ಶ್ರೀಕೃಷ್ಣನ ಶಾಂತಿ ದೂತ ಪ್ರಯತ್ನ ದುರ್ಯೋಧನನ ಮೊಂಡುತನದ ಕಾರಣ ವಿಫಲವಾಗಿದೆ. "ಇಡೀ ಸಾಮ್ರಾಜ್ಯ ನನ್ನದು. ಪಾಂಡವರಿಗೆ ಕೊಡಲು ಏನೂ ಇಲ್ಲ. ಅವರು ಮತ್ತೆ ವನವಾಸ, ಅಜ್ಞಾತವಾಸಗಳಿಗೆ ಮಾತ್ರ ಅಧಿಕಾರಿಗಳು. ಅವರಿಗೆ ಸೂಜಿಮೊನೆಯ ಜಾಗವೂ ಇಲ್ಲ" ಎಂದು ಅವನು ಘೋಷಿಸಿ ಶ್ರೀಕೃಷ್ಣನನ್ನು ಬಂಧಿಸಲು ಆಗದ ಪ್ರಯತ್ನ ನಡೆಸಿಯೂ ಆಯಿತು. ಇನ್ನು ಉಳಿದದ್ದು ಒಂದೇ ದಾರಿ. ಅದು ಧರ್ಮಕ್ಷೇತ್ರ ಕುರುಕ್ಷೇತ್ರದ ಹಾದಿ. ಒಂದು ಕಡೆ ಹನ್ನೊಂದು ಅಕ್ಷೋಹಿಣಿ ಸೈನ್ಯ. ಮತ್ತೊಂದು ಕಡೆ ಏಳು ಅಕ್ಷೋಹಿಣಿ ಸೈನ್ಯ. ಎರಡು ಸೈನ್ಯಗಳ ಮಧ್ಯೆ ನಿಂತು ಅರ್ಜುನ ಗಾಡೀವ ಬಿಸಾಡಿ ಮಂಕನಾಗಿ ನಿಂತೂ ಆಯಿತು. ಗೀತೋಪದೇಶ ನಡೆದು ಮೊದಲ ದಿನದ ಯುದ್ಧ ಪ್ರಾರಂಭವಾಯಿತು. ಮೊದಲ ದಿನದ ಸಂಗ್ರಾಮದಲ್ಲಿ ಎರಡೂ ಕಡೆ ಅನೇಕ ಸಾವು-ನೋವು ಉಂಟಾಗಿ ಸೂರ್ಯಾಸ್ತದಲ್ಲಿ ಕಾಳಗ ನಿಂತಿದೆ. ಯುದ್ಧದಲ್ಲಿ ದಣಿದ, ಆದರೆ ಬದುಕುಳಿದ ವೀರ ಸೈನಿಕರೆಲ್ಲ ತಮ್ಮ ತಮ್ಮ ಬಿಡಾರಗಳ ಕಡೆ ಹೊರಟಿದ್ದಾರೆ.
ಡೇರೆಗಳನ್ನು ತಲುಪಿದ ನಂತರ ಅವರೆಲ್ಲರ ಮೊದಲ ಕೆಲಸ ತಮ್ಮ ತಮ್ಮ ಶಸ್ತ್ರಗಳನ್ನು ಪಕ್ಕಕ್ಕಿಟ್ಟು, ಭಾರವಾದ ಪೋಷಾಕುಗಳನ್ನು ಕಳಚಿ, ಒಣಗಿದ ಬಾಯಿಗಳಿಗೆ ಸ್ವಲ್ಪ ನೀರು ಕುಡಿಸಿ, ಸಿಕ್ಕಿದ ಆಸನಗಳಿಗೆ ಕುಸಿಯುವುದು. ಈಗ ಸೈನ್ಯದ ಜೊತೆಯಲ್ಲಿ ಬಂದಿದ್ದ ವೈದ್ಯರು ಮತ್ತು ಅವರ ಸಹಾಯಕರಿಗೆ ದಣಿದು ಕುಳಿತ ಈ ವೀರರಿಗೆ ಆಗಿರುವ ಗಾಯಗಳ ರಕ್ತ ಒರೆಸಿ, ಮುಲಾಮು ಹಚ್ಚಿ, ಪಟ್ಟಿ ಕಟ್ಟುವುದು. ಇದಾದ ನಂತರ ಎರಡನೆಯ ಕೆಲಸ ಸುಖೋಷ್ಣವಾದ ನೀರಿನಲ್ಲಿ ಸ್ನಾನಾದಿಗಳು. ಅದೂ ಆದ ಮೇಲೆ ಅವರವರ ಪದ್ಧತಿಯಂತೆ ಅಹ್ನಿಕಾದಿಗಳು. ಹಾಸಿಗೆ ಕಂಡರೆ ಸಾಕೆನಿಸಿದ ವಿಪರೀತ ದಣಿದ ದೇಹಗಳು. ಆದರೆ ಪವಡಿಸುವ ಮುಂಚೆ ಹೊಟ್ಟೆಗೆ ಆಹಾರ ಬೇಕಲ್ಲ. ಸೇನೆಯ ಕ್ರಮಕ್ಕೆ ತಕ್ಕಂತೆ ಆರೋಗಣೆಗೆ ವ್ಯವಸ್ಥೆಗಳು ಆಗಿವೆ. ಬಾಣಸಿಗರು ಅಡುಗೆ ಸಿದ್ಧಪಡಿಸಿದ್ದಾರೆ. ಪರಿಚಾರಿಕರು ಬಡಿಸಲು ತಯಾರಿದ್ದಾರೆ. ಭೋಜನಕ್ಕೆ ಕುಳಿತಿದ್ದರೂ ಎಲ್ಲರ ಮನಸ್ಸು ಅಂದಿನ ಯುದ್ಧದ ಸೋಲು-ಗೆಲವು ಮತ್ತು ಸಾವು-ನೋವುಗಳ ಚಿಂತನೆಯಲ್ಲಿ ತೊಡಗಿವೆ.
ಪಾಂಡವರ ಬಿಡಾರದಲ್ಲಿ ಐವರು ಅಣ್ಣ-ತಮ್ಮಂದಿರು ಸಾಲಾಗಿ ಊಟಕ್ಕೆ ಕುಳಿತಿದ್ದಾರೆ. ಆರು ಎಲೆಗಳಿಗೆ ಬಡಿಸಿ ಆಗಿದೆ. ಆದರೆ ನಾಲ್ವರು ಸಹೋದರರು ಮತ್ತು ಪಾರ್ಥ ಬಂದಿದ್ದರೂ ಊಟ ಮಾಡುವಹಾಗಿಲ್ಲ. ಆರನೆಯವನಾದ ಪಾರ್ಥಸಾರಥಿ ಏಕೋ ಇನ್ನೂ ಬಂದಿಲ್ಲ. ಕೇಶವನಿಲ್ಲದೆ ಭೋಜನವೆಲ್ಲಿ? ಮಾಧವನನ್ನು ಕರೆತರಲು ದೂತರನ್ನು ಕಳಿಸಿದ್ದಾಯಿತು. ಅವನೇನು ಮಾಡುತ್ತಿದ್ದಾನೆ? ಏಕೆ ತಡವಾಯಿತು? ಅವನು ಎಂದೂ ಸಮಯ ಮೀರುವವನಲ್ಲವಲ್ಲ!
****
ಪಾಂಡವರ ಬಿಡಾರ ತಲುಪಿದ ನಂತರ ಪಾರ್ಥಸಾರಥಿ ಅರ್ಜುನನ ಡೇರೆಯ ಮುಂದೆ ರಥ ನಿಲ್ಲಿಸಿ, ಕ್ರಮದಂತೆ ರಥದಿಂದ ಕೆಳಗಡೆ ಇಳಿದು, ಬಲಗೈ ನೀಡಿ ಪಾರ್ಥನನ್ನು ಕೆಳಗಿಳಿಯಲು ಸಹಾಯ ಮಾಡಿದ್ದಾನೆ. ಪಾರ್ಥ ತನ್ನ ಬಿಡಾರದ ಒಳಗೆ ಹೊರಟ ನಂತರ ತಾನು ಮತ್ತೆ ರಥವೇರಿ ಕುದುರೆಗಳ ಲಾಯದ ಬಳಿ ಬಂದಿದ್ದಾನೆ. ರಥ ನಿಲ್ಲಿಸಿ, ನಾಲ್ಕು ಕುದುರೆಗಳನ್ನು ಅವುಗಳ ಬಂಧನದಿಂದ ಬಿಡುಗಡೆ ಮಾಡಿ, ಲಾಯದ ಒಳಗಡೆ ತಂದಿದ್ದಾನೆ. ಅವುಗಳ ನಿಗದಿತ ಸ್ಥಾನದಲ್ಲಿ ಕಟ್ಟಿ ಒಂದೊಂದಾಗಿ ಅವುಗಳ ಸಣ್ಣ ಗಾಯಗಳಿಗೆ ಮುಲಾಮು ಹಚ್ಚಿ ಮೈದಡವಿದ್ದಾನೆ. ಶ್ರೀಕೃಷ್ಣನ ಚಾಕಚಕ್ಯತೆ ಮತ್ತು ಪಾರ್ಥನ ಗಾಂಡೀವದ ಕಾರಣ ಹೆಚ್ಚು ಗಾಯಗಳಾಗಿಲ್ಲ. ಆದರೂ ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತಿತರ ಕೌರವ ವೀರರ ಸೈನ್ಯ ಸಾಮಾನ್ಯವೇ? "ದಂಡಿನಲ್ಲಿ ಸೋದರಮಾವನೇ?" ಎಂದು ಗಾದೆಯೇ ಇದೆಯಲ್ಲ! ಸಣ್ಣ-ಪಣ್ಣ ಆದರೂ ಗಾಯಗಳು ಗಾಯಗಳು ತಾನೇ? ಕುದುರೆಗಳ ಮುಂದೆ ನೀರಿನ ವ್ಯವಸ್ಥೆ ಮಾಡಿದ್ದಾನೆ. ನೀರು ತಂದು ಅವುಗಳ ಮೈ ತೊಳೆದಿದ್ದಾನೆ. ಅವನನ್ನು ಹುಡುಕಿಕೊಂಡು ಬಂದ ಪಾಂಡವರ ದೂತರು ಅವನ ಕೆಲಸದ ಮಧ್ಯೆ ಮಾತನಾಡಲು ಧೈರ್ಯವಿಲ್ಲದೆ ಸ್ವಲ್ಪ ದೂರದಲ್ಲಿ ಭಯ-ಭಕ್ತಿಯಿಂದ ನಿಂತಿದ್ದಾರೆ. ಮುಂದೇನು?
ಇದೇನು? ಅಷ್ಟೊಂದು ಮಂದಿ ಆಳು-ಕಾಳುಗಳಿದ್ದರೂ ಕೇಶವನು ತಾನೇ ಹುಲ್ಲು ಹೊತ್ತು ತರುತ್ತಿದ್ದಾನೆ! ಎಲ್ಲ ಕುದುರೆಗಳ ಮುಂದೆ ಅಷ್ಟಷ್ಟು ಹಾಕುತ್ತಿದ್ದಾನೆ. ಅವುಗಳು ಹುಲ್ಲು ತಿನ್ನುವಾಗ ಸರದಿಯಂತೆ ಅವುಗಳ ಮೈದಡವುತ್ತಿದ್ದಾನೆ. ಆ ಕುದುರೆಗಳಾದರೋ ಶ್ರೀಕೃಷ್ಣನ ಕೈ ನೆಕ್ಕಿ ತಮ್ಮ ಪ್ರೀತಿ ತೋರಿಸುತ್ತಿವೆ. ಆ ಎಲ್ಲ ಕುದುರೆಗಳು ಸ್ವಲ್ಪ ಹುಲ್ಲು ತಿಂದು, ನೀರು ಕುಡಿದ ನಂತರ ತೃಪ್ತಿಯಿಂದ ಪಾಂಡವರ ಡೇರೆಯ ಕಡೆ ಹೊರಟಿದ್ದಾನೆ. ನೋಡುತ್ತಿದ್ದ ದೂತರು ಮುಂದೆ ಹೋಗಿ ಧರ್ಮರಾಯನಿಗೆ ಎಲ್ಲಾ ವಿಷಯ ತಿಳಿಸಿದ್ದಾರೆ.
ಡೇರೆಯ ಒಳಗೆ ಬಂದ ಶ್ರೀಕೃಷ್ಣ ಈಗ ತನ್ನ ಸ್ನಾನ-ಆಹ್ನಿಕಗಳನ್ನು ಮುಗಿಸಿ ಭೋಜನಕ್ಕೆ ಒಳಗೆ ಬಂದ. ಶ್ರೀಕೃಷ್ಣನಿಗೆ ಐವರು ಸಹೋದರರು ಎದ್ದು ಗೌರವ ಸೂಚಿಸಿ ಅವನ ಜೊತೆ ಊಟಕ್ಕೆ ಕೂಡುತ್ತಾರೆ. ಯುಧಿಷ್ಠಿರ ಹೇಳುತ್ತಾನೆ:
"ಕುದುರೆಗಳ ಯೋಗಕ್ಷೇಮಕ್ಕೆ ಲಾಯದಲ್ಲಿ ಸೇವಕರಿದ್ದರಲ್ಲ, ಕೃಷ್ಣ. ಅವರು ಮುಂದಿನ ಕೆಲಸ ನೋಡುತ್ತಿದ್ದರು. ಕುದುರೆಗಳಿಗೆ ಹುಲ್ಲು-ಹುರಳಿ-ನೀರು ಕೊಡುವುದು ಅವರ ಕೆಲಸ. ಗಾಯಗಳಿಗೆ ಶುಶ್ರೂಷೆ ಮಾಡಲು ಪಶುವೈದ್ಯರಿದ್ದಾರೆ. ನೀನೇಕೆ ಅದೆಲ್ಲಾ ಮಾಡಿದೆ? ಇಲ್ಲಿ ಬಂದು ನಮ್ಮ ಜೊತೆ ಭೋಜನ ಮಾಡಬಾರದೇ?"
ತನ್ನ ಎಂದಿನ ಮುಗುಳ್ನಗೆಯ ಮಾತಿನಿಂದ ಶ್ರೀಕೃಷ್ಣ ಹೇಳುತ್ತಾನೆ:
"ಬೆಳಗ್ಗಿನಿಂದ ಇಲ್ಲಿವರೆಗೆ ಯುದ್ಧದಲ್ಲಿ ನಮಗೆ ಸಹಾಯ ಮಾಡಲು ಕುದುರುಗಳು ಬೇಕು. ಈಗ ಕುದುರೆಗಳ ಕ್ಷೇಮ ನೋಡಲು ನಮಗೆ ಐದು ನಿಮಿಷ ಪುರಸೊತ್ತಿಲ್ಲವೆಂದರೆ ಹೇಗೆ? ಇದು ಸಾರಥಿಯ ಕರ್ತವ್ಯ. ಕುದುರೆಗಳು ಮೂಕ ಪ್ರಾಣಿಗಳಾದರೂ ಅವಕ್ಕೆ ಎಲ್ಲ ಅರ್ಥವಾಗುತ್ತದೆ. ಸಾರಥಿಯ ಜೊತೆ ಕುದುರೆಗಳ ಬಾಂಧವ್ಯ ಚಕ್ರವತಿಯಾದ ನಿನಗೆ ಗೊತ್ತಾಗುವುಲ್ಲ. ಆಳುಗಳನ್ನು ನಂಬಿ ನನ್ನ ಕರ್ತವ್ಯ ನಾನು ಬಿಡಲಾರೆ. ನಾಳಿನಿಂದ ನೀವು ನನಗೆ ಕಾಯಬೇಡಿ. ನಾನು ಬರುವುದು ತಡವಾಗುತ್ತದೆ. ನಿಮ್ಮ ಪಾಡಿಗೆ ನೀವು ಭೋಜನ ಮುಗಿಸಿ. ನನ್ನ ಸಮಯದಲ್ಲಿ ನಾನು ಬಂದು ಭೋಜನ ಮಾಡುತ್ತೇನೆ. ಚಿಂತೆ ಬೇಡ. "
ಶ್ರೀಕೃಷ್ಣನ ಕಾರ್ಯನಿಷ್ಠೆಗೆ ತಲೆದೂಗುತ್ತಾ ಧರ್ಮಜ ಹೇಳುತ್ತಾನೆ:
"ಶ್ರೀಕೃಷ್ಣನಿಲ್ಲದೆ ಪಾಂಡವರು ಊಟ ಮಾಡುವುದು ಹೇಗೆ? ಅದು ಸಾಧ್ಯವೇಇಲ್ಲ. ನಾಳಿನಿಂದ ನೀನು ಬರುವವರೆಗೆ ನಾವೂ ಬಿಡಾರ ಸುತ್ತಿ ಸೈನಿಕರ ಯೋಗಕ್ಷೇಮ ವಿಚಾರಿಸುತ್ತೇವೆ. ನಂತರ ಆರು ಜನವೂ ಒಟ್ಟಿಗೆ ಭೋಜನ ಮಾಡೋಣ."
ಈಗ ಎಲ್ಲರ ಊಟ ಪ್ರಾರಂಭವಾಗುತ್ತದೆ.
*****
ಶ್ರೀಕೃಷ್ಣನಲ್ಲಿ ಪಾಂಡವರಿಗೆ, ಪಾಂಚಾಲಿಗೆ ಅಚಲವಾದ ಶ್ರದ್ದೆ-ಭಕ್ತಿ. ಶ್ರೀಕೃಷ್ಣನಿಗೆ ಪಾಂಡವ-ದ್ರೌಪದಿಯರಲ್ಲಿ ಎಲ್ಲಿಲ್ಲದ ಪ್ರೀತಿ-ಗೌರವ. ಪಾಂಡವರು ಶ್ರೀಕೃಷ್ಣನನ್ನು ಅವನು ಬಂದಾಗಲೆಲ್ಲ ಹೂವುಗಳಿಂದ ಸ್ವಾಗತಿಸಿದರು. ಅರಣ್ಯವಾಸದಲ್ಲಿದ್ದಾಗ ಅವನಿಗಾಗಿ ಕಾಡೆಲ್ಲಾ ಹುಡುಕಿ ಸೊಗಸಾದ ಹೂವುಗಳನ್ನು ತಂದರು. ಈಗ ಸಮಯ ಬಂದಾಗ ಶ್ರೀಕೃಷ್ಣನು ಅವರ ಕುದುರೆಗಳಿಗೆ ಹುಲ್ಲನ್ನು ತಂದಿದ್ದಾನೆ. ಅವನಿಗೆ ಚಿಕ್ಕ ಕೆಲಸ, ದೊಡ್ಡ ಕೆಲಸ ಎನ್ನುವ ಭೇದವಿಲ್ಲ. ಹೂವು ತಂದವರ ಮನೆಗೆ ಹುಲ್ಲು ತಂದ, ಶ್ರೀಕೃಷ್ಣ!
ಮಹಾನುಭಾವರಾದ ಶ್ರೀ ಪುರಂದರ ದಾಸರು ಈ ಪ್ರಸಂಗವನ್ನು ವರ್ಣಿಸುವ ರೀತಿ:
ಒಂದುದಳ ಶ್ರೀತುಳಸಿ ಬಿಂದು ಗಂಗೋದಕಇಂದಿರಾರಮಣನಿಗೆ ಅರ್ಪಿತವೆನುತಒಂದೇಮನದಲಿ ಸಿಂಧುಶಯನ ಮುಕುಂದಾ ಎನೆಎಂದೆಂದೂ ವಾಸಿಪನು ಮಂದಿರದ ಒಳಗೆ
ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿಪರಿಪೂರ್ಣನೆಂದು ಪೂಜೆಯನು ಮಾಡೆಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿಸರೀಭಾಗ ಕೊಡುವ ತನ್ನ ಅರಮನೆಯ ಒಳಗೆ
ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದುಪುಂಡರೀಕಾಕ್ಷ ತಾ ಹುಲ್ಲನು ತಿನಿಸಿದಅಂಡಜಾವಾಹನ ಶ್ರೀ ಪುರಂದರ ವಿಠಲನುತೊಂಡರಿಗೆ ತೊಂಡನಾಗಿ ಸಂಚರಿಸುತಿಹನು
ಹೂವ ತರುವರ ಮನೆಗೆ ಹುಲ್ಲ ತರುವಅವ್ವ ಲಕುಮಿರಮಣ ಇವಗಿಲ್ಲ ಗರುವ
ಎಷ್ಟು ಸೊಗಸಾಗಿ ಹೂವಿಗೂ, ಹುಲ್ಲಿಗೂ ಇರುವ ಸಂಬಂಧ ಹೇಳಿದ್ದಾರೆ!
*****
ದೊಡ್ಡವರ ಕೃತಿಗಳಲ್ಲಿ, ವೇದ-ಪುರಾಣ-ಕಾವ್ಯಗಳಲ್ಲಿ ಪ್ರತಿ ಪದಕ್ಕೂ ಅನೇಕ ಅರ್ಥಗಳಿರುತ್ತವೆ. ಕೇವಲ ಭಾಷೆ ಬರುತ್ತದೆ ಎನ್ನುವ ಕಾರಣದಿಂದ ಓದಿದರೆ ಮೇಲ್ನೋಟದ ಅರ್ಥ ಮಾತ್ರ ತಿಳಿಯುತ್ತದೆ. ಮತ್ತೆ ಮತ್ತೆ ಓದಿ ಮನನ ಮಾಡಿದರೆ ವಿಶೇಷ ಅರ್ಥಗಳು ಹೊಳೆಯುತ್ತವೆ. ತಿಳಿದವರ ಒಡನಾಟದಿಂದ ಗುಹ್ಯಾರ್ಥಗಳು (ಶಬ್ದಗಳಲ್ಲಿ ಕಾಣದಂತೆ ಹುದುಗಿರುವ ಅತಿ ವಿಶೇಷಾರ್ಥಗಳು) ತಿಳಿಯಬಹುದು. ಅದಕ್ಕೆ ಹೆಚ್ಚಿನ ಆಸಕ್ತಿ ಮತ್ತು ಶ್ರಮ ಬೇಕು. ತಿಳಿಯಲೇಬೇಕೆನ್ನುವ ಹಠ ಬೇಕು. ತಿಳಿದವರನ್ನು ಹುಡುಕಿ, ಹಿಡಿದು, ಕಾಡಿ, ಬೇಡಿ ತಿಳಿಯಬೇಕು.
ಮೇಲಿನ ಪದದಲ್ಲಿ ದಾಸರು ಉಪಯೋಗಿಸಿರುವ ಅನೇಕ ಪದಗಳಿಗೆ, ಸಂದರ್ಭಗಳಿಗೆ ವಿಶೇಷ ಅರ್ಥ, ಗೂಡಾರ್ಥಗಳಿವೆ. ಮುಂದಿನ ಎರಡು-ಮೂರು ಅಥವಾ ನಾಲ್ಕು ಸಂಚಿಕೆಗಳಲ್ಲಿ ಈ ಅರ್ಥಗಳನ್ನು ತಿಳಿಯುವ ಪ್ರಯತ್ನ ಯಥಾಶಕ್ತಿ ಮಾಡೋಣ.
Very nicely written
ReplyDeleteಕರುಣಾನಿಧಿ ಶ್ರೀ ಕೃಷ್ಣ ಪರಮಾತ್ಮನ ಅಂತ:ಕರಣ ಎಲ್ಲಾ ಜೀವಿಗಳಿಗಳ ಮೇಲೂ ಸಮಾನ ಮಾತ್ರವಲ್ಲ, ಮೂಕ ಪ್ರಾಣಿಗಳ ಮೇಲೆ ಒಂದು ತೂಕ ಹೆಚ್ಚೇ ಎನ್ನುವ ವಿಷಯವನ್ನು ಚೆನ್ನಾಗಿ ಮನಮುಟ್ಟುವಂತೆ ವಿವರಿಸಿದ್ದೀರಿ 👌👌🙏🙏. ಇದು ನಮಗೆಲ್ಲರಿಗೂ ಮಾದರಿಯಾಗಬೇಕು . ಪುರಂದರದಾಸರ ಕೃತಿಗಳ ಭಾವಾರ್ಥ , ಗೂಢಾರ್ಥವನ್ನು ನಮಗೆಲ್ಲ ಸರಳವಾಗಿ ತಿಳಿಸುವ ನಿಮ್ಮ ಮುಂದಿನ ಲೇಖನಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ
ReplyDeleteಸರಳವಾಗಿ ತಿಳಿಸುವ introduced by Dr Balaji BR
ReplyDeleteಅದ್ಭುತ ನಿಮ್ಮ ವಿಶ್ಲೇಷಣೆ .ಚಿಕ್ಕಂದಿನಿಂದ ಹೂವ ತರುವರ ಮನೆಗೆ ಹುಲ್ಲ
ReplyDeleteತರುವ ಎಂಬ ದಾಸರಪದವನ್ನು ಕೇಳಿಕೊಂಡು ಬಂದಿದ್ದರೂ,ಅದರ ಅರ್ಥ ಗೊತ್ತಿರಲಿಲ್ಲ .ಮಾನವ ಸಹಜ ವ್ಯಾಪಾರಗಳನ್ನು ಬಹು ಸುಂದರವಾಗಿ ಸಹಜವಾಗಿ ವರ್ರ್ಣಿಸುವ ಕುಮಾರವ್ಯಾಸ ಭಾರತ ಓದಿದಾಗಲೂ ಆ ಎರಡಕ್ಕೂ ಸಂಬಂಧ ಕಲ್ಪಿಸಬಹುದೆಂದು ಹೊಳೆದೇ ಇರಲಿಲ್ಲ. ಬಹಳ ಹಿಂದಿನಿಂದ ನನಗೆ ದೇವರು ಹೂವತರುವರ ಮನೆಗೆ ಹುಲ್ಲು ತರುವನೇ? ಯಾಕೆ ?ಎಂಬ ಸಂದೇಹ ಇತ್ತು. ನನ್ನ ಸಂದೇಹ ಪರಿಹಾರ ಮಾಡಿದ್ದೀರಿ, ಧನ್ಯವಾದಗಳು
Thank you for explaining this so well. So many things we are coming to know because of you. The song has so much of meaning. We sing so many ‘DevaranamagaLu’ not knowing the meaning. …….UR
ReplyDelete“ಹೂವ ತರುವರ ಮನೆಗೆ ಹುಲ್ಲ ತರುವ “ ಈ ಪಂಕ್ತಿಯನ್ನು ಓದಿದ ನೆನಪು. ಆದರೆ ಇದರ ಮೂಲವನ್ನು ಶ್ರೀಕೃಷ್ಣನ ಮುಕಾಂತರ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
ReplyDeleteಪುರಂದರ ದಾಸರ ಕ್ರುತಿ ಗಳು ತುಂಬಾ ಅರ್ಥ ಪೂರ್ಣವಾಗಿ ಇರುತ್ತದೆ, ನಮಗೆ ಬರೀ ಶಬ್ದದ ಅರ್ಥ ಗೊತ್ತಾಗುತ್ತೆ, ಇಷ್ಟು ದೀರ್ಘವಾಗಿ ಬಿಡಿಸಿ ಸರಳವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು
ReplyDelete