Tuesday, November 26, 2024

ಅಗ್ರಪೂಜೆ ಶ್ರೀಕೃಷ್ಣನಿಗೇ ಏಕೆ?



"ಅಗ್ರಪೂಜೆಯಿಂದ ಬೀಳ್ಕೊಡುಗೆವರೆಗೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಅಗ್ರಪೂಜೆ ಎಂದರೇನು ಎಂಬುದನ್ನು ಮತ್ತು ಅದರ ವಿಶೇಷತೆಯನ್ನು ನೋಡಿದೆವು. ಅಗ್ರಪೂಜೆ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿ ಮೂಡುವುದು ಪಾಂಡವರ ರಾಜಸೂಯಯಾಗ ಮತ್ತು ಅದರ ಕೊನೆಯಲ್ಲಿ ನಡೆದ ಶ್ರೀಕೃಷ್ಣನ ಆಗ್ರಪೂಜೆ ಸಂದರ್ಭ. ಅಗ್ರಪೂಜೆಯ ಸಮಯದಲ್ಲಿ ಅಲ್ಲಿದ್ದ ಶಿಶುಪಾಲನು ಶ್ರೀಕೃಷ್ಣನನ್ನು ನಿಂದಿಸಿದ್ದು ಮತ್ತು ಅದರ ನಂತರ ನಡೆದ ಅವನ ವಧೆ ಎಲ್ಲರಿಗೂ ಗೊತ್ತಿರುವ ವಿಷಯ. ಸಿನಿಮಾಗಳಲ್ಲಂತೂ ಇದನ್ನು ವೈಭವದಿಂದ ನಡೆಯುವುದನ್ನು ತೋರಿಸುತ್ತಾರೆ. ಹಿಂದಿನ ಸಂಚಿಕೆಯಲ್ಲಿ ಇದರ ವಿಚಾರವನ್ನು ಇನ್ನೊಮ್ಮೆ ವಿಸ್ತಾರವಾಗಿ ನೋಡೋಣ ಎಂದಿದ್ದೆವು. ಈಗ ಆ ಸಮಯ ಬಂದಿದೆ. 

*****

ದೇವರ್ಷಿ ನಾರದರಿಂದ ವಿವರ ತಿಳಿದು ತನ್ನ ತಂದೆ ಪಾಂಡು ಹಮಹಾರಾಜನಿಗೆ ದೇವಲೋಕದ ಒಡ್ಡೋಲಗದಲ್ಲಿ ಸರಿಯಾದ ಸ್ಥಾನ ಸಿಗಲೆಂದು ಧರ್ಮರಾಯನು ರಾಜಸೂಯಯಾಗವನ್ನು ಮಾಡಲು ನಿರ್ಧರಿಸಿದನು. ನಂತರ ಈ ಕೆಲಸಕ್ಕೆ ಇರುವ ಅನೇಕ ಸಮಸ್ಯೆಗಳು, ಮಾಡಬೇಕಾದ ತಯಾರಿ, ಅವಶ್ಯವಾದ ಸಂಪನ್ಮೂಲ ಮತ್ತು ಶ್ರಮ, ಬಹಳ ಜನ ಹಿರಿಯರ ಸಹಕಾರ ಮತ್ತು ಬೆಂಬಲ ಬೇಕೆಂದೂ ಮತ್ತು ಇವೆಲ್ಲಾ ಸಾಧ್ಯವೇ ಎಂಬ ಚಿಂತೆ ಧರ್ಮರಾಯನನ್ನು ಕಾಡಿತು. ಆಗ ಅವನು ಹಿರಿಯರಾದ ಭೀಷ್ಮ ಪಿತಾಮಹರಲ್ಲಿ ತನ್ನ ದುಗುಡವನ್ನು ತೋಡಿಕೊಂಡದ್ದನ್ನೂ ಮತ್ತು ಅವರು ಹೇಳಿದ ಸಮಾಧಾನವನ್ನು ಕುಮಾರವ್ಯಾಸ ಭಾರತದಲ್ಲಿ ವರ್ಣಿತವಾಗಿರುವುದನ್ನೂ ನೋಡಿದೆವು. 

ಭೀಷ್ಮರ ಸಲಹೆಯಂತೆ ಧರ್ಮರಾಯನು ಶ್ರೀಕೃಷ್ಣನ ನೇತೃತ್ವದಲ್ಲಿ ಮುಂದುವರೆದನು. ಯಾಗಕ್ಕೆ ಇದ್ದ ಮೊದಲ ವಿಘ್ನ ಜರಾಸಂಧನ ಅಡ್ಡಿ. ಶ್ರೀಕೃಷ್ಣನು ಭೀಮಾರ್ಜುನರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಕಡೆಗೆ ಭೀಮಸೇನನಿಂದ ಜರಾಸಂಧನ ವಧೆ ಮಾಡಿಸಿದನು. ಭೀಮಾರ್ಜುನರು ಮತ್ತು ನಕುಲ ಸಹದೇವರು ನಾಲ್ಕು ದಿಕ್ಕುಗಳಲ್ಲೂ ದಿಗ್ವಿಜಯ ಮಾಡಿ ಅಪಾರವಾದ ಕಪ್ಪ-ಕಾಣಿಕೆಗಳನ್ನು ಸಂಗ್ರಹಿಸಿದರು. ಹೀಗೆ ಯಾಗಕ್ಕಿದ್ದ ಅಡ್ಡಿ-ಆತಂಕಗಳು ನಿವಾರಣೆಯಾಗಿ  ಅಪಾರವಾದ ಧನರಾಶಿ ಸಂಗ್ರಹವಾಯಿತು. ಶ್ರೀಕೃಷ್ಣನ ನೇತೃತ್ವವೆಂದ ಮೇಲೆ ಆ ಯಾಗಕ್ಕೆ ಬಂದು ಸಹಕರಿಸುವುದು ಒಂದು ಒಳ್ಳೆಯ ಅವಕಾಶವೆಂದು ಆ ಕಾಲದಲ್ಲಿದ್ದ ಋಷಿ-ಮುನಿಗಳು, ವಿದ್ವಾಂಸರು ಬಂದು ನೆರೆದರು. ಯೋಜಿತವಾದಂತೆ ಎಲ್ಲ ಕೆಲಸಗಳೂ ನಡೆದು, ಆಹ್ವಾನಗಳು ಬೇಕಾದವರೆಲ್ಲರಿಗೂ ತಲುಪಿ, ಅವರೆಲ್ಲರೂ ಬಂದು, ದೊಡ್ಡ ರೀತಿಯಲ್ಲಿ ಯಾಗವು ನಡೆದು ಧರ್ಮರಾಯನ ಉದ್ದೇಶ ಪೂರ್ಣವಾಯಿತು

ಯಾಗಕ್ಕೆ ಬಂದು ಸಹಕರಿಸಿದ ಎಲ್ಲ ಅತಿಥಿ-ಅಭ್ಯಾಗತರಿಗೆ ಯಥೋಚಿತ ಸತ್ಕಾರ ಮಾಡಿ ಬೀಳ್ಕೊಡುವುದು ಕಡೆಯ ಕಾರ್ಯಕ್ರಮ. ಸತ್ಕಾರ ಮಾಡುವಾಗ ಎಲ್ಲಿಂದ ಪ್ರಾಂಭಿಸಬೇಕು? ಯಾರಿಗೆ ಮೊದಲು ಸತ್ಕಾರ ನಡೆಸಬೇಕು? ಈ ಮೊದಲ ಸತ್ಕಾರ ಪಡೆಯಲು ಯೋಗ್ಯರು ಯಾರು? ಈ ಪ್ರಶ್ನೆಗಳು ಧರ್ಮರಾಯನ ಮನಸ್ಸಿನಲ್ಲಿ ಬಂದಿತು. (ಒಂದೇ ವೇಳೆ ಅನೇಕ ದೇವತೆಗಳು ಅಥವಾ ಹಿರಿಯರು ಎದುರು ಬಂದರೆ ಅಥವಾ ನಮ್ಮ ನಿವಾಸಕ್ಕೆ ಆಗಮಿಸಿದರೆ ಅವರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದನ್ನು ಘನ ವಿದ್ವಾಂಸರಾದ ಕೀರ್ತಿಶೇಷ ದೇವುಡು ನರಸಿಂಹ ಶಾಸ್ತ್ರಿಗಳು ತಮ್ಮ ಪೌರಾಣಿಕ ಕಾದಂಬರಿಗಲ್ಲಿ ವಿವರವಾಗಿ ವರ್ಣಿಸಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ಕಾದಂಬರಿಗಳನ್ನು ಓದಬಹುದು). ಬಂದವರಲ್ಲಿ ಹಿರಿತನದ ಕ್ರಮ ಗೊತ್ತಿದ್ದರೆ ಅದರ ಪ್ರಕಾರ ದೊಡ್ಡವರಿಂದ ಚಿಕ್ಕವರಿಗೆ ಯಥೋಚಿತ ಗೌರವ ಕೊಡಬಹುದು. ಇಲ್ಲಿ ಚಿಕ್ಕವರು ಎಂದರೆ ಕೀಳು ಎಂದು ಭಾವಿಸಬಾರದು. ಅವರು ಬಂದವರಲ್ಲಿ ಎಷ್ಟೇ ಚಿಕ್ಕವರಾಗಿದ್ದರೂ ನಮಗಿಂತ ಬಹಳ ದೊಡ್ಡವರು ಎಂದು ನೆನಪಿಡಬೇಕು. ಬಂದವರಲ್ಲಿ ದೊಡ್ಡವರು-ಚಿಕ್ಕವರು ಎನ್ನುವ ಕ್ರಮ. ಅಷ್ಟೇ. ಈ ಕ್ರಮ ನಮಗೆ ಗೊತ್ತಿಲ್ಲದಿದ್ದರೆ ಅವರನ್ನೇ ಕೇಳಿ ಅದರಂತೆ ಮುಂದುವರಿಯಬೇಕು. ವಿನಯದಿಂದ ಕೇಳಿದರೆ ಅವರು ಸಂತೋಷದಿಂದ ಕ್ರಮವನ್ನು ತಿಳಿಸುವರು. ಸಮಯದ ಅಭಾವವಿದ್ದರೆ ಅಥವಾ ಇನ್ಯಾವುದೋ ಅಡಚಣೆ ಇದ್ದರೆ, ಮತ್ತು ಎಲ್ಲರಿಗೂ ಗೌರವ ಕೊಡಲಾಗಲಿಲ್ಲ ಎಂದರೆ, ಎಲ್ಲರ ಅನುಮತಿ ಪಡೆದು ಎಲ್ಲರಿಗಿಂತ ಹಿರಿಯರಿಗೆ ಗೌರವ, ಸತ್ಕಾರಾದಿಗಳನ್ನು ಮಾಡಬೇಕು. ಇದು ಸರಿಯಾದ ರೀತಿ. ಈ ಸೂಕ್ಷ್ಮವನ್ನು ಚೆನ್ನಾಗಿ ಅರಿತಿದ್ದ ಧರ್ಮರಾಯನು ತನ್ನ ಕುಲದ ಹಿರಿಯರೂ ಆ ಕಾಲದ ಶ್ರೇಷ್ಠ ತಜ್ಞರೂ ಆದ ಭೀಷ್ಮರನ್ನು "ಅಗ್ರ ಪೂಜೆ ಯಾರಿಗೆ ಮಾಡುವುದು ಸೂಕ್ತ?" ಎಂದು ಕೇಳಿದನು. 

ಆ ಸಭೆಯಲ್ಲಿ ಇದ್ದವರು ಯಾರು ಯಾರು ಎಂದು ಗಮನಿಸಿದರೆ ಅದೊಂದು ಘಟಾನುಘಟಿಗಳ ಸಂಗಮವೇ ಆಗಿದ್ದಿತು. ಸೇರಿದ್ದವರಲ್ಲಿ ಅನೇಕ ಜ್ನ್ಯಾನವೃದ್ಧರು, ವಯೋವೃದ್ಧರು, ತಪೋವೃದ್ಧರು, ರಾಜ-ಮಹಾರಾಜರು, ವಿದ್ವಾಂಸರೂ ಇದ್ದರು. ಇಷ್ಟು ಮಂದಿಯಲ್ಲಿ ಯಾರೆಂದು ಆರಿಸುವುದು? ಆದರೆ ಎಲ್ಲಿಯಾದರೂ ಒಬ್ಬರನ್ನು ಗುರುತಿಸಬೇಕಲ್ಲ? ಬಂದವರಲ್ಲಿ ಮುಖ್ಯವಾಗಿ ಎತ್ತಿ ಕಾಣುತ್ತಿದ್ದ ಮಹನೀಯರೇ ಅನೇಕ ಮಂದಿ. ಪರಶುರಾಮರು ತ್ರೇತಾಯುಗದವರು. ಇಪ್ಪತ್ತೊಂದು ಬಾರಿ ಭೂಮಿಯನ್ನು ಸುತ್ತಿ ಅನೇಕ ದುಷ್ಟರನ್ನು ವಧಿಸಿದವರು. ಈಗಲೋ ದ್ವಾಪರ ಯುಗ. ಅವರನ್ನು ಆರಿಸಿದರೆ ಯಾರೂ ಪ್ರಶ್ನಿಸುವ ಧೈರ್ಯವನ್ನೇ ಮಾಡಲಾರರು. ಅವರು ಭೀಷ್ಮರಿಗೂ ಗುರುಗಳು. ದ್ರೋಣಾಚಾರ್ಯರಾದಿಯಾಗಿ ಎಲ್ಲರೂ ಪರಶುರಾಮರನ್ನು ಗೌರವಿಸುವವರೇ! ವೇದವ್ಯಾಸರೂ ಅಲ್ಲುಂಟು. ಕೌರವ-ಪಾಂಡವರ ವಂಶಕ್ಕೆ ಮೂಲವೇ ಅವರು. ಅವರೂ ಪೂಜ್ಯರೇ. ಅವರನ್ನು ಆರಿಸಿದರೂ ಎಲ್ಲರಿಗೂ ಒಪ್ಪಿಗೆಯೇ. ಭೀಷ್ಮರಾದರೋ ಆ ಕಾಲದ ಶ್ರೇಷ್ಠ ಜ್ನ್ಯಾನಿಗಳಲ್ಲೂ ವೀರರಲ್ಲೂ ಮೊದಲಿಗರು. ಅವರನ್ನು ಒಂದು ರೀತಿಯಲ್ಲಿ ಮನೆಯವರು ಎಂದು ಬಿಟ್ಟರೂ ಆಚಾರ್ಯ ದ್ರೋಣರಿದ್ದಾರೆ.  ಅವರು ಕೌರವ-ಪಾಂಡವರಿಬ್ಬರಿಗೂ ಪೂಜ್ಯರಾದ ಗುರುಗಳು. ಆಚಾರ್ಯ ಕೃಪರೋ ಕುಲಗುರುಗಳು. ಅವರೂ ಆಗ್ರ ಪೂಜೆಗೆ ಯೋಗ್ಯರೇ. ಇನ್ನು ಅನೇಕ ರಾಜ-ಮಹಾರಾಜರಿದ್ದಾರೆ. ದ್ರುಪದ ಮಹಾರಾಜನಾದರೋ ಹೆಣ್ಣು ಕೊಟ್ಟ ಮಾವ ಮತ್ತು ಹಿರಿಯನಾದ ರಾಜನು. ಅನೇಕ ಯಾದವ ವೀರರಲ್ಲಿ ಶ್ರೀಕೃಷ್ಣನ ಅಣ್ಣನಾದ ಬಲರಾಮನೇ ಇದ್ದಾನೆ. ಅವನೂ ಗದಾಪ್ರಯೋಗ ವಿದ್ಯೆಯನ್ನು ಅಲ್ಲಿದ್ದ ಅನೇಕರಿಗೆ ಕಲಿಸಿದ ಗುರುವೇ. ಆದರೆ ಯಾರಾದರೂ ಒಬ್ಬರನ್ನು ಮಾತ್ರ ಆರಿಸಬೇಕು. ಸಾಲಾಗಿ ಕೂರಿಸಿ ಎಲ್ಲರಿಗೂ ಒಂದೇ ಸಲ ನಡೆಸುವಹಾಗಿಲ್ಲ. ಹತ್ತು ಜನಕ್ಕೆ "ಪಂದ್ಯ ಶ್ರೇಷ್ಠ ಆಥವಾ ಮ್ಯಾನ್ ಅಫ್ ದಿ ಮ್ಯಾಚ್ ಕೊಟ್ಟಂತೆ! ಇದೇ ಸಮಸ್ಯೆ! 

*****

ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ಹೇಗೆ ಗೌರವ ಸಿಗುತ್ತದೆ? ಆ ರೀತಿಯ ಸನ್ಮಾನಕ್ಕೆ ಯೋಗ್ಯರಾಗಲು ಅಳೆಯುವ ಮಾನದಂಡಗಳೇನು? ಇದಕ್ಕೆ ಸೂಚಕ ಈ ಕೆಳಗಿನ ಶ್ಲೋಕ:

ವಿತ್ತಂ ಬಂಧು ವಯಃ ಕರ್ಮ ವಿದ್ಯಾ ಚೈವ ತು ಪಂಚಮೀ 

ಏತಾನಿ ಮಾನ್ಯ ಸ್ಥಾನಾನಿ ಯದುತ್ತರಂ ತತ್ ಗರೀಯಸೀ 

ಹಣ ಅಥವಾ ಧನ-ಸಂಪತ್ತು, ಯೋಗ್ಯತೆಯಿರುವ ಯಾರೋ ಬಂಧುಗಳಿರುವುದು (ಉದಾಹರಣೆಗೆ ಮಂತ್ರಿಗಳ ಮಗ), ವಯಸ್ಸಿನಿಂದ ಹಿರಿಯ, ಸಾಧನೆಯಿಂದ ದೊಡ್ಡವರು ಮತ್ತು ಹೆಚ್ಚು ವಿದ್ಯಾವಂತನಾದ ಪಂಡಿತ; ಹೀಗೆ ಐದು ಹಂತದ ಯೋಗ್ಯತೆ. ಎರಡನೆಯದು ಮೊದಲನೆಯದಕ್ಕಿಂತ ದೊಡ್ಡದು, ಮೂರನೆಯದು ಎರಡನಯದಕ್ಕಿಂತ ದೊಡ್ಡದು, ಹೀಗೆ. (ಇದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ )

ಮತ್ತೊಂದು ಕಡೆಯಿಂದ ನೋಡಿದರೆ, ಸಮಾಜದಲ್ಲಿ "ಅವರು ದೊಡ್ಡವರಪ್ಪ" ಎಂದು ಹೇಳಲು ಏನು ಕಾರಣಗಳು ಎಂದು ಯೋಚಿಸಿದರೆ ಈ ಕೆಳಗಿನ ವಿಷಯಗಳು ಕಂಡುಬರುತ್ತವೆ:

  • ಹೆಚ್ಚಿನ ಭೂಮಿ-ಕಾಣಿ ಇದ್ದವನು ದೊಡ್ಡವನು. ಹತ್ತು ಎಕರೆ ಭೂಮಿ ಒಡೆಯನಿಗಿಂತ ನೂರು ಎಕರೆ ಇರುವವನು ದೊಡ್ಡವನು. ಇನ್ನೂರು ಎಕರೆ ಇರುವವನು ಇನ್ನೂ ದೊಡ್ಡವನು. ಹೀಗೆ.... ಸಣ್ಣ ರಾಜ್ಯದ ರಾಜನಿಗಿಂತ ದೊಡ್ಡ ರಾಜ್ಯದ ರಾಜ ದೊಡ್ಡವನು. ಇತ್ಯಾದಿ..... 
  • ಬಹಳ ಹಣ ಇರುವವರು ದೊಡ್ಡವರು. ಲಕ್ಷ ಇರುವವನಿಗಿಂತ ಕೋಟಿ ಇರುವವನು ದೊಡ್ಡವನು. ಕೋಟಿ ಇರುವನಿಗಿಂತ ಹತ್ತು ಕೋಟಿ ಇರುವವನು ಇನ್ನೂ ದೊಡ್ಡವನು.  ಈ ರೀತಿ.... 
  • ವಯಸ್ಸಿನಿಂದ ಹಿರಿಯರು. ಎಪ್ಪತ್ತು ವಯಸ್ಸು ಆದವನು ದೊಡ್ಡವನು. ಎಂಭತ್ತು ಆದವನು ಇನ್ನೂ ದೊಡ್ಡವನು ಮುಂತಾಗಿ..... 
  • ವಿದ್ಯಾದಾನ ಮಾಡಿದ ಗುರುಗಳು ಶ್ರೇಷ್ಠರು. ಅವರ ಗುರುಗಳು ಮತ್ತೂ ದೊಡ್ಡವರು. ಹೀಗೆ.... 
  • "ನಿಮ್ಮ ಪಾದ ಧೂಳಿಯಿಂದ ನಮ್ಮ ಮನೆ, ನಮ್ಮ ಜನ್ಮ ಪಾವನವಾಯಿತು" ಎಂದು ಹಿಂದೆ ಹೇಳುತ್ತಿದ್ದರು. ಹೀಗೆ ಇನ್ನೊಬ್ಬರನ್ನು ಪಾವನ ಮಾಡುವ ಶಕ್ತಿ ಇರುವವರು ದೊಡ್ಡವರು. ತುಂಬಾ ದೊಡ್ಡವರನ್ನು "ತೀರ್ಥೀಕುರ್ವನ್ತಿ ತೀರ್ಥಾಣಿ" ಎನ್ನುತ್ತಿದ್ದರು. ಅಂದರೆ, ಇತರನ್ನು ಪಾವನ ಮಾಡುವರನ್ನೇ ಪಾವನ ಮಾಡುವವರು ಎಂದು! (ಇದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ).  
  • ಮನುಷ್ಯರಿಗಿಂತ ದೇವತೆಗಳು ದೊಡ್ಡವರು. ದೇವತೆಗಲ್ಲಿಯೂ ಶ್ರೇಣಿಯುಂಟು. ಒಬ್ಬರಿಗಿಂತ ಒಬ್ಬರು ದೊಡ್ಡವರು..... 
  • ನೋಡಲು ಒಳ್ಳೆಯ ರೂಪ-ಲಾವಣ್ಯ ಇರುವವರಿಗೂ ಲೋಕದಲ್ಲಿ ಬೆಲೆ ಉಂಟು. ಅತಿ ಹೆಚ್ಚು ಸೌಂದರ್ಯ ಇರುವವರು ಮಿಸ್ ವರ್ಲ್ಡ್ ಅಥವಾ ಮಿಸ್ಟರ್ ಇಂಡಿಯಾ ಅಂದಂತೆ.... 
  • ಧೈರ್ಯ-ಶೌರ್ಯ ಇದ್ದು ತೋರಿಸಿದವರೂ ದೊಡ್ಡವರೇ! ವೀರ ಚಕ್ರ, ಮಹಾವೀರ ಚಕ್ರ, ಪರಮವೀರ ಚಕ್ರ ಪಡೆದವರಂತೆ.... 
  • ವಾಹನ ಇರುವವನು ಇಲ್ಲದವನಿಗಿಂತ ದೊಡ್ಡವನು. ಸ್ಕೂಟರ್ ಇರುವವನು ಸೈಕಲ್ ಇರುವವನಿಗಿಂತ ದೊಡ್ಡವನು. ಕಾರು ಇರುವವನು ಇನ್ನೂ ದೊಡ್ಡವನು. ಅನೇಕ ಕಾರುಗಳು ಇರುವವನು ತುಂಬಾ ದೊಡ್ಡವನು,... ಹೀಗೆ.... 
  • ಮನೆ ಇರುವವನು ಇಲ್ಲದವನಿಗಿಂತ ದೊಡ್ಡವನು. ದೊಡ್ಡ ಮನೆ ಇರುವವನು ಸಣ್ಣ ಮನೆ ಇರುವವನಿಗಿಂತ ದೊಡ್ಡವನು. ಅನೇಕ ದೊಡ್ಡ ಮನೆ ಇರುವವನು.... ಇತ್ಯಾದಿ.... 
  • ಹತ್ತು ಜನ ಹೊಗಳುವವರು ದೊಡ್ಡವನು. ನೂರು ಜನ ಹೊಗಳುವವರು ಅವನಿಗಿಂತ ದೊಡ್ಡವನು. ಇಡೀ ದೇಶವೇ ಹೊಗಳುವವನು ಮತ್ತೂ ದೊಡ್ಡವನು. ಈ ರೀತಿ.... 
ಶ್ರೀ ಪುರಂದರದಾಸರು ಇವೆಲ್ಲವನ್ನೂ ಅಳೆದು, ತೂಗಿ (ಹೇಳಿ-ಕೇಳಿ ವರ್ತಕರಾಗಿದ್ದವರು) ಶ್ರೀಹರಿಯನ್ನು ಈ ಎಲ್ಲ ಅಳತೆಗೋಲುಗಳಿಂದ ನೋಡಿ ಹೀಗೆ ಹೇಳುತ್ತಾರೆ:

ಧೊರೆಯತನದಲಿ ನೋಡೆ ಧರಣಿದೇವಿಗೆ ರಮಣ 
ಸಿರಿಯತನದಲಿ ನೋಡೆ ಶ್ರೀಕಾಂತನು 
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡ ಜಗದಾದಿ ಗುರುವು 

ಪಾವನತ್ವದಿ ನೋಡೆ ಅಮರಗಂಗಾಜನಕ 
ದೇವತ್ವದಲಿ ನೋಡೆ ಡಿವಿಜರೊಡೆಯ 
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ 
ಯಾವ ಧೈರ್ಯದಿ ನೋಡೆ ಅಸುರಾಂತಕ 

ಗಗನದಲ್ಲಿ ಸಂಚರಿಪ ಗರುಡದೇವನೆ ತುರಗ 
ಜಗತೀಧರ ಶೇಷ ಪರ್ಯಂಕ ಶಯನ 
ನಿಗಮಗೋಚರ ಪುರಂದರವಿಠಲಗಲ್ಲದೆ 
ಮಿಗಿಲಾದ ದೈವಗಳಿಗೆ ಈ ಭಾಗ್ಯವುಂಟೆ?

ಈ ಪರಿಯ ಸೊಬಗಾವ ದೇವರೊಳು ನಾ ಕಾಣೆ 
ಗೋಪೀಜನಪ್ರಿಯ ಗೋಪಾಲಗಲ್ಲದೆ!  

  • ಅಷ್ಟಿಷ್ಟು ಭೂಮಿಯಲ್ಲ. ಎಲ್ಲೋ ಕೆಲವು ವರುಷಗಳಲ್ಲ. ಎಲ್ಲಕಾಲಕ್ಕೂ ಇಡೀ ಭೂಮಂಡಲಕ್ಕೆ ಅಭಿಮಾನಿ  ದೇವತೆಯಾದ ಭೂದೇವಿಯು ಇವನು ಒಮ್ಮೆ ನನ್ನನ್ನು ನೋಡಲಿ ಎಂದು ಕಾದಿರುವವಳು. ಅವನಿಗಿಂತ ದೊಡ್ಡ ಭೂಮಿ ಒಡೆಯ ಎಲ್ಲಿದ್ದಾನು? 
  • ಧನವಂತರೆನಿಸಿಕೊಂಡ ಎಲ್ಲರಿಗೂ ಹಣ-ಹೊನ್ನು ಕೊಡುವ ಸಿರಿದೇವಿ ಲಕ್ಷ್ಮಿಯು ಇವನು ಕೊಟ್ಟ ಶಕ್ತಿಯಿಂದಲೇ ಎಲ್ಲರಿಗೂ ಅವನ್ನು ಕೊಡುವವಳು. ಅವನಿಗಿಂತ ದೊಡ್ಡ ಹಣವಂತ ಎಲ್ಲಿರುವನು? 
  • ಇಡೀ ಪ್ರಪಂಚವೇ ಬ್ರಹ್ಮನಿಂದ ಸೃಷ್ಟಿಯಾಯಿತು. ಸೃಷ್ಟಿಯಲ್ಲಿರುವ ಎಲ್ಲರೂ ಅವನಿಗಿಂತ ಚಿಕ್ಕವರು. ಅವನೇ ಹಿರಿಯ. ಶ್ರೀಹರಿಯು ಅವನಪ್ಪ! ಇವನಿಗಿಂತ ಹಿರಿಯರೆಲ್ಲಿದ್ದಾರು?
  • ಅವರಿವರಿಗೆ ಗುರುವಾದವರ ವಿಷಯವೇಕೆ? ಬ್ರಹ್ಮನಿಗೇ ಉಪದೇಶ ಮಾಡಿದವನು ಶ್ರೀಹರಿ. (ಚತುಶ್ಲೋಕೀ ಭಾಗವತ ಎನ್ನುವುದು ಇದೆ. ಈ ನಾಲ್ಕು ಶ್ಲೋಕಗಳನ್ನು ಶ್ರೀಹರಿಯು ಬ್ರಹ್ಮನಿಗೆ ಮೊದಲಿಗೆ ಉಪದೇಶ ಮಾಡಿದನು. ಅದರಿಂದಲೇ ಮುಂದೆ ಎಲ್ಲ ವಾಂಗ್ಮಯ ಹುಟ್ಟಿತು). ಆದ್ದರಿಂದ ಅವನು ಜಗದಾದಿಗುರು. ಮಿಕ್ಕವರೆಲ್ಲ ಹೆಸರಿಗೆ ಜಗದ್ಗುರು. 
  • ಗಂಗೆಯು ಎಲ್ಲರ ಪಾಪ ಕಳೆದು ಪಾವನ ಮಾಡುವವಳು. ಅವಳು ಹುಟ್ಟಿದ್ದು ಬಲಿ ಚಕ್ರವರ್ತಿ ವಾಮನನ ಕಾಲು ತೊಳೆದಾಗ. (ಅದಕ್ಕೇ "ಗಂಗಾವತರಣ"ದಲ್ಲಿ ಬೇಂದ್ರೆಯವರು "ಹರಿಯ ಅಡಿಯಿಂದ" ಎಂದು ಹೇಳಿದ್ದು). ಅವನಿಗಿಂತ ಪಾವನ ಮಾಡುವರು ಮತ್ಯಾರು? 
  • ದೇವತೆಗಳಲ್ಲಿ ಶ್ರೇಣಿಯಿದೆ. ಒಬ್ಬರಿಗಿಂತ ಒಬ್ಬರು ದೊಡ್ಡವರಿದ್ದಾರೆ. ಆದರೆ ಬ್ರಹ್ಮನಿಂದ ಪ್ರಾರಂಭಿಸಿ ಎಲ್ಲಾದೇವತೆಗಳೂ ಶ್ರೀಹರಿಯ ಪಾದ ಪೀಠದ ಮುಂದೆ ಕಿರೀಟ ಹೊತ್ತ ತಲೆಗಳನ್ನು ಘಟ್ಟಿಸಿ ಕುಡಿ ನೋಟಕ್ಕಾಗಿ ಕಾದಿದ್ದಾರೆ. (ಕಿರೀಟಾಗೃಷ್ಟ   ಪೀಠವತ್ - ಶ್ರೀಹರಿಯ ಪಾದಪೀಠ ದೇವತೆಗಳ ಕಿರೀಟ ಘಟ್ಟಿಸಿ ಘಟ್ಟಿಸಿ ಜಜ್ಜಿಹೋಗಿದೆ ಎನ್ನುತ್ತಾರೆ ಸ್ತೋತ್ರಗಳಲ್ಲಿ). 
  • ರೂಪ-ಲಾವಣ್ಯಗಳಲ್ಲಿ ಮನ್ಮಥ ಕೊನೆಯ ಮಾತು. ಅವನು ಸುಂದರಾಂಗ. ಶ್ರೀಹರಿಯಾದರೋ ಮನ್ಮಥನಿಗೇ ಜನ್ಮ ಕೊಟ್ಟ ತಂದೆ! (ಪ್ರಪಂಚದಲ್ಲಿ ಸ್ತ್ರೀಯರನ್ನು ಕಂಡರೆ ಪುರುಷರಿಗೂ, ಪುರುಷರನ್ನು ಕಂಡರೆ ಸ್ತ್ರೀಯರಿಗೂ ಮನಸ್ಸು ಚಂಚಲವಾಗುವುದು ಸೃಷ್ಟಿಯ ನಿಯಮ. ಆದರೆ ಶ್ರೀಹರಿಯದು "ಪುಂಸಾಂ ಮೋಹನರೂಪಾಯ". ಪುರುಷರೂ ಮೋಹಿಸುವ ರೂಪ. ಮೋಹಿನಿ ರೂಪವಂತೂ ಸರಿಯೇ ಸರಿ}. 
  • ಧೈರ್ಯ-ಶೌರ್ಯಗಳ ವಿಷಯದಲ್ಲಿ ನೋಡಿದಾಗ ಅವನು ಕೊಂದ ರಕ್ಕಸರಿಗೆ ಲೆಕ್ಕವಿಲ್ಲ. ಹಿರಣ್ಯ, ರಾವಣ ಮೊದಲಾದವರು ಉದಾಹರಣೆ ಮಾತ್ರ. ಜಗತ್ತೇ ಗೆದ್ದ ವೀರರೂ ಅವನಿಂದ ಹತರಾದರು. 
  • ನೆಲದ ಮೇಲೆ ಸಂಚರಿಸುವ ವಾಹನಗಳಿರಲಿ; ಆಕಾಶದಲ್ಲಿ ಹಾರುವ ಪಕ್ಷಿರಾಜ ಗರುಡನೇ ಅವನಿಗೆ ಕಾರು ಅಥವಾ ವಿಮಾನ. ಅದಕ್ಕಿಂತ ವೇಗದ ವಾಹನವಿಲ್ಲ. 
  • ದೊಡ್ಡ ಮನೆ ಬೇಕೇ? ಇಡೀ ಭೂಮಂಡಲವನ್ನೇ ಹೊತ್ತುಕೊಂಡಿರುವ ಆದಿಶೇಷನೇ ಅವನ ಮಲಗುವ ಮಂಚ ಮಾತ್ರ. ಅವನು ಅದಕ್ಕಿಂತಲೂ, ಒಳಗೂ ಹೊರಗೂ ವ್ಯಾಪಿಸಿದ್ದಾನೆ. ಇನ್ನಾರು ದೊಡ್ಡವರಿದ್ದರು?
  • ಅವರಿವರು ಹೊಗಳುವುದೇನು? ಭಕ್ತ ಕನಕದಾಸರು ತಮ್ಮ "ಹರಿಭಕ್ತಿಸಾರ" ಕೃತಿಯ ೨೧ನೇ ಪದ್ಯದಲ್ಲಿ ಹೀಗೆ ಹೇಳುತ್ತಾರೆ:
ಪೊಗಳಲಳವೇ ನಿನ್ನ ನಾಮವ 
ಸುಗುಣ ಸಚ್ಚಾರಿತ್ರ ಕಥನವ 
ನಗಣಿತೋಪಮ ಅಮಿತವಿಕ್ರಮ ಗಮ್ಯ ನೀನೆಂದು 
ನಿಗಮತತಿ ಕೈವಾರಿಸುತ ಪದ 
ಯುಗವ ಕಾಣದೆ ಬಳಲುತಿದೆ ವಾ 
ಸುಕಿಶಯನ ಸರ್ವೇಶ ರಕ್ಷಿಸು ನಮ್ಮನನವರತ

ಅನಂತ ವೇದಾದಿ ಗ್ರಂಥಗಳು ತಮ್ಮ ಎಲ್ಲ ಶಬ್ದ ಭಂಡಾರಗಳನ್ನು ಉಪಯೋಗಿಸಿ ಮುಗಿಸಿ, ಬಸವಳಿದು "ಇನ್ನು ಮುಂದೆ ಹೇಳಲು ನಮ್ಮಲ್ಲಿ ಶಬ್ದಗಳಿಲ್ಲ. ಹೇಳುವ ಶಕ್ತಿಯಿಲ್ಲ" ಎಂದು ಕೈಚೆಲ್ಲಿ ಕುಳಿತಿವೆ! ಆದರೂ "ಅವನ ಮಹಿಮೆಯ ಸ್ವಲ್ಪ ಭಾಗವೂ ಹೇಳಿ ಮುಗಿದಿಲ್ಲ"  ಎನ್ನುತ್ತಿವೆ!

ಇನ್ನು ಭೀಷ್ಮರು ಅಗ್ರ ಪೂಜೆಗೆ ಶ್ರೀಕೃಷ್ಣನೇ ಅರ್ಹನೆಂದು ಹೇಳುವುದರಲ್ಲಿ ವಿಶೇಷವೇನು?

*****

"ಈ ಕಥೆಗಳೆಲ್ಲಾ ಬಿಡಿ. ಶ್ರೀಕೃಷ್ಣನು ನಿಮಗೆ ದೇವರಿರಬಹುದು. ಅದನ್ನು ನಾವು ನಂಬುವುದಿಲ್ಲ. ನಮ್ಮಲ್ಲಿ ಇನ್ನೂ ಕೆಲವರು ದೇವರಿದ್ದಾನೆ ಎನ್ನುವುದನ್ನೇ ನಂಬುವುದಿಲ್ಲ. ಅವನೂ ನಮ್ಮಂತೆ ಒಬ್ಬ ಮನುಷ್ಯ. ಅವನೊಬ್ಬ ಗೊಲ್ಲ. ದನಕಾಯುವ ಹುಡುಗ. ಅವನಿಗೇಕೆ ಅಗ್ರ ಪೂಜೆ?" ಎಂದು ಕೆಲವರು ಹೇಳಬಹುದು. 

ಶಿಶುಪಾಲ ಹೇಳಿದುದೂ ಇದನ್ನೇ. 

ಆಗಲಿ. ಈ ವಾದವನ್ನೂ ಒಪ್ಪೋಣ. ಶ್ರೀಕೃಷ್ಣನು ಎಲ್ಲರಂತೆ ಮನುಷ್ಯ ಎಂದೇ ಲೆಕ್ಕ ಮಾಡೋಣ. ಹಾಗಿದ್ದರೂ ಅವನಿಗೆ ಅಗ್ರ ಪೂಜೆ ಸ್ವೀಕರಿಸುವ ಯೋಗ್ಯತೆ ಇದೆಯೇ? ಇದನ್ನೂ ಪರಿಶೀಲಿಸಬಹುದು. 

  • ಭೀಷ್ಮರ ಸಲಹೆಯಂತೆ ಧರ್ಮರಾಯನು ರಾಜಸೂಯಯಾಗ ಮಾಡಲು ಶ್ರೀಕೃಷ್ಣನ ಸಹಾಯ ಕೇಳಿದಾಗ ಅವನು ಸಬೂಬು ಹೇಳದೆ ಓಡೋಡಿ ಬಂದ
  • ಬಂದವನು "ಅದು ನಿನ್ನ ಕೈಲಾಗುವುದಿಲ್ಲ. ಸುಮ್ಮನೆ ಇದ್ದುಬಿಡು" ಎಂದು ಹೇಳಿ ಸುಮ್ಮನಾಗಲಿಲ್ಲ. ಧೈರ್ಯ ತುಂಬಿದ. ಮುಖ್ಯವಾದ ಶತ್ರುಗಳನ್ನು ನಿವಾರಿಸಲು ಮುಂದೆ ನಿಂತ. 
  • ರಾಜಸೂಯದ ಪ್ರಾರಂಭದಿಂದ ಕೊನೆಯವರೆಗೂ ದೊಡ್ಡ ಕೆಲಸ, ಸಣ್ಣ ಕೆಲಸ ಎಂದು ನೋಡದೆ ಎಲ್ಲವನ್ನೂ ಮಾಡಿದ; ಮಾಡಿಸಿದ. 
  • ಯಾಗದ ಕುದುರೆಯ ರಕ್ಷಣೆಗೆ ಬಂದ  ತೊಂದರೆಗಳನ್ನು ನಿವಾರಿಸಲು ಸದಾ ಟೊಂಕ ಕಟ್ಟಿ ನಿಂತ
  • ಅತಿಥಿಗಳು ಊಟ ಮಾಡಿದ ಎಂಜಲು ಎಲೆಗಳನ್ನೂ ತಾನುಟ್ಟ ಪೀತಾಂಬರದ ನೆರಿಗೆಗಳನ್ನು ಮೇಲೆ ಸಿಕ್ಕಿಸಿ, ನಡು ಬಗ್ಗಿಸಿ, ಹೆಕ್ಕಿ ತೆಗೆದು ನೆಲ ಸಾರಿಸಿದ. ಶುಚಿ ಮಾಡಿದ. (ಅವನು ಎಂಜಲೆಲೆ ಹೇಗೆ ತೆಗೆದ ಎನ್ನುವುದನ್ನು ವರ್ಣಿಸುವ  ಸೊಗಸಾದ ಹಾಡೊಂದಿದೆ. ಅದನ್ನು ಮುಂದೆ ಎಂದಾದರೂ ನೋಡೋಣ).
  • ಎಂದೋ ಒಂದು ದಿನ ಹಬ್ಬದ ಸಮಯ ಬಂದು ಸಿಹಿಯೂಟ ಹೊಡೆದ ನೆಂಟನಲ್ಲ ಅವನು. ಸದಾಕಾಲಕ್ಕೂ, ಸರ್ವಕೆಲಸಕ್ಕೂ ಸಿದ್ಧನಿದ್ದ. 
ಈ ಎಲ್ಲ ಕಾರಣಗಳಿಂದ ಕೇವಲ ಒಬ್ಬ ಮನುಷ್ಯನಾಗಿಯೂ, ಸೋದರತ್ತೆಯ ಮಗನಾಗಿಯೂ, ಒಡನಾಡಿಯಾಗಿಯೂ ಶ್ರೀಕೃಷ್ಣ ಅಗ್ರ ಪೂಜೆಗೆ, ಮೊದಲ ಸತ್ಕಾರಕ್ಕೆ ಸಂಪೂರ್ಣ ಯೋಗ್ಯನಾಗಿದ್ದ. ಪರಶುರಾಮರೂ ಮತ್ತು ವೇದವ್ಯಾಸರೂ ಪರಮಾತ್ಮನ ಸ್ವರೂಪವೇ ಆದರೂ ರಾಜಸೂಯಯಾಗದಲ್ಲಿ ಅವರ ಪಾತ್ರ ಇಷ್ಟು ಎಲ್ಲಿಯೂ ಇಲ್ಲ. ಹೀಗಾಗಿ ಭೀಷ್ಮರು ಅಗ್ರ ಸನ್ಮಾನಕ್ಕೆ ಶ್ರೀಕೃಷ್ಣನನ್ನೇ ಸೂಚಿಸಿದರು.  ತನ್ನ ಯೋಗ್ಯತೆಯನ್ನು ಪ್ರಶ್ನಿಸಿದ ಶಿಶುಪಾಲನನ್ನು ಸಂಹರಿಸಿ ಎಲ್ಲರ ಮುಂದೆ ತನ್ನ ಯೋಗ್ಯತೆಯನ್ನು ಸ್ಥಾಪಿಸದ ಸಹ. 

*****

ಶಿಶುಪಾಲನ ಅನೇಕ ಕೊಂಕು ಪ್ರಶ್ನೆಗಳಿಗೆ ಮೇಲೆ ಉತ್ತರಗಳಿವೆ. ಅವನೇನು ರಾಜನೇ? ಅವನೇನು ಜ್ಞಾನಿಯೇ? ಎಂಬುವು ಶಿಶುಪಾಲನ ಮುಖ್ಯ ಪ್ರಶ್ನೆಗಳು. 

ಶ್ರೀಕೃಷ್ಣನು ರಾಜನಾಗಿರಲಿಲ್ಲ. ರಾಜರುಗಳನ್ನು ಸೋಲಿಸಿ ಅವರ ರಾಜ್ಯಗಳನ್ನು ಗೆದ್ದವರು ಆಕ್ರಮಿಸಿಕೊಂಡು ತಾವೇ ರಾಜರಾಗುವುದು ಹಿಂದೆಂದಿನಿಂದಲೋ ಬಂದ ಸಂಪ್ರದಾಯ. ತನ್ನನ್ನು ಕೊಲ್ಲಲು ಅನೇಕ ವಿಧಗಳಲ್ಲಿ ಪ್ರಯತ್ನ ಪಟ್ಟ ಸೋದರಮಾವ ಕಂಸನನ್ನು ಕೊಂದ ಬಳಿಕ ಶ್ರೀಕೃಷ್ಣ ತಾನೇ ಮಥುರೆಗೆ ರಾಜನಾಗಬಹುದಿತ್ತು. ಅವನನ್ನು ತಡೆಯುವವರು ಯಾರೂ ಇರಲಿಲ್ಲ. ವಾಸ್ತವವಾಗಿ ಅನೇಕರು ಇದನ್ನೇ ಸೂಚಿಸಿದರು. ಆದರೆ ಅವನು ಒಪ್ಪದೇ ತನ್ನ ಅಜ್ಜ ಉಗ್ರಸೇನನಿಗೆ ಪಟ್ಟಕಟ್ಟಿದ. ಜರಾಸಂಧನನ್ನು ಕೊಲ್ಲಿಸಿದಾಗ ಮತ್ತೆ ಮಗಧಕ್ಕೆ ದೊರೆಯಾಗಬಹುದಿತ್ತು. ಆದರೆ ಜರಾಸಂಧನ ಮಗ ಸಹದೇವನಿಗೆ (ಜರಾಸಂಧನ ಮಗನ ಹೆಸರೂ ಸಹದೇವ) ರಾಜ್ಯ ಬಿಟ್ಟು ಕೊಟ್ಟ. ಅವನು ಸ್ವತಃ ರಾಜನಲ್ಲದಿದ್ದರೂ ಅನೇಕರಿಗೆ ರಾಜ್ಯ ಕೊಟ್ಟ. 

ಅವನೇನು ತಿಳಿದವನೇ ಅಥವಾ ಜ್ಞಾನಿಯೇ ಎನ್ನುವ ಪ್ರಶ್ನೆಗೂ ಅಲ್ಲಿಯೇ ಉತ್ತರವಿದೆ. ಇಡೀ ರಾಜಸೂಯ ಯಾಗ ಮಾಡಿಸುವ ತಿಳುವಳಿಕೆ ಮತ್ತು ಜ್ನ್ಯಾನ ಅವನಿಗೆ ಇತ್ತು. ಮುಂದೆ ಗೀತೋಪದೇಶ ಮಾಡಿ, ಕುರುಕ್ಷೇತ್ರ ಯುದ್ಧ ಗೆಲ್ಲಿಸಿ, ಅನೇಕ ಸಮಯದಲ್ಲಿ ತನ್ನ ಲೋಕಜ್ನ್ಯಾನ ಮತ್ತು ಧರ್ಮಜ್ಞಾನದಿಂದ ಪಾಂಡವರಿಗೆ ಮತ್ತು ಅನೇಕರಿಗೆ ಮಾರ್ಗದರ್ಶನ ಮಾಡಿದ. 

ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಅಗ್ರ ಪೂಜೆಗೆ ಶ್ರೀಕೃಷ್ಣನೇ ಸರಿಯಾದ ವ್ಯಕ್ತಿ. ಅಲ್ಲವೇ?

7 comments:

  1. Agra Pooje article is excellent. There are so many things woven together so nicely. Thanks Keshav again. NR…..

    ReplyDelete
  2. Very good and logical explanation as to why Krishna deserved to be worshipped first.

    ReplyDelete
  3. Sri Krishna is Paramathma as well as Purushothama. Both aspects have been told with lot of authenticity and at the same time with love.

    It is astonishing that you find so much time to write these eloborate information and that too so much comproehensively. Spreding them in different episodes and that too each episode is complete in itself and at the same time leading to the next episode with a link, which is already in your mind. Your language and narrations are as though we are discussing it face to face.

    Thank you Murthigale

    ReplyDelete
  4. ಭಾನುಮತಿNovember 30, 2024 at 5:20 PM

    ಜಗದೊಡೆಯ ಶ್ರೀ ಕೃಷ್ಣನೇ ಎಲ್ಲಾ ಕೋನದಿಂದಲೂ ಧರ್ಮಜನ ರಾಜಸೂಯ ಯಾಗದ ಅಗ್ರಪೂಜೆಯ ಹಕ್ಕುದಾರ ಎಂಬುದನ್ನು ಬಹಳ ಸೊಗಸಾಗಿ ವಿಶ್ಲೇಷಣೆ ಮಾಡಿದ್ದೀರಿ. ಭಗವಂತನ ಮಹಾಮಹಿಮೆ ಯನ್ನು ಸಂತ ಪುರಂದರದಾಸರು ಮತ್ತು ಕನಕದಾಸರ ಕೀರ್ತನೆಗಳನ್ನು ಉದಾಹರಿಸಿ ಮನಮುಟ್ಟುವಂತೆ ವಿವರಿಸಿದ್ದೀರಿ. ಅದನ್ನು ಓದುವಾಗ ನಮಗರಿವಿಲ್ಲದಂತೆ ಆನಂದಾಶ್ರುಗಳು ಹರಿಯುತ್ತವೆ. ನಿಮ್ಮ ಬರವಣಿಗೆಯ ಶೈಲಿಯಲ್ಲಿ ನಿಮಗೆ ನೀವೇ ಸಾಟಿ ಕೇಶವ ಸರ್. ಅನಂತಾನಂತ ಧನ್ಯವಾದಗಳು.

    ReplyDelete
  5. Very nicely all happenings narrated to sho lord Krishna with his divine power is better of all the people in that Rajya Sabha hobos bestowe on Krishna by spying him for the post of pramkh athiti is right person for pramill athyu

    ReplyDelete
  6. Very well written as per Mahabharata. 👋👋👋🤘🤘👍👍

    ReplyDelete
  7. ವಿವರಣಾತ್ಮಕ ಲೇಖನ.ಇತ್ತೀಚೆಗೆ ಓದಿದ ಕುಮಾರವ್ಯಾಸ ಭಾರತದ ನೆನಪಿನಲ್ಲಿ ನಿಮ್ಮ ಬರಹ ಇನ್ನೂ ಸ್ವಾರಸ್ಯಕರವಾಗಿ ಓದಿಸಿ ಕೊಂಡು ಹೋಯಿತು

    ReplyDelete