Showing posts with label antarartha. Show all posts
Showing posts with label antarartha. Show all posts

Wednesday, March 26, 2025

ಅನುಭವದಿಂದ ಬಂದ ಅರ್ಥ


ಇನ್ನೆರಡು-ಮೂರು ದಿನಗಳಲ್ಲಿ ಚಾಂದ್ರಮಾನ ಯುಗಾದಿ ಹಬ್ಬ. ಮತ್ತೊಂದು ಹದಿನೈದು ದಿನದಲ್ಲಿ ಸೌರಮಾನ ಯುಗಾದಿ ಹಬ್ಬ. ಯುಗಾದಿ ಹಬ್ಬವೆಂದರೆ ಹಿಂದೆಲ್ಲಾ ಒಬ್ಬಟ್ಟು-ಹೋಳಿಗೆಗಳ ಹಬ್ಬ ಆಗಿತ್ತು. ಹೌದು, ಒಬ್ಬಟ್ಟಿಗೂ ಹೋಳಿಗೆಗೂ ಏನು ವ್ಯತ್ಯಾಸ? ಹೆಚ್ಚಿನ ಜನಕ್ಕೆ ಎರಡೂ ಒಂದೇ! ನೋಡಲು ಚಪಾತಿಯಂತೆ ಇರುತ್ತದೆ. ಆದರೆ ತಿಂದರೆ ಸಿಹಿ. ಅಷ್ಟೇ ಅಲ್ಲವೇ? ಹಿಂದೆಲ್ಲ ಬೇಳೆಯಿಂದ ಮಾಡಿದ ಹೂರಣವಿದ್ದರೆ ಒಬ್ಬಟ್ಟು ಎನ್ನುತ್ತಿದ್ದರು. ತೆಂಗಿನಕಾಯಿ ಹೂರಣದಿಂದ ಮಾಡಿದರೆ ಹೋಳಿಗೆ ಅನ್ನುತ್ತಿದ್ದರು. ಇದನ್ನು ಮಾಡಲು ಹಾಕುವುದು ಮುಖ್ಯವಾಗಿ ಮೂರು ಪದಾರ್ಥ. ಹಿಟ್ಟು, ಬೇಳೆ ಅಥವಾ ತೆಂಗಿನಕಾಯಿ ಮತ್ತು ಬೆಲ್ಲ. (ಏಲಕ್ಕಿ, ಅರಿಸಿನ, ಸ್ವಲ್ಪವೇ ಬಳಸುವ ಎಣ್ಣೆ ಮತ್ತು ಕೆಲವರು ಹಾಕುವ ಉಪ್ಪನ್ನು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂದು ಬಿಡೋಣ). ಹೊರಗಡೆಯ ಹಿಟ್ಟಿನ ಹೊದಿಕೆ. ಒಳಗಡೆ ಬೇಳೆ-ಬೆಲ್ಲದ ಅಥವಾ ಕಾಯಿ-ಬೆಲ್ಲದ ಹೂರಣ. ಹೀಗಿರುತ್ತಿತ್ತು ಮನೆಯಲ್ಲಿ ಮಾಡಿದ ಒಬ್ಬಟ್ಟು ಅಥವಾ ಹೋಳಿಗೆಯ ಲಕ್ಷಣಗಳು. 

ಪಾವಕ ಅಂದರೆ ಅಗ್ನಿ. ಅಗ್ನಿ ಅಂದರೆ ಪಾವಕ. ಒಟ್ಟಿನಲ್ಲಿ ಎರಡೂ ಬೆಂಕಿ. ಕೋಶಗಳನ್ನು ನೋಡಿದರೆ ಹೀಗೆಯೇ ಅರ್ಥ ಸಿಗುತ್ತದೆ. ಆದರೆ ವಾಸ್ತವವಾಗಿ ಪಾವಕ ಅಗ್ನಿಯ ಮಗ. ಇಬ್ಬರಿಗೂ ಸುಡುವ ಗುಣ ಉಂಟು. ಆದ್ದರಿಂದ ಎರಡೂ ಒಂದೇ ಅನ್ನುತ್ತದೆ ಕೋಶ. ಪ್ರಾಯಶಃ ಬೆಂಕಿಯಲ್ಲಿಟ್ಟ ಹೆಂಚಿನ ಅಥವಾ ಕಾವಲಿಯ ಮೇಲೆ ಬೇಯುವ ಒಬ್ಬಟ್ಟು ಅಥವಾ ಹೋಳಿಗೆಗೂ ಇದೇ ರೀತಿ ಒಂದೇ ಎಂದು ಬಂದಿರಬಹುದು. 

ಈಗ "ಹೋಳಿಗೆ ಮನೆ" ಕಾಲ. ಎಲ್ಲೆಲ್ಲೂ ಹೋಳಿಗೆ ಮನೆಗಳು ಕಾಣುತ್ತವೆ. ಮನೆಯಲ್ಲಿ ಹೋಳಿಗೆ ಮಾಡುವ ಕಾಲವಲ್ಲ. ಆದ್ದರಿಂದ ಉಗಾದಿಗೂ ಹೋಳಿಗೆಗೂ ಸಂಬಂಧ ಮೊದಲಿನಂತೆ ಬಿಗಿಯಿಲ್ಲ. ಮೊದಲಿನ ಮದುವೆಗಳ ಬಿಗಿ ಈಗಿನ ಮದುವೆಗಳಲ್ಲಿ ಇಲ್ಲ ಎನ್ನುವಂತೆ. (ಈಗಿನವರು ಇದನ್ನು ಒಪ್ಪದಿರಬಹುದು. ಅದು ಅವರ ಹಕ್ಕು.). ವಾರಕ್ಕೆ ಏಳು ದಿನವೂ, ವರುಷಕ್ಕೆ ಹನ್ನೆರಡು ತಿಂಗಳೂ ಹೋಳಿಗೆ ಲಭ್ಯವೇ. ಅಷ್ಟೇ ಅಲ್ಲ. ಖರ್ಜುರದ ಜೋಳಿಗೆಯಿಂದ ಕುಂಬಳಕಾಯಿ ಹೋಳಿಗೆಯವರೆಗೆ ಎಲ್ಲವೂ ಸಿಗುತ್ತದೆ. ಹಾಗಲಕಾಯಿ ಹೋಳಿಗೆ ಕಂಡಿಲ್ಲ. ಪ್ರಾಯಶಃ ಮುಂದೆ ಬರಬಹುದು. ಅಥವಾ ಬಂದಿದ್ದರೂ ನಮ್ಮ ತಿಳುವಳಿಕೆ ಕಡಿಮೆಯಿರಬಹುದು. 

*****

ನಮ್ಮ ಬಾಲ್ಯದಲ್ಲಿ ಯುಗಾದಿಗೂ, ವಾರ್ಷಿಕ ಪರೀಕ್ಷೆಗಳಿಗೂ ಬಹಳ ಹತ್ತಿರದ ನಂಟು. ಚಾಂದ್ರಮಾನ ಯುಗಾದಿ ಸಾಮಾನ್ಯವಾಗಿ ಮಾರ್ಚ್ ತಿಂಗಳ ಕೊನೆಯಲ್ಲಿ ಅಥವಾ ಏಪ್ರಿಲ್ ಮೊದಲ ಭಾಗದಲ್ಲಿ ಬರುತ್ತದೆ. ಆಗ ಏಪ್ರಿಲ್ ಹತ್ತರಿಂದ ಬೇಸಿಗೆ ರಜೆ ಇರುತ್ತಿತ್ತು. ಅದಕ್ಕೆ ಮುಂಚೆ ವಾರ್ಷಿಕ ಪರೀಕ್ಷೆ. ಅಂದರೆ ಯುಗಾದಿಗೆ ಹಿಂದೆ-ಮುಂದೆ. ಇದೊಂದು ರೀತಿಯಲ್ಲಿ ಒಬ್ಬಟ್ಟಿಗೂ ಪರೀಕ್ಷೆಗಳಿಗೂ ನಂಟು ತಂದಂತಿತ್ತು. 

ಅನೇಕ ಮನೆಗಳಲ್ಲಿ ಮೊದಲ ದಿನ ಒಬ್ಬಟ್ಟು ತಯಾರಿಸಿ ಎರಡನೇ ದಿನ ಹೋಳಿಗೆ ಮಾಡುತ್ತಿದ್ದರು. ಕೆಲವರು ಎರಡನ್ನೂ ಒಂದೇ ದಿನ ಮಾಡುತ್ತಿದ್ದುದೂ ಉಂಟು. ಎರಡನ್ನೂ ಒಂದೇ ದಿನ ಮಾಡಿದಾಗ ಊಟಕ್ಕೆ ಕುಳಿತಾಗ ಧರ್ಮಸಂಕಟ. ಯಾವುದನ್ನೂ ತಿನ್ನುವುದು? ಇವುಗಳ ಸರದಿ ಬರುವ ವೇಳೆಗೆ ಇನ್ನು ಬೇರೆ ಪದಾರ್ಥಗಳೆಲ್ಲ ಹೊಟ್ಟೆ ಸೇರಿ ಮಿಕ್ಕಿದ್ದ ಜಾಗ ಕಡಿಮೆ. ಅದಕ್ಕೂ ಅಮ್ಮಂದಿರು ಉಪಾಯ ಹೇಳುತ್ತಿದ್ದರು. ಅವು ರೆಫ್ರಿಜಿರೇಟರ್ ಇಲ್ಲದ ದಿನಗಳು. ಬೇಳೆ ಒಬ್ಬಟ್ಟು ಹೆಚ್ಚು ದಿನ ಇಡಲಾಗುವುದಿಲ್ಲ. ಕಾಯಿ ಹೋಳಿಗೆ ಕೆಲ ದಿನ ಇಡಬಹುದಾಗಿತ್ತು. ಆದ್ದರಿಂದ ಮೊದಲು ಬೇಳೆ ಒಬ್ಬಟ್ಟು. ನಂತರ ಸಂಜೆಯೋ, ಮಾರನೆಯ ದಿನವೋ ಕಾಯಿ ಹೋಳಿಗೆ. ಬಕಾಸುರನ ಸಂತತಿಯವರು ಎರಡನ್ನೂ ಎರಡು, ಮೂರು ದಿನ ಒಟ್ಟಿಗೆ ಸೇವಿಸುವ ಸೌಭಾಗ್ಯ ಹೊಂದಿದ್ದರು. 

*****

ಅದು ಹೋಳಿಗೆ ಇರಲಿ, ಒಬ್ಬಟ್ಟೀ ಇರಲಿ, ತಯಾರಿಸಲು ಮೈದಾ ಹಿಟ್ಟಿನ ಕಣಕ ಬೇಕೇ ಬೇಕು. ಕಣಕದ ಉಂಡೆಯನ್ನು ಲಟ್ಟಿಸಿ ಅಗಲ ಮಾಡಿ, ಅದರೊಳಗೆ ಹೂರಣದ ಉಂಡಿಯಿಟ್ಟು ಸುತ್ತಿ, ಮತ್ತೆ ಲಟ್ಟಿಸಿ ಅಗಲ ಮಾಡಿ ಕಾದ ಹೆಂಚಿನ ಮೇಲೆ ಬೇಯಿಸಿ ತಯಾರಿಸಬೇಕು. ತಿನ್ನುವವರಿಗೆ ಬಲು ಸಿಹಿ. ಆದರೆ ಮಾಡುವವರಿಗೆ ಬಲು ರೇಜಿಗೆಯ ಕೆಲಸ. ಅದೇನೂ ಉಪ್ಪಿಟ್ಟಿನಂತೆ ಒಮ್ಮೆ ಕೆದಕಿ ಇಡುವ ತಿನಿಸಲ್ಲ. ದೋಸೆಯಂತೆ ಒಂದಾದ ಮೇಲೊಂದು ಗುಂಡಗೆ ಬರೆಯಬೇಕು. ಆಗೆಲ್ಲಾ ಸೌದೆ ಒಲೆಗಳು. ಮಾಡುವವರಿಗೆ ಅವರು ಎಷ್ಟು ಶಾಂತ ಸ್ವಭಾವದವರಾದರೂ ಮಾಡಿ ಮುಗಿಸುವ ವೇಳೆಗೆ ಹೊಗೆಯಿಂದ ಕಣ್ಣು ಕೆಂಪಗಾಗುತ್ತಿದುದು ಸಹಜವೇ! 

ಅಡಿಗೆ ಮಾಡುವವರ ಕಷ್ಟ ಅವರಿಗೇ ಗೊತ್ತು. ಮೊದಲು ಪದಾರ್ಥಗಳನ್ನು ಹೊಂದಿಸಬೇಕು. ಈಗಿನಂತೆ ಆಗ "ಎಲ್ಲ ಕ್ಲೀನ್" ಮಾಡಿದ ಪದಾರ್ಥಗಳು ಸಿಗುತ್ತಿರಲಿಲ್ಲ. ಹೊಂದಿಸಿದ ಪದಾರ್ಥಗಳನ್ನು ಶುದ್ದಿ ಮಾಡಬೇಕು. ನಂತರ ಸಂಸ್ಕರಿಸಿ ಅಡುಗೆ ತಯಾರಿಸಬೇಕು. ಈ ತಿನಿಸು ಮಾಡುವಾಗ ಅಷ್ಟು ಕಣಕ ಮತ್ತು ಅಷ್ಟು ಹೂರಣ ಮಾಡಬೇಕು. ಎಲ್ಲ ಮಾಡಿದ ಮೇಲೆ ಒಮ್ಮೊಮ್ಮೆ ಸ್ವಲ್ಪ ಹೂರಣ ಮಿಗಬಹುದು. ಅಥವಾ ಸ್ವಲ್ಪ ಕಣಕ ಮಿಗಬಹುದು. ಹೂರಣ ಮಿಕ್ಕರೆ ಅದನ್ನೇ ಮಿಠಾಯಿ ತರಹ ಮಾಡಿ ಕೊಡುತ್ತಿದ್ದರು. ಕಣಕ ಮಿಕ್ಕರೆ ಕಷ್ಟವೇ! ಕಡೆಗೆ ಅದನ್ನು ಬಿಸಾಡಲಾರದೆ ಅದನ್ನೇ ಒಂದು ರೊಟ್ಟಿಯಂತೆ ತಟ್ಟಿ ಮುಗಿಸುತ್ತಿದ್ದರು. ಅದು ಹೋಳಿಗೆಯೂ ಅಲ್ಲ; ಒಬ್ಬಟ್ಟೂ ಅಲ್ಲ. ಅದೊಂದು ಕಣಕದ ರೊಟ್ಟಿ. ನೋಡಲು ಬಿಳಿಚಿಕೊಂಡ ಒಬ್ಬಟ್ಟಿನಂತೆ. ಏಕೆಂದರೆ ಅದರೊಳಗೆ ಹೂರಣದ ಕೆಂಪಿಲ್ಲ. ಹೂರಣದ ಕಂಪೂ ಇಲ್ಲ. 

ಕೆಲವರು ಮಾತಾಡುವಾಗ ಅವರ ಮಾತಿನ ರೀತಿ ಹೋಳಿಗೆಯಂತೆ ಇರುತ್ತದೆ. ಅವರ ಮಾತಿನಲ್ಲಿ ಒಂದು ರೀತಿಯ ಮೋಡಿ, ಒಂದು ಅರ್ಥ, ಒಂದು ಸೊಗಸು ಇರುತ್ತದೆ. ಒಂದು ಒಬ್ಬಟ್ಟು ತಿಂದ ನಂತರ ಇನ್ನೊಂದು ತಿನ್ನಲು ಆಸೆ ಆಗುವಂತೆ ಒಂದು ಮಾತು ಕೇಳಿದ ನಂತರ ಇನ್ನಷ್ಟು ಕೇಳಬೇಕು ಅನ್ನಿಸುತ್ತದೆ. ಮತ್ತೆ ಕೆಲವರು ಹಾಗಲ್ಲ. ಕೇವಲ ಮಾತು, ಅಷ್ಟೇ. ಮುಗಿದರೆ ಸಾಕು ಅನ್ನಿಸುತ್ತದೆ. "ಅವನ ಮಾತಿನಲ್ಲಿ ಏನೂ ಹೂರಣವಿಲ್ಲ" ಅನ್ನುವುದು ಇದರಿಂದ ಬಂದದ್ದು. ಅಂತಹವರ ಮಾತು ಕಣಕದ ರೊಟ್ಟಿಯಂತೆ. ಬರೀ ಶಬ್ದಗಳು. ಅರ್ಥವಿಲ್ಲದ ಶಬ್ದಗಳಷ್ಟೇ. "ಒಡಕು ಮಡಕೆಗೆ ಕಲ್ಲು ಹಾಕಿದಂತೆ" ಅನ್ನುತ್ತಿದ್ದರು. ಅಂತಹವರು ಹೋದ ಮೇಲೆ "ಸದ್ಯ, ಮಳೆ ನಿಂತಿತು" ಎಂದು ನಿಟ್ಟುಸಿರು ಬಿಡುತ್ತಿದ್ದರು.  

*****  

ಅಂತೂ ರೇಜಿಗೆಯ ಕೆಲಸ ಮುಗಿಸಿ ಒಬ್ಬಟ್ಟು, ಹೋಳಿಗೆ ತಯಾರಿಸಿದ್ದಾಯಿತು. ಜೊತೆಗೆ ಒಂದು ಕಣಕದ ರೊಟ್ಟಿಯೂ ಬಂದಿದೆ. ತಯಾರು ಮಾಡಿದ್ದನ್ನು ಸದುಪಯೋಗ ಮಾಡಬೇಕಲ್ಲ. ಅದಕ್ಕೇ ತಿನ್ನುವ ವಿಧಾನದ ಕಡೆಗೆ ಹೋಗೋಣ. 

ಅದೇನು? ತಿನ್ನುವ ವಿಧಾನ? ಎಂದು ಕೆಲವರು ಮುಖ ಸಿಂಡರಿಸಬಹುದು. ತಿನ್ನುವ ರೀತಿಯಲ್ಲಿ ಕೆಲಬಲರು ಕೆಲ ರೀತಿ ಅನುಸರಿಸುತ್ತಾರೆ. ಕೆಲವರಿಗೆ ಹೋಳಿಗೆಯಷ್ಟೇ ಸಾಕು. ಮತ್ತೆ ಕೆಲವರಿಗೆ ಅದರ ಜೊತೆ ಸ್ವಲ್ಪ (ಧಾರಾಳವಾಗಿಯೇ ಅನ್ನಿ) ತುಪ್ಪ ಬೇಕು. ಮತ್ತೆ ಕೆಲವರಿಗೆ ಅದರ ಜೊತೆ ಬಿಸಿ ಹಾಲು ಬೇಕು. ಇನ್ನೂ ಕೆಲವರಿಗೆ ಸ್ವಲ್ಪ ತುಪ್ಪ, ಅದರ ಮೇಲೆ ಅಷ್ಟು ಹಾಲು ಬೇಕು. ಜೇನಿನ ರುಚಿ ಕಂಡವರಿಗೆ (ಅದರಲ್ಲೂ ಡಯಾಬಿಟಿಸ್ ಇರುವವರಿಗೆ!) ಇವುಗಳ ಜೊತೆ ಸ್ವಲ್ಪ ಹೆಜ್ಜೇನು. (ಹೆಜ್ಜೇನು ಅಂತ ಈಗ ಸಿಗುವುದಿಲ್ಲ. ಅದು ವಿಶೇಷವಾಗಿ ಮಲೆನಾಡಿನ ದಟ್ಟ ಕಾಡಿನಲ್ಲಿ ಸಂಪಾದಿಸಿ ತಂದಿರುತ್ತಿದ್ದುದು). 

ಒಟ್ಟಿನಲ್ಲಿ ಐದು ಬಗೆಯ ತಿನ್ನುವ ರೀತಿ ಆಯಿತು:

  • ಕೇವಲ ಕಣಕದ ರೊಟ್ಟಿ. ಇದನ್ನು ತಿಂದದ್ದೇ ಭಾಗ್ಯ. ತಿಂದ ಕೆಲಸವಾಯಿತು. ಹೊಟ್ಟೆ ತುಂಬಿತು. ಮತ್ತೇನೂ ಪ್ರಯೋಜನವಿಲ್ಲ. 
  • ಕೇವಲ ಹೋಳಿಗೆ ಮಾತ್ರ. ಹೊಟ್ಟೆಯೂ ತುಂಬಿತು. ಸ್ವಲ್ಪ ರುಚಿಯೂ ಸಿಕ್ಕಿತು. 
  • ಹೋಳಿಗೆಯ ಜೊತೆ ಅಷ್ಟು ತುಪ್ಪ. ಇದರಲ್ಲಿ ವಿಶೇಷ ಅನ್ನಿಸುವ ಹೆಚ್ಚಿನ ಮಟ್ಟದ ಅನುಭವ. 
  • ಹೋಳಿಗೆಯ ಮೇಲೆ ತುಪ್ಪ. ಅದರ ಮೇಲೆ ಬಿಸಿ ಹಾಲು. ಈಗ ಪೂರ್ಣ ಪ್ರಮಾಣದ ಅಧಿಕ ಎನಿಸುವ ಅನುಭವ ಉಂಟಾಯಿತು. 
  • ಹೋಳಿಗೆಯ ಮೇಲೆ ತುಪ್ಪ. ಮೇಲೆ ಬಿಸಿ ಹಾಲು. ಒಂದಷ್ಟು ಜೇನು ತುಪ್ಪ. ಏನು ಸಾಧ್ಯವೋ ಎಲ್ಲವೂ ಮೇಳೈಸಿವೆ. ಇದಕ್ಕಿಂತ ಹೆಚ್ಚಿನ ರುಚಿ ಇನ್ನಿಲ್ಲ. ಆಹಾರ, ಪೋಷಕಾಂಶ, ರುಚಿ ಎಲ್ಲವೂ ದೊರಕಿತು. 
*****

"ಬಾಹ್ಯಾರ್ಥ - ಅಂತರಾರ್ಥ - ಗೂಡಾರ್ಥ" ಎನ್ನುವ ಶೀರ್ಷಿಕೆಯಡಿ ಹಿಂದೊಂದು ಸಂಚಿಕೆಯಲ್ಲಿ ಬಗೆಬಗೆಯ ಸಾಹಿತ್ಯ ಕೃತಿಗಳನ್ನು ಓದಿದಾಗ ಆಗುವ ಅನುಭವಗಳು ಮತ್ತು ಅರ್ಥ ವಿಶೇಷಗಳ ಬಗ್ಗೆ ಚರ್ಚೆ ಮಾಡಿದ್ದೆವು. (ಮತ್ತೆ ಓದಬೇಕಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ). ಆದರಲ್ಲಿ ಹೊರಗಿನ ಅರ್ಥ, ಒಳಗಿನ ಅರ್ಥ ಮತ್ತು ಸಾಮಾನ್ಯವಾಗಿ ತಿಳಿಯಲಾಗದ ವಿಶೇಷಾರ್ಥ (ಗೂಡಾರ್ಥ) ಇವುಗಳ ಬಗ್ಗೆ ಮತ್ತು ಇವುಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ನೋಡಿದ್ದೆವು. ಆ ಸಂಬಂಧದ ಎಲ್ಲ ವಿಷಯಗಳನ್ನೂ ಈ ಹೋಳಿಗೆ ತಿನ್ನುವ ವಿಧಾನಕ್ಕೆ ಹೋಲಿಸಬಹುದು:

  • ಭಾಷೆ ಬರುತ್ತದೆ ಎಂದು ಸುಮ್ಮನೆ ಓದಿದರೆ ಅದು ಕಣಕದ ರೊಟ್ಟಿ ತಿಂದಂತೆ. ಏನೂ ಅರ್ಥವಾಗಲಿಲ್ಲ. 
  • ಬಾಹ್ಯಾರ್ಥ ತಿಳಿಯುವಂತೆ ಓದಿದರೆ ಅದು ಕೇವಲ ಹೋಳಿಗೆ ತಿಂದಂತೆ. ಸ್ವಲ್ಪ ಅರ್ಥವಾಯಿತು. 
  • ಅಂತರಾರ್ಥ ತಿಳಿಯುವಂತೆ ಓದಿದರೆ ಹೋಳಿಗೆಯ ಜೊತೆ ತುಪ್ಪವೂ ಸೇರಿದಂತೆ ಹೆಚ್ಚಿನ ಪ್ರಯೋಜನ ಆಯಿತು. 
  • ಬಾಹ್ಯಾರ್ಥ, ಅಂತರಾರ್ಥ, ಗುಹ್ಯರ್ಥಗಳು ತಿಳಿದರೆ ಹೋಳಿಗೆ, ತುಪ್ಪ, ಹಾಲು ಸೇರಿದಂತೆ. ಪೂರ್ಣ ಪ್ರಯೋಜನ ಸಿಕ್ಕಿತು. 
  • ಈ ಮೂರೂ ಅರ್ಥಗಳ ಜೊತೆಗೆ ಅನುಭವದ ಅರ್ಥ ಸೇರಿದರೆ ಹೋಳಿಗೆ, ತುಪ್ಪ, ಹಾಲು ಇವುಗಳ ಜೊತೆ ಹೆಜ್ಜೇನು ಕೂಡಿದಂತೆ. ಅದೊಂದು ಪರಮ ಗತಿಯ ಅನುಭವ ಕೊಡುವ ಪೂರ್ಣ ಅರ್ಥ. 
*****

ಅನುಭವದ ಹೆಜ್ಜೇನು, ಅದರ ಎರಡು ಮುಖಗಳಾದ "ಸ್ವಾನುಭವ" ಮತ್ತು "ಪರಾನುಭವ", ಇವುಗಳ ವಿಷಯವನ್ನು ಉದಾಹರಣೆಗಳ ಮೂಲಕ ಮುಂದಿನ ಸಂಚಿಕೆಯಲ್ಲಿ ನೋಡೋಣ. 

Saturday, December 7, 2024

ಬಾಹ್ಯಾರ್ಥ - ಅಂತರಾರ್ಥ - ಗೂಡಾರ್ಥ


ಒಂದು ಕೃತಿಯನ್ನು ಓದಿದಾಗ, ಅದು ಸಾಹಿತ್ಯ ಕೃತಿ ಇರಬಹುದು, ವೈದಿಕ ಗ್ರಂಥವಿರಬಹುದು, ಅಥವಾ ಒಂದು ಸಾಮಾನ್ಯ ಪತ್ರವೇ ಇರಬಹುದು, ಓದುಗನಿಗೆ ಅದರ ಅರ್ಥ ಹೊಳೆಯುವುದು ಆ ಕೃತಿಯಲ್ಲಿರುವ ಪದಪುಂಜಗಳ ಜೊತೆಗೆ ಅವನ ವೈಯುಕ್ತಿಕ ಸಿದ್ಧತೆ, ಸಾಧನೆಗಳನ್ನೂ ಅವಲಂಬಿಸುತ್ತದೆ. ಒಂದು ಉದಾಹರಣೆ ತೆಗೆದುಕೊಳ್ಳಬಹುದು. ಆದಿಕವಿ ವಾಲ್ಮೀಕಿಗಳ ರಾಮಾಯಣವನ್ನೇ ತೆಗೆದುಕೊಳ್ಳೋಣ. ಒಂದು ಶಾಲೆಯಲ್ಲಿ ಕಲಿಯುವ ಕಿರಿಯ ವಿದ್ಯಾರ್ಥಿಯು ಆ ರಾಮಾಯಣವನ್ನು ಓದುತ್ತಾನೆ. ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ಅಭ್ಯಸಿಸುವ ಯುವಕ ಹಿರಿಯ ವಿದ್ಯಾರ್ಥಿಯೂ ಅದನ್ನೇ ಓದುತ್ತಾನೆ. ಅದೇ ವಿಶ್ವವಿದ್ಯಾಲಯದಲ್ಲಿ ಅಂತಹ ಅನೇಕ ಯುವಕರಿಗೆ ಕೆಲ ವರ್ಷಗಳು ಪಾಠ  ಹೇಳಿದ ಪ್ರಾಧ್ಯಾಪಕನೂ ಅದೇ ಕೃತಿಯನ್ನು ಓದುತ್ತಾನೆ. ಜಗತ್ತಿನ ಅನೇಕ ಭಾಷೆಗಳ ಜ್ಞಾನ ಸಂಪತ್ತನ್ನು ಓದಿ, ತಾನೇ ಸ್ವತಃ ಕೃತಿ ರಚನೆ ಮಾಡಿ, ಪ್ರವಚನಾದಿಗಳನ್ನು ಮಾಡುವ ಉದ್ದಾಮ ಪಂಡಿತನೂ ಓದುವುದು ಅದನ್ನೇ. ಈ ನಾಲ್ವರಿಗೂ ಆ ಕೃತಿಯಲ್ಲಿ ಕಂಡುಬರುವ ಸೊಗಸು, ಅರ್ಥ, ಸಂದೇಶ ಒಂದೇ ಆಗುತ್ತದೆಯೇ? ಹಾಗಿರುವುದಿಲ್ಲ. ಮೊದಲಿನವನಿಗೆ ಕಥೆ ಅರ್ಥವಾದರೆ ದೊಡ್ಡದು. ಎರಡನೆಯವನಿಗೆ ಮತ್ತಷ್ಟು ಆಳವಾಗಿ ತಿಳಿಯುತ್ತದೆ. ಮೂರನೆಯವನು ತನ್ನ ಇತರ ಕೃತಿಗಳ ಅಧ್ಯಯನದ ಜ್ಞಾನದಿಂದ ಇನ್ನೂ ಆಳವಾದ, ವಿಶಾಲವಾದ ಅರ್ಥಗಳನ್ನು ಅದೇ ಕೃತಿಯಲ್ಲಿ ಕಾಣುತ್ತಾನೆ. ಕಡೆಯವನು ತನ್ನ ಅಪಾರ ಜ್ಞಾನದಿಂದ ಮತ್ತು ಅನೇಕ ಕೃತಿಗಳ ಓದುವಿಕೆಯಿಂದ ಬಂದಿರುವ ತಿಳುವಳಿಕೆಯಿಂದ ಒಂದು ರೀತಿಯ ತೌಲನಿಕ ಅಧ್ಯಯನದಿಂದ ವಿಮರ್ಶಾತ್ಮಕ ಕೃತಿಯನ್ನೇ ಬರೆಯಬಹುದು. ಇವೆಲ್ಲದರ ಜೊತೆಗೆ ಬಹಳ ಸತ್ವಯುತವಾದ ಗ್ರಂಥಗಳಲ್ಲಿ ಅಂತಹ ವ್ಯಕ್ತಿ ಪ್ರತಿ ಸಲ ಓದಿದಾಗ ಹೊಸ ಹೊಸ ಅರ್ಥಗಳನ್ನು ಕಾಣುತ್ತಾನೆ. ಇಂತಹ ಹೆಚ್ಚು ತಿಳಿದವರು ಕೆಲವರು ಒಂದು ಕಡೆ ಸೇರಿ ವಿಚಾರ ವಿಮರ್ಶೆ ಮಾಡಿದಾಗ ಅವರೆಂದೂ ತನಿಯಾಗಿ ಕಾಣದ ಹೊಳಹು ಸ್ಫುಟವಾಗಿ ಕಾಣುತ್ತದೆ!

ಒಬ್ಬ ಶಾಲಾ ಮಾಸ್ತರನಿದ್ದನಂತೆ. ಅವನಿಗೆ ಸರಿಯಾಗಿ ಇಂಗ್ಲಿಷ್ ಭಾಷೆ ಬರದು. ಎಲ್ಲಿಂದಲೋ ಒಂದು ಇಂಗ್ಲಿಷ್-ಕನ್ನಡ ನಿಘಂಟು ಸಂಪಾದಿಸಿದ್ದ. ಗೊತ್ತಿಲ್ಲದಿದ್ದ ಪದಗಳಿಗೆ ಅದರಲ್ಲಿ ಅರ್ಥ ಹುಡುಕಿಕೊಂಡು ತಿಳಿಯುವ ಪ್ರಯತ್ನ ಮಾಡುತ್ತಿದ್ದ. ಆಗ ತಾನೇ ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಸಿಕ್ಕ ಸಮಯ. ಮೇಲಧಿಕಾರಿಗಳಿಂದ ಬರುವ ಪತ್ರಗಳು ಇಂಗ್ಲೀಷಿನಲ್ಲಿರುತ್ತಿದ್ದವು. ಒಮ್ಮೆ ಅವನು ಶಾಲೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂಬುದಾಗಿ ಊರಿನ ಮುಖಂಡರು ಮೇಲಧಿಕಾರಿಗಳಿಗೆ ದೂರು ಕೊಟ್ಟರಂತೆ. ಮೇಲಧಿಕಾರಿಗಳು ಶಾಲೆಯನ್ನು ಸರಿಯಾಗಿ ನಡೆಸುವಂತೆಯೂ, ಈ ರೀತಿ ದೂರು ಬರಲು ಅವಕಾಶ ಕೊಡದಂತೆಯೂ ಸಲಹೆ ನೀಡಿ ಪತ್ರ ಕಳಿಸಿದರು. ಪತ್ರದ ಕಡೆಯ ಸಾಲಿನಲ್ಲಿ "Don't give room for such complaints" ಎಂದು ಎಚ್ಚರಿಕೆ ಇತ್ತು. ಮಾಸ್ತರನಿಗೆ ಈ ವಾಕ್ಯ ಸರಿಯಾಗಿ ಅರ್ಥ ಆಗಲಿಲ್ಲ. ನಿಘಂಟು ತೆಗೆದು room ಪದಕ್ಕೆ ಅರ್ಥ ನೋಡಿದ. ಆ ಪದಕ್ಕೆ ಕೋಣೆ ಎಂದು ಅರ್ಥ ಇತ್ತು. "ನಮ್ಮ ಶಾಲೆಯ ಕಟ್ಟಡದಲ್ಲಿ ಕೇವಲ ಮೂರು ಕೋಣೆಗಳು ಮಾತ್ರ ಇವೆ. ಎರಡರಲ್ಲಿ ತರಗತಿಗಳನ್ನು ನಡೆಸುತ್ತೇವೆ. ಮೂರನೆಯದು ಶಾಲೆಯ ಕಚೇರಿಯಾಗಿದೆ. "ನಾವು ಯಾರಿಗೂ room ಕೊಟ್ಟಿಲ್ಲ; ಕೊಡುವುದೂ ಇಲ್ಲ" ಎಂದು ಉತ್ತರ ಬರೆದ. ಅನೇಕ ವೇಳೆ ಈ ರೀತಿ ಪದಕ್ಕೆ ಪದ ಸೇರಿಸಿ ಅರ್ಥ ಮಾಡಿಕೊಂಡು ಫಜೀತಿ ಆಗುವುದೂ ಉಂಟು. 

*****

ಒಂದು ಸರೋವರ ಎಲ್ಲರ ಮುಂದಿದೆ. ಅದರಲ್ಲಿರುವ ಜಲರಾಶಿ ಅದನ್ನು ನೋಡಿದ ಎಲ್ಲರಿಗೂ ಕಾಣುತ್ತದೆ. ಹೊರಗಡೆಯಿಂದ ನೋಡಿದಾಗ ಸಿಗುವುದು ಇಷ್ಟೇ. ಈಜು ಬರುವ, ಮುಳುಗು ಹಾಕುವ ವ್ಯಕ್ತಿಗೆ ಆ ಸರೋವರದ ನೀರಿನ ಪರಿಚಯ ಆಗುತ್ತದೆ. ನೀರಿನ ಉಷ್ಣತೆ, ಸುಮಾರು ಆಳ ಮತ್ತು ಇತರ ಭೌತಿಕ ಗುಣಗಳು, ಹೆಚ್ಚು ವಿವರಗಳು ಗೊತ್ತಾಗುತ್ತವೆ. ನುರಿತ ಈಜುಗಾರನು ಮತ್ತು ಬಹಳ ಹೊತ್ತು ಸರೋವರದ ನೀರಿನಲ್ಲಿ ಮುಳುಗಿ ವಿಹರಿಸಬಲ್ಲ ವ್ಯಕ್ತಿಗೆ ಅದರಲ್ಲಿರುವ ಅನೇಕ ವಸ್ತುಗಳು, ವರ್ಣಗಳು, ಅವುಗಳ ಸೊಗಸೂ ತಿಳಿಯುತ್ತದೆ. ಸರೋವರ ಒಂದೇ. ಆದರೆ ಏಕೆ ಈ ರೀತಿಯ ವ್ಯತ್ಯಾಸ? ಇವಕ್ಕೆ ಮೂಲ ಕಾರಣ ಅವರ ಸಿದ್ಧತೆ, ಯೋಗ್ಯತೆ ಮತ್ತು ಅವರವರ ಜ್ಞಾನದಾಹದ ನಿರೀಕ್ಷೆ. 

ಬಹುಶ್ರುತ ವಿದ್ವಾಂಸರು ಪ್ರತಿ ಕೃತಿಯಲ್ಲೂ, ಅದರ ಪದರ ಪದರಗಳಲ್ಲೂ ಮೂರು ರೀತಿಯ ಅರ್ಥಗಳು ಇವೆ ಎಂದು ಹೇಳುತ್ತಾರೆ. ಮೊದಲನೆಯದು ಎಲ್ಲರಿಗೂ ಕಾಣುವ ಮೇಲ್ನೋಟದ ಅರ್ಥ. ಇದರಲ್ಲಿ ಓದುಗನಿಗೆ ಇರುವುದು ಸಾಮಾನ್ಯ ಭಾಷಾ ಜ್ಞಾನ. ಇದನ್ನು ಬಾಹ್ಯಾರ್ಥ (ಹೊರಗಡೆಯ ಅರ್ಥ) ಎನ್ನುತ್ತಾರೆ. ಹೆಚ್ಚಿನ ಸಿದ್ಧತೆ, ಸಾಧನೆಗಳನ್ನು ಮಾಡಿರುವ ಓದುಗನಿಗೆ ಇನ್ನೂ ಹೆಚ್ಚಿನ ಅರ್ಥಗಳು ಕಾಣುತ್ತವೆ. ಇದನ್ನು ಅಂತರಾರ್ಥ (ಒಳಗಡೆಯ ಅರ್ಥ) ಎನ್ನುತ್ತಾರೆ. ಬಹಳ ಸಿದ್ಧತೆಗಳಿಂದ ಮತ್ತು ಜ್ಞಾನದಾಹದಿಂದ ಕೃತಿಯನ್ನು ಅಭ್ಯಸಿಸುವ ವ್ಯಕ್ತಿಗೆ ಆಗುವ ಅರ್ಥಗಳೇ ಬೇರೆ. ಇಂತಹ ಓದುಗ ಕೃತಿಯ ಸತ್ವವನ್ನು ತಿಳಿದು ಅದರ ಪದರಗಳನ್ನು ಮತ್ತೆ ಮತ್ತೆ ವೀಕ್ಷಿಸುತ್ತಾನೆ. ತನಗಿಂತ ಹೆಚ್ಚು ತಿಳಿದವರ ಜೊತೆ ಜಿಜ್ಞಾಸೆ ಮಾಡುತ್ತಾನೆ. ಹೆಚ್ಚು ಹೆಚ್ಚಿನ ತಿಳುವಳಿಕೆಗೆ ಹಾತೊರೆಯುತ್ತಾನೆ. ಇಂತಹ ವಿಷಯ ಸಂಪಾದನೆಗೆ ದುಡಿಯುತ್ತಾನೆ. ಅವನಿಗೆ ಕೃತಿಯ ಗುಹ್ಯಾರ್ಥ (ಒಳಗಿನ ವಿಶೇಷವಾದ ಅರ್ಥ) ತೆರೆದುಕೊಳ್ಳುತ್ತದೆ. 

ಎಲ್ಲ ಕೃತಿಗಳಲ್ಲೂ ಈ ರೀತಿಯ ಮೂರೂ ಅರ್ಥಗಳೂ ಇರಲೇಬೇಕು ಎಂಬ ನಿಯಮವೇನೂ ಇಲ್ಲ. ಕೆಲವು ಕೇವಲ ಮೊದಲನೆಯ ಅರ್ಥದಲ್ಲಿಯೇ ಮುಗಿಯಬಹುದು. ಅವು ರಸವೇ ಇಲ್ಲದ ಕಬ್ಬಿನ ಜಲ್ಲೆಯಂತೆ. ಮತ್ತೆ ಕೆಲವು ಸ್ವಲ್ಪ ರಸ ಸೇರಿರುವ, ಆದರೆ ಇನ್ನೂ ಪೂರ್ಣವಾಗಿ ರಸ ತುಂಬದ ಕಬ್ಬಿನ ಜಲ್ಲೆಯಂತೆ. ತಿನ್ನುವನ ಅಥವಾ ಹೀರುವವನ ನಾಲಿಗೆಗೆ ಅಷ್ಟೋ ಇಷ್ಟೋ ಸಿಹಿ ಸಿಗುತ್ತದೆ. ತುಂಬಾ ರಸ ತುಂಬಿದ ರಸದಾಳೆ ಕಬ್ಬನ ಜಲ್ಲೆಯಲ್ಲಿ ಹೀರಿದಷ್ಟೂ ಸ್ವಾದ ಸಿಗುತ್ತದೆ. ಕೃತಿಯಲ್ಲಿ ಅಂತರಾರ್ಥ, ಗುಹ್ಯಾರ್ಥಗಳು ತುಂಬಿರುವಾಗ ಈ ರೀತಿಯ ರಸದಾಳೆ ಕಬ್ಬಿನ ನಿಜವಾದ ರುಚಿ ಹತ್ತುತ್ತದೆ. ಅಂತಹ ಕಬ್ಬಿನಲ್ಲಿ ಬೆಲ್ಲವೋ, ಸಕ್ಕರೆಯೋ ಮಾಡಿಟ್ಟುಕೊಂಡರೆ ಬಹಳ ಕಾಲ ಕೃತಿಯ ಆನಂದ ಅನುಭವಿಸಬಹುದು! ಇಂತಹ ಬೆಲ್ಲ, ಸಕ್ಕರೆ ಮಾಡಬಹುದಾದ ಕೃತಿಗಳು ತಮ್ಮ ಸತ್ವಗಳ ಪ್ರಭಾವದಿಂದ ಬಹಳ ಕಾಲ ನಿಲ್ಲುತ್ತವೆ. ಸಾರ್ವಕಾಲಿಕ ಶ್ರೇಷ್ಠ ಕೃತಿಗಳು ಎಂದು ಗುರುತಿಸಲ್ಪಡುತ್ತವೆ. ಶತಶತಮಾನಗಳ ಕಾಲ ಕಳೆದರೂ ಅವನ್ನು ಅಭ್ಯಸಿಸುಸುವ ಪರಂಪರೆ ನಿರ್ಮಾಣವಾಗುತ್ತದೆ. 

ಈ ರೀತಿ ಶ್ರೇಷ್ಠ ಕೃತಿಗಳನ್ನು ಅಭ್ಯಸಿಸಿ ಬೆಲ್ಲವನ್ನೋ ಸಕ್ಕರೆಯನ್ನೋ ನಮ್ಮ ಮನಸ್ಸಿನಲ್ಲಿ ಮಾಡಿಟ್ಟುಕೊಳ್ಳುತ್ತಿದ್ದರೆ ನಮ್ಮ ವೈಯುಕ್ತಿಕ ಭಂಡಾರ ಬೆಳೆಯುತ್ತ ಹೋಗುತ್ತದೆ. ಮತ್ತೆ ಎಂದೋ ಇನ್ನೊಂದು ಗಟ್ಟಿ ಕೃತಿ ಓದುವಾಗ ಮತ್ತು ಮೆಲಕು ಹಾಕುವಾಗ ಈ ಸಕ್ಕರೆ ಆ ಹೋಳಿಗೆಗೆ ಸೇರಿಸಿಕೊಂಡು ಮತ್ತೂ ಹೆಚ್ಚಿನ ರುಚಿ ಪಡೆಯಲು ನೆರವಾಗುತ್ತದೆ!

*****

"ಹೂವು - ಹುಲ್ಲು ಮತ್ತು ಶ್ರೀಕೃಷ್ಣ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಶ್ರೀ ಪುರಂದರ ದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಕೃತಿಯಲ್ಲಿರುವ ಅನೇಕ ವಿಶೇಷಾರ್ಥ ಮತ್ತು ಗೂಡಾರ್ಥಗಳನ್ನು ನೋಡುವ ಪ್ರಯತ್ನ ಮಾಡೋಣ ಎಂದಿದ್ದೆವು. ಮೇಲಿನ ಬಾಹ್ಯಾರ್ಥ, ಅಂತರಾರ್ಥ, ಗೂಡಾರ್ಥಗಳ ಹಿನ್ನೆಲಿಯಲ್ಲಿ ಈ ಕೃತಿಯಲ್ಲಿರುವ ಕೆಲವು ವಿಶೇಷ ಅರ್ಥಗಳುಳ್ಳ ಪದಗಳನ್ನು ಗಮನಿಸುವ ಪ್ರಯತ್ನವನ್ನು ಯಥಾಶಕ್ತಿ ಮಾಡೋಣ. 


ಒಂದು ದಳ ಶ್ರೀತುಳಸಿ, ಬಿಂದು ಗಂಗೋದಕ, ಒಂದೇ ಮನದಲಿ, ಇಂದಿರಾರಮಣ, ಮಂದಿರದ ಒಳಗೆ, ಪರಿಪರಿಯ ಪುಷ್ಪಗಳ, ಪರಿಪೂರ್ಣ, ಸಕಲ ಸ್ವಾತಂತ್ರ್ಯ, ಅರಮನೆಯ ಒಳಗೆ ಸರಿಭಾಗ, ತೊಂಡರಿಗೆ ತೊಂಡನಾಗಿ ಎನ್ನುವ ಪದಗಳಲ್ಲಿ ವಿಶೇಷ ಮತ್ತು ಗೂಡಾರ್ಥಗಳಿವೆ. 

ಮುಂದಿನ ಸಂಚಿಕೆಗಳಲ್ಲಿ ಇವನ್ನು ಒಂದೊಂದಾಗಿ ನೋಡುವ ಪ್ರಯತ್ನ ಮಾಡೋಣ.