Showing posts with label Purandaradasa. Show all posts
Showing posts with label Purandaradasa. Show all posts

Sunday, December 8, 2024

ಬಿಂದು ಗಂಗೋದಕ

ನಾವು ಅರವತ್ತು-ಅರವತ್ತೈದು ವರುಷಗಳ ಹಿಂದೆ ಶಾಲೆಗಳಲ್ಲಿ ಓದುತ್ತಿದ್ದಾಗ ಕೆಲವು ಕವನಗಳನ್ನೂ ಮತ್ತು ಗದ್ಯಕಾವ್ಯ ಅಥವಾ ಚಂಪೂ ಕಾವ್ಯಗಳ ಭಾಗಗಳನ್ನು ಕನ್ನಡ ಪಠ್ಯ ಪುಸ್ತಕಗಳಲ್ಲಿ ಸೇರಿಸಿರುತ್ತಿದ್ದರು. ಪಠ್ಯ ಪುಸ್ತಕಗಳಲ್ಲಿ ಈ ಭಾಗದ ನಂತರ "ಕವಿ-ಕಾವ್ಯ ವಿಚಾರ" ಎನ್ನುವ ಶೀರ್ಷಿಕೆಯಡಿ ಕೆಲವು ಸಾಲು ಕವಿಯ ಮತ್ತು ಆ ಕಾವ್ಯದ ಹಿನ್ನೆಲೆಯ ಬಗ್ಗೆ ಕೊಟ್ಟಿರುತ್ತಿದ್ದರು. ಯಾವುದೇ ಸಾಹಿತ್ಯದ ಭಾಗ ಅರ್ಥವಾಗಬೇಕಿದ್ದರೆ ಆ ಕೃತಿಯ ಕರ್ತೃ (ಕೃತಿ ರಚನೆ ಮಾಡಿವರು), ಅವರ ಕಾಲ (ಜೀವಿಸಿದ್ದ ಸಮಯ) ಮತ್ತು ದೇಶ (ಬದುಕಿದ್ದ ಪರಿಸರ) ಇವುಗಳ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇರಬೇಕು. ಇಲ್ಲದೆ ಹೋದರೆ ಆ ಕೃತಿಯ ಪೂರ್ಣ ಪರಿಚಯ ಆಗುವುದಿಲ್ಲ. ನಾವು ಕೃತಿಗಳನ್ನು ಅವಲೋಕಿಸುವುದು ಇಂದಿನ ಕಾಲದಲ್ಲಿ. ನಾವು ಬದುಕುವುದು ನಮ್ಮ ಪರಿಸರದಲ್ಲಿ. ಓದುವ ಕೃತಿಯಾದರೋ ಎಂದೋ ರಚನೆಯಾದದ್ದಿರಬಹುದು. ಕೃತಿಯಲ್ಲಿ ಕವಿ ಅಂದು ಕಂಡ ಪರಿಸರ ಮತ್ತು ಸಮಾಜದ ಪ್ರತಿಬಿಂಬ ಕೊಟ್ಟಿರುತ್ತಾನೆ. ಕೊಂಚವಾದರೂ ಇವುಗಳ ಪರಿಚಯ ಇಲ್ಲದಿದ್ದರೆ ಅದನ್ನು ತಿಳಿಯುವುದು ಹೇಗೆ? ಈ ವಿಷಯದ ಬಗ್ಗೆ ಹೆಚ್ಚು ತಿಳಿಯಲು "ಕಾರಿಹೆಗ್ಗಡೆಯ ಮಗಳು" ಎನ್ನುವ ಸಂಚಿಕೆಯಲ್ಲಿ ಈ ವಿಷಯದ ಬಗ್ಗೆ ಕೊಟ್ಟಿರುವ ವಿವರಣೆಯನ್ನು ನೋಡಬಹುದು. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಕಾಶಿ ನಮ್ಮ ದೇಶದ ಅತ್ಯಂತ ಪ್ರಮುಖ ಕ್ಷೇತ್ರಗಲ್ಲಿ ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪಟ್ಟಣಕ್ಕೆ ವಾರಾಣಸಿ ಮತ್ತು ಬನಾರಸ್ ಎಂದೂ ಹೆಸರುಂಟು. ಈ ಹೆಸರುಗಳು ಹೇಗೆ ಬಂದವು, ಅವುಗಳ ವಿಶೇಷಗಳು ಏನು ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಈ ಕಾಶಿ ಕ್ಷೇತ್ರ ಸಂದರ್ಶಿಸಲು  ಹೋಗುವ ಶ್ರದ್ದಾಳು ಜನಗಳು ವಿಶ್ವನಾಥನ ದೇವಾಲಯವನ್ನು ನೋಡಿ ಹಿಂದಿರುಗುತ್ತಾರೆ. ಆದರೆ ಕಾಶಿ ಕ್ಷೇತ್ರಕ್ಕೆ ಮೂವರು ಮುಖ್ಯ ಅಧಿದೇವತೆಗಳಿದ್ದಾರೆ ಎಂದು ಹೇಳುತ್ತಾರೆ. ಅವರುಗಳು ವಿಶ್ವನಾಥ, ಕಾಲಭೈರವ ಮತ್ತು ಬಿಂದು ಮಾಧವ. ವಾರಾಣಸಿ ಅಥವಾ ಕಾಶಿ ನಗರ ಇರುವ ಪ್ರದೇಶದ ಗಂಗಾನದಿಯ ದಡವನ್ನು ಅನೇಕ ಘಟ್ಟಗಳೆಂದು (ಘಾಟ್ ಎಂದು ಪ್ರಸಿದ್ಧ) ವಿಂಗಡಿಸಿದ್ದಾರೆ. ಈ ಘಟ್ಟಗಳಿಗೆ ಆಯಾಯಾ ಹೆಸರುಗಳು ಬರಲು ಅನೇಕ ಕಾರಣಗಳಿವೆ. ಇದರಲ್ಲಿ ಮಣಿಕರ್ಣಿಕಾ ಘಾಟ್ ಬಹಳ ಪ್ರಸಿದ್ಧ. ಇಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಅನೇಕ ಚಿತೆಗಳು ಉರಿಯುತ್ತಿರುವುದನ್ನು ಕಾಣಬಹುದು. ಮೃತರ ದೇಹಗಳಿಗೆ ಇಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಉನ್ನತ ಲೋಕಗಳು ಮೃತರಿಗೆ ಸಿಗುತ್ತವೆ ಎಂದು ಪ್ರಬಲವಾದ ನಂಬಿಕೆ. 

ಮಣಿಕರ್ಣಿಕಾ ಘಾಟ್ ಪ್ರದೇಶವನ್ನು ಮೊದಲು ಮಾಡಿಕೊಂಡು ಅಸ್ಸಿ ಘಾಟ್ ವರೆಗೆ (ಅಸ್ಸಿ ನದಿ ಗಂಗೆ ಸೇರುವ ಸ್ಥಳ) ಶಿವಕಾಶಿ ಎಂದೂ, ಮಣಿಕರ್ಣಿಕಾ ಘಾಟ್ ನಿಂದ ಆದಿಕೇಶವ ಘಾಟ್ ವರೆಗೆ ವಿಷ್ಣು ಕಾಶಿ ಎಂದೂ ಕರೆಯುತ್ತಾರೆ. ಈ ಘಟ್ಟಗಳಲ್ಲಿ ಪಂಚಗಂಗಾ ಘಟ್ಟವೂ ಒಂದು. ಇದರ ಬಳಿಯಲ್ಲಿ ಈಗ ಇರುವ ಸಣ್ಣ ದೇವಸ್ಥಾನವೊಂದು "ಬಿಂದುಮಾಧವ ದೇವಸ್ಥಾನ" ಎಂದು ಹೆಸರಾಗಿದೆ. ಅನೇಕ ಜನ ಶ್ರದ್ಧಾಳುಗಳು ಕಾಶಿಯಾತ್ರೆ ಈ ಬಿಂದು ಮಾಧವನ ದರ್ಶನವಿಲ್ಲದೆ ಪೂರ್ತಿಯಾಗದು ಎಂದು ನಂಬುತ್ತಾರೆ. 

*****

ಶ್ರೀ ಪುರಂದರದಾಸರು ವಿಜಯನಗರದ ಕರ್ನಾಟಕ ಸಾಮ್ರಾಜ್ಯ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದ ಕಾಲದಲ್ಲಿ ಜೀವಿಸಿದ್ದರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಶ್ರೀ ಕೃಷ್ಣದೇವರಾಯನ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರು, ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರು ಸಮಕಾಲೀನರು. ಅವರುಗಳ ವಯಸ್ಸಿನಲ್ಲಿ ಸ್ವಲ್ಪ ಅಂತರ ಇದ್ದರೂ ಅವರ ಜೀವಿತದ ಬಹಳ ಕಾಲ ಈ ಮೂವರೂ ವಿಜಯನಗರದಲ್ಲಿ ಬದುಕಿ ಬಾಳಿದವರು. ಶ್ರೀ ಪುರಂದರದಾಸರ ಕಾಲ ಸುಮಾರಾಗಿ 1485 ರಿಂದ 1564 ಎಂದು ನಂಬಲಾಗಿದೆ. 1564ರ ಪುಷ್ಯ ಬಹುಳ ಅಮಾವಾಸ್ಯೆಯಂದು ಅವರು ದೇಹತ್ಯಾಗ ಮಾಡಿದರೆಂದು ಈಗಲೂ ಪುಷ್ಯ ಬಹುಳ ಅಮಾವಾಸ್ಯೆಯಂದು ಅವರ ಆರಾಧನೆಯನ್ನು ನಡೆಸುತ್ತಾರೆ. ಪುರಂದರದಾಸರ ಕಾಲದಲ್ಲಿ ಅವರು ಅನೇಕ ಬಾರಿ ಕಾಶಿ ಕ್ಷೇತ್ರಕ್ಕೆ ಯಾತ್ರೆ ಮಾಡಿದ್ದರು. ಆಗಿನ ದಿನಗಳಲ್ಲಿ ಕಾಶಿ ವಿಶ್ವನಾಥ ಮತ್ತು ಕಾಶಿ ಬಿಂದುಮಾಧವ ಎನ್ನುವ ಎರಡು ವೈಭವೋಪೇತ ದೇವಸ್ಥಾನಗಳು ಇದ್ದವು. ಆದ್ದರಿಂದ ಅವರು ಈ ಎರಡು ದೇವಸ್ಥಾನಗಳನ್ನೂ ನೋಡಿ ದೇವರನಾಮಗಳನ್ನು ರಚಿಸಿದರು. ಇವುಗಳಲ್ಲಿ ಕೆಲವು ಸಿಕ್ಕಿವೆ ಮತ್ತು ಅನೇಕವು ಈಗ ಲಬ್ಧವಿಲ್ಲ. 

1669ರಲ್ಲಿ ಔರಂಗಝೇಬನ ಆಳ್ವಿಕೆಯಲ್ಲಿ ಈ ಸುಂದರವಾದ ಬಿಂದುಮಾಧವ ದೇವಸ್ಥಾನವನ್ನು ಒಡೆದು ಅದರ ಪಕ್ಕ ಮಸೀದಿ ನಿರ್ಮಿಸಿದರು. ದೇವಸ್ಥಾನ ಒಡೆಯುವ ಸುದ್ದಿ ಬಂದಾಗ ದೇವಾಲಯದ ಅರ್ಚಕರು ಮೂಲ ಬಿಂದುಮಾಧವ ಮೂರ್ತಿಯನ್ನು ಗಂಗಾನದಿಯ ನೀರಿನಲ್ಲಿ ಮುಳುಗಿಸಿಟ್ಟಿದ್ದರಂತೆ. ಕೆಲವು ವರುಷಗಳ ನಂತರ ಶಿವಾಜಿ ಮಹಾರಾಜರ ಆಡಳಿತ ಬಂದ ಸಂದರ್ಭದಲ್ಲಿ ಆ ಮೂಲ ವಿಗ್ರಹವನ್ನು ಹೊರತಂದು ಮತ್ತೆ ಪ್ರತಿಷ್ಠಾಪಿಸಿದರಂತೆ. ಇದೆಲ್ಲ ಅಂತೇ ಕಂತೆ ಪುರಾಣವಲ್ಲ. ಬಿಂದು ಮಾಧವ ದೇವಸ್ಥಾನದ ಸೊಗಸನ್ನು ಆ ಕಾಲದಲ್ಲಿ ನಮ್ಮ ದೇಶ ನೋಡಲು ಬಂದ ಹೊರ ದೇಶದ ಯಾತ್ರಿಕರು ತಮ್ಮ ಲೇಖನಗಲ್ಲಿ ಬರೆದಿಟ್ಟಿರುವ ದಾಖಲೆಗಳಿವೆ. ಇದೆ ರೀತಿ ಮಲ್ಲಿಕಾಫರ್ ಶ್ರೀರಂಗದ ದೇವಾಲಯವನ್ನು ಲೂಟಿ ಮಾಡಿದಾಗ ಅನೇಕರು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದರಿಂದ ಇಂದು ನಾವು ಶ್ರೀರಂಗದ ದೇವಾಲಯ ನೋಡುತ್ತಿದ್ದೇವೆ, 

ಶ್ರೀ ಪುರಂದರದಾಸರು ಈ ಬಿಂದು ಮಾಧವನ ದರ್ಶನ ಮಾಡಿದ್ದರಿಂದ ತಮ್ಮ ಕೃತಿಗಳಲ್ಲಿ "ಬಿಂದು ಮಾಧವ" ಮೂರ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವನ ಸ್ಮರಣೆಯನ್ನು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ಅವರ ಹೆಚ್ಚು ಜನಪ್ರಿಯ ಕೃತಿಗಳಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೆ ಬಿಂದಿಗೆಯ" ಎನ್ನುವುದೂ ಒಂದು. ಈ ಕೃತಿಯಲ್ಲಿ "ಬಿಂದು ಮಾಧವನ ಘಟ್ಟಕೆ ಹೋಗುವೆ ತಾರೆ ಬಿಂದಿಗೆಯ" ಎನ್ನುವ ಸಾಲು ಇದೆ. ನಾನು ಮೊದಲು ಈ ಕೃತಿ ಕೇಳಿದ್ದು ಸುಮಾರು ಐದು ವರುಷಗಳವನಿದ್ದಾಗ, ನನ್ನ ತಾಯಿ ಹಾಡಿದ್ದು. ಬಿಂದು ಮಾಧವನ ಘಟ್ಟ ಎಂದರೆ ಏನು ಎಂದು ಕೇಳಿ ಸರಿಯಾಗಿ ಉತ್ತರ ಸಿಗದೇ ಮನಸ್ಸಿನಲ್ಲಿ ಕುಳಿತಿತ್ತು. ನಂತರ ಅದರ ಹಿಂದೆ ಹೋಗಿ ಸಂಗ್ರಹಿಸಿದ ವಿವರಗಳು ಈಗ ಈ ಸಂಚಿಕೆಯ ಮೂಲಕ ಹೊರಬಂದಿರುವುದು ಒಂದು ವಿಶೇಷವೇ ಸರಿ! 

*****

ನಮ್ಮ ದೇಶದಲ್ಲಿ ಮುಖ್ಯವಾಗಿ ಐದು ಮಾಧವನ ದೇವಸ್ಥಾನಗಳು ಇವೆ. ಅವು ಯಾವುವೆಂದರೆ:
  1. ಕಾಶಿಯ ಬಿಂದು ಮಾಧವ 
  2. ಪ್ರಯಾಗದ ವೇಣಿ ಮಾಧವ 
  3. ರಾಮೇಶ್ವರದ ಸೇತು ಮಾಧವ 
  4. ತಿರುವನಂತಪುರದ ಸುಂದರ ಮಾಧವ 
  5. ಪೀಠಾಪುರಂನ ಕುಂತೀ ಮಾಧವ 
ಮೊದಲ ಮೂರು ಹೆಸರು ಕೆಲವು ವರುಷಗಳ ಹಿಂದಿನವರೆಗೂ ಚಾಲ್ತಿಯಲ್ಲಿದ್ದವು. ಅನೇಕರು ತಮ್ಮ ಮಕ್ಕಳಿಗೆ ಬಿಂದುಮಾಧವ, ಸೇತುಮಾಧವ ಮತ್ತು ವೇಣಿಮಾಧವ ಎಂದು ಹೆಸರಿಡುತ್ತಿದ್ದರು. ನಾನು ಶಾಲೆಯಲ್ಲಿದ್ದ ಕಾಲದಲ್ಲಿ ಈ ಹೆಸರಿನ ಹುಡುಗರು ನಮ್ಮ ಶಾಲೆಗಲ್ಲಿ ಓದುತ್ತಿದ್ದರು. ಈಗ ನವೀನ ಹೆಸರುಗಳ ಭರಾಟೆಯಲ್ಲಿ ಇದೆಲ್ಲ ಮರೆತುಹೋಗಿದೆ. 

ಮೊದಲ ನಾಲ್ಕು ನಗರಗಳಾದ ಕಾಶಿ, ಪ್ರಯಾಗ (ಅಲಹಾಬಾದ್), ರಾಮೇಶ್ವರ ಮತ್ತು ತಿರುವನಂತಪುರ ಎಲ್ಲರಿಗೂ ಚಿರಪರಿಚಿತ. ಐದನೆಯದಾದ ಪೀಠಾಪುರಂ ಆಂಧ್ರ ರಾಜ್ಯದ ಕಾಕಿನಾಡದ ಬಳಿ ಇರುವ ಪಟ್ಟಣ. ದತ್ತಾತ್ರೇಯನ ಅವತಾರಯೆಂದು ನಂಬಿರುವ ಶ್ರೀಪಾದ ಶ್ರೀವಲ್ಲಭರು ಬಹಳ ದಿನ ಬದುಕಿ ಬಾಳಿದ ಸ್ಥಳ. ಕನ್ನಡದ ಹೆಮ್ಮೆಯ ಚಲನ ಚಿತ್ರ "ಶ್ರೀ ಕೃಷ್ಣದೇವರಾಯ" ದಲ್ಲಿ ಬಂದಿರುವ "ಬಾ ವೀರ ಕನ್ನಡಿಗ" ಮತ್ತು "ಬೆಳಗಲಿ ಬೆಳಗಲಿ ವಿಜಯನಗರ ಸಾಮ್ರಾಜ್ಯ ಬೆಳಗಲಿ" ಎನ್ನುವ ವೀರಗೀತೆಗಳನ್ನು ಹಾಡಿರುವ ನಾಗೇಶ್ವರ ರಾವ್ ಈ ಪೀಠಾಪುರಂನವರು. ಅವರು ಪೀಠಾಪುರಂ ನಾಗೇಶ್ವರ ರಾವ್ ಎಂದೇ ಪರಿಚಿತರು. 

*****

ಇಷ್ಟಕ್ಕೂ ಈ ಮಾಧವ ಯಾರು? ಕೇಶವ ಮತ್ತು ಮಾಧವ ಎನ್ನುವ ಪದಗಳನ್ನು ಜೊತೆಯಾಗಿ ಉಪಯೋಗಿಸುತ್ತಾರೆ. ಇದಕ್ಕೆ ಏನಾದರೂ ಸಂಬಂಧವಿದೆಯೇ? ಇವು ಸಹಜವಾದ ಪ್ರಶ್ನೆಗಳು. ಶ್ರೀ ಮಹಾವಿಷ್ಣುವಿನ 24 ಹೆಸರುಗಳು ಕೇಶವಾದಿ ಚತುರ್ವಿಂಶತಿ ನಾಮಗಳು ಎಂದು ಪ್ರಸಿದ್ಧವಾಗಿವೆ. ಶ್ರೀ ಕನಕದಾಸರ "ಈಶ ನಿನ್ನ ಪಾದ ಭಜನೆ ಆಸೆಯಿಂದ ಮಾಡುವೆನು..." ಎನ್ನುವ ಕೃತಿ ಕೇಶವನಾಮವೆಂದೇ ಪ್ರಸಿದ್ಧವಾಗಿದೆ. ಮಹಾವಿಷ್ಣುವಿನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳು ಹಿಡಿದಿದ್ದಾನೆ ಎಂದು ವರ್ಣಿತವಾಗಿವೆ. ಈ ನಾಲ್ಕು ವಸ್ತುಗಳನ್ನು ಬೇರೆ ಬೇರೆ ರೀತಿಯಲ್ಲಿ ಹಿಡಿದರೆ ಒಟ್ಟು 24 ರೂಪಗಳಾಗುತ್ತವೆ. ಶಂಖ. ಚಕ್ರ, ಗದ, ಪದ್ಮಗಳನ್ನು ಹಿಡಿರುವ ರೂಪ ಕೇಶವ ರೂಪ. ಬೇಲೂರು ಮುಂತಾದ ಚನ್ನಕೇಶವ ಮಂದಿರಗಳಲ್ಲಿ ಇವನ್ನು ಕಾಣಬಹುದು. ಚಕ್ರ, ಶಂಖ, ಪದ್ಮ, ಗದೆ ಹಿಡಿದಿರುವ ರೂಪವೇ ಮಾಧವ ರೂಪ. ಈ ಸಂಚಿಕೆಯ ಮೇಲೆ ಕೊಟ್ಟಿರುವ ಬಿಂದು ಮಾಧವ ವಿಗ್ರಹದಲ್ಲಿ  ಇದನ್ನು ಕಾಣಬಹುದು. ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ  Keshava to Krishna ಎಂಬ ಸಂಚಿಕೆಗೆ  ಇಲ್ಲಿ ಕ್ಲಿಕ್ ಮಾಡಿ

ನೇಪಾಳ ದೇಶದ ಗಂಡಕಿ ನದಿ ಸಾಲಿಗ್ರಾಮ ಶಿಲೆಗಳಿಗೆ ಹೆಸರುವಾಸಿ. ಈಗಲೂ ಜನರು ಸಾಲಿಗ್ರಾಮಗಳನ್ನು ಪಡೆಯಲು ಅಲ್ಲಿಗೆ ಹೋಗುತ್ತಾರೆ. ಆ ಪ್ರದೇಶದಲ್ಲಿ ಬಹಳ ಹಿಂದೆ ಅಗ್ನಿ ಬಿಂದು ಎನ್ನುವ ಋಷಿ ತಪಸ್ಸು ಮಾಡುತ್ತಿದ್ದನಂತೆ. ಅವನ ತಪಸ್ಸಿಗೆ ಮೆಚ್ಚಿ ಮಹಾವಿಷ್ಣುವು ಮಾಧವ ರೂಪದಲ್ಲಿ ಅವನಿಗೆ ದರ್ಶನ ಕೊಟ್ಟು ಕಾಶಿಯಲ್ಲಿ ಮಾಧವನ ಮಂದಿರವನ್ನು ನಿರ್ಮಾಣ ಮಾಡಿ ಅದಕ್ಕೆ "ಬಿಂದು ಮಾಧವ" ಎಂದು ಹೆಸರಿಡಬೇಕೆಂದು ನಿರ್ದೇಶಿಸಿದನಂತೆ. ಆದ ಕಾರಣ ಬಿಂದು ಮಾಧವನ ದೇವಾಲಯ ಬಂತು!

*****

ಈಗಾಗಲೇ ಈ ಸಂಚಿಕೆ ಬಹಳ ದೀರ್ಘವಾಯಿತು. ನಾವು ಹೊರಟಿದ್ದು "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥ ಮತ್ತು ಗುಹ್ಯರ್ಥ ಹುಡುಕಲು. ಅಲ್ಲಿ ಇರುವ ಅನೇಕ ಪದಗಳಲ್ಲಿ ನಾವು ಗಮನಿಸಿದ್ದು ಹತ್ತು ಪದ ಪುಂಜಗಳನ್ನು. ಅದರಲ್ಲಿ ಒಂದೇ ಇಷ್ಟು ದೀರ್ಘವಾಯಿತು. 

ಹೂವ ತರುವರ ಮನೆಗೆ ಎಂಬ ಕೃತಿಯಲ್ಲಿ ಶ್ರೀ ಪುರಂದರದಾಸರು "ಬಿಂದು ಗಂಗೋದಕ" ಎಂದು ಪ್ರಯೋಗಿಸಿದ್ದಾರೆ. ಬಿಂದು ಎನ್ನುವ ಪದಕ್ಕೆ ಕನ್ನಡ, ಸಂಸ್ಕೃತ ಮತ್ತನೇಕ ಭಾರತೀಯ ಭಾಷೆಗಳಲ್ಲಿ ಚುಕ್ಕೆ, ಸೊನ್ನೆ ಮತ್ತು ಒಂದು ನೀರಿನ ಹನಿ ಎನ್ನುವ ಅರ್ಥಗಳಿವೆ. ಸಾಮಾನ್ಯವಾಗಿ ಈ ಪದ ಹಾಡುವಾಗ ಅಥವಾ ಕೇಳುವಾಗ ಈ ಪದಕ್ಕೆ ಒಂದು ತೊಟ್ಟು ನೀರು ಎಂದು ಅರ್ಥ ಮಾಡುತ್ತೇವೆ. ಪುರಂದರದಾಸರು ಉಪಯೋಗಿಸುವ ವಿಶೇಷಾರ್ಥ ಅಥವಾ ಇದರಲ್ಲಿ ಹುದುಗಿರುವ ಗುಹ್ಯಾರ್ಥ ಕೇವಲ ಒಂದು ತೊಟ್ಟು ನೀರಲ್ಲ. ಕಾಶಿ ಯಾತ್ರೆಯಲ್ಲಿ ಬಿಂದು ಮಾಧವನ ದರ್ಶನ ಮಾಡಿ, ಬಿಂದು ಮಾಧವನ ಘಟ್ಟಕ್ಕೆ ಹೋಗಿ ಪ್ರಯಾಸದಿಂದ ತಂದ  ಗಂಗೋದಕ. ಯಾವುದೋ ಒಂದು ತೊಟ್ಟು ನೀರಲ್ಲ!

ಎಲ್ಲರಿಗೂ ಕಾಶಿಯಾತ್ರೆ ಮಾಡಿ ಬಿಂದು ಮಾಧವನ ಘಟ್ಟದ ಗಂಗೋದಕ ತರಲು ಆಗುವುದಿಲ್ಲ. ಹಾಗಾದರೆ ಏನು ಮಾಡಬೇಕು? ಅದಕ್ಕೊಂದು ಸುಲಭೋಪಾಯವಿದೆ. ನೀರನ್ನು ಅರ್ಪಿಸುವಾಗ ಒಂದೇ ಮನಸ್ಸಿನಿಂದ "ನಾನು ತಂದಿರುವ ಈ ನೀರನ್ನೇ ನೀನು ಕೃಪೆಮಾಡಿ ಬಿಂದು ಮಾಧವನ ಘಟ್ಟದ ಗಂಗೋದಕ ಎಂದು ಸ್ವೀಕರಿಸು" ಎಂದು ಕೇಳಿಕೊಂಡರೆ ಆ ಮಹಾಮಹಿಮ ಹಾಗೆಯೇ ಸ್ವೀಕರಿಸುತ್ತಾನಂತೆ. ಅದರಲ್ಲಿ ನಮಗೆ ಅಲ್ಲಾಡದ ವಿಶ್ವಾಸ ಬೇಕು. ಗಟ್ಟಿ ನಂಬಿಕೆ ಬಕು. "ಗಂಗೇಚ ಯಮುನೇಚೈವ" ಎಂಬ ಮಂತ್ರ ಹೇಳುವಾಗ ಇದು ನಿಜವಾಗಿ ಆಗುತ್ತದೆ, ಕೇವಲ ಶಬ್ದಗಳಲ್ಲ ಎನ್ನುವ ಧೃಡ ಭರವಸೆ, ಶ್ರದ್ಧೆಗಳು ಬೇಕು. 

*****

ಒಂದು ಶಬ್ದದ ಗೂಡಾರ್ಥಕ್ಕೇ ಇಷ್ಟಾಯಿತು. ಮಿಕ್ಕವುಗಳ ವಿಶೇಷತೆಯನ್ನು ಮುಂದೆ ಆದಾಗ ಆದಾಗ ನೋಡೋಣ! 

Thursday, December 5, 2024

ಹೂವು - ಹುಲ್ಲು ಮತ್ತು ಶ್ರೀಕೃಷ್ಣ


ಶ್ರೀಕೃಷ್ಣನ ಶಾಂತಿ ದೂತ ಪ್ರಯತ್ನ ದುರ್ಯೋಧನನ ಮೊಂಡುತನದ ಕಾರಣ ವಿಫಲವಾಗಿದೆ. "ಇಡೀ ಸಾಮ್ರಾಜ್ಯ ನನ್ನದು. ಪಾಂಡವರಿಗೆ ಕೊಡಲು ಏನೂ ಇಲ್ಲ. ಅವರು ಮತ್ತೆ ವನವಾಸ, ಅಜ್ಞಾತವಾಸಗಳಿಗೆ ಮಾತ್ರ ಅಧಿಕಾರಿಗಳು. ಅವರಿಗೆ ಸೂಜಿಮೊನೆಯ ಜಾಗವೂ ಇಲ್ಲ" ಎಂದು ಅವನು ಘೋಷಿಸಿ ಶ್ರೀಕೃಷ್ಣನನ್ನು ಬಂಧಿಸಲು ಆಗದ ಪ್ರಯತ್ನ ನಡೆಸಿಯೂ ಆಯಿತು. ಇನ್ನು ಉಳಿದದ್ದು ಒಂದೇ ದಾರಿ. ಅದು ಧರ್ಮಕ್ಷೇತ್ರ ಕುರುಕ್ಷೇತ್ರದ ಹಾದಿ. ಒಂದು ಕಡೆ ಹನ್ನೊಂದು ಅಕ್ಷೋಹಿಣಿ ಸೈನ್ಯ. ಮತ್ತೊಂದು ಕಡೆ ಏಳು ಅಕ್ಷೋಹಿಣಿ ಸೈನ್ಯ. ಎರಡು ಸೈನ್ಯಗಳ ಮಧ್ಯೆ ನಿಂತು ಅರ್ಜುನ ಗಾಡೀವ ಬಿಸಾಡಿ ಮಂಕನಾಗಿ ನಿಂತೂ ಆಯಿತು. ಗೀತೋಪದೇಶ ನಡೆದು ಮೊದಲ ದಿನದ ಯುದ್ಧ ಪ್ರಾರಂಭವಾಯಿತು. ಮೊದಲ ದಿನದ ಸಂಗ್ರಾಮದಲ್ಲಿ ಎರಡೂ ಕಡೆ ಅನೇಕ ಸಾವು-ನೋವು ಉಂಟಾಗಿ ಸೂರ್ಯಾಸ್ತದಲ್ಲಿ ಕಾಳಗ ನಿಂತಿದೆ. ಯುದ್ಧದಲ್ಲಿ ದಣಿದ, ಆದರೆ ಬದುಕುಳಿದ ವೀರ ಸೈನಿಕರೆಲ್ಲ ತಮ್ಮ ತಮ್ಮ ಬಿಡಾರಗಳ ಕಡೆ ಹೊರಟಿದ್ದಾರೆ. 

ಡೇರೆಗಳನ್ನು ತಲುಪಿದ ನಂತರ ಅವರೆಲ್ಲರ ಮೊದಲ ಕೆಲಸ ತಮ್ಮ ತಮ್ಮ ಶಸ್ತ್ರಗಳನ್ನು ಪಕ್ಕಕ್ಕಿಟ್ಟು, ಭಾರವಾದ ಪೋಷಾಕುಗಳನ್ನು ಕಳಚಿ, ಒಣಗಿದ ಬಾಯಿಗಳಿಗೆ ಸ್ವಲ್ಪ ನೀರು ಕುಡಿಸಿ, ಸಿಕ್ಕಿದ ಆಸನಗಳಿಗೆ ಕುಸಿಯುವುದು. ಈಗ ಸೈನ್ಯದ ಜೊತೆಯಲ್ಲಿ ಬಂದಿದ್ದ ವೈದ್ಯರು ಮತ್ತು ಅವರ ಸಹಾಯಕರಿಗೆ ದಣಿದು ಕುಳಿತ ಈ ವೀರರಿಗೆ ಆಗಿರುವ ಗಾಯಗಳ ರಕ್ತ ಒರೆಸಿ, ಮುಲಾಮು ಹಚ್ಚಿ, ಪಟ್ಟಿ ಕಟ್ಟುವುದು. ಇದಾದ ನಂತರ ಎರಡನೆಯ ಕೆಲಸ ಸುಖೋಷ್ಣವಾದ ನೀರಿನಲ್ಲಿ ಸ್ನಾನಾದಿಗಳು. ಅದೂ ಆದ ಮೇಲೆ ಅವರವರ ಪದ್ಧತಿಯಂತೆ ಅಹ್ನಿಕಾದಿಗಳು. ಹಾಸಿಗೆ ಕಂಡರೆ ಸಾಕೆನಿಸಿದ ವಿಪರೀತ ದಣಿದ ದೇಹಗಳು. ಆದರೆ ಪವಡಿಸುವ ಮುಂಚೆ ಹೊಟ್ಟೆಗೆ ಆಹಾರ ಬೇಕಲ್ಲ. ಸೇನೆಯ ಕ್ರಮಕ್ಕೆ ತಕ್ಕಂತೆ ಆರೋಗಣೆಗೆ ವ್ಯವಸ್ಥೆಗಳು ಆಗಿವೆ. ಬಾಣಸಿಗರು ಅಡುಗೆ ಸಿದ್ಧಪಡಿಸಿದ್ದಾರೆ. ಪರಿಚಾರಿಕರು ಬಡಿಸಲು ತಯಾರಿದ್ದಾರೆ. ಭೋಜನಕ್ಕೆ ಕುಳಿತಿದ್ದರೂ ಎಲ್ಲರ ಮನಸ್ಸು ಅಂದಿನ ಯುದ್ಧದ ಸೋಲು-ಗೆಲವು ಮತ್ತು ಸಾವು-ನೋವುಗಳ ಚಿಂತನೆಯಲ್ಲಿ ತೊಡಗಿವೆ. 

ಪಾಂಡವರ ಬಿಡಾರದಲ್ಲಿ ಐವರು ಅಣ್ಣ-ತಮ್ಮಂದಿರು ಸಾಲಾಗಿ ಊಟಕ್ಕೆ ಕುಳಿತಿದ್ದಾರೆ. ಆರು ಎಲೆಗಳಿಗೆ ಬಡಿಸಿ ಆಗಿದೆ. ಆದರೆ ನಾಲ್ವರು ಸಹೋದರರು ಮತ್ತು ಪಾರ್ಥ ಬಂದಿದ್ದರೂ ಊಟ ಮಾಡುವಹಾಗಿಲ್ಲ. ಆರನೆಯವನಾದ ಪಾರ್ಥಸಾರಥಿ ಏಕೋ ಇನ್ನೂ ಬಂದಿಲ್ಲ. ಕೇಶವನಿಲ್ಲದೆ ಭೋಜನವೆಲ್ಲಿ? ಮಾಧವನನ್ನು ಕರೆತರಲು ದೂತರನ್ನು ಕಳಿಸಿದ್ದಾಯಿತು. ಅವನೇನು ಮಾಡುತ್ತಿದ್ದಾನೆ? ಏಕೆ ತಡವಾಯಿತು? ಅವನು ಎಂದೂ ಸಮಯ ಮೀರುವವನಲ್ಲವಲ್ಲ!

****

ಪಾಂಡವರ ಬಿಡಾರ ತಲುಪಿದ ನಂತರ ಪಾರ್ಥಸಾರಥಿ ಅರ್ಜುನನ ಡೇರೆಯ ಮುಂದೆ ರಥ ನಿಲ್ಲಿಸಿ, ಕ್ರಮದಂತೆ ರಥದಿಂದ ಕೆಳಗಡೆ ಇಳಿದು, ಬಲಗೈ ನೀಡಿ ಪಾರ್ಥನನ್ನು ಕೆಳಗಿಳಿಯಲು ಸಹಾಯ ಮಾಡಿದ್ದಾನೆ. ಪಾರ್ಥ ತನ್ನ ಬಿಡಾರದ ಒಳಗೆ ಹೊರಟ ನಂತರ ತಾನು ಮತ್ತೆ ರಥವೇರಿ ಕುದುರೆಗಳ ಲಾಯದ ಬಳಿ ಬಂದಿದ್ದಾನೆ. ರಥ ನಿಲ್ಲಿಸಿ, ನಾಲ್ಕು ಕುದುರೆಗಳನ್ನು ಅವುಗಳ ಬಂಧನದಿಂದ ಬಿಡುಗಡೆ ಮಾಡಿ, ಲಾಯದ ಒಳಗಡೆ ತಂದಿದ್ದಾನೆ. ಅವುಗಳ ನಿಗದಿತ ಸ್ಥಾನದಲ್ಲಿ ಕಟ್ಟಿ ಒಂದೊಂದಾಗಿ ಅವುಗಳ ಸಣ್ಣ ಗಾಯಗಳಿಗೆ ಮುಲಾಮು ಹಚ್ಚಿ ಮೈದಡವಿದ್ದಾನೆ. ಶ್ರೀಕೃಷ್ಣನ ಚಾಕಚಕ್ಯತೆ ಮತ್ತು ಪಾರ್ಥನ ಗಾಂಡೀವದ ಕಾರಣ ಹೆಚ್ಚು ಗಾಯಗಳಾಗಿಲ್ಲ. ಆದರೂ ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತಿತರ ಕೌರವ ವೀರರ ಸೈನ್ಯ ಸಾಮಾನ್ಯವೇ? "ದಂಡಿನಲ್ಲಿ ಸೋದರಮಾವನೇ?" ಎಂದು ಗಾದೆಯೇ ಇದೆಯಲ್ಲ! ಸಣ್ಣ-ಪಣ್ಣ ಆದರೂ ಗಾಯಗಳು ಗಾಯಗಳು ತಾನೇ? ಕುದುರೆಗಳ ಮುಂದೆ ನೀರಿನ ವ್ಯವಸ್ಥೆ ಮಾಡಿದ್ದಾನೆ. ನೀರು ತಂದು ಅವುಗಳ ಮೈ ತೊಳೆದಿದ್ದಾನೆ. ಅವನನ್ನು ಹುಡುಕಿಕೊಂಡು ಬಂದ ಪಾಂಡವರ ದೂತರು ಅವನ ಕೆಲಸದ ಮಧ್ಯೆ ಮಾತನಾಡಲು ಧೈರ್ಯವಿಲ್ಲದೆ ಸ್ವಲ್ಪ ದೂರದಲ್ಲಿ ಭಯ-ಭಕ್ತಿಯಿಂದ ನಿಂತಿದ್ದಾರೆ. ಮುಂದೇನು?


ಇದೇನು? ಅಷ್ಟೊಂದು ಮಂದಿ ಆಳು-ಕಾಳುಗಳಿದ್ದರೂ ಕೇಶವನು ತಾನೇ ಹುಲ್ಲು ಹೊತ್ತು ತರುತ್ತಿದ್ದಾನೆ! ಎಲ್ಲ ಕುದುರೆಗಳ ಮುಂದೆ ಅಷ್ಟಷ್ಟು ಹಾಕುತ್ತಿದ್ದಾನೆ. ಅವುಗಳು ಹುಲ್ಲು ತಿನ್ನುವಾಗ ಸರದಿಯಂತೆ ಅವುಗಳ ಮೈದಡವುತ್ತಿದ್ದಾನೆ. ಆ ಕುದುರೆಗಳಾದರೋ ಶ್ರೀಕೃಷ್ಣನ ಕೈ ನೆಕ್ಕಿ ತಮ್ಮ ಪ್ರೀತಿ ತೋರಿಸುತ್ತಿವೆ. ಆ ಎಲ್ಲ ಕುದುರೆಗಳು ಸ್ವಲ್ಪ ಹುಲ್ಲು ತಿಂದು, ನೀರು ಕುಡಿದ ನಂತರ ತೃಪ್ತಿಯಿಂದ ಪಾಂಡವರ ಡೇರೆಯ ಕಡೆ ಹೊರಟಿದ್ದಾನೆ. ನೋಡುತ್ತಿದ್ದ ದೂತರು ಮುಂದೆ ಹೋಗಿ ಧರ್ಮರಾಯನಿಗೆ ಎಲ್ಲಾ ವಿಷಯ ತಿಳಿಸಿದ್ದಾರೆ. 

ಡೇರೆಯ ಒಳಗೆ ಬಂದ ಶ್ರೀಕೃಷ್ಣ ಈಗ ತನ್ನ ಸ್ನಾನ-ಆಹ್ನಿಕಗಳನ್ನು ಮುಗಿಸಿ ಭೋಜನಕ್ಕೆ ಒಳಗೆ ಬಂದ. ಶ್ರೀಕೃಷ್ಣನಿಗೆ ಐವರು ಸಹೋದರರು ಎದ್ದು ಗೌರವ ಸೂಚಿಸಿ ಅವನ ಜೊತೆ ಊಟಕ್ಕೆ ಕೂಡುತ್ತಾರೆ. ಯುಧಿಷ್ಠಿರ ಹೇಳುತ್ತಾನೆ:

"ಕುದುರೆಗಳ ಯೋಗಕ್ಷೇಮಕ್ಕೆ ಲಾಯದಲ್ಲಿ ಸೇವಕರಿದ್ದರಲ್ಲ, ಕೃಷ್ಣ. ಅವರು ಮುಂದಿನ ಕೆಲಸ ನೋಡುತ್ತಿದ್ದರು. ಕುದುರೆಗಳಿಗೆ ಹುಲ್ಲು-ಹುರಳಿ-ನೀರು ಕೊಡುವುದು ಅವರ ಕೆಲಸ. ಗಾಯಗಳಿಗೆ ಶುಶ್ರೂಷೆ ಮಾಡಲು ಪಶುವೈದ್ಯರಿದ್ದಾರೆ. ನೀನೇಕೆ ಅದೆಲ್ಲಾ ಮಾಡಿದೆ? ಇಲ್ಲಿ ಬಂದು ನಮ್ಮ ಜೊತೆ ಭೋಜನ ಮಾಡಬಾರದೇ?"

ತನ್ನ ಎಂದಿನ ಮುಗುಳ್ನಗೆಯ ಮಾತಿನಿಂದ ಶ್ರೀಕೃಷ್ಣ ಹೇಳುತ್ತಾನೆ:

"ಬೆಳಗ್ಗಿನಿಂದ ಇಲ್ಲಿವರೆಗೆ ಯುದ್ಧದಲ್ಲಿ ನಮಗೆ ಸಹಾಯ ಮಾಡಲು ಕುದುರುಗಳು ಬೇಕು. ಈಗ ಕುದುರೆಗಳ ಕ್ಷೇಮ ನೋಡಲು ನಮಗೆ ಐದು ನಿಮಿಷ ಪುರಸೊತ್ತಿಲ್ಲವೆಂದರೆ ಹೇಗೆ? ಇದು ಸಾರಥಿಯ ಕರ್ತವ್ಯ. ಕುದುರೆಗಳು ಮೂಕ ಪ್ರಾಣಿಗಳಾದರೂ ಅವಕ್ಕೆ ಎಲ್ಲ ಅರ್ಥವಾಗುತ್ತದೆ. ಸಾರಥಿಯ ಜೊತೆ ಕುದುರೆಗಳ ಬಾಂಧವ್ಯ ಚಕ್ರವತಿಯಾದ ನಿನಗೆ ಗೊತ್ತಾಗುವುಲ್ಲ. ಆಳುಗಳನ್ನು ನಂಬಿ ನನ್ನ ಕರ್ತವ್ಯ ನಾನು ಬಿಡಲಾರೆ. ನಾಳಿನಿಂದ ನೀವು ನನಗೆ ಕಾಯಬೇಡಿ. ನಾನು ಬರುವುದು ತಡವಾಗುತ್ತದೆ. ನಿಮ್ಮ ಪಾಡಿಗೆ ನೀವು ಭೋಜನ ಮುಗಿಸಿ. ನನ್ನ ಸಮಯದಲ್ಲಿ ನಾನು ಬಂದು ಭೋಜನ ಮಾಡುತ್ತೇನೆ. ಚಿಂತೆ ಬೇಡ. "

ಶ್ರೀಕೃಷ್ಣನ ಕಾರ್ಯನಿಷ್ಠೆಗೆ ತಲೆದೂಗುತ್ತಾ ಧರ್ಮಜ ಹೇಳುತ್ತಾನೆ:

"ಶ್ರೀಕೃಷ್ಣನಿಲ್ಲದೆ ಪಾಂಡವರು ಊಟ ಮಾಡುವುದು ಹೇಗೆ? ಅದು ಸಾಧ್ಯವೇಇಲ್ಲ. ನಾಳಿನಿಂದ ನೀನು ಬರುವವರೆಗೆ ನಾವೂ ಬಿಡಾರ ಸುತ್ತಿ ಸೈನಿಕರ ಯೋಗಕ್ಷೇಮ ವಿಚಾರಿಸುತ್ತೇವೆ. ನಂತರ ಆರು ಜನವೂ ಒಟ್ಟಿಗೆ ಭೋಜನ ಮಾಡೋಣ."

ಈಗ ಎಲ್ಲರ ಊಟ ಪ್ರಾರಂಭವಾಗುತ್ತದೆ. 
*****

ಶ್ರೀಕೃಷ್ಣನಲ್ಲಿ ಪಾಂಡವರಿಗೆ, ಪಾಂಚಾಲಿಗೆ ಅಚಲವಾದ ಶ್ರದ್ದೆ-ಭಕ್ತಿ. ಶ್ರೀಕೃಷ್ಣನಿಗೆ ಪಾಂಡವ-ದ್ರೌಪದಿಯರಲ್ಲಿ ಎಲ್ಲಿಲ್ಲದ ಪ್ರೀತಿ-ಗೌರವ. ಪಾಂಡವರು ಶ್ರೀಕೃಷ್ಣನನ್ನು ಅವನು ಬಂದಾಗಲೆಲ್ಲ ಹೂವುಗಳಿಂದ ಸ್ವಾಗತಿಸಿದರು. ಅರಣ್ಯವಾಸದಲ್ಲಿದ್ದಾಗ ಅವನಿಗಾಗಿ ಕಾಡೆಲ್ಲಾ ಹುಡುಕಿ ಸೊಗಸಾದ ಹೂವುಗಳನ್ನು ತಂದರು. ಈಗ ಸಮಯ ಬಂದಾಗ ಶ್ರೀಕೃಷ್ಣನು ಅವರ ಕುದುರೆಗಳಿಗೆ ಹುಲ್ಲನ್ನು ತಂದಿದ್ದಾನೆ. ಅವನಿಗೆ ಚಿಕ್ಕ ಕೆಲಸ, ದೊಡ್ಡ ಕೆಲಸ ಎನ್ನುವ ಭೇದವಿಲ್ಲ. ಹೂವು ತಂದವರ ಮನೆಗೆ ಹುಲ್ಲು ತಂದ, ಶ್ರೀಕೃಷ್ಣ!

ಮಹಾನುಭಾವರಾದ ಶ್ರೀ ಪುರಂದರ ದಾಸರು ಈ ಪ್ರಸಂಗವನ್ನು ವರ್ಣಿಸುವ ರೀತಿ:

ಒಂದುದಳ ಶ್ರೀತುಳಸಿ ಬಿಂದು ಗಂಗೋದಕ 
ಇಂದಿರಾರಮಣನಿಗೆ ಅರ್ಪಿತವೆನುತ 
ಒಂದೇಮನದಲಿ ಸಿಂಧುಶಯನ ಮುಕುಂದಾ ಎನೆ 
ಎಂದೆಂದೂ ವಾಸಿಪನು ಮಂದಿರದ ಒಳಗೆ 

ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ 
ಪರಿಪೂರ್ಣನೆಂದು ಪೂಜೆಯನು ಮಾಡೆ 
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ 
ಸರೀಭಾಗ ಕೊಡುವ ತನ್ನ ಅರಮನೆಯ ಒಳಗೆ 

ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದು 
ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿದ 
ಅಂಡಜಾವಾಹನ ಶ್ರೀ ಪುರಂದರ ವಿಠಲನು 
ತೊಂಡರಿಗೆ ತೊಂಡನಾಗಿ  ಸಂಚರಿಸುತಿಹನು 

ಹೂವ ತರುವರ ಮನೆಗೆ ಹುಲ್ಲ ತರುವ 
ಅವ್ವ ಲಕುಮಿರಮಣ ಇವಗಿಲ್ಲ ಗರುವ 

ಎಷ್ಟು ಸೊಗಸಾಗಿ ಹೂವಿಗೂ, ಹುಲ್ಲಿಗೂ ಇರುವ ಸಂಬಂಧ ಹೇಳಿದ್ದಾರೆ! 

*****

ದೊಡ್ಡವರ ಕೃತಿಗಳಲ್ಲಿ, ವೇದ-ಪುರಾಣ-ಕಾವ್ಯಗಳಲ್ಲಿ ಪ್ರತಿ ಪದಕ್ಕೂ ಅನೇಕ ಅರ್ಥಗಳಿರುತ್ತವೆ. ಕೇವಲ ಭಾಷೆ ಬರುತ್ತದೆ ಎನ್ನುವ ಕಾರಣದಿಂದ ಓದಿದರೆ ಮೇಲ್ನೋಟದ ಅರ್ಥ ಮಾತ್ರ ತಿಳಿಯುತ್ತದೆ. ಮತ್ತೆ ಮತ್ತೆ ಓದಿ ಮನನ ಮಾಡಿದರೆ ವಿಶೇಷ ಅರ್ಥಗಳು ಹೊಳೆಯುತ್ತವೆ. ತಿಳಿದವರ ಒಡನಾಟದಿಂದ ಗುಹ್ಯಾರ್ಥಗಳು (ಶಬ್ದಗಳಲ್ಲಿ ಕಾಣದಂತೆ ಹುದುಗಿರುವ ಅತಿ ವಿಶೇಷಾರ್ಥಗಳು) ತಿಳಿಯಬಹುದು. ಅದಕ್ಕೆ ಹೆಚ್ಚಿನ ಆಸಕ್ತಿ ಮತ್ತು ಶ್ರಮ ಬೇಕು. ತಿಳಿಯಲೇಬೇಕೆನ್ನುವ ಹಠ ಬೇಕು. ತಿಳಿದವರನ್ನು ಹುಡುಕಿ, ಹಿಡಿದು, ಕಾಡಿ, ಬೇಡಿ ತಿಳಿಯಬೇಕು. 

ಮೇಲಿನ ಪದದಲ್ಲಿ ದಾಸರು ಉಪಯೋಗಿಸಿರುವ ಅನೇಕ ಪದಗಳಿಗೆ, ಸಂದರ್ಭಗಳಿಗೆ ವಿಶೇಷ ಅರ್ಥ, ಗೂಡಾರ್ಥಗಳಿವೆ. ಮುಂದಿನ ಎರಡು-ಮೂರು ಅಥವಾ ನಾಲ್ಕು ಸಂಚಿಕೆಗಳಲ್ಲಿ ಈ ಅರ್ಥಗಳನ್ನು ತಿಳಿಯುವ ಪ್ರಯತ್ನ ಯಥಾಶಕ್ತಿ ಮಾಡೋಣ. 

Wednesday, December 4, 2024

ರಾಜಸೂಯದಲ್ಲಿ ಶ್ರೀಕೃಷ್ಣ ಮಾಡಿದ್ದೇನೇನು?


ರಾಜಸೂಯ ಯಾಗದಲ್ಲಿ ತುಂಬಾ ಕೆಲಸಗಳಿದ್ದವು. ತುಂಬಾ ಕೆಲಸ ಎಂದ ಮೇಲೆ ಮಾಡಲು ಅನೇಕ ಜನ ಕೆಲಸ ಮಾಡುವವರೂ ಬೇಕಾಗಿದ್ದರು. ಕೆಲಸ ಮಾಡುವವರು ಯಾರು? ಹೊರಗಡೆಯಿಂದ ಬಂದ ಆಮಂತ್ರಿತರ ಕೈಲಿ ಕೆಲಸ ಮಾಡಿಸುವಹಾಗಿಲ್ಲ. ಎಲ್ಲ ಕೆಲಸ ಮಾಡುವವರೂ ಮನೆಯವರೇ ಆಗಬೇಕಿತ್ತು. ಹಾಗಾಗಿ ಶ್ರೀಕೃಷ್ಣನ ಸೂಚನೆಯಂತೆ ಧರ್ಮರಾಯನು ತನ್ನ ಮನೆಯ ಎಲ್ಲ ಮಂದಿಗೆ ಬೇರೆ ಬೇರೆ ಕೆಲಸಗಳನ್ನು ಹಂಚಿದ. ಅಲ್ಲಿ ಮನೆಯವರೆಂದರೆ ಯಾರು ಯಾರು? ಪಾಂಡವರು ಯಾಗ ಮಾಡುವವರು. ಅಂದರೆ ಆತಿಥೇಯರು. ಅವರು ಮಿಕ್ಕೆಲ್ಲರಿಗಿಂತ ಹೆಚ್ಚಾಗಿ ಕೆಲಸ ಮಾಡಲೇಬೇಕು. ಯಾದವರು ಕುಂತಿದೇವಿಯ ತವರು ಮನೆಯವರು. ಅವರಿಗೂ ಕೆಲಸ ಹೇಳಬಹುದು. ದ್ರುಪದನ ಮನೆಯವರೂ ಇಲ್ಲಿ ಮನೆಯವರೇ. ಬೀಗರೆಂದು ಸುಮ್ಮನೆ ಕೂಡುವಹಾಗಿಲ್ಲ. ಅವರಿಗೂ ಕೆಲಸ ಹಂಚಿದರು. ಇನ್ನು ಕೌರವರು. ಇಷ್ಟವಿದ್ದರೂ ಬಿಟ್ಟರೂ ಅವರೂ ಇಲ್ಲಿ ಪಾಂಚಾಲರು, ಯಾದವರಿಗಿಂತ ಹೆಚ್ಚಾಗಿ ಮನೆಯವರು. ದುರ್ಯೋಧನನಿಗೆ ಶ್ರೀಕೃಷ್ಣನ ಸಲಹೆಯಂತೆ ಹಣಕಾಸಿನ ವ್ಯವಹಾರ ನೋಡಲು ಬಿಟ್ಟರಂತೆ. ದೊಡ್ಡ ಖಾತೆ ತನಗೆ ಸಿಕ್ಕಿದ ಸಂತೋಷದಿಂದ ಅವನು ಬಹಳ ಹುಮ್ಮಸ್ಸಿನಿಂದ ಮನಸ್ಸಿಟ್ಟು, ಕಷ್ಟಪಟ್ಟು ಕೆಲಸ ಮಾಡಿದನಂತೆ. ಅವನ ಕೈಯಲ್ಲಿ ಧನವೃದ್ಧಿ ರೇಖೆ ಇತ್ತಂತೆ. ಅದಕ್ಕೇ ಶ್ರೀಕೃಷ್ಣ ಆ ಖಾತೆ ಕೊಡಲು ಸೂಚಿಸಿದನಂತೆ. ಕರ್ಣ ಕೌಂತೇಯ ಎಂದು ಗೊತ್ತಿಲ್ಲದಿದ್ದರೂ ದುರ್ಯೋಧನನ ಜೊತೆಯಲ್ಲಿ ಬಂದಿದ್ದರಿಂದ ಅವನೂ ಮನೆಯವನೇ ಆದ. ಕರ್ಣನಿಗೆ ದಾನಗಳನ್ನು ಕೊಡುವ ಕೆಲಸ ಕೊಟ್ಟರಂತೆ. ಅವನು ದಾನಶೂರ. ಆ ಕೆಲಸ ಮಾಡಲು ಬಹಳ ಸಂತೋಷ ಪಟ್ಟನಂತೆ. ಹೀಗೆ ಎಲ್ಲರಿಗೂ, ಅಂದರೆ ಕೆಲಸ ಹಂಚಬಹುದಾದ ಎಲ್ಲರಿಗೂ ಕೆಲಸ ಕೊಟ್ಟರು. ಜವಾಬ್ದಾರಿ ಕೊಟ್ಟವನು ಯುಧಿಷ್ಠಿರ. ಸೂಚಿಸಿದವನು ಶ್ರೀಕೃಷ್ಣ. ಶ್ರೀಕೃಷ್ಣನಿಗೆ ಕೇವಲ "ಹೀಗೆ ಹೀಗೆ ಮಾಡು" ಎಂದು ಹೇಳಿದ್ದಷ್ಟೇ ಕೆಲಸವೇ? 

ಯಾರಿಗೂ ಹೇಳದೆ ಶ್ರೀಕೃಷ್ಣ ತನಗೆ ಕೆಲಸವೊಂದು ಕೊಟ್ಟುಕೊಂಡ. ಅವನು ಆ ಕೆಲಸ ಮಾಡುವವರೆಗೂ ಅದೊಂದು ಕೆಲಸ ಎಂದು ಯಾರಿಗೂ ಹೊಳದೇಇರಲಿಲ್ಲ.  ಅದೇನು ಅಂತಹ ಘನಂದಾರಿ ಕೆಲಸ?

*****

ಐದು, ಆರು ದಶಕಗಳ ಹಿಂದೆ, ನಾವು ಶಾಲೆಯಲ್ಲಿ ಓದುತ್ತಿದ್ದಾಗ, ಸಮಾಜದ ವ್ಯವಸ್ಥೆ ಬೇರೆ ರೀತಿಯದೇ ಇತ್ತು. ಈಗಿನಂತೆ "ಇವೆಂಟ್ ಮ್ಯಾನೇಜಮೆಂಟ್"ತಂಡಗಳು ಇರಲಿಲ್ಲ. ಅವರಿಗೆ ಕೇಳಿದಷ್ಟು ಹಣ ಕೊಡಲು ಶಕ್ತಿಯಂತೂ ಮೊದಲೇ ಇರಲಿಲ್ಲ. ಮದುವೆ-ಮುಂಜಿ ಮುಂತಾದ ಸಮಾರಂಭಗಳಿಗೆ ಬಂದ ಜನರು ತಾವಾಗಿಯೇ ಎಲ್ಲ ಕೆಲಸಗಳಲ್ಲಿಯೂ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಿದ್ದರು. ಹೆಣ್ಣುಮಕ್ಕಳು ಸಮಾರಂಭದ ಸ್ಥಳವನ್ನು ಸಿಂಗರಿಸುವುದು, ತರಕಾರಿ ಹೆಚ್ಚುವುದು, ತೇಂಗಿನಕಾಯಿ ತುರಿಯುವುದು, ಹಾಡು-ಹಸೆ ಹೇಳುವುದು, ಇತ್ಯಾದಿ ಕೆಲಸ ಸ್ವತಃ ಹುಡುಕಿಕೊಂಡು ಮಾಡುತ್ತಿದ್ದರು. ಗಂಡು ಮಕ್ಕಳು ನೀರು ತುಂಬುವುದು, ಸಾಮಾನು-ಸರಂಜಾಮು ತರುವುದು-ಹೊರುವುದು, ಮಂಟಪ ಕಟ್ಟುವುದು ಇತ್ಯಾದಿ ಕೆಲಸ ಮಾಡುತ್ತಿದ್ದರು. ನಮ್ಮಂತಹ ಹುಡುಗರು ಮೊದಲ ಪಂಕ್ತಿ ಊಟಕ್ಕೆ ಕುಳಿತರೆ ಹಿರಿಯರು "ನಿಮಗೇನೋ ಆತುರ? ಒಂದೆರಡು ಪಂಕ್ತಿ ಬಡಿಸಿ ಆಮೇಲೆ ಕೂಡಿ" ಎನ್ನುತ್ತಿದ್ದರು. ಬಿಸಿ ಪದಾರ್ಥಗಳ ಪಾತ್ರೆ ಹಿಡಿಯುವ, ಬಡಿಸುವ ವಯಸ್ಸು ಇನ್ನೂ ಬಂದಿಲ್ಲದಿದ್ದ ಬಾಲಕರಿಗೆ ನೀರು ಬಡಿಸುವ ಕೆಲಸ ಇರುತ್ತಿತ್ತು. ಒಟ್ಟಿನಲ್ಲಿ "ದುಡಿದು ತಿನ್ನು" ಎನ್ನುವ ವಾಕ್ಯದಂತೆ ಏನಾದರೂ ಕೆಲಸ ಮಾಡಿಯೇ ಮುಂದಿನ ಮಾತು. 

ಈಗಿನಂತೆ ಊಟದ ಮೇಜುಗಳ ಮೇಲೆ ಊಟ ಬಡಿಸುವಂತಿರಲಿಲ್ಲ. ಮೇಜು-ಕುರ್ಚಿ ಇದ್ದ ಮನೆಗಳೇ ಕಮ್ಮಿ. ಮನೆಗೆ ಯಾರಾದರೂ ಬಂದರೆ ಮೊದಲು ಮಾಡುತ್ತಿದ್ದ ಕೆಲಸ ಬಂದವರು ಕೂಡಲು ಚಾಪೆ ಹಾಸುವುದು. ಸ್ವಲ್ಪ ಅನುಕೂಲಸ್ಥರ ಮನೆಯಲ್ಲಿ ಚಾಪೆಯ ಬದಲು ಜಮಖಾನ ಇದ್ದವು. ಇನ್ನು ಊಟದ ಮೇಜುಗಳು ಎಲ್ಲಿಂದ ಬರಬೇಕು? ನೆಲ ಸಾರಿಸಿ, ಶುದ್ಧ ಮಾಡಿ, ಬಾಳೆಲೆ ಹರಡಿ ಊಟ ಬಡಿಸಬೇಕು. ತಂದಿದ್ದ ಬಾಳೆ ಎಲೆ ಮುಗಿದು ಇನ್ನೂ ಊಟಕ್ಕೆ ಜನ ಉಳಿದರೆ ಕಡೆಯ ಪಂಕ್ತಿಗಳಿಗೆ ಮುತ್ತುಗದ ಎಲೆ. ಸಂಜೆಯ ವೇಳೆ ಇನ್ನೂ ಸುಲಭವಾದ ಕೈತುತ್ತಿನ ಊಟ. ಕೈತುತ್ತಿನ ಊಟದಲ್ಲಿ ಎರಡು ಬಲವಾದ ಕಾರಣಗಳಿದ್ದವು. ಬೆಳಗ್ಗೆ ಮಾಡಿ ಮಿಕ್ಕಿದ್ದ ಅಡಿಗೆ ಖರ್ಚಾಗಲೇಬೇಕಿತ್ತು. ಏಕೆಂದರೆ ಆಗ ತಂಗಳು ಪೆಟ್ಟಿಗೆ ಅಥವಾ ರೆಫ್ರಿಜಿರೇಟರ್ ಇರಲಿಲ್ಲ. ಸಾಲ-ಸೋಲ ಮಾಡಿ ತಂದ ಪದಾರ್ಥಗಳ ಅಡಿಗೆ ಬಿಸಾಡುವಂತೆಯೂ ಇರಲಿಲ್ಲ. ಸ್ವಲ್ಪವೇ ಉಳಿದ ಪದಾರ್ಥಗಳು ಎಲೆ ಹಾಕಿ ಬಡಿಸಿದರೆ ಎಲ್ಲರಿಗೂ ಸಾಲುವುದಿಲ್ಲ. ಕೈತುತ್ತಿನಲ್ಲಾದರೆ ತುತ್ತು ಸಣ್ಣ ಮಾಡಿದರೆ ಎಲ್ಲರಿಗೂ ಒಂದು ತುತ್ತು ಬರುತ್ತದೆ! ಹೀಗೆ ಪದಾರ್ಥವೂ ಖರ್ಚಾಯಿತು ಮತ್ತು ಎಲ್ಲರಿಗೂ ಸಿಕ್ಕಿತು! ಇದು ಮೊದಲನೇ ಕಾರಣ. ಕೈತುತ್ತು ಮಾಡಿದ ಮೇಲೆ ಎಲೆ ಎತ್ತುವ ಕೆಲಸವಿಲ್ಲ. ಎಲ್ಲರೂ ಅವರ ಕೈ ತೊಳೆದುಕೊಂಡೇ ತೊಳೆದುಕೊಳ್ಳುತ್ತಾರೆ. ಕೈತುತ್ತು ಹಾಕಿದ ಜಾಗ ಸ್ವಲ್ಪ ಸ್ವಚ್ಛ ಮಾಡಿದರೆ ಆಯಿತು. ಬೆಳಗಿನಿಂದ ದುಡಿದವರಿಗೆ ಮತ್ತು ಮಾರನೆಯ ದಿನ ಬೇಗ ಏಳಬೇಕಾದವರಿಗೆ ಸುಸ್ತಾದ ಸಂಜೆಯಲ್ಲಿ ಒಂದು ಕೆಲಸ ಕಡಿಮೆಯಾಯಿತು. ಇದರ ಜೊತೆಗೆ ಉಳಿಸಿದ ಬಾಳೆ ಎಲೆ ಅಥವಾ ಮುತ್ತಗದ ಎಲೆ ಮಾರನೆಯ ದಿನಕ್ಕೆ ಉಪಯೋಗಕ್ಕೂ ಬಂತು!

"ಸಿಹಿ ತಿಂದ ಕೈಲಿ ಊಟ ಮಾಡಿದ ಎಲೆ ಎತ್ತಬಾರದು" ಎಂದು ಒಂದು ಶಾಸ್ತ್ರವಿತ್ತು. ಈ ಶಾಸ್ತ್ರವೇಕೆ? ಸಾಮಾನ್ಯವಾಗಿ ಮನೆಗೆ ಬಂದ  ಅತಿಥಿಗಳು ಮೊದಲನೇ ಪಂಕ್ತಿಯಲ್ಲಿ ಊಟಕ್ಕೆ ಕೂಡುವರು. ಅವರ ಕೈಯಲ್ಲಿ ಎಲೆ ಎತ್ತಿಸುವುದು ಚೆನ್ನಲ್ಲ. ಈ ಶಾಸ್ತ್ರ ಹೇಳಿದರೆ ಅವರು ಎಲೆ ಎತ್ತದೆ ಎದ್ದು ಕೈ ತೊಳೆಯಲು ಹೋಗುವರು. ಅವರು ಕೈ ತೊಳೆದು ಬರುವುದರ ಒಳಗೆ ಅವರು ಊಟಮಾಡಿದ ಎಲೆಗಳೇ ಮಾಯ. ಮನೆಯ ಮಕ್ಕಳು ಕಾದಿದ್ದು ಅವರು ಎದ್ದ ತಕ್ಷಣ ಆ ಕೆಲಸ ಮುಗಿಸುತ್ತಿದ್ದರು. 

"ಹಬ್ಬದ ದಿನ ರಾತ್ರಿ ಊಟ ಮಾಡದೆ ಮಲಗಬಾರದು" ಎಳ್ಳುವುದು ಇನ್ನೊಂದು ಶಾಸ್ತ್ರ. ಇದು ಯಾವ ಶಾಸ್ತ್ರದಲ್ಲೂ ಇಲ್ಲದ, ಯಾವ ಶಾಸ್ತ್ರಿಯೂ ಹೇಳದ ಶಾಸ್ತ್ರ. ಬೆಳಗ್ಗೆ ಮಾಡಿ ಮಿಕ್ಕಿದ ಅಡಿಗೆ ಏನು ಮಾಡಬೇಕು? ಈ ಶಾಸ್ತ್ರ ಪಾಲಿಸಿದರೆ ಎಲ್ಲರೂ ಕೆಲವು ತುತ್ತು ಉಂಡು ಮಿಕ್ಕಿದ ಅಡಿಗೆಯೆಲ್ಲ ಖರ್ಚಾಗುವುದು!

ಈಗಿನಂತೆ ಆಗಿನ ಸಮಯದಲ್ಲಿ ದೊಡ್ಡ ದೊಡ್ಡ ಸಮಾರಂಭ ಭವನಗಳು ಇರಲಿಲ್ಲ. ಹಳ್ಳಿಗಳಲ್ಲಿ ದೇವಸ್ಥಾನದ  ಮುಂದೆ ಅಥವಾ ಅರಳಿ ಕಟ್ಟೆ ಮುಂದೆ ಚಪ್ಪರ ಹಾಕಿ ಊಟ ಬಡಿಸುತ್ತಿದ್ದರು. ಸ್ವಲ್ಪ ದೊಡ್ಡ ಊರುಗಳಲ್ಲಿ ದೊಡ್ಡ ಮನೆಗಳಲ್ಲಿ ನಡೆಸುತ್ತಿದ್ದರು. ಎಲ್ಲರಿಗೂ ಒಟ್ಟಿಗೆ ಊಟ ಬಡಿಸುವಹಾಗಿರಲಿಲ್ಲ. ಅದಕ್ಕೆ ಸರತಿಯ ಮೇಲೆ ಎರಡೂ, ಮೂರೋ, ನಾಲ್ಕೋ ಅಥವಾ ಇನ್ನೂ ಹೆಚ್ಚಿನ ಪಾಳಿಯಲ್ಲಿ ಊಟ ಬಡಿಸುತ್ತಿದ್ದರು. ಜಾಗದ ಜೊತೆಗೆ ಬಡಿಸುವ ಸಲಕರಣೆ (ಪಾತ್ರೆ, ಸೌಟು, ಲೋಟ ಇತ್ಯಾದಿ) ಮತ್ತು ಬಡಿಸುವವರು ಇವುಗಳ ಕೊರತೆ. (ಜಾತ್ರೆ, ಧಾತ್ರಿ ಹವನ, ನರಸಿಂಹ ಜಯಂತಿ ಇಂತಹ ಸಮಾರಂಭಗಳಲ್ಲಿ ನಾವು ಊಟಕ್ಕೆ ಹೋಗುವಾಗ ನಮ್ಮ ನಮ್ಮ ಮನೆಗಳಿಂದಲೇ ಲೋಟ ತೆಗೆದುಕೊಂಡು ಹೋಗಬೇಕಾಗಿತ್ತು). ಈ ಪಾಳಿಗಳಲ್ಲಿ ಊಟ ಬಡಿಸುವುದಕ್ಕೆ ಪಂಕ್ತಿ ಎಂದು ಕರೆಯುತ್ತಿದ್ದರು. ಈಗ ಈ ಪದ ಮರೆತೇ ಹೋಗಿ ಅಚ್ಚ ಕನ್ನಡ ಪದವಾದ "ಬ್ಯಾಚ್" ಎನ್ನುತ್ತಾರೆ. ಪಂಕ್ತಿಗಳಲ್ಲಿ ಬಡಿಸುವಾಗ ಮೊದಲ ಪಂಕ್ತಿಯವರು ಉಂಡ ಸ್ಥಳಗಳನ್ನು ಚೆನ್ನಾಗಿ ಸಾರಿಸಿ, ಗೋಮಯದಿಂದ ಶುದ್ಧ ಮಾಡಿ ಮತ್ತೆ ಎಲೆ ಹಾಕುತ್ತಿದ್ದರು. ಅಂದವಾಗಿ ಕಾಣಲಿ ಎಂದು ರಂಗೋಲಿ ಹಾಕುತ್ತಿದ್ದರು. ವಿದ್ಯುತ್ ಇಲ್ಲದ ಕಾರಣದಿಂದ ಪ್ರತಿ ಎಲೆಯ ಮುಂದೆ  ದೀಪಗಳಿಡುತ್ತಿದ್ದರು. ಇಷ್ಟಾದ ಮೇಲೆ ಮುಂದಿನ ಪಂಕ್ತಿಯಲ್ಲಿ ಮತ್ತೆ ಊಟ. ಆದ ಕಾರಣ ಎಲೆ ಎತ್ತುವುದು ಮತ್ತು ಸ್ಥಳ ಶುದ್ದಿ ಮಾಡುವುದು ಬಹಳ ಮುಖ್ಯ ಕೆಲಸವಾಗಿತ್ತು. ಆದರೆ ಎಂಜಲೆಲೆ ಎತ್ತುವುದು ಮತ್ತು ಸಗಣಿ ಮುಟ್ಟುವುದು ಬಹಳ ಜನರಿಗೆ ಬೇಡವಾದ ಕೆಲಸ. ಅದೇನು ಗಂಧ ಹಂಚುವ ಕೆಲಸವಲ್ಲ. ಒಡವೆ, ವಸ್ತ್ರ ಹೊತ್ತು ಓಡಾಡುವ ಕೆಲಸವಲ್ಲ. ತಾವು ತೊಟ್ಟ ಒಳ್ಳೆಯ ಬಟ್ಟೆ ಕೊಳಕು ಮಾಡುವ ಕೆಲಸ. ಎಲೆ ತೆಗೆಯುವಾಗ ಹಾಕಿದ ಸರ ಒಡವೆಗಳು ಸಗಣಿಯಲ್ಲಿ ಹೊರಳಾಡುವ ಕೆಲಸ. ನಡು ಬಗ್ಗಿಸಿ, ಮತ್ತೆ ಎದ್ದು, ಮತ್ತೆ ಬಗ್ಗಿ, ಮತ್ತೆ ಎದ್ದು, ಹೀಗೆ ಮಾಡಿ ಮಾಡಿ ಬೆನ್ನು ನೋಯುವ ಕೆಲಸ. ಸಗಣಿ ಮತ್ತು ಪೊರಕೆಯ ಆಟದ ಕೆಲಸ. ಯಾರಿಗೂ ಬೇಡವಾದ, ಆದರೆ ಯಾರಾದರೂ ವಿಧಿಯಿಲ್ಲದೇ ಮಾಡಲೇಬೇಕಾದ ಕೆಲಸ!

*****

ಯಾವುದೇ ಸಮಾರಂಭವಾದರೂ "ಆಹಾ! ಬಹಳ ಚೆನ್ನಾಗಿ ಆಯಿತು" ಎಂದು ಹೇಳಬೇಕಾದರೆ ಊಟ ಚೆನ್ನಾಗಿರಬೇಕು. "ದೇರ್ ಈಸ್ ನೋ ಮೀಟಿಂಗ್ ವಿತೌಟ್ ಈಟಿಂಗ್" ಎಂದು ಈಗಲೂ ಎಲ್ಲರೂ ಹೇಳುತ್ತಾರೆ. "ರಥೋತ್ಸವ ಎಷ್ಟು ಚೆನ್ನಾಗಿ ಆಯಿತು ಅಂತೀರಿ, ಐದು ನೂರು ಜನರ ಊಟ!" ಅನ್ನುತ್ತಾರೆ. "ಫೇಸ್ ಐಸ್ ದಿ ಇಂಡೆಕ್ಸ್  ಆಫ್ ಮೈಂಡ್" ಅನ್ನುವಂತೆ "ಊಟ ಐಸ್ ದಿ ಇಂಡೆಕ್ಸ್  ಆಫ್ ಸಕ್ಸಸ್ ಆಫ್ ಎ ಸಮಾರಂಭ".  ಊಟ ಇರುವ ವಿಷಯ ಹಾಗಿರಲಿ. ಸಾರಿಗೆ ಸ್ವಲ್ಪ ಉಪ್ಪು ಕಡಿಮೆಯಾದರೇ ಕಷ್ಟ. ಸಮಾರಂಭದ ನಂತರ ಆ ಕಡಿಮೆಯಾದ ಉಪ್ಪಿನ ಚರ್ಚೆಯಲ್ಲಿ ಸಮಾರಂಭದ ಇತರ ಶ್ರೇಯಸ್ಸೇ ಕೊಚ್ಚಿ ಹೋಗುವ ಭಯವುಂಟು. 

ರಾಜಸೂಯ ಯಾಗದಲ್ಲಿ ಶ್ರೀಕೃಷ್ಣ ಎಲ್ಲರಿಗೂ ಕೆಲಸ ಹಂಚಲು ಸೂಚಿಸಿ ಈ ಎಂಜಲೆಲೆ ಎತ್ತುವುದು ಮತ್ತು ಊಟ ಮಾಡಿದ ಸ್ಥಳವನ್ನು ಶುದ್ದಿ ಮಾಡುವುದನ್ನು ಯಾರಿಗೂ ಹಂಚದೆ ತಾನೇ ಉಳಿಸಿಕೊಂಡ. ಮೊದಲ ಪಂಕ್ತಿ ಊಟ ಆದ ನಂತರ ತಾನೇ ಮುಂದೆ ನಿಂತು ಈ ಕೆಲಸ ಮಾಡಿದ. ಈ ಕೆಲಸ ಯಾರಿಗಾದರೂ ಕೊಟ್ಟಿದ್ದರೆ ಅವರು ಜಗಳಕ್ಕೆ ಬರಬಹುದಿತ್ತು. ಇಲ್ಲವೇ ಮುಖ ಮುದುರಿಕೊಳ್ಳಬಹುದಿತ್ತು. ತಾನೇ ಮಾಡಿದರೆ? ಈ ಸಮಸ್ಯೆಯೇ ಇಲ್ಲ! ಅದಕ್ಕಿಂತ ಹೆಚ್ಚಾಗಿ ಈ ನೆಪದಿಂದ ಇಡೀ ಬಂದವರ ಊಟದ ವ್ಯವಸ್ಥೆಯ ಮತ್ತು ಸರಿಯಾದ ರೀತಿಯ ವಿತರಣೆಯ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡ. 

ಶ್ರೀಕೃಷ್ಣನು ಎಂಜಲೆಲೆ ಎತ್ತಿ, ಸ್ಥಳ ಶುದ್ದಿ ಮಾಡಿ ಮುಂದಿನ ಪಂಕ್ತಿಗಳಿಗೆ ತಯಾರು ಮಾಡಿದ  ರೀತಿಯನ್ನು ಶ್ರೀ ಪುರಂದರ ದಾಸರು ಹೀಗೆ ವರ್ಣಿಸುತ್ತಾರೆ:

ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ 
ಎಂಜಲವನೇ ಬಳಿದ, ಶ್ರೀಹರಿ ಎಂಜಲವನೆ ಬಳಿದ 

ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ 
ಕಟ್ಟಿದ ಸರಗಳ ಹಿಂದಕೆ ಸರಿಸಿ
ಸರಸರ ಎಲೆಗಳ ತೆಗೆದು ಬಿಸಾಡಿ 
ಕಟ್ಟ ಕಡೆಗೆ ತಾ ಬಳಿದು ನಿಂತ 

ಪೊರಕೆಯ ಪಿಡಿದು ಕಸವನೆ ಗುಡಿಸಿ
ಸಗಣಿಯ ನೀರೊಳು ಕಲೆಸಿ ಥಳಿಯ ಹಾಕಿ
ಸಾಲು ಸಾಲಾಗಿ ಮಣೆಯಿಟ್ಟು ಎಲೆ ಹಾಕಿ 
ರಂಗೋಲಿ ಕೊಳವಿಯ ಎಳೆದು ತಾ ನಿಂತ 

ತನ್ನ ಕೆಲಸಾಯ್ತೆಂದ ಇನ್ನೇಕೆ ತಡವೆಂದ 
ಇನ್ನೊಂದು ಪಂಕ್ತಿಯ ಕೂಡ ಹೇಳೆಂದ 
ಘನ್ನ ಮಹಿಮ ಶ್ರೀ ಪುರಂದರ ವಿಠಲ 
ಪುಣ್ಯಾತ್ಮರುಂಡೆಲೆಗಳನು ತೆಗೆದು ನಿಂತ   

ಶ್ರೀಕೃಷ್ಣ ಹೀಗೆ ಮಾಡಿದ್ದರಿಂದ ಇನ್ನೊಂದು ಕೆಲಸವಾಯ್ತು. ಅವನೇ ಈ ಕೆಲಸ ಮಾಡಿದ್ದರಿಂದ ಮಿಕ್ಕವರು ಹಿಂದೆ-ಮುಂದೆ ನೋಡದೆ ತಾವೂ ಕೈ ಜೋಡಿಸಿದರು. ಕ್ಷಣಾರ್ಧದಲ್ಲಿ ಸ್ಥಳ ಸ್ವಚ್ಛ ಆಯಿತು. ಯಾರಿಂಗೂ ಬೇಡದ ಕೆಲಸ, ಎಲ್ಲರೂ ಬೇಸರಿಸುವ ಕೆಲಸ, ಕಸದ ಕೆಲಸ ಸಾಮೂಹಿಕ ಕೆಲಸವಾಯಿತು. ಯಾರಿಗೂ ವಹಿಸದೆ ಇದ್ದ ಕೆಲಸ ಎಲ್ಲರದಾಯಿತು. 

*****

"ಆಳಾಗಬಲ್ಲವ ಅರಸಾಗಬಲ್ಲ" ಎಂಬ ನುಡಿಗೆ ಇದು ಸಾಕ್ಷಿಯಾಯಿತು. ರಾಜಸೂಯದಲ್ಲಿ ಎಂಜಲೆಲೆ ಬಳಿದವನೇ ಕಡೆಯಲ್ಲಿ ಆಗ್ರ ಪೂಜೆಗೂ ಅರ್ಹನಾದ. "ಕಾಯಕವೇ ಕೈಲಾಸ" ಎನ್ನುವುದನ್ನು ಶ್ರೀಕೃಷ್ಣ ಅನೇಕ ರೀತಿಯಲ್ಲಿ ಮಾಡಿ ತೋರಿಸಿದ ಎನ್ನುವುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿ ನಿಂತಿತು. 

ತಮ್ಮ ಸುತ್ತ ಮುತ್ತ ನಡೆಯುವುದನ್ನು ಸೂಕ್ಷ್ಮವಾಗಿ ಗಮನಿಸುವ ಕವಿ ಹೃದಯ ಮತ್ತು ಎಲ್ಲೆಲ್ಲೂ ಶ್ರೀಹರಿಯನ್ನು ಕಾಣುವ ಶ್ರೀ ಪುರಂದರ ದಾಸರ ರೀತಿಗೂ ಈ ಪದ ಗುರುತಾಗಿ ಉಳಿಯಿತು.   

ಶ್ರೀಕೃಷ್ಣನ ನಡತೆ ಮತ್ತು ಶ್ರೀ ಪುರಂದರದಾಸರ ಕುಶಲತೆಯ ಮತ್ತೊಂದು ಉದಾಹರಣೆ  ಮುಂದಿನ ಸಂಚಿಕೆಯಲ್ಲಿ ನೋಡೋಣ.

Friday, February 9, 2024

ಬಂದನೇನೇ? ರಂಗ ಬಂದನೇನೇ?


ಶ್ರೀಪುರಂದರದಾಸರ ಪದಗಳಲ್ಲಿರುವ ಸೊಬಗನ್ನು ನೋಡುತ್ತಾ ಅವರ ಅಹೋಬಲ ನರಸಿಂಹನ ಅವತಾರದ ವರ್ಣನೆ ನೋಡಿದೆವು. ನರಸಿಂಹನ ಉದ್ಭವದ ದೃಶ್ಯ ತಿಳಿಸುವಾಗ ಅವರು ಉಪಯೋಗಿಸಿರುವ ಗಟ್ಟಿ ಶಬ್ದಗಳ ಸೊಗಸು ಮತ್ತು ಆ ಸಂದರ್ಭದ ಭೀಕರತೆಯನ್ನು ಹಿಡಿದಿಟ್ಟಿರುವ ರೀತಿಯನ್ನು ನೋಡಿಯಾಯಿತು. ಅದೇ ಪದದಲ್ಲಿ ನರಸಿಂಹನು ಶಾಂತವಾದಾಗ ಹೇಗೆ ಸೌಮ್ಯ ಪದಗಳು ಪ್ರಯೋಗಿಸಿ ಉಗ್ರ ನರಸಿಂಹನನ್ನು ಪ್ರಹ್ಲಾದ ವರದನನ್ನಾಗಿ ತೋರಿಸಿದರು ಅನ್ನುವುದನ್ನೂ ನೋಡಿದೆವು. 

ಶ್ರೀ ಪುರಂದರದಾಸರ ಶ್ರೀಕೃಷ್ಣನ ವರ್ಣನೆಗಳುಳ್ಳ ಪದಗಳು ನೂರಾರು. ಶ್ರೀಕೃಷ್ಣನ ಜೀವಿತದ ಹಲವು ಘಟ್ಟಗಳಲ್ಲಿ ಬರುವ ಬೇರೆ ಬೇರೆ ಸಂದರ್ಭಗಳನ್ನು ದಾಸರು ತಮ್ಮ ಅನೇಕ ಪದಗಳಲ್ಲಿ ಹಿಡಿದಿಟ್ಟಿದ್ದಾರೆ. ಪ್ರತಿಪದದಲ್ಲಿಯೂ  ಅವರು ಸಂದರ್ಭಕ್ಕೆ ತಕ್ಕಂತೆ ಭಾಷೆಯನ್ನು ಪ್ರದರ್ಶಿಸಿದ್ದಾರೆ. 

ಆಗ ತಾನೇ ಹೆಜ್ಜೆ ಇಡಲು ಪ್ರಾರಂಭಿಸಿರುವ ಪುಟ್ಟ ಕೃಷ್ಣನ ಬರುವಿಕೆ ವರ್ಣಿಸುವ ಈ ಕೆಳಕಂಡ ಪದವು ಬಹಳ ಜನಪ್ರಿಯ. ಹಳ್ಳಿಗಳಲ್ಲಿ ಹಾಡುವುದನ್ನು ಕಲಿಯುವ ಮಕ್ಕಳಿಗೆ ಮೊದಲಿಗೆ ಕಲಿಸುತ್ತಿದ್ದ ಹಾಡುಗಲ್ಲಿ ಇದೂ ಒಂದು. ಕಲಿಯುವ ವಯಸ್ಸಿನ ಮಕ್ಕಳಿಗೆ ಸುಲಭವಾಗಿ ಅರ್ಥ ತಿಳಿಯುವ, ಹೇಳುತ್ತಿದ್ದಂತೆ ಹಾಡಿನ ರೂಪ ತಾಳುವ, ತನ್ನ ಪದಗಳಲ್ಲಿಯೇ ಒಂದು ರೀತಿಯ ಮೋಹಕ ಅನುಭವ ಕೊಡುವ ಕೃತಿ ಇದು. 

*****

ಪುಟ್ಟ ಕೃಷ್ಣ ಬರುವಾಗ ಹೇಗಿರುತ್ತಾನೆ? ಅವನ ವೇಷಭೂಷಣಗಳು ಹೇಗೆ? ಆ ವೇಷ ಮತ್ತು ಅಲಂಕಾರದ ವಸ್ತುಗಳು ಮತ್ತು ಅವನು ನಡೆದಾಡುವಾಗ ಆಗುವ ಶಬ್ಧಗಳೇನು? ಇದೇ ರೀತಿ ಇರುವ ಕಂದಮ್ಮಗಳು ನಡೆದಾಡುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ.  ಈ ವರ್ಣನೆ ಕೇಳುತ್ತಿದ್ದಂತೆ ನಮ್ಮ ಮನಸ್ಸಿನಲ್ಲಿ ಒಂದು ರೂಪ ಮೂಡುತ್ತದೆ! 

ಶ್ರೀಕೃಷ್ಣ ಬಂದನೇ ಎಂದು ಒಂದು ವ್ಯಕ್ತಿ ಮತ್ತೊಬ್ಬಳನ್ನು ಕೇಳುವ ಪ್ರಶ್ನೆಯ ರೀತಿ ಈ ಕೃತಿ ರಚನೆ ಮಾಡಿದ್ದಾರೆ:

ಬಂದನೇನೇ ರಂಗ ಬಂದನೇನೇ? 
ತಂದೆ ಬಾಲಕೃಷ್ಣ ನವನೀತ ಚೋರ 
ಬಂದನೇನೇ ರಂಗ ಬಂದನೇನೇ?

ಘಲು ಘಲು ಘಲುರೆಂಬೊ ಪೊನ್ನಂದುಗೆ ಗೆಜ್ಜೆ 
ಹೊಳೆ ಹೊಳೆ ಹೊಳೆಯುವ ಪಾದವನೂರುತ 
ನಲಿನಲಿದಾಡುವ ಉಂಗುರ ಅರಳೆಲೆ 
ಥಳ ಥಳ ಥಳ ಹೊಳೆಯುತ ಶ್ರೀಕೃಷ್ಣ 

ಕಿಣಿ ಕಿಣಿ ಕಿಣಿರೆಂಬೊ ಕರದ ಕಂಕಣ ಬಳೆ 
ಝಣ ಝಣ ಝಣರೆಂಬೊ ನಡುವಿನಗಂಟೆ 
ಠಣ ಠಣ ಠಣರೆಂಬೊ ಪಾದದ ತೊಡವಿನ 
ಮಿಣಿ ಮಿಣಿ ಮಿಣಿ ಕುಣಿದಾಡುತ ಶ್ರೀಕೃಷ್ಣ 

ಹಿಡಿ ಹಿಡಿ ಹಿಡಿಯೆಂದು ಪುರಂದರ ವಿಠಲನ 
ದುಡು ದುಡು ದುಡು ದುಡನೆ ಓಡಲು 
ನಡಿ  ನಡಿ  ನಡಿಯೆಂದು  ಮೆಲ್ಲನೆ ಪಿಡಿಯಲು 
ಬಿಡಿ ಬಿಡಿ ಬಿಡಿ ದಮ್ಮಯ್ಯ ಎನ್ನುತ 

ಬಂದನೇನೇ ರಂಗ ಬಂದನೇನೇ? 
ತಂದೆ ಬಾಲಕೃಷ್ಣ ನವನೀತ ಚೋರ 
ಬಂದನೇನೇ ರಂಗ ಬಂದನೇನೇ?

ದಾಸರು ಪ್ರಯೋಗಿಸಿರರುವುದು ಅತಿ ಕಡಿಮೆ ಪದಗಳು. ಪ್ರತಿ ಆಭರಣ ಮತ್ತು ಪುಟ್ಟ ಕೃಷ್ಣನ ಚಲನೆಯ ಶಬ್ದ ಮತ್ತು ನಡೆಗಳನ್ನು ಮತ್ತೆ ಮತ್ತೆ ಪ್ರಯೋಗಿಸುವುದರ ಮೂಲಕ ಒಂದು ರೀತಿಯ ವಿಶೇಷ ಅನುಭವವನ್ನು ಕೊಟ್ಟಿದ್ದಾರೆ. ಈ ಕೃತಿ ಒಂದು ಕಲ್ಲು ಸಕ್ಕರೆಯಂತೆ. ಸಿಹಿ ತಿಂಡಿಯಂತೆ ಒಮ್ಮೆಲೇ ತಿಂದು ಮುಗಿಸಬಾರದು. ಮತ್ತೆ ಮತ್ತೆ ಮೆಲುಕಿ ಹಾಕಿ ಆನಂದವನ್ನು ಅನುಭವಿಸಬೇಕು. ದೇವರನ್ನು ನಂಬುವುದೂ, ಬಿಡುವುದೂ ಅವರವರಿಗೆ ಸೇರಿದ ವಿಷಯ. ಆದರೆ ಸಾಹಿತ್ಯ-ಸಂಗೀತಗಳ ಸೊಗಸಿನ ಅನುಭವಕ್ಕೆ ಬೇರೆಲ್ಲ ವಿಷಯಗಳ ಸಂಪರ್ಕವಿಲ್ಲ. 

ಅಹೋಬಲ ನರಸಿಂಹನ ಉದ್ಭವವನ್ನೂ ಮತ್ತು ಈ ಬಾಲಕೃಷ್ಣನ ಆಗಮನವನ್ನೂ ಜೊತೆಯಲ್ಲಿ ಕೇಳಿದರೆ ಸಮಯಕ್ಕೆ ಸರಿಯಾದ ಪದ ಪ್ರಯೋಗದ ಜಾಣ್ಮೆಯನ್ನೂ ಕೈಚಳಕವನ್ನು ದಾಸರ ಪದಗಲ್ಲಿ ಕಾಣಬಹುದು. 

ಹರಿದಾಸರತ್ನಂ ಗೋಪಾಲದಾಸರು "ಗೆಜ್ಜೆ ಗೋಪಾಲದಾಸರು" ಎಂದೇ ಪ್ರಸಿದ್ಧರಾದವರು. ಅರವತ್ತು, ಎಪ್ಪತ್ತು, ಎಂಭತ್ತರ ದಶಕದಲ್ಲಿ ಬಹಳ ಪ್ರಸಿದ್ಧರಾದ ಮತ್ತು ಹರಿಕಥೆ ಎಂಬ ಕಲೆಯಲ್ಲಿ ಬಹಳ ನಿಪುಣರಾದವರು. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಾಹಿತ್ಯ ಮತ್ತು ಸಂಗೀತಕ್ಕೆ ಸರಿಯಾಗಿ ಹರಿಕಥೆ ಮಾಡುವಾಗಲೇ ಹೆಜ್ಜೆ ಹಾಕುತ್ತಿದ್ದವರು. ದಾಸರ ಪದಗಳನ್ನು ಹಾಡುವುದರಲ್ಲಿ ಬಹಳ ವಿಶೇಷ ಪರಿಶ್ರಮ ಹೊಂದಿದ್ದರು. ಈ ಮೇಲಿನ ಕೃತಿಯನ್ನು ಸುಮಾರು ಮೂವತ್ತು ನಲವತ್ತು ನಿಮಿಷ ಹಾಡುತ್ತಿದ್ದರು. ಪ್ರತಿಯೊಂದು ನುಡಿಯನ್ನೂ ಬೇರೆ ಬೇರೆ ರೀತಿಯಲ್ಲಿ ಹಾಡುತ್ತಿದ್ದರು. ಪ್ರತಿ ಸಾರಿಯೂ ಅದೊಂದು ವಿಶಿಷ್ಟ ಅನುಭವ. ಕಡೆಯ ನುಡಿಯಲ್ಲಂತೂ ಶ್ರೀಕೃಷ್ಣ ಓಡುವುದನ್ನು, ಮತ್ತು ಅವನನ್ನು ಮೆಲ್ಲಗೆ ಹಿಡಿಯುವುದನ್ನೂ, ಅವನು ದಮ್ಮಯ್ಯಗುಡ್ಡೆ ಹಾಕಿ ಬಿಡಿಸಿಕೊಂಡು ಓಡುವುದನ್ನೂ ಶಬ್ದಗಳ ಮೂಲಕವೇ ಚಿತ್ರಿಸುತ್ತಿದ್ದರು. ವೀಣಾ ರಾಜಾರಾಯರು ತಮ್ಮ ಸಂಗೀತಾಭ್ಯಾಸಿ ಶಿಷ್ಯರಿಗೆ ಈ ಪದವನ್ನು ವಿಶೇಷವಾಗಿ ಕಲಿಸುತ್ತಿದ್ದರು. 

*****

ಇಂದು ಪುಷ್ಯ ಬಹುಳ ಅಮಾವಾಸ್ಯೆ ಶ್ರೀ ಪುರಂದರದಾಸರ ಪುಣ್ಯ ದಿನ. ಅವರನ್ನು ನೆನೆಯಲು ಸುದಿನ. 

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ 
ಪುರಂದರ ಗುರಂ ವಂದೇ ದಾಸ ಶ್ರೇಷ್ಠಮ್ ದಯಾನಿಧಿಮ್