Sunday, December 15, 2024

ಅರಮನೆಯ ಒಳಗೆ ಸರಿಭಾಗ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ವಿವರಗಳನ್ನು ನೋಡುತ್ತಾ ಕಳೆದ ಸಂಚಿಕೆಯಲ್ಲಿ "ಸರಸಿಜಾಕ್ಷನ ಸಕಲ ಸ್ವಾತಂತ್ರ್ಯ" ಎನ್ನುವ ಶೀರ್ಷಿಕೆಯಡಿ ಪರಮಾತ್ಮನ ಪರಿಪೂರ್ಣತ್ವ ಮತ್ತು ಸಕಲ ಸ್ವಾತಂತ್ರ್ಯದ ವಿಶೇಷ ಗುಣಗಳನ್ನು ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ ವಿಷಯವಾದ "ಸರಿಭಾಗ ಕೊಡುವನು ತನ್ನ ಅರಮನೆಯ ಒಳಗೆ" ಎನ್ನುವ ಬಗ್ಗೆ ವಿಚಾರ ಮಾಡೋಣ. 

ಬಹಳ ಶ್ರೀಮಂತನಾದ ಮತ್ತು ಅನೇಕ ಮನೆಗಳನ್ನು ಹೊಂದಿರುವ, ನಮಗೆ ತಿಳಿದಿರುವ ಒಬ್ಬ ವ್ಯಕ್ತಿಯ ಉದಾಹರಣೆ ತೆಗೆದುಕೊಳ್ಳೋಣ. ಆತನಿಗೆ ನಗರದಲ್ಲಿ ಅನೇಕ ಮನೆಗಳ ಮೇಲೆ ಅಧಿಕಾರ ಉಂಟು. ನಗರದ ಹೊರಗೂ ಅನೇಕ ಪ್ರದೇಶಗಳಲ್ಲಿಯೂ ತನ್ನದೇ ಆದ ಮನೆಗಳಿವೆ. ಇಷ್ಟೆಲ್ಲಾ ಇದ್ದರೂ ಎಲ್ಲೋ ಒಂದು ಕಡೆ ತನಗೇ ಎಂದುಕೊಂಡು ಒಂದು ಮನೆ ಇಟ್ಟುಕೊಂಡೇ ಇರುತ್ತಾನೆ. ಮಿಕ್ಕ ಮನೆಗಳೆಲ್ಲವೂ ಅವನ ಮನೇಗಳೇ ಆದರೂ ಅವನ ಮನೆಯ ವಿಳಾಸ ಕೇಳಿದರೆ ಈ ಮನೆಯ ವಿಳಾಸ ಕೊಡುತ್ತಾನೆ. ಎಲ್ಲಾ ಮನೆಗಳು ಅವನವೇ ಆದರೂ ವಾಸಸ್ಥಳದ ವಿಳಾಸಕ್ಕಾಗಿ ಒಂದು ಖಚಿತವಾದ ಮನೆಯ ವಿಳಾಸ ಕೊಡಲೇಬೇಕಲ್ಲವೇ? 

ಒಬ್ಬ ವ್ಯಕ್ತಿ ಒಂದು ಉದ್ಯೋಗದಲ್ಲಿದ್ದಾನೆ. ಆ ಉದ್ಯೋಗದ ನಿಮಿತ್ತ ಆತ ಹೆಚ್ಚು ಕಾಲ ಸಂಚಾರಿಯಾಗಿರುತ್ತಾನೆ. ಈ ರೀತಿಯಿದ್ದರೂ ಅವನಿಗೆ ಒಂದು ನಿಗದಿತ ಮುಖ್ಯ ಸ್ಥಾನ (ಹೆಡ್ ಕ್ವಾರ್ಟರ್ಸ್) ಎಂದು ಇರುತ್ತದೆ. ಇದು ಲೋಕಾರೂಢಿ. 

ಪರಮಾತ್ಮನಾದ ಶ್ರೀಹರಿಯು ಎಲ್ಲೆಡೆ ಇದ್ದಾನೆ. ಎಲ್ಲೆಡೆ ಇರುವುದೇನು? ಸಮಸ್ತ ವಿಶ್ವವೂ ಅವನ ಉದರದಲ್ಲಿ ಇದೆ. ಅದಕ್ಕೇ ಅವನನ್ನು "ಜಗದುದರ" ಎನ್ನುವುದು. ಅವನು ಇಡೀ ವಿಶ್ವದ ಹೊರಗೂ ವ್ಯಾಪಿಸಿ ನಿಂತಿದ್ದಾನೆ. ಹೀಗಿದ್ದರೂ ಮೇಲೆ ಹೇಳಿದ ವ್ಯಕ್ತಿಗಳಂತೆ ತನ್ನದು ಎನ್ನುವಂತೆ ಒಂದು ವಿಳಾಸವನ್ನು ಇಟ್ಟುಕೊಂಡಿದ್ದಾನೆ. ಅದಕ್ಕೆ "ವೈಕುಂಠ" ಎಂದು ಹೆಸರು. ಆದ ಕಾರಣ ಶ್ರೀ ಹರಿಯು ವೈಕುಂಠದಲ್ಲಿ ಇದ್ದಾನೆ ಎನ್ನುತ್ತಾರೆ. ಅಂದಮಾತ್ರಕ್ಕೆ ಅವನು ಕೇವಲ ವೈಕುಂಠದಲ್ಲಿ ಇದ್ದಾನೆ ಎಂದು ಭಾವಿಸಬಾರದು. ವೈಕುಂಠದ ಜೊತೆಗೆ ಇನ್ನೆರಡು ಮನೆಗಳನ್ನೂ ತನ್ನ ವಿಳಾಸದಲ್ಲಿ ಸೇರಿಸಿಕೊಂಡಿದ್ದಾನೆ. ಬೇಕಿದ್ದರೆ ಅವನ್ನು ಮೂರು ಮನೆಗಳುಳ್ಳ ಒಂದು ರೆಸಾರ್ಟ್ ಎನ್ನಬಹುದು. ಇನ್ನೆರಡು ಮನೆಗಳ ಹೆಸರು "ಶ್ವೇತದ್ವೀಪ" ಮತ್ತು "ಅನಂತಾಸನ" ಎಂಬ ಸ್ಥಳಗಳು. ಇವು ಮೂರೂ ಅವನ ಮನೆಗಳು ಎಂದು ತಿಳಿಯಬೇಕು. 

ಶ್ರೀ ಪುರಂದರದಾಸರು "ಹೂವ ತರುವರ ಮನೆಗೆ ಹುಲ್ಲ ತರುವ" ದೇವರನಾಮದಲ್ಲಿ "ಸರಿ ಭಾಗ ಕೊಡುವ ತನ್ನ ಅರಮನೆಯ ಒಳಗೆ" ಎಂದಾಗ ಈ ಮೂರು ಅರಮನೆಗಳಾದ "ಶ್ರೀ ವೈಕುಂಠ" "ಶ್ವೇತದ್ವೀಪ" ಮತ್ತು  "ಅನಂತಾಸನ" ಎಂದು ತಿಳಿಯಬೇಕು. ತಮ್ಮ ಅನೇಕ ಜನ್ಮಗಳ ಸಾಧನೆಯ ಫಲವಾಗಿ ಜೀವನ್ಮರಣ ಚಕ್ರದಿಂದ ಪಾರಾಗಿ ವಿಷವರ್ತುಲದಿಂದ ಹೊರಬಂದ ಜೀವರಿಗೆ "ಜೀವನ್ಮುಕ್ತರು" ಅಥವಾ "ಮುಮುಕ್ಷ ಜೀವರು" ಎನ್ನುತ್ತಾರೆ. ಪರಮಾತ್ಮನು ಈ ಜೀವನ್ಮುಕ್ತರಿಗೆ ತನ್ನ ಅರಮನೆಗಳಾದ ವೈಕುಂಠ, ಶ್ವೇತದ್ವೀಪ ಮತ್ತು ಅನಂತಾಸನಗಳಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡುತ್ತಾನೆ. 

***** 

ನಾವು ಧರಿಸುವ ಉಡುಪಿನಲ್ಲಿ ಅನೇಕ ಪದರಗಳಿರುತ್ತವೆ. ಮೊದಲಿಗೆ ಒಳ ಉಡುಪು. ಅದರಮೇಲೆ ಸಾಮಾನ್ಯ ಉಡುಪು. ಸುಂದರವಾಗಿ ಕಾಣಲೆಂದು ಹೊರ ಉಡುಪು ಬೇರೆ. ಚಳಿಗಾಲದಲ್ಲಿ ಅವುಗಳ ಮೇಲೆ ಉಣ್ಣೆಯ ಸ್ವೆಟರ್, ಇತ್ಯಾದಿ. ಜೀವನೂ ಹಾಗೆ. ಜೀವನು ಅತಿ ಸೂಕ್ಷ್ಮನಾಗಿದ್ದಾನೆ. ಅವನ ಮೇಲೆ "ಲಿಂಗದೇಹ" ಇದೆ. ಇದು ನಮ್ಮ ಚರ್ಮದ ಹೊದಿಕೆ ಇದ್ದಂತೆ. ಲಿಂಗ ದೇಹದ ಮೇಲೆ "ಅನಿರುದ್ಧ ದೇಹ" ಉಂಟು. ಅದರಮೇಲೆ ಎಲ್ಲರಿಗೂ ನಾವು ಕಾಣುವಂತೆ ಈ ಪಂಚಭೂತಗಳಿಂದ ಮಾಡಿದ ದೇಹ. ಈ ಪಂಚ ಭೂತಗಳ ದೇಹ ಆಗಾಗ, ಪ್ರತಿ ಜನ್ಮದ ಕೊನೆಗೆ, ಬಿದ್ದು ಹೋಗುತ್ತದೆ. ಮುಂದಿನ ಜನ್ಮದಲ್ಲಿ ಆ ಜನ್ಮಕ್ಕೆ ತಕ್ಕಂತೆ ಮತ್ತೊಂದು ಹೊಸ ದೇಹ ಬರುತ್ತದೆ. ಹೀಗೆ ಜೀವಿಯು ಪಂಚಭೂತದ ದೇಹಗಳನ್ನು ಬದಲಾಯಿಸುತ್ತ ಇರಬೇಕಾದ ಅನಿವಾರ್ಯತೆ ಇದೆ. ಭಗವದ್ಗೀತೆಯಲ್ಲಿ ಗೀತಾಚಾರ್ಯನು "ವಾಸಾಂಸಿ ಜೀರ್ಣಾನಿ ಯಥಾ ವಿಹಾಯ" ಎಂದು ಹೇಳಿದ್ದು ಇದನ್ನೇ. 

ಈ ಪಂಚಭೂತದ ದೇಹಕ್ಕೆ "ವರುಣ ಪಾಶ" ಮತ್ತು "ಯಮ ಪಾಶ" ಎನ್ನುವ ಎರಡು ಕಟ್ಟುಗಳು೦ಟು. ವರುಣಪಾಶದಿಂದ "ಜರಾ" (ಅಂದರೆ ಮುಪ್ಪು-ಖಾಯಿಲೆಗಳು) ಬರುತ್ತವೆ. ಈ ವರುಣಪಾಶದ ಬಲೆಯಿಂದ ತಪ್ಪಿಸಿಕೊಂಡರೆ, ಅಂದರೆ "ಜರಾ"ದಿಂದ ತಪ್ಪಿಸಿಕೊಂಡರೆ ಜೀವಿ "ಅಜರ" ಆಗುತ್ತಾನೆ. ಯಮಪಾಶದಿಂದ "ಮರಣ" ಬರುತ್ತದೆ. ಈ ಯಮಪಾಶದಿಂದ ತಪ್ಪಿಸಿಕೊಂಡರೆ, ಅಂದರೆ ಮರಣದಿಂದ ತಪ್ಪಿಸಿಕೊಂಡರೆ "ಅಮರ" ಆಗುತ್ತಾನೆ. ಇವೆರಡನ್ನು ಸೇರಿಸಿಯೇ "ಅಜರ-ಅಮರ" ಪದ ಹುಟ್ಟಿದೆ. ಅವರ ಹೆಸರು "ಅಜರಾಮರ"  ಆಯಿತು ಎನ್ನುತ್ತೇವೆ, ಅಂದರೆ ಅವರ ಹೆಸರು ಶಾಶ್ವತವಾಗಿ ಉಳಿಯಿತು ಎಂದು. 

ಸಾಧನೆಯ ತುಟ್ಟ ತುದಿ ತಲುಪಿದ ಜೀವಿಗೆ ಪರಮಾತ್ಮನು ಹುಟ್ಟು-ಸಾವಿನಿಂದ ಬಿಡುಗಗೆ ಕೊಡುತ್ತಾನೆ. ಇದನ್ನೇ "ಮೋಕ್ಷ" ಎನ್ನುತ್ತಾರೆ.  ಈಗ ಲಿಂಗದೇಹ, ಅನಿರುದ್ಧ ದೇಹ ಬೇಕಾಗಿಲ್ಲ. ಯಾಕೆಂದರೆ, ಇನ್ನು ಮುಂದೆ ದೇಹ ಬದಲಾಯಿಸುವ ಅವಶ್ಯಕತೆ ಇಲ್ಲ. ಅದಕ್ಕೆ ಲಕ್ಷ್ಮೀದೇವಿಯು ಈ ಮಟ್ಟ ತಲುಪಿದ ಜೀವರಿಗೆ ಲಿಂಗ ದೇಹ ಭಂಗ ಮಾಡಿಸಿ "ಮುಕ್ತಿ ಮಂಟಪ"ಕ್ಕೆ ಕರೆದೊಯ್ಯುತ್ತಾಳೆ. ಅಲ್ಲಿ ಪರಮಾತ್ಮನು ತನ್ನ ಸಕಲ ಸ್ವಾತಂತ್ರ್ಯದಲ್ಲಿ ಮುಕ್ತಿಯ, ಎಂದೂ ಕೊನೆಯಾಗದ ದಿವ್ಯಾನಂದವನ್ನು ಅನುಭವಿಸಲು ದಿವ್ಯವಾದ "ಸ್ವರೂಪ ದೇಹ" ಕೊಡುತ್ತಾನೆ. ಇದಕ್ಕೆ ಜರಾ-ಮರಣಗಳಿಲ್ಲ. ಕೊನೆಯಿಲ್ಲ. ಇದರಿಂದ ಜೀವನು ಹುಟ್ಟು-ಸಾವಿನ ಭಯವಿಲ್ಲದ, ಕೊನೆಯಿಲ್ಲದ, ಮುಕ್ತಿಯಲ್ಲಿನ ಆನಂದಗಳನ್ನು ಅನುಭವಿಸುತ್ತಾನೆ. 

*****

ಒಂದು ಮನೆ ಇದೆ. ನಲವತ್ತು ಅಡಿ ಅಗಲ, ಅರವತ್ತು ಅಡಿ ಉದ್ದದ ನಿವೇಶನದ ಮೇಲೆ ಕಟ್ಟಿದ್ದಾರೆ. ಹತ್ತು ಚದರ ಕಟ್ಟಿದ್ದಾರೆ ಅನ್ನಿ. ಇದು ಒಬ್ಬರಿಗೆ ಸೇರಿದ್ದು. ಒಬ್ಬರದ್ದೇ ಆದರೆ ಯೋಚನೆಯಿಲ್ಲ. ತಂದೆ ಇರುವವರೆಗೆ ಅವರದ್ದೇ ಅಧಿಕಾರ. ತಂದೆಯ ನಂತರ ಇಬ್ಬರು ಮಕ್ಕಳಿಗೆ ಮನೆ ಸೇರುತ್ತದೆ. ಇಬ್ಬರು ಮಕ್ಕಳಿಗೂ ಸಮಾನ ಅಧಿಕಾರ. ಈಗ ಮನೆ ಭಾಗ ಮಾಡಿ ಇಬ್ಬರಿಗೂ ಕೊಡಬೇಕು. ಉದ್ದುದ್ದ ಭಾಗ ಮಾಡಿದರೆ ಇಬ್ಬರಿಗೂ ಇಪ್ಪತ್ತುಅಡಿ ಅಗಲ, ಅರವತ್ತು ಅಡಿ ಉದ್ದದ ನಿವೇಶನ ಸಿಗುತ್ತದೆ. ಅಗಲದ ಮೇಲೆ ಭಾಗ ಮಾಡಿದರೆ ಇಬ್ಬರಿಗೂ ಮೂವತ್ತು ಅಡಿ ಉದ್ದ,  ನಲವತ್ತು ಅಡಿ ಅಗಲ ನಿವೇಶನ ಸಿಗುತ್ತದೆ. ಮನೆಯ ಐದು ಚದರ ಭಾಗ ಸಿಗುತ್ತದೆ. (ಹಿಂದಿನ ನಿವೇಶನ, ಅದಕ್ಕೆ ಲಗತ್ತಾದ ಭಾಗ ಯಾರಿಗೂ ಬೇಡ. ಅದು ಇರಲಿ). ಇದು ಸಮಭಾಗ ಅಥವಾ ಸರಿಭಾಗ. ಲೋಕಾರೂಢಿಯಲ್ಲಿ ಹೀಗೆಯೇ ಮಾಡುವುದು. ಮುಂದಿನ ತಲೆಮಾರಿನಲ್ಲಿ ಭಾಗ ಮಾಡಿದರೆ ಎಲ್ಲರಿಗೂ ಒಂದು ಲಂಗೋಟಿಯಂತಹ ಭೂಮಿ ಸಿಕ್ಕಬಹುದು! ಹೀಗೆ ಮಾಡುತ್ತಾ ಹೋದರೆ ಮುಂದೆ ಒಂದು ದಿನ ಭಾಗ ಮಾಡಿದ ಮನೆಗಳ ಗೋಡೆ ಕಟ್ಟಲೂ ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣ ಆಗುತ್ತದೆ!

ಪರಮಾತ್ಮನು ತನ್ನ ಮೂರು ಅರಮನೆಗಳಾದ ವೈಕುಂಠ, ಶ್ವೇತದ್ವೀಪ, ಅನಂತಾಸನ ಇವುಗಳಲ್ಲಿ ಸರಿಭಾಗ ಕೊಡುತ್ತಾನೆ ಎಂದು ದಾಸರು ಹೇಳಿದರು. ಅಲ್ಲಿಯೂ ಹೀಗೇ ಏನು? ಆಂತಹ ಮುಕ್ತಿಸ್ಥಾನ ಯಾರಿಗೆ ಬೇಕು? ಇದು ಒಳ್ಳೆಯ ಪ್ರಶ್ನೆ. 

ಪರಮಾತ್ಮನ ಸರಿಭಾಗಕ್ಕೆ ಈ ರೀತಿಯ ಕಟ್ಟುಪಾಡುಗಳಿಲ್ಲ. ಭಾಗ ಮಾಡಬೇಕಾಗಿ ಬಂದಾಗ ಆ ಅರಮನೆಗಳು ಆವಾಗಿಯೇ ಹಿಗ್ಗುತ್ತವೆ. ಅವನ ಸೃಷ್ಟಿಗೆ ನಮ್ಮ ಭಾಗ-ವಿಭಾಗದ ಭೌತಿಕ ಇತಿಮಿತಿಗಳಿಲ್ಲ. ಅರಮನೆಗಳು ಅವಾಗಿಯೇ ಹಿಗ್ಗಿ ಭಾಗ ಪಡೆದ ಎಲ್ಲರಿಗೂ ಹಿಂದಿದ್ದಷ್ಟೇ ಜಾಗ ಸಿಗುತ್ತದೆ. ಯಾವುದೇ ಸ್ಥಳಾಭಾವ ಇರುವುದಿಲ್ಲ. 

ಪರಮಾತ್ಮನ ಸರಿಭಾಗದ ನ್ಯಾಯ ಇದು. ದಾಸರು ಹೇಳಿದ "ಸರಿಭಾಗ ಕೊಡುವ ತನ್ನ ಅರಮನೆಯಲ್ಲಿ" ಎನ್ನುವುದಕ್ಕೆ ಈ ರೀತಿ ಅರ್ಥ. 

*****

ಬೆಂಗಳೂರಿನಿಂದ ನವದೆಹಲಿಗೆ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹೋರಡುತ್ತದೆ.  ನಾಲ್ವರು ಪ್ರಯಾಣಿಕರು ಟಿಕೆಟ್ ಕೊಂಡಿದ್ದಾರೆ. ಒಬ್ಬ ಒಂದು ಸಾವಿರ ರೂಪಾಯಿ ಕೊಟ್ಟು ಸ್ಲೀಪರ್ ಟಿಕೆಟ್ ಕೊಂಡಿದ್ದಾನೆ. ಎರಡನೆಯವನು ಎರಡು ಸಾವಿರ ರೂಪಾಯಿ ಕೊಟ್ಟು 3ಎಸಿ ಸ್ಲೀಪರ್ ಟಿಕೆಟ್ ಕೊಂಡಿದ್ದಾನೆ. ಮೂರನೆಯವನು ಮೂರು ಸಾವಿರ ರೂಪಾಯಿ ಕೊಟ್ಟು 2ಎಸಿ ಸ್ಲೀಪರ್ ಟಿಕೆಟ್ ಕೊಂಡಿದ್ದಾನೆ. ನಾಲ್ಕನೆಯವನು ನಾಲ್ಕು ಸಾವಿರ ರೂಪಾಯಿ ಕೊಟ್ಟು ಫಸ್ಟ್ ಕ್ಲಾಸ್ ಎಸಿ ಟಿಕೆಟ್ ಕೊಂಡಿದ್ದಾನೆ. ನಾಲ್ವರೂ ರೈಲು ಹತ್ತುತ್ತಾರೆ. ಎಲ್ಲರೂ ಹೊರಟಿದ್ದು ಬೆಂಗಳೂರಿನಿಂದಲೇ. ಎಲ್ಲರೂ ತಲುಪುವುದು ನವದೆಹಲಿಗೇ. ಒಂದೇ ವೇಳೆ ಹೊರಟು ಒಂದೇ ಸಮಯಕ್ಕೆ ತಲುಪುತ್ತಾರೆ. ಆದರೆ ಪ್ರಯಾಣದಲ್ಲಿ ಅವರ ಅನುಭವಗಳು ಬೇರೆ ಬೇರೆ. ಕೊಟ್ಟ ಹಣಕ್ಕೆ ಸರಿಯಾಗಿ ಅನುಭವ. ಇನ್ನೊಬ್ಬರಿಗೆ ಬೇರೆ ರೀತಿಯ ಅನುಭವ ಆಗಿದ್ದಕ್ಕೆ ಇವರಿಗೆ ಬೇಸರ ಇಲ್ಲ, ಏಕೆಂದರೆ ತಾವು ಕೊಟ್ಟ ಹಣದ ಬೆಲೆ ಮತ್ತು ಬೇರೆಯವರು ಕೊಟ್ಟ ಹಣದ ಬೆಲೆ ಅವರೆಲ್ಲರಿಗೂ ಗೊತ್ತು. ಎಲ್ಲರೂ ಪ್ರಯಾಣದ ಆನಂದ ಅನುಭವಿಸುತ್ತಾರೆ. 

ಮುಕ್ತಿ ಭವನದಲ್ಲೂ ಇದೇ ರೀತಿ. ನಾಲ್ಕು ರೀತಿಯ ಮುಕ್ತಿ ದರ್ಜೆ ಉಂಟು. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಎಂದು ನಾಲ್ಕು ವಿಧ. ಎಲ್ಲರೂ ಮುಕ್ತರೇ.  (ಇವುಗಳ ವಿವರಣೆ ತುಂಬಾ ದೀರ್ಘ. ಮತ್ತೆಂದಾದರೂ ಅವಕಾಶ ಆದರೆ ನೋಡಬಹುದು). ಆದರೆ ಅವರವರ ಸಾಧನೆಯ ಮಜಲಿಗೆ ತಕ್ಕಂತೆ ಅವರವರ ಆನಂದದ ಅನುಭವ. ಪರಮಾತ್ಮನ ಸರಿಭಾಗ ಇದನ್ನೂ ಒಳಗೊಂಡಿದೆ. ಕಾಸಿಗೆ ತಕ್ಕ ಕಜ್ಜಾಯ. ಸಾಧನೆಗೆ ತಕ್ಕಂತೆ ಆನಂದ. 

ಪರಮಾತ್ಮನು ತನ್ನ ಅರಮನೆಯಲ್ಲಿ ಸರೀಭಾಗ ಕೊಡುವನು ಎನ್ನುವುದಕ್ಕೆ ಇಷ್ಟೆಲ್ಲಾ ವಿಶಾಲಾರ್ಥ ಉಂಟು. 

*****

ಹಿಂದಿನ ಸಂಚಿಕೆಗಳಲ್ಲಿ ಹೇಳಿದಂತೆ ಶ್ರೀಪುರಂದರದಾಸರು ದ್ವೈತ ಸಿದ್ಧಾಂತ ಅನುಸರಿಸಿದವರು. ಅದು ಜೀವಾತ್ಮ-ಪರಮಾತ್ಮ ಭೇದ ಹೇಳುತ್ತದೆ. ಅದ್ವೈತದಲ್ಲಿ ಹಾಗಲ್ಲ. ಅಲ್ಲಿ ಮುಕ್ತಿಯಲ್ಲಿ ಜೀವಾತ್ಮ ಪರಮಾತ್ಮನನ್ನು ಸೇರಿ ಒಂದೇ ಆಗುತ್ತಾನೆ. ದ್ವೈತದಲ್ಲಿ ಎರಡೂ ಬೇರೆ ಬೇರೆ ಆದುದರಿಂದ ಮುಕ್ತರಲ್ಲೂ ತಾರತಮ್ಯ ಉಂಟು. 

"ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಅನ್ನುವುದು ಉಳಿದಿದೆ. ಮುಂದಿನ ಸಂಚಿಕೆಯಲ್ಲಿ ಅದನ್ನು ನೋಡೋಣ.

6 comments:

  1. Made me understand about God and human beings life.

    ReplyDelete
  2. Such profound knowledge, one has to understand and the reading gets more interesting and worthwhile. Your effort less writing showcases the vastness of an array of subjects you attempt . Thanks so much

    ReplyDelete
  3. Dear Prof. Murthy. Namaskara. you have so effortlessly. covered such a deep subject in simple manner.

    ReplyDelete
  4. ಭಾನುಮತಿJanuary 13, 2025 at 3:37 PM

    ಪರಮಾತ್ಮನ ಇನ್ನೆರಡು ಅರಮನೆಗಳಾದ ಶ್ವೇತ ದ್ವೀಪ ಹಾಗೂ ಅನಂತಾಸನಗಳ ಬಗ್ಗೆ ನನಗೆ ಅರಿವಿರಲಿಲ್ಲ. 😬 ತಮ್ಮ ಅವಿರತ ಸಾಧನೆಗಳಿಂದ ಜೀವನ್ಮುಕ್ತರಾದ ಜೀವಿಗಳಿಗೆ ತನ್ನ ಮೂರೂ ಅರಮನೆಗಳನ್ನು ಬೇಕಾದಷ್ಟು ಹಿಗ್ಗಿಸಿ ಸರಿಭಾಗ ಕೊಡುವ ಅವನ ಕೃಪೆ ಅನನ್ಯ. ಇಂತಹ ಅಸದೃಶ ಸಾಮರ್ಥ್ಯ ಇನ್ನಾರಿಗುಂಟು ಅಲ್ಲವೇ.🙏ರೈಲು ಪ್ರಯಾಣ ಹಾಗೂ ಮುಕ್ತಿ ಭವನದ ದರ್ಜೆಗಳ ಉದಾಹರಣೆಗಳು ಸರಳವಾಗಿ ಅರ್ಥ ಮಾಡಿಸುತ್ತವೆ. ಧನ್ಯವಾದಗಳು ಸರ್ 🙏

    ReplyDelete