ಹಿಂದಿನ ಒಂದು ಸಂಚಿಕೆಯಲ್ಲಿ "ಮನವ ಕಬ್ಬಿಣ ಮಾಡು, ಹೇ ಮೃಡನೇ" ಎನ್ನುವ ಶೀರ್ಕಿಕೆಯಡಿ, ಜನಪ್ರಿಯ ರುದ್ರ-ಚಮಕಗಳ ಮೂಲಕ ಮಾಡುವ ಆರಾಧನೆಯಲ್ಲಿ ಶ್ರೀಶಂಭುವಿನ ಬಳಿ ಅನೇಕ ಲೌಕಿಕ ಸಂಪತ್ತುಗಳನ್ನು ಕೇಳುವುದರ ಔಚಿತ್ಯವನ್ನು ಪ್ರಶ್ನಿಸಿಕೊಂಡು ಅದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಅದರ ಕೊನೆಯಲ್ಲಿ "ಮನಸು ಕಾರಣವಲ್ಲ" ಮತ್ತು "ದನುಜ ಗಜ ಮದಹಾರಿ" ಎಂಬ ಎರಡು ಅಭಿವ್ಯಕಿಗಳಿಗೆ ವಿಶೇಷಾರ್ಥಗಳನ್ನು ನೋಡುವ ಪ್ರಯತ್ನ ಮಾಡಬೇಕಿತ್ತು. ಈಗ ಅದನ್ನಿಷ್ಟು ನೋಡೋಣ.
*****
ರುದ್ರದೇವರು ಮನೋಭಿಮಾನಿಗಳು. ನಮ್ಮ ಮನಸ್ಸು ನಾವು ಮಾಡುವ ಎಲ್ಲ ಕೆಲಸ-ಕಾರ್ಯಗಳಿಗೂ ಮೂಲ ಶಕ್ತಿ. ಎಲ್ಲ ರೀತಿಯ ಸಾಧನ-ಸಲಕರಣೆಗಳಿದ್ದರೂ ಮನಸ್ಸು ಕೆಲಸ ಮಾಡದಿದ್ದರೆ ಮನುಷ್ಯನು ನಿಷ್ಕ್ರಿಯನಾಗುತ್ತಾನೆ. ಅದೇ ರೀತಿ ಕೆಲವು ಅವಶ್ಯಕ ಸಂಪತ್ತುಗಳಿಲ್ಲದಿದ್ದರೂ ಕೂಡ ಮನುಷ್ಯನು ಮನಸ್ಸು ಮಾಡಿದರೆ ಅವುಗಳನ್ನು ಹೇಗೋ ಹೊಂದಿಸಿಕೊಂಡು, ಅಥವಾ ಅವುಗಳಿಗೆ ಪರ್ಯಾಯ ಪರಿಕರಗಳನ್ನು ಹುಡುಕಿಕೊಂಡು, ಉದ್ದೇಶಿತ ಕೆಲಸಗಳನ್ನು ಸಾಧಿಸುತ್ತಾನೆ. ಇದು ನಾವು ನಮ್ಮ ನಮ್ಮ ಅನುಭವಗಳಿಂದ ಕಂಡುಕೊಂಡಿರುವ ಸತ್ಯ.
"ನೀನು ಮನಸ್ಸು ಮಾಡಿದರೆ ಇದನ್ನು ಸುಲಭವಾಗಿ ಮಾಡಿ ಮುಗಿಸುವೆ. ಮುಖ್ಯ, ನೀನು ಮನಸ್ಸು ಮಾಡಬೇಕು" ಎನ್ನುವ ಮಾತನ್ನು ನಾವು ಮತ್ತೆ ಮತ್ತೆ ಆಡುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. "ಎಷ್ಟು ಹೇಳಿದರೂ ಅವನು ಮನಸ್ಸು ಮಾಡಲಿಲ್ಲ. ಕೆಲಸ ಆಗಲಿಲ್ಲ" ಅನ್ನುತ್ತೇವೆ. "ವೇರ್ ದೇರ್ ಈಸ್ ಎ ವಿಲ್, ದೇರ್ ಈಸ್ ಎ ವೇ" ಎಂದು ಇಂಗ್ಲಿಷಿನಲ್ಲಿ ಹೇಳುವುದೂ ಇದನ್ನೇ. "ಮನ ಏವ ಮನುಷ್ಯಾಣಾ೦ ಕಾರಣಂ ಬಂಧ ಮೊಕ್ಷಯೋ:" ಎನ್ನುವುದಂತೂ ಬಹಳ ಪ್ರಸಿದ್ಧವಾದ ನುಡಿ. ಮನುಷ್ಯನ ಕರ್ತೃತ್ವ ಶಕ್ತಿಗೆ ಮನಸ್ಸೇ ಕೀಲಿಕೈ. ಮನಸ್ಸು ಈ ಕಡೆ ತಿರುಗಿದರೆ ಅದನ್ನು ಮುಚ್ಚಿ ಬೀಗ ಹಾಕುತ್ತದೆ. ಆ ಕಡೆ ತಿರುಗಿದರೆ ಅದನ್ನು ತೆಗೆದು ದಾರಿಮಾಡುತ್ತದೆ. ನಮ್ಮ ಕೈಯಲ್ಲಿ ಇರುವ ಮತ್ತು ಸಿಕ್ಕುವ ಎಲ್ಲ ಶಕ್ತಿಗಳಲ್ಲಿ ಅತ್ಯಂತ ಪ್ರಮುಖವಾದವುಗಳಲ್ಲಿ ಮನಸ್ಸು ಒಂದು ಮುಖ್ಯ ಶಕ್ತಿ.
ನಾವು ಮಾಡುವ ಕೆಲಸಗಳು ಸರಿಯಾಗಿ, ನೇರವಾಗಿ, ಸಾರ್ಥಕವಾದರೆ, ನ್ಯಾಯಯುತವಾಗಿದ್ದರೆ ಅವುಗಳಿಂದ ಪುಣ್ಯ ಸಂಪಾದನೆ. ಅನ್ಯಾಯದ, ಅಧರ್ಮದ ಕೆಲಸಗಳಾದರೆ ಅವುಗಳಿಂದ ಪಾಪ ಸಂಪಾದನೆ. ಪಾಪ, ಪುಣ್ಯಗಳೆಂಬುವು ಮಾಡುವ ಕೆಲಸಗಳಿಂದ ಬಂದ ಫಲಿತಾಂಶಗಳು. ಆದ್ದರಿಂದಲೇ ಈ ರೀತಿ ಹೇಳುವುದು:
ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆ ಇಲ್ಲದೇ
ದನುಜಗಜ ಮದಹಾರಿ ದಂಡ ಪ್ರಣಾಮ ಮಾಳ್ಫೆ
ಮಣಿಸೋ ಈ ಶಿರವನ್ನು ಸಜ್ಜನರ ಚರಣದಲಿ
ಹೀಗಿರುವಲ್ಲಿ, ಮೇಲೆ ಏಕೆ "ಮನಸು ಕಾರಣವಲ್ಲ" ಎಂದು ಹೇಳಿರುವುದು? ಇದೊಂದು ವಿಚಿತ್ರ ಅಲ್ಲವೇ? ಇದು ಒಂದು ಸಾಧುವಾದ ಪ್ರಶ್ನೆಯೇ. ಪಾಪ ಪುಣ್ಯಕ್ಕೆಲ್ಲಾ ಮನಸ್ಸೇ ಕಾರಣ ಎನ್ನುವುದು ಸರಿ. ಆದರೆ ಮನಸ್ಸು ಒಂದು ವಾಹನವಿದ್ದಂತೆ. ವಾಹನ ಸರಿಯಾಗಿ ನಡೆದರೆ ಅದರಿಂದ ಪ್ರಯೋಜನ. ಅದೇ ವಾಹನ ಅಡ್ಡಾದಿಡ್ಡಿಯಾಗಿ ನಡೆದು ಅಪಘಾತ ಮಾಡಿದರೆ? ಆಗ ವಾಹನದಿಂದ ಆಗುವ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಆದರೆ ಅದು ಅಪಘಾತ ಮಾಡಿದರೆ ಅದಕ್ಕೆ ವಾಹನ ಹೊಣೆ ಅಲ್ಲ. ಒಂದು ಕಾರು ರಸ್ತೆಯಲ್ಲಿ ನಡೆಯುತ್ತಿರುವ ಜನಗಳ ಮೇಲೆ ಹಾದು ಹೋಯಿತು ಎಂದರೆ ಅದು ಕಾರಿನ ತಪ್ಪಲ್ಲ. ಅದು ಅದನ್ನು ನಡೆಸುತ್ತಿರುವ ಚಾಲಕನ ಹೊಣೆ. ಹೀಗೆಯೇ ಮನಸ್ಸಿನ ಕೆಲಸಗಳಿಗೆ ಅದರ ಒಡೆಯನಾದ ಜೀವನೇ ಹೊಣೆ ಹೊರಬೇಕು.
ಯಾವುದೋ ಒಂದು ಅಪಘಾತವಾದಾಗ ಸಂಬಂಧಿಸಿದ ವಾಹನದ ಚಾಲಕನು "ನನಗೇನೂ ಗೊತ್ತಿಲ್ಲ. ನಾನೇನು ಮಾಡಲಿ? ಕಾರು ಅಡ್ಡಾದಿಡ್ಡಿ ಚಲಿಸಿತು. ಅಪಘಾತಕ್ಕೆ ಅದೇ ಕಾರಣ. ಅದನ್ನೇ ಕೇಳಿ. ನನ್ನನ್ನೇನು ಕೇಳುತ್ತೀರಿ?" ಎಂದು ಹೇಳಿದರೆ ಕೇಳಿದವರು ನಗುತ್ತಾರೆ. ಮನಸ್ಸಿನ ವಿಷಯವೂ ಹೀಗೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಅದರಿಂದ ಪ್ರಯೋಜನ ಪಡೆಯುವುದು ಜೀವನ ಜವಾಬ್ದಾರಿ. ಚಾಲಕನು ವಾಹನವನ್ನು ಅಂಕೆಯಲ್ಲಿಟ್ಟುಕೊಂಡು ಸರಿಯಾಗಿ ನಡೆಸಬೇಕು. ಹೀಗೆ ಸರಿಯಾಗಿ ನಡೆಸಲು ತಿಳಿದವರಿಂದ ವಾಹನ ಚಾಲನೆ ಮೊದಲು ಕಲಿಯಬೇಕು. ಟ್ರ್ಯಾಫಿಕ್ ಸಿಗ್ನಲ್ಲುಗಳು ಸರಿಯಾಗಿ ಕೆಲಸ ಮಾಡಬೇಕು. ವಾಹನಗಳು ಸುಸ್ಥಿತಿಯಲ್ಲಿರಬೇಕು. ಮನಸ್ಸಿನೆಂಬ ವಾಹನ ನಡೆಸಲು ಕಲಿಸುವ ಪ್ರಭುಗಳು ಮಹಾರುದ್ರದೇವರು. ನಿಯಮಗಳಿಗೆ ವಿರುದ್ಧವಾಗಿ ಹೋಗದಂತೆ, ಸರಿದಾರಿಯಲ್ಲಿ ನಡೆಯುವಂತೆ ಮೇಲ್ವಿಚಾರಣೆ ಮಾಡುವವರು ಅವರು. ಚಾಲಕನು ಕಲಿಸುವ ಗೈಡನ್ನು ಪಕ್ಕದಲ್ಲಿ ಕೂಡಿಸಿಕೊಂಡರೆ ಅಪಘಾತ ಆಗುವ ಸಂದರ್ದಗಳಲ್ಲಿ ಅವರು ಅವನ್ನು ನಿವಾರಣೆ ಮಾಡುತ್ತಾರೆ. ಅವರ ಪ್ರಾರ್ಥನೆ ಮಾಡಿ, ಅವರ ಮೇಲ್ವಿಚಾರಣೆಯಲ್ಲಿ ಮನಸ್ಸೆಂಬ ವಾಹನ ನಡೆಸಿದರೆ ದುರ್ಘಟನೆಗಳು ಆಗುವುದಿಲ್ಲ.
ಮನಸ್ಸು ಸರಿದಾರಿಯಲ್ಲಿ ಹರಿಯಬೇಕಾದರೆ ಏನು ಮಾಡಬೇಕು? ಕೆಟ್ಟವರ ಸಹವಾಸ ಮಾಡಿದರೆ ಮನಸ್ಸು ಕೆಡುತ್ತದೆ. ಅದೇ ಒಳ್ಳೆಯವರ ಜೊತೆ ಸಿಕ್ಕರೆ ಮನಸ್ಸು ಒಳ್ಳೆಯ ನಡತೆ ತೋರಿಸುತ್ತದೆ. ಹೀಗೆ ಸಜ್ಜನರ ಜೊತೆ ಸಿಗುವಂತೆ ಮಾಡುವವರು ಮಹಾದೇವರು. ಈ ಹಿನ್ನೆಲಿಯಲ್ಲಿ "ಪಾಪ-ಪುಣ್ಯಕ್ಕೆಲ್ಲ ಮನಸು ಕಾರಣವಲ್ಲ. ನಿನ್ನ ಪ್ರೇರಣೆ ಮುಖ್ಯ. ನನ್ನನ್ನು ಸತ್ಕಾರ್ಯಗಳಲ್ಲಿ ಪ್ರೇರೇಪಿಸು. ಈ ಮನಸ್ಸು ರಸ್ತೆಯ ಅಕ್ಕ-ಪಕ್ಕದ ಹಳ್ಳ-ಕೊಳ್ಳಗಳೊಳಗೆ ಬೀಳದಂತೆ ತಡೆ. ಯಾವಾಗಲೂ ನನ್ನನ್ನು ರಕ್ಷಿಸು" ಎಂದು ಹೇಳುವುದು ಮೇಲಿನ ಪ್ರಾರ್ಥನೆಯ ತಿರುಳು.
*****
ಪರಶಿವನ ಆರಾಧನೆ ಮಾಡುವಾಗ ಅವನ ಅನೇಕ ಹೆಸರುಗಳನ್ನೂ, ವಿಶೇಷಣಗಳನ್ನೂ ಉಪಯೋಗಿಸುತ್ತೇವೆ. ಹೀಗೆ ಅವನ ಅನೇಕ ಹೆಸರುಗಳನ್ನು ಹೇಳುವಾಗ "ಕೃತ್ತಿವಾಸ" "ಚರ್ಮಾ೦ಬರ" "ಚರ್ಮಾ೦ಬರಧರ" 'ಗಜಚರ್ಮಾ೦ಬರಧರ" ಮುಂತಾಗಿ ಹೇಳುತ್ತೇವೆ. ಏಕೆ? "ದನುಜ ಗಜ ಮದಹಾರಿ" ಎಂದು ಏಕೆ ಹೇಳಿದರು?
ಅನೇಕ ಜನ ರಕ್ಕಸರು ಸಜ್ಜನರ ಹಿಂಸಕರಾಗಿ ಅವರ ಜೀವನಗಳಿಗೆ ಉಪದ್ರವ ಕೊಡುವುದೇ ವೃತ್ತಿ ಮಾಡಿಕೊಂಡಿದ್ದರು. ಈಗಲೂ ಇದ್ದಾರೆ. ಇಂತಹ ದನುಜರ ಉಪಟಳದಿಂದ ತಮ್ಮನ್ನು ರಕ್ಷಿಸಲು ಸುಜೀವರು ರುದ್ರದೇವರನ್ನು ಪ್ರಾರ್ಥಿಸುತ್ತಾರೆ. ಶಂಭುವು ಸುರಗುರುವು. ಹಿಂದೆ ಒಬ್ಬ ರಾಕ್ಷಸನು ಸಜ್ಜನರಿಗೆ ಬಹಳ ತೊಂದರೆಯನ್ನು ಕೊಡುತ್ತಿದ್ದ. ಆಗಾಗ ಆನೆಯ ರೂಪವನ್ನು ಧರಿಸಿ ಮದಿಸಿದ ಆನೆ ಮನಸ್ಸು ಬಂದಂತೆ ಎಲ್ಲ ಕಡೆ ಧಾಂಧಲೆ ಮಾಡುವಂತೆ ನಡೆದುಕೊಳ್ಳುತ್ತಿದ್ದ. ಆರ್ತ ಭಕ್ತರ ಮನವಿಗೆ ಸ್ಪಂದಿಸಿ ಮಹಾದೇವನು ಆ ಗಜಾಸುರನನ್ನು ಕೊಂದನು. ಅವನ ಚರ್ಮವನ್ನು ಸುಲಿದು ಅದನ್ನೇ ವಸ್ತ್ರದಂತೆ ಧರಿಸಿ "ಒಳ್ಳೆಯ ಜೀವಿಗಳಿಗೆ ಕಷ್ಟ ಕೊಡುವ ದುರುಳರಿಗೆ ಇದೇ ಗತಿ" ಎಂದು ಮಾದರಿ ಮಾಡಿ ತೋರಿಸಿದನು. ಮದಿಸಿದ ಆನೆಯ ರೂಪದ ಗಜಾಸುರನ ಸೊಕ್ಕನ್ನು ಅಡಗಿಸಿ ಕೊಂದುದರಿಂದ "ದನುಜ ಗಜ ಮದ ಹಾರಿ" ಆದನು. ಚರ್ಮವನ್ನು ಹೊದ್ದುದರಿಂದ "ಚರ್ಮಧಾರಿ" ಆದನು. ಆನೆಯ ಚರ್ಮವಾದುದರಿಂದ "ಗಜಚರ್ಮಾ೦ಬರಧರ" ಎಂದು ಹೆಸರಾಯಿತು.

"ವಲುವೂರು" ಎನ್ನುವ ಹೆಸರಿನ ಸ್ಥಳ ತಮಿಳುನಾಡಿನ "ಮಯಿಲಾಡುತುರೈ" (ಹಿಂದಿನ "ಮಾಯಾವರಂ") ಜಿಲ್ಲೆಯ ಒಂದು ಊರು. ಜಿಲ್ಲಾಕೇಂದ್ರದಿಂದ ಆರು ಮೈಲಿ ದೂರದ ಸಣ್ಣ ಪಟ್ಟಣ. ಇಲ್ಲರುವ ದೇವಾಲಯದಲ್ಲಿ ಎಂಟು ಕೈಗಳುಳ್ಳ "ಗಜಾಸುರಸಂಹಾರಿ" ಈಶ್ವರನ ಕಂಚಿನ ಪ್ರತಿಮೆಯನ್ನು ಆರಾಧಿಸುತ್ತಾರೆ. ಕರ್ನಾಟಕದ ಹೆಸರಾಂತ ಹಳೇಬೀಡಿನ "ಶಾಂತಲೇಶ್ವರ" ದೇವಾಲಯದಲ್ಲಿ ಗಜಾಸುರಸಂಹಾರಿ ಪ್ರತಿಮೆಯ ಕೆತ್ತನೆಯಿದೆ. ಪಕ್ಕದ ಚಿತ್ರದಲ್ಲಿ ಅದನ್ನು ನೋಡಬಹುದು.
ಮಹೇಶ್ವರನು ಕೇವಲ ದುಷ್ಟರ ಶಿಕ್ಷೆಗೆ ಮಾತ್ರವಲ್ಲದೆ ಒಳ್ಳೆಯವರಿಗೆ ಬಹುಪ್ರೀತಿ ತೋರಿಸುವ ಕರುಣಾಳು. ಉಮಾಪತಿಗೆ ಕೆಟ್ಟವರನ್ನು ಕಂಡರೆ ಎಷ್ಟು ಕೋಪವೋ, ಒಳ್ಳೆಯವರನ್ನು ಕಂಡರೆ ಅಷ್ಟೇ ಪ್ರೀತಿ. "ಖಳಜನ ಕೃತರೋಷ:". ಹಾಗೆಯೇ "ಭಕ್ತಜನಾಶ್ರ್ರಯ ವರದ". ಪೊಲೀಸು ಅಧಿಕಾರಿಗೆ ಕಳ್ಲರು ಹೆದರುವಂತೆ ದುಷ್ಟರು ಅವರನ್ನು ಕಂಡರೆ ಹೆದರುತ್ತಾರೆ. ಸಜ್ಜನರು ರಕ್ಷಣೆಗೆ ಅವರ ಮೊರೆ ಹೋಗುತ್ತಾರೆ.
*****
ದೇವೇಂದ್ರನು ಎಲ್ಲ ದೇವತೆಗಳಿಗೆ ಅಧಿಪತಿಯು. ಸಕಲ ಮಂತ್ರಪೂತ ಅಸ್ತ್ರಗಳೂ ಅವನ ಬಳಿ ಇವೆ. ಯಾವ ಅಸ್ತ್ರ ಬೇಕಾದರೂ ಅವನನ್ನೇ ಕೇಳಬೇಕು. ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ತಯಾರಾಗಲು ಅರ್ಜುನನು ವನವಾಸ ಕಾಲದಲ್ಲಿ ಅಸ್ತ್ರಗಳ ಶೇಖರಣೆಗೆ ಹೊರಡುತ್ತಾನೆ. ತಪಸ್ಸಿನಿಂದ ದೇವೇಂದ್ರನನ್ನು ಮೆಚ್ಚಿಸುತ್ತಾನೆ. ಅಸ್ತ್ರಗಳನ್ನು ಕೇಳುತ್ತಾನೆ. ದೇವೇಂದ್ರನು ಅರ್ಜುನನು ತನ್ನ ಮಗನಾದರೂ ಅವನಿಗೆ ಕೊಡುವುದಿಲ್ಲ. "ಎಲ್ಲ ಅಸ್ತ್ರಗಳೂ ನನ್ನ ಬಳಿ ಇವೆ. ಆದರೆ ನಾನು ಅವುಗಳ ನ್ಯಾಸಾಧಿಕಾರಿ (ಟ್ರಸ್ಟಿ) ಇರುವಂತೆ. ಮಹಾದೇವರು ಅವುಗಳ ಒಡೆಯರು. ಅವರ ಅಪ್ಪಣೆ ಇಲ್ಲದೆ ನಾನು ಕೊಡುವುದಿಲ್ಲ. ಮೊದಲು ಅವರನ್ನು ಮೆಚ್ಚಿಸಿ ಅವರ ಪ್ರೀತಿ ಸಂಪಾದಿಸು. ಅವರಿಂದ "ಪಾಶುಪತ" ಅನ್ನುವ ಅಸ್ತ್ರವನ್ನು ಪಡೆದುಕೋ. ನಂತರ ಅವರ ಅಪ್ಪಣೆಯಾಗುವುದರಿಂದ ನಾನು ಬೇರೆ ಎಲ್ಲ ಅಸ್ತ್ರಗಳನ್ನೂ ಕೊಡುತ್ತೇನೆ" ಅನ್ನುತ್ತಾನೆ.
ಅಂತಹ ದೇವೆತೆಗಳ ಅಧಿಪತಿಗೂ ದಳಪತಿಗಳಾದವರು ಮಹಾರುದ್ರದೇವರು.
Enjoyed reading. Very interesting!
ReplyDeleteControlling the mind is not always easy for us. Also to know why is it necessary to have it for our smooth journey in our life.. A. Very good analogy of controlling the car whiie driving is nicely explained. Another spiritual lesson for us. UR….
ReplyDelete✍️The first paragraph is very important for us to understand the indepth of the message that the author is trying to portray though this amazing article.
ReplyDeleteYes, many times we experience this, though the strong intentions are there to carry out certain things we fail to do so. As you have rightly pointed out 'Sathsang' provides us with the right motivation to keep moving forward at such situations.
Thanks ever so much as long as we keep in touch with your writings we get motivated 🙏