Showing posts with label visheshartha. Show all posts
Showing posts with label visheshartha. Show all posts

Saturday, March 29, 2025

ಅನುಭವದ ಆಳ-ಅಗಲಗಳು


ಹಿಂದಿನ ಸಂಚಿಕೆಯಲ್ಲಿ "ಅನುಭವದಿಂದ ಬಂದ ಅರ್ಥ" ಎನ್ನುವ ಶೀರ್ಷಿಕೆಯಡಿ "ಒಬ್ಬಟ್ಟು ಮತ್ತು ಹೋಳಿಗೆ" ಉದಾಹರಣೆಯೊಂದಿಗೆ ಕೃತಿಗಳ ಅಭ್ಯಾಸದಲ್ಲಿ ಹೊರಗಿನ ಅರ್ಥ, ಒಳಗಿನ ಅರ್ಥ, ಗುಹ್ಯಾರ್ಥ ಮತ್ತು ಅನುಭವದಿಂದ ತಿಳಿದು ಬರುವ ಅರ್ಥ ವಿಶೇಷಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

"ಬಾಹ್ಯರ್ಥ - ಅಂತರಾರ್ಥ - ಗೂಡಾರ್ಥ" ಅನ್ನುವ ಮೂಲ ಸಂಚಿಕೆಯಲ್ಲಿ ಕೇವಲ ಓದುವುದರಿಂದ ತಿಳಿಯುವ ಹೊರ ಅರ್ಥ, ಗಮನವಿಟ್ಟು ಓದುವುದರಿಂದ ಹೊಳೆಯುವ ಅಂತರಾರ್ಥ ಮತ್ತು ತಿಳಿದವರಿಂದ ಹೆಚ್ಚಿನ ಶ್ರಮವಹಿಸಿ ತಿಳಿಯಬಹುದಾದ ಗೂಡಾರ್ಥಗಳ ಬಗ್ಗೆ ಸ್ವಲ್ಪ ಯೋಚಿಸಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಈ ಮೂರೂ ಅರ್ಥಗಳನ್ನು ದಾಟಿದ ಮತ್ತು ಪಡೆದ ಅರ್ಥಗಳು ಕೇವಲ ಪುಸ್ತಕದ ಬದನೇಕಾಯಿ ಆಗದೆ ನಮ್ಮ ಜೀವನದಲ್ಲಿ ಮತ್ತು ಸಾಧನೆಯ ದಾರಿಯಲ್ಲಿ ಉಪಯೋಗಕ್ಕೆ ಬರುವ ದಾರಿಗಂಟಾಗಿ (ಪಾಥೇಯ ಅಥವಾ ಪ್ರಯಾಣದ ಕಾಲದಲ್ಲಿ ಸೇವಿಸಲು ಕೊಂಡೊಯ್ಯುವ ಆಹಾರ-ಪಾನೀಯಗಳು) ಉಳಿಯಲು ಅನುಭವದ ಅವಶ್ಯಕತೆ ಅತಿ ಮುಖ್ಯವಾಗುತ್ತದೆ. ಅಂತಹ ಅನುಭವ ಕಲಿಸುವ ಪಾಠಗಳ ಸ್ವಲ್ಪಮಟ್ಟಿನ ನೋಟಕ್ಕೆ ಇಲ್ಲಿ ಪ್ರಯತ್ನ ಮಾಡೋಣ.
*****

ಒಬ್ಬ ಪೆದ್ದ,, ಒಬ್ಬ ಸಾಮಾನ್ಯ ಮನುಷ್ಯ ಮತ್ತು ಒಬ್ಬ ಜಾಣ, ಇವರು ಮೂರು ಮಂದಿಯ ಗುಣ-ಲಕ್ಷಣಗಳೇನು? ಸುಲಭವಾಗಿ "ಅವನೊಬ್ಬ ಪೆದ್ದ" ಎನ್ನುತ್ತೇವೆ. ಹೇಗೆ ಪೆದ್ದ? ಯಾಕೆ ಪೆದ್ದ? ಲೋಕಾರೂಢಿಯಲ್ಲಿ ಸಾಮಾನ್ಯವಾದ ವಿಷಯಗಳನ್ನು ಅರ್ಥಮಾಡಿಕೊಳ್ಳಲಾಗದ ಮತ್ತು ಸಾಮಾನ್ಯ ಕೆಲಸಗಳನ್ನೂ ಸರಿಯಾಗಿ ಮಾಡದವನು ಪೆದ್ದ ಎಂದು ವ್ಯವಹಾರ. ಶಾಲೆಗಳಲ್ಲಿ, ತರಗತಿಗಳಲ್ಲಿ ನಪಾಸಾದವರನ್ನು (ಫೇಲ್) ಪೆದ್ದ ಅನ್ನುತ್ತಿದ್ದರು. ಕೆಲವು ವರ್ಷಗಳ ನಂತರ ಅದೇ ಪೆದ್ದರು ಅವರ ಜೊತೆ ಓದಿ ಜಾಣರೆನ್ನಿಸಿಕೊಂಡವರಿಗಿಂತ ಜೀವನದಲ್ಲಿ ಎಷ್ಟೋ ಮುಂದೆ ಹೋಗಿರುವುದನ್ನು ನಾವು ಕಂಡಿದ್ದೇವೆ. ಕೆಲವು ವೇಳೆ ಹೆಚ್ಚಿನ ಜ್ಞಾಪಕಶಕ್ತಿ ಇರುವವರನ್ನು ಮತ್ತು ಅದರಿಂದಾಗಿ ಹೆಚ್ಚು ಅಂಕಗಳನ್ನು ಪರೀಕ್ಷೆಯಲ್ಲಿ ಪಡೆಯುವವರನ್ನು ಜಾಣರೆಂದು ತಪ್ಪಾಗಿ ತಿಳಿಯುವುದೂ ಉಂಟು. ಕಠಿಣ ಪ್ರಸಂಗಗಳನ್ನು ಸುಲಭವಾಗಿ ನಿಭಾಯಿಸುವವರನ್ನು ಜಾಣ ಎನ್ನುವುದೂ ಕೇಳಿದ್ದೇವೆ. ಓದು ಮತ್ತು ವಿದ್ಯಾರ್ಹತೆ ಇಲ್ಲದೆ ಪೆದ್ದ ಎನ್ನಿಸಿಕೊಂಡವರು ವ್ಯವಹಾರ ಚತುರರಾಗಿ ಡಿಗ್ರಿಗಳುಳ್ಳ ಸಹಪಾಠಿಗಳನ್ನು ಕೆಲಸಕ್ಕೆ ಇಟ್ಟುಕೊಂಡಿರುವುದೂ ಕಾಣಬಹುದು. 

ಈ ಮೂರು ವರ್ಗವನ್ನು ಹೀಗೂ ಗುರುತಿಸಬಹುದು:
  • ತನ್ನ ತಪ್ಪುಗಳಿಂದ ಆದ ಅನುಭವಗಳಿಂದಲೂ ಪಾಠ ಕಲಿಯದೆ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಾ ತೊಂದರೆ ಅನುಭವಿಸುವನು ಪೆದ್ದ. 
  • ತನ್ನ ತಪ್ಪುಗಳಿಂದ ಆದ ಅನುಭವಗಳಿಂದ ಪಾಠ ಕಲಿತು ಅದೇ ತಪ್ಪುಗಳನ್ನು ಮತ್ತೆ ಮಾಡದೆ ಸುಧಾರಿಸಿಕೊಳ್ಳುವವನು ಸಾಮಾನ್ಯ ಮನುಶ್ಯ. 
  • ಇನ್ನೊಬ್ಬರ ತಪ್ಪುಗಳಿಂದ ಅವರು ಅನುಭವಿಸುವ ತೊಂದರೆಗಳನ್ನು ಕಂಡು, ಅಂತಹ ತಪ್ಪುಗಳನ್ನು ಮಾಡದೇ ಮುಂದುವರೆದು, ಪರರ ಅನುಭವಗಳಿಂದ ಪಾಠ ಕಲಿಯುವವನು ಜಾಣ. 
ಈ ಕಾರಣದಿಂದ ಅನುಭವದಿಂದ ಕಲಿಯುವ ಪಾಠ ಬಹಳ ದೊಡ್ಡದು. ಆದರೆ, ಅನೇಕ ವೇಳೆ, ಇಂತಹ ಅನುಭವದ ಪಾಠಕ್ಕೆ ತೆರಬೇಕಾದ ಶುಲ್ಕವೂ (ಫೀಸು) ಬಹಳ ದುಬಾರಿ!

*****

ಜೀವನದಲ್ಲಿ ಎಲ್ಲರಿಗೂ ಎಲ್ಲ ರೀತಿಯ ಅನುಭವಗಳು ಆಗುವುದಿಲ್ಲ. ಹುಟ್ಟಿ-ಬೆಳೆದ ಕುಟುಂಬ, ಸುತ್ತಲಿನ ವಾತಾವರಣ, ಆರ್ಥಿಕ ಸ್ಥಿತಿ-ಗತಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಾನ-ಮಾನ, ಮುಂತಾದುವುಗಳು ಒಬ್ಬ ಮನುಷ್ಯ ಪಡೆಯಬಹುದಾದ ಅನುಭವಗಳನ್ನು ಬಹುತೇಕ ನಿರ್ಧರಿಸುತ್ತವೆ. ವ್ಯಕ್ತಿ ಬದುಕುವ ಕಾಲಮಾನವೂ ಇದರಲ್ಲಿ ಮುಖ್ಯವಾಗುತ್ತದೆ. ಇವೆಲ್ಲ ಒಂದೇ ಸಮ ಇದ್ದರೂ ಸಿಗುವ ಅವಕಾಶಗಳು, ಕೈ ಹಿಡಿದು ನಡೆಸುವ ಜನ, ಮತ್ತು ವ್ಯಕ್ತಿಯ ಪರಿಶ್ರಮ ಇವೆಲ್ಲವೂ ಅನುಭವಗಳ ಆಳ-ಅಗಲಗಳನ್ನು ನಿರ್ಧರಿಸುತ್ತವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಹುಟ್ಟಿದವರ ಅನುಭವಗಳಿಗೂ ಇಪ್ಪತ್ತೊಂದನೆಯ ಶತಮಾನದಲ್ಲಿ ಹುಟ್ಟಿದವರ ಅನುಭವಗಳಿಗೂ ಅರ್ಥಾತ್ ಸಂಬಂಧ ಇರದು. 

ಕೆಲವು ರೀತಿಯ ಅನುಭವಗಳು ಕೆಲವು ವರ್ಗಗಳಿಗೆ ಮೀಸಲು. ಉದ್ಯೋಗದಲ್ಲಿ ಜೀವನ ಸವೆಸಿದವರ ಅನುಭವ ವ್ಯಾಪಾರದಲ್ಲಿರುವವರಿಗೆ ಬರದು. ಹಾಗೆಯೇ ಒಂದೇ ಸ್ಥಳದಲ್ಲಿ ಜೀವನ ನಡೆಸುವವರಿಗೆ ಆಗುವ ಅನುಭವಗಳಿಗೂ ಸದಾ ಸಂಚಾರದಲ್ಲಿರುವವರಿಗೂ ಆಗುವ ಅನುಭವಗಳು ಬೇರೆ ಬೇರೆ. ಗಂಡಸರ ಅನುಭವ ಮತ್ತು ಹೆಂಗಸರ ಅನುಭವ ಒಂದೇ ಆಗಲು ಸಾಧ್ಯವೇ ಇಲ್ಲ. ಈ ಕಾರಣದಿಂದ ಎಲ್ಲವನ್ನೂ ನಮ್ಮ ಅನುಭವದಿಂದಲೇ ಕಲಿಯುತ್ತೇವೆ ಅನ್ನುವುದು ಹುಚ್ಚುತನ. ಎಲ್ಲವೂ ನಮ್ಮ ಅನುಭವ ಅಥವಾ "ಸ್ವಾನುಭವ" ಆಗಲಾರದು. ಮತ್ತೊಬ್ಬರ ಅನುಭವ ಅಥವಾ "ಪರಾನುಭವ" ಈ ಕಾರಣದಿಂದ ಮುಖ್ಯ ಆಗುತ್ತದೆ. ಅನೇಕ ಸಾಧಕರು ಶತ ಶತಮಾನಗಳಿಂದ ಕೂಡಿಟ್ಟಿರುವ ಅಮೂಲ್ಯ ಅನುಭವಗಳ ಗುಡಾಣವೇ ನಮ್ಮ ಬಳಿ ಇದೆ. ಇವುಗಳನ್ನು ಕೊಟ್ಟವರಿಗೆ ಯಾವುದೇ ಸ್ವಾರ್ಥ ಇರಲಿಲ್ಲ. ಇವುಗಳ ಸರಿಯಾದ ಉಪಯೋಗ ಬಹುಮೂಲ್ಯ ಸರಕನ್ನು ಶುಲ್ಕವಿಲ್ಲದೆ ಮತ್ತು ಸುಲಭವಾಗಿ ಪಡೆಯಲು ನೆರವಾಗುವುದು. 

ಅನುಭವದ ಆಳ-ಅಗಲಗಳು ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಚರ್ಚಿಸುವಾಗ ಎಲ್ಲರಿಗೂ ಸಮಾನವಾಗಿ ಆಗುವ, ಎಲ್ಲ ದೇಶ-ಕಾಲಗಳಿಗೂ ಅನ್ವಯ ಆಗುವ ಅನುಭವದ ಉದಾಹರಣೆಯನ್ನು ಹಿಡಿಯುವುದು ಆಗದ ಮಾತು. ಜೀವನದಲ್ಲಿ ಎಲ್ಲಾ ಮನುಷ್ಯರಿಗೂ ಆಗಿಯೇ ಆಗುತ್ತದೆ ಅನ್ನುವ ಅನುಭವಗಳು ಕೇವಲ ಎರಡು. ಹುಟ್ಟು ಮತ್ತು ಸಾವು. ಎಲ್ಲರೂ ಹುಟ್ಟಲೇಬೇಕು. ಹುಟ್ಟಿದವರೆಲ್ಲರೂ ಸಾಯಲೇಬೇಕು. ತಮಾಷೆಯ ವಿಷಯವೆಂದರೆ ನಾವೆಲ್ಲರೂ ಹುಟ್ಟಿದ್ದರೂ ನಮಗೆ ಅದರ ಅನುಭವವಿಲ್ಲ! ಯಾರಿಗಾದರೂ ತಮ್ಮ ಜೀವನದ ಅನುಭವ ಇದ್ದರೆ ಅದು ಸುಮಾರು ನಾಲ್ಕೈದು ವರ್ಷಗಳ ಬಾಲ್ಯದ ನಂತರ. ಎಲ್ಲರೂ ಒಂದು ದಿನ ಕಂತೆ ಒಗೆಯಬೇಕಾದ್ದೇ ಆದರೂ ಸಾವು ಆದ ಮೇಲೆ ಹಿಂದೆ ಬಂದು ಬೇರೆಯವರಿಗೆ ಹೇಳಲು ಆಗುವುದಿಲ್ಲ. ಆದ ಕಾರಣ ಈ ಅನುಭವಗಳನ್ನು ಪರಾನುಭವದಿಂದಲೇ ನಮ್ಮ ಜೀವಿತ ಕಾಲದಲ್ಲಿ ತಿಳಿಯಬೇಕಾದ್ದು ಒಂದು ವಿಪರ್ಯಾಸ. 

*****

ಎಲ್ಲರಿಗೂ ಅನುಭವವಾಗುವ ಮತ್ತು ತಮ್ಮ ಜೀವಿತಕಾಲದಲ್ಲಿ ನಡೆದ ಘಟನೆ ಅಂದರೆ ಹುಟ್ಟು ಎಂದಾಯಿತು. ತಮ್ಮ ಹುಟ್ಟಿನ ಅನುಭವ ಗೊತ್ತಿಲ್ಲದಿದ್ದರೂ (ನೆನಪಿಲ್ಲದಿದ್ದರೂ) ತಮ್ಮ ಜೀವಿತ ಕಾಲದಲ್ಲಿ ಪ್ರತಿಯೊಬ್ಬರೂ ಬೇರೆ ಮಕ್ಕಳು ಹುಟ್ಟುವುದನ್ನು ನೋಡುತ್ತಾರೆ. ಬಹಳ ಚಿಕ್ಕ ವಯಸ್ಸಿನಲ್ಲಿ ಈ ಘಟನೆಗಳು ಹೆಚ್ಚು ಅರ್ಥವಾಗದಿದ್ದರೂ ವಯಸ್ಸಾದಂತೆ ಅರ್ಥವಾಗುತ್ತಾ ಹೋಗುತ್ತದೆ. ಕಾಲಕ್ರಮದಲ್ಲಿ ತಮ್ಮ ಮನೆಯಲ್ಲೇ ಶಿಶು ಜನನಗಳನ್ನು ನೋಡುತ್ತಾರೆ. ಆದ್ದರಿಂದ ನಮ್ಮ ಚರ್ಚೆಗೆ ಈ ಸಂದರ್ಭವನ್ನೇ ಬಳಸುವುದು ಸೂಕ್ತ. 

ಬೇಕಾದ ಉದಾಹರಣೆ ಬಾಹ್ಯರ್ಥ, ಅಂತರಾರ್ಥ ಮತ್ತು ಗುಹ್ಯಾರ್ಥ ಒಳಗೊಂಡಿರಬೇಕು. ಅನುಭವದ ಪಾಠವೂ ಅದಕ್ಕೆ ಸೇರಬೇಕು. ಆದ್ದರಿಂದ ಶ್ರೀಮದ್ ಭಾಗವತದ ಏಳನೆಯ ಸ್ಕಂದ, ಎರಡನೇ ಅಧ್ಯಾಯದ ಪ್ರಸಿದ್ಧ "ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೇ" (ಭಾಗವತ 7.2.38) ಅನ್ನುವ ಉದಾಹರಣೆಯನ್ನೇ ನೋಡೋಣ. ಒಂದು ಸಾವು ಆಗಿರುವಾಗ ಆ ಸತ್ತ ದೇಹದ ಸುತ್ತ ಕುಳಿತು ದುಃಖಿಸುತ್ತಿರುವ ಪರಿವಾರದವರನ್ನು ಕುರಿತು ಯಮಧರ್ಮನು "ನಾವು ತಾಯಿಯ ಗರ್ಭದಲ್ಲಿ ಇರುವಾಗ ಕಾಪಾಡಿದವನೇ ನಮ್ಮನ್ನು ಮುಂದೆಯೂ ಕಾಪಾಡುತ್ತಾನೆ" ಎಂದು ಹೇಳುವ ಸಂದರ್ಭ. ಇದು ಮುಂದೆ ಬರುವ ಪ್ರಹ್ಲಾದ ಮತ್ತು ಹಿರಣ್ಯಕಶಿಪು ವೃತ್ತಾಂತಕ್ಕೆ ಪೀಠಿಕೆಯಂತೆ ಇದೆ. 

ನಂಬುವವರು "ಶಿಶು ತಾಯಿಯ ಗರ್ಭದಲ್ಲಿ ಇರುವಾಗ ಪರಮಪುರುಷನು ಕಾಪಾಡುತ್ತಾನೆ, ಜನನ ಆಗುವವಗಳೂ ರಕ್ಷಿಸುತ್ತಾನೆ ಮತ್ತು ಮುಂದೆಯೂ ಪೊರೆಯುತ್ತಾನೆ" ಎಂದು ನಂಬುತ್ತಾರೆ. ಭಾಗವತದ ಈ ಭಾಗಗಳನ್ನು ಓದಿದರೆ ಬಾಹ್ಯರ್ಥ, ಅಂತರಾರ್ಥ ಮತ್ತು ಗೂಡಾರ್ಥಗಳ ಹರವು ಗೊತ್ತಾಗುತ್ತದೆ. ಈಗ ಅನುಭವದ ಲೇಪನ ಹೇಗೆ ಈ ನಂಬಿಕೆಯನ್ನು ಗಟ್ಟಿ ಮಾಡುತ್ತದೆ ಎಂದು ನೋಡೋಣ. 

ಮುಂದೆ ಹೋಗುವ ಮೊದಲು ಒಂದು ಮಾತು. ಶಿಶು ಜನನದ ನಿಜವಾದ ನೋವು ಮತ್ತು ಅನುಭವ ಹೆತ್ತ ತಾಯಿಗೆ ಮಾತ್ರ ಗೊತ್ತು. ಇದರಲ್ಲೂ ವ್ಯತ್ಯಾಸಗಳಿವೆ. ಕೆಲವು ಬಹು ಸುಲಭದ ಹೆರಿಗೆ (ನೋಡುವ ಬೇರೆಯವರಿಗೆ) ಇರಬಹುದು. ಮತ್ತೆ ಕೆಲವು ಬಹು ಪ್ರಯಾಸದ ಹೆರಿಗೆ ಇರಬಹುದು. ನೂರು ಹೆರಿಗೆ ಮಾಡಿಸಿರುವ ಪುರುಷ ವೈದ್ಯನಿಗೆ ಹೆರಿಗೆ ಮಾಡಿಸುವುದು ಸ್ವಾನುಭವವಾದರೂ ಹೆರುವುದು ಪರಾನುಭವವೇ ಅಲ್ಲವೇ? ನಾವೆಲ್ಲರೂ, ಸ್ತ್ರೀ ಪುರುಷ ಎಂಬ ಭೇದವಿಲ್ಲದೆ, ಈ ರೀತಿ ಹುಟ್ಟಿದವರೇ! 

***** 

ಸುಮಾರು ಐವತ್ತು ವರುಷಗಳ ಹಿಂದಿನ ಮಾತು. ಆಗ ಇನ್ನೂ ಉಗಿಬಂಡಿಗಳ ಕಾಲ. ಅಂದರೆ ಟ್ರೇನುಗಳು ಸ್ಟೀಮ್ ಎಂಜಿನ್ನುಗಳ ಬಲದಿಂದ ಓಡುತ್ತಿದ್ದವು. ಸುಮಾರು ಹದಿನೆಂಟು ಅಡಿಗಳ ಹಳಿಗಳು ಸೇರಿಸಿ ಮಾಡಿದ ರೈಲು ಮಾರ್ಗಗಳು. ಈಗಿನಂತೆ ಮಧ್ಯೆ ಮಧ್ಯೆ ಹಳಿಗಳನ್ನು ಎರಕ ಹೊಯ್ದು ಕೂಡಿಸುವ ವ್ಯವಸ್ಥೆ ಇನ್ನೂ ಬಂದಿರಲಿಲ್ಲ. ಬೋಲ್ಟು ಮತ್ತು ನಟ್ಟುಗಳು ಉಪಯೋಗಿಸಿ ಸೇರಿಸುವುದು ಬಹಳ ಹತ್ತಿರವಿದ್ದುದರಿಂದ ಶಬ್ದವೂ ಹಿಂದು-ಮುಂದಿನ ಜೋಲಿ ಹೊಡೆಯುವುದೂ ಬಹಳ ಹೆಚ್ಚಿತ್ತು, ಮೂರನೆಯ ದರ್ಜೆ ಇನ್ನೂ ಹೋಗಿರಲಿಲ್ಲ. (ಅದು ಹೋಗಿದ್ದು ಸುಮಾರು 1978 ರಲ್ಲಿ. ಮಧು ದಂಡವಟಿ ಅವರು ರೈಲು ಮಂತ್ರಿ ಆಗಿದ್ದಾಗ). ಕಾಯ್ದಿರಿಸದ ಬೋಗಿಗಳು (ಆನ್ ರಿಸರ್ವ್ಡ್ ಕಂಪಾರ್ಟ್ಮೆಂಟ್) ಇರುತ್ತಿದ್ದುದು ಎಂಜಿನ್ ಹಿಂದುಗಡೆ. ನಂತರ ಇತರ ಬೋಗಿಗಳು. ಆಂಧ್ರ ಪ್ರದೇಶದ ಈಲೂರು ಮತ್ತು ರಾಜಮಂಡ್ರಿ ನಡುವಿನ ಟ್ರೇನು. ಕಿಕ್ಕಿರಿದು ತುಂಬಿದ್ದ ಜನ. ತುಂಬು ಗರ್ಭಿಣಿಯೊಬ್ಬಳು ಕುಟುಂಬದವರ ಜೊತೆ ಹತ್ತಿ ಕುಳಿತಳು. ಯಾರೋ ಸ್ವಲ್ಪ ಸರಿದು ಕೂಡಲು ಜಾಗ ಕೊಟ್ಟರು. ಪ್ರಯಾಣ ಸಾಗಿತು. 

ಸ್ವಲ್ಪ ಸಮಯದ ನಂತರ ಆಕೆಗೆ ಶೌಚಾಗಾರಕ್ಕೆ ಹೋಗಬೇಕಾಯಿತು. ಹೋದವಳು ಹೆಚ್ಚು ಹೊತ್ತಾದರೂ ಹೊರಗೆ ಬರಲಿಲ್ಲ. ಜೊತೆಯಲ್ಲಿದ್ದವರು ಹೋಗಿ ನೋಡಿದರೆ ಉಗಿಬಂಡಿಯ ಓಲಾಟದಲ್ಲಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ. ಶೈತ್ಯೋಪಚಾರದ ನಂತರ ಎಚ್ಚರವಾಯಿತು. ಇಷ್ಟರಲ್ಲಿ ಪ್ರಸವ ಆಗಿಹೋಗಿದೆ. ಮಗುವು ಶೌಚಾಗಾರದ ದೊಡ್ಡ ಪೈಪಿನಲ್ಲಿ ಕೆಳಗೆ ಬಿದ್ದುಹೋಗಿದೆ. ಅಷ್ಟರಲ್ಲಿ ಟ್ರೇನು ಕೆಲವು ಮೈಲಿ ಮುಂದೆ ಬಂದಿದೆ. ಹತ್ತಾರು ಬೋಗಿಗಳು ಮಗು ಬಿದ್ದ ಸ್ಥಳವನ್ನು ದಾಟಿವೆ. ಬೋಗಿಯಲ್ಲಿದ್ದ ಅಲಾರಾಂ ಚೈನನ್ನು ಎಳೆದು ಟ್ರೈನನ್ನು ನಿಲ್ಲಿಸಿ ಹಳಿಯಗುಂಟ ಮಗುವನ್ನು ಹುಡುಕಿಕೊಂಡು ಹೊರಟರು. 

ಹೀಗೆ ಬರುತ್ತಿರುವಾಗ ಎದುರಿನಿಂದ ಕೆಲವರು ಬರುತ್ತಿರುವುದು ಕಾಣಿಸಿತು. ಮಗುವೊಂದನ್ನು ಒಬ್ಬರು ಕೈಲಿ ಹಿಡಿದು "ಇದು ಯಾರ ಮಗು? ಟ್ರೇನಿಂದ ಬಿದ್ದಿರಬಹುದು. ನಾವು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅಳುವುದು ಕೇಳಿಸಿತು" ಎಂದರು. ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದಿದ್ದರೂ, ಕೆಳಗಡೆ ನುರುಜುಗಲ್ಲು ರಾಶಿಯೇ ಇದ್ದರೂ ಕೆಲ ತರಚು ಗಾಯದ ಹೊರತಾಗಿ ಮಗು ಕ್ಷೇಮವಾಗಿತ್ತು! ತಾಯಿಗೆ ಮಗು ಸಿಕ್ಕಿತು. ಮಗುವಿಗೆ ತಾಯಿ ಸಿಕ್ಕಿದಳು. 

ಚಾಗಂಟಿ ಕೋಟೇಶ್ವರ ರಾವ್ ಆಂಧ್ರ ಪ್ರದೇಶದ ವಿಖ್ಯಾತ ವಿದ್ವಾಂಸರು. ತೆಲುಗು ಭಾಷೆಯ ಪ್ರವಚನಗಳಲ್ಲಿ ಬಹಳ ಹೆಸರು ಮಾಡಿದವರು. "ಪ್ರವಚನ ಚಕ್ರವರ್ತಿ", "ಶಾರದಾ ಜ್ಞಾನ ಪುತ್ರ" ಮೊದಲಾದ ಅನೇಕ ಬಿರುದುಗಳಿಂದ ಸನ್ಮಾನಿತರು. "ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೆ" ಅನ್ನುವುದರ ವಿವರಣೆ ಕೊಡುವಾಗ "ನೇನು ನಾ ಕಣ್ಣಿಂಚಿ ಚೂಸಿನ್ನಾನು" ಎಂದು ಹೇಳುತ್ತಿದ್ದರಂತೆ. ಇಂತಹ ಪ್ರವಚನ ಕೇಳಿದ್ದ ಹಿರಿಯ ಮಿತ್ರರೊಬ್ಬರು ಇದೇ ಪ್ರಸಂಗವನ್ನು ಚರ್ಚಿಸುವಾಗ ನೆನಪು ಮಾಡಿಕೊಳ್ಳುತ್ತಿದ್ದರು. 

*****

ಎಲ್ಲಾ ಸಂದರ್ಭಗಳಲ್ಲೂ ಇದೇ ರೀತಿ ಸುಖಾಂತ್ಯವಾಗುತ್ತದೆ ಎಂದೇನೂ ಇಲ್ಲ. ಎಲ್ಲಾ ಸರಿಯಾಗಿದ್ದೂ, ಸುಸಜ್ಜಿತ ಆಸ್ಪತ್ರೆಯಲ್ಲಿದ್ದೂ, ನುರಿತ ವೈದ್ಯರ ನಿರ್ಲಕ್ಶ್ಯದಿಂದಲೋ ಅಥವಾ ಬೇರಾವುದೋ ಕಾರಣದಿಂದಲೋ, ಇಲ್ಲವೇ ಯಾವುದೂ ಕಾರಣವಿಲ್ಲದೇನೆಯೇ ಪರಿಸ್ಥಿತಿ ವಿಷಮಿಸಿ ದುಃಖಾಂತ್ಯ ಆಗಬಹುದು. ಅಂತಹ ಉದಾಹರಣೆಗಳೂ ಇವೆ. 

ಬಾಹ್ಯಾರ್ಥ, ಅಂತರಾರ್ಥ ಮತ್ತು ಗೂಡಾರ್ಥಗಳ ಜೊತೆ ಅನುಭವವೂ ಬೆರೆತಾಗ ಸರಿಯಾದ ತಳಹದಿ ನಿರ್ಮಾಣವಾಗಿ ವಿಷಯದ ಎಲ್ಲ ಆಯಾಮಗಳೂ ತಿಳಿಯುತ್ತವೆ ಎಂದು ಹೇಳುವುದಷ್ಟೇ ಇಲ್ಲಿನ ಗುರಿ. ಒಂದೇ ರೀತಿಯ ಅನುಭವದಿಂದ ಇಬ್ಬರು ಬೇರೆ ಬೇರೆ ಅರ್ಥ ತಿಳಿದು ಬೇರೆ ಬೇರೆ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗುವುದೂ ಜೀವನದಲ್ಲಿ ನೋಡಿದ್ದು ಇದೆ. ಅವರವರ ನಂಬಿಕೆ, ಹಿನ್ನೆಲೆಗಳು ಮತ್ತು ಭವಿಷ್ಯವನ್ನು ನೋಡುವ ದೃಷ್ಟಿ ಕೂಡ ಅವುಗಳ ಕೆಲಸ ಮಾಡುತ್ತವೆ. 

ಸತ್ವಯುತವಾದ ಕೃತಿಗಳನ್ನು ಮತ್ತೆ ಮತ್ತೆ ಮೆಲಕುಹಾಕುವಾಗ, ಅದರ ಜೊತೆ ಅನುಭವ ಪಕ್ವವಾಗುತ್ತ ಹೋದಾಗ, ಜೀವನ ಯಾತ್ರೆಯ ಮತ್ತು ಸಾಧನೆಯ ಗುರಿಗಳು ಹೆಚ್ಚು ಸ್ಪಷ್ಟ ಆಗುತ್ತಾ ಹೋಗುತ್ತವೆ. ಯಾವ ರೀತಿಯ ಅನುಭವವನ್ನು ಆಯಾಯಾ ಸಂದರ್ಭಗಳಿಗೆ ತಳಕು ಹಾಕಬೇಕೆನ್ನುವ ವಿವೇಚನೆಯೂ ಮೂಡುತ್ತದೆ. 

Wednesday, March 26, 2025

ಅನುಭವದಿಂದ ಬಂದ ಅರ್ಥ


ಇನ್ನೆರಡು-ಮೂರು ದಿನಗಳಲ್ಲಿ ಚಾಂದ್ರಮಾನ ಯುಗಾದಿ ಹಬ್ಬ. ಮತ್ತೊಂದು ಹದಿನೈದು ದಿನದಲ್ಲಿ ಸೌರಮಾನ ಯುಗಾದಿ ಹಬ್ಬ. ಯುಗಾದಿ ಹಬ್ಬವೆಂದರೆ ಹಿಂದೆಲ್ಲಾ ಒಬ್ಬಟ್ಟು-ಹೋಳಿಗೆಗಳ ಹಬ್ಬ ಆಗಿತ್ತು. ಹೌದು, ಒಬ್ಬಟ್ಟಿಗೂ ಹೋಳಿಗೆಗೂ ಏನು ವ್ಯತ್ಯಾಸ? ಹೆಚ್ಚಿನ ಜನಕ್ಕೆ ಎರಡೂ ಒಂದೇ! ನೋಡಲು ಚಪಾತಿಯಂತೆ ಇರುತ್ತದೆ. ಆದರೆ ತಿಂದರೆ ಸಿಹಿ. ಅಷ್ಟೇ ಅಲ್ಲವೇ? ಹಿಂದೆಲ್ಲ ಬೇಳೆಯಿಂದ ಮಾಡಿದ ಹೂರಣವಿದ್ದರೆ ಒಬ್ಬಟ್ಟು ಎನ್ನುತ್ತಿದ್ದರು. ತೆಂಗಿನಕಾಯಿ ಹೂರಣದಿಂದ ಮಾಡಿದರೆ ಹೋಳಿಗೆ ಅನ್ನುತ್ತಿದ್ದರು. ಇದನ್ನು ಮಾಡಲು ಹಾಕುವುದು ಮುಖ್ಯವಾಗಿ ಮೂರು ಪದಾರ್ಥ. ಹಿಟ್ಟು, ಬೇಳೆ ಅಥವಾ ತೆಂಗಿನಕಾಯಿ ಮತ್ತು ಬೆಲ್ಲ. (ಏಲಕ್ಕಿ, ಅರಿಸಿನ, ಸ್ವಲ್ಪವೇ ಬಳಸುವ ಎಣ್ಣೆ ಮತ್ತು ಕೆಲವರು ಹಾಕುವ ಉಪ್ಪನ್ನು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂದು ಬಿಡೋಣ). ಹೊರಗಡೆಯ ಹಿಟ್ಟಿನ ಹೊದಿಕೆ. ಒಳಗಡೆ ಬೇಳೆ-ಬೆಲ್ಲದ ಅಥವಾ ಕಾಯಿ-ಬೆಲ್ಲದ ಹೂರಣ. ಹೀಗಿರುತ್ತಿತ್ತು ಮನೆಯಲ್ಲಿ ಮಾಡಿದ ಒಬ್ಬಟ್ಟು ಅಥವಾ ಹೋಳಿಗೆಯ ಲಕ್ಷಣಗಳು. 

ಪಾವಕ ಅಂದರೆ ಅಗ್ನಿ. ಅಗ್ನಿ ಅಂದರೆ ಪಾವಕ. ಒಟ್ಟಿನಲ್ಲಿ ಎರಡೂ ಬೆಂಕಿ. ಕೋಶಗಳನ್ನು ನೋಡಿದರೆ ಹೀಗೆಯೇ ಅರ್ಥ ಸಿಗುತ್ತದೆ. ಆದರೆ ವಾಸ್ತವವಾಗಿ ಪಾವಕ ಅಗ್ನಿಯ ಮಗ. ಇಬ್ಬರಿಗೂ ಸುಡುವ ಗುಣ ಉಂಟು. ಆದ್ದರಿಂದ ಎರಡೂ ಒಂದೇ ಅನ್ನುತ್ತದೆ ಕೋಶ. ಪ್ರಾಯಶಃ ಬೆಂಕಿಯಲ್ಲಿಟ್ಟ ಹೆಂಚಿನ ಅಥವಾ ಕಾವಲಿಯ ಮೇಲೆ ಬೇಯುವ ಒಬ್ಬಟ್ಟು ಅಥವಾ ಹೋಳಿಗೆಗೂ ಇದೇ ರೀತಿ ಒಂದೇ ಎಂದು ಬಂದಿರಬಹುದು. 

ಈಗ "ಹೋಳಿಗೆ ಮನೆ" ಕಾಲ. ಎಲ್ಲೆಲ್ಲೂ ಹೋಳಿಗೆ ಮನೆಗಳು ಕಾಣುತ್ತವೆ. ಮನೆಯಲ್ಲಿ ಹೋಳಿಗೆ ಮಾಡುವ ಕಾಲವಲ್ಲ. ಆದ್ದರಿಂದ ಉಗಾದಿಗೂ ಹೋಳಿಗೆಗೂ ಸಂಬಂಧ ಮೊದಲಿನಂತೆ ಬಿಗಿಯಿಲ್ಲ. ಮೊದಲಿನ ಮದುವೆಗಳ ಬಿಗಿ ಈಗಿನ ಮದುವೆಗಳಲ್ಲಿ ಇಲ್ಲ ಎನ್ನುವಂತೆ. (ಈಗಿನವರು ಇದನ್ನು ಒಪ್ಪದಿರಬಹುದು. ಅದು ಅವರ ಹಕ್ಕು.). ವಾರಕ್ಕೆ ಏಳು ದಿನವೂ, ವರುಷಕ್ಕೆ ಹನ್ನೆರಡು ತಿಂಗಳೂ ಹೋಳಿಗೆ ಲಭ್ಯವೇ. ಅಷ್ಟೇ ಅಲ್ಲ. ಖರ್ಜುರದ ಜೋಳಿಗೆಯಿಂದ ಕುಂಬಳಕಾಯಿ ಹೋಳಿಗೆಯವರೆಗೆ ಎಲ್ಲವೂ ಸಿಗುತ್ತದೆ. ಹಾಗಲಕಾಯಿ ಹೋಳಿಗೆ ಕಂಡಿಲ್ಲ. ಪ್ರಾಯಶಃ ಮುಂದೆ ಬರಬಹುದು. ಅಥವಾ ಬಂದಿದ್ದರೂ ನಮ್ಮ ತಿಳುವಳಿಕೆ ಕಡಿಮೆಯಿರಬಹುದು. 

*****

ನಮ್ಮ ಬಾಲ್ಯದಲ್ಲಿ ಯುಗಾದಿಗೂ, ವಾರ್ಷಿಕ ಪರೀಕ್ಷೆಗಳಿಗೂ ಬಹಳ ಹತ್ತಿರದ ನಂಟು. ಚಾಂದ್ರಮಾನ ಯುಗಾದಿ ಸಾಮಾನ್ಯವಾಗಿ ಮಾರ್ಚ್ ತಿಂಗಳ ಕೊನೆಯಲ್ಲಿ ಅಥವಾ ಏಪ್ರಿಲ್ ಮೊದಲ ಭಾಗದಲ್ಲಿ ಬರುತ್ತದೆ. ಆಗ ಏಪ್ರಿಲ್ ಹತ್ತರಿಂದ ಬೇಸಿಗೆ ರಜೆ ಇರುತ್ತಿತ್ತು. ಅದಕ್ಕೆ ಮುಂಚೆ ವಾರ್ಷಿಕ ಪರೀಕ್ಷೆ. ಅಂದರೆ ಯುಗಾದಿಗೆ ಹಿಂದೆ-ಮುಂದೆ. ಇದೊಂದು ರೀತಿಯಲ್ಲಿ ಒಬ್ಬಟ್ಟಿಗೂ ಪರೀಕ್ಷೆಗಳಿಗೂ ನಂಟು ತಂದಂತಿತ್ತು. 

ಅನೇಕ ಮನೆಗಳಲ್ಲಿ ಮೊದಲ ದಿನ ಒಬ್ಬಟ್ಟು ತಯಾರಿಸಿ ಎರಡನೇ ದಿನ ಹೋಳಿಗೆ ಮಾಡುತ್ತಿದ್ದರು. ಕೆಲವರು ಎರಡನ್ನೂ ಒಂದೇ ದಿನ ಮಾಡುತ್ತಿದ್ದುದೂ ಉಂಟು. ಎರಡನ್ನೂ ಒಂದೇ ದಿನ ಮಾಡಿದಾಗ ಊಟಕ್ಕೆ ಕುಳಿತಾಗ ಧರ್ಮಸಂಕಟ. ಯಾವುದನ್ನೂ ತಿನ್ನುವುದು? ಇವುಗಳ ಸರದಿ ಬರುವ ವೇಳೆಗೆ ಇನ್ನು ಬೇರೆ ಪದಾರ್ಥಗಳೆಲ್ಲ ಹೊಟ್ಟೆ ಸೇರಿ ಮಿಕ್ಕಿದ್ದ ಜಾಗ ಕಡಿಮೆ. ಅದಕ್ಕೂ ಅಮ್ಮಂದಿರು ಉಪಾಯ ಹೇಳುತ್ತಿದ್ದರು. ಅವು ರೆಫ್ರಿಜಿರೇಟರ್ ಇಲ್ಲದ ದಿನಗಳು. ಬೇಳೆ ಒಬ್ಬಟ್ಟು ಹೆಚ್ಚು ದಿನ ಇಡಲಾಗುವುದಿಲ್ಲ. ಕಾಯಿ ಹೋಳಿಗೆ ಕೆಲ ದಿನ ಇಡಬಹುದಾಗಿತ್ತು. ಆದ್ದರಿಂದ ಮೊದಲು ಬೇಳೆ ಒಬ್ಬಟ್ಟು. ನಂತರ ಸಂಜೆಯೋ, ಮಾರನೆಯ ದಿನವೋ ಕಾಯಿ ಹೋಳಿಗೆ. ಬಕಾಸುರನ ಸಂತತಿಯವರು ಎರಡನ್ನೂ ಎರಡು, ಮೂರು ದಿನ ಒಟ್ಟಿಗೆ ಸೇವಿಸುವ ಸೌಭಾಗ್ಯ ಹೊಂದಿದ್ದರು. 

*****

ಅದು ಹೋಳಿಗೆ ಇರಲಿ, ಒಬ್ಬಟ್ಟೀ ಇರಲಿ, ತಯಾರಿಸಲು ಮೈದಾ ಹಿಟ್ಟಿನ ಕಣಕ ಬೇಕೇ ಬೇಕು. ಕಣಕದ ಉಂಡೆಯನ್ನು ಲಟ್ಟಿಸಿ ಅಗಲ ಮಾಡಿ, ಅದರೊಳಗೆ ಹೂರಣದ ಉಂಡಿಯಿಟ್ಟು ಸುತ್ತಿ, ಮತ್ತೆ ಲಟ್ಟಿಸಿ ಅಗಲ ಮಾಡಿ ಕಾದ ಹೆಂಚಿನ ಮೇಲೆ ಬೇಯಿಸಿ ತಯಾರಿಸಬೇಕು. ತಿನ್ನುವವರಿಗೆ ಬಲು ಸಿಹಿ. ಆದರೆ ಮಾಡುವವರಿಗೆ ಬಲು ರೇಜಿಗೆಯ ಕೆಲಸ. ಅದೇನೂ ಉಪ್ಪಿಟ್ಟಿನಂತೆ ಒಮ್ಮೆ ಕೆದಕಿ ಇಡುವ ತಿನಿಸಲ್ಲ. ದೋಸೆಯಂತೆ ಒಂದಾದ ಮೇಲೊಂದು ಗುಂಡಗೆ ಬರೆಯಬೇಕು. ಆಗೆಲ್ಲಾ ಸೌದೆ ಒಲೆಗಳು. ಮಾಡುವವರಿಗೆ ಅವರು ಎಷ್ಟು ಶಾಂತ ಸ್ವಭಾವದವರಾದರೂ ಮಾಡಿ ಮುಗಿಸುವ ವೇಳೆಗೆ ಹೊಗೆಯಿಂದ ಕಣ್ಣು ಕೆಂಪಗಾಗುತ್ತಿದುದು ಸಹಜವೇ! 

ಅಡಿಗೆ ಮಾಡುವವರ ಕಷ್ಟ ಅವರಿಗೇ ಗೊತ್ತು. ಮೊದಲು ಪದಾರ್ಥಗಳನ್ನು ಹೊಂದಿಸಬೇಕು. ಈಗಿನಂತೆ ಆಗ "ಎಲ್ಲ ಕ್ಲೀನ್" ಮಾಡಿದ ಪದಾರ್ಥಗಳು ಸಿಗುತ್ತಿರಲಿಲ್ಲ. ಹೊಂದಿಸಿದ ಪದಾರ್ಥಗಳನ್ನು ಶುದ್ದಿ ಮಾಡಬೇಕು. ನಂತರ ಸಂಸ್ಕರಿಸಿ ಅಡುಗೆ ತಯಾರಿಸಬೇಕು. ಈ ತಿನಿಸು ಮಾಡುವಾಗ ಅಷ್ಟು ಕಣಕ ಮತ್ತು ಅಷ್ಟು ಹೂರಣ ಮಾಡಬೇಕು. ಎಲ್ಲ ಮಾಡಿದ ಮೇಲೆ ಒಮ್ಮೊಮ್ಮೆ ಸ್ವಲ್ಪ ಹೂರಣ ಮಿಗಬಹುದು. ಅಥವಾ ಸ್ವಲ್ಪ ಕಣಕ ಮಿಗಬಹುದು. ಹೂರಣ ಮಿಕ್ಕರೆ ಅದನ್ನೇ ಮಿಠಾಯಿ ತರಹ ಮಾಡಿ ಕೊಡುತ್ತಿದ್ದರು. ಕಣಕ ಮಿಕ್ಕರೆ ಕಷ್ಟವೇ! ಕಡೆಗೆ ಅದನ್ನು ಬಿಸಾಡಲಾರದೆ ಅದನ್ನೇ ಒಂದು ರೊಟ್ಟಿಯಂತೆ ತಟ್ಟಿ ಮುಗಿಸುತ್ತಿದ್ದರು. ಅದು ಹೋಳಿಗೆಯೂ ಅಲ್ಲ; ಒಬ್ಬಟ್ಟೂ ಅಲ್ಲ. ಅದೊಂದು ಕಣಕದ ರೊಟ್ಟಿ. ನೋಡಲು ಬಿಳಿಚಿಕೊಂಡ ಒಬ್ಬಟ್ಟಿನಂತೆ. ಏಕೆಂದರೆ ಅದರೊಳಗೆ ಹೂರಣದ ಕೆಂಪಿಲ್ಲ. ಹೂರಣದ ಕಂಪೂ ಇಲ್ಲ. 

ಕೆಲವರು ಮಾತಾಡುವಾಗ ಅವರ ಮಾತಿನ ರೀತಿ ಹೋಳಿಗೆಯಂತೆ ಇರುತ್ತದೆ. ಅವರ ಮಾತಿನಲ್ಲಿ ಒಂದು ರೀತಿಯ ಮೋಡಿ, ಒಂದು ಅರ್ಥ, ಒಂದು ಸೊಗಸು ಇರುತ್ತದೆ. ಒಂದು ಒಬ್ಬಟ್ಟು ತಿಂದ ನಂತರ ಇನ್ನೊಂದು ತಿನ್ನಲು ಆಸೆ ಆಗುವಂತೆ ಒಂದು ಮಾತು ಕೇಳಿದ ನಂತರ ಇನ್ನಷ್ಟು ಕೇಳಬೇಕು ಅನ್ನಿಸುತ್ತದೆ. ಮತ್ತೆ ಕೆಲವರು ಹಾಗಲ್ಲ. ಕೇವಲ ಮಾತು, ಅಷ್ಟೇ. ಮುಗಿದರೆ ಸಾಕು ಅನ್ನಿಸುತ್ತದೆ. "ಅವನ ಮಾತಿನಲ್ಲಿ ಏನೂ ಹೂರಣವಿಲ್ಲ" ಅನ್ನುವುದು ಇದರಿಂದ ಬಂದದ್ದು. ಅಂತಹವರ ಮಾತು ಕಣಕದ ರೊಟ್ಟಿಯಂತೆ. ಬರೀ ಶಬ್ದಗಳು. ಅರ್ಥವಿಲ್ಲದ ಶಬ್ದಗಳಷ್ಟೇ. "ಒಡಕು ಮಡಕೆಗೆ ಕಲ್ಲು ಹಾಕಿದಂತೆ" ಅನ್ನುತ್ತಿದ್ದರು. ಅಂತಹವರು ಹೋದ ಮೇಲೆ "ಸದ್ಯ, ಮಳೆ ನಿಂತಿತು" ಎಂದು ನಿಟ್ಟುಸಿರು ಬಿಡುತ್ತಿದ್ದರು.  

*****  

ಅಂತೂ ರೇಜಿಗೆಯ ಕೆಲಸ ಮುಗಿಸಿ ಒಬ್ಬಟ್ಟು, ಹೋಳಿಗೆ ತಯಾರಿಸಿದ್ದಾಯಿತು. ಜೊತೆಗೆ ಒಂದು ಕಣಕದ ರೊಟ್ಟಿಯೂ ಬಂದಿದೆ. ತಯಾರು ಮಾಡಿದ್ದನ್ನು ಸದುಪಯೋಗ ಮಾಡಬೇಕಲ್ಲ. ಅದಕ್ಕೇ ತಿನ್ನುವ ವಿಧಾನದ ಕಡೆಗೆ ಹೋಗೋಣ. 

ಅದೇನು? ತಿನ್ನುವ ವಿಧಾನ? ಎಂದು ಕೆಲವರು ಮುಖ ಸಿಂಡರಿಸಬಹುದು. ತಿನ್ನುವ ರೀತಿಯಲ್ಲಿ ಕೆಲಬಲರು ಕೆಲ ರೀತಿ ಅನುಸರಿಸುತ್ತಾರೆ. ಕೆಲವರಿಗೆ ಹೋಳಿಗೆಯಷ್ಟೇ ಸಾಕು. ಮತ್ತೆ ಕೆಲವರಿಗೆ ಅದರ ಜೊತೆ ಸ್ವಲ್ಪ (ಧಾರಾಳವಾಗಿಯೇ ಅನ್ನಿ) ತುಪ್ಪ ಬೇಕು. ಮತ್ತೆ ಕೆಲವರಿಗೆ ಅದರ ಜೊತೆ ಬಿಸಿ ಹಾಲು ಬೇಕು. ಇನ್ನೂ ಕೆಲವರಿಗೆ ಸ್ವಲ್ಪ ತುಪ್ಪ, ಅದರ ಮೇಲೆ ಅಷ್ಟು ಹಾಲು ಬೇಕು. ಜೇನಿನ ರುಚಿ ಕಂಡವರಿಗೆ (ಅದರಲ್ಲೂ ಡಯಾಬಿಟಿಸ್ ಇರುವವರಿಗೆ!) ಇವುಗಳ ಜೊತೆ ಸ್ವಲ್ಪ ಹೆಜ್ಜೇನು. (ಹೆಜ್ಜೇನು ಅಂತ ಈಗ ಸಿಗುವುದಿಲ್ಲ. ಅದು ವಿಶೇಷವಾಗಿ ಮಲೆನಾಡಿನ ದಟ್ಟ ಕಾಡಿನಲ್ಲಿ ಸಂಪಾದಿಸಿ ತಂದಿರುತ್ತಿದ್ದುದು). 

ಒಟ್ಟಿನಲ್ಲಿ ಐದು ಬಗೆಯ ತಿನ್ನುವ ರೀತಿ ಆಯಿತು:

  • ಕೇವಲ ಕಣಕದ ರೊಟ್ಟಿ. ಇದನ್ನು ತಿಂದದ್ದೇ ಭಾಗ್ಯ. ತಿಂದ ಕೆಲಸವಾಯಿತು. ಹೊಟ್ಟೆ ತುಂಬಿತು. ಮತ್ತೇನೂ ಪ್ರಯೋಜನವಿಲ್ಲ. 
  • ಕೇವಲ ಹೋಳಿಗೆ ಮಾತ್ರ. ಹೊಟ್ಟೆಯೂ ತುಂಬಿತು. ಸ್ವಲ್ಪ ರುಚಿಯೂ ಸಿಕ್ಕಿತು. 
  • ಹೋಳಿಗೆಯ ಜೊತೆ ಅಷ್ಟು ತುಪ್ಪ. ಇದರಲ್ಲಿ ವಿಶೇಷ ಅನ್ನಿಸುವ ಹೆಚ್ಚಿನ ಮಟ್ಟದ ಅನುಭವ. 
  • ಹೋಳಿಗೆಯ ಮೇಲೆ ತುಪ್ಪ. ಅದರ ಮೇಲೆ ಬಿಸಿ ಹಾಲು. ಈಗ ಪೂರ್ಣ ಪ್ರಮಾಣದ ಅಧಿಕ ಎನಿಸುವ ಅನುಭವ ಉಂಟಾಯಿತು. 
  • ಹೋಳಿಗೆಯ ಮೇಲೆ ತುಪ್ಪ. ಮೇಲೆ ಬಿಸಿ ಹಾಲು. ಒಂದಷ್ಟು ಜೇನು ತುಪ್ಪ. ಏನು ಸಾಧ್ಯವೋ ಎಲ್ಲವೂ ಮೇಳೈಸಿವೆ. ಇದಕ್ಕಿಂತ ಹೆಚ್ಚಿನ ರುಚಿ ಇನ್ನಿಲ್ಲ. ಆಹಾರ, ಪೋಷಕಾಂಶ, ರುಚಿ ಎಲ್ಲವೂ ದೊರಕಿತು. 
*****

"ಬಾಹ್ಯಾರ್ಥ - ಅಂತರಾರ್ಥ - ಗೂಡಾರ್ಥ" ಎನ್ನುವ ಶೀರ್ಷಿಕೆಯಡಿ ಹಿಂದೊಂದು ಸಂಚಿಕೆಯಲ್ಲಿ ಬಗೆಬಗೆಯ ಸಾಹಿತ್ಯ ಕೃತಿಗಳನ್ನು ಓದಿದಾಗ ಆಗುವ ಅನುಭವಗಳು ಮತ್ತು ಅರ್ಥ ವಿಶೇಷಗಳ ಬಗ್ಗೆ ಚರ್ಚೆ ಮಾಡಿದ್ದೆವು. (ಮತ್ತೆ ಓದಬೇಕಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ). ಆದರಲ್ಲಿ ಹೊರಗಿನ ಅರ್ಥ, ಒಳಗಿನ ಅರ್ಥ ಮತ್ತು ಸಾಮಾನ್ಯವಾಗಿ ತಿಳಿಯಲಾಗದ ವಿಶೇಷಾರ್ಥ (ಗೂಡಾರ್ಥ) ಇವುಗಳ ಬಗ್ಗೆ ಮತ್ತು ಇವುಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ನೋಡಿದ್ದೆವು. ಆ ಸಂಬಂಧದ ಎಲ್ಲ ವಿಷಯಗಳನ್ನೂ ಈ ಹೋಳಿಗೆ ತಿನ್ನುವ ವಿಧಾನಕ್ಕೆ ಹೋಲಿಸಬಹುದು:

  • ಭಾಷೆ ಬರುತ್ತದೆ ಎಂದು ಸುಮ್ಮನೆ ಓದಿದರೆ ಅದು ಕಣಕದ ರೊಟ್ಟಿ ತಿಂದಂತೆ. ಏನೂ ಅರ್ಥವಾಗಲಿಲ್ಲ. 
  • ಬಾಹ್ಯಾರ್ಥ ತಿಳಿಯುವಂತೆ ಓದಿದರೆ ಅದು ಕೇವಲ ಹೋಳಿಗೆ ತಿಂದಂತೆ. ಸ್ವಲ್ಪ ಅರ್ಥವಾಯಿತು. 
  • ಅಂತರಾರ್ಥ ತಿಳಿಯುವಂತೆ ಓದಿದರೆ ಹೋಳಿಗೆಯ ಜೊತೆ ತುಪ್ಪವೂ ಸೇರಿದಂತೆ ಹೆಚ್ಚಿನ ಪ್ರಯೋಜನ ಆಯಿತು. 
  • ಬಾಹ್ಯಾರ್ಥ, ಅಂತರಾರ್ಥ, ಗುಹ್ಯರ್ಥಗಳು ತಿಳಿದರೆ ಹೋಳಿಗೆ, ತುಪ್ಪ, ಹಾಲು ಸೇರಿದಂತೆ. ಪೂರ್ಣ ಪ್ರಯೋಜನ ಸಿಕ್ಕಿತು. 
  • ಈ ಮೂರೂ ಅರ್ಥಗಳ ಜೊತೆಗೆ ಅನುಭವದ ಅರ್ಥ ಸೇರಿದರೆ ಹೋಳಿಗೆ, ತುಪ್ಪ, ಹಾಲು ಇವುಗಳ ಜೊತೆ ಹೆಜ್ಜೇನು ಕೂಡಿದಂತೆ. ಅದೊಂದು ಪರಮ ಗತಿಯ ಅನುಭವ ಕೊಡುವ ಪೂರ್ಣ ಅರ್ಥ. 
*****

ಅನುಭವದ ಹೆಜ್ಜೇನು, ಅದರ ಎರಡು ಮುಖಗಳಾದ "ಸ್ವಾನುಭವ" ಮತ್ತು "ಪರಾನುಭವ", ಇವುಗಳ ವಿಷಯವನ್ನು ಉದಾಹರಣೆಗಳ ಮೂಲಕ ಮುಂದಿನ ಸಂಚಿಕೆಯಲ್ಲಿ ನೋಡೋಣ.