"ಎಳೆಗರುo ಎತ್ತಾಗದೇ ಲೋಕದೊಳ್, ನ್ಯಗ್ರೋಧ ಬೀಜಂ ಕೆಲಂ ಸಿಡಿದುಂ ಪೆರ್ಮರನಾಗದೇ, ಹರ ಹರಾ ಶ್ರೀ ಚೆನ್ನಸೋಮೇಶ್ವರಾ" ಎಂದೊಂದು "ಸೋಮೇಶ್ವರ ಶತಕ" ಸರಣಿಯಲ್ಲಿ ವಚನ. ಗಿಡ-ಮರಗಳು ತಮ್ಮ ಸಂತತಿ ಬೆಳೆಸಲು ಅನೇಕ ರೀತಿಯ ಉಪಾಯ ಮಾಡುತ್ತವೆ. ಎಕ್ಕದ ಗಿಡದಲ್ಲಿ ಬಿಡುವ ಹಣ್ಣು (ನಾವು ತಿನ್ನಲಾಗದ ಹಣ್ಣು) ಪಕ್ವವಾಗಿ ಸಿಡಿದಾಗ ಅದರಲ್ಲಿರುವ ಬೀಜಗಳಿಗೆ ಅಂಟಿಕೊಂಡಿರುವ ಪುಕ್ಕಗಳಿಂದ ಗಾಳಿಯಲ್ಲಿ ತೇಲುತ್ತಾ ಹೋಗಿ ಮತ್ತೆಲ್ಲೋ ಬಿದ್ದು ಬೇರೆ ಗಿಡ ಹುಟ್ಟುತ್ತದೆ. ನಾವು ಬಳಸುವ "ಹರಳೆಣ್ಣೆ" ಕೊಡುವ ಹರಳಿನ ಗಿಡದಲ್ಲಿ ಬಲಿತ ಹರಳು ಕಾಯಿ ಸಿಡಿದು, ಬೀಜ ದೂರ ಹಾರಿ ಮತ್ತೊಂದು ಗಿಡ ಹುಟ್ಟುತ್ತದೆ. ಆಲದ ಮರ (ನ್ಯಗ್ರೋಧ) ಕೂಡ ಹೀಗೆಯೇ. ಮರದಿಂದ ಹಾರಿದ ಬೀಜ ಮತ್ತೆಲ್ಲೋ ಭೂಮಿಯನ್ನು ಕಂಡುಕೊಂಡು, ಅಲ್ಲಿ ಗಿಡ ಹುಟ್ಟಿ ವಿಶಾಲವಾದ ಮರ ಬೆಳೆಯುತ್ತದೆ.
ನಮ್ಮ ಸಮಾಜದಲ್ಲಿಯೂ ಹೀಗೆಯೇ ನಡೆಯುತ್ತದೆ. ಹುಟ್ಟಿದ ಊರಿನಲ್ಲೇ ತಮ್ಮ ಜೀವನವನ್ನೆಲ್ಲಾ ಕಳೆಯುವರು ಕೆಲವು ಮಂದಿ. ಹಚ್ಚಿನ ಅವಕಾಶಗಳಿಗಾಗಿ ಹೊರಗಿನ ಸ್ಥಳ, ದೇಶಗಳಿಗೆ ವಲಸೆ ಹೋಗಿ ಅಲ್ಲಿ ಬೇರು ಬಿಟ್ಟು ಜೀವನ ಕಂಡುಕೊಳ್ಳುವವರು ಕ್ರಮೇಣ ಹೆಚ್ಚಾಗುತ್ತಿದ್ದಾರೆ. ಒಂದೇ ಕುಟುಂಬದ ಅನೇಕ ಸದಸ್ಯರು ಪ್ರಪಂಚದ ಬೇರೆ ಬೇರೆ ಕಡೆ ನೆಲೆ ಕಂಡುಕೊಂಡು ಮುನ್ನಡೆಯುವುದು ಹೆಚ್ಚಾಗುತ್ತಿದೆ. ಹೀಗೆ ನಡೆಯುತ್ತಿರುವುದರಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಗಳೂ ಜಾಸ್ತಿಯಾಗುತ್ತಿವೆ. ವಿಮಾನ ಪ್ರಯಾಣ ಸುಲಭವೂ, ಹೆಚ್ಚು ಜನರಿಗೆ ಕೈಗೆಟುಕುವಂತೆ ಆಗುತ್ತಿರುವುದೂ ಇದಕ್ಕೆ ಪೂರಕವಾಗಿದೆ.
ಹೊರದೇಶಗಳಲ್ಲಿ ದುಡಿಯುತ್ತಿರುವ ಯುವ ಜನತೆಗೆ ತಾಯ್ನಾಡಿಗೆ ಆಗಾಗ ಬರಬೇಕೆಂದು ಆಸೆ ಇದ್ದರೂ ಸಹ ಅದು ಸಾಧ್ಯವಾಗುವುದಿಲ್ಲ. ಕೆಲಸದ ಒತ್ತಡ, ಜೀವನ ಕ್ರಮ, ಹೆಚ್ಚು ಕಾಲ ರಜೆ ಸಿಗದ ಸ್ಥಿತಿ, ವೀಸಾ ಮುಂತಾದುವುಗಳ ಕಟ್ಟುನಿಟ್ಟಿನ ನಿಯಮಗಳು ಮುಂತಾದುವುಗಳ ಬಂಧಕಗಳು ಇರುತ್ತವೆ. ತಂದೆ-ತಾಯಿಯರನ್ನು ನೋಡುವ, ಅವರ ಜೊತೆ ಕಾಲಕಳೆಯುವ ಆಸೆಗೆ ಲಗಾಮು ಬೀಳುತ್ತದೆ. "ನಾವು ಬಂದರೆ ಒಂದೋ-ಎರಡೋ ವಾರ, ಅಷ್ಟೇ. ನೀವೇ ಅಲ್ಲಿಗೆ ಬಂದುಬಿಡಿ. ಕೆಲವು ತಿಂಗಳ ಕಾಲ ಇರಬಹುದು. ಅಲ್ಲಿ ನೋಡುವ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿದಹಾಗಾಯಿತು" ಎಂದು ಮಕ್ಕಳು ತಂದೆ-ತಾಯಿಯರಿಗೆ ಹೇಳುವುದು ಸರ್ವೇ ಸಾಮಾನ್ಯ.
ಲಂಡನ್, ಫ್ರಾಂಕ್ ಫ಼ರ್ಟ್, ಪ್ಯಾರಿಸ್ ಮುಂತಾದ ಯೂರೋಪಿನ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಕುಳಿತು ಗಮನಿಸಿದರೆ ಈ ರೀತಿ ಪ್ರಯಾಣ ಮಾಡುವ ಅನೇಕ ತಂದೆ-ತಾಯಿಯರನ್ನು ನೋಡಬಹುದು. ಮಗಳ ಅಥವಾ ಸೊಸೆಯ ಬಾಣಂತನ ಮಾಡಲು ಹೋಗುತ್ತಿರುವವರ ಉತ್ಸಾಹದ ಜೊತೆ ಬಾಣಂತನ ಮಾಡಿ ಸುಸ್ತಾಗಿ ಹಿಂದಿರುಗುತ್ತಿರುವ ತಾಯಿಯರನ್ನೋ, ಅತ್ತೆಯರನ್ನೋ ಸುಲಭವಾಗಿ ಕಾಣಬಹುದು.
*****
ಒಂದು ತಂದೆ-ತಾಯಿಯರ ಜೋಡಿ ಹೀಗೆ ಕೆಲವು ತಿಂಗಳ ಕಾಲ ಮಕ್ಕಳು, ಮೊಮ್ಮಕ್ಕಳ ಜೊತೆ ಅಮೇರಿಕ ದೇಶದಲ್ಲಿ ಕಾಲ ಕಳೆದರು. ಏನು ಮಾಡಿದರೂ ಆರು ತಿಂಗಳ "ಲಕ್ಷ್ಮಣ ರೇಖೆ" ದಾಟುವಂತಿಲ್ಲವಲ್ಲ! ಹಿಂದಿರುಗುವ ದಿನ ಬಂತು. ಈಗೀಗ ಅಮೇರಿಕಾದ ಕೆಲವು ಮುಖ್ಯ ನಗರಗಳಿಂದ ಭಾರತದ ಕೆಲವು ದೊಡ್ಡ ನಗರಗಳಿಗೆ ನೇರ ವಿಮಾನ ಸಂಪರ್ಕವುಂಟು. ಮೊದಲಿನಂತೆ ಮಧ್ಯದಲ್ಲಿ ಎಲ್ಲೋ ಒಂದು ಕಡೆ ವಿಮಾನ ಬದಲಿಸುವ ಪ್ರಮೇಯವಿಲ್ಲ. ಹದಿನಾರು-ಹದಿನೇಳು ಗಂಟೆಗಳ ಒಂದೇ ಪ್ರಯಾಣದಲ್ಲಿ ಮುಗಿಸಬಹುದು.
ದೀರ್ಘ ಪ್ರಯಾಣ ಆದುದರಿಂದ ಹೆಚ್ಚು ಪ್ರಯಾಸ ಆಗದಿರಲಿ ಎಂದು ಒಂದಕ್ಕೆ ನಾಲ್ಕು ಪಟ್ಟು ಹಣ ತೆತ್ತು ಮೇಲ್ದರ್ಜೆ ಟಿಕೇಟು ಕೊಂಡರು. ಇದರಲ್ಲಿ ಕೆಲವು ಅನುಕೂಲಗಳೂ ಉಂಟು. ಸಾಮಾನ್ಯವಾಗಿ ಇಂತಹ ಟಿಕೇಟುಗಳ ಜೊತೆ ಹೆಚ್ಚು ತೂಕದ ಸಾಮಾನುಗಳನ್ನು ಒಯ್ಯಬಹುದು. ಹೋಗುವಾಗ ಮೊಮ್ಮಕ್ಕಳಿಗೆ ಇಷ್ಟವಾದ ಸಿಹಿತಿಂಡಿ. ಎಲ್ಲರಿಗೂ ಹಪ್ಪಳ-ಉಪ್ಪಿನಕಾಯಿ, ಉಡುಗೊರೆಗಳು, ಇತ್ಯಾದಿ. ಹೀಗೆ ಅವರವರ ಅಭಿರುಚಿಗೆ ತಕ್ಕಂತೆ ಹೆಚ್ಚು ಪದಾರ್ಥಗಳನ್ನು ಪೆಟ್ಟಿಗೆಗಳಲ್ಲಿ ಸೇರಿಸಬಹುದು. ಹಿಂದಿರುಗುವಾಗ ಚಾಕಲೇಟು, ಇಲ್ಲಿರುವವರಿಗೆ ಉಡುಗೊರೆಗಳು, ಹೀಗೆ ಕೆಲವನ್ನು ತರಬಹುದು. ಇದಿದ್ದರೆ ಅದಿಲ್ಲ; ಅದಿದ್ದರೆ ಇದಿಲ್ಲ ಎಂದು ಗೊಣಗುವ ಚಿಂತೆಯಿಲ್ಲ.
ವಿಮಾನ ಕಂಪನಿಯವರು ಮನೆಯಿಂದ ವಿಮಾನ ನಿಲ್ದಾಣಕ್ಕೆ ತಲುಪಲು ಐಷಾರಾಮಿ ಕಾರು ಕಳಿಸುತ್ತಾರೆ. ಆಕಾಶದಲ್ಲಿ ಹಾರುವ ಮುಂಚೆ ಭೂಮಿಯ ಮೇಲೆ ತೇಲುವ ಅನುಭವ ಪಡೆಯಬಹುದು. ಲಗೇಜು ವಿಮಾನಕ್ಕೆ ಹೋಗುವಂತೆ ಕೊಟ್ಟಮೇಲೆ ಮುಂದಿನ ಎರಡು ಗಂಟೆ ಕಾಲ ಕಳೆಯಲು "ಲೌಂಜ್" ವ್ಯವಸ್ಥೆ ಇರುತ್ತದೆ. ಇಲ್ಲಿ ಸುಖಾಸೀನರಾಗಬಹುದು. ಅನೇಕ ಬಗೆಯ ತಿಂಡಿ-ತೀರ್ಥ ಇರುತ್ತದೆ. ಇಷ್ಟವಿದ್ದವರು ಬೇಕಿದ್ದನ್ನು ಬೇಕಿದ್ದಷ್ಟು ಸೇವಿಸಬಹುದು. ವಿಮಾನ ಹೊರಡುವ ಸಮಯಕ್ಕೆ ಅದರ ಗೇಟಿಗೆ ತಲುಪಲು ವ್ಯವಸ್ಥೆ ಮಾಡುತ್ತಾರೆ. ಹೀಗೆ ಅನುಕೂಲಗಳು.
ಲಗೇಜು ವಿಮಾನದ ಕಂಪನಿಯ ಕೌಂಟರಿನಲ್ಲಿ ಕೊಟ್ಟಾಗ ಸವಿ ಮಾತಿನಲ್ಲಿ ಆ ಹುಡುಗಿ ಮೆಲ್ಲನೆ ಹೇಳಿದಳು: "ನಿಮಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ನಮ್ಮ ಲೌಂಜ್ ನವೀಕರಿಸುತ್ತಿದ್ದೇವೆ. ಆದ್ದರಿಂದ ಇಂದು ನೀವು ಅಲ್ಲಿಗೆ ಹೋಗುವಂತಿಲ್ಲ. ಮುಂದಿನ ಸಲ ನೀವು ಬಂದಾಗ ಅದು ಎಷ್ಟು ಚೆನ್ನವಿದೆ ಎಂದು ನೀವು ನೋಡಬಹುದು". ವಿದ್ಯಾರ್ಥಿ ಭವನ ಮಸಾಲೆ ದೋಸೆ ದೋಸೆ ತಿನ್ನಲು ಗಾಂಧಿ ಬಜಾರ್ ತಲುಪಿದಾಗ ಆ ದಿನ ಶುಕ್ರವಾರ ಎಂದು ನೆನಪಾದಂತೆ ಆಯಿತು. "ನಿಮ್ಮ ಅನುಕೂಲಕ್ಕೆ ಎರಡು ಇಪ್ಪತ್ತು ಡಾಲರಿನ ಕೂಪನ್ ಕೊಡುತ್ತೇನೆ. ಇಲ್ಲಿ ಯಾವುದಾದರೂ ಔಟ್ಲೆಟ್ನಲ್ಲಿ ನಿಮಗೆ ಬೇಕಾದ ತಿಂಡಿ-ಪಾನೀಯ ತೆಗೆದುಕೊಳ್ಳಿ. ಈ ದಿನ ಹೆಚ್ಚು ಪ್ರಯಾಣಿಕರಿಲ್ಲ. ಗೇಟಿನಲ್ಲಿ ಜನಜಂಗುಳಿ ಇಲ್ಲ. ಸುಖವಾಗಿ ಕುಳಿತುಕೊಳ್ಳಿ. ಕೇವಲ ಎರಡು ಗಂಟೆ ಅಷ್ಟೇ!" ಎಂದು ಮುಖ ಅಗಲಿಸಿ, ನಗುವಿನೊಡನೆ ಹೇಳಿ, ಹಿಂದೆ-ಮುಂದೆ ನೋಡುವುದರ ಒಳಗಾಗಿ ಮತ್ತೊಬ್ಬರನ್ನು ಚೆಕಿನ್ನಿಗೆ ಕರೆದುಬಿಟ್ಟಳು.
ಕೈನಲ್ಲಿ ಈಗ ಎರಡು ಕೂಪನ್ನುಗಳು. ಅವುಗಳ ಸದುಪಯೋಗ ಮಾಡಬೇಕು. ದಂಡ ಮಾಡುವಂತಿಲ್ಲ. ಕ್ಯಾಬಿನ್ ಬ್ಯಾಗು ಎಳೆದುಕೊಂಡು ಮೊದಲ ಅಂಗಡಿಗೆ ಹೋದರು. ಸಾಲಿನಲ್ಲಿ ನಿಂತು ಸರತಿ ಕಾದರು. ಬೋರ್ಡಿನಲ್ಲಿ ಇದ್ದದ್ದು ನೋಡಿ ಏನು ಬೇಕೆಂದು ಹೇಳಿದರು. ಅವನು ಕೈಲಿದ್ದ ಕೂಪನ್ ನೋಡಿದ. "ಕ್ಷಮಿಸಿ. ನಾವು ಈ ಕೂಪನ್ ಸ್ವೀಕರಿಸುವುದಿಲ್ಲ" ಎಂದು ಒಂದೇ ಮಾತಿನಲ್ಲಿ ಕೆಲಸ ಮುಗಿಸಿದ. ಏನು ಮಾಡುವುದು? ಮುಂದಿನ ಅಂಗಡಿ. ಅಲ್ಲಿಯೂ ಇದೇ ರಾಗ. ಹೀಗೇ ಆರೇಳು ಅಂಗಡಿ ಆಯಿತು.
ಜೇಬಿನಲ್ಲಿ ಹಣವುಂಟು. ಕ್ರೆಡಿಟ್ ಕಾರ್ಡುಗಳೂ ಇವೆ. ಆದರೆ ಕೂಪನ್ ಉಪಯೋಗ ಮಾಡಲೇಬೇಕಲ್ಲ. ಇಲ್ಲದಿದ್ದರೆ ಅದು ವ್ಯರ್ಥವಾಗುವುದು. ವಿಮಾನ ಏರಿದಮೇಲೆ ಅದು ನಿರುಪಯೋಗಿ. ಕೂಪನ್ ಕೊಡದಿದ್ದರೆ ಚಂದವಿತ್ತು ಅನ್ನಿಸತೊಡಗಿತು. ಈಗ ಏನು ಮಾಡುವುದು? ಕಡೆಯ ಪ್ರಯತ್ನ ಅಂತ ಎಂಟನೆಯ ಅಂಗಡಿ ತಲುಪಿದ್ದಾಯಿತು. ಆಹಾ! ಇವರು ಕೂಪನ್ ತೆಗೆದುಕೊಳ್ಳಲು ಒಪ್ಪಿದರು. ಆದರೆ ನಮಗೆ ಬೇಕಾದ ಪದಾರ್ಥ ಕೊಡುವುದಿಲ್ಲ. ಅವರು ಹೇಳಿದ ಪದಾರ್ಥಗಳಲ್ಲಿ ಆರಿಸಿಕೊಳ್ಳಬಹುದು. ವಿಧಿ ಇಲ್ಲದೆ ಮನಸ್ಸಿಗೆ ಬೇಡದಿದ್ದರೂ ಯಾವುದೋ ಎರಡು ಪದಾರ್ಥಗಳನ್ನು ಪಡೆದು, ಗೇಟಲ್ಲಿ ಜಾಗ ಹಿಡಿದು ಸೇವಿಸಿದರು. ಪ್ರಯಾಣ ಮುಂದುವರೆಯಿತು.
*****
ಸಾಧನಗಳಿಂದ ಏನಾದರೂ ಪ್ರಯೋಜನ ಇರಬೇಕು. ಉಪಯೋಗವಿಲ್ಲದ ಸಾಧನ ವ್ಯರ್ಥವೇ ಸರಿ. ಬಳಿಯಿರುವ ಬೆಲೆಯುಳ್ಳ ಪದಾರ್ಥ ಏನೂ ಕೆಲಸಕ್ಕೆ ಬಾರದಿದ್ದರೆ ಅದೊಂದು ಚಿಂತೆಯ ಕಾರಣ ಆಗುತ್ತದೆ. ಅದು ಇಲ್ಲದಿದ್ದರೆ ಹೋಗಲಿ ಎಂದು ಬಿಟ್ಟು ಬಿಡಬಹುದು. ಆದರೆ ಹತ್ತಿರವಿದೆ. ಹಾಗೆಯೇ ಬಿಡುವಂತಿಲ್ಲ. ಆದರೆ ಬೇಕಿದ್ದಕ್ಕೆ ಬಳಸುವಂತಿಲ್ಲ. ಇದೊಂದು ಇಕ್ಕಟ್ಟಿನ ಪರಿಸ್ಥಿತಿ.
ಇಷ್ಟೇ ಆದರೆ ಪರವಾಗಿಲ್ಲ. ವ್ಯರ್ಥವಾಯಿತು ಅನ್ನುವುದು ಒಂದು ನಿರಾಶೆಯ ಕಾರಣವಾದರೂ, ಅದರಿಂದ ತೊಂದರೆಯಂತೂ ಆಗಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಇದಕ್ಕೆ ವಿರುದ್ಧವಾಗಿ ಅದರಿಂದ ಆಗಬೇಕಾದ ಪ್ರಯೋಜನ ಇಲ್ಲದೆ ಬದಲಾಗಿ ಅದರಿಂದ ತೊಂದರೆ ಆಗಲು ಪ್ರಾರಂಭವಾದರೆ? "ಕಾಸು ಕೊಟ್ಟು ಹೊಡೆಸಿಕೊಂಡರು" ಅನ್ನುವ ಗಾದೆ ಇದಕ್ಕೇ ಇದೆ ಎಂದು ನೆನಪಿಸಿಕೊಳ್ಳಬಹುದು.
ಪಂಚೇಂದ್ರಿಯಗಳು ಅನ್ನುತ್ತೇವೆ. ಈ ಐದರಲ್ಲಿ ಯಾವುದು ಮುಖ್ಯ? ಇದೆಂತಹ ಪ್ರಶ್ನೆ ಅನ್ನಬಹುದು. ಎಲ್ಲವೂ ಮುಖ್ಯವೇ. ಕಣ್ಣು ಇರುವುದು ನೋಟದಿಂದ ಸುತ್ತಲಿನ ವಿಷಯ ತಿಳಿಯುವುದಕ್ಕೆ. ಕಿವಿಯಿರುವುದು ಶಬ್ದಗ್ರಹಣದ ಮೂಲಕ ಅನುಭವ ಪಡೆಯಲು. ನಾಲಗೆಯೋ ರುಚಿಯ ಅನುಭವದ ಜೊತೆಗೆ ಮಾತನಾಡಲು ಸಹಾಯಕ. ಮೂಗು ಮತ್ತು ಚರ್ಮಗಳು ವಾಸನೆ ಮತ್ತು ಸ್ಪರ್ಶದಿಂದ ಅನುಭವ ಪೂರ್ಣ ಮಾಡಲು ಸಹಾಯಕಗಳು.
ಕೆಲವರಿಗೆ ವಾಸನೆ ಗೊತ್ತಾಗುವುದಿಲ್ಲ. ಮತ್ತೆ ಕೆಲವರಿಗೆ ಈ ಇಂದ್ರಿಯ ಬಹಳ ಸೂಕ್ಷ್ಮ. ಇನ್ನೊಬ್ಬರ ಸ್ಪರ್ಶಜ್ಞಾನದ ಬಗ್ಗೆ ನಾವು ತಿಳಿಯುವುದು ಕಷ್ಟ. ಕಿವಿ ಕೇಳದಿದ್ದಾಗ ಮಂದಿಯ ಜೊತೆ ಇದ್ದಾಗ ಇರುಸು-ಮುರುಸು ಆಗುವುದು. ಮಾತು ಬಾರದ ಮೂಗರಿಗೆ ಬಲು ಕಷ್ಟ. ಕಣ್ಣು ಕಾಣದವರಿಗೆ ಆಗುವ ಕಷ್ಟ ಅವರಿಗೇ ಗೊತ್ತು. ಇತರರು ಒಂದು ಮಟ್ಟದವರೆಗೆ ಊಹಿಸಬಹುದಾದರೂ ಅದರ ಹಿಂಸೆಯ ಪೂರ್ತಿ ಅನುಭವ ಆಗಲು ಸಾಧ್ಯವಿಲ್ಲ. ಆದರೂ ಅನೇಕ ಮಂದಿ ಕುರುಡು ಅಥವಾ ಕಿವುಡು-ಮೂಗರು ಆಗಿದ್ದಾಗ್ಯೂ ಅಸಾಧ್ಯ ಸಾಧನೆಗಳನ್ನು ಮಾಡಿರುವುದನ್ನು ಕಂಡಿದ್ದೇವೆ. ಜೀವನದ ನಡೆಯಲ್ಲಿ ಇಂತಹವರು ಎಲ್ಲಾ ಸರಿಯಿರುವವರನ್ನೂ ಹಿಂದೆ ಬಿಟ್ಟು ದಾಪುಗಾಲು ಹಾಕಿರುವ ಪ್ರಚಂಡರು.
ದೃಷ್ಟಿಯಿಲ್ಲದವರಿಗೆ ಕುರುಡರು ಅನ್ನುತ್ತೇವೆ. ಕೆಲವರಿಗೆ ಕಣ್ಣು ಲಕ್ಷಣವಾಗಿಯೇ ಇರುತ್ತದೆ. ಆದರೆ ದೃಷ್ಟಿ ಇರುವುದಿಲ್ಲ. ಆಗತಾನೇ ಹುಟ್ಟಿದ ಮಕ್ಕಳಿಗೆ ದೃಷ್ಟಿ ಇರುವುದಿಲ್ಲ. "ಮಗುವಿನ ಕಣ್ಣು ಎಷ್ಟು ಚೆನ್ನಾಗಿದೆ" ಎಂದು ನೋಡಿದವರು ಉದ್ಗಾರ ತೆಗೆಯಬಹುದು. "ಬಟ್ಟಲುಗಣ್ಣುಗಳು. ಮಗುವಿಗೆ ವಿಶಾಲಾಕ್ಷಿ ಎಂದೇ ಹೆಸರಿಡಿ" ಅನ್ನಬಹುದು. ಹುಟ್ಟಿದ ದಿನದಿಂದ ಸುಮಾರು ಒಂದು ವಾರ ಕಾಲ ದೃಷ್ಟಿ ಇರುವುದಿಲ್ಲ ಅನ್ನುತ್ತಾರೆ. ಕೇವಲ ಕಪ್ಪು-ಬಿಳುಪು ಮಾತ್ರ ಕಾಣುತ್ತದೆ ಎಂದು ಹೇಳುತ್ತಾರೆ. ವಾರದ ನಂತರ ನಿಧಾನವಾಗಿ ದೃಷಿ ವಿಶಾಲವಾಗಿ ಬಣ್ಣಗಳ ಜ್ಞಾನ ಬರುತ್ತದಂತೆ. ಎಲ್ಲೋ ಕೆಲವರಿಗೆ ಮುಂದೆ ಎಂದೂ ದೃಷ್ಟಿ ಬಾರದೇಹೋಗಿ ಜೀವನವೆಲ್ಲ ದೃಷ್ಟಿಹೀನರಾಗಿ ಬದುಕಬೇಕಾಗಬಹುದು.
ಇದು ಮಾವಿನ ಹಣ್ಣಿನ ಕಾಲ. ನಮ್ಮ ಬಾಲ್ಯಗಳಲ್ಲಿ ಈ ಕಾಲದಲ್ಲಿ ಒಂದು ರೀತಿಯ ಕಣ್ಣುನೋವು ಬರುತ್ತಿತ್ತು. ಸಣ್ಣ ಕಪ್ಪು ಸೊಳ್ಳೆಗಳು ಕಣ್ಣುಗಳನ್ನು ಮುತ್ತಿಕೊಳ್ಳುತ್ತಿದ್ದವು. ಈಗ ವೈದ್ಯ ವಿಜ್ಞಾನ ಮತ್ತು ನೈರ್ಮಲ್ಯ ಪ್ರಜ್ಞೆ ಮುಂದುವರೆದಿರುವುದರಿಂದ ಇದು ಕಡಿಮೆ ಆಗಿದೆ. ಆದರೂ ಕಣ್ಣು ನೋವು ಅಲ್ಲಲ್ಲಿ, ಆಗಾಗ ಕಂಡು ಬರುವುದು. ಕಣ್ಣುಗಳು ಕೆಂಪಾಗಿ, ನೀರು ಸೋರುತ್ತಾ ಉರಿಯುವ ಅನುಭವ ಆಗುವುದು. ಕಪ್ಪು ಕನ್ನಡಕ ಹಾಕಿಕೊಂಡು ಓಡಾಡಬೇಕಾಗುವುದು. ಐದಾರು ದಿನಗಳಲ್ಲಿ ಔಷಧಗಳಿಂದ ಪರಿಹರಿಸಿಕೊಳ್ಳಬಹುದು.
ಕಣ್ಣುಕಾಣದವರಿಗೂ ಈ ಕಣ್ಣು ನೋವು ಬರುವುದು ಒಂದು ವಿಪರ್ಯಾಸ. ಅವರಿಗೆ ಕಣ್ಣಿನಿಂದ ಆಗಬೇಕಾದ ಯಾವುದೇ ಪ್ರಯೋಜನವಿಲ್ಲ. ಆದರೆ ಕಣ್ಣು ನೋವಿನ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ. ಇದೇ "ಕಾಣದ ಕಣ್ಣಿನ ನೋವು". ಕಣ್ಣಿನ ಪ್ರಯೋಜನವಿಲ್ಲದೆ ಅನವಶ್ಯಕ ಹಿಂಸೆ ಅನುಭವಿಸುವ ಗೋಳು.
*****
ನಾವು ಉದ್ಯೋಗ ಪ್ರಾರಂಭ ಮಾಡಿದ ದಿನಗಳಲ್ಲಿ ನಮ್ಮೊಡನೆ ಹಿರಿಯ ಅಧಿಕಾರಿಯೊಬ್ಬರು ಇರುತ್ತಿದ್ದರು. ಅವರಿಗೆ ಎರಡು-ಮೂರು ವರುಷಗಳಿಗೆ ಒಮ್ಮೆ ವರ್ಗಾವಣೆ ಆಗುತ್ತಿತ್ತು. ಹೆಂಡತಿ-ಮಕ್ಕಳೊಡನೆ ಊರಿಂದೂರಿಗೆ ಪ್ರಯಾಣ. ಮಕ್ಕಳಿಗೆ ಶಾಲೆಯಿಂದ ಶಾಲೆಗೆ ವರ್ಗಾವಣೆ. ಒಂದು ಕಡೆ ಜೊತೆಗಾರ ಮಕ್ಕಳೊಡನೆ ಸ್ನೇಹ ಕುದುರುವುದರ ಮೊದಲೇ ಮತ್ತೊಂದು ಸ್ಥಳ. ಅಲ್ಲಿ ಹೊಸ ಶಾಲೆ. ಹೊಸ ಸ್ನೇಹಿತರು. ಹೀಗೆ ಸ್ಥಿರವಿಲ್ಲದ ಬಾಲ್ಯ.
ಈ ರೀತಿ ಅನೇಕ ಮಕ್ಕಳಿಗೆ ಆಗುತ್ತದೆ. ಹೆಚ್ಚಿನವರು ಈ ರೀತಿಯ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾರೆ. ಅವರ ಒಬ್ಬ ಮಗನಿಗೆ ಈ ರೀತಿಯ ಬೆಳವಣಿಗೆಗೆ ಹೊಂದಿಕೊಳ್ಳುವುದು ಬಹಳ ಕಷ್ಟವಾಯಿತು. ವಿದ್ಯೆ ಹತ್ತಲಿಲ್ಲ. ಕೋಪ-ಹಠ ಹೆಚ್ಚಾಯಿತು. ತಂದೆಗೆ ಕಾರಣ ಗೊತ್ತು. ಸಂಸಾರ ಒಂದು ಕಡೆ ಇರಿಸಿ ತಾವು ಓಡಾಡಿಕೊಂಡಿರಲು ಕುಟುಂಬದಲ್ಲಿ ಅನುಕೂಲಗಳಿರಲಿಲ್ಲ. ಹೀಗೆ ನಡೆಯಿತು.
ಮಗ ದೊಡ್ಡವನಾದ. ಎಲ್ಲರಂತೆ ಅದು ಬೇಕು-ಇದು ಬೇಕು ಅನ್ನುವನು. ತಂದೆ ಬೇಕು-ಬೇಡ ನೋಡಿಕೊಳ್ಳುವರು. ಸಂಪಾದನೆ ಕಡಿಮೆ. ಖರ್ಚು ಹೆಚ್ಚು. ಆದರೂ ಮಗ ಕೇಳಿದ್ದನ್ನು ಕೊಡಿಸುತ್ತಿದ್ದರು. ಚೆನ್ನಾಗಿ ನೋಡಿಕೊಂಡರು.
"ನೋಡಿ, ನನಗೆ ಭವಿಷ್ಯಕ್ಕೆ ಎಂದು ನಮ್ಮ ತಂದೆ ಎರಡು ಮನೆ ಮಾಡಿ ಕೊಟ್ಟರು. ನಾನು ಆ ಎರಡೂ ಮನೆಗಳನ್ನೂ ಮಾರಿ ಇವನನ್ನು ಕಾಪಾಡುತ್ತಿದ್ದೇನೆ. ನನ್ನ ನಂತರ ಹೇಗೋ, ಏನೋ" ಎಂದು ಹೆಚ್ಚು ವಿಶ್ವಾಸವಿದ್ದ ನಾವು ಕೆಲವರಲ್ಲಿ ಪೇಚಾಡಿಕೊಳ್ಳುತ್ತಿದ್ದರು.
*****
ವಿಮಾನ ಕಂಪನಿಯವರು ಕೊಟ್ಟ ಕೂಪನ್ನುಗಳು ಈ ಕಾಣದ ಕಣ್ಣುಗಳಂತೆ. ಬೇಕಿದ್ದು ಕೊಳ್ಳುವಂತಿಲ್ಲ. ಅವರು ಕೊಡುವುದು ನಮಗೆ ಬೇಡ. ಸಾಧನವೇನೋ ಕೈಯ್ಯಲ್ಲಿದೆ. ಪ್ರಯೋಜನವಿಲ್ಲ. ಹಿಡಿದುಕೊಂಡು ಅಲೆಯುವುದು, ಬೇಡದ್ದು ಪಡೆಯುವುದು, ಇವೇ ಆಯಿತು.
ಮನುಷ್ಯರಿಗೆ ಸಂತಾನದ ಹುಚ್ಚು. ಕೆಲವರಿಗೆ ಸಂತಾನ ತಾನಾಗಿಯೇ ಆಗುತ್ತದೆ. ಮತ್ತೆ ಕೆಲವರಿಗೆ ಆಗುತ್ತಲೇ ಇರುತ್ತದೆ. ಇನ್ನು ಕೆಲವರಿಗೆ ಆಗುವುದು ಕಷ್ಟ. ಔಷದ-ಪಥ್ಯ ಮಾಡಿ, ದೇವರು-ದಿಂಡಿರಿಗೆ ಹರಕೆ ಹೊತ್ತು, ವ್ರತ-ಪೂಜೆ ಇತ್ಯಾದಿಗಳನ್ನು ಮಾಡಿ ಸಂತಾನ ಪಡೆಯುತ್ತಾರೆ. ತಾನಾಗಿಯೇ ಆದ ಅಥವಾ ಹೀಗೆ ಕಷ್ಟ ಪಟ್ಟು ಪಡೆದ ಮಕ್ಕಳು ಯೋಗ್ಯರಾಗಬಹುದು. ಅಯೋಗ್ಯರೂ ಆಗಬಹುದು. ಸಮಾಜಘಾತುಕರೂ ಆಗಬಹುದು. ಕೊನೆಗಾಲದಲ್ಲಿ ಜೀವಿತಕ್ಕೆ ಊರುಗೋಲಾಗಬಹುದು. ಸಮಾಜವು ನಮಗೆ ಹೊಡೆಯಲು ಕಾರಣವಾಗುವ ಬಾರುಕೋಲುಗಳೂ ಆಗಬಹುದು.
ಹಿತೋಪದೇಶ ಮೊದಲ ಭಾಗದಲ್ಲಿ ಒಂದು ಶ್ಲೋಕ ಮಕ್ಕಳನ್ನೂ ಮತ್ತು ಕುರುಡನ ಕಣ್ಣನ್ನೂ ಹೋಲಿಸಿ ಹೀಗೆ ಹೇಳುತ್ತದೆ:
ಕೋರ್ಥ: ಪುತ್ರೇಣ ಜಾತೇನ ಯೋ ನ ವಿದ್ವಾನ್ ನ ಧಾರ್ಮಿಕ:ಕಾಣೇನ ಚಕ್ಷುಷಾ ಕಿಂ ವಾ ಚಕ್ಷು:ಪೀಡೈವ ಕೇವಲಮ್
ವಿದ್ಯೆವಿಲ್ಲ. ವಿನಯವಿಲ್ಲ. ಒಳ್ಳೆಯ ನಡತೆಯಿಲ್ಲ. ಜೊತೆಯಲ್ಲಿ ಬಾಳುವವರಿಗೆ ಮೂರುಕಾಸಿನ ಉಪಯೋಗವಿಲ್ಲ. ಅಯೋಗ್ಯರಾದ ಮಕ್ಕಳು ಕುರುಡನ ಕಣ್ಣು ಇದ್ದಂತೆ. ತಂದೆ-ತಾಯಿಯರಿಗೆ ಮಕ್ಕಳಿಂದ ಆಗುವ ಯಾವುದೇ ಉಪಯೋಗವೂ ಇಲ್ಲ. (ಅವರು ನಮ್ಮನ್ನು ಉದ್ಧಾರ ಮಾಡುವುದು ಬೇಡ. ಕನಿಷ್ಠ ಸಮಾಜದಿಂದ ದೂರುಗಳನ್ನು ತರದಿದ್ದರೆ ಸಾಕು). ಆದರೆ ಮಕ್ಕಳಿಗೆ ಮಾಡಬೇಕಾದ ಕರ್ತವ್ಯಗಳು ಎಲ್ಲವನ್ನೂ ಮಾಡಬೇಕು. ಜೊತೆಗೆ ಕಾಣದ ಕಣ್ಣಿನ ನೋವಿನಂತಹ ಕಷ್ಟವನ್ನೂ ಅನುಭವಿಸಬೇಕು.
*****
ಯೋಗ್ಯರಾದ ಮಕ್ಕಳು ಸಿಗುವುದು ಒಂದು ದೊಡ್ಡ ಭಾಗ್ಯ. ಅದು ಎಂತಹ ಭಾಗ್ಯ ಅನ್ನುವುದು ಮಕ್ಕಳಿಂದ ಹಿಂಸೆ ಅನುಭವಿಸುವವರನ್ನು ನೋಡಿ ತಿಳಿಯಬಹುದು.
No comments:
Post a Comment