Thursday, July 24, 2025

ಸತ್ಪುತ್ರ ಪ್ರಾಪ್ತಿ


ಚ್ಯವನ ಋಷಿಗಳ ಮಗಳಾದ ಸುಮನಾ ಮತ್ತು ಅವಳ ಗಂಡ ಸೋಮಶರ್ಮನ ವೃತ್ತಾಂತವನ್ನು ಹಿಂದಿನ ಒಂದು ಸಂಚಿಕೆಯಲ್ಲಿ ನೋಡಿದೆವು. ಸೋಮಶರ್ಮನು ಒಳ್ಳೆಯ ರೀತಿಯ ಜೀವನ ನಡೆಸುತ್ತಿದ್ದರೂ ಬಡತನ ಮತ್ತು ಮಕ್ಕಳಿಲ್ಲದರ ಕೊರಗಿನಿಂದ ಚಿಂತಿತನಾಗಿದ್ದನು. ಗಂಡನ ಅನ್ಯಮನಸ್ಕತೆಯನ್ನು (ಮನಸ್ಸು ಮಾಡುವ ಕೆಲಸಗಳ ಮೇಲೆ  ಇಲ್ಲದೇ ಮತ್ತೆಲ್ಲೋ ಇರುವುದನ್ನು ಅನ್ಯ ಮನಸ್ಕತೆ ಅನ್ನುತ್ತಾರೆ) ಗಮನಿಸಿದ ಸುಮನಾ ಆತನಿಗೆ ಹೆಚ್ಚಿನ ಯೋಚನೆ ಮಾಡದಂತೆ ಸಲಹೆ ಮಾಡುತ್ತಾಳೆ. "ಚಿಂತೆಯೇ ಎಲ್ಲ ಕಾರಣಗಳಿಗೂ ಮೂಲ. ಲೋಭದಿಂದ ಮನುಷ್ಯ ಹಾಳಾಗುತ್ತಾನೆ" ಎಂದು ಬುದ್ಧಿವಾದ ಹೇಳುತ್ತಾಳೆ. ಈ ಚಿಂತೆಯ ಕಾರಣ ಉಂಟಾಗುವ ಮುಂದಿನ ತೊಂದರೆಗಳ ವಿವರಣೆಯನ್ನು "ಚಿಂತೆ ಎನ್ನುವ ವಿಶಾಲವಾದ ವೃಕ್ಷ" ಎನ್ನುವ ಸಂಚಿಕೆಯಲ್ಲಿ ನೋಡಿದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಮಕ್ಕಳು ಹುಟ್ಟುವ ಕಾರಣಗಳು ಮತ್ತು ನಾಲ್ಕು ವಿಧದ ಮಕ್ಕಳ ರೀತಿಗಳನ್ನು ಕೂಡ ಸುಮನಾ ಗಂಡನಿಗೆ ತಿಳಿಸಿ ಹೇಳುತ್ತಾಳೆ. ಸತ್ಪುತ್ರರು ಐದನೆಯ ರೀತಿಯವರು ಮತ್ತು ಅವರು ಜನಿಸುವ ಸಂದರ್ಭಗಳನ್ನು ಸಹ ವಿವರಿಸುತ್ತಾಳೆ. ಇದನ್ನು "ಐದು ರೀತಿಯ ಮಕ್ಕಳು" ಎನ್ನುವ ಸಂಚಿಕೆಯಲ್ಲಿ ನೋಡಿದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ನಂತರದ ಸಂಚಿಕೆಗಳಲ್ಲಿ ಬೇರೆ ಬೇರೆ ವಿಷಯಗಳ ಕಡೆ ಗಮನ ಹರಿದುದರ ಕಾರಣದಿಂದಾಗಿ ಸುಮನಾ-ಸೋಮಶರ್ಮರನ್ನು ಅಲ್ಲಗೇ ಬಿಡಬೇಕಾದುದು ಅನಿವಾರ್ಯವಾಯಿತು. "ಇದೇನು, ಹೀಗೆ ಮಾಡಿದಿರಿ? ಸೋಮಶರ್ಮನ ಮುಂದಿನ ವೃತ್ತಾಂತವೇನು? ಅಲ್ಲಿಯೇ ಬಿಟ್ಟರೆ ಹೇಗೆ?" ಎಂದು ಮಿತ್ರರೊಬ್ಬರು ಆಕ್ಷೇಪಿಸಿದ್ದಾರೆ. 

ಚಿಂತೆಯ ಮರ ಕವಲುಗಳು ಹೊಂದಿರುವಂತೆ ಚಿಂತನೆಯ ಮರವೂ ಅನೇಕ ಕೊಂಬೆ-ರೆಂಬೆಗಳನ್ನು ಹೊಂದಿದೆಯಷ್ಟೆ! ಆದರೂ ಸುಮನಾ-ಸೋಮಶರ್ಮರ ಕಡೆಗೆ ಮತ್ತೆ ಹಿಂದಿರುಗೋಣ. 

*****

ಸೋಮಶರ್ನುನ ಹೆಂಡತಿ ಸುಮನಾ ಅನೇಕ ಧರ್ಮ ಸೂಕ್ಷ್ಮಗಳನ್ನು ಇಷ್ಟು ಸಹಜವಾಗಿ ಮತ್ತು ವಿವರವಾಗಿ ತಿಳಿಸಿ ಹೇಳುವುದನ್ನು ಕಂಡು ಸೋಮಶರ್ಮನಿಗೆ ಆಶ್ಚರ್ಯವಾಗುತ್ತದೆ. ಅವಳನ್ನು ಸಂದೇಹ ನಿವಾರಣೆಗಾಗಿ ಪ್ರಶಿಸುತ್ತಾನೆ. 

"ಅನೇಕ ಧರ್ಮ ಸೂಕ್ಷ್ಮಗಳನ್ನು ನೀನು ಬಹಳ ಸುಂದರವಾಗಿ ಮತ್ತು ಯಾವುದೇ ಸಂದೇಹವಿಲ್ಲದೆ ವಿವರಿಸಬಲ್ಲೆ. ಇದು ಹೇಗೆ ಸಾಧ್ಯವಾಯಿತು? ಇದಕ್ಕೆ ಕಾರಣ ವಿಶೇಷವೇನು?"
"ನಾನು ಚಿಕ್ಕವಳಿದ್ದಾಗ ನಮ್ಮ ತಂದೆಯವರನ್ನು ಕಾಣಲು ಅನೇಕ ತಪಸ್ವಿಗಳು ಬರುತ್ತಿದ್ದರು. ಅವರಲ್ಲಿ ಅನೇಕ ಸಂದೇಹಗಳ ಬಗ್ಗೆ ಸಮಾಧಾನ ಕೇಳುತ್ತಿದ್ದರು. ತಂದೆಯವರೂ ತಮ್ಮನ್ನು ಆಹ್ವಾನಿಸಿದ ಕಡೆಗಳಲ್ಲಿ ಹೋಗಿ ಅನೇಕರ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಕೆಲವು ವೇಳೆ ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ಕಾರಣದಿಂದ ನನಗೆ ಅವರು ತಿಳಿಸಿ ಹೇಳುತ್ತಿದ್ದ ಕೆಲವು ವಿಷಯಗಳು ಗೊತ್ತಾದುವು"

"ಈಗ ನಮಗೆ ಸಂತಾನವಿಲ್ಲದಿರುವುದಕ್ಕೆ ಏನು ಕಾರಣ?"
"ನಾಲ್ಕು ರೀತಿಯ ಪುತ್ರರು ಹುಟ್ಟಲು ಕಾರಣಗಳಿಲ್ಲ. ನಮ್ಮಿಂದ ಸಾಲ ವಸೂಲಾತಿಗಾಗಲೀ, ಹಿಂದಿನ ಸುಲಿಗೆಗೆ ಗುರಿಯಾಗಿ ಕೆಟ್ಟವರಾಗಲೀ ಇರಲಿಲ್ಲ. ನಮ್ಮ ಉಪಕಾರದಿಂದ ಹುಟ್ಟುವ ಅನುಕೂಲ ಪುತ್ರರೂ ಇಲ್ಲ. ಉದಾಸೀನ ಪುತ್ರರೂ ಹುಟ್ಟಲಿಲ್ಲ" 
"ಮತ್ತೆ ಮುಂದಿನ ದಾರಿ?"
"ಐದನೆಯ ತರಹದ ಸತ್ಪುತ್ರರು ಉಂಟಾಗಲು ಪ್ರಯತ್ನ ಪಡಬೇಕಷ್ಟೆ"
"ಅದರಲ್ಲಿ ಹೇಗೆ ಮುಂದುವರೆಯುವುದು?"
"ಬ್ರಹ್ಮರ್ಷಿ ವಸಿಷ್ಠರು ದಯಾಪರರು. ಅವರಲ್ಲಿ ಶರಣು ಹೋದರೆ ಕೃಪೆ ಮಾಡಿ ಯೋಗ್ಯವಾದ ದಾರಿ ತೋರಿಸುತ್ತಾರೆ"

ಸೋಮಶರ್ಮನು ಸುಮನಾಳ ಸಲಹೆಯನ್ನು ಅಂಗೀಕರಿಸಿದನು. ಬ್ರಹ್ಮರ್ಷಿ ವಸಿಷ್ಠರ ಬಳಿಗೆ ಹೋದನು. 

*****

ಸೋಮಶರ್ಮನು ಭಗವಾನ್ ವಸಿಷ್ಟರ ಆಶ್ರಮಕ್ಕೆ ಬಂದು ತಲುಪಿ ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಅರ್ಪಿಸಿದ. ಬ್ರಹ್ಮರ್ಷಿಗಳು ಅವನನ್ನು ಸೂಕ್ತವಾಗಿ ಉಪಚರಿಸಿ ಮಾತನಾಡಿಸಿದರು. 

"ಎಲ್ಲಾ ಕುಶಲವೇ?"
"ತಮ್ಮಂತಹ ಹಿರಿಯರ ಆಶೀರ್ವಾದದಿಂದ ಎಲ್ಲಾ ಕುಶಲ"
"ಈಗ ಬಂದ ಉದ್ದೇಶ್ಯವೇನು?"
"ಭಗವನ್, ನಾನು ದಾರಿದ್ರ್ಯದಿಂದ ಬಳಲುತ್ತಿದ್ದೇನೆ. ಪುತ್ರ ಸಂತಾನವಿಲ್ಲ. ನನಗೆ ಅನುಗ್ರಹಿಸಬೇಕು"
"ನೀನು ಹಿಂದಿನ ಜನ್ಮದಲ್ಲಿ ಕಡುಲೋಭಿಯಾಗಿದ್ದೆ. ಹೆಂಡತಿ, ಮಕ್ಕಳನ್ನೂ ಪ್ರೀತಿಸಲಿಲ್ಲ. ಹಣ ಕೂಡಿಸುವುದರಲ್ಲೇ ಜೀವನ ಕಳೆಯಿತು. ಗಳಿಸಿದ ಹಣವನ್ನು ಅವರಿಗೂ ಕೊಡದೇ, ಅದು ಎಲ್ಲಿದೆಯೆಂದು ಅವರಿಗೆ ಹೇಳದೇ ನಿನ್ನ ಸಾವು ಬಂದಿತು. ಆದ ಕಾರಣ ಈಗ ದರಿದ್ರನೂ, ಸಂತಾನವಿಲ್ಲದವನೂ ಆಗಿದ್ದೀಯೆ"
"ಹಾಗಿದ್ದರೂ ನನಗೆ ಈಗ ಒಳ್ಳೆಯ ಜನ್ಮ ಹೇಗೆ ಬಂದಿತು?"
"ಒಮ್ಮೆ ಒಬ್ಬ ಯಾತ್ರಿಕನು ತೀರ್ಥಯಾತ್ರೆ ಮಾಡುತ್ತಾ ನಿನ್ನ ಮನೆಗೆ ಬಂದನು. ನೀನು ಅವನನ್ನು ಗೋಶಾಲೆಯಲ್ಲಿ ಇರಗೊಟ್ಟೆ. ಮಾರನೆಯ ದಿನ "ಶಯನೀ ಏಕಾದಶಿ". ಅವನಿಂದ ಅದರ ಬಗ್ಗೆ ಕೇಳಿ ನೀನು ಆಗ ಏಕಾದಶಿ ವ್ರತ ಮಾಡಿದೆ. ಅದರಿಂದ ಈ ಒಳ್ಳೆಯ ಜನ್ಮ ಬಂದಿದೆ. ಆದರೆ, ಲೋಭಿಯಾಗಿದ್ದರಿಂದ ದರಿದ್ರನಾಗಿದ್ದೆಯೆ. ಹೆಂಡತಿ ಮಕ್ಕಳನ್ನು ಪ್ರೀತಿಸದುದರಿಂದ ಸಂತಾನವಿಲ್ಲ"
"ಈಗ ಇದರಿಂದ ಹೊರಬರಲು ನಾನು ಏನು ಮಾಡಬೇಕು?"
"ನಾರಾಯಣನನ್ನು ಶರಣು ಹೊಂದು. ಅವನನ್ನು ಭಜಿಸು. ನಿನಗೆ ಒಳ್ಳೆಯದಾಗುತ್ತದೆ"

ಸೋಮಶರ್ಮನು ಅವರಿಗೆ ವಂದಿಸಿ ಹಿಂದಿರುಗಿದ. ಸುಮನಾಳಿಗೆ ಎಲ್ಲ ಸಂಗತಿ ತಿಳಿಸಿದ. 

*****

ಸೋಮಶರ್ಮ-ಸುಮನಾ ನರ್ಮದಾ ನದಿಯ ಸಂಗಮ ಕ್ಷೇತ್ರದಲ್ಲಿ ಎಲ್ಲ ಅಡೆತಡೆಗಳನ್ನು ಎದುರಿಸಿ ಒಂದೇ ಮನಸ್ಸಿನಿಂದ ವಸಿಷ್ಠರು ಹೇಳಿದಂತೆ ನಡೆದರು.  ಸಿದ್ದೇಶ್ವರ ವಿಷ್ಣುಲಿಂಗದ ಬಳಿ ಒಂದು ನೂರು ವರುಷ ತಪಸ್ಸು ಮಾಡಿದರು. ಅವರ ಸಾಧನೆಗೆ ಅಡ್ಡಿಯಾಗಿ ಅನೇಕ ವಿಘ್ನಗಳು ಬಂದು ಒದಗಿದವು. ಆದರೆ ಅವರು ಅವು ಯಾವುದನ್ನೂ ಲೆಕ್ಕಿಸದೆ ಒಂದೇ ಗುರಿಯಿಂದ ಮುನ್ನಡೆದರು. ಲಕ್ಷ್ಮಿ ಜನಾರ್ದನರ ದರ್ಶನ ಆಯಿತು. 

"ಸೋಮಶರ್ಮ, ನಿನ್ನ ತಪಶ್ಚರ್ಯೆಗೆ ಮೆಚ್ಚಿದ್ದೇನೆ. ನಿನಗೆ ಏನು ಬೇಕು ಕೇಳು"
"ಜನ್ಮ ಜನ್ಮದಲ್ಲಿಯೂ ನಿನ್ನಲ್ಲಿ  ಭಕ್ತಿಯನ್ನು ಕೊಡು. ಅಷ್ಟು ಸಾಕು"
"ಆಗಲಿ. ನೀವು ಬಹುಕಾಲ ಸಕಲ ಸಂಪತ್ತುಗಳನ್ನೂ, ಪುತ್ರಸೌಖ್ಯವನ್ನೂ ಅನುಭವಿಸುವಿರಿ. ಕಡೆಗೆ ಸದ್ಗತಿಯನ್ನು ಹೊಂದುವಿರಿ"

ಕಾಲಕ್ರಮದಲ್ಲಿ ಸುಮನಾ-ಸೋಮಶರ್ಮ ದಂಪತಿಗಳಿಗೆ ಸುಂದರವಾದ ಮಗನೊಬ್ಬ ಜನಿಸಿದ. ಅವನಿಗೆ "ಸುವ್ರತ" ಎಂದು ಹೆಸರಾಯಿತು. 

ಹಿಂದೆ ಇಕ್ಸ್ವಾಕು ಕುಲದ ರುಕ್ಮಾ೦ಗದ ಮಹಾರಾಜನ ಮಗನಾಗಿದ್ದ ಧರ್ಮಾಂಗದನೇ ಸುವ್ರತನಾಗಿ ಹುಟ್ಟಿ ಮುಂದೆ ಇನ್ನೂ ಖ್ಯಾತಿ ಗಳಿಸಿದ. ಸುಮನಾ-ಸೋಮಶರ್ಮರಿಗೆ ದಿವ್ಯ ಲೋಕ ಪ್ರಾಪ್ತಿಯಾಯಿತು. 

*****

ಸುವ್ರತನು ತನ್ನ ಜೀವನದಲ್ಲಿ ಇನ್ನೂ ಅತಿಶಯವಾದ ಸಾಧನೆಗಳನ್ನು ಮಾಡಿ ಮುಂದಿನ ಕಲ್ಪದಲ್ಲಿ ಇಂದ್ರ ಪದವಿಯನ್ನು ಪಡೆದನಂತೆ. 

ಸತ್ಕರ್ಮಗಳು ಇಂದಿಗೂ ವಿಫಲವಾಗುವುದಿಲ್ಲ. ಪ್ರಾರಂಭದಲ್ಲಿ ಸಕಾಮ ಕರ್ಮಗಳಿಂದ ಒಳ್ಳೆಯ ಕೆಲಸಗಳನ್ನು ಮಾಡಿದರೂ, ಕಾಲ ಕ್ರಮದಲ್ಲಿ ಅವುಗಳಿಂದಲೇ ನಿಷ್ಕಾಮ ಕರ್ಮ ಮಾಡಲು ಪ್ರೇರಣೆ ದೊರಕುತ್ತದೆ. 

No comments:

Post a Comment