Showing posts with label Ranga. Show all posts
Showing posts with label Ranga. Show all posts

Monday, May 12, 2025

ಜಾಣೆಯರ ಅರಸ


ದಿನಕ್ಕೆ ಇಪ್ಪತ್ತನಾಲ್ಕು ಗಂಟೆಯಂತೆ ನೂರಾರು ಚಾನಲ್ ಮೂಲಕ ಒಂದೇಸಮನೆ ಟೆಲಿವಿಷನ್ ಪ್ರಸಾರ ಇಲ್ಲದಿದ್ದ ಕಾಲ. ಯಾವುದೋ ಸಮಾರಂಭದಲ್ಲಿ ನಮಗೆ ತಿಳಿಯದಿದ್ದವರು ಯಾರೋ ಒಬ್ಬರು ಒಂದು ಒಳ್ಳೆಯ ಹಾಡು ಹಾಡಿದರು. ನಮ್ಮ ತಾಯಿಗೋ, ದೊಡ್ಡಮ್ಮ- ಚಿಕ್ಕಮ್ಮನಿಗೋ, ಅಕ್ಕನಿಗೋ ಆ ಹಾಡು ಬಹಳ ಇಷ್ಟವಾಯಿತು. ತಾನೂ ಕಲಿಯಬೇಕು ಅನಿಸಿತು. ಹತ್ತಿರದಲ್ಲಿದ್ದ ನಮ್ಮಂತಹ ಹುಡುಗರನ್ನು ಕರೆದು "ಅವರು ಹೇಳಿದ ಹಾಡು ಚೆನ್ನಾಗಿದೆ. ಸ್ವಲ್ಪ ಕೇಳಿ ಬರೆದುಕೋ" ಎಂದು ಹೇಳುತ್ತಿದ್ದ ಸಮಯ. ಅಲ್ಲಿ ಯಾರಿಂದಲೋ ಒಂದು ಕಾಗದ, ಒಂದು ಪೆನ್ನು ಪಡೆದು, ಅವರಬಳಿ ಕುಳಿತು, ಮತ್ತೊಮ್ಮೆ ಹಾಡುವಂತೆ ಒಲಿಸಿ, ಹಾಡಿಸಿ, ಬರೆದುಕೊಳ್ಳಬೇಕಿತ್ತು. ಈಗ ಹೇಳುವವರೂ ಹೀಗೆಯೇ ಮತ್ಯಾರಿಂದಲೋ ಕಲಿತದ್ದು. ಈ ರೀತಿ ಒಬ್ಬರಿಂದ ಒಬ್ಬರಿಗೆ ಹರಿದು ಬರುತ್ತಾ ಇರುತ್ತಿದ್ದ ಆ ಹಾಡುಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಇರುತ್ತಿದ್ದವು. ಹೀಗೆ ಬಂದ ವ್ಯತ್ಯಾಸಗಳನ್ನು "ಪಾಠಾ೦ತರ" ಅನ್ನುತ್ತಿದ್ದರು. ಹಾಡುಗಳ ಕಲಿಕೆಯ ಆಸಕ್ತಿ ಇದ್ದವರು ಅವರವರ ಹಾಡಿನ ಪುಸ್ತಕಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತಿದ್ದರು. ಅವರಿಗೆ ಅವು ಅಮೂಲ್ಯವಾದ ಅಸ್ತಿ. ಈ ರೀತಿ ಬರೆದುಕೊಂಡಿರುವ ಪುಸ್ತಕಗಳು ಕೆಲವು ನಮ್ಮ ಬಳಿ ಈಗಲೂ ಇವೆ. 

ಅನೇಕ ಹಳ್ಳಿಗಳಲ್ಲಿ ಆಗ ವಿದ್ಯುತ್ ದೀಪಗಳು ಇರಲಿಲ್ಲ. ವಿದ್ಯುತ್ ಇದ್ದ ದೊಡ್ಡ ಊರುಗಳಲ್ಲಿಯೂ ಮನೆಗೆ ಒಂದೋ, ಎರಡೋ 40 ಅಥವಾ 60 ಕ್ಯಾಂಡಲ್ ಬಲ್ಬುಗಳು ಇರುತ್ತಿದ್ದವು. ವ್ಯಾಟ್ ಅನ್ನುವ ಪದ ಬಳಕೆಯಲ್ಲಿರಲಿಲ್ಲ. ಈ ಕಾರಣಗಳಿಂದಾಗಿ ಜೀವನ ಚಕ್ರ ಸೂರ್ಯನ ಚಲನೆಯನ್ನೇ ಅವಲಂಬಿಸಿತ್ತು. ಸೂರ್ಯೋದಯವಾಗುವುದಕ್ಕೆ ಕೆಲವು ನಿಮಿಷ ಮುಂಚೆ ಚಟುವಟುಕೆ ಪ್ರಾರಂಭ. ಸೂರ್ಯಾಸ್ತ ಆದ ಸ್ವಲ್ಪ ಸಮಯಕ್ಕೆ ಎಲ್ಲ ಕೆಲಸ ಮುಗಿದು ನಿದ್ದೆಗೆ ಶರಣು. ಶಾಲೆಯಿಂದ ಬಂಡ ಮೇಲೆ ಮನೆಯ ಹೊರಗಡೆ ಆಟಗಳು. ಸೂರ್ಯ ಮುಳುಗುವ ವೇಳೆಗೆ ಮನೆಗೆ ಹಿಂದುರುಗಬೇಕು. ಬಂದ ನಂತರ ಕೈ-ಕಾಲು ತೊಳೆದು ಮಗ್ಗಿ,  ಸ್ತೋತ್ರ, ಹಾಡು ಇತ್ಯಾದಿ ಹೇಳುವುದು. ನಂತರ ಊಟ ಮತ್ತು ನಿದ್ದೆ. ಹೀಗಿತ್ತು ದಿನಚರಿ. 

ಮಕ್ಕಳಿಗೆ ಈ ಸಮಯದಲ್ಲಿ ಹಾಡು-ಹಸೆ, ರಂಗೋಲಿ, ಕಸೂತಿ ಮುಂತಾದುವನ್ನು ಹೇಳಿಕೊಡುತ್ತಿದ್ದರು. ಚಿಕ್ಕ ಮಕ್ಕಳಿಗೆ ಸುಲಭವಾದ, ಹೆಚ್ಚಿನ ಒತ್ತಕ್ಷರ, ಸಂಯುಕ್ತಾಕ್ಷರ ಇಲ್ಲದ, ಬೇಗನೆ ನೆನಪಿನಲ್ಲಿ ನಿಲ್ಲುವ ಹಾಡುಗಳಿಂದ ಕಲಿಕೆ ಪ್ರಾರಂಭ. ಶಾಸ್ತ್ರೀಯವಾಗಿ ಸಂಗೀತ ಕಲಿಯುವ ಸೌಲಭ್ಯವಿದ್ದ ಮಕ್ಕಳು ಬಹಳ ಕಡಿಮೆ. ಇದ್ದುದರಲ್ಲಿ ತಕ್ಕಮಟ್ಟಿಗೆ ರಾಗ, ತಾಳಗಳನ್ನು ಕಲಿತು ಹಾಡುತ್ತಿದ್ದರು. ಮತ್ತೊಬ್ಬರನ್ನು ಮೆಚ್ಚಿಸುವುದು ಮುಖ್ಯವಾಗಿರಲಿಲ್ಲ. ಚಟುವಟಿಕೆಯ ಜೊತೆ ಸ್ವಲ್ಪ ಸಾಹಿತ್ಯ ಮತ್ತು ಸಂಗೀತಗಳ ಪರಿಚಯ ಮುಖ್ಯ ಗುರಿಯಾಗಿತ್ತು. 
***** 

ಈ ಹಿನ್ನೆಲೆಯಲ್ಲಿ ಪ್ರಾರಂಭದಲ್ಲಿ ಮಕ್ಕಳಿಗೆ ಕಲಿಸುತ್ತಿದ್ದ ಸುಲಭವಾದ ಒಂದು ಹಾಡು "ಯಾರೇ ರಂಗನ ಕರೆಯಬಂದವರು" ಎಂಬುದು. ಇದು ಈಗಲೂ ಜನಪ್ರಿಯ. ಒಂದು ಸಾಲಿನಲ್ಲಿ ಎರಡು ಅಥವಾ ಮೂರು ಪದಗಳು. ಎರಡು ಸಾಲಿನ ಒಂದು ನುಡಿ. ಮೂರು ನುಡಿಗಳ ಹಾಡು. ಇದು ಎಲ್ಲರಿಗೂ ಗೊತ್ತಿರುವುದೇ. ಅದು ಹೀಗಿದೆ:  

ಯಾರೇ ರಂಗನ ಯಾರೇ ಕೃಷ್ಣನ 
ಯಾರೇ ರಂಗನ ಕರೆಯಬಂದವರು

ಗೋಪಾಲಕೃಷ್ಣನ ಪಾಪವಿನಾಶನ 
ಈಪರಿಯಿಂದಲಿ ಕರೆಯಬಂದವರು 

ವೇಣುವಿನೋದನ ಪ್ರಾಣಪ್ರಿಯನ 
ಜಾಣೆಯರರಸನ ಕರೆಯಬಂದವರು 

 ಕರಿರಾಜವರದನ ಪರಮಪುರುಷನ 
ಪುರಂದರ ವಿಠಲನ ಕರೆಯಬಂದವರು

ಯಾರೇ ರಂಗನ ಯಾರೇ ಕೃಷ್ಣನ 
ಯಾರೇ ರಂಗನ ಕರೆಯಬಂದವರು

"ಪ್ರಾಣಪ್ರಿಯನ" ಅನ್ನುವಕಡೆ ಕೆಲವರು "ಗಾನಪ್ರಿಯನ" ಎಂದು ಪಾಠಾ೦ತರ ಮಾಡಿ ಹಾಡುವುದೂ ಉಂಟು. ಪುರಂದರದಾಸರು ಮುಖ್ಯಪ್ರಾಣನ ಆರಾಧಕರು. ಹೀಗಾಗಿ ಪ್ರಾಣಪ್ರಿಯನ ಅನ್ನುವುದೇ ಹೆಚ್ಚು ಜನಪ್ರಿಯವಾಗಿದೆ. 

"ಜಾಣೆಯರರಸನ" ಅನ್ನುವಕಡೆ ಹಿಂದೆ ಕೆಲವರು "ಸುಗುಣಿಯರರಸನ" ಎಂದು ಹಾಡುತ್ತಿದ್ದರು. ಈಗ ಅದೂ ಕಡಿಮೆಯಾಗಿದೆ. 

ಈ "ಜಾಣೆಯರರಸನ" ಎಂದರೆ ಏನು? ಇದು ಯಾಕೆ ಪ್ರಯೋಗವಾಗಿದೆ ಎಂದು ಕೆಲವರು ಪ್ರಶ್ನೆ ಕೇಳಿದ್ದಾರೆ. ಇದರ ಬಗ್ಗೆ ಸ್ವಲ್ಪ ವಿಚಾರ ಮಾಡೋಣ. 

*****

ಕನ್ನಡದ ಸಾಹಿತಿ, ಚಲನ ಚಿತ್ರ ನಿರ್ಮಾಪಕ, ನಿರ್ದೇಶಕ, ಪತ್ರಕರ್ತ ಪ್ರೊ. ಪಿ. ಲಂಕೇಶ ಅವರು ನಡೆಸುತ್ತಿದ್ದ ಪತ್ರಿಕೆಯ ಹೆಸರು "ಲಂಕೇಶ್ ಪತ್ರಿಕೆ". ಕನ್ನಡದ ಪತ್ರಿಕೆಗಳನ್ನು ಓದುವವರು ಇದನ್ನು ನೋಡಿರುತ್ತಾರೆ. ಆ ಪತ್ರಿಕೆಗೆ ಒಂದು ಟ್ಯಾಗ್ ಲೈನ್ ಇತ್ತು. "ಕನ್ನಡ ಜಾಣ ಜಾಣೆಯರ ಪತ್ರಿಕೆ" ಎಂದು. 

"ಜಾಣ" ಅಥವಾ "ಜಾಣೆ" ಎಂದರೇನು? ಜಾಣ/ಜಾಣೆ ಎನ್ನಿಸಿಕೊಳ್ಳಬೇಕಾದರೆ ಇರಬೇಕಾದ ಲಕ್ಷಣಗಳೇನು? ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದವರು ಜಾಣರು ಎನ್ನುವುದು ತಪ್ಪು ಕಲ್ಪನೆ. ನಮ್ಮ ಪರೀಕ್ಷೆಗಳು ಸಾಮಾನ್ಯವಾಗಿ ನೆನಪು ಶಕ್ತಿ ಪರೀಕ್ಷೆ ಮಾಡುವವೇ ಆಗಿರುತ್ತವೆ. ವಿಷಯದ ತಿರುಳು ಅರ್ಥವಾಗಿರದಿದ್ದರೂ ಉರು ಹೊಡೆದು ಪರಿಕ್ಷಕರು ಕೊಟ್ಟ ಎರಡು-ಮೂರು ಘಂಟೆಗಳಲ್ಲಿ ಅವನ್ನು ಪೇಪರ್ ಮೇಲೆ ಇಳಿಸುವವರೆಲ್ಲ ಜಾಣರಲ್ಲ. ಈಗಂತೂ ಬರೆಯುವ ಸಂದರ್ಭವೂ ಇಲ್ಲ. ಪ್ರಶ್ನೆಯಲ್ಲಿಯೇ ಉತ್ತರ ಅಡಗಿರುತ್ತದೆ. ಕೊಟ್ಟ ನಾಲ್ಕು ಉತ್ತರಗಳಲ್ಲಿ ಒಂದನ್ನು ಆರಿಸಿದರೆ ಆಯಿತು!

ಹಾಗಿದ್ದರೆ "ಜಾಣ' ಎನಿಸಿಕೊಳ್ಳಲು ಹೇಗಿರಬೇಕು? ಇದಕ್ಕೆ ಸಮಾನವಾಗಿ ಇಂಗ್ಲಿಷಿನಲ್ಲಿ "ಸ್ಮಾರ್ಟ್" ಎನ್ನುತ್ತಾರೆ. ಗುಣ-ಲಕ್ಷಣಗಳು ಅನೇಕವಿದ್ದರೂ ಮುಖ್ಯವಾದ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು:
  • ಪೇಚು ತಂದೊಡ್ಡುವ ಪರಿಸ್ಥಿತಿಗಳಿಗೆ ಸಿಕ್ಕಿಹಾಕಿಕೊಳ್ಳದಿರುವುದು. 
  • ಅಂತಹ ಎಡವಟ್ಟಿನ ಪರಿಸ್ಥಿತಿಗಳಲ್ಲಿ ಅನಿವಾರ್ಯವಾಗಿ ಸಿಕ್ಕಿಹಾಕಿಕೊಂಡಾಗ ಉಪಾಯವಾಗಿ ಬಿಡಿಸಿಕೊಳ್ಳುವುದು. 
  • ಇಂತಹ ಪ್ರಸಂಗಗಳನ್ನು ತನ್ನ ಅನುಕೂಲಕ್ಕೆ ನೆರವಾಗುವಂತೆ ಬಳಸಿಕೊಳ್ಳುವುದು. 
  • ಸಮಯಸ್ಫೂರ್ತಿಯಿಂದ ನಿಂತ ನಿಲುವಿನಲ್ಲಿ ಯೋಚಿಸಿ ಪರಿಹಾರ ಕಂಡುಕೊಳ್ಳುವುದು. 
  • ಎದುರಿಗಿರುವವರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿ ಅದರ ಲಾಭ ಪಡೆದುಕೊಳ್ಳುವುದು. 
  • ಸಾಮಾನ್ಯರು ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ತಿಳಿಯುವುದು. 
ಜಾಣತನ ಎಂದರೆ ಕುತಂತ್ರ ಮಾಡುವುದು ಎಂದು ಅರ್ಥವಲ್ಲ. ಇನ್ನೊಬ್ಬರ ಕಡೆಯಿಂದ ಲಾಭ ಪಡೆದುಕೊಳ್ಳುವುದು ಅವರಿಗೆ ಅನ್ಯಾಯ ಮಾಡಿದಂತೆಯೂ ಅಲ್ಲ. ಅವರಿಗೆ ಮೋಸವಾಗದೆ ನಮಗೆ ಲಾಭವಾದರೆ ಅದರಲ್ಲಿ ತಪ್ಪೇನು? 
*****

ಹಿರಣ್ಯ ಕಷಿಪುವಿನ ತಮ್ಮನಾದ ಹಿರಣ್ಯಾಕ್ಷನು ಭೂಮಿಯನ್ನು ಹೊತ್ತುಕೊಂಡು ಅದರ ಅಕ್ಷದಿಂದ (ಆರ್ಬಿಟ್) ಪಲ್ಲಟಗೊಳಿಸಿದನು. ಆಗ ಮಹಾವಿಷ್ಣುವು ವರಾಹ ರೂಪದಿಂದ ಭೂಮಿಯನ್ನು ರಕ್ಷಿಸಿ ತನ್ನ ಕೋರೆದಾಡೆಗಳಿಂದ ಹೊತ್ತು ತಂದು ಅದರ ಅಕ್ಷದ ಮೇಲೆ ಮತ್ತೆ ಸ್ಥಾಪಿಸಿದನು. ಆ ಸಮಯದಲ್ಲಿ ಭೂದೇವಿಯಿಂದ ಅವನಿಗೆ ಒಬ್ಬ ಮಗನು ಹುಟ್ಟಿದನು. ಅವನಿಗೆ "ನರಕ" ಎಂದು ಹೆಸರು. ಹುಟ್ಟಿದ ಮಗನಿಗೆ ದೀರ್ಘಾಯುಸ್ಸು ಕೊಡುವಂತೆ ತಾಯಿಯಾದ ಭೂದೇವಿಯು ವರಾಹರೂಪಿ ಮಹಾವಿಷ್ಣುವನ್ನು ಪ್ರಾರ್ಥಿಸಿದಳು. "ಆಗಲಿ. ನೀನು ಅವನ ಮೇಲೆ ಕೋಪಿಸಿಕೊಳ್ಳುವವರೆಗೆ ಅವನಿಗೆ ಆಯುಸ್ಸು" ಎಂದು ವರ ಕೊಟ್ಟನು. ಮಗನ ಮೇಲೆ ಅವನಿಗೆ ಸಾವು ಬರಿಸುವಷ್ಟು ಕೋಪ ಹೆತ್ತವಳಿಗೆ ಎಲ್ಲಿ ಬರಬೇಕು? ತಾಯಿಗೆ ಬಹಳ ಸಂತೋಷವಾಯಿತು. 

ನರಕನು ಬಹಳ ದೊಡ್ಡ ಸಾಮ್ರಾಜ್ಯದ ಅಧಿಪತಿಯಾದನು. ದುಷ್ಟರ ಸಂಗಡ ಸೇರಿ ಲೋಕ ಕಂಟಕನಾದನು. ನರಕನು "ನರಕಾಸುರ" ಆದನು. ಅನೇಕ ರಾಜರನ್ನು ಯುದ್ಧಗಳಲ್ಲಿ ಸೋಲಿಸಿ ಅವರ ವಿವಾಹ ಯೋಗ್ಯ ಹೆಣ್ಣುಮಕ್ಕಳನ್ನು ತಂದು ಸೆರೆಮನೆಯಲ್ಲಿ ಇಟ್ಟನು. (ಇನ್ನೊಂದೆಡೆ ಜರಾಸಂಧನು ಇದೇ ತತ್ವದ ಮೇಲೆ ರಾಜಕುಮಾರರನ್ನು ಸೆರೆಯಲ್ಲಿ ಇಡುತ್ತಿದ್ದನು). ಒಟ್ಟಿನಲ್ಲಿ ಮುಂದೆ ರಾಜರಿಗೆ ಸಂತಾನವೇ ಇಲ್ಲವಾಗಿ ಕಡೆಗೆ ಇಡೀ ಭೂಮಂಡಲದ ಒಡೆತನ ತಮಗೆ ಬರಲಿ ಎಂಬ ದುರಾಸೆಯಿಂದ ಮಾಡಿದುದು ಇದು. 

ಈ ವೇಳೆಗೆ ಕೃಷ್ಣಾವತಾರ ಆಯಿತು. ನರಕಾಸುರನ ಬಾಧೆಯಿಂದ ನೊಂದವರು ಶ್ರೀಕೃಷ್ಣನಿಗೆ ಅವನನ್ನು ಸಂಹರಿಸಲು ವಿನಂತಿ ಮಾಡಿದರು. ಅವನಿಗೆ ತಾಯಿಯ ಕೋಪ ಬರುವವರೆಗೆ ಸಾವಿಲ್ಲ. ಶ್ರೀಕೃಷ್ಣನು ಭೂದೇವಿಯ ಅವತಾರಳಾದ ತನ್ನ ಹೆಂಡತಿ ಸತ್ಯಭಾಮೆಯನ್ನು ಸಾರಥಿಯನ್ನಾಗಿ ಮಾಡಿಕೊಂಡು ನರಕಾಸುರನ ಮೇಲೆ ಯುದ್ಧಕ್ಕೆ ಹೊರಟನು. ಯುದ್ಧದ ಮಧ್ಯದಲ್ಲಿ ನರಕನ ಆಯುಧದಿಂದ ಏಟು ತಿಂದವಂತೆ, ಅದರಿಂದ ಮೂರ್ಛೆ ಹೋದವನಂತೆ ನಟಿಸಿದನು. ತನ್ನ ಗಂಡ ಹೀಗೆ ಪ್ರಜ್ಞೆ ತಪ್ಪಿದುದನ್ನು ಕಂಡು ಕೋಪಗೊಂಡು ಸತ್ಯಭಾಮೆಯೇ ನರಕನನ್ನು ಕೊಂದಳು. ಒಂದು ರೂಪದ ತಾಯಿಯ ಮಗ ಅವಳ ಮತ್ತೊಂದು ರೂಪದ ಕೋಪದಿಂದ ಸತ್ತನು. 

ಸಾಯುವ ಮುನ್ನ ನರಕನಿಗೆ ತನ್ನ ತಪ್ಪಿನ ಅರಿವಾಲಾಯಿತು. ತಾಯಿ-ತಂದೆಯರನ್ನು ಕ್ಷಮೆ ಬೇಡಿ ಪ್ರಾರ್ಥಿಸಿದನು. "ನಿನ್ನ ಹೆಸರು ಶಾಶ್ವತವಾಗಲಿ. ನೀನು ಸತ್ತ ದಿನವನ್ನು ಜನರು "ನರಕ ಚತುರ್ದಶಿ" ಎಂದು ಆಚರಿಸಲಿ" ಎಂದು ಶ್ರೀಕೃಷ್ಣನು ಅವನಿಗೆ ವರವನ್ನಿತ್ತನು. ಅಂದಿನಿಂದ ನರಕ ಚತುರ್ದಶಿ ಆಚರಿಸುವ ಸಂಪ್ರದಾಯ ಬಂದಿತು. 
*****

ನರಕಾಸುರನೇನೋ ಸತ್ತನು. ಅವನ ಸೆರೆಮನೆಯಲ್ಲಿದ್ದ ಹದಿನಾರು ಸಾವಿರ ಸಂಖ್ಯೆಯ ರಾಜಕುಮಾರಿಯರನ್ನು ಶ್ರೀಕೃಷ್ಣನು ಬಂದಿಖಾನೆಯಿಂದ ಬಿಡುಗಡೆ ಮಾಡಿದನು. "ನೀವು ಈಗ ನಿಮ್ಮ ನಿಮ್ಮ ರಾಜಧಾನಿಗಳಿಗೆ ಹೋಗಿ ಸುಖವಾಗಿರಿ" ಎಂದನು. ಆ ರಾಜಕುಮಾರಿಯರೋ ಬಹಳ ಜಾಣೆಯರು! ಇದು ಇಕ್ಕಟ್ಟಿನ ಪರಿಸ್ಥಿತಿ. ಎದುರಿಗೆ ಶ್ರೀಕೃಷ್ಣನಿದ್ದಾನೆ. ಅವನನ್ನೇ ಪೇಚಿನ ಸ್ಥಿತಿಗೆ ಸಿಕ್ಕಿಸಿದರು. ಅದರ ಲಾಭ ಪಡೆದುಕೊಳ್ಳಲು ಯೋಚಿಸಿದರು. "ನೋಡು ಕೃಷ್ಣ. ನಾವು ಇಷ್ಟು ಕಾಲ ನರಕನ ಸೆರೆಮನೆಯಲ್ಲಿ ಇದ್ದವರು. ನಮ್ಮನ್ನು ಯಾರು ಮದುವೆಯಾಗುತ್ತಾರೆ? ನಮಗೆ ಸುಖವಾಗಿ ಬಾಳಲು ಹೇಗೆ ಸಾಧ್ಯ? ಅದು ಈಗಿನ ಪರಿಸ್ಥಿತಿಯಲ್ಲಿ ಆಗದ ಮಾತು. ಇದಕ್ಕೆ ಇರುವುದು ಒಂದೇ ಪರಿಹಾರ. ನಮ್ಮ ಪರಿಸ್ಥಿತಿ ಅರ್ಥವಾಗಿರುವುದು ನಿನಗೊಬ್ಬನಿಗೇ. ಆದ್ದರಿಂದ ನೀನೇ ನಮ್ಮನ್ನು ಲಗ್ನ ಆಗಬೇಕು. ನಾವು ಎಲ್ಲರೂ ಅನ್ಯೋನ್ಯವಾಗಿದ್ದು ನಿನ್ನೊಡನೆ ಸಹಕರಿಸುತ್ತೇವೆ" ಎಂದರು ಆ ಜಾಣೆಯರು. 

ಶ್ರೀಕೃಷ್ಣನು ಅವರೆಲ್ಲರನ್ನೂ ಮದುವೆಯಾಗಿ ದ್ವಾರಕೆಗೆ ಕರೆತಂದನು. ಪ್ರತಿಯೊಬ್ಬರಿಗೂ ಬೇರೆ ಬೇರೆ ಮನೆ ಮಾಡಿಕೊಟ್ಟನು. ಅವರೆಲ್ಲರಿಗೂ ಮಕ್ಕಳಾದುವು. ಅವರೆಲ್ಲರ ಜೊತೆ ಸಂಸಾರ ಮಾಡಿದನು. ಬೇರೆ ಬೇರೆ ಸಂದರ್ಭಗಳಲ್ಲಿ ಮದುವೆಯಾದವರೂ ಸೇರಿ ಅವನಿಗೆ ಒಟ್ಟು ಹದಿನಾರು ಸಾವಿರದ ನೂರಾಎಂಟು ಹೆಂಡಿರಾದರು. ಒಮ್ಮೆ ನಾರದರು ಅವನ ಸಂಸಾರದ ಪರೀಕ್ಷೆ ಮಾಡಲು ಬಂದು ಆಶ್ಚರ್ಯ ಪಟ್ಟಿದ್ದು ಕಥೆಗಳಲ್ಲಿ ವಿವರವಾಗಿ ಬಂದಿದೆ. 

"ಜಾಣೆಯರರಸ" ಎನ್ನುವ ಮೇಲಿನ ದೇವರನಾಮದ ಒಂದು ಪದಕ್ಕೆ ಈ ಹಿನ್ನೆಲೆ ಇದೆ!

*****

"ಜಾಣೆಯರರಸ" ಎನ್ನುವುದನ್ನು ನೋಡಿಯಾಯಿತು. ಇನ್ನೂ "ಸುಗುಣಿಯರರಸ" ಎನ್ನುವ ಪಾಠಾ೦ತರದ ವಿಷಯ ಬಾಕಿ ಉಳಿಯಿತು. ಈ ಹದಿನಾರು ಸಾವಿರ ರಾಜಕುಮಾರಿಯರು ನಿಜವಾಗಿ ಯಾರು? ಶ್ರೀಕೃಷ್ಣನು ಅವರನ್ನು ಏಕೆ ಮದುವೆಯಾಗಲು ಒಪ್ಪಿದನು? 

ಈ ಸಂಚಿಕೆ ಈಗಲೇ ದೀರ್ಘವಾಯಿತು. ಆದ್ದರಿಂದ ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ಮುಂದಿನ ಸಂಚಿಕೆಗಳಲ್ಲಿ ಹುಡುಕೋಣ, 

Friday, February 9, 2024

ಬಂದನೇನೇ? ರಂಗ ಬಂದನೇನೇ?


ಶ್ರೀಪುರಂದರದಾಸರ ಪದಗಳಲ್ಲಿರುವ ಸೊಬಗನ್ನು ನೋಡುತ್ತಾ ಅವರ ಅಹೋಬಲ ನರಸಿಂಹನ ಅವತಾರದ ವರ್ಣನೆ ನೋಡಿದೆವು. ನರಸಿಂಹನ ಉದ್ಭವದ ದೃಶ್ಯ ತಿಳಿಸುವಾಗ ಅವರು ಉಪಯೋಗಿಸಿರುವ ಗಟ್ಟಿ ಶಬ್ದಗಳ ಸೊಗಸು ಮತ್ತು ಆ ಸಂದರ್ಭದ ಭೀಕರತೆಯನ್ನು ಹಿಡಿದಿಟ್ಟಿರುವ ರೀತಿಯನ್ನು ನೋಡಿಯಾಯಿತು. ಅದೇ ಪದದಲ್ಲಿ ನರಸಿಂಹನು ಶಾಂತವಾದಾಗ ಹೇಗೆ ಸೌಮ್ಯ ಪದಗಳು ಪ್ರಯೋಗಿಸಿ ಉಗ್ರ ನರಸಿಂಹನನ್ನು ಪ್ರಹ್ಲಾದ ವರದನನ್ನಾಗಿ ತೋರಿಸಿದರು ಅನ್ನುವುದನ್ನೂ ನೋಡಿದೆವು. 

ಶ್ರೀ ಪುರಂದರದಾಸರ ಶ್ರೀಕೃಷ್ಣನ ವರ್ಣನೆಗಳುಳ್ಳ ಪದಗಳು ನೂರಾರು. ಶ್ರೀಕೃಷ್ಣನ ಜೀವಿತದ ಹಲವು ಘಟ್ಟಗಳಲ್ಲಿ ಬರುವ ಬೇರೆ ಬೇರೆ ಸಂದರ್ಭಗಳನ್ನು ದಾಸರು ತಮ್ಮ ಅನೇಕ ಪದಗಳಲ್ಲಿ ಹಿಡಿದಿಟ್ಟಿದ್ದಾರೆ. ಪ್ರತಿಪದದಲ್ಲಿಯೂ  ಅವರು ಸಂದರ್ಭಕ್ಕೆ ತಕ್ಕಂತೆ ಭಾಷೆಯನ್ನು ಪ್ರದರ್ಶಿಸಿದ್ದಾರೆ. 

ಆಗ ತಾನೇ ಹೆಜ್ಜೆ ಇಡಲು ಪ್ರಾರಂಭಿಸಿರುವ ಪುಟ್ಟ ಕೃಷ್ಣನ ಬರುವಿಕೆ ವರ್ಣಿಸುವ ಈ ಕೆಳಕಂಡ ಪದವು ಬಹಳ ಜನಪ್ರಿಯ. ಹಳ್ಳಿಗಳಲ್ಲಿ ಹಾಡುವುದನ್ನು ಕಲಿಯುವ ಮಕ್ಕಳಿಗೆ ಮೊದಲಿಗೆ ಕಲಿಸುತ್ತಿದ್ದ ಹಾಡುಗಲ್ಲಿ ಇದೂ ಒಂದು. ಕಲಿಯುವ ವಯಸ್ಸಿನ ಮಕ್ಕಳಿಗೆ ಸುಲಭವಾಗಿ ಅರ್ಥ ತಿಳಿಯುವ, ಹೇಳುತ್ತಿದ್ದಂತೆ ಹಾಡಿನ ರೂಪ ತಾಳುವ, ತನ್ನ ಪದಗಳಲ್ಲಿಯೇ ಒಂದು ರೀತಿಯ ಮೋಹಕ ಅನುಭವ ಕೊಡುವ ಕೃತಿ ಇದು. 

*****

ಪುಟ್ಟ ಕೃಷ್ಣ ಬರುವಾಗ ಹೇಗಿರುತ್ತಾನೆ? ಅವನ ವೇಷಭೂಷಣಗಳು ಹೇಗೆ? ಆ ವೇಷ ಮತ್ತು ಅಲಂಕಾರದ ವಸ್ತುಗಳು ಮತ್ತು ಅವನು ನಡೆದಾಡುವಾಗ ಆಗುವ ಶಬ್ಧಗಳೇನು? ಇದೇ ರೀತಿ ಇರುವ ಕಂದಮ್ಮಗಳು ನಡೆದಾಡುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ.  ಈ ವರ್ಣನೆ ಕೇಳುತ್ತಿದ್ದಂತೆ ನಮ್ಮ ಮನಸ್ಸಿನಲ್ಲಿ ಒಂದು ರೂಪ ಮೂಡುತ್ತದೆ! 

ಶ್ರೀಕೃಷ್ಣ ಬಂದನೇ ಎಂದು ಒಂದು ವ್ಯಕ್ತಿ ಮತ್ತೊಬ್ಬಳನ್ನು ಕೇಳುವ ಪ್ರಶ್ನೆಯ ರೀತಿ ಈ ಕೃತಿ ರಚನೆ ಮಾಡಿದ್ದಾರೆ:

ಬಂದನೇನೇ ರಂಗ ಬಂದನೇನೇ? 
ತಂದೆ ಬಾಲಕೃಷ್ಣ ನವನೀತ ಚೋರ 
ಬಂದನೇನೇ ರಂಗ ಬಂದನೇನೇ?

ಘಲು ಘಲು ಘಲುರೆಂಬೊ ಪೊನ್ನಂದುಗೆ ಗೆಜ್ಜೆ 
ಹೊಳೆ ಹೊಳೆ ಹೊಳೆಯುವ ಪಾದವನೂರುತ 
ನಲಿನಲಿದಾಡುವ ಉಂಗುರ ಅರಳೆಲೆ 
ಥಳ ಥಳ ಥಳ ಹೊಳೆಯುತ ಶ್ರೀಕೃಷ್ಣ 

ಕಿಣಿ ಕಿಣಿ ಕಿಣಿರೆಂಬೊ ಕರದ ಕಂಕಣ ಬಳೆ 
ಝಣ ಝಣ ಝಣರೆಂಬೊ ನಡುವಿನಗಂಟೆ 
ಠಣ ಠಣ ಠಣರೆಂಬೊ ಪಾದದ ತೊಡವಿನ 
ಮಿಣಿ ಮಿಣಿ ಮಿಣಿ ಕುಣಿದಾಡುತ ಶ್ರೀಕೃಷ್ಣ 

ಹಿಡಿ ಹಿಡಿ ಹಿಡಿಯೆಂದು ಪುರಂದರ ವಿಠಲನ 
ದುಡು ದುಡು ದುಡು ದುಡನೆ ಓಡಲು 
ನಡಿ  ನಡಿ  ನಡಿಯೆಂದು  ಮೆಲ್ಲನೆ ಪಿಡಿಯಲು 
ಬಿಡಿ ಬಿಡಿ ಬಿಡಿ ದಮ್ಮಯ್ಯ ಎನ್ನುತ 

ಬಂದನೇನೇ ರಂಗ ಬಂದನೇನೇ? 
ತಂದೆ ಬಾಲಕೃಷ್ಣ ನವನೀತ ಚೋರ 
ಬಂದನೇನೇ ರಂಗ ಬಂದನೇನೇ?

ದಾಸರು ಪ್ರಯೋಗಿಸಿರರುವುದು ಅತಿ ಕಡಿಮೆ ಪದಗಳು. ಪ್ರತಿ ಆಭರಣ ಮತ್ತು ಪುಟ್ಟ ಕೃಷ್ಣನ ಚಲನೆಯ ಶಬ್ದ ಮತ್ತು ನಡೆಗಳನ್ನು ಮತ್ತೆ ಮತ್ತೆ ಪ್ರಯೋಗಿಸುವುದರ ಮೂಲಕ ಒಂದು ರೀತಿಯ ವಿಶೇಷ ಅನುಭವವನ್ನು ಕೊಟ್ಟಿದ್ದಾರೆ. ಈ ಕೃತಿ ಒಂದು ಕಲ್ಲು ಸಕ್ಕರೆಯಂತೆ. ಸಿಹಿ ತಿಂಡಿಯಂತೆ ಒಮ್ಮೆಲೇ ತಿಂದು ಮುಗಿಸಬಾರದು. ಮತ್ತೆ ಮತ್ತೆ ಮೆಲುಕಿ ಹಾಕಿ ಆನಂದವನ್ನು ಅನುಭವಿಸಬೇಕು. ದೇವರನ್ನು ನಂಬುವುದೂ, ಬಿಡುವುದೂ ಅವರವರಿಗೆ ಸೇರಿದ ವಿಷಯ. ಆದರೆ ಸಾಹಿತ್ಯ-ಸಂಗೀತಗಳ ಸೊಗಸಿನ ಅನುಭವಕ್ಕೆ ಬೇರೆಲ್ಲ ವಿಷಯಗಳ ಸಂಪರ್ಕವಿಲ್ಲ. 

ಅಹೋಬಲ ನರಸಿಂಹನ ಉದ್ಭವವನ್ನೂ ಮತ್ತು ಈ ಬಾಲಕೃಷ್ಣನ ಆಗಮನವನ್ನೂ ಜೊತೆಯಲ್ಲಿ ಕೇಳಿದರೆ ಸಮಯಕ್ಕೆ ಸರಿಯಾದ ಪದ ಪ್ರಯೋಗದ ಜಾಣ್ಮೆಯನ್ನೂ ಕೈಚಳಕವನ್ನು ದಾಸರ ಪದಗಲ್ಲಿ ಕಾಣಬಹುದು. 

ಹರಿದಾಸರತ್ನಂ ಗೋಪಾಲದಾಸರು "ಗೆಜ್ಜೆ ಗೋಪಾಲದಾಸರು" ಎಂದೇ ಪ್ರಸಿದ್ಧರಾದವರು. ಅರವತ್ತು, ಎಪ್ಪತ್ತು, ಎಂಭತ್ತರ ದಶಕದಲ್ಲಿ ಬಹಳ ಪ್ರಸಿದ್ಧರಾದ ಮತ್ತು ಹರಿಕಥೆ ಎಂಬ ಕಲೆಯಲ್ಲಿ ಬಹಳ ನಿಪುಣರಾದವರು. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಾಹಿತ್ಯ ಮತ್ತು ಸಂಗೀತಕ್ಕೆ ಸರಿಯಾಗಿ ಹರಿಕಥೆ ಮಾಡುವಾಗಲೇ ಹೆಜ್ಜೆ ಹಾಕುತ್ತಿದ್ದವರು. ದಾಸರ ಪದಗಳನ್ನು ಹಾಡುವುದರಲ್ಲಿ ಬಹಳ ವಿಶೇಷ ಪರಿಶ್ರಮ ಹೊಂದಿದ್ದರು. ಈ ಮೇಲಿನ ಕೃತಿಯನ್ನು ಸುಮಾರು ಮೂವತ್ತು ನಲವತ್ತು ನಿಮಿಷ ಹಾಡುತ್ತಿದ್ದರು. ಪ್ರತಿಯೊಂದು ನುಡಿಯನ್ನೂ ಬೇರೆ ಬೇರೆ ರೀತಿಯಲ್ಲಿ ಹಾಡುತ್ತಿದ್ದರು. ಪ್ರತಿ ಸಾರಿಯೂ ಅದೊಂದು ವಿಶಿಷ್ಟ ಅನುಭವ. ಕಡೆಯ ನುಡಿಯಲ್ಲಂತೂ ಶ್ರೀಕೃಷ್ಣ ಓಡುವುದನ್ನು, ಮತ್ತು ಅವನನ್ನು ಮೆಲ್ಲಗೆ ಹಿಡಿಯುವುದನ್ನೂ, ಅವನು ದಮ್ಮಯ್ಯಗುಡ್ಡೆ ಹಾಕಿ ಬಿಡಿಸಿಕೊಂಡು ಓಡುವುದನ್ನೂ ಶಬ್ದಗಳ ಮೂಲಕವೇ ಚಿತ್ರಿಸುತ್ತಿದ್ದರು. ವೀಣಾ ರಾಜಾರಾಯರು ತಮ್ಮ ಸಂಗೀತಾಭ್ಯಾಸಿ ಶಿಷ್ಯರಿಗೆ ಈ ಪದವನ್ನು ವಿಶೇಷವಾಗಿ ಕಲಿಸುತ್ತಿದ್ದರು. 

*****

ಇಂದು ಪುಷ್ಯ ಬಹುಳ ಅಮಾವಾಸ್ಯೆ ಶ್ರೀ ಪುರಂದರದಾಸರ ಪುಣ್ಯ ದಿನ. ಅವರನ್ನು ನೆನೆಯಲು ಸುದಿನ. 

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ 
ಪುರಂದರ ಗುರಂ ವಂದೇ ದಾಸ ಶ್ರೇಷ್ಠಮ್ ದಯಾನಿಧಿಮ್