
ಈಚಿನ ದಿನಗಳಲ್ಲಿ ದೇಶದ ಗಡಿಗಳ ರಕ್ಷಣೆ ಬಗ್ಗೆ ಇರುವ ಕಾಳಜಿ ಆಂತರಿಕ ಭದ್ರತೆ ಬಗ್ಗೆಯೂ ಹೆಚ್ಚಿನ ಪ್ರಮಾಣದಲ್ಲಿ ವ್ಯಕ್ತವಾಗುತ್ತಿದೆ. ಅನಧಿಕೃತ ನುಸುಳುಕೋರರ ಹಾವಳಿ ಹಿಂದೆಂದಿಗಿಂತ ಅಧಿಕ ರೀತಿಯಲ್ಲಿ ಕಂಡುಬರುತ್ತಿದೆ. ದೇಶದಲ್ಲಿ ಇಂತಹ ಅನಧಿಕೃತ ಪ್ರವೇಶ ಪಡೆದವರ ಸಹಾಯಕ್ಕಾಗಿ ಒಂದು ಅತ್ಯಂತ ವ್ಯವಸ್ಥಿತ ಜಾಲ ಹರಡಿಕೊಂಡು ಶಾಂತಿ-ಸುವ್ಯವಸ್ಥೆಗೆ ಭಂಗ ತರುವ ಅನೇಕ ಪ್ರಯತ್ನಗಳು ನಿರಂತರ ನಡೆದಿವೆ. ಇದು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಲ್ಲ. ಪ್ರಪಂಚದ ಅನೇಕ ಕಡೆ ಇಂತಹ ಪ್ರಕರಣಗಳು ನಡೆಯುತ್ತಾ ಇರುವುದು ಆಗಾಗ್ಗೆ ವರದಿ ಆಗುತ್ತಿವೆ.
ನಾವು ಕಷ್ಟಪಟ್ಟು ನಮ್ಮ ಮನೆಯ ಅಂಗಳದಲ್ಲಿ ಏನನ್ನೂ ಬೆಳೆದಿಲ್ಲ. ನಮ್ಮ ಪಕ್ಕದ ಮನೆಯವರು ಶ್ರಮಿಸಿ ಹಣ್ಣು-ತರಕಾರಿ ಬೆಳೆದುಕೊಂಡಿದ್ದಾರೆ. ಸಾಧ್ಯವಾದರೆ ಅವರು ಅತ್ತ ಕಡೆ ನೋಡುತ್ತಿರುವಾಗ ಸ್ವಲ್ಪ ಕಿತ್ತುಕೊಳ್ಳುವುದು. ಅದಕ್ಕಿಂತ ಹೆಚ್ಚಾಗಿ ನಾವೇ ಅವರ ಮನೆಯವರಂತೆ ಸೇರಿಕೊಂಡು ಆ ಅಂಗಳದಲ್ಲಿ ಬೆಳೆದ ಪದಾರ್ಥಗಳ ಸುಖವನ್ನು ಅನುಭವಿಸುವುದು. ಇದರಿಂದ ಅವರ ಕುಟುಂಬದ ಸದಸ್ಯರ ಪಾಲು ಕಡಿಮೆ ಆದರೆ ನಮಗೇನು? ಇದು ಈ ನುಸುಳುಕೋರರ ತಾತ್ವಿಕ ನಿಲುವು. ಈ ರೀತಿಯ ಕೆಲಸಕ್ಕೆ ಅವರ ಮನೆಯವರಲ್ಲಿ ಯಾರಾದರೂ ಸಹಾಯ ಮಾಡಿದರೆ ಬಹಳ ಒಳ್ಳೆಯದು. ಇದೇ ಈಗ ನಡೆಯುತ್ತಿರುವ ವಿದ್ಯಮಾನಗಳು.
ಎಲ್ಲಿಯಾದರೂ ಒಂದು ದುರ್ಘಟನೆ ನಡೆದ ತಕ್ಷಣ ಭದ್ರತಾ ಪಡೆಗಳು ಮತ್ತು ವ್ಯವಸ್ಥೆಯ ಮೇಲೆ ಮುಗಿಬೀಳಲು ಅನೇಕರು ಕಾತರರಾಗಿರುವುದು ಕಂಡುಬರುತ್ತದೆ. "ಇವರೆಲ್ಲಾ ಏನು ಮಾಡುತ್ತಿದ್ದರು? ಇವರ ಕಣ್ಣು ತಪ್ಪಿಸಿ ಈ ರೀತಿ ಹೇಗೆ ಆಯಿತು? ಇದು ಅಸಮರ್ಥತೆಯ ಪರಮಾವಧಿ" ಎಂದು ಚೀರಾಡುವವರನ್ನು ಅಲ್ಲಲ್ಲಿ ಕಾಣಬಹುದು. ದುರದೃಷ್ಟವಶಾತ್ ಭದ್ರತಾ ಪಡೆಗಳು ಅನೇಕ ಸಂದರ್ಭಗಳಲ್ಲಿ ಕೈ-ಕಾಲು ಕಟ್ಟಿಹಾಕಿಕೊಂಡು ಓಡಬೇಕಾದ ಇಕ್ಕಟ್ಟಿನಲ್ಲಿ ಸಿಲುಕುತ್ತವೆ. ಕಾನೂನಿನ ಚೌಕಟ್ಟಿನಲ್ಲಿಯೇ ಅವು ಕಾರ್ಯ ನಿರ್ವಹಿಸಬೇಕು. ಆದರೆ ನುಸುಳುಕೋರರಿಗೂ ಮತ್ತು ಅವರ ಸಮರ್ಥಕರಿಗೂ ಇಂತಹ ಯಾವುದೇ ಕಟ್ಟುಪಾಡುಗಳಿಲ್ಲ.
ಭದ್ರತಾ ಪಡೆಗಳ ಸಾಹಸದಿಂದ ನೂರರಲ್ಲಿ ತೊಂಬತ್ತೊಂಬತ್ತು ದುರ್ಘಟನೆಗಳು ಮೊಳಕೆಯಲ್ಲಿಯೇ ಚಿವುಟಿ ನಿಲ್ಲುತ್ತವೆ. ಇವುಗಳ ವಿವರಗಳು ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟರ ಮೇಲೂ ಆಗಾಗ ಶಾಂತಿಭಂಗ ಆಗುವ ಸಂದರ್ಭಗಳು ಉಂಟು. ಇಂತಹ ಪ್ರಕರಣಗಳು ಅತಿ ಹೆಚ್ಚು ಸುದ್ದಿ ಮಾಡುತ್ತವೆ. ಯಾವುದೋ ಸಣ್ಣ-ಪುಟ್ಟ ಆಸೆ-ಆಮಿಷಗಳಿಗೆ ಒಳಗಾಗಿ ದೇಶದ ಭದ್ರತೆಗೆ ಸಂಬಂಧಿಸಿದ ಗುಟ್ಟಿನ ವಿಷಯಗಳನ್ನು ಶತ್ರುರಾಷ್ಟ್ರಗಳ ದಲ್ಲಾಳಿಗಳಿಗೆ ಮಾರಿಕೊಳ್ಳುವ ದೇಶದ್ರೋಹಿ ವ್ಯಕ್ತಿಗಳು ಅತ್ಯಂತ ಅಪಾಯಕಾರಿಗಳು. ನುಸುಳುಕೋರರ ಸಹಾಯಕ್ಕೆ ಧಾವಿಸುವ ಆಂತರಿಕ ಶತ್ರುಗಳು ಸಹ ಇಷ್ಟೇ ಅಪಾಯಕಾರಿಗಳು. ಈಗಿನ ಪರಿಸ್ಥಿತಿಯಲ್ಲಿ ಇಂತಹವರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮಗಳ ಅಕ್ಕ-ಪಕ್ಕದಲ್ಲೇ ಸೇರಿಕೊಂಡಿರುವುದು ಬಹಳ ಭಯಾನಕ ವಾತಾವರಣ ಉಂಟುಮಾಡಿದೆ.
*****
ಇದರ ಹಿಂದಿನ ಸಂಚಿಕೆಯಲ್ಲಿ
"ತಾಯಿಯ ತೊಳಲಾಟ" (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಎನ್ನುವ ಒಂದು ಶೀರ್ಷಿಕೆಯ ಅಡಿಯಲ್ಲಿ ಅದಕ್ಕೆ ಸೇರಿದ ಅನೇಕ ವಿಷಯಗಳನ್ನು ಚರ್ಚಿಸುತ್ತಾ ಸಾಂದರ್ಭಿಕವಾಗಿ "ಪ್ರತಿಜ್ನಾಯೌಗಂಧರಾಯಣಮ್" ನಾಟಕದ "ಹೆತ್ತ ಒಡಲಿನ ಒಳತೋಟಿ" ಬಗ್ಗೆ ಒಂದು ಹೇಳಿಕೆಯನ್ನು ನೋಡಿದ್ದೆವು. ಅದನ್ನು ಚರ್ಚಿಸುವಾಗ, ಅದೇ ನಾಟಕದ ಇನ್ನೊಂದು ಹೇಳಿಕೆ ಬಗ್ಗೆ ಗಮನ ಹೋಯಿತು. ದೇಶದ್ರೋಹಿಗಳ ಬಗ್ಗೆ ಹೇಳುವ ಈ ಮಾತು ಮೈನವಿರೇಳುವಂತೆ ಇದೆ.
ಒಂದಲ್ಲಾ ಒಂದು ದಿನ ಸಾವು ಎಲ್ಲರಿಗೂ ಬರುವುದೇ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಅನೇಕ ವರುಷಗಳು ಬಾಳಿ, ಬದುಕಿ, ಈಗ ನಶಿಸಿಹೋದ ದೇಹಕ್ಕೆ ಒಂದು ಯೋಗ್ಯ ರೀತಿಯ ಅಂತಿಮ ಸಂಸ್ಕಾರ ನಡೆಯಬೇಕಿರುವುದು ಸಮಾಜದ ಒಂದು ಪದ್ದತಿ. ದೇಶಕ್ಕಾಗಿ ಪ್ರಾಣ ಕೊಟ್ಟ ಒಬ್ಬ ಸೈನಿಕನಿಗೆ ನೀಡುವ ಅಂತಿಮ ಯಾತ್ರೆ, ಸಂಸ್ಕಾರ ಮತ್ತು ಶ್ರದ್ದಾಂಜಲಿ, ಇವುಗಳಿಗೆ ಅದರದೇ ಆದ ವಿಶೇಷ ಗೌರವ, ಆದರಗಳು ಉಂಟು. ಸೇನೆಯ ಮತ್ತು ಸರ್ಕಾರದ ಅತ್ಯಂತ ಹಿರಿಯ ಅಧಿಕಾರಿಗಳಿಂದ ಆ ಗ್ರಾಮ ಅಥವಾ ಪಟ್ಟಣದ ಸಾಮಾನ್ಯ ಜನರೂ ಕಣ್ಣೀರಿಡುತ್ತಾ ಭಾಗವಹಿಸುತ್ತಾರೆ. ಒಬ್ಬ ಸೈನಿಕ ಅಥವಾ ದೇಶಭಕ್ತನ ಸಾವು ಅವನ ಕುಟುಂಬಕ್ಕೋ ಅಥವಾ ಅವನು ವಾಸಿಸುತ್ತಿದ್ದ ಕೇರಿಗೋ ಸೀಮಿತವಾಗುವುದಿಲ್ಲ. ಅವನ ಸಾವು ಎಲ್ಲರ ಮನೆಯ ಸಾವು. ಹೀಗೆ ಭಾವನೆಗಳು ತೋರಿಬರುತ್ತವೆ.
*****
"ಪ್ರತಿಜ್ನಾಯೌಗಂಧರಾಯಣಮ್" ನಾಟಕದ ದೇಶದ್ರೋಹಿಯ ಬಗ್ಗೆ ಬರುವ ಶ್ಲೋಕ ಹೀಗಿದೆ:
ನವಂ ಶರಾವಂ ಸಲಿಲೈ: ಸುಪೂರ್ಣ೦ ಸುಸಂಸ್ಕೃತಂ ದರ್ಭಕೃತೋತ್ತರೀಯಮ್
ತತ್ತಸ್ಯ ಮಾಭೂನ್ನರಕಂ ಸ ಗಚ್ಚೇತ್ ಯೋ ಭರ್ತೃಪಿಂಡಸ್ಯ ಕೃತೇ ನ ಯುಧ್ಯೇತ್
"ಯಾವನು ತನ್ನ ಯಜಮಾನನ ಅಥವಾ ದೇಶದ ಪರವಾಗಿ ಹೋರಾಡುವುದಿಲ್ಲವೋ ಅಂತಹ ಮನುಷ್ಯನಿಗೆ ಕ್ರಮವಾಗಿ ಉತ್ತರಕ್ರಿಯಾದಿಗಳನ್ನು ಮಾಡಿ ನೀಡುವ ವಸ್ತುಗಳು (ತರ್ಪಣದ ನೀರು, ಅನ್ನ-ಪಾನಾದಿಗಳು) ಸಿಗದಿರಲಿ. ಅಂತಹವನು ಉತ್ತಮ ಗತಿಗೆ ಯೋಗ್ಯನಲ್ಲ. ಅವನು ನರಕದಲ್ಲಿ ಬಿದ್ದು ಕೊಳೆಯಲಿ!"
ಪ್ರತಿಯೊಬ್ಬ ಮನುಷ್ಯನಿಗೂ ಅವನು ಹುಟ್ಟಿ-ಬೆಳೆದ ಅಥವಾ ಅವನು ಸ್ವೀಕರಿಸಿದ ಪದ್ಧತಿಯ ಪ್ರಕಾರ ಅಂತಿಮ ಗೌರವಗಳು ಸಿಗುತ್ತವೆ. ಕೆಲವರಿಗೆ ಅದು ತರ್ಪಣ, ಪಿಂಡಪ್ರದಾನ ಇತ್ಯಾದಿ ರೀತಿಯಲ್ಲಿ ಇರಬಹುದು. ಮತ್ತೆ ಕೆಲವರಿಗೆ ಹಾಲು-ತುಪ್ಪ ಇರಬಹುದು. ಮತ್ತೆ ಕೆಲವರಿಗೆ "ಮೆಮೋರಿಯಲ್ ಸರ್ವಿಸ್" ಇರಬಹುದು. ಅದು ಯಾವುದು ಎನ್ನುವುದು ಮುಖ್ಯವಲ್ಲ. ಅದು ಒಂದು ಅತ್ಯಂತ ಗೌರವಯುತವಾದ ಸಂಸ್ಕಾರ ಆಗಿರಬೇಕು. ಅಷ್ಟೇ. ಯೌಗಂಧರಾಯಣನ ಸಮಯದ ವಿವರಣೆ ಇಲ್ಲುಂಟು. ಕಾಲಕಾಲಕ್ಕೆ ಅದು ಬದಲಾಗಬಹುದು. ಗೌರವದ ರೀತಿ ಹೇಗೆ ಎನ್ನುವುದರ ವಿವರ ಬೇರೆ ಆಗಬಹುದು. ಆದರೆ ತೋರಿಸುವ ಗೌರವ-ಆದರಗಳು ಎಂದಿಗೂ ಒಂದೇ.
*****
ಎರಡು ಸಾವಿರ ವರುಷಗಳ ಹಿಂದೆ ಹಾಗೆ. ಇಂದಿನ ಭಾವನೆ ಏನು?
ನಾವು ಶಾಲೆಗಳಲ್ಲಿ ಓದುತ್ತಿದ್ದಾಗ ಕನ್ನಡ ಪಠ್ಯ ಪುಸ್ತಕದಲ್ಲಿ ದೇಶದ್ರೋಹಿಯ ಬಗ್ಗೆ ಒಂದು ಪದ್ಯವಿತ್ತು. ಅದರ ಕಡೆಯ ಸಾಲುಗಳು ಹೀಗಿದ್ದವು:
ದೇಶದ್ರೋಹಿಯು ಸಾಯುವನೆಲ್ಲಿ?
ಸತ್ತರೆ ಅವನಿಗೆ ಸುಡುಗಾಡೆಲ್ಲಿ?
ಸೂಡು ಮಾಡಲು ಕಟ್ಟಿಗೆಯಿಲ್ಲ
ಬೆಂಕಿ ಹೆಣವನು ಮುಟ್ಟುವುದಿಲ್ಲ
ನಾಯಿ ನರಿಯೂ ತಿನ್ನುವುದಿಲ್ಲ
ತಬ್ಬಲಿಗೇನಿಲ್ಲ!
ತಿಳಿಗನ್ನಡದ ಈ ಕವಿತೆಯ ಸಾಲುಗಳಿಗೆ ಯಾವ ವಿವರಣೆಯೂ ಬೇಕಿಲ್ಲ. ದೇಶದ್ರೋಹಿಯು ಸತ್ತು ಬೀಳುವ ಕಡೆ ಇರುವ ನೆಲ "ಇಲ್ಲಿ ಬೀಳಬೇಡ!" ಅನ್ನುತ್ತದಂತೆ. ಸ್ಮಶಾನ "ಇಲ್ಲಿ ಬರಬೇಡ!" ಎಂದು ಕಿರಿಚುತ್ತದಂತೆ. ಚಿತೆ ಒಟ್ಟುಗೂಡಿಸಲು ತರುವ ಸೌದೆತುಂಡುಗಳು ದೂರ ಓಡಿಹೋಗುತ್ತವಂತೆ. ಬೆಂಕಿ ಅವನ ದೇಹವನ್ನು ಸುಡಲು ಒಲ್ಲದಂತೆ. "ಹಸಿವಿನಿಂದ ಸತ್ತರೂ ಪರವಾಗಿಲ್ಲ. ನಮಗೆ ಇವನ ದೇಹ ತಿನ್ನುವ ದೌರ್ಭಾಗ್ಯ ಬೇಡ!" ಎಂದು ನಾಯಿ-ನರಿಗಳು ದೂರ ಓಡುತ್ತವಂತೆ. ಅವನು ಈಗ ನಿಜವಾಗಿಯೂ ತಬ್ಬಲಿ. ಹೇಳುವವರು, ಕೇಳುವವರು, ಅವನಿಗಾಗಿ ದುಃಖಿಸುವವರು ಯಾರೂ ಇಲ್ಲ. ಅವನು ಎಲ್ಲವನ್ನೂ ಕಳೆದುಕೊಂಡ ಪಾತಕಿ.
*****
ನಮ್ಮ ಬಾಲ್ಯದಲ್ಲಿ ಏನಾದರೂ ಪ್ರಮಾದ ಮಾಡಿದ ಸಮಾಜಘಾತುಕರನ್ನು ನಿರ್ದೇಶಿಸಿ "ಅವನನ್ನು ನೀರು-ನೆರಳು ಇಲ್ಲದ ಕಡೆ ಕಡಿಯಬೇಕು" ಅನ್ನುತ್ತಿದ್ದರು. ಈಗ ಅಂತಹ ಹೇಳಿಕೆ ಅಷ್ಟಾಗಿ ಕೇಳಿಬರುವುದಿಲ್ಲ. ಕಡಿದ ಮೇಲೆ ಮನುಷ್ಯನೇ ಹೋಗುವಾಗ ಅಲ್ಲಿ "ನೀರು-ನೆರಳು" ಏನು ಮಾಡುತ್ತವೆ? ಎಂದು ನಾವು ಹುಡುಗರು ಯೋಚಿಸುತ್ತಿದ್ದೆವು. ಅದರ ಅರ್ಥ ಅದಲ್ಲ. ಒಬ್ಬ ಮನುಷ್ಯನಿಗೆ ಸಿಗಬೇಕಾದ ಕನಿಷ್ಠ ಪದಾರ್ಥಗಳೂ ಸಿಗಬಾರದು. ಅವನು ಅದಕ್ಕೆ ಯೋಗ್ಯನಲ್ಲ ಎಂದು ಹೇಳುವುದು ಅದರ ಉದ್ದೇಶ್ಯ.
ದೇಶದ್ರೋಹಿಗೆ ಕಾನೂನಿನಲ್ಲಿ ಅನೇಕ ರೀತಿಯ ಶಿಕ್ಷೆಗಳಿವೆ. ಕೆಲವು ದೇಶದ್ರೋಹಿಗಳಿಗೆ ಈ ರೀತಿಯ ಶಿಕ್ಷೆ ಆಗಬಹುದು. ಕೆಲವರು ಕಾರಣಾಂತರಗಳಿಂದ ಶಿಕ್ಷೆ ತಪ್ಪಿಸಿಕೊಳ್ಳಲೂಬಹುದು. ಆದರೆ ದೇಶವಾಸಿಗಳಿಂದ ಸಿಗುವ ಗೌರವ ದೇಶಭಕ್ತನಿಗೆ ಕಿರೀಟ. ಅದೇ ದೇಶವಾಸಿಗಳಿಂದ ಸಿಗುವ ತಿರಸ್ಕಾರವೇ ದೇಶದ್ರೋಹಿಗೆ ಅತಿ ದೊಡ್ಡ ಶಿಕ್ಷೆ.
Power, self importance and greed have turned the world affairs upside down and everyone is scratching their heads how to solve this problem. Learning a lesson from this by not giving so much of power in the hands of one person is dangerous to the world.
ReplyDeleteIt is so true about Deshabhakta to receive full honours, respect for giving his life for the country.
What the future is going to be is highly unpredictable under the circumstances. It is an emotional subject to read in this blog to me.
Once again, thank you Keshav.
ಇಂದಿನ ದಿನದ ವಿದ್ಯಮಾನಗಳಿಗೆ ಹಿಡಿದ ಕೈಗನ್ನಡಿ.
ReplyDeleteಸ್ವಾರ್ಥದ ವ್ಯವಸಾಯವನ್ನು ನೆಲೆಯಾಗಿಸಿಕೊಂಡಿರುವ ದೇಶದ ಒಳಗೂ ಹೊರಗೂ ಇರುವ ತಂಡಗಳ ಸ್ವರೂಪವೇ ಭಯಾನಕ ; ದೇಶ ಮತ್ತ್ತು ಮನುಷ್ಯತ್ವಕ್ಕೆ ಎಸಗುವ ಅತೀ ಕ್ರೂರ ದ್ರೋಹದ ಕೆಲಸ. ಇಂತಹ ಬೆನ್ನಿಗೆ ಚೂರಿ ಹಾಕುವ, ತಮ್ಮ ಮನೆಗೇ ಕನ್ನ ಹಾಕುವ ಪ್ರವೃತ್ತಿಯವವರು ಇರುವ ತನಕ ಭಯೋತ್ಪಾದಕರಿಗೆ ಭಯವಿಲ್ಲದೆ ಬೆಳೆಯುವ ಶಕ್ತಿ ತುಂಬುತ್ತಲೇ ಇರುತ್ತದೆ.
ಭಯೋತ್ಪಾದಕರನ್ನು ಭೇಟೆಯಾಡುವ ಜೊತೆಯಲ್ಲಿ, ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ವಾತಾವರಣ ಸೃಷ್ಟಿಸುವವರನ್ನೂ ಚೆಂಡಾಡಬೇಕು .
We should think above self. We should aim for serving the mother land to the best of our ability. Persons who are against this basics, should be punished. Keshava Murthy sir has explained in a ver lucid way which can be understood by any reader. We should not criticise the security agencies where there is no major deficiency.
ReplyDeleteDisplayed pictorial message aptly describes the subject under discussion. In the pesent times and scenario , unlike in the past, such people who are " Desha dhrohis " move around freely in the garb of " Desha bhaktas " with such flair and finess, that the truth will come out only when all the damage is done. Thanks for the eye opener subject which should draw a serious engagement from the general and good citizens to protect the nation.
ReplyDeleteಈತ್ತೀಚಿನ ದಿನಗಳಲ್ಲಿ, ದೇಶದ್ರೋಹಿಗಳ ಹಾವಳಿ ಎರುತ್ತಲೆ ಇದೆ. ಇಲ್ಲಿ ತಿಳಿಸಿರುವಂತೆ,ಭದ್ರತಾ ಪಡೆಗಳು ಕಾನೂನಿನ ಪ್ರಕಾರ ಕೆಲಸ ನಿರ್ವಹಸ ಬೇಕು. ಅನೇಕ ಬಾರಿ ಒತ್ತಡಕ್ಕೆ, ಶರಣಾಗಬೇಕಾಗುತ್ತದೆ.
ReplyDeleteಈ ಕಾರಣದಿಂದ, ಶಿಕ್ಷೆ ತಪ್ಪಿಸಿಕೊಳ್ಳುವವರು ಹೆಚ್ಚು.
ದೇಶದ್ರೋಹಿ ಪದ್ಯದ ವಿವರಣೆ, ಸೂಗಸಾಗಿದೆ.
ಲೇಖನದ ಕಡೆಯ ಸಾಲು, ಅರ್ಥಗರ್ಭವಿತವಾಗಿದೆ.