Thursday, July 3, 2025

ಗೀತೆ ಎಂಬ ಹಾಲು; ಭಾಗವತವೆಂಬ ಹಣ್ಣು


ಪ್ರತಿಯೊಂದು ವಿಷಯವನ್ನೂ ಸಂದರ್ಭಗಳ ಹಿನ್ನೆಲೆಯಲ್ಲಿ ಸರಿಯಾಗಿ ತಿಳಿಯುವ ಸಲುವಾಗಿ ಅದಕ್ಕೆ ಸಂಬಂಧಿಸಿದ ಗ್ರಂಥಗಳನ್ನೂ, ವಿಶಿಷ್ಟ ವಾಂಗ್ಮಯವನ್ನೂ ಕೂಲಂಕುಷವಾಗಿ ಅಭ್ಯಸಿಸಿ, ಅವುಗಳ ಹಿಂದು-ಮುಂದಿನ ವಿವರಗಳ ಬೆಳಕಿನಲ್ಲಿ ನಿಖರವಾಗಿ ಅರ್ಥ ಮಾಡಿಕೋಳ್ಳಬೇಕೆಂಬ ಪ್ರಮೇಯವನ್ನು ಮುಕುಂದರಾಯರ "ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ" ಎಂಬ ಸಂಚಿಕೆಯ ಅನುಭವದಿಂದ ತಿಳಿದೆವು. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮುಕುಂದರಾಯರ ಎಡವಟ್ಟಿನ ಪರಿಸ್ಥಿತಿಯನ್ನು ಕಂಡ ಹಿರಿಯರೊಬ್ಬರು "ನಾಳೆ ಪುರಾಣಕ್ಕೆ ಸ್ವಲ್ಪ ಬೇಗ ಬನ್ನಿ. ಹಾಲು ಎಂದರೆ ಭಗವದ್ಗೀತೆ. ಹಣ್ಣು ಎಂದರೆ ಶ್ರೀಮದ್ ಭಾಗವತ.  ಅದು ಹೇಗೆ ಎಂದು ನಿಮಗೆ ವಿವರಿಸುತ್ತೇನೆ" ಎಂದು ಹೇಳಿದ್ದರು. ಅದರ ವಿವರಗಳನ್ನು ಈಗ ನೋಡೋಣ. 

*****

ಮುಕುಂದರಾಯರು ದೇವಾಲಯವನ್ನು ಬೇಗ ತಲುಪಿ ಹಿರಿಯರ ಬರವಿಗೆ ಕಾತುರದಿಂದ ಕಾಯುತ್ತಿದ್ದರು. ಹೇಳಿದ ಮಾತಿಗೆ ಸರಿಯಾಗಿ ಆ ವೃದ್ಧರು ಬಂದರು. ಇನ್ನೂ ಪುರಾಣ ಕೇಳುವ ಜನಗಳ ಆಗಮನ ಆಗಿರಲಿಲ್ಲ. ಇಬ್ಬರೂ ಪರಸ್ಪರ ಮಾತಾಡಲು ಅನುಕೂಲವಾಗಿರುವ ಒಂದು ಜಾಗದಲ್ಲಿ ಕುಳಿತರು. ಮಾತುಕತೆ ಪ್ರಾರಂಭವಾಯಿತು. 

"ಏನು, ನಿರೀಕ್ಷಿದಂತೆ ಬೇಗ ಬಂದಿದ್ದೀರಿ"
"ನಿನ್ನೆ ಮನೆಗೆ ಹೋದಮೇಲೆ ರಾತ್ರಿಯೆಲ್ಲ  ನೀವು ಹೇಳಿದ "ಗೀತೆಯೇ ಹಾಲು. ಭಾಗವತವೇ ಹಣ್ಣು" ಎಂಬುದನ್ನೇ ಯೋಚಿಸುತ್ತಿದ್ದೆ. ಅದು ಹೇಗೆ ಈ ರೀತಿ ಪ್ರಚುರವಾಯಿತು ಎಂದು ತಿಳಿಯುವ ಕುತೂಹಲ. ನೀವು ವಿವರಿಸುತ್ತೇನೆ ಎಂದು ಹೇಳಿದುದು  ಒಳ್ಳೆಯದಾಯಿತು. ಅದನ್ನು ಸ್ವಲ್ಪ ಬಿಡಿಸಿ ಹೇಳಿದರೆ ನನಗೆ ಬಹಳ ಅನುಕೂಲವಾಗುತ್ತದೆ"
"ಭಗವದ್ಗೀತೆಯನ್ನು ಕ್ರಮವಾಗಿ ಅಭ್ಯಾಸ ಮಾಡುವವರನ್ನು, ಪಾರಾಯಣ ಮಾಡುವವರನ್ನು ನೀವು ನೋಡಿದ್ದೀರಲ್ಲ"
"ಅನೇಕರನ್ನು ನೋಡಿದ್ದೇನೆ"
"ಅವರು ಹೇಗೆ ಪ್ರಾರಂಭಿಸುತ್ತಾರೆ?"
"ಅಂದರೆ ಅರ್ಥವಾಗಲಿಲ್ಲ"
"ನೇರವಾಗಿ ಮೊದಲನೇ ಅಧ್ಯಾಯದಿಂದ ಪ್ರಾರಂಭಿಸುತ್ತಾರೋ, ಅಥವಾ ಅದಕ್ಕೆ ಮೊದಲು ಏನಾದರೂ ಮಾಡುತ್ತಾರೋ?"
"ಮೊದಲು  ಬೇರೆ ಕೆಲವು ಶ್ಲೋಕಗಳನ್ನು ಹೇಳುತ್ತಾರೆ"
"ಅವುಗಳಿಗೆ "ಧ್ಯಾನ ಶ್ಲೋಕಗಳು" ಎನ್ನುತ್ತಾರೆ"
"ಹಾಗಂದರೆ ಏನು?"
"ಕೃತಿಯನ್ನು ಪ್ರಾರಂಭ ಮಾಡುವ ಮೊದಲು ಅದರ ಹುಟ್ಟಿಗೆ ಕಾರಣರಾದವರನ್ನು ನೆನೆಯುವ ಶ್ಲೋಕಗಳನ್ನು ಹೇಳುತ್ತಾರೆ"
"ಹೀಗೆ ಮಾಡುವುದು ಏಕೆ?"
"ಲೌಕಿಕದಲ್ಲಿ ಯಾವುದಾದರೂ ಪುಸ್ತಕ ಓದುವ ಮುಂಚೆ ಅದರ ಬಗ್ಗೆ ಏನಾದರೂ ತಿಳಿದುಕೊಳ್ಳಲು ಪ್ರಯತ್ನ ಪಡುತ್ತೀರೋ? ಅದನ್ನು ಬರೆದವರು ಯಾರು, ಅದರ ಕಥಾವಸ್ತು, ಏನು? ರಚನೆ ಎಲ್ಲಿ ಮತ್ತು ಏಕೆ ಆಯಿತು, ಈ ರೀತಿ"
"ನಾವು ಶಾಲೆಗಳಲ್ಲಿ ಓದುವಾಗ ಕವಿ-ಕಾವ್ಯ ವಿಚಾರ ಎಂದು ಸ್ವಲ್ಪ ಹಿನ್ನೆಲೆ ಓದುತ್ತಿದ್ದೆವು"
"ಯಾವುದಾದರೂ ಅಮೂಲ್ಯವಾದ ಗ್ರಂಥ ಓದುವ ಮೊದಲು ಅದರ ಹಿನ್ನೆಲೆ ಇದೇ ರೀತಿ ತಿಳಿಯುವುದು, ತಿಳಿದಮೇಲೆ ಮತ್ತೆ ಓದುವಾಗ ಅದನ್ನು ನೆನೆಸಿಕೊಳ್ಳುವುದು ನಡೆದುಬಂದಿರುವ ಪದ್ಧತಿ"
"ಭಗವದ್ಗೀತೆ ಓದುವಾಗ ಅಥವಾ ಪಾರಾಯಣ ಮಾಡುವಾಗ ಯಾವ ಶ್ಲೋಕಗಳನ್ನು ಹೇಳುತ್ತಾರೆ?"
"ಅವರವರ ಮನೆತನದ ರೀತಿಯಂತೆ ಅಥವಾ ಗುರುಗಳು ಹೇಳಿಕೊಟ್ಟ ಪದ್ಧತಿಯ ಪ್ರಕಾರ ಹೇಳುತ್ತಾರೆ"
"ಇದರಲ್ಲಿ ಏನು ವಿವರಗಳು ಇರುತ್ತವೆ?"
"ಗ್ರಂಥಕರ್ತೃವಾದ ಭಗವಾನ್ ವೇದವ್ಯಾಸರು ಮತ್ತು ಗೀತೆಯನ್ನು ಉಪದೇಶಿಸಿದ ಶ್ರೀಕೃಷ್ಣ, ಇವರುಗಳ ನೆನಪು ಮಾಡಿಕೊಂಡು ಅವರಿಗೆ ಕೃತಜ್ಞತೆಗಳನ್ನು ಹೇಳುವ ಶ್ಲೋಕಗಳು. ಇದರ ಜೊತೆಗೆ ಭಗವದ್ಗೀತೆಯ ಶ್ರೇಷ್ಠತೆಯನ್ನು ಹೇಳುವ ಶ್ಲೋಕಗವಿರುತ್ತದೆ"
"ಭಗವದ್ಗೀತೆಯ ಉತ್ತಮತೆಯನ್ನು ಹೇಳುವ ಶ್ಲೋಕವೇನು?'
"ಅದು ಹೀಗಿದೆ. ಕೇಳಿ"

ಸರ್ವೋಪನಿಷದೋ ಗಾವಃ ದೋಗ್ಧಾ ಗೋಪಾಲನಂದನಃ 
ಪಾರ್ಥೋ ವತ್ಸ: ಸುಧೀರ್ಭೋಕ್ತಾ ದುಗ್ಧಮ್ ಗೀತಾಮೃತಮ್ ಮಹತ್

"ಎಲ್ಲ ಉಪನಿಷತ್ತುಗಳೇ ಹಸುಗಳು. ಶ್ರೀಕೃಷ್ಣನು ಈ ಹಸುಗಳ ಹಾಲನ್ನು ಕರೆದು ಕೊಡುವ ಗೋಪಾಲಕನು. ಪಾರ್ಥನೆಂಬ ಹೆಸರಿನ ಅರ್ಜುನನೇ ಕರುವು. ಭಕ್ತಮಹಾಜನರೇ ಆ ಅಮೃತಸಮವಾದ ಹಾಲನ್ನು ಸೇವಿಸುವವರು"

"ಎಲ್ಲ ಉಪನಿಷತ್ತುಗಳೇ ಹಸುಗಳು ಅಂದಮೇಲೆ ಬೇರೆ ಸಂಬಂಧಿಸಿದ ವೇದಾದಿ ವಾಂಗ್ಮಯದ ಪಾತ್ರವೇನು?"
"ಉಪನಿಷತ್ತುಗಳೇ ಹಸುಗಳು ಎಂದರೆ ಬರೀ ಉಪನಿಷತ್ತುಗಳೆಂದು ಅರ್ಥವಲ್ಲ. ಉಪನಿಷತ್ತುಗಳು ವಿಶಾಲ ವಾಂಗ್ಮಯದ ಸಿಹಿ ಕೆನೆ ಎಂದು ನಂಬಿಕೆ. ಆದ್ದರಿಂದ ಭಗವದ್ಗೀತೆ ಈ ಎಲ್ಲ ವಾಂಗ್ಮಯದ ಸಾರಭೂತ ಕೃತಿಯೂ ಹೌದು"
"ಅರ್ಜುನನು ಕರು ಎನ್ನುವುದೇಕೆ?"
"ನೀವು ಹಸುವಿನ ಹಾಲು ಕರೆಯುವುದು ನೋಡಿದ್ದೀರಾ?"
"ನೋಡಿದ್ದೇನೆ"
"ಹಾಲು ಕರೆಯುವ ಮೊದಲು ಕರುವನ್ನು ಹಸುವಿನ ಬಳಿ ಬಿಡುತ್ತಾರೆ. ಕರು ಹತ್ತಿರ ಬಂದಾಗ ಹಸು ಸುಲಭವಾಗಿ ಕೆಚ್ಚಲಿನಿಂದ ಹಾಲನ್ನು ಹರಿಸುತ್ತದೆ. ಕರು ಹಾಲು ಕುಡಿದನಂತರ ಮಿಕ್ಕ ಹಾಲನ್ನು ಕರೆದುಕೊಳ್ಳುತ್ತಾರೆ. (ದುರಾಸೆ ಮನುಷ್ಯರು ಕರು ಪೂರ್ತಿ ಕುಡಿಯುವವರೆಗೂ ಬಿಡುವುದಿಲ್ಲ). ಭಗವದ್ಗೀತೆ ಎಂಬ ಹಾಲನ್ನು ಮೊದಲು ಕುಡಿದವನು ಪಾರ್ಥ. ಆದ್ದರಿಂದ ಅವನು ಕರು. ಎಲ್ಲ ಸಜ್ಜನರಿಗೆ ಅವನ ನಿಮಿತ್ತದಿಂದ, ಮತ್ತು ಅವನ ನಂತರ ಸಿಕ್ಕಿತು. ಆದ್ದರಿಂದ ಅವನೇ ವತ್ಸ"
"ಅರ್ಥವಾಯಿತು"
"ಏನು ಅರ್ಥವಾಯಿತು?"
"ನೀವು ಹೇಳಿದ ಎಲ್ಲ ಅಂಶಗಳು ಮತ್ತು  ಎಲ್ಲಕ್ಕಿಂತ ಹೆಚ್ಚಾಗಿ ಪುರಾಣದಲ್ಲಿ ಹೇಳಿದ "ಏಕಾದಶಿಯ ದಿನ ಹಾಲು ಸೇವಿಸಿರಿ ಎಂದರೆ ಭಗವದ್ಗೀತೆಯೆಂಬ ಹಾಲನ್ನು ಕುಡಿಯಿರಿ. ಅದರ ಪಾರಾಯಣ ಮಾಡುವ ಮೂಲಕ", ಎಂದು"
*****

"ಶ್ರೀಮದ್ ಭಾಗವತ ಹಣ್ಣು ಎಂದು ಹೇಗಾಯಿತು?"
"ಶ್ರೀಮದ್ ಭಾಗವತದ ಮೊದಲ ಸ್ಕಂದ, ಮೊದಲ ಅಧ್ಯಾಯದಲ್ಲಿ ಬರುವ ಶ್ಲೋಕ ಹೀಗಿದೆ. ಕೇಳಿ"

ನಿಗಮಕಲ್ಪತರೋರ್ಗಲಿತಂ  ಫಲಂ 
ಶುಕಮುಖಾತ್ ಅಮೃತದ್ರವ ಸಂಯುತಂ 
ಪಿಬತ ಭಾಗವತರಸಮಾಲಯಂ
ಮುಹುರಹೋ ರಸಿಕ ಭುವಿಭಾವುಕ : 

"ದೊಡ್ಡದನ್ನು ತಿಳಿಯಬೇಕೆಂಬ ಮತ್ತು ತಿಳಿದ ಈ ಜಗತ್ತಿನ ಎಲ್ಲ ಮಹಾಜನಗಳೇ! ಶುಕಮಹಾಮುನಿಗಳಿಂದ ಹೇಳಲ್ಪಟ್ಟ ವೈದಿಕ ವಾಂಗ್ಮಯವೆಂಬ ಕಲ್ಪವೃಕ್ಷದ ಅಮೃತದಂತಹ ರಸಭರಿತವಾದ ಶ್ರೀಮದ್ ಭಾಗವತವೆಂಬ ಹಣ್ಣನ್ನು ತಿನ್ನಿರಿ.  ಶ್ರೀಮದ್ ಭಾಗವತವೆಂಬ ಹಣ್ಣಿನ ದಿವ್ಯ ರಸವನ್ನು ಕುಡಿಯಿರಿ. (ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ)" 

"ಭಗವದ್ಗೀತೆ ಹಾಲು ಎಂದಂತೆ ಶ್ರೀಮದ್ ಭಾಗವತ ಹಣ್ಣು ಎಂದು ಅರ್ಥವಾಯಿತು. ಈ ಹಣ್ಣಿನ ರಸದ ವಿಶೇಷವೇನು?"
"ಬೇರೆ ಹಣ್ಣುಗಳ ರಸಕ್ಕೆ ಕಾಲ ಮಿತಿ ಇದೆ. ಭಾಗವತವೆಂಬ ಹಣ್ಣಿನ ರಸಕ್ಕೆ ಕಾಲ ಮಿತಿ ಇಲ್ಲ. ಅಷ್ಟು ಮಾತ್ರವಲ್ಲ. ಇದು ಬರಿಯ ಸಿಹಿಯಾದ ಹಣ್ಣಿನ ರಸವಲ್ಲ. ಅಮೃತದಂತಹ ರಸ. ಅಮೃತ ಸೇವಿಸಿದರೆ ಸಾವಿಲ್ಲ ಎಂದಂತೆ. ದೇವತೆಗಳು ಅಮೃತ ಸವಿದು ಸಾವಿಲ್ಲದವರಾಗುತ್ತಾರೆ. ಆದರೆ ಮಹಾಪ್ರಳಯದಲ್ಲಿ ಅವರ ಕಾಲವೂ ಮುಗಿಯುತ್ತದೆ. ಶ್ರೀಮದ್ ಭಾಗವತದ ಹಣ್ಣಿನ ರಸ ಅಮೃತಕ್ಕಿಂತಲೂ ಹೆಚ್ಚು. ಇದರ ರಸದಿಂದ ಜೀವನ-ಮರಣ ಅನ್ನುವ ಚಕ್ರದಿಂದ ಬಿಡುಗಡೆಯಾಗಿ ಮೋಕ್ಷವೆಂಬ ಅತಿ ದೊಡ್ಡ, ಎಂದಿಗೂ ಹೋಗದ, ಹಾನಿಯಾಗದ ಪದವಿ  ಸಿಗುತ್ತದೆ"
"ಈಗ ಅರ್ಥವಾಯಿತು"
"ಏನು ಅರ್ಥವಾಯಿತು?"
"ಶ್ರೀಮದ್ ಭಾಗವತವನ್ನು ಹಣ್ಣು ಎಂದುದು ಏಕೆ ಎಂದು. "ಏಕಾದಶಿಯಂದು ಹಾಲು-ಹಣ್ಣು ಸೇವಿಸಿ"  ಎಂದು ಹೇಳಿದುದರ ಅರ್ಥ"
"ನಾನು ನಿಮಗೆ ಸ್ವಲ್ಪವೇ ವಿವರ ಕೊಟ್ಟಿದ್ದೇನೆ. ದೊಡ್ಡವರನ್ನು ಕೇಳಿದರೆ ಇನ್ನೂ ಅನೇಕ ಅರ್ಥಗಳನ್ನು ತಿಳಿಸಿಕೊಡುತ್ತಾರೆ" 
"ಆಗಲಿ. ಹೀಗೆಯೇ ಪ್ರಯತ್ನ ಪಡುತ್ತೇನೆ"

ಅಷ್ಟರಲ್ಲಿ ಪುರಾಣೀಕರು ಬಂದು ಪುರಾಣ ಪ್ರಾರಂಭವಾಯಿತು. 

*****

ಮುಕುಂದರಾಯರು ಮುಂದಿನ ಏಕಾದಶಿಯಿಂದ ಈ ಹಾಲು-ಹಣ್ಣುಗಳನ್ನು ಸೇವಿಸಲು ಪ್ರಾರಂಭ ಮಾಡಿದರು. 

No comments:

Post a Comment