Showing posts with label Manassu. Show all posts
Showing posts with label Manassu. Show all posts

Friday, January 9, 2026

ಮನಸ್ಸು ನಿಲ್ಲಿಸುವ ಪ್ರಯತ್ನ


ಹಿಂದಿನ ಸಂಚಿಕೆಯಲ್ಲಿ "ಹದಿನಾರು ಮತ್ತು ಇಪ್ಪಂತ್ತೊಂದು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಹುಟ್ಟಿ ಬೆಳೆದ ರೀತಿಯ ಮತ್ತು ಅದರ ಜನ್ಮದಾತ ಎಂದು ಹೇಳುವ ಕಪಿಲ ಮುನಿ ಬಗ್ಗೆ ಸ್ವಲ್ಪ ವಿಚಾರ ಮಾಡಿದೆವು. ಕರ್ದಮ ಪ್ರಜಾಪತಿ ಮತ್ತು ದೇವಹೂತಿ ದೇವಿಯರ ಮಗನಾದ ಕಪಿಲನಾಗಿ ಶ್ರೀ ಮಹಾವಿಷ್ಣುವು ಅವತರಿಸಿದ ಸಮಾಚಾರವನ್ನು ನೋಡಿದೆವು. ಪ್ರಜಾಪತಿ ಕರ್ದಮ-ದೇವಹೂತಿ-ಕಪಿಲ ಮುನಿಗಳ ಕಾರ್ಯಕ್ಷೇತ್ರವಾದ ಗುಜರಾತು ರಾಜ್ಯದ ಪಾಟನ್ ಜಿಲ್ಲೆಯಲ್ಲಿರುವ ಸಿದ್ಧಿಪುರ, ಅಲ್ಲಿನ ಪ್ರಸಿದ್ಧ ಬಿಂದು ಸರೋವರ ಮತ್ತು "ಮಾತೃಗಯಾ" ಕ್ಷೇತ್ರದ ಬಗ್ಗೆ ನೋಡಿದ್ದೆವು. 

"I Salute You, Dear Mother" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಹೆತ್ತ ತಾಯಿ ನೆನಪಿನಲ್ಲಿ ತಾಯಿಯನ್ನು ಉದ್ದೇಶಿಸಿ ಮಾಡುವ ಹದಿನಾರು ಸಂಖ್ಯೆಯ ಪಿಂಡಪ್ರದಾನ ಮತ್ತು ಪ್ರತಿ ಪಿಂಡ ಕೊಡುವ ಸಂದರ್ಭದಲ್ಲಿ ಹೇಳುವ ಶ್ಲೋಕಗಳು, ಅವುಗಳಲ್ಲಿರುವ ಭಾವ ತುಂಬಿದ ಅರ್ಥಗಳನ್ನೂ ನೋಡಿದೆವು. 

ಇದೇ ವಿಷಯಕ್ಕೆ ಸಂಬಂಧಿಸಿದ ಈ ಹಿಂದಿನ ಎರಡು ಸಂಚಿಕೆಗಳನ್ನು (ಒಂದು ಇಂಗ್ಲೀಷಿನಲ್ಲಿದೆ) ಇಲ್ಲಿ ಕ್ಲಿಕ್ ಮಾಡಿ ಓದಬಹುದು. 
*****

ಬಿಹಾರ ರಾಜ್ಯದಲ್ಲಿರುವ "ಗಯಾ" ಕ್ಷೇತ್ರದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶ್ರದ್ದಾಳು ಜನಗಳು ಈ ಗಯಾ ಕ್ಷೇತ್ರ ಯಾತ್ರೆ ಮಾಡಿ ಅಲ್ಲಿರುವ "ಗದಾಧರ" ದೇವಾಲಯದಲ್ಲಿ ಪಿತೃಶ್ರಾದ್ಧ ಮಾಡಿ, ಗದಾಧರನ ವಿಗ್ರಹದ ಮುಂದುಗಡೆ ಇರುವ ಕಲ್ಲಿನ "ವಿಷ್ಣುಪಾದ" ಸ್ಥಳದಲ್ಲಿ ಪಿಂಡಗಳನ್ನು ವಿಸರ್ಜನೆ ಮಾಡಿದರೆ ಪಿತೃಗಳಿಗೆ ಉತ್ತಮ ಗತಿ ಸಿಗುವುದೆಂದು ನಂಬಿಕೆ. ಸಾಮಾನ್ಯವಾಗಿ ಕಾಶಿಯಾತ್ರೆ ಮಾಡುವ ಯಾತ್ರಿಕರು ಮೊದಲು ಪ್ರಯಾಗ ತಲುಪಿ, ಅಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ (ಕೆಲವರು "ವೇಣೀದಾನ" ಸಹ ಮಾಡುತ್ತಾರೆ), ನಂತರ ಕಾಶಿಯ ವಿಶ್ವೇಶ್ವರ ಮತ್ತು ಬಿಂದುಮಾಧವ ದರ್ಶನ ಮಾಡಿ, ಆಮೇಲೆ ಗಯಾ ತಲುಪಿ ಅಲ್ಲಿ "ಸರ್ವ ಪಿತೃ ಶ್ರಾದ್ಧ" ಮಾಡುತ್ತಾರೆ. ಅಲ್ಲಿಗೆ "ಕಾಶಿಯಾತ್ರೆ" ಎಂದು ಹೇಳುವ ಸಂಪ್ರದಾಯ ಪದ್ಧತಿ ಪೂರ್ತಿ ಆಯಿತು ಎಂದು ನಂಬುತ್ತಾರೆ. 

ಗದಾಧರ ಅಂದರೆ ಯಾರು? ಗದಾಧರ ಅನ್ನುವ ಶ್ರೀ ಮಹಾವಿಷ್ಣುವನ್ನು ಹೀಗೆ ವರ್ಣಿಸಿ ಹೇಳುತ್ತಾರೆ:

ಬ್ರಹ್ಮಾಂಡ ಭುವನಾರಂಭ ಮೂಲಸ್ತoಭೋ ಗದಾಧರಃ 
ಕೌಮೋದಕೀ ಕರೇ ಯಸ್ಯ ತಂ ನಮಾಮಿ ಗದಾಧರಮ್ 

ಕೈಯಲ್ಲಿ "ಕೌಮೋದಕೀ" ಹೆಸರಿನ ಗದೆ ಹಿಡಿದು ಈ ಬ್ರಹ್ಮಾಂಡಕ್ಕೆ ಆಧಾರವಾದ ಕಂಭದಂತೆ ನಿಂತಿರುವ ಶ್ರೀ ಮಹಾವಿಷ್ಣುವೇ ಗದಾಧರ.

ಪಕ್ಕದಲ್ಲಿ ಕೊಟ್ಟಿರುವ ಗಯಾ ದೇವಾಲಯದ ಮೂಲ ಮೂರ್ತಿ ಚಿತ್ರವನ್ನು ನೋಡಿದರೆ ಕೌಮೋದಕಿ ಗದೆಯನ್ನು ಕಾಣಬಹುದು

ಭೂಮಿಯ ಯಾವ ಪ್ರದೇಶದಲ್ಲಿ ಶ್ರಾದ್ಧ ಮಾಡಿ "ಪಿಂಡಪ್ರದಾನ" ಮಾಡಿದರೂ ಅದು ಭೂಲೋಕದಲ್ಲಿ ಮಾಡಿದಂತೆ ಆಗುತ್ತದೆ. ಆದರೆ ಗಯಾದಲ್ಲಿರುವ ಗದಾಧರನ ಪಾದದ ಮೇಲೆ ಅದನ್ನು ಅರ್ಪಿಸಿದಾಗ ಅದು ಅನಂತ ವಿಶ್ವದ ಮೂಲ ಕಂಭದಂತೆ ನಿಂತಿರುವ ಶ್ರೀಹರಿಯ ಪದತಲದಲ್ಲಿ ಅರ್ಪಿಸಿದಂತೆ. ಈ ಕಾರಣಕ್ಕಾಗಿ ಗಯಾ ಪಿಂಡಪ್ರದಾನಕ್ಕೆ ವಿಶೇಷ ಮಹತ್ವ. 

ಗಯಾ ದೇವಾಲಯದ ಈ ಗದಾಧರ ಮೂರ್ತಿಯ ಮುಂಭಾಗದಲ್ಲಿ ಇರುವ ಅವನ ಪಾದವನ್ನು ಸ್ವಲ್ಪ ಕೆಳಗಡೆ ಕೊಟ್ಟಿರುವ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಮಹಾವಿಷ್ಣುವಿನ ಪಾದದಲ್ಲಿರುವ ಧ್ವಜ, ವಜ್ರ, ಅಂಕುಶ ಮುಂತಾದ ರೇಖಾ ಲಕ್ಷಣಗಳನ್ನು ಕಾಣಬಹುದು. ಇವುಗಳ ವಿಶೇಷವನ್ನು ಮುಂದೆ ಸ್ವಲ್ಪ ಮಟ್ಟಿಗೆ ನೋಡೋಣ. 

ಪ್ರತಿದಿನ ಸಾವಿರಾರು ಯಾತ್ರಿಕರು ಈ "ವಿಷ್ಣುಪಾದ" ಇರುವ ಕಲ್ಲಿನ ಮೇಲೆ ಪಿಂಡಪ್ರದಾನ ಮಾಡುತ್ತಾರೆ. ಈ ಕಾರಣದಿಂದ ಅಲ್ಲಿ ರಾಶಿ ರಾಶಿ ಪಿಂಡಗಳು ಬಿದ್ದಿರುತ್ತವೆ. ಕೆಲವು ನಿಮಿಷಗಳಿಗೊಮ್ಮೆ ದೇವಾಲಯದ ಕಾರ್ಯಕರ್ತರು ಈ ಪ್ರದೇಶವನ್ನು ಸ್ವಚ್ಛ ಮಾಡುತ್ತಾರೆ. ಕೆಲವರು ಈ ಸಮಯಕ್ಕಾಗಿ ಕಾದುಕೊಂಡಿದ್ದು ಆ ಚಿನ್ಹೆಯಮೇಲೆ ಪಿಂಡಗಳನ್ನು ಹಾಕಿ ಧನ್ಯತಾ ಭಾವ ಹೊಂದುತ್ತಾರೆ. 

ಕೆಲವು ಕುಟುಂಬಗಳಲ್ಲಿ, ವಿಶೇಷವಾಗಿ ವೈಷ್ಣವರಲ್ಲಿ, ಮನೆ-ಮಠಗಳಲ್ಲಿ ಮಾಡುವ ಶ್ರಾದ್ಧ ಸಮಯದಲ್ಲಿ ಹೀಗೆ ಗಯಾಯಾತ್ರೆಯ ಸಮಯದಲ್ಲಿ ಅಲ್ಲಿಂದ ತಂದಿರುವ ತಾಮ್ರದ ವಿಷ್ಣು ಪಾದ ಇಟ್ಟು ಪೂಜಿಸಿ, ಅದರ ಮೇಲೆ ಪಿಂಡಪ್ರದಾನ ಮಾಡುವ ಪದ್ಧತಿ ಈಗಲೂ ನಡೆದುಬಂದಿದೆ. 

******

ಹಿಂದಿನ ಸಂಚಿಕೆಯಲ್ಲಿ ತಾಯಿ ದೇವಹೂತಿ ಮತ್ತು ಮಗ ಕಪಿಲ ಮುನಿಯ ಸಂವಾದವನ್ನು ಸ್ವಲ್ಪ ನೋಡಿದೆವು. ಜೀವನ-ಮರಣ ಚಕ್ರದಿಂದ ಬಿಡುಗಡೆ ಹೊಂದಲು ಯಾವ ದಾರಿ ಹಿಡಿಯಬೇಕೆಂಬ ಬಗ್ಗೆ ದೇವಹೂತಿ ಕೇಳಿದ ಪ್ರಶ್ನೆಗಳಿಗೆ ಮಗನಾದ ಕಪಿಲ ಮುನಿ ನೀಡಿದ ಉತ್ತರರೂಪದ ಉಪದೇಶ ಶ್ರೀಮದ್ ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. ಮಹಾಭಾರತದ ಮಧ್ಯದಲ್ಲಿ ಕುರುಕ್ಷೇತ್ರದ ಯುದ್ಧ ಪ್ರಾರಂಭವಾಗುವ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತಿಳಿಸಿದ "ಶ್ರೀಮದ್ ಭಗವದ್ಗೀತೆ" ಗೀತೆ ಎಂಬ ಹೆಸರಿಂದ ಪ್ರಸಿದ್ಧವಾಗಿದೆ. ಭಾಗವತದ ಮೂರನೆಯ ಸ್ಕಂಧದ ಈ "ಕಪಿಲ ಗೀತೆ" ಮತ್ತು ಹನ್ನೊಂದನೆಯ ಸ್ಕಂಧದ ಶ್ರೀಕೃಷ್ಣ ಉದ್ಧವನಿಗೆ ಮಾಡಿದ ಉಪದೇಶದ "ಉದ್ಧವ ಗೀತೆ" ಇವುಗಳು ಕೂಡ ಭಗವದ್ಗೀತೆಯಂತೆಯೇ ಅನೇಕ ಸಾರಯುತ ವಿಷಯಗಳನ್ನು ಒಳಗೊಂಡಿವೆ. 

ಜೀವನ-ಮರಣ ಚಕ್ರದಿಂದ ಬಿಡುಗಡೆಗಾಗಿ ಮಾಡುವ ಸಾಧನೆಯ ಮೊದಲ ಮೆಟ್ಟಿಲು ನಮ್ಮ ಮನಸ್ಸನ್ನು ನಿಯಂತ್ರಿಸಿ ಗಟ್ಟಿ ಮಾಡುವ ಕೆಲಸ. ನಮ್ಮ ಮನಸ್ಸು ಇಡೀ ಪ್ರಪಂಚದಲ್ಲಿ ಅತಿ ವೇಗವಾಗಿ ಓಡುವ ವಸ್ತು. ಅದಕ್ಕೇ ವೇಗದ ಸುದ್ದಿ ಬಂದಾಗಲೆಲ್ಲಾ ವಾಯುವೇಗ, ಮನೋವೇಗ ಅನ್ನುವುದು. ವಾಯುವೇಗಕ್ಕೂ ಮೀರಿದುದು ಮನೋವೇಗ. ಒಂದೇ ಕ್ಷಣದಲ್ಲಿ ವಿಶ್ವವನ್ನೆಲ್ಲಾ ಸುತ್ತಿ ಬರುವುದು ಅದು. ಯಾವುದೇ ಸಾಧನೆಯ ಕೆಲಸ ಮಾಡಲು ತೊಡಗಿದಾಗ ಈ ಮನಸ್ಸನ್ನು ನಿಯಂತ್ರಿಸುವುದೇ ದೊಡ್ಡ ಕಷ್ಟದ ಕಾರ್ಯ. 

ಕಪಿಲ ಮುನಿಯ ಉಪದೇಶದಲ್ಲಿ ಇದಕ್ಕೆ ಪರಿಹಾರ ಸಿಕ್ಕುತ್ತದೆ. ಪ್ರಾರಂಭದಲ್ಲಿ ಎಲ್ಲ ಕೆಲಸಗಳೂ ಕಷ್ಟವೇ. ಹುಟ್ಟಿದ ಮಗು ವರುಷ ತುಂಬುವ ವೇಳೆಗೆ ನಡೆಯಲು ಪ್ರಾರಂಭಿಸುತ್ತದೆ. ಅನೇಕ ಸಲ ಬೀಳುತ್ತದೆ. ಮೊದಲು ಗೋಡೆ ಹಿಡಿದು ನಡೆಯುತ್ತದೆ. ನಂತರ ತಾಯಿಯ ಕೈಬೆಟ್ಟು ಹಿಡಿದು ನಡೆಯುತ್ತದೆ. ಕ್ರಮೇಣ ತಾನೇ ಮೆಲ್ಲಮೆಲ್ಲನೆ ನಡೆಯುತ್ತದೆ. ಬಿದ್ದಾಗ ಮತ್ತೆ ಮೇಲೇಳುತ್ತದೆ. ಹೀಗೆ ಮಾಡುತ್ತ ಮಾಡುತ್ತಾ ಕಲಿಯುತ್ತದೆ. ಮನಸ್ಸಿನ ಹತೋಟಿಯೂ ಹೀಗೆಯೇ. 

ಕಪಿಲ ಮುನಿಯು ಇದಕ್ಕೆ ಉಪಾಯವಾಗಿ "ಸಜ್ಜನರ ಸಹವಾಸ" ಎನ್ನುವ ಪರಿಹಾರ ಹೇಳುತ್ತಾನೆ. ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರು "Tell me who is your friend; I will tell you who you are" ಎಂದು ಒಂದು ಗಾದೆ ಹೇಳುತ್ತಿದ್ದರು. ಜೊತೆಯವರು ಸೋಮಾರಿಗಳಾದರೆ ನಾವೂ ಸೋಮಾರಿಗಳಾಗುತ್ತೇವೆ. ಅವರು ದುರಭ್ಯಾಸಗಳ ದಾಸರಾಗಿದ್ದಾರೆ ನಾವೂ ಹಾಗಾಗುತ್ತೇವೆ. ಅವರು ನಡೆಯುವ ರೀತಿಯೇ ನಮಗೆ ಮಾದರಿ ಆಗುತ್ತದೆ. ಸಾಧನೆಯಲ್ಲಿಯೂ ಹೀಗೆಯೇ. ಆದ್ದರಿಂದ ಮೊದಲು ಸಜ್ಜನರನ್ನು ಹುಡುಕಿ ಅವರ ಸಂಗದಲ್ಲಿ ಆದಷ್ಟೂ ಹೆಚ್ಚು ಕಾಲ ಕಳೆಯಬೇಕು. ಶ್ರೀ ಮೋಹನದಾಸರ ಕೋಲೆ ಪದದಲ್ಲಿ "ಸಜ್ಜನರ ಸಹವಾಸ ಮಲ್ಲಿಗೆ ಮುಡಿದಂತೆ, ದುರ್ಜನರ ಸಂಗ ಮುಲ್ಲಂಗಿ ತಿಂದು ತೇಗಿದಂತೆ ಕೋಲೆ" ಎಂದು ಹೇಳುತ್ತಾರೆ. ಮಲ್ಲಿಗೆ ಹೂವು ಮುಡಿದು ಮಾರನೆಯ ದಿನ ಅದನ್ನು ಬಿಸಾಡಿದರೂ ತಲೆಯಲ್ಲಿ ಮಲ್ಲಿಗೆ ಸುವಾಸನೆ ಇರುವುದು. ಮೂಲಂಗಿಯೂ ಹಾಗೆ. ತಿಂದು ಎಷ್ಟೋ ಹೊತ್ತಿನಮೇಲೆ ತೇಗಿದರೂ ಅದೇ ಕಮಟು ವಾಸನೆಯೇ!

ಆಯಿತು. ಒಪ್ಪೋಣ. ಸಜ್ಜನರ ಸಂಗ ಪ್ರಾರಂಭಿಸಿದೆವು. ಅವರು ದಿನಕ್ಕೆ ಇಪ್ಪತ್ತುನಾಲ್ಕು ಗಂಟೆಯೂ ಹತ್ತಿರವಿರುವುದಿಲ್ಲ. ಮೇಲಾಗಿ, ನಾವು ಒಂಟಿಯಾಗಿದ್ದಾಗ ಮನಸ್ಸು ಹಿಡಿದಿಡುವುದು ಇನ್ನೂ ಕಷ್ಟ. ಅದಕ್ಕೆ ಏನು ಉಪಾಯ?
 
ಈ ಕಠಿಣ ಮತ್ತು ಜಟಿಲ ಸಮಸ್ಯೆಗೆ ಕಪಿಲ ಮುನಿ ಹೇಳಿ ಕೊಡುವ ಉಪಾಯವೆಂದರೆ ಒಂಟಿಯಾಗಿದ್ದಾಗಲೆಲ್ಲಾ ಪರಮಾತ್ಮನ ಪಾದದ ಬಗ್ಗೆ ಚಿಂತನೆ ಮಾಡುವುದು:

ಸಂಚಿಂತಯೇತ್ ಭಗವತಃ ಚರಣಾರವಿಂದಮo  
ವಜ್ರಾoಕುಶ ಧ್ವಜ ಸರೋರುಹ ಲಾಂಛನಾಡ್ಯo
ಉತ್ತುಂಗರಕ್ತವಿಲಸನ್  ನಖಚಕ್ರವಾಳ 
ಜ್ಯೋತ್ಸ್ನಾಭಿರಾಹತಾಮಹದ್ ಹೃದಯಾಂಧಕಾರಂ 

ಇದು ಭಾಗವತದ ಅತ್ಯಂತ ಪ್ರಸಿದ್ಧವಾದ ಶ್ಲೋಕಗಳಲ್ಲಿ ಒಂದು.

ಪರಮಾತ್ಮನ ಕಮಲಗಳಂತಿರುವ ಪಾದಗಳನ್ನು ಯಾವಾಗಲೂ ನೆನೆಯುತ್ತಿರಬೇಕು. ಅದರಲ್ಲಿ ಮಿಂಚು, ಅಂಕುಶ, ಧ್ವಜ, ಕಮಲ ಮುಂತಾದ ರೇಖೆಗಳಿವೆ. ಆ ಪಾದದ ಬೆರಳುಗಳ ಉಗುರುಗಳಿಂದ ಸದಾಕಾಲವೂ ಚಂದ್ರನ ಬೆಳದಿಂಗಳಿಗಿಂತಲೂ ಅಧಿಕವಾದ (ಬೆಳಕು ಬೆಳದಿಂಗಳಿಗಿಂತ ಕೋಟಿ ಕೋಟಿ ಬಹುಪಾಲು ಹೆಚ್ಚು. ಆದರೆ ಸೂರ್ಯನ ಬೆಳಕಿನಂತೆ ಕಣ್ಣು ಕುಕ್ಕುವುದಲ್ಲ. ಹೀಗೆ) ಆದರೆ ಹಿತವಾದ ಪ್ರಕಾಶ ಹೊರಹೊಮ್ಮುತ್ತಿರುತ್ತದೆ. ಈ ಬೆಳದಿಂಗಳ ಬೆಳಕು ನಮ್ಮ ಹೃದಯ, ಮನಸ್ಸುಗಳಲ್ಲಿರುವ ಕತ್ತಲನ್ನು ಹೊರದೋಡಿಸುತ್ತದೆ. (ಒಮ್ಮೆ ಆ ಕತ್ತಲೆ ಹೋದರೆ ಮುಂದೆ ಎಲ್ಲವೂ ಸುಗಮವಾಗುವುದು ಎಂದು ಭಾವ). 


ಕೊಟ್ಟಿರುವ ಚಿತ್ರವನ್ನು ಹಿಗ್ಗಿಸಿ ನೋಡಿದರೆ ಅಥವಾ ಪಕ್ಕದಲ್ಲಿ ಕೊಟ್ಟ್ಟಿರುವ ತಾಮ್ರದ ವಿಷ್ಣುಪಾದವನ್ನು ನೋಡಿದರೆ ಈ ರೇಖೆಗಳನ್ನು ಚೆನ್ನಾಗಿ ಕಾಣಬಹುದು. 
*****

ನಮ್ಮ ಮನಸ್ಸುಗಳೂ ಮದವೇರಿದ ಆನೆಗಳಂತೆ. ದಿಕ್ಕಾಪಾಲಾಗಿ ಓಡುತ್ತಿರುತ್ತವೆ. ಎಂತಹ ಮದಿಸಿದ ಆನೆಯಾದರೂ ಮಾವುತನ ಅಂಕುಶ ಅದನ್ನು ಒಂದು ನಿಮಿಷದಲ್ಲಿ ಹಿಡಿತಕ್ಕೆ ತರಬಲ್ಲದು. ಪರಮಾತ್ಮನ ಪಾದಗಳ ಚಿಂತನೆಯಿಂದ ಅದರಲ್ಲಿರುವ ಅಂಕುಶ ನಮ್ಮ ಮನಸ್ಸೆಂಬ ಆನೆಗಳನ್ನು ಹಿಡಿತಕ್ಕೆ ತರುತ್ತದೆ ಎಂದು ಪರ್ಯಾಯವಾದ ಅರ್ಥ. 

ಇದೇ ವಿಷಯವನ್ನು ಶ್ರೀ ಕನಕದಾಸರು ತಮ್ಮ "ಕೇಶವನಾಮ" ಕೃತಿಯಲ್ಲಿ (ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನೋ) ಹೀಗೆ ಹೇಳುತ್ತಾರೆ:

ಹಿಂದನೇಕ ಯೋನಿಗಳಲಿ ಬಂದುಬಂದು ನೊಂದೆನಯ್ಯ 
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದಾ 

ಭಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ 
ಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸೋ ವಿಷ್ಣುವೇ  

ಈ ಸಜ್ಜನರ ಸಂಗವನ್ನೇ "ಸತ್ಸಂಗ" ಎಂದು ಪ್ರೀತಿಯಿಂದ ಕರೆಯುವುದು. ಮನಸ್ಸು ನಿಲ್ಲಿಸುವುದು ಬಲು ಕಷ್ಟ. ಆದರೂ ಸತತ ಪ್ರಯತ್ನದಿಂದ ಮತ್ತು ಸಜ್ಜನರ ಸಹವಾಸದಿಂದ ಅದನ್ನು ಸಾಧಿಸಬೇಕು. 

Wednesday, October 8, 2025

ಚರ್ಮಾ೦ಬರ

Best 50+ Lord Shiva Images | God Shiva HD Pictures | Hindu ...

ಅರವತ್ತು  ವರುಷಗಳಿಗೂ ಹಿಂದಿನ ಮಾತು. 

ಅದೊಂದು ಅವಿಭಕ್ತ ಕುಟುಂಬ. ತುಂಬಿದ ಮನೆಗೆ ಒಂದು ಉತ್ತಮ ಉದಾಹರಣೆ. ಹಿರಿಯ ವಯಸ್ಸಿನ ತಾಯಿಯ ಜೊತೆಯಲ್ಲಿ ಅರವತ್ತು ವರುಷಗಳ ಆಸು-ಪಾಸಿನ ಅಣ್ಣ-ತಮ್ಮಂದಿರು. ಅವರ ಹೆಂಡತಿ-ಮಕ್ಕಳು-ಸೊಸೆಯರು-ಮೊಮ್ಮಕ್ಕಳು. ಎಲ್ಲರೂ ಒಟ್ಟಾಗಿ ಒಂದು ಸೂರಿನ ಕೆಳಗೆ ಜೀವನ ನಡೆಸುವ ಸುಯೋಗ. ಈಗ ಅಂತಹ ಸಂಸಾರಗಳು ಕಾಣುವುದು ಕಷ್ಟ. ಅವರ ಮನೆಗೆ ಬಂದು ಹೋಗುವ ನಮ್ಮಂತಹ ಮಕ್ಕಳಿಗೆ ಅದೊಂದು ಪೂರ್ತಿಯಾಗಿ ಅರ್ಥವಾಗದ ವ್ಯವಸ್ಥೆ. ಮೊದಮೊದಲಿಗೆ ಯಾರು ಯಾರ ಮಕ್ಕಳು ಅನ್ನುವುದೂ ಸರಿಯಾಗಿ ಗೊತ್ತಾಗದು. ಹೀಗೆ ಆಗಾಗ ಬಂದು ಹೋಗುವ ನಮ್ಮ ಮೇಲೆ ಆ ಕುಟುಂಬದ ಎಲ್ಲರ ಪ್ರೀತಿ ಒಂದೇ ಸಮ. ಮನೆಗೆ ಬಂದು ನಾಲ್ಕಾರು ದಿನವಿದ್ದರೂ ಹೊರಡುವ ದಿನ "ಈಗೇನು ಅವಸರ. ಇನ್ನೂ ಒಂದೆರಡು ದಿನ ಇದ್ದು ಹೋಗಬಹುದಲ್ಲ" ಎನ್ನುವ ಮಾತು. ಯಾವ ಸಮಯ, ಸಂದರ್ಭದಲ್ಲೂ ಮನಸ್ಸಿಗೆ ದುಗುಡ ಉಂಟುಮಾಡುವ ಪರಿಸ್ಥಿತಿ ಇಲ್ಲ. ಅಂತಹ ಸುಂದರ ವಾತಾವರಣ. 

ನಾವು ಬೆಳಿಗ್ಗೆ ಸರಿಯಾಗಿ ಕಣ್ಣು ಬಿಡುವ ಸಮಯಕ್ಕಾಗಲೇ ಕೆಲಸಕ್ಕೆ ಹೋಗಿರುವವರು ಕೆಲವರು. ತಯಾರಾಗಿ ಶಾಲೆಗಳಿಗೆ ಹೊರಟಿರುವ ಮಕ್ಕಳು. ಅಡಿಗೆ ಮನೆಯಲ್ಲಿ ಸದಾ ಉರಿಯುತ್ತಿರುವ ಒಲೆಗಳು. ಯಾರು ಯಾರ ಉಪಚಾರ, ಯಾಗಕ್ಷೇಮ ನೋಡುತ್ತಿದ್ದಾರೆ ಎನ್ನುವುದು ತಿಳಿಯದು. ಒಟ್ಟಿನಲ್ಲಿ ಎಲ್ಲರೂ ಹಂಚಿಕೊಂಡು ಕೆಲಸಗಳನ್ನು ತೂಗಿಸುವವರು. ಒಬ್ಬರ ಕಾರ್ಯಕ್ರಮ ಇನ್ನೊಬ್ಬರಿಗೆ ಗೊತ್ತು. ಸರತಿಯಂತೆ ಸ್ನಾನದ ಕೋಣೆಯ ಉಪಯೋಗ. ಯಾರೋ ಬಾವಿಯಿಂದ ನೀರು ಸೇದಿ ತುಂಬುವರು. ಮತ್ಯಾರೋ ಉರುವಲು ಕಟ್ಟಿಗೆ ಜೋಡಿಸಿಡುವವರು. ಬೇಯಿಸುವವರೊಬ್ಬರು. ತೋಡಿ ಬಡಿಸುವವರೊಬ್ಬರು. ತಾಟು ತೆಗೆದು ಸಾರಿಸುವವರೊಬ್ಬರು. ಹೀಗೆ ನಡೆಯುವುದು. ಪ್ರತಿದಿನ. 

*****

ಅಣ್ಣ ಆ ವೇಳೆಗಾಗಲೇ ಲೌಕಿಕದಿಂದ ಅರ್ಧ ನಿವೃತ್ತ. ಸರಕಾರೀ ಕೆಲಸವೆಂದಲ್ಲ. ಒಟ್ಟಿನಲ್ಲಿ ಲೌಕಿಕದಿಂದ ವಿಮುಖ. ಕೃಷಿ ಭೂಮಿಯಿಂದ ಬಂದ ಬೆಳೆ, ಆದಾಯದಿಂದ ಜೀವನ. ಮತ್ತೆ ಅಲ್ಲಲ್ಲಿ ಸ್ವಲ್ಪ ಆದಾಯ. ಮಕ್ಕಳು ವಿದ್ಯಾವಂತರಾಗಿ ಉದ್ಯೋಗ ಹಿಡಿದಮೇಲೆ ಒಂದಷ್ಟು ಒತ್ತಾಸೆ. ಹೀಗೆ ಜೀವನ ನಿರ್ವಹಣೆ. ಅರ್ಧ ವಿರಕ್ತರಾದ ಮೇಲೆ ಗಮನ ಮುಂದಿನ ಸಾಧನೆಯ ಕಡೆಗೆ. ಬೆಳಗಿನ ಅರ್ಧ ಭಾಗ ಪೂಜೆ-ಪುನಸ್ಕಾರಗಳಿಗೆ ಮೀಸಲು. ನಂತರದ ಸಮಯ ಸುತ್ತ-ಮುತ್ತಲಿನ ಅವಿದ್ಯಾವಂತ ರೈತಾಪಿ ಜನರ ಕೆಲಸ-ಕಾರ್ಯಗಳಲ್ಲಿ ಸಹಯೋಗ. ಸಂಜೆಯ ಸಮಯ ಕುಟುಂಬದ ಪರಂಪರೆಯಿಂದ ಬಂದ ಗ್ರಂಥಗಳ ವಾಚನ ಮತ್ತು ಅಧ್ಯಯನ. ರಾತ್ರಿ ಅಲ್ಪ ಉಪಹಾರಕ್ಕೆ ಮೊದಲು ಒಂದು ಸಣ್ಣ ಪೂಜೆ. ದೊಡ್ಡ ಪಾರಾಯಣ. ನಂತರ ರಾತ್ರಿಯ ವಿಶ್ರಾಂತಿ. ಹೀಗೆ ದಿನಚರಿ. 

ತೊರವೆಯ ರಾಮಾಯಣ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಶ್ರೀಮದ್ಭಾಗವತ ಮುಂತಾದ ಗ್ರಂಥಗಳ ಭಾಗಗಳ ವಾಚನ ಮತ್ತು ವ್ಯಾಖ್ಯಾನ ಸಂಜೆಯ ಹೊತ್ತು ನಡೆಯುವುದು. ಸುತ್ತ-ಮುತ್ತಲ ಹತ್ತಾರು ಜನರು ಆ ಸಮಯಕ್ಕೆ ತಪ್ಪದೇ ಬರುವರು. ಎಲ್ಲವೂ ಕ್ರಮವಾಗಿ ನಡೆಯಬೇಕು. ಪ್ರತಿಯೊಂದು ಗ್ರಂಥ ವಾಚನ ಪೂರ್ತಿಯಾದ ಮೇಲೆ ಅದಕ್ಕೊಂದು "ಮಂಗಳ" ಕಾರ್ಯಕ್ರಮ. ಸಮಾರಂಭ ಮತ್ತು ಸಂತರ್ಪಣೆ. ಕೆಲವೊಮ್ಮೆ ಅವುಗಳಲ್ಲಿ ಭಾಗವಹಿಸಲು ಬಾಲಕರಾದ ನಮಗೂ ಅವಕಾಶ. ಹಬ್ಬದ ವಾತಾವರಣ. ಅವುಗಳ ಪೂರ್ತಿ ಅರ್ಥವ್ಯಾಪ್ತಿ ನಮಗೆ ಗೊತ್ತಾಗದಿದ್ದರೂ ಏನೋ ಒಂದು ವಿಶಿಷ್ಟ ಅನುಭವ. 

ತಮ್ಮ ಇದಕ್ಕೆ ವಿರುದ್ಧ. ಲೌಕಿಕದಲ್ಲಿ ಮಗ್ನ. ಎಲ್ಲರೂ ವಿರಕ್ತರಾಗಿ ಕುಳಿತರೆ ಜೀವನ ನಡೆಯಬೇಕಲ್ಲ. ಕೃಷಿ ಚಟುವಟಿಕೆ ಮತ್ತು ಸುತ್ತಲಿನ ಜನರ ಕೆಲಸ-ಕಾರ್ಯಗಳಿಗೆ ಸಹಕಾರ. ಮನೆಯ ಇತರ ಕಾರ್ಯಕ್ರಮಗಳಿಗೆ ಪೂರ್ತಿ ಬೆಂಬಲವಿದ್ದರೂ ಹೆಚ್ಚಿನ ಸಮಯ ಹೊರಗಡೆ ವ್ಯವಹಾರಗಲ್ಲಿ ಕಳೆಯುವುದು. ಸ್ವತಃ ಅಧ್ಯಯನ-ವಾಚನಗಳಲ್ಲಿ ಹೆಚ್ಚು ಸಮಯ ಕಳೆಯದಿದ್ದರೂ ಅನೇಕ ಗಹನ ವಿಚಾರಗಳಲ್ಲಿ ಆಳವಾದ ಪಾಂಡಿತ್ಯ. ಅವುಗಳ ವಿಷಯದಲ್ಲಿ ಮಾತಿಗೆ ಸಿಕ್ಕರೆ ಅಪರೂಪದ ಸಂಗತಿಗಳನ್ನು ಹೊರತಂದು ಇತರರನ್ನು ಚಕಿತರನ್ನಾಗಿಸುವ ಚತುರತೆ. 

***** 

ದೊಡ್ಡವರಿಂದ ತೊರವೆ ರಾಮಾಯಣ ವಾಚನ-ವ್ಯಾಖ್ಯಾನ ಸರಣಿ ಪೂರ್ತಿಯಾದ ನಂತರ ಒಂದು "ಮಂಗಳ ಕಾರ್ಯಕ್ರಮ". ದಸರೆಯ ರಜೆಯ ನಿಮಿತ್ತ ನಮಗೂ ಶಾಲೆಯಿಂದ ಬಿಡುವಿನ ಕಾರಣ ಆ ಮಂಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ. ಮೂರು ದಿನದ ಬಿಡಾರ ಅವರ ಮನೆಯಲ್ಲಿ. ಮೊದಲನೆಯ ದಿನ ಭಾನುವಾರ. ಬೆಳಿಗ್ಗೆ ರಾಮಾಯಣದ ಕಡೆಯ ಭಾಗದ ವಾಚನದಿಂದ ಕಾರ್ಯಕ್ರಮ ಕೊನೆಯಾಯಿತು. ನಂತರ ಮಂಗಳದ ಪೂಜೆ ಮುಂತಾದುವಗಳ ನಂತರ ಸಂತರ್ಪಣೆ. ಸಂಜೆ ಏನೂ ಇಲ್ಲದೆ ಸುಮ್ಮನೆ ಇರುವಂತಿಲ್ಲ. ವೃಥಾ ಕಾಲಹರಣ ಸಲ್ಲದು. ಆದ್ದರಿಂದ "ಕುಮಾರವ್ಯಾಸ ಭಾರತ ಕಥಾಮಂಜರಿ" ವಾಚನ ಪ್ರಾರಂಭ!

ಅವರ ವಾಚನ ಕಾರ್ಯಕ್ರಮದಲ್ಲಿ ಒಂದು ವಿಶೇಷತೆ. ಪ್ರತಿ ಪದ್ಯದ ಓದುವಿಕೆಯ ನಂತರ ಅವರೇ ಕೆಲಕಾಲ ಅದರ ಅರ್ಥವ್ಯಾಪ್ತಿ ಮತ್ತು ಸಂಬಂಧಿಸಿದ ವಿಷಯಗಳ ವಿವರಣೆ ಮಾಡುವರು. ನಂತರ ಅಲ್ಲಿದ್ದ ಕೇಳುಗರಿಗೆ ಪ್ರಶ್ನೆ ಕೇಳುವ ಅವಕಾಶ. ಆಗ ಅವರೋ, ಅಲ್ಲಿರುವ ಬೇರೆ ಯಾರೋ ಉತ್ತರ ಹೇಳಬಹುದು. ಹೀಗಾಗಿ ಅನೇಕರ ತಿಳುವಳಿಕೆಯ ವಿನಿಮಯಕ್ಕೆ ಅವಕಾಶ. ಸ್ವತಃ ಕ್ರಮವಾಗಿ ವಿದ್ಯಾಭ್ಯಾಸ ಮಾಡದಿದ್ದರೂ ಸಭಾಸದರ ಮಾತುಗಳು ಅಚ್ಚರಿ ಮೂಡಿಸುವಂತೆ ಇರುವುವು. 'ಕವಿರಾಜಮಾರ್ಗ" ಕರ್ತೃವಿನ "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್" ಎನ್ನುವ ಉದ್ಗಾರದ ಪ್ರತ್ಯಕ್ಷ ಅನುಭವ. 

ಕುಮಾರವ್ಯಾಸ ಭಾರತ ವಾಚನದ ಮೊದಲ ದಿನ. ಆದಿ ಪರ್ವದ "ಪೀಠಿಕಾ ಸಂಧಿ" ವಾಚನ. ಎರಡನೆಯ ಪದ್ಯ ಪಾರ್ವತೀರಮಣನಾದ ಪರಶಿವನ ಸ್ತುತಿ. ಆ ಪದ್ಯ ಹೀಗುಂಟು:

ಶರಣಸಂಗವ್ಯಸನ ಭುಜಗಾ 
ಭರಣನಮರ ಕಿರೀಟಮಂಡಿತ 
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ 
ಕರಣರ್ನಿರ್ಮಲ ಭಜಕರಘ ಸಂ 
ಹರಣ ದಂತಿ ಚಮೂರು ಚರ್ಮಾ೦
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ 

ಶಂಭುವೋ ಎಲ್ಲರಿಗೂ ಪ್ರಿಯನು. "ಚರ್ಮಾ೦ಬರ" ಎನ್ನುವುದರ ಬಗ್ಗೆ ಒಬ್ಬರು ಪ್ರಶ್ನೆ ಎತ್ತಿದರು. ಅದರ ಹಿಂದೆ ಇರುವ "ದಂತಿ" ಮತ್ತು "ಚಮೂರು" ಪದಗಳ ಚರ್ಚೆಯಾಯಿತು. ದಂತಿ ಎಂದರೆ ಸಂಸ್ಕೃತದಲ್ಲಿ ಆನೆ ಎಂದು. ದಂತವುಳ್ಳದ್ದು ದಂತಿ. ಆನೆಯ ದಂತಗಳು ಎಲ್ಲರಿಗೆ ಗೊತ್ತು. ಗಜಾಸುರ ಎನ್ನುವ ರಾಕ್ಷಸ ಆನೆಯ ರೂಪದಲ್ಲಿ ಸಜ್ಜನರಿಗೆ ತೊಂದರೆ ಕೊಡುತ್ತಿದ್ದ. ಶಂಕರನು ಅವನನ್ನು ಕೊಂದು ಅವನ ಚರ್ಮವನ್ನು ಸುಲಿದು ಮೈಗೆ ಸುತ್ತಿಕೊಂಡ ಎಂದು ಕಥೆ. ಚಮೂರು ಅನ್ನುವುದು ಹಿಮಾಲಯದಂತಹ ಪ್ರದೇಶಗಳಲ್ಲಿ ಕಂಡುಬರುವ ಜಿಂಕೆಯ ರೀತಿಯ ಒಂದು ಮೃಗ. "ಚಮರೀ ಮೃಗ" ಅನ್ನುತ್ತಾರೆ ("ಯಾಕ್" ಮೃಗ). ಅದರ ಚರ್ಮವೂ ಅವನಿಗೆ ಆಗಬಹುದು. ಪಟ್ಟೆ-ಪೀತಾಂಬರಗಳ ಹವ್ಯಾಸವಿಲ್ಲ. ಶ್ರೀಹರಿಯಂತೆ 'ಸಪೀತವಸ್ತ್ರ" ಅಥವಾ "ಕನಕಾಂಬರಧಾರಿ" ಅಲ್ಲ. ಹೀಗೆ ಅರ್ಥವ್ಯಾಪ್ತಿ. ಸದಾಶಿವನು ವೈರಾಗ್ಯ ಮೂರ್ತಿ. ಬೂದಿಯೇ ಆಭರಣ. ಉಡುಗೆ-ತೊಡುಗೆಗಳಲ್ಲಿ ಆಸಕ್ತಿ ಇಲ್ಲ. ಹೀಗೆ ಚರ್ಚೆ ನಡೆಯಿತು. 

ಮೊದಲ ಎರಡು ಪದ್ಯಗಳ ವಾಚನ-ಚರ್ಚೆಯಲ್ಲಿ ಅಂದಿನ ಕಾರ್ಯಕ್ರಮ ಮುಗಿಯಿತು. 

*****

ಮಾರನೆಯ ದಿನ ಸೋಮವಾರ. ಬೆಳಿಗ್ಗೆ ಎದ್ದಾಗ ಅಪರೂಪಕ್ಕೆ ಚಿಕ್ಕವರು (ತಮ್ಮ) ಸಿಕ್ಕರು.  ಸೋಮವಾರ ಪರಶಿವನ ದಿನ. ಅವಧೂತರೊಬ್ಬರು ಪಕ್ಕದ ಗುಡ್ಡದ ಮೇಲೆ ಒಂದು ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರದು ಸೋಮವಾರ ವಿಶೇಷ ಪೂಜೆ. ಇವರು ಹೊರಟಿದ್ದರು. ನನ್ನನ್ನು ಕಂಡು ನಿಂತರು. 

"ಈದಿನ ಬೆಳಿಗ್ಗೆ ಏನು ನಿನ್ನ ಕಾರ್ಯಕ್ರಮ?'

"ಏನಿಲ್ಲ. ಸುಮ್ಮನೆ ಕಾಲ ಕಳೆಯುವುದು. ಸಂಜೆಯ ವಾಚನದವರೆಗೆ"

"ಗುಡ್ಡದ ಅವಧೂತರ ಕಾರ್ಯಕ್ರಮಕ್ಕೆ ಬರಬಹುದಲ್ಲ?"

"ಬರಬಹುದಾದರೆ ಬರುತ್ತೇನೆ"

"ಬೇಗ ತಯಾರಾಗಿ ಬಾ"

ಅಲಂಕಾರ ಮಾಡಿಕೊಳ್ಳುವ ಅವಶ್ಯಕತೆಯಿರಲಿಲ್ಲ. ತಕ್ಷಣ ಹೊರಟೆ. ಅವರೊಡನೆ ಮಾತಾಡುತ್ತಿದು ಬಹಳ ಕಡಿಮೆ. ದೊಡ್ಡವರಂತೆ ಸಲಿಗೆ ಇರಲಿಲ್ಲ. ಸ್ವಲ್ಪ ಸಂಕೋಚವೇ. ಗುಡ್ಡಕ್ಕೆ ಸುಮಾರು ಇಪ್ಪತ್ತು ನಿಮಿಷಗಳ ನಡಿಗೆ. ಹೆಜ್ಜೆ ಹಾಕಿದೆವು. 

"ನಿನ್ನಿನ ವಾಚನದಲ್ಲಿ ಏನು ವಿಶೇಷ?"

"ಮುಖ್ಯವಾಗಿ "ಚರ್ಮಾ೦ಬರ" ಎನ್ನುವುದರ ಬಗ್ಗೆ ಚರ್ಚೆ ನಡೆಯಿತು"

"ಚರ್ಮಾ೦ಬರ" ಎನ್ನುವುದರಲ್ಲಿ ಇನ್ನೂ ಏನಾದರೂ ವಿಶೇಷವಿದೆಯೋ?"

"ಅಂದರೆ ಅರ್ಥವಾಗಲಿಲ್ಲ"

"ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಎಂದು ಕೇಳಿದ್ದೆಯಲ್ಲ?"

"ಕೇಳಿದ್ದೇನೆ"

"ಬುದ್ಧಿ ಇರುವುದು ಎಲ್ಲಿ?"

"ತಲೆಯಲ್ಲಿ. ಮೆದುಳಿನಲ್ಲಿ"

"ಮನಸ್ಸು ಇರುವುದು ಎಲ್ಲಿ?"

ಉತ್ತರ ಗೊತ್ತಿರಲಿಲ್ಲ. ಸುಮ್ಮನಾದೆ. 

"ನನ್ನ ಮನಸ್ಸು ಅನ್ನುತ್ತೇವೆ. ಅದು ನಮ್ಮ ಬಳಿಯೇ ಇರಬೇಕಲ್ಲ?"

"ಹೌದು"

"ಹಾಗಿದ್ದರೆ, ಅದಕ್ಕೆ ನಮ್ಮ ದೇಹದಲ್ಲಿ ಎಲ್ಲಿ ಜಾಗ? ಹೃದಯ ಎದೆ ಗೂಡಿನ ಎಡದಲ್ಲಿದೆ ಅನ್ನುತ್ತೇವೆ. ಮಾತು ನಾಲಗೆಯಲ್ಲಿ ಅನ್ನಬಹುದು. ಬುದ್ಧಿ ಮೆದುಳಿನಲ್ಲಿದೆ. ಅದು ತಲೆಯಲ್ಲಿದೆ ಅನ್ನುತ್ತೇವೆ. ಮನಸ್ಸಿಗೆ ಎಲ್ಲಿ ಜಾಗ?"

"ಅದೂ ತಲೆಯಲ್ಲಿಲ್ಲವೇ?'

"ಮನಸ್ಸು ಒಂದು ಕಡೆ ಸುಮ್ಮನೆ ಕೂಡುವುದಲ್ಲ. ಮನಸ್ಸು ಸರ್ವವ್ಯಾಪಿ. ಅದು ದೇಹದಲ್ಲೆಲ್ಲಾ ಆವರಿಸಿದೆ"

"ಸರಿ ಅನ್ನಿಸುತ್ತದೆ"

"ಮಹಾರುದ್ರದೇವರು ಮನೋಭಿಮಾನಿ. ಮನಸ್ಸನ್ನು ನಿಯಂತ್ರಿಸುವವರು. ಆದ್ದರಿಂದ ಅವರು ಮನಸ್ಸು ಇರುವ ಎಲ್ಲೆಡೆ, ಅಂದರೆ ನಮ್ಮ ದೇಹದ ಎಲ್ಲ ಕಡೆಗಳಲ್ಲಿಯೂ ವ್ಯಾಪಿಸಿದ್ದಾರೆ"

"............... "

"ದೇಹದ ಎಲ್ಲೆಡೆ ಅವರು ವ್ಯಾಪಿಸಿರುವುದರಿಂದ ಅವರ ಹೊರಗಡೆ ಇರುವುದು ಏನು?"

"ನಮ್ಮ ದೇಹದ ಹೊರಗಡೆ, ಎಲ್ಲಕಡೆ ನಮ್ಮ ಚರ್ಮವಿದೆ"

"ಅಂದರೆ ಅವರು ಧರಿಸಿರುವುದು ನಮ್ಮ ಚರ್ಮವೇ ಅನ್ನಬಹುದೇ?"

"ಹಾಗೆ ಹೇಳಬಹುದು"

"ಆದ್ದರಿಂದ ಮನೋಭಿಮಾನಿ ರುದ್ರ ದೇವರು "ಚರ್ಮಾ೦ಬರ" ಅಲ್ಲವೇ?"

"ಹೌದು. ಇದು ನನಗೆ ಹೊಳದೇ ಇರಲಿಲ್ಲ"

"ಸಾಮಾನ್ಯವಾಗಿ ಹೊಳೆಯುವುದಿಲ್ಲ. ಒಮ್ಮೆ ಅವಧೂತರು ನನಗೆ ಹೀಗೆ ಹೇಳಿದರು"

"ಹಾಗಿದ್ದರೆ ನಿನ್ನೆ ಮಾಡಿದ ಚರ್ಚೆ ಅರ್ಥ ತಪ್ಪೇ?"

"ಖಂಡಿತವಾಗಿಯೂ ತಪ್ಪಲ್ಲ. ಆದರೆ, ಅದು ಹೊರಗಿನ, ಅಂದರೆ ಬ್ರಹ್ಮಾಂಡದ ದೃಷ್ಟಿಯ ಅರ್ಥ. ಇದು ಒಳಗಿನ, ಅಂದರೆ ಪಿಂಡಾಂಡದ ದೃಷ್ಟಿಯ ಅರ್ಥ"

"ಬಲು ಚಮತ್ಕಾರಿಕವಾಗಿದೆ"

"ಮೊದಲು ಹಾಗೆನ್ನಿಸುವುದು. ತಿಳಿದವರ ಜೊತೆ ಸಂಗ ಮಾಡಿದಾಗ ಅನೇಕ ಒಳ ಅರ್ಥಗಳು ತೆರೆದುಕೊಳ್ಳುತ್ತವೆ"

ಅವಧೂತರ ಆಶ್ರಮ ಬಂದಿತು. ಒಳಗೆ ಹೋದೆವು. 

*****

ಯಾರಾದರೂ "ಕುಮಾರವ್ಯಾಸ ಭಾರತ ಓದಿದ್ದೀರಾ?" ಎಂದು ಕೇಳಿದರೆ "ಒಹೋ, ನಾಲ್ಕು ಬಾರಿ ಓದಿದ್ದೇನೆ" ಎನ್ನುತ್ತೇವೆ. ಓದಿರಬಹುದು. ನಿಜ. ಎಷ್ಟು ಅರ್ಥವಾಯಿತು? ಒಂದು ಪದ್ಯದ ಒಂದು ಪದಕ್ಕೆ ಇಷ್ಟು ವ್ಯಾಖ್ಯಾನ ತಿಳಿದವರು ಮಾಡುತ್ತಾರೆ. ನಿಜವಾಗಿ ನಮಗೇನು ಗೊತ್ತು? ಎಷ್ಟು ಗೊತ್ತು? 

ಅಧ್ಯಯನ ಹೆಚ್ಚಿದಂತೆಲ್ಲಾ ಅರಿವು ಬೆಳೆದು ಅಹಂಕಾರ ಕ್ರಮೇಣ ಕರಗವುದು. ತಿಳಿದಿರುವುದು ಗುಲಗಂಜಿಯಷ್ಟು. ಎದುರಿಗಿರುವುದೋ ಹಿಮಾಲಯ!

Saturday, July 5, 2025

ಮನಸ್ಸು ಮತ್ತು ಗಜಚರ್ಮಾ೦ಬರಧರ


ಹಿಂದಿನ ಒಂದು ಸಂಚಿಕೆಯಲ್ಲಿ "ಮನವ ಕಬ್ಬಿಣ ಮಾಡು, ಹೇ ಮೃಡನೇ" ಎನ್ನುವ ಶೀರ್ಕಿಕೆಯಡಿ, ಜನಪ್ರಿಯ ರುದ್ರ-ಚಮಕಗಳ ಮೂಲಕ ಮಾಡುವ ಆರಾಧನೆಯಲ್ಲಿ ಶ್ರೀಶಂಭುವಿನ ಬಳಿ ಅನೇಕ ಲೌಕಿಕ ಸಂಪತ್ತುಗಳನ್ನು ಕೇಳುವುದರ ಔಚಿತ್ಯವನ್ನು ಪ್ರಶ್ನಿಸಿಕೊಂಡು ಅದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಅದರ ಕೊನೆಯಲ್ಲಿ "ಮನಸು ಕಾರಣವಲ್ಲ" ಮತ್ತು "ದನುಜ ಗಜ ಮದಹಾರಿ" ಎಂಬ ಎರಡು ಅಭಿವ್ಯಕಿಗಳಿಗೆ  ವಿಶೇಷಾರ್ಥಗಳನ್ನು ನೋಡುವ ಪ್ರಯತ್ನ ಮಾಡಬೇಕಿತ್ತು. ಈಗ ಅದನ್ನಿಷ್ಟು ನೋಡೋಣ. 

*****

ರುದ್ರದೇವರು ಮನೋಭಿಮಾನಿಗಳು. ನಮ್ಮ ಮನಸ್ಸು ನಾವು ಮಾಡುವ ಎಲ್ಲ ಕೆಲಸ-ಕಾರ್ಯಗಳಿಗೂ ಮೂಲ ಶಕ್ತಿ. ಎಲ್ಲ ರೀತಿಯ ಸಾಧನ-ಸಲಕರಣೆಗಳಿದ್ದರೂ ಮನಸ್ಸು ಕೆಲಸ ಮಾಡದಿದ್ದರೆ ಮನುಷ್ಯನು ನಿಷ್ಕ್ರಿಯನಾಗುತ್ತಾನೆ. ಅದೇ ರೀತಿ ಕೆಲವು ಅವಶ್ಯಕ ಸಂಪತ್ತುಗಳಿಲ್ಲದಿದ್ದರೂ ಕೂಡ ಮನುಷ್ಯನು ಮನಸ್ಸು ಮಾಡಿದರೆ ಅವುಗಳನ್ನು ಹೇಗೋ ಹೊಂದಿಸಿಕೊಂಡು, ಅಥವಾ ಅವುಗಳಿಗೆ ಪರ್ಯಾಯ ಪರಿಕರಗಳನ್ನು ಹುಡುಕಿಕೊಂಡು, ಉದ್ದೇಶಿತ ಕೆಲಸಗಳನ್ನು ಸಾಧಿಸುತ್ತಾನೆ.  ಇದು ನಾವು ನಮ್ಮ ನಮ್ಮ ಅನುಭವಗಳಿಂದ ಕಂಡುಕೊಂಡಿರುವ ಸತ್ಯ. 

"ನೀನು ಮನಸ್ಸು ಮಾಡಿದರೆ ಇದನ್ನು ಸುಲಭವಾಗಿ ಮಾಡಿ ಮುಗಿಸುವೆ. ಮುಖ್ಯ, ನೀನು ಮನಸ್ಸು ಮಾಡಬೇಕು" ಎನ್ನುವ ಮಾತನ್ನು ನಾವು ಮತ್ತೆ ಮತ್ತೆ ಆಡುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. "ಎಷ್ಟು ಹೇಳಿದರೂ ಅವನು ಮನಸ್ಸು ಮಾಡಲಿಲ್ಲ. ಕೆಲಸ ಆಗಲಿಲ್ಲ" ಅನ್ನುತ್ತೇವೆ. "ವೇರ್ ದೇರ್ ಈಸ್ ಎ ವಿಲ್, ದೇರ್ ಈಸ್ ಎ ವೇ" ಎಂದು ಇಂಗ್ಲಿಷಿನಲ್ಲಿ ಹೇಳುವುದೂ ಇದನ್ನೇ. "ಮನ ಏವ ಮನುಷ್ಯಾಣಾ೦ ಕಾರಣಂ ಬಂಧ ಮೊಕ್ಷಯೋ:" ಎನ್ನುವುದಂತೂ ಬಹಳ ಪ್ರಸಿದ್ಧವಾದ ನುಡಿ. ಮನುಷ್ಯನ ಕರ್ತೃತ್ವ ಶಕ್ತಿಗೆ ಮನಸ್ಸೇ ಕೀಲಿಕೈ. ಮನಸ್ಸು ಈ ಕಡೆ ತಿರುಗಿದರೆ ಅದನ್ನು ಮುಚ್ಚಿ ಬೀಗ ಹಾಕುತ್ತದೆ. ಆ ಕಡೆ ತಿರುಗಿದರೆ ಅದನ್ನು ತೆಗೆದು ದಾರಿಮಾಡುತ್ತದೆ. ನಮ್ಮ ಕೈಯಲ್ಲಿ ಇರುವ ಮತ್ತು ಸಿಕ್ಕುವ ಎಲ್ಲ ಶಕ್ತಿಗಳಲ್ಲಿ ಅತ್ಯಂತ ಪ್ರಮುಖವಾದವುಗಳಲ್ಲಿ  ಮನಸ್ಸು ಒಂದು ಮುಖ್ಯ ಶಕ್ತಿ. 

ನಾವು ಮಾಡುವ ಕೆಲಸಗಳು ಸರಿಯಾಗಿ, ನೇರವಾಗಿ, ಸಾರ್ಥಕವಾದರೆ, ನ್ಯಾಯಯುತವಾಗಿದ್ದರೆ ಅವುಗಳಿಂದ ಪುಣ್ಯ ಸಂಪಾದನೆ. ಅನ್ಯಾಯದ, ಅಧರ್ಮದ ಕೆಲಸಗಳಾದರೆ ಅವುಗಳಿಂದ ಪಾಪ ಸಂಪಾದನೆ. ಪಾಪ, ಪುಣ್ಯಗಳೆಂಬುವು ಮಾಡುವ ಕೆಲಸಗಳಿಂದ ಬಂದ ಫಲಿತಾಂಶಗಳು. ಆದ್ದರಿಂದಲೇ ಈ ರೀತಿ ಹೇಳುವುದು:

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ 
ಅನಲಾಕ್ಷ ನಿನ್ನ ಪ್ರೇರಣೆ ಇಲ್ಲದೇ 
ದನುಜಗಜ ಮದಹಾರಿ ದಂಡ ಪ್ರಣಾಮ ಮಾಳ್ಫೆ   
ಮಣಿಸೋ ಈ ಶಿರವನ್ನು ಸಜ್ಜನರ ಚರಣದಲಿ 
 
ಹೀಗಿರುವಲ್ಲಿ, ಮೇಲೆ ಏಕೆ "ಮನಸು ಕಾರಣವಲ್ಲ" ಎಂದು ಹೇಳಿರುವುದು? ಇದೊಂದು ವಿಚಿತ್ರ ಅಲ್ಲವೇ? ಇದು ಒಂದು ಸಾಧುವಾದ ಪ್ರಶ್ನೆಯೇ.  ಪಾಪ ಪುಣ್ಯಕ್ಕೆಲ್ಲಾ ಮನಸ್ಸೇ ಕಾರಣ ಎನ್ನುವುದು ಸರಿ. ಆದರೆ ಮನಸ್ಸು ಒಂದು ವಾಹನವಿದ್ದಂತೆ. ವಾಹನ ಸರಿಯಾಗಿ ನಡೆದರೆ ಅದರಿಂದ ಪ್ರಯೋಜನ. ಅದೇ ವಾಹನ ಅಡ್ಡಾದಿಡ್ಡಿಯಾಗಿ ನಡೆದು ಅಪಘಾತ ಮಾಡಿದರೆ? ಆಗ ವಾಹನದಿಂದ ಆಗುವ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಆದರೆ ಅದು ಅಪಘಾತ ಮಾಡಿದರೆ ಅದಕ್ಕೆ ವಾಹನ ಹೊಣೆ ಅಲ್ಲ. ಒಂದು ಕಾರು ರಸ್ತೆಯಲ್ಲಿ ನಡೆಯುತ್ತಿರುವ ಜನಗಳ ಮೇಲೆ ಹಾದು ಹೋಯಿತು ಎಂದರೆ ಅದು ಕಾರಿನ ತಪ್ಪಲ್ಲ. ಅದು ಅದನ್ನು ನಡೆಸುತ್ತಿರುವ ಚಾಲಕನ ಹೊಣೆ. ಹೀಗೆಯೇ ಮನಸ್ಸಿನ ಕೆಲಸಗಳಿಗೆ ಅದರ ಒಡೆಯನಾದ ಜೀವನೇ ಹೊಣೆ ಹೊರಬೇಕು. 

ಯಾವುದೋ ಒಂದು ಅಪಘಾತವಾದಾಗ ಸಂಬಂಧಿಸಿದ ವಾಹನದ ಚಾಲಕನು "ನನಗೇನೂ ಗೊತ್ತಿಲ್ಲ. ನಾನೇನು ಮಾಡಲಿ? ಕಾರು ಅಡ್ಡಾದಿಡ್ಡಿ ಚಲಿಸಿತು. ಅಪಘಾತಕ್ಕೆ ಅದೇ ಕಾರಣ. ಅದನ್ನೇ ಕೇಳಿ. ನನ್ನನ್ನೇನು ಕೇಳುತ್ತೀರಿ?" ಎಂದು ಹೇಳಿದರೆ ಕೇಳಿದವರು ನಗುತ್ತಾರೆ. ಮನಸ್ಸಿನ ವಿಷಯವೂ ಹೀಗೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಅದರಿಂದ ಪ್ರಯೋಜನ ಪಡೆಯುವುದು ಜೀವನ ಜವಾಬ್ದಾರಿ. ಚಾಲಕನು ವಾಹನವನ್ನು ಅಂಕೆಯಲ್ಲಿಟ್ಟುಕೊಂಡು ಸರಿಯಾಗಿ ನಡೆಸಬೇಕು. ಹೀಗೆ ಸರಿಯಾಗಿ ನಡೆಸಲು ತಿಳಿದವರಿಂದ ವಾಹನ ಚಾಲನೆ ಮೊದಲು ಕಲಿಯಬೇಕು. ಟ್ರ್ಯಾಫಿಕ್ ಸಿಗ್ನಲ್ಲುಗಳು ಸರಿಯಾಗಿ ಕೆಲಸ ಮಾಡಬೇಕು. ವಾಹನಗಳು ಸುಸ್ಥಿತಿಯಲ್ಲಿರಬೇಕು. ಮನಸ್ಸಿನೆಂಬ ವಾಹನ ನಡೆಸಲು ಕಲಿಸುವ ಪ್ರಭುಗಳು ಮಹಾರುದ್ರದೇವರು. ನಿಯಮಗಳಿಗೆ ವಿರುದ್ಧವಾಗಿ ಹೋಗದಂತೆ, ಸರಿದಾರಿಯಲ್ಲಿ ನಡೆಯುವಂತೆ ಮೇಲ್ವಿಚಾರಣೆ ಮಾಡುವವರು ಅವರು. ಚಾಲಕನು ಕಲಿಸುವ ಗೈಡನ್ನು ಪಕ್ಕದಲ್ಲಿ ಕೂಡಿಸಿಕೊಂಡರೆ ಅಪಘಾತ ಆಗುವ ಸಂದರ್ದಗಳಲ್ಲಿ ಅವರು ಅವನ್ನು ನಿವಾರಣೆ ಮಾಡುತ್ತಾರೆ. ಅವರ ಪ್ರಾರ್ಥನೆ ಮಾಡಿ, ಅವರ ಮೇಲ್ವಿಚಾರಣೆಯಲ್ಲಿ ಮನಸ್ಸೆಂಬ ವಾಹನ ನಡೆಸಿದರೆ ದುರ್ಘಟನೆಗಳು ಆಗುವುದಿಲ್ಲ. 

ಮನಸ್ಸು ಸರಿದಾರಿಯಲ್ಲಿ ಹರಿಯಬೇಕಾದರೆ ಏನು ಮಾಡಬೇಕು? ಕೆಟ್ಟವರ ಸಹವಾಸ ಮಾಡಿದರೆ ಮನಸ್ಸು ಕೆಡುತ್ತದೆ. ಅದೇ ಒಳ್ಳೆಯವರ ಜೊತೆ ಸಿಕ್ಕರೆ ಮನಸ್ಸು ಒಳ್ಳೆಯ ನಡತೆ ತೋರಿಸುತ್ತದೆ. ಹೀಗೆ ಸಜ್ಜನರ ಜೊತೆ ಸಿಗುವಂತೆ ಮಾಡುವವರು ಮಹಾದೇವರು. ಈ ಹಿನ್ನೆಲಿಯಲ್ಲಿ "ಪಾಪ-ಪುಣ್ಯಕ್ಕೆಲ್ಲ ಮನಸು ಕಾರಣವಲ್ಲ. ನಿನ್ನ ಪ್ರೇರಣೆ ಮುಖ್ಯ. ನನ್ನನ್ನು ಸತ್ಕಾರ್ಯಗಳಲ್ಲಿ ಪ್ರೇರೇಪಿಸು. ಈ ಮನಸ್ಸು ರಸ್ತೆಯ ಅಕ್ಕ-ಪಕ್ಕದ ಹಳ್ಳ-ಕೊಳ್ಳಗಳೊಳಗೆ ಬೀಳದಂತೆ ತಡೆ. ಯಾವಾಗಲೂ ನನ್ನನ್ನು ರಕ್ಷಿಸು" ಎಂದು ಹೇಳುವುದು ಮೇಲಿನ ಪ್ರಾರ್ಥನೆಯ ತಿರುಳು. 

*****

ಪರಶಿವನ ಆರಾಧನೆ ಮಾಡುವಾಗ ಅವನ ಅನೇಕ ಹೆಸರುಗಳನ್ನೂ, ವಿಶೇಷಣಗಳನ್ನೂ  ಉಪಯೋಗಿಸುತ್ತೇವೆ. ಹೀಗೆ ಅವನ ಅನೇಕ ಹೆಸರುಗಳನ್ನು ಹೇಳುವಾಗ "ಕೃತ್ತಿವಾಸ" "ಚರ್ಮಾ೦ಬರ" "ಚರ್ಮಾ೦ಬರಧರ" 'ಗಜಚರ್ಮಾ೦ಬರಧರ" ಮುಂತಾಗಿ ಹೇಳುತ್ತೇವೆ. ಏಕೆ? "ದನುಜ ಗಜ ಮದಹಾರಿ" ಎಂದು ಏಕೆ ಹೇಳಿದರು? 

ಅನೇಕ ಜನ ರಕ್ಕಸರು ಸಜ್ಜನರ ಹಿಂಸಕರಾಗಿ ಅವರ ಜೀವನಗಳಿಗೆ ಉಪದ್ರವ ಕೊಡುವುದೇ ವೃತ್ತಿ ಮಾಡಿಕೊಂಡಿದ್ದರು. ಈಗಲೂ ಇದ್ದಾರೆ. ಇಂತಹ ದನುಜರ ಉಪಟಳದಿಂದ ತಮ್ಮನ್ನು ರಕ್ಷಿಸಲು ಸುಜೀವರು ರುದ್ರದೇವರನ್ನು ಪ್ರಾರ್ಥಿಸುತ್ತಾರೆ. ಶಂಭುವು ಸುರಗುರುವು. ಹಿಂದೆ ಒಬ್ಬ ರಾಕ್ಷಸನು ಸಜ್ಜನರಿಗೆ ಬಹಳ ತೊಂದರೆಯನ್ನು ಕೊಡುತ್ತಿದ್ದ. ಆಗಾಗ ಆನೆಯ ರೂಪವನ್ನು ಧರಿಸಿ ಮದಿಸಿದ ಆನೆ ಮನಸ್ಸು ಬಂದಂತೆ ಎಲ್ಲ ಕಡೆ ಧಾಂಧಲೆ ಮಾಡುವಂತೆ ನಡೆದುಕೊಳ್ಳುತ್ತಿದ್ದ. ಆರ್ತ ಭಕ್ತರ ಮನವಿಗೆ ಸ್ಪಂದಿಸಿ ಮಹಾದೇವನು ಆ ಗಜಾಸುರನನ್ನು ಕೊಂದನು. ಅವನ ಚರ್ಮವನ್ನು ಸುಲಿದು ಅದನ್ನೇ ವಸ್ತ್ರದಂತೆ ಧರಿಸಿ "ಒಳ್ಳೆಯ ಜೀವಿಗಳಿಗೆ ಕಷ್ಟ ಕೊಡುವ ದುರುಳರಿಗೆ ಇದೇ ಗತಿ" ಎಂದು ಮಾದರಿ ಮಾಡಿ ತೋರಿಸಿದನು. ಮದಿಸಿದ ಆನೆಯ ರೂಪದ ಗಜಾಸುರನ ಸೊಕ್ಕನ್ನು ಅಡಗಿಸಿ ಕೊಂದುದರಿಂದ "ದನುಜ ಗಜ ಮದ ಹಾರಿ" ಆದನು. ಚರ್ಮವನ್ನು ಹೊದ್ದುದರಿಂದ "ಚರ್ಮಧಾರಿ" ಆದನು. ಆನೆಯ ಚರ್ಮವಾದುದರಿಂದ "ಗಜಚರ್ಮಾ೦ಬರಧರ" ಎಂದು ಹೆಸರಾಯಿತು. 

"ವಲುವೂರು" ಎನ್ನುವ ಹೆಸರಿನ ಸ್ಥಳ ತಮಿಳುನಾಡಿನ "ಮಯಿಲಾಡುತುರೈ" (ಹಿಂದಿನ "ಮಾಯಾವರಂ") ಜಿಲ್ಲೆಯ ಒಂದು ಊರು. ಜಿಲ್ಲಾಕೇಂದ್ರದಿಂದ ಆರು ಮೈಲಿ ದೂರದ ಸಣ್ಣ ಪಟ್ಟಣ. ಇಲ್ಲರುವ ದೇವಾಲಯದಲ್ಲಿ ಎಂಟು ಕೈಗಳುಳ್ಳ "ಗಜಾಸುರಸಂಹಾರಿ" ಈಶ್ವರನ ಕಂಚಿನ ಪ್ರತಿಮೆಯನ್ನು ಆರಾಧಿಸುತ್ತಾರೆ. ಕರ್ನಾಟಕದ ಹೆಸರಾಂತ ಹಳೇಬೀಡಿನ "ಶಾಂತಲೇಶ್ವರ" ದೇವಾಲಯದಲ್ಲಿ ಗಜಾಸುರಸಂಹಾರಿ ಪ್ರತಿಮೆಯ ಕೆತ್ತನೆಯಿದೆ. ಪಕ್ಕದ ಚಿತ್ರದಲ್ಲಿ ಅದನ್ನು ನೋಡಬಹುದು. 

ಮಹೇಶ್ವರನು ಕೇವಲ ದುಷ್ಟರ ಶಿಕ್ಷೆಗೆ ಮಾತ್ರವಲ್ಲದೆ ಒಳ್ಳೆಯವರಿಗೆ  ಬಹುಪ್ರೀತಿ ತೋರಿಸುವ ಕರುಣಾಳು. ಉಮಾಪತಿಗೆ ಕೆಟ್ಟವರನ್ನು ಕಂಡರೆ ಎಷ್ಟು ಕೋಪವೋ, ಒಳ್ಳೆಯವರನ್ನು ಕಂಡರೆ ಅಷ್ಟೇ ಪ್ರೀತಿ. "ಖಳಜನ ಕೃತರೋಷ:". ಹಾಗೆಯೇ "ಭಕ್ತಜನಾಶ್ರ್ರಯ ವರದ". ಪೊಲೀಸು ಅಧಿಕಾರಿಗೆ ಕಳ್ಲರು ಹೆದರುವಂತೆ ದುಷ್ಟರು ಅವರನ್ನು ಕಂಡರೆ ಹೆದರುತ್ತಾರೆ. ಸಜ್ಜನರು ರಕ್ಷಣೆಗೆ ಅವರ ಮೊರೆ ಹೋಗುತ್ತಾರೆ. 

*****

ದೇವೇಂದ್ರನು ಎಲ್ಲ ದೇವತೆಗಳಿಗೆ ಅಧಿಪತಿಯು. ಸಕಲ ಮಂತ್ರಪೂತ ಅಸ್ತ್ರಗಳೂ ಅವನ  ಬಳಿ ಇವೆ. ಯಾವ ಅಸ್ತ್ರ ಬೇಕಾದರೂ ಅವನನ್ನೇ ಕೇಳಬೇಕು. ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ತಯಾರಾಗಲು ಅರ್ಜುನನು ವನವಾಸ ಕಾಲದಲ್ಲಿ ಅಸ್ತ್ರಗಳ ಶೇಖರಣೆಗೆ ಹೊರಡುತ್ತಾನೆ. ತಪಸ್ಸಿನಿಂದ ದೇವೇಂದ್ರನನ್ನು ಮೆಚ್ಚಿಸುತ್ತಾನೆ. ಅಸ್ತ್ರಗಳನ್ನು ಕೇಳುತ್ತಾನೆ. ದೇವೇಂದ್ರನು ಅರ್ಜುನನು ತನ್ನ ಮಗನಾದರೂ ಅವನಿಗೆ ಕೊಡುವುದಿಲ್ಲ. "ಎಲ್ಲ ಅಸ್ತ್ರಗಳೂ ನನ್ನ ಬಳಿ ಇವೆ.  ಆದರೆ ನಾನು ಅವುಗಳ ನ್ಯಾಸಾಧಿಕಾರಿ (ಟ್ರಸ್ಟಿ) ಇರುವಂತೆ. ಮಹಾದೇವರು ಅವುಗಳ ಒಡೆಯರು. ಅವರ ಅಪ್ಪಣೆ ಇಲ್ಲದೆ ನಾನು ಕೊಡುವುದಿಲ್ಲ. ಮೊದಲು ಅವರನ್ನು ಮೆಚ್ಚಿಸಿ ಅವರ ಪ್ರೀತಿ ಸಂಪಾದಿಸು. ಅವರಿಂದ "ಪಾಶುಪತ" ಅನ್ನುವ ಅಸ್ತ್ರವನ್ನು ಪಡೆದುಕೋ. ನಂತರ ಅವರ ಅಪ್ಪಣೆಯಾಗುವುದರಿಂದ ನಾನು ಬೇರೆ ಎಲ್ಲ ಅಸ್ತ್ರಗಳನ್ನೂ ಕೊಡುತ್ತೇನೆ" ಅನ್ನುತ್ತಾನೆ. 

ಅಂತಹ ದೇವೆತೆಗಳ ಅಧಿಪತಿಗೂ ದಳಪತಿಗಳಾದವರು ಮಹಾರುದ್ರದೇವರು. 

Sunday, June 29, 2025

ಮನವ ಕಬ್ಬಿಣ ಮಾಡು, ಹೇ ಮೃಡನೇ!


"ದೇವರಲ್ಲಿ ಬೇಡುವುದು ಸರಿಯೇ?" ಎಂಬ ಹಿಂದಿನ ಸಂಚಿಕೆಯಲ್ಲಿ ನಾವು ನಂಬಿದ, ಆರಾಧಿಸುವ  ದೇವರು-ದೇವತೆಗಳಲ್ಲಿ ಅನೇಕ ವಿಧವಾಗಿ ವರಗಳನ್ನು ಕೇಳಿಕೊಳ್ಳುವ ರೀತಿ, ಮತ್ತು ಅದರ ಸರಿ-ತಪ್ಪು ಎನ್ನುವ ವಿಚಾರವಾಗಿ ಚರ್ಚೆ ಮಾಡಿದೆವು. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ನಾವು ದಿನಂಪ್ರತಿ ಉಪಯೋಗಿಸುವ ಅನೇಕ ಸ್ತೋತ್ರ-ಮಂತ್ರಗಳಲ್ಲಿ ಈ ರೀತಿಯ ಬೇಡುವಿಕೆ ವಿಶಾಲವಾಗಿ ಹರಡಿದೆ. ಅನೇಕರು ಬಹಳ ಭಕ್ತಿ-ಶ್ರದ್ಧೆಗಳಿಂದ ಅನುಷ್ಠಾನ ಮಾಡುವ ಇಂತಹ ಒಂದು ಆಚರಣೆ ರುದ್ರ-ಚಮಕಗಳ ಪಾರಾಯಣಾದಿಗಳು. ಅದರ ತಿರುಳು ಕೆಲವರಿಗೆ ಅರ್ಥವಾಗುತ್ತದೆ. ಅನೇಕರಿಗೆ ಗೊತ್ತಾಗುವುದಿಲ್ಲ. ಆದರೆ ನುರಿತವರು ಅದನ್ನು ಹೇಳುವಾಗ ಕೇಳುಗರೆಲ್ಲರಿಗೂ ಒಂದು ವಿಶೇಷ ಅನುಭವ ಆಗುವುದು ಅಲ್ಲಿ ಕುಳಿತು ಕೇಳಿದವರಿಗೆ ಗೊತ್ತು. ಇಲ್ಲಿಯೂ ಅನೇಕ ಬೇಡಿಕೆಗಳನ್ನು ರುದ್ರದೇವರ ಮುಂದೆ ಇಡುವುದು ಉಂಟು. ಇದರ ಬಗ್ಗೆ ತಿಳಿದವರು ಚೆನ್ನಾಗಿ ವಿವರಿಸಬಲ್ಲರು. ಆದರೂ ನಮ್ಮ ಯೋಗ್ಯತೆ ಇರುವಷ್ಟು ನೋಡುವುದರಲ್ಲಿ ತಪ್ಪೇನೂ ಇಲ್ಲ. 

*****

ಇದೊಂದು ನಮಗೆ ಬೇಕೇ ಬೇಕಾದ ಅತಿ ಹತ್ತಿರದ ಕುಟುಂಬ. ಒಬ್ಬ ಮಗನಾದ ಗಣೇಶನು ವಿಘ್ನಗಳನ್ನು ದೂರಮಾಡಿ ಎಲ್ಲವನ್ನೂ ಸುಗಮ ಮಾಡುವ "ಸುಮುಖ". ಇನ್ನೊಬ್ಬ ಮಗ ದೇವಸೇನಾಪತಿಯಾದ "ಕುಮಾರ". ತಾಯಿಯು ಬುದ್ಧಿ ಶಕ್ತಿಯ ಅಭಿಮಾನಿ ದೇವತೆಯಾದ "ಉಮಾದೇವಿ". ಮತಿ ಪ್ರೇರಕಳು. ತಂದೆಯಾದರೋ ಮನೋಭಿಮಾನಿ "ಮಹರುದ್ರದೇವರು". ಎಲ್ಲ ಸಾಧನೆಗಳ ದಾರಿಯಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು ವಿಘ್ನೇಶ. ಸಾಧನೆಗಳಿಗೆ ಅಡ್ಡಿ ಪಡಿಸುವ ಆಸುರೀಶಕ್ತಿಗಳನ್ನು ಹತ್ತಿಕ್ಕಲು ದೇವತೆಗಳ ಸೇನಾಧಿಪತಿಯಾದ ಷಣ್ಮುಖ. ಕಪಿಯಂತೆ ದಿಕ್ಕಾಪಾಲಾಗಿ ಓಡುವ ಮನಸ್ಸು ನಿಯಂತ್ರಿಸಿ ಏಕಾಗ್ರತೆ ಸಾಧಿಸಲು ಶಂಭುವಿನ ಕರುಣೆ. ಸಾಧನೆಗೆ ಬುದ್ಧಿಯನ್ನು ಕೇಂದ್ರೀಕರಿಸಲು ಗಿರಿಜೆಯ ಅನುಗ್ರಹ. ಈ ಕುಟುಂಬವನ್ನು ಬಿಟ್ಟು ಸಾಧಕನಿಗೆ ಬೇರೆ ಗತಿಯಿಲ್ಲ. 

ಶ್ರೀ ಪುರಂದರದಾಸರು ತಮ್ಮ ಒಂದು ಉಗಾಭೋಗದಲ್ಲಿ ಇದನ್ನು ಹೀಗೆ ಒಟ್ಟುಗೂಡಿಸಿ ಹೇಳುತ್ತಾರೆ:

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ 
ಮತಿಪ್ರೇರಿಸುವಳು ಪಾರ್ವತಿದೇವಿ 
ಮುಕುತಿಪಥಕೆ ಮನವೀವ ಮಹರುದ್ರದೇವರು

ರುದ್ರದೇವರು ಸ್ವತಃ ವೈರಾಗ್ಯ ಮೂರ್ತಿಗಳು. ಅವರಿಗಾಗಿ ಏನನ್ನೂ ಇಟ್ಟುಕೊಂಡವರಲ್ಲ. ಆದರೆ ಭಕ್ತರಿಗಾಗಿ ಎಲ್ಲವನ್ನೂ ಕೊಡಬಲ್ಲವರು!
***** 

ನಮ್ಮ ಕುಟುಂಬದಲ್ಲಿ ಒಂದು ಸೊಗಸು. ನಮ್ಮ ಅಪ್ಪನ ತಂದೆಯ ಕಡೆ (ಪಿತಾಮಹ ವಂಶ) ಮಹಾವಿಷ್ಣುವಿನ ಆರಾಧಕರು. ನಮ್ಮ ಅಪ್ಪನ ತಾಯಿಯ ಕಡೆ (ಮಾತಾಮಹ ವಂಶ) ರುದ್ರದೇವರ ಆರಾಧಕರು. ಇವರ ಮನೆಯಲ್ಲಿ ಎಲ್ಲ ಆಚರಣೆಗಳೂ ಈ ರೀತಿ. ಅವರ ಮನೆಯಲ್ಲಿ ಎಲ್ಲ ಆಚರಣೆಗಳೂ ಆ ರೀತಿ. ಇದು ಹಿಂದಿನ ಮೂರು ತಲೆಮಾರುಗಳಿಂದ ನಡೆದುಬಂದಿತ್ತು. ಉಭಯ ಕುಟುಂಬಗಳಲ್ಲೂ ಒಳ್ಳೆಯ ಸಾಮರಸ್ಯ ನಡೆದಿತ್ತು. ಈ ವಿಷಯವಾಗಿ ಎಂದೂ ಭಿನ್ನಾಭಿಪ್ರಾಯ ಬಂದಿರಲಿಲ್ಲ. ಅವರವರ ನಂಬಿಕೆ, ಆಚರಣೆಗಳು ಅವರವರಿಗೆ. ಅವರ ಹಬ್ಬ-ಉತ್ಸವಗಳಿಗೆ ಇವರು ಹೋಗುವರು. ಇವರ ಹಬ್ಬ-ಆಚರಣೆಗಳಿಗೆ ಅವರು ಬರುವರು. ಒಂದು ಕುಟುಂಬದ ಉಪಸ್ಥಿತಿಯಿಲ್ಲದೆ ಇನ್ನೊಂದು ಕುಟುಂಬದ ಯಾವ ಸಮಾರಂಭವೂ ನಡೆಯದು.  ಹೀಗೆ ನಡೆದುಬಂದಿತ್ತು. 

ನಮ್ಮ ತಂದೆಯವರಿಗೆ ಇಬ್ಬರು ಸೋದರಮಾವಂದಿರು. ಅವರಿಬ್ಬರೂ ವಯಸ್ಸಿನಲ್ಲಿ ನಮ್ಮ ಅಜ್ಜಿಗಿಂತ (ಅವರ ಅಕ್ಕ) ಚಿಕ್ಕವರು. ದೊಡ್ಡ ಸೋದರಮಾವ ತಂದೆಯವರಿಗಿಂತ ಮೂರು ವರುಷ ದೊಡ್ಡವರು. ಚಿಕ್ಕ ಸೋದರಮಾವ ತಂದೆಯವರಿಗಿಂತ ಕೆಲವು ತಿಂಗಳು ದೊಡ್ಡವರು. ಹೀಗಾಗಿ ಇವರು ಮೂವರೂ ಒಂದೇ ಓರಗೆಯವರು. ಜೊತೆಯಲ್ಲಿ ಬೆಳೆದವರು. ಮಾವಂದಿರು - ಸೋದರಳಿಯ ನೆಂಟತನಕ್ಕಿಂತ ಹೆಚ್ಚಾಗಿ ಸ್ನೇಹಿತರು. ಮೂವರೂ ಸೇರಿದಾಗ ವಿನೋದ ಪ್ರಧಾನವಾಗಿ ಕಾಲ ಕಳೆಯುತ್ತಿತ್ತು. 

ನಾನು ಶಾಲೆಗಳಲ್ಲಿ ಓದುತ್ತಿದ್ದಾಗ ತಂದೆಯವರ ಜೊತೆ ಅವರಿರುವಲ್ಲಿಗೆ ಹೋಗುತ್ತಿದ್ದೆ. ಅವರುಗಳ ಮಾತಿನ ವಿಷಯ ಕೆಲವು ವೇಳೆ ಅರ್ಥವಾಗುತ್ತಿತ್ತು. ಕೆಲವು ವೇಳೆ ಇಲ್ಲ. ಆಗ ಕೇಳಿದ ಕೆಲವು ವಿಷಯಗಳು ಮುಂದೆ ಎಂದೋ ನೆನಪಿಗೆ ಬಂದು, ನಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ  ಅರ್ಥವಾಗಿವೆ. ಇದು ನನ್ನೊಬ್ಬನ ವಿಶೇಷ ಎಂದು ಮಾತ್ರವಲ್ಲ. ಅನೇಕರಿಗೆ ಅವರವರ ಜೀವನಗಳಲ್ಲಿ ಇದೇ ರೀತಿ ಅನುಭವಗಳು ಆಗಿರುತ್ತವೆ. 
*****

ನಮ್ಮ ಬಾಲ್ಯದಲ್ಲಿ ಪ್ರತಿ ಊರಿನಲ್ಲೂ ಪ್ರತಿವರುಷ ಊರಹಬ್ಬ ಆಚರಿಸುತ್ತಿದ್ದರು. ಈಗಲೂ ಅನೇಕ ಕಡೆ ನಡೆಯುತ್ತವೆ. ಊರಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ಹೊರಗಡೆ ಪ್ರದೇಶಗಳಲ್ಲಿ ಓದು, ಕೆಲಸ, ವ್ಯವಹಾರ ಮುಂತಾದ ಕಾರಣಗಳಿಂದ ವಾಸಿಸುತ್ತಿದ್ದ ಜನರು ಊರಹಬ್ಬಕ್ಕೆ ಬಂದು ಸೇರುತ್ತಿದ್ದರು. ಬಂಧು-ಬಾಂಧವರನ್ನು ಮತ್ತು ಸ್ನೇಹಿತರನ್ನು ವರುಷಕ್ಕೊಮ್ಮೆ ನೋಡಲು ಇದು ಒಂದು ಒಳ್ಳೆಯ ಅವಕಾಶವಾಗಿತ್ತು. ಬೆಂಗಳೂರಿನಲ್ಲಿ ಪ್ರತಿ ವರುಷ ಚಿತ್ರಾಪೂರ್ಣಿಮೆ (ಉಗಾದಿಯನಂತರ ಬರುವ ಹುಣ್ಣಿಮೆ) ಊರಹಬ್ಬ ನಡೆಯುತ್ತದೆ. ಅದು "ಬೆಂಗಳೂರು ಕರಗ" ಎಂದು ಪ್ರಸಿದ್ಧಿ. "ಕೆಂಪೇಗೌಡ ದಿನಾಚರಣೆ" ಎಂದೂ ಕರೆಯುತ್ತಾರೆ. ಈಗಲೂ ಬಹಳ ವಿಜೃಂಭಣೆಯಿಂದ  ನಡೆಯುತ್ತದೆ. ಹತ್ತಾರು ದೇವಾಲಯಗಳು ತಮ್ಮ ಉತ್ಸವ ಮೂರ್ತಿಗಳನ್ನು ಕರೆತಂದು ಸಿಟಿ ಮಾರ್ಕೆಟ್ ಬಳಿ ಸೇರುತ್ತಾರೆ. ಬೇರೆ ಊರುಗಳಲ್ಲಿಯೂ ಹೀಗೆಯೇ ಉಂಟು. 

ಒಮ್ಮೆ ತಂದೆಯವರ ಜೊತೆಗೆ ಅವರ ತೌರುಮನೆಗೆ (ತನ್ನ ತಾಯಿಯ ಹುಟ್ಟಿದ ಮನೆಯನ್ನು ಅವರು ಕರೆಯುತ್ತಿದ್ದುದು ಹೀಗೆಯೇ. ತೌರುಮನೆ ಅಂದರೆ "ತಾಯಿಯ ಮನೆ". ಅದು ಗಂಡಸರಿಗೆ ಏಕೆ ಇರಬಾರದು? ಎಂದು ಕೇಳುತ್ತಿದ್ದರು!) ಹೋಗಿದ್ದೆ. ಆಗ ಕೆಂಗೇರಿ ಬೇರೆಯ ಊರಾಗಿತ್ತು. ಈಗಿನಂತೆ ಬೆಂಗಳೂರಿನ ಹೊಟ್ಟೆಯೊಳಗೆ ಸೇರಿಕೊಂಡಿರಲಿಲ್ಲ. ಮಧ್ಯಾನ್ಹದ ಊಟದ ನಂತರ ಮೂವರು ಜೊತೆಗಾರರು ಮನೆಯ ಜಗುಲಿಯ ಮೇಲೆ ಕುಳಿತು ಮಾತಾಡುತ್ತಿದ್ದರು. ನಾನು ಸ್ವಲ್ಪದೂರ ಕುಳಿತು ನೋಡುತ್ತಿದ್ದೆ. 

"ಮುಂದಿನ ತಿಂಗಳು ಊರ ಹಬ್ಬ. ತಪ್ಪದೆ ಬಾ. ಹೋದ ವರುಷದಂತೆ ಚಕ್ಕರ್ ಹಾಕಬೇಡ"
"ನೋಡೋಣ. ಶಾಲೆಗೆ ರಜೆ ಇದ್ದರೆ ಬರುತ್ತೇನೆ"
"ಅದೆಲ್ಲ ಆಗದು. ರಜೆ ಇಲ್ಲದಿದ್ದರೆ ರಜೆ ಹಾಕಿ ಬಾ"
"ಓದುತ್ತಿದ್ದಾಗ ಅವಾಗವಾಗ ಚಕ್ಕರ್ ಹೊಡೆಯುತ್ತಿದ್ದೆ. ಈಗ ಏನು ಕಷ್ಟ?"
ಮೂವರೂ ನಕ್ಕರು. 

ಅಷ್ಟರಲ್ಲಿ ಎದುರು ಮನೆ ಗೃಹಿಣಿ ತನ್ನ ಮಕ್ಕಳು ಕಾಣಲಿಲ್ಲವೆಂದು ಮನೆಯ ಹೊರಗಡೆ ಬಂದು ನೋಡಿದಳು. ಇಬ್ಬರು ಮಕ್ಕಳು ಚೆನ್ನಾಗಿ ಮಣ್ಣಿನಲ್ಲಿ ಆಟ ಆಡುತ್ತಿದ್ದರು. ಮೈಯೆಲ್ಲ ಧೂಳಿನಿಂದ ಮುಚ್ಚಿತ್ತು. ನೋಡಿದ ಅವಳಿಗೆ ಕೋಪ ಬಂತು. "ಆಡಿ, ಆಡಿ; ಚೆನ್ನಾಗಿ ಆಡಿ. ಆಮೇಲೆ ಮನೆಗೆ ಬನ್ನಿ. ನಿಮಗೆ ಹಬ್ಬ ಮಾಡುತ್ತೇನೆ" ಅಂದು ಹೇಳಿ ಒಳಗೆ ಹೋದಳು. 

"ಏನಪ್ಪಾ, ನಿಮ್ಮಣ್ಣ ನನ್ನ ಊರಹಬ್ಬಕ್ಕೆ ಕರೀತಿದಾನೆ. ಅವಳು ನೋಡಿದರೆ ಮಕ್ಕಳಿಗೆ "ಹಬ್ಬ ಮಾಡುತ್ತೇನೆ" ಎಂದು ಹೇಳುತ್ತಿದ್ದಾಳೆ"
"ಅಣ್ಣ ನಿನಗೂ ಅಂತದೇ ಹಬ್ಬ ಮಾಡಬಹುದು. ಹುಷಾರಾಗಿರು"
"ಅಯ್ಯೋ, ಹುಚ್ಚಪ್ಪಗಳಾ. ಸಂದರ್ಭ ನೋಡಿ ಮಾತಿಗೆ ಅರ್ಥ ಮಾಡಬೇಕು. ಒಂದು ಮಾತಿಗೆ ಎಲ್ಲ ಕಡೆಯೂ ಒಂದೇ ಅರ್ಥ ಇರುವುದಿಲ್ಲ. ಇದು ಚೆನ್ನಾಗಿ ಗೊತ್ತಿದ್ದೂ ನನ್ನ ಹಾಸ್ಯ ಮಾಡುತ್ತಿದ್ದೀರಾ?"
ಮೂವರು ಮತ್ತೊಮ್ಮೆ ನಕ್ಕರು. 
*****

ನಂತರ ಕೆಲವು ವರುಷಗಳು ಕಳೆದ ಮೇಲೆ ಹಿರಿಯ ಸೋದರಮಾವ ತಿರುಮಕೂಡಲು ನರಸೀಪುರದಲ್ಲಿ (ಟಿ. ನರಸೀಪುರ) ವಾಸವಾಗಿದ್ದರು. ಒಮ್ಮೆ ಅವರ ಹುಟ್ಟಿದ ಹಬ್ಬ ಬಂದಿತು. ಪ್ರಾಯಶಃ "ಭೀಮರಥಿ ಶಾಂತಿ" ಇರಬಹುದು. (70ನೆಯ ವರುಷದ ಹುಟ್ಟಿದ ಹಬ್ಬವನ್ನು ಭೀಮರಥಿ ಶಾಂತಿ ಎಂಬುದಾಗಿ ಆಚರಿಸುತ್ತಾರೆ). ತಿರುಮಕೂಡಲು ಕಪಿಲ-ಕಾವೇರಿ ನದಿಗಳ ಸಂಗಮ ಕ್ಷೇತ್ರ. ಉತ್ತರ ಭಾರತದಲ್ಲಿ ಗಂಗಾ-ಯಮುನಾ-ಸರಸ್ವತಿ ನದಿಗಳ ಸಂಗಮ ಪ್ರಯಾಗದಲ್ಲಿ ಇರುವಂತೆ ಇಲ್ಲಿ ಕಪಿಲಾ-ಕಾವೇರಿ-ಸ್ಫಟಿಕ ಸರೋವರ ನದಿಗಳ ತ್ರಿವೇಣಿ ಸಂಗಮವೆಂದು ಪ್ರತೀತಿ. ಇಲ್ಲಿನ "ಗುಂಜಾ ನರಸಿಂಹಸ್ವಾಮಿ" ಮತ್ತು "ಅಗಸ್ತ್ಯೇಶ್ವರ" ದೇವಾಲಯಗಳು ಇತಿಹಾಸ ಪ್ರಸಿದ್ಧ. 

"ಗರ್ಗೇಶ್ವರಿ" ಅನ್ನುವುದು ತಿರುಮಕೂಡಲಿನಿಂದ ಮೂರು ಮೈಲು ದೂರದ ಒಂದು ಕ್ಷೇತ್ರ. ಇಲ್ಲಿನ ದೊಡ್ಡ ಶಿವಲಿಂಗ "ಅರ್ಧನಾರೀಶ್ವರ" ಅನ್ನುತ್ತಾರೆ. ಈಗ ಈ ಊರೂ ನರಸೀಪುರದಲ್ಲಿಯೇ ಸೇರಿಹೋಗಿದೆ. ಈ ಗರ್ಗೇಶ್ವರಿ ದೇವಸ್ಥಾನದಲ್ಲಿ ಹುಟ್ಟು ಹಬ್ಬದ ಸಮಾರಂಭದ ಪ್ರಯುಕ್ತ "ಏಕಾದಶವಾರ ರುದ್ರಾಭಿಷೇಕ" ಏರ್ಪಡಿಸಿದ್ದರು. ಜ್ಞಾನವೃದ್ಧರೂ, ವಯೋವೃದ್ಧರೂ ಆದ ಘನಪಾಠಿ ಗುರುಗಳು ಶಿಷ್ಯರ ಸಮೇತ ಆಗಮಿಸಿ ರುದ್ರ-ಚಮಕಗಳ ಅದ್ಭುತ ಪಾರಾಯಣ-ಅಭಿಷೇಕಾದಿಗಳನ್ನು ನಡೆಸಿದರು. 

ಕಾರ್ಯಕ್ರಮ ಮುಗಿದ ನಂತರ ಊಟಕ್ಕೆ ತಯಾರಾಗುವ ವೇಳೆಯಲ್ಲಿ ಈ ಮೂವರೂ ಆ ಗುರುಗಳ ಬಳಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರು. 

"ಗುರುಗಳೇ. ರುದ್ರದೇವರು ಅಖಂಡ ವೈರಾಗ್ಯ ಮೂರ್ತಿಗಳು. ಅವರ ಬಳಿ ನಾವು ಈ ಪ್ರಾರ್ಥನೆಗಳನ್ನು ಮಾಡಿ ಅನೇಕ ವರಗಳನ್ನು ಕೇಳುತ್ತೇವೆ. ಇವುಗಳಲ್ಲಿ ಅನೇಕ ಕೋರಿಕೆಗಳು ಭೌತಿಕ ವಸ್ತುಗಳು. ಈ ನಮ್ಮ ಜೀವನ ಸುಖವಾಗಿರಲು ಕೇಳಿಕೊಳ್ಳುವುವು. ಹೆಚ್ಚೂ-ಕಡಿಮೆ ಪ್ರತಿಯೊಂದು ವಸ್ತುವನ್ನೂ ಕೇಳುತ್ತೇವೆ. ಇದು ಸರಿಯೇ?"
"ಏಕೆ? ಕೇಳಬಾರದೆಂದು ನಿಮ್ಮ ಅಭಿಪ್ರಾಯವೇ?"
"ವೈರಾಗ್ಯ ಮೂರ್ತಿಯ ಬಳಿ ವೈರಾಗ್ಯ ಹುಟ್ಟುವ ರೀತಿಯ ಬೇಡಿಕೆ ಇಡಬೇಕಲ್ಲದೆ ಈ ರೀತಿ ಸುಖ-ಸಾಧನಗಳನ್ನು ಕೇಳುವುದು ನ್ಯಾಯವೇ?"
"ಎಲ್ಲರಿಗೂ ಸುಲಭವಾಗಿ ವೈರಾಗ್ಯ ಬರುವುದಿಲ್ಲವಲ್ಲ?"
"ಅಂದಮಾತ್ರಕ್ಕೆ ವೈರಾಗ್ಯ ಕೇಳದೆ ಈ ಸುಖ ಸಾಧನಗಳನ್ನು ಕೇಳಬಹುದೇ?"

"ಈ ಭೂಮಿಯಲ್ಲಿ ಜೀವನ ಮಾಡುವಾಗ ಇಹ-ಪರ ಎರಡರ ಕುರಿತೂ ಯೋಚಿಸಬೇಕು. ಬಹಳ ಕಡಿಮೆ ಮಂದಿಗೆ ಚಿಕ್ಕ ವಯಸ್ಸಿನಲ್ಲಿ ವೈರಾಗ್ಯ ಬರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಮಂದಿಗೆ ಕಾಲಕ್ರಮದಲ್ಲಿ ವೈರಾಗ್ಯ ಬರುವುದು. ಕೆಲವರಿಗಂತೂ ಅದು ಬರುವುದೇಯಿಲ್ಲ. ಸಾಧನೆಗೆ ಅನೇಕ ಪರಿಕರಗಳು ಬೇಕಲ್ಲ. ಇಲ್ಲಿನ ಜೀವನವೂ ಚೆನ್ನಾಗಿ ನಡೆಯಬೇಕು. ನಾವು ವೈಯುಕ್ತಿಕವಾಗಿ ಏನನ್ನೂ ಬೇಡ ಅನ್ನಬಹುದು. ಆದರೆ ಗೃಹಸ್ಥರಾದ ನಮ್ಮನ್ನು ನಂಬಿ ನಮ್ಮ ಜೊತೆ ಬಾಳುವ ಕುಟುಂಬದವರ ವಿಷಯವೇನು? ಸನ್ಯಾಸಿಯಾಗಿ ಗುರುಕುಲ ನಡೆಸುವವನಾದರೂ ಅವನ ಚಿಕ್ಕ ವಯಸ್ಸಿನ ಶಿಷ್ಯವೃಂದದ ಕಥೆ ಏನು? ಒಂಟಿಯಾಗಿ ಸಾಧನೆ ಮಾಡುವವನಿಗೂ, ಅನೇಕ ಮಂದಿಯ ಜೊತೆಯಲ್ಲಿದ್ದು ಸಾಧನೆ ಮಾಡುವವನಿಗೂ ವ್ಯತ್ಯಾಸವಿಲ್ಲವೇ? ಇಲ್ಲಿಯೂ ಚೆನ್ನಾಗಿ ಬಾಳುವೆ ನಡೆಸಬೇಕು. ಮುಂದಿನ ದಾರಿಯೂ ಸರಿಯಾಗಿ ಗೊತ್ತಾಗಬೇಕು. ಈ ಪ್ರಾರ್ಥನೆಗಳು ಎರಡನ್ನೂ ಸರಿತೂಗಿಸಿ ಜೀವನ ನಡೆಸಲು ಬೇಕಾದುವನ್ನು ಕೇಳುತ್ತವೆ. ಇದರಲ್ಲಿ ತಪ್ಪೇನೂ ಕಾಣುವುದಿಲ್ಲ. ಆದರೆ, ಈ ಪರಿಕರಗಳಿಂದ ಸುಖಿಸುವುದರಲ್ಲಿ ಮುಳುಗಿ ಸಾಧನೆಯನ್ನು ಬಿಡಬಾರದು. ಆ ಎಚ್ಚರ ವಹಿಸಬೇಕು. ಆ ರುದ್ರರೇ ಇದನ್ನು ನಡೆಸಿಕೊಡುತ್ತಾರೆ ಎನ್ನುವುದು ಧೃಡವಾದ ನಂಬಿಕೆಯಾಗಿ ಇರಬೇಕು"

"ಒಂದು ಕಡೆ "ಲೋಹವನ್ನು ಕೊಡು ಎಂದು ಕೇಳುತ್ತೇವಲ್ಲ? ಬದುಕು ಹಸನಾಗಲು, ಸುಖಮಯವಾಗಲು ಬೆಳ್ಳಿ-ಬಂಗಾರ ಮುಂತಾದುವನ್ನು ಕೇಳುವ ಬದಲು ಕಬ್ಬಿಣವನ್ನು ಕೇಳುವುದೇ?"

"ಲೋಹ ಎಂದರೆ ಕೇವಲ ಕಬ್ಬಿಣ ಎಂದು ಅರ್ಥ ಮಾಡಬಾರದು. ಬೆಳ್ಳಿ-ಬಂಗಾರಗಳೂ ಲೋಹಗಳೇ ತಾನೇ? ಲೋಹ (ಮೆಟಲ್) ಆನ್ನುವುದು ವಿಜ್ಞಾದಲ್ಲಿಯೂ ಒಂದು ಧಾತುಗಳ ಕುಟುಂಬ. ಇದಲ್ಲದೆ ಅನೇಕ ವ್ಯವಹಾರಗಳಲ್ಲಿ ಮನುಷ್ಯನ ಮನಸ್ಸು ಬೇರೆ ಬೇರೆ ರೀತಿ ಪ್ರಕಟವಾಗುತ್ತದೆ. ಒಮ್ಮೆ "ಅವರದು ಹೂವಿನಂತಹ ಮನಸ್ಸು" ಎನ್ನುತ್ತೇವೆ. ಮತ್ತೊಮ್ಮೆ "ಅವನದು ಕಲ್ಲಿನ ಮನಸ್ಸು" ಅನ್ನುತ್ತೇವೆ. ಏಕೆ ಹೀಗೆ?"

"ವ್ಯವಹರಿಸುವಲ್ಲಿ ಮನಸ್ಸಿನ ಮೃದುತ್ವ ಅಥವಾ ಕಾಠಿಣ್ಯವನ್ನು ಗುರುತಿಸಲು ಹೀಗೆ ಹೇಳುತ್ತೇವೆ"
"ಕಲ್ಲನ್ನು ಭೇದಿಸಲು ಏನು ಬಳಸುತ್ತಾರೆ?"
"ಉಳಿ ಮತ್ತು ಸುತ್ತಿಗೆ"
"ಉಳಿ ಮತ್ತು ಸುತ್ತಿಗೆಯನ್ನು ಬಂಗಾರದಿಂದ ಮಾಡಬಹುದೋ?"
"ಅರ್ಥವಾಗಲಿಲ್ಲ"

"ಕಲ್ಲಿಗಿಂತಲೂ ಕಠಿಣವಾದುದು ಕಬ್ಬಿಣ. ಇಲ್ಲಿ ಲೋಹವನ್ನು ಕೊಡು ಅಂದರೆ ಕಬ್ಬಿಣದ ಉಂಡೆಯನ್ನು ಕೊಡು ಎಂದು ಅರ್ಥವಲ್ಲ. "ಸಾಧನೆಯ ದಾರಿಯಲ್ಲಿ ನಮ್ಮ ಮನಸ್ಸನ್ನು ಕಬ್ಬಿಣದಂತೆ ಗಟ್ಟಿ ಮಾದು" ಎಂದು ಕೇಳುವ ಭಾವ. ಯಾವುದೇ ಪ್ರಲೋಭನೆಗಳಿಗೆ ಮನಸ್ಸು ಮೆದುವಾಗಿ ಸಾಧನೆಯ ದಾರಿಯಿಂದ ವಿಮುಖವಾಗಬಾರದು. ಬೇರೆ ರೀತಿಯ ಸಂಪತ್ತನ್ನು ಕೇಳಿಯಾಗಿದೆ. ಇಲ್ಲಿ ನಮ್ಮ ಮನಸ್ಸನ್ನು ಕಬ್ಬಿಣದಂತೆ ಗಟ್ಟಿ ಮಾಡು ಎಂದು ಕೇಳುವ ಪ್ರಾರ್ಥನೆ. ಸಂದರ್ಭ ನೋಡಿ ಪದಗಳಿಗೆ ಅರ್ಥ ಮಾಡಬೇಕಲ್ಲವೇ?"

ಇನ್ನು ಕೆಲವು ಪ್ರಶ್ನೆಗಳಾದ ಮೇಲೆ ಊಟದ ಕರೆ ಬಂತು.  

*****

ರುದ್ರದೇವರ ಕರುಣೆಯಿಲ್ಲದೆ ಮನಸ್ಸು ಗಟ್ಟಿಯಾಗದು. ಶ್ರೀವಿಜಯದಾಸರು ಶಂಭುವಿನ ಕುರಿತಾದ ಅವರ ಒಂದು ದೇವರನಾಮದಲ್ಲಿ ಹೀಗೆ ಹೇಳುತ್ತಾರೆ:

ಕೈಲಾಸವಾಸ ಗೌರೀಶ ಈಶ 
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ 
ಕೈಲಾಸವಾಸ ಗೌರೀಶ ಈಶ  
 
ಮನಸು ಕಾರಣವಲ್ಲ ಪಾವ ಪುಣ್ಯಕ್ಕೆಲ್ಲ  
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ 
ದನುಜಗಜ ಮದಹಾರಿ ದಂಡಪ್ರಣಾಮ ಮಾಳ್ಪೆ 
ಮಣಿಸೋ ಈ ಶಿರವನ್ನು ಸಜ್ಜನರ ಚರಣದಲಿ 

ಒಂದು ಪಾತ್ರೆಯಿಂದ ನೀರನ್ನು ಸುರಿಸಿದರೆ ಅದು ಬೀಳುವ ರೀತಿಯನ್ನೂ, ಮತ್ತೊಂದು ಪಾತ್ರೆಯಿಂದ ಎಣ್ಣೆಯನ್ನು ಸುರಿದರೆ ಅದು ಬೀಳುವ ರೀತಿಯನ್ನೂ ಒಟ್ಟಾಗಿ ನೋಡಿದರೆ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. (ಇವನ್ನು ನಾವು ಪ್ರತಿದಿನ ನೋಡುತ್ತಿರುತ್ತೇವೆ. ಗಮನಿಸಿರುವುದಿಲ್ಲ) ಮನಸ್ಸು ಅಲ್ಲಿ-ಇಲ್ಲಿ ಹೋಗದಂತೆ ಒಂದೇ ಧಾರೆಯಾಗಿ ಕೇಂದ್ರೀಕರಿಸಲು ಆ ಶಂಭುವಿನ ಕರುಣೆ ಬೇಕು. 

ಪಂಡಿತ ಭೀಮಸೇನ ಜೋಶಿಯವರು ಹಾಡಿರುವ ಈ ಹಾಡನ್ನು ಇಲ್ಲಿ ಕೇಳಬಹುದು:

https://www.youtube.com/watch?v=KO772laPz3I


******

ಮೇಲಿನ ಹಾಡಿನಲ್ಲಿ "ಮನಸು ಕಾರಣವಲ್ಲ" ಮತ್ತು "ದನುಜ ಗಜ ಮದಹಾರಿ" ಎನ್ನುವ ಪದಗಳ ವಿಶೇಷಾರ್ಥಗಳನ್ನು ಮುಂದೊಮ್ಮೆ ನೋಡೋಣ.