ಅದು ಹೋಳಿಗೆ ಇರಲಿ, ಒಬ್ಬಟ್ಟೀ ಇರಲಿ, ತಯಾರಿಸಲು ಮೈದಾ ಹಿಟ್ಟಿನ ಕಣಕ ಬೇಕೇ ಬೇಕು. ಕಣಕದ ಉಂಡೆಯನ್ನು ಲಟ್ಟಿಸಿ ಅಗಲ ಮಾಡಿ, ಅದರೊಳಗೆ ಹೂರಣದ ಉಂಡಿಯಿಟ್ಟು ಸುತ್ತಿ, ಮತ್ತೆ ಲಟ್ಟಿಸಿ ಅಗಲ ಮಾಡಿ ಕಾದ ಹೆಂಚಿನ ಮೇಲೆ ಬೇಯಿಸಿ ತಯಾರಿಸಬೇಕು. ತಿನ್ನುವವರಿಗೆ ಬಲು ಸಿಹಿ. ಆದರೆ ಮಾಡುವವರಿಗೆ ಬಲು ರೇಜಿಗೆಯ ಕೆಲಸ. ಅದೇನೂ ಉಪ್ಪಿಟ್ಟಿನಂತೆ ಒಮ್ಮೆ ಕೆದಕಿ ಇಡುವ ತಿನಿಸಲ್ಲ. ದೋಸೆಯಂತೆ ಒಂದಾದ ಮೇಲೊಂದು ಗುಂಡಗೆ ಬರೆಯಬೇಕು. ಆಗೆಲ್ಲಾ ಸೌದೆ ಒಲೆಗಳು. ಮಾಡುವವರಿಗೆ ಅವರು ಎಷ್ಟು ಶಾಂತ ಸ್ವಭಾವದವರಾದರೂ ಮಾಡಿ ಮುಗಿಸುವ ವೇಳೆಗೆ ಹೊಗೆಯಿಂದ ಕಣ್ಣು ಕೆಂಪಗಾಗುತ್ತಿದುದು ಸಹಜವೇ!
ಅಡಿಗೆ ಮಾಡುವವರ ಕಷ್ಟ ಅವರಿಗೇ ಗೊತ್ತು. ಮೊದಲು ಪದಾರ್ಥಗಳನ್ನು ಹೊಂದಿಸಬೇಕು. ಈಗಿನಂತೆ ಆಗ "ಎಲ್ಲ ಕ್ಲೀನ್" ಮಾಡಿದ ಪದಾರ್ಥಗಳು ಸಿಗುತ್ತಿರಲಿಲ್ಲ. ಹೊಂದಿಸಿದ ಪದಾರ್ಥಗಳನ್ನು ಶುದ್ದಿ ಮಾಡಬೇಕು. ನಂತರ ಸಂಸ್ಕರಿಸಿ ಅಡುಗೆ ತಯಾರಿಸಬೇಕು. ಈ ತಿನಿಸು ಮಾಡುವಾಗ ಅಷ್ಟು ಕಣಕ ಮತ್ತು ಅಷ್ಟು ಹೂರಣ ಮಾಡಬೇಕು. ಎಲ್ಲ ಮಾಡಿದ ಮೇಲೆ ಒಮ್ಮೊಮ್ಮೆ ಸ್ವಲ್ಪ ಹೂರಣ ಮಿಗಬಹುದು. ಅಥವಾ ಸ್ವಲ್ಪ ಕಣಕ ಮಿಗಬಹುದು. ಹೂರಣ ಮಿಕ್ಕರೆ ಅದನ್ನೇ ಮಿಠಾಯಿ ತರಹ ಮಾಡಿ ಕೊಡುತ್ತಿದ್ದರು. ಕಣಕ ಮಿಕ್ಕರೆ ಕಷ್ಟವೇ! ಕಡೆಗೆ ಅದನ್ನು ಬಿಸಾಡಲಾರದೆ ಅದನ್ನೇ ಒಂದು ರೊಟ್ಟಿಯಂತೆ ತಟ್ಟಿ ಮುಗಿಸುತ್ತಿದ್ದರು. ಅದು ಹೋಳಿಗೆಯೂ ಅಲ್ಲ; ಒಬ್ಬಟ್ಟೂ ಅಲ್ಲ. ಅದೊಂದು ಕಣಕದ ರೊಟ್ಟಿ. ನೋಡಲು ಬಿಳಿಚಿಕೊಂಡ ಒಬ್ಬಟ್ಟಿನಂತೆ. ಏಕೆಂದರೆ ಅದರೊಳಗೆ ಹೂರಣದ ಕೆಂಪಿಲ್ಲ. ಹೂರಣದ ಕಂಪೂ ಇಲ್ಲ.
ಕೆಲವರು ಮಾತಾಡುವಾಗ ಅವರ ಮಾತಿನ ರೀತಿ ಹೋಳಿಗೆಯಂತೆ ಇರುತ್ತದೆ. ಅವರ ಮಾತಿನಲ್ಲಿ ಒಂದು ರೀತಿಯ ಮೋಡಿ, ಒಂದು ಅರ್ಥ, ಒಂದು ಸೊಗಸು ಇರುತ್ತದೆ. ಒಂದು ಒಬ್ಬಟ್ಟು ತಿಂದ ನಂತರ ಇನ್ನೊಂದು ತಿನ್ನಲು ಆಸೆ ಆಗುವಂತೆ ಒಂದು ಮಾತು ಕೇಳಿದ ನಂತರ ಇನ್ನಷ್ಟು ಕೇಳಬೇಕು ಅನ್ನಿಸುತ್ತದೆ. ಮತ್ತೆ ಕೆಲವರು ಹಾಗಲ್ಲ. ಕೇವಲ ಮಾತು, ಅಷ್ಟೇ. ಮುಗಿದರೆ ಸಾಕು ಅನ್ನಿಸುತ್ತದೆ. "ಅವನ ಮಾತಿನಲ್ಲಿ ಏನೂ ಹೂರಣವಿಲ್ಲ" ಅನ್ನುವುದು ಇದರಿಂದ ಬಂದದ್ದು. ಅಂತಹವರ ಮಾತು ಕಣಕದ ರೊಟ್ಟಿಯಂತೆ. ಬರೀ ಶಬ್ದಗಳು. ಅರ್ಥವಿಲ್ಲದ ಶಬ್ದಗಳಷ್ಟೇ. "ಒಡಕು ಮಡಕೆಗೆ ಕಲ್ಲು ಹಾಕಿದಂತೆ" ಅನ್ನುತ್ತಿದ್ದರು. ಅಂತಹವರು ಹೋದ ಮೇಲೆ "ಸದ್ಯ, ಮಳೆ ನಿಂತಿತು" ಎಂದು ನಿಟ್ಟುಸಿರು ಬಿಡುತ್ತಿದ್ದರು.
*****
ಅಂತೂ ರೇಜಿಗೆಯ ಕೆಲಸ ಮುಗಿಸಿ ಒಬ್ಬಟ್ಟು, ಹೋಳಿಗೆ ತಯಾರಿಸಿದ್ದಾಯಿತು. ಜೊತೆಗೆ ಒಂದು ಕಣಕದ ರೊಟ್ಟಿಯೂ ಬಂದಿದೆ. ತಯಾರು ಮಾಡಿದ್ದನ್ನು ಸದುಪಯೋಗ ಮಾಡಬೇಕಲ್ಲ. ಅದಕ್ಕೇ ತಿನ್ನುವ ವಿಧಾನದ ಕಡೆಗೆ ಹೋಗೋಣ.
ಅದೇನು? ತಿನ್ನುವ ವಿಧಾನ? ಎಂದು ಕೆಲವರು ಮುಖ ಸಿಂಡರಿಸಬಹುದು. ತಿನ್ನುವ ರೀತಿಯಲ್ಲಿ ಕೆಲಬಲರು ಕೆಲ ರೀತಿ ಅನುಸರಿಸುತ್ತಾರೆ. ಕೆಲವರಿಗೆ ಹೋಳಿಗೆಯಷ್ಟೇ ಸಾಕು. ಮತ್ತೆ ಕೆಲವರಿಗೆ ಅದರ ಜೊತೆ ಸ್ವಲ್ಪ (ಧಾರಾಳವಾಗಿಯೇ ಅನ್ನಿ) ತುಪ್ಪ ಬೇಕು. ಮತ್ತೆ ಕೆಲವರಿಗೆ ಅದರ ಜೊತೆ ಬಿಸಿ ಹಾಲು ಬೇಕು. ಇನ್ನೂ ಕೆಲವರಿಗೆ ಸ್ವಲ್ಪ ತುಪ್ಪ, ಅದರ ಮೇಲೆ ಅಷ್ಟು ಹಾಲು ಬೇಕು. ಜೇನಿನ ರುಚಿ ಕಂಡವರಿಗೆ (ಅದರಲ್ಲೂ ಡಯಾಬಿಟಿಸ್ ಇರುವವರಿಗೆ!) ಇವುಗಳ ಜೊತೆ ಸ್ವಲ್ಪ ಹೆಜ್ಜೇನು. (ಹೆಜ್ಜೇನು ಅಂತ ಈಗ ಸಿಗುವುದಿಲ್ಲ. ಅದು ವಿಶೇಷವಾಗಿ ಮಲೆನಾಡಿನ ದಟ್ಟ ಕಾಡಿನಲ್ಲಿ ಸಂಪಾದಿಸಿ ತಂದಿರುತ್ತಿದ್ದುದು).
ಒಟ್ಟಿನಲ್ಲಿ ಐದು ಬಗೆಯ ತಿನ್ನುವ ರೀತಿ ಆಯಿತು:
- ಕೇವಲ ಕಣಕದ ರೊಟ್ಟಿ. ಇದನ್ನು ತಿಂದದ್ದೇ ಭಾಗ್ಯ. ತಿಂದ ಕೆಲಸವಾಯಿತು. ಹೊಟ್ಟೆ ತುಂಬಿತು. ಮತ್ತೇನೂ ಪ್ರಯೋಜನವಿಲ್ಲ.
- ಕೇವಲ ಹೋಳಿಗೆ ಮಾತ್ರ. ಹೊಟ್ಟೆಯೂ ತುಂಬಿತು. ಸ್ವಲ್ಪ ರುಚಿಯೂ ಸಿಕ್ಕಿತು.
- ಹೋಳಿಗೆಯ ಜೊತೆ ಅಷ್ಟು ತುಪ್ಪ. ಇದರಲ್ಲಿ ವಿಶೇಷ ಅನ್ನಿಸುವ ಹೆಚ್ಚಿನ ಮಟ್ಟದ ಅನುಭವ.
- ಹೋಳಿಗೆಯ ಮೇಲೆ ತುಪ್ಪ. ಅದರ ಮೇಲೆ ಬಿಸಿ ಹಾಲು. ಈಗ ಪೂರ್ಣ ಪ್ರಮಾಣದ ಅಧಿಕ ಎನಿಸುವ ಅನುಭವ ಉಂಟಾಯಿತು.
- ಹೋಳಿಗೆಯ ಮೇಲೆ ತುಪ್ಪ. ಮೇಲೆ ಬಿಸಿ ಹಾಲು. ಒಂದಷ್ಟು ಜೇನು ತುಪ್ಪ. ಏನು ಸಾಧ್ಯವೋ ಎಲ್ಲವೂ ಮೇಳೈಸಿವೆ. ಇದಕ್ಕಿಂತ ಹೆಚ್ಚಿನ ರುಚಿ ಇನ್ನಿಲ್ಲ. ಆಹಾರ, ಪೋಷಕಾಂಶ, ರುಚಿ ಎಲ್ಲವೂ ದೊರಕಿತು.
"ಬಾಹ್ಯಾರ್ಥ - ಅಂತರಾರ್ಥ - ಗೂಡಾರ್ಥ" ಎನ್ನುವ ಶೀರ್ಷಿಕೆಯಡಿ ಹಿಂದೊಂದು ಸಂಚಿಕೆಯಲ್ಲಿ ಬಗೆಬಗೆಯ ಸಾಹಿತ್ಯ ಕೃತಿಗಳನ್ನು ಓದಿದಾಗ ಆಗುವ ಅನುಭವಗಳು ಮತ್ತು ಅರ್ಥ ವಿಶೇಷಗಳ ಬಗ್ಗೆ ಚರ್ಚೆ ಮಾಡಿದ್ದೆವು. (ಮತ್ತೆ ಓದಬೇಕಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ). ಆದರಲ್ಲಿ ಹೊರಗಿನ ಅರ್ಥ, ಒಳಗಿನ ಅರ್ಥ ಮತ್ತು ಸಾಮಾನ್ಯವಾಗಿ ತಿಳಿಯಲಾಗದ ವಿಶೇಷಾರ್ಥ (ಗೂಡಾರ್ಥ) ಇವುಗಳ ಬಗ್ಗೆ ಮತ್ತು ಇವುಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ನೋಡಿದ್ದೆವು. ಆ ಸಂಬಂಧದ ಎಲ್ಲ ವಿಷಯಗಳನ್ನೂ ಈ ಹೋಳಿಗೆ ತಿನ್ನುವ ವಿಧಾನಕ್ಕೆ ಹೋಲಿಸಬಹುದು:
- ಭಾಷೆ ಬರುತ್ತದೆ ಎಂದು ಸುಮ್ಮನೆ ಓದಿದರೆ ಅದು ಕಣಕದ ರೊಟ್ಟಿ ತಿಂದಂತೆ. ಏನೂ ಅರ್ಥವಾಗಲಿಲ್ಲ.
- ಬಾಹ್ಯಾರ್ಥ ತಿಳಿಯುವಂತೆ ಓದಿದರೆ ಅದು ಕೇವಲ ಹೋಳಿಗೆ ತಿಂದಂತೆ. ಸ್ವಲ್ಪ ಅರ್ಥವಾಯಿತು.
- ಅಂತರಾರ್ಥ ತಿಳಿಯುವಂತೆ ಓದಿದರೆ ಹೋಳಿಗೆಯ ಜೊತೆ ತುಪ್ಪವೂ ಸೇರಿದಂತೆ ಹೆಚ್ಚಿನ ಪ್ರಯೋಜನ ಆಯಿತು.
- ಬಾಹ್ಯಾರ್ಥ, ಅಂತರಾರ್ಥ, ಗುಹ್ಯರ್ಥಗಳು ತಿಳಿದರೆ ಹೋಳಿಗೆ, ತುಪ್ಪ, ಹಾಲು ಸೇರಿದಂತೆ. ಪೂರ್ಣ ಪ್ರಯೋಜನ ಸಿಕ್ಕಿತು.
- ಈ ಮೂರೂ ಅರ್ಥಗಳ ಜೊತೆಗೆ ಅನುಭವದ ಅರ್ಥ ಸೇರಿದರೆ ಹೋಳಿಗೆ, ತುಪ್ಪ, ಹಾಲು ಇವುಗಳ ಜೊತೆ ಹೆಜ್ಜೇನು ಕೂಡಿದಂತೆ. ಅದೊಂದು ಪರಮ ಗತಿಯ ಅನುಭವ ಕೊಡುವ ಪೂರ್ಣ ಅರ್ಥ.