Showing posts with label Dushkarma. Show all posts
Showing posts with label Dushkarma. Show all posts

Saturday, July 26, 2025

ಲಾಭವೂ ನಿನ್ನದೇ; ನಷ್ಟವೂ ನಿನ್ನದೇ!


ಮನುಷ್ಯನಿಗೆ ಬಹಳ ಮುಖ್ಯವಾದ ಮೂರು ಸಂಪತ್ತುಗಳು ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ. ಈ ಮೂರು ಸಂಪತ್ತುಗಳು ಎಲ್ಲರಿಗೂ ಸಿಕ್ಕುವುದಿಲ್ಲ. ಏಕೆ ಸಿಕ್ಕುವುದಿಲ್ಲ? ಇದಕ್ಕೆ ಕಾರಣಗಳನ್ನು ಹಿಂದೆ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದ್ದೆವು. "ಕೆಸರಿಂದ ಕೆಸರ ತೊಳೆದಂತೆ" ಎಂಬ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ  ಇದರ ಮುಂದಿನ ಭಾಗವನ್ನೂ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಿ ನೆನಪಿಸಿಕೊಳ್ಳಬಹುದು. 

ನಾವು ಮಾಡುವ ತಪ್ಪುಗಳಿಗೆ ಸಮಾಜದಲ್ಲಿ ಶಿಕ್ಷೆ ಎಂಬುದೊಂದಿದೆ. ಕಾನೂನು-ಕಟ್ಟಲೆಗಳು ಪ್ರತಿಯೊಂದು ತಪ್ಪಿಗೂ ಅದಕ್ಕೆ ಪರ್ಯಾಯವಾದ ಶಿಕ್ಷೆಯನ್ನು ನಿಗದಿ ಪಡಿಸಿವೆ. ಒಂದೇ ತರಹದ ತಪ್ಪುಗಳಾದರೂ ಅವುಗಳ ತೀವ್ರತೆ ಗಮನಿಸಿ ನ್ಯಾಯಾಧೀಶರು ಶಿಕ್ಷೆ ನಿಗದಿ ಪಡಿಸುತ್ತಾರೆ. ಇದೇ ರೀತಿ ನಮ್ಮ ನಂಬಿಕೆಗಳ ಪ್ರಕಾರ ದುಷ್ಕರ್ಮಗಳಿಗೆ ಶಿಕ್ಷೆ ಉಂಟು. ಇಲ್ಲಿಯೂ ಅಂತಹ ಶಿಕ್ಷಾರ್ಹ ತಪ್ಪುಗಳನ್ನು ಮಾಡುವವನ ಪರಿಸ್ಥಿತಿಯನ್ನು ಕಂಡು ಅನುಭವಿಸಬೇಕಾದ ತೀವ್ರತೆ ನಿರ್ಧಾರ ಆಗುತ್ತದೆ. 

ಪರಮಾತ್ಮನ ಸೃಷ್ಟಿಯಲ್ಲಿ ಸರಿ-ತಪ್ಪುಗಳಿಗೆ ವೈದೃಶ್ಯ ಅಥವಾ ಪ್ರತಿಭಾರ ಇರುವುದಿಲ್ಲ. (ಇದನ್ನು ಇಂಗ್ಲಿಷಿನಲ್ಲಿ ಸೆಟ್-ಆಫ್ ಅನ್ನುತ್ತಾರೆ). ಉದಾಹರಣೆಗೆ: ಒಬ್ಬನು ಹತ್ತು ತೂಕ ಪುಣ್ಯ ಮಾಡಿ ಐದು ತೂಕ ಪಾಪ ಮಾಡಿದ್ದಾನೆ ಎನ್ನುವ. "ಐದು ತೂಕ ಪಾಪಕ್ಕೆ ಐದು ತೂಕ ಪುಣ್ಯ ವಜಾ ಹಾಕಿಕೊಳ್ಳಿ. ಮಿಕ್ಕಿದ ಐದು ತೂಕದ ಪುಣ್ಯಕ್ಕೆ ಸುಖ ಕೊಡಿ. ದುಃಖ ಬೇಡ" ಎಂದು ಅವನು ಕೇಳಿದರೆ ಅದನ್ನು ಒಪ್ಪಿಕೊಳ್ಳುವ ಹಾಗಿಲ್ಲ. ಐದು ತೂಕ ಪಾಪದ ದುಃಖ ಅನುಭವಿಸಲೇ ಬೇಕು. ಅಂತೆಯೇ, ಹತ್ತು ತೂಕ ಪುಣ್ಯದ ಫಲವನ್ನೂ ಉಣ್ಣಬೇಕಾಗುತ್ತದೆ. ಹೀಗಾಗಿ ಮಾಡಿದ ಪ್ರತಿ ಕರ್ಮವೂ ಅದಕ್ಕೆ ನಿಗದಿಯಾದ ಸುಖ ಅಥವಾ ದುಃಖ ತಂದೇ ತರುತ್ತದೆ. ತಪ್ಪಿಸಿಕೊಳ್ಳುವಹಾಗಿಲ್ಲ. 

ಹಿಂದೆ ಒಂದು ಸಂಚಿಕೆಯಲ್ಲಿ "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಫಲವು, ಅಸುನಾಥ ಹರಿಯೇ ಪೊರೆಯೊ" ಎನ್ನುವುದನ್ನು ಚರ್ಚಿಸಿದ್ದೆವು. ಇದನ್ನು ಇನ್ನೂ ಸ್ವಲ್ಪ ವಿವರವಾಗಿ ನೋಡಿದರೆ ಒಳ್ಳೆಯದು ಎಂದು ಮಿತ್ರರೊಬ್ಬರು ಸೂಚಿಸಿದ್ದಾರೆ. ಅದನ್ನು ಈಗ ನೋಡೋಣ. 

*****

ಏನೋ ಒಂದು ಕಾರಣದಿಂದ, ತಿಳಿದೋ ತಿಳಿಯದೆಯೋ ಒಂದು ತಪ್ಪು ಆಗಿದೆ. ಮಳೆಯಲ್ಲಿ ನೆನೆದುವು ಅನ್ನೋಣ. ಅದರಿಂದ ಒಂದು ಖಾಯಿಲೆಯೋ, ಜ್ವರವೋ ಬಂತು. ಆಯಿತು. ಅದನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ? ಇರುತ್ತದೆ. ವೈದ್ಯರ ಬಳಿ ಹೋದರೆ ರೋಗಕ್ಕೆ ತಕ್ಕ ಮದ್ದು ಕೊಡುತ್ತಾರೆ. ಆ ಮದ್ದಿನಿಂದ ಖಾಯಿಲೆ ಗುಣ ಆಗಬಹುದು. ಆದರೆ ಸರಿಯಾದ ವೈದ್ಯರ ಬಳಿಗೆ ಹೋಗಬೇಕು. "ಸರಿಯಾದ ವೈದ್ಯ ಸಿಗುವುದು, ಅನುಕೂಲಕರನಾದ ಗಂಡ ಅಥವಾ ಅನುಕೂಲಕರಳಾದ ಹೆಂಡತಿ ಸಿಗುವುದು, ಇವೆರಡೂ ಒಂದು ರೀತಿಯ ಲಾಟರಿ" ಎನ್ನುವುದು ಅನೇಕರ ಅನುಭವದಿಂದ ತಿಳಿದ ಸತ್ಯ. ಇದರ ಫಲಿತಾಂಶ ಗೊತ್ತಾಗುವುದು ಕೆಲ ಕಾಲದ ನಂತರವೇ. ಥರ್ಮಾಮೀಟರ್ ನೋಡಿ ಜ್ವರ ಕಂಡುಹಿಡಿಯುವಂತೆ ಇದಕ್ಕೆ ಇನ್ನೂ ಯಾವುದೇ ಮೀಟರ್ ಬಂದಿಲ್ಲ. 

ಒಳ್ಳೆಯ ವೈದ್ಯರೇ ಸಿಕ್ಕಿದರು ಎನ್ನೋಣ. ವೈದ್ಯರು ಬರೆದುಕೊಟ್ಟ ಚೀಟಿಯಂತೆ ಸರಿಯಾದ ಮದ್ದೂ ಸಿಗಬೇಕು. ಇಂದಿನ ಮಾರುಕಟ್ಟೆಯಲ್ಲಿ ನಕಲಿ ವೈದ್ಯರೂ ಉಂಟು. ಅದ್ಕಕಿಂತ ಹೆಚ್ಚಾಗಿ ನಕಲಿ ಔಷಧಗಳೂ ಉಂಟು. ಈಗಿನ ಮದ್ದುಗಳಿಗೆ ಒಂದು ವಿಶೇಷ ಗುಣವಿರುತ್ತದೆ. ಔಷಧದ ಬಾಟಲಿನ ಮೇಲೆ ಅಂಟಿಸಿದ ಚೀಟಿಯಲ್ಲಿ ಎರಡು ಪಟ್ಟಿಗಳಿರುತ್ತವೆ. ಮೊದಲನೆಯದು ಅದು ಗುಣಪಡಿಸುವ ಖಾಯಿಲೆಗಳು. ಎರಡನೆಯದು ಅದರಿಂದ ಆಗಬಹುದಾದ ಅಡ್ಡ ಪರಿಣಾಮಗಳು (ಸೈಡ್ ಎಫೆಕ್ಟ್ಸ್). ಅನೇಕ ವೇಳೆ ಮೊದಲಿನ ಪೆಟ್ಟಿಗಿಂತ ಎರಡನೆಯದೇ ದೊಡ್ಡದಿರುತ್ತದೆ. ವೈದರಿಗೂ ಇದು ಚೆನ್ನಾಗಿ ಗೊತ್ತು. ಆದ್ದರಿಂದ ಮದ್ದು ಕೊಡುವಾಗಲೇ ಜೊತೆಯಲ್ಲಿ ಇನ್ನೊಂದನ್ನು ಕೊಟ್ಟಿರುತ್ತಾರೆ. "ಕೆಲವರಿಗೆ ಈ ಮದ್ದಿನಿಂದ ಹೊಟ್ಟೆ ನೋವು ಬರುತ್ತದೆ. ಹಾಗೆ ಬಂದರೆ ಎರಡನೆಯ ಮದ್ದು ತೆಗೆದುಕೊಳ್ಳಿ" ಎಂದು ಅವರೇ ಹೇಳಿ ಉಪಕಾರ ಮಾಡಿರುತ್ತಾರೆ. 

ಪಾಪ ಕರ್ಮ ಮಾಡಿದ್ದೋ, ಅದಾಗದೆ ಆಯಿತೋ, ಒಟ್ಟಿನಲ್ಲಿ ಅಂಟಿಕೊಂಡಿದೆ. ಅಂಟಿರುವುದು ಗೊತ್ತಾಯಿತು. ಅದಕ್ಕೆ ಪರಿಹಾರ ಹೇಳುವವರು ಒಬ್ಬರು ಬೇಕು. ಅವರು ಸರಿಯಾಗಿರಬೇಕು. ಅವರು ಹೇಳಿದ ಪರಿಹಾರವೂ ಸರಿಯಾಗಿರಬೇಕು. ಯಾವುದೋ ಒಂದು ಹೋಮ ಮಾಡಿ ಎಂದರು. ಅದು ಸರಿಯಾದ ಪ್ರಾಯಶ್ಚಿತ್ತ ಆಗಿರಬೇಕು. ಕ್ರಮವಾಗಿ ಮಾಡಿಸುವವರು ಸಿಗಬೇಕು. ತಂದ ಪದಾರ್ಥಗಳು ಶುದ್ಧವಾಗಿರಬೇಕು. ಮಾಡುವಾಗ ಭಾವ ಶುದ್ದಿ ಇರಬೇಕು. ಎಲ್ಲವೂ ಸರಿಯಾಗಿ ಆಗಬೇಕು. ಆಗ ಸರಿಯಾದ ಪರಿಹಾರ ಸಿಗಬಹುದು. 

ಮಾಡಹೊರಟಿದ್ದು ಒಳ್ಳೆಯ ಕೆಲಸವೇ. ಆದರೆ ಇವುಗಳಲ್ಲಿ ಎಲ್ಲಿಯೋ, ಏನೋ, ಎಡವಟ್ಟಾಯಿತು. ಮಾಡಿಸುವವರು, ತಿದ್ದುವವರೇ ಎಡವಿದರು. ಪದಾರ್ಥಗಳಲ್ಲಿ ಕಂಡೋ, ಕಾಣದೆಯೋ ದೋಷ ಇತ್ತು. ಮಾಡುವಾಗ ಮನಸ್ಸು ಚಂಚಲ ಆಯಿತು. ಪರಿಣಾಮ ಏನು?

ಕೆಸರಿನಿಂದ ಕೊಳಕಾದ ವಸ್ತ್ರ ತೊಳೆಯಲು ಕೊಳಕು ನೀರು ಉಪಯೋಗಿಸಿದಂತೆ ಆಯಿತು. ಒಂದು ದುಷ್ಕರ್ಮ ಕಳೆಯಲು ಏನೋ ಮಾಡ ಹೋಗಿ ಮತ್ತೊಂದು ದುಷ್ಕರ್ಮ ಅಂಟಿಕೊಂಡಿತು. ಬಟ್ಟೆ ಶುದ್ಧವಾಗುವ ಬದಲು ಇನ್ನಷ್ಟು ಕೊಳಕಾಯಿತು. ಕೆಸರಿಂದ ಕೆಸರು ತೊಳೆದಂತೆ ಆಯಿತು. ಇದನ್ನೇ ದಾಸರು "ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು" ಎಂದರು. ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ?

*****

ನಮ್ಮ ಮನೆಯ ಎದುರುಗಡೆ ಎರಡು ಅಂಗಡಿಗಳಿವೆ. ಮೊದಲನೆಯದು ಯಜಮಾನನೇ ನಡೆಸುವ ಅಂಗಡಿ. ಬೆಳಗಿನಿಂದ ಸಂಜೆಯವರೆಗೆ ಅವನು ಎಲ್ಲ ವ್ಯವಹಾರ ನಡೆಸುತ್ತಾನೆ. ದಿನದ ಕೊನೆಯಲ್ಲಿ ಲೆಕ್ಕ ನೋಡುತ್ತಾನೆ. ವಹಿವಾಟಿನಲ್ಲಿ ಬಂದ ಹಣವನ್ನೆಲ್ಲಾ ತಿಜೋರಿಯಲ್ಲಿ ಭದ್ರವಾಗಿಡುತ್ತಾನೆ. ವರ್ಷದ ಕೊನೆಯಲ್ಲಿ ಎಲ್ಲಾ ಜಮಾ-ಖರ್ಚು ತಾಳೆ ಹಾಕುತ್ತಾನೆ. ಖರ್ಚಿಗಿಂತ ಆದಾಯ ಜಾಸ್ತಿಯಾದರೆ ಅವನಿಗೆ ಲಾಭ. ಆದಾಯಕ್ಕಿಂತ ಖರ್ಚು ಜಾಸ್ತಿ ಆದರೆ ಅವನಿಗೆ ನಷ್ಟ. ರಾತ್ರಿ ಅಂಗಡಿ ಬಾಗಿಲು ಹಾಕಿದ್ದಾಗ ಕಳ್ಳರು ನುಗ್ಗಿ ಹಣ ದೋಚಿದರೆ ಅವನ ಲಾಭವೆಲ್ಲ ಗೋತ. ಯಾವಾಗಲೂ ಲಾಭದ ಚಿಂತೆ. ನಷ್ಟದ ಭೀತಿ. 

ಎರಡನೆಯ ಅಂಗಡಿಯನ್ನೂ ಒಬ್ಬ ನಡೆಸುತ್ತಿದ್ದಾನೆ. ಅದು ಅವನ ಯಜಮಾನನ ಅಂಗಡಿ. ಯಜಮಾನ ಎಲ್ಲಿಯೋ ಇದ್ದಾನೆ. ಎಲ್ಲ ಭಾರ ಇಲ್ಲಿ ನಡೆಸುವವನ ಮೇಲೆ ಬಿಟ್ಟಿದ್ದಾನೆ. ಇವನು ನಿರ್ವಂಚನೆಯಿಂದ ನಡೆಸುತ್ತಿದ್ದಾನೆ. ಮೊದಲ ಅಂಗಡಿಯವನಂತೆ ಇವನೂ ಎಲ್ಲಾ ಮಾಡುತ್ತಾನೆ. ಸಂಜೆ ಹಣ ತಿಜೋರಿಯಲ್ಲಿ ಭದ್ರ ಮಾಡಿ ಕೀಲಿಕೈ ಯಜಮಾನನಿಗೆ ಒಪ್ಪಿಸುತ್ತಾನೆ. "ಲಾಭವೂ ನಿನ್ನದೇ. ನಷ್ಟವೂ ನಿನ್ನದೇ. ನನ್ನದೇನಿದ್ದರೂ ನ್ಯಾಯವಾಗಿ ವ್ಯವಹಾರ ಮಾಡುವುದು" ಎಂದು ನಡೆಯುತ್ತಾನೆ. ಅಂಗಡಿ ಅವನದಲ್ಲ ಎನ್ನುವ ಪ್ರಜ್ಞೆ ಅವನಿಗಿದೆ. ರಾತ್ರಿ ಹಣ ಕಳುವಾದರೆ ಅವನ ಹಣವಲ್ಲ. ಲಾಭ ಅಥವಾ ನಷ್ಟ ಅವನದಲ್ಲ. ಮೊದಲನೆಯ ಅಂಗಡಿಯವಂತೆ ಇವನಿಗೆ ಲಾಭ-ನಷ್ಟದ ಚಿಂತೆಯಿಲ್ಲ. 

ಬ್ಯಾಂಕಿನಿಂದ ಸಾಲ ತಂದಿದ್ದಾಯಿತು. ಈಗ ತೀರಿಸಲೇಬೇಕು. ತೀರಿಸದಿದ್ದರೆ ವಸೂಲಿ ತಂಡದವರು ಪ್ರಾಣ ತಿನ್ನುತ್ತಾರೆ. ನೋಟೀಸು ಕೊಡುತ್ತಾರೆ. ಆಸ್ತಿ ಹರಾಜು ಹಾಕುತ್ತಾರೆ. ಬಂದಿಖಾನೆಗೂ ದೂಡಬಹುದು. ಸಾಲ ತರಬಾರದಿತ್ತು. ತಂದಾಯಿತು. ಈಗ ಏನು ಮಾಡುವುದು?

ಇದಕ್ಕೂ ಒಂದು ಪರಿಹಾರ ಇದೆ. ಬ್ಯಾಂಕಿನವರ ಬಳಿ ನಮ್ಮ ಕಷ್ಟ-ಸುಖ ಹೇಳಿಕೊಳ್ಳಬೇಕು. ಅವರು ಒಪ್ಪಬಹುದು. ಒಪ್ಪದೇ ಇರಬಹುದು. ಪ್ರಯತ್ನವನ್ನಂತೂ ಮಾಡಬಹುದು. ಅವರು ಒಪ್ಪಿಕೊಂಡು "ಹೋಗಲಿ ಬಿಡಿ. ನಿಮಗೆ ಹಿಂದೆ ಕೊಡುವ ಶಕ್ತಿ ಇಲ್ಲ. ಸಾಲ ಮನ್ನಾ ಮಾಡಿದ್ದೇವೆ" ಅಂದರೆ ಈ ಸಾಲದಿಂದ ಬಿಡುಗಡೆ!

*****

"ದುಷ್ಕರ್ಮ ಪರಿಹರಿಸೋ, ಸ್ವಾಮಿ" ಎಂದು ದಾಸರು ಕೇಳಿರುವುದೂ ಇದರಂತೆಯೇ. ಅವನು ಯಜಮಾನ. ನಾನು ಕೇವಲ ಅಂಗಡಿ ನಡೆಸುವ ಎರಡನೆಯ ಅಂಗಡಿಯವನಂತೆ ಎನ್ನುವುದು ಮರೆತು ಮೊದಲಿನ ಅಂಗಡಿಯವಂತೆ ಬದುಕಿದೆವು. ಲಾಭ-ನಷ್ಟ ನಮಗೆ ಅಂಟಿಕೊಂಡಿತು. ಎರಡನೆಯವನಂತೆ ಇದ್ದಿದ್ದರೆ ಆಗ ನಿಷ್ಕಾಮ ಕರ್ಮ ಆಗುತ್ತಿತ್ತು. ಈಗ ಈ ಭಾರ ಹೊರಲು ಆಗುತ್ತಿಲ್ಲ. ಅವನನ್ನೇ ಮೊರೆ ಹೋಗಿ ಕೇಳುವುದು. "ದಯವಿಟ್ಟು ಈ ಸಾಲ ಮನ್ನಾ ಮಾಡು. ಈ ದುಷ್ಕರ್ಮ ಪರಿಹಾರ ಮಾಡು" ಎಂದು ಕೂಗುವುದು. 

ಅವನು ಒಪ್ಪಬಹುದು. ಒಪ್ಪಿಯಾನು. ಅವನೋ, "ಕರ್ತು೦, ಆಕರ್ತು೦, ಅನ್ಯಥಾ ಕರ್ತು೦ ಶಕ್ತ:". ಏನನ್ನು ಬೇಕಾದರೂ ಮಾಡಬಲ್ಲ. ಮಾಡಿದ್ದನ್ನು ಅಳಿಸಬಲ್ಲ. ಮತ್ತೇನನ್ನೋ ಮಾಡಬಲ್ಲ.  ಸಾಲ ಮನ್ನಾ ಮಾಡಬಹುದು. ಹೊತ್ತಿರುವ ಪಾಪ ಕರ್ಮಗಳ ರಾಶಿಯನ್ನು ಕ್ಷಣಾರ್ಧದಲ್ಲಿ ಸುತ್ತು ಭಸ್ಮ ಮಾಡಿ ಹೆಗಲಿನ ಭಾರದಿಂದ ಮುಕ್ತಿ ಕೊಡಬಹುದು. 

*****

ನಂಬುವವರು ನಂಬಬಹುದು. ಬಿಡುವವರು ಬಿಡಬಹುದು. ಇದು ಒಂದು ರೀತಿಯ ತರ್ಕ. ಅನೇಕರು ಪುನರ್ಜನ್ಮವನ್ನು ನಂಬುವುದಿಲ್ಲ. ದೇವರಿದ್ದಾನೆ ಅನ್ನುವುದನ್ನೂ ನಂಬುವುದಿಲ್ಲ. ಅವರವರಿಗೆ ಬಿಟ್ಟದ್ದು. 

ಎರಡನೇ ಅಂಗಡಿಯವನಂತೆ ಜೀವನ ನಡೆಸಿದವನಿಗೆ ಒಂದು ಖಚಿತವಾದ ಲಾಭ ಉಂಟು. ಈ ಜನ್ಮದಲ್ಲಿ ಬ್ಲಡ್ ಪ್ರೆಶರ್ ಚೆನ್ನಾಗಿರುತ್ತದೆ. ಊಟ ಸೇರುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ದಿನಗಳು ಚೆನ್ನಾಗಿ ಕಳೆಯುತ್ತವೆ. ಮುಂದಿನದನ್ನು ಮುಂದೆ ನೋಡಬಹುದು! 

Monday, July 14, 2025

ಸಂಪತ್ತು ಕಳೆಯುವ ಕಾರಣಗಳು


ಹಿಂದೊಂದು ಸಂಚಿಕೆಯಲ್ಲಿ "ದೇವರಲ್ಲಿ ಬೇಡುವ ಅಷ್ಟ ಐಶ್ವರ್ಯಗಳು" ಎನ್ನುವ ಶೀರ್ಷಿಕೆಯ ಅಡಿಯಲ್ಲಿ "ಅಷ್ಟ ಐಶ್ವರ್ಯಗಳು" ಮತ್ತು ಅವನ್ನು ಬೇಡುವ ಯುಕ್ತಾಯುಕ್ತತೆಯ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚಿಸಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಈ ಎಂಟು ಐಶ್ವರ್ಯಗಳಲ್ಲಿ ಆಯುಸ್ಸು, ಆರೋಗ್ಯ ಮತ್ತು ಐಶ್ವರ್ಯಗಳು ಎಲ್ಲಕ್ಕಿಂತ ಮೊದಲು ಮತ್ತು ಅತಿ ಮುಖ್ಯವಾದವು ಎಂದು ನೋಡಿದ್ದೆವು. ಇವುಗಳನ್ನು ಒಟ್ಟಾಗಿ ಕೋರುವುದು ಸಂಪ್ರದಾಯವಾಗಿ ಬಂದಿದೆ. "ಆಯುರಾರೋಗ್ಯ ಐಶ್ವರ್ಯಾದಿಗಳು" ಎಂದು ಹೇಳುವ  ವಾಡಿಕೆ ಇದೆ. ಆಯುಸ್ಸು ಮತ್ತು ಆರೋಗ್ಯ ಅವಳಿ ಕೋರಿಕೆಗಳು. ಆರೋಗ್ಯವಿಲ್ಲದ ದೀರ್ಘ ಆಯುಸ್ಸು, ಮತ್ತು ಆಯುಷ್ಯ ಇಲ್ಲದ ಒಳ್ಳೆಯ ಆರೋಗ್ಯ ಎರಡೂ ಪ್ರಯೋಜನಕ್ಕೆ ಬಾರದವು. ಇವೆರಡು ಚೆನ್ನಾಗಿದ್ದು ಐಶ್ವರ್ಯ ಇಲ್ಲ ಎಂದರೂ ಪರವಾಗಿಲ್ಲ. ಹಾಗಾಗಬೇಕೆಂದು ಯಾರೂ  ಆಶಿಸುವುದಿಲ್ಲ ಎನ್ನುವುದು ನಿಜವಾದರೂ, ಈ ಮೂರರಲ್ಲಿ ಎರಡು ಮಾತ್ರ ಕೊಡುತ್ತೇವೆ ಎಂದರೆ ಆಯುಸ್ಸು ಮತ್ತು ಆರೋಗ್ಯವನ್ನೇ ಕೋರಿಕೊಳ್ಳುವುದು ಅಷ್ಟೇ ಸತ್ಯ.  

ಅನೇಕರಿಗೆ ಜೀವನದಲ್ಲಿ ಇವುಗಳು ಯುಕ್ತ ಪ್ರಮಾಣದಲ್ಲಿ ಸಿಗುವುದಿಲ್ಲ. ಕೆಲವರಿಗೆ ಅಕಾಲ ಮೃತ್ಯು ಬಂದು ಜೀವನ ಯಾತ್ರೆ ಚಿಕ್ಕ ವಯಸ್ಸಿನಲ್ಲೇ ಮುಗಿದುಹೋಗುತ್ತದೆ. ಮತ್ತೆ ಕೆಲವರಿಗೆ ಆಯುಸ್ಸು ಇದ್ದು ಸುಮಾರಾದ ಕಾಲ ಬದುಕಿದರೂ ಜೀವನ ಪೂರ್ತಿ ಅನಾರೋಗ್ಯದಿಂದ ನರಳುವುದೇ ಆಗುತ್ತದೆ. ಮೂರನೆಯ ಗುಂಪಿಗೆ ಆಯುಸ್ಸು ಮತ್ತು ಆರೋಗ್ಯ ಇದ್ದರೂ ಕಡು ಬಡತನ ಕಾಡುವುದರಿಂದ ಜೀವನ ಬಹಳ ಕಷ್ಟಕರವಾಗಿ ಸಾಗುತ್ತದೆ.  ಮೂರೂ ಚೆನ್ನಾಗಿ ಇರುವುದು ಒಂದು ಸೌಭಾಗ್ಯವೇ ಸರಿ. 

ಸಂಪತ್ತುಗಳಲ್ಲಿ ಅತಿ ಮುಖ್ಯವಾದ ಈ ಮೂರು ಏಕೆ ಎಲ್ಲರಿಗೂ ಸಿಗುವುದಿಲ್ಲ, ಮತ್ತು ಕೆಲವರಿಗೆ ಸಿಕ್ಕರೂ ಏಕೆ ಮಧ್ಯದಲ್ಲಿ ಹಾಳಾಗುತ್ತದೆ ಎನ್ನುವುದನ್ನು ಈಗ ಸ್ವಲ್ಪಮಟ್ಟಿಗೆ ನೋಡೋಣ. 

*****

ನಮ್ಮ ವೈದಿಕ ವಾಂಗ್ಮಯದಲ್ಲಿ ಇವುಗಳ (ಅಂದರೆ ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ) ಹ್ರಾಸ ಆಗುವಿಕೆಗೆ ಕಾರಣಗಳನ್ನು ಕೊಟ್ಟಿದ್ದಾರೆ. (ಕಡಿಮೆ ಆಗುವುದು, ಮೊಟಕಾಗುವುದು ಅಥವಾ ಸೋರಿಕೆ ಆಗುವುದಕ್ಕೆ "ಹ್ರಾಸ" ಎನ್ನುತ್ತಾರೆ). ಇವನ್ನು ನಂಬುವುದೂ ಬಿಡುವುದೂ ಅವರವರಿಗೆ ಸೇರಿದ್ದು. ಕೆಲವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇರುವುದಿಲ್ಲ. ಆದರೂ ಈ ಸಂಪತ್ತುಗಳ ಹಾನಿ ಆಗುವ ಕಾರಣಗಳನ್ನು ತಿಳಿದು ಅವನ್ನು ಬಿಟ್ಟು ಬದುಕುವುದರಿಂದ ಈಗಿನ ಜೀವನವಾರರೂ ಹಸನಾಗುತ್ತದೆ ಅನ್ನುವುದು ಒಪ್ಪಬೇಕಾದ ವಿಷಯ. 

ಮನುಷ್ಯನಿಗೆ ಬರುವ ಕಷ್ಟ-ಕಾರ್ಪಣ್ಯಗಳಿಗೆ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಕರ್ಮಗಳೇ ಕಾರಣ ಎಂದು ನಂಬಿಕೆ. ಕೆಲವು ಪಾಪ ಕರ್ಮಗಳು ಮುಂದಿನ ಯಾವುದೋ ಜನ್ಮದಲ್ಲಿ ಕಾಡುವುದು ಎಂದರೂ, ಕೆಲವು ಪ್ರಬಲ ಕರ್ಮಗಳು ಇದೇ ಜನ್ಮದಲ್ಲಿ ಹಿಂಸಿಸುವುದೂ ಉಂಟು. ಇದೇ ರೀತಿ ಈ ಜನ್ಮದ ಪುಣ್ಯ ಕರ್ಮಗಳು ಮುಂದೆ ಫಲ ಕೊಡಬಲ್ಲವಾದರೂ ಕೆಲವು ಪ್ರಬಲ ಪುಣ್ಯ ಕರ್ಮಗಳೂ ಕೂಡ ಇದೇ ಜನ್ಮದಲ್ಲಿ ಫಲಪ್ರದವಾಗುವುದೂ ಉಂಟು. ಇದರಲ್ಲಿಯೂ, ದೊಡ್ಡವರ ಆಶೀರ್ವಾದ ಪೂರ್ವಕವಾಗಿ ಬರುವಂತಹ ಪುಣ್ಯ ಕಾರ್ಯಗಳ ಯೋಗಗಳು ಅತಿ ಶೀಘ್ರವಾಗಿ ಒಳ್ಳೆಯ ಪರಿಣಾಮಗಳನ್ನು ಮಾಡುವುದು ಅನೇಕ ಉದಾಹರಣೆಗಳ ಮೂಲಕ ನಮ್ಮ ಅನುಭವಗಳಲ್ಲೇ ಕಂಡು ಬಂದಿರುವುದೂ ಉಂಟು. ಅನೇಕ ವಿಷ ಪದಾರ್ಥಗಳು ಬಹಳ ನಿಧಾನವಾಗಿ ಪರಿಣಾಮ ಮಾಡುವಂತೆ (ಸೀಸ ಅಥವಾ ಲೆಡ್, ಪಾದರಸ ಅಥವಾ ಮರ್ಕ್ಯುರಿ ಮುಂತಾದ ವಿಷಕಾರಿಗಳಂತೆ), ಮತ್ತೆ ಕೆಲವು ವಿಷ ಪದಾರ್ಥಗಳು (ಸಯನೈಡ್ ಮುಂತಾದುವು)  ಕ್ಷಣಾರ್ಧದಲ್ಲಿ ಮಾರಕವಾಗುವಂತೆ ಇವುಗಳ ಪರಿಣಾಮ. 

ಆರೋಗ್ಯ ಹಾನಿಗೆ ವ್ಯಭಿಚಾರ, ಆಯುಷ್ಯ ಹ್ರಾಸಕ್ಕೆ ಪರನಿಂದೆ, ಐಶ್ವರ್ಯ ನಾಶಕ್ಕೆ ಪರವಿತ್ತಾಪಹಾರ ಕಾರಣಗಳೆಂದು ವಿವರಣೆಗಳಿವೆ. ಅನಾರೋಗ್ಯದ ನೇರ ಕಾರಣ ವ್ಯಭಿಚಾರ ಕ್ರಿಯೆಗಳು. ಅನವಶ್ಯಕ ಪರನಿಂದೆ ಆಯುಸ್ಸನ್ನು ಕೊಡಲಿಯ ಏಟು ಮರವನ್ನು ಕಡಿಯುವಂತೆ ತುಂಡಿರಿಸುವ ಕೆಲಸ ಮಾಡುತ್ತದೆ. ಇನ್ನೊಬ್ಬರ ಗಂಟು ಹೊಡೆದು ಸಂತೋಷಿಸುವುದು ಮುಂದೆ ನಮ್ಮ ಸಂಪತ್ತಿನ ನಾಶದ ದುಃಖದ ಮೂಲಕ ಸಮ ಮಾಡುತ್ತದೆ. 
***** 

"ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿ ರೂಪೇಣ ಪೀಡ್ಯತೇ" ಎಂದು ಅನೇಕ ಕಡೆಗಲ್ಲಿ, ವಿಶೇಷವಾಗಿ ಆಯುರ್ವೇದದ ಗ್ರಂಥಗಳ ಚರ್ಚೆಗಳಲ್ಲಿ ಹೇಳಿದೆ. ವ್ಯಭಿಚಾರ ಅನ್ನುವುದು ಸಮಾಜದಲ್ಲಿ ಮನುಷ್ಯನನ್ನು ಕೀಳಾಗಿ ಬದುಕುವಂತೆ ಮಾಡುತ್ತದೆ. ಕೆಲವು ವ್ಯಭಿಚಾರ ಪ್ರಸಂಗಗಳು ಯಾರಿಗೂ ಗೊತ್ತಾಗದಂತೆ ನಡೆಯುತ್ತವೆ. ಮತ್ತೆ ಕೆಲವು ಜಗಜ್ಜಾಹೀರಾಗುತ್ತವೆ. ಆರೋಗ್ಯದ ಮೇಲೆ ಇದರ ಪರಿಣಾಮ ಮಾತ್ರ ಒಂದೇ ರೀತಿ. ಅನೇಕ ವ್ಯಭಿಚಾರಗಳನ್ನು ಒಂದೇ ಜನ್ಮದಲ್ಲಿ ಮಾಡಿದವರು ಮುಂದೆ ಒಂದೇ ಜೀವಿತ ಕಾಲದಲ್ಲಿ ಅನೇಕ ರೋಗಗಳನ್ನು ಅನುಭವಿಸಬೇಕಾದ ಪ್ರಮೇಯವನ್ನು ತಂದೊಡ್ಡುತ್ತದೆ. 

ವ್ಯಭಿಚಾರದ ವಿಷಯದಲ್ಲಿ ಬಹಳ ಜನಗಳಿಗೆ ತಪ್ಪು ಅಭಿಪ್ರಾಯ ಇರುವುದು. ಇಡೀ ಪ್ರಪಂಚದಲ್ಲಿ ಕೇವಲ ಹದಿನೈದು-ಇಪ್ಪತ್ತು ಶೇಕಡಾ ಮಂದಿ ಹೀಗೆ ತೊಡಗುತ್ತಾರೆ ಎಂದು ಒಂದು ಅಂದಾಜು. ಆದರೆ ಪಾಪ ಕರ್ಮಗಳು ಕೇವಲ ದೈಹಿಕವಲ್ಲ. ಈ ಅಂದಾಜು ಕೇವಲ ದೈಹಿಕ ವ್ಯಭಿಚಾರಕ್ಕೆ ಸಂಬಂಧಿಸಿದ್ದು. ಅನೇಕರಿಗೆ ವಾಚಿಕ ವ್ಯಭಿಚಾರದ ದೊಡ್ಡ ಗೀಳು ಇರುತ್ತದೆ. ಮಾತು ಪ್ರಾರಂಭಿಸಿದರೆ ಈ ರೀತಿಯ ಕೆಟ್ಟ ಮಾತುಗಳಷ್ಟೇ ಬರುವುದು ಉಂಟು. ಇದೂ ವ್ಯಭಿಚಾರವೇ. ಮಾನಸಿಕ ವ್ಯಭಿಚಾರವಂತೂ ಅಳತೆಗೆ ಸಿಗದು. ಅದು ಅವರವರಿಗೇ ಗೊತ್ತಾಗಬೇಕು. ಈ ಕಾರಣದಿಂದಲೇ ಕಾಯೇನ, ವಾಚಾ ಮತ್ತು ಮನಸಾ ಎಂದು ತ್ರಿಕರಣ ಶುದ್ಧಿಯನ್ನು ಹೇಳುವುದು. 

ಅದು ದೈಹಿಕ ವ್ಯಭಿಚಾರ ಇರಬಹುದು, ವಾಚಿಕ ಅಥವಾ ಮಾನಸಿಕ ವ್ಯಭಿಚಾರ ಇರಬಹುದು, ಕುಕರ್ಮಗಳ ಸಾಲಿನಲ್ಲಿ ಸೇರುತ್ತವೆ. ಅರೋಗ್ಯ ಹ್ರಾಸವಾಗುವುದಕ್ಕೆ ಬೀಜ ರೂಪವಾಗಿ ಕಾಯುತ್ತ ಕುಳಿತುಕೊಳ್ಳುತ್ತವೆ. 
***** 

"ಪರನಿಂದೆ" ಎನ್ನುವ ಪಾಪವನ್ನು ಮಾಡದವರೇ ಪ್ರಾಯಶಃ ಕಾಣಸಿಗರು. ಅನೇಕ ವೇಳೆ ಕಂಡ ಅಥವಾ ಕೇಳಿದ ಪ್ರಸಂಗಗಳ ಸತ್ಯಾಸತ್ಯತೆ ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದೆ ಇನ್ನೊಬ್ಬರನ್ನು ಜರೆಯುವ ಕೆಲಸ ಮಾಡುತ್ತಿರುತ್ತೇವೆ. ಯಾರೋ ಹೇಳಿದ ಮಾತನ್ನು ನಂಬಿ ನಾವೂ ಪರನಿಂದೆಯಲ್ಲಿ ಭಾಗಿಯಾಗುವುದೂ ಉಂಟು. ಇನ್ನು ಕೆಲವು ಸಂದರ್ಭಗಳಲ್ಲಿ ನಮ್ಮ ವೈಯುಕ್ತಿಕ ಹಿತಾಸಕ್ತಿಗಳ ರಕ್ಷಣೆಗೆ ಅನವಶ್ಯಕ ಕಾರಣಗಳನ್ನು ಕಂಡುಹಿಡಿದು ಪರನಿಂದೆ ಮಾಡುವುದೂ ಉಂಟು. ಸಾಮೂಹಿಕ ಪರನಿಂದೆಯಂತೂ ಒಂದು ಸಾಂಕ್ರಾಮಿಕದಂತೆ. ಗುಂಪು ಸೇರಿದಾಗ ಇದು ಸಾಮಾನ್ಯವಾಗುತ್ತದೆ. 

ಪರನಿಂದೆಯ ಗುರಿ ಉತ್ತಮ ಜೀವಿಗಳಾದರೆ ಅದರ ಪರಿಣಾಮ ಇನ್ನೂ ಘೋರ. ನಮ್ಮ ಕ್ರಿಮಿನಲ್ ಕಾಯ್ದೆಗಳಲ್ಲಿ "ಪ್ರೇಮೆಡಿಟೇಟೆಡ್ ಕೋಲ್ಡ್ ಬ್ಲಡೆಡ್ ಮರ್ಡರ್" ಎನ್ನುವಂತೆ ಇದು. ಈ ಕಾನೂನುಗಳಂತೆ ಇದಕ್ಕೆ ಪರಿಣಾಮಕಾರಿಯಾದ ಹ್ರಾಸವೂ ಅತ್ಯಧಿಕ ಆಗುತ್ತದೆ. ಉತ್ತಮ ಜೀವಿಗಳು ನಮ್ಮ ನಿಂದೆಯಿಂದ ನೊಂದುಕೊಂಡರಂತೂ ಅದರ ಪರಿಣಾಮ ಬಹಳ ಬೇಗ ಆಗುತ್ತದೆ. 

ಪರನಿಂದೆಯ ಫಲ ಆಯುಷ್ಯ ಹಾನಿ. ಮನುಷ್ಯ ಜೀವಮಾನದ ಕಾಲದಲ್ಲಿ ಪರನಿಂದೆಗೆ ಮೀಸಲಿಟ್ಟಷ್ಟು ಕಾಲವೂ ನೇರವಾಗಿ ಆಯುಷ್ಯ ಪ್ರಮಾಣದಲ್ಲಿ ಕಳೆದಂತೆ. ಜೀವನದಲ್ಲಿ ಸಿಕ್ಕ ಕಾಲವನ್ನು ಪರನಿಂದೆಯಲ್ಲಿ ಅಪವ್ಯಯ ಮಾಡಿದ್ದು ಒಂದು ಕಡೆ. ನಮ್ಮ ಆಯುಸ್ಸಿನಲ್ಲಿ ಅಷ್ಟನ್ನು ಕಳೆದುಕೊಂಡದ್ದು ಇನ್ನೊಂದು ಕಡೆ. ದ್ವಿವಿಧ ಹೊಡೆತ ಈ ಪರನಿಂದೆಯ ಕಾರಣ. 

*****

ಇನ್ನೊಬ್ಬರ ಸ್ವತ್ತನ್ನು ಅಪಹರಿಸುವುದು "ಪರವಿತ್ತಾಪಹಾರ" ಆಗುತ್ತದೆ. ಇದು ಭೌತಿಕವಾಗಿ ಮತ್ತೊಬ್ಬರ ಆಸ್ತಿಯನ್ನು ಲಪಟಾಯಿಸುವುದು ಮಾತ್ರವಲ್ಲ. ಬೇರೆಯವರಿಗೆ ಬರಬೇಕಾದ ಆಸ್ತಿ, ಹೆಸರು, ಮನ್ನಣೆ ಮುಂತಾದುವನ್ನು ತಪ್ಪು ಕಾರಣಗಳನ್ನು ಕೊಟ್ಟು ಬರದಂತೆ ಮಾಡುವುದೂ ಪರವಿತ್ತಾಪಹಾರವೇ ಆಗುತ್ತದೆ. ಹೀಗೆ ಮಾಡಿ ಸುಖ ಅನುಭವಿಸುವುದು ಮತ್ತು ಆ ಕಾಲದಲ್ಲಿ ಇಲ್ಲದ ಹಿಗ್ಗನ್ನು ಆಸ್ವಾದಿಸುವುದು ಕ್ಷಣಿಕ. 

ಚಿಕ್ಕ ವಯಸ್ಸಿನಲ್ಲಿ ಅನೇಕ ಲೌಕಿಕ ಸುಖ ಪ್ರಾಪ್ತಿಗೆ ಎಲ್ಲರೂ ಅವರವರ ಮಟ್ಟದಲ್ಲಿ ಇಂತಹ ಕೆಲಸಗಳನ್ನು ಮಾಡಿರುತ್ತೇವೆ. ಯೌವನದ ಭರದಲ್ಲಿ ಇದು ಅನ್ಯಾಯ ಅನ್ನುವುದೂ ಹೊಳೆಯುವುದಿಲ್ಲ. ಸ್ವಲ್ಪ ವಯಸ್ಸಾದ ಮೇಲೆ, ನಿಧಾನವಾಗಿ ಕುಳಿತು ಯೋಚಿಸುವ ಕಾಲ ಬಂದಾಗ, ಹೀಗೆ ಮಾಡಿದುದಕ್ಕೆ ನಾವೇ ನಾಚಿಕೊಳ್ಳುತ್ತೇವೆ. ಆದರೆ ಆಗ ಕಾಲ ಮಿಂಚಿರುತ್ತದೆ. 

ಪರವಿತ್ತಾಪಹಾರದ ನೇರ ಫಲ ನಮ್ಮ ಸಂಪತ್ತುಗಳ ನಾಶ. ಈ ಸಂಪತ್ತು ಹಣಕಾಸು, ಮನೆ-ಮಠ, ಒಡವೆ-ವಸ್ತುವೇ ಆಗಬೇಕೆಂದಿಲ್ಲ. ಉದ್ಯೋಗದಲ್ಲಿ ಬಡ್ತಿ, ಸಮಾಜದಲ್ಲಿ ಮನ್ನಣೆ, ಸಿಗಬೇಕಾದ ಗೌರವಗಳು ಕೈ ತಪ್ಪುವುದು ಮುಂತಾದುವು ಸಹ ನಮ್ಮ ನಮ್ಮ ಸಂಪತ್ತು ನಾಶದ ರೂಪಗಳೇ ಅಲ್ಲವೇ?

*****

ನಮ್ಮ ವಾಂಗ್ಮಯದಲ್ಲಿ ಅಲ್ಲಲ್ಲಿ ಹೇಳಿರುವ ಈ ಎಲ್ಲ ಮೇಲಿನ ವಿಷಯಗಳನ್ನೂ ಶ್ರೀ ಗೋಪಾಲದಾಸರು ತಮ್ಮ "ಎನ್ನ ಬಿನ್ನಪ ಕೇಳೋ, ಧನ್ವಂತ್ರಿ ದಯಮಾಡೋ" ಎನ್ನುವ ದೇವರನಾಮದಲ್ಲಿ ಸಂಗ್ರಹಿಸಿದ್ದಾರೆ. ತಮ್ಮ ಗುರುಗಳಾದ ಶ್ರೀ ವಿಜಯದಾಸರ ವಿಷಯದಲ್ಲಿ ಶ್ರೀ ಶ್ರೀನಿವಾಸಾಚಾರ್ಯರು (ಮುಂದೆ ಶ್ರೀ ಜಗನ್ನಾಥದಾಸರು ಎಂದು ಹೆಸರಾದವರು) ಮಾಡಿದರೆನ್ನಲಾದ ಅಪಚಾರದ ಕಾರಣ ಅರೋಗ್ಯ ಮತ್ತು ಆಯಸ್ಸನ್ನು ಕಳೆದುಕೊಂಡ ಸಂದರ್ಭದಲ್ಲಿ, ಅದೇ ಗುರುಗಳ ಆಣತಿಯಂತೆ ಈ ದೇವರನಾಮದ ಮೂಲಕ ಧನ್ವಂತರಿಯನ್ನು ಒಲಿಸಿಕೊಂಡು ಅವರನ್ನು ಪಾರುಮಾಡಿದರೆಂದು ಪ್ರತೀತಿ. ಮುಂದೆ ತಮ್ಮ ಆಯುಷ್ಯದಲ್ಲಿ ನಲವತ್ತು ವರುಷಗಳನ್ನು ಶ್ರೀ ಜಗನ್ನಾಥದಾಸರಿಗೆ ಧಾರೆ ಎರೆದುಕೊಟ್ಟರೆಂದು ಹೇಳುತ್ತಾರೆ. 

ಈ ಹಾಡನ್ನು ಕೆಳಗೆ ಕ್ಲಿಕ್ ಮಾಡಿ ಕೇಳಬಹುದು:


ಈ ವಿಷಯಕ್ಕೆ ಸಂಬಂಧಿಸಿದ ಇನ್ನೂ ಕೆಲವು ವಿವರಣೆಗಳನ್ನು ಹಾಡಿನಲ್ಲಿ ಕಾಣಬಹುದು. 

*****

"ಕೆಸರಿನಿಂದ ಕೆಸರ ತೊಳೆದಂತೆ ಕರ್ಮದ ಪಥವು" ಮತ್ತು "ದುಷ್ಕರ್ಮ ಪರಿಹರಿಸೋ" ಎನ್ನುವ ವಿಷಯಗಳನ್ನು ಮುಂದೊಮ್ಮೆ ನೋಡೋಣ.