ಒಂದು ಕೃತಿಯನ್ನು ಓದಿದಾಗ, ಅದು ಸಾಹಿತ್ಯ ಕೃತಿ ಇರಬಹುದು, ವೈದಿಕ ಗ್ರಂಥವಿರಬಹುದು, ಅಥವಾ ಒಂದು ಸಾಮಾನ್ಯ ಪತ್ರವೇ ಇರಬಹುದು, ಓದುಗನಿಗೆ ಅದರ ಅರ್ಥ ಹೊಳೆಯುವುದು ಆ ಕೃತಿಯಲ್ಲಿರುವ ಪದಪುಂಜಗಳ ಜೊತೆಗೆ ಅವನ ವೈಯುಕ್ತಿಕ ಸಿದ್ಧತೆ, ಸಾಧನೆಗಳನ್ನೂ ಅವಲಂಬಿಸುತ್ತದೆ. ಒಂದು ಉದಾಹರಣೆ ತೆಗೆದುಕೊಳ್ಳಬಹುದು. ಆದಿಕವಿ ವಾಲ್ಮೀಕಿಗಳ ರಾಮಾಯಣವನ್ನೇ ತೆಗೆದುಕೊಳ್ಳೋಣ. ಒಂದು ಶಾಲೆಯಲ್ಲಿ ಕಲಿಯುವ ಕಿರಿಯ ವಿದ್ಯಾರ್ಥಿಯು ಆ ರಾಮಾಯಣವನ್ನು ಓದುತ್ತಾನೆ. ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ಅಭ್ಯಸಿಸುವ ಯುವಕ ಹಿರಿಯ ವಿದ್ಯಾರ್ಥಿಯೂ ಅದನ್ನೇ ಓದುತ್ತಾನೆ. ಅದೇ ವಿಶ್ವವಿದ್ಯಾಲಯದಲ್ಲಿ ಅಂತಹ ಅನೇಕ ಯುವಕರಿಗೆ ಕೆಲ ವರ್ಷಗಳು ಪಾಠ ಹೇಳಿದ ಪ್ರಾಧ್ಯಾಪಕನೂ ಅದೇ ಕೃತಿಯನ್ನು ಓದುತ್ತಾನೆ. ಜಗತ್ತಿನ ಅನೇಕ ಭಾಷೆಗಳ ಜ್ಞಾನ ಸಂಪತ್ತನ್ನು ಓದಿ, ತಾನೇ ಸ್ವತಃ ಕೃತಿ ರಚನೆ ಮಾಡಿ, ಪ್ರವಚನಾದಿಗಳನ್ನು ಮಾಡುವ ಉದ್ದಾಮ ಪಂಡಿತನೂ ಓದುವುದು ಅದನ್ನೇ. ಈ ನಾಲ್ವರಿಗೂ ಆ ಕೃತಿಯಲ್ಲಿ ಕಂಡುಬರುವ ಸೊಗಸು, ಅರ್ಥ, ಸಂದೇಶ ಒಂದೇ ಆಗುತ್ತದೆಯೇ? ಹಾಗಿರುವುದಿಲ್ಲ. ಮೊದಲಿನವನಿಗೆ ಕಥೆ ಅರ್ಥವಾದರೆ ದೊಡ್ಡದು. ಎರಡನೆಯವನಿಗೆ ಮತ್ತಷ್ಟು ಆಳವಾಗಿ ತಿಳಿಯುತ್ತದೆ. ಮೂರನೆಯವನು ತನ್ನ ಇತರ ಕೃತಿಗಳ ಅಧ್ಯಯನದ ಜ್ಞಾನದಿಂದ ಇನ್ನೂ ಆಳವಾದ, ವಿಶಾಲವಾದ ಅರ್ಥಗಳನ್ನು ಅದೇ ಕೃತಿಯಲ್ಲಿ ಕಾಣುತ್ತಾನೆ. ಕಡೆಯವನು ತನ್ನ ಅಪಾರ ಜ್ಞಾನದಿಂದ ಮತ್ತು ಅನೇಕ ಕೃತಿಗಳ ಓದುವಿಕೆಯಿಂದ ಬಂದಿರುವ ತಿಳುವಳಿಕೆಯಿಂದ ಒಂದು ರೀತಿಯ ತೌಲನಿಕ ಅಧ್ಯಯನದಿಂದ ವಿಮರ್ಶಾತ್ಮಕ ಕೃತಿಯನ್ನೇ ಬರೆಯಬಹುದು. ಇವೆಲ್ಲದರ ಜೊತೆಗೆ ಬಹಳ ಸತ್ವಯುತವಾದ ಗ್ರಂಥಗಳಲ್ಲಿ ಅಂತಹ ವ್ಯಕ್ತಿ ಪ್ರತಿ ಸಲ ಓದಿದಾಗ ಹೊಸ ಹೊಸ ಅರ್ಥಗಳನ್ನು ಕಾಣುತ್ತಾನೆ. ಇಂತಹ ಹೆಚ್ಚು ತಿಳಿದವರು ಕೆಲವರು ಒಂದು ಕಡೆ ಸೇರಿ ವಿಚಾರ ವಿಮರ್ಶೆ ಮಾಡಿದಾಗ ಅವರೆಂದೂ ತನಿಯಾಗಿ ಕಾಣದ ಹೊಳಹು ಸ್ಫುಟವಾಗಿ ಕಾಣುತ್ತದೆ!
ಒಬ್ಬ ಶಾಲಾ ಮಾಸ್ತರನಿದ್ದನಂತೆ. ಅವನಿಗೆ ಸರಿಯಾಗಿ ಇಂಗ್ಲಿಷ್ ಭಾಷೆ ಬರದು. ಎಲ್ಲಿಂದಲೋ ಒಂದು ಇಂಗ್ಲಿಷ್-ಕನ್ನಡ ನಿಘಂಟು ಸಂಪಾದಿಸಿದ್ದ. ಗೊತ್ತಿಲ್ಲದಿದ್ದ ಪದಗಳಿಗೆ ಅದರಲ್ಲಿ ಅರ್ಥ ಹುಡುಕಿಕೊಂಡು ತಿಳಿಯುವ ಪ್ರಯತ್ನ ಮಾಡುತ್ತಿದ್ದ. ಆಗ ತಾನೇ ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಸಿಕ್ಕ ಸಮಯ. ಮೇಲಧಿಕಾರಿಗಳಿಂದ ಬರುವ ಪತ್ರಗಳು ಇಂಗ್ಲೀಷಿನಲ್ಲಿರುತ್ತಿದ್ದವು. ಒಮ್ಮೆ ಅವನು ಶಾಲೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂಬುದಾಗಿ ಊರಿನ ಮುಖಂಡರು ಮೇಲಧಿಕಾರಿಗಳಿಗೆ ದೂರು ಕೊಟ್ಟರಂತೆ. ಮೇಲಧಿಕಾರಿಗಳು ಶಾಲೆಯನ್ನು ಸರಿಯಾಗಿ ನಡೆಸುವಂತೆಯೂ, ಈ ರೀತಿ ದೂರು ಬರಲು ಅವಕಾಶ ಕೊಡದಂತೆಯೂ ಸಲಹೆ ನೀಡಿ ಪತ್ರ ಕಳಿಸಿದರು. ಪತ್ರದ ಕಡೆಯ ಸಾಲಿನಲ್ಲಿ "Don't give room for such complaints" ಎಂದು ಎಚ್ಚರಿಕೆ ಇತ್ತು. ಮಾಸ್ತರನಿಗೆ ಈ ವಾಕ್ಯ ಸರಿಯಾಗಿ ಅರ್ಥ ಆಗಲಿಲ್ಲ. ನಿಘಂಟು ತೆಗೆದು room ಪದಕ್ಕೆ ಅರ್ಥ ನೋಡಿದ. ಆ ಪದಕ್ಕೆ ಕೋಣೆ ಎಂದು ಅರ್ಥ ಇತ್ತು. "ನಮ್ಮ ಶಾಲೆಯ ಕಟ್ಟಡದಲ್ಲಿ ಕೇವಲ ಮೂರು ಕೋಣೆಗಳು ಮಾತ್ರ ಇವೆ. ಎರಡರಲ್ಲಿ ತರಗತಿಗಳನ್ನು ನಡೆಸುತ್ತೇವೆ. ಮೂರನೆಯದು ಶಾಲೆಯ ಕಚೇರಿಯಾಗಿದೆ. "ನಾವು ಯಾರಿಗೂ room ಕೊಟ್ಟಿಲ್ಲ; ಕೊಡುವುದೂ ಇಲ್ಲ" ಎಂದು ಉತ್ತರ ಬರೆದ. ಅನೇಕ ವೇಳೆ ಈ ರೀತಿ ಪದಕ್ಕೆ ಪದ ಸೇರಿಸಿ ಅರ್ಥ ಮಾಡಿಕೊಂಡು ಫಜೀತಿ ಆಗುವುದೂ ಉಂಟು.
*****
ಒಂದು ಸರೋವರ ಎಲ್ಲರ ಮುಂದಿದೆ. ಅದರಲ್ಲಿರುವ ಜಲರಾಶಿ ಅದನ್ನು ನೋಡಿದ ಎಲ್ಲರಿಗೂ ಕಾಣುತ್ತದೆ. ಹೊರಗಡೆಯಿಂದ ನೋಡಿದಾಗ ಸಿಗುವುದು ಇಷ್ಟೇ. ಈಜು ಬರುವ, ಮುಳುಗು ಹಾಕುವ ವ್ಯಕ್ತಿಗೆ ಆ ಸರೋವರದ ನೀರಿನ ಪರಿಚಯ ಆಗುತ್ತದೆ. ನೀರಿನ ಉಷ್ಣತೆ, ಸುಮಾರು ಆಳ ಮತ್ತು ಇತರ ಭೌತಿಕ ಗುಣಗಳು, ಹೆಚ್ಚು ವಿವರಗಳು ಗೊತ್ತಾಗುತ್ತವೆ. ನುರಿತ ಈಜುಗಾರನು ಮತ್ತು ಬಹಳ ಹೊತ್ತು ಸರೋವರದ ನೀರಿನಲ್ಲಿ ಮುಳುಗಿ ವಿಹರಿಸಬಲ್ಲ ವ್ಯಕ್ತಿಗೆ ಅದರಲ್ಲಿರುವ ಅನೇಕ ವಸ್ತುಗಳು, ವರ್ಣಗಳು, ಅವುಗಳ ಸೊಗಸೂ ತಿಳಿಯುತ್ತದೆ. ಸರೋವರ ಒಂದೇ. ಆದರೆ ಏಕೆ ಈ ರೀತಿಯ ವ್ಯತ್ಯಾಸ? ಇವಕ್ಕೆ ಮೂಲ ಕಾರಣ ಅವರ ಸಿದ್ಧತೆ, ಯೋಗ್ಯತೆ ಮತ್ತು ಅವರವರ ಜ್ಞಾನದಾಹದ ನಿರೀಕ್ಷೆ.
ಬಹುಶ್ರುತ ವಿದ್ವಾಂಸರು ಪ್ರತಿ ಕೃತಿಯಲ್ಲೂ, ಅದರ ಪದರ ಪದರಗಳಲ್ಲೂ ಮೂರು ರೀತಿಯ ಅರ್ಥಗಳು ಇವೆ ಎಂದು ಹೇಳುತ್ತಾರೆ. ಮೊದಲನೆಯದು ಎಲ್ಲರಿಗೂ ಕಾಣುವ ಮೇಲ್ನೋಟದ ಅರ್ಥ. ಇದರಲ್ಲಿ ಓದುಗನಿಗೆ ಇರುವುದು ಸಾಮಾನ್ಯ ಭಾಷಾ ಜ್ಞಾನ. ಇದನ್ನು ಬಾಹ್ಯಾರ್ಥ (ಹೊರಗಡೆಯ ಅರ್ಥ) ಎನ್ನುತ್ತಾರೆ. ಹೆಚ್ಚಿನ ಸಿದ್ಧತೆ, ಸಾಧನೆಗಳನ್ನು ಮಾಡಿರುವ ಓದುಗನಿಗೆ ಇನ್ನೂ ಹೆಚ್ಚಿನ ಅರ್ಥಗಳು ಕಾಣುತ್ತವೆ. ಇದನ್ನು ಅಂತರಾರ್ಥ (ಒಳಗಡೆಯ ಅರ್ಥ) ಎನ್ನುತ್ತಾರೆ. ಬಹಳ ಸಿದ್ಧತೆಗಳಿಂದ ಮತ್ತು ಜ್ಞಾನದಾಹದಿಂದ ಕೃತಿಯನ್ನು ಅಭ್ಯಸಿಸುವ ವ್ಯಕ್ತಿಗೆ ಆಗುವ ಅರ್ಥಗಳೇ ಬೇರೆ. ಇಂತಹ ಓದುಗ ಕೃತಿಯ ಸತ್ವವನ್ನು ತಿಳಿದು ಅದರ ಪದರಗಳನ್ನು ಮತ್ತೆ ಮತ್ತೆ ವೀಕ್ಷಿಸುತ್ತಾನೆ. ತನಗಿಂತ ಹೆಚ್ಚು ತಿಳಿದವರ ಜೊತೆ ಜಿಜ್ಞಾಸೆ ಮಾಡುತ್ತಾನೆ. ಹೆಚ್ಚು ಹೆಚ್ಚಿನ ತಿಳುವಳಿಕೆಗೆ ಹಾತೊರೆಯುತ್ತಾನೆ. ಇಂತಹ ವಿಷಯ ಸಂಪಾದನೆಗೆ ದುಡಿಯುತ್ತಾನೆ. ಅವನಿಗೆ ಕೃತಿಯ ಗುಹ್ಯಾರ್ಥ (ಒಳಗಿನ ವಿಶೇಷವಾದ ಅರ್ಥ) ತೆರೆದುಕೊಳ್ಳುತ್ತದೆ.
ಎಲ್ಲ ಕೃತಿಗಳಲ್ಲೂ ಈ ರೀತಿಯ ಮೂರೂ ಅರ್ಥಗಳೂ ಇರಲೇಬೇಕು ಎಂಬ ನಿಯಮವೇನೂ ಇಲ್ಲ. ಕೆಲವು ಕೇವಲ ಮೊದಲನೆಯ ಅರ್ಥದಲ್ಲಿಯೇ ಮುಗಿಯಬಹುದು. ಅವು ರಸವೇ ಇಲ್ಲದ ಕಬ್ಬಿನ ಜಲ್ಲೆಯಂತೆ. ಮತ್ತೆ ಕೆಲವು ಸ್ವಲ್ಪ ರಸ ಸೇರಿರುವ, ಆದರೆ ಇನ್ನೂ ಪೂರ್ಣವಾಗಿ ರಸ ತುಂಬದ ಕಬ್ಬಿನ ಜಲ್ಲೆಯಂತೆ. ತಿನ್ನುವನ ಅಥವಾ ಹೀರುವವನ ನಾಲಿಗೆಗೆ ಅಷ್ಟೋ ಇಷ್ಟೋ ಸಿಹಿ ಸಿಗುತ್ತದೆ. ತುಂಬಾ ರಸ ತುಂಬಿದ ರಸದಾಳೆ ಕಬ್ಬನ ಜಲ್ಲೆಯಲ್ಲಿ ಹೀರಿದಷ್ಟೂ ಸ್ವಾದ ಸಿಗುತ್ತದೆ. ಕೃತಿಯಲ್ಲಿ ಅಂತರಾರ್ಥ, ಗುಹ್ಯಾರ್ಥಗಳು ತುಂಬಿರುವಾಗ ಈ ರೀತಿಯ ರಸದಾಳೆ ಕಬ್ಬಿನ ನಿಜವಾದ ರುಚಿ ಹತ್ತುತ್ತದೆ. ಅಂತಹ ಕಬ್ಬಿನಲ್ಲಿ ಬೆಲ್ಲವೋ, ಸಕ್ಕರೆಯೋ ಮಾಡಿಟ್ಟುಕೊಂಡರೆ ಬಹಳ ಕಾಲ ಕೃತಿಯ ಆನಂದ ಅನುಭವಿಸಬಹುದು! ಇಂತಹ ಬೆಲ್ಲ, ಸಕ್ಕರೆ ಮಾಡಬಹುದಾದ ಕೃತಿಗಳು ತಮ್ಮ ಸತ್ವಗಳ ಪ್ರಭಾವದಿಂದ ಬಹಳ ಕಾಲ ನಿಲ್ಲುತ್ತವೆ. ಸಾರ್ವಕಾಲಿಕ ಶ್ರೇಷ್ಠ ಕೃತಿಗಳು ಎಂದು ಗುರುತಿಸಲ್ಪಡುತ್ತವೆ. ಶತಶತಮಾನಗಳ ಕಾಲ ಕಳೆದರೂ ಅವನ್ನು ಅಭ್ಯಸಿಸುಸುವ ಪರಂಪರೆ ನಿರ್ಮಾಣವಾಗುತ್ತದೆ.
ಈ ರೀತಿ ಶ್ರೇಷ್ಠ ಕೃತಿಗಳನ್ನು ಅಭ್ಯಸಿಸಿ ಬೆಲ್ಲವನ್ನೋ ಸಕ್ಕರೆಯನ್ನೋ ನಮ್ಮ ಮನಸ್ಸಿನಲ್ಲಿ ಮಾಡಿಟ್ಟುಕೊಳ್ಳುತ್ತಿದ್ದರೆ ನಮ್ಮ ವೈಯುಕ್ತಿಕ ಭಂಡಾರ ಬೆಳೆಯುತ್ತ ಹೋಗುತ್ತದೆ. ಮತ್ತೆ ಎಂದೋ ಇನ್ನೊಂದು ಗಟ್ಟಿ ಕೃತಿ ಓದುವಾಗ ಮತ್ತು ಮೆಲಕು ಹಾಕುವಾಗ ಈ ಸಕ್ಕರೆ ಆ ಹೋಳಿಗೆಗೆ ಸೇರಿಸಿಕೊಂಡು ಮತ್ತೂ ಹೆಚ್ಚಿನ ರುಚಿ ಪಡೆಯಲು ನೆರವಾಗುತ್ತದೆ!
*****
"ಹೂವು - ಹುಲ್ಲು ಮತ್ತು ಶ್ರೀಕೃಷ್ಣ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಶ್ರೀ ಪುರಂದರ ದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಕೃತಿಯಲ್ಲಿರುವ ಅನೇಕ ವಿಶೇಷಾರ್ಥ ಮತ್ತು ಗೂಡಾರ್ಥಗಳನ್ನು ನೋಡುವ ಪ್ರಯತ್ನ ಮಾಡೋಣ ಎಂದಿದ್ದೆವು. ಮೇಲಿನ ಬಾಹ್ಯಾರ್ಥ, ಅಂತರಾರ್ಥ, ಗೂಡಾರ್ಥಗಳ ಹಿನ್ನೆಲಿಯಲ್ಲಿ ಈ ಕೃತಿಯಲ್ಲಿರುವ ಕೆಲವು ವಿಶೇಷ ಅರ್ಥಗಳುಳ್ಳ ಪದಗಳನ್ನು ಗಮನಿಸುವ ಪ್ರಯತ್ನವನ್ನು ಯಥಾಶಕ್ತಿ ಮಾಡೋಣ.
ಒಂದು ದಳ ಶ್ರೀತುಳಸಿ, ಬಿಂದು ಗಂಗೋದಕ, ಒಂದೇ ಮನದಲಿ, ಇಂದಿರಾರಮಣ, ಮಂದಿರದ ಒಳಗೆ, ಪರಿಪರಿಯ ಪುಷ್ಪಗಳ, ಪರಿಪೂರ್ಣ, ಸಕಲ ಸ್ವಾತಂತ್ರ್ಯ, ಅರಮನೆಯ ಒಳಗೆ ಸರಿಭಾಗ, ತೊಂಡರಿಗೆ ತೊಂಡನಾಗಿ ಎನ್ನುವ ಪದಗಳಲ್ಲಿ ವಿಶೇಷ ಮತ್ತು ಗೂಡಾರ್ಥಗಳಿವೆ.
ಮುಂದಿನ ಸಂಚಿಕೆಗಳಲ್ಲಿ ಇವನ್ನು ಒಂದೊಂದಾಗಿ ನೋಡುವ ಪ್ರಯತ್ನ ಮಾಡೋಣ.
Very Nice 👍🙏
ReplyDeleteಬಾಹ್ಯಾರ್ಥ, ಅಂತರಾರ್ಥ, ಗೂಢಾರ್ಥಗಳಲ್ಲಿರುವ ವ್ಯತ್ಯಾಸವನ್ನು ಸರಳ ಉದಾಹರಣೆಯಿಂದ ಮನದಟ್ಟಾಗುವಂತೆ ವಿವರಿಸಿದ್ದೀರಿ.👌👌 ಶ್ರೀ ಪುರಂದರ ದಾಸರ ಕೃತಿಯಲ್ಲಿಯ ವಿಶೇಷಾರ್ಥದ ಪದಗಳನ್ನು ವಿಶ್ಲೇಷಿಸುವ ಮುಂದಿನ ಲೇಖನಗಳಿಗಾಗಿ ಕಾತುರದಿಂದ ಕಾಯುವಂತಾಗಿದೆ 😁🙏
ReplyDeleteಸೊಗಸಾದ ಹಾಗೂ ಸರಳವಾದ ನಿರೊಪಣೆ.
ReplyDeleteಹಿಂದೆ ರಾಜರುಗಳು ಸಹ ಗೊಡಾರ್ಥವನ್ನೊಳಗೊಂಡ ಸಂದೇಶಗಳನ್ನು ಕಳುಹಿಸುವ ಪರಿಪಾಠ ಇದ್ದಿರುವುದನ್ನು ಓದಿದ್ದೇನೆ.
ತುಂಬಾ ಚೆನ್ನಾಗಿದೆ
ReplyDeleteExcellent analysis
ReplyDeleteDear Prof. Murthy.
ReplyDeleteVery well written article , explaineing VITAL differences very SIMPLY.
h.n. vishweshwar
This article is excellent and can be related to our own experiences. Reading a well written novel for the first time, second time or the third time, each time a deeper understanding of the author’s knowledge on so many things he has written about will get clearer. Thanks Keshav.
ReplyDeleteUR……
ಮೂರು ತರದ ಅರ್ಥಗಳ ನಿರೂಪಣೆ ಸೊಗಸಾಗಿದೆ ಬಾಹ್ಯಾರ್ಥವನ್ನು ಎಲ್ಲರೂ ಅರ್ಥಮಾಡಿಕೊಳ್ಳಬಹುದು ಕೃತಿಯ ಅಂತರ ಅರ್ಥವನ್ನು ಅರಿಯಲು ಅಧ್ಯಯನ ಬೇಕಾಗುತ್ತದೆ ಅಂತರ್ ಅರ್ಥವನ್ನು ಅರಿತಂತೆಲ್ಲ ಕೃತಿಯು ಮತ್ತೆ ಮತ್ತೆ ಓದಿಸಿಕೊಳ್ಳುತ್ತಾ ಹೋಗುತ್ತದೆ ಅಲ್ಲದೆ ಅದರಿಂದ ಸಿಗುವ ಸಂತೋಷವೂ ಊಹೆಗೆ ನಿಲುಕದ್ದು . ಕೆಲವೇ ಮಂದಿ ಮಾತ್ರ ಕೃತಿಯ ಗೂಡಾಾರ್ಥವನ್ನು ಅರಿಯಬಲ್ಲವರಾಗಿರುತ್ತಾರೆ ಅಂತವರ ಒಡನಾಟ ದೊರಕಿದರೆ ಕೃತಿಯ ಪಾರಮ್ಯದ ಅನುಭವ ದೊರಕಿಸಿಕೊಳ್ಳಬಹುದೋ ಏನೋ
ReplyDelete