ್ ಇದೆ. ಅಲ್ಲಿ ದೊಡ್ಡ ಬ್ರಾಂಚ್ ಮ್ಯಾನೇಜರ್ ಒಂದು ಕೋಟಿ ರೂಪಾಯಿವರೆಗೂ ಸಾಲ ಕೊಡಬಲ್ಲರು. ಅಲ್ಲಿ ಹೋಗಿ" ಅನ್ನುತ್ತಾರೆ. ನಮಗೆ ಅದೂ ಸಾಲದು. "ಮೇಲಿನ ಆಫೀಸಿಗೆ ಕಳಿಸುತ್ತೇವೆ. ರೀಜಿನಲ್ ಮ್ಯಾನೇಜರ್ ಅವರಿಗೆ ಹತ್ತು ಕೋಟಿವರೆಗೂ ಅಧಿಕಾರ ಇದೆ" ಅನ್ನುತ್ತಾರೆ. ನಮಗೆ ಅದೂ ಸಾಲದು. "ಹೆಡ್ ಆಫೀಸಿಗೆ ಕಳಿಸುತ್ತೇವೆ. ಅಲ್ಲಿ ಜನರಲ್ ಮ್ಯಾನೇಜರ್ ಐವತ್ತು ಕೋಟಿ ರೂಪಾಯಿವರೆಗೂ ಸಾಲ ಮಂಜೂರು ಮಾಡಬಲ್ಲರು" ಎನ್ನುತ್ತಾರೆ. ಅದಕ್ಕಿಂತ ಹೆಚ್ಚು ಬೇಕಾದರೆ ಏನು ಮಾಡುವುದು? "ನಮ್ಮ ಸಿ. ಎಂ. ಡಿ. (ಅಥವಾ ಸಿ. ಇ. ಓ.) ಇದ್ದಾರೆ. ಅವರಿಗೆ ನೂರು ಕೋಟಿ ರೂಪಾಯಿ ಕೊಡುವ ಅಧಿಕಾರವಿದೆ" ಅನ್ನುತ್ತಾರೆ. ಅದಕ್ಕಿಂತಲೂ ಹೆಚ್ಚಿಗೆ ಬೇಕು ನಮಗೆ. "ನಮ್ಮ ನಿರ್ದೇಶಕ ಮಂಡಳಿ ಇದೆ. ಬೋರ್ಡ್ ಆಫ್ ಡೈರೆಕ್ಟರ್ಸಗೆ ಮಿತಿಯಿಲ್ಲದ, ಅನ್ಲಿಮಿಟೆಡ್ ಅಥವಾ ಫುಲ್ ಪವರ್ ಇದೆ" ಅನ್ನುತ್ತಾರೆ.
ಹೋಗಲಿ, ನಮ್ಮ ಅರ್ಜಿ ಅಲ್ಲಿಗೇ ಹೋಗಲಿ ಅನ್ನುತ್ತೇವೆ. ಅವರಿಗೆ ಎಷ್ಟು ಬೇಕಾದರೂ ಸಾಲ ಮಂಜೂರು ಮಾಡುವ ಸ್ವಾತಂತ್ರ್ಯ ನಿಜವಾಗಿಯೂ ಇದೆಯೇ? ಇಲ್ಲ. ಬ್ಯಾಂಕಿನ ಒಟ್ಟು ಬಂಡವಾಳದ ಒಂದು ಮಿತಿಗಿಂತ ಹೆಚ್ಚು ಕೊಡಲು ಅವರಿಗೂ ಅಧಿಕಾರ ಇಲ್ಲ. ಹಾಗೆ ಮಾಡಬೇಕಾದರೆ ರಿಸರ್ವ್ ಬ್ಯಾಂಕಿನ ಪರವಾನಗಿ ಬೇಕು ಅನ್ನುತ್ತಾರೆ. ರಿಸರ್ವ್ ಬ್ಯಾಂಕಿನ ಕಥೆ ಏನು? ಅವರಿಗೆ ಪರೋಕ್ಷವಾಗಿ ಸರ್ಕಾರದ, ಬಹು ರಾಷ್ಟ್ರೀಯ ಸಂಸ್ಥೆಗಳ. ಮಾರುಕಟ್ಟೆಯ ಸೆಳೆತಗಳ ಅಂಕುಶ ಉಂಟು. ಒಟ್ಟಿನಲ್ಲಿ ಯಾರಿಗೂ ಪೂರ್ಣ ಸ್ವಾತಂತ್ರ್ಯ ಇಲ್ಲ. ಪರಮಾಧಿಕಾರ ಇರುವವರು ಕೊಟ್ಟಿರುವ ಅಧಿಕಾರವೂ (ಡೆಲಿಗೇಟೆಡ್ ಪವರ್ಸ್) ಅನೇಕ ನಿಬಂಧನೆಗೆ ಒಳಪಟ್ಟಿದೆ. ಪೂರ್ಣ ಸ್ವಾತಂತ್ಯ್ರ ಯಾರಿಗೂ ಇಲ್ಲ!
ಪರಮಾತ್ಮನಿಗೆ ಹಾಗಿಲ್ಲ. ಅವನಿಗೆ ಸಕಲ ಸ್ವಾತಂತ್ರ್ಯ ಉಂಟು. ಅವನೇ ಅನೇಕ ದೇವತೆಗಳಿಗೆ ತನ್ನ ಅನಂತ ಸ್ವಾತಂತ್ರ್ಯದಲ್ಲಿ ಸ್ವಲ್ಪ ಪಾಲು ಕೊಟ್ಟಿದ್ದಾನೆ. ಕೊಟ್ಟಿರುವುದಕ್ಕಿಂತ ಅನಂತ ಮಡಿ ಹೆಚ್ಚು ಸ್ವಾತಂತ್ರ್ಯ ಅವನ ಬಳಿ ಇದೆ. ಅವನು ಎಷ್ಟು ಕೊಡಬಲ್ಲ?
ಮುಕುಂದಮಾಲಾ ಸ್ತೋತ್ರದಲ್ಲಿ ಶ್ರೀ ಕುಲಶೇಖರ ಅಲ್ವಾರ್ ಹೇಳುವಂತೆ ಅವನು ತನ್ನ ನಿಜ ಭಕ್ತರಿಗೆ ತನ್ನ ಸ್ಥಾನವನ್ನೇ ಕೊಡುವಷ್ಟು ಸ್ವಾತಂತ್ರ್ಯ ಹೊಂದಿದ್ದಾನೆ. (ಇದನ್ನು ವಿವರವಾಗಿ ನೋಡಲು ಇಲ್ಲಿ ಕ್ಲಿಕ್ ಮಾಡಿ}.
ಯಾವುದೇ ಸಂಸ್ಥೆಯಲ್ಲಿ ಪರಮಾಧಿಕಾರ ಉಳ್ಳ ಅಧಿಕಾರಿಗಳು ತಮ್ಮ ಅಧಿಕಾರದಲ್ಲಿ ಸ್ವಲ್ಪ ಭಾಗ ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಕೊಡಬಹುದು. ಸಂಸ್ಥೆಯ ಕೆಲಸಗಳು ಸುಲಭವಾಗಿ ನಡೆಯಲಿ. ಎಲ್ಲ ವಿಷಯಗಳೂ ತಮ್ಮವರೆಗೆ ಬರುವುದು ಬೇಡ. ಸಣ್ಣ ವಿಷಯಗಳು ಕೆಳಗಿನ ಹಂತದಲ್ಲೇ ತೀರ್ಮಾನವಾಗಲಿ ಎನ್ನುವ ದೃಷ್ಟಿಯಿಂದ ಹೀಗೆ ಅಧಿಕಾರದ ವಿಕೇಂದ್ರೀಕರಣ ಮಾಡುತ್ತಾರೆ. ಇದನ್ನು "ಅಧಿಕಾರ ವಿಕೇಂದ್ರೀಕರಣ ಅಥವಾ ಡೆಲಿಗೇಷನ್ ಆಫ್ ಪವರ್ಸ್" ಎನ್ನುತ್ತಾರೆ. ಹೀಗೆ ಮಾಡಿರುವ ಅಧಿಕೃತ ಕಡತಕ್ಕೆ "ಪವರ್ ಛಾರ್ಟ್" ಅನ್ನುತ್ತಾರೆ. ಪರಮಾತ್ಮನು ತನ್ನ ಅನುಯಾಯಿ ದೇವತೆಗಳಿಗೆ ಹೀಗೆ ಪವರ್ ಚಾರ್ಟ್ ಕೊಟ್ಟಿದ್ದಾನೆ. ಶ್ರೀಜಗನ್ನಾಥ ದಾಸರು ತಮ್ಮ ಹರಿಕಥಾಮೃತಸಾರ ಗ್ರಂಥದಲ್ಲಿ ಒಂದು ಸಂಧಿಯನ್ನೇ ಇದಕ್ಕೆ ಮೀಸಲಿಟ್ಟಿದ್ದಾರೆ. ಈ ಗ್ರಂಥದ ಹದಿನಾರನೇ ಸಂಧಿಯ ಹೆಸರೇ "ದತ್ತ ಸ್ವಾತಂತ್ರ್ಯ ಸಂಧಿ" ಎಂದು. ದತ್ತ ಸ್ವಾತಂತ್ರ್ಯ ಅಂದರೆ ಡೆಲಿಗೇಟೆಡ್ ಪವರ್ಸ್ ಎಂದೇ ಅರ್ಥ. ಆಸಕ್ತರು ಈ ಗ್ರಂಥ ನೋಡಿ ಹೆಚ್ಚಿನ ವಿಷಯ ತಿಳಿದುಕೊಳ್ಳಬಹುದು.
*****
ಲಕ್ಷ್ಮೀದೇವಿಗೆ ಎಷ್ಟು ದೊಡ್ಡ ಮಟ್ಟದ ಅಧಿಕಾರ ಇದೆ ಎಂದು ಹಿಂದಿನ "ಇಂದಿರಾರಮಣನ ಮಂದಿರದ ಒಳಗೆ" ಎಂಬ ಸಂಚಿಕೆಯಲ್ಲಿ ನೋಡಿದೆವು. ಪರಮಾತ್ಮನ ಸ್ವಾತಂತ್ರ್ಯ ಎಷ್ಟಿದೆ ಎಂದರೆ ಅದರ ಅರಿವು ಸ್ವತಃ ಮಹಾಲಕ್ಷ್ಮೀದೇವಿಗೆ ಇಲ್ಲವಂತೆ. ಶ್ರೀ ಕನಕದಾಸರು ತಮ್ಮ ಹರಿಭಕ್ತಿಸಾರದಲ್ಲಿ ಹೇಳುತ್ತಾರೆ:
ಸಾಗರನಮಗಳರಿಯದಂತೆ ಸ
ಸರಾಗದಲಿ ಸಂಚರಿಸುತಿಹ ವು
ದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲಿ
ಪರಮಾತ್ಮನ ನಡೆಗಳನ್ನು ಸದಾ ಅವನ ಜೊತೆಯಲ್ಲಿರುವ ಸಾಗರನ ಮಗಳೇ (ಮಹಾಲಕ್ಷ್ಮಿಯೇ) ಅರಿಯಳು. (ಹೆಂಡತಿಗೇ ತಿಳಿಯದಂತೆ ಓಡಾಡುವ ಸ್ವಾತಂತ್ರ್ಯ ಅವನೊಬ್ಬನಿಗೇ ಉಂಟು ಅಂದರೆ ಹೆಚ್ಚು ಹೇಳಬೇಕಾಗಿಲ್ಲ!) ಪೂರ್ಣ ಸ್ವಾತಂತ್ರ್ಯಕ್ಕೆ ಮತ್ತೇನು ಸಾಕ್ಷಿ ಬೇಕು?
ಹೀಗೇ ಮಾಡಲೇಬೇಕೆಂಬ ವಿಧಿಯಿಲ್ಲ. ಹೀಗೆ ಮಾಡಬಾರದೆಂಬ ನಿಷೇಧವಿಲ್ಲ. ಇದೇ ಕ್ರಮದಲ್ಲಿ ಮಾಡಬೇಕೆಂಬ ರೀತಿಯಿಲ್ಲ. ಮಾಡಿದ್ದು ಬದಲಾಯಿಸುವಂತೆ ಇಲ್ಲ ಎನ್ನುವ ಕಟ್ಟಳೆಯಿಲ್ಲ. ಏನನ್ನಾದರೂ ಮಾಡುವಾಗ ಕಾದು ಕುಳಿತುಕೊಳ್ಳದಿದ್ದರೆ ಕೆಲಸ ಕೆಡುತ್ತದೆ ಎನ್ನುವ ಶಂಕೆಯೂ ಇಲ್ಲ. ಯಾರಿಗಾದರೂ ಹೇಳಿ ಮಾಡಬೇಕು ಎಂದಿಲ್ಲ. ಮಾಡಿದಮೇಲಾದರೂ ಯಾರಿಗಾದರೂ ಹೇಳಬೇಕು ಎಂದೂ ಇಲ್ಲ. ಅವನು ಮಾಡಿದ್ದು ಪರೀಕ್ಷಿಸುವ ಆಡಿಟರ್ ಯಾರಿಲ್ಲ. ಅವನು "ಸರ್ವಕಾರ್ತಾ, ನ ಕ್ರೀಯತೇ". "ಎಲ್ಲವನ್ನೂ ಮಾಡುವವನು. ಅವನನ್ನು ಮಾಡುವವರು ಯಾರೂ ಇಲ್ಲ." ಅನನು ಮಾಡುವುದು ಯಾರಿಗೂ ಗೊತ್ತಾಗುವುದೂ ಇಲ್ಲ. ಒಟ್ಟಿನಲ್ಲಿ ಅವನಿಗೆ ಎಲ್ಲಿಯೂ, ಯಾರಿಗೂ ಇಲ್ಲದ ಅಖಂಡ ಮತ್ತು ಇತಿ-ಮಿತಿ ಇಲ್ಲದ ಸಕಲ ಸ್ವಾತಂತ್ರ್ಯ. ಶ್ರೀಪುರಂದರದಾಸರು ತಮ್ಮ ಕೃತಿಯಲ್ಲಿ ಹೇಳಿದ "ತನ್ನ ಸಕಲ ಸ್ವಾತಂತ್ರ್ಯದಲಿ" ಅಂದರೆ ಇದೇ.
ಕೆಲಸಕ್ಕೆ ತಕ್ಕ ಕೂಲಿ. ಸಾಧನೆಗೆ ತಕ್ಕ ಸತ್ಕಾರ. ಇದು ಸಾಮಾನ್ಯ ನಿಯಮ. ಆದರೆ ಅವನು ಈ ಯಾವ ನಿಯಮಗಳಿಗೂ ಮೀರಿದವನು. ಅವನು ಮನಸ್ಸು ಮಾಡಿದರೆ ಸಾಧನೆಯ ಯೋಗ್ಯತೆಯನ್ನೂ ಮೀರಿ ಫಲ ಕೊಡಬಲ್ಲನು.
ಇದನ್ನೇ "ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ ಸರಿಭಾಗ ಕೊಡುವ ತನ್ನರಮನೆಯ ಒಳಗೆ" ಎಂದು ದಾಸರು ಹೇಳಿದ್ದಾರೆ. ಇದರ ವಿವರವನ್ನು ಮುಂದೆ ನೋಡೋಣ.
*****
"ಆರಮಾನೆಯ ಒಳಗೆ ಸರಿಭಾಗ" ಮತ್ತು "ತೊಂಡರಿಗೆ ತೊಂಡನಾಗಿ" ಎನ್ನುವುವು ಇನ್ನೂ ಉಳಿದಿವೆ. ಇವನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ.
You made it so simple and easy to understand, the complex things with beautiful examples, waiting to learn what is Aarameneya olage saribaaga thank you
ReplyDeleteಬಹಳ ಸರಳವಾಗಿ ಸ್ವಾರಸ್ಯವಾಗಿ ಸ್ವಾತಂತ್ರ್ಯದ ಪರಿಮಿತಿಯನ್ನು ವಿವರಿಸಿದ್ದೀರಿ . ಹಾಲಿನ ಉದಾಹರಣೆಯೊಂದಿಗೆ ವಿವರಿಸಿರುವ ಪರಿ ಆನನ್ಯವಾದದು . ಧನ್ಯವಾದಗಳು.
ReplyDeleteThe independence of God and the way it is used by him and the comparison given with the independence give in our world to people in position which is of limited nature has been brought out very well in the article. A doubt arose in me, what about the decision which a person without any position has to take sometimes about himself/ herself? Could it be called completely independent or is there a qualifier for this too?
ReplyDeleteAn attempt will be made in one of the future blog posts to answer this question.
Deleteಸರಸಿಜಾಕ್ಷನ ಸಕಲ ಸ್ವಾತಂತ್ರ್ಯದ ಬಗೆಗಿನ ವಿವರಣೆ ಸರಳವಾದ ಹಾಲಿನ ಹಾಗೂ ಬ್ಯಾಂಕ್ ಸಾಲದ ಉದಾಹರಣೆಗಳಿಂದ ಸೊಗಸಾಗಿ ವಿವರಿಸಿದ್ದೀರಿ ಸರ್. ಭಗವಂತನ ಅಪರಿಮಿತ, ಏನೂ ಕಟ್ಟುಪಾಡುಗಳಿಲ್ಲದ ಸ್ವಾತಂತ್ರ್ಯದ ಪರಿಕಲ್ಪನೆಯೇ ಮೈ ನವಿರೇಳಿಸುವ ವಿಷಯ🙏ಪತ್ನಿಯಾದ ಮಹಾಲಕ್ಷ್ಮಿಗೇ ತಿಳಿಯದಿರುವ ಅವನ ಅಗಣಿತ ಸ್ವಾತಂತ್ರ್ಯದ ಬಗ್ಗೆ ಹುಲು ಮಾನವರಾದ ನಮಗಿರುವ ಅಜ್ಞಾನವೇನು ಹೆಚ್ಚಲ್ಲ ಬಿಡಿ. ಅವನ ಸ್ವಾತಂತ್ರ್ಯದ ಸ್ವಲ್ಪ ಭಾಗ ಅವನ ಅಧೀನದಲ್ಲಿರುವ ಬೇರೆ ದೇವತೆಗಳಿಗೆ ಹಂಚಿದರೂ ಮತ್ತೂ ಅವನಲ್ಲಿ ಪೂರ್ತಿ ಭಾಗವೇ ಉಳಿಯುವುದು ಎಂತಹ ಅದ್ಭುತ!!!🙏 ಇಂತಹ ಪರಮಾತ್ಮನ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ🙏
Delete