"ಎಣ್ಣೆ-ಅರಿಶಿನದಿಂದ ಹೂ-ವೀಳ್ಯದವರೆಗೆ" ಎನ್ನುವ ಹಿಂದಿನ ಸಂಚಿಕೆಯಲ್ಲಿ (
ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ) ನಮ್ಮಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬಂಧು-ಭಾಂಧವರನ್ನು, ನೆಂಟರಿಷ್ಟರನ್ನು ಪ್ರೀತಿ-ವಿಶ್ವಾಸಗಳಿಂದ ಆಮಂತ್ರಿಸುವುದರಿಂದ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ವಾಗತಿಸುವವರೆಗೆ ಸ್ವಲ್ಪಮಟ್ಟಿಗೆ ನೋಡಿದ್ದಾಯಿತು. ಎಲ್ಲರ ಸ್ವಾಗತವಾದ ನಂತರ ಕ್ರಮವಾಗಿ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ಬಂದವರು ಎಲ್ಲ ಕಾಲಕ್ಕೆ ನಮ್ಮ ಒಡನೆ ಇರುವುದಿಲ್ಲ. ಎಲ್ಲ ಆಚರಣೆಯ ಸಂಭ್ರಮಗಳೂ ಮುಗಿದ ನಂತರ, ನಮ್ಮ ಆಹ್ವಾನವನ್ನು ಗೌರವಿಸಿ
ಬಂದವರನ್ನು ಬೀಳ್ಕೊಡುವುದರ ಬಗ್ಗೆ ಸ್ವಲ್ಪ ನೋಡೋಣ.
ಆಹ್ವಾನಿತರನ್ನು ಆದರದಿಂದ ಬರಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಅವರನ್ನು ಸತ್ಕರಿಸಿ ಗೌರವಯುತವಾಗಿ ಬೀಳ್ಕೊಡುವುದೂ ಸಹ ಅಷ್ಟೇ ಮುಖ್ಯ. ಅನೇಕ ವೇಳೆ ಬೇರೆ ಬೇರೆ ಕಾರಣಗಳಿಂದ ಉಂಟಾಗುವ ಗಡಿಬಿಡಿಯಿಂದ ಮತ್ತು ಕಾರ್ಯಕ್ರಮಗಳನ್ನು ನಿಭಾಯಿಸುವುದರಿಂದ ಆಗುವ ಆಯಾಸದಿಂದ ಈ ಬೀಳ್ಕೊಡುವಿಕೆ ಸ್ವಲ್ಪ ಮಟ್ಟಿಗೆ ಹಿಂದೆ ಉಳಿಯುವುದು ಸಾಮಾನ್ಯ. ಇದಲ್ಲದೇ ಬಂದ ಅತಿಥಿ-ಅಭ್ಯಾಗತರೂ ಸಹ ಹೊರಡುವ ಆತುರದಲ್ಲಿ ಇರುವುದರಿಂದ ಈ ಮುಖ್ಯವಾದ ಅಂಗವು ಸರಿಯಾಗಿ ನಡೆಯುವುದಿಲ್ಲ.
ಸಮಾರಂಭಗಳಿಗೆ ಬರುವ ಆಹ್ವಾನಿತರು ಸಂದರ್ಭಕ್ಕೆ ತಕ್ಕಂತೆ ಉಡುಗೊರೆಗಳನ್ನು ಸಾಮಾನ್ಯವಾಗಿ ತಂದಿರುತ್ತಾರೆ. ಹಾಗೆಯೇ, ಕಾರ್ಯಕ್ರಮಗಳನ್ನು ನಡೆಸುವವರು ತಮ್ಮ ಕಡೆಯಿಂದ ಯುಕ್ತವಾದ ನೆನಪಿನ ಕಾಣಿಕೆಗಳನ್ನು ಕೊಡುವ ಸಂಪ್ರದಾಯವೂ ಇದೆ. ಆಹ್ವಾನ ನೀಡುವ ವೇಳೆಯಲ್ಲಿಯೇ ಈ ವಿಷಯವನ್ನು ಯೋಚಿಸಿ ಯೋಗ್ಯವಾದ ಕೊಡುಗೆಗಳನ್ನು ತಂದು ಇಟ್ಟುಕೊಂಡಿರುವುದು ಪದ್ಧತಿ. ಅನೇಕ ವೇಳೆ ಬಂದವರು ಹೊರಡುವ ವೇಳೆ ಇವುಗಳನ್ನು ಅವರಿಗೆ ಕೊಡಲಾಗದೇ, "ಅಯ್ಯೋ, ಅವರಿಗೆ ಕೊಡುವುದು ತಪ್ಪೇ ಹೋಯಿತು" ಎಂದು ಪರಿತಪಿಸುವುದೂ ಉಂಟು. ನಂತರ ಮತ್ಯಾರದೋ ಮುಖಾಂತರ ಅವನ್ನು ತಲುಪಿಸಲು ಹೆಣಗಾಡುವುದೂ ಉಂಟು. ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಅವರಿಗೆ ಹೊರಡುವ ಆತುರ ಮತ್ತು ನಮಗೆ ಬೇರೆ ಬೇರೆ ಕಾರ್ಯಗೌರವದಿಂದ ಬಿಡದಿಯ ಕೋಣೆಯಲ್ಲಿ ಕೂಡಿಸಿಯೋ ಅಥವಾ ನಿಲ್ಲಿಸಿಯೋ ಉಡುಗೊರೆಗಳನ್ನು ಕೊಡುವುದೂ ಉಂಟು. ಇನ್ನೊಂದು ಮುಖ್ಯ ವಿಚಾರ. ನಾವು ಉಡುಗೊರೆ ಕೊಡುವುದನ್ನು ಅವರು ಏನಾದರೂ ತಂದಿದ್ದರೋ ಅಥವಾ ಇಲ್ಲವೋ, ತಂದಿದ್ದರೆ ಅದರ ಮೌಲ್ಯವೇನು ಎನ್ನುವುದಕ್ಕೆ ತಳುಕು ಹಾಕಬೇಕಾಗಿಲ್ಲ. ನಮ್ಮ ಪ್ರೀತಿ-ವಿಸ್ವಾಸ ಮತ್ತು ಕರ್ತವ್ಯ ನಮ್ಮದು ಎನ್ನುವ ಪರಿಜ್ಞಾನವಿರಬೇಕು
*****
ಹಿಂದಿನ ಸಮಯಗಳಲ್ಲಿ ಎಲ್ಲ ಹಂತಗಳ ಸಂಭ್ರಮ ಮುಗಿದ ಮೇಲೆ ಕೊನೆಗೆ ನಡೆಯುವ ಈ ಬೀಳ್ಕೊಡುಗೆ ಕಾರ್ಯಕ್ರಮವನ್ನು ಒಂದು ಸಭೆ ನಡೆಸಿ ಅಲ್ಲಿ ಸಾಂಗವಾಗಿ ನೆರವೇರಿಸುತ್ತಿದ್ದರು. ಇಂತಹ ಸಭೆಗಳಿಗೆ ಒಂದು ಘನತೆ ಮತ್ತು ಗೌರವಗಳು ಇದ್ದವು. ಆ ಸಭೆಗಳಲ್ಲಿ ಬಂದವರ ಯೋಗ್ಯತಾನುಸಾರ ಕ್ರಮವಾಗಿ ಸತ್ಕರಿಸಿ ನಂತರ ಬೀಳ್ಕೊಡುತ್ತಿದ್ದರು. ಸಮಾರಂಭಗಳಿಗೆ ಬಂದ ಎಲ್ಲರೂ ಈ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಜ್ನ್ಯಾನವೃದ್ಧರು ಮತ್ತು ವಯೋವೃದ್ಧರಿಗೆ ವಿಶೇಷವಾದ ಸತ್ಕಾರಗಳು ನಡೆಯುತ್ತಿದ್ದವು. ನಂತರ ಇತರ ಎಲ್ಲರಿಗೂ ಅವರ ಯೋಗ್ಯತೆಗೆ ತಕ್ಕಂತೆ ಸತ್ಕರಿಸಿ ಬೀಳ್ಕೊಡುವುದು ನಡೆಯುತ್ತಿತ್ತು. ಹೀಗೆ ಸತ್ಕರಿಸುವಾಗ ಎಲ್ಲರಿಗೂ ಮೊದಲಿಗೆ ಯಾರಿಗೆ ಸತ್ಕಾರ ಮಾಡಬೇಕು? ಎನ್ನುವ ಪ್ರಶ್ನೆ ಬರುತ್ತಿತ್ತು. ಅನೇಕ ವೇಳೆ ಈ ಪ್ರಶ್ನೆಗೆ ಎಲ್ಲರಿಗೂ ಸಮ್ಮತವಾದ ಉತ್ತರ ಸುಲಭವಾಗಿ ಸಿಗುತ್ತಿತ್ತು. ಆಗ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಅನೇಕ ಗುರು-ಹಿರಿಯರಿದ್ದಾಗ ಈ ಸಮಸ್ಯೆ ಸ್ವಲ್ಪ ಕಠಿಣವಾಗುತ್ತಿತ್ತು. ಆಗ ಕಾರ್ಯಕ್ರಮ ನಡೆಸುವ ಯಜಮಾನನು ಸಭೆಯಲ್ಲಿರುವ ತನ್ನ ಕುಟುಂಬದ ಹಿರಿಯರನ್ನೋ ಅಥವಾ ಸಭೆಯ ಸದಸ್ಯರನ್ನೋ ಕೇಳಿ ನಂತರ ಸತ್ಕಾರ ಪ್ರಾರಂಭ ಮಾಡುತ್ತಿದ್ದನು. ಹೀಗೆ ಮಾಡುತ್ತಿದ್ದ ಮೊದಲನೇ ಸತ್ಕಾರವೇ "ಆಗ್ರ ಪೂಜೆ" ಎಂದು ಕರೆಸಿಕೊಳ್ಳುತ್ತಿತ್ತು.
"ಆಗ್ರ ಪೂಜೆ" ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಪಾಂಡವರ "ರಾಜಸೂಯ ಯಾಗ" ಮುಗಿದ ನಂತರ ನಡೆದ ಶ್ರೀ ಕೃಷ್ಣನ ಆಗ್ರ ಪೂಜೆ ಮತ್ತು ಶಿಶುಪಾಲ ವಧೆಯ ವೃತ್ತಾಂತ. ರಾಜಸೂಯ ಯಾಗಕ್ಕೆ ತಮ್ಮ ಆಹ್ವಾನವನ್ನು ಗೌರವಿಸಿ ಬಂದ ಎಲ್ಲ ಅತಿಥಿಗಳಿಗೂ ಯಾಗ ಮುಗಿದ ನಂತರ ನಡೆದ ಸಭೆಯಲ್ಲಿ ಸತ್ಕಾರ ನಡೆಸುವಾಗ ಆದ ಪ್ರಸಂಗಗಳ ವಿವರಗಳೇ ಈ ಆಗ್ರ ಪೂಜೆಗೆ ಸ್ಥಳವಾಯಿತು. ಈ ಹೆಸರಾಂತ ಆಗ್ರ ಪೂಜೆಯ ವಿಷಯವನ್ನಷ್ಟು ನೋಡಿ ಮುಂದೆ ಹೋಗೋಣ.
*****
ಕೌರವ-ಪಾಂಡವರು ಒಟ್ಟಿಗೆ ಇರಲು ಸಾಧ್ಯವಾಗುವುದಿಲ್ಲವೆಂದು ಅರಿತ ಹಿರಿಯರು ಹಸ್ತಿನಾಪುರ ಸಾಮ್ರಾಜ್ಯವನ್ನು ಎರಡು ಭಾಗಮಾಡಿ ಧರ್ಮರಾಯನಿಗೆ ಒಂದು ಭಾಗ ಕೊಟ್ಟರು. ತಮ್ಮಂದಿರು ಮತ್ತು ದ್ರೌಪಾದಿಯ ಒಡಗೂಡಿ ಶ್ರೀ ಕೃಷ್ಣನ ಸಹಾಯದಿಂದ ಇಂದ್ರಪ್ರಸ್ಥ ನಗರವನ್ನು ಕಟ್ಟಿ, ಅದನ್ನು ರಾಜಧಾನಿ ಮಾಡಿಕೊಂಡು ಧರ್ಮರಾಯನು ರಾಜ್ಯಭಾರ ನಡೆಸುತ್ತಿದ್ದ ಕಾಲ. ಒಂದು ದಿನ ಅವನ ಪಟ್ಟಣಕ್ಕೆ ದೇವರ್ಷಿ ನಾರದರು ಬಂದರು. "ಎಲ್ಲಿಂದ ಬಂದಿರಿ?" ಎಂಬ ಧರ್ಮರಾಯನ ಪ್ರಶ್ನೆಗೆ ಉತ್ತರವಾಗಿ ನಾರದರು ದೇವಲೋಕದಿಂದ ಬಂದದ್ದಾಗಿ ಹೇಳಿ ದೇವೇಂದ್ರನ ಒಡ್ಡೋಲಗದ ಪರಿಯನ್ನೂ ಮತ್ತು ಅಲ್ಲಿ ಮಂಡಿಸಿದ್ದ ರಾಜಶ್ರೇಷ್ಠರ ವಿವರವನ್ನೂ ಕೊಡುತ್ತಾರೆ. ಅಲ್ಲಿ ನೆರೆದಿದ್ದ ರಾಜರ ಹೆಸರುಗಳಲ್ಲಿ ತನ್ನ ತಂದೆಯಾದ ಪಾಂಡು ಮಹಾರಾಜನ ಹೆಸರು ಇಲ್ಲದುದನ್ನು ಕೇಳಿ ಯುಧಿಷ್ಠಿರನು ಅದಕ್ಕೆ ಕಾರಣ ಕೇಳುತ್ತಾನೆ. ದೇವರ್ಷಿ ನಾರದರು "ನಿನ್ನ ತಂದೆಯು ಆ ರಾಜಶ್ರೇಷ್ಠರ ಸಾಲಿನಲ್ಲಿ ಕುಳಿತುಕೊಳ್ಳುವ ಯೋಗ್ಯತೆ ಬರಬೇಕಾದರೆ ನೀನು ರಾಜಸೂಯ ಯಾಗವನ್ನು ಮಾಡಿ ಅದರ ಫಲವನ್ನು ನಿನ್ನ ತಂದೆಗೆ ಕೊಡಬೇಕು" ಎಂದು ಹೇಳುತ್ತಾರೆ. ಧರ್ಮರಾಯನು ರಾಜಸೂಯ ಯಾಗವನ್ನು ಮಾಡುವುದಾಗಿ ತೀರ್ಮಾನಿಸುತ್ತಾನೆ.
ರಾಜಸೂಯ ಯಾಗ ನಡೆಸುವುದಾಗಿ ತೀರ್ಮಾನ ಮಾಡಿದ್ದೇನೋ ಆಯಿತು. ಆದರೆ ಅದಕ್ಕೆ ಅಪಾರ ಧನ ಸಂಪದ ಬೇಕು. ಆ ಸಮಾಯದಲ್ಲಿ ಇದ್ದ ಎಲ್ಲ ರಾಜ, ಮಹಾರಾಜರು ತನ್ನನ್ನು ಚಕ್ರವರ್ತಿ ಎಂದು ಒಪ್ಪಿಕೊಳ್ಳಬೇಕು. ಯಾಗ ನಡೆಸಲು ಅನೇಕ ಸಾಧನ-ಸಲಕರಣೆಗಳು ಕೂಡಿಸಬೇಕು. ಆಹ್ವಾನಿತರು ಸಾಮಾನ್ಯರಲ್ಲ. ಎಲ್ಲರೂ ರಾಜ, ಮಹಾರಾಜರು ಅಥವಾ ಋಷಿಪುಂಗವರು. ಪ್ರಜಾಜನರೂ ಬಹಳ ಇರುವರು. ಜರಾಸಂಧಾದಿಗಳು ಇರುವಾಗ ಇಂತಹ ಯಾಗ ನಡೆಸುವುದು ಅಸಾಧ್ಯ. ಈಗ ಏನು ಮಾಡುವುದು? ಈ ರೀತಿಯ ಚಿoತೆಗಳಿಂದ ಕಂಗೆಟ್ಟ ಯುಧಿಷ್ಠಿರನು ಕುಲದ ಹಿರಿಯರಾದ ಭೀಷ್ಮ ಪಿತಾಮಹರೊಡನೆ ತನ್ನ ಚಿಂತೆಯನ್ನು ಹೇಳಿಕೊಳ್ಳುತ್ತಾನೆ.
ಆಗ ಹಿರಿಯರಾದ ಭೀಷ್ಮರು ನೀಡಿದ ಸಮಾಧಾನದ ಮಾತು ಮಹಾಕವಿ ಕುಮಾರವ್ಯಾಸನ "ಕರ್ಣಾಟ ಭಾರತ ಕಥಾಮಂಜರಿ" ಕೃತಿಯ ಸಭಾಪರ್ವದ ಎಂಟನೇ ಸಂಧಿಯಲ್ಲಿ ಹೀಗಿದೆ:
ಚಿಂತೆಯೆಕೈ ಕೃಷ್ಣ ನಾರೆಂ
ದೆಂತು ಕಂಡೆ ಚತುರ್ದಶಾರ್ಥದ
ತಂತುರೂಪನು ತಾನೇಯೆನ್ನದೆ ಶ್ರುತಿವಚನ
ತಂತುವಿನ ಪಟ ಮೃತ್ತಿಕೆಯ ಘಟ
ದಂತೆ ಜಗವೀತನಲಿ ತೋರ್ಕು ಮು
ರಾಂತಕನ ಸುಯ್ಧಾನ ನಿನಗಿರಲೆಂಜಲೇಕೆಂದ
"ಏಕೆ ಚಿಂತೆ ಮಾಡುತ್ತೀಯೆ? ಶ್ರೀಕೃಷ್ಣನು ಯಾರೆಂದು ತಿಳಿದಿದ್ದೀಯೆ? ದಾರಗಳಿಂದ ನೇಯ್ದು ಮಾಡಿರುವ ಗೋಡೆಯಮೇಲಿರುವ ಚಿತ್ರದಂತೆ, ಮಣ್ಣಿನಿಂದ ಮಾಡಿದ ಮಡಕೆಯಂತೆ, ಇಡೀ ಹದಿನಾಲ್ಕು ಲೋಕಗಳ ಪ್ರಪಂಚವೇ ಅವನಲ್ಲಿದೆ ಎಂದು ವೇದಾದಿ ಗ್ರಂಥಗಳಲ್ಲಿ ಹೇಳಿಲ್ಲವೇ? ಇಂತಹ ಅಸುರಾರಿಯ ಬೆಂಬಲ ನಿನಗಿರುವಾಗ ಹೆದರಿಕೆಯೇಕೆ?" ಎನ್ನುತ್ತಾರೆ ಭೀಷ್ಮರು. ಶ್ರೀಕೃಷ್ಣನ ಒತ್ತಾಸೆ ನಿನಗಿರುವಾಗ ಭಯವೇನು? ಅವನನ್ನು ಜೊತೆಗಿಟ್ಟುಕೊಂಡು ಕೆಲಸ ಪ್ರಾರಂಭಿಸು. ಮುಂದಿನದನ್ನು ಅವನೇ ನಡೆಸುತ್ತಾನೆ ಎನ್ನುವುದು ಇದರ ಭಾವವು.
ಭೀಷ್ಮರು ಕೊಟ್ಟಿರುವ "ತಂತುವಿನ ಪಟ" ಮತ್ತು "ಮೃತ್ತಿಕೆಯ ಘಟ" ಈ ದೃಷ್ಟಾಂತಗಳ ಒಳ ಅರ್ಥವೇನು? ಗೋಡೆಯ ಮೇಲೆ ನೇತು ಹಾಕಿದ ದಾರಗಳಿಂದ ನೇಯ್ದ ಪಟವನ್ನು ನೋಡೋಣ. ನಮಗೆ ಪಟ ಮತ್ತು ಅದರ ಕಸೂತಿಯ ಚಿತ್ರದ ಸೌಂದರ್ಯ ಮಾತ್ರ ಕಾಣುತ್ತದೆ. ತಂತು ಅಂದರೆ ದಾರ. (ಮಾಂಗಲ್ಯo ತಂತುನಾನೇನ ..... ಎಲ್ಲರಿಗೂ ಗೊತ್ತು. ಮಾಂಗಲ್ಯವನ್ನು ಈ ದಾರದ ಮೂಲಕ ನಿನ್ನ ಕತ್ತಿನಲ್ಲಿ ಕಟ್ಟುತ್ತೇನೆ ಮುಂತಾಗಿ ವರನು ವಧುವಿಗೆ ವಿವಾಹದ ಮಾಂಗಲ್ಯ ಧಾರಣೆಯ ಸಮಯದಲ್ಲಿ ಹೇಳುತ್ತಾನೆ. ಅದು ತಂತುನಾ ಅನೇನ ಎಂದು. ಅಂದರೆ ಈ ದಾರದಿಂದ ಎಂದು. ಟಿವಿ ಸೀರಿಯಲ್ಗಳಲ್ಲಿ ತೋರಿಸುವಂತೆ ಮಾಂಗಲ್ಯo ತಂತು ನಾನೇನ ಅಲ್ಲ). ಆ ಪಟ ಅನೇಕ ದಾರಗಳನ್ನು ನೇಯ್ದು ಮಾಡಿರುವುದು. ಆದರೆ ಆ ದಾರಗಳು ಕಾಣವು. ಬಹಳ ಹತ್ತಿರ ಹೋಗಿ ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಕಾಣುತ್ತದೆ. ಆದರೆ ನಮಗೆ ಕಾಣದಿದ್ದರೂ ಅದು ಪಟದ ಒಳಗೆ ಇದ್ದೇ ಇದೆ. ಅಂತೆಯೇ ಮಣ್ಣಿನ ಮಡಕೆ. ನಮಗೆ ಇಡೀ ಮಡಕೆ ಒಂದು ಪದಾರ್ಥವಾಗಿ ಕಾಣುತ್ತದೆ. ಅನೇಕ ಮಣ್ಣಿನ ಕಣಗಳಿಂದ ಮಡಿಕೆ ಮಾಡಿದ್ದರೂ ನಮಗೆ ಅವು ಭಾಸವಾಗುವುದಿಲ್ಲ. ನಮಗೆ ಅವುಗಳ ಇರುವು ಅರಿವಿಗೆ ಬರುವುದಿಲ್ಲ ಅಂದ ಮಾತ್ರಕ್ಕೆ ಅವು ಇಲ್ಲದಿಲ್ಲ. ಅದೇ ರೀತಿ ಶ್ರೀಕೃಷ್ಣನು ನಮಗೆ ಒಬ್ಬ ವ್ಯಕ್ತಿಯಾಗಿ ಕಾಣುತ್ತಾನೆ. ಆದರೆ ಅವನಲ್ಲಿ ಹದಿನಾಲ್ಕು ಲೋಕಗಳೂ ತುಂಬಿಕೊಂಡಿವೆ. ಅವನು ನಮ್ಮ ಮುಂದೆ ಸುಳಿದಾಡುವಾಗ ಹದಿನಾಲ್ಕು ಲೋಕಗಳು ಕಾಣದಿದ್ದರೂ ಅವು ಅವನಲ್ಲಿ ಇದ್ದೆ ಇವೆ! ವೇದಾದಿ ಗ್ರಂಥಗಳು ಇವನ್ನೇ ಸಾರಿ ಸಾರಿ ಹೇಳುತ್ತವೆ. ಇದೇ ಈ ದೃಷ್ಟಾಂತಗಳ ತಾತ್ಪರ್ಯ.
ಸಮಕಾಲೀನ ಉದಾಹರಣೆ ಕೊಡುವುದಾದರೆ ಒಂದು ಬೋಯಿಂಗ್ ವಿಮಾನವನ್ನೇ ತೆಗೆದುಕೊಳ್ಳೋಣ. ಅದರಲ್ಲಿ ಆರು ಮಿಲಿಯನ್ ಗಿಂತ ಹೆಚ್ಚು (ಅರವತ್ತು ಲಕ್ಷಕ್ಕಿಂತ ಜಾಸ್ತಿ ) ಬಿಡಿಭಾಗಗಳಿವೆಯಂತೆ. ಆದರೆ ನಮಗೆ ಒಂದು ವಿಮಾನ ಹಾರುವುದು, ಕೆಳಗೆ ಇಳಿವುದು, ಬಂದು ನಿಲ್ಲುವುದು ಕಾಣುತ್ತದೆ. ಆದರೆ ಈ ಎಲ್ಲ ಕ್ರಿಯೆಗಳು ನಡೆಯುವಾಗಲೂ ಈ ಅರವತ್ತು ಲಕ್ಷಕ್ಕೂ ಹೆಚ್ಚು ಬಿಡಿ ಭಾಗಗಳೂ ಹಾರುತ್ತವೆ, ಕೆಳಗೆ ಇಳಿಯುತ್ತವೆ ಮತ್ತು ಬಂದು ನಿಲ್ಲುತ್ತವೆ! ನಮಗೆ ಭಾಸವಾಗಲಿಲ್ಲ ಎಂದ ಮಾತ್ರಕ್ಕೆ ಅವು ಇಲ್ಲ ಎಂದಲ್ಲ.
ಭಾರವೂ ಅವನೇ; ಭಾರ ಹೊತ್ತವನೂ ಅವನೇ; ಭಾರ ಹೊತ್ತವನಿಗೆ ಆಧಾರವೂ ಅವನೇ. ಅದು ಹೇಗೆ? "ತಂತುರೂಪನು" ಎನ್ನುವುದಕ್ಕೆ ಇನ್ನೊಂದು ವಿವರಣೆಯೂ ಉಂಟು. ನಲವತ್ತು ಐವತ್ತು ಮುತ್ತುಗಳಿರುವ ಒಂದು ಸರವನ್ನೇ ತೆಗೆದುಕೊಳ್ಳಿ. ಅಷ್ಟು ಸಂಖ್ಯೆಯ ಮುತ್ತುಗಳು ಸರದಲ್ಲಿ ಇವೆ. ಆದರೆ ಅವೆಲ್ಲವನ್ನೂ ಒಟ್ಟುಗೂಡಿಸಿ ಸರ ಮಾಡಿ ಹಿಡಿದಿಟ್ಟಿರುವುದು ಅವುಗಳ ಒಳಗಿನ ದಾರವೇ! ಆದರೆ ಸರ ಕಂಡಾಗ ನಮ್ಮ ಗಮನ ಆ ಮುತ್ತುಗಳು ಮತ್ತು ಅವುಗಳ ಸೌಂದರ್ಯ, ಆ ಸರದ ಒಟ್ಟಾರೆ ಪರಿಣಾಮದ ಮೇಲೆ ಹೋಗುತ್ತದೆಯೇ ವಿನಃ ಅವುಗಳಿಗೆ ಆಧಾರವಾಗಿ ಹಿಡಿದಿಟ್ಟಿರುವ ದಾರದ ಮೇಲಲ್ಲ.
ಇದೇ ಕಾರಣಕ್ಕೆ ಮುಂದೆ, ರಾಜಸೂಯ ಯಾಗ ಮುಗಿದ ನಂತರ ಎಲ್ಲರನ್ನೂ ಬೀಳ್ಕೊಡುವ ಮೊದಲು ನಡೆಸುವ ಸತ್ಕಾರದ ಸಭೆಯ "ಆಗ್ರ ಪೂಜೆ"ಗೆ ಶ್ರೀಕೃಷ್ಣನೇ ಸರಿಯಾದ ವ್ಯಕ್ತಿ ಎಂದು ಭೀಷ್ಮರು ಹೇಳುತ್ತಾರೆ. ಮುಂದಿನ ನಡಾವಳಿಗಳು ಮತ್ತು ಶಿಶುಪಾಲನ ವಧೆ ಎಲ್ಲರಿಗೂ ತಿಳಿದ ವಿಷಯ.
ಸಭೆಯಲ್ಲಿ ಅನೇಕ ಮಹನೀಯರು ಇದ್ದರೂ ಶ್ರೀಕೃಷ್ಣನನ್ನೇ ಏಕೆ ಸೂಚಿಸಿದರು ಅನ್ನುವುದನ್ನು ಇನ್ನೂ ವಿಸ್ತಾರವಾಗಿ ಮುಂದಿನ ಸಂಚಿಕೆಯಲ್ಲಿ ನೋಡೋಣ.
*****
ನಮ್ಮ ಸಮಾರಂಭಕ್ಕೆ ಬಂದ ಅತಿಥಿ-ಅಭ್ಯಾಗತರಿಗೆ ಯಥೋಚಿತ ಸತ್ಕಾರ ಕೂಡ ಮಾಡಿದ್ದಾಯಿತು. ಇನ್ನು ಬೀಳ್ಕೊಡುಗೆಯ ವಿಚಾರ.
ನಮಗೆ ಅರಿವಿಲ್ಲದೆಯೇ ನಾವು ಈ ಬೀಳ್ಕೊಡುಗೆಯನ್ನು ಪ್ರತಿ ದಿನವೂ ಮಾಡುತ್ತಿರುತ್ತೇವೆ. ಮನೆಗೆ ಬಂದವರನ್ನು ಅವರು ಹೊರಟಾಗ ಅವರ ಜೊತೆ ಬಾಗಿಲವರೆಗೋ, ಹೆಬ್ಬಾಗಿಲು ದಾಟಿ ಹತ್ತು ಹೆಜ್ಜೆ ಜೊತೆಗೆ ಹೋಗಿ ಗೌರವಪೂರ್ವಕ ಕಳಿಸುತ್ತೇವೆ. ಈಗಿನ ಸಮಯದಲ್ಲಿ ಅವರ ವಾಹನದ ಬಳಿ ಹೋಗಿ ನಿಲ್ಲುತ್ತೇವೆ. ಬಂದ ವ್ಯಕ್ತಿಗಳು ನಮಗೆ ಅತಿ ಮುಖ್ಯವಾದರೆ ರೈಲು ನಿಲ್ದಾಣಕ್ಕೋ ಅಥವಾ ವಿಮಾನ ನಿಲ್ದಾಣಕ್ಕೋ ಅವರ ಜೊತೆಯಲ್ಲಿ ಹೋಗಿ ಕಳಿಸಿ ಹಿಂದಿರುಗುತ್ತೇವೆ. ಇದು ಅವರಿಗೆ ನಾವು ಕೊಡುವ ಹೆಚ್ಚಿನ ಗೌರವ.
ನಮ್ಮ ಹಿರಿಯರು ಈ ಬೀಳ್ಕೊಡಿಗೆಯ ವಿಚಾರದಲ್ಲಿ ಇನ್ನೂ ಒಂದು ಕಿವಿಮಾತು ಹೇಳುತ್ತಿದ್ದರು. ಕೊಡುವ ಉಡುಗೊರೆ ತೆಗೆದುಕೊಳ್ಳುವವರಿಗೆ ಸಂತೋಷ ತರಬೇಕೇ ಹೊರತು ಅದೇ ಒಂದು ಹೊರೆಯಾಗಬಾರದು. ಹೊರಗೆ ಹೋದ ಮೇಲೆ "ಅಯ್ಯೋ, ಇದನ್ನು ಯಾಕೆ ಕೊಟ್ಟರು? ಇದನ್ನು ತೆಗೆದುಕೊಂಡು ಹೋಗುವುದು ಹೇಗೆ?" ಎಂದು ಅವರು ಯೋಚಿಸುವಂತೆ ಆಗಬಾರದು. ಅವರ ಸ್ಥಾನ ತಲುಪಿದ ಮೇಲೆ ಆ ಪದಾರ್ಥ ಅವರಿಗೆ ಉಪಯೋಗಿ ಆಗಬೇಕೆ ವಿನಃ "ಇದನ್ನು ಏನು ಮಾಡುವುದು?" ಎನ್ನುವ ಚಿಂತೆಗೆ ಕಾರಣ ಆಗಬಾರದು. ಭಾರವಾದ ಪದಾರ್ಥಗಳನ್ನು ಕೊಟ್ಟಾಗ (ಉದಾಹರಣೆಗೆ ಶಯ್ಯಾದಾನ ಅಥವಾ ಹಾಸಿಗೆಗಳ ದಾನ) ಅವನ್ನು ನಾವೇ ಅವರ ಸ್ಥಾನಕ್ಕೆ ತಲುಪಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ವಾಹನದ ವೆಚ್ಚವನ್ನೂ ನಮ್ಮ ಹಿರಿಯರು ನಮ್ಮಿಂದ ಕೊಡಿಸುತ್ತಿದ್ದುದನ್ನು ಇಲ್ಲಿ ನೆನೆಯಬಹುದು.
*****
ಹೀಗೆ ನಮ್ಮ ಸಮಾರಂಭಗಳಿಗೆ ನೆಂಟರಿಷ್ಟರನ್ನು, ಸ್ನೇಹಿತರು-ಹಿತೈಷಿಗಳನ್ನು ಆಮಂತ್ರಿಸುವುದು, ಸ್ವಾಗತಿಸುವುದು, ಸತ್ಕರಿಸುವುದು, ಉಪಚರಿಸುವುದು ಮತ್ತು ಅಂತಿಮವಾಗಿ ಬೀಳ್ಕೊಡುವುದು, ಈ ಎಲ್ಲ ಹಂತಗಳಲ್ಲೂ ಅನೇಕ ಸೂಕ್ಷ್ಮ ಸಂಗತಿಗಳಿರುತ್ತವೆ. ಇವುಗಳಲ್ಲಿ ಕೆಲವನ್ನು ನಾವು ಈಗಲೂ ನಮಗರಿವಿಲ್ಲದಂತೆ ನಡೆಸುತ್ತಿದ್ದೇವೆ. ಕೆಲವನ್ನು ಬಿಟ್ಟಿದ್ದೇವೆ!
ಅತ್ಯದ್ಭುತ ಲೇಖಕ ಶ್ರೀ ಕೇಶವಮುರ್ತಿ ಯವರಿಗೆ ನಮಸ್ಕಾರ.
ReplyDeleteಶ್ರೀ ಕೃಷ್ಣ ನ ಅಗ್ರ ಪೂಜೆ ಅರ್ಹತೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇನ್ನಷ್ಟು ಜಾಸ್ತಿಯಾಗಿದೆ
ಲೇಖನ ಬಹಳ ಚೆನ್ನಾಗಿದೆ🙏🙏
Deleteಸರ್, ಅಗ್ರಪೂಜೆಯ ಬಗ್ಗೆ ಸವಿಸ್ತಾರ ನಿರೂಪಣೆ ಬಹಳ ಸೊಗಸಾಗಿದೆ. ಕುಮಾರವ್ಯಾಸರ ಪದ್ಯದ ಸಾಲುಗಳ ಅರ್ಥ ನಿಮ್ಮ ವಿವರಣೆಯಿಲ್ಲದೆ ನನಗೆ ತಿಳಿಯುತ್ತಿರಲಿಲ್ಲ . ಶ್ರೀ ಕೃಷ್ಣನ ಬಗ್ಗೆಯಂತೂ ಎಷ್ಟು ಕೇಳಿದರೂ ಸಾಲದೆನಿಸುತ್ತದೆ. Eagerly waiting for your next blog post. Thanx a million for sharing these jewels with us Keshav sir. - ಭಾನುಮತಿ
ReplyDeleteSuperb, enlightening article. Thank you very much sir
ReplyDeleteಧನ್ಯವಾದಗಳು ಕೇಶವ್ ಮೂರ್ತಿಗಳೇ ಕುಮಾರವ್ಯಾಸನ ಸಭಾ ಪರ್ವತ ಪದ್ಯದ ನನ್ನ ಅನುಮಾನಗಳಿಗೆ ತುಂಬಾ ಸೂಕ್ತವಾಗಿ ಸುಲಲಿತವಾಗಿ ಅರ್ಥ ವಿವರಣೆ ನೀಡಿದ್ದೀರಿ. ಅಲ್ಲದೆ ಸಮಾರಂಭಗಳಲ್ಲಿ ನಾವು ಕೊಡುವ ಉಡುಗೊರೆಗಳ ಮಹತ್ವವನ್ನು ಅರ್ಥ ಮಾಡಿಸಿದ್ದೀರಿ ಬಹಳ ಧನ್ಯವಾದಗಳು
ReplyDeleteHow true are these in our real life
ReplyDelete1. ಅವನು ನಮ್ಮ ಮುಂದೆ ಸುಳಿದಾಡುವಾಗ ಹದಿನಾಲ್ಕು ಲೋಕಗಳು ಕಾಣದಿದ್ದರೂ ಅವು ಅವನಲ್ಲಿ ಇದ್ದೆ ಇವೆ! ವೇದಾದಿ ಗ್ರಂಥಗಳು ಇವನ್ನೇ ಸಾರಿ ಸಾರಿ ಹೇಳುತ್ತವೆ
2. ಸರ ಕಂಡಾಗ ನಮ್ಮ ಗಮನ ಆ ಮುತ್ತುಗಳು ಮತ್ತು ಅವುಗಳ ಸೌಂದರ್ಯ, ಆ ಸರದ ಒಟ್ಟಾರೆ ಪರಿಣಾಮದ ಮೇಲೆ ಹೋಗುತ್ತದೆಯೇ ವಿನಃ ಅವುಗಳಿಗೆ ಆಧಾರವಾಗಿ ಹಿಡಿದಿಟ್ಟಿರುವ ದಾರದ ಮೇಲಲ್ಲ
A little similarity by Keets "Heard memories are sweet but those unheard are sweeter"
Murthiugale, the entire writeup in both of these two parts(next to come !) are very true and inspiring article. Thanks
Brilliant as usual and the way many things are connected to make it clearly understandable to everyone is your trademark which I have seen in most of the topics chosen for the blog.
ReplyDeleteತುಂಬಾ ಚೆನ್ನಾಗಿದೆ, ವಿಷಯ ಗಳನ್ನು ಸುಲಭವಾಗಿ ಎಲ್ಲರಿಗೂ ಅರ್ಥವಾಗುವಂತೆ ಬೇರೆ ಒಂದಕ್ಕೆ ಹೋಲಿಸಿ ವಿವರಿಸುವ ನಿಮ್ಮ ಶ್ಶೆಲಿ ನಾನು ತುಂಬಾ ಮೆಚ್ಚುತ್ತೇನೆ
ReplyDeleteI thoroughly enjoyed reading this article. Many things I was not aware of. NR……
ReplyDelete