ದೇಶದ ಅನೇಕ ಕಡೆಗಳಲ್ಲಿ ಈಚೆಗೆ ಪ್ರತಿದಿನ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ದಿಗ್ಬ್ರಮೆ ಉಂಟಾಗುತ್ತದೆ. ನಮ್ಮನ್ನು ಆಳುತ್ತಿರುವವರು ದಿನದಿಂದ ದಿನಕ್ಕೆ ನಡೆಯುತ್ತಿರುವ ದಾರಿಗಳು ನಮ್ಮನ್ನು ಯಾವ ದಿಕ್ಕುಗಳಿಗೆ ಒಯ್ಯುತ್ತವೆ ಎಂದು ಹೇಳಲು ಬರುವುದಿಲ್ಲ. ಚುನಾವಣೆಗಳು ನಡೆದ ನಂತರ ಜನರು ಕೊಡುವ ತೀರ್ಪನ್ನು ಒಪ್ಪಿಕೊಳ್ಳದ ನಾಯಕರುಗಳು ಒಂದು ಕಡೆ. ತಾವು ಗೆದ್ದಾಗ ಮಾತ್ರ ಚುನಾವಣೆಗಳು ಸರಿಯಾಗಿ ನಡೆದುವು ಎನ್ನುವ ಗುಂಪುಗಳು ಇನ್ನೊಂದು ಕಡೆ. ಬೇಕಿದ್ದಾಗ ಪಕ್ಷ ಬದಲಿಸಿ ಅಧಿಕಾರಕ್ಕೆ ಜೋತುಬೀಳುವ ಹಂಬಲವಂತೂ ಎಲ್ಲ ಕಡೆ. ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯಲು ಪರಿತಪಿಸುವ ಪ್ರತಿನಿಧಿಗಳು. ಜಾತಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯಗಳ ಕೂಗುಗಳ ಅತಿರೇಕಗಳು. ಅಧಿಕಾರ ಸಿಕ್ಕಿದ ನಂತರ ಖಾತೆಗಳ ಹಂಚಿಕೆಯಲ್ಲಿ ಗುದ್ದಾಟ. ಶಪಥಗ್ರಹಣ ನಡೆದ ನಂತರ ವಾರಗಳು ಕಳೆದರೂ ಬೇಕಿದ್ದ ಖಾತೆ ಸಿಗಲಿಲ್ಲವೆಂದು ಅಧಿಕಾರಗ್ರಹಣ ಮಾಡದ ಮಂತ್ರಿಗಳು. ಹೊಸ ವಾಹನಗಳು, ದೊಡ್ಡ ಆಫೀಸುಗಳು ಮತ್ತು ನಿವಾಸಗಳು ಮುಂತಾದುವಕ್ಕೆ ಕೊನೆಯಿಲ್ಲದ ಹಪಾಹಪಿ. ಒಟ್ಟಿನಲ್ಲಿ ದಿಕ್ಕು ದೆಸೆಯಿಲ್ಲದ ರಾಜಕೀಯ.
ಸ್ವಾತಂತ್ರ್ಯಾನಂತರ ನಡೆದ ಮೊದಲ ಚುನಾವಣೆಗಳ ಬಳಿಕ 1952ರಲ್ಲಿ ನಮ್ಮ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಶ್ರೀ ಕೆಂಗಲ್ ಹನುಮಂತಯ್ಯನವರ ಮಂತ್ರಿಮಂಡಲದಲ್ಲಿ ಇದ್ದದ್ದು ಎಂಟು ಜನ ಮಂತ್ರಿಗಳು ಮಾತ್ರ. ಅದು ಮೈಸೂರು ರಾಜ್ಯ. ಇನ್ನೂ "ಕರ್ನಾಟಕ ಏಕೀಕರಣ" ಆಗಿರಲಿಲ್ಲ. ರಾಜ್ಯವೇನೋ ಗಾತ್ರದಲ್ಲಿ ಈಗಿಗಿಂತ ಚಿಕ್ಕದೇ. ಮಂತ್ರಿಮಂಡಲವೂ ಚಿಕ್ಕದೇ. ಬ್ರಿಟಿಷರ ಆಡಳಿತದಿಂದ ಹೊರಬಂದ ಮೇಲೆ ನಮ್ಮ ನಾಡಿನ ಭವ್ಯವಾದ ಸಂಸ್ಕೃತಿ ಎಲ್ಲೆಡೆ ವಿಜೃಂಭಿಸಲಿ ಎನ್ನುವ ಆಸೆಯಿಂದ ಸರ್ಕಾರ "ಸಂಸ್ಕೃತಿ ಪ್ರಚಾರ" ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದರ ಅಂಗವಾಗಿ ಅಮೂಲ್ಯ ಕೃತಿಗಳ ಮುದ್ರಣ-ಪ್ರಕಾಶನ, ರಾಜ್ಯದ ಮೂಲೆಮೂಲೆಗಳಲ್ಲಿ ವಿದುಷಿ-ವಿದ್ವಾಂಸರಿಂದ ಸಾಹಿತ್ಯ-ಸಂಗೀತ-ಗಮಕ ಮುಂತಾದ ಕಾರ್ಯಕ್ರಮಗಳು, ಉಪನ್ಯಾಸಗಳು, ಮುಂತಾದುವು ಈ ಸಂಸ್ಕೃತಿ ಪ್ರಚಾರದ ಮೂಲಕ ನಡೆದವು.
ಸರ್ಕಾರದ ಆರ್ಥಿಕ ಸಹಾಯದ ಮೂಲಕ ಮೊದಲ ವರ್ಷ ಪ್ರಕಟವಾದ "ಕುಮಾರವ್ಯಾಸ ಭಾರತ" ಪುಸ್ತಕಕ್ಕೆ ಕೇವಲ ಎರಡು ರೂಪಾಯಿ ಬೆಲೆ. ಈ ಗ್ರಂಥಕ್ಕೆ ಕನ್ನಡದ ಹೆಮ್ಮೆಯ ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಪಾದಕರು. ಈ ಕೃತಿಗೆ ಕುವೆಂಪು ಅವರ "ತೋರಣ ನಾಂದಿ". ಈಗಲೂ ಆಗಾಗ ಓದಬೇಕೆಂದು ಅನಿಸುವ, ಅವರೇ ಹೇಳುವಂತೆ ಸಹೃದಯ ವಿಮರ್ಶೆ. ಅನೇಕ ಮನೆಗಳಲ್ಲಿ ಈಗಲೂ ಈ ಪುಸ್ತಕ ಇದೆ.
*****
ಎ. ಜಿ. ರಾಮಚಂದ್ರ ರಾವ್ ನಮ್ಮ ರಾಜ್ಯದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ದೊಡ್ಡ ಹೆಸರು. ಹಾಸನ ಜಿಲ್ಲೆಯ ಅರಕಲಗೂಡಿನ ಅವರು ಅದೇ ಊರಿನ "ಕಾದಂಬರಿ ಸಾರ್ವಭೌಮ" ಆ. ನ. ಕೃಷ್ಣರಾಯರ ಸಮಕಾಲೀನರು. 1942ರ "ಕ್ವಿಟ್ ಇಂಡಿಯಾ" ಚಳುವಳಿಯಲ್ಲಿ ಸಕ್ರಿಯವಾಗಿದ್ದವರು. ಚಳುವಳಿಯ ಮುಂಚೂಣಿಯ ನಾಯಕರಾಗಿದ್ದ ಅವರನ್ನು ಹಿಡಿದು ಬಂದಿಖಾನೆಗೆ ಹಾಕಲು ಪೊಲೀಸರು ಕಾಯುತ್ತಿದ್ದರು. ಚಳುವಳಿಯನ್ನು ಯಶಸ್ವಿಯಾಗಿ ಮುನ್ನಡೆಸಲು ರಾಮಚಂದ್ರ ರಾಯರು ಪೋಲೀಸರ ಕಣ್ಣು ತಪ್ಪಿಸಿ ಕೆಲಕಾಲ ಭೂಗತರಾದರು. ಹೀಗೆ ಪೊಲೀಸರಿಗೆ ಸಿಗದಂತೆ ಓಡಾಡಿ ಚಳುವಳಿ ಸಂಘಟಿಸುವ ನಾಯಕರಿಗೆ ಸಹಕಾರ ಕೊಡಲು ಇತರೆ ಚಳುವಳಿಕಾರರ ತಂಡಗಳು ಇದ್ದವು. ಭೂಗತರಾದವರು ಒಂದೇ ಕಡೆ ಇರುವಂತಿಲ್ಲ. ಮನೆಯಿಂದ ಮನೆಗೆ ಗುಪ್ತವಾಗಿ ಓಡಾಟ. ಹೀಗೆ ಚಳುವಳಿ ನಡೆಯುತ್ತಿತ್ತು,
ಒಂದು ದಿನ ರಾತ್ರಿ ಶ್ರೀ ಹೆಚ್. ಎಸ್ ಸೀತಾರಾಮ್ (ಮುಂದೆ 1954-55ರಲ್ಲಿ ಬೆಂಗಳೂರಿನ ಮೇಯರ್ ಆದವರು. ಸ್ವಾತಂತ್ರ್ಯ ಯೋಧ ಶತಾಯುಷಿ ಶ್ರೀ ಹೆಚ್. ಎಸ್. ದೊರೆಸ್ವಾಮಿ ಅವರ ಅಣ್ಣ) ಅವರ ಕಾರಿನಲ್ಲಿ ಶ್ರೀ ರಾಮಚಂದ್ರ ರಾಯರನ್ನು ಅವರು ಅಡಗಿಕೊಂಡಿದ್ದ ಯಲಹಂಕದ ತಮ್ಮ ಸ್ನೇಹಿತರ ಮನೆಯಿಂದ ಕರೆತಂದು ನರಸಿಂಹರಾಜ ಕಾಲೋನಿಯಲ್ಲಿನ ಶ್ರೀ ಸಿ. ಕೆ. ನಾಗರಾಜ ರಾವ್ ಅವರ ಮನೆಯಲ್ಲಿ ಸೇರಿಸಿದರು. ಆಗ ನಾಗರಾಜ ರಾವ್ ಕನ್ನಡದ ಉದಯೋನ್ಮುಖ ಲೇಖಕ. ಕೆಲ ದಿನ ರಾಮಚಂದ್ರ ರಾಯರ ರಕ್ಷಣೆಯ ಜವಾಬ್ದಾರಿ ಅವರಿಗೆ ವರ್ಗಾವಣೆ ಆಯಿತು.
ರಾಮಚಂದ್ರ ರಾಯರ ಬೆನ್ನು ಹತ್ತಿದ್ದ ಪೊಲೀಸರಿಗೆ ಹೇಗೋ ಈ ಸುಳಿವು ಸಿಕ್ಕಿತು. ಸರ್ಚ್ ವಾರಂಟ್ ಹಿಡಿದುಕೊಂಡು ತಡರಾತ್ರಿ ಪೊಲೀಸರು ನಾಗರಾಜರಾಯರ ಮನೆ ಬಾಗಿಲು ಬಡಿದರು. ಮನೆಯಲ್ಲಿ ತಂದೆ-ತಾಯಿ, ಹೆಂಡತಿ-ಮಕ್ಕಳ ಜೊತೆ ನಾಗರಾಜರಾಯರ ವಾಸ. ಆ ದಿನ ಅವರ ಪತ್ನಿ ಮನೆಯಲ್ಲಿರಲಿಲ್ಲ. ಬಾಗಿಲು ತೆಗೆದರೆ ಪೊಲೀಸು ಅಧಿಕಾರಿಯ ಜೊತೆ ಒಬ್ಬ ಕನಿಷ್ಟಬಿಲ್ಲೆ. ಒಳಗೆ ಬಂದ ಅಧಿಕಾರಿಯನ್ನು ಕೂಡಿಸಿ ರಾಯರು ತಾಯಿಗೆ ಕಾಫಿ ಮಾಡಲು ಹೇಳಿದರು. ಸರ್ಚ್ ವಾರಂಟ್ ತೋರಿಸಿ ಅಧಿಕಾರಿ ತಪಾಸಣೆ ಮಾಡಿದರು. ರಾಯರ ಕೋಣೆಯಲ್ಲಿ ಒಂದು ವ್ಯಕ್ತಿ ಚಾಪೆಯಮೇಲೆ ಪೂರ್ತಿ ಕಂಬಳಿಯಿಂದ ಮುಸುಕು ಹೊದ್ದು ಮಲಗಿದ್ದುದು ಅಧಿಕಾರಿಗೆ ಕಂಡಿತು.
"ಯಾರು ಅಲ್ಲಿ ಮಲಗಿರುವುದು?"
"ಇನ್ಯಾರು ಇಲ್ಲಿ ಬರುತ್ತಾರೆ? ಅದು ನನ್ನ ಹೆಂಡತಿ"
"ಹಾಗೆ ಯಾಕೆ ದೂರ ಮೂಲೆಯಲ್ಲಿ ಮಲಗಿದ್ದಾರೆ?"
"ಅದಕ್ಕೇನು ಹೇಳುವುದು? ತಿಂಗಳಿಗೆ ಮೂರು ದಿನ ದೂರ ಇರುವ ಪದ್ಧತಿ ಇದೆಯಲ್ಲ. ಅದಕ್ಕೆ"
ಅಧಿಕಾರಿಗೆ ನಂಬಿಕೆ ಬರಲಿಲ್ಲ.
"ಗಾಢ ನಿದ್ರೆಯಲ್ಲಿದ್ದಾಳೆ. ಬೇಕಿದ್ದರೆ ಎಬ್ಬಿಸುತ್ತೇನೆ"
ಅಧಿಕಾರಿಗೆ ಎಬ್ಬಿಸಲು ಹೇಳುವಂತೆ ಮನಸ್ಸಾಗಲಿಲ್ಲ. ಅಷ್ಟರಲ್ಲಿ ನಾಗರಾಜರಾಯರ ತಾಯಿ ಕಾಫಿ ತಂದರು. ಸಹಾಯಕನ ಜೊತೆ ಒಳ್ಳೆಯ ಕಾಫಿ ಕುಡಿದು ಇಬ್ಬರೂ ಹೊರಟುಹೋದರು. ರಾಮಚಂದ್ರರಾಯರು ಅಂದು ಪಾರಾದರು.
*****
ಸ್ವಾತಂತ್ರ್ಯ ಬಂದ ನಂತರ ಮೈಸೂರು ರಾಜ್ಯಕ್ಕೆ ಶ್ರೀ ಕೆ. ಚಂಗಲರಾಯ ರೆಡ್ಡಿ ಅವರು ಮುಖ್ಯಮಂತ್ರಿ ಆಗಿ ನಾಮನಿರ್ದೇಶಿತ ಸರ್ಕಾರ ಅಧಿಕಾರ ವಹಿಸಿಕೊಂಡಿತು. ಕೆ.ಸಿ. ರೆಡ್ಡಿ ಅವರ ನೇತೃತ್ವದಲ್ಲಿ ಮೊದಲ ಚುನಾವಣೆಗಳು 1952ರಲ್ಲಿ ನಡೆದುವು.
ಎ. ಜಿ. ರಾಮಚಂದ್ರರಾಯರು ಹೊಳೆನರಸೀಪುರ ಕ್ಷೇತ್ರದಿಂದ ಎಂ.ಎಲ್.ಎ ಆಗಿ ಚುನಾಯಿತರಾದರು. ಶ್ರೀ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿ ಆಗಿ ಮೊದಲ ಜನಪ್ರಿಯ ಸರ್ಕಾರ ಮೈಸೂರು ರಾಜ್ಯಕ್ಕೆ ಬಂದಿತು. ಹನುಮಂತಯ್ಯನವರ ಸರ್ಕಾರದ ಏಳು ಮಂತ್ರಿಗಳಲ್ಲಿ (ಆವರನ್ನು ಸೇರಿಸಿ ಎಂಟು ಜನ) ಶ್ರೀ ಕಡಿದಾಳ್ ಮಂಜಪ್ಪ ಮತ್ತು ಶ್ರೀ ಎ. ಜಿ. ರಾಮಚಂದ್ರ ರಾವ್ ಸೇರಿದರು.
ರಾಮಚಂದ್ರರಾವ್ ಕಾನೂನು ಮತ್ತು ವಿದ್ಯಾ ಇಲಾಖೆ ಮಂತ್ರಿಗಳಾದರು. ನಾಗರಾಜರಾಯರ ಮನೆಯಲ್ಲಿ ನೆಲದ ಮೇಲೆ ಮಲಗಿದ್ದುದು ಮಾತ್ರವಲ್ಲ. ಸರ್ಕಾರ ಕೊಟ್ಟ ನಿವಾಸದ ಕೋಣೆಯ ಮಂಚದ ಮೇಲೂ ಅವರು ಮಲಗಲಿಲ್ಲ. ಮಂಚವನ್ನು ದೇವರ ಪೀಠವಾಗಿ ಉಪಯೋಗಿಸಿ ನೆಲದಮೇಲೇ ಮಲಗುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಕಂಡವರು ಹೇಳುತ್ತಿದ್ದರು. ಅಧಿಕಾರ ಮತ್ತು ಸವಲತ್ತುಗಳಿಗೆ ಆಸೆಪಡದ ಸ್ವಾತಂತ್ರ್ಯ ಯೋಧರ ಸಂತತಿಯವರು ಅವರು.
1957ರಲ್ಲಿ ಹೊಳೆನರಸೀಪುರದಿಂದ ಪ್ರಜಾ ಸೋಷಲಿಸ್ಟ್ ಪಕ್ಷದ ಶ್ರೀ ವೈ. ವೀರಪ್ಪನವರು ಎಂ.ಎಲ್.ಎ ಆದರು. ನಂತರ 1962ರಿಂದ ಸತತ ಆರು ಬಾರಿ ಗೆದ್ದು ಬಂದ, ರಾಜ್ಯದ ಮುಖ್ಯ ಮಂತ್ರಿಗಳು ಮಾತ್ರವಲ್ಲದೆ ದೇಶದ ಪ್ರಧಾನ ಮಂತ್ರಿಗಳೂ ಆದ ಶ್ರೀ ಹೆಚ್. ಡಿ. ದೇವೇಗೌಡ ಅವರು ತಾವು ಎ. ಜಿ. ರಾಮಚಂದ್ರ ರಾಯರ ಗರಡಿಯಲ್ಲಿ ಬೆಳೆದವರು ಎಂದು ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತಾರೆ.
*****
ಈಗ ಸಂಸ್ಕೃತಿ ಬೆಳೆಸಲು "ಕನ್ನಡ ಮತ್ತು ಸಂಸ್ಕೃತಿ ಇಲಾಖೆ" ದೊಡ್ಡದಾಗಿ ಬೆಳೆದಿದೆ. "ಕನ್ನಡ ಅಭಿವೃದ್ಧಿ ಪ್ರಾಧಿಕಾರ" ಸಹ ಅಸ್ತಿತ್ವಕ್ಕೆ ಬಂದಿದೆ. ಮಂತ್ರಿಮಂಡಲಗಳೂ ದೊಡ್ಡವಾಗಿ ಬೆಳೆದಿವೆ.
ಅದೇ ಕೆಂಗಲ್ ಹನುಮಂತಯ್ಯ ಅವರು ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ದೇಶದ "ಆಡಳಿತ ಸುಧಾರಣಾ ಸಂಸ್ಥೆ" (Administrative Reforms Commission) ಹಾಕಿರುವ ಮಿತಿಯಂತೆ ಶಾಸಕಾಂಗದ ಒಟ್ಟು ಸದಸ್ಯರ ಸಂಖ್ಯೆಯ ಶೇಕಡಾ ಹದಿನೈದರಷ್ಟು ಮಾತ್ರ ಮಂತ್ರಿಮಂಡಲದಲ್ಲಿ ಮಂತ್ರಿಗಳಾಗಿರಬಹುದು. ಈ ಮಿತಿ ಹಾಕಿರದಿದ್ದರೆ ಅನಿಮಿತ ಸಂಖ್ಯೆಯ ಮಂತ್ರಿಗಳನ್ನು ಮಾಡಿಟ್ಟು ಈ ಜಗಳಗಳನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದಿತ್ತು!
ಸಂಸ್ಕೃತಿ ಪ್ರಚಾರ ಹೇಗೆ ನಡೆಯುತ್ತಿದೆ ಅನ್ನುವ ಚರ್ಚೆ ಒತ್ತಟ್ಟಿಗಿರಲಿ. ಆಡಳಿತ ಮತ್ತು ರಾಜಕೀಯ ನಾಯಕರ ಸಂಸ್ಕೃತಿಯಂತೂ ಹೇಗೆ ದಿಕ್ಕು ತಪ್ಪಿದೆ ಅನ್ನುವುದು ಯೋಚಿಸಬೇಕಾದ ವಿಷಯವೇ. ಇಂತಹ ಸಂಸ್ಕೃತಿಯ ಪ್ರಚಾರವಂತೂ ಬಹಳ ಚೆನ್ನಾಗಿಯೇ ಆಗುತ್ತಿದೆ.
*****
ಅನೇಕ ಸಂಸ್ಕೃತಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಶ್ರೀ ಸಿ. ಕೆ. ನಾಗರಾಜರಾವ್ ಮತ್ತು ಅವರ ಶ್ರೀಮತಿ ರಾಜಮಣಿ ನಾಗರಾಜರಾವ್ ಅವರ ಒಂದು ಸುಂದರ ಅನುಭವದ ಸೊಗಸನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
Nice to know about A.G. Ramachandra Rao who fought for the independence of India. The Mysore State Government was ruling to help the citizens of the State Government and to educate the people in rural areas to promote Kannada Culture. They did a wonderful job at that time.
ReplyDeleteಎರಡು ರೂಪಾಯಿ ಬೆಲೆಯ ಕುಮಾರವ್ಯಾಸ ಭಾರತ ನನ್ನ ಅಣ್ಣನ ಹತ್ತಿರ ಇದೆ. 2021ರಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ನಾಲ್ಕುನೂರು ರೂಪಾಯಿ ಬೆಲೆಯ ಕುಮಾರವ್ಯಾಸ ಭಾರವನ್ನು 50% ರಿಯಾಯತಿಯಲ್ಲ ಇನ್ನೂರು ರೂಪಾಯಿ ಕೊಟ್ಟು ನಾನೂ ಒಂದು ಪ್ರತಿಯನ್ನು ಖರೀದಿಸಿ ಇಟ್ಟುಕೊಂಡಿದ್ದೇನೆ.
ReplyDeleteNice tributes to Sri. Nagaraja Rao on his Namam din 12.6.2026 who did his part as true Kannadiga and a Desha Bhakta also eagerly waiting to see next episode
ReplyDeleteಈ ಲೇಖನ ತುಂಬಾ ಚೆನ್ನಾಗಿದೆ ಧನ್ಯವಾದಗಳು.
ReplyDelete