
ಮನುಷ್ಯನ ಅನೇಕ ಮತ್ತು ತೀರದ ಆಸೆಗಳಲ್ಲಿ ಜೀವನ ಸಂಪದ್ಭರಿತವಾಗಿರಬೇಕೆಂಬುದೂ ಒಂದು. ಸಕಲ ಸೌಭಾಗ್ಯಗಳೂ ಇರಬೇಕು. ಸರ್ವ ಸಂಪತ್ತುಗಳೂ ಸುತ್ತ-ಮುತ್ತ ತುಂಬಿರಬೇಕು. ಕುಟುಂಬದ ಸದಸ್ಯರೆಲ್ಲರೂ ಹೇಳಿದಂತೆ ಕೇಳುತ್ತಾ ಓಡಾಡಿಕೊಂಡಿರಬೇಕು. ದೊಡ್ಡ ಅಧಿಕಾರ ಇರಬೇಕು. ಸಮಾಜದಲ್ಲಿ ಮನ್ನಣೆ, ಗೌರವಗಳು ಸಿಗುತ್ತಿರಬೇಕು. ಹೀಗೆ ನಾನಾ ಬಗೆಯ ಅಸಂಖ್ಯ ಆಸೆಗಳು.
ಅನೇಕ ಭಾಗ್ಯಗಳಲ್ಲಿ ಅಷ್ಟ ಐಶ್ವರ್ಯಗಳೂ ಸೇರಿದುವು. ಈ ಎಂಟರಲ್ಲಿ ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯಗಳು ಬೇಕಾದುವುಗಳ ಪಟ್ಟಿಯಲ್ಲಿ ಎಲ್ಲದರ ಮೇಲೆ ಕೂಡುತ್ತವೆ. ಆದರೆ ಆರೋಗ್ಯವಿದ್ದವರಿಗೆ ಕೆಲವೊಮ್ಮೆ ಆಯುಸ್ಸು ಇರುವುದಿಲ್ಲ. ಆಯುಸ್ಸು ಇದ್ದವರಿಗೆ ಬಹಳ ಅನಾರೋಗ್ಯ ಕಾಡುವುದು. ಆಯುಸ್ಸು ಮತ್ತು ಅರೋಗ್ಯ ಎರಡೂ ಇದ್ದವರಿಗೆ ಬಡತನದ ಬವಣೆ. ಅಥವಾ ಇನ್ನೇನಾದರೂ ಒಂದಿಲ್ಲ ಎನ್ನುವ ಕೊರಗು. ಕೆಲವರಿಗೆ ಮಕ್ಕಳಿಲ್ಲ ಎನ್ನುವ ಚಿಂತೆ. ಮತ್ತೆ ಕೆಲವರಿಗೆ ಹೆತ್ತ ಮಕ್ಕಳು ಹತ್ತಿರ ಇಲ್ಲ ಅನ್ನುವ ವ್ಯಥೆ. ಮಕ್ಕಳು ಹತ್ತಿರ ಇರುವವರಿಗೆ ಅವರು ಯೋಗ್ಯರಲ್ಲ ಎನ್ನುವ ಯೋಚನೆಗಳು. ಹೀಗೆ ಏನಾದರೂ ಒಂದು ಕೊರತೆ.
ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯಗಳು ಹಾಳಾಗಲು ಕಾರಣಗಳೇನು? ಈ ವಿಷಯವನ್ನು ಹಿಂದಿನ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಶ್ರೀ ಗೋಪಾಲದಾಸರ "ಎನ್ನ ಬಿನ್ನಪ ಕೇಳು, ಧನ್ವಂತ್ರಿ ದಯ ಮಾಡು" ಎನ್ನುವ ದೇವರನಾಮದಲ್ಲಿ ಸೂಚಿತವಾದ ಈ ಕಾರಣಗಳ ಚರ್ಚೆ ನೋಡಿದ್ದೆವು. ಈ ಹಾಡಿನಲ್ಲಿ "ಕೆಸರಿನಿಂದ ಕೆಸರು ತೊಳೆದಂತೆ ಕರ್ಮದ ಪಥವು, ಅಸುನಾಥ ಹರಿಯೇ ಪೊರೆಯೊ" ಎನ್ನುವ ಅಭಿವ್ಯಕ್ತಿಯ ವಿಶೇಷ ವಿಷಯಗಳನ್ನು ಮುಂದೊಮ್ಮೆ ನೋಡೋಣ ಎಂದಿದ್ದೆವು. ಅದನ್ನು ಈಗ ಸ್ವಲ್ಪ ನೋಡೋಣ.
*****
"ಕೆಸರಿನಿಂದ ಕೆಸರು ತೊಳೆದಂತೆ ಕರ್ಮದ ಪಥವು" ಅನ್ನುವುದರ ಅರ್ಥವೇನು? ಅದರ ಮೂಲ ಎಲ್ಲಿದೆ? ಯಾರಾದರೂ ಕೆಸರಿನಿಂದ ಕೊಳಕಾಗಿರುವ ವಸ್ತುವನ್ನು ಕೆಸರು ನೀರಿನಿಂದ ತೊಳೆಯುವ ತಪ್ಪು ಮಾಡುತ್ತಾರೆಯೇ? ಇವು ನಿಜವಾಗಿ ಕೇಳಲೇಬೇಕಾದ ಪ್ರಶ್ನೆಗಳು.
ಯಾವುದೋ ಒಂದು ಕಾರಣಕ್ಕೆ ಬಟ್ಟೆ ಕೊಳಕಾಯಿತು ಅನ್ನೋಣ. ಬಿಳಿ ಬಟ್ಟೆ ಉಟ್ಟು ಹೊರಗಿನ ಕೆಲಸಕ್ಕೆ ಬಂದದ್ದಾಯಿತು. ಮಳೆ ಬಂತು. ಬಟ್ಟೆ ಕೊಳಕಾಯಿತು. ಯಾರೋ ಒಬ್ಬ ಸ್ಕೂಟರ್ ಸವಾರ ಮಳೆಯ ರಸ್ತೆಯಲ್ಲಿಯೇ ವೇಗವಾಗಿ ಹೋದ. ಅವನಿಗೆ ಅದೊಂದು ಆಟ. ನೀರು ಎರಚಿತು. ಬಟ್ಟೆ ಕೆಸರಿನಿಂದ ನೆನೆಯಿತು. ಈಗ ಮಾಡುವುದು? ಮನೆಗೆ ಹೋದಮೇಲೆ ಮೈ ಶುಚಿ ಮಾಡಿಕೊಂಡು, ಕೊಳೆಯ ಬಟ್ಟೆಯನ್ನು ತಿಳಿ ನೀರಿನಿಂದ ಒಗೆದು ಸ್ವಚ್ಛ ಮಾಡಬೇಕು. ಕೆಲವು ವೇಳೆ ಎಷ್ಟೇ ಸ್ವಚ್ಛ ಮಾಡಿದರೂ ಮೊದಲಿನಂತೆ ಬಟ್ಟೆ ಬಿಳಿ ಆಗುವುದಿಲ್ಲ. ಮೂರು-ನಾಲ್ಕು ಒಗೆತ ಆದಮೇಲೆ ಸರಿ ಹೋಗಬಹುದು. ಇಂತಹ ಸ್ಥಿತಿಯಲ್ಲಿ ಆ ಕೊಳೆಯ ಬಟ್ಟೆಯನ್ನು ಅದೇ ರಸ್ತೆಯ ಪಕ್ಕ ನಿಂತಿರುವ ಕೆಸರು ನೀರಿನಿಂದ ಒಗೆದರೆ ಹೇಗಾಗಬೇಡ? ಬಟ್ಟೆಗೆ ಮತ್ತಷ್ಟು ಕೆಸರು ಅಂಟಿಕೊಂಡು ಇನ್ನಷ್ಟು ರಾಡಿಯಾದೀತೇ ವಿನಃ ಸ್ವಚ್ಛವಂತೂ ಆಗುವುದಿಲ್ಲ.
ಒಂದು ಗಾಜಿನ ಪಾತ್ರೆಯಲ್ಲಿ ಎಲ್ಲರಿಗೂ ಸುರೆ (ವೈನ್ ಅನ್ನೋಣ) ಹಂಚಿದ್ದಾರೆ. ಆ ಕಾರಣ ಅದಕ್ಕೆ ಸ್ವಲ್ಪ ಸುರೆ ಅಂಟಿಕೊಂಡಿದೆ. ಈಗ ಅದನ್ನು ಸ್ವಚ್ಛ ಮಾಡಬೇಕು. ಅದನ್ನು ಇನ್ನಷ್ಟು ಸುರೆ ಸುರಿದು ತೊಳೆದರೆ? ಅದು ಹೇಗೆ ಸ್ವಚ್ಛವಾದೀತು? ತಿಳಿಯಾದ ನೀರಿನಿಂದ ಮಾತ್ರ ಅದು ಶುದ್ಧವಾಗಬಲ್ಲದು. ಇಲ್ಲದಿದ್ದರೆ ಅದು ಇನ್ನಷ್ಟು ಸುರೆಯಲ್ಲಿ ಮುಳುಗೀತೇ ವಿನಃ ಶುದ್ಧವಾಗುವುದು ಸಾಧ್ಯವೇ ಇಲ್ಲ.
ಇದು ಜೀವನದ ಒಂದು ಕಟು ಸತ್ಯ.
*****
ಮಹಾಭಾರತದ ಪ್ರಸಂಗ. ಧರ್ಮಕ್ಷೇತ್ರ ಕುರುಕ್ಷೇತ್ರದ ಹದಿನೆಂಟು ದಿನಗಳ ಘನ ಘೋರ ಯುದ್ಧ ಮುಗಿದಿದೆ. ಹದಿನೆಂಟು ಅಕ್ಷೋಹಿಣಿ ಸೈನ್ಯ ನಾಶವಾಗಿದೆ. ಎಲ್ಲರ ಮನೆಯಲ್ಲೂ ಯಾರೋ ಒಬ್ಬರಾದರೂ ಯುದ್ಧದಲ್ಲಿ ಸತ್ತಿದ್ದಾರೆ. ಕೆಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಯುದ್ಧದ ನಂತರ ಇಲ್ಲವಾಗಿದ್ದಾರೆ. ಎಲ್ಲೆಲ್ಲೂ ಸೂತಕದ ಛಾಯೆ. ದ್ರೋಣ, ಕರ್ಣ, ಅಭಿಮನ್ಯು, ನೂರು ಮಂದಿ ಕೌರವರು, ಶಲ್ಯ, ಶಕುನಿ, ಮತ್ತನೇಕ ವೀರರು ಸ್ವರ್ಗಸ್ಥರಾದರು.
ಮುಂದಿನ ಜೀವನ ನಡೆಯಬೇಕಲ್ಲ. ಯುಧಿಷ್ಠಿರನಿಗೆ ಪಟ್ಟಾಭಿಷೇಕವಾಯಿತು. ಅಷ್ಟು ದುಃಖದಲ್ಲಿ ಒಂದಷ್ಟು ಸುಖ. ಜೀವನವೇ ಹೀಗೆ. ಸುಖ-ದುಃಖಗಳು ಜೊತೆ ಜೊತೆ. ಅದಕ್ಕೇ ಯುಗಾದಿಯಂದು ಬೇವು-ಬೆಲ್ಲ ತಿನ್ನುವುದು. ಪಟ್ಟಾಭಿಷೇಕದ ಸಂಭ್ರಮದಲ್ಲೂ ಧರ್ಮರಾಯನಿಗೆ ಸಂತೋಷವಿಲ್ಲ. ಇಷ್ಟೊಂದು ಮಂದಿ ಬಂಧು-ಬಾಂಧವರನ್ನು, ಅದೆಷ್ಟೋ ಅಣ್ಣ-ತಮ್ಮಂದಿರ ಜಗಳಕ್ಕೆ ಸಂಬಂಧಿಸದ ಅಮಾಯಕರನ್ನು ಸೇರಿಸಿ, ಕೊಂದು ಸಂಪಾದಿಸಿದ ಸಾಮ್ರಾಜ್ಯ. ಇಲ್ಲಿ ತಲೆಯ ಮೇಲೆ ಕಿರೀಟ ಬಂದು ಕೂತಿದೆ. ಅಲ್ಲಿ ತಾತ ಭೀಷ್ಮರು ಚೂಪು ಬಾಣಗಳ ಮಂಚದ ಮೇಲೆ ಮಲಗಿದ್ದಾರೆ. ಯಾವ ಸುಖಕ್ಕೆ ಈ ರಾಜ್ಯ-ಕೋಶಗಳು? ಅವನಿಗೆ ತಡೆಯಲಾಗದ ದುಗುಡ-ದುಮ್ಮಾನ. ಪಾರ್ಥನಿಗೆ ಯುದ್ಧಕ್ಕೆ ಮೊದಲು ಕ್ಲೈಬ್ಯ ಬಂದಿತು. ಧರ್ಮರಾಯನಿಗೆ ಯುದ್ಧದ ನಂತರ ಬಂದಿದೆ.
ಶ್ರೀ ಕೃಷ್ಣನ ಮುಂದೆ ದುಃಖ ತೋಡಿಕೊಳ್ಳುತ್ತಾನೆ. ಶ್ರೀಕೃಷ್ಣ ಅವನನ್ನು ಸಮಾಧಾನ ಪಡಿಸುತ್ತಾನೆ. ಒಂದು ಚಿಕ್ಕ ಗೀತೋಪದೇಶ ಅವನಿಗೂ ಆಗುತ್ತದೆ. ಆದರೆ ಯುಧಿಷ್ಠಿರನಿಗೆ ಸಮಾಧಾನವಿಲ್ಲ. ಶ್ರೀಕೃಷ್ಣನು ಅವನಿಗೆ ಅಶ್ವಮೇಧ ಯಾಗ ಮಾಡಲು ಸೂಚಿಸುತ್ತಾನೆ. ಅದರಿಂದ ಅವನು ಯುದ್ಧದಿಂದ ಬಂದಿದೆ ಅಂದುಕೊಂಡ ಪಾಪಗಳು ತೊಳೆದುಹೋಗುತ್ತವೆ. ಹೀಗೆಂದು ಯಾಗ ಮಾಡಲು ಸೂಚನೆ.
ಇದಕ್ಕೆ ಉತ್ತರವಾಗಿ ಧರ್ಮರಾಯನು ಹೇಳಿದ್ದನ್ನು ಶ್ರೀಮದ್ ಭಾಗವತದ (1.8.52) ಶ್ಲೋಕ ಹೀಗೆ ಹೇಳುತ್ತದೆ:
"ಹೇಗೆ ಕೆಸರನ್ನು ಕೆಸರಿನಿಂದ ತೊಳೆಯಲಾಗದೋ, ಮತ್ತು ಹೇಗೆ ಮದ್ಯಪಾತ್ರೆಯನ್ನು ಮದ್ಯದಿಂದ ಶುದ್ಧಿಮಾಡಲಾಗದೋ, ಹಾಗೆಯೇ ಮನುಷ್ಯರನ್ನು ಕೊಂದ ಪಾಪಗಳನ್ನು ಪ್ರಾಣಿಗಳನ್ನು ಬಲಿ ಕೊಟ್ಟು ಕಳೆದುಕೊಳ್ಳಲಾಗದು"
ಧರ್ಮರಾಯನ ಈ ದುಃಖ ಶಮನವಾಗುವ ಮುನ್ನ ರಣರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮರನ್ನು ನೋಡಲು ಎಲ್ಲರೂ ಹೋಗುತ್ತಾರೆ. ಅಲ್ಲಿ ಭೀಷ್ಮರು ಧರ್ಮರಾಯನಿಗೆ ಅನೇಕ ವಿಷಯಗಳ ಬಗ್ಗೆ ವಿವಿಧ ರೀತಿಯಲ್ಲಿ ತಿಳಿಸಿಕೊಡುತ್ತಾರೆ. ನಂತರ ಅವನು ಅಶ್ವಮೇಧ ಯಾಗ ಮಾಡುತ್ತಾನೆ. ಈ ವಿವರಗಳೆಲ್ಲ ಮಹಾಭಾರತದಲ್ಲಿ ಅಶ್ವಮೇಧ ಪರ್ವದಲ್ಲಿ ಸಿಗುತ್ತವೆ.
*****
ಹರಿದಾಸರ ಪದ, ಸುಳಾದಿ, ಉಗಾಭೋಗಗಳಲ್ಲಿ ಬರುವ ಪದಪುಂಜಗಳಲ್ಲಿ ವೈದಿಕ ವಾಂಗ್ಮಯದ ತಿರುಳಿನ ಸೂಚನೆಗಳು ಇರುತ್ತವೆ. ನೋಡುವುದಕ್ಕೆ, ಕೇಳುವುದಕ್ಕೆ ಆಡುಭಾಷೆಯ ಮಾತಾಗಿದ್ದರೂ ಅವುಗಳ ಹಿಂದೆ ಗಾಢವಾದ ಚಿಂತನೆ ಇರುವುದು. ಈ "ಕೆಸರಿನಿಂದ ಕೆಸರು ತೊಳೆದಂತೆ" ಅನ್ನುವುದು ಹೀಗೆಯೇ ಶ್ರೀಮದ್ ಭಾಗವತದ ಮೇಲೆ ಹೇಳಿದ ಶ್ಲೋಕದ ಸಾರಾಂಶವನ್ನು ಹೇಳುವ ರೀತಿ. ವಿಶಾಲ ವಾಂಗ್ಮಯದ ಆಳವಾದ ಪರಿಚಯ ಆಗುತ್ತಿದ್ದಂತೆ ಅವೇ ಪದ, ಸುಳಾದಿಗಳ ವಿಶೇಷಾರ್ಥಗಳು ತೆರೆದುಕೊಳ್ಳುತ್ತವೆ.
ಪ್ರತಿ ಜೀವಿ ಹುಟ್ಟುವಾಗ ಅವನ (ದೇಹ ಗಂಡಾಗಿರಬಹುದು ಅಥವಾ ಹೆಣ್ಣಾಗಿರಬಹುದು) ಜೊತೆ ಪರಮಾತ್ಮನೂ ಮತ್ತು ಮುಖ್ಯ ಪ್ರಾಣನು ಜನಿಸುತ್ತಾರೆ. ಅವರಿಬ್ಬರೂ ಇರುವವರೆಗೆ ಜೀವನ ಈ ದೇಹದಲ್ಲಿಯ ಜೀವನಯಾತ್ರೆ. ಅವರು ದೇಹ ಬಿಟ್ಟು ಹೊರಟರೆ ವ್ಯಾಪಾರ ಮುಗಿಯಿತು. (ಸಾಮಾನ್ಯ ವ್ಯವಹಾರದಲ್ಲಿ ವ್ಯಾಪಾರ ಎಂದರೆ ಕೊಡು-ಕೊಳ್ಳುವಿಕೆಯ ರೀತಿ, ವ್ಯಾಪಾರಕ್ಕೆ ಇಲ್ಲಿ ಚಟುವಟಿಕೆ (ಆಕ್ಟಿವಿಟಿ) ಎಂದು ಅರ್ಥ). ಪ್ರಾಣವಾಯು (ಅಸು) ಆಡುವುದು ನಿಂತರೆ "ಅಸು ನೀಗಿದರು" ಎನ್ನುತ್ತಾರೆ. ಆದ್ದರಿಂದ ಆ ಪರಮಾತ್ಮನಿಗೆ "ಅಸುನಾಥ"ಎಂದು ಹೇಳುವುದು. ಉಸಿರು ಎನ್ನುವ ಆಸುವಿಗೆ ಅಥವಾ ಪ್ರಾಣನಿಗೆ ಒಡೆಯ ಆದುದರಿಂದ ಅಸುನಾಥ, ಪ್ರಾಣನಾಥ ಅಥವಾ ಪ್ರಾಣೇಶ.
*****
"ದುಷ್ಕರ್ಮ ಪರಿಹರಿಸೋ" ಅನ್ನುವುದನ್ನು ಮತ್ತು ಅಂಟಿಕೊಂಡ ಕೊಳೆಯನ್ನು ತೊಳೆಯಲು ಏನು ಮಾಡಬೇಕೆನ್ನುವುದನ್ನು ಮುಂದಿನ ಒಂದು ಸಂಚಿಕೆಯಲ್ಲಿ ನೋಡೋಣ.
No comments:
Post a Comment