Showing posts with label poorna. Show all posts
Showing posts with label poorna. Show all posts

Friday, December 13, 2024

ಸರಸಿಜಾಕ್ಷನ ಸಕಲ ಸ್ವಾತಂತ್ರ್ಯ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ನೋಟದಲ್ಲಿ ಕಳೆದ ಸಂಚಿಕೆಯಲ್ಲಿ "ಅಪೂರ್ಣ, ಪೂರ್ಣ ಮತ್ತು ಪರಿಪೂರ್ಣ" ಎನ್ನುವ ಶೀರ್ಷಿಕೆಯಡಿ "ಪರಿಪೂರ್ಣನೆಂದು ಪೂಜೆಯನ್ನು ಮಾಡೆ" ಎನ್ನುವವರೆಗೆ ಬಂದಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ "ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ" ಎನ್ನುವ ಬಗ್ಗೆ ವಿಚಾರ ಮಾಡೋಣ. 

ನಮ್ಮ ಪಕ್ಕದ ಮನೆಯವರು ಡೈರಿ ಹಾಲನ್ನು ನಂಬುವುದಿಲ್ಲ. ಮನೆಯ ಮುಂದೆ ಹಸುವನ್ನು ತಂದು ಹಾಲು ಕರೆದು ಕೊಡಲು ಒಬ್ಬನನ್ನು ನೇಮಿಸಿದ್ದಾರೆ. ಅವನು ಹಸುವನ್ನು ಕರೆತಂದು ಅವರ ಮನೆಯ ಮುಂದೆ ಕಟ್ಟಿ, ಅದರ ಕೆಚ್ಚಲು ತೊಳೆದು, ಅವರೇ ಕೊಟ್ಟ ಪಾತ್ರೆಯಲ್ಲಿ ನೀರು ಸೇರಿಸದೆ ಹಾಲು ಕರೆದು ಕೊಡುತ್ತಾನೆ. ಅಳತೆಯಲ್ಲೂ ಮೋಸ ಆಗಬಾರದಲ್ಲ. ಸರಿಯಾಗಿ ಎರಡು ಲೀಟರಿನ ಹಾಲಿನ ಪಾತ್ರೆ ಅದಕ್ಕಾಗಿ ಕೊಂಡಿಟ್ಟಿದ್ದಾರೆ. ಹಾಲು ಕರೆಯುವಾಗ ಅವರ ಹದ್ದಿನ ಕಣ್ಣು ಆ ಕಾರ್ಯಕ್ರಮವನ್ನೇ ನೋಡುತ್ತಿರುತ್ತದೆ. ಈ ದಿನ ಅವರು ಬೆಳಿಗ್ಗೆ ಬೇಗ ಎಲ್ಲೋ ಹೋಬಬೇಕಾಗಿತ್ತು. ಪಾತ್ರೆ ನಮಗೆ ಕೊಟ್ಟು ಹಾಲು ಹಿಡಿದಿಡುವಂತೆ ಹೇಳಿ ಹೋಗಿದ್ದಾರೆ. ಎಂಟು ಗಂಟೆಗೆ ಬಂದು ತೆಗೆದುಕೊಂಡು ಹೋಗುತ್ತಾರೆ. "ಅಯ್ಯೋ, ಈ ಕೆಲಸ ನನಗೆ ಬೇಡ. ಡಿಶಂಬರ ಚಳಿಯಲ್ಲಿ ಯಾರು ಬೇಗ ಎದ್ದಾರು?" ಎಂದು ಹೇಳುವ ಹಾಗಿಲ್ಲ. ಏಕೆಂದರೆ ನಮ್ಮ ಮನೆಗೆ ಅವರು ಅನೇಕ ಸಹಾಯ ಮಾಡುತ್ತಾರೆ. ಹೀಗಾಗಿ ಆ ದಾಕ್ಷಿಣ್ಯದ ಕಾರಣ ಈ ಕೆಲಸ ಮಾಡುವುದಿಲ್ಲ ಎಂದು ಹೇಳುವ ಸ್ವಾತಂತ್ರ್ಯವೂ ನಮಗಿಲ್ಲ. ಅವರನ್ನು ನಮ್ಮ ಕೆಲಸಗಳಿಗೆ ಅವಲಂಬಿಸಿದರಿಂದ ಆಗುವುದಿಲ್ಲ ಎಂದು ಹೇಳುವ ಸ್ವಾತಂತ್ರ್ಯವನ್ನು ನಾವು ಕಳೆದುಕೊಂಡೆವು. 

ಆಯಿತು. ಹಾಲಿನವನು ಬಂದ. ಚಳಿಯಲ್ಲಿ ಎದ್ದು ಹಾಲು ಪಡೆದಿದ್ದಾಯಿತು. ಅವರು ಬರುವವೆರೆಗೂ ಅದರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಬೆಕ್ಕು ಕುಡಿಯಬಾರದು. ಹಾಲು ನಮ್ಮ ಕಣ್ಣೆದುರು ಇದ್ದರೂ ನಾವು ಉಪಯೋಗಿಸಬಾರದು. ಆ ಸ್ವಾತಂತ್ರ್ಯ ನಮಗಿಲ್ಲ. ಅವರು ಒಂಭತ್ತು ಗಂಟೆಗೆ ಫೋನ್ ಮಾಡಿದರು. "ನಾವು ಇಂದು ಬರುವುದಿಲ್ಲ. ಹಾಲು ನೀವೇ ಉಪಯೋಗಿಸಿಕೊಳ್ಳಿ. ಪರವಾಗಿಲ್ಲ" ಎಂದರು. "ಸದ್ಯ, ಕಾಯುವುದು ತಪ್ಪಿತು. ಒಳ್ಳೆಯ ಹಾಲೂ ಸಿಕ್ಕಿತು" ಎಂದು ಸಂತೋಷವಾಯಿತು. ಈಗ ಹಾಲು ಕಾಯಿಸಬೇಕು. ಹಾಗೆಯೇ ಇಡುವ ಸ್ವಾತಂತ್ರ್ಯ ನಮಗಿಲ್ಲ. ಸರಿಯಾದ ಪಾತ್ರೆಯಲ್ಲಿ ಕಾಯಿಸಬೇಕು. ಇಲ್ಲದಿದ್ದರೆ ಹಾಲು ಒಡೆದು ಹೋಗುತ್ತದೆ. ಕಾಯಿಸುವಾಗ ಎದುರುಗಡೆ ನಿಂತಿರಬೇಕು. ಇಲ್ಲದಿದ್ದರೆ ಉಕ್ಕಿ ಹಾಳಾಗುತ್ತದೆ. ಆರಾಮವಾಗಿ ಪೇಪರ್ ಓದುವ ಸ್ವಾತಂತ್ರ್ಯಕ್ಕೂ ಸಂಚಕಾರ ಬಂತು. ಹಾಲು ಕಾಯಿಸಿದ್ದಾಯಿತು. 

ನಮ್ಮ ಮನೆಯ ಡೇರಿ ಹಾಲೂ ತಂದಿದ್ದೇವಲ್ಲ. ಇದನ್ನೇನು ಮಾಡುವುದು? ಸರಿ. ಹೆಪ್ಪು ಹಾಕಿ ಮೊಸರು ಮಾಡಿದ್ದಾಯಿತು. ಮಾರನೆಯ ದಿನ ಹಾಲು ಸಾಲದು. ಈ ಮೊಸರನ್ನೇ ಹಾಲು ಮಾಡಿಕೊಳ್ಳೋಣ ಅಂದರೆ ನಮಗೆ ಅದನ್ನು ಮಾಡಲಾಗದು. ಹಾಲು ಮೊಸರು ಮಾಡಬಹುದೇ ಹೊರತು ಅದು ಮೊಸರಾದಮೇಲೆ ಮತ್ತೆ ಹಿಂದಿರುಗಿಸಿ ಹಾಲು ಮಾಡಲಾಗದು. ನಮಗೆ ಆ ಶಕ್ತಿ, ಸ್ವಾತಂತ್ರ್ಯ ಇಲ್ಲ. ಮೊಸರಿನಿಂದ ಕಷ್ಟಪಟ್ಟು ಬೆಣ್ಣೆ ತೆಗೆಯಬಹುದು. ಬೆಣ್ಣೆಯಿಂದ ಪಾಡುಪಟ್ಟು ತುಪ್ಪ ಮಾಡಬಹುದು. ಮುಂದಿನ ಆ ದಾರಿಗಳು ಮಾತ್ರ ಇವೆ. ಅವೂ ಪ್ರಯಾಸದ ದಾರಿಗಳು. ಮೊಸರಿನಿಂದ ನೇರವಾಗಿ ತುಪ್ಪ ಮಾಡಲಾರೆವು. ಹಿಂದೆ ಹೋಗುವಂತಿಲ್ಲ. ಮುಂದೆ ಹೋಗಬೇಕಾದರೂ ಒಂದು ನಿಶ್ಚಿತ ಕ್ರಮದಲ್ಲೇ ಹೋಗಬೇಕು. ನಮಗೆ ಈ ಕ್ರಮಗಳನ್ನು ಮೀರುವ ಸ್ವಾತಂತ್ರ್ಯವಿಲ್ಲ. ಈ ಕ್ರಮಗಳ ಮಧ್ಯೆ ಕೈ ತಪ್ಪಿದರೆ, ಎಚ್ಚರ ತಪ್ಪಿದರೆ, ಪದಾರ್ಥ ಚೆಲ್ಲಿಯೋ, ಸೀದೋ, ಮತ್ತೇನೋ ಆಗಿ ಹಾಳಾಗುತ್ತದೆ. 

ಪರಮಾತ್ಮನ ವಿಷಯದಲ್ಲಿ ಹಾಗಿಲ್ಲ. ಅವನಿಗೆ "ಇದು ಕ್ರಮ. ಹೀಗೆ ಮಾಡು" ಎಂದು ಹೇಳುವವರಿಲ್ಲ. ಏನೂ ಇಲ್ಲದ ಜಾಗದಲ್ಲಿ ಹಾಲನ್ನು ಸೃಷ್ಟಿಸಬಲ್ಲ. ಹಾಲಿನಿಂದ ನೇರವಾಗಿ ತುಪ್ಪ ಮಾಡಬಲ್ಲ. ತುಪ್ಪದಿಂದ ಮತ್ತೆ ಹಾಲನ್ನೋ, ಮೊಸರನ್ನೋ ಮಾಡಬಲ್ಲ. ಅಷ್ಟೇ ಏಕೆ? ಹಾಲಿನಿಂದ, ಮೊಸರಿನಿಂದ, ಬೆಣ್ಣೆಯಿಂದ ಅಥವಾ ತುಪ್ಪದಿಂದ ಜೇನು ತುಪ್ಪವನ್ನೂ ಮಾಡಬಲ್ಲ. ಹೆಚ್ಚೇಕೆ? ಸುಣ್ಣದಿಂದ ಬೆಣ್ಣೆಯನ್ನೂ, ಮಣ್ಣಿನಿಂದ ಜೇನು ತುಪ್ಪವನ್ನೂ ಮಾಡಬಲ್ಲ! 

ಪರಮಾತ್ಮನ ಶಕ್ತಿಯನ್ನು ವರ್ಣಿಸುವಾಗ "ಕರ್ತು೦, ಅಕರ್ತು೦, ಅನ್ಯಥಾ ಕರ್ತು೦ ಶಕ್ತ:" ಎಂದು ಹೇಳಿದ್ದಾರೆ. ಅವನು ಏನನ್ನನಾದರೂ ಮಾಡಬಲ್ಲ. ಮಾಡಿದ್ದನ್ನು ರದ್ದುಮಾಡಿ ಹಿಂದಿನಂತೆ ಇರಿಸಬಲ್ಲ. ಅಥವಾ ಇವೆರಡಕ್ಕೂ ಸಂಬಂಧವಿಲ್ಲದ ಮತ್ತೇನನ್ನೋ ಸಹ ಮಾಡಬಲ್ಲ! ಅವನಿಗೆ ಈ ಎಲ್ಲ ಸ್ವಾತಂತ್ರ್ಯ ಇದೆ. ಅದಕ್ಕೇ "ಸಕಲ ಸ್ವಾತಂತ್ರ್ಯ" ಎನ್ನುವುದು. ಅದು ಯಾವುದೇ ಕಟ್ಟುಪಾಡುಗಳಿಲ್ಲದ ಸ್ವಾತಂತ್ರ್ಯ. "ಹೀಗೆ ಮಾಡು, ಹಾಗೆ ಮಾಡಬೇಡ" ಎಂದು ಹೇಳುವವರಿಲ್ಲದ ಸ್ವಾತಂತ್ರ್ಯ. ಯಾವುದೇ ಕ್ರಮದಲ್ಲೇ ಮಾಡಬೇಕೆನ್ನುವ ನಿಬಂಧನೆಗಳಿಲ್ಲದ ಸ್ವಾತಂತ್ರ್ಯ. ಒಟ್ಟಿನಲ್ಲಿ "ಸಕಲ ಸ್ವಾತಂತ್ರ್ಯ". 

***** 

ಯಾವುದೋ ಕೆಲಸಕ್ಕಾಗಿ ಸ್ವಲ್ಪ ಹಣ ಸಾಲದೇ ಬಂದಿದೆ. ಬ್ಯಾಂಕಿನಲ್ಲಿ ಸಾಲ ಮಾಡಬೇಕಾಗಿದೆ. ಬ್ಯಾಂಕಿಗೆ ಹೋದೆವು. ಅಲ್ಲಿ ಶಾಖಾ ಪ್ರಬಂಧಕ ಅಥವಾ ಬ್ರಾಂಚ್ ಮ್ಯಾನೇಜರ್ ನೋಡಿದ್ದಾಯಿತು. ಅವರು ಹೇಳಿದ ಸಕಲ ಕಾಗದ-ಪತ್ರಗಳನ್ನೂ ಕೊಟ್ಟಿದ್ದಾಯಿತು. ಅವರಿಗೆ ಇಪ್ಪತ್ತು ಲಕ್ಷ ರೂಪಾಯಿವರೆಗೆ ಸಾಲ ಕೊಡುವ ಅಧಿಕಾರ ಅಥವಾ ಸ್ವಾತಂತ್ರ್ಯ ಇದೆ. ನಮಗೆ ಹೆಚ್ಚು ಬೇಕು. "ನೋಡಿ, ಅಲ್ಲಿ ದೊಡ್ಡ ಬ್ರಾಂಚ್ ಇದೆ. ಅಲ್ಲಿ ದೊಡ್ಡ ಬ್ರಾಂಚ್ ಮ್ಯಾನೇಜರ್ ಒಂದು ಕೋಟಿ ರೂಪಾಯಿವರೆಗೂ ಸಾಲ ಕೊಡಬಲ್ಲರು. ಅಲ್ಲಿ ಹೋಗಿ" ಅನ್ನುತ್ತಾರೆ. ನಮಗೆ ಅದೂ ಸಾಲದು. "ಮೇಲಿನ ಆಫೀಸಿಗೆ ಕಳಿಸುತ್ತೇವೆ. ರೀಜಿನಲ್ ಮ್ಯಾನೇಜರ್ ಅವರಿಗೆ ಹತ್ತು ಕೋಟಿವರೆಗೂ ಅಧಿಕಾರ ಇದೆ" ಅನ್ನುತ್ತಾರೆ. ನಮಗೆ ಅದೂ ಸಾಲದು. "ಹೆಡ್ ಆಫೀಸಿಗೆ ಕಳಿಸುತ್ತೇವೆ. ಅಲ್ಲಿ ಜನರಲ್ ಮ್ಯಾನೇಜರ್ ಐವತ್ತು ಕೋಟಿ ರೂಪಾಯಿವರೆಗೂ ಸಾಲ ಮಂಜೂರು ಮಾಡಬಲ್ಲರು" ಎನ್ನುತ್ತಾರೆ. ಅದಕ್ಕಿಂತ ಹೆಚ್ಚು ಬೇಕಾದರೆ ಏನು ಮಾಡುವುದು? "ನಮ್ಮ ಸಿ. ಎಂ. ಡಿ. (ಅಥವಾ ಸಿ. ಇ. ಓ.) ಇದ್ದಾರೆ. ಅವರಿಗೆ ನೂರು ಕೋಟಿ  ರೂಪಾಯಿ ಕೊಡುವ ಅಧಿಕಾರವಿದೆ" ಅನ್ನುತ್ತಾರೆ. ಅದಕ್ಕಿಂತಲೂ ಹೆಚ್ಚಿಗೆ ಬೇಕು ನಮಗೆ. "ನಮ್ಮ ನಿರ್ದೇಶಕ ಮಂಡಳಿ ಇದೆ. ಬೋರ್ಡ್ ಆಫ್ ಡೈರೆಕ್ಟರ್ಸಗೆ ಮಿತಿಯಿಲ್ಲದ, ಅನ್ಲಿಮಿಟೆಡ್ ಅಥವಾ ಫುಲ್ ಪವರ್ ಇದೆ" ಅನ್ನುತ್ತಾರೆ. 

ಹೋಗಲಿ, ನಮ್ಮ ಅರ್ಜಿ ಅಲ್ಲಿಗೇ ಹೋಗಲಿ ಅನ್ನುತ್ತೇವೆ. ಅವರಿಗೆ ಎಷ್ಟು ಬೇಕಾದರೂ ಸಾಲ ಮಂಜೂರು ಮಾಡುವ ಸ್ವಾತಂತ್ರ್ಯ ನಿಜವಾಗಿಯೂ ಇದೆಯೇ? ಇಲ್ಲ. ಬ್ಯಾಂಕಿನ ಒಟ್ಟು ಬಂಡವಾಳದ ಒಂದು ಮಿತಿಗಿಂತ ಹೆಚ್ಚು ಕೊಡಲು ಅವರಿಗೂ ಅಧಿಕಾರ ಇಲ್ಲ. ಹಾಗೆ ಮಾಡಬೇಕಾದರೆ ರಿಸರ್ವ್ ಬ್ಯಾಂಕಿನ ಪರವಾನಗಿ ಬೇಕು ಅನ್ನುತ್ತಾರೆ. ರಿಸರ್ವ್ ಬ್ಯಾಂಕಿನ ಕಥೆ ಏನು? ಅವರಿಗೆ ಪರೋಕ್ಷವಾಗಿ ಸರ್ಕಾರದ, ಬಹು ರಾಷ್ಟ್ರೀಯ ಸಂಸ್ಥೆಗಳ. ಮಾರುಕಟ್ಟೆಯ ಸೆಳೆತಗಳ ಅಂಕುಶ ಉಂಟು. ಒಟ್ಟಿನಲ್ಲಿ ಯಾರಿಗೂ ಪೂರ್ಣ ಸ್ವಾತಂತ್ರ್ಯ ಇಲ್ಲ. ಪರಮಾಧಿಕಾರ ಇರುವವರು ಕೊಟ್ಟಿರುವ ಅಧಿಕಾರವೂ (ಡೆಲಿಗೇಟೆಡ್ ಪವರ್ಸ್) ಅನೇಕ ನಿಬಂಧನೆಗೆ ಒಳಪಟ್ಟಿದೆ. ಪೂರ್ಣ ಸ್ವಾತಂತ್ಯ್ರ ಯಾರಿಗೂ ಇಲ್ಲ!

ಪರಮಾತ್ಮನಿಗೆ ಹಾಗಿಲ್ಲ. ಅವನಿಗೆ ಸಕಲ ಸ್ವಾತಂತ್ರ್ಯ ಉಂಟು. ಅವನೇ ಅನೇಕ ದೇವತೆಗಳಿಗೆ ತನ್ನ ಅನಂತ ಸ್ವಾತಂತ್ರ್ಯದಲ್ಲಿ ಸ್ವಲ್ಪ ಪಾಲು ಕೊಟ್ಟಿದ್ದಾನೆ. ಕೊಟ್ಟಿರುವುದಕ್ಕಿಂತ ಅನಂತ ಮಡಿ ಹೆಚ್ಚು ಸ್ವಾತಂತ್ರ್ಯ ಅವನ ಬಳಿ ಇದೆ. ಅವನು ಎಷ್ಟು ಕೊಡಬಲ್ಲ? ಮುಕುಂದಮಾಲಾ ಸ್ತೋತ್ರದಲ್ಲಿ ಶ್ರೀ ಕುಲಶೇಖರ ಅಲ್ವಾರ್ ಹೇಳುವಂತೆ ಅವನು ತನ್ನ ನಿಜ ಭಕ್ತರಿಗೆ ತನ್ನ ಸ್ಥಾನವನ್ನೇ ಕೊಡುವಷ್ಟು ಸ್ವಾತಂತ್ರ್ಯ ಹೊಂದಿದ್ದಾನೆ. (ಇದನ್ನು ವಿವರವಾಗಿ ನೋಡಲು ಇಲ್ಲಿ ಕ್ಲಿಕ್ ಮಾಡಿ}. 

ಯಾವುದೇ ಸಂಸ್ಥೆಯಲ್ಲಿ ಪರಮಾಧಿಕಾರ ಉಳ್ಳ ಅಧಿಕಾರಿಗಳು ತಮ್ಮ ಅಧಿಕಾರದಲ್ಲಿ ಸ್ವಲ್ಪ ಭಾಗ ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಕೊಡಬಹುದು. ಸಂಸ್ಥೆಯ ಕೆಲಸಗಳು ಸುಲಭವಾಗಿ ನಡೆಯಲಿ. ಎಲ್ಲ ವಿಷಯಗಳೂ ತಮ್ಮವರೆಗೆ ಬರುವುದು ಬೇಡ. ಸಣ್ಣ ವಿಷಯಗಳು ಕೆಳಗಿನ ಹಂತದಲ್ಲೇ ತೀರ್ಮಾನವಾಗಲಿ ಎನ್ನುವ ದೃಷ್ಟಿಯಿಂದ ಹೀಗೆ ಅಧಿಕಾರದ ವಿಕೇಂದ್ರೀಕರಣ ಮಾಡುತ್ತಾರೆ. ಇದನ್ನು "ಅಧಿಕಾರ ವಿಕೇಂದ್ರೀಕರಣ ಅಥವಾ ಡೆಲಿಗೇಷನ್ ಆಫ್ ಪವರ್ಸ್" ಎನ್ನುತ್ತಾರೆ. ಹೀಗೆ ಮಾಡಿರುವ ಅಧಿಕೃತ ಕಡತಕ್ಕೆ "ಪವರ್ ಛಾರ್ಟ್" ಅನ್ನುತ್ತಾರೆ.  ಪರಮಾತ್ಮನು ತನ್ನ ಅನುಯಾಯಿ ದೇವತೆಗಳಿಗೆ ಹೀಗೆ ಪವರ್ ಚಾರ್ಟ್ ಕೊಟ್ಟಿದ್ದಾನೆ. ಶ್ರೀಜಗನ್ನಾಥ ದಾಸರು ತಮ್ಮ ಹರಿಕಥಾಮೃತಸಾರ ಗ್ರಂಥದಲ್ಲಿ ಒಂದು ಸಂಧಿಯನ್ನೇ ಇದಕ್ಕೆ ಮೀಸಲಿಟ್ಟಿದ್ದಾರೆ. ಈ ಗ್ರಂಥದ ಹದಿನಾರನೇ ಸಂಧಿಯ ಹೆಸರೇ "ದತ್ತ  ಸ್ವಾತಂತ್ರ್ಯ ಸಂಧಿ" ಎಂದು. ದತ್ತ ಸ್ವಾತಂತ್ರ್ಯ ಅಂದರೆ ಡೆಲಿಗೇಟೆಡ್ ಪವರ್ಸ್ ಎಂದೇ ಅರ್ಥ. ಆಸಕ್ತರು ಈ ಗ್ರಂಥ ನೋಡಿ ಹೆಚ್ಚಿನ ವಿಷಯ ತಿಳಿದುಕೊಳ್ಳಬಹುದು.  

*****

ಲಕ್ಷ್ಮೀದೇವಿಗೆ ಎಷ್ಟು ದೊಡ್ಡ ಮಟ್ಟದ ಅಧಿಕಾರ ಇದೆ ಎಂದು ಹಿಂದಿನ "ಇಂದಿರಾರಮಣನ ಮಂದಿರದ ಒಳಗೆ" ಎಂಬ ಸಂಚಿಕೆಯಲ್ಲಿ ನೋಡಿದೆವು. ಪರಮಾತ್ಮನ ಸ್ವಾತಂತ್ರ್ಯ ಎಷ್ಟಿದೆ ಎಂದರೆ ಅದರ ಅರಿವು ಸ್ವತಃ ಮಹಾಲಕ್ಷ್ಮೀದೇವಿಗೆ ಇಲ್ಲವಂತೆ. ಶ್ರೀ ಕನಕದಾಸರು ತಮ್ಮ ಹರಿಭಕ್ತಿಸಾರದಲ್ಲಿ ಹೇಳುತ್ತಾರೆ:

ಸಾಗರನಮಗಳರಿಯದಂತೆ ಸ 
ಸರಾಗದಲಿ ಸಂಚರಿಸುತಿಹ ವು 
ದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲಿ 

ಪರಮಾತ್ಮನ ನಡೆಗಳನ್ನು ಸದಾ ಅವನ ಜೊತೆಯಲ್ಲಿರುವ ಸಾಗರನ ಮಗಳೇ (ಮಹಾಲಕ್ಷ್ಮಿಯೇ) ಅರಿಯಳು. (ಹೆಂಡತಿಗೇ ತಿಳಿಯದಂತೆ ಓಡಾಡುವ ಸ್ವಾತಂತ್ರ್ಯ ಅವನೊಬ್ಬನಿಗೇ ಉಂಟು ಅಂದರೆ ಹೆಚ್ಚು ಹೇಳಬೇಕಾಗಿಲ್ಲ!) ಪೂರ್ಣ ಸ್ವಾತಂತ್ರ್ಯಕ್ಕೆ ಮತ್ತೇನು ಸಾಕ್ಷಿ ಬೇಕು?

ಹೀಗೇ ಮಾಡಲೇಬೇಕೆಂಬ ವಿಧಿಯಿಲ್ಲ. ಹೀಗೆ ಮಾಡಬಾರದೆಂಬ ನಿಷೇಧವಿಲ್ಲ. ಇದೇ ಕ್ರಮದಲ್ಲಿ ಮಾಡಬೇಕೆಂಬ ರೀತಿಯಿಲ್ಲ. ಮಾಡಿದ್ದು ಬದಲಾಯಿಸುವಂತೆ ಇಲ್ಲ ಎನ್ನುವ ಕಟ್ಟಳೆಯಿಲ್ಲ. ಏನನ್ನಾದರೂ ಮಾಡುವಾಗ ಕಾದು ಕುಳಿತುಕೊಳ್ಳದಿದ್ದರೆ ಕೆಲಸ ಕೆಡುತ್ತದೆ ಎನ್ನುವ ಶಂಕೆಯೂ ಇಲ್ಲ. ಯಾರಿಗಾದರೂ ಹೇಳಿ ಮಾಡಬೇಕು ಎಂದಿಲ್ಲ. ಮಾಡಿದಮೇಲಾದರೂ ಯಾರಿಗಾದರೂ ಹೇಳಬೇಕು ಎಂದೂ ಇಲ್ಲ. ಅವನು ಮಾಡಿದ್ದು ಪರೀಕ್ಷಿಸುವ ಆಡಿಟರ್ ಯಾರಿಲ್ಲ. ಅವನು "ಸರ್ವಕಾರ್ತಾ, ನ ಕ್ರೀಯತೇ". "ಎಲ್ಲವನ್ನೂ ಮಾಡುವವನು. ಅವನನ್ನು ಮಾಡುವವರು ಯಾರೂ ಇಲ್ಲ."  ಅನನು ಮಾಡುವುದು ಯಾರಿಗೂ ಗೊತ್ತಾಗುವುದೂ ಇಲ್ಲ. ಒಟ್ಟಿನಲ್ಲಿ ಅವನಿಗೆ ಎಲ್ಲಿಯೂ, ಯಾರಿಗೂ ಇಲ್ಲದ ಅಖಂಡ ಮತ್ತು ಇತಿ-ಮಿತಿ ಇಲ್ಲದ ಸಕಲ ಸ್ವಾತಂತ್ರ್ಯ. ಶ್ರೀಪುರಂದರದಾಸರು ತಮ್ಮ ಕೃತಿಯಲ್ಲಿ ಹೇಳಿದ "ತನ್ನ ಸಕಲ ಸ್ವಾತಂತ್ರ್ಯದಲಿ" ಅಂದರೆ ಇದೇ.

ಕೆಲಸಕ್ಕೆ ತಕ್ಕ ಕೂಲಿ. ಸಾಧನೆಗೆ ತಕ್ಕ ಸತ್ಕಾರ. ಇದು ಸಾಮಾನ್ಯ ನಿಯಮ. ಆದರೆ ಅವನು ಈ ಯಾವ ನಿಯಮಗಳಿಗೂ ಮೀರಿದವನು. ಅವನು ಮನಸ್ಸು ಮಾಡಿದರೆ ಸಾಧನೆಯ ಯೋಗ್ಯತೆಯನ್ನೂ ಮೀರಿ ಫಲ ಕೊಡಬಲ್ಲನು. 

ಇದನ್ನೇ "ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ ಸರಿಭಾಗ ಕೊಡುವ ತನ್ನರಮನೆಯ ಒಳಗೆ" ಎಂದು ದಾಸರು ಹೇಳಿದ್ದಾರೆ. ಇದರ ವಿವರವನ್ನು ಮುಂದೆ ನೋಡೋಣ. 

*****

"ಆರಮಾನೆಯ ಒಳಗೆ ಸರಿಭಾಗ" ಮತ್ತು "ತೊಂಡರಿಗೆ ತೊಂಡನಾಗಿ" ಎನ್ನುವುವು ಇನ್ನೂ ಉಳಿದಿವೆ. ಇವನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ. 

Thursday, December 12, 2024

ಅಪೂರ್ಣ, ಪೂರ್ಣ ಮತ್ತು ಪರಿಪೂರ್ಣ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ಅವಲೋಕನದಲ್ಲಿ ಕಳೆದ ಸಂಚಿಕೆಯಲ್ಲಿ "ಇಂದಿರಾರಮಣನ ಮಂದಿರದ ಒಳಗೆ" ಎನ್ನುವ ಶೀರ್ಷಿಕೆಯಡಿ ಎರಡು ಪದಗುಚ್ಛಗಳಾದ "ಇಂದಿರಾರಮಣಗೆ" ಮತ್ತು "ಮಂದಿರದ ಒಳಗೆ" ಎನ್ನುವವರೆಗೆ ಬಂದಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ "ಪರಿಪೂರ್ಣನೆಂದು ಪೂಜೆಯನ್ನು ಮಾಡೆ" ಎನ್ನುವ ಬಗ್ಗೆ ಸ್ವಲ್ಪ ನೋಡೋಣ. 

"ಮನ ಏವ ಮನುಷ್ಯಾಣಾ೦ ಕಾರಣಂ ಬಂಧ ಮೋಕ್ಷಯೋ:" ಅನ್ನುವುದು ಅಮೃತ ಬಿಂದು ಉಪನಿಷತ್ತಿನ ಒಂದು ಬಹುಪರಿಚಿತವಾದ ಉಕ್ತಿ. ಒಂದು ಬೀಗ ಇದೆ. ಅದರ ಜೊತೆ ಒಂದು ಬೀಗದಕೈ ಕೂಡ ಇದೆ.  ಬೀಗ ಹಾಕಲು ಮತ್ತು ತೆಗೆಯಲು ಎರಡು ಕೀಲಿಕೈಗಳಿಲ್ಲ. ಇರುವುದು ಒಂದೇ ಕೀಲಿಕೈ. ಈ ಬೀಗದಕೈ ಎರಡೂ ಕೆಲಸ ಮಾಡುತ್ತದೆ. ಎಡಕ್ಕೆ ತಿರುಗಿಸಿದರೆ ಬೀಗ ಹಾಕುತ್ತದೆ. ಬಲಕ್ಕೆ ತಿರುಗಿಸಿದರೆ ಬೀಗ ತೆಗೆಯುತ್ತದೆ. ಅದೇ ರೀತಿ ಮನುಷ್ಯನಿಗೆ ಒಂದು ಮನಸ್ಸಿದೆ. ಅವನ ಚಿಂತನೆ ಮತ್ತು ಕಾರ್ಯಶೈಲಿ ಮುಚ್ಚಿಕೊಳ್ಳಲು ಮತ್ತು ತೆರೆದುಕೊಳ್ಳಲು ಈ ಮನಸ್ಸೆಂಬ ಕೀಲಿಕೈ ನೆರವಾಗುತ್ತದೆ. ಮನಸ್ಸಿನ ಮೇಲೆ ಹಿಡಿತ ಇರುವ ವ್ಯಕ್ರಿ ಬೇಕಾದ ವಿಷಯಗಳಿಗೆ ತೆರೆದುಕೊಳ್ಳಲು ಈ ಕೀಲಿಕೈ ಉಪಯೋಗಿಸುತ್ತಾನೆ. ಹಾಗೆಯೇ ಬೇಡದ ವಿಷಯಗಳಿಗೆ ಮುಚ್ಚಿಕೊಳ್ಳಲೂ ಅದೇ ಮನಸ್ಸೆಂಬ ಕೀಲಿಕೈ ಬಳಸುತ್ತಾನೆ. ಗೀತಾಚಾರ್ಯನು "ಯದಾ ಸಂಹರತೇಚಾಯಂ ಕೂರ್ಮೋ೦ಗಾನೀವ ಸರ್ವಶಃ" ಎಂದು ಸ್ಥಿತಪ್ರಜ್ಞನ ಆಕ್ಷಣಗಳನ್ನು ಹೇಳುವಾಗ ಸೂಚಿಸುವುದು ಈ ಮನಸ್ಸೆಂಬ ಕೀಲಿಕೈ ಬಗ್ಗೆಯೇ. ಆದ್ದರಿಂದ ಪೂಜಾದಿಗಳ ಸಮಯದಲ್ಲಿ ಪರಮಾತ್ಮನನ್ನು "ಪರಿಪೂರ್ಣ" ಎಂದು ಚಿಂತಿಸಿ ಪೂಜೆಮಾಡಬೇಕು ಎಂದು ಶ್ರೀಪುರಂದರದಾಸರು ಈ ಕೃತಿಯಲ್ಲಿ ಹೇಳಿದ್ದಾರೆ. ಹೀಗೆ ಚಿಂತಿಸಿ ಪೂಜೆ ಮಾಡಲು ಅವನು ತನ್ನ ಸಕಲ ಸ್ವಾತಂತ್ರ್ಯದಲಿ ಅವನ ಅರಮನೆಯಲ್ಲಿ ಸರಿಭಾಗ ಕೊಡುವನು ಎನ್ನುತ್ತಾರೆ. 

ನಮ್ಮಲ್ಲಿ ಅನೇಕ ದೇವಿ, ದೇವತೆಗಳನ್ನು ಪೂಜಿಸುವ ಸಂಪ್ರದಾಯವಿದೆ. ಇದನ್ನು ಅನೇಕ ಪರ ಧರ್ಮದ ಜನರು ನಮ್ಮನ್ನು ಅಪಹಾಸ್ಯ ಮಾಡಲು ಬಳಸಿಕೊಳ್ಳುತ್ತಾರೆ. ಸರಿಯಾದ ಜ್ಞಾನವಿಲ್ಲದ ನಾವು ಅವರ ಮುಂದೆ ತಲೆ ಕೆಳಗೆ ಹಾಕುತ್ತೇವೆ. ನಮ್ಮ ಇಡೀ ವೈದಿಕ ವಾಗ್ಮಯದಲ್ಲಿ ಒಬ್ಬನೇ ಪರಮಾತ್ಮನೆಂದು ಮತ್ತೆ ಮತ್ತೆ ಹೇಳಿದೆ. ಮಹಾನಾರಾಯಣೋಪನಿಷತ್ತು ಇದನ್ನೇ ಕೂಗಿ ಕೂಗಿ ಹೇಳುತ್ತದೆ. ಪರಮಪುರುಷ ಒಬ್ಬನೇ. ಆದರೆ ಅನೇಕ ದೇವತೆಗಳು ಬೇರೆ ಬೇರೆ ಖಾತೆಗಳನ್ನು ಅವನ ಆಣತಿಯಂತೆ ನಿರ್ವಹಿಸುತ್ತಾರೆ. ಅವರೆಲ್ಲರೂ ದೇವರಲ್ಲ. ಇದು ಸ್ವಲ್ಪ "ಗಾಡ್ ಮತ್ತು ಏಂಜಲ್" ಎನ್ನುವ ಪದ್ದತಿಯಂತೆ. ಹಾಗಿದ್ದರೆ ಅಷ್ಟು ದೇವತೆಗಳನ್ನು ಏಕೆ ಆರಾಧಿಸಬೇಕು? ಒಬ್ಬನೇ ಪರಮಾತ್ಮನನ್ನು ಆರಾಧಿಸಿದರೆ ಸಾಲದೇ? ಇದು ಬಹಳ ಸಾಧುವಾದ ಪ್ರಶ್ನೆ. ಒಂದು ಸೂಪರ್ ಮಾರ್ಕೆಟ್ನಲ್ಲಿ ಎಲ್ಲ ಪದಾರ್ಥಗಳೂ ಸಿಗುತ್ತವೆ. ಆದರೆ ಆ ಸೂಪರ್ ಮಾರ್ಕೆಟ್ಟಿನಲ್ಲಿ ಪ್ರತಿಯೊಂದು ರೀತಿಯ ಪದಾರ್ಥಗಳಿಗೆ ಬೇರೆ ಬೇರೆ ಮಹಡಿಗಳಲ್ಲಿ ಹೋಗಿ ಪಡೆಯುವಂತೆ ಈ ವ್ಯವಸ್ಥೆ. ಪರಮಾತ್ಮನ ವ್ಯವಸ್ಥೆಯಲ್ಲಿ "ನಿಯಮನ" ಎಂದೊಂದಿದೆ ಎಂದು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಸೃಷ್ಟಿಯ ಅನೇಕ ಕೆಲಸಗಳನ್ನು ಅವನು ತನ್ನ ಸಂವಿಧಾನದಂತೆ ದೇವತೆಗಳಿಗೆ ಹಂಚಿದ್ದಾನೆ. ಅವರೆಲ್ಲರ ಅಂತಃಶಕ್ತಿಯಾಗಿ, ಪ್ರೇರಕನಾಗಿ, ಕಾರಕನಾಗಿ ಅವನೇ ಎಲ್ಲವನ್ನೂ ನಡೆಸುತ್ತಾನೆ ಎನ್ನುವುದು ತಿಳಿದರೆ ಯಾವುದೂ ಗೋಜಲಿರುವುದಿಲ್ಲ. ಅನೇಕ ದೇವತೆಗಳ ಆರಾಧನೆಯೂ ಕೊನೆಗೆ "ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ" ಎಂದು ತಿಳುದು ಮಾಡುವುದು. ಇದೇ ಈ ವ್ಯವಸ್ಥೆಯ ತಿರುಳು. 

*****

ಆಯಿತು. ಈ ವ್ಯವಸ್ಥೆಯೇ ಸರಿ ಎಂದು ಒಪ್ಪೋಣ. ಪ್ರತಿ ದೇವಿ, ದೇವತೆಯರನ್ನು ಮತ್ತು ಪರಮಪುರುಷನನ್ನು ಆರಾಧಿಸುವಾಗ ನಮ್ಮ ಮನಸ್ಥಿತಿ ಹೇಗಿರಬೇಕು ಎನ್ನುವುದು ನಮ್ಮ ಪ್ರಶ್ನೆ. ಇದರ ಕೆಲವು ಭಾಗ "ಸಕಲ ಸ್ವಾತಂತ್ರ್ಯ" ಎನ್ನುವ ಮುಂದಿನ ಸಂಚಿಕೆಯಲ್ಲೂ ಬರುತ್ತ್ತದೆ. ನಮ್ಮ ಮನಸ್ಥಿತಿ ಹೇಗಿರಬೇಕು ಅನ್ನುವುದನ್ನು ತೀರ್ಮಾನಿಸಲು ಅಪೂರ್ಣ, ಪೂರ್ಣ ಮತ್ತು ಪರಿಪೂರ್ಣ ಎನ್ನುವ ಮೂರು ಶಬ್ದಗಳ ಖಚಿತವಾದ ಅರ್ಥ ಮತ್ತು ಅಭಿಪ್ರಾಯಗಳು ತಿಳಿಯಬೇಕು. ಅಪೂರ್ಣ ಅಂದರೇನು? ಪೂರ್ಣ ಅಂದರೇನು? ಪರಿಪೂರ್ಣ ಎಂದರೇನು? ಪರಿಪೂರ್ಣತ್ವದ ಕಲ್ಪನೆ ಪೂರ್ಣತ್ವಕ್ಕಿಂತ ಹೇಗೆ ಭಿನ್ನ? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿದರೆ ಪರಿಪೂರ್ಣತ್ವದ ಕಲ್ಪನೆ ಸರಿಯಾಗಿ ಆಗುತ್ತದೆ. 

ಪೂರ್ಣ ಅನ್ನುವುದರ ಬಗ್ಗೆ ನಮಗೆ ಸುಮಾರಾಗಿ ಖಚಿತವಾಗಿ ಗೊತ್ತು. ನಮ್ಮ ಎದುರಿಗೆ ಪ್ರತಿದಿನ ಈ ತತ್ವವನ್ನು ಸಾಕ್ಷಾತ್ತಾಗಿ ತೋರಿಸುವ ಚಂದ್ರನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅಮಾವಾಸ್ಯೆಯಂದು ಚಂದ್ರನೇ ಕಾಣಿಸನು. ಆಗ ಅದೊಂದು ಶೂನ್ಯ. ಶೇಕಡಾವಾರು ಸೊನ್ನೆ. ಇಲ್ಲಿ ಏನೂ ಇಲ್ಲ. ಪ್ರತಿಪದೆಯಂದು ಚಂದ್ರನು ಎಲ್ಲಿಯೋ ಇದ್ದಾನೆ. ಆದರೆ ನಮ್ಮ ಕಣ್ಣಿಗೆ ಕಾಣಿಸದಷ್ಟು ಸಣ್ಣಗೆ ಇದ್ದಾನೆ. ವಾಸ್ತವವಾಗಿ ನೋಡಿದರೆ ಶುಕ್ಲ ಪಕ್ಷದ ಮೊದಲನೆಯ ದಿನ (ಪಾಡ್ಯ) ಅವನು ಕಾಣುವುದೇ ಇಲ್ಲ. ಬಿದಿಗೆಯಂದು ಒಂದು ಚಿಕ್ಕ ಬಿಂಬವಾಗಿ ಕಾಣುತ್ತಾನೆ. ಪಂಚಾಂಗದಲ್ಲಿ "ಚಂದ್ರ ದರ್ಶನ" ಎಂದು ಹಾಕುತ್ತಾರೆ. ಅಲ್ಲಿನಿಂದ ಅವನು ಪೂರ್ಣತ್ವದ ಕಡೆಗೆ ದಿನೇ  ದಿನೇ ಬೆಳೆಯುತ್ತಾನೆ. ಬೆಳವಣಿಗೆ ನಮಗೆ ಚೆನ್ನಾಗಿ ಕಾಣುತ್ತದೆ. ಶೂನ್ಯವಿದ್ದದ್ದು ಪ್ರತಿದಿನ ಸ್ವಲ್ಪ ಪ್ರತಿಶತ ಹೆಚ್ಚುತ್ತದೆ. ಹುಣ್ಣಿಮೆಯ ದಿನ ಪೂರ್ಣ ಚಂದ್ರನ ದರ್ಶನ ಆಗುತ್ತದೆ. ಪೂರ್ತಿ ಗೋಳಾಕಾರದ ಚಂದ್ರನನ್ನು ನೋಡಿ ನಾವು ಸಂಭ್ರಮಿಸುತ್ತೇವೆ. ಇಂದಿಗೆ ಹದಿನೈದು ದಿನದ ಹಿಂದೆ ಶೂನ್ಯವಿದ್ದದ್ದು ಶೇಕಡಾ ನೂರು ಆಯಿತು. ಸೊನ್ನೆಯಿದ್ದದ್ದು ಪೂರ್ಣ ಆಯಿತು! ಹಿಂದಿನ ಹದಿನಾಲ್ಕು ದಿನ ಅಪೂರ್ಣವಾಗಿತ್ತು. ಇಂದು ಪೂರ್ಣವಾಯಿತು. 

ಮುಂದಿನ ಹದಿನೈದು ದಿನ ಈ ಕ್ರಿಯೆಯ ಹಿಮ್ಮುಖ ಬೆಳವಣಿಗೆ. ಮತ್ತೆ ಕಡಿಮೆಯಾಗುತ್ತದೆ. ಬಹುಳ ಪಾಡ್ಯದ ದಿನ ಪೂರ್ಣಚಂದ್ರನಿಗಿಂತ ಸ್ವಲ್ಪ ಕಡಿಮೆ. ಸುಮಾರು ೯೪ ಪ್ರತಿಶತ. ಈಗ ಚಂದ್ರ ಪೂರ್ಣನಲ್ಲ. ಬಿದಿಗೆ ಮತ್ತೊ ಕಡಿಮೆ. ಸುಮಾರು ಶೇಕಡಾ ೮೭. ಹೀಗೆ ಆಗುತ್ತಾ ಮತ್ತೆ ಮುಂದಿನ ಅಮಾವಾಸ್ಯೆಗೆ ಸೊನ್ನೆ ಪ್ರತಿಶತ ಆಗಿ ಕಾಣೆಯಾಗುತ್ತಾನೆ. ಚಂದ್ರನಿಗೆ ವೃದ್ಧಿ (ಹೆಚ್ಚಾಗುವುದು) ಮತ್ತು ಕ್ಷಯ (ಕಡಿಮೆಯಾಗುವುದು) ಉಂಟು. ಪೂರ್ಣನಾಗಿರುವುದು ತಿಂಗಳಿಗೆ ಒಂದೇ ದಿನ. ಮತ್ತೆಲ್ಲ ದಿನ ಅಪೂರ್ಣವೇ. 

*****

ಪೂರ್ತಿ ಇಲ್ಲದ, ಏನೋ ಕಡಿಮೆಯಾದದ್ದು ಅಪೂರ್ಣ. ಅದು ಸ್ವಲ್ಪ ಕಡಿಮೆ ಇರಬಹುದು. ಶುಕ್ಲ ಪಕ್ಷದ ಚತುರ್ದಶಿಯ ಚಂದ್ರನಿದ್ದಂತೆ. ಹೆಚ್ಚು ಕಡಿಮೆ ಪೂರ್ಣ ಅನ್ನಬಹುದು, ಆದರೆ ಅಲ್ಲ. ಅಥವಾ ತುಂಬಾ ಕಡಿಮೆ ಇರಬಹುದು. ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ. ಪೂರ್ಣ ಆಗಲು ಬಹಳ ಕೊರತೆ ಇದೆ. ಪೂರ್ಣವಾದರೂ ಬಹಳ ಕಾಲ ಉಳಿಯುವುದಿಲ್ಲ. ಎಲ್ಲೋ ಮಿಂಚಿ ಮಾಯವಾದ ಹಾಗೆ. ಇಪ್ಪತ್ತೆಂಟು ದಿನದಲ್ಲಿ ಒಂದು ದಿನ ಮಾತ್ರ ಪೂರ್ಣ. ಬಾಕಿ ಎಲ್ಲ ದಿನವೂ ಅಪೂರ್ಣ. 

ಒಬ್ಬರಿಗೆ ಒಂದು ತಂಬಿಗೆ ತುಂಬಾ ನೀರು ತನ್ನಿ ಎಂದು ಹೇಳುತ್ತೇವೆ ಅನ್ನೋಣ. ಅವರು ತಂಬಿಗೆಯ ತುಂಬಾ ನೀರು ತಂದರು. ತಂಬಿಗೆಯ ತುಂಬಾ ನೀರಿದೆ ಎಂದು ಎಲ್ಲರೂ ಅದನ್ನು ನೋಡಿ ಒಪ್ಪಬಹುದು. ಆದರೆ ನಿಜವಾಗಿ ಅದು ಪೂರ್ಣ ನೀರಿನಿಂದ ತುಂಬಿದೆಯೇ? ಇದು ಪ್ರಶ್ನೆ. 

ನಮ್ಮ ರಾಜಕಾರಣಿಗಳು ಬಡವರ ಉದ್ಧಾರ ಮಾಡುತ್ತೇವೆ ಅನ್ನುತ್ತಾರೆ. ಹಾಗಂದರೆ ಏನು? ಬಡವರು ಕೆಳಗೆ ಇದ್ದಾರೆ. ಯಾವುದರಲ್ಲಿ? ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ. ಅವರ ಉದ್ಧಾರ ಹೇಗೆ? ಕೆಳಗೆ ಇರುವವರನ್ನು ಮೇಲೆ ಎತ್ತುವುದು. "ಉದ್ಧರ" ಅನ್ನುವ ಪದಕ್ಕೆ ಮೇಲೆ ಎತ್ತುವುದು ಅಂದು ಅರ್ಥ. ಅದೇ ಕನ್ನಡಲ್ಲಿ "ಉದ್ಧಾರ" ಆಯಿತು. ಪಂಚಪಾತ್ರೆ-ಉದ್ಧರಣೆ ಅನ್ನುತ್ತೇವೆ. ಏಕೆ? ಪಂಚಪಾತ್ರೆಯಲ್ಲಿ ನೀರಿದೆ. ನಮ್ಮ ಕೆಲಸಕ್ಕೆ ಅದು ಪಾತ್ರೆಯಿಂದ ಮೇಲೆ ಬಂದು ನಮ್ಮ ಕೈಯಲ್ಲಿ ಬೀಳಬೇಕು. ಪಂಚಪಾತ್ರೆ ತೆಗೆದು ಸುರಿದುಕೊಂಡರೆ ಹೆಚ್ಚಾಗಿ ಬೀಳಬಹುದು. ಅದು ನಮಗೆ ಬೇಡವಾದದ್ದು. ಪಾತ್ರೆಯಿಂದ ಸುರಿದುಕೊಳ್ಳುವುದೂ ಕಷ್ಟ. ನೀರಿನಿಂದ ತುಂಬಿರುವುದರಿಂದ ಅದು ಬಹಳ ಭಾರ. ಸ್ವಲ್ಪವೇ ನೀರು ಬೇಕು. ಅದಕ್ಕೆ ಒಂದು ಉಪಕರಣ ಉಪಯೋಗಿಸುತ್ತೇವೆ. ಕೆಳಗಿರುವ ನೀರು ಮೇಲೆ ಎತ್ತುವ ಉಪಕರಣ ಆದದ್ದರಿಂದ ಅದು "ಉದ್ಧರಣೆ" ಆಯಿತು. ಕೆಲವು ಕಡೆ ಅದನ್ನು "ಸೌಟು" ಅನ್ನುತ್ತಾರೆ. ನಮಗೆ ಸಾರು. ಹುಳಿ, ಪಾಯಸ ಬಡಿಸುವ ದೊಡ್ಡ ಉದ್ಧರಣೆ ಸೌಟು ಎಂದರೆ ಚಂದ. ಈಗಿನವರು ಅಚ್ಚ ಕನ್ನಡದಲ್ಲಿ "ಸ್ಪೂನ್" ಅನ್ನಬಹುದು. ಇರಲಿ. 

ನಮ್ಮ ಮುಂದೆ ತಂದಿಟ್ಟಿರುವ ನೀರು ತುಂಬಿದ ತಂಬಿಗೆಯನ್ನು ನೋಡೋಣ. ಅದು ನೀರಿನಿಂದ ತುಂಬಿದೆ. ಅದು ನೀರಿನಿಂದ ಪೂರ್ಣವಾಗಿದೆ ಎನ್ನಬಹುದು. ಅದಕ್ಕೆ ಒಂದು ಉದ್ಧರಣೆ ನೀರು ಮತ್ತೆ ಹಾಕಬಹುದೋ? ಹಾಕಬಹುದು. ಇನ್ನೊಂದು ಉದ್ಧರಣೆ ನೀರು ಹಾಕಬಹುದೋ? ಪ್ರಾಯಶಃ ಹಾಕಬಹುದು. ಅದು ಹೇಗೆ? ಈಗ ಸ್ವಲ್ಪ ಮುಂಚೆ ತಂಬಿಗೆ ತುಂಬಾ ನೀರು ಇದೆ ಅಂದೆವು. ಈಗ ಮತ್ತೆ ಅದರಲ್ಲಿ ಸ್ವಲ್ಪ ಹಾಕಿದೆವು. ಅಂದರೆ ಆಗ ಅದು ಪೂರ್ಣವಾಗಿರಲಿಲ್ಲ. ಅಂದರೆ ನಾವೆಲ್ಲರೂ ಯಾವುದನ್ನು ಪೂರ್ಣ ಎಂದು ನಂಬಿದ್ದೆವೋ, ಅದು ವಾಸ್ತವವಾಗಿ ಪೂರ್ಣವಾಗಿರಲಿಲ್ಲ. ಲೋಕಾರೂಢಿಯಲ್ಲಿ "ಹೆಚ್ಚು ಕಡಿಮೆ ತುಂಬಿದೆ" ಎಂದು ನಾವು ಹೇಳುವುದನ್ನೂ ಪೂರ್ಣ ಎಂದು ವ್ಯವಹರಿಸುತ್ತೇವೆ. ಶೇಕಡಾ 99 ಅಂಕ ಬಂದರೆ ಆಲ್ಮೋಸ್ಟ್  ನೂರಕ್ಕೆ ನೂರು ಎಂದಂತೆ. ಶುಕ್ಲ ಪಕ್ಷದ ಚತುರ್ದಶಿಯ ಚಂದ್ರನನ್ನು ಪೂರ್ಣ ಚಂದ್ರ ಎಂದಂತೆ. ಅಂದರೆ ಒಟ್ಟಾರೆ ನಾವು "ಪೂರ್ಣ" ಎಂದು ತಿಳಿದಿರುವ ಅನೇಕ ವಿಷಯಗಳು ಅಪೂರ್ಣವೇ!

ತಂಬಿಗೆಯ ನೀರಿನ ಬಳಿ ಮತ್ತೆ ಹೋಗೋಣ. ನೀರಿನಿಂದ ತುಂಬಿದ ತಂಬಿಗೆಗೆ ಎರಡು ಉದ್ಧರಣೆ ನೀರು ಹಾಕಿಯಾಯಿತು. ಇನ್ನು ಹಾಕಲಾಗುವುದಿಲ್ಲ. ಇನ್ನೊಂದು ಉದ್ಧರಣೆ ಹಾಕಿದರೆ ಅದು ಚೆಲ್ಲುತ್ತದೆ. 

ಈಗ ಆ ತಂಬಿಗೆಯಿಂದ ಒಂದು ಉದ್ಧರಣೆ ನೀರು ಹೊರತೆಗೆಯೋಣ. ತಂಬಿಗೆಯ ನೀರು ಅಪೂರ್ಣವಾಯಿತು. 

*****

ಶ್ರೀಪುರಂದರದಾಸರು "ಪರಿಪೂರ್ಣನೆಂದು ಪೂಜೆಯನು ಮಾಡೆ" ಎನ್ನುವುದನ್ನು ನೋಡೋಣ. ಪರಮಾತ್ಮನ ಪರಿಪೂರ್ಣತ್ವ ಹೇಗೆ? ಅದು ಪೂರ್ಣತ್ವಕ್ಕಿಂತ ಹೇಗೆ ಭಿನ್ನ? ಪೂರ್ಣತ್ವದಲ್ಲಿ ಸ್ವಲ್ಪ ಕಡಿಮೆ ಮಾಡಿದರೆ ಅಥವಾ ಹೊರತೆಗೆದರೆ ಅದು ತಕ್ಷಣ ಅಪೂರ್ಣವಾಗುತ್ತದೆ. ಪರಮಾತ್ಮ ಹಾಗಲ್ಲ. ಅವನು ಜ್ಞಾನ-ಆನಂದಾದಿ ಸದ್ಗುಣಗಳಿಂದ ತುಂಬಿದ್ದಾನೆ. ಪರಿಪೂರ್ಣ ಆಗಿದ್ದಾನೆ. ಇನ್ನು ಒಂದು ಗುಣವನ್ನೂ ಸೇರಿಸುವಹಾಗಿಲ್ಲ. ಅಷ್ಟೇ ಅಲ್ಲ; ಸ್ವಲ್ಪ ಹೊರತೆಗೆದರೂ ಮೊದಲಿನಷ್ಟೇ ಇರುತ್ತಾನೆ. ಎಷ್ಟು ತೆಗೆದರೂ ಮೊದಲಿನಷ್ಟೇ ಪರಿಪೂರ್ಣನಾಗಿರುತ್ತಾನೆ. 

"ಓಂ ಪೂರ್ಣಮದಃ, ಪೂರ್ಣಮಿದಂ, ಪೂರ್ಣಾತ್ಪೂರ್ಣಮದಚ್ಯತೇ ಪೂರ್ಣಸ್ಯ ಪೂರ್ಣಮಾಡಯ ಪೂರ್ಣಮೇವಾವಶಿಷ್ಯತೇ" ಎನ್ನುವ ಉಪನಿಷದ್ ವಾಕ್ಯ ಇದನ್ನೇ ಹೇಳುತ್ತದೆ. ಪರಮಾತ್ಮ ಪರಿಪೂರ್ಣ. ಅವನು ಅನಂತ. ಅನಂತಕ್ಕೆ ಅನಂತವನ್ನು ಸೇರಿಸಿದರೂ ಅನಂತವೇ! ಅನಂತದಿಂದ ಅನಂತವನ್ನು ಕಳೆದರೂ ಉಳಿಯುವುದು ಅನಂತವೇ! 

ಇದೇ ಪರಮಾತ್ಮನ ಪರಿಪೂರ್ಣತ್ವ. ಅವನ ಆರಾಧನೆ, ಧ್ಯಾನ ಮಾಡುವಾಗ ಅವನು ಈ ರೀತಿ ಪರಿಪೂರ್ಣ ಎನ್ನುವ ಪ್ರಜ್ಞೆ ಇರಬೇಕು. ಹಿಂದಿನ ಸಂಚಿಕೆಗಳಲ್ಲಿ ಹೇಳಿದ ಅರ್ಪಣೆಗಳನ್ನು ಮಾಡಿ ಪೂಜೆಯನ್ನು ಮಾಡುವಾಗ ಆ ಪರಿಪೂರ್ಣನಾದ ಪರಮಾತ್ಮನಿಗೆ ಅರ್ಪಿಸುತ್ತಿದ್ದೇವೆ ಎನ್ನುವ ಅನುಸಂಧಾನ ಇರಬೇಕು. ಆಗ ಅವನು ತನ್ನ ಸಕಲ ಸ್ವಾತಂತ್ರದಲಿ ತನ್ನ ಅರಮನೆಯಲ್ಲಿ ಸರಿಭಾಗ ಕೊಡುತ್ತಾನೆ. ಇದು ಶ್ರೀಪುರಂದರದಾಸರು ಹೇಳುವ ರಹಸ್ಯ. 

ಗಂಗಾನದಿಯಲ್ಲಿ ಇರುವ ಮೀನು, ಕಪ್ಪೆಗಳು ಪ್ರತಿ ಕ್ಷಣ ಗಂಗಾಸ್ನಾನ ಮಾಡುತ್ತಿವೆ. ಆದರೆ ಅವುಗಳಿಗೆ ಗಂಗೆಯಲ್ಲಿ ಇದ್ದೇವೆ ಅನ್ನುವ ಜ್ಞಾನವೇ ಇಲ್ಲ. ಅವುಗಳಿಗೆ ಗಂಗಾಸ್ನಾನದ ಫಲವಿಲ್ಲ. ಅಂತೆಯೇ "ಪರಮಾತ್ಮನು ಪರಿಪೂರ್ಣ. ಅವನಿಗೆ ಈ ಪೂಜೆ ಅರ್ಪಿಸುತ್ತಿದ್ದೇವೆ" ಎನ್ನುವ ಅನುಸಂಧಾನ ಇಲ್ಲದಿದ್ದರೆ ಆ ಪೂಜೆಗೂ ಪೂರ್ಣ ಫಲವಿಲ್ಲ. 

*****

"ಸಕಲ ಸ್ವಾತಂತ್ರ್ಯ", "ಅರಮನೆಯ ಒಳಗೆ ಸರಿಭಾಗ" ಮತ್ತು "ತೊಂಡರಿಗೆ ತೊಂಡನಾಗಿ" ಎನ್ನುವುದನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ.