ಯಾವುದೋ ಕುಟುಂಬದ ಒಂದು ಹುಡುಗ. ಮತ್ಯಾವುದೋ ಕುಟುಂಬದ ಒಂದು ಹುಡುಗಿ. ತಂದೆ-ತಾಯಿಯರೋ, ಮತ್ಯಾರೋ ಹಿರಿಯರೋ ಗೊತ್ತು ಮಾಡಿ ನಡೆದ ವಿವಾಹ. ಹೀಗೆ ನಡೆಯುತ್ತಿದ್ದ ಸಮಾಜ. ಅಲ್ಲೊಂದು-ಇಲ್ಲೊಂದು ವಿಷಮ ವಿವಾಹಗಳು. ಹೆಚ್ಚಿನವು ಬಹಳ ಕಾಲ ನಿಂತ ದಾಂಪತ್ಯಗಳು. ಕಾಲ ಮುಂದುವರೆದಂತೆ ಹುಡುಗ-ಹುಡುಗಿ ತಾವೇ ತಮ್ಮ ಇಚ್ಛೆಯಿಂದ ಆದ ವಿವಾಹಗಳು. ಇವೂ ಬಹಳ ಕಾಲ ನಿಲ್ಲುತ್ತಿದ್ದುದೇ ಹೆಚ್ಚು.
ವಿವಾಹದ ಐವತ್ತು ವರ್ಷದ, ಅರವತ್ತು ವರ್ಷದ ವಾರ್ಷಿಕೋತ್ಸವಗಳು ಸಾಮಾನ್ಯವಾಗಿದ್ದವು. ಚಿಕ್ಕ ವಯಸ್ಸಿನಲ್ಲಿ ಮದುವೆಗಳು ನಡೆಯುತ್ತಿದ್ದುದರಿಂದ ಇವು ಸಾಧ್ಯವಾಗಿದ್ದವು. ಮೊಮ್ಮಕ್ಕಳ ಜೊತೆಗೆ ಮರಿಮಗ ಹುಟ್ಟಿದ ಸಮಯದಲ್ಲಿ "ಪ್ರಪೌತ್ರ ದರ್ಶನ ಶಾಂತಿ" ಎಂದು ಕನಕಾಭಿಷೇಕ ಸಹ ನಡೆಯುತ್ತಿತ್ತು. ನಂತರ ಇಪ್ಪತ್ತೈದು ವರ್ಷದ "ರಜತೋತ್ಸವ" ನಡೆಯುವುದೇ ದೊಡ್ಡದಾಯಿತು.
ದಶಕಗಳು ಕಳೆದಂತೆ ವಿಚ್ಛೇದನಗಳು ಹುಟ್ಟಿದವು. ವಿಚ್ಛೇದನಗಳು ಸುಲಭವಾಗುತ್ತಿದ್ದಂತೆ ಪುನರ್ವಿವಾಹಗಳು ಹುಟ್ಟಿಬಂದವು. ಅದರ ಮುಂದಿನ ಹಂತದಲ್ಲಿ ವಿವಾಹಗಳೇ ಇಲ್ಲದೆ ನಡೆಯುತ್ತಿರುವ "ಅನುಕೂಲ ಸಿಂಧು ದಾಂಪತ್ಯಗಳು" ಅನ್ನಬಹುದಾದ ಜೊತೆ-ಜೀವನ ನಡೆಸುವ ಕಾಲ ಬಂದು ನಿಂತಿದೆ. ದಿನಂಪ್ರತಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಇಂತಹ ಸಂಬಂಧಗಳು ಕೋರ್ಟಿನ ಮೆಟ್ಟಲುಗಳನ್ನು ಹತ್ತಿರುವ ಸುದ್ದಿಗಳು ಉಂಟು. ಯಾವುದೋ ಯುವಕ ಅಥವಾ ಮತ್ಯಾವುದೋ ಯುವತಿ ತುಂಡು-ತುಂಡಾಗಿ ಪೆಟ್ಟಿಗೆಗಳಲ್ಲಿ ಸಿಕ್ಕುತ್ತಿರುವುದೂ ಹೌದು. ಮೊದಮೊದಲು ಇಂತಹ ಪ್ರಕರಣಗಳು ಭೀತಿ ಹುಟ್ಟಿಸುತ್ತಿದ್ದವು. ಈಗ ಅಷ್ಟು ಭಯಾನಕ ಅನ್ನಿಸದು. ರೋಚಕ ಅನಿಸುವುದೂ ಇಲ್ಲವಾಗಿದೆ.
ಬಹಳಕಾಲ ಗಂಡ-ಹೆಂಡತಿ ಜೊತೆಯಲ್ಲಿ ಬದುಕಿ, ಇಬ್ಬರ ನಡುವೆ ಒಂದೇ ರೀತಿಯ, ಜೊತೆಯಲ್ಲಿ ಹೆಜ್ಜೆ ಹಾಕುವ ತಾಳ-ಮೇಳ ಏರ್ಪಡುತ್ತಿತ್ತು. ಬಾಯಿಬಿಟ್ಟು ಮಾತುಗಳಲ್ಲಿ ಹೇಳದೆ ಇದ್ದರೂ ಇಬ್ಬರ ನಡುವೆ ಒಂದು ರೀತಿಯ ಸದಾಕಾಲ ನಡೆಯುವ ಸಂವಾದ ಇರುತ್ತಿತ್ತು. "ಇಂಗಿತ" ಅನ್ನುವ ಪದಕ್ಕೆ ಬಹಳ ಬೆಲೆ ಇತ್ತು. "ಮನದ ಇಂಗಿತ ಅರಿಯಬೇಕು" ಅನ್ನುತ್ತಿದ್ದರು. ಇಲ್ಲಿ ಶಬ್ದಪೂರ್ವಕ ಹುಟ್ಟಿದ ಮಾತಿನ ಸಂಭಾಷಣೆ ಇಲ್ಲ. ಮನಸ್ಸು ಮನಸ್ಸನ್ನು ಅರಿವ, ಮೌನದ, ಏನೋ ಒಂದು ಸನ್ನೆಯ, ಅಥವಾ ಏನೂ ಇಲ್ಲದ ಕೇವಲ ಒಂದು ನೋಟದ ಮೂಲಕ ವಿಚಾರ ವಿನಿಮಯ. ಹೀಗೆ ಹುಟ್ಟಿದ "ಇಂಗಿತಜ್ಞತೆ" ಅಂದರೆ ಅದಕ್ಕೆ ಬಹಳ ಬೆಲೆ.
*****
ಲೇಖನಿಯಿಂದ ಕಾಗದದ ಮೇಲೆ ಬರೆದ "ಕ್ರಯ ಪತ್ರ" ಅನ್ನುವ ದಾಖಲೆಗಿಂತ ಕೊಟ್ಟ ಮಾತು ಹೆಚ್ಚಿನದು ಎಂದು ಜನ ನಂಬಿದ ಕಾಲ. ಆ ಹಳ್ಳಿಯಲ್ಲಿ ಸುಡು ಬಿಸಿಲಿನ ಬೇಗೆ. ತಡೆಯಲಾಗದ ಧಗೆ. ವಾಸವಿರುವ ಜನ ಬೇರೆ ವಿಧಿ ಇಲ್ಲದೆ ಬಾಳುತ್ತಿದ್ದಾರೆ. ತಾಪ ತಡೆಯಲು ಸಾಧ್ಯವಿಲ್ಲದಿದ್ದರೂ ಜೀವನ ನಡೆಯುತ್ತಿದೆ.
"ತಾಲ್ಲೂಕಿನ ಧಣಿ" ಎಂದು ಕರೆಸಿಕೊಳ್ಳುವ ಅಮಲ್ದಾರರು ನಾಳೆ ಆ ಹಳ್ಳಿಯ ದಾರಿಯಲ್ಲಿಯೇ ಹಾದು ಮುಂದಿನ ಊರಿಗೆ ಹೋಗಬೇಕು. ಈ ಸಂಗತಿ ಊರಿನ ಹಿರಿಯರಲ್ಲಿ ಒಬ್ಬನಾದ ನರಹರಿಗೆ ತಿಳಿಯಿತು. ಬರುವ ಅಧಿಕಾರಿಗೆ ಯೋಗ್ಯ ಸ್ವಾಗತ-ಆತಿಥ್ಯ ಕೊಡಲು ಮುಂದಾಳಾಗಲು ಊರಿನ ದೊಡ್ಡ ಕುಳವಾದ ತನ್ನ ಸ್ನೇಹಿತ ಶಿವನಂಜೇಗೌಡ ಸರಿಯಾದವನು ಎಂದು ನರಹರಿ ಅಭಿಪ್ರಾಯ. ಇವರಿಬ್ಬರ ನೇತೃತ್ವದಲ್ಲಿ ಹಳ್ಳಿಯ ಜನ ಮಾರನೆಯ ದಿನ ಅವರ ಬರವನ್ನು ಕಾಯುತ್ತಾರೆ.
ಮಧ್ಯಾನ್ಹದ ಉರಿಬಿಸಿಲಿನಲ್ಲಿ ಅಮಲ್ದಾರ್ ಕುದುರೆಯ ಮೇಲೆ ಕುಳಿತು ಬಂದರು. ಸ್ವಾಗತವಾಯಿತು. "ಇದೆಂತಹ ಊರು? ಈ ಬಿಸಿಲಿನಲ್ಲಿ ಹೇಗೆ ಬದುಕಿದ್ದೀರಿ?" ಎಂದು ಬಸವಳಿದ ಅಮಲ್ದಾರ್ ಬೇಸರ ವ್ಯಕ್ತಪಡಿಸುತ್ತಾರೆ. "ಏನು ಮಾಡುವುದು ಸ್ವಾಮಿ. ಹಿರಿಯರು ಮಾಡಿದ ಊರು. ಹೇಗೋ ಬಾಳುತ್ತಿದ್ದೇವೆ. ಹಾಲು-ಸಕ್ಕರೆ ಇಡಿಸಿದ್ದೇನೆ. ತೆಗೆದುಕೊಂಡು ಹೊಟ್ಟೆ ತಂಪು ಮಾಡಿಕೊಳ್ಳಿ" ಅನ್ನುತ್ತಾನೆ ಶಿವನಂಜೇಗೌಡ.
"ಹಾಲು-ಸಕ್ಕರೆ ಬೇಡ. ಎರಡು ಎಳನೀರು ತರಿಸಿ" ಅನ್ನುತ್ತಾರೆ ಅಮಲ್ದಾರ್. "ಸುತ್ತ-ಮುತ್ತ ಎಲ್ಲ ಹುಡುಕಿಸಿದೆವು. ಎಲ್ಲೂ ತೆಂಗಿನ ಮರಗಳಿಲ್ಲ. ಮಜ್ಜಿಗೆ ತರಿಸಲೇ?" ಎಂದು ಕೇಳುತ್ತಾನೆ ನರಹರಿಯಪ್ಪ.
"ಎಳನೀರು ಇಲ್ಲದ ಮೇಲೆ ಇನ್ನೇನು. ತೆಂಗಿನ ಮರ ಇಲ್ಲದ ಊರೂ ಒಂದು ಊರೇ? ಅದು ಊರಲ್ಲ. ಒಂದು ಸ್ಮಶಾನವೇ ಸರಿ. ಹೋಗಲಿ ಬಿಡಿ. ಮಜ್ಜಿಗೆಯೊ, ಕಲಗಚ್ಚೋ, ಯಾವುದೋ ಒಂದು ತರಿಸಿ" ಅನ್ನುತ್ತಾರೆ, ಕೋಪದಿಂದ ಅಮಲ್ದಾರ್.
*****
ಜಮಾಬಂದಿಯ ಕೆಲಸ ಮುಗಿದು ಅಮಲ್ದಾರರು ತಮ್ಮ ಹಾದಿ ಹಿಡಿದು ಹೊರಟುಹೋದರು. ಶಿವನಂಜೇಗೌಡನಿಗೆ ತೆಂಗಿನ ಮರ ಇಲ್ಲದ ಕಾರಣ ಅಮಲ್ದಾರರು ತನ್ನ ಊರು ಒಂದು ಸುಡುಗಾಡು ಎಂದುಬಿಟ್ಟರಲ್ಲ ಅನ್ನುವ ನೋವು. ಪೆಚ್ಚಾಗಿ ಹಿಂದಿರುಗುತ್ತಿದ್ದಾಗ ನರಹರಿ ಅವನ ಚಿಂತೆಗೆ ಕಾರಣ ವಿಚಾರಿಸುತ್ತಾನೆ. "ಹೋಗಲಿ ಬಿಡು, ಶಿವನಂಜು. ಅವರು ಹಾಗೆ ಅಂದಮಾತ್ರಕ್ಕೇ ನಮ್ಮ ಊರು ಸುಡುಗಾಡಾಯಿತೇ?" ಅನ್ನುತ್ತಾನೆ ನರಹರಿ.
ಶಿವನಂಜೇಗೌಡನಿಗೆ ತನ್ನ ಊರಿನಲ್ಲಿ ಒಂದು ತೆಂಗಿನ ತೋಟ ಮಾಡಲೇಬೇಕೆಂಬ ಹಠ ಬಂದಿದೆ. "ಇಲ್ಲ, ನರಹರಿಯಪ್ಪ. ಒಂದು ತೆಂಗಿನ ತೋಟ ಮಾಡಲೇ ಬೇಕು. ಇಲ್ಲದಿದ್ದರೆ ನಾನು ನನ್ನ ಅಪ್ಪನ ಮಗನೇ ಅಲ್ಲ. ಊರಿನ ಮರ್ಯಾದೆ ಪ್ರಶ್ನೆ" ಎಂದು ಬಿಗಿಹಿಡಿದು ಕೂಡುತ್ತಾನೆ. "ಅದು ಸುಲಭದ ಮಾತಲ್ಲ. ತೋಟ ಮಾಡಲು ನೆಲ ಸರಿಯಿದೆಯೇ ಎಂದು ತಿಳಿಯಬೇಕು. ತೋಟ ನಿನಗೆ ಆಗಿ ಬರುತ್ತದೆಯೇ ಎಂದು ಕೇಳಿ ತಿಳಿದುಕೊಳ್ಳಬೇಕು" ಎಂದು ಹೇಳಿ ನರಹರಿ ಅವನ ಮನಸ್ಸು ಬದಲಿಸಲು ನೋಡುತ್ತಾನೆ.
"ಮಣ್ಣು ಸರಿ ಇಲ್ಲ ಅಂದರೆ ನೂರು ಮೈಲಿ ದೂರದಿಂದಲಾದರೂ ಬೇಕಾದ ಮಣ್ಣು ತರಿಸುತ್ತೇನೆ. ಜ್ಯೋತಿಷ್ಯಕ್ಕೆ ನೀನೇ ಇದ್ದೀಯಲ್ಲ. ನೋಡಿ ಹೇಳು" ಅನ್ನುತ್ತಾನೆ ಶಿವನಂಜು. "ಇಂತಹ ವಿಷಯಕ್ಕೆ ನನ್ನ ಪುಡಿ ಜ್ಯೋತಿಷ್ಯ ಸಾಲುವುದಿಲ್ಲ. ಇಂತಹದಕ್ಕೆ ಕುರಿತೇಟಿನಂತೆ ಹೇಳಲು ತಾವರೆಕೆರೆ ವೆಂಕಟರಮಣ ಜೋಯಿಸರೇ ಸರಿ" ಅನ್ನುತ್ತಾನೆ ನರಹರಿ, ಹೀಗಾದರೂ ವಿಷಯ ಮುಂದೆ ಹೋಗಲಿ ಅನ್ನುವ ಬಯಕೆಯಿಂದ.
ಶಿವನಂಜೇಗೌಡ ಸುಮ್ಮನೆ ಕೂಡುವವನಲ್ಲ. ತಾವರೆಕೆರೆ ಜೋಯೀಸರನ್ನೇ ಕರೆಸಿಬಿಡುತ್ತಾನೆ. ಅವರು ಎಲ್ಲಾ ಲೆಕ್ಕಹಾಕಿ ನೋಡುತ್ತಾರೆ. "ಶಿವನಂಜೇಗೌಡ, ನಿನಗೆ ತೋಟ ಮಾಡೋ ಯೋಗ ಏನೋ ಇದೆ. ಆದರೆ ಅದರಿಂದ ಸುಖ ಪಡೋ ಯೋಗ ಇಲ್ಲ" ಅಂದುಬಿಡುತ್ತಾರೆ. ಬೇರೆ ಉಪಾಯ ಕೇಳುತ್ತಾನೆ. "ಯಾರ ಹೆಸರಿಗೆ ಆಗಿ ಬರುತ್ತೋ ಅವರ ಹೆಸರಿನಲ್ಲಿ ಮಾಡಬಹುದು" ಅನ್ನುತ್ತಾರೆ ಜೋಯಿಸರು. ಶಿವನಂಜು ಇದಕ್ಕೂ ತಯಾರು. ಅಂತಹವರಿಗೆ ತನ್ನ ಭೂಮಿ ದಾನ ಕೊಡಲೂ ಸಿದ್ಧ. ಅವನ ಕುಟುಂಬದ ಹಿತ ದೃಷ್ಟಿಯಿಂದ ಈ ಹುಚ್ಚಾಟ ತಪ್ಪಿಸಲು ನರಹರಿ "ನಿನ್ನ ಹೆಂಡತಿ, ಮಕ್ಕಳನ್ನು ಕೇಳಿ ಮಾಡು" ಎನ್ನುತ್ತಾನೆ.
"ಆಯಿತು. ನನ್ನ ಮಕ್ಕಳು ಇನ್ನೂ ಚಿಕ್ಕವರು. ಇನ್ನು ನನ್ನ ಹೆಂಡತಿ. ಅವಳನ್ನು ಈಗಲೇ ಕರೆತರುತ್ತೇನೆ" ಎಂದು ಶಿವನಂಜೇಗೌಡ ಹೊರಡುತ್ತಾನೆ. "ನೀನು ಹೋಗಬೇಡ. ಅವಳನ್ನು ಹೆದರಿಸಿ-ಬೆದರಿಸಿ ಕರೆದುಕೊಂಡು ಬರುವುದು ನನಗೆ ಗೊತ್ತು. ನೀನು ಇಲ್ಲೇ ಕೂಡು. ನಾನು ಕರೆಸುತ್ತೇನೆ" ಅನ್ನುತ್ತಾನೆ ನರಹರಿ. ತನ್ನ ಹೆಂಡತಿ ಪಾರ್ವತಿಯನ್ನು ಕಳಿಸಿ ಶಿವನಂಜನ ಹೆಂಡತಿ ಪುಟ್ಟತಾಯಮ್ಮ ಬರುವಂತೆ ಕರೆ ಕಳಿಸುತ್ತಾನೆ.
*****
ಪುಟ್ಟತಾಯಿ ಬಂದಳು. ನರಹರಿ ಮತ್ತು ಪುಟ್ಟತಾಯಿ ಒಂದು ತಾಯಿ ಮಕ್ಕಳಲ್ಲದಿದ್ದರೂ ಅಣ್ಣ-ತಂಗಿ ರೀತಿಯ ಬಾಂಧವ್ಯ. ಉಪಾಯವಾಗಿ ಅವಳನ್ನು ಕರೆದು ನರಹರಿ "ನೋಡು, ಪುಟ್ಟತಾಯಿ, ನಿನ್ನ ಗಂಡ ನಿಮ್ಮ ಭೂಮಿ ಯಾರಿಗೋ ದಾನ ಕೊಟ್ಟು ನೀನು, ನಿನ್ನ ಮಕ್ಕಳ ತಲೆ ಮೇಲೆ ಕಲ್ಲು ಚಪ್ಪಡಿ ಎಳೆದುಬಿಡುತ್ತಾನೆ. ನೀನು ಒಪ್ಪಬೇಡ. ಇದನ್ನು ತಪ್ಪಿಸಿದರೆ ನಿನಗೂ ನಿನ್ನ ಮಕ್ಕಳಿಗೂ ಒಳ್ಳೆಯದು" ಎಂದು ತಿಳಿ ಹೇಳುತ್ತಾನೆ. "ಹೌದಾ ನರಹರಿಯಣ್ಣ? ನೋಡು ನೀನು ಹೀಗೆ ತಿಳಿ ಹೇಳಿದ್ದು ಬಹಳ ಒಳ್ಳೆಯದಾಯಿತು. ನನಗೆ, ನನ್ನ ಮಕ್ಕಳಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ" ಎಂದು ಖಚಿತವಾಗಿ ಹೇಳುತ್ತಾಳೆ. ಕಂಟಕ ತಪ್ಪಿತು ಎಂದು ನರಹರಿಗೆ ಬಲು ಸಂತೋಷ.
ಜೋಯಿಸರ ಮುಂದೆ ಬಂದು ನಿಂತಾಗ ನರಹರಿ ಮತ್ತೊಮ್ಮೆ "ಪುಟ್ಟತಾಯಿ, ಇದು ನಿನ್ನ ಮತ್ತು ನಿನ್ನ ಮಕ್ಕಳ ಭವಿಷ್ಯದ ಪ್ರಶ್ನೆ. ಏನೂ ಹೆದರಬೇಡ. ನಿನಗೆ ಏನು ಅನ್ನಿಸುತ್ತೋ ಅದನ್ನು ಧೈರ್ಯವಾಗಿ ಹೇಳು" ಎಂದು ಪುಸಲಾಯಿಸುತ್ತಾನೆ. ಧೈರ್ಯ ಕೊಡುತ್ತಾನೆ.
"ನೀವು ದೊಡ್ಡವರು ಇದ್ದೀರಿ. ಇದು ನನ್ನ, ನನ್ನ ಮಕ್ಕಳ ಮುಂದಿನ ಜೀವನದ ಪ್ರಶ್ನೆ. ಇವರು ನನಗೂ, ನನ್ನ ಮಕ್ಕಳಿಗೂ ಯಜಮಾನರು. ಅವರು ಮಾಡಬೇಕೆನ್ನುವ ಕೆಲಸಕ್ಕೆ ನಾನು ಅಡ್ಡ ಬರಲೇ? ಅವರು ಏನು ಮಾಡಿದರೂ ಅದು ನಮ್ಮ ಒಳ್ಳೆಯದಕ್ಕೇ. ಅವರು ಹೇಳಿದಂತೆ ಮಾಡಿ" ಅಂದುಬಿಡುತ್ತಾಳೆ. ಅಷ್ಟೇ ಅಲ್ಲ. ಭೂಮಿಯನ್ನು ನರಹರಿಗೇ ದಾನ ಕೊಡಿಸಿ ತೋಟ ಮಾಡಲು ಕಾರಣಳಾಗುತ್ತಾಳೆ.
*****
ಇದು ಅರವತ್ತು ವರುಷಗಳ ಹಿಂದೆ ತೆರೆ ಕಂಡ ಕನ್ನಡ ಚಲನಚಿತ್ರ "ಚಂದವಳ್ಳಿಯ ತೋಟ" ಪ್ರಾರಂಭವಾಗುವ ದೃಶ್ಯಗಳು. ಆರು ದಶಕಗಳು ಕಳೆದಿವೆ. ಈಗ ಸಮಾಜವೂ ಬದಲಾಗಿದೆ. ಗಂಡನನ್ನು "ಯಜಮಾನ" ಎಂದು ಒಪ್ಪಿಕೊಳ್ಳುವ ಹೆಣ್ಣುಮಕ್ಕಳು ಕಾಣಸಿಗರು. ಹೆಂಡತಿಯನ್ನು "ನಮ್ಮ ಯಜಮಾನಿ" ಅನ್ನುವ ಗಂಡಂದಿರೂ ಇಲ್ಲ. ಇದು ಸಮಾನತೆಯ ಯುಗ. ಅದರಲ್ಲಿ ತಪ್ಪೇನೂ ಇಲ್ಲ.
ಎಷ್ಟೇ ಬದಲಾವಣೆಗಳು ಆಗಿದ್ದರೂ ಸಾಮರಸ್ಯ ಇರುವ ಕುಟುಂಬಗಳಲ್ಲಿ ಈ ರೀತಿಯ ಬಾಂಧವ್ಯ ಈಗಲೂ ಕಂಡುಬರುತ್ತದೆ. ಹೊರಗಡೆಯ ಜನರಿಗೆ ಅನೇಕ ವೇಳೆ ಈ ದಂಪತಿಗಳು ಜಗಳ ಕಾಯುತ್ತಲೇ ಇರುತ್ತಾರೆ ಅನ್ನಿಸಿದರೂ, ಒಳಗೊಳಗೇ ಪರಸ್ಪರ ಸರಿಯಾದ ತಿಳುವಳಿಕೆ ಇರುತ್ತದೆ. ಒಬ್ಬರು ಮಾಡಿದ ನಿರ್ಣಯಗಳನ್ನು ಇನ್ನೊಬ್ಬರು ಅನುಮೋದಿಸುತ್ತಾರೆ. "ಹಾಗೆ ಹೇಳಿದ್ದಾರೆ ಅಂದರೆ ಅದಕ್ಕೆ ಏನೋ ಕಾರಣ ಇರುತ್ತದೆ. ಅದು ಸರಿಯೇ ಇರುತ್ತದೆ" ಅನ್ನುವ ನಂಬಿಕೆಯಲ್ಲಿ ಜೀವನ ನಡೆಯುತ್ತದೆ. ಇಷ್ಟರ ಮೇಲೆ ಏನೋ ತಪ್ಪಾಯಿತು ಅನ್ನಿ. "ಏನು ಮಾಡುವುದು? ನಾನೇ ಹಾಗೆ ಮಾಡಬಹುದಿತ್ತು. ಹೋಗಲಿ. ಅಲ್ಲಿಗೇ ಬಿಡೋಣ" ಅನ್ನುವ ತಾಳ್ಮೆಯಿಂದ ಪರಿಹರಿಸಿಕೊಳ್ಳುತ್ತಾರೆ. ಅತಿರೇಕಕ್ಕೆ ಹೋಗುವುದಿಲ್ಲ.
ದಾಂಪತ್ಯದ ಸಂದರ್ಭದಲ್ಲಿ "ಅನುರೂಪ ದಾಂಪತ್ಯ" ಅನ್ನುವ ಶಬ್ದಗಳನ್ನು ಕೇಳುತ್ತಿರುತ್ತೇವೆ. ಇದು ಹೊರಗಡೆಯ ಜನ ನೋಡುವುದಕ್ಕೆ ಅನ್ವಯಿಸುವಂತಹುದು. ಜೋಡಿ ಚೆನ್ನಾಗಿದೆ. ಹೇಳಿ ಮಾಡಿಸಿದಹಾಗಿದೆ. ನೋಡಲು ಸೊಗಸು. ಹೀಗೆ ತಿಳಿಯಬಹುದು. ಇದರಲ್ಲಿ ಜೀವನಕ್ರಮದ ವಿಶೇಷವೇನೂ ಇಲ್ಲ. ಕೆಲವು ವರುಷಗಳ ನಂತರ, ರೂಪ-ಲಕ್ಷಣ ಮಾಸಿದ ನಂತರ ಅನುರೂಪ ಅಪರೂಪವೇ ಆಗಬಹುದು.
"ಅನುಕೂಲ ದಾಂಪತ್ಯ" ಹಾಗಲ್ಲ. ಒಂದು ವಸ್ತ್ರವನ್ನು ಕಂಡಾಗ ಅದು ನಮಗೆ ಒಂದಾಗಿ ಕಾಣುತ್ತದೆ. ಅದರಲ್ಲಿ ಹಾಸು-ಹೊಕ್ಕು ಆಗಿ ಅನೇಕ ದಾರಗಳಿವೆ. ಉದ್ದದ ದಾರಗಳು ಒಂದು ಕಡೆ. ಅಡ್ಡದ ದಾರಗಳು ಇನ್ನೊಂದು ಕಡೆ. ಆದರೆ ಅವುಗಳ ಹೊಂದಾಣಿಕೆ ಒಂದೇ ಆಗಿ ವಸ್ತ್ರವಾದಂತೆ ಈ ದಾಂಪತ್ಯ. ಏನೇ ಕಷ್ಟ-ಸುಖ ಬಂದರೂ ಇಂತಹ ದಾಂಪತ್ಯ ಸಮಯದ ಸವಾಲುಗಳು ದಾಟಿ ಗಟ್ಟಿಯಾಗಿ ನಿಲ್ಲುವುದು. ಇಂತಹ ಸಂಬಂಧದಲ್ಲಿ ತರ್ಕಕ್ಕೆ ಮೀರಿ ಪರಸ್ಪರ ಪ್ರೀತಿ-ವಿಶ್ವಾಸಗಳಿಗೆ ಬೆಲೆಯುಂಟು. ಸರಿ-ತಪ್ಪು ಅನ್ನುವುದಕ್ಕಿಂತ ನಂಬಿಕೆ-ಅವಲಂಬನೆ ಇಲ್ಲಿ ಮುಖ್ಯವಾಗುತ್ತದೆ.
*****
ನಲವತ್ತು-ನಲವತ್ತೈದು-ಐವತ್ತು ವರ್ಷಗಳು ಸಾಮರಸ್ಯದಿಂದ ಬಾಳಿ-ಬದುಕಿದ ಜೋಡಿಗಳನ್ನು ನಮ್ಮ ಸುತ್ತ-ಮುತ್ತ ಅಲ್ಲಲ್ಲಿ ಈಗಲೂ ಕಾಣುತ್ತಿರುತ್ತೇವೆ. ಅಂತಹವರನ್ನು ನೋಡಿದಾಗ ಒಂದು ರೀತಿಯ ಸಾತ್ವಿಕ ಸಂತೋಷ ತುಂಬಿ ಬರುತ್ತದೆ. ಹೀಗೆ ಇರುವ ಜೋಡಿಗಳಲ್ಲಿ ಒಬ್ಬರು ಕಾಲಧರ್ಮದ ಕಾರಣ ಇಲ್ಲವಾದಾಗ ಉಳಿದ ಒಂಟಿ ಜೀವಕ್ಕೆ ಎಲ್ಲಿಲ್ಲದ ಚಡಪಡಿಕೆ. ಉಳಿದ ಜೀವನಯಾತ್ರೆ ದುರ್ಭರ. ಆ ಜೋಡಿಯ ಹಿಂದಿನ ಸುಖೀ ಸಹಬಾಳ್ವೆ ಕಂಡ ಸಹೃದಯರಿಗೂ ಅದೊಂದು ವೇದನೆಯ ಸಂಗತಿಯೇ.
ಕೆಲವೇ ದಿನಗಲ್ಲಿ ಈ ರೀತಿಯ ಪ್ರಸಂಗಗಳು ಮತ್ತೆ ಮತ್ತೆ ಎದುರಾದಾಗ, ಈ ಎಲ್ಲ ಅಂಶಗಳೂ ಮನಸ್ಸಿನಲ್ಲಿ ಪುನರಾವರ್ತನೆ ಆಗುವುದು ಸಹಜ.
ಚೆಂದವಳ್ಳಿಯ ತೋಟ ದ ಉದಾಹರಣೆ ಕೊಟ್ಟು, ಸಾಮರಸ್ಯ ದಾಂಪತ್ಯ ದ ವಿಷಯ ನನ್ನು ಚೆನ್ನಾಗಿ ಬರೆದಿದ್ದೀರಿ.
ReplyDeleteಸೊಗಸಾದ ವಿವರಣೆ 👏👏
ReplyDeleteSo, nice. Going to the past, coming back and linking to the present, made an interesing reading.
ReplyDelete"Chandavalliya tota" what nostalgic memories !!!!
Thanks so much
MMB
ಸುಂದರವಾದ ಬರಹ.
ReplyDeleteSo many related issues to marriage life is intertwined in this article. Keshav, you have covered the old and the new way of leading a married life. My kudos to you. UR…….
ReplyDeleteYou have traced well the rise and fall of the Indian marriage institution. One additional point: instead of one partner overpowering the other, there now seems to be greater concern and consideration for each other. Education has significantly influenced marriages in this regard. The old sense of “superiority” between the two partners appears to be gradually diminishing.
ReplyDeleteKeshava Murthy sir has very nicely explained and compared the past and the present couples life style. It a fact that after the death of one of the life partner, the surviving partner finds it difficult to lead the life. He has also nicely narrated the storey of Shivalinge Gowda and Narahari.
ReplyDelete