ಪ್ರಾಣಿ-ಪಕ್ಷಿಗಳಿಗೂ ಮನುಷ್ಯರಿಗೂ ಏನು ಭೇದ? ಆಹಾರ-ನಿದ್ರೆ-ಭಯ-ಮೈಥುನ ಮುಂತಾದವು ಇಬ್ಬರಿಗೂ ಇವೆ. ಆದರೆ ಸೃಷ್ಟಿಯಲ್ಲಿ ಹೆಚ್ಚು ವಿಕಸಿತನಾದ ಮನುಷ್ಯನಿಗೆ ಯೋಚಿಸುವ, ಯೋಗ್ಯ ಮತ್ತು ಅಯೋಗ್ಯ ವಿಚಾರಗಳಲ್ಲಿ ವ್ಯತ್ಯಾಸವನ್ನು ಗಮನಿಸುವ, ಮತ್ತು ಸಂತೋಷ-ದುಃಖಗಳನ್ನು ಹಂಚಿಕೊಳ್ಳುವ ಶಕ್ತಿಯಿದೆ. ಈ ಕಾರಣದಿಂದ ಮನುಷ್ಯ ಸಮಾರಂಭಗಳನ್ನು ಆಯೋಜಿಸುತ್ತಾನೆ. ಇಂತಹ ಸಂದರ್ಭಗಳಲ್ಲಿ ತನ್ನ ಹಿಗ್ಗು-ತಗ್ಗುಗಳನ್ನು ಬಂಧು-ಬಾಂಧವರೊಡನೆ, ನೆಂಟರು-ಇಷ್ಟರ ಸಮೂಹದಲ್ಲಿ ಆಚರಿಸುತ್ತಾನೆ. ಇಂತಹ ಕೂಟಗಳು ಇಲ್ಲದ ಯಾಂತ್ರಿಕ ಬದುಕು ಬಹಳ ನೀರಸ.
ಸಮಾಜದ ಅನೇಕ ವರ್ಗಗಳ ಪದ್ಧತಿಯಂತೆ, ಅವರ ಪರಿಸರದ ವಾತಾವರಣದಂತೆ ಈ ಸಮಾರಂಭಗಳು ಏರ್ಪಡಿಸಲ್ಪಡುತ್ತವೆ. ತನ್ನವರೆಂದು ನಂಬಿದ ಜನರ ನಡುವೆ ಆಚರಣೆ ಮಾಡುವಾಗ ತನ್ನವರೆನ್ನುವವರು ಇರಲೇಬೇಕು ತಾನೇ? ಆ ಕಾರಣದಿಂದ ಅವರನ್ನು ಆಹ್ವಾನ ಮಾಡಬೇಕಾಗುತ್ತದೆ. ಕೆಲವರು ವಿಷಯ ತಿಳಿದ ತಕ್ಷಣ ಕಾರ್ಯಕ್ರಮಕ್ಕೆ ಬರಬಹುದು. ಮತ್ತೆ ಕೆಲವರು ಕರೆದಾಗ ಮಾತ್ರ ಬರುವವರು. ಮತ್ತೆ ಕೆಲವರು ಅವರ ಮನಸ್ಸು ಒಪ್ಪುವಂತೆ ಕರೆದಾಗ ಮಾತ್ರ ಬರುವರು. "ನಮ್ಮನ್ನು ಕರೆದಿಲ್ಲ" ಅಥವಾ "ನಮ್ಮನ್ನು ಸರಿಯಾಗಿ ಕರೆದಿಲ್ಲ" ಎಂದು ಮದುವೆ, ಮುಂಜಿ ಇತ್ಯಾದಿಗಳಿಗೆ ಹೋಗದಿರುವುದು ಅನೇಕ ವೇಳೆ ಕಂಡು ಬರುವ ವಿಷಯ. ಕರೆಯದೆ ಇದ್ದಲ್ಲಿ ಹೋಗುವುದು ಮುಜುಗರದ ವಿಷಯವೇ ಸರಿ. ಆದರೆ "ಸರಿಯಾಗಿ ಕರೆದಿಲ್ಲ" ಎಂದು ಹೋಗದೆ, ವಿಷಯವನ್ನು ಅಲ್ಲಿಗೇ ಬಿಡದೆ, ವರ್ಷಾನುಗಟ್ಟಲೆ ಹಗೆ ಸಾಧಿಸಿ, ತಾವೂ ದುಃಖಿಸಿ ಬೇರೆಯವರಿಗೂ ಹಿಂಸೆ ಕೊಡುವ ಸಂದರ್ಭಗಳನ್ನು ನಾವೆಲ್ಲರೂ ನಮ್ಮ ಜೀವಮಾನದಲ್ಲಿ ಕಂಡಿದ್ದೇವೆ.
ಆಮಂತ್ರಣ ಇಲ್ಲದಿದ್ದಲ್ಲಿಗೆ ಹೋಗದಿರುವುದು ಸರಿಯೇ. ಆಹ್ವಾನ ಇದ್ದಾಗ ಹೋಗಲಾಗದ ಪರಿಸ್ಥಿತಿಗಳೂ ಉಂಟು. ಅಂತಹ ಸಂದರ್ಭಗಳಲ್ಲಿ ಆಮಂತ್ರಣವಿತ್ತವರಿಗೆ ಬರಲಾಗುವುದಿಲ್ಲವೆಂದು ತಿಳಿಸಿ ಸಂದರ್ಭಕ್ಕೆ ತಕ್ಕಂತೆ ಶುಭ ಕೋರುವ ಅಥವಾ ಸಂತಾಪ ಸೂಚಿಸುವ ಸೌಜನ್ಯವೂ ಬೇಕು. "ಸರಿಯಾಗಿ ಕರೆಯುವುದು" ಎಂದರೇನು? ಹಿಂದೆಲ್ಲ ನೆಂಟರಿಷ್ಟರ ಮನೆಗೆ ದಂಪತಿಗಳೇ ಹೋಗಿ ಶುಭ ಸಮಾರಂಭಗಳ ಆಮಂತ್ರಣ ಪತ್ರಿಕೆ ಜೊತೆಗೆ ಮಂತ್ರಾಕ್ಷತೆ ಇಟ್ಟು ಕೊಟ್ಟು ಕರೆಯುವ ಪದ್ಧತಿ ಇತ್ತು. ಸುಮಂಗಲಿಯರನ್ನು ಕರೆಯುವಾಗ ವಿಶೇಷವಾಗಿ ಒಂದು ಬಟ್ಟಲಿನಲ್ಲಿ ಎಣ್ಣೆಯನ್ನೂ, ಅದರ ಜೊತೆಯಲ್ಲಿ ಅರಿಶಿನ-ಕುಂಕುಮ, ಬಳೆ ಮುಂತಾದ ಮಂಗಳ ದ್ರವ್ಯಗಳನ್ನೂ ಕೊಟ್ಟು ಆಹ್ವಾನಿಸುತ್ತಿದ್ದರು. ಇದನ್ನೇ "ಎಣ್ಣೆ-ಅರಿಶಿನ" ಕೊಟ್ಟು ಕರೆಯುವುದು ಎಂದು ಸೂಕ್ಷ್ಮವಾಗಿ ಹೇಳುತ್ತಿದ್ದರು. ಆಹ್ವಾನಿತ ವ್ಯಕ್ತಿ ಅಭ್ಯಂಗನ ಮಾಡಿ ತಯಾರಾಗಿ ಬರಲಿ ಎಂದು ಈ ರೀತಿ ಕರೆಯುವ ಪದ್ಧತಿ ಇತ್ತು. ಅನೇಕ ವೇಳೆ ಊಟ-ತಿಂಡಿಗಳಿಗೆ ಎಲ್ಲಾ ತಯಾರು ಮಾಡಿ ಬಡಿಸಿದ್ದಾಗ ಯಾರಾದರೂ ಬಂದು ಕುಳಿತುಕೊಳ್ಳದೆ ಇದ್ದರೆ "ಏನೋ, ನಿನಗೇನು ಎಣ್ಣೆ-ಅರಿಸಿನ ಕೊಟ್ಟು ಕರೆಯಬೇಕೇನು?" ಎಂದು ಹಿರಿಯರು ರೇಗುತ್ತಿದ್ದದೂ ಉಂಟು.
*****
ನಾವು ಚಿಕ್ಕವರಿದ್ದಾಗ ನೋಡುತ್ತಿದ್ದ ಆಹ್ವಾನ ಪತ್ರಿಕೆಗಳಲ್ಲಿ ಇರುತ್ತಿದ್ದ ಒಕ್ಕಣೆಗಳಲ್ಲಿ "ತಾವು ಸಕುಟುಂಬ-ಸಪರಿವಾರ ಆಗಮಿಸಿ, ಯಥೋಚಿತ ಸತ್ಕಾರ ಸ್ವೀಕರಿಸಿ, ವಧೂ-ವರರನ್ನು ಆಶೀರ್ವದಿಸಿ ನಮ್ಮ ಮನಸ್ಸಂತೋಷಪಡಿಸಬೇಕೆಂದು ಕೋರುವ.... " ಇತ್ಯಾದಿ ಬರಹಗಳು ಇರುತ್ತಿದ್ದವು. ಆಹ್ವಾನ ನೀಡುವಾಗ ಅದು ಮನೆಯ ಹಿರಿಯರಿಗೆ ಮಾತ್ರವೋ, ಅಥವಾ ದಂಪತಿಗಳಿಗೋ ಇಲ್ಲವೇ ಮನೆಮಂದಿಗೆಲ್ಲರಿಗೋ ಎಂಬುದನ್ನು ಖಚಿತವಾಗಿ ಹೇಳುತ್ತಿದ್ದರು. ಇದರಿಂದ ಉಭಯತ್ರರಿಗೂ ಯಾವುದೇ ಇರುಸು-ಮುರುಸು ಉಂಟಾಗುತ್ತಿರಲಿಲ್ಲ. ಕಾರ್ಯಕ್ರಮದ ದಿನ ಮತ್ತು ವೇಳೆ, ಸ್ಥಳ ಇತ್ಯಾದಿಗಳನ್ನು ಖಚಿತವಾಗಿ ಹೇಳುವುದರಿಂದ ಎಲ್ಲಿ, ಯಾವ ವೇಳೆ ನಮ್ಮ ಬರುವು-ಇರುವು ನಿರೀಕ್ಷಿತ ಎಂದು ನಿಖರವಾಗಿ ಗೊತ್ತಾಗುತ್ತಿತ್ತು.
ಆಹ್ವಾನ ನೀಡುವ ರೀತಿಯನ್ನು ನಮ್ಮ ಜಾನಪದ ಸಾಹಿತ್ಯದಲ್ಲಿ ಚೆನ್ನಾಗಿ ನೋಡಬಹುದು. ಮಗನ ಅಥವಾ ಮಗಳ ವಿವಾಹದ ಆಮಂತ್ರಣ ನೀಡುವ ಮಹಿಳೆ ತನ್ನ ದೊಡ್ಡಮ್ಮನನ್ನು ಕರೆಯುವ ಈ ಪರಿ ನೋಡಿ:
ಹಡೆದ ತಾಯಿಗಿಂತ ಹಿರಿಯೋಳೆ
ವಜ್ರ ಮಾಣಿಕದೋಲೆ ಕಿವಿಯೋಳೆ
ಮುತ್ತೈದೆ ಮಕ್ಕಳ ಸೊಸೆಯರ ಒಡಗೊಂಡು
ಅರ್ತಿಲಿ ಬಾ ದೊಡ್ಡಮ್ಮ ಮನೆಯ ಪ್ರಸ್ಥಕ್ಕೆ, ಸುವ್ವಾಲೆ
ಒಡಹುಟ್ಟಿದ ಅಕ್ಕನನ್ನು ಕರೆಯುವ ರೀತಿ:
ಬೊಂಬೆ ಬಾಗಿನ ಕೊಟ್ಟು ಆಡಿಸಿ
ಬಲು ಸಂಭ್ರಮದಿಂದೆನ್ನ ಸಲಹಿದಿ
ಮಕ್ಕಳು ಮೋಮ್ಮಕ್ಕಳು ಸೊಸೆಯರ ಸಹಿತಾಗಿ
ಪಟ್ಟದ ಅಕ್ಕ ಬಾರೆ ಎನ್ನ ಮನೆಯ ಪ್ರಸ್ಥಕ್ಕೆ, ಸುವ್ವಾಲೆ
ಇದೆ ರೀತಿ ಪ್ರತಿಯೊಂದು ಸಂಭಂದದವರನ್ನೂ ಕರೆಯುವ ಹಾಡುಗಳಿವೆ. ಮನೆಯ ಕೆಲಸದವರನ್ನೂ ಗೌರವಯುತವಾಗಿ ಕರೆಯಬೇಕು:
ಎಲ್ಲ ಸುತ್ತು ಕೆಲಸಗಳ ಮಾಡೋಳೇ
ತುಸು ಹೇಸದೆ ಎಂಜಲ ಬಳಿಯೋಳೆ
ಮಕ್ಕಳು ಮಂದಿಯ ಒಡಗೊಂಡು
ಬಾರೆ ದಾಸಿ ಎನ್ನ ಮನೆಯ ಪ್ರಸ್ಥಕ್ಕೆ. ಸುವ್ವಾಲೆ
ಇದೇ ರೀತಿ ಬೇರೆ ಬಂಧು-ಬಾಂಧವರನ್ನು, ಗೆಳೆಯ-ಗೆಳತಿಯರನ್ನೂ ಮದುವೆ-ಮುಂಜಿಗಳಿಗೆ ಕರೆಯುವ ಹಾಡುಗಳಿವೆ.
ಹಿಂದೆಲ್ಲಾ ಐದು ಅಥವಾ ಏಳು ದಿನಗಳ ಕಾಲ ಮದುವೆ ನಡೆಸುವ ಸಂಪ್ರದಾಯ ಇತ್ತು. "ಮಾಘಾದಿ ಪಂಚಕ" ಎಂದು ಗುರುತಿಸಿ ಆ ಐದು ತಿಂಗಳು ಮಾತ್ರವೇ ಮದುವೆ-ಮುಂಜಿ ಮಾಡುತ್ತಿದ್ದರು. ಮಾಘ, ಫಾಲ್ಗುಣ, ಚೈತ್ರ, ವೈಶಾಖ, ಜ್ಯೇಷ್ಠ ಈ ಐದು ತಿಂಗಳುಗಲ್ಲಿ ಮಾತ್ರ ಈ ಶುಭ ಕಾರ್ಯಗಳು ನಡೆಸುತ್ತಿದ್ದರು. ಹೆಚ್ಚು ಜನ ಕೃಷಿ ಚಟುವಟಿಕೆಗಳಲ್ಲಿ ಜೀವನ ನಡೆಸುತ್ತಿದ್ದರಿಂದ, ಈ ತಿಂಗಳುಗಳಲ್ಲಿ ಕೃಷಿ ಚಟುವಟಿಕೆ ಕಡಿಮೆ ಇರುತ್ತಿದ್ದರಿಂದ, ಕಾಲ ಎಲ್ಲರಿಗೂ ಅನುಕೂಲ ಎನ್ನುವ ಪರಿಸ್ಥಿತಿ ಇತ್ತು. ಆದರೆ ಈಗ ಹನ್ನೆರಡೂ ತಿಂಗಳು ಎಲ್ಲ ಕಾರ್ಯಕ್ರಮ ನಡೆಯುತ್ತವೆ.
*****
ಆಹ್ವಾನ ಪತ್ರಿಕೆ ಆಯಿತು. ಕರೆದೂ ಆಯಿತು. ಇನ್ನು ಮುಂದೆ ಕರೆದವರು ಕಾರ್ಯಕ್ರಮಕ್ಕೆ ಬಂದಾಗ ಅವರನ್ನು ಸ್ವಾಗತಿಸಿ ನೋಡಿಕೊಳ್ಳುವ ರೀತಿ. ಕೆಲವು ಕುಟುಂಬಗಳಲ್ಲಿ "ಹೂವೀಳ್ಯ" ಎನ್ನುವ ಒಂದು ಕಾರ್ಯಕ್ರಮವನ್ನು ನಡೆಸುವ ಸಂಪ್ರದಾಯ ಇದೆ. ಏನಿದು ಈ ಹೂವೀಳ್ಯ?
ವಿಜಯನಗರ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗ ಕವಿಗಳು, ಕಲಾವಿದರು, ವಿದ್ವಾಂಸರಿಗೆ ಆಸ್ಥಾನದಲ್ಲಿ ವಿಶೇಷವಾದ ಆಸರೆ ಮತ್ತು ಗೌರವ ಇತ್ತು. ಕನಕಾಚಲ ಭಟ್ಟ ಎಂಬುವವರು ಸ್ವತಃ ವೀಣಾ ವಿದ್ವಾಂಸರಲ್ಲದೆ ರಾಜವಂಶದವರಿಗೂ ವೀಣೆ ನುಡಿಸುವಿಕೆ ಕಲಿಸುವ ಗುರುಗಳಾಗಿದ್ದರು. ಅವರ ಮಗ ತಿಮ್ಮಣ್ಣ ಭಟ್ಟರೂ ಇದನ್ನು ಮುಂದುವರಿಸಿದರು. ಆ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯ ನುಚ್ಚು ನೂರಾಯಿತು. ವಿದ್ವಾಂಸರು, ಕಲಾವಿದರು ಚೆದುರಿ ಹೋದರು. ಕೆಲವರು ತಂಜಾವೂರು ರಾಜರ ಬಳಿ ಆಶ್ರಯ ಪಡೆದರು. ಶ್ರೀ ಸುಧೀಂದ್ರ ತೀರ್ಥರು ತಂಜಾವೂರು ಅರಸರ ರಾಜಗುರುಗಳಾಗಿದ್ದರು. ತಿಮ್ಮಣ್ಣ ಭಟ್ಟರ ಚಿಕ್ಕ ಮಗನಾದ ಶ್ರೀ ವೆಂಕಟನಾಥರು ಅಸಾಧಾರಣ ಪಂಡಿತರು. ತಂದೆ, ತಾತನಂತೆ ಶ್ರೇಷ್ಠ ವೈಣಿಕರು. ಶ್ರೀ ಸುಧೀಂದ್ರ ತೀರ್ಥರಲ್ಲಿ ಹೆಚ್ಚಿನ ವಿದ್ಯಾಭ್ಯಾಸಮಾಡಿ ಆ ಕಾಲದ ಎಲ್ಲ ವಿದ್ವಾಂಸರನ್ನೂ ವಾದಗಳಲ್ಲಿ ಜಯಿಸಿದರು.
ಕಾಲ ಕಳೆದಂತೆ ಶ್ರೀ ಸುಧೀಂದ್ರ ತೀರ್ಥರಿಗೆ ಶ್ರೀ ವೆಂಕಟನಾಥರನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡಬೇಕೆಂದು ಪ್ರೇರಣೆಯಾಯಿತು. ವೆಂಕಟನಾಥರು ಇದಕ್ಕೆ ಒಪ್ಪಲಿಲ್ಲ. ಚಿಕ್ಕ ವಯಸ್ಸಿನ ಹೆಂಡತಿ ಮತ್ತು ಸಣ್ಣ ಮಗನನ್ನು ತ್ಯಜಿಸಿ ಸನ್ಯಾಸ ಸ್ವೀಕಾರ ಮಾಡಲು ಒಪ್ಪಲಿಲ್ಲ. "ಬಾಲಾ ಸ್ತ್ರೀ, ಬಾಲಕೋನೋಪನೀತಃ" (ಹೆಂಡತಿ ಚಿಕ್ಕ ವಯಸ್ಸಿನವಳು, ಮಗನಿಗೆ ಇನ್ನೂ ಉಪನಯನ ಕೂಡ ಆಗಿಲ್ಲ) ಎಂದು ಸನ್ಯಾಸ ನಿರಾಕರಿಸಿದರು. ನಂತರ ಸಂದರ್ಭಗಳಿಂದ ಮನಸ್ಸು ಬದಲಾಯಿಸಿ, ಮಗನ ಉಪನಯನ ಮಾಡಿ, ಹೆಂಡತಿಗೆ ತಿಳಿಯದಂತೆ ಸನ್ಯಾಸ ಸ್ವೀಕರಿಸಿದರು. ಶ್ರೀ ಸುಧೀಂದ್ರ ತೀರ್ಥರು ಶ್ರೀ ವೆಂಕಟನಾಥರಿಗೆ ಶ್ರೀ ರಾಘವೇಂದ್ರ ತೀರ್ಥ ಎಂದು ನಾಮಕರಣ ಮಾಡಿದರು. ಇದರಿಂದ ಆಘಾತಗೊಂಡ ವೆಂಕಟನಾಥರ ಪತ್ನಿ ಶ್ರೀಮತಿ ಸರಸ್ವತಿ ಬಾವಿಯಲ್ಲಿ ಧುಮುಕಿ ಆತ್ಮಹತ್ಯೆ ಮಾಡಿಕೊಂಡರು. ಇದರಿಂದ ಅವರಿಗೆ ಬಂದ ಪಿಶಾಚ ಜನ್ಮವನ್ನು ಶ್ರೀ ರಾಘವೇಂದ್ರ ತೀರ್ಥರು ಪರಿಹಾರ ಮಾಡಿದರು. "ಇನ್ನು ಮುಂದೆ ತಮ್ಮಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ನಿನ್ನ ಗುರುತಾಗಿ "ಸುವಾಸಿನಿ ಸತ್ಕಾರ" ಮಾಡಲಿ ಎಂದು ವರಕೊಟ್ಟರು. ಅಂದಿನಿಂದ ಶುಭ ಕಾರ್ಯಗಳಲ್ಲಿ "ಹೂವೀಳ್ಯ" ಮಾಡುವ ಪದ್ಧತಿ ಬೆಳೆದು ಬಂತು. ಹೀಗೆಂದು ಶ್ರೀ ರಾಘವೇಂದ್ರ ತೀರ್ಥರ (ಮುಂದೆ ಮಂತ್ರಾಲಯದಲ್ಲಿ ನೆಲೆಸಿದ ಶ್ರೀ ರಾಯರು) ಚರಿತ್ರೆ ಗ್ರಂಥಗಳಿಂದ ತಿಳಿದುಬರುತ್ತದೆ. ಇದು ಮೂರು ನೂರಾ ಐವತ್ತು ವರುಷಗಳಿಗೂ ಹಿಂದಿನ ಮಾತು. ಹೂವೀಳ್ಯ ಪದ್ಧತಿ ಅಂದಿನಿಂದ ಪ್ರಾರಂಭ ಆಯಿತು ಎಂದು ನಂಬಿಕೆ.
*****
ಹಿಂದಿನ ದಿನಗಳಲ್ಲಿ ಮದುವೆ-ಮುಂಜಿ ಮುಂತಾದ ಸಮಾರಂಭಗಳಿಗೆ ಹೋಗುವ ಜನ ಕಾಲ್ನಡಿಗೆಯಲ್ಲೋ ಅಥವಾ ಎತ್ತಿನ/ಕುದುರೆ ಗಾಡಿಗಳಲ್ಲೋ ಹೋಗಬೇಕಾಗಿತ್ತು. ಇಂದಿನಂತೆ ವಿವಾಹ ಮಂಟಪದವರೆಗೂ ಸುಖ ಪ್ರಯಾಣ ಸಾಧ್ಯವಿರಲಿಲ್ಲ. ಪ್ರಯಾಣದಿಂದ ಬರುವ ಮಂದಿ, ಅದರಲ್ಲೂ ಹಿರಿಯರು, ಬಹಳ ಬಸವಳಿದಿರುತ್ತಿದ್ದರು. ಆದ ಕಾರಣ ಅವರನ್ನು ಎದುರುಗೊಂಡಾಗ ಅವರಿಗೆ ಮೊದಲಿಗೆ ಆಯಾಸ ಪರಿಹಾರ ಬೇಕಾಗುತ್ತಿತ್ತು. ಹೀಗೆ ಬಂದವರನ್ನು ಸಮಾರಂಭದ ಸ್ಥಳದ ಮುಖ್ಯ ದ್ವಾರದ ಬಳಿ ಎದುರುಗೊಳ್ಳುತ್ತಿದ್ದರು. ಬಂದ ಹಿರಿಯರಿಗೆ ಕುಶಲ ಪ್ರಶ್ನೆಗಳ ನಂತರ ಕಾಲು ತೊಳೆದು ಒಳಗೆ ಕರೆದೊಯ್ಯುತ್ತಿದ್ದರು. ನಂತರ ಬ್ರಹ್ಮಜ್ಞರಿಗೆ "ಮಧುಪರ್ಕ" ಮತ್ತು ಸ್ತ್ರೀಯರಿಗೆ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಇತ್ಯಾದಿ ಕೊಡುತ್ತಿದ್ದರು. ಕಾರಣ ಬೇಯಿಸಿದ ಪದಾರ್ಥಗಳ ಅಡಿಗೆ ಇನ್ನೂ ಆಗಿರುತ್ತಿರಲಿಲ್ಲ. ಅವರ ಬಟ್ಟೆಗಳು ಪ್ರಯಾಣದ ಧೂಳಿನಿಂದ ಮಲಿನವಾಗಿರುತ್ತಿದ್ದವು. ಆ ಕಾರಣ ಅವರಿಗೆ ಹೊಸ ಧೋತರ-ಸೀರೆ ಇತ್ಯಾದಿ ಕೊಡುತ್ತಿದ್ದರು. ಹೆಣ್ಣು ಮಕ್ಕಳಿಗೆ ಮಂಗಳ ದ್ರವ್ಯಗಳನ್ನು ಕೊಡುತ್ತಿದ್ದರು. ಹೀಗೆ ಕಾಲುತೊಳೆದು, ಒಳಗೆ ಕರೆದುಕೊಂಡು ಹೋಗಿ ಮಂಗಳದ್ರವ್ಯ ಕೊಟ್ಟು ಸ್ವಲ್ಪ ತಿನ್ನುವ-ಕುಡಿಯುವ ಪದಾರ್ಥ ಕೊಡುವ ಕ್ರಿಯೆ ನಂತರ "ಹೂವು-ವೀಳ್ಯ" ಅಥವಾ "ಹೂವೀಳ್ಯ" ಪದ್ಧತಿಯಾಗಿ ರೂಪುಗೊಂಡಿದೆ.
ಹೊಸ ವಸ್ತ್ರಗಳನ್ನು ಕೊಡುವ ಪದ್ಧತಿ ಈಗ ಕೇವಲ ರವಿಕೆಯ ಕಣಕ್ಕೆ ಸೀಮಿತವಾಗಿದೆ. ಇಂದಿನ ದಿನಗಳಲ್ಲಿ ಸೀರೆಯ ಜೊತೆಗೇ ರವಿಕೆಯ ಕಣಗಳಿರುವ ಕಾಲ ಮತ್ತು ಮ್ಯಾಚಿಂಗ್ ಬ್ಲೌಸ್ಗಳಿಂದಾಗಿ ಹೂವೀಳ್ಯದಲ್ಲಿ ಕೊಡುವ ರವಿಕೆಯ ಕಣಕ್ಕೆ ಏನೂ ಬೆಲೆ ಇಲ್ಲವಾಗಿದೆ. ಅನುಕೂಲಸ್ಥರು ಕೇವಲ ರವಿಕೆಯ ಕಣಕ್ಕೇ ಸೀಮಿತ ಮಾಡಬೇಕಾಗಿಲ್ಲ. ಒಂದು ಜೊತೆ ಪೂರ್ಣ ವಸ್ತ್ರಗಳನ್ನೇ ಕೊಡಬಹುದು.
ಕೆಲವು ಹಿರಿಯರಿಗೆ, ಅದರಲ್ಲೂ ದಂಪತಿಗಳಿಗೆ, ಹೀಗೆ ಕಾರ್ಯಕ್ರಮದ ಆರಂಭದಲ್ಲಿ ನಡೆಯುವ ನಡೆಗಳಲ್ಲಿ (ಚಪ್ಪರ ಪೂಜೆ ಅಥವಾ ದೇವರ ಸಮಾರಾಧನೆ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು) "ಪಾದಪೂಜೆ" ಮಾಡಿ ವಸ್ತ್ರಗಳನ್ನು ನೀಡುವ ಪದ್ಧತಿ ಈಗಲೂ ಮುಂದುವರೆದಿದೆ.
ಹೂವೀಳ್ಯ ಕಾರ್ಯಕ್ರಮ ಸಾಮಾನ್ಯವಾಗಿ "ನಾಂದಿ" ಕಾರ್ಯಕ್ರಮದ ಜೊತೆ-ಜೊತೆಯಲ್ಲಿ ನಡೆಯುತ್ತದೆ. "ನಾಂದಿ ಶ್ರಾದ್ಧ" (ಶ್ರದ್ದೇಯಿಂದ ಮಾಡುವ ಕೆಲಸವೇ ಶ್ರಾದ್ಧ) ವೈದಿಕ ರೀತಿಯಿಂದ ಮನೆತನದ ಹಿರಿಯರನ್ನು ಬರಮಾಡಿಕೊಂಡು ಸಮಾರಂಭಗಳು ಮುಗಿಯುವವರೆಗೂ ಅವರು ನಮ್ಮ ಜೊತೆಯಲ್ಲಿ ಇದ್ದಾರೆ ಎಂದು ಭಾವಿಸಲಾಗುತ್ತದೆ. ಇದೆ ರೀತಿ ಹೂವೀಳ್ಯ ಕಾರ್ಯಕ್ರಮದಲ್ಲಿ ನಮ್ಮ ಹಿಂದಿನ ತಲೆಮಾರಿನ ಸ್ತ್ರೀಯರು ಇಲ್ಲಿ ಬಂದಿರುವ ಸುವಾಸಿನಿಯರ ರೂಪದಲ್ಲಿ ಬಂದಿದ್ದಾರೆ ಎಂದು ಸತ್ಕರಿಸುತ್ತಾರೆ.
ಈ "ಹೂವು-ವೀಳ್ಯ" ಅಥವಾ "ಹೂವೀಳ್ಯ" ಕಾರ್ಯಕ್ರಮದಿಂದ ಒಂದು ಸಾಮಾಜಿಕ ಕೆಲಸವೂ ಗೊತ್ತಿಲ್ಲದಂತೆ ನಡೆಯುತ್ತದೆ. ಕಾರ್ಯಕ್ರಮಕ್ಕೆ ಅನೇಕ ಹೆಣ್ಣು ಮಕ್ಕಳು ಬೇರೆ ಬೇರೆ ಕಡೆಯಿಂದ ಬಂದಿರುತ್ತಾರೆ. ಅನೇಕರಿಗೆ ಪರಸ್ಪರ ಪರಿಚಯ ಇರುವುದಿಲ್ಲ. ಇದು ಸಮಾರಂಭಗಳ ಮೊದಲನೇ ಚಟುವಟಿಕೆ. ಮುಂದಿನ ಅನೇಕ ಚಟುವಟಿಕೆಗಳಲ್ಲಿ ಇವರೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ಹೂವೀಳ್ಯ ಕಾರ್ಯಕ್ರಮ ಇಂದಿನ ಮ್ಯಾನೇಜ್ಮೆಂಟ್ ಪದಾವಳಿಯಲ್ಲಿ ಹೇಳುವಂತೆ "ಐಸ್ ಬ್ರೇಕಿಂಗ್" ಮತ್ತು "ಇಂಟ್ರೊಡಕ್ಷನ್" ಕೆಲಸವನ್ನೂ ಮಾಡುತ್ತದೆ!
ಹೂವೀಳ್ಯ ಮುಖ್ಯವಾಗಿ ಮಹಿಳೆಯರ ಚಟುವಟಿಕೆ. ಪುರುಷರಿಗೆ? ಪುರುಷರೂ ಹೂವೀಳ್ಯವನ್ನು ಕುತೂಹಲದಿಂದ ಎದುರು ನೋಡುತ್ತಾರೆ. ಏಕೆ? ಅವರಿಗೆ ನಾಂದಿ ಕಾರ್ಯಕ್ರಮದಲ್ಲಿ ಸಿಕ್ಕುವುದು ಬರೀ ಹೊಗೆ ಮತ್ತು ಅದರಿಂದ ಕೆಮ್ಮು. ಹೂವೀಳ್ಯ ಹಾಗಲ್ಲ. ರವಿಕೆಯ ಕಣ, ಮಂಗಳದ್ರವ್ಯ ಇಲ್ಲದಿದ್ದರೂ ಪಾನಕ, ಕೋಸಂಬರಿಗಳು ಅವರಿಗೂ ಸಿಕ್ಕುತ್ತವೆ!
*****
ಇಲ್ಲಿಯವರೆಗೆ ಸಮಾರಂಭಗಳಿಗೆ ಆಮಂತ್ರಿಸುವುದನ್ನು ಮತ್ತು ಬಂದವರನ್ನು ಸ್ವಾಗತಿಸುವುದನ್ನು ನೋಡಿದೆವು. ನಮ್ಮ ಆಹ್ವಾನವನ್ನು ಮನ್ನಿಸಿ ಬಂದವರಿಗೆಲ್ಲ ಮುಂದಿನ ಚಟುವಟಿಕೆಗಳಲ್ಲಿ ಭಾಗವಹಿಸಲು ಸಮಯ ಕೊಡೋಣ.
ಸಮಾರಂಭಗಳು ಮುಗಿದ ಮೇಲೆ ಅವರಿಗೆ ಸತ್ಕಾರ ಮಾಡಿ ಬೀಳ್ಕೊಡುವುದೂ ಅಷ್ಟೇ ಮುಖ್ಯ. ಅಲ್ಲವೇ? ಅದರ ವಿಷಯಗಳನ್ನು ಇನ್ನೊಮ್ಮೆ ನೋಡೋಣ.
So interesting Sir, brought back so many memorable moments ,that is like a retrieved picture , hats off
ReplyDeleteVery interesting and informative !! Thank you.
ReplyDeleteಅದ್ಭುತ ಸರ್... ಪ್ರಸ್ತುತ ನನಗೆ ಬಹಳ ಮುಖ್ಯವಾದ ವಿಷಯ ತಿಳಿಸಿದ್ದೀರಿ. ಮಗಳ ಮದುವೆ ಗೆ ತಯಾರಿ ಗೆ ಮುನ್ನ ಒಳ್ಳೆ ಸಂಚಲನ ಮೂಡಿಸಿದ್ರಿ. ಧನ್ಯವಾದಗಳು..
ReplyDeleteಎಲ್ಲಾ ಕಾರ್ಯಕ್ರಮಗಳನ್ನು ನಡಿಸಿಕೊಂಡು ಬಂದಿದ್ದೇವೆ ಆದರೆ ಅದರ ಅರ್ಥ ಗಳು ಗೊತ್ತಿರಲಿಲ್ಲ , ನೀವು ತುಂಬಾ ಚೆನ್ನಾಗಿ ತಿಳಿಸಿದ್ದೀರಿ, ಅದರ ಜೊತೆಗೆ ನೀವು ಆ ಸಂಧರ್ಭ ಗಳಲ್ಲಿ ಆ ಆ ವ್ಯಕ್ತಿ ಗಳನ್ನು ಕರೆಯುವಾಗ ಹಾಡುವ ಹಾಡುಗಳು ಬರೆದಿರುವುದು ತುಂಬಾ ಚೆನ್ನಾಗಿದೆ, ಧನ್ಯವಾದಗಳು.
ReplyDeleteಸಮಾರಂಭಗಳಲ್ಲಿ ನಡೆಯುವ ಅನೇಕ ಪದ್ಧತಿಗಳ ಬಗ್ಗೆ ವಿವರವಾಗಿ ತಿಳಿಸಿದ್ದೀರಿ ಈಗ ನಾವು ಎಷ್ಟೋ ಕಾರ್ಯಕ್ರಮಗಳನ್ನು ಅರ್ಥ ತಿಳಿದುಕೊಳ್ಳದೆ ಮಾಡುತ್ತೇವ ನಿಮಗಿರುವ ಜ್ಞಾನ ಅದ್ಭುತ
ReplyDeleteFrstyjinvrequired for Hindus idyl understand exact purpose of our ritual practic s as we in normal course are not able to explain why we and look stupid when wears challenged
ReplyDeleteಸಂಪ್ರದಾಯ ಎಂದು ಆಚರಿಸುತ್ತ ಬಂದಿರುವ ಹಲವು ಆಚರಣೆಗಳನ್ನು ಅರ್ಥಪೂರ್ಣವಾಗಿ ಸೊಗಸಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು.
ReplyDeleteI got to know for the first time how the huvilya tradition started. Thanks.
ReplyDeleteHooveelya, the exact meaning I did not know. Nicely explained by Keshav.
ReplyDeleteUR……