Monday, December 9, 2024

ಪರಿಪರಿಯ ಪುಷ್ಪಗಳು


ಶ್ರೀ ಪುರಂದರದಾಸರ ಬಹು ಜನಪ್ರಿಯ ಕೃತಿ "ಹೂವ ತರುವರ ಮನೆಗೆ ಹುಲ್ಲ ತರುವ, ಅವ್ವ ಲಕುಮಿರಮಣ ಇವಗಿಲ್ಲ ಗರುವ" ಕೃತಿಯ ವಿಶೇಷಾರ್ಥಗಳು ಹಾಗೂ ಗೂಡಾರ್ಥಗಳ ತಿಳಿಯುವ ಪ್ರಯತ್ನದಲ್ಲಿ ಹಿಂದಿನ ಸಂಚಿಕೆಯಲ್ಲಿ "ಬಿಂದು ಗಂಗೋದಕ" ಎನ್ನುವ ಬಗ್ಗೆ ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ)

"ಒಂದು ದಳ ಶ್ರೀ ತುಳಸಿ" "ಬಿಂದು ಗಂಗೋದಕ" "ಪರಿಪರಿಯ ಪುಷ್ಪಗಳ" "ಒಂದೇ ಮನದಲಿ" ಎನ್ನುವ ಈ ನಾಲ್ಕು ವಿಷಯಗಳ ಪರಿಶೀಲನೆಯನ್ನು ಈಗ ಒಟ್ಟಿಗೆ ಮಾಡೋಣ. 

ಶ್ರೀಪುರಂದರದಾಸರ ಕೃತಿಗಳು ರಾಮಾಯಣ, ಮಹಾಭಾರತ, ಭಾಗವತ ಸೇರಿದಂತೆ ಹದಿನೆಂಟು ಪುರಾಣಗಳು ಮತ್ತು ಉಪನಿಷತ್ತುಗಳ ಸಾರಗಳನ್ನು ಹೊತ್ತುಕೊಂಡಿರುವ ಕಲ್ಪವೃಕ್ಷದ ಫಲಗಳು. ಅವುಗಳನ್ನು ಸುಮ್ಮನೆ ಓದುವುದರಿಂದ ಅಥವಾ ಹಾಡುವುದರಿಂದ ಬಾಹ್ಯಾರ್ಥ ಅಥವಾ ಹೊರ ಅರ್ಥ ಮಾತ್ರ ಗೊತ್ತಾಗುತ್ತದೆ. ಆ ಕೃತಿಗಳ ಒಳ ಅರ್ಥ ಮತ್ತು ಗೂಡಾರ್ಥಗಳು ತಿಳಿಯಬೇಕಾದರೆ ಹೆಚ್ಚಿನ ಪರಿಶ್ರಮ ಅಗತ್ಯ. 

*****

ವಿದ್ಯಾಭ್ಯಾಸದ ಕ್ರಮದಲ್ಲಿ ಪ್ರತಿ ಹಂತದಲ್ಲಿ (ತರಗತಿಗಳು ಎನ್ನಬಹುದು) ವಾರ್ಷಿಕ ಪರೀಕ್ಷೆಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ವಿದ್ಯಾಭ್ಯಾಸ ಮಾಡುವ ಎಲ್ಲ ವಿದ್ಯಾರ್ಥಿಗಳೂ ಈ ಪರೀಕ್ಷೆಗಳಿಗೆ ಕೂಡುತ್ತಾರೆ. ಪರೀಕ್ಷೆಯ ನಂತರ ಪರೀಕ್ಷಕರು ಪ್ರತಿ ವಿದ್ಯಾರ್ಥಿಯ ಪರಿಶ್ರಮವನ್ನು ಅವರ ಉತ್ತರ ಪತ್ರಿಕೆಯ ಮೂಲಕ ಅಳೆದು ಮೌಲ್ಯಾ೦ಕನ ಮಾಡಿ ಅವರನ್ನು ಉತ್ತೀರ್ಣ ಅಥವಾ ಅನುತ್ತೀರ್ಣ (ಪಾಸ್ ಅಥವಾ ಫೇಲ್) ಎಂದು ಘೋಷಿಸುತ್ತಾರೆ. ಇಷ್ಟು ಮಾತ್ರವಲ್ಲ, ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಮೊದಲ, ಎರಡನೆಯ ಅಥವಾ ಮೂರನೆಯ ದರ್ಜೆ ಎಂದೂ ಸಹ ವರ್ಗೀಕರಿಸುತ್ತಾರೆ. ಕೆಲವರಿಗೆ, ಅಂದರೆ ಅತಿ ಹೆಚ್ಚು ಅಂಕಗಳನ್ನು ಪಡೆದವರಿಗೆ ಶ್ರೇಣಿಗಳನ್ನೂ (rankings) ಕೊಡುತ್ತಾರೆ. ಅವರವರ ಶ್ರಮಕ್ಕೆ, ಸಾಧನೆಗೆ ತಕ್ಕ ಫಲ ಅವರವರಿಗೆ. 

ಪರೀಕ್ಷೆ ಅಂದರೆ ಒಂದು ಮಾನದಂಡ ಬೇಕಲ್ಲ. ಇದು ಪರೀಕ್ಷೆಗೆ ಉತ್ತರ ಬರೆಯುವುದಕ್ಕೆ ಮೊದಲೇ ಎಲ್ಲರಿಗೂ ಗೊತ್ತು. ಉತ್ತರ ಬರೆದ ಮೇಲೆ ಮಾನದಂಡ ಹೇಳುವುದಲ್ಲ. 100ಕ್ಕೆ  30 ಅಂಕ ಪಡೆದರೆ ಮಾತ್ರ ಪಾಸ್ ಎನ್ನೋಣ. 30ಕ್ಕೆ ಕಡಿಮೆ ಬಂದರೆ ಫೇಲ್ ಅನ್ನೋಣ. 30 ರಿಂದ 50 ಅಂಕ ಪಡೆದರೆ ಮೂರನೆಯ ದರ್ಜೆ ಅನ್ನೋಣ. 50 ರಿಂದ 60 ಅಂಕ ಬಂದರೆ ಎರಡನೇ ದರ್ಜೆ. 60ಕ್ಕಿಂತ ಹೆಚ್ಚು ಬಂದರೆ ಮೊದಲ ದರ್ಜೆ. 80ಕ್ಕಿಂತ ಹೆಚ್ಚು ಬಂದರೆ ಉತ್ತಮ ಶ್ರೇಣಿ ಎನ್ನೋಣ. ಇದು ಸಾಮಾನ್ಯವಾಗಿ ನಮ್ಮ ಪ್ರಪಂಚದಲ್ಲಿ ಇರುವುದೇ. ಪರಮಾತ್ಮನ ಸೃಷ್ಟಿಯಲ್ಲೂ ಹಾಗೆ. ಸಾಧನೆಯ ಮೇಲೆ ಮಣೆ ಹಾಕುವುದು. ವರ್ಷವೆಲ್ಲ ಸೋಮಾರಿಯಾಗಿ ಬದುಕಿದವನೂ ಶ್ರಮಪಟ್ಟು ಸಾಧನೆ ಮಾಡಿದವನೂ ಒಂದೇ ಹೇಗಾದೀತು? ಇಬ್ಬರಿಗೆ ಬೇರೆ ಬೇರೆ ಅಂಕ ಬಂದರೆ ಅದು ಪರೀಕ್ಷಕನ ತಪ್ಪೋ ಅಥವಾ ವಿದ್ಯಾರ್ಥಿಯ ತಪ್ಪೋ? 

ಪಠ್ಯಕ್ರಮದಲ್ಲಿ ಹೇಳಿದಂತೆ ಎಲ್ಲವನ್ನೂ ಮೊದಲಿಂದ ಕೊನೆಯವರೆಗೆ ಓದಿ ಮನನ ಮಾಡಿ ಉತ್ತರ ಬರೆದ ವಿದ್ಯಾರ್ಥಿಯೂ, ಅಲ್ಲೊಂದು ಇಲ್ಲೊಂದು ಪುಟ ಓದಿ ಉತ್ತರ ಬರೆದ ವಿದ್ಯಾರ್ಥಿಯೂ ಒಂದೇ ಆಗಬಹುದೇ? ಪಠ್ಯಪುಸ್ತಕವನ್ನು ನೋಡದೇ ಕೇವಲ ಗೈಡುಗಳ ಸಹಾಯದಿಂದ ಉತ್ತರ ಬರೆದ ವಿದ್ಯಾರ್ಥಿಗೂ ಪ್ರಥಮಶ್ರೇಣಿ ಸಿಗಬೇಕೇ? ತನ್ನ ಶ್ರಮದ ಮೇಲೆ ತಯಾರಾದ ವಿದ್ಯಾರ್ಥಿಗೂ ಯಾರದೋ ಉತ್ತರ ನಕಲು ಮಾಡಿ ಉತ್ತರ ಬರೆದ ವಿದ್ಯಾರ್ಥಿಗೂ ಒಂದೇ ಅಂಕ ಕೊಡಬಹುದೇ? 

ಪರಮಾತ್ಮನ ಸೃಷ್ಟಿಯಲ್ಲಿ ಸಮಾನತೆ ಇದೆ. ಆದರೆ ಸಮಾನತೆ ಅಂದರೆ ಎಲ್ಲರಿಗೂ ಒಂದೇ ಎಂದಲ್ಲ. ಸಮಾನತೆ ಅಂದರೆ ಸಮಾನ ಅವಕಾಶ ಕೊಡುವುದು. ಒಮ್ಮೆ ಅವಕಾಶ ಸಿಕ್ಕ ಮೇಲೆ ಅವರವ ಸಾಧನೆಗೆ ತಕ್ಕಂತೆ ಪ್ರತಿಫಲ. ಸಮಾನತೆ ಅಂದರೆ ಕತ್ತೆಯೂ ಒಂದೇ, ಕುದುರೆಯೂ ಒಂದೇ ಎಂದಲ್ಲ. ಕುದುರೆ ದೊಡ್ಡದು ಅಥವಾ ಕತ್ತೆ ಚಿಕ್ಕದು ಎಂದೂ ಅಲ್ಲ. ಎಲ್ಲರಿಗೂ ಒಂದೇ ಪ್ರತಿಫಲ ಮಾಡಿ ಹೆಚ್ಚು ಸಾಧನೆ ಮಾಡುವರನ್ನು ತಡೆಯುವುದೂ ಇಲ್ಲ. 

ಒಂದು ತಾಯಿಗೆ ಮೂರು ಮಕ್ಕಳು. ಮೊದಲನೆಯವನು ಹದಿನೆಂಟು ವರುಷದ ಯುವಕ. ಎರಡನೆಯವನು ಆರು ವರುಷದ ಬಾಲಕ. ಮೂರನೆಯವನು ಆರು ತಿಂಗಳ ಕೂಸು. ತಾಯಿಗೆ ಮೂವರೂ ಮಕ್ಕಳೇ. ಮೂವರ ಮೇಲೂ ಸಮಾನ ಪ್ರೀತಿಯೇ. ದೊಡ್ಡವನಿಗೆ ಮೂರು ರೊಟ್ಟಿ ಕೊಡುತ್ತಾಳೆ. ಮಧ್ಯದವನಿಗೆ ಒಂದೇ ರೊಟ್ಟಿ ಕೊಡುತ್ತಾಳೆ. ಮೂರನೆಯ ಮಗನಿಗೆ ರೊಟ್ಟಿ ಕೊಡುವುದೇ ಇಲ್ಲ. ಒಂದು ಲೋಟ ಹಾಲು ಮಾತ್ರ. ತಾಯಿ ಭೇದಭಾವ ಮಾಡುತ್ತಿದ್ದಾಳೆ ಎಂದು ಹೇಳಬಹುದೇ? ಮೂರನೆಯ ಮಗನ ಬಾಯಿಗೆ ಮೂರು ರೊಟ್ಟಿ ತುರುಕಿದರೆ ಹೇಗೆ? ಮೊದಲನಿಯವನಿಗೆ ಒಂದೇ ರೊಟ್ಟಿ ಕೊಟ್ಟರೆ ಹೇಗೆ? ಸಮಾನತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಪರಮಾತ್ಮನ ಸೃಷ್ಟಿಯಲ್ಲಿ "ನಿಯಮನ" ಎಂದೊಂದು ಇದೆ. ಈ ನಿಯಮನವೇ ಅವನ ಸಂವಿಧಾನ. ಸಮಾನ ಅವಕಾಶ ಎಲ್ಲರಿಗೂ ಉಂಟು. ಆದರೆ ಪ್ರತಿಫಲ ಮಾತ್ರ ಶ್ರಮದ ಅಆಧಾರದ ಮೇಲೆಯೇ. 

ಪರಮಾತ್ಮನ ಪರೀಕ್ಷೆಯಲ್ಲಿ ಪರೀಕ್ಷೆಯ ಉಸ್ತುವಾರಿ ಅವನದೇ. ಅವನ ಪರೀಕ್ಷೆಯಲ್ಲಿ ಅವನ ಕಣ್ಣು ತಪ್ಪಿಸಿ ಪರೀಕ್ಷೆಯಲ್ಲಿ ಕಾಪಿ ಹೊಡೆಯುವಹಾಗಿಲ್ಲ. ಅವನು ಎಲ್ಲ ನೋಡುತ್ತಿರುತ್ತಾನೆ! (ಈ ವಿಷಯದಲ್ಲಿ ಹೆಚ್ಚು ತಿಳಿಯಬೇಕಾದರೆ ಇಲ್ಲಿ ಕ್ಲಿಕ್ ಮಾಡಿ).  ಯಾವ ದಾರಿ ಬೇಕಾದರೂ ಆರಿಸಿಕೊಂಡು ಪರೀಕ್ಷೆ ಬರೆಯಬಹುದು. ಆದರೆ ತಯಾರಿ ನೋಡಿ ಅಂಕ ಕೊಡುತ್ತಾನೆ. ಸರಿಯಾದ ತಯಾರಿ ಇಲ್ಲದಿದ್ದರೆ "ನೀನು ಅನುತ್ತೀರ್ಣ" ಎನ್ನುತ್ತಾನೆ. "ಮತ್ತೊಮ್ಮೆ ಪರೀಕ್ಷೆ ಬರಿ"  ಅನ್ನುತ್ತಾನೆ. ಅವನನ್ನು ಯಾಮಾರಿಸುವಹಾಗಿಲ್ಲ. 

ಈ ಮೇಲೆ ಹೇಳಿದ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ "ಪತ್ರಂ ಪುಷ್ಪ೦ ಫಲಂ ತೋಯಂ" ಎನ್ನುವ ಭಗವದ್ಗೀತೆಯ ಶ್ಲೋಕದ ನಿಜವಾದ ಅರ್ಥ ಸಿಗುತ್ತದೆ. ಇಲ್ಲದಿದ್ದರೆ ಅಂಗಡಿಯಲ್ಲಿ ಸಿಗುವ ಗೈಡುಗಳ ಸಹಾಯದಿಂದ ಪರೀಕ್ಷೆ ಬರೆದಂತೆ ಆಗುತ್ತದೆ. 
*****

ಶ್ರೀ ಪುರಂದರದಾಸರು "ಹೂವ ತರುವರ ಮನೆಗೆ ಹುಲ್ಲ ತರುವ" ಕೃತಿಯಲ್ಲಿ "ಒಂದು ದಳ ಶ್ರೀತುಳಸಿ", "ಬಿಂದು ಗಂಗೋದಕ", ಮತ್ತು "ಪರಿಪರಿಯ ಪುಷ್ಪಗಳ" ಎನ್ನುವ ಮೂರು ಪದಗಳನ್ನು ಪತ್ರ೦, ತೋಯಂ, ಮತ್ತು ಪುಷ್ಪ೦ ಎಂಬುದರ ಸೂಚಕವಾಗಿ ಬಳಸಿದ್ದಾರೆ. ಇಲ್ಲಿ ಫಲದ ಬಗ್ಗೆ ನೇರವಾಗಿ ಹೇಳಿಲ್ಲ. ಆದರೆ ಸೂಚ್ಯವಾಗಿ ಈ ಫಲದ ಬಗ್ಗೆ ಮುಂದಿನ ನುಡಿಗಳಲ್ಲಿ ಹೇಳಿದ್ದಾರೆ. ಹೇಗೆ ಎನ್ನುವುದನ್ನು ಮುಂದೆ ನೋಡೋಣ. 

ಮೊದಲಿಗೆ ಪತ್ರಂ ಅಥವಾ ಎಲೆಯನ್ನು ನೋಡಬೇಕು. ಅವನಿಗೆ ಒಂದು ಎಲೆ ಸಾಕು ಎನ್ನುತ್ತಾನೆ. ಸರಿ ಮನೆಯ ಹೊರಗಡೆ ಮೊದಲು ಕಂಡ ಗಿಡದ ಎಲೆ ಆಗಬಹುದೇ? ಸೃಷ್ಟಿಯಲ್ಲಿ ಕೆಲವು ಗಿಡ ಇವೆ. ಅವುಗಳ ಎಲೆ ತಾಗಿದೊಡನೆ ನಮಗೆ ತುರಿಕೆ ಆಗುತ್ತದೆ. ಆ ಗಿಡದ ಎಲೆಯೂ ಆಗಬಹುದೇ? ನಾವು ವೀಳೆಯದೆಲೆ ಹಾಕಿಕೊಳ್ಳುವಾಗ ಕೆಲವು ಎಲೆಗಳನ್ನು ಪಕ್ಕಕೆ ಎಸೆಯುತ್ತೇವೆ. ಚೆನ್ನಾಗಿರುವುದನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಅದನ್ನು ಬಟ್ಟೆಯಿಂದ ಒರೆಸುತ್ತೇವೆ. ನಮ್ಮ ಮನಸ್ಸಿಗೆ ಸರಿ ಎನ್ನಿಸಿದ ಮೇಲೆ ಮುಂದಿನ ಮಾತು. ಪರಮಾತ್ಮನಿಗೆ ಅರ್ಪಿಸುವ ವೇಳೆ ಯಾವ ಮಟ್ಟದ ಆರಿಸುವುಕೆ ಮತ್ತು ಶ್ರದ್ದೆ ಇರಬೇಕು?

ಪರೀಕ್ಷೆಯಲ್ಲಿ ಪಾಸಾದರೆ ಸಾಕು ಎನ್ನುವ ವಿದ್ಯಾರ್ಥಿಗೆ ಯಾವುದೋ ಎಲೆ. ಎರಡನೇ ಶ್ರೇಣಿ ಬೇಕಿದ್ದರೆ ಸರಿಯಾದ ಒಳ್ಳೆ ಎಲೆ. ಮೊದಲ ಶ್ರೇಣಿ ಬೇಕಿದ್ದರೆ ಶ್ರೀ ತುಳಸಿ, ಬಿಲ್ವಪತ್ರೆ ಮುಂತಾದ ಎಲೆಗಳು. ಉತ್ತಮ ಶ್ರೇಣಿ ಬರಬೇಕಾದರೆ? ಪೂರ್ತಿ ಸಿಲಬಸ್ ಓದಿದ ವಿದ್ಯಾರ್ಥಿಗೆ ಅದೇ ಭಗವದ್ಗೀತೆಯ ಮತ್ತೊಂದು ಶ್ಲೋಕ ಗೊತ್ತು. ಯಾವುದು? "ಊರ್ಧ್ವಮೂಲ ಅಧಃಶಾಖಾ ಅಶ್ವಥಮ್ ಪ್ರಾಹುರವ್ಯಮ್, ಛಂದಾಂಸಿ ಯಸ್ಯ ಪರ್ಣಾನಿ ....." ಎಂದು. ಹೆಚ್ಚಿನ ವಿವರಗಳಿಗೆ ಇದು ಸ್ಥಳವಲ್ಲ. ಆ ವಿಶಾಲವಾದ ವೇದಗಳೆಂಬ ಎಲೆಗಳು. ಕ್ರಮವಾಗಿ ಅಧ್ಯನಮಾಡಿದ ಜ್ಞಾನದ ಎಲೆಗಳನ್ನು ಅರ್ಪಿಸಬೇಕು. ಇದೇ ಗುಹ್ಯಾರ್ಥ.   

ಎರಡನೆಯದು ಪುಷ್ಪಮ್ ಅಥವಾ ಹೂವು. ಯಾವ ಹೂವು? ಕಾಗದದ ಹೂವು ಆಗಬಹುದೇ? ಕಾಗದದಂತೆ ಇರುವ, ಗಂಧವಿಲ್ಲದ ಕಾಕಡ ಅಥವಾ ಕನಕಾಂಬರ ಹೂವು ಆಗಬಹುದೇ? ಬಹು ಸುವಾಸನೆಯ ಮಲ್ಲಿಗೆ, ಜಾಜಿ, ಸಂಪಿಗೆಗೂ ಒಂದೇ ಅಂಕವೇ? ಒಂದು ರೀತಿಯ ಹೂವು ಸಾಕೆ? ನಾಲ್ಕು ರೀತಿಯ ಹೂವುಗಳು ಇನ್ನೂ ಉತ್ತಮವಲ್ಲವೇ? ಬೆಳಗ್ಗೆ ಒಂದು ಕೈಯಲ್ಲಿ ಒಂದು ಬುಟ್ಟಿ, ಮತ್ತೊಂದು ಕೈಲಿ ಕಬ್ಬಿಣದ ಕೊಕ್ಕೆ ಹಿಡಿದು ಅವರಿವರ ಮನೆಯ ಗಿಡಗಳ ಹೂವು ಸಂಪಾದಿಸಿದರೆ ಹೇಗೆ?  ದಾಸರು ಪರಿಪರಿಯ ಹೂವುಗಳು ಎಂದಿದ್ದು ಏನನ್ನು? ಪರಮಾತ್ಮನು ಹೇಳಿದ ನಿಜವಾದ ಹೂವು ಯಾವುವು? ಪೂರ್ತಿ ಸಿಲಬಸ್ ಓದಿದ ವಿದ್ಯಾರ್ಥಿಗೆ ಗೊತ್ತು. "ಅಹಿಂಸಾ ಪ್ರಥಮಂ ಪುಷ್ಪಮ್, ಪುಷ್ಪಮಿಂದ್ರಿಯ ನಿಗ್ರಹಃ, ಸರ್ವಭೂತ ದಯಪುಷ್ಪಮ್, ಕ್ಷಮಾಪುಷ್ಪಮ್ ವಿಶೇಷತಃ,  ಜ್ಞಾನ ಪುಷ್ಪಮ್, ತಪಃ ಪುಷ್ಪಮ್, ಶಾಂತಿ ಪುಷ್ಪಮ್, ಸತ್ಯಂ ಪುಷ್ಪಮ್, ಏವಂ ಅಷ್ಟ ವಿಧಂ ಪುಷ್ಪಮ್". ಉತ್ತಮ ಶ್ರೇಣಿ ಬೇಕಾದ ವಿದ್ಯಾರ್ಥಿ ಈ ಎಂಟು ಹೂವುಗಳನ್ನು ತರುತ್ತಾನೆ, ಬೆಳಗ್ಗೆ ಅರಳಿ ಸಂಜೆ ಮುದುಡುವ ಹೂವುಗಳನ್ನಲ್ಲ. ಇದು ಗುಹ್ಯಾರ್ಥ. 

ಇನ್ನು ಒಂದು ತೊಟ್ಟು ನೀರಿನ ವಿಷಯ ನೋಡೋಣ. ಯಾರೋ ತಂದಿಟ್ಟ ನೀರಿನಲ್ಲಿ ಒಂದು ತೊಟ್ಟು ನೀರು ಕೊಡಬಹುದೇ? ಕೊಳಕು ಪಾತ್ರೆಯಲ್ಲಿರುವ ನೀರೂ ಕೊಡಬಹುದೇ? ಅದನ್ನು ನಾವೇ ಕುಡಿಯುವುದಿಲ್ಲ. ಹಿಂದಿನ ಸಂಚಿಕೆಯಲ್ಲಿ ನೋಡಿದಂತೆ ಕಾಶಿ ಯಾತ್ರೆ ಮಾಡಿ, ಬಿಂದುಮಾಧವನ ದರ್ಶನ ಮಾಡಿ, ಬಿಂದುಮಾಧವನ ಘಟ್ಟದಲ್ಲಿ ಭಯ-ಭಕ್ತಿಯಿಂದ ಹಿಡಿದು ತಂದ ಗಂಗೆಯ ಥಾಲಿಯ ನೀರಿಗೂ ಯಾರೋ ತಂದಿಟ್ಟ ನೀರಿನಲ್ಲಿ ಕದ್ದು ತೆಗೆದ ಒಂದು ತೊಟ್ಟು ನೀರಿಗೂ ಒಂದೇ ಬೆಲೆಯೇ? ಎಷ್ಟು ಅಂಕ ಬೇಕೋ ತೀರ್ಮಾನಿಸಿ ಅಂತಹ ನೀರು ಆರಿಸುವುದು ನಮಗೆ ಬಿಟ್ಟಿದ್ದು!  ವಾಸ್ತವವಾಗಿ ಆ ಹನಿ ನೀರಿನ ನಿಜವಾದ ಅರ್ಥ ಬೇರೆಯೇ ಇದೆ, ಸರಿಯಾದ ಕ್ರಮದಲ್ಲಿ ಜೀವನ ಮಾಡಿ, ಸಮಾಜಕ್ಕೆ ಉಪಕಾರಿಯಾಗಿ, ಜೀವನದ ಕೊನೆ ಗಳಿಗೆಯಲ್ಲಿ ಕರ್ತನ ನೆನೆಯುತ್ತ ಕಣ್ಣಿನಲ್ಲಿ ತುಂಬಿದ ಆನಂದಾಶ್ರುವೇ ಅವನಿಗೆ ಬೇಕಾದ ನೀರಿನ ಹನಿ. ಬಿಸಿಯಾದಾಗ ಆವಿಯಾಗುವ ಈ ನೀರ ಹನಿ ಅಲ್ಲ. ಒಂದು ತೊಟ್ಟು ನೀರಿನ ಗುಹ್ಯಾರ್ಥ ಇದೇ.

ಇನ್ನುಳಿದಿದ್ದು ಫಲ ಅಂದರೆ ಹಣ್ಣು. ಯಾವ ಹಣ್ಣು? ಬೇಲಿಯಲ್ಲಿ ಬೆಳೆಯುವ ಪೀನಾಸಿ (ಲಂಟಾನಾ) ಗಿಡದ ಹಣ್ಣೂ ಹಣ್ಣೇ. ಹಿಪ್ಪುನೇರಳೆ ಗಿಡದ ಹಣ್ಣೂ ಹಣ್ಣೇ. ಸೀಬೆ (ಬಹುಬೀಜ ಫಲ), ಸೇಬು (ಕಾಶ್ಮೀರ ಫಲ), ದ್ರಾಕ್ಷಿಯೂ ಫಲಗಳೇ. ಯೋಗ್ಯವಾದ ಫಲ ತಂದರೆ ಹೆಚ್ಚು ಅಂಕಗಳು; ಉತ್ತಮ ಶ್ರೇಣಿ. ಇವೆಲ್ಲಾ ಪಾಸಾದರೆ ಸಾಕು ಎನ್ನುವ ವಿದ್ಯಾರ್ಥಿಗೆ. ಉತ್ತಮ ಶ್ರೇಣಿ ಬೇಕು ಎನ್ನುವ ವಿದ್ಯಾಥಿ ಪೂರಾ ಸಿಲಬಸ್ ಓದಿದ್ದಾನೆ, ಅವನಿಗೆ ಪರಮಾತ್ಮ ಹೇಳಿದ ನಿಜವಾದ ಫಲ ಯಾವುದು ಎಂದು ಗೊತ್ತು. ಅದು ಸರಿಯಾಗಿ ಜೀವನ ಮಾಡಿದ ಆವ್ಯಕ್ತಿ ಜೀವನದ ಕೊನೆಗೆ ಸಂಪಾದಿಸಿದ "ನಿಷ್ಕಾಮ ಕರ್ಮದಿಂದ ಬಂದ ಕರ್ಮಫಲ". ಗೀತಾಚಾರ್ಯ ಮತ್ತೆ ಮತ್ತೆ ಹೇಳಿದ್ದಾನೆ. ನೀನು ಕರ್ಮ ಮಾಡು. ಆದರೆ ಕರ್ಮಫಲ ನನಗೆ ಬಿಡು. ಇದೇ ಪರೀಕ್ಷೆಗೆ ತರಬೇಕಾದ ನಿಜವಾದ ಫಲ. ಎರಡು ದಿನದಲ್ಲಿ ಒಣಗಿ ಗೊಬ್ಬರವಾಗುವ ಫಲವಲ್ಲ. ಇದು ಗೂಡಾರ್ಥ. 

ಇವುಗಳ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. 

*****

ಒಂದು ಎಲೆ, ಒಂದು ಹೂವು, ಒಂದು ಹಣ್ಣು, ಒಂದು ತೊಟ್ಟು ನೀರು, ಇವು ಕೊಟ್ಟರೆ ಸಾಕು ಎಂದು ಹೇಳುವುದು ಗೈಡುಗಳಲ್ಲಿ ಹೇಳಿಕೊಡುವ ಪಾಠ. ಅದರಿಂದ ತಯಾರಾಗಿ ಪರೀಕ್ಷೆ ಬರೆದರೆ ಅದಕ್ಕೆ ತಕ್ಕ ಅಂಕಗಳು, ಶ್ರೇಣಿ ಸಿಗುತ್ತದೆ. ಪೂರ್ತಿ ಸಿಲಬಸ್ ಓದಿ ಮೇಲೆ ಹೇಳಿದ ರೀತಿ ಸಮರ್ಪಣೆ ಮಾಡಿದರೆ ಅತ್ಯುನ್ನತ ಶ್ರೇಣಿ ಸಿಗುತ್ತದೆ. ಪರಮಾತ್ಮನ ಪರೀಕ್ಷೆಯಲ್ಲಿ ಯಾವುದೂ ವ್ಯರ್ಥವಲ್ಲ. ಆದರೆ ಅಂತಿಮ ಪರೀಕ್ಷೆಯಲ್ಲಿ ಕೊಟ್ಟ ಉತ್ತರಗಳಿಗೆ ತಕ್ಕ ಅಂಕಗಳು; ಶ್ರೇಣಿ! ಪರೀಕ್ಷೆಗೆ ತಯಾರಿ ಮಾಡುವ ಈ ಶ್ರಮವನ್ನೇ ಶ್ರೀಪುರಂದರದಾಸರು "ಒಂದೇ ಮನದಲಿ" ಎನ್ನುವ ಪದದ ಮೂಲಕ ಸೂಚಿಸಿದ್ದಾರೆ.. ಇದು ಅದರ ಗೂಡಾರ್ಥ. 

ಒಂದು ಲಕೋಟೆಯಲ್ಲಿ ಪತ್ರವಿಟ್ಟು ಕೊಟ್ಟಂತೆ ಪರೀಕ್ಷೆಯಲ್ಲಿ ಮೇಲೆ ಹೇಳಿದಂತೆ ಕೊಟ್ಟ ಉತ್ತರಪತ್ರ. ಲೌಕಿಕದ ಎಲ್ಲ ವಿಷಯಗಲ್ಲಿ ಲಕೋಟೆ ಹರಿದು ಬಿಸಾಡಿ ಒಳಗಿನ ಪತ್ರಕ್ಕೆ ಬೆಲೆ ಕೊಡುತ್ತಾರೆ. ಆದರೆ ಪರಮಾತ್ಮನಿಗೆ ಲಕೋಟೆಯ ಒಳಗಿನ ಪತ್ರದಂತೆ  ಲಕೋಟೆಯೂ ಅಷ್ಟೇ ಮುಖ್ಯ. "ಒಂದೇ ಮನದಲಿ" ಅನ್ನುವುದು ಇದನ್ನೇ ಸೂಚಿಸುತ್ತದೆ. ಪರೀಕ್ಷೆಗೆ ತಯಾರಾದ ಪ್ರತಿ ಹಂತದಲ್ಲೂ ಶ್ರದ್ದೆ ಬಹಳ ಮುಖ್ಯ ಅನ್ನುವುದು ಇದರ ಭಾವ. 

ಒಂದು ದಳ ಶ್ರೀತುಳಸಿ, ಬಿಂದು ಗಂಗೋದಕ, ಪರಿಪರಿಯ ಪುಷ್ಪಗಳ ಮತ್ತು ಒಂದೇ ಮನದಲಿ ಎನ್ನುವ ಪದಪುಂಜಗಳು ಮತ್ತು ಸೂಚ್ಯವಾಗಿ ಹೇಳಿದ ಕರ್ಮಫಲ, ಇವುಗಳ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದಾಯಿತು. 

ಇನ್ನುಳಿದುದು "ಇಂದಿರಾರಾಮಣ", "ಮಂದಿರದ ಒಳಗೆ", "ಪರಿಪೂರ್ಣ", "ಸಕಲ ಸ್ವಾತಂತ್ರ್ಯದಲಿ", "ಅರಮನೆಯಒಳಗೆ ಸರಿ ಭಾಗ", ಮತ್ತು "ತೊಂಡರಿಗೆ ತೊಂಡನಾಗಿ" ಎನ್ನುವುವು. ಇವುಗಳನ್ನು ಮುಂದೆ ನೋಡೋಣ. 

6 comments:

  1. ತುಂಬಾ ಚೆನ್ನಾಗಿದೆ

    ReplyDelete
  2. ತುಂಬಾ ಅದ್ಭುತವಾಗಿ ಹೊರಹೊಮ್ಮಿದೆ ನಿಮ್ಮ ಪರಿಪೂರ್ಣ ಜ್ಞಾನ.. ಎರಡು ಮಾತಿಲ್ಲ.. ಮೂಕ ವಿಸ್ಮಿತಾ...

    ReplyDelete
  3. God wants only the best from us to please him.
    Excellent way of explaining this. UR….

    ReplyDelete
  4. ಭಾನುಮತಿDecember 9, 2024 at 11:41 PM

    ಪುರಂದರ ದಾಸರ *"ಹೂವ ತರುವರ ಮನೆಗೆ ಹುಲ್ಲ ತರುವ"* ಕೃತಿಯ ಒಂದೊಂದು ಪದ ಪುಂಜವನ್ನೂ ಸವಿಸ್ತಾರವಾಗಿ ವಿವರಿಸುವ ನಿಮ್ಮ ಪ್ರಯತ್ನ ಅತ್ಯಂತ ಶ್ಲಾಘನೀಯ. ನೀವು ಹೆಚ್ಚಿನ ಪರಿಶ್ರಮ ಹಾಕಿ ಅದೆಲ್ಲದರ ವಿಶೇಷಾರ್ಥ ತಿಳಿದುಕೊಂಡು ಅವುಗಳನ್ನು ನಮಗೆಲ್ಲ ಹಂಚಿ ಧನ್ಯರನ್ನಾಗಿಸುತ್ತಿದ್ದೀರಿ. 🙏 ಭಗವಂತನು ಯಾವ ರೀತಿಯ ಎಲೆ, ಹೂವು, ಹಣ್ಣು ಮತ್ತು ನೀರನ್ನು ನಮ್ಮಿಂದ ಪರಿಗ್ರಹಿಸಿ ಸಂತುಷ್ಟನಾಗುತ್ತಾನೆಂಬುದು ಸರಳ ಉದಾಹರಣೆಗಳಿಂದ ಮನನವಾಗುತ್ತದೆ. ನೀವು ಹೇಳಿದ ಹಾಗೆ ಅವನ ಹತ್ತಿರ ಎಲ್ಲರಿಗೂ ಸಮಾನ ಅವಕಾಶಗಳಿದ್ದು ಅದನ್ನು ನಾವು ಯಾವ ರೀತಿ ಉಪಯೋಗಿಸಿ ಸಾಧನೆ ಮಾಡಿದರೆ ಅದಕ್ಕೆ ತಕ್ಕಂತೆಯೇ ಫಲ ಸಿಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ . ಹೃದಯ ತುಂಬಿ ಬಂದಿದೆ. 🙏ನೀವು ವಿವರಿಸಿದ, ಪರಮಾತ್ಮನಿಗೆ ಇಷ್ಟವಾದ ೮ ಪುಷ್ಪಗಳ ಬಗ್ಗೆ ಶ್ರೀಮತಿ ಸುಧಾ ಮೂರ್ತಿಯವರೂ ಶ್ರೀಯುತ ಅಮಿತಾಬ್ ಬಚ್ಚನ್ ಜೊತೆ ಸಂದರ್ಶನದಲ್ಲಿ ಹೇಳಿದ ನೆನಪು ಆಯಿತು. ಅತ್ಯಂತ ಸುಂದರ ಲೇಖನ. ಧನ್ಯವಾದಗಳು ಸರ್ 🙏

    ReplyDelete
  5. ಗೂಡಾರ್ಥದ ಮರ್ಮವನ್ನು ಸುಲಲಿತವಾಗಿ ಅರ್ಥೈಸಿ ತಿಳಿಸಿದ್ದೀರಿ. ಯಾರುಬೇಕಾದರು ಅರ್ಥಮಾಡಿಕೊಳ್ಳಬಹುದಾದ ಉದಾಹರಣೆಗಳನ್ನು ಕೊಟ್ಟು ಬರೆದಿದ್ದೀರಿ. ಓದಿ ತುಂಬಾ ಸಂತೋಷವಾಯಿತು. ಧನ್ಯವಾದಗಳು🙏

    ReplyDelete
  6. This post is excellent and worth the read. I haven’t had any knowledge of it. So Thank you for sharing it !...SA

    ReplyDelete