Saturday, July 26, 2025

ಲಾಭವೂ ನಿನ್ನದೇ; ನಷ್ಟವೂ ನಿನ್ನದೇ!


ಮನುಷ್ಯನಿಗೆ ಬಹಳ ಮುಖ್ಯವಾದ ಮೂರು ಸಂಪತ್ತುಗಳು ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ. ಈ ಮೂರು ಸಂಪತ್ತುಗಳು ಎಲ್ಲರಿಗೂ ಸಿಕ್ಕುವುದಿಲ್ಲ. ಏಕೆ ಸಿಕ್ಕುವುದಿಲ್ಲ? ಇದಕ್ಕೆ ಕಾರಣಗಳನ್ನು ಹಿಂದೆ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದ್ದೆವು. "ಕೆಸರಿಂದ ಕೆಸರ ತೊಳೆದಂತೆ" ಎಂಬ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ  ಇದರ ಮುಂದಿನ ಭಾಗವನ್ನೂ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಿ ನೆನಪಿಸಿಕೊಳ್ಳಬಹುದು. 

ನಾವು ಮಾಡುವ ತಪ್ಪುಗಳಿಗೆ ಸಮಾಜದಲ್ಲಿ ಶಿಕ್ಷೆ ಎಂಬುದೊಂದಿದೆ. ಕಾನೂನು-ಕಟ್ಟಲೆಗಳು ಪ್ರತಿಯೊಂದು ತಪ್ಪಿಗೂ ಅದಕ್ಕೆ ಪರ್ಯಾಯವಾದ ಶಿಕ್ಷೆಯನ್ನು ನಿಗದಿ ಪಡಿಸಿವೆ. ಒಂದೇ ತರಹದ ತಪ್ಪುಗಳಾದರೂ ಅವುಗಳ ತೀವ್ರತೆ ಗಮನಿಸಿ ನ್ಯಾಯಾಧೀಶರು ಶಿಕ್ಷೆ ನಿಗದಿ ಪಡಿಸುತ್ತಾರೆ. ಇದೇ ರೀತಿ ನಮ್ಮ ನಂಬಿಕೆಗಳ ಪ್ರಕಾರ ದುಷ್ಕರ್ಮಗಳಿಗೆ ಶಿಕ್ಷೆ ಉಂಟು. ಇಲ್ಲಿಯೂ ಅಂತಹ ಶಿಕ್ಷಾರ್ಹ ತಪ್ಪುಗಳನ್ನು ಮಾಡುವವನ ಪರಿಸ್ಥಿತಿಯನ್ನು ಕಂಡು ಅನುಭವಿಸಬೇಕಾದ ತೀವ್ರತೆ ನಿರ್ಧಾರ ಆಗುತ್ತದೆ. 

ಪರಮಾತ್ಮನ ಸೃಷ್ಟಿಯಲ್ಲಿ ಸರಿ-ತಪ್ಪುಗಳಿಗೆ ವೈದೃಶ್ಯ ಅಥವಾ ಪ್ರತಿಭಾರ ಇರುವುದಿಲ್ಲ. (ಇದನ್ನು ಇಂಗ್ಲಿಷಿನಲ್ಲಿ ಸೆಟ್-ಆಫ್ ಅನ್ನುತ್ತಾರೆ). ಉದಾಹರಣೆಗೆ: ಒಬ್ಬನು ಹತ್ತು ತೂಕ ಪುಣ್ಯ ಮಾಡಿ ಐದು ತೂಕ ಪಾಪ ಮಾಡಿದ್ದಾನೆ ಎನ್ನುವ. "ಐದು ತೂಕ ಪಾಪಕ್ಕೆ ಐದು ತೂಕ ಪುಣ್ಯ ವಜಾ ಹಾಕಿಕೊಳ್ಳಿ. ಮಿಕ್ಕಿದ ಐದು ತೂಕದ ಪುಣ್ಯಕ್ಕೆ ಸುಖ ಕೊಡಿ. ದುಃಖ ಬೇಡ" ಎಂದು ಅವನು ಕೇಳಿದರೆ ಅದನ್ನು ಒಪ್ಪಿಕೊಳ್ಳುವ ಹಾಗಿಲ್ಲ. ಐದು ತೂಕ ಪಾಪದ ದುಃಖ ಅನುಭವಿಸಲೇ ಬೇಕು. ಅಂತೆಯೇ, ಹತ್ತು ತೂಕ ಪುಣ್ಯದ ಫಲವನ್ನೂ ಉಣ್ಣಬೇಕಾಗುತ್ತದೆ. ಹೀಗಾಗಿ ಮಾಡಿದ ಪ್ರತಿ ಕರ್ಮವೂ ಅದಕ್ಕೆ ನಿಗದಿಯಾದ ಸುಖ ಅಥವಾ ದುಃಖ ತಂದೇ ತರುತ್ತದೆ. ತಪ್ಪಿಸಿಕೊಳ್ಳುವಹಾಗಿಲ್ಲ. 

ಹಿಂದೆ ಒಂದು ಸಂಚಿಕೆಯಲ್ಲಿ "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಫಲವು, ಅಸುನಾಥ ಹರಿಯೇ ಪೊರೆಯೊ" ಎನ್ನುವುದನ್ನು ಚರ್ಚಿಸಿದ್ದೆವು. ಇದನ್ನು ಇನ್ನೂ ಸ್ವಲ್ಪ ವಿವರವಾಗಿ ನೋಡಿದರೆ ಒಳ್ಳೆಯದು ಎಂದು ಮಿತ್ರರೊಬ್ಬರು ಸೂಚಿಸಿದ್ದಾರೆ. ಅದನ್ನು ಈಗ ನೋಡೋಣ. 

*****

ಏನೋ ಒಂದು ಕಾರಣದಿಂದ, ತಿಳಿದೋ ತಿಳಿಯದೆಯೋ ಒಂದು ತಪ್ಪು ಆಗಿದೆ. ಮಳೆಯಲ್ಲಿ ನೆನೆದುವು ಅನ್ನೋಣ. ಅದರಿಂದ ಒಂದು ಖಾಯಿಲೆಯೋ, ಜ್ವರವೋ ಬಂತು. ಆಯಿತು. ಅದನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ? ಇರುತ್ತದೆ. ವೈದ್ಯರ ಬಳಿ ಹೋದರೆ ರೋಗಕ್ಕೆ ತಕ್ಕ ಮದ್ದು ಕೊಡುತ್ತಾರೆ. ಆ ಮದ್ದಿನಿಂದ ಖಾಯಿಲೆ ಗುಣ ಆಗಬಹುದು. ಆದರೆ ಸರಿಯಾದ ವೈದ್ಯರ ಬಳಿಗೆ ಹೋಗಬೇಕು. "ಸರಿಯಾದ ವೈದ್ಯ ಸಿಗುವುದು, ಅನುಕೂಲಕರನಾದ ಗಂಡ ಅಥವಾ ಅನುಕೂಲಕರಳಾದ ಹೆಂಡತಿ ಸಿಗುವುದು, ಇವೆರಡೂ ಒಂದು ರೀತಿಯ ಲಾಟರಿ" ಎನ್ನುವುದು ಅನೇಕರ ಅನುಭವದಿಂದ ತಿಳಿದ ಸತ್ಯ. ಇದರ ಫಲಿತಾಂಶ ಗೊತ್ತಾಗುವುದು ಕೆಲ ಕಾಲದ ನಂತರವೇ. ಥರ್ಮಾಮೀಟರ್ ನೋಡಿ ಜ್ವರ ಕಂಡುಹಿಡಿಯುವಂತೆ ಇದಕ್ಕೆ ಇನ್ನೂ ಯಾವುದೇ ಮೀಟರ್ ಬಂದಿಲ್ಲ. 

ಒಳ್ಳೆಯ ವೈದ್ಯರೇ ಸಿಕ್ಕಿದರು ಎನ್ನೋಣ. ವೈದ್ಯರು ಬರೆದುಕೊಟ್ಟ ಚೀಟಿಯಂತೆ ಸರಿಯಾದ ಮದ್ದೂ ಸಿಗಬೇಕು. ಇಂದಿನ ಮಾರುಕಟ್ಟೆಯಲ್ಲಿ ನಕಲಿ ವೈದ್ಯರೂ ಉಂಟು. ಅದ್ಕಕಿಂತ ಹೆಚ್ಚಾಗಿ ನಕಲಿ ಔಷಧಗಳೂ ಉಂಟು. ಈಗಿನ ಮದ್ದುಗಳಿಗೆ ಒಂದು ವಿಶೇಷ ಗುಣವಿರುತ್ತದೆ. ಔಷಧದ ಬಾಟಲಿನ ಮೇಲೆ ಅಂಟಿಸಿದ ಚೀಟಿಯಲ್ಲಿ ಎರಡು ಪಟ್ಟಿಗಳಿರುತ್ತವೆ. ಮೊದಲನೆಯದು ಅದು ಗುಣಪಡಿಸುವ ಖಾಯಿಲೆಗಳು. ಎರಡನೆಯದು ಅದರಿಂದ ಆಗಬಹುದಾದ ಅಡ್ಡ ಪರಿಣಾಮಗಳು (ಸೈಡ್ ಎಫೆಕ್ಟ್ಸ್). ಅನೇಕ ವೇಳೆ ಮೊದಲಿನ ಪೆಟ್ಟಿಗಿಂತ ಎರಡನೆಯದೇ ದೊಡ್ಡದಿರುತ್ತದೆ. ವೈದರಿಗೂ ಇದು ಚೆನ್ನಾಗಿ ಗೊತ್ತು. ಆದ್ದರಿಂದ ಮದ್ದು ಕೊಡುವಾಗಲೇ ಜೊತೆಯಲ್ಲಿ ಇನ್ನೊಂದನ್ನು ಕೊಟ್ಟಿರುತ್ತಾರೆ. "ಕೆಲವರಿಗೆ ಈ ಮದ್ದಿನಿಂದ ಹೊಟ್ಟೆ ನೋವು ಬರುತ್ತದೆ. ಹಾಗೆ ಬಂದರೆ ಎರಡನೆಯ ಮದ್ದು ತೆಗೆದುಕೊಳ್ಳಿ" ಎಂದು ಅವರೇ ಹೇಳಿ ಉಪಕಾರ ಮಾಡಿರುತ್ತಾರೆ. 

ಪಾಪ ಕರ್ಮ ಮಾಡಿದ್ದೋ, ಅದಾಗದೆ ಆಯಿತೋ, ಒಟ್ಟಿನಲ್ಲಿ ಅಂಟಿಕೊಂಡಿದೆ. ಅಂಟಿರುವುದು ಗೊತ್ತಾಯಿತು. ಅದಕ್ಕೆ ಪರಿಹಾರ ಹೇಳುವವರು ಒಬ್ಬರು ಬೇಕು. ಅವರು ಸರಿಯಾಗಿರಬೇಕು. ಅವರು ಹೇಳಿದ ಪರಿಹಾರವೂ ಸರಿಯಾಗಿರಬೇಕು. ಯಾವುದೋ ಒಂದು ಹೋಮ ಮಾಡಿ ಎಂದರು. ಅದು ಸರಿಯಾದ ಪ್ರಾಯಶ್ಚಿತ್ತ ಆಗಿರಬೇಕು. ಕ್ರಮವಾಗಿ ಮಾಡಿಸುವವರು ಸಿಗಬೇಕು. ತಂದ ಪದಾರ್ಥಗಳು ಶುದ್ಧವಾಗಿರಬೇಕು. ಮಾಡುವಾಗ ಭಾವ ಶುದ್ದಿ ಇರಬೇಕು. ಎಲ್ಲವೂ ಸರಿಯಾಗಿ ಆಗಬೇಕು. ಆಗ ಸರಿಯಾದ ಪರಿಹಾರ ಸಿಗಬಹುದು. 

ಮಾಡಹೊರಟಿದ್ದು ಒಳ್ಳೆಯ ಕೆಲಸವೇ. ಆದರೆ ಇವುಗಳಲ್ಲಿ ಎಲ್ಲಿಯೋ, ಏನೋ, ಎಡವಟ್ಟಾಯಿತು. ಮಾಡಿಸುವವರು, ತಿದ್ದುವವರೇ ಎಡವಿದರು. ಪದಾರ್ಥಗಳಲ್ಲಿ ಕಂಡೋ, ಕಾಣದೆಯೋ ದೋಷ ಇತ್ತು. ಮಾಡುವಾಗ ಮನಸ್ಸು ಚಂಚಲ ಆಯಿತು. ಪರಿಣಾಮ ಏನು?

ಕೆಸರಿನಿಂದ ಕೊಳಕಾದ ವಸ್ತ್ರ ತೊಳೆಯಲು ಕೊಳಕು ನೀರು ಉಪಯೋಗಿಸಿದಂತೆ ಆಯಿತು. ಒಂದು ದುಷ್ಕರ್ಮ ಕಳೆಯಲು ಏನೋ ಮಾಡ ಹೋಗಿ ಮತ್ತೊಂದು ದುಷ್ಕರ್ಮ ಅಂಟಿಕೊಂಡಿತು. ಬಟ್ಟೆ ಶುದ್ಧವಾಗುವ ಬದಲು ಇನ್ನಷ್ಟು ಕೊಳಕಾಯಿತು. ಕೆಸರಿಂದ ಕೆಸರು ತೊಳೆದಂತೆ ಆಯಿತು. ಇದನ್ನೇ ದಾಸರು "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು" ಎಂದರು. ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ?

*****

ನಮ್ಮ ಮನೆಯ ಎದುರುಗಡೆ ಎರಡು ಅಂಗಡಿಗಳಿವೆ. ಮೊದಲನೆಯದು ಯಜಮಾನನೇ ನಡೆಸುವ ಅಂಗಡಿ. ಬೆಳಗಿನಿಂದ ಸಂಜೆಯವರೆಗೆ ಅವನು ಎಲ್ಲ ವ್ಯವಹಾರ ನಡೆಸುತ್ತಾನೆ. ದಿನದ ಕೊನೆಯಲ್ಲಿ ಲೆಕ್ಕ ನೋಡುತ್ತಾನೆ. ವಹಿವಾಟಿನಲ್ಲಿ ಬಂದ ಹಣವನ್ನೆಲ್ಲಾ ತಿಜೋರಿಯಲ್ಲಿ ಭದ್ರವಾಗಿಡುತ್ತಾನೆ. ವರ್ಷದ ಕೊನೆಯಲ್ಲಿ ಎಲ್ಲಾ ಜಮಾ-ಖರ್ಚು ತಾಳೆ ಹಾಕುತ್ತಾನೆ. ಖರ್ಚಿಗಿಂತ ಆದಾಯ ಜಾಸ್ತಿಯಾದರೆ ಅವನಿಗೆ ಲಾಭ. ಆದಾಯಕ್ಕಿಂತ ಖರ್ಚು ಜಾಸ್ತಿ ಆದರೆ ಅವನಿಗೆ ನಷ್ಟ. ರಾತ್ರಿ ಅಂಗಡಿ ಬಾಗಿಲು ಹಾಕಿದ್ದಾಗ ಕಳ್ಳರು ನುಗ್ಗಿ ಹಣ ದೋಚಿದರೆ ಅವನ ಲಾಭವೆಲ್ಲ ಗೋತ. ಯಾವಾಗಲೂ ಲಾಭದ ಚಿಂತೆ. ನಷ್ಟದ ಭೀತಿ. 

ಎರಡನೆಯ ಅಂಗಡಿಯನ್ನೂ ಒಬ್ಬ ನಡೆಸುತ್ತಿದ್ದಾನೆ. ಅದು ಅವನ ಯಜಮಾನನ ಅಂಗಡಿ. ಯಜಮಾನ ಎಲ್ಲಿಯೋ ಇದ್ದಾನೆ. ಎಲ್ಲ ಭಾರ ಇಲ್ಲಿ ನಡೆಸುವವನ ಮೇಲೆ ಬಿಟ್ಟಿದ್ದಾನೆ. ಇವನು ನಿರ್ವಂಚನೆಯಿಂದ ನಡೆಸುತ್ತಿದ್ದಾನೆ. ಮೊದಲ ಅಂಗಡಿಯವನಂತೆ ಇವನೂ ಎಲ್ಲಾ ಮಾಡುತ್ತಾನೆ. ಸಂಜೆ ಹಣ ತಿಜೋರಿಯಲ್ಲಿ ಭದ್ರ ಮಾಡಿ ಕೀಲಿಕೈ ಯಜಮಾನನಿಗೆ ಒಪ್ಪಿಸುತ್ತಾನೆ. "ಲಾಭವೂ ನಿನ್ನದೇ. ನಷ್ಟವೂ ನಿನ್ನದೇ. ನನ್ನದೇನಿದ್ದರೂ ನ್ಯಾಯವಾಗಿ ವ್ಯವಹಾರ ಮಾಡುವುದು" ಎಂದು ನಡೆಯುತ್ತಾನೆ. ಅಂಗಡಿ ಅವನದಲ್ಲ ಎನ್ನುವ ಪ್ರಜ್ಞೆ ಅವನಿಗಿದೆ. ರಾತ್ರಿ ಹಣ ಕಳುವಾದರೆ ಅವನ ಹಣವಲ್ಲ. ಲಾಭ ಅಥವಾ ನಷ್ಟ ಅವನದಲ್ಲ. ಮೊದಲನೆಯ ಅಂಗಡಿಯವಂತೆ ಇವನಿಗೆ ಲಾಭ-ನಷ್ಟದ ಚಿಂತೆಯಿಲ್ಲ. 

ಬ್ಯಾಂಕಿನಿಂದ ಸಾಲ ತಂದಿದ್ದಾಯಿತು. ಈಗ ತೀರಿಸಲೇಬೇಕು. ತೀರಿಸದಿದ್ದರೆ ವಸೂಲಿ ತಂಡದವರು ಪ್ರಾಣ ತಿನ್ನುತ್ತಾರೆ. ನೋಟೀಸು ಕೊಡುತ್ತಾರೆ. ಆಸ್ತಿ ಹರಾಜು ಹಾಕುತ್ತಾರೆ. ಬಂದಿಖಾನೆಗೂ ದೂಡಬಹುದು. ಸಾಲ ತರಬಾರದಿತ್ತು. ತಂದಾಯಿತು. ಈಗ ಏನು ಮಾಡುವುದು?

ಇದಕ್ಕೂ ಒಂದು ಪರಿಹಾರ ಇದೆ. ಬ್ಯಾಂಕಿನವರ ಬಳಿ ನಮ್ಮ ಕಷ್ಟ-ಸುಖ ಹೇಳಿಕೊಳ್ಳಬೇಕು. ಅವರು ಒಪ್ಪಬಹುದು. ಒಪ್ಪದೇ ಇರಬಹುದು. ಪ್ರಯತ್ನವನ್ನಂತೂ ಮಾಡಬಹುದು. ಅವರು ಒಪ್ಪಿಕೊಂಡು "ಹೋಗಲಿ ಬಿಡಿ. ನಿಮಗೆ ಹಿಂದೆ ಕೊಡುವ ಶಕ್ತಿ ಇಲ್ಲ. ಸಾಲ ಮನ್ನಾ ಮಾಡಿದ್ದೇವೆ" ಅಂದರೆ ಈ ಸಾಲದಿಂದ ಬಿಡುಗಡೆ!

*****

"ದುಷ್ಕರ್ಮ ಪರಿಹರಿಸೋ, ಸ್ವಾಮಿ" ಎಂದು ದಾಸರು ಕೇಳಿರುವುದೂ ಇದರಂತೆಯೇ. ಅವನು ಯಜಮಾನ. ನಾನು ಕೇವಲ ಅಂಗಡಿ ನಡೆಸುವ ಎರಡನೆಯ ಅಂಗಡಿಯವನಂತೆ ಎನ್ನುವುದು ಮರೆತು ಮೊದಲಿನ ಅಂಗಡಿಯವಂತೆ ಬದುಕಿದೆವು. ಲಾಭ-ನಷ್ಟ ನಮಗೆ ಅಂಟಿಕೊಂಡಿತು. ಎರಡನೆಯವನಂತೆ ಇದ್ದಿದ್ದರೆ ಆಗ ನಿಷ್ಕಾಮ ಕರ್ಮ ಆಗುತ್ತಿತ್ತು. ಈಗ ಈ ಭಾರ ಹೊರಲು ಆಗುತ್ತಿಲ್ಲ. ಅವನನ್ನೇ ಮೊರೆ ಹೋಗಿ ಕೇಳುವುದು. "ದಯವಿಟ್ಟು ಈ ಸಾಲ ಮನ್ನಾ ಮಾಡು. ಈ ದುಷ್ಕರ್ಮ ಪರಿಹಾರ ಮಾಡು" ಎಂದು ಕೂಗುವುದು. 

ಅವನು ಒಪ್ಪಬಹುದು. ಒಪ್ಪಿಯಾನು. ಅವನೋ, "ಕರ್ತು೦, ಆಕರ್ತು೦, ಅನ್ಯಥಾ ಕರ್ತು೦ ಶಕ್ತ:". ಏನನ್ನು ಬೇಕಾದರೂ ಮಾಡಬಲ್ಲ. ಮಾಡಿದ್ದನ್ನು ಅಳಿಸಬಲ್ಲ. ಮತ್ತೇನನ್ನೋ ಮಾಡಬಲ್ಲ.  ಸಾಲ ಮನ್ನಾ ಮಾಡಬಹುದು. ಹೊತ್ತಿರುವ ಪಾಪ ಕರ್ಮಗಳ ರಾಶಿಯನ್ನು ಕ್ಷಣಾರ್ಧದಲ್ಲಿ ಸುತ್ತು ಭಸ್ಮ ಮಾಡಿ ಹೆಗಲಿನ ಭಾರದಿಂದ ಮುಕ್ತಿ ಕೊಡಬಹುದು. 

*****

ನಂಬುವವರು ನಂಬಬಹುದು. ಬಿಡುವವರು ಬಿಡಬಹುದು. ಇದು ಒಂದು ರೀತಿಯ ತರ್ಕ. ಅನೇಕರು ಪುನರ್ಜನ್ಮವನ್ನು ನಂಬುವುದಿಲ್ಲ. ದೇವರಿದ್ದಾನೆ ಅನ್ನುವುದನ್ನೂ ನಂಬುವುದಿಲ್ಲ. ಅವರವರಿಗೆ ಬಿಟ್ಟದ್ದು. 

ಎರಡನೇ ಅಂಗಡಿಯವನಂತೆ ಜೀವನ ನಡೆಸಿದವನಿಗೆ ಒಂದು ಖಚಿತವಾದ ಲಾಭ ಉಂಟು. ಈ ಜನ್ಮದಲ್ಲಿ ಬ್ಲಡ್ ಪ್ರೆಶರ್ ಚೆನ್ನಾಗಿರುತ್ತದೆ. ಊಟ ಸೇರುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ದಿನಗಳು ಚೆನ್ನಾಗಿ ಕಳೆಯುತ್ತವೆ. ಮುಂದಿನದನ್ನು ಮುಂದೆ ನೋಡಬಹುದು! 

1 comment:

  1. ನಿಷ್ಕಾಮ ಕರ್ಮಿಗೆ ಮಾನಸಿಕ ಒತ್ತಡ ಇಲ್ಲ.ಹಾಗಾಗಿ ಆರೋಗ್ಯ ಭಾಗ್ಯ ಒದಗುತ್ತದೆ.
    ಐಶ್ವರ್ಯ ಆಯಸ್ಸು ಇದ್ದರೂ ಇಲ್ಲದಿದ್ದರೂ ಅವನಿಗೆ ಒಂದೇ. ಎಷ್ಟಿದ್ದರೆ ಅಷ್ಟು ಸಾಕು. ಸಂತೃಪ್ತ ಜೀವನ.ಸಮಾಧಾನಿ ಮನೋಧರ್ಮ.
    ಅಳವಡಿಸಿಕೊಳ್ಳಬೇಕು ಅಷ್ಟೇ.
    ಲೇಖನ ಸುಖಜೀವನದ ಮರ್ಮವನ್ನು ಎಷ್ಟು ಸರಳವಾಗಿ ಹೇಳುತ್ತದೆ!
    ವಂದನೆಗಳು.

    ReplyDelete