ನಾವು ಅರವತ್ತು-ಅರವತ್ತೈದು ವರುಷಗಳ ಹಿಂದೆ ಶಾಲೆಗಳಲ್ಲಿ ಓದುತ್ತಿದ್ದಾಗ ಕೆಲವು ಕವನಗಳನ್ನೂ ಮತ್ತು ಗದ್ಯಕಾವ್ಯ ಅಥವಾ ಚಂಪೂ ಕಾವ್ಯಗಳ ಭಾಗಗಳನ್ನು ಕನ್ನಡ ಪಠ್ಯ ಪುಸ್ತಕಗಳಲ್ಲಿ ಸೇರಿಸಿರುತ್ತಿದ್ದರು. ಪಠ್ಯ ಪುಸ್ತಕಗಳಲ್ಲಿ ಈ ಭಾಗದ ನಂತರ "ಕವಿ-ಕಾವ್ಯ ವಿಚಾರ" ಎನ್ನುವ ಶೀರ್ಷಿಕೆಯಡಿ ಕೆಲವು ಸಾಲು ಕವಿಯ ಮತ್ತು ಆ ಕಾವ್ಯದ ಹಿನ್ನೆಲೆಯ ಬಗ್ಗೆ ಕೊಟ್ಟಿರುತ್ತಿದ್ದರು. ಯಾವುದೇ ಸಾಹಿತ್ಯದ ಭಾಗ ಅರ್ಥವಾಗಬೇಕಿದ್ದರೆ ಆ ಕೃತಿಯ ಕರ್ತೃ (ಕೃತಿ ರಚನೆ ಮಾಡಿವರು), ಅವರ ಕಾಲ (ಜೀವಿಸಿದ್ದ ಸಮಯ) ಮತ್ತು ದೇಶ (ಬದುಕಿದ್ದ ಪರಿಸರ) ಇವುಗಳ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇರಬೇಕು. ಇಲ್ಲದೆ ಹೋದರೆ ಆ ಕೃತಿಯ ಪೂರ್ಣ ಪರಿಚಯ ಆಗುವುದಿಲ್ಲ. ನಾವು ಕೃತಿಗಳನ್ನು ಅವಲೋಕಿಸುವುದು ಇಂದಿನ ಕಾಲದಲ್ಲಿ. ನಾವು ಬದುಕುವುದು ನಮ್ಮ ಪರಿಸರದಲ್ಲಿ. ಓದುವ ಕೃತಿಯಾದರೋ ಎಂದೋ ರಚನೆಯಾದದ್ದಿರಬಹುದು. ಕೃತಿಯಲ್ಲಿ ಕವಿ ಅಂದು ಕಂಡ ಪರಿಸರ ಮತ್ತು ಸಮಾಜದ ಪ್ರತಿಬಿಂಬ ಕೊಟ್ಟಿರುತ್ತಾನೆ. ಕೊಂಚವಾದರೂ ಇವುಗಳ ಪರಿಚಯ ಇಲ್ಲದಿದ್ದರೆ ಅದನ್ನು ತಿಳಿಯುವುದು ಹೇಗೆ? ಈ ವಿಷಯದ ಬಗ್ಗೆ ಹೆಚ್ಚು ತಿಳಿಯಲು "ಕಾರಿಹೆಗ್ಗಡೆಯ ಮಗಳು" ಎನ್ನುವ ಸಂಚಿಕೆಯಲ್ಲಿ ಈ ವಿಷಯದ ಬಗ್ಗೆ ಕೊಟ್ಟಿರುವ ವಿವರಣೆಯನ್ನು ನೋಡಬಹುದು. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕಾಶಿ ನಮ್ಮ ದೇಶದ ಅತ್ಯಂತ ಪ್ರಮುಖ ಕ್ಷೇತ್ರಗಲ್ಲಿ ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪಟ್ಟಣಕ್ಕೆ ವಾರಾಣಸಿ ಮತ್ತು ಬನಾರಸ್ ಎಂದೂ ಹೆಸರುಂಟು. ಈ ಹೆಸರುಗಳು ಹೇಗೆ ಬಂದವು, ಅವುಗಳ ವಿಶೇಷಗಳು ಏನು ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಈ ಕಾಶಿ ಕ್ಷೇತ್ರ ಸಂದರ್ಶಿಸಲು ಹೋಗುವ ಶ್ರದ್ದಾಳು ಜನಗಳು ವಿಶ್ವನಾಥನ ದೇವಾಲಯವನ್ನು ನೋಡಿ ಹಿಂದಿರುಗುತ್ತಾರೆ. ಆದರೆ ಕಾಶಿ ಕ್ಷೇತ್ರಕ್ಕೆ ಮೂವರು ಮುಖ್ಯ ಅಧಿದೇವತೆಗಳಿದ್ದಾರೆ ಎಂದು ಹೇಳುತ್ತಾರೆ. ಅವರುಗಳು ವಿಶ್ವನಾಥ, ಕಾಲಭೈರವ ಮತ್ತು ಬಿಂದು ಮಾಧವ. ವಾರಾಣಸಿ ಅಥವಾ ಕಾಶಿ ನಗರ ಇರುವ ಪ್ರದೇಶದ ಗಂಗಾನದಿಯ ದಡವನ್ನು ಅನೇಕ ಘಟ್ಟಗಳೆಂದು (ಘಾಟ್ ಎಂದು ಪ್ರಸಿದ್ಧ) ವಿಂಗಡಿಸಿದ್ದಾರೆ. ಈ ಘಟ್ಟಗಳಿಗೆ ಆಯಾಯಾ ಹೆಸರುಗಳು ಬರಲು ಅನೇಕ ಕಾರಣಗಳಿವೆ. ಇದರಲ್ಲಿ ಮಣಿಕರ್ಣಿಕಾ ಘಾಟ್ ಬಹಳ ಪ್ರಸಿದ್ಧ. ಇಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಅನೇಕ ಚಿತೆಗಳು ಉರಿಯುತ್ತಿರುವುದನ್ನು ಕಾಣಬಹುದು. ಮೃತರ ದೇಹಗಳಿಗೆ ಇಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಉನ್ನತ ಲೋಕಗಳು ಮೃತರಿಗೆ ಸಿಗುತ್ತವೆ ಎಂದು ಪ್ರಬಲವಾದ ನಂಬಿಕೆ.
ಮಣಿಕರ್ಣಿಕಾ ಘಾಟ್ ಪ್ರದೇಶವನ್ನು ಮೊದಲು ಮಾಡಿಕೊಂಡು ಅಸ್ಸಿ ಘಾಟ್ ವರೆಗೆ (ಅಸ್ಸಿ ನದಿ ಗಂಗೆ ಸೇರುವ ಸ್ಥಳ) ಶಿವಕಾಶಿ ಎಂದೂ, ಮಣಿಕರ್ಣಿಕಾ ಘಾಟ್ ನಿಂದ ಆದಿಕೇಶವ ಘಾಟ್ ವರೆಗೆ ವಿಷ್ಣು ಕಾಶಿ ಎಂದೂ ಕರೆಯುತ್ತಾರೆ. ಈ ಘಟ್ಟಗಳಲ್ಲಿ ಪಂಚಗಂಗಾ ಘಟ್ಟವೂ ಒಂದು. ಇದರ ಬಳಿಯಲ್ಲಿ ಈಗ ಇರುವ ಸಣ್ಣ ದೇವಸ್ಥಾನವೊಂದು "ಬಿಂದುಮಾಧವ ದೇವಸ್ಥಾನ" ಎಂದು ಹೆಸರಾಗಿದೆ. ಅನೇಕ ಜನ ಶ್ರದ್ಧಾಳುಗಳು ಕಾಶಿಯಾತ್ರೆ ಈ ಬಿಂದು ಮಾಧವನ ದರ್ಶನವಿಲ್ಲದೆ ಪೂರ್ತಿಯಾಗದು ಎಂದು ನಂಬುತ್ತಾರೆ.
*****
ಶ್ರೀ ಪುರಂದರದಾಸರು ವಿಜಯನಗರದ ಕರ್ನಾಟಕ ಸಾಮ್ರಾಜ್ಯ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದ ಕಾಲದಲ್ಲಿ ಜೀವಿಸಿದ್ದರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಶ್ರೀ ಕೃಷ್ಣದೇವರಾಯನ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರು, ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರು ಸಮಕಾಲೀನರು. ಅವರುಗಳ ವಯಸ್ಸಿನಲ್ಲಿ ಸ್ವಲ್ಪ ಅಂತರ ಇದ್ದರೂ ಅವರ ಜೀವಿತದ ಬಹಳ ಕಾಲ ಈ ಮೂವರೂ ವಿಜಯನಗರದಲ್ಲಿ ಬದುಕಿ ಬಾಳಿದವರು. ಶ್ರೀ ಪುರಂದರದಾಸರ ಕಾಲ ಸುಮಾರಾಗಿ 1485 ರಿಂದ 1564 ಎಂದು ನಂಬಲಾಗಿದೆ. 1564ರ ಪುಷ್ಯ ಬಹುಳ ಅಮಾವಾಸ್ಯೆಯಂದು ಅವರು ದೇಹತ್ಯಾಗ ಮಾಡಿದರೆಂದು ಈಗಲೂ ಪುಷ್ಯ ಬಹುಳ ಅಮಾವಾಸ್ಯೆಯಂದು ಅವರ ಆರಾಧನೆಯನ್ನು ನಡೆಸುತ್ತಾರೆ. ಪುರಂದರದಾಸರ ಕಾಲದಲ್ಲಿ ಅವರು ಅನೇಕ ಬಾರಿ ಕಾಶಿ ಕ್ಷೇತ್ರಕ್ಕೆ ಯಾತ್ರೆ ಮಾಡಿದ್ದರು. ಆಗಿನ ದಿನಗಳಲ್ಲಿ ಕಾಶಿ ವಿಶ್ವನಾಥ ಮತ್ತು ಕಾಶಿ ಬಿಂದುಮಾಧವ ಎನ್ನುವ ಎರಡು ವೈಭವೋಪೇತ ದೇವಸ್ಥಾನಗಳು ಇದ್ದವು. ಆದ್ದರಿಂದ ಅವರು ಈ ಎರಡು ದೇವಸ್ಥಾನಗಳನ್ನೂ ನೋಡಿ ದೇವರನಾಮಗಳನ್ನು ರಚಿಸಿದರು. ಇವುಗಳಲ್ಲಿ ಕೆಲವು ಸಿಕ್ಕಿವೆ ಮತ್ತು ಅನೇಕವು ಈಗ ಲಬ್ಧವಿಲ್ಲ.
1669ರಲ್ಲಿ ಔರಂಗಝೇಬನ ಆಳ್ವಿಕೆಯಲ್ಲಿ ಈ ಸುಂದರವಾದ ಬಿಂದುಮಾಧವ ದೇವಸ್ಥಾನವನ್ನು ಒಡೆದು ಅದರ ಪಕ್ಕ ಮಸೀದಿ ನಿರ್ಮಿಸಿದರು. ದೇವಸ್ಥಾನ ಒಡೆಯುವ ಸುದ್ದಿ ಬಂದಾಗ ದೇವಾಲಯದ ಅರ್ಚಕರು ಮೂಲ ಬಿಂದುಮಾಧವ ಮೂರ್ತಿಯನ್ನು ಗಂಗಾನದಿಯ ನೀರಿನಲ್ಲಿ ಮುಳುಗಿಸಿಟ್ಟಿದ್ದರಂತೆ. ಕೆಲವು ವರುಷಗಳ ನಂತರ ಶಿವಾಜಿ ಮಹಾರಾಜರ ಆಡಳಿತ ಬಂದ ಸಂದರ್ಭದಲ್ಲಿ ಆ ಮೂಲ ವಿಗ್ರಹವನ್ನು ಹೊರತಂದು ಮತ್ತೆ ಪ್ರತಿಷ್ಠಾಪಿಸಿದರಂತೆ. ಇದೆಲ್ಲ ಅಂತೇ ಕಂತೆ ಪುರಾಣವಲ್ಲ. ಬಿಂದು ಮಾಧವ ದೇವಸ್ಥಾನದ ಸೊಗಸನ್ನು ಆ ಕಾಲದಲ್ಲಿ ನಮ್ಮ ದೇಶ ನೋಡಲು ಬಂದ ಹೊರ ದೇಶದ ಯಾತ್ರಿಕರು ತಮ್ಮ ಲೇಖನಗಲ್ಲಿ ಬರೆದಿಟ್ಟಿರುವ ದಾಖಲೆಗಳಿವೆ. ಇದೆ ರೀತಿ ಮಲ್ಲಿಕಾಫರ್ ಶ್ರೀರಂಗದ ದೇವಾಲಯವನ್ನು ಲೂಟಿ ಮಾಡಿದಾಗ ಅನೇಕರು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದರಿಂದ ಇಂದು ನಾವು ಶ್ರೀರಂಗದ ದೇವಾಲಯ ನೋಡುತ್ತಿದ್ದೇವೆ,
ಶ್ರೀ ಪುರಂದರದಾಸರು ಈ ಬಿಂದು ಮಾಧವನ ದರ್ಶನ ಮಾಡಿದ್ದರಿಂದ ತಮ್ಮ ಕೃತಿಗಳಲ್ಲಿ "ಬಿಂದು ಮಾಧವ" ಮೂರ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವನ ಸ್ಮರಣೆಯನ್ನು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ಅವರ ಹೆಚ್ಚು ಜನಪ್ರಿಯ ಕೃತಿಗಳಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೆ ಬಿಂದಿಗೆಯ" ಎನ್ನುವುದೂ ಒಂದು. ಈ ಕೃತಿಯಲ್ಲಿ "ಬಿಂದು ಮಾಧವನ ಘಟ್ಟಕೆ ಹೋಗುವೆ ತಾರೆ ಬಿಂದಿಗೆಯ" ಎನ್ನುವ ಸಾಲು ಇದೆ. ನಾನು ಮೊದಲು ಈ ಕೃತಿ ಕೇಳಿದ್ದು ಸುಮಾರು ಐದು ವರುಷಗಳವನಿದ್ದಾಗ, ನನ್ನ ತಾಯಿ ಹಾಡಿದ್ದು. ಬಿಂದು ಮಾಧವನ ಘಟ್ಟ ಎಂದರೆ ಏನು ಎಂದು ಕೇಳಿ ಸರಿಯಾಗಿ ಉತ್ತರ ಸಿಗದೇ ಮನಸ್ಸಿನಲ್ಲಿ ಕುಳಿತಿತ್ತು. ನಂತರ ಅದರ ಹಿಂದೆ ಹೋಗಿ ಸಂಗ್ರಹಿಸಿದ ವಿವರಗಳು ಈಗ ಈ ಸಂಚಿಕೆಯ ಮೂಲಕ ಹೊರಬಂದಿರುವುದು ಒಂದು ವಿಶೇಷವೇ ಸರಿ!
*****
ನಮ್ಮ ದೇಶದಲ್ಲಿ ಮುಖ್ಯವಾಗಿ ಐದು ಮಾಧವನ ದೇವಸ್ಥಾನಗಳು ಇವೆ. ಅವು ಯಾವುವೆಂದರೆ:
- ಕಾಶಿಯ ಬಿಂದು ಮಾಧವ
- ಪ್ರಯಾಗದ ವೇಣಿ ಮಾಧವ
- ರಾಮೇಶ್ವರದ ಸೇತು ಮಾಧವ
- ತಿರುವನಂತಪುರದ ಸುಂದರ ಮಾಧವ
- ಪೀಠಾಪುರಂನ ಕುಂತೀ ಮಾಧವ
ಮೊದಲ ನಾಲ್ಕು ನಗರಗಳಾದ ಕಾಶಿ, ಪ್ರಯಾಗ (ಅಲಹಾಬಾದ್), ರಾಮೇಶ್ವರ ಮತ್ತು ತಿರುವನಂತಪುರ ಎಲ್ಲರಿಗೂ ಚಿರಪರಿಚಿತ. ಐದನೆಯದಾದ ಪೀಠಾಪುರಂ ಆಂಧ್ರ ರಾಜ್ಯದ ಕಾಕಿನಾಡದ ಬಳಿ ಇರುವ ಪಟ್ಟಣ. ದತ್ತಾತ್ರೇಯನ ಅವತಾರಯೆಂದು ನಂಬಿರುವ ಶ್ರೀಪಾದ ಶ್ರೀವಲ್ಲಭರು ಬಹಳ ದಿನ ಬದುಕಿ ಬಾಳಿದ ಸ್ಥಳ. ಕನ್ನಡದ ಹೆಮ್ಮೆಯ ಚಲನ ಚಿತ್ರ "ಶ್ರೀ ಕೃಷ್ಣದೇವರಾಯ" ದಲ್ಲಿ ಬಂದಿರುವ "ಬಾ ವೀರ ಕನ್ನಡಿಗ" ಮತ್ತು "ಬೆಳಗಲಿ ಬೆಳಗಲಿ ವಿಜಯನಗರ ಸಾಮ್ರಾಜ್ಯ ಬೆಳಗಲಿ" ಎನ್ನುವ ವೀರಗೀತೆಗಳನ್ನು ಹಾಡಿರುವ ನಾಗೇಶ್ವರ ರಾವ್ ಈ ಪೀಠಾಪುರಂನವರು. ಅವರು ಪೀಠಾಪುರಂ ನಾಗೇಶ್ವರ ರಾವ್ ಎಂದೇ ಪರಿಚಿತರು.
*****
ಇಷ್ಟಕ್ಕೂ ಈ ಮಾಧವ ಯಾರು? ಕೇಶವ ಮತ್ತು ಮಾಧವ ಎನ್ನುವ ಪದಗಳನ್ನು ಜೊತೆಯಾಗಿ ಉಪಯೋಗಿಸುತ್ತಾರೆ. ಇದಕ್ಕೆ ಏನಾದರೂ ಸಂಬಂಧವಿದೆಯೇ? ಇವು ಸಹಜವಾದ ಪ್ರಶ್ನೆಗಳು. ಶ್ರೀ ಮಹಾವಿಷ್ಣುವಿನ 24 ಹೆಸರುಗಳು ಕೇಶವಾದಿ ಚತುರ್ವಿಂಶತಿ ನಾಮಗಳು ಎಂದು ಪ್ರಸಿದ್ಧವಾಗಿವೆ. ಶ್ರೀ ಕನಕದಾಸರ "ಈಶ ನಿನ್ನ ಪಾದ ಭಜನೆ ಆಸೆಯಿಂದ ಮಾಡುವೆನು..." ಎನ್ನುವ ಕೃತಿ ಕೇಶವನಾಮವೆಂದೇ ಪ್ರಸಿದ್ಧವಾಗಿದೆ. ಮಹಾವಿಷ್ಣುವಿನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳು ಹಿಡಿದಿದ್ದಾನೆ ಎಂದು ವರ್ಣಿತವಾಗಿವೆ. ಈ ನಾಲ್ಕು ವಸ್ತುಗಳನ್ನು ಬೇರೆ ಬೇರೆ ರೀತಿಯಲ್ಲಿ ಹಿಡಿದರೆ ಒಟ್ಟು 24 ರೂಪಗಳಾಗುತ್ತವೆ. ಶಂಖ. ಚಕ್ರ, ಗದ, ಪದ್ಮಗಳನ್ನು ಹಿಡಿರುವ ರೂಪ ಕೇಶವ ರೂಪ. ಬೇಲೂರು ಮುಂತಾದ ಚನ್ನಕೇಶವ ಮಂದಿರಗಳಲ್ಲಿ ಇವನ್ನು ಕಾಣಬಹುದು. ಚಕ್ರ, ಶಂಖ, ಪದ್ಮ, ಗದೆ ಹಿಡಿದಿರುವ ರೂಪವೇ ಮಾಧವ ರೂಪ. ಈ ಸಂಚಿಕೆಯ ಮೇಲೆ ಕೊಟ್ಟಿರುವ ಬಿಂದು ಮಾಧವ ವಿಗ್ರಹದಲ್ಲಿ ಇದನ್ನು ಕಾಣಬಹುದು. ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ Keshava to Krishna ಎಂಬ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ.
ನೇಪಾಳ ದೇಶದ ಗಂಡಕಿ ನದಿ ಸಾಲಿಗ್ರಾಮ ಶಿಲೆಗಳಿಗೆ ಹೆಸರುವಾಸಿ. ಈಗಲೂ ಜನರು ಸಾಲಿಗ್ರಾಮಗಳನ್ನು ಪಡೆಯಲು ಅಲ್ಲಿಗೆ ಹೋಗುತ್ತಾರೆ. ಆ ಪ್ರದೇಶದಲ್ಲಿ ಬಹಳ ಹಿಂದೆ ಅಗ್ನಿ ಬಿಂದು ಎನ್ನುವ ಋಷಿ ತಪಸ್ಸು ಮಾಡುತ್ತಿದ್ದನಂತೆ. ಅವನ ತಪಸ್ಸಿಗೆ ಮೆಚ್ಚಿ ಮಹಾವಿಷ್ಣುವು ಮಾಧವ ರೂಪದಲ್ಲಿ ಅವನಿಗೆ ದರ್ಶನ ಕೊಟ್ಟು ಕಾಶಿಯಲ್ಲಿ ಮಾಧವನ ಮಂದಿರವನ್ನು ನಿರ್ಮಾಣ ಮಾಡಿ ಅದಕ್ಕೆ "ಬಿಂದು ಮಾಧವ" ಎಂದು ಹೆಸರಿಡಬೇಕೆಂದು ನಿರ್ದೇಶಿಸಿದನಂತೆ. ಆದ ಕಾರಣ ಬಿಂದು ಮಾಧವನ ದೇವಾಲಯ ಬಂತು!
*****
ಈಗಾಗಲೇ ಈ ಸಂಚಿಕೆ ಬಹಳ ದೀರ್ಘವಾಯಿತು. ನಾವು ಹೊರಟಿದ್ದು "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥ ಮತ್ತು ಗುಹ್ಯರ್ಥ ಹುಡುಕಲು. ಅಲ್ಲಿ ಇರುವ ಅನೇಕ ಪದಗಳಲ್ಲಿ ನಾವು ಗಮನಿಸಿದ್ದು ಹತ್ತು ಪದ ಪುಂಜಗಳನ್ನು. ಅದರಲ್ಲಿ ಒಂದೇ ಇಷ್ಟು ದೀರ್ಘವಾಯಿತು.
ಹೂವ ತರುವರ ಮನೆಗೆ ಎಂಬ ಕೃತಿಯಲ್ಲಿ ಶ್ರೀ ಪುರಂದರದಾಸರು "ಬಿಂದು ಗಂಗೋದಕ" ಎಂದು ಪ್ರಯೋಗಿಸಿದ್ದಾರೆ. ಬಿಂದು ಎನ್ನುವ ಪದಕ್ಕೆ ಕನ್ನಡ, ಸಂಸ್ಕೃತ ಮತ್ತನೇಕ ಭಾರತೀಯ ಭಾಷೆಗಳಲ್ಲಿ ಚುಕ್ಕೆ, ಸೊನ್ನೆ ಮತ್ತು ಒಂದು ನೀರಿನ ಹನಿ ಎನ್ನುವ ಅರ್ಥಗಳಿವೆ. ಸಾಮಾನ್ಯವಾಗಿ ಈ ಪದ ಹಾಡುವಾಗ ಅಥವಾ ಕೇಳುವಾಗ ಈ ಪದಕ್ಕೆ ಒಂದು ತೊಟ್ಟು ನೀರು ಎಂದು ಅರ್ಥ ಮಾಡುತ್ತೇವೆ. ಪುರಂದರದಾಸರು ಉಪಯೋಗಿಸುವ ವಿಶೇಷಾರ್ಥ ಅಥವಾ ಇದರಲ್ಲಿ ಹುದುಗಿರುವ ಗುಹ್ಯಾರ್ಥ ಕೇವಲ ಒಂದು ತೊಟ್ಟು ನೀರಲ್ಲ. ಕಾಶಿ ಯಾತ್ರೆಯಲ್ಲಿ ಬಿಂದು ಮಾಧವನ ದರ್ಶನ ಮಾಡಿ, ಬಿಂದು ಮಾಧವನ ಘಟ್ಟಕ್ಕೆ ಹೋಗಿ ಪ್ರಯಾಸದಿಂದ ತಂದ ಗಂಗೋದಕ. ಯಾವುದೋ ಒಂದು ತೊಟ್ಟು ನೀರಲ್ಲ!
ಎಲ್ಲರಿಗೂ ಕಾಶಿಯಾತ್ರೆ ಮಾಡಿ ಬಿಂದು ಮಾಧವನ ಘಟ್ಟದ ಗಂಗೋದಕ ತರಲು ಆಗುವುದಿಲ್ಲ. ಹಾಗಾದರೆ ಏನು ಮಾಡಬೇಕು? ಅದಕ್ಕೊಂದು ಸುಲಭೋಪಾಯವಿದೆ. ನೀರನ್ನು ಅರ್ಪಿಸುವಾಗ ಒಂದೇ ಮನಸ್ಸಿನಿಂದ "ನಾನು ತಂದಿರುವ ಈ ನೀರನ್ನೇ ನೀನು ಕೃಪೆಮಾಡಿ ಬಿಂದು ಮಾಧವನ ಘಟ್ಟದ ಗಂಗೋದಕ ಎಂದು ಸ್ವೀಕರಿಸು" ಎಂದು ಕೇಳಿಕೊಂಡರೆ ಆ ಮಹಾಮಹಿಮ ಹಾಗೆಯೇ ಸ್ವೀಕರಿಸುತ್ತಾನಂತೆ. ಅದರಲ್ಲಿ ನಮಗೆ ಅಲ್ಲಾಡದ ವಿಶ್ವಾಸ ಬೇಕು. ಗಟ್ಟಿ ನಂಬಿಕೆ ಬಕು. "ಗಂಗೇಚ ಯಮುನೇಚೈವ" ಎಂಬ ಮಂತ್ರ ಹೇಳುವಾಗ ಇದು ನಿಜವಾಗಿ ಆಗುತ್ತದೆ, ಕೇವಲ ಶಬ್ದಗಳಲ್ಲ ಎನ್ನುವ ಧೃಡ ಭರವಸೆ, ಶ್ರದ್ಧೆಗಳು ಬೇಕು.
*****
ಒಂದು ಶಬ್ದದ ಗೂಡಾರ್ಥಕ್ಕೇ ಇಷ್ಟಾಯಿತು. ಮಿಕ್ಕವುಗಳ ವಿಶೇಷತೆಯನ್ನು ಮುಂದೆ ಆದಾಗ ಆದಾಗ ನೋಡೋಣ!
ಗೊಢಾರ್ಥದ ಸುಳಿವನ್ನು ಹುಡುಕುತ್ತ ನಮಗೆ ಸಾಕಷ್ಟು ವಿಷಯಗಳನ್ನು ಅರಿವುಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ತುಂಬ ಸೊಗಸಾದ ಲೇಖನ🙏
ReplyDeleteತುಂಬಾ ಚೆನ್ನಾಗಿದೆ ಧನ್ಯವಾದಗಳು
ReplyDeleteVery nice & wishing you the best in all your endeavours. 👌👍🙏🙏
ReplyDelete*ಬಿಂದು ಗಂಗೋದಕ* ದ ಗೂಢಾರ್ಥ ಇವತ್ತೇ ತಿಳಿದದ್ದು ಸರ್. ಭಗವಂತನು ಪತ್ರಂ, ಪುಷ್ಪಂ ಫಲಂ, ತೋಯಂ ಅಂತ ಹೇಳಿದಂತೆ ಒಂದು ತೊಟ್ಟು ನೀರು ಅಂತಾನೇ ತಿಳಿದಿದ್ದೆ . (ಯಾರಿಗೆ ಸಾಧ್ಯವಿಲ್ಲವೋ ಅವರು ಸಾಮಾನ್ಯ ನೀರನ್ನೇ ಬಿಂದು ಗಂಗೋದಕವೆಂದು ಭಾವಿಸಿ ಶ್ರೀ ಹರಿಗರ್ಪಿಸಿದರೆ ಅದನ್ನೂ ಅವನು ಸ್ವೀಕರಿಸುವ ಕೃಪೆ ಮಾಡುವನೆಂಬುದು ಸಂತಸದ ವಿಷಯ.) 🙏ಇತ್ತೀಚೆಗೆ ಕಾಶಿಯ ವಿಶ್ವನಾಥನ ಜೊತೆಗೆ ಕಾಲಭೈರವ ಹಾಗೂ ಬಿಂದುಮಾಧವನ ದರ್ಶನ ಮಾಡಿದ ನೆನಪು ತಾಜಾ ಆಯಿತು. ಕ್ಷೇತ್ರಪಾಲಕ ಕಾಲಭೈರವನ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದೆ ಆದರೆ ಬಿಂದುಮಾಧವನ ದೇವಾಲಯದ ಬಗ್ಗೆ ಮಾಹಿತಿಯೇ ಇರಲಿಲ್ಲ. ಬಿಂದುಮಾಧವ ಅನ್ನುವ ಹೆಸರು ಹೇಗೆ ಬಂತು ಎಂದು ಕೂಡಾ ತಿಳಿಯಿತು. ಬೇರೆ ಅನೇಕ ಭವ್ಯ ದೇವಾಲಯಗಳಂತೆ ಇದೂ ಕೂಡಾ ಮತಾಂಧರ ದೆಸೆಯಿಂದ ಈ ರೀತಿ ಆಗಿರುವುದು ತಿಳಿದಾಗ ಮನಸ್ಸು ಖಿನ್ನವಾಗುತ್ತದೆ 😥ಆ ಕಾಲದ ಕೆಲವೊಂದು ದೈವಭಕ್ತರ ಧೈರ್ಯದಿಂದ ಇಷ್ಟಾದರೂ ಉಳಿದಿದೆ ಎಂಬುದೊಂದು ಸಮಾಧಾನದ ವಿಷಯ. ಒಟ್ಟಿನಲ್ಲಿ ಇಂತಹ ಲೇಖನಗಳಿಂದ ನಮ್ಮಂತಹ ಸಾಮಾನ್ಯ ಜನರಿಗೆ ಜ್ಙಾನಪ್ರಸಾರ ಮಾಡುತ್ತಿರುವ ನಿಮಗೆ ಅನಂತಾನಂತ ಧನ್ಯವಾದಗಳು 🙏
ReplyDeleteBindu Madhava, very nice to know several things. Ur…..
ReplyDeleteಈ ಲೇಖನದಿಂದ ಅನೇಕ ವಿಷಯಗಳು ತಿಳಿದವು. ಬಿಂದು ಗಂಗೋದಕ ಎಂದರೆ ನಾನು ಕೂಡ ಒಂದು ತೊಟ್ಟು ನೀರು ಎಂತಲೇ ಭಾವಿಸಿದ್ದೆ ಅರಿವನ್ನು ಮೂಡಿಸಿದ್ದಕ್ಕೆ ಧನ್ಯವಾದಗಳು
ReplyDelete