ಹಿಂದಿನ ಒಂದು ಸಂಚಿಕೆಯಲ್ಲಿ "ಶಯನೀ ಏಕಾದಶಿ" ಮತ್ತು ಚಾತುರ್ಮಾಸ ಕಾಲದ ಸಂಗತಿಗಳ ಪ್ರಸ್ತಾಪವಾಗಿತ್ತು. ಏಕಾದಶಿಯ ವ್ರತವೆಂದರೆ ಏನು? ಅದರ ಪೂರ್ಣ ಆಚರಣೆ ಹೇಗೆ ಮಾಡಬೇಕು ಮುಂತಾದುವನ್ನು ಸಂಕ್ಷಿಪ್ತವಾಗಿ ನೋಡಿದೆವು. "ಏಕಾದಶಿಯ ದಿನ ಹಾಲು ಹಣ್ಣು ಸೇವಿಸಿ" ಎಂದು ಪುರಾಣದಲ್ಲಿ ಹೇಳಿದುದರ ಕೊನೆಯ ಭಾಗ ಮಾತ್ರ ಕೇಳಿ, ಅದರಂತೆ ಆಚರಿಸಲು ಪ್ರಯತ್ನಿಸಿ, ಶ್ರೀ ಮುಕುಂದರಾಯರು ಪಟ್ಟ ಬವಣೆಯನ್ನು ಅದೇ ಹೆಸರಿನ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಮಾರನೆಯ ದಿನ ಹಿರಿಯರೊಬ್ಬರ ನೆರವಿನಿಂದ ಮುಕುಂದರಾಯರಿಗೆ ಸರಿಯಾದ ವಿಷಯಗಳು ತಿಳಿದು ಪುರಾಣೀಕರು ಹೇಳಿದ್ದ ಹಾಲು "ಭಗವದ್ಗೀತೆ" ಮತ್ತು ಹಣ್ಣು "ಶ್ರೀಮದ್ ಭಾಗವತ" ಎಂದು ಅಥವಾಯಿತು. ಇದಕ್ಕೆ ಕಾರಣಗಳನ್ನು ಕೂಡ "ಗೀತೆ ಎಂಬ ಹಾಲು; ಭಾಗವತವೆಂಬ ಹಣ್ಣು" ಎನ್ನುವ ಸಂಚಿಕೆಯಲ್ಲಿ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಏಕಾದಶಿಯ ಸಂದರ್ಭದಲ್ಲಿ ನೆನೆಯಲೇಬೇಕಾದ ಎರಡು ಹೆಸರುಗಳು "ರುಕ್ಮಾ೦ಗದ ಮಹಾರಾಜ" ಮತ್ತು "ಅಂಬರೀಶ ಮಹಾರಾಜ". ಏಕಾದಶಿ ವ್ರತದ ಆಚರಣೆಗೆ ಹೆಸರಾಗಿ, ಅನೇಕ ಕಷ್ಟಗಳನ್ನು ಅನುಭವಿಸಿದರೂ ವ್ರತವನ್ನು ಬಿಡದೇ ಶಾಶ್ವತ ಕೀರ್ತಿಯನ್ನು ಸಂಪಾದಿಸಿದವರು ಇವರಿಬ್ಬರು.
ಓದುಗರೊಬ್ಬರು ಇವರ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ರುಕ್ಮಾ೦ಗದ ಮಹಾರಾಜನ ವಿಷಯವನ್ನು ಸಂಕ್ಷಿಪ್ತವಾಗಿ ಈಗ ನೋಡೋಣ.
*****
ಇಕ್ಷ್ವಾಕು ಮಹಾರಾಜನ ವಂಶದ ರಾಜಾ ಋತುಧ್ವಜನ ಮಗ ರುಕ್ಮಾ೦ಗದ ಮಹಾರಾಜ. ಈತನು ವಿದಿಶಾ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಶಾಲ ಸಾಮ್ರಾಜ್ಯವನ್ನು ಆಳುತ್ತಿದ್ದನು. ಬಹಳ ಧರ್ಮಾತ್ಮನಾದ ರಾಜನೆಂದು ಕೀರ್ತಿ ಸಂಪಾದಿಸಿದ್ದನು. ಅವನಿಗೆ ಸಂಧ್ಯಾವಳೀ ಎನ್ನುವ ಹೆಸರಿನ ಹೆಂಡತಿಯಿದ್ದಳು. ಅವಳೂ ಬಹಳ ಯೋಗ್ಯಳಾಗಿ ಪ್ರಜೆಗಳ ಪ್ರೀತಿ ಸಂಪಾದಿಸಿದ್ದಳು. ರುಕ್ಮಾ೦ಗದ ಮಹಾರಾಜನ ರಾಜ್ಯದಲ್ಲಿ ಶಾಂತಿ, ಸುಭಿಕ್ಷಗಳು ನೆಲೆಸಿ ಅದೊಂದು ಸ್ವರ್ಗದಂತೆ ಭಾಸವಾಗುತ್ತಿತ್ತು.
ರುಕ್ಮಾ೦ಗದ ಮಹಾರಾಜನು ಪ್ರತಿ ದಶಮಿಯ ದಿನ ಆನೆಗಳ ಮೇಲೆ ನಗಾರಿ ಬಾರಿಸುವವರನ್ನು ಬೀದಿ ಬೀದಿಗಳಿಗೆ ಕಳಿಸಿ ಏಕಾದಶಿ ವ್ರತದ ಬಗ್ಗೆ ಜನಗಳಿಗೆ ಎಚ್ಚರಿಸುತ್ತಿದ್ದನು. ಅವನ ರಾಜ್ಯದಲ್ಲಿ ಏಕಾದಶಿ ವ್ರತ ಮಾಡದಿದ್ದರೆ ಅದು ಒಂದು ಅಪರಾಧವಾಗಿತ್ತು. ಎಂಟು ವರ್ಷ ದಾಟಿದ ಮತ್ತು ಎಂಭತ್ತು ವರುಷ ಒಳಗಿನ ಎಲ್ಲ ಜನರೂ ಏಕಾದಶಿ ವ್ರತ ಮಾಡುವುದು ಕಡ್ಡಾಯವಾಗಿತ್ತು. ಹೀಗೆ ಪ್ರಾರಂಭವಾದ ಏಕಾದಶಿ ವ್ರತ ಕ್ರಮೇಣ ಜನಜೀವನದ ಒಂದು ಅಂಗವೇ ಆಯಿತು. ಕೆಲಕಾಲದ ನಂತರ ಜನರು ಸ್ವಯಂ ಪ್ರೇರಿತರಾಗಿ ಏಕಾದಶಿ ವ್ರತ ಮಾಡಲು ಪ್ರಾರಂಭಿಸಿದರು.
ಈ ರೀತಿ ಪ್ರಜೆಗಳೆಲ್ಲರೂ ಏಕಾದಶಿ ವ್ರತ ಮಾಡುತ್ತಿದ್ದ ಕಾರಣ ಪಾಪ ಕರ್ಮಗಳು ಮಾಡುವರು ಇಲ್ಲವಾಗಿ ನರಕ ವಾಸ ಅನುಭವಿಸುವ ಜನರೇ ಕಾಣದಾದರು. ನರಕದಲ್ಲಿ ಬಂದು ಬೀಳುವ ಜನರು ಕಡಿಮೆ ಆದ ಕಾರಣ ನರಕದಲ್ಲಿರುವ ಉದ್ಯೋಗಿಗಳಿಗೆ ಕೆಲಸವೇ ಇಲ್ಲವಾಯಿತು. ಯಮಧರ್ಮನಿಗೆ ನಿರುದ್ಯೋಗ ಸೃಷ್ಟಿಯಾದಂತೆ ಆಯಿತು. ಹೀಗೆ ಒಂದು ಸ್ಥಿತಿ ಬಂದುದರ ಕಾರಣ ಯಮಧರ್ಮನು ವಿಧಿಯಿಲ್ಲದೇ ಚತುರ್ಮುಖ ಬ್ರಹ್ಮನನ್ನು ಕಂಡು ಪರಿಹಾರ ಕೇಳಲು ಸತ್ಯಲೋಕಕ್ಕೆ ಹೋದನು.
*****
ಯಮನ ಪೇಚಾಟವನ್ನು ಕಂಡು ಚತುರ್ಮುಖನು "ಜನಗಳು ನ್ಯಾಯವಾದ ರೀತಿಯಲ್ಲಿ ಬಾಳಿ ಧರ್ಮಿಷ್ಠರಾಗುವಂತೆ ಮಾಡುವುದು ರಾಜನ ಕರ್ತವ್ಯ. ರುಕ್ಮಾ೦ಗದನು ನ್ಯಾಯವನ್ನೇ ಮಾಡುತ್ತಿರುವುದರಿಂದ ಅವನದು ಏನೂ ಅಪರಾಧವಿಲ್ಲ. ನಿನ್ನ ಪರಿಸ್ಥಿತಿಗೆ ಏನೂ ಪರಿಹಾರವಿಲ್ಲ" ಎಂದುಬಿಟ್ಟನು. ಅದಲ್ಲದೆ ಈ ರೀತಿ ಹೇಳಿದನು:
ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮೋದಶಾಶ್ವಮೇಧಾವಭೃತೇನ ತುಲ್ಯ:ದಶಾಶ್ವಮೇಧೀ ಪುನರೇಪಿಜನ್ಮಕೃಷ್ಣಪ್ರಣಾಮೀ ನ ಪುನರ್ಭವಾಯ
"ಒಮ್ಮೆ ಶ್ರೀಕೃಷ್ಣನಿಗೆ ಸರಿಯಾಗಿ ನಮಸ್ಕಾರ ಮಾಡಿದ ಮನುಷ್ಯನ ಪುಣ್ಯವು ಹತ್ತು ಅಶ್ವಮೇಧ ಯಾಗಗಳನ್ನು ಪೂರೈಸಿ ಯಜ್ಞದ ಅವಭೃತ ಸ್ನಾನ ಮಾಡಿದವನಿಗೆ (ಯಜ್ಞ-ಯಾಗಗಳ ಪೂರ್ಣವಾಯಿರುವ ಸಂದರ್ಭದಲ್ಲಿ ಮಾಡುವ ಮಂಗಳ ಸ್ನಾನ) ಬಂದ ಪುಣ್ಯದಷ್ಟಾಗುತ್ತದೆ. ಇದಲ್ಲದೆ ಹತ್ತು ಅಶ್ವಮೇಧ ಯಾಗ ಮಾಡಿದವನು ಆ ಪುಣ್ಯ ಸಂಪತ್ತು ಅನುಭವಿಸಿ ಕಳೆದ ಮೇಲೆ ಮತ್ತೆ ಹುಟ್ಟಬೇಕು. ಆದರೆ ಶ್ರೀಕೃಷ್ಣನಿಗೆ ಒಂದು ಸಾರಿ ಸರಿಯಾಗಿ ನಮಸ್ಕರಿಸಿದವನು ಮತ್ತೆ ಹುಟ್ಟುವ ಪ್ರಮೇಯವೇ ಬರುವುದಿಲ್ಲ".
ಯಮಧರ್ಮನು ಈ ಉತ್ತರ ಕೇಳಿ ಏನೂ ತೋಚದೆ ನಿಂತಿರಲು, ಚತುರ್ಮುಖನು ನಕ್ಕು ಒಂದು ಅಪೂರ್ವ ಲಾವಣ್ಯವತಿಯಾದ ಸ್ತ್ರೀರೂಪವನ್ನು ಸೃಷ್ಟಿಸಿದನು. ಆ ರೂಪಕ್ಕೆ ಜೀವ ಕೊಟ್ಟು ಎಲ್ಲರನ್ನೂ ತನ್ನನ್ನು ಕಂಡು ಮೋಹಗೊಳ್ಳುವಂತೆ ಮಾಡಬಲ್ಲವಳಾದುದರಿಂದ ಅವಳಿಗೆ "ಮೋಹಿನಿ" ಎಂದು ಹೆಸರಿಟ್ಟನು. ಆ ಮೋಹಿನಿಯನ್ನು ಕರೆದು ಅವಳಿಗೆ "ರುಕ್ಮಾ೦ಗದನು ನಿನ್ನನ್ನು ಮೋಹಿಸಿ ಮದುವೆಯಾಗುವಂತೆ ಒಪ್ಪಿಸು. ನಂತರ ಹೀಗೆ ಮದುವೆಯಾಗುವ ಸಂದರ್ಭದಲ್ಲಿ ನೀನು ಕೇಳಿದ ಕೋರಿಕೆಯನ್ನು ನಡೆಸಿಕೊಡುವ ವಚನವನ್ನು ಅವನಿಂದ ಪಡೆದುಕೋ. ವಿವಾಹದ ನಂತರ ಅವನಿಂದ ಏಕಾದಶಿ ವ್ರತವನ್ನು ನಿಲ್ಲಿಸುವಂತೆ ಮಾಡು" ಎಂದು ಆಜ್ಞಾಪಿಸಿದನು.
*****
ಇತ್ತ ಕಡೆ ರುಕ್ಮಾ೦ಗದ ಮತ್ತು ಸಂಧ್ಯಾವಳೀ ದಂಪತಿಗಳಿಗೆ 'ಧರ್ಮಾಂಗದ" ಎನ್ನುವ ಹೆಸರಿನ ಮಗನಿದ್ದನು. ಅವನು ಪ್ರಾಪ್ತ ವಯಸ್ಕನಾಗಿ ತನ್ನ ತಂದೆ-ತಾಯಿಯರಿಗೆ ಒಪ್ಪುವಂತೆ ಅತ್ಯಂತ ಯೋಗ್ಯನಾದ ಯುವರಾಜನಾದನು. ತಂದೆಗಿಂತಲೂ ಪರಾಕ್ರಮಿಯಾಗಿ ಸುತ್ತ-ಮುತ್ತಲ ಶತ್ರುಗಳನ್ನೆಲ್ಲ ನಿರ್ಮೂಲಮಾಡಿ ರಾಜ್ಯದ ಮೇರೆಗಳನ್ನು ಇನ್ನೂ ವಿಸ್ತಾರ ಮಾಡಿದನು. ಅನೇಕ ರೀತಿಯ ಧನ-ಸಂಪತ್ತುಗಳನ್ನು ಸಂಗ್ರಹಿಸಿ ತಂದೆಗೆ ತಂದು ಒಪ್ಪಿಸಿದನು. ಅತ್ಯಂತ ಜನಪ್ರಿಯನಾದ ಅವನಿಗೆ ರುಕ್ಮಾ೦ಗದನು ರಾಜ್ಯಭಾರವನ್ನು ಒಪ್ಪಿಸಿ ತೀರ್ಥಯಾತ್ರೆಗೆಂದು ಹೊರಟನು.
ಹೀಗೆ ಸಂಚರಿಸುತ್ತಿರುವಾಗ ಮೇರು ಪರ್ವತದ ಸನಿಹದಲ್ಲಿ ಇಂಪಾದ ಗಾನವನ್ನು ಕೇಳಿ ಅದರ ಗಾಯಕಿಯನ್ನು ಅರಸುತ್ತಾ ಬಂದು ಮೋಹಿನಿಯನ್ನು ಕಂಡನು. ಅವಳಲ್ಲಿ ಅನುರಾಗಗೊಂಡು ಮದುವೆಯಾಗಲು ಕೇಳಿಕೊಂಡನು. ಮೋಹಿನಿಯೂ ಒಪ್ಪಿ ತಾನು ಕೇಳಿದ ವರವನ್ನು ಕೊಡುವುದಾದರೆ ವಿವಾಹವಾಗಲು ಸಮ್ಮತಿಸಿದಳು. ಮುಂದೆ ಎಂದಾದರೂ ವರವನ್ನು ಕೇಳುವುದಾಗಿ ಹೇಳಿದ ಅವಳನ್ನು ಮದುವೆಯಾಗಿ, ಜೊತೆಯಲ್ಲಿ ಕರೆದುಕೊಂಡು ರುಕ್ಮಾ೦ಗದನು ವಿದಿಶಾ ನಗರಕ್ಕೆ ಬಂದನು.
ಮಹಾರಾಣಿ ಸಂಧ್ಯಾವಳೀ, ರಾಜಕುಮಾರ ಧರ್ಮಾಂಗದ ಮತ್ತು ಇತರರು ರುಕ್ಮಾ೦ಗದ ಮತ್ತು ಮೋಹಿನಿಯರನ್ನು ಆದರಪೂರ್ವಕವಾಗಿ ಬರಮಾಡಿಕೊಂಡು ಸತ್ಕರಿಸಿದರು. ಎಂಟು ವರ್ಷಗಳು ಹೀಗೆ ಕಳೆದ ನಂತರ ಮೋಹಿನಿಯು ಒಂದು ಏಕಾದಶಿಯ ಹಿಂದಿನ ದಿನ ತಾನು ಹಿಂದೆ ಕೇಳಿದ ವರವನ್ನು ಬೇಡಿದಳು. ರುಕ್ಮಾ೦ಗದನು ಏಕದಾಶಿಯ ವ್ರತದ ಮೂರು ದಿನಗಳ ಕಾಲ ಮೋಹಿನಿಯನ್ನು ಬಿಟ್ಟಿರುತ್ತಿದುದರಿಂದ, ಅವಳಿಗೆ ಅವನನ್ನು ಬಿಟ್ಟಿರಲು ಕಷ್ಟವಾಗುವುದರಿಂದ, ಏಕಾದಶಿ ವ್ರತವನ್ನು ನಿಲ್ಲಿಸಬೇಕೆಂದು ಕೇಳಿದಳು. ರುಕ್ಮಾ೦ಗದನು ಇದಕ್ಕೆ ಒಪ್ಪಲಿಲ್ಲ.
ಕೊಟ್ಟ ಮಾತು ತಪ್ಪಿದನೆಂದು ಮೋಹಿನಿಯು ಪ್ರತಿಭಟಿಸಲು ಸಂಧ್ಯಾವಳಿಯು ಮಧ್ಯೆ ಪ್ರವೇಶಿಸಿ ಏಕಾದಶಿ ವ್ರತ ನಿಲ್ಲಿಸುವ ಬದಲು ಮತ್ತೆ ಯಾವುದಾದರೂ ಬದಲಿ ವರವನ್ನು ಕೇಳಿಕೊಳ್ಳುವಂತೆ ಮೋಹಿನಿಯನ್ನು ಪ್ರಾರ್ಥಿಸಿದಳು. ಮೋಹಿನಿಯು ಹಾಗಿದ್ದರೆ ಮಹಾರಾಜನು ತನ್ನ ಕೈಯಾರೆ ರಾಜಕುಮಾರನಾದ ಧರ್ಮಾಂಗದನ ತಲೆಯನ್ನು ಖಡ್ಗದಿಂದ ಕತ್ತರಿಸಿ ಅವನ ತಲೆಯನ್ನು ತಂದು ಕೊಡಲು ಕೇಳಿದಳು.
ಬಹಳ ದುರ್ಭರವಾದ ಈ ವರವನ್ನು ಕೊಡುವಂತೆ, ತಾಯಿಯಾಗಿ ಸಂಕಟ ಪಡುತ್ತಿದ್ದರೂ, ಹಿಂದೆ-ಮುಂದೆ ನೋಡದೆ, ಸಂಧ್ಯಾವಳಿಯು ಮಹಾರಾಜನನ್ನು ಕೋರಿದಳು. ಧರ್ಮಾಂಗದನನ್ನು ಕರೆಸಿದರು. ಅವನು ಸ್ವಲ್ಪವೂ ವಿಚಲಿತನಾಗದೆ "ತಂದೆಯು ಕೊಟ್ಟ ಮಾತಿಗೆ ತಪ್ಪಬಾರದು. ಏಕಾದಶಿ ವ್ರತವೂ ಕೆಡಬಾರದು. ಈ ತುಚ್ಛ ಜೀವನ ಹೋಗಿ ಇವೆರಡೂ ಸಾಧ್ಯವಾಗುವುದಾದರೆ ಸಂತೋಷವಾಗಿ ಸಾವು ಸ್ವೀಕರಿಸುತ್ತೇನೆ" ಎಂದನು.
ರುಕ್ಮಾ೦ಗದನು ಧರ್ಮಾಂಗದನ ಕತ್ತು ಕತ್ತರಿಸಲು ಖಡ್ಗವನ್ನು ತೆಗೆದುಕೊಂಡು ಬೀಸಿದನು. ಆಗ ಮಹಾವಿಷ್ಣುವು ಪ್ರತ್ಯಕ್ಷನಾಗಿ ರುಕ್ಮಾ೦ಗದ, ಸಂಧ್ಯಾವಳೀ ಮತ್ತು ಧರ್ಮಾಂಗದ, ಈ ಮೂವರಿಗೂ ಪರಮಪದವನ್ನು ಕರುಣಿಸಿ ಜೊತೆಯಲ್ಲಿ ಕರೆದೊಯ್ದನು.
*****
ರುಕ್ಮಾ೦ಗದ ಚರಿತ್ರೆಯು ನಮ್ಮ ವಿಶಾಲ ವೈದಿಕ ವಾಂಗ್ಮಯದಲ್ಲಿ ಅಲ್ಲಲ್ಲಿ ಬರುತ್ತದೆ. ನಾರದ ಪುರಾಣದಲ್ಲಿ (ನಾರದೀಯ ಪುರಾಣ) ಇದರ ವಿಸ್ತಾರವಾದ ವಿವರಗಳಿವೆ. ಮೇಲೆ ಕಾಣಿಸಿರುವ ಚಿತ್ರವೂ ಇದರ ಆಧಾರದ ಮೇಲೆ "ರಾಜಾ ರವಿವರ್ಮ" ರಚಿಸಿರುವ ಚಿತ್ರ.
ಮೇಲೆ ಹೇಳಿದ ಕಥೆಯನ್ನು ತಿಳಿಯುವಾಗ ಯಮಧರ್ಮನಿಗೆ ಕಷ್ಟವಾಯಿತೆಂದೂ, ಅವನು ಬಂದಾಗ ಚತುರ್ಮುಖ ಬ್ರಹ್ಮದೇವರಿಗೆ ಏನೂ ಮಾಡಲು ತೋಚಲಿಲ್ಲವೆಂದೂ ತಿಳಿಯಬಾರದು. ಸಿನಿಮಾಗಳಲ್ಲಿ ಅವರನ್ನು ದುರುಳ ಖಳನಾಯಕರನ್ನು ತೋರಿಸುವಂತೆ ಮನರಂಜನೆಗಾಗಿ ಚಿತ್ರಿಸುತ್ತಾರೆ. ರುಕ್ಮಾ೦ಗದ, ಸಂಧ್ಯಾವಳೀ ಮತ್ತು ಧರ್ಮಾಂಗದರ ವ್ರತನಿಷ್ಠೆ ಮತ್ತು ಧರ್ಮಪರಾಯಣತೆ ಪರೀಕ್ಷಿಸಲು ಹೀಗೆ ಮಾಡಿದರು ಎಂದು ತಿಳಿಯಬೇಕು.
ಮೇಲೆ ಹೇಳಿದ "ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮ: ......" ಎನ್ನುವ ಶ್ಲೋಕವನ್ನು ಅನೇಕರು ಷೋಡಶೋಪಚಾರ ಪೂಜೆಯ ಅಂಗವಾಗಿ ಕಡೆಯಲ್ಲಿ ನಮಸ್ಕಾರ ಮಾಡುವಾಗ ಮತ್ತು ಸ್ತೋತ್ರಾದಿಗಳ ಕೊನೆಯಲ್ಲಿ, ದೇವಾಲಯಗಳಲ್ಲಿ ನಮಸ್ಕರಿಸುವಾಗ ಮುಂತಾಗಿ ಹೇಳುವ ಶ್ಲೋಕಗಳ ಜೊತೆಯಲ್ಲಿ ಹೇಳುತ್ತಾರೆ. ಆದರೆ ಅನೇಕರಿಗೆ ಇದರ ಮೂಲ "ನಾರದೀಯ ಪುರಾಣ"ದ ಉತ್ತರ ಭಾಗದ ಆರನೆಯ ಅಧ್ಯಾಯದಲ್ಲಿದೆ ಎಂದು ಗೊತ್ತಿಲ್ಲ. ಇದು ಆರನೆಯ ಅಧ್ಯಾಯದ ಮೂರನೆಯ ಶ್ಲೋಕ.
*****
ಮತ್ತೊಬ್ಬ ಏಕಾದಶಿ ವ್ರತ ದುರಂಧರನಾದ ಅಂಬರೀಷ ಮಹಾರಾಜನ ವೃತ್ತಾಂತವನ್ನು ಮುಂದೆ ಎಂದಾದರೂ ನೋಡೋಣ.
ಸತ್ಯವಂತರಿಗೆಸದಾ ಜಯವೇಲಭಿಸುವುದು ಕಧೆ ಬಹಳ ಚೆನ್ನಾಗಿ
ReplyDeleteದೆ