Showing posts with label Narada. Show all posts
Showing posts with label Narada. Show all posts

Thursday, May 15, 2025

ಸುಗುಣೆಯರು ಹದಿನಾರುಸಾವಿರ


ನಾವು ನಮ್ಮ ನಮ್ಮ ಅನುಭವಗಳಲ್ಲಿ ಕಂಡಂತೆ, ಪ್ರಪಂಚದಲ್ಲಿ ಸಂಬಂಧಗಳು ಬಹಳ ವಿಚಿತ್ರವಾದವು. ಮನುಷ್ಯ-ಮನುಷ್ಯರುಗಳ ಸಂಬಂಧಗಳೇ ಅನೇಕ ವೇಳೆ ನಮಗೆ ಅರ್ಥವಾಗುವುದಿಲ್ಲ. "ಅವರು ನೋಡಿದರೆ ಹಾಗೆ. ಇವರು ನೋಡಿದರೆ ಹೀಗೆ. ಒಂದು ಉತ್ತರ ಧ್ರುವ. ಒಂದು ದಕ್ಷಿಣ ಧ್ರುವ. ಆದರೆ ಕಿತ್ತರೆ ಕೀಳದಂತೆ ಇರುತ್ತಾರೆ. ಅವರ ಸಂಬಂಧವೇ ಅರ್ಥ ಆಗುವುದಿಲ್ಲ" ಎಂದು ಹೇಳುತ್ತಿರುತ್ತೇವೆ. ಇನ್ನು ಭಕ್ತ-ಭಗವಂತನ ಸಂಬಂಧಗಳು ನಮಗೆ ತಿಳಿಯುವುದಾದರೂ ಹೇಗೆ? ಶರಣಶ್ರೇಷ್ಠರಾದ ಅಲ್ಲಮ ಪ್ರಭುಗಳ ಈ ಕೆಳಕಂಡ ವಚನ ಸಂಬಂಧಗಳ ವಿಚಿತ್ರ ರೀತಿಯ ಜೊತೆ, ಭಕ್ತ-ಭಗವಂತನ ಸಂಬಂಧದ ಸೊಗಸನ್ನೂ ಹೇಳುತ್ತದೆ:

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತಣ ಸಂಬಂಧವಯ್ಯ?
ಬೆಟ್ಟದ ನೆಲ್ಲಿಕಾಯಿ ಸಮುಂದ್ರದೊಳಗಣ ಉಪ್ಪು ಎತ್ತಣಿಂದೆತ್ತಣ ಸಂಬಂಧವಯ್ಯ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತಣ ಸಂಬಂಧವಯ್ಯ?

ಅನೇಕ ಸಂದರ್ಭಗಳಲ್ಲಿ ಯಾರೋ ಇಬ್ಬರ ನಡುವೆ ಇರುವ ಅನ್ಯೋನ್ಯತೆ, ಆತ್ಮೀಯತೆಗಳು ಬೇರೆಯರಿಗೆ ಅರ್ಥವಾಗುವುದು ಒತ್ತಟ್ಟಿಗಿರಲಿ; ಅದು ಅತ್ಯಂತ ಅಪಾರ್ಥವೂ ಆಗುವುದು ಕಂಡುಬರುವುದು. ಸಾಮಾನ್ಯ ಜನರ ನಡುವಣ ಸಂಬಂಧವೇ ಹೀಗಿರಬೇಕಾದರೆ ಭಕ್ತ-ಭಗವಂತ ಸಂಬಂಧಗಳು ಪ್ರಾಪಂಚಿಕ ದೃಷ್ಟಿಯಿಂದ ಬಲು ವಿಚಿತ್ರವಾಗಿರುವುದು ಏನು ವಿಶೇಷ?  

"ಜಾಣೆಯರ ಅರಸ" ಎನ್ನುವ ಹಿಂದಿನ ಸಂಚಿಕೆಯಲ್ಲಿ ಶ್ರೀಕೃಷ್ಣನು ನರಕಾಸುರನ ವಧೆ ಆದ ನಂತರ ಅವನ ಸೆರೆಯಲ್ಲಿದ್ದ ಹದಿನಾರುಸಾವಿರ ರಾಜಕುಮಾರಿಯರನ್ನು ಮದುವೆಯಾದದ್ದು ಚರ್ಚಿಸಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). "ಜಾಣೆಯರರಸ" ಎನ್ನುವುದರ ಬದಲು "ಸುಗುಣಿಯರರಸ" ಎನ್ನುವ ಪಾಠಾ೦ತರ "ಯಾರೇ ರಂಗನ ಕರೆಯಬಂದವರು" ಹಾಡಿನಲ್ಲಿ ಇರುವುದು ಏಕೆ? ಈ ಹದಿನಾರುಸಾವಿರ ರಾಜಕುಮಾರಿಯರು ಯಾರು? ಶ್ರೀಕೃಷ್ಣನು ಅವರನ್ನು ಏಕೆ ವಿವಾಹವಾದ? ಈ ಪ್ರಶೆಗಳು ಹುಟ್ಟಿದ್ದವು. ಅವುಗಳ ಪರಿಹಾರ ಹೇಗೆ ಎನ್ನುವ ವಿಷಯವನ್ನು ಈಗ ನೋಡೋಣ. 

*****

ಅನೇಕ ಭಕ್ತರು ಪರಮಾತ್ಮನನ್ನು ಉದ್ದೇಶಿಸಿ ತಪಸ್ಸು, ಸಾಧನೆಗಳನ್ನು ಮಾಡುತ್ತಾರೆ. ಅವನ ಸಾಕ್ಷಾತ್ಕಾರ ಆದಾಗ ತಮಗೆ ಏನು ಬೇಕು ಎಂದು ಈ ತಪಸ್ಸುಗಳನ್ನು ಮಾಡಿದರೋ ಅವನ್ನು ಬೇಡುತ್ತಾರೆ. "ನಿನ್ನೊಡನೆ ಯುದ್ಧದಲ್ಲಿ ಹೋರಾಡಿ ಸಾಯಬೇಕು" ಎಂದು ವೃಷಭಾಸುರನು ಕೇಳಿದ್ದನ್ನೂ, ಆ ಹೋರಾಟ ನಡೆದ ನೆನಪಿನಲ್ಲಿ ತಿರುಪತಿಯ ಬೆಟ್ಟಕ್ಕೆ "ವೃಷಭಾಚಲ" ಎಂದು ಹೆಸರು ಬಂದಿರುವುದನ್ನೂ "ಪದ್ಮ ಪುರಾಣ" ಹೇಳುತ್ತದೆ. "ಶ್ರೀನಿವಾಸ ಕಲ್ಯಾಣ" ಕಥೆ ಕೇಳಿದವರು ಇದನ್ನು ಬಲ್ಲರು. ಮುಚುಕುಂದ ಚಕ್ರವರ್ತಿಯು ತಡೆಯಿಲ್ಲದ ಬಹುಕಾಲದ ನಿದ್ರೆ ಕೇಳಿದನಂತೆ. ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುವ ಸಲುವಾಗಿ ತಪಸ್ಸು ಮಾಡಿದ ಧ್ರುವನು ವಾಸುದೇವನನ್ನು ಕಂಡ ತಕ್ಷಣ "ನನಗೆ ಏನೂ ಬೇಡ. ನಿನ್ನ ಜೊತೆ ಕರೆದುಕೊಂಡು ಹೋಗು" ಎಂದನಂತೆ. ನಿನ್ನಂತಹ ಮಗ ಬೇಕು ಎಂದು ಕೇಳಿದವರು ಅನೇಕರು. ಹೀಗುಂಟು. 

ಅಗ್ನಿಗೆ ಒಮ್ಮೆ ಹದಿನಾರು ಸಾವಿರ ಮಕ್ಕಳು ಒಟ್ಟಾಗಿ ಜನಿಸಿದರಂತೆ. ಅವರೆಲ್ಲರೂ ಶ್ರೀಹರಿಯನ್ನು ಉದ್ದೇಶಿಸಿ ಬಹಳ ದೀರ್ಘವಾದ, ಘೋರವಾದ ತಪಸ್ಸನ್ನು ಮಾಡಿದರು. ಶ್ರೀಹರಿಯು ಪ್ರತ್ಯಕ್ಷನಾದಾಗ ಅವನನ್ನು ಕಂಡು ಮೈಮರೆತರು. ಏನು ಬೇಕೆಂದು ಕೇಳಿದಾಗ "ನೀನು ನಮ್ಮನ್ನು ಮದುವೆ ಆಗು" ಎಂದು ಬೇಡಿದರು. ಅಗ್ನಿ ಪುತ್ರರಾದ ಈ ಋಷಿಗಳ ಕೋರಿಕೆ ಮನ್ನಿಸಲೇಬೇಕಾಯಿತು. ಶ್ರೀಹರಿಯು ನಸುನಗುತ್ತಾ "ಆಯಿತು. ನಿಮ್ಮ ಇಷ್ಟದಂತೆಯೇ ಆಗಲಿ. ಆದರೆ ಅದಕ್ಕೆ ತಕ್ಕ ಕಾಲ ಬರಬೇಕು. ಮುಂದೆ ಶ್ರೀಕೃಷ್ಣಾವತಾರ ಆದಾಗ ನೀವೆಲ್ಲರೂ ರಾಜಕುಮಾರಿಯರಾಗಿ ಹುಟ್ಟುವಿರಿ. ಆಗ ನಿಮ್ಮನ್ನು ಮದುವೆ ಆಗುತ್ತೇನೆ" ಎಂದು ವರ ಕೊಟ್ಟನು. ಈ ಋಷಿಗಳೇ ದ್ವಾಪರದಲ್ಲಿ ರಾಜಕುಮಾರಿಯರಾಗಿ ಹುಟ್ಟಿ ನರಕಾಸುರನ ಸೆರೆಮನೆ ಸೇರಿದರು. ನರಕಾಸುರನ ವಧೆ ಆದ ನಂತರ ಶ್ರೀಕೃಷ್ಣನು ಅವರನ್ನು ವಿವಾಹವಾಗಿ ದ್ವಾರಕೆಗೆ ಕರೆತಂದನು. 

ಭಕ್ತರ ಕೋರಿಕೆಗಳನ್ನು ಪರಮಾತ್ಮನು ಒಮ್ಮೊಮ್ಮೆ ತನಿ-ತನಿಯಾಗಿ (ತನಿ ಅನ್ನುವುದು ಕನ್ನಡ ಪದ. ನಾವು ಮರ್ತೆ ಬಿಟ್ಟಿದ್ದೇವೆ. ಬಿಡಿ ಬಿಡಿಯಾಗಿ ಎಂದು ಅದರ ಅರ್ಥ) ನೆರವೇರಿಸುತ್ತಾನೆ. ಕೆಲವೊಮ್ಮೆ ಅನೇಕ ಜನರ ಕೋರಿಕೆಗಳನ್ನು ಒಟ್ಟಾಗಿ ತೀರಿಸುತ್ತಾನೆ. ನಮ್ಮ ಸುಪ್ರೀಂ ಕೋರ್ಟ್ "ಅನೇಕ ರಿಟ್ ಅರ್ಜಿಗಳನ್ನು ಒಟ್ಟಾಗಿ ವಿಲೇವಾರಿ ಮಾಡಿತು" ಎನ್ನುವಂತೆ. ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ.  ಇಷ್ಟು ಜನ ಋಷಿಗಳ ಕೋರಿಕೆಯನ್ನು ಒಟ್ಟಾಗಿ ತೀರಿಸಿದುದು, ಮತ್ತು ಇನ್ನೂ ಅನೇಕರ ಕೋರಿಕೆಗಳ ಕಾರಣ ಮದುವೆಗಳು ಆದದ್ದು ಸೇರಿ ಶ್ರೀಕೃಷ್ಣನಿಗೆ ಒಟ್ಟು ಹದಿನಾರು ಸಾವಿರದ ನೂರಾ ಎಂಟು ಹೆಂಡಿರಾದರು. 

*****

ಶ್ರೀಪುರಂದರದಾಸರು ಈ ಸಂದರ್ಭವನ್ನು ತಿಳಿಸಲು "ಜಾಣೆಯರರಸ" ಎಂದು ಪ್ರಯೋಗಿಸಿದರು. ಶ್ರೀ ಕನಕದಾಸರು ಇದನ್ನೇ "ಸುಗುಣೆಯರು" ಎಂದರು. ಶ್ರೀಕೃಷ್ಣನು "ಸುಗುಣಿಯರರಸ" ಎಂದು ಪಾಠಾ೦ತರವಾಯಿತು. 

ಈ ಸಂದರ್ಭವನ್ನು ವಿವರಿಸುವ ಶ್ರೀಕನಕದಾಸರ "ಹರಿಭಕ್ತಿಸಾರ" ಕೃತಿಯ ಭಾಮಿನೀಷಟ್ಪದಿಯ ಮೂವತ್ತೊಂಬತ್ತನೆಯ ಪದ್ಯ ಈ ರೀತಿಯಿದೆ:

ಮಗನಕೊಂದವನಾಳುವಂತಾ 
ಸುಗುಣೆಯರು ಹದಿನಾರುಸಾವಿರ 
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ 
ಬಗೆಬಗೆಯ ರತಿಕಲೆಗಳಲಿ 
ಕೂರುಗವ ನಾಟಿಸಿ ಮೆರೆದು ನೀ ನೀ 
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ

ಕುಬ್ಜೆ ಎಂಬುವವಳು ನೋಡಲು ವಿಕಾರವಾಗಿದ್ದಳು. ಅವಳು ಶಾಪದ ಫಲವಾಗಿ ಈ ರೀತಿ ಹುಟ್ಟಿದ ಅಪ್ಸರೆ. ಕಂಸನಿಗೆ ಪ್ರತಿದಿನ ಗಂಧ ತೇಯ್ದು ಅಲಂಕಾರಕ್ಕಾಗಿ ಒಪ್ಪಿಸುವುದು ಅವಳ ಕೆಲಸ. ಎಂಟು ವರ್ಷದ ಕೃಷ್ಣ ಸೋದರಮಾವ ಕಂಸನ ಆಹ್ವಾನದ ಮೇರೆಗೆ "ಬಿಲ್ಲುಹಬ್ಬ" ನೆಪದಲ್ಲಿ ಮಥುರೆಗೆ ಹೋದ. ಅಲ್ಲಿ ಅವಳನ್ನು ಕಂಡು ಅವಳ ಡೊಂಕನ್ನು ಸರಿಮಾಡಿ ನೆಟ್ಟಗೆ ಮಾಡಿದ. ಅವಳು ಭಕ್ತಿಯಿಂದ ಶ್ರೀಕೃಷ್ಣನಿಗೆ ಗಂಧವನ್ನು ಅರ್ಪಿಸಿದಳು. ಮುಂದೆ ಕೃಷ್ಣನು ಅವಳನ್ನು ವಿವಾಹವಾದ. ಅವರಿಗೆ "ವಿಶೋಕ" ಎನ್ನುವ ಮಗ ಹುಟ್ಟಿದ. ಮಹಾಭಾರತ ಯುದ್ಧ ಆದಾಗ ಈ ವಿಶೋಕ ಭೀಮಸೇನನ ರಥದ ಸಾರಥಿಯಾಗಿ ಕೆಲಸ ಮಾಡಿದ ಎಂದು ಮಹಾಭಾರತದಿಂದ  ತಿಳಿದು ಬರುತ್ತದೆ.

*****

ಇಷ್ಟು ಮಂದಿ ಹೆಂಡಿರ ಜೊತೆ ಶ್ರೀಕೃಷ್ಣ ಹೇಗೆ ಸಂಸಾರ ಮಾಡಿದ ಎಂದು ನೋಡುವ ಕುತೂಹಲ ದೇವರ್ಷಿ ನಾರದರಿಗೆ ಉಂಟಾಯಿತು. ದ್ವಾರಕೆಗೆ ಹೋದರು. ಶ್ರೀಕೃಷ್ಣನ ಮೊದಲಿನ ಮನೆಗೆ ಬಂದರು. ಶ್ರೀಕೃಷ್ಣ ಬಾವಿಯಲ್ಲಿ ನೀರು ಸೇದಿ ತುಂಬುತ್ತಿದ್ದ. "ದೇವರ್ಷಿಗಳು ಬರಬೇಕು. ಎಂತಹ ಭಾಗ್ಯ. ದಯಮಾಡಿಸಿ" ಎಂದು ಕರೆದು ಸತ್ಕರಿಸಿದ. ಎಲ್ಲಾ ಆದ ಮೇಲೆ ಎರಡನೇ ಮನೆಗೆ ಹೋದರು. ಅಲ್ಲಿ ಕೃಷ್ಣ ಮಗುವಿಗೆ ನೀರು ಹಾಕಿ ಮೈ ಒರೆಸುತ್ತಿದ್ದ. "ಬನ್ನಿ, ಬನ್ನಿ, ದೇವರ್ಷಿಗಳೇ!" ಎಂದು ಸ್ವಾಗತಿಸಿದ. ಉಪಚಾರ ಪಡೆದು ಮುಂದೆ ಹೊರಟರು. ಮೂರನೆಯ ಮನೆಯಲ್ಲಿ ಶ್ರೀಕೃಷ್ಣ ಮನೆಗೆ ಅಲಂಕಾರ ಮಾಡುತ್ತಿದ್ದ, "ಇದೇನು ನಮ್ಮ ಪುಣ್ಯ! ನಾರದರು ದಯಮಾಡಿಸಬೇಕು" ಎಂದು ಕೃಷ್ಣ ಉಪಚರಿಸಿದ. ಹೀಗೆ ಇನ್ನೂ ಕೆಲವು ಕಡೆ ಆಯಿತು. ಒಂದೊಂದು ಮನೆಯಲ್ಲಿ ಒಂದೊಂದು ರೀತಿ. ನಾರದರು ಮುಂದೆ ಹೋಗುವುದನ್ನೇ ಬಿಟ್ಟರು!

ಭಾಗವತದಲ್ಲಿ ಈ ಪ್ರಸಂಗಗಳೆಲ್ಲ ವಿವರವಾಗಿ ವರ್ಣಿತವಾಗಿವೆ.